ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Thursday 19 March, 2015

ಇಲ್ಲುಳಿವ ಹಂಬಲ...

ಅಂದೊಮ್ಮೆ ನಾನೇ ಬರೆದಿದ್ದೆ:
                             ಅಲ್ಲಿಂದ ಬಂದಾಗ
                             ಇಲ್ಲುಳಿವ ಹಂಬಲವೆ
                             ಬಲವಾಗಿ ಬೇರೂರಿ ಹಸುರಾಡಿತು;
                                      ಹಸಿನೆರಳಿನಡಿಯಲ್ಲಿ
                                      ಉಸಿರಾಡುತಿರುವಾಗ
                                      ಪಿಸುದನಿಯ ತೆರದಲ್ಲಿ ನೆನಪಾಡಿತು.
                                                (ಅಂಗಳದಿಂದ... ೦೪-ಜುಲೈ-೨೦೦೩)

          ಆಗಿನ ಹಂಬಲ ಇಂದೂ ಬಸವಳಿದಿಲ್ಲ, ಬೇಸರಿಸಿಲ್ಲ. ಹಾಗೆಂದು ಅಲ್ಲಿಂದ ಬಂದು ಇಲ್ಲಿ ನೆಲೆಯೂರುವುದು, ನರ್ಸರಿಯಿಂದ ಗಿಡ ತಂದು ನಮ್ಮ ತೋಟದಲ್ಲಿ ನೆಟ್ಟಷ್ಟು ಸುಲಭವೆ? ಹೋಲಿಕೆ ಸರಿಯಾಗಿಲ್ಲ ಅಂತೀರಾ? ನಿಜವಾಗಿ ಹೊಂದುವ ಮಾತೇ ಅದು. ನರ್ಸರಿಯಿಂದ ತಂದು ನಮ್ಮ ತೋಟದಲ್ಲಿ ಗಿಡ ನೆಡುವ ಪ್ರಕ್ರಿಯೆ ಏನೇನನ್ನೆಲ್ಲ ಒಳಗೊಳ್ಳುತ್ತದೆ ನೋಡಿ: ಮೊದಲಾಗಿ ನರ್ಸರಿಯಲ್ಲಿ ತೋಟಗಾರನ ನಾಜೂಕಿನ ಆರೈಕೆಯಲ್ಲಿ, ಅವರಿತ್ತ ಸೂಕ್ತ ನೀರು-ಗೊಬ್ಬರದ ಆಸರೆಯಲ್ಲಿ ಬೆಳೆಯುತ್ತಿದ್ದ ಗಿಡವೊಂದನ್ನು ನಮಗಿಷ್ಟವಾಯ್ತೆಂದು ತರುತ್ತೇವೆ. ನಮ್ಮ ತೋಟದ ಮಣ್ಣು, ಗೊಬ್ಬರ, ನೆರಳು-ಬಿಸಿಲು, ನಮ್ಮ ಆರೈಕೆ, ನಾವು ನೀಡುವ ಗಮನ, ಪೋಷಣೆ- ಎಲ್ಲವೂ ಅಲ್ಲಿನದಕ್ಕಿಂತ ಭಿನ್ನವಾಗಿರುತ್ತದೆ.

          ನೆಲದಲ್ಲಿ ನೆಟ್ಟೆವು ಅಂದುಕೊಳ್ಳೋಣ, ಆ ಗಿಡ ತನ್ನ ಸುತ್ತಲ ಮಣ್ಣಿನಲ್ಲಿ ತನಗೆ ಬೇಕಾದ ರಾಸಾಯನಿಕಗಳನ್ನು ಹುಡುಕಿ ಬೇರಿಳಿಸಿ ಪಡೆದು ನೆಲೆಯೂರಬೇಕು. ನರ್ಸರಿಯಲ್ಲಿದ್ದ ಸಣ್ಣ ಪ್ಲಾಸ್ಟಿಕ್ ತೊಟ್ಟೆಯ ಪರಿಸರ ದಾಟಿ ಹೊರಗಿನ ವಾತಾವರಣಕ್ಕೆ ಬೇರುಗಳನ್ನು ಹೊಂದಿಸಿಕೊಳ್ಳಬೇಕು. ಈ ಮಣ್ಣಿನಲ್ಲಿರುವ ಹುಳಹುಪ್ಪಟೆಗಳಿಗೆ ತನ್ನ ನೈಸರ್ಗಿಕ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಇವಕ್ಕೆಲ್ಲ ತಗಲುವ ಸಮಯಾವಧಿಯಲ್ಲಿ ನಾವೇನಾದರೂ ಸ್ವಲ್ಪ ನಿಗಾ ವಹಿಸದಿದ್ದರೆ, ಆ ಗಿಡದ ಹೊಂದಾಣಿಕೆಯಲ್ಲಿ ಏರುಪೇರಾಗುತ್ತದೆ. ಬೆಳವಣಿಗೆ ಕುಂಠಿತವಾಗುತ್ತದೆ. ಗಿಡ ಮುದುರುತ್ತದೆ. ನರ್ಸರಿಯಲ್ಲಿದ್ದಂತೆ ಚಂದದ ಹೂ ತೊಡುವ ಬದಲು ಎಲೆಗಳನ್ನು ಬಾಡಿಸಿ ಕಣ್ಣೀರಿಡುವಂತೆ ತಲೆತಗ್ಗಿಸಿ ನಿಲ್ಲುತ್ತದೆ. ಒಂದೊಮ್ಮೆ ಹಾಗೇನಾದರೂ ಆದರೆ, ಬೇಕಿತ್ತಾ ಈ ಗಿಡದ ಉಸಾಬರಿ ಅಂತ ನಮಗನ್ನಿಸುವಂತಾಗುತ್ತದೆ. ಬದಲಾಗಿ, ಮೊದಲ ದಿನದಿಂದಲೇ ಚೆನ್ನಾಗಿ ಕಾಳಜಿ ವಹಿಸಿ ಮುಂಜಾಗರೂಕತೆಯಿಂದ ಎಲ್ಲ ಪಾಲನೆ ಪೋಷಣೆ ನೀಡಿದರೆ, ಆಗ ಗಿಡವೂ ಸಂತೋಷದಿಂದಲೇ ನಳನಳಿಸುತ್ತದೆ. ಅಂತಹ ನಿಷ್ಠೆ ಮತ್ತು ಬದ್ಧತೆಯಿದ್ದಲ್ಲಿ ಮಾತ್ರ ಅದು ಸಾಧ್ಯ. ವಲಸೆ (ಎತ್ತಣಿಂದೆತ್ತಲೇ ಆಗಿರಲಿ) ಮತ್ತು ಹೊಂದಾಣಿಕೆ ಅಂತಹದ್ದೇ ನಿಷ್ಠೆ ಮತ್ತು ಬದ್ಧತೆಯನ್ನು ಅಪೇಕ್ಷಿಸುತ್ತವೆಯೆಂದು ನನ್ನ ಅಭಿಮತ.

          ಈಗ ವಲಸೆಯತ್ತ ಕಣ್ಣು ಹಾಯಿಸೋಣ. ಅಮೆರಿಕಾದಲ್ಲಿ ಕೆಲವಾರು ವರ್ಷ ಇದ್ದು, ಮಕ್ಕಳನ್ನು ಅಲ್ಲಿಯ ಪರಿಸರದಲ್ಲಿ ಅದಕ್ಕನುಗುಣವಾಗಿ ಬೆಳೆಸಿರುತ್ತೇವೆ. ಸಹಜವಾಗಿಯೇ ಮಕ್ಕಳು ಅಲ್ಲಿಗೆ ಹೊಂದಿಕೊಂಡು ಅದನ್ನೇ ತಮ್ಮ ಸ್ವಭಾವದಲ್ಲಿ ಅಳವಡಿಸಿಕೊಂಡಿರುತ್ತಾರೆ. ಭಾರತಕ್ಕೆ ಬರುವಾಗ ಅವರಿಗೆ, ಹಲವು ಬಾರಿ ನಮಗೂ- ಹಿರಿಯರಿಗೂ- ಇಲ್ಲಿನ ವಾತಾವರಣ ಅಪರಿಚಿತ ಅನಿಸಿಬಿಡುತ್ತದೆ. ಈ ಬಗ್ಗೆ ಹಲವರು ಹಲವು ಕಡೆ ಹಲವು ರೀತಿಯಲ್ಲಿ ಈಗಾಗಲೇ ಬರೆದುಬಿಟ್ಟಿದ್ದಾರೆ. ಆದ್ದರಿಂದ ಅದನ್ನೇ ಮತ್ತೆ ಕೊರೆಯಲು ಹೋಗುವುದಿಲ್ಲ. ಈ ಮರುವಲಸೆಯಿಂದ ಬದಲಾದ ವಾತಾವರಣದಿಂದ ಒಂದೆರಡು ಸಂದರ್ಭಗಳಲ್ಲಿ ನನಗಾದ ಅನುಭವ, ನನ್ನ ಪ್ರತಿಕ್ರಿಯೆಯ ಪ್ರಸಂಗಗಳನ್ನಷ್ಟೇ ಹಂಚಿಕೊಳ್ಳುತ್ತೇನೆ.

          ಈಗ ಹೇಳಲಿರುವ ಘಟನೆ ೨೦೦೪ರ ಮಾರ್ಚ್ ತಿಂಗಳ ಕಥೆ. ಆಗ ಈ ಮಣಿಪಾಲವೆಂಬೊಂದೂರಿನಲ್ಲಿ ಈಗಿನಷ್ಟು ಚತುಷ್ಚಕ್ರ ವಾಹನಗಳಾಗಲೀ ಚಾಲ‘ಕಿ’ಯರಾಗಲೀ ಇರಲಿಲ್ಲ. ನಾನು ನಮ್ಮ ಮಾರುತಿ ಎಸ್ಟೀಮ್ ಚಲಾಯಿಸುತ್ತಿದ್ದರೆ ಉಡುಪಿ-ಮಣಿಪಾಲಗಳಲ್ಲಿ, ಪ್ರತಿ ಬಾರಿಯೂ, ಒಂದೆರಡಾದರೂ ಮರುನೋಟಗಳು ಓರೆನೋಟಗಳು ಸಿಗುತ್ತಿದ್ದವು. ನನಗವು ಒಂಥರಾ ತಮಾಷೆ ಅನ್ನಿಸುತ್ತಿದ್ದವು, ನಕ್ಕು ಹಗುರಾಗಲು ಕಾರಣಗಳಾಗುತ್ತಿದ್ದವು. ಒಂದು ದಿನ ಮಾತ್ರ ಅದರ ವಿರುದ್ಧವೇ ಘಟಿಸಿತು.

          ಮಕ್ಕಳನ್ನು ಶಾಲೆಗೆ ಕಳಿಸಿ, ಮನೆಗೆಲಗಳನ್ನು ಮುಗಿಸಿ, ಮಕ್ಕಳು ಮಧ್ಯಾಹ್ನ ಒಂದು ಗಂಟೆಗೆ ಊಟಕ್ಕೆ ಮನೆಗೆ ಬರುವ ಮೊದಲು ಕೆಲವಾರು ಹೊರಗೆಲಸಗಳನ್ನು ಮುಗಿಸಬೇಕೆಂದು ಹೊರಟಿದ್ದೆ. ಮೊದಲಾಗಿ ಬ್ಯಾಂಕಿನಿಂದ ಹಣ ತೆಗೆಯಬೇಕಿತ್ತು (ಆಗ ಎ.ಟಿ.ಎಮ್. ಇರಲಿಲ್ಲ). ಕಾರ್ ನಿಲ್ಲಿಸಿ ಬ್ಯಾಂಕ್ ಒಳಗೆ ಹೋಗಿ ಹತ್ತು ನಿಮಿಷಗಳಲ್ಲಿ ಹೊರಗೆ ಬಂದು ನೋಡಿದರೆ, ನನ್ನ ಕಾರಿನ ಹಿಂದೆ, ಅಡ್ಡಲಾಗಿ ಇನ್ನೊಂದು ಕಾರ್. ಅಕ್ಕ-ಪಕ್ಕಗಳಲ್ಲೂ ಬೇರೆ ಬೇರೆ ವಾಹನಗಳು (ಬೈಕ್, ಸ್ಕೂಟರ್, ಆಟೋರಿಕ್ಷಾ, ಇನ್ನೊಂದು ಕಾರ್) ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದರು. ಹಿಂದಿನ ಕಾರ್ ತೆಗೆಯದೆ ನಾನು ಅಲ್ಲಿಂದ ಕದಲುವಂತೆಯೇ ಇರಲಿಲ್ಲ. ಗಾಡಿಯ ಬಾಗಿಲು ತೆರೆದು ಒಂದೆರಡು ಸಲ ಹಾರ್ನ್ ಮಾಡಿದೆ. ಸುತ್ತಮುತ್ತಲ ಅಂಗಡಿ, ಆಫೀಸುಗಳತ್ತ ಪರಿಶೀಲನಾ ನೋಟ ಇಟ್ಟೆ. ಸುಮಾರು ಮೂರ್ನಾಲ್ಕು ನಿಮಿಷಗಳಾದವು ಅಷ್ಟರಲ್ಲಿ ಐದಾರು ಸಲ ಹಾರ್ನ್ ಮಾಡಿರಬಹುದು. ಯಾರೂ ಆ ಕಾರಿನ ಬಳಿ ಸುಳಿಯಲಿಲ್ಲ. ಹತ್ತಿರದ ಅಂಗಡಿಗಳಿಗೆ ಹೊಕ್ಕು ಕೇಳಿದೆ, ಆ ಕಾರಿನ ಮಾಲಕರು ಅಲ್ಲಿದ್ದಾರೆಯೇ? ಬ್ಯಾಂಕ್ ಒಳಗೆ ಹೋಗಿ ವಿಚಾರಿಸಿದೆ, ಸುದ್ದಿಯಿಲ್ಲ. ಗಟ್ಟಿಯಾಗಿ ಕೂಗಿ ಕರೆದೆ, "ಗಿಳಿಹಸಿರು ಫಿಯೆಟ್ ಕಾರಿನ ಓನರ್ ಇಲ್ಲಿದ್ದೀರಾ?" ಯಾವುದೇ ಪ್ರತಿಕ್ರಿಯೆಯಿಲ್ಲ.

          ಇಷ್ಟಾಗುವಾಗ, ನನ್ನ ಕಾರಿನ ಬಲಬದಿಯ ಒಂದು ಸ್ಕೂಟರ್ ಮತ್ತೊಂದು ರಿಕ್ಷಾ ಜಾಗ ಖಾಲಿ ಮಾಡಿದವು. ಹೇಗೋ ನುಸುಳಿಸಿಕೊಂಡು ಎರಡು ಮೂರು ಸಲ ಮುಂದೆ ಹಿಂದೆ ತಿಣುಕಿಸಿಕೊಂಡು ನನ್ನ ಕಾರನ್ನು ಹಿಂದಕ್ಕೆ ತೆಗೆಯುವಷ್ಟರಲ್ಲಿ ಗಿಳಿಹಸಿರು ಬಾಯಿ ತೆರೆಯಿತು. ಕೂಡಲೇ ಗಾಡಿ ಹಾಗೇ ನಿಲ್ಲಿಸಿ ಅತ್ತ ಓಡಿದೆ. ಆ ಕಾರಿನ ಗಾಜು ರುಮುರುಮು ಮೇಲೇರಿತು. ನನಗೋ ನಗು, ಸಿಟ್ಟು, ಎರಡೂ ಏರುತ್ತಿದ್ದವು. ಗಾಜನ್ನು ಟಕಟಕಿಸಿದೆ. ಎರಡೇ ಇಂಚು ಗಾಜನ್ನಿಳಿಸಿ ಸುಮಾರು ಅರುವತ್ತರ ವಯಸ್ಕ ಅಣಿಮುತ್ತು ಉದುರಿಸಿದರು, ನನಗೆ ಮಾತಾಡಲು ಅವಕಾಶವೂ ಕೊಡದೆ... ಅದೇ ಪದಗಳಲ್ಲಿ ನೀವೇ ಕೇಳಿ (ಕಂಸದೊಳಗೆ ನನ್ನೊಳಗೇ ಹುದುಗಿಹೋದ ಮಾತುಗಳು):

          "ಯೂ ಡರ್ಟಿ ಫೀಮೇಲ್, ಡೋಂಟ್ ಹಿಟ್ ಮೈ ಕಾರ್ (ಡರ್ಟಿ? ಯಾರು? ಹಿಟ್?) ವೈ ಡು ಯೂ ಶೌಟ್ ಅಟ್ ಬ್ಯಾಂಕ್ ಇನ್ಸೈಡ್? (ಎಕ್ಸ್‌ಕ್ಯೂಸ್ ಮೀ, ಹಾಗಂದ್ರೇನು?) ಓನ್ಲೀ ಯೂ ಹ್ಯಾವ್ ಕಾರ್ ಈಸ್ ಇಟ್? (ಹಾಗಂತ ಹೇಳಿದ್ನೇ?) ಸ್ಟುಪ್ಪಿಡ್ ಫೀಮೇಲ್, ಗೋ..." ಈಗ ನನ್ನ ರಕ್ತವೂ ಕುದಿಯುತ್ತಿತ್ತು. ನನ್ನ ಬಾಯಿ ತೆರೆಯುವ ಮೊದಲೇ ಅದರ ಎರಡಿಂಚು ಕೂಡ ಮುಚ್ಚಿಕೊಂಡಿತು. ನಾನು ಹಿಂದೆ ಹಾರಿಲ್ಲದಿದ್ದಲ್ಲಿ ಅದರ ಹಿಂದಿನ ಚಕ್ರ ನನ್ನ ಕಾಲುಗಳ ಮೇಲೇ ಹೋಗಿರುತ್ತಿತ್ತು. ಅಂಥ ವೇಗದಿಂದ ಮತ್ತು ಒಡ್ಡುತನದಿಂದ ಗಿಳಿಹಸಿರು ಫಿಯೆಟ್ ಅಲ್ಲಿಂದ ಪರಾರಿಯಾಯ್ತು. ಅದರ ನಂಬರ್ ಗುರುತು ಹಾಕಿಕೊಂಡೆ. ಗೆಳೆಯರೊಬ್ಬರ ಮೂಲಕ ಆರ್.ಟಿ.ಓ.ದಲ್ಲಿ ವಿಚಾರಿಸಿದೆ. ಬ್ಯಾಂಕಿನಿಂದ ನಿವೃತ್ತರಾಗಿ ಒಂಟಿ ಜೀವನ ನಡೆಸುತ್ತಾ ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯದೆಂದು ತಿಳಿಯಿತು. ಖಿನ್ನತೆಯಿಂದ ಬಳಲುವ ಹಿರಿಯರಿಗೆ ಉಳಿದವರು, ಅದರಲ್ಲೂ ಮಹಿಳೆಯರು, ಡರ್ಟಿ ಸ್ಟುಪ್ಪಿಡ್ ಫೀಮೇಲ್‌ಗಳಾಗಿಯೇ ಕಾಣುತ್ತಾರೋ, ಗೊತ್ತಿಲ್ಲ. ಆದರೆ, ಅವರಿಗೆ ಮನಃಶಾಂತಿ ಕೊಡೆಂದು ದೇವರಲ್ಲಿ ಪ್ರಾರ್ಥಿಸುವ ಮಟ್ಟಿಗೆ ನನ್ನ ಮನಸ್ಥಿತಿ ಸುಧಾರಿಸಲು ಕೆಲವಾರು ದಿನಗಳು ಬೇಕಾಗಿದ್ದಂತೂ ನಿಜ.

          ಇದಾಗಿ ಒಂದೈದಾರು ತಿಂಗಳುಗಳಾಗಿರಬಹುದು, ಇನ್ನೊಂದು ಪ್ರಕರಣ ನಡೆಯಿತು. ಶನಿವಾರದ ಬೆಳಗು. ಸುಮಾರು ಎಂಟು ಗಂಟೆಯ ಸಮಯ. ಪೋಲೀಸ್ ಪೇದೆಯೊಬ್ಬ ಮನೆಬಾಗಿಲಿಗೆ ಬಂದ.
          "ಜ್ಯೋತಿ ಮಹಾದೇವ್ ಯಾರು?"
          "ನಾನೇ"
          "ಈ ಲೆಟರ್ ತಗೊಂಡು ಇಲ್ಲಿ ಸೈನ್ ಮಾಡಿ"
          "ಏನು ಲೆಟರ್ ಇದು? ಯಾಕೆ? ಎಲ್ಲಿಂದ? ಯಾರು ಕೊಟ್ಟದ್ದು? "
          "ಅದೆಲ್ಲ ನಂಗೊತ್ತಿಲ್ಲಮ್ಮ. ಸಾಹೇಬ್ರು ಕೊಡ್ಲಿಕ್ಕೆ ಹೇಳಿದ್ದಾರೆ. ತಗೊಂಡು ಬರುದಷ್ಟೇ ನನ್ನ ಕೆಲ್ಸ."
          ಅಷ್ಟರಲ್ಲಿ ಇವರೂ ಹೊರಗೆ ಬಂದರು. ಇಬ್ಬರೂ ಆ ‘ಲೆಟರ್’ ಪರಿಶೀಲಿಸಿದೆವು. ಹಿಂದಿನ ದಿನ ಮಧ್ಯಾಹ್ನ ಒಂದೂವರೆಗೆ ವಾಹನ ನಿಲುಗಡೆ ನಿಷೇಧಿಸಿದಲ್ಲಿ ನಮ್ಮ ವಾಹನ ನಿಲ್ಲಿಸಲಾಗಿತ್ತು. ಅದಕ್ಕಾಗಿ ದಂಡ ವಿಧಿಸಿ ಸಂಚಾರಿ ಪೋಲೀಸ್ ಅಧಿಕಾರಿ ನೋಟೀಸ್ ಕಳಿಸಿದ್ದರು. ಇವನೊಂದಿಗೆ ವಾದಕ್ಕಿಳಿದೆ ನಾನು, ಹಿಂದಿನ ದಿನ ಮಧ್ಯಾಹ್ನ ಒಂದೂವರೆಗೆ ನಮ್ಮ ಕಾರ್ ನಮ್ಮ ಅಂಗಳದಲ್ಲೇ ಇತ್ತು. ನಾವು ಮಾಡಿಲ್ಲದ ತಪ್ಪಿಗೆ ನಮಗೆ ಕೊಟ್ಟ ನೋಟೀಸ್ ನಾನ್ಯಾಕೆ ತಗೊಳ್ಳಲಿ? ಅದಕ್ಕವನದು ಒಂದೇ ಉತ್ತರ, "ನೀವು ಸಾಹೇಬ್ರನ್ನು ಕಂಡು ಮಾತಾಡಿ ಅಮ್ಮ. ನಂಗೊತ್ತಿಲ್ಲ."

          ನನಗಂತೂ ಗೊಂದಲಕ್ಕಿಟ್ಟುಕೊಂಡಿತು. ಹಿಂದಿನ ದಿನ ಬೆಳಗ್ಗೆ ಇವರು ಉಡುಪಿಗೆ ಹೋಗಿ ಬಂದಿದ್ದರು, ನಿಜ. ಆದರೆ, ಒಂದು ಗಂಟೆಯ ಮೊದಲೇ ಮನೆಗೆ ಬಂದಾಗಿತ್ತು. ನಂತರ ಕಾರ್ ಹೊರಗೆ ತೆಗೆದಿರಲೇ ಇಲ್ಲ. ಇದೆಂಥ ವಿಚಿತ್ರ?
          "ಯಾರು ನಿಮ್ಮ ಸಾಹೇಬ್ರು? ಹೆಸರೇನು?" 
          ಹೇಳಿದ.
          "ಎಷ್ಟು ಹೊತ್ತಿಗೆ ಸಿಗ್ತಾರೆ ನಿಮ್ಮ ಸಾಹೇಬ್ರು?"
          "ಮೂರು ಗಂಟೆಯ ಮೇಲೆ ಸಿಗಬಹುದು"
          "ಬಹುದು? ಇಲ್ಲದಿದ್ರೆ?"
          "..."
          "ಸರಿ, ಬರ್ತೇನೆ. ಇಲ್ಲಿ ಕೊಡಿ, ಸೈನ್ ಮಾಡ್ತೇನೆ..."
          ಅವನು ತೋರಿಸಿದ ಫ಼ಾರ್ಮಿನಲ್ಲಿ ಸಹಿ ಮಾಡಿ ಕಳಿಸಿದೆ. ಮನಸೆಲ್ಲ ಕಹಿಕಹಿ.

          ಮೂರು ಗಂಟೆಗೆ ಹತ್ತು ನಿಮಿಷ ಇರುವಾಗಲೇ ಸಂಚಾರೀ ಪೋಲೀಸ್ ಆಫೀಸಿನ ಮುಂದೆ ಇಬ್ಬರೂ ಹೋದೆವು. ಒಂದೆರಡು ಪೇದೆಗಳು ಅಡ್ಡಾಡುತ್ತಿದ್ದರು. ಆ ಸಾಹೇಬ್ರನ್ನು ಭೇಟಿಯಾಗಬೇಕು ಅಂದದ್ದಕ್ಕೆ ಅವರಿಲ್ಲ ಅಂತ ಉತ್ತರ ಬಂತು. "ಎಲ್ಲಿದ್ದಾರೆ?"
          "ಮಿನಿಸ್ಟರ್ ಬರ್ತಿದ್ದಾರೆ. ಟ್ರ್ಯಾಫಿಕ್ ನೋಡ್ಲಿಕ್ಕೆ ಹೋಗಿದ್ದಾರೆ. ಎಷ್ಟು ಹೊತ್ತಿಗೆ ಬರ್ತಾರೋ ಗೊತ್ತಿಲ್ಲ"
          "ಹಾಗಾದ್ರೆ ಇದಕ್ಕೇನು ಮಾಡುದು?" ಆ ಲೆಟರ್ ಮುಂದೆ ಹಿಡಿದೆ. ಹಿಂದೆ ಮುಂದೆ ನೋಡಿದ. "ಸೋಮವಾರ ಬನ್ನಿ" ಅಂದ.

          ಇನ್ನೇನು ಹೊರಡುವುದರಲ್ಲಿದ್ದೆವು, ಇನ್ನೊಬ್ಬ ಧಡೂತಿ ಖಾಕಿಧಾರಿ ಬಂದ. ಅಕ್ಕ-ಪಕ್ಕದಲ್ಲಿ ಪೇದೆಗಳು. ಅಲ್ಲಿದ್ದವರೆಲ್ಲ ನೆಟ್ಟಗಾಗಿ ಸೆಲ್ಯೂಟ್ ಹೊಡೆದರು. ನಾವಿಬ್ಬರೂ ಸುಮ್ಮನೇ ನೋಡುತ್ತಿದ್ದೆವು. ಅವರಾರೆಂದು ಗೊತ್ತಿಲ್ಲ.
          "ಏನಂತೆ ಅವರಿಗೆ?" ದೊಡ್ಡ ಖಾಕಿ ಗುಡುಗಿದ, ಪೇದೆಯ ಹತ್ರ. ಅವನು ವಿಷಯ ನಿರೂಪಿಸಿದ.
          "ನನ್ನತ್ರ ಫ಼ೈನ್ ಕಟ್ಟಿ ಹೋಗ್ಲಿಕ್ಕೆ ಹೇಳು" ಮೆಸೇಜ್ ಮರುಧ್ವನಿಸಿತು, ಹತ್ತು ಅಡಿಗಳ ಅಂತರದಲ್ಲಿ.
          ಈಗ ನನಗ್ಯಾಕೋ ಕೆಟ್ಟ ಧೈರ್ಯ ಬಂತು. "ಸರ್, ಈ ನೋಟೀಸ್ ಸರಿಯಲ್ಲ" ಅಂದೆ.
          "ಏನು? ನಮ್ಮ ಡಿಪಾರ್ಟ್‌ಮೆಂಟ್ ತಪ್ಪು ಮಾಡ್ತಾ ಉಂಟು ಅಂತ ಹೇಳ್ತಾ ಇದ್ದೀರಾ?"
          "ಇಲ್ಲ ಸರ್, ಪೋಲೀಸ್ ಇಲಾಖೆಯನ್ನೇ ದೂರುದಿಲ್ಲ. ಆದ್ರೆ, ಈ ನೋಟೀಸ್ ಮಾತ್ರ ಸರಿಯಲ್ಲ. ನಿನ್ನೆ ನಮ್ಮ ಕಾರ್ ಒಂದು ಗಂಟೆ ಹೊತ್ತಿಗೇ ಮನೆಯಲ್ಲಿತ್ತು. ಅದಕ್ಕೆ ಮೊದಲು ಬಂದಾಗಲೂ ಎಲ್ಲಿಯೂ ನೋ ಪಾರ್ಕಿಂಗ್ ಇದ್ದಲ್ಲಿ ಕಾರ್ ನಿಲ್ಲಿಸಲೇ ಇಲ್ಲ ಸರ್." ಅಂದೆ ನೇರವಾಗಿ ಆತನನ್ನೇ ನೋಡುತ್ತಾ.
          ನನ್ನ ಹತ್ತಿರದಲ್ಲಿಯೇ ಇದ್ದ ಪೇದೆ, "ಅವ್ರು ಸರ್ಕಲ್ ಇನ್ಸ್‌ಪೆಕ್ಟರ್" ಅಂತ ಪಿಸುಗುಟ್ಟಿದ. ಸರಿಯಾದವರ ಹತ್ರವೇ ಮಾತಾಡ್ತಿದ್ದೇನೆ ಅನ್ನಿಸಿತು.
          "ಡಿಪಾರ್ಟ್‌ಮೆಂಟನ್ನು ದೂರುದಿಲ್ಲ ಅಂತಾದ್ರೆ ನೋಟೀಸ್ ಸರಿಯಿಲ್ಲ ಅಂತ ಹೇಳುದು ಯಾಕೆ? ಅದು ತಪ್ಪು ಅಂತ ಅರ್ಥ ಅಲ್ವಾ?"
          "ಒಂದು ನೋಟೀಸ್ ತಪ್ಪು ಅಂದ್ರೆ ಇಡೀ ಇಲಾಖೆಯೇ ತಪ್ಪು ಅಂತಲ್ಲವಲ್ಲ ಸರ್. ನಿಮ್ಮ ಇಲಾಖೆ ಇಲ್ಲದಿದ್ರೆ ಸಾರ್ವಜನಿಕರಿಗೆ ರಕ್ಷಣೆ ಎಲ್ಲಿ? ನಿಮ್ಮ ಇಲಾಖೆ ಇರುವ ಕಾರಣವೇ ನಮಗೆಲ್ಲ ತಿರುಗಾಡ್ಲಿಕ್ಕೆ ದೈರ್ಯ ಉಂಟು ಸರ್. ಇಲ್ಲದಿದ್ರೆ ಸಾರ್ವಜನಿಕರಿಗೆ ಯಾರಿದ್ದಾರೆ, ಹೇಳಿ ಸರ್!"
          ಹೊಗಳಿಕೆ ಎಲ್ಲೋ ನಾಟಿತು. ಮತ್ತೆ ಆ ಲೆಟರ್ ತಗೊಂಡು ನೋಡಿದರು. ನಾನೂರು ರುಪಾಯಿ ದಂಡ ವಿಧಿಸಲಾಗಿತ್ತು. "ಇನ್ನೂರು ಕಟ್ಟಿ, ರಿಸಿಟ್ ತಗೊಂಡು ಹೋಗಿ" ಅಂದರು.
          "ದಂಡ ಕಟ್ಟುವ ಬಗ್ಗೆ ತಕರಾರಿಲ್ಲ ಸರ್. ಮಾಡಿದ್ದು ತಪ್ಪು ಹೌದಾದ್ರೆ ನಾನೂರಲ್ಲ ಸಾವಿರವಾದ್ರೂ ಕಟ್ತೇವೆ. ಆದ್ರೆ ತಪ್ಪೇ ಮಾಡದವ್ರ ಮೇಲೆ ದಂಡ ಹಾಕುದು ಯಾವ ನ್ಯಾಯ ಸರ್?"
          "ನ್ಯಾಯ ಕೇಳ್ತೀರಾ? ಕೋರ್ಟಿಗೆ ಹೋಗ್ತೀರಾ?"
          "ಇಲ್ಲ ಸರ್. ನಿಮ್ಮತ್ರ ಕೇಳುದು, ಅಷ್ಟೇ. ನಿನ್ನೆ ಇಲ್ಲಿ, ತಾಲೂಕ್ ಆಫೀಸ್ ಮುಂದೆ ಪಾರ್ಕ್ ಮಾಡ್ತಿದ್ದಾಗ ಒಬ್ರು ಪೇದೆ ಬಂದು ಇಲ್ಲಿ ನೋ ಪಾರ್ಕಿಂಗ್ ಅಂದ್ರು. ಹಾಗಂತ ಬೋರ್ಡ್ ಇಲ್ವಲ್ಲ ಅಂತ ಹೇಳಿದ್ದಕ್ಕೆ ಅವರೇ ಜೋರು ಮಾಡಿದ್ರು. ಕಾನೂನು ಮಾತಾಡ್ತೀರ ಅಂತ ಕೇಳಿದ್ರು. ಆದ್ರೂ ನಾವು ಸುಮ್ಮನೇ ಇದ್ದೆವು. ಕಾರ್ ದೂರ ನಿಲ್ಲಿಸಿ ನಡ್ಕೊಂಡು ಬಂದು ತಾಲೂಕ್ ಆಫೀಸಿನ ಕೆಲ್ಸ ಮುಗ್ಸಿ ಹನ್ನೆರಡೂವರೆಗೇ ಇಲ್ಲಿಂದ ಹೋಗಿದ್ದೇವೆ. ಇಲ್ಲಿ ಒಂದು ನಿಮಿಷವೂ ಪಾರ್ಕ್ ಮಾಡ್ಲಿಲ್ಲ. ಈ ನೋಟೀಸಲ್ಲಿ ಒಂದೂವರೆಗೆ ಇಲ್ಲಿ ಪಾರ್ಕ್ ಮಾಡಲಾಗಿತ್ತು ಅಂತ ಉಂಟಲ್ಲ, ಅದು ತಪ್ಪು ಮಾಹಿತಿ. ಹಾಗೆ ಮಾಡುದು ಸರಿಯಾ, ಹೇಳಿ..."
           ಇಷ್ಟೆಲ್ಲ ವಾದ ಅವರಿಗೇನನ್ನಿಸಿತೋ, "ಸರಿ. ಈ ಸಲ ಕ್ಷಮಿಸಿದ್ದೇನೆ. ಹೋಗಿ" ಅಂದರು.
          "ಹಾಗಂತ ಬರ್ದು ಕೊಡಿ ಸರ್. ನಾಳೆ ದಂಡ ಕಟ್ಲಿಲ್ಲ ಅಂತ ಇನ್ನೊಂದು ನೋಟೀಸ್ ಬರಬಾರದು, ಅಲ್ವಾ?" ಅಂದೆ. ನನ್ನನ್ನು ದುರುಗುಟ್ಟಿ ನೋಡಿದರು. ಆ ನೋಟೀಸ್ ಮೇಲೆ "ಕ್ಷಮಿಸಲಾಗಿದೆ" ಎಂದು ಬರೆದು "ಫ಼ೈಲಿಗೆ ಹಾಕಿ" ಎಂದರು, ಪೇದೆಯ ಬಳಿ. "ನಂಗೊಂದು ಪ್ರತಿ ಬೇಕು, ಕ್ಸೆರಾಕ್ಸ್ ಮಾಡ್ಸಿ ತರ್ತೇನೆ, ಸರ್" ಅಂದೆ. ಮತ್ತೊಮ್ಮೆ ಒಂಥರಾ ನೋಡಿ, ಅದೇ ಪೇದೆಯ ಬಳಿ ಕ್ಸೆರಾಕ್ಸ್ ಮಾಡಿಸಿ ತರಲು ಹೇಳಿ ತಾವು ಹೊರಟು ಹೋದರು. ಎರಡು ಪೇದೆಗಳು ನನ್ನ ಹತ್ತಿರ ಬಂದು, "ಯಾರು ನೀವು, ಎಲ್ಲಿ ಕೆಲ್ಸ ಮಾಡ್ತೀರಿ? ಲಾಯರಾ? ಲೆಕ್ಚರರಾ?" ಅಂತೆಲ್ಲ ‘ವಿಚಾರಿಸಿ’ಕೊಂಡರು. ನಾನು ಗೃಹಿಣಿ ಅಂದರೆ ಅವರಿಗೆಲ್ಲ ನಂಬಿಕೆಯೇ ಇಲ್ಲ. ನೋಟೀಸಿನ ಪ್ರತಿ ಸಿಕ್ಕಿದ ಮೇಲೆ ಮನೆಗೆ ಹೋಗ್ತಾ ಇವರು ಹೇಳಿದ ಪೂರ್ಣ ಹಿನ್ನೆಲೆ ಕೇಳಿ ನಗಬೇಕೋ ಬೇಡವೋ ತಿಳಿಯಲಿಲ್ಲ.

          ಹಿಂದಿನ ದಿನ ಮಧ್ಯಾಹ್ನ, ತಾಲೂಕ್ ಆಫೀಸಿನಲ್ಲಿ ಕೆಲಸವಿದ್ದ ಕಾರಣ ಕಾರನ್ನು ಅಲ್ಲೇ ನಿಲ್ಲಿಸುವಾಗ ಪೇದೆಯೊಬ್ಬ, ಅಲ್ಲಿ ನೋ ಪಾರ್ಕಿಂಗ್ ಅಂದ. ಹಾಗಂತ ಬೋರ್ಡ್ ಅಲ್ಲೆಲ್ಲೂ ಇಲ್ಲ. ಯಾಕೆ ನಿಲ್ಲಿಸಬಾರ್ದು? ಅಂತ ಕೇಳಿದ್ದಕ್ಕೆ, "ಏನು? ಕಾನೂನು ಮಾತಾಡ್ತೀರ? ನಮ್ಮನ್ನೇ ಪ್ರಶ್ನಿಸ್ತೀರ? ಇಲ್ಲಿ ನಿಲ್ಲಿಸಬಾರ್ದು ಅಂದ್ರೆ ನಿಲ್ಲಿಸಬಾರ್ದು. ನೀವ್ಯಾರು? ನಿಮ್ಮ ಹೆಸರು ಅಡ್ರೆಸ್ ಏನು?" ಅಂತೆಲ್ಲ ದಬಾಯಿಸಿದ. ಇವರು ಏನೂ ಮಾತಾಡದೆ ಕಾರನ್ನು ಅಲ್ಲಿಂದ ಮುಂದಕ್ಕೆ ತಗೊಂಡು ಹೋಗಿ ಪಾರ್ಕಿಂಗ್ ಇದ್ದಲ್ಲೇ ನಿಲ್ಲಿಸಿ, ಕಾಲು ಕಿಲೋಮೀಟರ್ ನಡೆದು ಬಂದು ಕೆಲಸ ಮುಗಿಸಿ ಹನ್ನೆರಡೂ ಮುಕ್ಕಾಲಿಗೇ ಮನೆ ಸೇರಿದ್ದರು. ಆತನಿಗೆ ಉತ್ತರಿಸದೆ ಹೋದದ್ದಕ್ಕೆ ಪ್ರತಿಯಾಗಿ ಕಾರಿನ ನಂಬರ್ ಗುರುತಿಟ್ಟು, ‘ಅನ್-ಅಥೊರೈಸ್ಡ್ ಪಾರ್ಕಿಂಗ್ ಫೈನ್’ ಹಾಕಿ ನೋಟೀಸ್ ಕಳಿಸಿದ್ದ. ಇಷ್ಟು ಸಣ್ಣ ಕಾರಣಕ್ಕೆ ತೊಂದರೆ ಕೊಟ್ಟ ಆತನ ಅಹಂ ಯಾವ ಮಟ್ಟದ್ದು?


          ಇದಾಗಿ ಈಗ ವರ್ಷಗಳೇ ಕಳೆದಿವೆ. ಇಂಥ ಘಟನೆಗಳಿಗೆ ಮತ್ತೆ ನೇರ ಭಾಗೀದಾರರಾಗದಿದ್ದರೂ ಪರೋಕ್ಷವಾಗಿ ಎಲ್ಲೋ ಅವರಿವರ ಮೂಲಕ ಇಂಥ ದಬ್ಬಾಳಿಕೆಗಳ ದೌರ್ಜನ್ಯಗಳ ವಿವರಗಳು ಕೇಳುತ್ತಲೇ ಇವೆ. ಇವೇ ಏನು ನಮ್ಮ ಭಾರತದ ಗುಣಗಳು? ಇವಕ್ಕಾಗಿ ಬಂದೆವೆ? ಈ ಪ್ರಶ್ನೆಗೆ ಉತ್ತರಗಳಿಲ್ಲ. ಆದರೂ, ಎರಡೂ ಜೊತೆ ಹೆತ್ತವರ ಕಣ್ಣುಗಳಲ್ಲಿ ಕಾಣುವ ಸಂತೋಷ ನಮ್ಮ ಕಣ್ಣುಗಳಿಗೆ ಹನಿಯುವಾಗ ಇವ್ಯಾವುವೂ ಗಮನದಲ್ಲಿ ನಿಲ್ಲುವುದಿಲ್ಲ. ಯಾವ ಕಾರಣಕ್ಕಾಗಿ ಎಲ್ಲ ಗಂಟುಮೂಟೆ ಕಟ್ಟಿಕೊಂಡು ಬಂದು ಮರುನೆಲೆಯಾದೆವೋ ಅದು ಈತನಕ ಸಾರ್ಥಕವಾಗಿದೆ, ಅಷ್ಟು ಸಾಕು. 
(ಜುಲೈ, ೨೦೧೧)

5 comments:

sunaath said...

ಜ್ಯೋತಿ,
ಘಟನೆ ಎಷ್ಟೇ ಕಹಿಯಾಗಿರಲಿ, ನಿಮ್ಮದೊಂದು ಹೊಸ ಲೇಖನ ಬಂದಿತಲ್ಲ ಅಂತ, ಖುಶಿಯಿಂದ ಓದಿದೆ. ಓದಿದ ಬಳಿಕ ನಿಮಗಾದ ಅನುಭವದ ಬಗೆಗೆ ಕೆಡುಕೆನಿಸಿತು. ಇಷ್ಟು ವರ್ಷ ಮನಸ್ಸಿನಲ್ಲಿಯೇ ಇಟ್ಟುಕೊಂಡು, ಈದಿನ ಹೊರಹಾಕಿದ್ದರಿಂದ, ನಿಮಗೆ ಸ್ವಲ್ಪವಾದರೂ ಹಗುರು ಎನಿಸಿರಬಹುದು!
ಇವತ್ತು ಭಾರತವು ಒಂದು ಕೊಳಚೆಗುಂಡಿಯಾಗಿದೆ. ದುರ್ವಾಸನೆ ನಮ್ಮ ದುರ್ಭಾಗ್ಯ!

ಸುಪ್ತದೀಪ್ತಿ suptadeepti said...

ಕಾಕಾ, ಪ್ರೀತಿಯಿಂದ ಓದಿದ ನಿಮಗೆ ವಂದನೆಗಳು. ಭಾರತ ಕೊಳಚೆಗುಂಡಿಯಾಗಿದೆ, ಆಗುತ್ತಲೇ ಇದೆ. ಕೊಳಚೆ ಎತ್ತುವ ಕಾರ್ಯ ಮಾಡುವವರ ಮೇಲೆಯೇ ಮತ್ತೆ ಕಸತೂರುವವರೇ ಹೆಚ್ಚು. ಏನು ಮಾಡೋಣ ಹೇಳಿ! ನಮ್ ಜನಕ್ಕೆ ಸಾರ್ವಜನಿಕ ಹಿತಾಸಕ್ತಿ ಎನ್ನುವುದು ತಮ್ಮ ಮನೆಯೊಳಗಿನದಕ್ಕೆ ಮಾತ್ರ ಸೀಮಿತವಾಗಿರುವ "ಸಮೀಪ ದೃಷ್ಟಿ ದೋಷ" ಇದೆ. ಅದಕ್ಕೆ ಯಾವ ಕನ್ನಡಕವೂ ಸದ್ಯಕ್ಕೆ ಲಭ್ಯವಿಲ್ಲ, ಇದ್ದರೂ ಬಹಳ ದುಬಾರಿ, ಬಿಡಿ.
ನನ್ನೊಳಗಿನ ಈ ಅನುಭವವನ್ನು ಕಹಿಯಾಗಿ ಕೋಡಿಟ್ಟಿರಲಿಲ್ಲ. ಇದನ್ನು ನೆನಪಿಸಿಕೊಂಡು ನಗುವ ಮನಸ್ಥಿತಿ ಯಾವತ್ತೋ ಬಂದುಬಿಟ್ಟಿತು. ಹಾಗಾಗಿಯೇ ಬರೆಯಲೂ ಸಾಧ್ಯವಾಯ್ತು ಅನ್ನಬಲ್ಲೆ. ಇಂಥ ಇನ್ನೂ ಕೆಲವೊಂದು ಘಟನೆಗಳಿವೆ. ಋಣಾತ್ಮಕವಾದುವನ್ನು ಆದಷ್ಟೂ ಹೇಳಬಾರದು ಅಂತ ಸುಮ್ಮನಿದ್ದೇನೆ. ಸ್ಯಾಂಪಲ್ ಮಾತ್ರ ಇವೆರಡು. ಅಷ್ಟು ಸಾಕು.

Badarinath Palavalli said...

ಮರುವಲಸೆಯ ಹೋಲಿಕೆಗಳು ಬಲು ಇಷ್ಟವಾದವು.ಅಲ್ಲಿ ಗಿಡ ಇಲ್ಲಿ ಜೀವನ ಕ್ರಮ.

ತಾವು ಉಲ್ಲೇಖಿಸಿದ ನೋ ಪಾರ್ಕಿಂಗ್ ಮತ್ತು ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಹೋಗುವ ಪ್ರಸಂಗಗಳು ನಗರಗಳ ದಿನವಹೀ ಸಮಸ್ಯೆ. ನಮಗಂತೂ ಟೈಗರ್ ಎನ್ನುವ ಗಾಡಿ ಎತ್ತುವ ವಾಹನ ಯಮನ ಕೋಣದಂತಹ ಧುತ್ತನೆರಗುವ ಪಾಶವನು ಹೊತ್ತ ವಾಹನ!

Shared ur blog at:
https://www.facebook.com/photo.php?fbid=946097885434661&set=gm.1563336117259204&type=1&theater

ಸುಪ್ತದೀಪ್ತಿ suptadeepti said...

ನಮಸ್ತೆ ಬದರಿ. ಅಭಿಮಾನದಿಂದ ಓದಿ ಪ್ರೀತಿಯಿಂದ ಪ್ರತಿಕ್ರಿಯಿಸುತ್ತೀರಿ, ವಂದನೆಗಳು.
ನಗರಗಳು ನರಕಗಳಾಗುವ ಪರಿಯಿದು. ಇಲ್ಲೂ ಅಂತಹ ವಾಹನಗಳಿವೆ. ಯಮನ ಕೋಣ- ಒಳ್ಳೇ ಉಪಮೆ ಕೊಟ್ಟಿರಿ.

ಲಿಂಕ್ ಹಂಚಿಕೊಂಡಿದ್ದಕ್ಕೂ ಧನ್ಯವಾದಗಳು.

Unknown said...

ನಮಸ್ತೆ...
ಅಚಾನಕ್ ಆಗಿ ಸಿಕ್ಕ ನಿಮ್ಮ ಬ್ಲಾಗ್ ಬರಹಗಳತ್ತ ಕಣ್ಣು ಹಾಯಿಸಿದೆ; ನಿಜಕ್ಕೂ ಆಪ್ತ ಮತ್ತು ಓದಲೇಬೇಕಾದ ಬರಹಗಳು. ಅಲ್ಲದೆ, ಸಾಕಷ್ಟು ಹೊಸ ವಿಷಯಗಳಿಂದ ಹೊಸ ಹೊಳಹುಗಳನ್ನು ಕೊಡುವಂಥ ಹೂರಣ. ಹಾಗಾಗಿ ನಮ್ಮ ಓದುಗರಿಗೆ ನಿಮ್ಮ ಬ್ಲಾಗ್ ಪರಿಚಯಿಸುವ ಸಲುವಾಗಿ ನಿಮ್ಮ ಬರಹವೊಂದರ ತುಣುಕನ್ನು ನಮ್ಮ ಪತ್ರಿಕೆಯ ’ನನ್ನ ಪೋಸ್ಟ್’ನಲ್ಲಿ [ಬ್ಲಾಗ್ ಪರಿಚಯಿಸುವ ಅಂಕಣ] ಹಾಕುವ ಅಂತಿದ್ದೇನೆ, ಆಗಬಹುದಾ?

ವಿಶ್ವಾಸದಿಂದ,
ಸಹ್ಯಾದ್ರಿ ನಾಗರಾಜ್
ಕನ್ನಡಪ್ರಭ [8722631300]