ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday, 1 December, 2010

ಬೆಳ್ಳಿ.... ಚುಕ್ಕಿ.... ಬನ್ನೀ...

ಹೀಗೇ ಒಂದು ಸಂಜೆ. ನಾಲ್ಕೂವರೆಯ ಸಮಯ. ನಮ್ಮೂರಿನ ಹತ್ತಿರದ ಆಸ್ಪತ್ರೆಯಲ್ಲಿ ಹಿಪ್ನೋಥೆರಪಿ ಕ್ಲಯಂಟ್ ಒಬ್ಬರನ್ನು ನೋಡಲು ಹೊರಡುತ್ತಿದ್ದೆ. ನಮ್ಮ ಕೋಣೆಯ ಕಿಟಕಿಯ ಹೊರಗೆ ಏನೋ ಶಬ್ದವಾಯ್ತು. ಈ ಹಾಡು ಹಗಲಲ್ಲಿ ಯಾವ ಕಳ್ಳ ಬಂದಾನು ಎಂದೆನಿಸಿದರೂ ನನ್ನವರನ್ನು ಕರೆದು ಹೇಳಿದೆ, ‘ಸ್ವಲ್ಪ ಹೊರಗೆ ಹೋಗಿ ನೋಡಿ, ಏನೋ ಶಬ್ದ ಆಯ್ತು. ನಾನು ಬಾಳಿಗಾ ಆಸ್ಪತ್ರೆಗೆ ಹೊರಟೆ. ಬರುವಾಗ ಆರೂವರೆ ಆಗಬಹುದು. ಬಾಯ್...’

* * *

ಮತ್ತೆ ಬರುವಾಗ ಆರೂವರೆಯೇ ಆಗಿತ್ತು. ಬಂದವಳೇ ಕೈಕಾಲು ಮುಖ ತೊಳೆದುಕೊಂಡು ಟೀ ಕಪ್ ಕೈಯಲ್ಲಿ ಹಿಡಿದು ಸೋಫ಼ಾದಲ್ಲಿ ಕೂತಿದ್ದೇನಷ್ಟೇ, ‘ಜ್ಯೋತಿ, ನೀನ್ ನಂಬ್ಲಿಕ್ಕಿಲ್ಲ. ಅಲ್ಲಿ... ಹೊರಗೆ... ಏನಾಗಿದೆ ಗೊತ್ತುಂಟಾ? ಒಂದು ಬೀದಿ ನಾಯಿ ಬಂದು ಮರಿಯಿಟ್ಟಿದೆ....’
‘ಹ್ಙಾ?’
‘ಹ್ಙೂ!... ನೀನು ಆಚೆ ಹೋದ ಕೂಡ್ಲೇ ನಾನು ಹೊರಗೆ ಹೋಗಿ ನೋಡಿದೆ. ಮನೆಯ ಗೋಡೆ ಮತ್ತು ಹಳೇ ಟ್ಯಾಂಕಿಯ ನಡುವೆ ಜಾಗ ಉಂಟಲ್ಲ, ಅಲ್ಲಿ ಕೂತಿದೆ. ಆಗ್ಲೇ ಮೂರು ಮರಿ ಹಾಕಿತ್ತು. ಮತ್ತೆ ನಾನು ನೋಡ್ಲಿಲ್ಲ...’
‘ಅಯ್ಯೋ! ಹೌದಾ? ಮತ್ತೆ ಈಗ ಎಂತ ಮಾಡುದು? ಅವುಗಳನ್ನು ಹಾಗೇ ಬಿಡುದಾ? ಇಲ್ಲೇ ಇದ್ರೆ ನಮಗೆ ಆಚೀಚೆ ಹೋಗ್ಲಿಕ್ಕೆ ಬಿಡ್ಲಿಕ್ಕಿಲ್ಲ ಆ ಅಮ್ಮ! ಏನ್ ಮಾಡುವಾ?’
‘ಏನ್ ಮಾಡ್ಲಿಕ್ಕಿಲ್ಲ. ಸುಮ್ನೆ ಇರ್ಲಿ ಬಿಡು. ಅದ್ರಷ್ಟಕ್ಕೆ ಹೊರಗೆ ಇರ್ತದೆ ಅದು; ನಮಗೇನು?’

ಟೀ ಮುಗಿಸಿ ಹಿಂಬಾಗಿಲು ತೆರೆದು ಹೊರಗೆ ಹೋದೆ. ಹಿಂದಿನ ನೀರೊಲೆಯ ಬದಿಗೆ ಗೋಡೆ ಮತ್ತು ಹಳೇ ಟ್ಯಾಂಕಿಯ ನಡುವೆ ಇಟ್ಟಿದ್ದ ಟೈರ್ ಬುಟ್ಟಿಯಲ್ಲಿ ದೊಡ್ಡ ಇಲಿಯಷ್ಟೇ ಗಾತ್ರದ ಮೂರು ಜೀವಿಗಳು ಕುಯ್ಞ್ಗುಡುತ್ತಿದ್ದವು. ಇನ್ನು ಇವುಗಳ ಅಮ್ಮ!? ಅಲ್ಲೆಲ್ಲೂ ಇರಲಿಲ್ಲ. ಆಗಲೇ ಏರುತ್ತಿದ್ದ ಮಬ್ಬುಗತ್ತಲೆಯಲ್ಲಿ ಕಣ್ಣು ಸಣ್ಣದು ಮಾಡಿ ನೋಡಿದಾಗ ಅಲ್ಲಿಂದ ಮುಂದೆ, ಟ್ಯಾಂಕಿಯ ಇನ್ನೊಂದು ಕೊನೆಯ ಮೂಲೆಯಲ್ಲಿ ಹಳೇ ಕುರ್ಚಿಯಿಟ್ಟಿದ್ದರ ಅಡಿಯಲ್ಲಿ ಕಪ್ಪು ನಾಯಿ ಕೂತಿತ್ತು. ನಾಲ್ಕಡಿ ದೂರದಿಂದ ನಿಟ್ಟಿಸಿದೆ. ಮತ್ತೆ ಮೂರು ಮರಿಗಳು. ಒಟ್ಟು ಅರ್ಧ ಡಝನ್! ಈ ತಾಯಿಯೇ ಸಣಕಲು ಪೀಚಲು ಕುನ್ನಿ! ಇವಳು ಹೇಗಪ್ಪಾ ಇಷ್ಟು ಮರಿಗಳನ್ನು ಹಾಲೂಡಿ ಸಾಕುತ್ತಾಳೆ? ಅಬ್ಬಾ ಪ್ರಕೃತಿಯೇ! ಇವಳನ್ನಿಲ್ಲಿಂದ ಸದ್ಯಕ್ಕಂತೂ ಓಡಿಸ್ಲಿಕ್ಕೆ ಸಾಧ್ಯ ಇಲ್ಲ. ಯಾವಾಗ? ಹೇಗೆ? ಎಲ್ಲಿ ಹೋದಾಳು? ಲೆಕ್ಕಾಚಾರ ನಡೆಸುತ್ತಾ ಒಳಗೆ ಬಂದೆ.

ಇನ್ನೊಂದರ್ಧ ಗಂಟೆ ಬಿಟ್ಟು ಹೊರಗೆ ಹೋಗಿ ನೋಡಿದಾಗ, ಬುಟ್ಟಿಯ ಮರಿಗಳು ಅಲ್ಲೇ ತೆವಳುತ್ತಿದ್ದವು. ಅಲ್ಲಿಂದ ನಾಲ್ಕಡಿ ದೂರದಲ್ಲಿ ಹದಿನೆಂಟು ಇಂಚುಗಳ ಎಡೆಯಲ್ಲಿ ಕರಿಯ ತಾಯಿ ಎಳೆಯ ಮೂರು ಜೀವಗಳನ್ನು ಹೊಟ್ಟೆಯ ಮೇಲೆ ಏರಿಳಿಸಿಕೊಂಡು ಕಣ್ಣು ಪಿಳಿಪಿಳಿ ಮಾಡುತ್ತಾ ಗುರುಗುಟ್ಟಿದಳು ನನ್ನತ್ತ. ಇವಳ ಸಹವಾಸ ಕಷ್ಟ ಎನಿಸಿತು. ಹೇಳಿ ಕೇಳಿ ಬೀದಿನಾಯಿ. ಹೇಗೋ ಏನೋ ಗೊತ್ತಿಲ್ಲ.

ಆದರೂ, ಬುಟ್ಟಿಯಲ್ಲಿ ಕುರುಗುಡುತ್ತಿದ್ದ ಮೂರು ಎಳಸುಗಳ ದನಿ ನನ್ನನ್ನು ಸುಮ್ಮನಿರಗೊಡಲಿಲ್ಲ. ಮೆಲ್ಲಗೆ ಬುಟ್ಟಿಯನ್ನೆತ್ತಿಕೊಂಡೆ. ಅಮ್ಮನ ದಮ್ಮಿಲ್ಲ. ಟ್ಯಾಂಕಿಯನ್ನು ಬಳಸಿಕೊಂಡು ಈಚೆ ಬಂದು ಇವಳಿಂದ ಎರಡೇ ಅಡಿ ದೂರದಲ್ಲಿ ನಿಂತೆ. ಬುಟ್ಟಿಯೊಳಗೆ ಬೊಮ್ಮಟೆಗಳು ಹರಿದಾಡುತ್ತಿದ್ದವು. ಈ ತಾಯಿಯೆಲ್ಲಿ ಕಾಳಿಯಾಗುತ್ತಾಳೋ ಭಯ ನನಗೆ. ಬುಟ್ಟಿಯನ್ನು ಮೆಲ್ಲಗೆ ಅವಳ ಹೊಟ್ಟೆಯ ಹತ್ತಿರವೇ ಬಗ್ಗಿಸಿ ಹಿಡಿದೆ. ಗಬಕ್ಕನೆ ತಲೆಯೆತ್ತಿದಳು. ಕೈ ಜಾರುವುದರಲ್ಲಿತ್ತು, ಸಂಭಾಳಿಸಿಕೊಂಡೆ. ಇನ್ನೊಂದು ಕೈಯಿಂದಲೂ ಬುಟ್ಟಿಯನ್ನು ಆಧರಿಸಿ ಹಿಡಿದೆ. ಎತ್ತಿದ ತಲೆ ಬುಟ್ಟಿಯ ಒಂದು ಬದಿಗೆ ತಿರುಗಿ ಅದನ್ನು ಬಾಯಲ್ಲಿ ಕಚ್ಚಿಕೊಂಡಿತು. ನನ್ನ ಎದೆಯಲ್ಲಿ ಡಮರುಗವೇ. ಹಲ್ಲುಗಳ ಬಾಯಿಂದ ನನ್ನ ಕೈಗೆ ಕೆಲವೇ ಸೆಂಟಿಮೀಟರ್. ಅವಳ ತಾಳ್ಮೆಯೋ, ನನ್ನ ಸಹನೆಯೋ? ಅಂತೂ ಮೂರೂ ಮರಿಗಳು ಬುಟ್ಟಿಯಿಂದ ಹೊಟ್ಟೆಗೆ ಜಾರಿದವು. ಹಲ್ಲುಗಳ ಹಿಡಿತ ತಪ್ಪಿಸುವ ಪ್ರಯತ್ನ ಮಾಡದೆಯೇ ಜಾರಿಕೊಂಡೆ. ಮತ್ತೆ ತುಸು ಹೊತ್ತಿನಾನಂತರ ಹೋಗಿ ಬುಟ್ಟಿಯನ್ನೆತ್ತಿಕೊಂಡೆ. ಸದ್ದಿಲ್ಲದೆ ನನ್ನ ಕಡೆ ಪಿಳಿಪಿಳಿ ಮಾಡಿದಳು. ಆ ರಾತ್ರಿ ಅಲ್ಲಿಂದ ಹೊಮ್ಮುತ್ತಿದ್ದ ಸಂಗೀತ ಮತ್ತು ಘಮಕ್ಕೆ ನಮ್ಮ ಕೋಣೆಯಲ್ಲಿ ನಮಗೆ ಮಲಗಲಾಗಲಿಲ್ಲ.

ಮರದಿನ ಶ್ರೀಕೃಷ್ಣ ಜನ್ಮಾಷ್ಟಮಿ. ಬೆಳಗ್ಗೆ ಎದ್ದು ಈ ಮಹಾತಾಯಿಯ ದರ್ಶನ ಮಾಡಿದೆವು. ಅವಳ ಹೊಟ್ಟೆಯ ಬದಿಗೆ, ಸಾಲುಮೊಲೆಗೆ ಬಾಯಿಯಿಟ್ಟು ಒಂದರ ಮೇಲೊಂದು ಅಮರಿಕೊಂಡು ಮುಲುಗುಡುತ್ತಿದ್ದವು ಏಳು ಪಿಳ್ಳೆಗಳು. ಮೂರು ಬಿಳಿ. ಮತ್ತೆ ನಾಲ್ಕು ಕಪ್ಪು-ಬಿಳಿ ಮಿಶ್ರ. ಇವಳೂ ಕಪ್ಪು-ಬಿಳಿ ಮಿಶ್ರಣದವಳೇ. ಬೆನ್ನೆಲ್ಲ ಕಪ್ಪು. ನಾಲ್ಕೂ ಕಾಲತುದಿಗಳು, ಬಾಲದ ತುದಿ, ಕುತ್ತಿಗೆ ಎಲ್ಲ ಬಿಳಿ. ಮಧ್ಯಾಹ್ನದವರೆಗಿನ ಸಮಯದಲ್ಲಿ ಪದೇ ಪದೇ ಇಣುಕಿ ನಮ್ಮ ಮುಖ ಪರಿಚಯ ಮಾಡಿಕೊಟ್ಟೆವು. ಸಂಜೆಗೆ ನಮ್ಮೂರಿಗೆ ತೆರಳಿದೆವು.

ಆ ನಂತರದ್ದು ದೊಡ್ಡ ಕಥೆಯೇ... ಈಗ ಬೇಡ ಬಿಡಿ; ಇಲ್ಲೊಮ್ಮೆ ಇಣುಕಿ ನೋಡಿ- ಎರಡು ವಾರಗಳ ನಂತರ ‘ಗಿಡ್ಡಿ ಸಂಸಾರ’:-

* * *

ಈಗ... ಮೂರು ತಿಂಗಳ ಬಳಿಕ (ಈ ಮೂರು ತಿಂಗಳ ಕಥೆಯನ್ನು ಇನ್ನೊಮ್ಮೆ ಸವಿವರ ಬರೆಯುತ್ತೇನೆ)... ಈ ಸಂಸಾರದ ಇಬ್ಬರು- ‘ಬೆಳ್ಳಿ-ಚುಕ್ಕಿ’- ನಮ್ಮ ಸಂಸಾರದ ಸದಸ್ಯರು. ನಮ್ಮ ಎರಡು ಕಣ್ಣುಗಳು, ಕಿವಿಗಳು. ಗೇಟಿನ ಸದ್ದಾದರೆ ಕರೆದು ಹೇಳುತ್ತಾರೆ. ಬಂದವರ ಸುತ್ತಮುತ್ತ ಸುತ್ತಿ ಜೊತೆಜೊತೆಗೆ ಹೆಜ್ಜೆ ಹಾಕುತ್ತಾರೆ. ಸಂಜೆ ಹೊತ್ತು ಗೇಟಿನಿಂದ ಮುಂಬಾಗಿಲ ಮೆಟ್ಟಲಿನ ತನಕ ನಾನು ಓಡಿದರೆ ಅರ್ಧದಿಂದ ಜೊತೆಯಾಗಿ ಅರ್ಧದಲ್ಲಿ ನಿಲ್ಲುತ್ತಾರೆ (ಮತ್ತೆ ಅದೇ ಅರ್ಧಕ್ಕೆ ನಾನು ಬಂದೇ ಬರುತ್ತೇನೆನ್ನುವ ಅವರ ನಂಬಿಕೆಯನ್ನು ನಾನಿನ್ನೂ ಹುಸಿ ಮಾಡಿಲ್ಲವಲ್ಲ!). ಬ್ರೆಡ್, ಹಾಲು, ಅನ್ನ-ಮೊಸರು, ಒಮ್ಮೊಮ್ಮೆ ಬಿಸ್ಕೆಟ್, ರಸ್ಕ್ ಮೆಲ್ಲುತ್ತಾರೆ. ಹಾಗೇನೇ, ಊರಿಗೆ ಹೋಗುವಾಗೆಲ್ಲ ವಾಂತಿ ಮಾಡಿಕೊಂಡಾದರೂ ಸರಿ, ಕಾರಿನಲ್ಲಿ ನಮ್ಮೊಡನೆ ಊರಿಗೂ ಬರುತ್ತಾರೆ. ಅಲ್ಲಿಯ ದೊಡ್ಡ ದನವನ್ನು ನೋಡಿ ತಮಗೂ ದನಿಯಿದೆಯೆಂದು ತೋರಿಸುತ್ತಾರೆ. ಅವಳೇನಾದರೂ ಹತ್ತಿರ ಬಂದರೆ ಶೆಡ್ ಒಳಗೆ ತೂರಿಕೊಂಡು ಬಾಗಿಲಡಿಯಿಂದ ಇಣುಕುತ್ತಾರೆ. ಇಲ್ಲೇ ಇರುವಾಗ ಒಮ್ಮೊಮ್ಮೆ ತಮ್ಮಮ್ಮ ‘ಗಿಡ್ಡಿ’ ತಂದು-ಕಕ್ಕಿ-ಕೊಡುವ ವಾಸನಾಭರಿತ ಊಟವನ್ನು ಮೆಲ್ಲುತ್ತಾರೆ. ಕುಣಿಯುತ್ತಾರೆ. ದಣಿಯುತ್ತಾರೆ. ಮಣಿಯುತ್ತಾರೆ.ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಮೂವರ ಸ್ವರ ಕೇಳಿದ ಕೂಡಲೇ ಎಲ್ಲಿದ್ದರೂ ಒಮ್ಮೆ ಕಿವಿ ನಿಮಿರಿಸಿ, ತಿರುಗಿ, ನಾಗಾಲೋಟ ಹಾಕಿ, ನಮ್ಮ ಕಡೆ ಬಂದು, ಕಾಲ ಸುತ್ತ ಸುತ್ತಿ ಸುತ್ತಿ, ಕಾಲ ಮೇಲೆ ಬಿದ್ದು ಹೊರಳಿ, ಬಲ ಮುಂಗಾಲೆತ್ತಿ ಶೇಕ್ ಹ್ಯಾಂಡ್ ಕೊಟ್ಟು, ತಲೆ ತಗ್ಗಿಸಿ, ಹೇಳಿದಾಗ ಕೂತು, ತಕ್ಷಣವೇ ಎದ್ದು ಬಂದು ಬಾಲವಾಡಿಸಿ, ನಗಿಸಿ, ನಲಿಯುವ ಉತ್ಸಾಹದ ಬುಗ್ಗೆಗಳು. ಇವರಿಗಿಂದಿನಿಂದ ನಾಲ್ಕನೇ ತಿಂಗಳು ಚಾಲ್ತಿ. ಇದೇ ವಾರದಲ್ಲಿ ಲಸಿಕೆಗಳನ್ನು ಕೊಡಿಸುವ ಕಾರ್ಯಭಾರವಿದೆ.
ಹರಸುವಿರಲ್ಲ ನಮ್ಮನೆ ಬೆಳ್ಳಿ-ಚುಕ್ಕಿಯರನ್ನು.