ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Friday 14 December, 2007

ಆತ್ಮ ಚಿಂತನ-೧೧

ಕಳೆದ ಕಂತಿನಲ್ಲಿ ಒಂದು ಪ್ರಶ್ನೆ ಕೇಳಿದ್ದೆ. ಪ್ರಶ್ನೆ ಕೇಳಿ, ನಿಮ್ಮ ಉತ್ತರ ಕೇಳಿಸಿಕೊಂಡು ಸುಮ್ಮನಿರುವ ಉದ್ದೇಶ ನನ್ನದಲ್ಲ. ಪ್ರಶ್ನೆ ಕೇಳಿದ ದಿನವೇ, ನಿಮ್ಮೆಲ್ಲರ ಉತ್ತರ ಬರುವ ಮೊದಲೇ, ನನ್ನ ಕಲ್ಪನೆಯ ದೇವರನ್ನು "ಅಕ್ಷರ ರೂಪ"ಕ್ಕೆ "ಇಳಿಸಿ", ಇಲ್ಲಿ "ಸಾಕಾರ"ಗೊಳಿಸುವ ಪ್ರಯತ್ನ ಮಾಡಿದ್ದೇನೆ. ಅದರ ಪ್ರಕಟಣೆ ಮಾತ್ರ ಈಗ, ಒಂದು ವಾರದ ಮೇಲೆ....

"ದೇವರು"- ನನ್ನ ಕಲ್ಪನೆಯಲ್ಲಿ (ಸಂಕ್ಷಿಪ್ತವಾಗಿ ಹೇಳುವುದಾದರೆ)- ಒಂದು ತತ್ವ, ಒಂದು ಶಕ್ತಿ, ಮತ್ತು ಅದನ್ನೂ ಮೀರಿದ್ದು; ಎಲ್ಲವನ್ನೂ ಒಳಗೊಂಡೂ ಎಲ್ಲಕ್ಕಿಂತ ಹೊರತಾದದ್ದು. ಆ ಶಕ್ತಿಯ ಮೂಲ ಎಲ್ಲಿದೆಯೋ ಗೊತ್ತಿಲ್ಲ. ನಮ್ಮೆಲ್ಲರ ಅತ್ಯಮೋಘ ಕಲ್ಪನೆಯನ್ನೂ ಮೀರಿದ ಒಂದು ಅಗಾಧತೆಯಿದ್ದರೆ, ಅದಕ್ಕೆ ನಾವು ಸುಲಭದಲ್ಲಿ ಕೊಡುವ ಹೆಸರು: "ದೇವರು".


ಪ್ರಪಂಚದ ಎಲ್ಲ ವ್ಯವಹಾರಗಳ ಹಿಂದೆ ಈ ಶಕ್ತಿಯಿದೆ. ಒಂದು ಅಣುವಿನ ಚಲನೆಗೂ ಈ ಶಕ್ತಿ ಬೇಕು, ಅಂತರಿಕ್ಷದ ನೀಹಾರಿಕೆಗಳ ಚಲನೆಗೂ ಇದೇ ಶಕ್ತಿ ಬೇಕು. ಅಣು ಬಾಂಬು ಮಾಡುವ ವಿಜ್ಞಾನಿಯ ಮೆದುಳಿನಲ್ಲೂ ಅದೇ ಶಕ್ತಿ, ಅಳುವ ಕಂದನಿಗೆ ಹಾಲುಣಿಸುವ ಅಮ್ಮನ ಮನದಲ್ಲೂ ಅದೇ ಶಕ್ತಿ. ಆಗಸದ ಹಕ್ಕಿ ರೆಕ್ಕೆಯೊಳಗೆ, ಸಾಗರದ ಚಿಕ್ಕ ಜೀವಿಯೊಳಗೆ, ಸೂರ್ಯ-ಚಂದ್ರ-ಚುಕ್ಕೆಗಳ ಬೆಳಕಿನೊಳಗೆ ಹರಿದಾಡುವುದು ಯಾವುದೇ ವೈಜ್ಞಾನಿಕ ಕಾರಣಗಳನ್ನೂ ಮೀರಿದ ಇದೇ ಶಕ್ತಿ. ಎಲ್ಲವನ್ನೂ ಒಳಗೊಂಡಿರುವ ಆ ಶಕ್ತಿಯ ವೈಶಾಲ್ಯ ನಮ್ಮ ಅರಿವಿನ ಪರಿಧಿಯಾಚೆಗಿನದ್ದು.


ಮಾನವ ಜೀವಿಯ ಒಳಗಿನ "ನಾನು" ಭಾವ ಆ ಶಕ್ತಿಯ, "ದೇವರ" ಒಂದು ಅಂಶ.... ಆ ವ್ಯಕ್ತಿ ಒಳ್ಳೆಯವನಾಗಿರಲಿ, ಕೆಟ್ಟವನಾಗಿರಲಿ, ಧೂರ್ತಳಾಗಿರಲಿ, ಧಾರಾಳಿಯಿರಲಿ, ಸ್ನೇಹ-ಪ್ರೀತಿಯ ಭಂಡಾರವೇ ಇರಲಿ, ಕೆಟ್ಟ ಸೇಡಿನ ಮೊಟ್ಟೆಯೇ ಇರಲಿ.... ಪಟ್ಟಿ ಎಷ್ಟು ದೊಡ್ಡದೂ ಮಾಡಬಹುದು! ಒಟ್ಟಿನಲ್ಲಿ "ನಾನು" ಭಾವ ಆ ಅದಮ್ಯ ಚೈತನ್ಯದ ಒಂದು ಭಾಗ, ಪುಟ್ಟ ತುಣುಕು. ಈ "ನಾನು" ಅನ್ನುವುದು "ಅಹಮಿಕೆ" ಅಲ್ಲ. ಅದನ್ನು ಹೊರತಾದದ್ದು. "ನಾನು" ಅಂದಾಗ ಅದು ನನ್ನ ಕೈ-ಕಾಲಲ್ಲ, ದೇಹವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ, ಹೃದಯ-ಮೆದುಳು ಮುಂತಾದ ಅಂಗಾಂಗಗಳಲ್ಲ.... ಅವೆಲ್ಲವನ್ನೂ ಹೊರತಾಗಿಯೂ "ನಾನು" ಎನ್ನುವ ಗುರುತು ಹೊರುವಂಥಾದ್ದು ಯಾವುದಿದೆಯೋ ಆ "ನಾನು" ಆ "ದೇವರ" ತುಣುಕು.

ಇಂಥ ಶಕ್ತಿ-ಸ್ವರೂಪವನ್ನು ನಮ್ಮ-ನಮ್ಮ ನಂಬಿಕೆಗಳಿಗೆ, ಆಸರೆ-ಆಧಾರಗಳಿಗೆ, ಒಪ್ಪುವ ಕಲ್ಪನೆಗಳಿಗೆ ಅನುಗುಣವಾಗಿ ನಮ್ಮ ಮನಸ್ಸಿಗೊಪ್ಪುವ ರೂಪ ಕೊಟ್ಟು ನಮಗೆ ಹತ್ತಿರವಾಗಿಸಿಕೊಂಡಿದ್ದೇವೆ. ಇಷ್ಟರ ಮಟ್ಟಿಗೆ ದೇವರನ್ನು ನಮ್ಮೊಳಗೆ ಇರಿಸಿಕೊಂಡಿದ್ದೇವೆ. ಆದರೆ.... ಆ ದೇವರು, ಆ ಶಕ್ತಿ ಅಂದರೆ ಅಷ್ಟೇ ಏನು? ಅದರ ಅಗಾಧತೆಯನ್ನು ಅರಿತ ದಿನ.... ಅದರ ಪರಿಚಯ ನಮಗಾದ ದಿನ.... "ನಾವೇ ದೇವರಾಗುತ್ತೇವೆ" ಅನ್ನುವುದು ದೂರದ, ಕಷ್ಟದ, ಅರಗಲಾರದ ನಿತ್ಯಸತ್ಯ.

Wednesday 5 December, 2007

ಆತ್ಮ ಚಿಂತನ- ೧೦

ಗಂಭೀರವಾದ ಪ್ರಶ್ನೆಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ, ಎಲ್ಲರೂ ಉತ್ತರಿಸುವಿರಾಗಿ ನಂಬಿಕೆಯೊಂದಿಗೆ:

"ನಿಮ್ಮ ಕಲ್ಪನೆಯಲ್ಲಿ- ದೇವರು ಯಾರು? ಏನು? ಎಲ್ಲಿದ್ದಾನೆ/ಳೆ (ಎಲ್ಲ್ಲಿದೆ)? ಹೇಗಿದ್ದಾನೆ/ಳೆ (ಹೇಗಿದೆ)?"

Monday 26 November, 2007

ಆತ್ಮ ಚಿಂತನ-೦೯

ಆಸ್ಟಿನ್ ನಗರದಲ್ಲಿ ನನ್ನ ಆತ್ಮ....



ಹೌದು; ನನ್ನ ಆತ್ಮ, ನನ್ನೊಡನೆ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ಒಂದಿಷ್ಟು ತಿರುಗಾಡಿತು. ಮೆಚ್ಚಿತು. ಬೆರಗುಗೊಂಡಿತು. ಗಾಬರಿಯಾಯ್ತು. ತನ್ಮಯವಾಯ್ತು. ತಲ್ಲೀನವಾಯ್ತು. ಇಷ್ಟೆಲ್ಲ ನಡೆದದ್ದು ೨೦೦೭ರ ಅಕ್ಟೋಬರ್ ೧೪ರಿಂದ ೨೧ರ ನಡುವೆ. ಮತ್ತೆ ನನ್ನಾತ್ಮ ನನ್ನೊಡನೆ ಕ್ಯಾಲಿಫೋರ್ನಿಯಾದ ಮನೆಗೆ ಮರಳಿತು.



ಡಾ. ಬ್ರಯಾನ್ ವೈಸ್ ಮತ್ತವರ ಪತ್ನಿ ಕೆರೋಲ್ ನಡೆಸಿಕೊಟ್ಟ "ರಿಗ್ರೆಷನ್ ಥೆರಪಿ ಟ್ರೈನಿಂಗ್- ವರ್ಕ್ ಶಾಪ್" ನನ್ನನ್ನು ಸೆಳೆದ ಅಯಸ್ಕಾಂತ. ನನ್ನ ಕಾಂತನೊಡನೆ ಅಲ್ಲಿಗೆ ಸಾಗಿದ್ದೆ, `ವಿತ್ ಓಪನ್ ಮೈಂಡ್'. ಸೋಮವಾರದಿಂದ ಶುಕ್ರವಾರದ ತನಕ ನಡೆದ ಕಾರ್ಯಾಗಾರದಲ್ಲಿ ಬುಧವಾರ ಸಂಜೆ ನಡೆದ ಘಟನೆಯ ನಿರೂಪಣೆ ಈಗಾಗಲೇ ನೀಡಿದ್ದಾಗಿದೆ. ಅದನ್ನು ಹೊರತಾಗಿ ಉಳಿದ ದಿನಗಳ ನಿರೂಪಣೆ ಈಗ:

ಭಾನುವಾರ ಮಧ್ಯಾಹ್ನವೇ ಕಾರ್ಯಾಗಾರ ನಡೆಯಬೇಕಾದ "ದ ಕ್ರಾಸಿಂಗ್ಸ್" ಅನ್ನುವ ಆಶ್ರಮದಂಥ ರಿಸಾರ್ಟಿಗೆ ಹೋಗಿ ನಮ್ಮ ನೋಂದಣಿ ಮಾಡಿಸಿಕೊಂಡು ಬಂದೆವು. ಸ್ವಲ್ಪ ಸೆಖೆ ಇದ್ದರೂ ವಾತಾವರಣ ಹಿತವಾಗಿತ್ತು. ಸಂಜೆ ದಕ್ಷಿಣ ಆಸ್ಟಿನ್ ಭಾಗದಲ್ಲಿರುವ "ಝಿಲ್ಕರ್ ಬೊಟಾನಿಕಲ್ ಗಾರ್ಡನ್" ನೋಡಿಕೊಂಡು ಬಂದು, ರಾತ್ರೆ ಗೆಳೆಯರೊಬ್ಬರ ಮನೆಯಲ್ಲಿ ಊಟ ಮುಗಿಸಿ, ನಮ್ಮ ಹೋಟೆಲ್ ರೂಮಿಗೆ ಮರಳಿದ್ದಾಯಿತು. ಮರುದಿನದ ನಿರೀಕ್ಷೆ ನನ್ನಲ್ಲಿ ತುಂಬಿತ್ತು, ಕುತೂಹಲ ಅದಕ್ಕಿಂತ ಹೆಚ್ಚಿತ್ತು.

ಸೋಮವಾರ ಬೆಳಗ್ಗೆ "ದ ಕ್ರಾಸಿಂಗ್ಸ್" ತಲುಪಿದಾಗ ಕಾರ್ಯಾಗಾರ ನಡೆಯಬೇಕಿದ್ದ ಕೋಣೆ ತುಂಬಿತ್ತು. ಸುಮಾರು ನೂರಿಪ್ಪತ್ತಕ್ಕೂ ಮಿಕ್ಕಿದ ದೊಡ್ಡ ಗುಂಪು. `ತೀವ್ರ ಆಸಕ್ತಿ' ಒಂದು ಕಾರಣವಾದರೆ, `ಸುಮ್ಮನೇ ಕುತೂಹಲ'ವೂ ಸೇರಿದಂತೆ ಹಲವಾರು ಕಾರಣಗಳು. ಎಲ್ಲರ ಔಪಚಾರಿಕ ಪರಿಚಯದ ಬಳಿಕ ಡಾ. ವೈಸ್ ಸಣ್ಣ ಪ್ರಸ್ತಾವನೆಯ ಮಾತುಗಳನ್ನಾಡಿ "ಗ್ರೂಪ್ ರೆಗ್ರೆಷನ್" ನಡೆಸಿದರು. ಅತಿ ಮಂದ ಬೆಳಕಿನಲ್ಲಿ, ಹಿತವಾದ ಸಂಗೀತದ ಹಿನ್ನೆಲೆಯಲ್ಲಿ, ನಿಧಾನವಾಗಿ ನಮ್ಮನ್ನೆಲ್ಲ "ರಿಲ್ಯಾಕ್ಸ್‍ಡ್ ಸ್ಟೇಟ್"ಗೆ ಒಯ್ಯುವ ನಿರ್ದೇಶಕರಾದರು. ಅವರ ಸ್ವರದಲ್ಲಿ, ಮಾತಿನಲ್ಲಿ ಇರುವ ಗಾಂಭೀರ್ಯ, ಆಳ, ಮತ್ತು ಸ್ಥಿರತೆಗಳಿಗೆ ನಮ್ಮನ್ನು ನಿರಾಳ ಸ್ಥಿತಿಗೆ ಒಯ್ಯುವ ಶಕ್ತಿಯಿತ್ತು.

ಹಂತ-ಹಂತವಾಗಿ ನಿರಾಳ ಸ್ಥಿತಿ ತಲುಪಿದ ಗುಂಪನ್ನು ಕುರಿತು ಡಾ. ವೈಸ್- ಬಾಲ್ಯದ ನೆನಪಿನ ತುಣುಕುಗಳನ್ನು ನೆನಪಿಸಿಕೊಳ್ಳುವಂತೆಯೂ, ಅದಕ್ಕೂ ಹಿಂದೆ ತಾಯಿಯ ಗರ್ಭದಲ್ಲಿದ್ದಾಗಿನ ನೆನಪುಗಳನ್ನು ತಂದುಕೊಳ್ಳುವಂತೆಯೂ, ನಂತರ ಹಿಂದಿನ ಯಾವುದೋ ಜನ್ಮದ ನೆನಪಿನ ಪುಟಗಳನ್ನು ತೆರೆದುಕೊಳ್ಳುವಂತೆಯೂ ನಿರ್ದೇಶಿಸಿದರು. ಅಂತೆಯೇ ನಿಧಾನವಾಗಿ ಪ್ರಸ್ತುತಕ್ಕೆ ಮರಳುವಂತೆ ಸೂಚಿಸುತ್ತಾ, ಎಲ್ಲರನ್ನೂ ವಾಸ್ತವಕ್ಕೆ ಕರೆತಂದರು. ನಿಧಾನವಾಗಿ ಕಣ್ಣು ತೆರೆದ ಎಲ್ಲರ ಮುಖದಲ್ಲಿ ಏನೇನೋ ಮಿಶ್ರ ಭಾವನೆಗಳು. ಸುಮಾರು ಅರ್ಧಕ್ಕರ್ಧ ಜನರಿಗೆ ಯಾವುದೇ ಅನುಭವ ಆಗಿರಲಿಲ್ಲ (ನಾವಿಬ್ಬರೂ ಈ ಗುಂಪಿನವರು). ಮತ್ತೆ ಕೆಲವರಿಗೆ ಬಾಲ್ಯದ ನೆನಪುಗಳ ಸಣ್ಣ ತುಣುಕುಗಳು ಹಿಂದೆಂದೂ ನೆನಪಿಸಿಕೊಂಡಿರದ ವಿವರಗಳಲ್ಲಿ ಕಂಡಿದ್ದವು. ಇನ್ನೂ ಕೆಲವರಿಗೆ ತಾಯಿಯ ಗರ್ಭದಲ್ಲಿದ್ದಾಗಿನ ನೆನಪೂ ಬಂದಿತ್ತು. ಮತ್ತೆ ಕೆಲವೇ ಕೆಲವರಿಗೆ ಹಿಂದಿನ ಜನ್ಮದ ನೆನಪಿನ ತುಣುಕು (ಇರಬೇಕೆಂದು ಅವರ ನಂಬಿಕೆ) ಮೂಡಿತ್ತು. ಕೆಲವಾರು ಜನರ ಅನುಭವಗಳನ್ನು ಕೇಳಿದ ಡಾ. ವೈಸ್ ಮೊದಲ ಚಹಾ ವಿರಾಮಕ್ಕೆ ಕರೆ ನೀಡಿದರು.

ಅಲ್ಲೇ ಲಾಬಿಯಲ್ಲಿ ಚಹಾ ಹೀರುತ್ತಿದ್ದೆವು, ನಾವಿಬ್ಬರೂ. ಸುಂದರ ಅಮೆರಿಕನ್ ಮಹಿಳೆ ಒಬ್ಬಳು ನಮ್ಮ ಬಳಿ ಸಾರಿ, "ಆರ್ ಯೂ ಇಂಡಿಯನ್ಸ್?" ಅಂದಳು. ಹೌದೆಂದೆವು. ತನ್ನ ಹೆಸರು ಜೆನ್, ನ್ಯೂ ಮೆಕ್ಸಿಕೋ ರಾಜ್ಯದ ಸಾಂಟ-ಫೇ ಊರಿನವಳೆಂದು ಪರಿಚಯಿಸಿಕೊಂಡಳು. ತನಗೊಂದು ಪ್ರಶ್ನೆಯಿದೆ ಅಂದವಳು, "ವಾಟ್ ಡಸ್ ಇಟ್ ಮೀನ್ ಬೈ ಸ-ರಾಸ್-ವಟಿ? ಈಸ್ ದಟ್ ಎ ನೇಮ್? ಈಸ್ ದಟ್ ಎನಿ ಗಾಡ್ಸ್ ನೇಮ್?" ಮೊದಲಿಗೆ "ಸ-ರಾಸ್-ವಟಿ" ಅರ್ಥವಾಗದಿದ್ದರೂ ಕ್ಷಣಗಳಲ್ಲಿ "ಸರಸ್ವತಿ"ಯನ್ನು ಕಂಡುಕೊಂಡೆವು. ಸೂಕ್ಷ್ಮವಾಗಿ ಅರ್ಥ ಅವಳಿಗೆ ತಿಳಿಸಿದಾಗ ಅವಳಿಗೆ ಆಶ್ಚರ್ಯ, ಆನಂದ. ಅವಳೆಂದೂ ಆ ಹೆಸರನ್ನು ಕೇಳಿರಲಿಲ್ಲ, ಅವಳಿಗೆ ಎಂದೂ ಭಾರತೀಯ ಸ್ನೇಹಿತರಿರಲಿಲ್ಲ. ಆದರೂ ಇಂದಿನ ರಿಗ್ರೆಷನ್ ಸಮಯದಲ್ಲಿ ಯಾವುದೇ ನೆನಪು ಮೂಡಿಲ್ಲದಿದ್ದರೂ, ಈ ಹೆಸರು ಪದೇ ಪದೇ ಅವಳ ಮನದಲ್ಲಿ ಮೂಡಿತಂತೆ, ಅವಳ ಕಿವಿಗಳಲ್ಲಿ ರಿಂಗಣಿಸಿತಂತೆ. ನನಗೋ ಅಚ್ಚರಿ, ಸಂಶಯ ಎರಡೂ.



ವಿರಾಮದ ಬಳಿಕ ಮತ್ತೆ ಸೇರಿದಾಗ ಡಾ. ವೈಸ್ ಹಲವಾರು ವಿವರಣೆಗಳನ್ನು ನೀಡಿದರು. ಹಿಪ್ನಾಸಿಸ್ ಮತ್ತು ರಿಗ್ರೆಷನ್ ಇವೆರಡೂ ಒಂದೇ ಚಿಕಿತ್ಸಾ ವಿಧಾನದ ಮಜಲುಗಳೆಂದರು. ಮಧ್ಯಾಹ್ನ ಊಟದ ವಿರಾಮ ಘೋಷಿಸಿದಾಗ ಗುಂಪಿನಲ್ಲಿ ಹೊಸದೊಂದು ಚೇತನ ಚಿಮ್ಮುತ್ತಿತ್ತು.

ಅಪರಾಹ್ನದ ಮೊದಲ ಭಾಗದಲ್ಲಿ, "ಪ್ರೊಗ್ರೆಸ್ಸಿವ್ ರೆಲ್ಯಾಕ್ಸೇಷನ್ ಟೆಕ್‍ನಿಕ್" ತೋರಿಸುತ್ತಾ ಶಿಬಿರಾರ್ಥಿಯೊಬ್ಬಳನ್ನು ರೆಗ್ರೆಸ್ ಮಾಡಿದರು ಡಾ. ವೈಸ್. ಆಕೆ ಕ್ಷಣಗಳಲ್ಲಿ ಸುಲಭವಾಗಿ ನಿರಾಳ ಸ್ಥಿತಿಗೆ ತಲುಪಿ, ಆತನ ನಿರ್ದೇಶಕ ಮಾತುಗಳನ್ನು ಕೇಳುತ್ತಾ, ತನ್ನ ಮೂರನೇ ವಯಸ್ಸಿನ ನೆನಪೊಂದಕ್ಕೆ ಜಾರಿದಳು. ತನ್ನ ಸ್ನೇಹಿತೆಯೊಡನೆ ಆಟವಾಡಿದ್ದು, ಆ ಗೊಂಬೆಯ ವಿವರಗಳು, ತಾವಿದ್ದ ಮನೆಯ ವಿವರಗಳನ್ನು ನೀಡಿದಳು. ಆಟದ ಭರದಲ್ಲಿ ನಕ್ಕ ನಗು ಮೂರು ವರ್ಷದ ಚಿನ್ನಾರಿಯದ್ದೇ... ಬಳಿಕ ಅವಳ ಹೈ-ಸ್ಕೂಲಿನ ದಿನಗಳಿಗೆ ಸಾಗಿ, ಅಲ್ಲಿಂದ ನಿಧಾನವಾಗಿ ಅವಳನ್ನು ಪ್ರಸ್ತುತಕ್ಕೆ ಕರೆತಂದರು ಡಾ. ವೈಸ್. ಸಭೆಯಲ್ಲೇ ಆಕೆಯ ತಾಯಿಯೂ ಇದ್ದು, ಮಗಳ ಗೆಳತಿಯ, ಗೊಂಬೆಯ, ಮನೆಯ ವಿವರಗಳನ್ನು ನಿಖರವೆಂದು ಸ್ಪಷ್ಟಪಡಿಸಿದರು. ಮಗಳು ನಾಲ್ಕು ವರ್ಷದವಳಿದ್ದಾಗ ಅವರು ಆ ಮನೆ ಬಿಟ್ಟು ಹೋಗಿದ್ದಾಗಿಯೂ ತಿಳಿಸಿದರು. ಪುಟ್ಟ ವಿರಾಮದ ಬಳಿಕ ಮತ್ತೊಂದಿಷ್ಟು ಪ್ರಶ್ನೋತ್ತರಗಳೂ, ಇನ್ನೊಂದಿಷ್ಟು ವಿವರಣೆಗಳೂ, ಶ್ರೀಮತಿ ವೈಸ್ ಅವರಿಂದ ಕೆಲವು ಸೂಕ್ಷ್ಮಗಳೂ ಶಿಬಿರಾರ್ಥಿಗಳ ಮೊದಲ ದಿನದ ಅನುಭವ ಖಜಾನೆಯಲ್ಲಿ ದಾಖಲಾದವು.

ಇನ್ನುಳಿದ ದಿನಗಳ ವಿವರಗಳು ಮುಂದಿನ ಕಂತಿನಲ್ಲಿ....

Monday 12 November, 2007

ಆತ್ಮ ಚಿಂತನ-೦೮

ಓದುಗರೇ, "ಆತ್ಮಚಿಂತನ-೦೪"ರಲ್ಲಿ ಚೀನಾದಲ್ಲಿ ಚಾಲ್ತಿಯಲ್ಲಿರುವ ಪ್ರೇತಾತ್ಮಗಳ ಮದುವೆಯ ಬಗ್ಗೆ ಬರೆದಿದ್ದೆ. ಅದರಲ್ಲಿ ಹೆಚ್ಚಾಗಿ, ಮದುವೆಯಾಗದೇ ತೀರಿಕೊಂಡ ಮಗಳ ಪ್ರೇತಕ್ಕೆ ತಂದೆ-ತಾಯಿ ಗಂಡು ಹುಡುಕಿ ಮದುವೆಯ ಸಂಪ್ರದಾಯ ಪೂರೈಸುವ ವಿಷಯವಿತ್ತು. ಇದೀಗ ಈ "ಮಿಂಘಮ್" ಬಗ್ಗೆ ಇನ್ನೂ ಒಂದಿಷ್ಟು ವಿವರಗಳು, ನವೆಂಬರ್, ೧೬, ೨೦೦೬ರ ತರಂಗದಲ್ಲಿ ನಿಶಾಂತ್ ಬರೆದ ಲೇಖನದಲ್ಲಿ ಸಿಕ್ಕಿವೆ. ನಿಮ್ಮ ಓದಿಗಾಗಿ.... (ಇಲ್ಲಿ ಸ್ವಲ್ಪ ಹೃಸ್ವೀಕರಿಸಿದ್ದೇನೆ)

ಚೀನಾದ ಜನಸಂಖ್ಯೆಯ ಹತೋಟಿಗೆ ಅಲ್ಲಿನ ಸರಕಾರ ಹೊರಡಿಸಿದ ಕಾಯಿದೆ: ಒಂದು ಕುಟುಂಬ- ಒಂದು ಮಗು. ಅವರಿಗೂ ಭಾರತೀಯರಂತೆಯೇ ಗಂಡು ಮಗುವಿನ ಮೇಲೆ ವ್ಯಾಮೋಹ. ಪರಿಣಾಮ- ನಿರೀಕ್ಷಿತ; ಹೆಣ್ಣುಗಳಿಲ್ಲ. ಹುಟ್ಟಿದ ಗಂಡಿನ ಮದುವೆಗೆ ಪರದಾಡಬೇಕಾದ ಪರಿಸ್ಥಿತಿ. ಅದರ ಫಲರೂಪ- ವಧೂದಕ್ಷಿಣೆಯ ಆಮಿಷ. ಇದಕ್ಕೆ ಹಲವಾರು ಆಯಾಮಗಳಿವೆಯಾದರೂ ಇಲ್ಲಿ, ಈ ಲೇಖನದ ವ್ಯಾಪ್ತಿಗಾಗಿ, ಪ್ರೇತಮದುವೆಯ ಸಂಪ್ರದಾಯವನ್ನಷ್ಟೇ ತೆಗೆದುಕೊಳ್ಳುತ್ತೇನೆ.

"ಮಕ್ಕಳಿಗೆ ಮದುವೆ ಮಾಡಿಸುವುದು ತಂದೆಯ ಹೊಣೆಗಾರಿಕೆ. ಪ್ರಾಯಕ್ಕೆ ಬಂದ ಮಗ ಮದುವೆಯಾಗದೆ ಸತ್ತರೆ, ತಂದೆ-ತಾಯಿಯ ವ್ಯಥೆ ಅಷ್ಟಿಷ್ಟಲ್ಲ.ಈ ಪರಿಸ್ಥಿತಿಯಲ್ಲಿ ಹೆತ್ತವರ ಹೊಣೆಗಾರಿಕೆ ಹೆಚ್ಚುತ್ತದೆ; ಸತ್ತವರು ಸ್ವತಃ ಹೆಣ್ಣು ಹುಡುಕುವಂತಿಲ್ಲವಲ್ಲ! ಆಗ, ಹೆತ್ತವರು ಹೊಟ್ಟೆ-ಬಟ್ಟೆ ಕಟ್ಟಿ ಹಣ ಕೂಡಿಡುತ್ತಾರೆ. ಸತ್ತ, ಸಾಯುತ್ತಿರುವ ಹೆಣ್ಣು ಹುಡುಕುತ್ತ ಊರೂರು ಅಲೆಯುತ್ತಾರೆ. ಅಂಥ ಸಂದರ್ಭಗಳಲ್ಲಿ, ಹೆಣ್ಣು ಹೆತ್ತವರಿಗೆ ಆಕೆ ಇಲ್ಲದಿದ್ದರೂ ಲಾಭವೇ. (ಈ ಹಿನ್ನೆಲೆಯಲ್ಲಿ, ಚೀನಾದಲ್ಲಿ ತಂದೆ-ತಾಯಿ ತಮ್ಮ ಹೆಣ್ಣು ಮಗಳು ಅಪ್ರಾಪ್ತ ವಯಸ್ಸಿನಲ್ಲಿ ತೀರಿಕೊಂಡರೆ ದುಃಖಿಸುತ್ತಾರೆಯೇ? ಕೇಳಬಾರದ ಪ್ರಶ್ನೆ ಇದು) ತೀರಿಕೊಂಡ ಹೆಣ್ಣಿನ ದೇಹವನ್ನು ವಧುದಕ್ಷಿಣೆ ಕೊಟ್ಟು ಪಡೆದ ಹುಡುಗನ ಕಡೆಯವರು, ಆಕೆಯನ್ನು ಸಂಭ್ರಮದಿಂದ ತಮ್ಮ ಸ್ಮಶಾನಕ್ಕೆ ಒಯ್ದು, ತಮ್ಮ ಹುಡುಗನ ಶರೀರದ ಪಕ್ಕದಲ್ಲಿ ಆಕೆಯನ್ನೂ ಇರಿಸಿ, ಮದುವೆಯ ಶಾಸ್ತ್ರಗಳನ್ನು ನೆರವೇರಿಸುತ್ತಾರೆ. ಬಳಿಕ ಇಬ್ಬರನ್ನೂ ಅಕ್ಕಪಕ್ಕದಲ್ಲಿ ಸಮಾಧಿ ಮಾಡಲಾಗುತ್ತದೆ. ಜೊತೆಗೆ, ಸಂಸಾರ ಹೂಡಲು ಬೇಕಾಗುವ ಎಲ್ಲ ಸಾಮಾಗ್ರಿಗಳನ್ನೂ ಇರಿಸಲಾಗುತ್ತದೆ. ಶ್ರೀಮಂತರಾದರೆ ಕುರಿ, ಹಂದಿ ಕಡಿದು, ಬಂಧು-ಬಾಂಧವರಿಗೆ ಮದುವೆ ಊಟ ಬಡಿಸುತ್ತಾರೆ." ಎಂದು ಬರೆಯುತ್ತಾರೆ ನಿಶಾಂತ್.

ನಮ್ಮೂರ ತುಳುವರಲ್ಲಿ ಆತ್ಮ "ಕೇಳಿಕೊಂಡು" ಬಂದರೆ ಮಾತ್ರ ಆ ಆತ್ಮಕ್ಕೆ ಮದುವೆ ಮಾಡಿಸುವ ಸಂಪ್ರದಾಯವಿದೆ. ಬಹುಶಃ ಚೀನಾದಲ್ಲಿ ಎಲ್ಲ ಪ್ರೇತಾತ್ಮಗಳಿಗೂ ಮದುವೆ ಕಡ್ಡಾಯವಿರಬೇಕು; ಮುಂದಿನ ಪ್ರಸಂಗ ನೋಡಿ: "ಯೂಜಿಂಗ್'ನ ಮಗಳು ಯೆಲ್ಲೋ ರಿವರ್'ನಲ್ಲಿ ಬಂದ ಧಿಡೀರ್ ನೆರೆಯಲ್ಲಿ ಕೊಚ್ಚಿಹೋಗಿ, ಮರುದಿನ ಹೆಣ ಸಿಗುತ್ತದೆ. ಗೆಳೆಯರು, ಬಂಧುಗಳು ಆತನನ್ನು "ನೀನು ಅದೃಷ್ಟವಂತ" ಅನ್ನುತ್ತಾರೆ. ಹಳ್ಳಿಯಲ್ಲಿ ಸುದ್ದಿ ಹರಡುತ್ತದೆ. ಅರ್ಧ ಘಂಟೆಯಲ್ಲಿ ಚೆನ್ ಬರುತ್ತಾನೆ, ತನ್ನ ಮಗನಿಗೆ ಹೆಣ್ಣು ಕೇಳಲು. ಮನೆಯವರೆಲ್ಲರ ಎದುರೇ ಮಾತುಕತೆ ನಡೆಯುತ್ತದೆ, ಚರ್ಚೆ ಸಂಧಾನಗಳ ಬಳಿಕ ಚೆನ್ ಹಣ ತೆತ್ತು ತನ್ನ ಭಾವೀ ಸೊಸೆಯ ಹೆಣದೊಂದಿಗೆ ಮರಳುತ್ತಾನೆ. ಸ್ಮಶಾನದಲ್ಲಿ ಕೆಲ ವರ್ಷಗಳ ಹಿಂದೆ ಮದುವೆಯಾಗದೇ ತೀರಿಕೊಂಡ ಹುಡುಗನ ಸಮಾಧಿಯ ಬಳಿಯಲ್ಲಿಯೇ ಈ ಹುಡುಗಿಯ ಶವಪೆಟ್ಟಿಗೆಯನ್ನೂ ಇಳಿಸಿ, ಸಂಸಾರ ಹೂಡಲು ಬೇಕಾದ ಪಾತ್ರೆ-ಪರಡಿ, ಬಟ್ಟೆ-ಬರೆಗಳ ಜೊತೆಗೆ ಹೆಣ-ವಧುವನ್ನೂ ಮಣ್ಣುಮಾಡಲಾಗುತ್ತದೆ."

ಇದಿಷ್ಟೇ ಅಲ್ಲದೆ, ನಮ್ಮೂರಿನಂತೆ ಕೆಲವು ಆತ್ಮಗಳು ಚೀನಾದಲ್ಲೂ ಮದುವೆ ಮಾಡಿಸುವಂತೆ ಪೀಡಿಸಿ, ಕಾಡಿಸಿ, ತೊಂದರೆ ಕೊಡುವುದೂ ಇದೆ. ಅಂಥ ಸಂದರ್ಭಗಳಲ್ಲಿ ಮನೆಯವರು, ಸಂಬಂಧಪಟ್ಟವರು, ಎಲ್ಲ ಕಡೆ ಜಾಲಾಡಿ ಎಂದೋ ಎಲ್ಲೋ ಸತ್ತ ಹೆಣ್ಣು ಹುಡುಕಿ ಮದುವೆ ಮಾಡುತ್ತಾರೆ. ಹೆಣ್ಣು-ಹೆಣ ಎಲ್ಲೂ ಸಿಗದೇ ಹೋದಲ್ಲಿ, ಅಥವಾ ವಧುದಕ್ಷಿಣೆ ಕೊಡಲಾಗದೇ ಇದ್ದಲ್ಲಿ, ಅಂಥವರು ಹಿಡಿವ ಹಾದಿಗಳೆರಡು-
ಒಂದು: ಯಾವುದೋ ಒಂದು ಹೆಣ್ಣಿನ ಹೆಣವನು ಗೋರಿಯಿಂದಲೇ ಅಪಹರಿಸುವುದು;
ಎರಡು: ಒಣಹುಲ್ಲಿನಲ್ಲಿ ಹೆಣ್ಣಿನ ಗೊಂಬೆ ತಯಾರಿಸಿ ಮಗನ ಹೆಣದ ಬಳಿ ಹೂತು ಜವಾಬ್ದಾರಿ ತೀರಿಸಿಕೊಳ್ಳುವುದು.

ನಂಬಿಕೆಗಳು ಮನುಷ್ಯನನ್ನು ಏನೆಲ್ಲ ಮಾಡಿಸುತ್ತವೆ!!

Monday 5 November, 2007

ಆತ್ಮ ಚಿಂತನ-೦೭

ಓದುಗರೇ, ಈ ಹಿಂದೆ ನಿಮಗೆ ಮಾತು ಕೊಟ್ಟಂತೆ ಇದೀಗ "ಆತ್ಮ ಚಿಂತನ"ದಲ್ಲಿ `ಪ್ರೇತಗಳ ಮದುವೆ'ಯ ವಿಷಯವನ್ನು ಮುಂದುವರೆಸುತ್ತಿದ್ದೇನೆ.

"ಪ್ರೇತಾತ್ಮಗಳ ಮದುವೆಗೂ ವಿಧಿ ವಿಧಾನಗಳಿವೆ" ಅನ್ನುತ್ತಾರೆ ಅನಂತ ಹುದೆಂಗಜೆ; ೨೦೦೬, ನವೆಂಬರ್, ಹದಿನಾರರಂದು ತರಂಗದಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ. "ಪ್ರೇತಗಳಿಗೆ ಮದುವೆ ಮಾಡಿಸುವ ಜಾನಪದ ನಂಬಿಕೆಯ ಆಧಾರದ ಸಂಪ್ರದಾಯ ತುಳುನಾಡಿನ ಹಲವಾರು ಜನಾಂಗಗಳಲ್ಲಿ ಪ್ರಚಲಿತವಿದ್ದು, ಬಹುತೇಕ ಕ್ರಮಗಳು ಸಾಂಪ್ರದಾಯಿಕ ಮದುವೆಯಂತೆಯೇ ನಡೆಯುತ್ತವೆ" ಅನ್ನುತ್ತಾರೆ ಅವರು. "ಹೆಣ್ಣು-ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ವರದಕ್ಷಿಣೆಯ ಮಾತುಕತೆ, ದಿಬ್ಬಣ, ವಾಲಗ, ಸಿಡಿಮದ್ದು, ಪರಸ್ಪರ ಮರ್ಯಾದೆ, ಮಾಂಗಲ್ಯಗಳವರೆಗೆ ಎಲ್ಲವೂ ಸಂಪ್ರದಾಯ ಬದ್ಧವಾಗಿಯೇ ನಡೆಯುತ್ತದೆ. ಗೌಡ ಸಂಪ್ರದಾಯದಲ್ಲಿ ಅಡಕೆ ಮರದ ಹೂವು (ಹಿಂಗಾರ)ಗಳನ್ನು ಗಂಡು ಹೆಣ್ಣಿನ ಪ್ರತೀಕವಾಗಿ ಬಳಸುತ್ತಾರೆ. ಕೆಲವರು ಬೆಳ್ಳಿಯಲ್ಲಿ ಗಂಡು-ಹೆಣ್ಣಿನ ಗೊಂಬೆಗಳನ್ನು ಮಾಡಿಸಿದರೆ, `ನಲ್ಕೆ' ಜನಾಂಗದಲ್ಲಿ ಬಾಳೆದಿಂಡಿನಿಂದ ಗಂಡು-ಹೆಣ್ಣಿನ ಗೊಂಬೆಗಳನ್ನು ಮಾಡಿ, ಅವಕ್ಕೆ ಬಟ್ಟೆ ತೊಡಿಸುತ್ತಾರೆ. ಎರಡೂ ಪ್ರತಿನಿಧಿಗಳನ್ನು ಹಸೆಮಣೆಯ ಮೇಲೆ, ಅಕ್ಕ-ಪಕ್ಕ ಇಟ್ಟು, ಗಂಡಿನ `ಕೈಯಿಂದ' ಹೆಣ್ಣಿಗೆ ತಾಳಿ `ಕಟ್ಟಿಸುವ' ಶಾಸ್ತ್ರವನ್ನು ಮಾಡುತ್ತಾರೆ."

"ಬಿಲ್ಲವರಲ್ಲಿ ಗಂಡು ತೆಂಗಿನಕಾಯಿಯಲ್ಲೂ ಹೆಣ್ಣು ಹಿಂಗಾರದಲ್ಲೂ ಪ್ರತಿನಿಧಿಸಲ್ಪಟ್ಟಿರುತ್ತವೆ. ಮದುವೆ ಮಂಟಪದಲ್ಲಿ ಜೇಡಿಮಣ್ಣಿನಿಂದ ಕೈ-ಕೈ ಬೆಸೆದಂತೆ ಬರೆದ ಗಂಡು-ಹೆಣ್ಣಿನ ರೂಪದ ಮಂಡಲಗಳ ಮೇಲೆ ಮಣೆಗಳನ್ನಿಟ್ಟು, ಅವುಗಳ ಮೇಲೆ ಬಾಳೆಯೆಲೆ ಇರಿಸಿ, ಹೆಣ್ಣಿಗೆ ಹೊಸಸೀರೆ, ರವಿಕೆಕಣವನ್ನಿಟ್ಟು ಅವುಗಳ ಮೇಲೆ ಹಿಂಗಾರವನ್ನೂ, ಗಂಡಿಗೆ ಧೋತರ, ಶಲ್ಯವನ್ನಿಟ್ಟು ಮೇಲೆ ತೆಂಗಿನಕಾಯಿಯನ್ನೂ ಇರಿಸುತ್ತಾರೆ. ಮಂಡಲದಲ್ಲಿ ಬೆಸೆದಿರುವ ಕೈಗಳ ಮೇಲೆ ಧಾರೆಯೆರೆಯುತ್ತಾರೆ."

"ಮದುವೆಯಾದ ಸಂಕೇತವಾಗಿ ಹಿಂಗಾರದ ಹೊರಹಾಳೆಯೂ, ತೆಂಗಿನಕಾಯಿಯೂ ಒಡೆಯುತ್ತವೆ. ಶಾಸ್ತ್ರಕ್ಕೆ ಸರಿಯಾಗಿ, ಶೋಭಾನೆ ಹಾಡಿ, ಅತಿಥಿಗಳಿಗೆ ಊಟ ಬಡಿಸುತ್ತಾರೆ. ಮದುಮಕ್ಕಳಿಗೂ `ಎಡೆ'ಯಿರಿಸುತ್ತಾರೆ. ನಂತರ, ಕುಟುಂಬಗಳ ಹಿರಿಯರು "ನಿಮ್ಮ ಅಪೇಕ್ಷೆಯಂತೆ ನಿಮಗಿಬ್ಬರಿಗೂ ಮದುವೆ ಮಾಡಿಸಿದ್ದೇವೆ. ನೀವಿನ್ನು ಗಂಡ-ಹೆಂಡತಿ. ಯಾರಿಗೂ ತೊಂದರೆ ಕೊಡದೆ ಸುಖವಾಗಿ ಸಂಸಾರ ಮಾಡಿ" ಎಂದು ವಿನಂತಿಸಿಕೊಳ್ಳುತ್ತಾರೆ, ಹಾರೈಸುತ್ತಾರೆ. ಮದುಮಕ್ಕಳ ಪ್ರತೀಕಗಳನ್ನು ಅಂದು ರಾತ್ರೆ ಒಂದು ಕೋಣೆಯಲ್ಲಿರಿಸಿ, ಪ್ರಸ್ತದ ಶಾಸ್ತ್ರವನ್ನೂ ಮಾಡುತ್ತಾರೆ. ಮದುಮಕ್ಕಳಿಗೆ ಎರಡೂ ಮನೆಗಳಲ್ಲಿ ಔತಣದ ಕ್ರಮ ನಡೆಯುತ್ತದೆ. ಬಳಿಕ, ತಾಳಿ, ಬಳೆ, ಬಟ್ಟೆಗಳನ್ನು ತೆಗೆದಿರಿಸಿ, ಹಿಂಗಾರ-ಕಾಯಿಗಳನ್ನು ಯಾ ಗೊಂಬೆಗಳನ್ನು ವಿಸರ್ಜಿಸುತ್ತಾರೆ. ಮದುವೆಯ ನಂತರ ಎರಡೂ ಮನೆಗಳ ಸಂಬಂಧ ಬೆಸೆಯುತ್ತದೆ, ಬಾಂಧವ್ಯ ಮುಂದುವರೆಯುತ್ತದೆ. ಹಬ್ಬ-ಹರಿದಿನಗಳಲ್ಲಿ ಪರಸ್ಪರ ಹಬ್ಬದೂಟಗಳ ಆಮಂತ್ರಣವಿರುತ್ತದೆ. ದೀಪಾವಳಿ, ಯುಗಾದಿಗಳಲ್ಲಿ ಈ ಹೊಸ ದಂಪತಿಗೆ ಹೊಸ ಬಟ್ಟೆ ಕೊಡಿಸಿ, ಎಡೆಯಿರಿಸುವುದೂ ಇದೆ." (ಅನಂತ ಹುದೆಂಗಜೆಯವರ ಲೇಖನದ ತುಣುಕು ಇದು, ಅಲ್ಪ ಮಾರ್ಪಾಡುಗಳೊಂದಿಗೆ.)

`ಪ್ರೇತ ಮದುವೆ'ಯ ಸಂಪ್ರದಾಯ ಚೀನಾದಲ್ಲೂ ಇದೆ ಎಂದು "ಆತ್ಮ ಚಿಂತನ-೦೪"ರಲ್ಲಿ ಬರೆದಿದ್ದೆ. ಇದೇ ತರಂಗದಲ್ಲಿ ಆ "ಮಿಂಘಮ್" ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ, ನಿಶಾಂತ್. ಅದರ ಸಾರಾಂಶ ಮುಂದಿನ ಕಂತಿನಲ್ಲಿ.

Wednesday 24 October, 2007

ಆತ್ಮ ಚಿಂತನ-೦೬

ವಿಶೇಷ ಸೂಚನೆ: ಹಿಂದಿನ ಸಂಚಿಕೆಯಲ್ಲಿ ತಿಳಿಸಿದ, ಕಳೆದ ನವೆಂಬರಿನಲ್ಲಿ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ "ಪ್ರೇತಗಳ ಮದುವೆ" ಲೇಖನದ ಸಾರಾಂಶವನ್ನು ಈ ಕಂತಿನಲ್ಲಿ ಕೊಡಮಾಡುತ್ತಿಲ್ಲ, ಮುಂದಿನ ಕಂತಿಗೆ ಮುಂದೂಡಲಾಗಿದೆ. ಈ ಕಂತಿನಲ್ಲಿ ಅದಕ್ಕಿಂತ ವಿಶೇಷವಾದ ಒಂದು ನಿರೂಪಣೆಯನ್ನು ಬರೆಯಬೇಕಾಗಿದೆ....

ಪಟ್ಟಣದ ಗೌಜಿ-ಗಲಾಟೆಯಿಂದ ದೂರವಾಗಿ ಒಂದು ಆಶ್ರಮದಂಥ ವಾತಾವರಣ. ಅಲ್ಲಿನ ದೊಡ್ಡ ಕಟ್ಟಡದ ಒಂದು ವಿಶಾಲ ಕೋಣೆಯಲ್ಲಿ ಹಲವಾರು ಪುಟ್ಟ ಪುಟ್ಟ ಗುಂಪುಗಳಲ್ಲಿ ಗುಜು-ಗುಜು ನಡೆಯುತ್ತಿದೆ. ಅಂಥದ್ದೊಂದು ಪುಟ್ಟ ಗುಂಪಿನ ಕಡೆ ನಮ್ಮ ಗಮನ. ನೂರಕ್ಕೂ ಹೆಚ್ಚು ಆಸಕ್ತರು ಸೇರಿದ್ದ ಒಂದು ಕಾರ್ಯಾಗಾರದಲ್ಲಿ ಅವರೂ ಭಾಗಿಗಳು. ಸೋಮವಾರ, ಮಂಗಳವಾರಗಳ ಪೂರ್ವಾಹ್ನ, ಅಪರಾಹ್ನಗಳಲ್ಲಿ ವಿವರಣೆಗಳು, ಪ್ರಾತ್ಯಕ್ಷಿಕೆಗಳು ನಡೆದಿವೆ. ಇದೀಗ, ಬುಧವಾರದ ಅಪರಾಹ್ನ, ಪ್ರಯೋಗದ ಸಮಯ. ಇವರ ಗುಂಪಿನಲ್ಲಿ ಒಬ್ಬ ಮಹಿಳೆ `ಅವಳು'. ಇನ್ನೊಬ್ಬ ಮಹಿಳೆ `ಇವಳು'. ಸದ್ಯಕ್ಕೆ `ಆತ' ಇಲ್ಲೊಬ್ಬ ನೋಡುಗ, ಅಷ್ಟೇ. `ಇವಳ' ಎಡಗಡೆಗೆ `ಅವಳು' ಮತ್ತು ಬಲಗಡೆಗೆ `ಆತ' ತ್ರಿಕೋನಾಕೃತಿಯಲ್ಲಿ ಕುರ್ಚಿಗಳಲ್ಲಿ ಆಸೀನರಾಗಿ, ತಮ್ಮೊಳಗೆ ಪಿಸು-ಪಿಸು ಮಾತಾಡುತ್ತಿದ್ದಾರೆ. ಪರಸ್ಪರ ನಮಸ್ಕಾರ ವಿನಿಮಯಗಳ ಬಳಿಕ `ಅವಳು' ಮತ್ತು `ಇವಳ' ನಡುವೆ ಸಂಭಾಷಣೆ ಸಾಗುತ್ತದೆ, ಅದರ ಸಂಕ್ಷಿಪ್ತ ರೂಪಾಂತರ ಹೀಗಿದೆ:

`ಅವಳು': ನೀನೀಗ ಸಂಪೂರ್ಣವಾಗಿ ನಿರಾಳವಾಗಿದ್ದೀ... ನಿನ್ನ ದೇಹದ ಯಾವ ಭಾಗಗಳೂ ಸೆಟೆದುಕೊಂಡಿಲ್ಲ... ಕಣ್ಣು ಮುಚ್ಚಿ ನಿಧಾನವಾಗಿ, ದೀರ್ಘ ಉಸಿರಾಟ ನಡೆಸು... ಉಸಿರಿನೊಡನೆ ಹೊಸ ಚೇತನವೂ ನಿನ್ನನ್ನು ಸೇರುತ್ತಿದೆ. ನಿಃಶ್ವಾಸದೊಡನೆ ನಿನ್ನ ನಿಶ್ಶಕ್ತಿಯನ್ನೂ, ನಿರುತ್ಸಾಹವನ್ನೂ ಹೊರಗೆ ಹಾಕು... ನಿಧಾನವಾಗಿ ಉಸಿರಾಡು... ದೀರ್ಘವಾಗಿ ಉಸಿರಾಡು... ನಿನ್ನ ಮನಸ್ಸಿನ ಯೋಚನೆಗಳನ್ನೆಲ್ಲ ಚಿತ್ರ ರೂಪದಲ್ಲಿ ನೋಡು... ನಿಧಾನವಾಗಿ ಹಳೆಯ ನೆನಪುಗಳನ್ನು ತೆರೆಗೆ ತಂದುಕೋ... ನಿನ್ನ ಬಾಲ್ಯದ ನೆನಪು... ಅಥವಾ ನಿನಗೆ ಬೇಕೆನಿಸಿದ ನೆನಪಿನ ತುಣುಕು ನಿನ್ನ ಮನದ ಭಿತ್ತಿಯ ಮೇಲೆ ಕಾಣುತ್ತದೆ... ಅದನ್ನು ವಿವರವಾಗಿ ನೋಡು... ಅದರ ವಿವರಗಳನ್ನು ನನಗೆ ಹೇಳಬಲ್ಲೆ, ಆದರೆ ನಿನ್ನ ನಿರಾಳವಾದ ಪ್ರಜ್ಞಾವಸ್ಥೆ ಕಲಕುವುದಿಲ್ಲ. ಈಗ ನಿನ್ನ ನೆನಪಿನ ತುಣುಕನ್ನು ನನಗೆ ವಿವರಿಸು...

`ಇವಳು': ಸಣ್ಣ ಜಲಪಾತ... ತುಂತುರು ನೀರಿನ ಕೆಳಗೆ ನಿಂತಿದ್ದೇನೆ. ನೀರು ತಣ್ಣಗಿದೆ... ಖುಷಿಯಾಗುತ್ತಿದೆ... ಈ ಸ್ಥಳ... ಈ ಸ್ಥಳ ನನಗೆ ಗೊತ್ತು, ನಾನೆಂದೂ ಇಲ್ಲಿಗೆ ಬಂದಿಲ್ಲ... ಆದರೂ ನನಗೆ ಈ ಜಾಗ ಪರಿಚಿತ...

`ಅವಳು': ನೀನು ಹೇಗಿದ್ದೀ... ಅದನ್ನು ವಿವರಿಸುತ್ತೀಯಾ? ನಿನ್ನ ಕಾಲುಗಳು ಹೇಗಿವೆ? ಪಾದರಕ್ಷೆಗಳು ಇವೆಯೇ? ಹೇಗಿವೆ? ಯಾವ ರೀತಿಯ ಬಟ್ಟೆ ಧರಿಸಿದ್ದೀ? ಈಗ ಹೇಳು...

`ಇವಳು': ನಾನು... ಸುಮಾರು ಇಪ್ಪತ್ತರ ತರುಣಿ... ಬರಿಗಾಲು... ಬಟ್ಟೆ... ಚರ್ಮದ ಥರ... ಕಂದು ಬಣ್ಣದ ಒರಟು ಬಟ್ಟೆ... ಹೇಗೋ ಸುತ್ತಿಕೊಂಡಿದ್ದೇನೆ... ಕಟ್ಟಿಕೊಂಡಿದ್ದೇನೆ... ನೀರಿನಡಿಯಲ್ಲಿ ನಿಂತಿದ್ದೇನೆ. ಇಲ್ಲಿಗೇ ಯಾವಾಗಲೂ ಸ್ನಾನಕ್ಕೆ ಬರುತ್ತೇನೆ... ಖುಷಿಯಾಗುತ್ತಿದೆ... ಸುತ್ತಲಿನ ಗಿಡಗಳೆಲ್ಲ ನನಗೆ ಪರಿಚಿತ... ಇದು ಭಾರತದ ಒಂದು ಹಳ್ಳಿ, ನನಗೆ ಗೊತ್ತು...

`ಅವಳು': ಸಂತೋಷ... ಯಾವ ಹಳ್ಳಿ ಗೊತ್ತಾ? ಅಲ್ಲಿ ಯಾರೆಲ್ಲ ಇದ್ದಾರೆ? ನೋಡು...

`ಇವಳು': ಗೊತ್ತಿಲ್ಲ... ಹತ್ತು ಹನ್ನೊಂದು ಗುಡಿಸಲುಗಳ ಹಳ್ಳಿ... ಇದು ನನ್ನ ಗಂಡನ ಊರು... ವರ್ತುಲಾಕಾರದ ಮನೆಗಳು, ಮೇಲೆ ಹುಲ್ಲಿನ ಮಾಡು... ನನಗೆ ಖುಷಿಯಾಗುತ್ತಿದೆ...

`ಅವಳು': ಓಹ್, ನಿನಗೆ ಮದುವೆಯಾಗಿದೆ. ಗಂಡ ಅಲ್ಲಿ ಇದ್ದಾನೆಯೇ? ನಿನಗೆ ಯಾಕೆ ಖುಷಿಯಾಗಿದೆ?

`ಇವಳು': ಗಂಡ ಇಲ್ಲಿಲ್ಲ... ನಾನು ಗರ್ಭಿಣಿ, ಅದಕ್ಕೇ ನನಗೆ ಖುಷಿಯಾಗಿದೆ...

`ಅವಳು': ಸಂತೋಷ... ಈ ವಿಷಯ ಬೇರೆ ಯಾರಿಗಾದರೂ ಗೊತ್ತಿದೆಯೇ?

`ಇವಳು': ಇಲ್ಲ, ಹಳ್ಳಿಯಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ... ನನ್ನ ಗಂಡ ಈ ವಿಷಯವನ್ನು ನನ್ನ ಅಮ್ಮ-ಅಪ್ಪನಿಗೆ ತಿಳಿಸಲು ಹೋಗಿದ್ದಾನೆ... ನನಗೆ ಖುಷಿಯಾಗಿದೆ...

`ಅವಳು': ಈಗ ಆ ನೆನಪಿನ ದಾರಿಯಲ್ಲಿ ಮುಂದಕ್ಕೆ ಹೋಗು... ಮುಂದೇನಾಗುತ್ತದೆ ನೋಡು...

`ಇವಳು': (ಬಿಕ್ಕಳಿಸಲು ಪ್ರಾರಂಭಿಸುತ್ತಾಳೆ... ಕಣ್ಣೀರು ಜಿನುಗುತ್ತದೆ...) ನನಗೆ ನೋವಾಗುತ್ತಿದೆ, ಬೇಸರವಾಗುತ್ತಿದೆ... ತೊರೆಗೆ ಹೋಗುವಾಗ ಜಾರಿ ಬಿದ್ದೆ... ಐದು ತಿಂಗಳ ಗರ್ಭಿಣಿ... ಬಿದ್ದೆ.... ಮಗುವನ್ನು ಕಳೆದುಕೊಂಡೆ... ನನ್ನ ಮಗುವನ್ನು ಕಳೆದುಕೊಂಡೆ... (ಬಿಕ್ಕಳಿಕೆ...)

`ಅವಳು': ನಿನಗೆ ನೋವಾಗಿದೆ, ನಿಜ... ನಿನ್ನ ಗಂಡ ಅಲ್ಲಿದ್ದಾನೆಯೇ? ಅವನಿಗೆ ಗೊತ್ತಿದೆಯೇ?

`ಇವಳು': ಹೌದು, ಅವನೂ ಇಲ್ಲೇ ಇದ್ದಾನೆ... ಅವನು... ಇವನೇ... ನನ್ನ ಈಗಿನ ಗಂಡನೇ ಅವನು. ಅವನಿಗೂ ಬೇಸರವಾಗಿದೆ, ಆದರೂ ನನ್ನನ್ನು ಸಂತೈಸುತ್ತಿದ್ದಾನೆ... ನನಗೆ ಆಸರೆಯಾಗಿದ್ದಾನೆ... ನನ್ನ ಜೊತೆಗಿದ್ದಾನೆ... (ಬಿಕ್ಕಳಿಕೆ...)

`ಅವಳು': ಅದೇ ನೆನಪಿನ ದಾರಿಯಲ್ಲಿ ಇನ್ನೂ ಮುಂದುವರಿದು ನೋಡು... ನಿನಗೆ ಬೇರೆ ಮಕ್ಕಳಾಗಿವೆಯೇ? ಮುಂದೆ ನಿನಗೆ ಏನಾಗುತ್ತದೆ? ನೋಡಿ ಹೇಳು...

`ಇವಳು': ಈ ಹಳ್ಳಿ ಬೇಡ... ಬೇರೆ ಕಡೆ ಹೋಗುವಾ ಅಂದ್ರೆ ನನ್ನ ಗಂಡ ಕೇಳುತ್ತಿಲ್ಲ... ಇದು ಅವನ ಹಳ್ಳಿ, ಅವನ ಸಂಬಂಧಿಕರೆಲ್ಲ ಇಲ್ಲೇ ಇದ್ದಾರೆ. ಅದಕ್ಕೇ ಬೇರೆ ಕಡೆ ಹೋಗಲು ಅವನಿಗೆ ಇಷ್ಟ ಇಲ್ಲ... ನನಗೆ ಇಲ್ಲಿ ಇರಲಾಗುತ್ತಿಲ್ಲ. ಬೇರೆಯವರ ಕೆಡುನುಡಿ ಕೇಳಲಾಗುತ್ತಿಲ್ಲ... ಕೊನೆಗೂ ಒಪ್ಪಿಕೊಂಡ... ಬೇರೆ ಕಡೆ... ಯಾರೂ ಇಲ್ಲದಲ್ಲಿ... ಕಾಡಿನ ನಡುವೆ, ಒಂದು ಪುಟ್ಟ ತೊರೆಯ ಬದಿ ನಮ್ಮ ಗುಡಿಸಲು ಮಾಡಿದ್ದೇವೆ...

`ಅವಳು': ಒಳ್ಳೆಯದು... ಇನ್ನೂ ಮುಂದೆ ಹೋಗಿ ಅವಳ ಜೀವನದಲ್ಲಿ ಇನ್ನೂ ಏನಾಗುತ್ತದೋ ನೋಡು...

`ಇವಳು': ಓಹ್, ನಮಗಿಬ್ಬರಿಗೂ ಬಹಳ ವಯಸ್ಸಾಗಿದೆ... ತೊರೆಯ ಬದಿಯಲ್ಲಿ, ಕಾಡಿನೊಳಗೆ ಶಾಂತವಾಗಿ, ನೆಮ್ಮದಿಯಾಗಿ ಇದ್ದೇವೆ... ಮಕ್ಕಳಿಲ್ಲ... ನಾವಿಬ್ಬರೇ... ಅದೇ ಕೊರಗು... ಓಹ್... (ನಿಟ್ಟುಸಿರು)

`ಅವಳು': ನಿನ್ನ ಆ ಜೀವನದ ತುಣುಕು ನಿನ್ನ ಈಗಿನ ಜೀವನಕ್ಕೆ ಹೇಗೆ ಹೊಂದಿಕೆಯಾಗುತ್ತದೆ ನೋಡು... ಈ ನೆನಪು ನಿನಗೆ ಹೇಗೆ ಮುಖ್ಯವಾಗುತ್ತದೆ?

`ಇವಳು': ಓಹ್... ಬೆಂಕಿ... ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ... ಕಾಡ್ಗಿಚ್ಚು... ಸುತ್ತಲೂ ಬೆಂಕಿ... ಗಂಡ ಮತ್ತು ನಾನು... ಇಬ್ಬರೂ... ಬೆಂಕಿಯಲ್ಲಿ... ಉರಿ... ನೋವು... (ಕಣ್ಣ ಕೊನೆಗಳಲ್ಲಿ ನೀರು ಜಿನುಗುತ್ತದೆ)

`ಅವಳು': ಅಲ್ಲಿಂದ ನೀನು ತೇಲಬಲ್ಲೆ... ತೇಲಿ ಮೇಲೆ ಹೋಗಿ ನೋಡು... ನಿನಗೆ ಯಾವುದೇ ನೋವು ತಗಲದು... ಮೇಲಿಂದ ನೋಡು...

`ಇವಳು': ಇಬ್ಬರೂ ವೃದ್ಧರು... ನಿಶ್ಶಕ್ತರು... ಬೆಂಕಿಗೆ ಆಹುತಿಯಾದರು... ನನ್ನ ಪಕ್ಕದಲ್ಲೇ ಅವನೂ ಇದ್ದಾನೆ... ಜೊತೆಜೊತೆಗೆ ಎರಡು ಬೆಳಕಿನ ಗೋಳಗಳ ಹಾಗೆ... ಒಟ್ಟಿಗೆ ಕೆಳಗೆ ನೋಡುತ್ತಿದ್ದೇವೆ...

`ಅವಳು': ಮತ್ತೇನು ನಡೆಯುತ್ತಿದೆ? ಈ ಜೀವನ ನಿನಗೆ ಹೇಗೆ ಪ್ರಸ್ತುತ?

`ಇವಳು': ಬಹುಶಃ... ಅವನ ಪ್ರೀತಿ... ಮತ್ತು ಆಸರೆ.... ಅವನಿಲ್ಲ... ಎಲ್ಲಿ ಹೋದ? ಜೊತೆಗೇ ಇದ್ದ... ಈಗಿಲ್ಲ... ಎಲ್ಲಿ ಹೋದ... ನಾನು ಒಂಟಿ... ನನಗೆ ಶಕ್ತಿಗುಂದುತ್ತಿದೆ... ಸಾಕಾಗಿದೆ... ನಾನು ಹಿಂದಕ್ಕೆ ಬರಬೇಕು... ಪ್ರಸ್ತುತಕ್ಕೆ ಬರಬೇಕು...

`ಅವಳು': ಬರಬಹುದು... ನೀನು ನಿಧಾನವಾಗಿ ಉಸಿರಾಡು... ಉಸಿರಿನ ಮೇಲೆ ಗಮನ ಇಡು... ನಿಧಾನವಾಗಿ ನಿನ್ನ ನೆನಪನ್ನು ಪ್ರಸ್ತುತಕ್ಕೆ ತಂದುಕೋ... ಪ್ರಜ್ಞೆಯನ್ನು ಜಾಗೃತಿಗೆ ತಂದುಕೋ... ಹಗುರಾಗಿ ಕಣ್ಣು ತೆರೆ...

`ಇವಳು': ಉಸ್.... ಸುಸ್ತಾಗುತ್ತಿದೆ... ನೀರು ಬೇಕು...

`ಅವಳು': ಆಗಬಹುದು... ಬಹಳ ತೀಕ್ಷ್ಣವಾದ ಕ್ಷಣಗಳನ್ನು "ಅನುಭವಿಸಿ" ಹಿಂತಿರುಗಿದ್ದೀ... ಶಕ್ತಿಗುಂದುತ್ತದೆ... ಸುಧಾರಿಸಿಕೋ...

`ಇವಳು': ಧನ್ಯವಾದಗಳು... ನಾನು ಈ ಅನುಭವ ಪಡೆಯಲು ಸಹಕಾರಿಯಾಗಿದ್ದಕ್ಕೆ ಧನ್ಯವಾದಗಳು...

`ಅವಳು': ಪ್ರತಿವಂದನೆಗಳು. ಈಗ ಹೇಗನಿಸುತ್ತಿದೆ? ಆ ಜೀವನದ ತುಣುಕುಗಳು ನಿನಗೆ ಹೇಗೆ ಪ್ರಸ್ತುತ ಅಂತ ನಿನ್ನ ಭಾವನೆ?

`ಇವಳು': ಪ್ರಸ್ತುತ ಇರಬೇಕು. ನಾನು ಯಾವಾಗಲೂ ನನ್ನ ಗಂಡನನ್ನು ಛೇಡಿಸುತ್ತಿದ್ದೆ, ಪ್ರಶ್ನಿಸುತ್ತಿದ್ದೆ, ನನ್ನೊಳಗೆ ಅಚ್ಚರಿಪಟ್ಟುಕೊಳ್ಳುತ್ತಿದ್ದೆ... ನಾವಿಬ್ಬರು ಇದೊಂದು ಜನ್ಮದಲ್ಲಿ ಮಾತ್ರ ಜೊತೆಯಾಗಿದ್ದೇವಾ... ಅಥವಾ ಹಿಂದೆ ಬೇರೆ ಯಾವುದೋ ಜನ್ಮದಲ್ಲೂ ಜೊತೆಯಾಗಿದ್ದೆವಾ... ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ...

`ಅವಳು': ನಿನ್ನ ಅನುಭವ ನಿನಗೆ ಬೇಕಾದ ಒಂದು ಉತ್ತರ ಕೊಟ್ಟಿದೆ. ಸಂತೋಷ.

`ಇವಳು': ಆದರೆ... ಈ ಎಲ್ಲವನ್ನೂ ನಾನು "ಭಾವಿಸಿದೆ". ಯಾವುದನ್ನೂ ನನ್ನ ಮನದ ಭಿತ್ತಿಯಲ್ಲಿ "ಕಂಡಿಲ್ಲ". ಅದು ಸಹಜವಾ? ಅಥವಾ ಇವೆಲ್ಲ ನನ್ನ ಕಲ್ಪನೆಯಾ? ನೆನಪು ಒಂದು ಭಾವನೆಯ ರೂಪದಲ್ಲಿ ಮಾತ್ರ ಗೋಚರವಾಗಿದ್ದು ಯಾಕೋ ಸರಿ ಅನಿಸುತ್ತಿಲ್ಲ...

`ಅವಳು': ಸರಿ, ನಮ್ಮ ಗುರುಗಳನ್ನೇ ಕೇಳೋಣ... (ಅವಳು ಹೋಗಿ ಈ ಕಾರ್ಯಾಗಾರದ ಮುಖ್ಯ ಸೂತ್ರಧಾರ, ಗುರು, ಡಾ. ಬ್ರಯಾನ್ ವೈಸ್'ರನ್ನು ಕರೆತರುತ್ತಾಳೆ.)

ಡಾ. ವೈಸ್: ಏನಾಯ್ತು? ಏನು ವಿಶೇಷ ನಡೀತು ಇಲ್ಲಿ?

`ಇವಳು': ನನಗೆ ಯಾವುದೋ ನೆನಪು ಇದ್ದಕ್ಕಿದ್ದ ಹಾಗೆ ಬಂತು. ಆದರೆ ಅದು ನಿಜವಾದ ಒಂದು ಜನ್ಮದ ನೆನಪಾ ಅಥವಾ ನನ್ನ ಕಲ್ಪನೆಯಾ ಅನ್ನುವ ಅನುಮಾನ... ಯಾಕಂದ್ರೆ, ನಾನು ಯಾವುದನ್ನೂ "ಕಾಣಲಿಲ್ಲ", ಎಲ್ಲವನ್ನೂ "ಭಾವಿಸಿದೆ". ತೀವ್ರವಾದ ಅನುಭೂತಿ ಇತ್ತು, ಚಿತ್ರಣ ಇರಲಿಲ್ಲ. ಆ ಜೀವನದಲ್ಲಿ ನನ್ನ ಗಂಡನಾಗಿದ್ದವನ ಮುಖ ಕಾಣಲಿಲ್ಲ; ಆದರೆ ಅವನು ಇವನೇ, ಈಗಿನ ಗಂಡನೇ ಅಂತ ಖಚಿತವಾಗಿ ಗೊತ್ತಿತ್ತು. ಇದೆಲ್ಲ ಕಲ್ಪನೆಯೇ? (ಪೂರ್ಣ ಸಂವಾದದ ವಿವರಣೆಯನ್ನು ಡಾ. ವೈಸ್ ಕೇಳಿ ತಿಳಿಯುತ್ತಾರೆ.)

ಡಾ. ವೈಸ್: ಇಲ್ಲ, ಕಲ್ಪನೆ ಅಲ್ಲ. ಕೆಲವರಿಗೆ ಚಿತ್ರಕ-ರೂಪದಲ್ಲಿ ನೆನಪುಗಳ ಅನುಭವ ಆಗೋದಿಲ್ಲ, ಗಾಢವಾದ ಅನುಭೂತಿಯ ರೂಪದಲ್ಲಿ ಇರುತ್ತದೆ ಮತ್ತು ಅದು ಸಾಧ್ಯ ಕೂಡಾ. ಇದು ಅಸಹಜ ಅಲ್ಲ. ನೀನೊಬ್ಬಳೇ ಅಲ್ಲ, ಇಂಥ ಅನುಭವ ಪಡೆದವರು ಹಲವರಿದ್ದಾರೆ. ನನ್ನ ಬಳಿ ಬಂದ ಸುಮಾರು ನಾಲ್ಕು ಸಾವಿರಕ್ಕೂ ಮೀರಿದ ವ್ಯಕ್ತಿಗಳ ಪೈಕಿ ಇಂಥವರು ಬಹಳ ಜನ ಇದ್ದಾರೆ... ಅಲ್ಲದೆ ನೀನು ಕಲ್ಪಿಸಿಕೊಂಡು ಹೇಳಿದಲ್ಲಿ ಆ ಕ್ಷಣಗಳಲ್ಲಿ ಸೂಕ್ತ ಭಾವನೆಗಳು ನಿನ್ನ ಮುಖದಲ್ಲಿ ಸ್ಪಷ್ಟವಾಗಿ ಬರುವ ಸಾಧ್ಯತೆ ಇಲ್ಲ. ಪ್ರಜ್ಞೆಯೊಳಗೆ ಎಲ್ಲವನ್ನೂ ಅನುಭವಿಸಿಕೊಂಡಿದ್ದಲ್ಲಿ ಮಾತ್ರ ಮುಖದಲ್ಲಿ ಅದರ ಭಾವನೆ ಹೊಮ್ಮುವುದಕ್ಕೆ ಸಾಧ್ಯ. ಆದ್ದರಿಂದ ಇದು ಕಲ್ಪನೆ ಅಲ್ಲ. ನೀನು ವಿವರಿಸಿದ ಆಧಾರದ ಮೇಲೆ, ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ ನೀನು ಅಲ್ಲಿ, ಭಾರತದಲ್ಲಿ ಇದ್ದಿರಬೇಕು ಅಂತ ನನ್ನ ಒಂದು ಅಂದಾಜು...

`ಅವಳು': ಇದೊಂಥರಾ ವಿಶೇಷ ಅನುಭವ... ಇವಳ ಮುಖದಲ್ಲಿ ಸಂತೋಷ, ಬೇಸರ, ದುಃಖ, ನೋವು, ನಿರಾಸೆ, ಬೆಂಕಿ ಹೊತ್ತಿಕೊಂಡಾಗಿನ ಭಯ... ಎಲ್ಲವೂ ಸ್ಪಷ್ಟವಾಗಿದ್ದವು... ಕಣ್ಣಲ್ಲಿ ನೀರು ಜಿನುಗುತ್ತಿತ್ತು. ನನಗಂತೂ ಇದು ಮೊದಲ ಅನುಭವ, ಗಾಬರಿಯಾಗುತ್ತಿತ್ತು....

`ಆತ': ನೀವು ಅದನ್ನು ಬಹಳ ಸೂಕ್ಷ್ಮವಾಗಿ, ನಾಜೂಕಾಗಿ ನಿಭಾಯಿಸಿದಿರಿ, ಅಭಿನಂದನೆಗಳು; ಡಾ. ವೈಸ್, ನಿಮಗೆ ಧನ್ಯವಾದಗಳು.

`ಇವಳು': ಡಾ. ವೈಸ್, ನಿಮಗೆ ಹಾಗೂ, `ಅವಳಿಗೆ' ನನ್ನ ಧನ್ಯವಾದಗಳು...

`ಅವಳು': ನಿಮಗಿಬ್ಬರಿಗೂ ಪ್ರತಿವಂದನೆಗಳು. ಡಾ. ವೈಸ್ ನಿಮಗೆ ನನ್ನದೂ ಧನ್ಯವಾದಗಳು.

ಇಲ್ಲಿ ನಿರೂಪಿತವಾದದ್ದು ಯಾವುದೇ ಕಲ್ಪಿತ ಕಥೆಯಲ್ಲ. ಟೆಕ್ಸಾಸ್'ನ ಆಸ್ಟಿನ್ ನಗರದ "ದ ಕ್ರಾಸಿಂಗ್ಸ್" ಎಂಬಲ್ಲಿ ಡಾ. ಬ್ರಯಾನ್ ವೈಸ್ ಮತ್ತವರ ಮಡದಿ ಕಾರೋಲ್ ವೈಸ್ ನಡೆಸಿಕೊಟ್ಟ "ಪಾಸ್ಟ್ ಲೈಫ್ ಥೆರಪಿ ವರ್ಕ್'ಶಾಪ್" ಎನ್ನುವ ಐದು ದಿನಗಳ ಕಾರ್ಯಾಗಾರದಲ್ಲಿ ನಡೆದ ಒಂದು ಘಟನೆ. ಇಲ್ಲಿ `ಅವಳು' ಮಿಸ್ ಮೇರಿ. `ಆತ' ನನ್ನ ಪತಿ, ಮಹಾದೇವ್. ಮತ್ತು `ಇವಳು' ಇವಳೇ, ನಾನೇ... ಇನ್ನೂ ಯಾವುದೋ ಲೋಕದಲ್ಲಿದ್ದೇನೆ... ಮದುವೆಯಾಗಿ ಇಪ್ಪತ್ತು ವರ್ಷಗಳು ಮುಗಿಯುತ್ತಿರುವಾಗ, ಎರಡು ಸಾವಿರ ವರ್ಷಗಳ ಹಿಂದಿನ ಪ್ರೇಮಿಯನ್ನು ಮತ್ತೆ ಪಡೆದು ಬಂದಿದ್ದೇನೆ!! ಈ ಜೀವನಕ್ಕೆ ಇನ್ನೇನು ಬೇಕು?

Wednesday 3 October, 2007

ಆತ್ಮ ಚಿಂತನ-೦೫

ಹಿಂದಿನ ಕಂತಿನಲ್ಲಿ ಚೀನಾದಲ್ಲಿ ತೀರಿಕೊಂಡ ಮಗಳಿಗೂ ಮದುವೆ ಮಾಡಿಸುವ ಪದ್ಧತಿಯ ಬಗ್ಗೆ ಬರೆದಿದ್ದೆ. ಇಂದೀಗ ನಮ್ಮೂರಲ್ಲೂ ನಡೆಯುವ ಅಂಥದ್ದೊಂದು ಪರಿಪಾಠದ ಬಗ್ಗೆ ಕೊರೆಯುತ್ತೇನೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ಈಗಿನ ಉಡುಪಿ ಜಿಲ್ಲೆ ಮತ್ತು ದ.ಕ. (ಮಂಗಳೂರು) ಜಿಲ್ಲೆ ಜೊತೆಯಾಗಿ) ಸಾಂಸ್ಕೃತಿಕವಾಗಿ ತನ್ನದೇ ಒಂದು ವಿಶೇಷ ಆಯಾಮ ಹೊಂದಿದೆ. ಇಲ್ಲಿನ ಸಾಂಸ್ಕೃತಿಕ ಆಚರಣೆಗಳಲ್ಲಿ ಹಲವಾರು ಸಣ್ಣ ಪುಟ್ಟವು ಸುದ್ದಿಯಾಗದೇ ಗಾಳಿಯಲ್ಲಿ ಕರಗಿ ಹೋಗುತ್ತವೆ. "ಪ್ರೇತಗಳ ಮದುವೆ" ಅನ್ನುವ ಒಂದು ಸಂಪ್ರದಾಯವೂ ಅಂಥವುಗಳಲ್ಲೊಂದು.

ಹೆಚ್ಚಾಗಿ ತುಳುವರಲ್ಲಿ ಈ ಸಂಪ್ರದಾಯ ಜಾರಿಯಲ್ಲಿದೆ. ಮನೆಯಲ್ಲಿ ಮದುವೆಯಾಗದೆ ತೀರಿಕೊಂಡ ಗಂಡು/ಹೆಣ್ಣು ಮಕ್ಕಳಿದ್ದರೆ, ಅದರಲ್ಲೂ ಪ್ರಾಪ್ತವಯಸ್ಕರೇ ಆಗಿದ್ದು, ಅಪಘಾತ, ಆತ್ಮಹತ್ಯೆಗಳಲ್ಲಿ ತೀರಿಕೊಂಡವರಾದರೆ ಇಂಥ ಆಚರಣೆ ಹೆಚ್ಚು. ಅದೂ ಮನೆಯಲ್ಲಿನ ಇನ್ನೊಬ್ಬ ವ್ಯಕ್ತಿಯ ಮದುವೆಗೆ ಕಾರಣಾಂತರಗಳಿಂದ ಅಡಚಣೆಗಳು ಉಂಟಾದಾಗ ಯಾರೋ ಒಬ್ಬರು ಹಿರಿಯರು ಇಂಥ ಒಂದು ಅತೃಪ್ತ ಪ್ರೇತ ಇರಬಹುದಾದ ಬಗ್ಗೆ ನೆನಪಿಸುತ್ತಾರೆ. ಜ್ಯೋತಿಷಿಗಳಲ್ಲಿ, ಕವಡೆ ಶಾಸ್ತ್ರಿಗಳಲ್ಲಿ "ಪ್ರಶ್ನೆ ಕೇಳ"ಲಾಗಿ ತಥಾಕಥಿತ ವಾಸ್ತವವಾಗುತ್ತದೆ. ಮುಂದೇನು ಪರಿಹಾರ? "ಪ್ರೇತದ ಮದುವೆ". ಬಂಧುಗಳು? ಗಂಡು/ಹೆಣ್ಣು?

ಅದಕ್ಕೂ ಸಿದ್ಧ ಉತ್ತರವಿದೆ ಹಿರಿಯರಲ್ಲಿ. ನೆಂಟರೊಳಗೆ, ಇನ್ನೊಂದು ಕುಟುಂಬದಲ್ಲಿಯೂ ಇರಬಹುದಾದ ಇಂತಹ ಅತೃಪ್ತ ಗಂಡು/ಹೆಣ್ಣು ಆತ್ಮ. ಆ ಮನೆಯವರೊಂದಿಗೆ ಮಾತುಕತೆಗೆ ತೊಡಗಲು ಒಬ್ಬ ಮಧ್ಯವರ್ತಿ ನಿಯೋಜಿತನಾಗುತ್ತಾನೆ. ಸರಿಸುಮಾರಾಗಿ ಎಲ್ಲವೂ ನಿಜವಾದ ಮದುವೆ ಸಂಬಂಧದ ಮಾತುಕಥೆಯಂತೆಯೇ ನಡೆಯುತ್ತದೆ (ವಧುದಕ್ಷಿಣೆ, ವರದಕ್ಷಿಣೆಗಳ ಹೊರತಾಗಿ). ಎರಡೂ ಮನೆತನಗಳ ಕುಲಗೋತ್ರಗಳನ್ನು ಜಾಲಾಡಿ, ಗಂಡು-ಹೆಣ್ಣಿನ ನಕ್ಷತ್ರ-ತಾರಾಬಲ ಹೊಂದಿಸಿ ಪ್ರೇತಮದುವೆಗೆ ಪ್ರಶಸ್ತ ಸಮಯವನ್ನೂ ನಿಗದಿಪಡಿಸಲಾಗುತ್ತದೆ. ಎರಡೂ ಕುಟುಂಬಗಳು ಒಪ್ಪಿಗೆಯಾದಲ್ಲಿ ಮದುವೆ ನಡೆದೇ ಬಿಡುತ್ತದೆ- ತೀರಾ ಹತ್ತಿರದ ಸಂಬಂಧಿಗಳನ್ನು ಕರೆದು.

ವಿಚಿತ್ರ? ಆದರೂ ನಿಜ! ಈ ವಿಷಯದ ಬಗ್ಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತರಂಗ ವಾರಪತ್ರಿಕೆಯಲ್ಲಿ ಬಂದ ಲೇಖನದ ಸಾರಾಂಶವನ್ನು ಮುಂದಿನ ಕಂತಿನಲ್ಲಿ ಕೊಡುತ್ತೇನೆ, ಸರಿಯಾ?

Wednesday 18 July, 2007

ಆತ್ಮ ಚಿಂತನ-೦೪

ಪಕ್ಕದೂರಿಗೆ ಹೋಗಿದ್ದ ನಾನು ಹಿಂತಿರುಗುತ್ತಾ ರೇಡಿಯೋ ಕೇಳುತ್ತಿದ್ದೆ. ಅಲ್ಲಿ ಅಮೆರಿಕನ್-ಚೈನೀಸ್ ಲೇಖಕಿಯ ಪರಿಚಯ-ಸಂವಾದ ನಡೆಯುತ್ತಿತ್ತು. ಅವಳು ತನ್ನ ಕಾದಂಬರಿಗಳ ಬಗ್ಗೆ ಹೇಳುತ್ತಾ, ತನ್ನ ಸಂಸ್ಕೃತಿಯಲ್ಲಿ ಆತ್ಮಗಳ ಬಗೆಗಿರುವ ನಂಬಿಕೆ ಆಚಾರಗಳನ್ನು ಇಷ್ಟಿಷ್ಟು ತಿಳಿಸಿದಳು. ನನಗೊಂದಿಷ್ಟು ಅಚ್ಚರಿಯಾದರೂ, "ಆತ್ಮ ಚಿಂತನ"ದ ಹೆಸರಲ್ಲೇ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಇಚ್ಛೆಯೂ ಆಯಿತು... ಪರಿಣಾಮ ಇಲ್ಲಿದೆ:

ಚೀನಾದ ಸಂಸ್ಕೃತಿಯಲ್ಲಿ ವ್ಯಕ್ತಿ ತೀರಿಕೊಂಡ ಮೇಲೆ ಆತ್ಮವು ೩ (ಮೂರು) ಪಾಲಾಗುತ್ತದೆ; ಒಂದು ಪಾಲು ದೇಹದ ಜೊತೆಗೆ ಗೋರಿಗೆ, ಇನ್ನೊಂದು ಪಾಲು "ಹಿರಿಯರ ಜಾಗ"ದಲ್ಲಿ ತನಗಾಗಿ ಇರಿಸಿದ ಪುಟ್ಟ ಮರದ ಪೆಟ್ಟಿಗೆಗೆ, ಮತ್ತು ಮಗದೊಂದು ಪಾಲು ಪರಲೋಕಕ್ಕೆ- ಹೋಗುತ್ತದೆ. "ಹಿರಿಯರ ಜಾಗ"ದಲ್ಲಿ ಉಳಿಯುವ ಪಾಲು ತನ್ನ ಮನೆತನಸ್ಥರ ಮೇಲೆ ಕಾವಲು ಕಣ್ಣು ಇಡುತ್ತದೆ, ಯಾ ತೊಂದರೆ ಕೊಡುತ್ತದೆ (ತೀರಿಕೊಂಡ ವ್ಯಕ್ತಿಯ ವೈಯಕ್ತಿಕ ಸ್ವಭಾವಕ್ಕೆ ಅನುಗುಣವಾಗಿ) ಅನ್ನುವುದು ಅವರ ನಂಬಿಕೆ.

ವಾರ್ಷಿಕವಾಗಿ ಹಿರಿಯರ ದಿನ ಆಚರಿಸುವಾಗ, ಅವರೆಲ್ಲರೂ ದೈಹಿಕವಾಗಿ ಬದುಕಿದ್ದಿದ್ದರೆ ಬೇಕಾಗಿದ್ದಿರಬಹುದಾದ ವಸ್ತುಗಳನ್ನು (ಬಟ್ಟೆ-ಬರೆ, ಊಟೋಪಚಾರಗಳಿಂದ ಹಿಡಿದು, ಕಂಪ್ಯೂಟರ್, ಐ-ಪಾಡ್, ಸೆಲ್-ಫೋನುಗಳ ವರೆಗೆ) ಕಾಗದಗಳಲ್ಲಿ ಮಾಡಿ ಅವರಿಗೆ ಅರ್ಪಿಸಿ, ನಂತರ ಬೆಂಕಿಯ ಮೂಲಕ ಹಿರಿಯರ ಆತ್ಮಗಳಿಗೆ ತಲುಪಿಸುವ ಸಂಪ್ರದಾಯವಿದೆ. ತೀರಿಕೊಂಡವರನ್ನು ಈ ರೀತಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ಮನೆಯವರಿಗೆ ಇರುತ್ತದೆ. ಈ ಜವಾಬ್ದಾರಿ ಎಲ್ಲಿಯವರೆಗಿದೆ ಅಂದರೆ, ಒಂದು ಮನೆಯ ಮಗ/ಮಗಳು ಮದುವೆಯಾಗಿಲ್ಲದೇ ತೀರಿಹೋದರೆ, ಅಂಥವರಿಗೆ "ಸರಿಯಾಗಿ" (ಅದರ ಅರ್ಥ ಆ ಲೇಖಕಿ ವಿವರಿಸಲಿಲ್ಲ) ಅಂತ್ಯಕ್ರಿಯೆ ಮಾಡದೇ, ಅವರು ಪ್ರಾಪ್ತ ವಯಸ್ಕರಾದಾಗ ಅವರಿಗೂ "ಮದುವೆ" ಮಾಡುವ ಕ್ರಮ ಇದೆ. ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಡುವುದೇ ಹೆಣ್ಣುಹೆತ್ತವರ ದೊಡ್ಡ ಜವಾಬ್ದಾರಿ. ಆದರೆ, ಈ ಸತ್ತುಹೋಗಿರುವ ಮಗಳನ್ನು ಯಾರೂ ಮದುವೆಯಾಗಲಾರರು. ಅದಕ್ಕಾಗಿ ಒಮ್ಮೊಮ್ಮೆ, ಹಣ ತುಂಬಿದ ಥೈಲಿಯನ್ನು ಬೀದಿಗೆ ಎಸೆದು ಯಾರಾದರೂ ಅದನ್ನು ಎತ್ತಿಕೊಳ್ಳುತ್ತಾರೇನೋ ಅಂತ ಕಾಯುತ್ತಿರುತ್ತಾರೆ. ಹಾಗೆ ಯಾರಾದರೂ ಎತ್ತಿಕೊಂಡರೆ (ಗಂಡಸರೇ ಎತ್ತಿಕೊಳ್ಳುತ್ತಾರೆ ಅನ್ನುವ ಭ್ರಮಾಧೀನ ನಂಬಿಕೆ ಇಲ್ಲಿ ಕೆಲಸ ಮಾಡುವುದನ್ನು ಕಾಣುತ್ತೇವೆ) ಕೂಡಲೇ ಹೋಗಿ ಅವರನ್ನು "ತಮ್ಮ ಮಗಳ ವಧುದಕ್ಷಿಣೆಯನ್ನು ಸ್ವೀಕರಿಸಿದ್ದಕ್ಕೆ" ಅಭಿನಂದಿಸುತ್ತಾರೆ! (ಇದನ್ನು ಮಾತ್ರ ಹೇಳಿದ ಲೇಖಕಿ, ತೀರಿಕೊಂಡ ಗಂಡಿನ ಮದುವೆಯನ್ನು ಅವನ ಮನೆಯವರು ಹೇಗೆ ಮಾಡುತ್ತಾರೆ ಅನ್ನುವುದನ್ನು ತಿಳಿಸಲಿಲ್ಲ.)

ಇವಲ್ಲದೆ, ನಮ್ಮ ಹಿಂದಿನ ಕಾಲದ ಭಾರತೀಯ ಸಮಾಜದಲ್ಲಿ ಬಹುಮಟ್ಟಿಗೆ ಇದ್ದಂತೆಯೇ ಸಂಪ್ರದಾಯಸ್ಥ ಚೀನಾದಲ್ಲಿಯೂ ವಿದ್ಯಾವಂತ ಮಹಿಳೆಯರು ಕಡಿಮೆ. ಇದ್ದರೂ, ಅವರೆಲ್ಲ ಮುಂದೆ ತಮ್ಮ ಕುಲೋದ್ಧಾರಕ ಮಗಂದಿರನ್ನು ವಿದ್ಯಾವಂತರನ್ನಾಗಿ ಮಾಡುವ ಒಂದೇ ಉದ್ದೇಶದಿಂದ ವಿದ್ಯೆ ಕಲಿತಿರುತ್ತಾರೆ. ಮಗಳು ಹುಟ್ಟುತ್ತಲೇ ಪರರಿಗಾಗಿಯೇ ಇರುವವಳು ಅನ್ನುವ ಸಂಪ್ರದಾಯ ಬದ್ಧ ನಂಬಿಕೆಯಿದೆ. ಅವಳನ್ನು ಮದುವೆ ಮಾಡಿ ಇನ್ನೊಂದು ಮನೆಗೆ ಕಳಿಸಿಕೊಡಲೆಂದೇ ಹೆತ್ತವರು ಅವಳನ್ನು ಬೆಳೆಸುತ್ತಾರೆ. ಗಂಡನ ಮನೆಯಲ್ಲಿ ಅತ್ತೆಯದೇ ರಾಜ್ಯಭಾರವಾದರೆ ಈ ಹುಡುಗಿಯನ್ನು ಕೇಳುವವರೇ ಇಲ್ಲ. ಅಲ್ಲಿ ಅವಳ ಜವಾಬ್ದಾರಿ ಹಿರಿದು. ಗಂಡ ಮತ್ತವನ ಮನೆಯವರಿಗೆ ಊಟ ನೀಡುವ ಹೊಣೆಗಾರಿಕೆ ಈಕೆಯದು. ಏನೂ ಸಿಗದ ಬಡತನವಿದ್ದರೆ, ಇವಳು ತನ್ನ ಮೈಯ ಮಾಂಸವನ್ನೇ ಕತ್ತರಿಸಿಯಾದರೂ ಅವರಿಗೆ ಅಡುಗೆ ಮಾಡಿ ಬಡಿಸಬೇಕು ಅನ್ನುವಂಥ ನಿರೀಕ್ಷೆ ಆ ಮನೆಯವರಲ್ಲಿರುತ್ತದೆ. ಹೆಣ್ಣು ಹೆತ್ತವರು ಅವಳನ್ನು ಹಾಗೆಯೇ "ಬೌದ್ಧಿಕವಾಗಿ ತಯಾರು" ಮಾಡಿರುತ್ತಾರೆ.

"ಅಬ್ಬಬ್ಬಾ" ಅನಿಸಿತೇ? ಇವತ್ತಿಗೆ ಇಷ್ಟು ಸಾಕು. ಇದನ್ನೆಲ್ಲ ಅರಗಿಸಿಕೊಳ್ಳಿ. ಮುಂದೆ ನೋಡೋಣ, ಮೆದುಳಿಗೆ ಏನು ಆಹಾರ ಸಿಗುವುದೆಂದು.

Published from a Cyber-Center in Karkala, India.

Monday 11 June, 2007

ಆತ್ಮ ಚಿಂತನ-೦೩

ಆತ್ಮಕ್ಕಿರುವ ಜ್ಞಾನ/ಅನುಭವದ ಆಧಾರದ ಮೇಲೆ, ಡಾ ನ್ಯೂಟನ್ ಅವರ ತಿಳುವಳಿಕೆಗೆ ಬಂದಿರುವಂತೆ ಆರು ಸ್ತರಗಳಲ್ಲಿ ವಿಭಾಗಿಸುತ್ತಾರೆ; ನಮ್ಮ ಅರ್ಥೈಸುವಿಕೆಯ ಅನುಕೂಲಕ್ಕಾಗಿ ಈ ವಿಂಗಡಣೆ ಎನ್ನುತ್ತಾರೆ.

(೧) ಮೊದಲ ಹಂತ (ಆರಂಭಿಕ/ ಬಿಗಿನರ್): ಈ ಸ್ತರದ ಆತ್ಮಗಳು ಬಹಳಷ್ಟು ಜನ್ಮ ಎತ್ತಿಲ್ಲದಿರಬಹುದು, ಅಥವಾ ಹಲವಾರು ಜನ್ಮಗಳನ್ನು ಎತ್ತಿದ್ದರೂ ಕಲಿಯಬೇಕಾದ ಪಾಠ ಕಲಿಯದೇ ಇರಬಹುದು (ಫ್ರೀ-ವಿಲ್ ಅನ್ನುವುದೊಂದಿದೆಯಲ್ಲ! ಅದು ಅತೀಂದ್ರಿಯ ಪ್ರಜ್ಞೆಗೂ ಸಂಬಂಧಿಸಿದ್ದು). ಪ್ರಪಂಚದ ಬಹುತೇಕ ಜನ ಇದೇ ಹಂತದಲ್ಲಿರುವ ಆತ್ಮರೂಪರು ಎನ್ನುವುದು ಅವರ ಅಂದಾಜು. ಈ ಆತ್ಮಗಳ ಬಣ್ಣ ಶುದ್ಧ ಬಿಳಿ. ಜ್ಞಾನ ಹೆಚ್ಚಿದಂತೆಲ್ಲ ಬಣ್ಣ ಗಾಢವಾಗುತ್ತದೆ.

(೨) ಎರಡನೇ ಹಂತ (ಕೆಳ-ಅಂತರ್ವರ್ತಿ/ ಲೋವರ್ ಇಂಟರ್ಮೀಡಿಯೇಟ್): ಹಲವಾರು ಜನ್ಮಗಳನ್ನೆತ್ತಿ, ಕೆಲವಾದರೂ ಪಾಠಗಳನ್ನು ಕಲಿತು, ಮಾಗಿರುವ ಆತ್ಮಗಳಿವು. ನಯ-ವಿನಯ ಇವರುಗಳಲ್ಲಿ ತುಸುವಾದರೂ ಇರುತ್ತದೆ. ಸಾಮಾಜಿಕ ಕಾಳಜಿ ಒಂದಿನಿತು ಮೈಗೂಡಿರುತ್ತದೆ. ಇಲ್ಲಿ ಬಿಳಿಗೆ ಒಂದಿಷ್ಟೇ ಇಷ್ಟು ಹಳದಿ ಯಾ ಕೆಂಪು ಬಣ್ಣದ ಛಾಯೆಯಿರುತ್ತದೆ.

(೩) ಮೂರನೇ ಹಂತ (ಅಂತರ್ವರ್ತಿ/ ಇಂಟರ್ಮೀಡಿಯೇಟ್): ಸಮಾಜಕ್ಕಾಗಿ, ಇತರರಿಗಾಗಿ ತಮ್ಮ ಜನ್ಮ ಸವೆಸುವವರು. ಇವರುಗಳ ಆತ್ಮ ಹಳದಿ, ಬಿಳಿಯ ಛಾಯೆಯೇ ಇರುವುದಿಲ್ಲ.

(೪) ನಾಲ್ಕನೇ ಹಂತ (ಮೇಲಂತರ್ವರ್ತಿ/ ಹೈಯರ್ ಇಂಟರ್ಮೀಡಿಯೇಟ್): ಕಡು ಹಳದಿಯಿಂದ ಕೊನೆಗೆ ತುಸು ನೀಲಿಗೆ ತಿರುಗುವ ಈ ಆತ್ಮಗಳ ಗುಣ ಬಹಳಷ್ಟು ನಿಸ್ವಾರ್ಥ ಮತ್ತು ಸಮಾಜಮುಖಿ. ಈ ನೆಲೆಯ ಆತ್ಮಗಳು ಗುರುಗಳಾಗುವ ತರಬೇತಿಯಲ್ಲಿ ಇರುತ್ತಾರೆ (ಜೂನಿಯರ್ ಗೈಡ್).

(೫) ಐದನೇ ಹಂತ (ಪ್ರೌಢ/ ಅಡ್ವಾನ್ಸ್ಡ್): ತೆಳು ನೀಲಿ ಬಣ್ಣದಿಂದ ಗುರುತಿಸಲ್ಪಡುವ ಈ ಆತ್ಮಗಳು ಗುರುಗಳಾಗಿರುತ್ತಾರೆ (ಸೀನಿಯರ್ ಗೈಡ್). ಈ ಸ್ತರದ ಆತ್ಮಗಳಿಗೆ ಉದಾಹರಣೆ ಹೇಳುವುದಾದರೆ- ಮಹಾತ್ಮ ಗಾಂಧಿ ಮತ್ತು ಮದರ್ ತೆರೇಸಾ. ಬೇರೆ ವಿವರಣೆ ಬೇಕಾ?

(೬) ಆರನೇ ಹಂತ (ಅತಿ-ಪ್ರೌಢ/ ಹೈಲೀ ಅಡ್ವಾನ್ಸ್ಡ್): ಕಡು ನೇರಳೆ ಬಣ್ಣದ ಜೊತೆಗೆ ಬೆಳಕಿನ ಪರಿವೃತ್ತ ಈ ಹಂತದ ಗುರುತು. ಈ ನೆಲೆಯ ಆತ್ಮಗಳು ಪರಿಣತ ಗುರುಗಳಾಗಿರುತ್ತಾರೆ (ಮಾಸ್ಟರ್ ಗೈಡ್). ಬಹುಶಃ ಬುದ್ಧ ಮತ್ತು ಏಸುವನ್ನು ಇಲ್ಲಿರಿಸಬಹುದೇನೋ.

ಡಾ ನ್ಯೂಟನ್ನರ ತಿಳುವಳಿಕೆಗೆ ಬಂದಿರುವ ಆತ್ಮಗಳ ಪರಿಚಯಾತ್ಮಕ ವಿವರಣೆಯಷ್ಟೇ ಇದಾಗಿದೆ. ಇದೇ ಇದಮಿತ್ಥಂ ಅಂತೇನೂ ಅಲ್ಲ. ಆರನೇ ಹಂತವನ್ನೂ ಮೀರಿದ, ಇನ್ನೂ ಹೆಚ್ಚಿನ ಜ್ಞಾನ ಪಡೆದ ಆತ್ಮಗಳಿರಲೇಬೇಕು; ಆದರೆ ಅವೆಲ್ಲ ಪುನರ್ಜನ್ಮ ಪಡೆಯದಿರಬಹುದು, ಅಥವಾ ಮನೋವೈದ್ಯಕೀಯ ನೆರವು ಪಡೆಯಲು ಡಾ ನ್ಯೂಟನ್ನರಲ್ಲಿಗೆ ಬಂದಿರುವವರಿಗೆ ಆ ಉನ್ನತ ಮಟ್ಟದ ಆತ್ಮಗಳ ಪರಿಚಯ ಇಲ್ಲದೇ ಇರಬಹುದು. ಅಂತೂ "ನನ್ನ ಅರಿವಿಗೆ ಬಂದಿದ್ದು ಇಷ್ಟೇ, ಇದಕ್ಕೂ ಮೇಲಿನ ಸ್ತರಗಳಿವೆ ಅನ್ನುವುದರಲ್ಲಿ ಸಂಶಯವಿಲ್ಲ" ಅನ್ನುವುದು ಅವರ ಅರಿಕೆ.

ಎಲ್ಲ ಆತ್ಮಗಳ ಗುರಿ ಪರಿಪೂರ್ಣತೆಯನ್ನು ಸಾಧಿಸುವುದು. ಜ್ಞಾನದ ಆಗರವಾಗಿರುವ, ತೇಜಸ್ಸಿನ ಸ್ರೋತವಾಗಿರುವ, ಎಲ್ಲ ಇರುವಿಕೆಗಳ ಕಾರಣವಾಗಿರುವ, ಪೂರ್ಣತೆಯ ಕೇಂದ್ರ ಶಕ್ತಿಯನ್ನು ಕೂಡಿಕೊಳ್ಳುವುದು ಆತ್ಮದ ಕಲಿಕೆಯ ಉದ್ದೇಶ. ಜ್ಞಾನಾರ್ಜನೆಯಿಂದಲೇ ಅದು ಸಾಧ್ಯ. ಮಾನವ ಜನ್ಮ ಅದಕ್ಕಿರುವ ಉತ್ತಮ (ಸುಲಭದ್ದಲ್ಲ!) ಮಾರ್ಗ. ಈ ಎಲ್ಲ ಮಾತುಗಳು ಭಾರತೀಯರಾದ ನಮಗೆ ಹೊಸದಲ್ಲ. ಇವನ್ನೇ ಡಾ ನ್ಯೂಟನ್ನರ ಪುಸ್ತಕದಲ್ಲಿ ಆತ್ಮಗಳೊಂದಿಗಿನ ಸಂಭಾಷಣೆಯಲ್ಲಿ ಓದಿದಾಗ ಆದ ಅನುಭೂತಿ ಮಾತ್ರ ಹೊಸದು.

Monday 7 May, 2007

ಆತ್ಮ ಚಿಂತನ-೦೨

ಮನೋವೈದ್ಯರಿಬ್ಬರೂ (ಡಾ ನ್ಯೂಟನ್ ಮತ್ತು ಡಾ ವೈಸ್) ತಮ್ಮ ಗ್ರಾಹಕರನ್ನು ಸಮ್ಮೋಹನಕ್ಕೆ ಒಳಪಡಿಸುವ ಮೊದಲು ಸಂದರ್ಶನದ ಮೂಲಕ ಅವರ ಪರಿಸ್ಥಿತಿಯ ಪರಿಚಯ ಮಾಡಿಕೊಳ್ಳುತ್ತಾರೆ. ಬಹುತೇಕ ಗ್ರಾಹಕರು ಇತರ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಶುಶ್ರೂಷೆಯನ್ನು ಪಡೆಯಲು ಪ್ರಯತ್ನಿಸಿದವರೇ. ಅದರಿಂದ ಪ್ರಯೋಜನ ದೊರಕದೆ ಇವರಲ್ಲಿ ಬಂದವರು. ಡಾ ನ್ಯೂಟನ್ ತಮ್ಮ ಪುಸ್ತಕಗಳಲ್ಲಿ ಆತ್ಮದ ಸ್ವರೂಪ, ಆತ್ಮಗಳ ಲೋಕ, ಆತ್ಮಗಳ ಕಲಿಕೆ, ಮತ್ತು ಆತ್ಮ ಜ್ಞಾನದ ಹಂತಗಳನ್ನು ವಿವರಿಸುತ್ತಾರೆ. ಡಾ ವೈಸ್, ತಮ್ಮ ಗ್ರಾಹಕರಿಗೆ ಶಾಂತಿ ನೆಮ್ಮದಿ ಒದಗಿಸುವ "ರೆಗ್ರೆಷನ್ ಥೆರಪಿ"ಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಶಿಬಿರಗಳನ್ನೂ ಸಾಮೂಹಿಕ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ.

ಡಾ ನ್ಯೂಟನ್ ವಿವರಿಸುವಂತೆ, ನಮ್ಮ ಆತ್ಮ ಶಕ್ತಿ ಸ್ವರೂಪ. ಅದಕ್ಕೆ ಮುಖ, ಕಣ್ಣು-ಕೈ-ಕಾಲು, ದೇಹ... ಏನೂ ಇಲ್ಲ. ಬರೇ ಬೆಳಕಿನ ಪುಟ್ಟ ಗೋಳದಂಥಾದ್ದು. ನಮ್ಮ ಆತ್ಮದ ಜ್ಞಾನದ ಆಳವನ್ನವಲಂಬಿಸಿ ಆ ಬೆಳಕಿನ ಗೋಳದ ಬಣ್ಣವಿರುತ್ತದೆ. ಅನನುಭವಿ, ಮೊದಲ ಹಂತದ ಆತ್ಮ ಪೂರ್ಣ ಬಿಳಿ ಬಣ್ಣದ್ದಾದರೆ, ಹಂತ ಹಂತವಾಗಿ ಕಿತ್ತಳೆ, ಹಳದಿ, ಹಸುರು, ನೀಲಿ, ನೇರಳೆ ಬಣ್ಣಗಳವರೆಗಿನ ಆತ್ಮಗಳ ಅಸ್ತಿತ್ವ ಅವರ ಅನುಭವಕ್ಕೆ ಬಂದಿದೆಯಂತೆ. ಒಂದು ಆತ್ಮ ತನ್ನ ಭೌತಿಕ ದೇಹದಿಂದ ಹೊರಬಿದ್ದೊಡನೆ, ಆ ಆತ್ಮಗತ ಜ್ಞಾನವನ್ನು ಅವಲಂಬಿಸಿ, ಆತ್ಮಲೋಕ (ಸ್ಪಿರಿಟ್ ವರ್ಲ್ಡ್) ತಲುಪುತ್ತದೆ. ಕೆಲವು ಕಿರಿಯ/ಎಳೆಯ ಅಥವಾ ಅನನುಭವಿ ಆತ್ಮಗಳು ಗಲಿಬಿಲಿಗೊಂಡು ಭೂಮಿಯ ವಾಯುವಲಯದಲ್ಲೇ ಸುತ್ತುತ್ತಿರಬಹುದು. ಆಗ ಅಂಥಾ ಆತ್ಮದ ಗುರುಸ್ಥಾನದಲ್ಲಿರುವ ಆತ್ಮ, ಭೌತಿಕ ದೇಹದಲ್ಲಿದ್ದಾಗ ಹತ್ತಿರದ ಸಂಬಂಧಿಕರಾಗಿದ್ದವರ ಆತ್ಮ ಈ ಆತ್ಮವನ್ನು ಹದವಾದ ಸೆಳೆತಕ್ಕೊಳಪಡಿಸಿ ನಿಜನೆಲೆಯಾದ ಆತ್ಮಲೋಕದ ಕಡೆಗೆ ಕರೆಸಿಕೊಳ್ಳುತ್ತವೆ. ಸ್ವಲ್ಪ ಅನುಭವವಿರುವ ಆತ್ಮ (ಹಲವಾರು ಜನ್ಮಗಳನ್ನೆತ್ತಿದ ಆತ್ಮ, ಹಲವು ಬಾರಿ ವಿದೇಶಯಾತ್ರೆ ಮಾಡಿದವರಂತೆ) ತನ್ನ ಮನೆಯತ್ತ ತಾನೇ ಪಯಣಿಸುತ್ತದೆ. ಬಹುತೇಕ ಆತ್ಮಗಳು ಭೌತಿಕ ಸಾವಿನ ಬಳಿಕ "ಒಂದು ಬೆಳಕಿನ ಕೊಳವೆಯೊಳಗೆ ವೇಗವಾಗಿ ಪಯಣಿಸಿದ" ಅನುಭವ ಪಡೆಯುತ್ತವೆ.

ಡಾ ವೈಸ್ ತಮ್ಮ ಪುಸ್ತಕಗಳಲ್ಲಿ ಆತ್ಮಲೋಕದ ಬದಲಾಗಿ ಆತ್ಮಗಳ ಬಗೆಗೇ ತಿಳಿಸುತ್ತಾರೆ. ಗುರು/ಗೈಡ್ ಆತ್ಮಗಳ ಬಗ್ಗೆ ಬರೆಯುತ್ತಾರೆ. ಸಮ್ಮೋಹನದಲ್ಲಿರುವ ತಮ್ಮ ಗ್ರಾಹಕರು ಗೈಡ್ ನೀಡುವ ಸಂದೇಶಗಳನ್ನು ತಮಗರಿವಿಲ್ಲದೆಯೇ ಅರುಹುವುದನ್ನು ಬರೆಯುತ್ತಾರೆ. ಎರಡು ಜನ್ಮಗಳ ನಡುವೆ ಆತ್ಮ ಪುನಶ್ಚೇತನಗೊಳ್ಳುವ ಲೋಕದ ಬಗ್ಗೆ ಇಲ್ಲಿ ಹೆಚ್ಚು ಮಾತಿಲ್ಲ. ನಮ್ಮ ಹಿಂದಿನ ಜೀವನ ಹೇಗಿತ್ತು, ಮುಂದಿನದು ಹೇಗಿರಬಲ್ಲುದು ಎನ್ನುವುದರ ಸುತ್ತಲೇ ಅವರ ಕೆಲಸ. ಅವರ ಪ್ರಕಾರ ಎಲ್ಲ ಆತ್ಮಗಳೂ ಒಂದೇ; ಅನುಭವದ ಆಳಗಳು ಬೇರೆ ಬೇರೆ, ಅಷ್ಟೇ. ಬಣ್ಣದ ಗೋಳಗಳ ಬಗ್ಗೆ ಅವರು ತಿಳಿಸುವುದಿಲ್ಲ, ಚೇತನದತ್ತ ಅವರ ಗಮನ. ಸ್ವಸಮ್ಮೋಹನದ ಬಗ್ಗೆಯೂ ಡಾ ವೈಸ್ ತಿಳಿಸುತ್ತಾರೆ; ಮೆಡಿಟೇಷನ್, ಧ್ಯಾನ, ಏಕಾಗ್ರತೆಯನ್ನು ಅಭ್ಯಸಿಸಲು ಹೇಳುತ್ತಾರೆ. ನಿದ್ದೆ-ಎಚ್ಚರಗಳ ನಡುವಿನ ಸ್ಥಿತಿಯಲ್ಲಿನ ಕನಸುಗಳನ್ನು ನೆನಪಿರಿಸಿಕೊಂಡು ಅವನ್ನು ಗುರುತು ಹಾಕಿಕೊಂಡು ಒಂದು ಸೂತ್ರದಲ್ಲಿ ಹೆಣೆಯಲಾಗುತ್ತದೆಯೋ ನೋಡಿ, ಅನ್ನುತ್ತಾರೆ. ಅಗಲಿದ ಆತ್ಮೀಯರಿಂದ ಸಂದೇಶಗಳು ಬರಬಹುದು, ಬರುತ್ತವೆ; ಮನಸ್ಸು ಮುಕ್ತವಾಗಿರಲಿ, ಎಂದು ಸಾರುತ್ತಾರೆ.

ಇನ್ನು ಒಂದು ವಾರ ನೀವೇನು ಮಾಡುತ್ತೀರಿ? ಬರೆದು ತಿಳಿಸಿ. ಮುಂದಿನ ಸೋಮವಾರ ಸಿಗುತ್ತೇನೆ.

Monday 30 April, 2007

ಆತ್ಮ ಚಿಂತನ-೦೧

"ನನ್ನ ಇತ್ತೀಚಿನ ಓದಿನ ಪ್ರಕಾರ..." ಎಂದಿದ್ದೆ.
ಕಳೆದೊಂದು ವರ್ಷದಿಂದ `ಆತ್ಮ'ದ ಬಗ್ಗೆ ಓದುತ್ತಿದ್ದೇನೆ.
ಮೊದಲಾಗಿ ಓದಿದ್ದು (ಗೆಳೆಯರೊಬ್ಬರು ತಂದುಕೊಟ್ಟದ್ದು): ಮೈಕೆಲ್ ನ್ಯೂಟನ್‌ರ "ಜರ್ನಿ ಆಫ್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೧೯೯೪). ತದನಂತರ ಸಾಲಾಗಿ ಓದಿದ್ದು: ಬ್ರಯಾನ್ ವೈಸ್‌ರ "ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್" (ಫಯ‌ರ್ ಸೈಡ್, ೧೯೮೮), "ತ್ರೂ ಟೈಮ್ ಇನ್‍ಟು ಹೀಲಿಂಗ್" (ಫಯರ್ ಸೈಡ್, ೧೯೯೨), "ಮೆಸೇಜಸ್ ಫ್ರಮ್ ದ ಮಾಸ್ಟರ್ಸ್" (ವಾರ್ನರ್ ಬುಕ್ಸ್, ೨೦೦೦). ಈಗ ಓದುತ್ತಿರುವುದು: ಮೈಕೆಲ್ ನ್ಯೂಟನ್‌ರ "ಡೆಸ್ಟಿನಿ ಆಫ್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೨೦೦೬).

ಡಾ.ನ್ಯೂಟನ್ (ಕ್ಯಾಲಿಫೋರ್ನಿಯಾ) ಮತ್ತು ಡಾ.ವೈಸ್ (ಫ್ಲೋರಿಡಾ)- ಅಮೆರಿಕದ ಎರಡು ತೀರಗಳಲ್ಲಿ ಮನೋವೈದ್ಯರಾಗಿ ತಮ್ಮ ಕಾರ್ಯಕ್ಷೇತ್ರ ಆರಿಸಿಕೊಂಡವರು. ತಮ್ಮ ಗ್ರಾಹಕರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸುತ್ತಿದ್ದವರು. ಇಬ್ಬರೂ ಆಕಸ್ಮಿಕವಾಗಿ ತಮ್ಮ ವೃತ್ತಿಯಲ್ಲಿ ಆತ್ಮದ ತಿಳುವಳಿಕೆ ಪಡೆದವರು. ಗ್ರಾಹಕರು ಇದ್ದಕ್ಕಿದ್ದಂತೆ ಈ ಜನ್ಮದ ಹೊರತಾಗಿ ಪೂರ್ವಜನ್ಮದ ಬಗ್ಗೆ ಮಾತನಾಡತೊಡಗಿದಾಗ ಒಮ್ಮೆಗೆ ಗಾಬರಿಯಾದರೂ ಸುಧಾರಿಸಿಕೊಂಡು ಅದನ್ನು ವಿಶ್ಲೇಷಿಸಿದವರು. ಅದರಲ್ಲಿ ಮತ್ತಷ್ಟು ಆಸಕ್ತಿ ತಾಳಿ, ಆ ಹಾದಿಯಲ್ಲೇ ಕ್ರಮಿಸಿ (ಶ್ರಮಿಸಿ), ವೈಜ್ಞಾನಿಕವಾಗಿ ಆತ್ಮದ ಬಗ್ಗೆ ಒಂದಿಷ್ಟು ವಿವರ ಕಲೆಹಾಕಿ ಪುಸ್ತಕ ರೂಪಕ್ಕಿಳಿಸಿದವರು. ಇಬ್ಬರ ಅಭಿಪ್ರಾಯದಲ್ಲೂ ನಮ್ಮ ಆತ್ಮದಲ್ಲಿ ಪೂರ್ವಜನ್ಮದ ನೆನಪುಗಳು ಹುದುಗಿರುತ್ತವೆ.

ಪ್ರಜ್ಞೆ- ಸುಪ್ತಪ್ರಜ್ಞೆ- ಉಪಪ್ರಜ್ಞೆ- ಅತೀಂದ್ರಿಯ ಪ್ರಜ್ಞೆ (ಆಳವಾದ ಸಮ್ಮೋಹಿತ ಸ್ಥಿತಿ) [conscious- unconscious- subconscious- superconscious (of deep hypnotic stage)]-- ಮಾನವ ಪ್ರಜ್ಞೆಯ ವಿವಿಧ ನೆಲೆಗಳು. ಇವುಗಳಲ್ಲಿ ಪ್ರಜ್ಞೆ, ಸುಪ್ತಪ್ರಜ್ಞೆ, ಮತ್ತು ಉಪಪ್ರಜ್ಞೆಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದವುಗಳೇ. ಇನ್ನುಳಿದ `ಅತೀಂದ್ರಿಯ ಪ್ರಜ್ಞೆ' ನಮ್ಮ ಆತ್ಮದ ನೆಲೆ. ವ್ಯಕ್ತಿ ಸಮ್ಮೋಹಿತನಾದಾಗ ಸಾಮಾನ್ಯವಾಗಿ ಇಷ್ಟು ಆಳವಾದ ಪ್ರಜ್ಞಾನೆಲೆಗೆ ಇಳಿಯುವುದಿಲ್ಲ. ಬಹುತೇಕ ಸಮ್ಮೋಹನ ಚಿಕಿತ್ಸೆಯಲ್ಲಿ ಇದೇ ಜೀವನದ ವಿವಿಧ ಸ್ತರಗಳ ಬೇನೆ-ಬೇಸರಗಳ ನೆಲೆಗಳನ್ನು ಅಗೆದು ತೆಗೆದು, ವಿವರವಾಗಿ ವಿಶ್ಲೇಷಿಸಿ ಅದನ್ನು ನೋವಿನ ನೆಲೆಯಿಂದ ಹೊರತುಗೊಳಿಸಿ, ಆಳವಾದ ಪ್ರಜ್ಞಾಸ್ತರದ ಘಾಸಿಗಳನ್ನು ವಾಸಿಮಾಡುವ ಪ್ರಯತ್ನ ನಡೆಯುತ್ತದೆ. ಆದರೆ, ಡಾ.ನ್ಯೂಟನ್ ಮತ್ತು ಡಾ.ವೈಸ್ ಹೇಳುವಂತೆ "ರೆಗ್ರೆಷನ್ ಥೆರಪಿ"ಯಲ್ಲಿ ವ್ಯಕ್ತಿ ತನ್ನ ಬೇನೆ-ಬೇಸರಗಳಿಗೆ ಪೂರ್ವಜನ್ಮದ ಕಾರಣಗಳಿದ್ದರೂ ಅದನ್ನೂ ಕಂಡುಕೊಂಡು ವಾಸಿ ಮಾಡಿಕೊಳ್ಳಬಹುದು. ಮುಂದೆ ಶಾಂತ ಜೀವನ ನಡೆಸಬಹುದು.

ಮೊದಲ ಕಂತಿಗೆ ಇದಿಷ್ಟು ಸಾಕು. ಮುಂದಿನ ಕಂತಿನಲ್ಲಿ ಮುಂದುವರಿಯೋಣ....

Friday 27 April, 2007

ಆತ್ಮ ಚಿಂತನ


ಧ್ಯಾನ ಅಥವಾ Meditation ಮನಸ್ಸನ್ನು ಶಾಂತವಾಗಿಸುವ ಹಲವು ಹಾದಿಗಳಲ್ಲಿ ಒಂದು. ನನ್ನ ಮಟ್ಟಿಗೆ ಧ್ಯಾನ ಯಾವುದೇ ಯೋಚನೆಯಿಲ್ಲದ, ಭಾವನೆಯಿಲ್ಲದ, ಚಿಂತೆಯಿಲ್ಲದ, ಮುಕ್ತ ಸ್ಥಿತಿ. ಈ ನಿರ್ಲಿಪ್ತ ಸ್ಥಿತಿಯಲ್ಲಿ ಮನಸ್ಸು ಬುದ್ಧಿ ಒಂದಾಗಿ ಅಂತರ್ಮುಖಿಯಾಗಿ ಆತ್ಮವಿಮರ್ಶೆಗೆ ತೊಡಗಿಕೊಳ್ಳಬೇಕು. ಅಂಥ ಮೌನ ದಿನಕ್ಕೊಮ್ಮೆ ಇರಬೇಕು. ನಮ್ಮತನದ ಗುಣಗಳನ್ನು ಒರೆಗೆ ಹಚ್ಚಬೇಕು. ಇನ್ನೂ ಬೆಳೆಯುವ ಹಾದಿಯತ್ತ ನೋಟ ಹರಿಸಬೇಕು. ಇಂಥ ಹಲವಾರು ಬೇಕುಗಳಿಗೆ ದಾರಿ ಕಾಣಿಸಿದ್ದು ನನ್ನ ಇತ್ತೀಚಿನ ಓದು. ಆತ್ಮದ ಬಗೆಗಿನ, ಪುನರ್ಜನ್ಮದ ಬಗೆಗಿನ, ಕರ್ಮ ಸಿದ್ಧಾಂತದ ಬಗೆಗಿನ ವೈಜ್ಞಾನಿಕ ಮಾಹಿತಿಯ ಓದು. ಇವನ್ನೆಲ್ಲ ಪುಟ್ಟ ಪುಟ್ಟ ತುತ್ತುಗಳಾಗಿ ನನ್ನ ಅಂಗಳದಲ್ಲಿ ಬಿಡಿಸಿಡುತ್ತೇನೆ. ಆಸಕ್ತ ಹಕ್ಕಿಗಳು ಕಾಳು ಹೆಕ್ಕಿಕೊಳ್ಳಿ.

Wednesday 14 March, 2007

ಹೊಸ ದಾರಿಯಲ್ಲಿ ಎರಡು ಹೆಜ್ಜೆ

ಕೆಲವಾರು ಪ್ರೀತಿಯ ಆಗ್ರಹಗಳಿಗೆ ಕೊನೆಗೂ ತಲೆಬಾಗಿದೆ. ಒಂದು ಬ್ಲಾಗ್ ತೆರೆದೆ, ಆದರೆ ಏನು ಬರೆಯಲಿ? ತೋಚಲಿಲ್ಲ. ಅದಕ್ಕೇ ಸುಮ್ಮನೇ ದಿಕ್ಕು-ದೆಸೆಯಿಲ್ಲದೆ ಹರಿಯುತ್ತಿರುವ ಹೊಸ ಲಹರಿ. ನಿಮ್ಮ ಒಂದು ಹೊರಳು ನೋಟಕ್ಕೆ.

ಮುಂದುವರಿಯಲೋ ಬೇಡವೋ ಸಂಶಯ ಇನ್ನೂ ಇದೆ ಎದೆಯಲ್ಲಿ....!
ತಂಪು ಭೂಮಿಗೆ ಎದುರಾದೆನೇ.... ಮರುಭೂಮಿಯ ಮುಂದಿರುವೆನೆ? ತಿಳಿದಿಲ್ಲ. ನಡೆದದ್ದೇ ಹಾದಿ ಎನ್ನುವ ಒರಟುತನ ನನ್ನದಲ್ಲ. ಹೇಗೆ ಮುಂದುವರಿಯಲಿ ಅನ್ನುವುದು ಕಾಲ ನಿರ್ಧರಿತ....!!

ಅಕ್ಷರ: ಸುಪ್ತದೀಪ್ತಿ suptadeepti ಕಾಲ: 5:16 PM

10 ಪತ್ರೋತ್ತರ:

mala rao said...
ಹೊಸ ದೀಪ್ತಿಗೆ ಸ್ವಾಗತ
ಲಹರಿ ನಿರಂತರವಾಗಿ ಹರಿಯಲಿ ಎದುರಿಗಿರುವುದು ಮರುಭೂಮಿಯೋ, ತಂಪುದಾರಿಯೋ ಹರಿಯ ಚಿತ್ತ ....ಸ್ನೇಹವೆಂಬ ಓಯಸಿಸ್ ಅನ್ನೇ ಅದಕು, ಇದಕು, ಎದಕು ಎಂದು ನಂಬಿರುವಾಗ ನಡೆವ ಹಾದಿಯೆಲ್ಲಾ ಹಸಿರು ಮಖಮಲ್ಲು!
ಅಭಿನಂದನೆಗಳು!
March 13, 2007 6:07 PM

ಮನಸ್ವಿನಿ said...
ಸುಪ್ತದೀಪ್ತಿಗೆ ಬ್ಲಾಗ್ ಲೋಕಕ್ಕೆ ಸುಸ್ವಾಗತ..
ಹರಿಯುವುದಷ್ಟೆ ನಮ್ಮ ಕೆಲಸ, ಹೇಗೆ, ಎಲ್ಲಿಗೆ ಅಂತ ನಿರ್ಧಾರ ಆ ಭಗವಂತನದ್ದು...
ಮೊದಲ ಬ್ಲಾಗಲ್ಲಿ ಕೊರೆದ್ರೆ ಸರಿ ಇರಲ್ಲ...ನಿಲ್ಲಿಸ್ತೀನಿ :)
March 13, 2007 9:00 PM

sritri said...
ಬ್ಲಾಗ್ ಗ್ರಹಕ್ಕೆ ಸ್ವಾಗತ! :)
ಹರಿವ ಲಹರಿ ಹೆಸರು ಚೆನ್ನಾಗಿದೆ.
"ಹರಿವ ನೀರು ನೀನು ದಡದ ಹಸಿರು ನಾನು
ಹಾಡು ತುಂಬಿ ಬರಲು ಅದಕೆ ನಾನು ಕೊರಳು!"
March 14, 2007 12:48 PM

Jagali Bhagavata said...
ನಿಮ್ಮ ಬ್ಲಾಗ್-ಗೆ ನಾನೇ ಮೊದ್ಲು ಬರೀಬೇಕಂತಿದ್ದೆ.
'ಸ್ತ್ರೀ''ತ್ರಿ'ಗಳು ಅವಕಾಶ ಕಸಿದುಕೊಂಡರು. ಛೆ, ಛೆ, ಛೆ (ನಾಯಕ ಕೈ ಕೈ ಹೊಸಕಿಕೊಳ್ಳುವನು).

ಲಹರಿ ಓತಪ್ರೋತವಾಗಿ ಹರಿಯಲಿ. ಅದಕ್ಕೆ ಅಣೆಕಟ್ಟು ಕಟ್ಟುವ ಯತ್ನ ಬೇಡ.
March 14, 2007 6:17 PM

suptadeepti said...
ಎಲ್ಲರ ಪ್ರೀತಿಗೆ ಪ್ರತಿ ವಂದನೆಗಳು.

@ ಮಾಲಾ, ಸ್ನೇಹದ ಹೊಸ ದಿಕ್ಕಿಗೆ ಮೊದಲು ಕೈತೋರಿದ ನಿನಗೆ ಮೊದಲ ಚಾಕಲೇಟು.
@ ಮನಸ್ವಿನಿ, ಒತ್ತಡ ಏರಿಸಿದ್ದಕ್ಕೆ ನಿನಗೂ ಒಂದು ಕ್ಯಾಂಡಿ.
@ ಶ್ರೀತ್ರಿ, ನಿನ್ನ ಕೊರಳಲಿ ಸದಾ ನಲಿವ ಹಾಡಿನ ಗುನುಗಿಗೆ ಒಂದು ಸಿಹಿ.
@ ಭಾಗವತರೇ, ಲಹರಿಗೆ ಪರ್ಮಿಟ್ ಕೊಟ್ಟಿದ್ದಕ್ಕೆ ನಿಮಗೆ ತಂಪಾದ ಒಂದು 'ಬೊಂಡ'.
ಎಲ್ಲರಿಗೂ ಸ್ವಾಗತ.
ನಿಮ್ಮೆಲ್ಲರ ತಾಣಗಳಿಗೆ ನನ್ನ ಅಂಗಳದಿಂದ ಕೈಮರಗಳನ್ನು ಸಧ್ಯದಲ್ಲೇ ನಿಲ್ಲಿಸುತ್ತೇನೆ. ನಿಮಗೆ ತಾಳ್ಮೆಯಿದೆ, ನನಗೆ ಗೊತ್ತು.
March 14, 2007 11:38 PM

Shrilatha Puthi said...
"ಲಹರಿ ಹರಿಯಲು" ಶುರುವಾದದ್ದನ್ನು ನೋಡಿ ತುಂಬಾ ಖುಷಿಯಾಯ್ತು. ದಾರಿ ಹೊಸದಿರಬಹುದು, ಜೊತೆಗೆ ನಾವೆಲ್ಲಾ ಇದ್ದೇವೆ; ಪಟ್ಟಾಂಗ ಕೊಚ್ಚಿ, ಕಾಲೆಳೆದು, ತಲೆ ತಿನ್ಲಿಕ್ಕೆ. We are just here to enjoy the journey.
March 14, 2007 11:49 PM

suptadeepti said...
ಧನ್ಯವಾದಗಳು ಶ್ರೀಲತಾ. ಪ್ರೋತ್ಸಾಹಕ್ಕೆ ವಂದನೆಗಳು. ಬರುತ್ತಿರು.
March 14, 2007 11:54 PM

Shiv said...
ಸುಪ್ತದೀಪ್ತಿಯವರೇ, ಸ್ವಾಗತವು ನಿಮಗೆ..
ಹರಿವ ಲಹರಿಯೆಂಬ ಸುಂದರ ಹೆಸರಿನ ನಿಮ್ಮ ಬ್ಲಾಗ್ ಲಹರಿ ನಿತ್ಯ ನಿರಂತರವಾಗಿ ಹರಿಯಲಿ..
March 15, 2007 1:34 AM

Sree said...
ಬ್ಲಾಗ್ ಹೆಸರು ಇಷ್ಟ ಆಯ್ತು! ಎಲ್ಲಾ ಆಗ್ಲೇ ಸ್ವಾಗತಿಸಿ ಚಾಕಲೇಟ್ ಗಿಟ್ಟಿಸಿಬಿಟ್ಟಿದಾರೆ! ನಾನು ತುಂಬಾ ಲೇಟಾಗಿ ಈ ಕಡೆ ಬಂದೆನಾ?:ಪ್ಚ್

ಹೀಗೇ ಸುಮ್ಮ್ನೆ ಲಿಂಕ್ ಹಾಕಿಕೊಳ್ತಿದೀನಿ
March 15, 2007 1:49 AM

suptadeepti said...
ಶಿವು, ಶ್ರೀ, ಇಬ್ಬರಿಗೂ ಸ್ವಾಗತ, ಧನ್ಯವಾದಗಳು.

'ಹರಿವ ಲಹರಿ'ಯ ಶಕ್ತಿ ನೀವೆಲ್ಲ ಓದುಗರ ಪ್ರೋತ್ಸಾಹ, ಪ್ರೀತಿ. ಅದು ಹೀಗೇ ನಿರಂತರವಾಗಿರಲಿ.
ಶ್ರೀ, ಲಿಂಕ್ ಹಾಕಿಕೊಳ್ಳಿ, ಆಕ್ಷೇಪವಿಲ್ಲ, ಸಂತೋಷವೇ.
March 15, 2007 10:39 AM