ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday 27 September, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೩

ಗ್ರ್ಯಾಂಡ್ ಕ್ಯಾನಿಯನ್ ಪಡುದಂಡೆ- ಕಣಿವೆಯ ಮೇಲೊಂದು ಗಾಜಿನ ಲಾಳ....

ಆಗಸ್ಟ್ ೩೦, ಭಾನುವಾರ.
ಲಾಸ್ ವೇಗಾಸಿನಿಂದ ಬೆಳಗ್ಗೆ ಬೇಗ ಎದ್ದು ಹೊರಡೋಣ ಎಂದುಕೊಂಡಿದ್ದೆವು. ಹಿಂದಿನ ದಿನದ ಸುಸ್ತು ನಮ್ಮನ್ನು ಬಿಡಲು ಸಿದ್ಧವಿರಲಿಲ್ಲ. ತುಸು ತಡವಾಗಿಯೇ, ಏಳೂಕಾಲಕ್ಕೆ ಹೊರಟೆವು. ಗ್ರ್ಯಾಂಡ್ ಕ್ಯಾನಿಯನ್ ಕಡೆ ಹೋಗುವ ಹೈವೇ-೯೩ "ದ ವರ್ಲ್ಡ್ ಫೇಮಸ್" ಹೂವರ್ ಡ್ಯಾಮ್ ಮೇಲೆ ಹಾದು ಹೋಗುತ್ತದೆ. ಪ್ರೇಕ್ಷಣೀಯ "ಯಾತ್ರಾ" ಸ್ಥಳಗಳಲ್ಲಿ ಈ ಡ್ಯಾಮ್ ಕೂಡ ಒಂದು. ಇದರ ನಡುವೆಯೇ ನೆವಾಡಾ ಅರಿಝೋನಾ ರಾಜ್ಯಗಳ ಗಡಿಯೂ ಹಾದುಹೋಗುತ್ತದೆ. ಅಲ್ಲಿನ ವಿಸಿಟರ್ ಸೆಂಟರ್, ಅಣೆಕಟ್ಟಿನ ಟೂರ್, ಕೆಲವೊಂದು ನೋಟಕ ಸ್ಥಾನಗಳು (ವ್ಯೂ ಪಾಯಿಂಟ್)- ಎಲ್ಲವನ್ನೂ ಹದಿಮೂರು ವರ್ಷಗಳ ಹಿಂದೊಮ್ಮೆ ನೋಡಿದ್ದೆವು. ಈ ಸಲ ಎತ್ತರದ ಒಂದು ನೋಟಕ ಸ್ಥಾನದಿಂದ ಕೆಲವು ಚಿತ್ರಗಳನ್ನು ಮಾತ್ರ ತೆಗೆದೆವು; ಅಣೆಕಟ್ಟಿನ ವಿಸಿಟರ್ ಸೆಂಟರ್ ತೆರೆದಿರಲಿಲ್ಲ (ಸಮಯ ಆಗಿರಲಿಲ್ಲ). ಈ ಅಣೆಕಟ್ಟಿನ ಮೇಲೆ ವಾಹನ ಸಂಚಾರವನ್ನು ಕಡಿಮೆಗೊಳಿಸುವ ಸಲುವಾಗಿ ಅಲ್ಲೊಂದು ಹೊಸ ರಸ್ತೆಯ ನಿರ್ಮಾಣವಾಗುತ್ತಿದ್ದು, ಅದರ ಭಾಗವಾದ ಸೇತುವೆ ರಚನೆಯ ಹಂತ ನೋಡಲು ಕುತೂಹಲಕಾರಿಯಾಗಿದೆ. ಅದನ್ನೂ ಹಿನ್ನೆಲೆಯಲ್ಲಿ ಒಳಗೊಂಡ ಅಣೆಕಟ್ಟಿನ ಚಿತ್ರವೊಂದು ನಿಮಗಾಗಿ:


ನೋಡಾಯ್ತಾ? "ರೈಟ್ ಪೋಯಿ...."

ಗ್ರ್ಯಾಂಡ್ ಕ್ಯಾನಿಯನ್ ಅನ್ನುವುದು ಕೊಲೆರಾಡೋ ನದಿಯನ್ನು ತನ್ನ ಪಾತಳಿಯಲ್ಲಿರಿಸ್ಕೊಂಡಿರುವ ೨೭೭ ನದಿ-ಮೈಲು ಉದ್ದದ, ಸರಾಸರಿ ೧೦ ಮೈಲು ಅಗಲದ, ಸರಾಸರಿ ೫,೦೦೦ ಅಡಿ ಆಳದ (ಅತ್ಯಂತ ಅಗಲದ ಭಾಗ ೧೮ ಮೈಲು ಅಗಲವೂ, ಅತ್ಯಂತ ಆಳವಿದ್ದಲ್ಲಿ ಒಂದು ಮೈಲು (೫,೨೮೦ ಅಡಿ) ಆಳವೂ ಇರುವ) ಕಣಿವೆ. ಇತ್ತೀಚಿನವರೆಗೆ ಇದರ ಉತ್ತರ ದಂಡೆ ಮತ್ತು (ಜನಪ್ರಿಯ) ದಕ್ಷಿಣ ದಂಡೆ ಮಾತ್ರ ನೋಡುಗರಿಗೆ ಲಭ್ಯವಿದ್ದವು. ಕಣಿವೆಯ ನೈರುತ್ಯ ಭಾಗದಲ್ಲಿ ಒಂದು ಮಿಲಿಯನ್ ಎಕರೆ ಭೂಮಿ, ೧೦೮-ನದಿಮೈಲು ಉದ್ದವು ‘ಹ್ವಾಲಪಾಯ್ ಮೂಲನಿವಾಸಿ ಪಂಗಡ’ಕ್ಕೆ ಸೇರಿದೆ.


ಈ ‘ಗ್ರ್ಯಾಂಡ್ ಕ್ಯಾನಿಯನ್ ಪಶ್ಚಿಮ ದಂಡೆ’ಯಲ್ಲಿ ೨೦೦೭ರಲ್ಲಿ ಕುದುರೆ ಲಾಳ ವಿನ್ಯಾಸದ ಒಂದು ರಚನೆಯೆದ್ದಿತು. ಹತ್ತಡಿ ಅಗಲದ ಈ ‘ಲಾಳ’ದ ತಳಕ್ಕೆ ಗಾಜಿನ ಪದರಗಳನ್ನು ಮಾತ್ರ ಹೊದಿಸಲಾಗಿದ್ದು ಇದರಲ್ಲಿ ನಿಂತವರಿಗೆ ದಂಡೆಯಿಂದ ೭೦ ಅಡಿ ದೂರದಲ್ಲಿ, ನಾಲ್ಕುಸಾವಿರ ಅಡಿ ಆಳದ ಕಮರಿಯ ಮೇಲೆಯೇ ನೇರವಾಗಿ ನಿಂತು ನೋಡಿದ ರೋಮಾಂಚಕ ಅನುಭವ. ಏಳು ಮೈಲುಗಳ ಕಲ್ಲು-ಮಣ್ಣಿನ ರಸ್ತೆಯೂ ಸೇರಿದಂತೆ, ವೇಗಾಸಿನಿಂದ ೧೧೬ ಮೈಲಿಗಳ ದಾರಿ ಹಾದು ಈ ಪಶ್ಚಿಮ ದಂಡೆಯನ್ನು ನಾವು ತಲುಪಿದಾಗ ಬೆಳಗಿನ ಹತ್ತೂಕಾಲರ ಸಮಯ. ಇಲ್ಲಿನ ಮುಖ್ಯ ವಿಸಿಟರ್ ಸೆಂಟರಿನ ಬಳಿಯೇ ವಾಹನ ನಿಲ್ಲಿಸಿ, ಅವರದೇ ಬಸ್ಸಿನಲ್ಲಿ ಐದು ಮೈಲು ಹೋಗಬೇಕು, ಲಾಳಾಕಾರದ ಈ ‘ಗ್ಲಾಸ್ ಬ್ರಿಜ್’ ನೋಡಲು. ಇಲ್ಲಿಂದಲೇ ವೆಸ್ಟ್ ರಿಮ್ ಹೆಲಿಕಾಪ್ಟರ್ ಟೂರ್, ಏರೋಪ್ಲೇನ್ ಟೂರ್, ಜೀಪ್ ಟೂರ್, ಎಲ್ಲವೂ ಲಭ್ಯ.


ಪ್ರವೇಶ ಶುಲ್ಕ/ ಬಸ್ಸಿನ ಶುಲ್ಕ ಹಾಗೂ ‘ಸ್ಕೈ-ವಾಕ್’/ ‘ಗ್ಲಾಸ್ ಬ್ರಿಜ್’ ಶುಲ್ಕ ಮತ್ತು ತೆರಿಗೆ ಇತ್ಯಾದಿ ಸೇರಿ ಒಟ್ಟು ಎಪ್ಪತ್ತೈದು ಡಾಲರು ಕೊಟ್ಟು ‘ಸ್ಕೈ-ವಾಕ್’ ಮೇಲೆ ಬರುವಾಗ, ಸಿಮೆಂಟ್ ನೆಲದಿಂದ ಗಾಜಿನ ಮೇಲೆ ಹೆಜ್ಜೆಯಿರಿಸುವಾಗ, ಕೆಲವರಿಗೆ ಒಮ್ಮೆ ಎದೆಬಡಿತ ತಪ್ಪುವುದಷ್ಟೇ ಆದರೆ, ನೇರವಾಗಿ ನಡುವೆಯೇ ನಡೆಯಲಾಗದೆ ಬದಿಯ ಉಕ್ಕಿನ ಪಟ್ಟಿಯಲ್ಲೇ ನಡೆಯುವವರೂ, ಒಂದಿಷ್ಟು ತೆವಳಿ ನಂತರ ನಡೆಯುವವರೂ ಅಲ್ಲಿದ್ದರು. ಈ ಗಾಜಿನ ಲಾಳದ ಮೇಲೆ ನಮ್ಮ ಕ್ಯಾಮರಾ, ಕ್ಯಾಂಕಾರ್ಡರ್, ಸೆಲ್ ಫೋನ್, ದಪ್ಪದ ಭಾರದ ಯಾವುದೇ ಪರ್ಸ್, ಕೈಚೀಲ, ಬೆನ್ನ ಚೀಲ, ನೀರಿನ/ ಜ್ಯೂಸಿನ ಬಾಟಲ್ಸ್- ಏನನ್ನೂ ಒಯ್ಯುವಂತಿಲ್ಲ. ಮೊದಲೇ ಒಂದೆಡೆ ಅವರು ಒದಗಿಸುವ ಲಾಕರಿನಲ್ಲಿರಿಸಬೇಕು. ನಮ್ಮ ಶೂ, ಚಪ್ಪಲಿಗಳಿಗೂ ಅವರೇ ಕೊಡುವ ಸ್ಪೆಷಲ್ ಕವಚ ಧರಿಸಿಯೇ ಅದರ ಮೇಲೆ ನಡೆಯಬೇಕು. ನಮಗೆ ಬೇಕೆಂದರೆ, ಆ ಕ್ಯಾಂಟಿಲಿವರ್ ರಚನೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಅವರೇ ಇಟ್ಟಿರುವ ಎರಡು ಸ್ಥಾವರ ಕ್ಯಾಮೆರಾಗಳಲ್ಲಿ ಮತ್ತು ಒಂದು ಜಂಗಮ ಕ್ಯಾಮೆರಾದಲ್ಲಿ ಅಲ್ಲಿನವರೇ ನಮ್ಮ ಚಿತ್ರಗಳನ್ನು ತೆಗೆಯುತ್ತಾರೆ. ನಂತರ ಬಳಿಯ ಕಟ್ಟಡದೊಳಗಿರುವ ಅಂಗಡಿಯಲ್ಲಿ ಅವನ್ನು ನೋಡಿ, ಬೇಕೆನಿಸಿದರೆ ಕೊಂಡುಕೊಳ್ಳಬೇಕು.


ಈಗಲ್ ಪಾಯಿಂಟಿನಿಂದ ಕಾಣುವ ಸ್ಕೈ-ವಾಕ್/ ಗ್ಲಾಸ್ ಬ್ರಿಜ್/ ಗಾಜಿನ ಲಾಳ


ಸ್ಕೈ-ವಾಕ್ ಬದಿಯಲ್ಲೇ ಕಾಣುವ ಈಗಲ್ ಪಾಯಿಂಟ್- ಇದರ ಮಧ್ಯಭಾಗ ಗಮನಿಸಿದರೆ ರೆಕ್ಕೆ ಬಿಡಿಸಿರುವ ಹದ್ದಿನಂತಿದೆ.

ಸ್ಕೈ ವಾಕ್ ಮೇಲೆ ಒಂದು ಬಾರಿಗೆ ೧೨೦ ಜನರನ್ನು ಮಾತ್ರವೇ ಹೋಗಲು ಬಿಡುತ್ತಾರೆ. ನಾವು ಹೋದಾಗ ಬೆಳಗಿನ ಸಮಯವಾದ್ದರಿಂದ ಅಷ್ಟೇನೂ ಜನರಿರರಿಲ್ಲ. ಸುಮಾರು ಒಂದರ್ಧ ಗಂಟೆ ಅಲ್ಲಿದ್ದು ನಂತರ ಅಲ್ಲಿಂದ ಹೊರಗೆ- ಪಕ್ಕದ ಅಂಗಡಿಯೊಳಗೆ ಬಂದೆವು. ನಮ್ಮ ಫೋಟೋ ಕೊಂಡು, ಬಸ್ ಹಿಡಿದು, ಅಲ್ಲಿಂದ ಮುಂದಿನ ಗ್ವಾನೋ ಪಾಯಿಂಟ್ ಕಡೆ ಹೋಗಿ, ನಮ್ಮ ಡಬ್ಬಿಯೂಟವನ್ನು ಅಲ್ಲಿಯೇ ತಿಂದೆವು. ಹೈ ಪಾಯಿಂಟ್ ಹೈಕ್ ಮಾಡುತ್ತಾ ಕಣಿವೆಯ ಅಡ್ಡಲಾಗಿ ೧೯೫೮ರಲ್ಲಿ ಕಟ್ಟಲ್ಪಟ್ಟಿದ್ದ ೮,೮೦೦ ಅಡಿ ಉದ್ದದ ಒಂದೇ ಹರವಿನ ತೂಗುಗೋಲದ (ಸಿಂಗಲ್ ಸ್ಪಾನ್ ಟ್ರಾಂವೇ) ಪಳೆಯುಳಿಕೆಯನ್ನು ನೋಡಿದೆವು.

ಮತ್ತೆ ಬಸ್ ಹಿಡಿದು, ಮುಖ್ಯ ವಿಸಿಟರ್ ಸೆಂಟರಿನ ಬಳಿ ಬಂದೆವು. ಇಲ್ಲಿಂದ ಹ್ವಾಲಪಾಯ್ ರಾಂಚ್ ಕಡೆ ಬಸ್ ಇದೆ. ಅಲ್ಲಿಂದಲೂ ಜೀಪ್ ಟೂರ್ ಲಭ್ಯವಿದೆ. ರಾತ್ರೆ ಉಳಿದುಕೊಳ್ಳುವ ವ್ಯವಸ್ಥೆಯೂ ಅಲ್ಲಿದೆ. ನಾವು ರಾಂಚ್ ನೋಡಿ ಬಂದು, ಪಡುದಂಡೆಗೆ ಟಾಟಾ ಎಂದು ಪೂರ್ವಾಭಿಮುಖವಾಗಿ ಗ್ರ್ಯಾಂಡ್ ಕ್ಯಾನಿಯನ್ ದಕ್ಷಿಣ ದಂಡೆಯತ್ತ ಹೊರಟೆವು; ಸಮಯ ಅಪರಾಹ್ನ ಒಂದೂವರೆ.

Sunday 20 September, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೨

`ಪಾಪ ನಗರಿ'ಯಲಿ ಒಂದು ಸಂಜೆ....

ಆಗಸ್ಟ್ ೨೮ರ ಶನಿವಾರ ಬೆಳಗ್ಗಿನ ನಾಲ್ಕೂವರೆಗೆ ಹೊರಡಬೇಕು ಅಂದುಕೊಂಡು, ನಾಲ್ಕೂಮುಕ್ಕಾಲಿಗೆ ಹೊರಟಿದ್ದೆವು. ಗಾಡಿಗೆ ಹಿಂದಿನ ಸಂಜೆಯೇ ಪೆಟ್ರೋಲ್ ತುಂಬಿಸಿಯಾಗಿತ್ತು. ಹೊರಟು ತುಸು ಹೊತ್ತಿಗೆ, "ನೀನು ಬೇಕಾದ್ರೆ ಮಲಗು. ರಾತ್ರೆಯೆಲ್ಲಾ ಮಲಗ್ಲೇ ಇಲ್ವಲ್ಲ ನೀನು" ಅಂದರು. ಕಾರಿನ ಸೀಟನ್ನು ಆದಷ್ಟು ಹಿಂದಕ್ಕೆ (ಹಿಂದಿನ ಸೀಟಿನಲ್ಲಿ ಕೂತಿದ್ದ ದೊಡ್ಡ ಐಸ್-ಚೆಸ್ಟ್ ತಡೆಯುವ ತನಕ) ವಾಲಿಸಿಕೊಂಡೆ. ಕಾರಿನೊಳಗೇ ಇಟ್ಟುಕೊಂಡಿದ್ದ ಪುಟ್ಟಪುಟ್ಟ ದಿಂಬುಗಳನ್ನು ಎರಡೂ ಸೀಟುಗಳ ನಡುವೆ ಸಿಕ್ಕಿಸಿದೆ. ಬೆಳಗಿನ ನಸುಬೆಳಕನ್ನು ಕರ್ಚೀಫಿನಿಂದ ಮರೆಮಾಡಿ ಹಾಗೇ ಒರಗಿದ್ದೊಂದೇ ಗೊತ್ತು.

"ಓಹ್! ವಾಹ್!" ಉದ್ಗಾರಗಳಿಗೆ ಧಡಕ್ಕನೆ ಎದ್ದು ಕೂತೆ. ಗಂಟೆ ಐದೂಕಾಲು. ನಾವಿನ್ನೂ ಮಾರ್ಗನ್ ಹಿಲ್ ನಗರ ದಾಟಿಲ್ಲ. "ಏನಾಯ್ತು?" ಸ್ವಲ್ಪ ತೀಕ್ಷ್ಣವಾಗಿಯೇ ಕೇಳಿದ್ದೆ. "ಒಂದು ಚಂದದ ಉಲ್ಕೆ ಮಾರಾಯ್ತಿ. ಒಳ್ಳೆ ಹಸಿರು ಬಣ್ಣ. ಊಊದ್ದದ ಹಸಿರು ಬಾಲ ಅದಕ್ಕೆ. ಭಾರೀ ಚಂದ ಇತ್ತು." ಹ್ಮ್! ಚಂದದ ಮುಂಜಾನೆಯಲ್ಲಿ ಮರಿ ಕವಿಯ ಹಾಗೆ ಚಂದದ ಉಲ್ಕೆಯ ವರ್ಣನೆ ಮಾಡೋ ಚೆನ್ನಿಗರಾಯರ ಮೇಲೆ ಕೋಪ ಮಾಡ್ಕೊಳೋದಕ್ಕೆ ಆಗ್ತದಾ? ಸುಮ್ಮನೇ ಉಸಿರು ಬಿಟ್ಟೆ. ಕಣ್ಣು ಬಿಟ್ಟು ಕೂತೆ.... ಇನ್ನೊಂದು ಬಂದ್ರೆ? ಗಿಲ್ರೋಯ್ ದಾಟಿತು. ಸೂರ್ಯ ಏರಿ ಬಂದ. ಉಲ್ಕೆ ನೋಡ್ಲಿಕ್ಕಾ ಅಂತ ಕೇಳಬೇಕೆನಿಸಿತು ಅವ್ನನ್ನ. ಕೇಳ್ಲಿಲ್ಲ. ಅಷ್ಟು ಹೊತ್ತಿಗೆ ಕಣ್ಣುಗಳು "ಉರಿ ಉರಿ" ಅಂದವು. ಮತ್ತೊಮ್ಮೆ ಕರ್ಚೀಫು ಕಟ್ಟಿಕೊಂಡು ದಿಂಬಿಗೊರಗಿದೆ.

ನಮ್ಮೂರಿಂದ ನೆವಾಡದ ಲಾಸ್ ವೇಗಾಸ್ ನಗರಕ್ಕೆ ಎಂಟೂವರೆ ಗಂಟೆಯ ಹಾದಿ. ಒಂದು ಗ್ಯಾಸ್ (ಪೆಟ್ರೋಲ್) ಸ್ಟಾಪ್ ಬೇಕೇಬೇಕು. ಹಾಗೇ ರೆಸ್ಟ್ ರೂಂ ವಿಸಿಟ್ಸ್ ಕೂಡಾ. ಸಾಮಾನ್ಯವಾಗಿ ಗ್ಯಾಸ್ ಸ್ಟೇಷನ್ (ಪೆಟ್ರೋಲ್ ಬಂಕ್)ಗಳಲ್ಲಿ ಒಳ್ಳೆಯ ಟಾಯ್ಲೆಟ್ ಕೂಡಾ ಇರ್ತವೆ. ಹಾಗೇ ನಮ್ಮದೂ ಒಂದೆರಡು ನಿಲುಗಡೆಗಳಾದವು. ಮೊದಲ ನಿಲುಗಡೆಯಲ್ಲಿ, ಒಂಭತ್ತು ಗಂಟೆಗೆ, ಕಾರಿಗೆ ರೆಸ್ಟೂ ನಮಗೆ ಟೀಯೂ ಉಪ್ಪಿಟ್ಟೂ ದಕ್ಕಿದವು. ನಂತರ ನಾನು ಡ್ರೈವಿಂಗ್ ತಗೊಂಡೆ. ಇವರು ಒಂದಿಷ್ಟು ಕಿಲೋ ಬೆಲ್ಲ ತೂಗಿದರು (ನಮ್ಮಲ್ಲಿ, ಕತ್ತು ಹಿಂದಕ್ಕೆ ಒರಗಿಸಿಕೊಳ್ಳದೆ, ತಲೆದೂಗುತ್ತಾ ನಿದ್ದೆ ಮಾಡುವುದಕ್ಕೆ "ಗೌರವಾನ್ವಿತ" ನುಡಿಗಟ್ಟು "ಬೆಲ್ಲ ತೂಗುವುದು").

ಸುಮಾರು ಮೂರು ಗಂಟೆಗಳ ಹಾದಿಯ ಬಳಿಕ ಮತ್ತೊಂದು ಬ್ರೇಕ್. ಯಥಾವತ್ ಕಾರಿಗೆ ಗ್ಯಾಸ್ ತುಂಬಿಸಿ, ರೆಸ್ಟ್ ರೂಂ ವಿಸಿಟ್ ಆಗಿ, ಉಳಿದ ಟೀ ಕುಡಿದು, ಒಂದೊಂದು ಸ್ನ್ಯಾಕ್ ಬಾರ್ ತಿಂದು ಮತ್ತೆ ಅವರ ಸಾರಥ್ಯದಲ್ಲಿ ಹೊರಟಿತು ಬಂಡಿ. ವೇಗಾಸಿನಲ್ಲಿ ಮಧ್ಯಾಹ್ನದ ಊಟವೆಂದು ನಿರ್ಧರಿಸಿಕೊಂಡಿದ್ದೆವು. ಮೊದಲ ಒಂದು ಗಂಟೆ ನಾನು ಇನ್ನೊಂದು ನಿದ್ದೆ ಮಾಡಿದೆ. ಅಲ್ಲಿಗೆ, ಸುಮಾರು ಮೂರೂವರೆ-ನಾಲ್ಕು ಗಂಟೆಗಳ ನಿದ್ದೆ ನನ್ನ ಪಾಲಿಗೆ ಸಿಕ್ಕಿತ್ತು. ವೇಗಾಸಿನ ಭಾರತೀಯ ರೆಸ್ಟಾರೆಂಟುಗಳ ಲಿಸ್ಟ್ ನಮ್ಮಲ್ಲಿತ್ತು. ಕನ್ನಡಕ ಏರಿಸಿಕೊಂಡು ಒಂದೊಂದಕ್ಕೇ ಕರೆ ಮಾಡಿದೆ...

"ಹಲ್ಲೋ, ಗುಡ್ ಆಫ್ಟರ್’ನೂನ್ ನಿಮ್ಮಲ್ಲಿ ಲಂಚ್ ಬಫೆ ಇವತ್ತು ಇದೆಯಾ? ಎಷ್ಟು ಹೊತ್ತಿನತನಕ ಇರ್ತದೆ?" ಒಂದು ಕಡೆ ಎರಡೂವರೆಯ ತನಕ. ಇನ್ನೊಂದು ಕಡೆ "ನೀವು ಒಂದೂಮುಕ್ಕಾಲಿಗೆ ಬಂದರೆ ಟೇಕ್ ಔಟ್ ಮಾತ್ರ." ಎಂದಳು, ಒರಟಾಗಿ!

ಆಗಲೇ ಸಮಯ ಒಂದೂಕಾಲು. ವೇಗಾಸಿಗೆ ಇನ್ನೂ ಸುಮಾರು ಅರ್ಧ ಗಂಟೆಯ ಹಾದಿ. ಟ್ರ್ಯಾಫಿಕ್ ತೀರಾ ನಿಧಾನವಾಗಿತ್ತು. ಎಲ್ಲೋ ಏನೋ ಆಕ್ಸಿಡೆಂಟ್ ಆಗಿತ್ತೆನಿಸಿತು. ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ಜಪ್ಪಿಸಿಕೊಂಡು ನಿಂತಿದ್ದ ಎರಡು ಕಾರುಗಳಿದ್ದವು. ಮಾಮಣ್ಣನವರು ಆ ಒಂದು ಲೇನ್ ತೆರವುಗೊಳಿಸಿ ಉಳಿದೆರಡರಲ್ಲೇ ವಾಹನಗಳನ್ನು ಸಾಗಹಾಕುತ್ತಿದ್ದರು. ಆ ಸೀನ್ ದಾಟುತ್ತಿದ್ದ ಹಾಗೇ ವೇಗ ಸುವೇಗ. ಮತ್ತೊಂದು ಹೋಟೇಲ್- ಇಂಡಿಯಾ ಅವೆನ್-ಗೆ ಫೋನ್ ಮಾಡಿದೆ. "ಎರಡೂವರೆಯ ಮೊದಲು ಬನ್ನಿ. ಬಫೆ ಇದೆ." ಎಂದರು.

ಒಂದೂಮುಕ್ಕಾಲಿಗೇ ಪ್ಯಾರಡೈಸ್ ರೋಡಿನಲ್ಲಿರುವ ಇಂಡಿಯಾ ಅವೆನ್ ಮುಂದೆ ನಿಂತು ಕಾರಿನಿಂದಿಳಿಯುವಾಗ ‘ಉಬೆ’ (ಹಣ್ಣುಗಳನ್ನು "ಹಣ್ಣಾಗಿಸಲು" ಹದವಾದ ಬೆಂಕಿ/ಹೊಗೆ ಹಾಕಿ ಬೆಚ್ಚಗಿಡುವ ಗೂಡು) ಹೊಕ್ಕಿದ ಅನುಭವ. ನೂರಾಮೂರು ಡಿಗ್ರಿಯ ಒಣ ಹವೆ. ಒಟ್ಟು ಒಂಭತ್ತು ಗಂಟೆಯ ಪಯಣ. ಐದುನೂರಾ ನಲವತ್ತೆರಡು ಮೈಲಿ ಬಂದಿದ್ದೆವು. ಟೇಬಲ್ ಹಿಡಿದು, ರೆಸ್ಟ್ ರೂಮ್ ವಿಸಿಟ್ ಮುಗಿಸಿ, ಬಫೆ ಊಟ ಆಯ್ದುಕೊಂಡೆವು. ನಮಗೆ ಬೇಕಾಗಿದ್ದನ್ನು ತಟ್ಟೆಗೆ ಹಾಕಿಕೊಂಡು ಟೇಬಲ್ಲಿಗೆ ಬಂದಾಗ ಬಿಸಿಬಿಸಿ ನಾನ್ ತಂದುಕೊಟ್ಟರು. ಈ ಮೊದಲು ಎಷ್ಟೋ ರೆಸ್ಟಾರೆಂಟ್’ಗಳಲ್ಲಿ ಊಟ ಮಾಡಿದ್ದೇವೆ, ನಾನ್ ತಿಂದಿದ್ದೇವೆ. ಆದರೆ ಇಷ್ಟು ಹದವಾಗಿರುವ ನಾನ್ ಎಂದೂ ತಿಂದಿರಲಿಲ್ಲ. ರುಚಿ, ಸುವಾಸನೆ, ಮೃದುತ್ವ- ಅತ್ಯಂತ ಸಮರ್ಪಕವಾಗಿದ್ದವು. ಮೆಚ್ಚುಗೆ ತಿಳಿಸಿಯೇ ಊಟ ಮುಗಿಸಿದೆವು.

ಎರಡೂಮುಕ್ಕಾಲಿಗೆ ಅಲ್ಲಿಂದ ಹೊರಟು ನಾವು ಇಳಿದುಕೊಳ್ಳಬೇಕಾಗಿದ್ದ ಹೋಟೇಲಿಗೆ ಬಂದೆವು. ರೂಮ್ ಸೇರಿ ಸ್ನಾನ ಮಾಡಿ ಒಂದು ನಿದ್ದೆಯೂ ಆಯ್ತು. ಆಗ ನಾನು ಗಮನಿಸಿದಂತೆ, ಮಂಚದ ಬದಿಯಲ್ಲಿದ್ದ ನಿಲುಗನ್ನಡಿಯಲ್ಲಿ ನಮ್ಮ ಉಗುರಿನ ಪ್ರತಿಬಿಂಬ ಉಗುರಿಗೇ ಅಂಟಿಕೊಂಡಂತೆ ಕಾಣುತ್ತಿತ್ತು. ಸ್ನಾನದ ಕೋಣೆಯ ಕನ್ನಡಿಯಲ್ಲಿ ಬಿಂಬ ಸರಿಯಾಗಿತ್ತು. ನನಗೇನೋ ತಲೆಯೊಳಗೆ ಹುಳ ಹೊಕ್ಕಿತು. ಈ ಕನ್ನಡಿಯಲ್ಲಿ ಮರ್ಕ್ಯುರಿ ಪದರ ಗಾಜಿನ ಮೇಲೆಯೇ ಇದೆ. ಅಂದರೆ ಇದು ಟೂ-ವೇ-ಗಾಜು. ಅತ್ತಕಡೆಯಿಂದ ಏನಾದರೂ ಕ್ಯಾಮರಾ ಇಟ್ಟಿರಬಹುದೆ? ತಿಳಿಯುವ ಸಾಧ್ಯತೆಯಿಲ್ಲ. ಆದರೂ ಅದರ ಬಗ್ಗೆ ಒಂದರ್ಧ ಗಂಟೆ ಮಾತಾಡಿ, ಆಚೆಯಿಂದ ಈಚೆಯಿಂದ ಉಗುರಿನ ಪ್ರತಿಬಿಂಬ ನೋಡಿ, ತಲೆಕೊಡಹಿಕೊಂಡೆ.

ಬಟ್ಟೆ ಬದಲಾಯ್ಸಿ, "ಪಾಪ ನಗರಿ" ಲಾಸ್ ವೇಗಾಸಿನ ಬೀದಿ ಸುತ್ತಲು ಹೊರಟೆವು. ಅದಾಗಲೇ ಗಂಟೆ ಐದೂಮುಕ್ಕಾಲಾದರೂ ಹೊರಗೆ ಧಗೆಯಿತ್ತು. "ಪಾಪದ ಬೇಗೆ" ಅನ್ನಬಹುದಾದ ಮರುಭೂಮಿಯ ಧಗೆ. ಮೊದಲು ವೇಗಾಸ್ ಬುಲೆವರ್ಡ್ ಉದ್ದಕ್ಕೆ ಒಂದು ಡ್ರೈವ್. ನಂತರ ಕಾರನ್ನು ನ್ಯೂಯಾರ್ಕ್ ನ್ಯೂಯಾರ್ಕ್ ಕ್ಯಾಸಿನೋದ ಪಾರ್ಕಿಂಗ್ ಲಾಟಿನಲ್ಲಿ ಇರಿಸಿ ನಡೆಯಲು ಹೊರಟೆವು.

ಬೆಲ್ಲಾಜಿಯೋ ಕ್ಯಾಸಿನೋ ಮುಂದಿನ ನೀರಿನ ಕಾರಂಜಿಗಾಗಿ ಕಾಲು ಗಂಟೆ ಕಾದೆವು. ಕಾದಿದ್ದಕ್ಕೂ ಸಾರ್ಥಕವಾಯ್ತು.


ಲಾಸ್ಯವಾಡುವ ಉದ್ದದ, ಎತ್ತರದ, ವೃತ್ತದ, ನೃತ್ಯದ ಕಾರಂಜಿಗಳು. ಓಡುವ, ನಲಿಯುವ, ಚಿಮ್ಮುವ, ಜಿಗಿಯುವ, ಹಾರುವ ನೀರಿನ ಬಾಣಗಳು. ಯಾವ ಕ್ಯಾಮರವೂ ಸಮರ್ಥವಾಗಿ ಅವನ್ನು ಸೆರೆಹಿಡಿಯಲಾರದು. ಎರಡು ಹಾಡು-ನೃತ್ಯಗಳನ್ನು ನೋಡಿ ಮುಂದೆ ಸಾಗಿ, ಬೀದಿ ದಾಟಿ ಅತ್ತಕಡೆಯಿಂದ ಪ್ಯಾರಿಸ್ ಕ್ಯಾಸಿನೋ ಮುಂದಿಂದ ನ್ಯೂಯಾರ್ಕ್... ಕ್ಯಾಸಿನೋವರೆಗೆ ಅಡ್ಡಾಡಿದೆವು.


ಲಾಸ್ ವೇಗಾಸ್ ಒಂಥರಾ ಓಯಸಿಸ್. ನೆವಾಡದ ಮರುಭೂಮಿ ಪ್ರದೇಶದಲ್ಲಿ ಜೀವಂತಿಕೆಯ ರಸಬುಗ್ಗೆ ಈ ನಗರ. ಜೂಜಾಟ ಇಲ್ಲಿನ ಮುಖ್ಯ ವಹಿವಾಟು. ಅದಕ್ಕಾಗಿ ಬಂದವರಿಗೆ ಊಟ-ವಸತಿಗಳ ಅನುಕೂಲದ ಜೊತೆಗೆ ಕಲ್ಪಿಸಿಕೊಳ್ಳಬಲ್ಲ ಎಲ್ಲಾ ರೀತಿಯ ಮನರಂಜನೆಯ ಆಯಾಮಗಳೂ ಇಲ್ಲಿವೆ. ಜೂಜಿನ ಇನ್ನೊಂದು ಮಗ್ಗುಲು ಅನ್ನಬಹುದಾದ ವೇಶ್ಯಾವೃತ್ತಿಗೆ ವೇಗಾಸ್ ಸ್ವರ್ಗ. ಯುವ ಪ್ರೇಮಿಗಳಿಗೆ ದಿಢೀರೆಂದು ಮದುವೆಯಾಗಲು ಇದೊಂದು ಅನುಕೂಲಕರ ತಾಣ (ಈಗ ಅಲ್ಲಿಯೂ ಮೊದಲೇ ಸ್ಥಳ, ಸಮಯ ಕಾದಿರಿಸಬೇಕಾಗಿದೆಯಂತೆ!). ಯಾವಾಗೆಂದರೆ ಆಗ ಮನಸು ಬಂದ ಕ್ಷಣದಲ್ಲೇ ಮದುವೆಯಾಗಲು ಅಲ್ಲಲ್ಲಿ ತಲೆಯೆತ್ತಿರುವ ಸಂಸ್ಥೆಗಳಿವೆ. ರಾತ್ರಿ ಎಷ್ಟು ಹೊತ್ತಿನವರೆಗಾದರೂ ಬೀದಿಯಲ್ಲಿ ಜನ ಸಂಚಾರ ನಿಲ್ಲುವುದಿಲ್ಲ, ಕ್ಷೀಣಿಸಬಹುದು. ಸಾಮಾನ್ಯ ಮರುಭೂಮಿಯ ವಾತಾವರಣ ನಿಯಮದಂತೆಯೇ, ಹಗಲಲ್ಲಿ ಹುರಿದು ಕಾಯಿಸಿ ಸುಡುವ ಬಿಸಿಲು, ರಾತ್ರೆಗೆ ಹದವಾಗಿ ನಡುಗಿಸುವ ಚಳಿ (ಪ್ರೇಮಿಗಳಿಗೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕೆ?). ಎರ್ರಾಬಿರ್ರಿ ನುಗ್ಗಿ ನುಸುಳುವ ಟ್ಯಾಕ್ಸಿಗಳು ನಮ್ಮಲ್ಲಿಯ ರಿಕ್ಷಾಗಳನ್ನು ನೆನಪಿಸುತ್ತವೆ. ಮನರಂಜನಾ ಶೋಗಳ ಫಲಕಗಳು ಎಲ್ಲಾ ಕಡೆ ಕಣ್ಣಿಗೆ ರಾಚುತ್ತವೆ. ಒಂದೊಂದು ಟ್ಯಾಕ್ಸಿಯೂ ಎರಡು ಮೂರು ಶೋಗಳ ಫಲಕಗಳನ್ನು ಹೊತ್ತಿರುತ್ತದೆ. ನಗ್ನತೆಗೆ ಇಲ್ಲಿ ನಾಚಿಕೆಯಿಲ್ಲ. ಅದಕ್ಕೆಂದೇ ಲಾಸ್ ವೇಗಾಸ್ "ಸಿನ್ ಸಿಟಿ".

ನಿರಂತರ ಚಟುವಟಿಕೆಯ ವೇಗಾಸಿನಲ್ಲಿ ಬೀದಿ ಕಾಮಣ್ಣರೂ, ಕುಡುಕರೂ, ವೇಶ್ಯೆಯರ ದಲ್ಲಾಳಿಗಳೂ (ದಾರಿಹೋಕರ ಮುಂದೆ ಬೆಲೆವೆಣ್ಣುಗಳ ಅರೆನಗ್ನ ಚಿತ್ರಗಳುಳ್ಳ ಕಾರ್ಡುಗಳನ್ನು ಹಿಡಿದು ಗಿರಾಕಿಗಳನ್ನು ಸೆಳೆಯುವುದೇ ಇವರ ಕೆಲಸ. ಎಲ್ಲ ವಯಸ್ಸಿನ, ಗಂಡು-ಹೆಣ್ಣು ದಲ್ಲಾಳಿಗಳೂ ಇದ್ದಾರೆ), ನಮ್ಮಂತೆ ಸುತ್ತಾಡುವವರೂ, ಎಲ್ಲ ನೋಡಲೆಂಬಂತೆ ಎಲ್ಲೆಂದರಲ್ಲಿ ನಿಂತು ಮುದ್ದಾಡುವವರೂ, ಎಲ್ಲ ವಯೋಮಾನದವರೂ, ಸ್ವಭಾವದವರೂ, ಎಲ್ಲ ಥರದ ಬಟ್ಟೆ ಬರೆ ತೊಟ್ಟವರೂ, ಕುಡಿದ ಅಮಲಿನಲ್ಲಿರುವ ಗೆಣತಿಯರನ್ನು ಸುಧಾರಿಸುತ್ತಾ ಸಾಗಿಸುತ್ತಿರುವ ಗೆಣೆಯರೂ, ಅಮಲಿನಿಂದಲೋ ಆಸೆಯಿಂದಲೋ ಭುಜದಿಂದ ಜಾರುತ್ತಿರುವ ಉಡುಗೆಯ ಮೋಹನಾಂಗಿಯರೂ, ಅವರೆಡೆ(ದೆ)ಗೆ ಕಳ್ಳ ನೋಟ ಹರಿಸುತ್ತಲೇ ತಂತಮ್ಮ ನಲ್ಲೆಯರ ಸೊಂಟ ಬಳಸಿ ನಡೆಯುವ ನಲ್ಲರೂ.... ಯಾರುಂಟು ಯಾರಿಲ್ಲ ಈ ವಿಲಾಸಿಗಳ ಸ್ವರ್ಗವೆಂದೇ ಕರೆಯಲ್ಪಡುವ ಪಾಪನಗರಿಯಲ್ಲಿ. ಆದರೂ ನಾವು ಸುತ್ತಿದ್ದು ವೇಗಾಸ್ "ಸ್ಟ್ರಿಪ್"ನಲ್ಲಿ, ನ್ಯೂಯಾರ್ಕ್... ಕ್ಯಾಸಿನೋದಿಂದ ಸುಮಾರು ಒಂದು ಮೈಲು ಪೂರ್ವಕ್ಕೆ ನಡೆದು ಮತ್ತೆ ಪಶ್ಚಿಮಕ್ಕೆ ಬಂದದ್ದು, ಅಷ್ಟೇ. ಅಂದು ಮೈಯನ್ನು ಹಾಸಿಗೆಗಿಟ್ಟು ತಲೆ ದಿಂಬನ್ನು ಮುಟ್ಟಿದಾಗ ಸಮಯ ಮರುದಿನಕ್ಕೆ ಹತ್ತಿರವಾಗಿತ್ತು.

Sunday 13 September, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೧

ಪಯಣದ ತಯಾರಿಯಲ್ಲಿ....

ಈ ಪ್ರವಾಸ ಹೋಗಬೇಕೆಂದು ಕಳೆದ ಡಿಸೆಂಬರಿನಲ್ಲಿಯೇ ಅಂದುಕೊಂಡಿದ್ದೆವು. ಝಿಯಾನ್ ಮತ್ತು ಬ್ರೈಸ್ ಕ್ಯಾನಿಯನ್‍ಗಳಿಗೆ ಡಿಸೆಂಬರಲ್ಲಿ ಹೋದಾಗ ಹಿಮಪಾತವಾಗುತ್ತಿತ್ತು. ಎಲ್ಲೆಲ್ಲೂ ಬಿಳಿಬಿಳಿಯೇ ತುಂಬಿತ್ತು. ಹಲವಾರು ಕಡೆ ನೋಡಲಾಗಿರಲಿಲ್ಲ. ಕ್ಯಾನಿಯನ್ (ಕಣಿವೆ, ಕಮರಿ)ಗಳ ಸೌಂದರ್ಯ ಒಂಥರಾ ಘೋರಾದ್ಭುತದಂತೆ ಅನ್ನಿಸಿತ್ತು. ಬೂದು ಆಕಾಶದಡಿಯಲ್ಲಿ ಕಂಡೂಕಾಣದ ನೋಟಗಳು ತೃಪ್ತಿಕೊಟ್ಟಿರಲಿಲ್ಲ.
ಝಿಯಾನ್ ಕ್ಯಾನಿಯನ್- ವರ್ಜಿನ್ ನದಿ


ಬ್ರೈಸ್ ಕ್ಯಾನಿಯನ್- ಹೂಡೂಸ್ ಮೇಲೆ ಹಿಮದ ರಾಶಿ

ಅದಕ್ಕೆಂದೇ ಮತ್ತೊಂದು ಪ್ರಯಾಣವನ್ನು ಯೋಜಿಸಿಕೊಂಡು, ಅವೆರಡರ ಜೊತೆಗೆ ಇನ್ನೂ ಮೂರು-ನಾಲ್ಕು ಸ್ಥಳಗಳನ್ನು ನೋಡಿಕೊಂಡು ಬರುವ ಆಲೋಚನೆ ಮಾಡಿದ್ದೆವು. ಆಗಸ್ಟ್ ೨೯ರ ಬೆಳಗ್ಗೆ ಹೊರಡುವಲ್ಲಿಯವರೆಗಿನ ಹಿನ್ನೋಟ ಈ ತುಣುಕು.


ಎರಡು ತಿಂಗಳಿಂದಲೇ ಪ್ಲಾನಿಂಗ್ ಶುರು: ಎಲ್ಲೆಲ್ಲಿ ಏನೇನು ನೋಡೋದು, ಎಷ್ಟು ದಿನ ಎಲ್ಲಿರೋದು, ಯಾವ್ಯಾವ ಹೋಟೆಲಲ್ಲಿ ಇಳಿದುಕೊಳ್ಳೋದು, ಊಟ-ತಿಂಡಿಗೇನು ಮಾಡೋದು... ಎಲ್ಲಕ್ಕೂ ಇಬ್ಬರೂ ತಲೆ ಹಾಕಿ ಲೆಕ್ಕ ಮಾಡಿ ಕೆಲವು ಜವಾಬ್ದಾರಿಗಳನ್ನು ನನ್ನವರೂ ಕೆಲವಷ್ಟನ್ನು ನಾನೂ ನಿಭಾಯಿಸಿಕೊಂಡೆವು. ಐದು ಕಡೆಗಳಲ್ಲಿ ಒಟ್ಟು ಆರು ದಿನಗಳ ಕ್ಯಾಂಪಿಂಗ್, ಒಂದೊಂದಾಗಿ ಮೂರು ದಿನ ಮೂರು ಕಡೆಗಳಲ್ಲಿ (ಮೂರು ದಿನಗಳ ಕ್ಯಾಂಪಿಂಗ್ ನಂತರದ ಒಂದಿನ) ಹೋಟೇಲ್ ವಾಸ- ಹೀಗೆ ಏರ್ಪಾಡು ಮಾಡಿಕೊಂಡೆವು.

ಹತ್ತು ದಿನಗಳಿಗಾಗುವಷ್ಟು ತಿಂಡಿಯ ಪೊಟ್ಟಣಗಳನ್ನು ತಂದಿಟ್ಟೆ. ಅಕ್ಕಿ ತೆಗೆದಿಟ್ಟೆ. ಕ್ಯಾಂಪಿಂಗಿಗಾಗಿ ಟೆಂಟ್, ಒಲೆ, ಹಾಸಿಗೆ, ಹೊದಿಕೆ, ದಿಂಬು, ಪಾತ್ರೆ, ನೀರಿನ ಫಿಲ್ಟರ್, ಮತ್ತಿತರ ಸಾಮಾನುಗಳನ್ನು ಜೋಡಿಸಿಕೊಂಡೆ. ಆಗಸ್ಟ್ ೨೮ರ ಶುಕ್ರವಾರ ಅಪರಾಹ್ನ, ಶುಂಠಿ, ಹಸಿಮೆಣಸು, ನೆಲಗಡ್ಲೆ ಒಗ್ಗರಣೆ ಮಾಡಿ ಉಪ್ಪಿಟ್ಟು ರವೆಯನ್ನು ಹಾಕಿ, ಗೋಡಂಬಿ, ಡ್ರೈ ತೆಂಗಿನ ತುರಿಯ ಜೊತೆ ತುಪ್ಪ ಹಾಕಿ ಘಮ್ಮೆನ್ನುವಂತೆ ಹುರಿದಿಡಬೇಕು (ಲೆಕ್ಕದಲ್ಲಿ ನೀರು ಕುದಿಸಿ, ಉಪ್ಪು ಹಾಕಿ, ಇದನ್ನು ಸೇರಿಸಿ, ಬೇಯಿಸಿದ್ರೆ ಉಪ್ಪಿಟ್ಟು ತಯಾರ್). ನಿಂಬೆ ಚಿತ್ರಾನ್ನಕ್ಕೆ ಮತ್ತು ಪುಳಿಯೋಗರೆಗೆ ಗೊಜ್ಜುಗಳನ್ನೇ ಮಾಡಿಡಬೇಕು (ಬಿಸಿ ಬಿಸಿ ಅನ್ನಕ್ಕೆ ಬೆರೆಸಿದ್ರೆ ಮುಗೀತ್). ನಿಂಬೆ ಹಿಂಡಿ ರಸ ಪುಟ್ಟ ಡಬ್ಬಿಯಲ್ಲಿ ಹಾಕಿಡಬೇಕು (ಉಪ್ಪಿಟ್ಟಿಗೆ ಬೇಕಲ್ಲ!). ಮನೆಯಲ್ಲಿ ಉಳಿಯಲಿದ್ದ ಟೊಮೇಟೋಗಳನ್ನು ತೊಳೆದು ಹೆಚ್ಚಿ ಫ್ರೀಝರಿಗೆ ಹಾಕಿಡಬೇಕು... ಈಯೆಲ್ಲ ಬೇಕುಗಳನ್ನು ಲೆಕ್ಕಹಾಕುತ್ತಾ, ಹಾಗಲಕಾಯಿ ಪಲ್ಯ ಮತ್ತು ಬೆಂಡೆಕಾಯಿ ಪಲ್ಯಗಳನ್ನೂ ಮೆಂತ್ಯ ಸೊಪ್ಪಿನ ಪರಾಠವನ್ನೂ ಮಾಡೋದಿಕ್ಕೆ ತರಕಾರಿ ಹೆಚ್ಚುತ್ತಿದ್ದೆ. ಎಂದೂ ಇಲ್ಲದ ಶನಿ ಅಂದೇ ವಕ್ಕರಿಸಿದಂತೆ, ಕರೆಂಟ್ ಹೋಯ್ತು, ಮೂರೂವರೆಗೆ! ಈ ಅಪಾರ್ಟ್‍ಮೆಂಟ್‍ಗಳಲ್ಲಿ ಕರೆಂಟ್ ಇಲ್ಲದಿದ್ರೆ ಮನೆಯೊಳಗೆ ಏನೂ ಸಾಗದು. ಎಲ್ಲವೂ ಕರೆಂಟ್ ಮಯ! ಹೆಚ್ಚುವ ಕೆಲಸಗಳನ್ನು ಮುಗಿಸಿ ನನ್ನವರ ದಾರಿ ಕಾದೆ.

ಐದೂಕಾಲರ ಸುಮಾರಿಗೆ ಬಂದರು. ಕಾಫಿಯೂ ಮಾಡೋಹಾಗಿಲ್ಲ. ಟ್ರಿಪ್ಪಿಗೆ ಹಾಲು, ಮೊಸರು, ಮಜ್ಜಿಗೆ, ಜ್ಯೂಸ್, ಐಸ್ ಬ್ಯಾಗ್ ಕೊಳ್ಳೋದಿತ್ತು; ಹೊರಟೆವು. ಹಾಗೇ ದಾರಿಯಲ್ಲಿ ಸ್ಟಾರ್‌ಬಕ್ಸ್ ಕಾಫಿ ತಗೊಂಡು ಅಂಗಡಿಗಳಿಗೆ ಭೇಟಿಯಿತ್ತು, ಆಯೆಲ್ಲ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಬಂದಾಗ ಏಳರ ಸುಮಾರು. ಕರೆಂಟ್ ಬಂದಿತ್ತು. ಪರಾಠ ಮಾಡಿಮುಗಿಸಿ, ಊಟ ಮಾಡಿ ನಂತರ ಎರಡು ಪಲ್ಯಗಳನ್ನೂ ಎರಡು ಗೊಜ್ಜುಗಳನ್ನೂ ಮಾಡಿ, ರವೆ ಹುರಿದು ಮರುದಿನ ಬೆಳಗಿನ ಉಪಾಹಾರಕ್ಕೂ ಅದರಲ್ಲೇ ಒಂದಿಷ್ಟು ರವೆ ಎತ್ತಿಟ್ಟು ಉಳಿದದ್ದನ್ನು ಕಟ್ಟಿಟ್ಟೆ. ಎಲ್ಲವನ್ನೂ ಮುಗಿಸಿದಾಗ ಗಂಟೆ ಒಂದೂಮುಕ್ಕಾಲು. ಮೂರೂವರೆಗೆ ಎದ್ದು ನಾಲ್ಕೂವರೆಗೆ ಹೊರಡೋಣ ಎಂದಿದ್ದವರು ಹನ್ನೆರಡೂವರೆಗೆ ನಿದ್ರಿಸಿದ್ದರು. ಈಗ ಮಲಗಿದ್ರೆ ನನಗಂತೂ ಮೂರೂವರೆಗೆ ಏಳೋದು ಅಸಾಧ್ಯ, ನನ್ನ ಗುಣ ನನಗ್ಗೊತ್ತು. ಒಂದಷ್ಟು ಬ್ಯಾಗುಗಳನ್ನು ಅತ್ತಿತ್ತ ಸರಿಸ್ಯಾಡಿ ರಿ-ಪ್ಯಾಕ್ ಮಾಡಿದೆ. ನಿದ್ದೆ ಮಾಡದೇ ಇರುವದಕ್ಕಾಗಿ ಹುಡುಕಿ ಹುಡುಕಿ ಏನೇನೋ ಸಣ್ಣಪುಟ್ಟ ಕೆಲಸಗಳನ್ನು ಮಾಡಿದೆ. ಸುಮ್ಮನೆ ಶವರ್ ಕೆಳಗೆ ಅರ್ಧ ಗಂಟೆ ನಿಂತೆ. ಫ್ರೆಶ್ ಅನ್ನಿಸಿತು. ಅಷ್ಟರಲ್ಲಿ ಇವರೂ ಎದ್ದರು. ಮುಖ ತೊಳೆದು, ಕಾಫಿ ಕುಡಿದು, ಉಪ್ಪಿಟ್ಟು ಮಾಡಿ ಡಬ್ಬಿಗೆ ತುಂಬಿಕೊಂಡು, ಕಾಫಿ ಮಾಡಿ ಫ್ಲಾಸ್ಕಿಗೆ ಹಾಕಿಕೊಂಡು ಎಲ್ಲವನ್ನೂ ಕಾರಿಗೆ ಲೋಡ್ ಮಾಡಿ ಗಾಡಿ ಬಿಟ್ಟೆವು- ಆಗಸ್ಟ್ ೨೯, ಶನಿವಾರ ಬೆಳಗಿನ ನಾಲ್ಕೂಮುಕ್ಕಾಲಿಗೆ.

ಟ್ರಿಪ್ ಮೀಟರ್ ಸೆಟ್ ಟು ೦೦೦.೦

Thursday 10 September, 2009

ಪ್ರವಾಸ ಪುರವಣಿ

ಸರಿಯಾಗಿ ಹತ್ತು ದಿನ, ಸರಾಸರಿ ದಿನಕ್ಕೆ ಮುನ್ನೂರಿಪ್ಪತ್ತು ಮೈಲುಗಳಂತೆ ಡ್ರೈವ್ ಮಾಡಿಕೊಂಡು ಅಮೆರಿಕದ ಪಶ್ಚಿಮ ಬದಿಯಲ್ಲಿರುವ ನೆವಾಡ (Nevada), ಅರಿಝೋನಾ (Arizona), ಯೂಟಾ (Utah) ರಾಜ್ಯಗಳಲ್ಲಿ ಸುತ್ತಾಡಿ, ಅಲ್ಲಿನ ಕೆಲವೊಂದು ನ್ಯಾಷನಲ್ ಪಾರ್ಕ್ಸ್, ಮಾನ್ಯುಮೆಂಟ್ಸ್ ನೋಡಿಕೊಂಡು ಬಂದೆವು. ಒಂದೊಂದೇ ಸ್ಥಳದ ಕುರಿತಾಗಿ, "ಪ್ರವಾಸ ಪುರವಣಿ" ಅನ್ನುವ ಹೆಸರಲ್ಲಿ ಇಲ್ಲಿ ಬರೆಯುವ ಹುನ್ನಾರವಿದೆ, ಕೆಲವೊಂದು ಫೋಟೋಗಳ ಸಹಿತ.

ಬೇರೊಂದು ಬರವಣಿಗೆಯಲ್ಲೂ ತೊಡಗಿಕೊಂಡಿರುವುದರಿಂದ ಒಂದಿಷ್ಟು ತಡವಾಗಬಹುದು. ನಿಯಮಿತವಾಗಿ ಬರಹಗಳು ಬಾರದಿರಬಹುದು. ಓದುಗರು ಮುನಿಸಿಕೊಳ್ಳದೆ ಮನ್ನಿಸುವಿರೆಂದು ಆಶಿಸುತ್ತೇನೆ.

ನಿಮ್ಮ ಕುತೂಹಲ ಮತ್ತು ಔದಾರ್ಯವನ್ನು ಕಾದಿರಿಸಿಕೊಳ್ಳುತ್ತಾ....