ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday, 27 September, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೩

ಗ್ರ್ಯಾಂಡ್ ಕ್ಯಾನಿಯನ್ ಪಡುದಂಡೆ- ಕಣಿವೆಯ ಮೇಲೊಂದು ಗಾಜಿನ ಲಾಳ....

ಆಗಸ್ಟ್ ೩೦, ಭಾನುವಾರ.
ಲಾಸ್ ವೇಗಾಸಿನಿಂದ ಬೆಳಗ್ಗೆ ಬೇಗ ಎದ್ದು ಹೊರಡೋಣ ಎಂದುಕೊಂಡಿದ್ದೆವು. ಹಿಂದಿನ ದಿನದ ಸುಸ್ತು ನಮ್ಮನ್ನು ಬಿಡಲು ಸಿದ್ಧವಿರಲಿಲ್ಲ. ತುಸು ತಡವಾಗಿಯೇ, ಏಳೂಕಾಲಕ್ಕೆ ಹೊರಟೆವು. ಗ್ರ್ಯಾಂಡ್ ಕ್ಯಾನಿಯನ್ ಕಡೆ ಹೋಗುವ ಹೈವೇ-೯೩ "ದ ವರ್ಲ್ಡ್ ಫೇಮಸ್" ಹೂವರ್ ಡ್ಯಾಮ್ ಮೇಲೆ ಹಾದು ಹೋಗುತ್ತದೆ. ಪ್ರೇಕ್ಷಣೀಯ "ಯಾತ್ರಾ" ಸ್ಥಳಗಳಲ್ಲಿ ಈ ಡ್ಯಾಮ್ ಕೂಡ ಒಂದು. ಇದರ ನಡುವೆಯೇ ನೆವಾಡಾ ಅರಿಝೋನಾ ರಾಜ್ಯಗಳ ಗಡಿಯೂ ಹಾದುಹೋಗುತ್ತದೆ. ಅಲ್ಲಿನ ವಿಸಿಟರ್ ಸೆಂಟರ್, ಅಣೆಕಟ್ಟಿನ ಟೂರ್, ಕೆಲವೊಂದು ನೋಟಕ ಸ್ಥಾನಗಳು (ವ್ಯೂ ಪಾಯಿಂಟ್)- ಎಲ್ಲವನ್ನೂ ಹದಿಮೂರು ವರ್ಷಗಳ ಹಿಂದೊಮ್ಮೆ ನೋಡಿದ್ದೆವು. ಈ ಸಲ ಎತ್ತರದ ಒಂದು ನೋಟಕ ಸ್ಥಾನದಿಂದ ಕೆಲವು ಚಿತ್ರಗಳನ್ನು ಮಾತ್ರ ತೆಗೆದೆವು; ಅಣೆಕಟ್ಟಿನ ವಿಸಿಟರ್ ಸೆಂಟರ್ ತೆರೆದಿರಲಿಲ್ಲ (ಸಮಯ ಆಗಿರಲಿಲ್ಲ). ಈ ಅಣೆಕಟ್ಟಿನ ಮೇಲೆ ವಾಹನ ಸಂಚಾರವನ್ನು ಕಡಿಮೆಗೊಳಿಸುವ ಸಲುವಾಗಿ ಅಲ್ಲೊಂದು ಹೊಸ ರಸ್ತೆಯ ನಿರ್ಮಾಣವಾಗುತ್ತಿದ್ದು, ಅದರ ಭಾಗವಾದ ಸೇತುವೆ ರಚನೆಯ ಹಂತ ನೋಡಲು ಕುತೂಹಲಕಾರಿಯಾಗಿದೆ. ಅದನ್ನೂ ಹಿನ್ನೆಲೆಯಲ್ಲಿ ಒಳಗೊಂಡ ಅಣೆಕಟ್ಟಿನ ಚಿತ್ರವೊಂದು ನಿಮಗಾಗಿ:


ನೋಡಾಯ್ತಾ? "ರೈಟ್ ಪೋಯಿ...."

ಗ್ರ್ಯಾಂಡ್ ಕ್ಯಾನಿಯನ್ ಅನ್ನುವುದು ಕೊಲೆರಾಡೋ ನದಿಯನ್ನು ತನ್ನ ಪಾತಳಿಯಲ್ಲಿರಿಸ್ಕೊಂಡಿರುವ ೨೭೭ ನದಿ-ಮೈಲು ಉದ್ದದ, ಸರಾಸರಿ ೧೦ ಮೈಲು ಅಗಲದ, ಸರಾಸರಿ ೫,೦೦೦ ಅಡಿ ಆಳದ (ಅತ್ಯಂತ ಅಗಲದ ಭಾಗ ೧೮ ಮೈಲು ಅಗಲವೂ, ಅತ್ಯಂತ ಆಳವಿದ್ದಲ್ಲಿ ಒಂದು ಮೈಲು (೫,೨೮೦ ಅಡಿ) ಆಳವೂ ಇರುವ) ಕಣಿವೆ. ಇತ್ತೀಚಿನವರೆಗೆ ಇದರ ಉತ್ತರ ದಂಡೆ ಮತ್ತು (ಜನಪ್ರಿಯ) ದಕ್ಷಿಣ ದಂಡೆ ಮಾತ್ರ ನೋಡುಗರಿಗೆ ಲಭ್ಯವಿದ್ದವು. ಕಣಿವೆಯ ನೈರುತ್ಯ ಭಾಗದಲ್ಲಿ ಒಂದು ಮಿಲಿಯನ್ ಎಕರೆ ಭೂಮಿ, ೧೦೮-ನದಿಮೈಲು ಉದ್ದವು ‘ಹ್ವಾಲಪಾಯ್ ಮೂಲನಿವಾಸಿ ಪಂಗಡ’ಕ್ಕೆ ಸೇರಿದೆ.


ಈ ‘ಗ್ರ್ಯಾಂಡ್ ಕ್ಯಾನಿಯನ್ ಪಶ್ಚಿಮ ದಂಡೆ’ಯಲ್ಲಿ ೨೦೦೭ರಲ್ಲಿ ಕುದುರೆ ಲಾಳ ವಿನ್ಯಾಸದ ಒಂದು ರಚನೆಯೆದ್ದಿತು. ಹತ್ತಡಿ ಅಗಲದ ಈ ‘ಲಾಳ’ದ ತಳಕ್ಕೆ ಗಾಜಿನ ಪದರಗಳನ್ನು ಮಾತ್ರ ಹೊದಿಸಲಾಗಿದ್ದು ಇದರಲ್ಲಿ ನಿಂತವರಿಗೆ ದಂಡೆಯಿಂದ ೭೦ ಅಡಿ ದೂರದಲ್ಲಿ, ನಾಲ್ಕುಸಾವಿರ ಅಡಿ ಆಳದ ಕಮರಿಯ ಮೇಲೆಯೇ ನೇರವಾಗಿ ನಿಂತು ನೋಡಿದ ರೋಮಾಂಚಕ ಅನುಭವ. ಏಳು ಮೈಲುಗಳ ಕಲ್ಲು-ಮಣ್ಣಿನ ರಸ್ತೆಯೂ ಸೇರಿದಂತೆ, ವೇಗಾಸಿನಿಂದ ೧೧೬ ಮೈಲಿಗಳ ದಾರಿ ಹಾದು ಈ ಪಶ್ಚಿಮ ದಂಡೆಯನ್ನು ನಾವು ತಲುಪಿದಾಗ ಬೆಳಗಿನ ಹತ್ತೂಕಾಲರ ಸಮಯ. ಇಲ್ಲಿನ ಮುಖ್ಯ ವಿಸಿಟರ್ ಸೆಂಟರಿನ ಬಳಿಯೇ ವಾಹನ ನಿಲ್ಲಿಸಿ, ಅವರದೇ ಬಸ್ಸಿನಲ್ಲಿ ಐದು ಮೈಲು ಹೋಗಬೇಕು, ಲಾಳಾಕಾರದ ಈ ‘ಗ್ಲಾಸ್ ಬ್ರಿಜ್’ ನೋಡಲು. ಇಲ್ಲಿಂದಲೇ ವೆಸ್ಟ್ ರಿಮ್ ಹೆಲಿಕಾಪ್ಟರ್ ಟೂರ್, ಏರೋಪ್ಲೇನ್ ಟೂರ್, ಜೀಪ್ ಟೂರ್, ಎಲ್ಲವೂ ಲಭ್ಯ.


ಪ್ರವೇಶ ಶುಲ್ಕ/ ಬಸ್ಸಿನ ಶುಲ್ಕ ಹಾಗೂ ‘ಸ್ಕೈ-ವಾಕ್’/ ‘ಗ್ಲಾಸ್ ಬ್ರಿಜ್’ ಶುಲ್ಕ ಮತ್ತು ತೆರಿಗೆ ಇತ್ಯಾದಿ ಸೇರಿ ಒಟ್ಟು ಎಪ್ಪತ್ತೈದು ಡಾಲರು ಕೊಟ್ಟು ‘ಸ್ಕೈ-ವಾಕ್’ ಮೇಲೆ ಬರುವಾಗ, ಸಿಮೆಂಟ್ ನೆಲದಿಂದ ಗಾಜಿನ ಮೇಲೆ ಹೆಜ್ಜೆಯಿರಿಸುವಾಗ, ಕೆಲವರಿಗೆ ಒಮ್ಮೆ ಎದೆಬಡಿತ ತಪ್ಪುವುದಷ್ಟೇ ಆದರೆ, ನೇರವಾಗಿ ನಡುವೆಯೇ ನಡೆಯಲಾಗದೆ ಬದಿಯ ಉಕ್ಕಿನ ಪಟ್ಟಿಯಲ್ಲೇ ನಡೆಯುವವರೂ, ಒಂದಿಷ್ಟು ತೆವಳಿ ನಂತರ ನಡೆಯುವವರೂ ಅಲ್ಲಿದ್ದರು. ಈ ಗಾಜಿನ ಲಾಳದ ಮೇಲೆ ನಮ್ಮ ಕ್ಯಾಮರಾ, ಕ್ಯಾಂಕಾರ್ಡರ್, ಸೆಲ್ ಫೋನ್, ದಪ್ಪದ ಭಾರದ ಯಾವುದೇ ಪರ್ಸ್, ಕೈಚೀಲ, ಬೆನ್ನ ಚೀಲ, ನೀರಿನ/ ಜ್ಯೂಸಿನ ಬಾಟಲ್ಸ್- ಏನನ್ನೂ ಒಯ್ಯುವಂತಿಲ್ಲ. ಮೊದಲೇ ಒಂದೆಡೆ ಅವರು ಒದಗಿಸುವ ಲಾಕರಿನಲ್ಲಿರಿಸಬೇಕು. ನಮ್ಮ ಶೂ, ಚಪ್ಪಲಿಗಳಿಗೂ ಅವರೇ ಕೊಡುವ ಸ್ಪೆಷಲ್ ಕವಚ ಧರಿಸಿಯೇ ಅದರ ಮೇಲೆ ನಡೆಯಬೇಕು. ನಮಗೆ ಬೇಕೆಂದರೆ, ಆ ಕ್ಯಾಂಟಿಲಿವರ್ ರಚನೆಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಅವರೇ ಇಟ್ಟಿರುವ ಎರಡು ಸ್ಥಾವರ ಕ್ಯಾಮೆರಾಗಳಲ್ಲಿ ಮತ್ತು ಒಂದು ಜಂಗಮ ಕ್ಯಾಮೆರಾದಲ್ಲಿ ಅಲ್ಲಿನವರೇ ನಮ್ಮ ಚಿತ್ರಗಳನ್ನು ತೆಗೆಯುತ್ತಾರೆ. ನಂತರ ಬಳಿಯ ಕಟ್ಟಡದೊಳಗಿರುವ ಅಂಗಡಿಯಲ್ಲಿ ಅವನ್ನು ನೋಡಿ, ಬೇಕೆನಿಸಿದರೆ ಕೊಂಡುಕೊಳ್ಳಬೇಕು.


ಈಗಲ್ ಪಾಯಿಂಟಿನಿಂದ ಕಾಣುವ ಸ್ಕೈ-ವಾಕ್/ ಗ್ಲಾಸ್ ಬ್ರಿಜ್/ ಗಾಜಿನ ಲಾಳ


ಸ್ಕೈ-ವಾಕ್ ಬದಿಯಲ್ಲೇ ಕಾಣುವ ಈಗಲ್ ಪಾಯಿಂಟ್- ಇದರ ಮಧ್ಯಭಾಗ ಗಮನಿಸಿದರೆ ರೆಕ್ಕೆ ಬಿಡಿಸಿರುವ ಹದ್ದಿನಂತಿದೆ.

ಸ್ಕೈ ವಾಕ್ ಮೇಲೆ ಒಂದು ಬಾರಿಗೆ ೧೨೦ ಜನರನ್ನು ಮಾತ್ರವೇ ಹೋಗಲು ಬಿಡುತ್ತಾರೆ. ನಾವು ಹೋದಾಗ ಬೆಳಗಿನ ಸಮಯವಾದ್ದರಿಂದ ಅಷ್ಟೇನೂ ಜನರಿರರಿಲ್ಲ. ಸುಮಾರು ಒಂದರ್ಧ ಗಂಟೆ ಅಲ್ಲಿದ್ದು ನಂತರ ಅಲ್ಲಿಂದ ಹೊರಗೆ- ಪಕ್ಕದ ಅಂಗಡಿಯೊಳಗೆ ಬಂದೆವು. ನಮ್ಮ ಫೋಟೋ ಕೊಂಡು, ಬಸ್ ಹಿಡಿದು, ಅಲ್ಲಿಂದ ಮುಂದಿನ ಗ್ವಾನೋ ಪಾಯಿಂಟ್ ಕಡೆ ಹೋಗಿ, ನಮ್ಮ ಡಬ್ಬಿಯೂಟವನ್ನು ಅಲ್ಲಿಯೇ ತಿಂದೆವು. ಹೈ ಪಾಯಿಂಟ್ ಹೈಕ್ ಮಾಡುತ್ತಾ ಕಣಿವೆಯ ಅಡ್ಡಲಾಗಿ ೧೯೫೮ರಲ್ಲಿ ಕಟ್ಟಲ್ಪಟ್ಟಿದ್ದ ೮,೮೦೦ ಅಡಿ ಉದ್ದದ ಒಂದೇ ಹರವಿನ ತೂಗುಗೋಲದ (ಸಿಂಗಲ್ ಸ್ಪಾನ್ ಟ್ರಾಂವೇ) ಪಳೆಯುಳಿಕೆಯನ್ನು ನೋಡಿದೆವು.

ಮತ್ತೆ ಬಸ್ ಹಿಡಿದು, ಮುಖ್ಯ ವಿಸಿಟರ್ ಸೆಂಟರಿನ ಬಳಿ ಬಂದೆವು. ಇಲ್ಲಿಂದ ಹ್ವಾಲಪಾಯ್ ರಾಂಚ್ ಕಡೆ ಬಸ್ ಇದೆ. ಅಲ್ಲಿಂದಲೂ ಜೀಪ್ ಟೂರ್ ಲಭ್ಯವಿದೆ. ರಾತ್ರೆ ಉಳಿದುಕೊಳ್ಳುವ ವ್ಯವಸ್ಥೆಯೂ ಅಲ್ಲಿದೆ. ನಾವು ರಾಂಚ್ ನೋಡಿ ಬಂದು, ಪಡುದಂಡೆಗೆ ಟಾಟಾ ಎಂದು ಪೂರ್ವಾಭಿಮುಖವಾಗಿ ಗ್ರ್ಯಾಂಡ್ ಕ್ಯಾನಿಯನ್ ದಕ್ಷಿಣ ದಂಡೆಯತ್ತ ಹೊರಟೆವು; ಸಮಯ ಅಪರಾಹ್ನ ಒಂದೂವರೆ.

6 comments:

shivu.k said...

ಮೇಡಮ್,

ಪ್ರವಾಸ ಲೇಖನ ತುಂಬಾ ಚೆನ್ನಾಗಿದೆ. ನಾನು ನಿಮ್ಮ ಪಕ್ಕಕುಳಿತು ಎಲ್ಲಾ ಅನುಭವಿಸುತ್ತಿದ್ದೇನೇನೋ ಅನ್ನಿಸುತ್ತಿದೆ..ಮುಂದುವರಿಯಲಿ...

ಸುಪ್ತದೀಪ್ತಿ suptadeepti said...

ನಿಮ್ಮ ಪ್ರೋತ್ಸಾಹಕ್ಕೆ ವಂದನೆಗಳು ಶಿವು. ನೀವೆಲ್ಲರೂ ಓದುತ್ತಿದ್ದೀರೆಂದೇ ಬರೆಯಲು ನನಗೂ ಹುಮ್ಮಸ್ಸು.

sritri said...

ಗಾಜಿನ ಲಾಳದ ಮೇಲೆ ನಿಂತು ಸಾವಿರಾರು ಅಡಿ ಆಳದ ಕಂದಕವನ್ನು ವೀಕ್ಷಿಸುವ ಅನುಭವ ನಿಜಕ್ಕೂ ರೋಮಾಂಚಕಾರಿಯಾಗಿರಬೇಕು!


ಚಿತ್ರಗಳು ವಿವರವನ್ನು ಕಣ್ಮುಂದೆ ಕಟ್ಟಿಕೊಳ್ಳಲು ಬಹಳ ಸಹಕಾರಿಯಾಗಿವೆ.

ಸುಪ್ತದೀಪ್ತಿ suptadeepti said...

ಥ್ಯಾಂಕ್ಸ್ ವೇಣಿ. ಇನ್ನೂ ಕೆಲವು ಚಿತ್ರಗಳನ್ನು ಹಾಕಬಹುದಿತ್ತು, ಹಾಕುತ್ತೇನೆ.

ಭಾರ್ಗವಿ said...

ನನಗೆ ಗ್ರಾಂಡ್ ಕ್ಯಾನಿಯನ್ ತುಂಬಾ ಇಷ್ಟವಾಗಿತ್ತು. ಆಗಿನ್ನೂ ಈ ಗಾಜಿನ ಲಾಳ ಇರಲಿಲ್ಲ . ನಿಮ್ಮ ವಿವರಣೆ ಓದಿದ ಮೇಲೆ ಮತ್ತೆ ಹೋಗಬೇಕೆನಿಸಿದೆ. ನಾನು ಹೇಗೆ ಅದರ ಮೇಲೆ ಹೋಗ್ತೇನೆ ಅನ್ನೋ ಕಲ್ಪನೆಯೇ ನಗು ತರಿಸುತ್ತಿದೆ.(ನಡೆಯುತ್ತೇನೋ,ತೆವಳುತ್ತೇನೋ ಅಂತಾ).

ಸುಪ್ತದೀಪ್ತಿ suptadeepti said...

ಭಾರ್ಗವಿ, ನೀನು ಆ ಗಾಜಿನ ಲಾಳದ ಮೇಲೆ ಹೇಗೆ ಹೋಗುತ್ತೀ ಅನ್ನುವ ಕುತೂಹಲ ನನಗೂ ಆಗ್ತಿದೆ ಈಗ. ನೀನು ಹೋದಾಗ ಜೊತೆಗಿರುತ್ತೇನೆ; ನಿನ್ನ ನೋಡಲು, ಕೈ ಹಿಡಿದು ಜೊತೆಕೊಡಲು. ಆಯ್ತಾ?

ಮತ್ತೆ, ನೆನಪಿರಲಿ- ಇದು ಪಡುದಂಡೆಯಲ್ಲಿದೆ. ಜನಪ್ರಿಯವಾಗಿರುವ ದಕ್ಷಿಣ ದಂಡೆಯಲ್ಲಲ್ಲ. "Grand Canyon Skywalk" ಅನ್ನುವ ಸರ್ಚ್ ಹಾಕಿದರೆ ಅದರ ವಿವರಗಳು ಸಿಗುತ್ತವೆ.