ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 26 November, 2007

ಆತ್ಮ ಚಿಂತನ-೦೯

ಆಸ್ಟಿನ್ ನಗರದಲ್ಲಿ ನನ್ನ ಆತ್ಮ....ಹೌದು; ನನ್ನ ಆತ್ಮ, ನನ್ನೊಡನೆ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ಒಂದಿಷ್ಟು ತಿರುಗಾಡಿತು. ಮೆಚ್ಚಿತು. ಬೆರಗುಗೊಂಡಿತು. ಗಾಬರಿಯಾಯ್ತು. ತನ್ಮಯವಾಯ್ತು. ತಲ್ಲೀನವಾಯ್ತು. ಇಷ್ಟೆಲ್ಲ ನಡೆದದ್ದು ೨೦೦೭ರ ಅಕ್ಟೋಬರ್ ೧೪ರಿಂದ ೨೧ರ ನಡುವೆ. ಮತ್ತೆ ನನ್ನಾತ್ಮ ನನ್ನೊಡನೆ ಕ್ಯಾಲಿಫೋರ್ನಿಯಾದ ಮನೆಗೆ ಮರಳಿತು.ಡಾ. ಬ್ರಯಾನ್ ವೈಸ್ ಮತ್ತವರ ಪತ್ನಿ ಕೆರೋಲ್ ನಡೆಸಿಕೊಟ್ಟ "ರಿಗ್ರೆಷನ್ ಥೆರಪಿ ಟ್ರೈನಿಂಗ್- ವರ್ಕ್ ಶಾಪ್" ನನ್ನನ್ನು ಸೆಳೆದ ಅಯಸ್ಕಾಂತ. ನನ್ನ ಕಾಂತನೊಡನೆ ಅಲ್ಲಿಗೆ ಸಾಗಿದ್ದೆ, `ವಿತ್ ಓಪನ್ ಮೈಂಡ್'. ಸೋಮವಾರದಿಂದ ಶುಕ್ರವಾರದ ತನಕ ನಡೆದ ಕಾರ್ಯಾಗಾರದಲ್ಲಿ ಬುಧವಾರ ಸಂಜೆ ನಡೆದ ಘಟನೆಯ ನಿರೂಪಣೆ ಈಗಾಗಲೇ ನೀಡಿದ್ದಾಗಿದೆ. ಅದನ್ನು ಹೊರತಾಗಿ ಉಳಿದ ದಿನಗಳ ನಿರೂಪಣೆ ಈಗ:

ಭಾನುವಾರ ಮಧ್ಯಾಹ್ನವೇ ಕಾರ್ಯಾಗಾರ ನಡೆಯಬೇಕಾದ "ದ ಕ್ರಾಸಿಂಗ್ಸ್" ಅನ್ನುವ ಆಶ್ರಮದಂಥ ರಿಸಾರ್ಟಿಗೆ ಹೋಗಿ ನಮ್ಮ ನೋಂದಣಿ ಮಾಡಿಸಿಕೊಂಡು ಬಂದೆವು. ಸ್ವಲ್ಪ ಸೆಖೆ ಇದ್ದರೂ ವಾತಾವರಣ ಹಿತವಾಗಿತ್ತು. ಸಂಜೆ ದಕ್ಷಿಣ ಆಸ್ಟಿನ್ ಭಾಗದಲ್ಲಿರುವ "ಝಿಲ್ಕರ್ ಬೊಟಾನಿಕಲ್ ಗಾರ್ಡನ್" ನೋಡಿಕೊಂಡು ಬಂದು, ರಾತ್ರೆ ಗೆಳೆಯರೊಬ್ಬರ ಮನೆಯಲ್ಲಿ ಊಟ ಮುಗಿಸಿ, ನಮ್ಮ ಹೋಟೆಲ್ ರೂಮಿಗೆ ಮರಳಿದ್ದಾಯಿತು. ಮರುದಿನದ ನಿರೀಕ್ಷೆ ನನ್ನಲ್ಲಿ ತುಂಬಿತ್ತು, ಕುತೂಹಲ ಅದಕ್ಕಿಂತ ಹೆಚ್ಚಿತ್ತು.

ಸೋಮವಾರ ಬೆಳಗ್ಗೆ "ದ ಕ್ರಾಸಿಂಗ್ಸ್" ತಲುಪಿದಾಗ ಕಾರ್ಯಾಗಾರ ನಡೆಯಬೇಕಿದ್ದ ಕೋಣೆ ತುಂಬಿತ್ತು. ಸುಮಾರು ನೂರಿಪ್ಪತ್ತಕ್ಕೂ ಮಿಕ್ಕಿದ ದೊಡ್ಡ ಗುಂಪು. `ತೀವ್ರ ಆಸಕ್ತಿ' ಒಂದು ಕಾರಣವಾದರೆ, `ಸುಮ್ಮನೇ ಕುತೂಹಲ'ವೂ ಸೇರಿದಂತೆ ಹಲವಾರು ಕಾರಣಗಳು. ಎಲ್ಲರ ಔಪಚಾರಿಕ ಪರಿಚಯದ ಬಳಿಕ ಡಾ. ವೈಸ್ ಸಣ್ಣ ಪ್ರಸ್ತಾವನೆಯ ಮಾತುಗಳನ್ನಾಡಿ "ಗ್ರೂಪ್ ರೆಗ್ರೆಷನ್" ನಡೆಸಿದರು. ಅತಿ ಮಂದ ಬೆಳಕಿನಲ್ಲಿ, ಹಿತವಾದ ಸಂಗೀತದ ಹಿನ್ನೆಲೆಯಲ್ಲಿ, ನಿಧಾನವಾಗಿ ನಮ್ಮನ್ನೆಲ್ಲ "ರಿಲ್ಯಾಕ್ಸ್‍ಡ್ ಸ್ಟೇಟ್"ಗೆ ಒಯ್ಯುವ ನಿರ್ದೇಶಕರಾದರು. ಅವರ ಸ್ವರದಲ್ಲಿ, ಮಾತಿನಲ್ಲಿ ಇರುವ ಗಾಂಭೀರ್ಯ, ಆಳ, ಮತ್ತು ಸ್ಥಿರತೆಗಳಿಗೆ ನಮ್ಮನ್ನು ನಿರಾಳ ಸ್ಥಿತಿಗೆ ಒಯ್ಯುವ ಶಕ್ತಿಯಿತ್ತು.

ಹಂತ-ಹಂತವಾಗಿ ನಿರಾಳ ಸ್ಥಿತಿ ತಲುಪಿದ ಗುಂಪನ್ನು ಕುರಿತು ಡಾ. ವೈಸ್- ಬಾಲ್ಯದ ನೆನಪಿನ ತುಣುಕುಗಳನ್ನು ನೆನಪಿಸಿಕೊಳ್ಳುವಂತೆಯೂ, ಅದಕ್ಕೂ ಹಿಂದೆ ತಾಯಿಯ ಗರ್ಭದಲ್ಲಿದ್ದಾಗಿನ ನೆನಪುಗಳನ್ನು ತಂದುಕೊಳ್ಳುವಂತೆಯೂ, ನಂತರ ಹಿಂದಿನ ಯಾವುದೋ ಜನ್ಮದ ನೆನಪಿನ ಪುಟಗಳನ್ನು ತೆರೆದುಕೊಳ್ಳುವಂತೆಯೂ ನಿರ್ದೇಶಿಸಿದರು. ಅಂತೆಯೇ ನಿಧಾನವಾಗಿ ಪ್ರಸ್ತುತಕ್ಕೆ ಮರಳುವಂತೆ ಸೂಚಿಸುತ್ತಾ, ಎಲ್ಲರನ್ನೂ ವಾಸ್ತವಕ್ಕೆ ಕರೆತಂದರು. ನಿಧಾನವಾಗಿ ಕಣ್ಣು ತೆರೆದ ಎಲ್ಲರ ಮುಖದಲ್ಲಿ ಏನೇನೋ ಮಿಶ್ರ ಭಾವನೆಗಳು. ಸುಮಾರು ಅರ್ಧಕ್ಕರ್ಧ ಜನರಿಗೆ ಯಾವುದೇ ಅನುಭವ ಆಗಿರಲಿಲ್ಲ (ನಾವಿಬ್ಬರೂ ಈ ಗುಂಪಿನವರು). ಮತ್ತೆ ಕೆಲವರಿಗೆ ಬಾಲ್ಯದ ನೆನಪುಗಳ ಸಣ್ಣ ತುಣುಕುಗಳು ಹಿಂದೆಂದೂ ನೆನಪಿಸಿಕೊಂಡಿರದ ವಿವರಗಳಲ್ಲಿ ಕಂಡಿದ್ದವು. ಇನ್ನೂ ಕೆಲವರಿಗೆ ತಾಯಿಯ ಗರ್ಭದಲ್ಲಿದ್ದಾಗಿನ ನೆನಪೂ ಬಂದಿತ್ತು. ಮತ್ತೆ ಕೆಲವೇ ಕೆಲವರಿಗೆ ಹಿಂದಿನ ಜನ್ಮದ ನೆನಪಿನ ತುಣುಕು (ಇರಬೇಕೆಂದು ಅವರ ನಂಬಿಕೆ) ಮೂಡಿತ್ತು. ಕೆಲವಾರು ಜನರ ಅನುಭವಗಳನ್ನು ಕೇಳಿದ ಡಾ. ವೈಸ್ ಮೊದಲ ಚಹಾ ವಿರಾಮಕ್ಕೆ ಕರೆ ನೀಡಿದರು.

ಅಲ್ಲೇ ಲಾಬಿಯಲ್ಲಿ ಚಹಾ ಹೀರುತ್ತಿದ್ದೆವು, ನಾವಿಬ್ಬರೂ. ಸುಂದರ ಅಮೆರಿಕನ್ ಮಹಿಳೆ ಒಬ್ಬಳು ನಮ್ಮ ಬಳಿ ಸಾರಿ, "ಆರ್ ಯೂ ಇಂಡಿಯನ್ಸ್?" ಅಂದಳು. ಹೌದೆಂದೆವು. ತನ್ನ ಹೆಸರು ಜೆನ್, ನ್ಯೂ ಮೆಕ್ಸಿಕೋ ರಾಜ್ಯದ ಸಾಂಟ-ಫೇ ಊರಿನವಳೆಂದು ಪರಿಚಯಿಸಿಕೊಂಡಳು. ತನಗೊಂದು ಪ್ರಶ್ನೆಯಿದೆ ಅಂದವಳು, "ವಾಟ್ ಡಸ್ ಇಟ್ ಮೀನ್ ಬೈ ಸ-ರಾಸ್-ವಟಿ? ಈಸ್ ದಟ್ ಎ ನೇಮ್? ಈಸ್ ದಟ್ ಎನಿ ಗಾಡ್ಸ್ ನೇಮ್?" ಮೊದಲಿಗೆ "ಸ-ರಾಸ್-ವಟಿ" ಅರ್ಥವಾಗದಿದ್ದರೂ ಕ್ಷಣಗಳಲ್ಲಿ "ಸರಸ್ವತಿ"ಯನ್ನು ಕಂಡುಕೊಂಡೆವು. ಸೂಕ್ಷ್ಮವಾಗಿ ಅರ್ಥ ಅವಳಿಗೆ ತಿಳಿಸಿದಾಗ ಅವಳಿಗೆ ಆಶ್ಚರ್ಯ, ಆನಂದ. ಅವಳೆಂದೂ ಆ ಹೆಸರನ್ನು ಕೇಳಿರಲಿಲ್ಲ, ಅವಳಿಗೆ ಎಂದೂ ಭಾರತೀಯ ಸ್ನೇಹಿತರಿರಲಿಲ್ಲ. ಆದರೂ ಇಂದಿನ ರಿಗ್ರೆಷನ್ ಸಮಯದಲ್ಲಿ ಯಾವುದೇ ನೆನಪು ಮೂಡಿಲ್ಲದಿದ್ದರೂ, ಈ ಹೆಸರು ಪದೇ ಪದೇ ಅವಳ ಮನದಲ್ಲಿ ಮೂಡಿತಂತೆ, ಅವಳ ಕಿವಿಗಳಲ್ಲಿ ರಿಂಗಣಿಸಿತಂತೆ. ನನಗೋ ಅಚ್ಚರಿ, ಸಂಶಯ ಎರಡೂ.ವಿರಾಮದ ಬಳಿಕ ಮತ್ತೆ ಸೇರಿದಾಗ ಡಾ. ವೈಸ್ ಹಲವಾರು ವಿವರಣೆಗಳನ್ನು ನೀಡಿದರು. ಹಿಪ್ನಾಸಿಸ್ ಮತ್ತು ರಿಗ್ರೆಷನ್ ಇವೆರಡೂ ಒಂದೇ ಚಿಕಿತ್ಸಾ ವಿಧಾನದ ಮಜಲುಗಳೆಂದರು. ಮಧ್ಯಾಹ್ನ ಊಟದ ವಿರಾಮ ಘೋಷಿಸಿದಾಗ ಗುಂಪಿನಲ್ಲಿ ಹೊಸದೊಂದು ಚೇತನ ಚಿಮ್ಮುತ್ತಿತ್ತು.

ಅಪರಾಹ್ನದ ಮೊದಲ ಭಾಗದಲ್ಲಿ, "ಪ್ರೊಗ್ರೆಸ್ಸಿವ್ ರೆಲ್ಯಾಕ್ಸೇಷನ್ ಟೆಕ್‍ನಿಕ್" ತೋರಿಸುತ್ತಾ ಶಿಬಿರಾರ್ಥಿಯೊಬ್ಬಳನ್ನು ರೆಗ್ರೆಸ್ ಮಾಡಿದರು ಡಾ. ವೈಸ್. ಆಕೆ ಕ್ಷಣಗಳಲ್ಲಿ ಸುಲಭವಾಗಿ ನಿರಾಳ ಸ್ಥಿತಿಗೆ ತಲುಪಿ, ಆತನ ನಿರ್ದೇಶಕ ಮಾತುಗಳನ್ನು ಕೇಳುತ್ತಾ, ತನ್ನ ಮೂರನೇ ವಯಸ್ಸಿನ ನೆನಪೊಂದಕ್ಕೆ ಜಾರಿದಳು. ತನ್ನ ಸ್ನೇಹಿತೆಯೊಡನೆ ಆಟವಾಡಿದ್ದು, ಆ ಗೊಂಬೆಯ ವಿವರಗಳು, ತಾವಿದ್ದ ಮನೆಯ ವಿವರಗಳನ್ನು ನೀಡಿದಳು. ಆಟದ ಭರದಲ್ಲಿ ನಕ್ಕ ನಗು ಮೂರು ವರ್ಷದ ಚಿನ್ನಾರಿಯದ್ದೇ... ಬಳಿಕ ಅವಳ ಹೈ-ಸ್ಕೂಲಿನ ದಿನಗಳಿಗೆ ಸಾಗಿ, ಅಲ್ಲಿಂದ ನಿಧಾನವಾಗಿ ಅವಳನ್ನು ಪ್ರಸ್ತುತಕ್ಕೆ ಕರೆತಂದರು ಡಾ. ವೈಸ್. ಸಭೆಯಲ್ಲೇ ಆಕೆಯ ತಾಯಿಯೂ ಇದ್ದು, ಮಗಳ ಗೆಳತಿಯ, ಗೊಂಬೆಯ, ಮನೆಯ ವಿವರಗಳನ್ನು ನಿಖರವೆಂದು ಸ್ಪಷ್ಟಪಡಿಸಿದರು. ಮಗಳು ನಾಲ್ಕು ವರ್ಷದವಳಿದ್ದಾಗ ಅವರು ಆ ಮನೆ ಬಿಟ್ಟು ಹೋಗಿದ್ದಾಗಿಯೂ ತಿಳಿಸಿದರು. ಪುಟ್ಟ ವಿರಾಮದ ಬಳಿಕ ಮತ್ತೊಂದಿಷ್ಟು ಪ್ರಶ್ನೋತ್ತರಗಳೂ, ಇನ್ನೊಂದಿಷ್ಟು ವಿವರಣೆಗಳೂ, ಶ್ರೀಮತಿ ವೈಸ್ ಅವರಿಂದ ಕೆಲವು ಸೂಕ್ಷ್ಮಗಳೂ ಶಿಬಿರಾರ್ಥಿಗಳ ಮೊದಲ ದಿನದ ಅನುಭವ ಖಜಾನೆಯಲ್ಲಿ ದಾಖಲಾದವು.

ಇನ್ನುಳಿದ ದಿನಗಳ ವಿವರಗಳು ಮುಂದಿನ ಕಂತಿನಲ್ಲಿ....

Monday, 12 November, 2007

ಆತ್ಮ ಚಿಂತನ-೦೮

ಓದುಗರೇ, "ಆತ್ಮಚಿಂತನ-೦೪"ರಲ್ಲಿ ಚೀನಾದಲ್ಲಿ ಚಾಲ್ತಿಯಲ್ಲಿರುವ ಪ್ರೇತಾತ್ಮಗಳ ಮದುವೆಯ ಬಗ್ಗೆ ಬರೆದಿದ್ದೆ. ಅದರಲ್ಲಿ ಹೆಚ್ಚಾಗಿ, ಮದುವೆಯಾಗದೇ ತೀರಿಕೊಂಡ ಮಗಳ ಪ್ರೇತಕ್ಕೆ ತಂದೆ-ತಾಯಿ ಗಂಡು ಹುಡುಕಿ ಮದುವೆಯ ಸಂಪ್ರದಾಯ ಪೂರೈಸುವ ವಿಷಯವಿತ್ತು. ಇದೀಗ ಈ "ಮಿಂಘಮ್" ಬಗ್ಗೆ ಇನ್ನೂ ಒಂದಿಷ್ಟು ವಿವರಗಳು, ನವೆಂಬರ್, ೧೬, ೨೦೦೬ರ ತರಂಗದಲ್ಲಿ ನಿಶಾಂತ್ ಬರೆದ ಲೇಖನದಲ್ಲಿ ಸಿಕ್ಕಿವೆ. ನಿಮ್ಮ ಓದಿಗಾಗಿ.... (ಇಲ್ಲಿ ಸ್ವಲ್ಪ ಹೃಸ್ವೀಕರಿಸಿದ್ದೇನೆ)

ಚೀನಾದ ಜನಸಂಖ್ಯೆಯ ಹತೋಟಿಗೆ ಅಲ್ಲಿನ ಸರಕಾರ ಹೊರಡಿಸಿದ ಕಾಯಿದೆ: ಒಂದು ಕುಟುಂಬ- ಒಂದು ಮಗು. ಅವರಿಗೂ ಭಾರತೀಯರಂತೆಯೇ ಗಂಡು ಮಗುವಿನ ಮೇಲೆ ವ್ಯಾಮೋಹ. ಪರಿಣಾಮ- ನಿರೀಕ್ಷಿತ; ಹೆಣ್ಣುಗಳಿಲ್ಲ. ಹುಟ್ಟಿದ ಗಂಡಿನ ಮದುವೆಗೆ ಪರದಾಡಬೇಕಾದ ಪರಿಸ್ಥಿತಿ. ಅದರ ಫಲರೂಪ- ವಧೂದಕ್ಷಿಣೆಯ ಆಮಿಷ. ಇದಕ್ಕೆ ಹಲವಾರು ಆಯಾಮಗಳಿವೆಯಾದರೂ ಇಲ್ಲಿ, ಈ ಲೇಖನದ ವ್ಯಾಪ್ತಿಗಾಗಿ, ಪ್ರೇತಮದುವೆಯ ಸಂಪ್ರದಾಯವನ್ನಷ್ಟೇ ತೆಗೆದುಕೊಳ್ಳುತ್ತೇನೆ.

"ಮಕ್ಕಳಿಗೆ ಮದುವೆ ಮಾಡಿಸುವುದು ತಂದೆಯ ಹೊಣೆಗಾರಿಕೆ. ಪ್ರಾಯಕ್ಕೆ ಬಂದ ಮಗ ಮದುವೆಯಾಗದೆ ಸತ್ತರೆ, ತಂದೆ-ತಾಯಿಯ ವ್ಯಥೆ ಅಷ್ಟಿಷ್ಟಲ್ಲ.ಈ ಪರಿಸ್ಥಿತಿಯಲ್ಲಿ ಹೆತ್ತವರ ಹೊಣೆಗಾರಿಕೆ ಹೆಚ್ಚುತ್ತದೆ; ಸತ್ತವರು ಸ್ವತಃ ಹೆಣ್ಣು ಹುಡುಕುವಂತಿಲ್ಲವಲ್ಲ! ಆಗ, ಹೆತ್ತವರು ಹೊಟ್ಟೆ-ಬಟ್ಟೆ ಕಟ್ಟಿ ಹಣ ಕೂಡಿಡುತ್ತಾರೆ. ಸತ್ತ, ಸಾಯುತ್ತಿರುವ ಹೆಣ್ಣು ಹುಡುಕುತ್ತ ಊರೂರು ಅಲೆಯುತ್ತಾರೆ. ಅಂಥ ಸಂದರ್ಭಗಳಲ್ಲಿ, ಹೆಣ್ಣು ಹೆತ್ತವರಿಗೆ ಆಕೆ ಇಲ್ಲದಿದ್ದರೂ ಲಾಭವೇ. (ಈ ಹಿನ್ನೆಲೆಯಲ್ಲಿ, ಚೀನಾದಲ್ಲಿ ತಂದೆ-ತಾಯಿ ತಮ್ಮ ಹೆಣ್ಣು ಮಗಳು ಅಪ್ರಾಪ್ತ ವಯಸ್ಸಿನಲ್ಲಿ ತೀರಿಕೊಂಡರೆ ದುಃಖಿಸುತ್ತಾರೆಯೇ? ಕೇಳಬಾರದ ಪ್ರಶ್ನೆ ಇದು) ತೀರಿಕೊಂಡ ಹೆಣ್ಣಿನ ದೇಹವನ್ನು ವಧುದಕ್ಷಿಣೆ ಕೊಟ್ಟು ಪಡೆದ ಹುಡುಗನ ಕಡೆಯವರು, ಆಕೆಯನ್ನು ಸಂಭ್ರಮದಿಂದ ತಮ್ಮ ಸ್ಮಶಾನಕ್ಕೆ ಒಯ್ದು, ತಮ್ಮ ಹುಡುಗನ ಶರೀರದ ಪಕ್ಕದಲ್ಲಿ ಆಕೆಯನ್ನೂ ಇರಿಸಿ, ಮದುವೆಯ ಶಾಸ್ತ್ರಗಳನ್ನು ನೆರವೇರಿಸುತ್ತಾರೆ. ಬಳಿಕ ಇಬ್ಬರನ್ನೂ ಅಕ್ಕಪಕ್ಕದಲ್ಲಿ ಸಮಾಧಿ ಮಾಡಲಾಗುತ್ತದೆ. ಜೊತೆಗೆ, ಸಂಸಾರ ಹೂಡಲು ಬೇಕಾಗುವ ಎಲ್ಲ ಸಾಮಾಗ್ರಿಗಳನ್ನೂ ಇರಿಸಲಾಗುತ್ತದೆ. ಶ್ರೀಮಂತರಾದರೆ ಕುರಿ, ಹಂದಿ ಕಡಿದು, ಬಂಧು-ಬಾಂಧವರಿಗೆ ಮದುವೆ ಊಟ ಬಡಿಸುತ್ತಾರೆ." ಎಂದು ಬರೆಯುತ್ತಾರೆ ನಿಶಾಂತ್.

ನಮ್ಮೂರ ತುಳುವರಲ್ಲಿ ಆತ್ಮ "ಕೇಳಿಕೊಂಡು" ಬಂದರೆ ಮಾತ್ರ ಆ ಆತ್ಮಕ್ಕೆ ಮದುವೆ ಮಾಡಿಸುವ ಸಂಪ್ರದಾಯವಿದೆ. ಬಹುಶಃ ಚೀನಾದಲ್ಲಿ ಎಲ್ಲ ಪ್ರೇತಾತ್ಮಗಳಿಗೂ ಮದುವೆ ಕಡ್ಡಾಯವಿರಬೇಕು; ಮುಂದಿನ ಪ್ರಸಂಗ ನೋಡಿ: "ಯೂಜಿಂಗ್'ನ ಮಗಳು ಯೆಲ್ಲೋ ರಿವರ್'ನಲ್ಲಿ ಬಂದ ಧಿಡೀರ್ ನೆರೆಯಲ್ಲಿ ಕೊಚ್ಚಿಹೋಗಿ, ಮರುದಿನ ಹೆಣ ಸಿಗುತ್ತದೆ. ಗೆಳೆಯರು, ಬಂಧುಗಳು ಆತನನ್ನು "ನೀನು ಅದೃಷ್ಟವಂತ" ಅನ್ನುತ್ತಾರೆ. ಹಳ್ಳಿಯಲ್ಲಿ ಸುದ್ದಿ ಹರಡುತ್ತದೆ. ಅರ್ಧ ಘಂಟೆಯಲ್ಲಿ ಚೆನ್ ಬರುತ್ತಾನೆ, ತನ್ನ ಮಗನಿಗೆ ಹೆಣ್ಣು ಕೇಳಲು. ಮನೆಯವರೆಲ್ಲರ ಎದುರೇ ಮಾತುಕತೆ ನಡೆಯುತ್ತದೆ, ಚರ್ಚೆ ಸಂಧಾನಗಳ ಬಳಿಕ ಚೆನ್ ಹಣ ತೆತ್ತು ತನ್ನ ಭಾವೀ ಸೊಸೆಯ ಹೆಣದೊಂದಿಗೆ ಮರಳುತ್ತಾನೆ. ಸ್ಮಶಾನದಲ್ಲಿ ಕೆಲ ವರ್ಷಗಳ ಹಿಂದೆ ಮದುವೆಯಾಗದೇ ತೀರಿಕೊಂಡ ಹುಡುಗನ ಸಮಾಧಿಯ ಬಳಿಯಲ್ಲಿಯೇ ಈ ಹುಡುಗಿಯ ಶವಪೆಟ್ಟಿಗೆಯನ್ನೂ ಇಳಿಸಿ, ಸಂಸಾರ ಹೂಡಲು ಬೇಕಾದ ಪಾತ್ರೆ-ಪರಡಿ, ಬಟ್ಟೆ-ಬರೆಗಳ ಜೊತೆಗೆ ಹೆಣ-ವಧುವನ್ನೂ ಮಣ್ಣುಮಾಡಲಾಗುತ್ತದೆ."

ಇದಿಷ್ಟೇ ಅಲ್ಲದೆ, ನಮ್ಮೂರಿನಂತೆ ಕೆಲವು ಆತ್ಮಗಳು ಚೀನಾದಲ್ಲೂ ಮದುವೆ ಮಾಡಿಸುವಂತೆ ಪೀಡಿಸಿ, ಕಾಡಿಸಿ, ತೊಂದರೆ ಕೊಡುವುದೂ ಇದೆ. ಅಂಥ ಸಂದರ್ಭಗಳಲ್ಲಿ ಮನೆಯವರು, ಸಂಬಂಧಪಟ್ಟವರು, ಎಲ್ಲ ಕಡೆ ಜಾಲಾಡಿ ಎಂದೋ ಎಲ್ಲೋ ಸತ್ತ ಹೆಣ್ಣು ಹುಡುಕಿ ಮದುವೆ ಮಾಡುತ್ತಾರೆ. ಹೆಣ್ಣು-ಹೆಣ ಎಲ್ಲೂ ಸಿಗದೇ ಹೋದಲ್ಲಿ, ಅಥವಾ ವಧುದಕ್ಷಿಣೆ ಕೊಡಲಾಗದೇ ಇದ್ದಲ್ಲಿ, ಅಂಥವರು ಹಿಡಿವ ಹಾದಿಗಳೆರಡು-
ಒಂದು: ಯಾವುದೋ ಒಂದು ಹೆಣ್ಣಿನ ಹೆಣವನು ಗೋರಿಯಿಂದಲೇ ಅಪಹರಿಸುವುದು;
ಎರಡು: ಒಣಹುಲ್ಲಿನಲ್ಲಿ ಹೆಣ್ಣಿನ ಗೊಂಬೆ ತಯಾರಿಸಿ ಮಗನ ಹೆಣದ ಬಳಿ ಹೂತು ಜವಾಬ್ದಾರಿ ತೀರಿಸಿಕೊಳ್ಳುವುದು.

ನಂಬಿಕೆಗಳು ಮನುಷ್ಯನನ್ನು ಏನೆಲ್ಲ ಮಾಡಿಸುತ್ತವೆ!!

Monday, 5 November, 2007

ಆತ್ಮ ಚಿಂತನ-೦೭

ಓದುಗರೇ, ಈ ಹಿಂದೆ ನಿಮಗೆ ಮಾತು ಕೊಟ್ಟಂತೆ ಇದೀಗ "ಆತ್ಮ ಚಿಂತನ"ದಲ್ಲಿ `ಪ್ರೇತಗಳ ಮದುವೆ'ಯ ವಿಷಯವನ್ನು ಮುಂದುವರೆಸುತ್ತಿದ್ದೇನೆ.

"ಪ್ರೇತಾತ್ಮಗಳ ಮದುವೆಗೂ ವಿಧಿ ವಿಧಾನಗಳಿವೆ" ಅನ್ನುತ್ತಾರೆ ಅನಂತ ಹುದೆಂಗಜೆ; ೨೦೦೬, ನವೆಂಬರ್, ಹದಿನಾರರಂದು ತರಂಗದಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ. "ಪ್ರೇತಗಳಿಗೆ ಮದುವೆ ಮಾಡಿಸುವ ಜಾನಪದ ನಂಬಿಕೆಯ ಆಧಾರದ ಸಂಪ್ರದಾಯ ತುಳುನಾಡಿನ ಹಲವಾರು ಜನಾಂಗಗಳಲ್ಲಿ ಪ್ರಚಲಿತವಿದ್ದು, ಬಹುತೇಕ ಕ್ರಮಗಳು ಸಾಂಪ್ರದಾಯಿಕ ಮದುವೆಯಂತೆಯೇ ನಡೆಯುತ್ತವೆ" ಅನ್ನುತ್ತಾರೆ ಅವರು. "ಹೆಣ್ಣು-ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ವರದಕ್ಷಿಣೆಯ ಮಾತುಕತೆ, ದಿಬ್ಬಣ, ವಾಲಗ, ಸಿಡಿಮದ್ದು, ಪರಸ್ಪರ ಮರ್ಯಾದೆ, ಮಾಂಗಲ್ಯಗಳವರೆಗೆ ಎಲ್ಲವೂ ಸಂಪ್ರದಾಯ ಬದ್ಧವಾಗಿಯೇ ನಡೆಯುತ್ತದೆ. ಗೌಡ ಸಂಪ್ರದಾಯದಲ್ಲಿ ಅಡಕೆ ಮರದ ಹೂವು (ಹಿಂಗಾರ)ಗಳನ್ನು ಗಂಡು ಹೆಣ್ಣಿನ ಪ್ರತೀಕವಾಗಿ ಬಳಸುತ್ತಾರೆ. ಕೆಲವರು ಬೆಳ್ಳಿಯಲ್ಲಿ ಗಂಡು-ಹೆಣ್ಣಿನ ಗೊಂಬೆಗಳನ್ನು ಮಾಡಿಸಿದರೆ, `ನಲ್ಕೆ' ಜನಾಂಗದಲ್ಲಿ ಬಾಳೆದಿಂಡಿನಿಂದ ಗಂಡು-ಹೆಣ್ಣಿನ ಗೊಂಬೆಗಳನ್ನು ಮಾಡಿ, ಅವಕ್ಕೆ ಬಟ್ಟೆ ತೊಡಿಸುತ್ತಾರೆ. ಎರಡೂ ಪ್ರತಿನಿಧಿಗಳನ್ನು ಹಸೆಮಣೆಯ ಮೇಲೆ, ಅಕ್ಕ-ಪಕ್ಕ ಇಟ್ಟು, ಗಂಡಿನ `ಕೈಯಿಂದ' ಹೆಣ್ಣಿಗೆ ತಾಳಿ `ಕಟ್ಟಿಸುವ' ಶಾಸ್ತ್ರವನ್ನು ಮಾಡುತ್ತಾರೆ."

"ಬಿಲ್ಲವರಲ್ಲಿ ಗಂಡು ತೆಂಗಿನಕಾಯಿಯಲ್ಲೂ ಹೆಣ್ಣು ಹಿಂಗಾರದಲ್ಲೂ ಪ್ರತಿನಿಧಿಸಲ್ಪಟ್ಟಿರುತ್ತವೆ. ಮದುವೆ ಮಂಟಪದಲ್ಲಿ ಜೇಡಿಮಣ್ಣಿನಿಂದ ಕೈ-ಕೈ ಬೆಸೆದಂತೆ ಬರೆದ ಗಂಡು-ಹೆಣ್ಣಿನ ರೂಪದ ಮಂಡಲಗಳ ಮೇಲೆ ಮಣೆಗಳನ್ನಿಟ್ಟು, ಅವುಗಳ ಮೇಲೆ ಬಾಳೆಯೆಲೆ ಇರಿಸಿ, ಹೆಣ್ಣಿಗೆ ಹೊಸಸೀರೆ, ರವಿಕೆಕಣವನ್ನಿಟ್ಟು ಅವುಗಳ ಮೇಲೆ ಹಿಂಗಾರವನ್ನೂ, ಗಂಡಿಗೆ ಧೋತರ, ಶಲ್ಯವನ್ನಿಟ್ಟು ಮೇಲೆ ತೆಂಗಿನಕಾಯಿಯನ್ನೂ ಇರಿಸುತ್ತಾರೆ. ಮಂಡಲದಲ್ಲಿ ಬೆಸೆದಿರುವ ಕೈಗಳ ಮೇಲೆ ಧಾರೆಯೆರೆಯುತ್ತಾರೆ."

"ಮದುವೆಯಾದ ಸಂಕೇತವಾಗಿ ಹಿಂಗಾರದ ಹೊರಹಾಳೆಯೂ, ತೆಂಗಿನಕಾಯಿಯೂ ಒಡೆಯುತ್ತವೆ. ಶಾಸ್ತ್ರಕ್ಕೆ ಸರಿಯಾಗಿ, ಶೋಭಾನೆ ಹಾಡಿ, ಅತಿಥಿಗಳಿಗೆ ಊಟ ಬಡಿಸುತ್ತಾರೆ. ಮದುಮಕ್ಕಳಿಗೂ `ಎಡೆ'ಯಿರಿಸುತ್ತಾರೆ. ನಂತರ, ಕುಟುಂಬಗಳ ಹಿರಿಯರು "ನಿಮ್ಮ ಅಪೇಕ್ಷೆಯಂತೆ ನಿಮಗಿಬ್ಬರಿಗೂ ಮದುವೆ ಮಾಡಿಸಿದ್ದೇವೆ. ನೀವಿನ್ನು ಗಂಡ-ಹೆಂಡತಿ. ಯಾರಿಗೂ ತೊಂದರೆ ಕೊಡದೆ ಸುಖವಾಗಿ ಸಂಸಾರ ಮಾಡಿ" ಎಂದು ವಿನಂತಿಸಿಕೊಳ್ಳುತ್ತಾರೆ, ಹಾರೈಸುತ್ತಾರೆ. ಮದುಮಕ್ಕಳ ಪ್ರತೀಕಗಳನ್ನು ಅಂದು ರಾತ್ರೆ ಒಂದು ಕೋಣೆಯಲ್ಲಿರಿಸಿ, ಪ್ರಸ್ತದ ಶಾಸ್ತ್ರವನ್ನೂ ಮಾಡುತ್ತಾರೆ. ಮದುಮಕ್ಕಳಿಗೆ ಎರಡೂ ಮನೆಗಳಲ್ಲಿ ಔತಣದ ಕ್ರಮ ನಡೆಯುತ್ತದೆ. ಬಳಿಕ, ತಾಳಿ, ಬಳೆ, ಬಟ್ಟೆಗಳನ್ನು ತೆಗೆದಿರಿಸಿ, ಹಿಂಗಾರ-ಕಾಯಿಗಳನ್ನು ಯಾ ಗೊಂಬೆಗಳನ್ನು ವಿಸರ್ಜಿಸುತ್ತಾರೆ. ಮದುವೆಯ ನಂತರ ಎರಡೂ ಮನೆಗಳ ಸಂಬಂಧ ಬೆಸೆಯುತ್ತದೆ, ಬಾಂಧವ್ಯ ಮುಂದುವರೆಯುತ್ತದೆ. ಹಬ್ಬ-ಹರಿದಿನಗಳಲ್ಲಿ ಪರಸ್ಪರ ಹಬ್ಬದೂಟಗಳ ಆಮಂತ್ರಣವಿರುತ್ತದೆ. ದೀಪಾವಳಿ, ಯುಗಾದಿಗಳಲ್ಲಿ ಈ ಹೊಸ ದಂಪತಿಗೆ ಹೊಸ ಬಟ್ಟೆ ಕೊಡಿಸಿ, ಎಡೆಯಿರಿಸುವುದೂ ಇದೆ." (ಅನಂತ ಹುದೆಂಗಜೆಯವರ ಲೇಖನದ ತುಣುಕು ಇದು, ಅಲ್ಪ ಮಾರ್ಪಾಡುಗಳೊಂದಿಗೆ.)

`ಪ್ರೇತ ಮದುವೆ'ಯ ಸಂಪ್ರದಾಯ ಚೀನಾದಲ್ಲೂ ಇದೆ ಎಂದು "ಆತ್ಮ ಚಿಂತನ-೦೪"ರಲ್ಲಿ ಬರೆದಿದ್ದೆ. ಇದೇ ತರಂಗದಲ್ಲಿ ಆ "ಮಿಂಘಮ್" ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ, ನಿಶಾಂತ್. ಅದರ ಸಾರಾಂಶ ಮುಂದಿನ ಕಂತಿನಲ್ಲಿ.