ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday 14 December, 2008

ಆತ್ಮ ಚಿಂತನ -೧೨ -- ದ್ವೈತ - ಅದ್ವೈತ

ಓದುಗರೇ,
ಹಿಂದಿನ ಸಂಚಿಕೆಯಲ್ಲಿ, 'ದ್ವೈತ-ಅದ್ವೈತಗಳಲ್ಲಿ ನಿಮಗೆ ಯಾವ ಸಿದ್ಧಾಂತ ಇಷ್ಟ' ಎಂಬ ಪ್ರಶ್ನೆ ಕೇಳಿದ್ದೆ. ಕೆಲವು ಉತ್ತರಗಳೂ ಬಂದಿವೆ. ಅವನ್ನು ಇಲ್ಲಿ ಮತ್ತೆ ಪೋಣಿಸುವುದಿಲ್ಲ. ಆ ಪ್ರಶ್ನೆ ಕೇಳಲು ಕಾರಣವಾದ ಆ ಒಂದು ಚರ್ಚೆಯ ಮುಖ್ಯ ಭಾಗವನ್ನು ಕೊಡುತ್ತೇನೆ...

ಹಿಂದಿನ ಒಕ್ಕಣೆಯಲ್ಲೇ ಹೇಳಿದಂತೆ, ಊರಲ್ಲಿದ್ದಾಗ ಈ ಚರ್ಚೆ ನಡೆದದ್ದು ಕಟ್ಟಾ ದ್ವೈತಿಯಾಗಿರುವ ನಮ್ಮ ಸಂಬಂಧಿಯೊಬ್ಬರೊಡನೆ (ನಾನವರನ್ನು ಅಣ್ಣ ಎಂದೇ ಕರೆಯುವುದು). ಅವರು ಬಹಳಷ್ಟು ತಿಳಿದವರು. ವೈದಿಕ ಧರ್ಮದ ಒಳಹೊರಗನ್ನೇ ಅಧ್ಯಯನ ಮಾಡಿ ಅದರ ಅಧ್ಯಾಪನವನ್ನೇ ಬದುಕಾಗಿ ಮಾಡಿಕೊಂಡವರು. ವೇದಾಂತದ ಪಾಠ ಹೇಳುವವರು.

ಯಾವುದೋ ಮಾತುಮಾತಿನ ನಡುವೆ, "ನನಗೆ ಅದ್ವೈತ ಸಿದ್ಧಾಂತ ಇಷ್ಟ" ಎಂದೆ ನಾನು.
ಅದಕ್ಕೆ ಅವರು, "ಯಾಕೆ? ಅದ್ಯಾಕೆ? ಅದ್ರಲ್ಲೇನು ವಿಶೇಷ? ಅದು ಹೇಗಾಗ್ತದೆ? ದೇವರು ಮತ್ತು ಮನುಷ್ಯ ಒಂದೇ ಹೇಗೆ?" ಅಂದರು (ಸ್ವಲ್ಪ ಮಟ್ಟಿಗೆ ಕಸಿವಿಸಿಗೊಂಡರು ಅನ್ನಬಹುದು). ನಮ್ಮ ಸಂವಾದದ ಹೃಸ್ವ ಪಠ್ಯರೂಪ ನಿಮಗಾಗಿ...

***************************************************************************

ನಾನು: ದೇವರು ಮತ್ತು ಮನುಷ್ಯ ಅಲ್ಲ, ಜೀವಾತ್ಮ ಮತ್ತು ಪರಮಾತ್ಮ ಒಂದೇ ಅಂತ. ಯಾಕೆ ಅಂದ್ರೆ... ಪರಮಾತ್ಮನನ್ನು, ದೇವರನ್ನು ನಾವು ನಿರ್ಗುಣ, ನಿರಾಕಾರ, ವಿಶ್ವರೂಪ, ವಿಶ್ವಂಭರ... ಅಂತೆಲ್ಲ ವಿವರಿಸ್ತೇವೆ. ಸರ್ವವ್ಯಾಪಿ ಅಂತ ಕರೀತೇವೆ. ಶಕ್ತಿರೂಪ ಅಂತ ಹೇಳ್ತೇವೆ. ಹಾಗಿರುವಾಗ ಅವನ ಒಳಗೇ ಇರುವ ನಾವು ಅವನಿಂದ/ ಅದರಿಂದ ಬೇರೆ ಆಗಿರುವುದು ಹೇಗೆ ಸಾಧ್ಯ? ಆ ಶಕ್ತಿ ನಮ್ಮೆಲ್ಲರನ್ನೂ ಒಳಗೊಂಡಿರುವಾಗ ನಾವು ಬೇರೆಯಾಗಿರುವ ಪ್ರಶ್ನೆಯೇ ಇಲ್ಲವಲ್ಲ.

ಅಣ್ಣ: ಹಾಗಾದ್ರೆ ದೇವರು ಬೇರೆ ಇಲ್ಲ ಅಂತಲಾ? ನಾವೇ ಎಲ್ಲರೂ ದೇವರಾ?

ನಾನು: ಹಾಗಲ್ಲಣ್ಣ, ನಾವೇ ಎಲ್ಲರೂ ದೇವರು ಅಂತಲ್ಲ. ದೇವರ ತುಣುಕುಗಳು ಅಂತ. ಮರದ ಕೊಂಬೆ, ರೆಂಬೆ, ಹೂ, ಹಣ್ಣು, ಎಲ್ಲವೂ ಮರದ ಭಾಗಗಳು; ಎಲ್ಲ ಸೇರಿ ಒಂದು ಮರ ಅಲ್ವಾ? ಹಾಗೇನೇ.

ಅಣ್ಣ: ಹಾಗಾದ್ರೆ, ನಮಗೂ ಆ ದೇವರಿಗಿರುವಷ್ಟೇ ಜ್ಞಾನ ಇರಬೇಕಿತ್ತಲ್ಲ, ಯಾಕಿಲ್ಲ? ದೇವರ ತುಣುಕು ಅಂತಾದ್ರೆ ನಮಗೂ ಅದೇ ಶಕ್ತಿ ಇರಬೇಕಲ್ಲ.

ನಾನು: ಹೌದು, ಆ ಶಕ್ತಿಯ ಒಂದು ತುಣುಕು ನಮ್ಮಲ್ಲೂ ಉಂಟು, ಆದ್ರೆ ನಮ್ಮ ದೇಹ ಅನ್ನುವ ಮಾಯೆ ಆವರಿಸಿದೆ. ಆದ್ದರಿಂದ ನಮಗೆ ಗೊತ್ತಿಲ್ಲ, ಅಷ್ಟೇ.

ಅಣ್ಣ: ಗೊತ್ತಿಲ್ಲ ಅಂತಾದ್ರೆ ನಾವು ಆ ದೇವರ ತುಣುಕು ಹೇಗಾಗ್ತದೆ?

ನಾನು: ಈಗ- ಹತ್ತು ಬತ್ತಿ ಹಾಕಿ, ಒಂದು ಲೋಟ ಎಣ್ಣೆ ಹಾಕಿದ ದೊಡ್ಡ ಕಾಲುದೀಪದಲ್ಲಿರುವ ದೀಪಕ್ಕೂ ಎರಡೇ ಬತ್ತಿ ಹಾಕಿ, ಎರಡು ಚಮಚ ಎಣ್ಣೆ ಹಾಕಿದ ಹಣತೆಯ ದೀಪಕ್ಕೂ ವ್ಯತ್ಯಾಸ ಇಲ್ವಾ? ಹಾಗೇನೇ ನಮಗೂ ಆ ಸರ್ವಶಕ್ತ ದೇವರಿಗೂ ವ್ಯತ್ಯಾಸ....

ಅಣ್ಣ: ಹ್ಙಾ! ಹಾಗಾದ್ರೆ, ದೊಡ್ಡ ದೀಪವೂ ಸಣ್ಣ ದೀಪವೂ ಒಂದೇ ಅಲ್ಲ ಅಂತಾಯ್ತು. ಅದ್ವೈತ ಎಲ್ಲಿ ಬಂತು?

ನಾನು: ದೊಡ್ಡದೂ ದೀಪವೇ, ಪರಮಾತ್ಮ; ಸಣ್ಣದೂ ದೀಪವೇ, ಜೀವಾತ್ಮ... ದ್ವೈತ ಎಲ್ಲುಂಟು? ಅವುಗಳ ಶಕ್ತಿ ಬೇರೆ ಬೇರೆ, ಅಷ್ಟೇ. ಮೂಲದಷ್ಟು, ದೊಡ್ಡ ದೀಪದಷ್ಟು ಬೆಳಕು, ಶಾಖ ಸಣ್ಣ ದೀಪಕ್ಕಿಲ್ಲ. ಆ ನೆಲೆಯಲ್ಲಿ ಮಾತ್ರ ಅವೆರಡೂ ಬೇರೆ ಬೇರೆ. ಇದೇ ಸಣ್ಣ ದೀಪದ ಮೇಲೆ ಒಂದು ಮಣ್ಣಿನ ಬುರುಡೆ ಇಟ್ರೆ ಆಗ ಅದರ ಬೆಳಕು, ಶಾಖ ಇನ್ನೂ ಸೀಮಿತ. ಅದು ನಮ್ಮ ಈ ದೇಹ. ನಮ್ಮ ಸೀಮಿತ ವಲಯ. ಅದರಿಂದಾಚೆ ನಮಗೆ ಜ್ಞಾನ ಇಲ್ಲ, ಶಕ್ತಿ ಇಲ್ಲ. ಆ ಬುರುಡೆಯನ್ನು ತೆಗೆದಾಗ, ದೀಪದ ವಿಸ್ತಾರವಾದ ಬೆಳಕು, ಪ್ರಖರ ಶಾಖ ಗೊತ್ತಾಗುತ್ತದೆ, ಅಲ್ವಾ? ಹಾಗೇ ಈ ಆತ್ಮವೂ ಕೂಡಾ. ದೊಡ್ಡ ದೀಪದಿಂದ ತಂದ ಸಣ್ಣ ದೀಪ. ಬುರುಡೆಯೊಳಗಿದ್ದಾಗ ಅಜ್ಞಾನ, ಲೌಕಿಕ ಪೊರೆ. ಬುರುಡೆ ತೆಗೆದಾಗ ಅದೇ ದೀಪದ ಕುಡಿ, ಪರಮಾತ್ಮನ ತುಣುಕು, ಜೀವಾತ್ಮ.

ಅಣ್ಣ: ಛೇ; ಒಪ್ಪೋದಿಲ್ಲ. ಜೀವಾತ್ಮ ಪರಮಾತ್ಮ ಒಂದೇ ಅಂತಾದ್ರೆ ಪರಮಾತ್ಮನಿಗಿರುವ ಶಕ್ತಿ, ಜ್ಞಾನ ನಮಗೆ ಯಾಕಿಲ್ಲ? ದೊಡ್ಡ ದೀಪವೂ ಶಾಖ ಕೊಡ್ತದೆ, ಸಣ್ಣ ದೀಪವೂ ಶಾಖ ಕೊಡ್ತದೆ. ಆದ್ರೆ ನಮಗೆ ಪರಮಾತ್ಮನ ಜ್ಞಾನ ಯಾಕಿಲ್ಲ?

ನಾನು: ಈಗ, ನಮ್ಮ ಮನೆಯ ವಯರುಗಳಲ್ಲಿ ಬರುವ ಕರೆಂಟ್ ಮತ್ತು ಜೋಗದಲ್ಲಿ ಉತ್ಪಾದನೆಯಾಗುವ ಕರೆಂಟ್ ಒಂದೇನಾ ಬೇರೆ ಬೇರೆನಾ?

ಅಣ್ಣ: ಅದೂ.... ಕರೆಂಟ್ ಒಂದೇ. ಅದೇ ಕರೆಂಟ್ ಇಲ್ಲಿ ಬರುದಲ್ವಾ?

ನಾನು: ಹಾಗಾದ್ರೆ, ಅಲ್ಲಿ ಉತ್ಪಾದನೆಯಾದ ಅಷ್ಟೂ ಕರೆಂಟ್ ಇಲ್ಲಿಗೇ ಬರ್ತದಾ?

ಅಣ್ಣ: ಇಲ್ಲ, ಇಲ್ಲ. ಪೂರ್ತಿ ಇಲ್ಲಿಗೇ ಬರುದಿಲ್ಲ.

ನಾನು: ಹೌದಲ್ವ! ಅಲ್ಲಿ ಉತ್ಪಾದನೆಯಾದ ಕರೆಂಟ್ ಪೂರಾ ಇಲ್ಲಿಗೇ ಬಂದ್ರೆ ನಮ್ಮ ವಯರಿಂಗ್ ಸುಟ್ಟು ಹೋಗ್ತದೆ. ನಮ್ಮ ಟಿವಿ, ಫ್ರಿಜ್, ವಾಷಿಂಗ್ ಮೆಶೀನ್ ಎಲ್ಲವೂ ಸುಟ್ಟು ಹೋಗ್ತದೆ, ಅಲ್ವ. ಹಾಗೇನೇ, ಪರಮಾತ್ಮನ ಪೂರ್ಣ ಶಕ್ತಿ ನಮಗೆ ಬಂದ್ರೆ ನಾವು ತಡೆಯೋದಕ್ಕೆ ಸಾಧ್ಯ ಇಲ್ಲ. ನಮ್ಮ ಮಿತಿಯಲ್ಲಿ ಸಾಧ್ಯ ಇರುವಷ್ಟು ಶಕ್ತಿಯನ್ನು ಮಾತ್ರ ನಮಗೆ ವಿತರಿಸಿದ್ದಾನೆ. ಆದ್ರೆ, ಅದ್ರಲ್ಲೂ ನಾವು ಪೂರ್ಣ ಪ್ರಮಾಣವನ್ನು ಉಪಯೋಗಿಸಿಕೊಳ್ತಾ ಇಲ್ಲ. ನಮ್ಮ ಸುತ್ತ ಪೊರೆ ಕಟ್ಟಿಕೊಂಡಿದ್ದೇವೆ. ಕಂಬದಿಂದ ನಮ್ಮ ಮನೆಗೆ ಬರುವ ವಯರಿಗೆ ಕೇಸಿಂಗ್ ಇರ್ತದೆ. ಅದನ್ನು ಮುಟ್ಟಿದ್ರೆ ನಮಗೆ ಶಾಕ್ ಬರುದಿಲ್ಲ. ಆದ್ರೆ, ಆ ಕೇಸಿಂಗ್ ತೆಗೆದ್ರೆ ನಮಗೆ ಶಾಕ್ ಹೊಡೀತದೆ, ಅಲ್ವ? ಅದೇ ಥರ, ನಮ್ಮ ಈ ದೇಹದ ಪೊರೆ ತೆಗೆದ್ರೆ, ನಮಗೆ ನಮ್ಮ ಸತ್ಯ ರೂಪ ಗೊತ್ತಾಗ್ತದೆ, ನಮ್ಮ ಪೂರ್ಣ ಶಕ್ತಿ ಗೊತ್ತಾಗ್ತದೆ. ಅದೇ ಮಾಯೆಯ ಪೊರೆ. ನಮ್ಮ ದೇಹವೇ ನಮ್ಮನ್ನು ಮುಸುಕಿದ ಮಾಯೆ. ಅದನ್ನು ಮೀರಿದ್ರೆ, ಆ ಮಾಯೆಯನ್ನು ಕಳೆದುಕೊಂಡ್ರೆ, ನಮಗೂ ದೇವರಿಗೂ ವ್ಯತ್ಯಾಸ ಇಲ್ಲ. ಆ ಮೂಲ ಶಕ್ತಿಯ ಒಂದು ಸೆಳಕು ನಾವಾಗಿರುವುದು ಗೊತ್ತಾಗ್ತದೆ. ಜೋಗದಲ್ಲಿ ಉತ್ಪಾದನೆಯಾಗುವ ಒಟ್ಟೂ ಕರೆಂಟ್ ಮೂಲ ಶಕ್ತಿ, ದೇವರ ಹಾಗೆ. ನಮ್ಮ ಮನೆಯ ಒಂದೊಂದು ಬಲ್ಬ್, ನಾವು, ಒಂದೊಂದು ವ್ಯಕ್ತಿಯ ಹಾಗೆ. ಎಲ್ಲರ ಒಳಗಿರುವುದು ಅದೇ ಕರೆಂಟ್. ಜೋಗದ ಕರೆಂಟ್ ಬೇರೆ, ಇಲ್ಲಿ ಬಲ್ಬಿನ ಕರೆಂಟ್ ಬೇರೆ ಅಂತ ಹೇಳ್ತೀರ?

ಅಣ್ಣ: ಇಲ್ಲ, ಕರೆಂಟ್ ಎಲ್ಲ ಒಂದೇ...

ನಾನು: ಹಾಗೇನೇ ಜೀವಾತ್ಮ ಮತ್ತು ಪರಮಾತ್ಮನ ಸಂಬಂಧ ಕೂಡಾ. ಆ ಅಗಾಧ ಶಕ್ತಿಯ ಪುಟ್ಟ ಪುಟ್ಟ ತುಣುಕುಗಳು ನಾವು. ಒಂದೊಂದು ಬಣ್ಣದ, ಒಂದೊಂದು ಆಕಾರದ, ಒಂದೊಂದು ಸಾಮರ್ಥ್ಯದ, ಒಂದೊಂದು ರೂಪದ ಬಲ್ಬುಗಳು. ನಾವೆಲ್ಲರೂ ಬೇರೆ ಬೇರೆ, ಆದ್ರೆ ನಮ್ಮೊಳಗಿನ ಶಕ್ತಿಯ ಮೂಲ, ಒಂದೇ. ಅದೇ ದೇವರು. ಸರ್ವಶಕ್ತ. ಪರಮಾತ್ಮ. ನಮ್ಮನ್ನೆಲ್ಲರನ್ನೂ ನಡೆಸುತ್ತಿರುವುದು ಅದೇ ಶಕ್ತಿ. ಆದ್ರೆ, ನಂನಮ್ಮ ಬಲ್ಬ್ ನಂನಮ್ಮ ಮಿತಿ; ಅಷ್ಟೇ. ಈ ಬಲ್ಬ್ ಇದ್ದಾಗ ಪೊರೆ. ಅದು ಕಳಚಿದಾಗ, ಎಲ್ಲವೂ ಒಂದೇ ಕರೆಂಟ್.
I rest my case...

ಅಣ್ಣ: ಹ್ಮ್!....

***************************************************************************

ಓದುಗರೇ, ನನ್ನ ವಾದವೇ ಸರಿ ಅಂತ ವಾಗ್ಯುದ್ಧಕ್ಕೆ ನಿಮ್ಮನ್ನು ಕರೆಯುತ್ತಿಲ್ಲ. ಸುಮ್ನೇ ನಾನು ಒಳಗೊಂಡ ಒಂದು ಚರ್ಚೆಯನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ್ದೇಶ ಮಾತ್ರ ನನ್ನದು.

"ದೇಹವೆಂಬುದು ನಮ್ಮನ್ನು ಆವರಿಸಿದ ಮಾಯೆ, ಆ ಮಾಯೆ ಕಳೆದರೆ ನಮಗೆ ನಮ್ಮ ಶಕ್ತಿ ಗೊತ್ತಾಗುತ್ತದೆ" ಅಂದಾಗ, ಯಾರಿಗೂ ಈ ದೇಹವನ್ನು ತ್ಯಜಿಸಲು ಕರೆ ಕೊಟ್ಟದ್ದಲ್ಲ. ದೇಹವೆಂಬ ಮಾಯೆಯೊಳಗಿದ್ದೂ ಅದನ್ನು ಮೀರಿ ಸಾಧನೆ ಮಾಡಿದ ಶರೀಫ ಸಾಹೇಬರಂತೆ, ಪುರಂದರ, ಕನಕ ಮುಂತಾದ ದಾಸ ವರೇಣ್ಯರಂತೆ, ಈ ದೇಹದೊಳಗಿದ್ದೂ ಅರಿವಿನ ಪರಿಧಿಯನ್ನು ಮಾಯೆಯ ಪೊರೆ ಮೀರಿ ವಿಸ್ತರಿಸಬಹುದು ಎನ್ನುವುದಕ್ಕೆ ಸೂಚನೆ ಮಾತ್ರ. ನಮ್ಮ ನಮ್ಮ ಅರಿವಿನ ನೆಲೆಯನ್ನು ಅರಿತು ಅದನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾತ್ರ ನಮ್ಮದು.

ಇಂಥ ಸಿದ್ಧಾಂತಗಳ ಸುತ್ತಮುತ್ತಲ ವಾದಸರಣಿಗಳು, ವಿವರಣೆಗಳು, ಖಂಡನೆ-ಮಂಡನೆಗಳು, ಪಾಂಡಿತ್ಯ ಪ್ರದರ್ಶನಗಳು, ವಿಶ್ಲೇಷಣೆಗಳು ಎಲ್ಲವೂ ಕೊನೆಗೆ ನೆಲೆಗೊಳ್ಳುವುದು ಒಂದು ಬಿಂದುವಿನಲ್ಲಿ; ಅದು ಪರಮಾತ್ಮ. ಎಲ್ಲರ ಗಮ್ಯವೂ ಅದೇ.
ಇದೇ ದಾರಿಯಲ್ಲಿ ನನ್ನ ಪಯಣ, ಈ ಅಲ್ಪ ಅರಿವಿನೊಡನೆ. ಅಷ್ಟೇ.

"ಇಷ್ಟೆಲ್ಲ ಪಾರಮಾರ್ಥಿಕವಾಗಿ ಮಾತಾಡುವ ನನಗೆ 'ಹರಿವ ಲಹರಿ'ಯಲ್ಲಿ ಕೇಳಿದಂಥ ತುಂಟತನದ ಸಹವಾಸ ಯಾಕೆ?"
ಪ್ರಶ್ನೆ ಸಹಜವೇ!

ಲೌಕಿಕ ಲೌಕಿಕವೇ, ಅಧ್ಯಾತ್ಮ ಅಧ್ಯಾತ್ಮವೇ.
ದೇಹಕ್ಕೆ, ಬುದ್ಧಿಗೆ, ಮನಸ್ಸಿಗೆ ತಟ್ಟುವಂಥ ವಿಷಯ ದೈನಂದಿನ ಬದುಕಿನ ಪಯಣಕ್ಕೆ ಬೇಕಾದ್ದು; ನಿಮ್ಮೆಲ್ಲರ ಪ್ರೀತಿಯ ಹಾಗೆ.
ಮನಸ್ಸಿಗೆ, ಪ್ರಜ್ಞೆಗೆ ನಿಲುಕುವಂಥ ವಿಷಯ ದೇಹ ಮೀರಿದ ಪಯಣಕ್ಕೆ ಬೇಕಾದ್ದು; ದೇವರ ಪ್ರೀತಿಯ ಹಾಗೆ.
ಎರಡೂ ಒಟ್ಟಾದಾಗ.... ನಾನು ನಾನಾಗುತ್ತೇನೆ, ಸಂಪೂರ್ಣವಾಗಿ; ಹೌದಲ್ವ!?