ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Friday 9 September, 2011

ಹಿಪ್ನೋಥೆರಪಿ-ಭಾಗ-೦೭


ಹಿಪ್ನೋಥೆರಪಿಯಲ್ಲಿ ರಿಗ್ರೆಷನ್
ಸಂದೇಹ ಮತ್ತು ಸಾಧ್ಯತೆಗಳು-೦೩

ಕಳೆದೆರಡು ಸಂಚಿಕೆಗಳಿಂದಲೂ ಸಂದೇಹ, ಪ್ರಶ್ನೆಗಳನ್ನು ಪರಿಶೀಲಿಸುತ್ತಿದ್ದೇವೆ. ಈ ಸಂಚಿಕೆಯಲ್ಲ್ಲಿ ಮತ್ತೆರಡು ವಿಚಾರಗಳನ್ನು ಎತ್ತಿಕೊಳ್ಳಲಾಗಿದೆ.

ಸಂದೇಹ-೦೧: ಬಹಳಷ್ಟು ಸಾರಿ ನನ್ನ ಅನುಭವಕ್ಕೆ ಬಂದಂತೆ, ಕೆಲವೊಂದು ಸಂದರ್ಭಗಳಲ್ಲಿ, ಕೆಲವು ಘಟನೆಗಳು ನಡೆದಾಗ, ‘ಇದು ಹಿಂದೊಮ್ಮೆ ಎಲ್ಲಿಯೋ ಹೀಗೆಯೇ ನಡೆದಿತ್ತು’ ಅನ್ನುವ ಗಾಢ ಭಾವನೆ ಬರುತ್ತದೆ. ಅದರ ಬಗ್ಗೆ ನಾನು ಕನಸು ಕಂಡಿರಬಹುದು, ಗೊತ್ತಿಲ್ಲ. ಆದರೆ, ಎಲ್ಲಿ, ಯಾವಾಗ ಆ ಘಟನೆ ನಡೆದಿತ್ತು ಅನ್ನುವುದನ್ನು ನೆನಪಿಸಿಕೊಳ್ಳಲಾರೆ. ಇದಕ್ಕೆ ಏನನ್ನುತ್ತಾರೆ? ನನಗೆ ಮಾತ್ರ ಹೀಗೆ ಆಗುತ್ತಿದೆಯೆ?

ಪ್ರತಿಕ್ರಿಯೆ:
ಇಂಥ ಪ್ರಶ್ನೆಗಳನ್ನು ಹಲವು ಸಲ ಕೇಳಿದ್ದೇನೆ, ನಾನೂ ಅನುಭವಿಸಿದ್ದೇನೆ. ಎಲ್ಲಿಯೋ ಪಯಣಿಸಿದಾಗ, "ಇಲ್ಲಿ ಬಂದಿದ್ದೆ" ಅನ್ನುವ ಭಾವನೆ; ಯಾರೊಡನೆಯೋ ಮಾತಾಡುವಾಗ (ಅವರೊಂದಿಗೆ ಮೊದಲ ಭೇಟಿಯೇ ಆಗಿರಲಿ), "ಇವೇ ಮಾತುಗಳನ್ನು, ಹೀಗೇ, ಹಿಂದೊಮ್ಮೆ ಮಾತಾಡಿದ್ದೆವು, ಇದೇ ವ್ಯಕ್ತಿಯೊಡನೆ. ಈಗ ಅವರ ಉತ್ತರ ಇಂಥದ್ದೇ ಆಗಿರುತ್ತದೆ" ಅನ್ನುವ ಯೋಚನೆ (ಹಾಗೆಯೇ ಆಗಿರುತ್ತದೆ ಕೂಡಾ); ಯಾವ-ಯಾವುದೋ ವ್ಯಕ್ತಿಗಳು- ಮೊದಲು ಕಂಡಿರದಿದ್ದರೂ- ಭೇಟಿಯಾದಾಗ ತೀರಾ ಪರಿಚಿತರು ಅನ್ನಿಸುವ ಭಾವನೆ-- ಇವೆಲ್ಲವನ್ನೂ ಇಂಗ್ಲಿಷಿನಲ್ಲಿ "ದೇ-ಜ-ವೂ" ಅನ್ನುತ್ತಾರೆ. ಇದು ಮಾಮೂಲು ಅನ್ನಬಹುದಾದಷ್ಟು ಮಾಮೂಲು "ಫಿನಾಮೆನಾ". ನಮಗಿದು ಪೂರ್ವಜನ್ಮದ ಸ್ಮೃತಿಯಿರಬಹುದು (ಸ್ಥಳದ, ವ್ಯಕ್ತಿಯ ಪರಿಚಿತ ಭಾವನೆ), ಅಥವಾ ಕನಸಲ್ಲೂ ಇರಬಹುದು (ಮಾತುಕತೆಗಳ ಸಂದರ್ಭಗಳು), ಅಥವಾ ಎರಡೂ. ಕುತೂಹಲ ಜಾಸ್ತಿಯಿದ್ದರೆ, ಕಂಡುಹಿಡಿಯ"ಬಹುದು"... ಎಲ್ಲ ಕನಸುಗಳ, ನೆನಪುಗಳ ಟಿಪ್ಪಣಿ ಬರೆಬರೆದು ಇಡುತ್ತಾ ಹೋದರೆ ಅಲ್ಲೊಂದು ಇಲ್ಲೊಂದು ಕೊಂಡಿಗಳು ಸಿಗುತ್ತವೆ. ಸಣ್ಣ-ಸಣ್ಣ ಕೊಂಡಿಗಳನ್ನು ಕೂಡಿಸಿ ಒಂದು ಅಂದಾಜು ಚಿತ್ರಣ ಪಡೆಯಬಹುದು.

ಸಂದೇಹ-೦೨:
ಡಿಪ್ರೆಶನ್ ಅನ್ನುವುದು ಮನಸ್ಸಿನ ಯಾವ ಸ್ಥಿತಿ?

ಪ್ರತಿಕ್ರಿಯೆ: ಡಿಪ್ರೆಶನ್ ಅನ್ನುವುದನ್ನು ಮಾನಸಿಕ ತಜ್ಞರು (ಸೈಕಾಲಜಿಸ್ಟ್, ಸೈಕಿಯಾಟ್ರಿಸ್ಟ್, ಸೈಕೋಥೆರಪಿಸ್ಟ್), ಅಲೋಪಥಿ ವೈದ್ಯರು, ಮತ್ತು ಸಮ್ಮೋಹನ-ಚಿಕಿತ್ಸಕರು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಾರೆ. ಮಾನಸಿಕ ತಜ್ಞರ ಪ್ರಕಾರ ಅದು ಸೈಕೋ-ನ್ಯೂರಾಟಿಕ್ ಅಥವಾ ಸೈಕೋ-ಸೊಮ್ಯಾಟಿಕ್ (ಮನೋ-ದೈಹಿಕ) ಖಾಯಿಲೆ. ವೈದ್ಯರ ಪ್ರಕಾರ ಅದು ಮಾನಸಿಕ (ಸೈಕಲಾಜಿಕಲ್) ಖಾಯಿಲೆ. ಇವರಿಬ್ಬರೂ ಈ ಖಾಯಿಲೆಗಾಗಿ ದೀರ್ಘಕಾಲಿಕ ನಿವಾರಣಾತಂತ್ರಗಳನ್ನು, ಮದ್ದನ್ನು ಸೂಚಿಸುತ್ತಾರೆ. ಅವರ ಪ್ರಕಾರ ಇದು ಸಂಪೂರ್ಣ ಗುಣವಾಗದ, ಪದೇ ಪದೇ ಬರಬಹುದಾದ, ಗುಳಿಗೆರೂಪದಲ್ಲಿ ಮದ್ದು ಬೇಕೇಬೇಕಾದ "ಖಾಯಿಲೆ". ಹಿಪ್ನಾಟಿಕ್ ಥೆರಪಿಸ್ಟ್ ಪ್ರಕಾರ ಅದೊಂದು ಸ್ಥಿತಿ; ಹಲವಾರು ತೊಂದರೆಗಳ ಮೊತ್ತದಿಂದ ಉಂಟಾಗುವ ಸ್ಥಿತಿ; ಪರಿಹರಿಸಲ್ಪಡುವ, ಬದಲಾವಣೆಗೆ ಒಗ್ಗುವ ಸ್ಥಿತಿ. ಸಾಮಾನ್ಯವಾಗಿ ನಮ್ಮ ಮನಸ್ಸು ಒತ್ತಡಕ್ಕೆ ಸಿಲುಕಿದಾಗ ಅದರಿಂದ ಹೊರಬರುವ ದಾರಿಗಳನ್ನು ತಾನೇ ಹುಡುಕಿಕೊಳ್ಳುತ್ತದೆ. ಕೆಲವೊಮ್ಮೆ, ಒತ್ತಡ ಅತಿಯಾದಾಗ ಅಥವಾ ಒತ್ತಡದ ಪರಿಸ್ಥಿತಿಯಿಂದ ಹೊರಬರುವ ದಾರಿ ಕಾಣದಾದಾಗ ಅಥವಾ ಒತ್ತಡ ತನಗೆ ತಾನೇ ತಂದುಕೊಂಡದ್ದಾದಾಗ (ಸೆಲ್ಫ್ ಇಂಪೋಸ್ಡ್ ಸ್ಟ್ರೆಸ್- "ಇತರರ ಬಗ್ಗೆ ತಾವೇ ಜವಾಬ್ದಾರರು, ಮನೆಯವರೆಲ್ಲರ ಯಾ ಸಹವರ್ತಿಗಳ ನಡವಳಿಕೆಗಳಿಗೆ, ಹಿತಾಸಕ್ತಿಗೆ ತಾವೊಬ್ಬರೇ ಹೆಗಲಾಸರೆ, ಮಾನದಂಡ, ಯಾ ಧರ್ಮದರ್ಶಿ" ಅನ್ನುವಂಥ ಮನೋಧರ್ಮ ಇದ್ದಾಗ) ಮನಸ್ಸು ಮುದುಡುತ್ತದೆ (ಇವು ಕೆಲವು ಉದಾಹರಣೆ ಮಾತ್ರ). ಅಂಥ ಮನಸ್ಸು ಕಾಲಕ್ರಮೇಣ ಎಲ್ಲದರಲ್ಲೂ ಕೆಡುಕನ್ನು, ಹುಳುಕನ್ನು, ಕತ್ತಲನ್ನು ಕಾಣಲು ತೊಡಗುತ್ತದೆ. ಎಲ್ಲವೂ ಅರ್ಥಹೀನವೆನಿಸಬಹುದು. ಜೀವನ ನೀರಸವೆನಿಸಬಹುದು. ಅಂಥ ಮನಸ್ಥಿತಿಯನ್ನು ಸಾಮಾನ್ಯವಾಗಿ ಡಿಪ್ರೆಶನ್ ಅನ್ನುತ್ತಾರೆ. ಈ ನೀರಸ ಮನಸ್ಥಿತಿ ಹೆಚ್ಚಿದಂತೆ, ಆಶಾಭಾವನೆ ತಗ್ಗಿದಂತೆ, ಜೀವನದ ಅರ್ಥವ್ಯಾಪ್ತಿ ಕುಗ್ಗಿದಂತೆ ಆತ್ಮಹತ್ಯೆಯಂಥ ನೇತ್ಯಾತ್ಮಕ ತುಡಿತ (ನೆಗೆಟಿವ್ ಇಂಪಲ್ಸ್) ಹುಟ್ಟಬಹುದು, ಹೆಚ್ಚಬಹುದು. ಹೀಗೆ ವ್ಯಕ್ತಿ ಡಿಪ್ರೆಶನ್ನಿಗೆ ಒಳಗಾದಾಗ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಗಳೂ ಸ್ವಲ್ಪ ಏರುಪೇರಾಗಿ ಗೊಂದಲ ಏರ್ಪಡುತ್ತದೆ. ಅದಕ್ಕಾಗಿಯೇ ವಿಧವಿಧವಾದ ಗುಳಿಗೆ-ಮಾತ್ರೆಗಳು ಲಭ್ಯವಿವೆ. ಆದರೆ ಅವೆಲ್ಲವೂ ವ್ಯಕ್ತಿಯನ್ನು ತನ್ನ "ಹಿಡಿತ"ದೊಳಗೆ ಇರಿಸಿಕೊಳ್ಳುತ್ತವೆ- ಅರ್ಥಾತ್ "ಅಡಿಕ್ಟಿವ್" ಆಗಿವೆ. ಮಾತ್ರೆ-ಗುಳಿಗೆಗಳ ಬದಲಾಗಿ, ಅಂಥ ಸಂದರ್ಭಗಳಲ್ಲಿ ಸಹವರ್ತಿಗಳ ಪ್ರೀತಿ, ವಿಶ್ವಾಸಪೂರ್ಣ ನಡವಳಿಕೆ, ಉತ್ಸಾಹಭರಿತ ಸಾಹಚರ್ಯ, ಒಡನಾಟ, ಅತೀ ಅವಶ್ಯಕ. ಬಹಳಷ್ಟು ಆತ್ಮಹತ್ಯೆಗಳಿಗೆ ಇಂಥ ನೇತ್ಯಾತ್ಮಕ ಮನೋಸ್ಥಿತಿಯೇ ಕಾರಣವಾಗಿರುತ್ತದೆ. ನಿಮಗೆ ಈ ರೀತಿಯ ಮನಸ್ಥಿತಿಯಲ್ಲಿರುವ ಯಾರದ್ದಾದರೂ ಪರಿಚಯವಿದ್ದರೆ ಅವರೊಂದಿಗೆ ಸ್ನೇಹ-ಪ್ರೀತಿಯಿಂದ ನಡೆದುಕೊಳ್ಳಿ. ಜೀವನ ದುರಂತಮಯವಲ್ಲ ಎಂದು ತಿಳುವಳಿಕೆ ಮೂಡಿಸಲು ಪ್ರಯತ್ನಪಡಿ. ಅವರ ತೊಂದರೆ-ಒತ್ತಡದ ಮೂಲ ತಿಳಿಯಲು ಪ್ರಯತ್ನಿಸಿ, ಅದಕ್ಕೆ ಪರಿಹಾರ ಹುಡುಕಲು ಸಹಕರಿಸಿ. ಒಂದು ಘಟನೆಗೆ, ಪರಿಸ್ಥಿತಿಗೆ, ವಾತಾವರಣಕ್ಕೆ ಅನೇಕ ಮುಖಗಳಿವೆ ಅನ್ನುವುದನ್ನು ಮನವರಿಕೆ ಮಾಡಿಸಿ. ನೇತ್ಯಾತ್ಮಕವನ್ನು ಇತ್ಯಾತ್ಮಕ (ಪೊಸಿಟಿವ್ ಥಿಂಕಿಂಗ್) ಆಗಿಸಲು ಪ್ರಯತ್ನಿಸಿ. ಅವರನ್ನು ಸದಾ ಹಿತವಾದ ಚಟುವಟಿಕೆಯಲ್ಲಿರಿಸಿ, ಒಂಟಿಯಾಗಿರಲು ಬಿಡಬೇಡಿ. ಓದುಗರೇ, ನಿಮಗೂ ಇಂಥ ಪ್ರಶ್ನೆ/ಸಂದೇಹಗಳಿದ್ದರೆ ಬರೆದು ತಿಳಿಸಿ. ಪರಸ್ಪರ ಬೆಳೆಯೋಣ.

(ಭಾಮಿನಿ, ಆಗಸ್ಟ್ ೨೦೧೧)

Wednesday 20 July, 2011

ಹಿಪ್ನೋಥೆರಪಿ-ಭಾಗ-೦೬

ಹಿಪ್ನೋಥೆರಪಿಯಲ್ಲಿ ರಿಗ್ರೆಷನ್
ಸಂದೇಹಗಳು ಮತ್ತು ಸಾಧ್ಯತೆಗಳು - ೦೨

ಕಳೆದ ಸಂಚಿಕೆಯಲ್ಲಿ ಎರಡು ಪ್ರಶ್ನೆಗಳನ್ನು ಅವಲೋಕಿಸಿದ್ದೇವೆ, ಉತ್ತರ ತೃಪ್ತಿಕರವಾಗಿತ್ತೆಂದು ಭಾವಿಸುತ್ತೇನೆ. ಈ ಕಂತಿನಲ್ಲಿ ಇನ್ನೊಂದೆರಡನ್ನು ನೋಡೋಣ:

ಮೊದಲನೆಯ ಪ್ರಶ್ನೆ: “ರಿಗ್ರೆಷನ್ ಬಗೆಗೆ ಮೂಲಭೂತ ಸಂದೇಹವಿದೆ. ರಿಗ್ರೆಷನ್ ಆದಾಗ ಎರಡು ಸಾಧ್ಯತೆಗಳು ಕಾಣುತ್ತವೆ:
೧ನೆಯ ಸಾಧ್ಯತೆ: ರಿಗ್ರೆಷನ್‌ಗೆ ಒಳಗಾದ ವ್ಯಕ್ತಿ ತನ್ನ ಪೂರ್ವಜನ್ಮದ ಘಟನೆಗಳನ್ನು ನೆನಪಿಸಿಕೊಳ್ಳುವನು.
೨ನೆಯ ಸಾಧ್ಯತೆ: ಗತಕಾಲದ ಎಲ್ಲ ಘಟನೆಗಳು ಅಭೌತಿಕ ‘ಆಕಾಶ’ದಲ್ಲಿ ತೇಲುತ್ತಿದ್ದು, ರಿಗ್ರೆಸ್ ಆದ ವ್ಯಕ್ತಿ, ಈ ಘಟನೆಗಳಿಗೆ ಟ್ಯೂನ್ ಆದರೆ, ಅವು ತನ್ನವೇ ಅನುಭವ ಎಂದು ಭಾವಿಸಬಹುದು.
ಆದುದರಿಂದ, ಯಾವುದು ನಿಜವಿರಬಹುದೆನ್ನುವದರ ಬಗೆಗೆ ಋಜುವಾತು ನೀಡಲು ಅಥವಾ ಪ್ರಮಾಣೀಕರಿಸಲು ಸಾಧ್ಯವೆ? ಆ ತರಹ ಮಾಡಲಾಗಿದೆಯೆ?

ಪರಿಹಾರ:
ರಿಗ್ರೆಷನ್ ಅನ್ನುವ ಪದದ ಸಾಮಾನ್ಯ ಅರ್ಥ, ಸಮ್ಮೋಹನಕ್ಕೆ ಸಂಬಂಧಪಟ್ಟಂತೆ, ‘ಪೂರ್ವ ಸ್ಮೃತಿ’ ಎಂದಷ್ಟೇ. ಅದು ಪೂರ್ವ ಜನ್ಮದ್ದಾಗಿರಲಿ, ಬಾಲ್ಯದ್ದಾಗಿರಲಿ, ಅಥವಾ ನಿನ್ನೆಯ ಸಂಜೆಯಷ್ಟೇ ತಿಂದ ವಿಶಿಷ್ಠ ತಿಂಡಿಯದ್ದಾಗಿರಲಿ- ಇವೆಲ್ಲವೂ ಪೂರ್ವ ಸ್ಮೃತಿಗಳೇ. ಇವನ್ನೆಲ್ಲ ನೆನಪಿಸಿಕೊಳ್ಳುವುದೂ ರಿಗ್ರೆಷನ್ ಎಂದೇ ಪರಿಗಣಿತ. ಆದ್ದರಿಂದ, ರಿಗ್ರೆಷನ್‌ಗೆ ಒಳಗಾದ ವ್ಯಕ್ತಿ ತನ್ನ ಗತಜನ್ಮದ ನೆನಪುಗಳನ್ನು ನೆನಪಿಸಿಕೊಳ್ಳುವುದೂ ಅಷ್ಟೇ ನಿಜ.

ಇನ್ನು ಎರಡನೇ ಸಾಧ್ಯತೆಯ ಬಗ್ಗೆ- ಖಚಿತವಾಗಿ ಯಾವುದೇ ಸಂಭವನೀಯತೆಗಳು ನನಗೆ ಕಂಡಿಲ್ಲ. ನಾನು ಇದುವರೆಗೆ ಓದಿ ತಿಳಿದಂತೆ, ನಮ್ಮ ನಮ್ಮ ನೆನಪುಗಳು ನಮ್ಮವೇ. ಆದರೆ... ಒಬ್ಬ ವ್ಯಕ್ತಿ, ತನ್ನ ಪ್ರಜ್ಞಾವಲಯವನ್ನು ತುಂಬಾ ಸಶಕ್ತವಾಗಿಸಿಕೊಂಡು, ನಿರ್ಮಲವಾಗಿಸಿಕೊಂಡು, ಸಮ್ಮೋಹನ ಸ್ಥಿತಿಗೆ ಹೋದರೆ (ಋಷಿ-ಮುನಿಗಳ ಸಮಾಧಿ ಸ್ಥಿತಿಯಂತಹ ಮಟ್ಟ ತಲುಪಿದರೆ), ಆಗ ಆ ವ್ಯಕ್ತಿಗೆ ವರ್ತಮಾನದೊಂದಿಗೆ ಭೂತ-ಭವಿಷ್ಯಗಳೂ ಅರಿವಿಗೆ ಬರುವ ಬಗ್ಗೆ ದಾಖಲೆಗಳಿವೆ. ನಮ್ಮ ವೇದಗಳು ಅಂಥ ಮಹಾತ್ಮರ ಕೊಡುಗೆ. ಪುರಾಣಗಳ ತುಂಬಾ ಅಂಥವರೇ ಇದ್ದಾರೆ. ಅಂದರೆ, ಸಮ್ಮೋಹಿತ ಸ್ಥಿತಿಯಲ್ಲಿ ಎಲ್ಲ ಭೌತಿಕ ನೆಲೆಗಳನ್ನೂ ಮೀರಿ, ಅಭೌತಿಕ ಮಟ್ಟದಲ್ಲಿ, “ಜಾಗತಿಕ ಪ್ರಜ್ಞಾವಲಯದಲ್ಲಿ” ಸಂಚರಿಸುವ ಆಂತರಿಕ ಶಕ್ತಿ ಪ್ರತಿಯೊಬ್ಬರಿಗೂ ಇದೆ. ಆಗ ಅವರು ಅಂಥ “ಕಾಣ್ಕೆ”ಗಳನ್ನು ತನ್ನ ಅನುಭವ ಅಂದುಕೊಳ್ಳಲಾರರು, ಅದು ನಿಜವಾಗಿಯೂ ಏನು ಅನ್ನುವ “ಅರಿವು” ಅವರಿಗಿರುತ್ತದೆ. ಅಂಥ ಶಕ್ತಿಯನ್ನು ಸ್ವಪ್ರಯತ್ನದಿಂದ, ಗುರು-ನಿರ್ದೇಶನದಿಂದ, ಅಧ್ಯಯನದಿಂದ, ಅರಿವಿನಿಂದ ಜಾಗೃತಗೊಳಿಸಿಕೊಳ್ಳಬಹುದು.

ಎರಡನೆಯ ಪ್ರಶ್ನೆ: “ರಿಗ್ರೆಷನ್ನಿಗೆ ಒಳಗಾದ ವ್ಯಕ್ತಿಗೆ ಹಿಂದಿನ ಯಾವುದೋ ಜನ್ಮದ ತನ್ನ ಬಂಧುವಿನ (ಮಗುವಿನ, ಪತಿ/ಪತ್ನಿಯ) ಸ್ಮೃತಿಯಿಂದ ಈ ಜನ್ಮದಲ್ಲೂ ಆ ವ್ಯಕ್ತಿಯ ಮೇಲೆ (ಆ ವ್ಯಕ್ತಿ ಬೇರೆ ಯಾರದೋ ಮನೆಯಲ್ಲಿ, ಬೇರೊಂದು ಬಂಧನದಲ್ಲಿ ಈಗ ಹುಟ್ಟಿದ್ದರೂ) ಮಮಕಾರ, ಪ್ರೀತಿ ಬರಲಾರದೆ? ಬಂದರೆ ಅದು ಸರಿಯೆ?”

ಪರಿಹಾರ:
ಯಾವುದೋ ಜನ್ಮದ ಬಂಧನ ಈ ಜನ್ಮದಲ್ಲಿ ನೆನಪಾಗಿ ಅದನ್ನರಸಿ ಹೋಗಿ ಈ ಜನ್ಮದಲ್ಲೂ ಒಂದಾಗುವ ಕಥೆಗಳು ನಮ್ಮಲ್ಲಿ ಬಳಕೆಯಲ್ಲಿವೆ. ಹಾಗಂತ ಅದು ಎಲ್ಲ ಸಂದರ್ಭಗಳಲ್ಲೂ ಸರಿ ಎಂದಲ್ಲ. ವ್ಯಕ್ತಿಗಳಿಬ್ಬರೂ ಈ ಜನ್ಮದಲ್ಲಿ ಬೇರೆ ಬಾಂಧವ್ಯದಲ್ಲಿ ಇಲ್ಲದಿದ್ದಾಗ ಅದು ಸುಸೂತ್ರವಾಗಿ ನಡೆಯಬಹುದು, ಸರಿಯೂ ಆಗಬಹುದು. ಆದರೆ ಇಬ್ಬರಿಗೂ ಪ್ರಸ್ತುತ ಜನ್ಮದ ಬೇರೆ ಬಾಂಧವ್ಯಗಳಿದ್ದರೆ ಆಗ ಅದು ಸರಿಯಾಗಲಾರದು. ಇನ್ನು ಕಾಲ್ಪನಿಕ ಕಥೆಗಳಲ್ಲಿ ಇದಕ್ಕೆ ಬೇರೆ ಬೇರೆ ಆಯಾಮಗಳು ದೊರಕಿವೆ, ಅದನ್ನು ಇಲ್ಲಿ ಚರ್ಚಿಸುವುದಿಲ್ಲ. ಅದು ಕಲ್ಪನೆ-ಸತ್ಯಗಳ ಮಿಶ್ರಣ; ಅದೇ ಪೂರ್ಣ ಸತ್ಯ ಅಲ್ಲವಲ್ಲ!

ಪ್ರತಿಯೊಬ್ಬ ವ್ಯಕ್ತಿ ರಿಗ್ರೆಷನ್ನಿಗೆ ಒಳಗಾದಾಗ, ಆ ಸಂದರ್ಭವೂ ಪ್ರಸ್ತುತವೆನಿಸುತ್ತದೆ. ಯಾವುದೋ ತೊಂದರೆಗೆ ಉತ್ತರ ಹುಡುಕುತ್ತಾ ಸಮ್ಮೋಹನದಲ್ಲಿ ಪೂರ್ವಸ್ಮೃತಿಯನ್ನು ಅರಸಿದರೆ, ಆಗ ಅಂಥ ಸ್ಮೃತಿಯಲ್ಲಿ ಯಾವುದೋ ಒಂದು ಚಿಕಿತ್ಸಕ ಗುಣವಿದ್ದೇ ಇರುತ್ತದೆ. ಅಂಥ ಸ್ಮೃತಿಯನ್ನು ಚಿಕಿತ್ಸಕವಾಗಿ “ಕಾಣಿಸುವುದು” ಚಿಕಿತ್ಸಕನ ಕೆಲಸ; ಧರ್ಮ. ಇದರ ಹೊರತಾಗಿಯೂ ಸಮ್ಮೋಹಿತ ವ್ಯಕ್ತಿಗೆ ಹಿಪ್ನಾಟಿಕ್ ಟ್ರಾನ್ಸ್ ಬಿಟ್ಟು ಮಾಮೂಲು ಸ್ಥಿತಿಗೆ ಬಂದಾಗಲೂ ಸ್ಮೃತಿಯ ಬಂಧನವೇ ಕಾಡುತ್ತಿದ್ದರೆ ಮತ್ತು ಆ ವ್ಯಕ್ತಿ ಸಾಮಾಜಿಕವಾಗಿ ಈ ಹೊಸ ಬಂಧನಕ್ಕೆ ಒಳಗಾಗುವ ಸ್ಥಿತಿಯಲ್ಲಿರದಿದ್ದರೆ, ಅದಕ್ಕೆ ಸೂಕ್ತ ಸಲಹೆಗಳನ್ನು ಕೊಟ್ಟು ಸರಿಯಾದ ದೃಷ್ಟಿಕೋನದೆಡೆ ನಡೆಸುವುದು ಚಿಕಿತ್ಸಕನ ಜವಾಬ್ದಾರಿ. ಆದರೆ, ಇಂಥ ಪೀಕಲಾಟದ ಸಂದರ್ಭಗಳು ಎದುರಾದದ್ದನ್ನು ನಾನು ಇದುವರೆಗೆ ಓದಿಲ್ಲ, ನನ್ನ ತಿಳುವಳಿಕೆಗೆ ಬಂದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಆ ಇಬ್ಬರೂ ವ್ಯಕ್ತಿಗಳು ಈ ಜನ್ಮದಲ್ಲೂ ಬಂಧುಗಳಾಗಿಯೇ ಇದ್ದಿರುವ ಅಥವಾ ಮುಂದೆ ಬಂಧುಗಳಾಗುವ ಸಾಧ್ಯತೆ ಇದ್ದುದೇ ಹೆಚ್ಚು.

ಇನ್ನು, ಯಾರಿಗಾದರೂ ಆಕಸ್ಮಿಕವಾಗಿ ಕನಸಿನಲ್ಲಿ ಅಂಥ ಪೂರ್ವಸ್ಮೃತಿ ನೆನಪಿಗೆ ಬಂದು ಹಿಂದಿನ ಜನ್ಮದ ವ್ಯಕ್ತಿಯೆಡೆ ಬಾಂಧವ್ಯ ಉಂಟಾದರೆ ಅದಕ್ಕೆ ಅತೀಂದ್ರಿಯ ನೆಲೆಯಲ್ಲಿ ಪ್ರಸ್ತುತ ಬದುಕಿಗೆ ಹೊಂದುವಂತೆ ಯಾವುದೋ ಅಗತ್ಯತೆಯ ಯಾ ಕಲಿಕೆಯ ಕಾರಣವಿದ್ದೀತು. ಕಾರ್ಯ-ಕಾರಣ ಸಂಬಂಧವಿಲ್ಲದೆ ಅತೀಂದ್ರಿಯ ನೆಲೆಯಲ್ಲಿ ಯಾವುದೂ ನಡೆಯಲಾರದು ಅನ್ನುವುದು ನನ್ನ ನಂಬಿಕೆ. ಇವಲ್ಲದೆ, ಸುಮ್ಮ-ಸುಮ್ಮನೇ ಯಾರಿಗೋ ಯಾರ ಮೇಲೋ ಮಮಕಾರ ಉಂಟಾಗದು. ಅವೆಲ್ಲಕ್ಕೂ ಯಾವುದೋ ಒಂದು ತಿಳಿಯದ ಕಾರಣವಿದ್ದೇ ಇರುತ್ತದೆ. ಆ ಕಾರಣದ ಹುಡುಕಾಟವೇ ಕಲಿಕೆಯ, ತಿಳಿವಿನ ಆಕಾಂಕ್ಷೆಯ ಮೂಲ ಅನ್ನುವುದೂ ನನ್ನ ನಂಬಿಕೆ.

ರಿಗ್ರೆಷನ್ ಸಂದರ್ಭದಲ್ಲಿ ಚಿಕಿತ್ಸಕನ ಜವಾಬ್ದಾರಿ ಹೆಚ್ಚು. ರಿಗ್ರೆಷನ್ನಿಗೆ ಒಳಗಾದ ವ್ಯಕ್ತಿ ಆ ಸಂದರ್ಭದಲ್ಲಿ ಮಾನಸಿಕ ತುಮುಲಗಳಿಗೆ ಒಡ್ಡಿಕೊಂಡಿರುತ್ತಾರೆ. ಆಯಾಯ ನೆನಪಿನ (ಬಾಲ್ಯದ ಅಥವಾ ಪೂರ್ವ ಜನ್ಮದ) ಅನುಭವಗಳನ್ನು ಈಗಲೇ ಎಂಬಂತೆ ‘ಅನುಭವಿಸು’ತ್ತಿರುತ್ತಾರೆ. ಅದನ್ನು ಸರಿಯಾಗಿ ತಿಳಿದು ನಾಜೂಕುತನದಿಂದ ನಿಭಾಯಿಸುವ ಚಾಕಚಕ್ಯತೆ ಚಿಕಿತ್ಸಕರಿಗಿರಬೇಕು. ಹಾಗಿಲ್ಲದಿದ್ದಲ್ಲಿ, ರಿಗ್ರೆಷನ್ ಥೆರಪಿಯಿಂದ ಉಪಯೋಗಕ್ಕಿಂತಲೂ ತೊಂದರೆಗಳೇ ಆದಾವು.
(ಭಾಮಿನಿ, ಜುಲೈ ೨೦೧೧.)

Sunday 19 June, 2011

ಎಲ್ಲರೂ ಬನ್ನಿ... ನಮ್ಮ ಖುಷಿಯಲ್ಲಿ ಪಾಲುದಾರರಾಗಿ...

ಆತ್ಮೀಯ ಓದುಗರಿಗೆ ನಮಸ್ಕಾರ.
ಇದೇ ತಿಂಗಳ ಕೊನೆಯ ಭಾನುವಾರ, ಜೂನ್ ಇಪ್ಪತ್ತಾರರ ಸಂಜೆ, ಮೂರೂವರೆಯಿಂದ ಆರೂವರೆಯ ತನಕ

ನಿಮ್ಮೆಲ್ಲರ ಸಹವಾಸ ನಮಗೆ ಬೇಕು. ನಿಮ್ಮೆಲ್ಲರ ಸಾಹಚರ್ಯ ನಮಗೆ ಬೇಕು. ನಿಮ್ಮೆಲ್ಲರ ಸಹಕಾರ ನಮಗೆ ಬೇಕು.

ಪ್ರೋತ್ಸಾಹ, ನಗು, ಖುಷಿ, ಮತ್ತೊಂದಿಷ್ಟು (ಸಾಹಿತ್ಯಿಕ ಮತ್ತು ಜಠರದ) ಹಸಿವು ಹೊತ್ತುಕೊಂಡೇ ಬನ್ನಿ.

ಎಲ್ಲಿಗೇಂದಿರಾ?

ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣಕ್ಕೆ.

ಯಾಕೇಂತೀರಾ?

ಇಬ್ಬರು ಸಾಹಿತ್ಯ ದಿಗ್ಗಜರು ಅಂದು ನಮ್ಮನ್ನು ಪುಟ್ಟ ಯಾತ್ರೆ ಮಾಡಿಸಲಿದ್ದಾರೆ, ಸಾಹಿತ್ಯ ಯಾತ್ರೆ.

ಡಾ. ಸಾ.ಶಿ. ಮರುಳಯ್ಯ ಅವರು "ಹಳೇ ಮತ್ತು ಹೊಸ ಕಾವ್ಯದ ಸಂಬಂಧ" ವಿಷಯದ ಮೇಲೂ
ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರು ಈ ವಿಷಯಕ್ಕೆ ಪೂರಕವಾಗಿಯೂ

ಉಪನ್ಯಾಸ ಮಾಡಲಿದ್ದಾರೆ.

ಜೊತೆಗೆ, ಮಾಮೂಲು...
ಚಹಾ, ಕಾಫಿ, ತಿಂಡಿ. ಸ್ನೇಹ ಸಮ್ಮಿಲನ.

ಮೇಲೊಂದಿಷ್ಟು ಕವನವಾಚನಗಳ ಒಗ್ಗರಣೆ. ನಡುವೆ ಸಣ್ಣ ಹೂರಣ: ಎರಡು ಪುಸ್ತಕಗಳ ಅನಾವರಣ.

ಬರುತ್ತೀರಲ್ಲ! ನೀವಿಲ್ಲದೆ ಇವೆಲ್ಲ ಖುಷಿ ಕೊಡೋಲ್ಲ, ಗೊತ್ತು ತಾನೆ!

ನಿಮ್ಮನ್ನು ಎದುರುಗೊಳ್ಳಲು ತಯಾರಾಗುತ್ತಿರುವ,
ಸುಪ್ತದೀಪ್ತಿ-ಜ್ಯೋತಿ.

Friday 17 June, 2011

ಹಿಪ್ನೋಥೆರಪಿ-ಭಾಗ-೦೫

ಹಿಪ್ನೋಥೆರಪಿಯಲ್ಲಿ ರಿಗ್ರೆಷನ್
ಸಂದೇಹಗಳು ಮತ್ತು ಸಾಧ್ಯತೆಗಳು - ೦೧

ಈ ಕಂತಿನಲ್ಲಿ ಕೆಲವೊಂದು ಪ್ರಶ್ನೋತ್ತರಗಳನ್ನು ನೋಡೋಣ.
ನನ್ನ ಬ್ಲಾಗ್ ಬರಹಗಳಲ್ಲಿ ರಿಗ್ರೆಷನ್ ಬಗ್ಗೆ ಬರೆದಾಗ ಓದುಗರು, ಸ್ನೇಹಿತರು ಕೇಳಿದ ಸಂದೇಹಗಳಲ್ಲಿ ಎರಡನ್ನು ಇಲ್ಲಿ ಪ್ರಸ್ತುತಪಡಿಸುತ್ತೇನೆ (ಮುಂದಿನ ಕಂತುಗಳಲ್ಲಿ ಇನ್ನೂ ಕೆಲವು ಪ್ರಶ್ನೆಗಳನ್ನು ನೋಡಬಹುದು):

ಸಂದೇಹ-೦೧: ಸಮ್ಮೋಹನದಲ್ಲಿದ್ದಾಗ ವ್ಯಕ್ತಿ ಪೂರ್ವಸ್ಮೃತಿಯನ್ನು ತಂದುಕೊಳ್ಳುವುದು ಹೇಗೆ ಸಾಧ್ಯವಾಗುತ್ತದೆ?

ಸಂದೇಹ-೦೨: ಹಿಪ್ನೋಸಿಸ್ ಥೆರಪಿ, ಅಥವಾ ಪಾಸ್ಟ್ ಲೈಫ್ ರಿಗ್ರೆಷನ್‌ಗಳಿಂದ ತಂದುಕೊಳ್ಳುವ ಹಳೆಯ ಘಟನೆಗಳ ನೆನಪುಗಳು... ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳನ್ನು ನಿವಾರಿಸಲು ಯಾವ ರೀತಿಯಲ್ಲಿ ಕಾರಣವಾಗುತ್ತವೆ?

ಉತ್ತರ: ಇವೆರಡೂ ಪ್ರಶ್ನೆಗಳು ಒಂದಕ್ಕೊಂದು ಪೂರಕವಾದ್ದರಿಂದ ಒಟ್ಟಿಗೇ ಉತ್ತರಿಸುವ ಪ್ರಯತ್ನ ಮಾಡುತ್ತೇನೆ.

ಮೊದಲ ಪ್ರಶ್ನೆಗೆ ಪೂರ್ವಭಾವಿ ಉತ್ತರವಾಗಿ ಸ್ಮೃತಿ/ನೆನಪು ಅಂದರೆ ಏನು, ಎಲ್ಲಿರುತ್ತದೆ, ಹೇಗೆ "ನೆನಪು" ಆಗುತ್ತದೆ, ಎಂಬ ವಿಷಯಗಳನ್ನು ಸಂಕ್ಷಿಪ್ತವಾಗಿ ತಿಳಿಯುವುದಗತ್ಯ.

ಥಿಯರಿ ಆಫ಼್ ಮೈಂಡ್:

ನಮ್ಮ ಆಗಿಂದಾಗಿನ ನೆನಪುಗಳು ಸುಮಾರು ಇಪ್ಪತ್ನಾಲ್ಕು ಘಂಟೆಗಳವರೆಗೆ, ಅಥವಾ ನಾವು ಒಮ್ಮೆ ನಿದ್ರಿಸುವವರೆಗೆ ನಮ್ಮ ಜಾಗೃತಪ್ರಜ್ಞಾವಲಯದಲ್ಲಿ (‘ಕಾನ್ಷಿಯಸ್ ಮೈಂಡ್’ನಲ್ಲಿ) ಇರುತ್ತವೆ. ನಿದ್ರಿಸಿದ ಹೊತ್ತಿಗೆ (ಅಥವಾ ಇಪ್ಪತ್ನಾಲ್ಕು ಘಂಟೆಗಳ ಬಳಿಕ) ಅವು ನಮ್ಮ ಕ್ರಿಟಿಕಲ್/ ಅನಲಿಟಿಕಲ್ ಮೈಂಡ್ (ತಾರ್ಕಿಕ ಪ್ರಜ್ಞೆ) ದಾಟಿಕೊಂಡು ಸುಪ್ತಮನಸ್ಸಿನ (ಸುಪ್ತಪ್ರಜ್ಞೆಯ, ಸಬ್-ಕಾನ್ಷಿಯಸ್ ಮೈಂಡಿನ) ಪದರಕ್ಕೆ ಸೇರುತ್ತವೆ. ನಮ್ಮೆಲ್ಲಾ ನೆನಪುಗಳು, ಪೂರ್ವ ಸ್ಮೃತಿಗಳು ಈ ಸುಪ್ತಪ್ರಜ್ಞೆಯ ಪದರಗಳಲ್ಲೇ ಹುದುಗಿರುತ್ತವೆ. ಇದರ ಆಳದ ಪದರಗಳನ್ನೇ ಅತೀಂದ್ರಿಯ ಪ್ರಜ್ಞೆ (ಸೂಪರ್ ಕಾನ್ಷಿಯಸ್) ಅನ್ನಬಹುದು. ಅತ್ಯಂತ ಹಿಂದಿನ ನೆನಪುಗಳು, ಪೂರ್ವಜನ್ಮದವೂ ಸಹ, ಇಲ್ಲೇ ಹುದುಗಿರುತ್ತವೆ ಅನ್ನುತ್ತಾರೆ ಡಾ. ವೈಸ್, ಡಾ. ನ್ಯೂಟನ್, ಓರ್ಮಂಡ್, ಗಿಲ್ ಬೋಯ್ನ್, ಮತ್ತಿತರರು.

ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದಾಗ, ಯಾವ ಕಾರಣಕ್ಕಾಗಿ ರೆಗ್ರೆಷನ್ ಬಯಸಿದ್ದಾರೆ ಅನ್ನುವುದರ ಮೇಲೆ ವ್ಯಕ್ತಿಯ ಸಬ್-ಕಾನ್ಷಿಯಸ್ ಮೈಂಡ್ (ಸುಪ್ತ ಪ್ರಜ್ಞೆ) ನೆನಪಿನ ಆಳದ ಪದರಗಳಿಂದ ಬೇಕಾದ ನೆನಪುಗಳನ್ನು ಹೆಕ್ಕಿ ತರುತ್ತದೆ. ಸಮ್ಮೋಹನದಲ್ಲಿದ್ದಾಗ ಕೆಲಸ ಮಾಡುವಂಥದ್ದು ನಮ್ಮ ಸುಪ್ತ ಪ್ರಜ್ಞೆ. ಅಲ್ಲಿಂದ ನೆನಪಿಸಿಕೊಂಡ ವಿಷಯಗಳು, ಚಿಕಿತ್ಸಕನ ಸಂದೇಶಗಳ ಮೇಲೆ ಜಾಗೃತ ಪ್ರಜ್ಞಾವಲಯಕ್ಕೂ ಹಾದು ಬರುತ್ತವೆ (ಚಿಕಿತ್ಸಕನ ಸಂದೇಶವಿಲ್ಲದಿದ್ದಲ್ಲಿ, ಸುಪ್ತಪ್ರಜ್ಞೆಯು ಈ ನೆನಪನ್ನು ಜಾಗೃತವಲಯಕ್ಕೆ ತಂದುಕೊಳ್ಳದಿರುವ ಸಾಧ್ಯತೆಯಿದೆ. ಹಾಗಾದಾಗ ವ್ಯಕ್ತಿಗೆ ಸಮ್ಮೋಹನದಿಂದ ವಾಸ್ತವಕ್ಕೆ ಬಂದಾಗ ಆ "ನೆನಪುಗಳು" ನೆನಪಿರುವುದಿಲ್ಲ). ಆದ್ದರಿಂದ ನೆನಪು ಅನ್ನುವಂಥಾದ್ದು ಜಾಗೃತ ಪ್ರಜ್ಞೆಯ ವಲಯಕ್ಕೆ ಬಂದದ್ದು ಮಾತ್ರವೇ ಆಗಬೇಕಿಲ್ಲ. ನಮ್ಮ ನೆನಪುಗಳೆಲ್ಲ ನಮ್ಮವೇ ಮತ್ತು ಸದಾ ನಮ್ಮ ಪ್ರಜ್ಞೆಯ ಪದರಗಳ ಒಳಗೆ ಹುದುಗಿರುವಂಥವು.

ಈಗಲೂ ನಮ್ಮ ಜೀವನದ ಯಾವುದೋ ಒಂದು ಘಟನೆ, ಒಂದು ಹಾಡಿನ ಗುನುಗು, ಒಂದು ಮಾತಿನ ಎಳೆ, ನಮ್ಮನ್ನು ನಮ್ಮ ಬಾಲ್ಯದ ಮರೆತೇ ಹೋದಂತಿದ್ದ ಕ್ಷಣಗಳನ್ನು ಥಟ್ಟನೆ ನೆನಪಿಗೆ ತರುತ್ತವಲ್ಲವೆ? ಸಮ್ಮೋಹನದಲ್ಲೂ ಹಾಗೆಯೇ. ಸಮ್ಮೋಹನಕ್ಕೆ ಒಳಗಾದ ಕಾರಣದ ಎಳೆ ಹಿಡಿದು ಅದಕ್ಕೆ ಪೂರಕವಾದ ನೆನಪಿನ ಎಳೆಗಳನ್ನು ಸುಪ್ತಪ್ರಜ್ಞೆ ತನ್ನದೇ ಆಳದ ಪದರಗಳಿಂದ ಮೇಲ್ಪದರಕ್ಕೆ ತಂದುಕೊಂಡು (ನೆನಪಿಸಿಕೊಂಡು), ಅದರಿಂದ ಈಗಿನ ಜೀವನಕ್ಕೆ ಅಗತ್ಯವಾದ ಸಂದೇಶವನ್ನು ಪಡೆದುಕೊಳ್ಳುತ್ತದೆ. ಅಥವಾ ಆಗಿನ ಗೊಂದಲದ ಮೇಲೆಯೇ ಈಗಲೂ ಗೊಂದಲಮಯ ಮನಸ್ಸೇ ಇರುವುದಾದರೆ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ (ಇದೀಗ ಎರಡನೇ ಪ್ರಶ್ನೆಯ ವ್ಯಾಪ್ತಿಗೆ ಬಂದೆವು).

ಮೊದಲನೆಯದಾಗಿ, ಸಮ್ಮೋಹನದಲ್ಲಿ ನೆನಪಿಸಿಕೊಳ್ಳುವ ಹಳೆಯ ನೆನಪುಗಳಿಂದ ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳೆಲ್ಲವೂ ನಿವಾರಣೆಯಾಗುವುದಿಲ್ಲ. ಹಾಗೆಯೇ, ಪ್ರಸ್ತುತ ಮನೋವ್ಯಥೆಗಳೆಲ್ಲವೂ ಪೂರ್ವಸ್ಮೃತಿಗಳ ಮೇಲೆಯೇ ನಿಂತಿರುವುದಿಲ್ಲ. ಕೆಲವೊಂದು ತೊಂದರೆಗಳು, ವ್ಯಥೆಗಳು, ಗೊಂದಲಗಳು, ಪದೇ ಪದೇ ಕಾಡುವ ಕನಸುಗಳು ಪೂರ್ವಸ್ಮೃತಿಯಲ್ಲಿ ಬೇರುಗಳಿರಿಸಿಕೊಂಡಿರುತ್ತವೆ. ಒಂದೆರಡು ನಿದರ್ಶನಗಳ ಮೂಲಕ ಇದನ್ನು ಸುಲಭದಲ್ಲಿ ವಿವರಿಸಬಹುದು.

ಎರಡು ಸರಳ ಉದಾಹರಣೆ ಕೊಡುತ್ತೇನೆ:
(೧) ಶರ್ವಾಣಿಗೆ ಯಾವಾಗಲೂ ನದಿ, ನೀರು, ಜಲಪಾತಗಳ ಬಗ್ಗೆ ಹಂಬಲ, ಒಲವು, ಒಂಥರಾ ಕುತೂಹಲ, ನೋಡಿದಷ್ಟೂ ತಣಿಯದ ಆಸಕ್ತಿ. ಇದ್ಯಾಕೆ ಹೀಗೆ ಅನ್ನುವ ಪ್ರಶ್ನೆ ಅವರನ್ನು ಹಲವಾರು ಬಾರಿ ಕಾಡಿದ್ದಿದೆ. ಉತ್ತರ ಸಿಕ್ಕಿರಲಿಲ್ಲ. ರಿಗ್ರೆಷನ್ ಥೆರಪಿ ಒಳಗಾದಾಗ ಅವರಿಗಾದ ರಿಗ್ರೆಷನ್ ಅನುಭವದಲ್ಲಿ ತಮ್ಮ ಎರಡು ಸಾವಿರ ವರ್ಷಗಳಿಗೂ ಹಿಂದಿನ ಜೀವನವೊಂದರ ತುಣುಕುಗಳಲ್ಲಿ ‘ಕಂಡುಕೊಂಡ’, ಮತ್ತು ಅದರ ನಂತರದ ಒಂದೆರಡು ದಿನಗಳಲ್ಲಿ ಅರೆ-ಮಂಪರು (ರಾತ್ರೆ ಪೂರ್ತಿನಿದ್ದೆಗೆ ಜಾರುವ ಮೊದಲು ಮತ್ತು ಬೆಳಗ್ಗೆ ಪೂರ್ತಿ ಎಚ್ಚರಾಗುವ ಮೊದಲು) ಸ್ಥಿತಿಯಲ್ಲಿದ್ದಾಗ ಕನಸಿನಂತೆ ತೋರಿಬಂದ ಕೆಲವು ವಿವರಗಳಲ್ಲಿ ಅವರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅವರ ಆ ಜೀವನದಲ್ಲಿ ನದಿ/ತೊರೆ ಮತ್ತು ಜಲಪಾತ ಅಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ಅವರ ನೋವು ನಲಿವುಗಳ ಜೊತೆ ಬೆಸೆದುಕೊಂಡ ಬಂಧವಾಗಿತ್ತು. ಹಾಗೂ ಅಂದಿನ ಅವರ ಹೆಸರೂ ನೀರಿಗೆ ಸಂಬಂಧಿಸಿದ್ದಾಗಿತ್ತು. ಇವೆಲ್ಲ ಬರೀ ಕಾಕತಾಳೀಯವೇ? ಹಾಗೆಂದೇ ಅಂದುಕೊಂಡರೂ ಆ ನಂತರ ಅವರನ್ನು "ನನಗ್ಯಾಕೆ ನೀರಿನ ಮೇಲೆ ಮೋಹ?" ಅನ್ನುವ ಪ್ರಶ್ನೆ ಕಾಡಿಲ್ಲ.

(೨) ಹಲವಾರು ಬಾರಿ, ಅನೀಶ್ ಗುಹೆಯೊಂದರಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿ ಒದ್ದಾಡಿದಂತೆ ಕನಸುಬಿದ್ದು ಕಸಿವಿಸಿಗೊಂಡು, ಗಾಬರಿಗೊಂಡು, ಗಾಳಿಗಾಗಿ ಹಂಬಲಿಸುತ್ತಾ ನಡುರಾತ್ರೆ ಎದ್ದದ್ದಿದೆ. ಹಾಗೆಂದು ಅದು ಅವರ ದಿನಗಳ ಸಮತೋಲ ತಪ್ಪಿಸುವಷ್ಟು ತೀವ್ರವಾಗಿರಲಿಲ್ಲ, ಅಥವಾ ಅದನ್ನು ಅಷ್ಟು ತೀವ್ರವಾಗಿ ಅವರು ಪರಿಗಣಿಸಿರಲಿಲ್ಲ (ಪದೇ ಪದೇ ಬೀಳುವ, "ನೈಟ್-ಮೇರ್" ಎಂದು ಕರೆಯಲ್ಪಡುವ, ಭಯಾನಕ ಕನಸುಗಳಿಂದ ವ್ಯಕ್ತಿಯ ದೈನಂದಿನ ಬದುಕು ಅಲ್ಲೋಲ ಕಲ್ಲೋಲ ಆಗುವುದೂ ಇದೆ; ಕನಸಿನ ವಿವರಗಳು ನಿಜವಾಗಿಯೂ ಎದುರಿಗೇ ಬಂದಂತೆ ಭ್ರಮಿತರಾಗುವವರೂ ಇದ್ದಾರೆ. ಇದೂ ಒಂದು ಮನೋವ್ಯಥೆಯೇ). ಇವರ ನಿದರ್ಶನವನ್ನು ಎರಡನೇ ಕಂತಿನಲ್ಲಿಯೇ ತಿಳಿಸಲಾಗಿದೆ. ಅದರಂತೆಯೇ, ಕಾಕತಾಳೀಯವೋ ಎಂಬಂತೆ, ಆಮೇಲೆ ಅನೀಶ್‌ಗೆ ಅಂಥ ಕನಸು ಇಂದಿನವರೆಗೆ ಬಿದ್ದಿಲ್ಲ!!

ಈಗ ಮನೋವ್ಯಥೆಯ ವಿಚಾರಕ್ಕೆ ಬಂದರೆ, ಇಲ್ಲಿ ಹೇಳಿದ ಎರಡರಲ್ಲಿ ಯಾವುದೇ ಒಂದು ಕಾರಣಕ್ಕೆ ವ್ಯಕ್ತಿಗೆ ಮನೋವ್ಯಥೆ ಉಂಟಾಗಬಹುದು. ಪದೇ ಪದೇ ಬೀಳುವ ಕನಸೂ ಮನೋವ್ಯಥೆಗೆ ಕಾರಣವಾಗಬಹುದು. ನೀರಿನ ಬಗ್ಗೆ ತೀರದ ಕುತೂಹಲ, ಆಸಕ್ತಿ ಹೆಚ್ಚಾಗಿ, ಜೀವನ ಸುಗಮವಾಗದಷ್ಟೂ ತೀವ್ರವಾಗಿ, ತೊಂದರೆಯಾಗಬಹುದು. ಇವೇ ಅಲ್ಲದೆ ಬೇರಿನ್ಯಾವುದೇ ಕಾರಣಕ್ಕೂ ಮನೋವ್ಯಥೆ ಉಂಟಾಗಬಹುದು. ವ್ಯಕ್ತಿ ಸಮ್ಮೋಹನ ಚಿಕಿತ್ಸೆ ಬಯಸಿ ಬಂದಾಗ ಮೊದಲು ಸರಳ ಮಾತುಕತೆಯಾಡಿ ಬಂದ ಉದ್ದೇಶ, ಕಾಡುವ ವಿಷಯಗಳನ್ನು ತಿಳಿದುಕೊಂಡೇ ಸಮ್ಮೋಹಿತ ಸ್ಥಿತಿಗೆ ಚಿಕಿತ್ಸಕ ಕರೆದೊಯ್ಯುತ್ತಾರೆ. ಅಲ್ಲಿ ಸರಿಯಾದ ನಿರ್ದೇಶನಗಳನ್ನು ಕೊಡುತ್ತಾ ನೆನಪಿನ ತುಣುಕನ್ನು ಆಳದಿಂದ ಆರಿಸಿ ತರಲು ಆದೇಶಿಸುತ್ತಾರೆ. ಅದರ ಜೊತೆಗೆ ಸಂದರ್ಭಕ್ಕೆ ಸರಿಯಾಗಿ ಇತರ ಹಿನ್ನೆಲೆ, ಮುನ್ನೆಲೆಗಳನ್ನು ಪರೀಕ್ಷಿಸಲಾಗುತ್ತದೆ. ಬಳಿಕ ವ್ಯಕ್ತಿಯನ್ನು ಸಮ್ಮೋಹನದಿಂದ ಎಚ್ಚರಿಸಿ ವಾಸ್ತವಕ್ಕೆ ಕರೆತಂದು, ಆ ಎಲ್ಲ ನೆನಪಿನ ತುಣುಕುಗಳು ಈಗಿನ ಜೀವನಕ್ಕೆ ಹೇಗೆ ಪ್ರಸ್ತುತವೆಂಬುದನ್ನು ವಿಶ್ಲೇಷಿಸಲಾಗುತ್ತದೆ. ಚಿಕಿತ್ಸಕನ ನಿರ್ದೇಶನದಲ್ಲಿ, ಕಣ್ಗಾವಲಿನಲ್ಲಿ, ವ್ಯಕ್ತಿ ತನ್ನ ಹಳೆಯ ನೆನಪುಗಳನ್ನು ಕೆದಕಿ ಅಲ್ಲಿಂದ ಒಂದಿಷ್ಟು ರಾಡಿಯನ್ನು ಜಾಗೃತ ಪ್ರಜ್ಞೆಯ ಮೂಲಕ ಹೊರಹಾಕಿ ಒಳಗಿನ ನೀರನ್ನು ಸ್ವಲ್ಪ ತಿಳಿಗೊಳಿಸಿಕೊಳ್ಳಬಹುದು. ಈ ಮೂಲಕ ಕಾಡುವ ವ್ಯಥೆ ದೂರಾಗುತ್ತದೆ.

ಮುಂದಿನ ಕಂತುಗಳಲ್ಲಿ ಇನ್ನಷ್ಟು ಸಂದೇಹಗಳನ್ನು, ಪ್ರಶ್ನೆಗಳನ್ನು ಪರಿಶೀಲಿಸೋಣ.
(ಭಾಮಿನಿ, ಜೂನ್ ೨೦೧೧.)

Monday 16 May, 2011

ಏನೆಂದು ಕರೆಯಲಿ ಇದನು?

ಹಿಪ್ನೋಥೆರಪಿ ಅಭ್ಯಾಸ ಮಾಡಿದಾಗಿನಿಂದ ಒಂದೊಂದು ಸಣ್ಣ ಪುಟ್ಟ ಘಟನೆಗಳು ಅಚ್ಚರಿಮೂಟೆ ತೆರೆದದ್ದಿವೆ. ಅವುಗಳಲ್ಲಿ ಕೆಲವನ್ನು ಈಗಾಗಲೇ ಇಲ್ಲಿ ಹಂಚಿಕೊಂಡಿದ್ದೇನೆ. ಇದೀಗ ಹೊಸತೊಂದು:

ನನ್ನೊಂದು ಕ್ಲಯಂಟ್ ತಮ್ಮ ಆತ್ಮವಿಶ್ವಾಸದ ಉದ್ದೀಪನಕ್ಕಾಗಿ ಬರುತ್ತಿದ್ದರು. ಕಾಲೇಜೊಂದರಲ್ಲಿ ಅಧ್ಯಾಪನ ಕೈಗೊಂಡಿರುವ ಅವರಿಗೆ ವೇದಿಕೆಯಿಂದ ವಿದ್ಯಾರ್ಥಿಗಳನ್ನು ಎದುರಿಸುವ ಬಗ್ಗೆ ಆತಂಕ, ಉದ್ವೇಗ. ಅಪರೂಪಕ್ಕೊಮ್ಮೆ ಮಾತು ತೊದಲಿ ಗೊಂದಲಗೊಂಡು ಮತ್ತಷ್ಟು ಕಂಪನಕ್ಕೊಳಗಾಗಿ ತರಗತಿಯಿಂದ ಹೊರಬಂದದ್ದೂ ಇದೆಯೆಂದರು. ಅವರಿಗೆ ಬೇಕಷ್ಟು ಸಲ ಭೇಟಿಯಾಗೋಣವೆಂದು ನಿಗದಿಪಡಿಸಿಕೊಂಡೆವು.

ಮೊದಲೆರಡು ಸೆಷನ್‍ಗಳಲ್ಲಿ ಧನಾತ್ಮಕ ಸೂಚನೆಗಳನ್ನು ನೀಡುತ್ತಾ ಧನಾತ್ಮಕ ಚಿತ್ರಣಗಳತ್ತ ಗಮನ ಸೆಳೆಯುತ್ತಾ ಅವರ ಸುಪ್ತಮನಸ್ಸಿಗೆ ಧೈರ್ಯ ತುಂಬಿದೆ. ಮೂರು ಮತ್ತು ನಾಲ್ಕನೇ ಸೆಷನ್‍ಗಳಲ್ಲಿ ಅವರೇ ಧನಾತ್ಮಕ ಚಿತ್ರಣಗಳಲ್ಲಿ ತನ್ನನ್ನು ತಾನು ಕಾಣುವಂಥ ಸೂಚನೆ ನೀಡಿದೆ. ಐದನೆಯ ಬಾರಿಗೆ ಬಂದವರು ತರಗತಿಗಳಲ್ಲಿ ಆತಂಕವಾಗುವ ಘಳಿಗೆಗಳು ಬಹಳವೇ ಕಡಿಮೆಯಾಗಿವೆ ಎಂದು ಖುಷಿಯಿಂದಲೇ ಹೇಳಿದರು. ದಿನಕ್ಕೊಮ್ಮೆಯೋ ಏನೋ ಗಾಬರಿಯ ಕ್ಷಣವಿರುತ್ತದಷ್ಟೇ ಎಂದರು.

ಐದನೆಯ ಸೆಷನ್ ಮತ್ತೆ ಮಾಮೂಲಾಗಿ ಮುಗಿಸಿ ಪೋಸ್ಟ್ ಸೆಷನ್ ಮಾತಿನಲ್ಲಿ ಅವರೆಂದರು: "ಮೇಡಮ್, ಇವತ್ತು ನೀವು ನನ್ನನ್ನು ಗಿರೀಶ್ ಹೆಸರಿನಿಂದ ಕರೆಯುತ್ತಿದ್ದಿರಿ. ನಿಮಗೆ ಕನ್ಫ್ಯೂಸ್ ಆಗಿರಬೇಕು ಅಂತ ನಾನಂದುಕೊಂಡೆ. ನೀವು ಆ ಹೆಸರು ಹೇಳಿದಾಗೆಲ್ಲ ನಾನು ನನ್ನ ಹೆಸರನ್ನೇ ಹೇಳಿಕೊಳ್ಳುತ್ತಿದ್ದೆ..."
ನನಗೆ ಆಘಾತವಾಯ್ತು. ಮೊದಲು ನಾಲ್ಕು ಸಲ ಭೇಟಿಯಾಗಿದ್ದ ಇವರನ್ನೇ ನಾನು ಬೇರೆ ಹೆಸರಲ್ಲಿ ಸಂಬೋಧಿಸಿದೆ ಅಂದರೆ ನನ್ನ ಗಮನ ಎಲ್ಲಿತ್ತು? ಯಾಕೆ ಹೀಗಾಯ್ತು? ಏನಾಗಿದೆ ನನಗೆ? ಗೊಂದಲ ಆತಂಕ ನನಗೆ. ಅವರ ಕ್ಷಮೆ ಕೇಳಿದೆ. ನಂತರದ ಎರಡು ಮೂರು ದಿನ ಇದೇ ಚಿಂತೆಯಲ್ಲೇ ಕಳೆದೆ. ಮುಂದಿನ ವಾರ ಅವರು ಬಂದಾಗ ದುಪ್ಪಟ್ಟು ಎಚ್ಚರಿಕೆಯಿಂದ ಸೆಷನ್ ಮುಗಿಸಿದೆ. ಮತ್ತೂ ಒಮ್ಮೆ ಬಂದವರು ಸದ್ಯಕ್ಕೆ ಸಾಕು, ಬೇಕಾದಾಗ ಮತ್ತೊಮ್ಮೆ ಬರುತ್ತೇನೆ ಅಂತಂದರು. ತದನಂತರ ಮೂರು ಜನರನ್ನು ನನ್ನ ಬಳಿ ಥೆರಪಿಗಾಗಿ ಕಳುಹಿಸುವ ಸಹೃದಯತೆಯನ್ನೂ ತೋರಿದ್ದಾರೆ. ಅವರ ಕೊನೆಯ ಸೆಷನ್ ಮುಗಿದು ಏಳು ವಾರಗಳಾಗಿವೆ ಈಗ.

ಕಳೆದ ವಾರ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಗೆಲಸವೆಲ್ಲ ಮುಗಿಸಿ ಮಲಗಲು ಇನ್ನೂ ಸಮಯವಿದೆಯೆಂದು ಸ್ವ-ಸಮ್ಮೋಹನಕ್ಕೆ ತೊಡಗಿಕೊಂಡೆ. ಒಂದೆರಡು ಹಳೆ ನೆನಪುಗಳ ವಿವರಗಳ ನಂತರ ಕ್ಷಣ ಕಾಲ ಕತ್ತಲು.

ಬೆಳಕು ಆವರಿಸತೊಡಗಿದಾಗ ವೈಭವ ತೋರುವ ವೇದಿಕೆ. ಅಬ್ಬರದ ಸೆಟ್. ಸಿಂಹಾಸನದಂಥ ಪೀಠದಲ್ಲಿ ರುಕ್ಮಿಣಿಯಾಗಿ ನಟಿ ‘ಅಲಕಾದೇವಿ’. ಕೃಷ್ಣ ಪಾತ್ರಧಾರಿಯ ಮುಖ ಮಸುಕು. ಸುಧಾಮನಾಗಿ ನಮ್ಮೆದುರು ‘ಗಿರೀಶ’. ಅತ್ಯಂತ ಮನೋಜ್ಞ ಅಭಿನಯಕ್ಕಾಗಿ ಆತನ ಹೆಸರನ್ನು ಸಭೆ ಮತ್ತೆ ಮತ್ತೆ ಉದ್ಗರಿಸುತ್ತಿದೆ. ಆತ ಕೊನೆಯದಾಗಿ ಸಭೆಗೆ ನಮಸ್ಕರಿಸುವಾಗ ಆತನ ಮೇಲೆ ಬೆಳ್ಳಿ ನಾಣ್ಯಗಳನ್ನು ಎಸೆಯುತ್ತಿರುವ ಸಭಿಕರು. ನಾಟಕದ ನಂತರ ನಾವೆಲ್ಲರೂ ಸೇರಿ ಆತನನ್ನು ಅಭಿನಂದಿಸುತ್ತಿರುವ ದೃಶ್ಯ ಅಲಕಾದೇವಿಯಾಗಿದ್ದ ನನ್ನ ಕಣ್ಣ ಮುಂದೆ ಇನ್ನೂ ನಿಂತಿದೆ. ಅಮೋಘ ನಟನಾಚಾತುರ್ಯದ ಗಿರೀಶ್ ಮತ್ಯಾರೂ ಅಲ್ಲ, ನನ್ನ ಬಳಿ ತಮ್ಮ ಆತಂಕ-ಉದ್ವೇಗ ನಿವಾರಣೆಗಾಗಿ ಬಂದಿದ್ದ ಕಾಲೇಜ್ ಅಧ್ಯಾಪಕರು. ಅಲಕಾದೇವಿಯಾಗಿದ್ದ ನನ್ನ ಸುಪ್ತಮನಸ್ಸು ಗಿರೀಶನನ್ನು ಗುರುತಿಸಿತ್ತು. ಮರಾಠಿ ನಾಟಕ ಕಂಪೆನಿಯೊಂದರಲ್ಲಿ ಹದಿನೆಂಟನೇ ಶತಮಾನದ ಆದಿಯಲ್ಲಿ ಸಹನಟರಾಗಿ ಜೊತೆಗಿದ್ದ ನಮ್ಮ ಒಡನಾಟ ಅದೊಂದು ಸೆಷನ್‍ನಲ್ಲಿ ಮೆಲ್ಲನೆ ತೆರೆದುಕೊಂಡು ಅವರ ಹೆಸರನ್ನಷ್ಟೇ ತೂರಿಸಿ ಹೋಗಿತ್ತು, ನನ್ನಲ್ಲಿ ಕೆಲಕಾಲದ ಗೊಂದಲ ಹುಟ್ಟಿಸಿತ್ತು.

ಅವರನ್ನೇಕೆ ಆ ಹೆಸರಿನಿಂದ ಕರೆದೆ ಅನ್ನುವುದಕ್ಕೆ ನನಗೇನೋ ಉತ್ತರ ಸಿಕ್ಕಿದೆ. ಅತ್ಯಂತ ಸಮರ್ಥ ನಟರಾಗಿದ್ದ ಗಿರೀಶ್ ಈ ಜನ್ಮದಲ್ಲಿ ತರಗತಿಯಲ್ಲಿ ಪಾಠ ಮಾಡುವುದಕ್ಕೂ ಆತಂಕಗೊಳ್ಳುತ್ತಿದ್ದುದೇಕೆ ಅನ್ನುವುದಕ್ಕೆ ಉತ್ತರ ಮತ್ತು ಇದೇ ನೆನಪಿನ ತುಣುಕು ಅವರ ರಿಗ್ರೆಷನ್ನಿನಲ್ಲೂ ಕಾಣಬಹುದೇ ಅನ್ನುವ ಕುತೂಹಲಕ್ಕೆ ಉತ್ತರ ಸಿಗಬೇಕಾಗಿದೆ. ಮುಂದಿನ ಭೇಟಿಗಳನ್ನು ಎದುರು ನೋಡುತ್ತಿರುವೆ. ಅವರಾಗಿಯೇ ಬಂದರೆ, ಬಂದಾಗ ನಮ್ಮ ಭೇಟಿ. ಕಾದು ನೋಡಬೇಕು.

Wednesday 16 March, 2011

ಹಿಪ್ನೋಥೆರಪಿ-ಭಾಗ-೦೪

ಹಿಪ್ನೋಥೆರಪಿಸ್ಟ್ ದೃಷ್ಟಿಯಲ್ಲಿ ಆತ್ಮಗಳ ಸ್ವರೂಪ

ಹಿಂದಿನ ಕಂತಿನಲ್ಲಿ ನೀವು ಓದಿದಂತೆ, ಡಾ. ಮೈಕೇಲ್ ನ್ಯೂಟನ್ನರು ತಮ್ಮ ಗ್ರಾಹಕರ ಸಮ್ಮೋಹಿತ ಸ್ಥಿತಿಯಲ್ಲಿ ಆತ್ಮಲೋಕದ ವಿವರಗಳನ್ನು ಪಡೆದುಕೊಳ್ಳುವವರು. ಅವರ ತಿಳುವಳಿಕೆಗೆ ಬಂದಿರುವಂತೆ, ಆತ್ಮಕ್ಕಿರುವ ಜ್ಞಾನ/ಅನುಭವದ ಆಧಾರದ ಮೇಲೆ, ಆತ್ಮಗಳನ್ನು ಆರು ಸ್ತರಗಳಲ್ಲಿ ವಿಭಾಗಿಸುತ್ತಾರೆ; ನಮ್ಮ ಅರ್ಥೈಸುವಿಕೆಯ ಅನುಕೂಲಕ್ಕಾಗಿ ಈ ವಿಂಗಡಣೆ ಎನ್ನುತ್ತಾರೆ.

(೧) ಮೊದಲ ಹಂತ (ಆರಂಭಿಕ/ ಬಿಗಿನರ್): ಈ ಸ್ತರದ ಆತ್ಮಗಳು ಬಹಳಷ್ಟು ಜನ್ಮ ಎತ್ತಿಲ್ಲದಿರಬಹುದು, ಅಥವಾ ಹಲವಾರು ಜನ್ಮಗಳನ್ನು ಎತ್ತಿದ್ದರೂ ಕಲಿಯಬೇಕಾದ ಪಾಠ ಕಲಿಯದೇ ಇರಬಹುದು. ಪ್ರಪಂಚದ ಬಹುತೇಕ ಜನ ಇದೇ ಹಂತದಲ್ಲಿರುವ ಆತ್ಮರೂಪರು ಎನ್ನುವುದು ಅವರ ಅಂದಾಜು. ಅವರಲ್ಲಿ ಥೆರಪಿಗೆ ಬರುವವರಲ್ಲಿ ಅನೇಕರು ಇಂಥ ಅನನುಭವಿ ಆತ್ಮಗಳೇ. ಅವರಿಗೆ ಮೇಲ್ಸ್ತರದ ಆತ್ಮಗಳು ಗೈಡ್/ಗುರು ಆಗಿರುತ್ತಾರೆ. ಎಲ್ಲ ಆತ್ಮಗಳಿಗೂ ಒಂದು ಗೈಡ್ ಇದ್ದೇ ಇರುತ್ತಾರೆ. ಉಡಾಫೆ, ಜಂಭ, ಉದ್ಧಟತನ, ಸ್ವಾರ್ಥ, ಪುಂಡತನ... ಎಲ್ಲವೂ ಕೆಳಹಂತದ ಆತ್ಮಗಳ ಗುಣಲಕ್ಷಣಗಳು, ನಮ್ಮ ಸುತ್ತಮುತ್ತ ಗುರುತಿಸಬಹುದಲ್ಲ!
ಈ ಆತ್ಮಗಳ ಬಣ್ಣ ಶುದ್ಧ ಬಿಳಿ. ಜ್ಞಾನ ಹೆಚ್ಚಿದಂತೆಲ್ಲ ಬಣ್ಣ ಬದಲಾಗುತ್ತದೆ.

(೨) ಎರಡನೇ ಹಂತ (ಕೆಳ-ಅಂತರ್ವರ್ತಿ/ ಲೋವರ್ ಇಂಟರ್‌ಮೀಡಿಯೇಟ್): ಹಲವಾರು ಜನ್ಮಗಳನ್ನೆತ್ತಿ, ಕೆಲವಾದರೂ ಪಾಠಗಳನ್ನು ಕಲಿತು, ಒಂದಿಷ್ಟು ಮಾಗಿರುವ ಆತ್ಮಗಳಿವು. ನಯ-ವಿನಯ ಇವರುಗಳಲ್ಲಿ ತುಸುವಾದರೂ ಇರುತ್ತದೆ. ಸಾಮಾಜಿಕ ಕಾಳಜಿ ಒಂದಿನಿತು ಮೈಗೂಡಿರುತ್ತದೆ. ಇಲ್ಲಿ ಬಿಳಿಗೆ ಒಂದಿಷ್ಟೇ ಇಷ್ಟು ಹಳದಿ-ಕೆಂಪು/ ಕಿತ್ತಳೆಯ ಛಾಯೆಯಿರುತ್ತದೆ.

(೩) ಮೂರನೇ ಹಂತ (ಅಂತರ್ವರ್ತಿ/ ಇಂಟರ್‌ಮೀಡಿಯೇಟ್): ಸಮಾಜಕ್ಕಾಗಿ, ಇತರರಿಗಾಗಿ ತಮ್ಮ ಜನ್ಮ ಸವೆಸುವವರು. ಜಂಭ, ಪುಂಡುಗಾರಿಕೆಯಿಲ್ಲದೆ ನಿಃಸ್ವಾರ್ಥದಿಂದ ಕೆಲಸ ಮಾಡುವ ಇಂಥವರನ್ನು ಈಗಿನ ನಮ್ಮ ಸಮಾಜದಲ್ಲಿ ಹುಡುಕುವುದೇ ಕಷ್ಟವಲ್ಲವೆ? ಇವರುಗಳ ಆತ್ಮ ಹಳದಿ; ಬಿಳಿಯ ಛಾಯೆಯೇ ಇರುವುದಿಲ್ಲ.

(೪) ನಾಲ್ಕನೇ ಹಂತ (ಮೇಲಂತರ್ವರ್ತಿ/ ಹೈಯರ್ ಇಂಟರ್‌ಮೀಡಿಯೇಟ್): ಕಡು ಹಳದಿಯಿಂದ ಕೊನೆಗೆ ತುಸು ನೀಲಿಗೆ ತಿರುಗುವ ಈ ಆತ್ಮಗಳ ಗುಣ ಬಹಳಷ್ಟು ನಿಃಸ್ವಾರ್ಥ ಮತ್ತು ಸಮಾಜಮುಖಿ. ಈ ನೆಲೆಯ ಆತ್ಮಗಳು ಸ್ವತಃ ಗುರುಗಳಾಗುವ ತರಬೇತಿಯಲ್ಲಿ ಇರುತ್ತಾರೆ (ಜೂನಿಯರ್ ಗೈಡ್). ತಮ್ಮ ಸುಪರ್ದಿಯಲ್ಲಿ ಕೆಲವಾರು ಮೊದಲ ಹಂತದ ಆತ್ಮಗಳನ್ನು ‘ನೋಡಿಕೊಳ್ಳುವ’ ಇವರಿಗೆ ಅವರ ಗುರು-ಆತ್ಮಗಳ ಮಾರ್ಗದರ್ಶನ ಇರುತ್ತದೆ.

(೫) ಐದನೇ ಹಂತ (ಪ್ರೌಢ/ ಅಡ್ವಾನ್ಸ್‌ಡ್): ತೆಳು ನೀಲಿ ಬಣ್ಣದಿಂದ ಗುರುತಿಸಲ್ಪಡುವ ಈ ಆತ್ಮಗಳು ಗುರುಗಳೇ ಆಗಿರುತ್ತಾರೆ (ಸೀನಿಯರ್ ಗೈಡ್). ಸಮಾಜದ ಉದ್ಧಾರಕ್ಕಾಗಿಯೇ ಇವರು ಹುಟ್ಟಿದರೇನೋ ಎನಿಸುವಷ್ಟು ಕಾಳಜಿ ತೋರುವವರು. ಈ ಸ್ತರದ ಆತ್ಮಗಳಿಗೆ ಉದಾಹರಣೆ ಹೇಳುವುದಾದರೆ- ಮಹಾತ್ಮ ಗಾಂಧಿ, ವಿವೇಕಾನಂದ, ಮದರ್ ತೆರೇಸಾ... ಬೇರೆ ವಿವರಣೆ ಬೇಕಾ?

(೬) ಆರನೇ ಹಂತ (ಅತಿ-ಪ್ರೌಢ/ ಹೈಲೀ ಅಡ್ವಾನ್ಸ್‌ಡ್): ಕಡು ನೇರಳೆ ಬಣ್ಣದ ಜೊತೆಗೆ ಬೆಳಕಿನ ಪರಿವೃತ್ತ ಈ ಹಂತದ ಗುರುತು. ಈ ನೆಲೆಯ ಆತ್ಮಗಳು ಪರಿಣತ ಗುರುಗಳಾಗಿರುತ್ತಾರೆ (ಮಾಸ್ಟರ್ ಗೈಡ್). ಕ್ಷಮೆ, ದಯೆ, ಅನುಕಂಪ, ತ್ಯಾಗ, ಮುಂತಾದ ಉನ್ನತ ಗುಣಗಳನ್ನು ಮೈಗೂಡಿಸಿಕೊಂಡು ಸದಾ ತನ್ನ ಸುತ್ತಲಿನವರ ಏಳಿಗೆಗಾಗಿಯೇ ತುಡಿಯುತ್ತಿರುತ್ತಾರೆ. ಎಲ್ಲರಿಗೂ ಒಳಿತನ್ನು ಮಾಡುವುದೇ ಇವರ ಧ್ಯೇಯ ಎನ್ನುವಂತಹ ಜೀವನ. ಬಹುಶಃ ಬುದ್ಧ, ರಾಮಕೃಷ್ಣ ಪರಮಹಂಸ, ಶಾರದಾ ಮಾತೆ, ಏಸು, ಮುಂತಾದವರನ್ನು ಇಲ್ಲಿರಿಸಬಹುದೇನೋ.

ಡಾ. ನ್ಯೂಟನ್ನರ ತಿಳುವಳಿಕೆಗೆ ಬಂದಿರುವ ಆತ್ಮಗಳ ಪರಿಚಯಾತ್ಮಕ ವಿವರಣೆಯಷ್ಟೇ ಇದಾಗಿದೆ. ಇದೇ ಇದಮಿತ್ಥಂ ಅಂತೇನೂ ಅಲ್ಲ. ಆರನೇ ಹಂತವನ್ನೂ ಮೀರಿದ, ಇನ್ನೂ ಹೆಚ್ಚಿನ ಜ್ಞಾನ ಪಡೆದ ಆತ್ಮಗಳಿರಲೇಬೇಕು; ಆದರೆ ಅವೆಲ್ಲ ಪುನರ್ಜನ್ಮ ಪಡೆಯದಿರಬಹುದು, ಅಥವಾ ಮನೋವೈದ್ಯಕೀಯ ನೆರವು ಪಡೆಯಲು ಡಾ. ನ್ಯೂಟನ್ನರಲ್ಲಿಗೆ ಬಂದಿರುವವರಿಗೆ ಆ ಉನ್ನತ ಮಟ್ಟದ ಆತ್ಮಗಳ ಪರಿಚಯ ಇಲ್ಲದೇ ಇರಬಹುದು. ಅಂತೂ, "ನನ್ನ ಅರಿವಿಗೆ ಬಂದಿದ್ದು ಇಷ್ಟೇ, ಆದರೆ ಇದಕ್ಕೂ ಮೇಲಿನ ಸ್ತರಗಳಿವೆ ಅನ್ನುವುದರಲ್ಲಿ ಸಂಶಯವಿಲ್ಲ" ಅನ್ನುವುದು ಅವರ ಅರಿಕೆ.

ಎಲ್ಲ ಆತ್ಮಗಳ ಗುರಿ ಪರಿಪೂರ್ಣತೆಯನ್ನು ಸಾಧಿಸುವುದು. ಜ್ಞಾನದ ಆಗರವಾಗಿರುವ, ತೇಜಸ್ಸಿನ ಸ್ರೋತವಾಗಿರುವ, ಎಲ್ಲ ಇರುವಿಕೆಗಳ ಕಾರಣವಾಗಿರುವ, ‘ಪೂರ್ಣಕೇಂದ್ರ ಶಕ್ತಿ’ಯನ್ನು- ‘ಪರಮ ಆತ್ಮ’ವನ್ನು- ಕೂಡಿಕೊಳ್ಳುವುದು, ಆತ್ಮದ ಎಲ್ಲ ಕಲಿಕೆಯ ಮೂಲ ಉದ್ದೇಶ. ಜ್ಞಾನಾರ್ಜನೆಯಿಂದಲೇ ಅದು ಸಾಧ್ಯ. ಜ್ಞಾನವೆಂದರೆ ಯಾವುದೇ ಭಾವವಿಕಾರಗಳಿಲ್ಲದ ನಿರ್ಮೋಹದ ಶುದ್ಧ ಅರಿವು. ಮಾನವ ಜನ್ಮ ಅದಕ್ಕಿರುವ ಉತ್ತಮ ಮಾರ್ಗ, ಸುಲಭದ್ದಲ್ಲ. ಈ ಭೂಮಿ ಅತ್ಯುತ್ತಮ ಪಾಠಶಾಲೆ ಅನ್ನುವುದು ಎಲ್ಲ ಆತ್ಮಗಳ ಅಭಿಪ್ರಾಯ. ಇದಲ್ಲದೆ ಬೇರೆ ಲೋಕಗಳಿವೆ, ಅಲ್ಲಿಯೂ ಜನ್ಮವೆತ್ತುತ್ತೇವೆ. ಅಲ್ಲಿಯ ಅನುಭವ ಕಲಿಕೆ ಬೇರೆಯೇ ರೀತಿಯದ್ದು. ಭೂಮಿಯಲ್ಲಿ ಕಲಿಯುವಷ್ಟು ಬೇರೆಲ್ಲಿಯೂ ಸಿಗುವುದಿಲ್ಲ. ಅದರಲ್ಲಿಯೂ ಮಾನವ ಜನ್ಮದಲ್ಲಿ ಕಲಿಕೆ ಹೇರಳ (ಬೇರೆ ಜನ್ಮಗಳ/ ಲೋಕಗಳ ಅನುಭವಗಳನ್ನು ದಾಖಲಿಸಿದವರೂ ಇದ್ದಾರೆ, ಆದರೆ ವಿರಳ). ಈ ಎಲ್ಲ ಮಾತುಗಳು ಭಾರತೀಯರಾದ ನಮಗೆ ಹೊಸದಲ್ಲ. ಕರ್ಮ ಸಿದ್ಧಾಂತದ ಈ ಒಳಸತ್ಯವನ್ನು, ಹುರುಳನ್ನು ಡಾ. ನ್ಯೂಟನ್ನರ ಪುಸ್ತಕದಲ್ಲಿ, ‘ಆತ್ಮಗಳೊಂದಿಗಿನ ಸಂಭಾಷಣೆ’ಯಲ್ಲಿ ಓದಿದಾಗ ಆದ ಅನುಭೂತಿ ಮಾತ್ರ ಹೊಸದು, ಅನನ್ಯವಾದುದು.
(ಭಾಮಿನಿ, ಮಾರ್ಚ್ ೨೦೧೧)
(ವಿ.ಸೂ.: ಇದೇ ಬರಹ ಈ ಮೊದಲು ಸ್ವಲ್ಪ ಬೇರೆಯೇ ರೀತಿಯಲ್ಲಿ ಇದೇ ಬ್ಲಾಗಿನಲ್ಲಿ ಮೂಡಿಬಂದಿತ್ತು. ಕೆಲವು ಓದುಗರಿಗೆ ಇದು ಪುನರಾವರ್ತನೆ ಅನಿಸಬಹುದು. ಕ್ಷಮಿಸಿ)

Wednesday 2 March, 2011

ಹಿಪ್ನೋಥೆರಪಿ-ಭಾಗ-೦೩

ಹಿಪ್ನೋಥೆರಪಿ ಮತ್ತು ಹಿಂದೂ ಆತ್ಮ

ಈ ಹಿಪ್ನೋಥೆರಪಿಯ ಬಗ್ಗೆ ನನಗೆ ಮೊದಲಾಗಿ ಅರಿವಿಗೆ ಬಂದದ್ದು ೨೦೦೬ರ ಎಪ್ರಿಲ್ ತಿಂಗಳಲ್ಲಿ ಗೆಳೆಯರೊಬ್ಬರು ಓದಲು ಕೊಟ್ಟ ಡಾ. ಮೈಕೆಲ್ ನ್ಯೂಟನ್‌ರ "ಜರ್ನಿ ಆಫ಼್ ಸೋಲ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೧೯೯೪) ಪುಸ್ತಕದಿಂದ. ತದನಂತರ ಸಾಲಾಗಿ ಓದಿದ್ದು ಡಾ. ಬ್ರಯಾನ್ ವೈಸ್‌ರ "ಮೆನಿ ಲೈವ್ಸ್, ಮೆನಿ ಮಾಸ್ಟರ್ಸ್" (ಫ಼ಯರ್‌ಸೈಡ್, ೧೯೮೮), "ತ್ರೂ ಟೈಮ್ ಇನ್‌ಟು ಹೀಲಿಂಗ್" (ಫ಼ಯರ್‌ಸೈಡ್, ೧೯೯೨), "ಓನ್ಲೀ ಲವ್ ಈಸ್ ರಿಯಲ್" (ವಾರ್ನರ್ ಬುಕ್ಸ್, ೧೯೯೭), "ಮೆಸೇಜಸ್ ಫ಼್ರಮ್ ದ ಮಾಸ್ಟರ್ಸ್" (ವಾರ್ನರ್ ಬುಕ್ಸ್, ೨೦೦೦), "ಸೇಮ್ ಸೋಲ್, ಮೆನಿ ಬಾಡೀಸ್" (ಫ಼್ರೀ ಪ್ರೆಸ್, ೨೦೦೫), ಹಾಗೂ ಡಾ. ಮೈಕೆಲ್ ನ್ಯೂಟನ್‌ರ "ಡೆಸ್ಟಿನಿ ಆಫ಼್ ಸೋಲ್ಸ್" ಮತ್ತು "ಲೈಫ಼್ ಬಿಟ್ವೀನ್ ಲೈವ್ಸ್" (ಲೆವೆಲ್ಲಿನ್ ಪಬ್ಲಿಕೇಷನ್ಸ್, ೨೦೦೦, ೨೦೦೪). ಇವೆಲ್ಲ ಓದು ನಮ್ಮ ಹಿಂದೂ ಸಂಸ್ಕೃತಿಯ ಆತ್ಮವನ್ನು ಪಾಶ್ಚಾತ್ಯ ಕನ್ನಡಕದಲ್ಲಿ ತೋರಿಸಿದವು ಎಂದರೆ ತಪ್ಪಾಗಲಾರದು. ಹಿಪ್ನೋಥೆರಪಿಗೂ ಆತ್ಮಕ್ಕೂ ತೀರಾ ಹತ್ತಿರದ ನಂಟು ಇಲ್ಲಿ ಕಂಡುಬಂತು.

ಡಾ. ನ್ಯೂಟನ್ (ಕ್ಯಾಲಿಫ಼ೋರ್ನಿಯಾ) ಮತ್ತು ಡಾ. ವೈಸ್ (ಫ಼್ಲೋರಿಡಾ)- ಅಮೆರಿಕದ ಎರಡು ತೀರಗಳಲ್ಲಿ ಮನೋವೈದ್ಯರಾಗಿ ತಮ್ಮ ಕಾರ್ಯಕ್ಷೇತ್ರ ಆರಿಸಿಕೊಂಡವರು. ತಮ್ಮ ಗ್ರಾಹಕರನ್ನು ಸಮ್ಮೋಹನ ಚಿಕಿತ್ಸೆಗೆ ಒಳಪಡಿಸುತ್ತಿರುವವರು. ಇಬ್ಬರೂ ಆಕಸ್ಮಿಕವಾಗಿ ತಮ್ಮ ವೃತ್ತಿಯಲ್ಲಿ ಆತ್ಮದ ತಿಳುವಳಿಕೆ ಪಡೆದವರು. ಗ್ರಾಹಕರು ಇದ್ದಕ್ಕಿದ್ದಂತೆ ಈ ಜನ್ಮದ ಹೊರತಾಗಿ ಪೂರ್ವಜನ್ಮದ ಬಗ್ಗೆ ಮಾತನಾಡತೊಡಗಿದಾಗ ಒಮ್ಮೆಗೆ ಗಾಬರಿಯಾದರೂ ಸುಧಾರಿಸಿಕೊಂಡು ಅದನ್ನು ವಿಶ್ಲೇಷಿಸಿದವರು. ಅದರಲ್ಲಿ ಮತ್ತಷ್ಟು ಆಸಕ್ತಿ ತಾಳಿ, ಆ ಹಾದಿಯಲ್ಲೇ ಕ್ರಮಿಸಿ (ಶ್ರಮಿಸಿ), ವೈಜ್ಞಾನಿಕವಾಗಿ ಆತ್ಮದ ಬಗ್ಗೆ ವಿವರಗಳನ್ನು ಕಲೆಹಾಕಿ ಪುಸ್ತಕ ರೂಪಕ್ಕಿಳಿಸಿದವರು. ಇಬ್ಬರ ಅಭಿಪ್ರಾಯದಲ್ಲೂ ನಮ್ಮ ಆತ್ಮದಲ್ಲಿ ಪೂರ್ವಜನ್ಮದ ನೆನಪುಗಳು ಹುದುಗಿರುತ್ತವೆ.

ಪ್ರಜ್ಞೆ- ಅಪ್ರಜ್ಞೆ- ಸುಪ್ತಪ್ರಜ್ಞೆ- ಅತೀಂದ್ರಿಯ ಪ್ರಜ್ಞೆ (ಆಳವಾದ ಸಮ್ಮೋಹಿತ ಸ್ಥಿತಿ) -- ಮಾನವ ಪ್ರಜ್ಞೆಯ ವಿವಿಧ ನೆಲೆಗಳು. ಇವುಗಳಲ್ಲಿ ಪ್ರಜ್ಞೆ, ಸುಪ್ತಪ್ರಜ್ಞೆ, ಮತ್ತು ಅಪ್ರಜ್ಞೆಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದವುಗಳೇ. ಇನ್ನುಳಿದ ‘ಅತೀಂದ್ರಿಯ ಪ್ರಜ್ಞೆ’ ನಮ್ಮ ಆತ್ಮದ ನೆಲೆ. ವ್ಯಕ್ತಿ ಸಮ್ಮೋಹಿತನಾದಾಗ ಸಾಮಾನ್ಯವಾಗಿ ಇಷ್ಟು ಆಳವಾದ ಪ್ರಜ್ಞೆಯ ನೆಲೆಗೆ ಇಳಿಯುವುದಿಲ್ಲ. ಬಹುತೇಕ ಸಮ್ಮೋಹನ ಚಿಕಿತ್ಸೆಯಲ್ಲಿ ಇದೇ ಜೀವನದ ವಿವಿಧ ಸ್ತರಗಳ ಬೇನೆ-ಬೇಸರಗಳ ನೆಲೆಗಳನ್ನು ಅಗೆದು ತೆಗೆದು, ವಿವರವಾಗಿ ವಿಶ್ಲೇಷಿಸಿ ಅದನ್ನು ನೋವಿನ ನೆಲೆಯಿಂದ ಹೊರತುಗೊಳಿಸಿ, ಆಳವಾದ ಪ್ರಜ್ಞಾಸ್ತರದ ಘಾಸಿಗಳನ್ನು ವಾಸಿಮಾಡುವ ಪ್ರಯತ್ನ ನಡೆಯುತ್ತದೆ. ಆದರೆ, ಡಾ. ನ್ಯೂಟನ್ ಮತ್ತು ಡಾ. ವೈಸ್ ಹೇಳುವಂತೆ "ಪಾಸ್ಟ್ ಲೈಫ಼್ ರಿಗ್ರೆಷನ್ ಥೆರಪಿ"ಯಲ್ಲಿ ವ್ಯಕ್ತಿ ತನ್ನ ಬೇನೆ-ಬೇಸರಗಳಿಗೆ ಪೂರ್ವಜನ್ಮದ ಕಾರಣಗಳಿದ್ದರೂ ಅದನ್ನೂ ಕಂಡುಕೊಂಡು ವಾಸಿ ಮಾಡಿಕೊಳ್ಳಬಹುದು. ಮುಂದೆ ನೆಮ್ಮದಿಯ ಜೀವನ ನಡೆಸಬಹುದು.

ಈ ಮನೋವೈದ್ಯರಿಬ್ಬರೂ ತಮ್ಮ ಗ್ರಾಹಕರನ್ನು ಸಮ್ಮೋಹನಕ್ಕೆ ಒಳಪಡಿಸುವ ಮೊದಲು ಸಂದರ್ಶನದ ಮೂಲಕ ಅವರ ಪರಿಸ್ಥಿತಿಯ ಪರಿಚಯ ಮಾಡಿಕೊಳ್ಳುತ್ತಾರೆ. ಬಹುತೇಕ ಗ್ರಾಹಕರು ಇತರ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಶುಶ್ರೂಷೆಯನ್ನು ಪಡೆಯಲು ಪ್ರಯತ್ನಿಸಿದವರೇ. ಅದರಿಂದ ಪ್ರಯೋಜನ ದೊರಕದೆ ಇವರಲ್ಲಿ ಬಂದವರು. ಇವರುಗಳಿಗೆ ರಿಗ್ರೆಷನ್ ಮಾಡುತ್ತಾ ಒದಗಿದ ಮಾಹಿತಿಗಳಿಂದ, ಡಾ. ನ್ಯೂಟನ್ ತಮ್ಮ ಪುಸ್ತಕಗಳಲ್ಲಿ ಆತ್ಮದ ಸ್ವರೂಪ, ಆತ್ಮಗಳ ಲೋಕ, ಆತ್ಮಗಳ ಕಲಿಕೆ, ಮತ್ತು ಆತ್ಮಜ್ಞಾನದ ಹಂತಗಳನ್ನು ವಿವರಿಸುತ್ತಾರೆ. ಡಾ. ವೈಸ್, ತಮ್ಮ ಗ್ರಾಹಕರಿಗೆ ಶಾಂತಿ, ನೆಮ್ಮದಿ, ಸೌಖ್ಯ ನೀಡುವ "ಪಾಸ್ಟ್ ಲೈಫ಼್ ರಿಗ್ರೆಷನ್ ಥೆರಪಿ"ಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ರಿಗ್ರೆಷನ್ ಶಿಬಿರಗಳನ್ನೂ ಸಾಮೂಹಿಕ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ.

ಡಾ. ನ್ಯೂಟನ್ ವಿವರಿಸುವಂತೆ (ಅವರ ಗ್ರಾಹಕರು ಸಮ್ಮೋಹಿತ ಸ್ಥಿತಿಯಲ್ಲಿ ತಾವು ಕಂಡುದನ್ನು ತಿಳಿಸಿದ ಆಧಾರದಲ್ಲಿ), ನಮ್ಮ ಆತ್ಮ ಶಕ್ತಿ ಸ್ವರೂಪ. ಅದಕ್ಕೆ ಮುಖ, ಕಣ್ಣು-ಕೈ-ಕಾಲು, ದೇಹ... ಏನೂ ಇಲ್ಲ. ಬರೇ ಬೆಳಕಿನ ಪುಟ್ಟ ಗೋಳದಂಥಾದ್ದು. ನಮ್ಮ ಆತ್ಮದ ಜ್ಞಾನದ ಆಳವನ್ನವಲಂಬಿಸಿ ಆ ಬೆಳಕಿನ ಗೋಳದ ಬಣ್ಣವಿರುತ್ತದೆ. ಅನನುಭವಿ, ಮೊದಲ ಹಂತದ ಆತ್ಮ ಪೂರ್ಣ ಬಿಳಿ ಬಣ್ಣದ್ದಾದರೆ, ಹಂತ ಹಂತವಾಗಿ ಕಿತ್ತಳೆ, ಹಳದಿ, ಹಸುರು, ನೀಲಿ, ನೇರಳೆ ಬಣ್ಣಗಳವರೆಗಿನ ಆತ್ಮಗಳ ಅಸ್ತಿತ್ವ ಅವರ/ಗ್ರಾಹಕರ ಅನುಭವಕ್ಕೆ ಬಂದಿದೆಯೆನ್ನುತ್ತಾರೆ. ಒಂದು ಆತ್ಮ ತನ್ನ ಭೌತಿಕ ದೇಹದಿಂದ ಹೊರಬಿದ್ದೊಡನೆ, ಆ ಆತ್ಮಗತ ಜ್ಞಾನವನ್ನು ಅವಲಂಬಿಸಿ, ಆತ್ಮಲೋಕ (ಸ್ಪಿರಿಟ್/ಸೋಲ್ ವರ್ಲ್ಡ್) ತಲುಪುತ್ತದೆ. ಕೆಲವು ಕಿರಿಯ/ಎಳೆಯ ಅಥವಾ ಅನನುಭವಿ ಆತ್ಮಗಳು ಗಲಿಬಿಲಿಗೊಂಡು ಭೂಮಿಯ ವಾಯುವಲಯದಲ್ಲೇ ಕೆಲಕ್ಷಣಗಳ ಕಾಲ ಸುತ್ತುತ್ತಿರಬಹುದು. ಆಗ ಅಂಥಾ ಆತ್ಮದ ಗುರುಸ್ಥಾನದಲ್ಲಿರುವ ಆತ್ಮ, ಭೌತಿಕ ದೇಹದಲ್ಲಿದ್ದಾಗ ಹತ್ತಿರದ ಸಂಬಂಧಿಕರಾಗಿದ್ದವರ ಆತ್ಮ, ಈ ಆತ್ಮವನ್ನು ಹದವಾದ ಸೆಳೆತಕ್ಕೊಳಪಡಿಸಿ ನಿಜನೆಲೆಯಾದ ಆತ್ಮಲೋಕದ ಕಡೆಗೆ ಕರೆಸಿಕೊಳ್ಳುತ್ತವೆ. ಸ್ವಲ್ಪ ಅನುಭವವಿರುವ ಆತ್ಮ (ಹಲವಾರು ಜನ್ಮಗಳನ್ನೆತ್ತಿದ ಆತ್ಮ, ಹಲವು ಬಾರಿ ಪ್ರಯಾಣ ಮಾಡಿದವರಂತೆ) ತನ್ನ ಮನೆಯತ್ತ ತಾನೇ ಪಯಣಿಸುತ್ತದೆ. ಬಹುತೇಕ ಆತ್ಮಗಳು ಭೌತಿಕ ಸಾವಿನ ಬಳಿಕ "ಒಂದು ಬೆಳಕಿನ ಕೊಳವೆಯೊಳಗೆ ವೇಗವಾಗಿ ಸಾಗಿದ" ಅನುಭವ ಪಡೆಯುತ್ತವೆ.

ಡಾ. ವೈಸ್ ತಮ್ಮ ಪುಸ್ತಕಗಳಲ್ಲಿ ಆತ್ಮಲೋಕದ ಬದಲಾಗಿ ಆತ್ಮಗಳ ಬಗೆಗೇ ತಿಳಿಸುತ್ತಾರೆ. ಗುರು/ಗೈಡ್ ಆತ್ಮಗಳ ಬಗ್ಗೆ ಬರೆಯುತ್ತಾರೆ. ಸಮ್ಮೋಹನದಲ್ಲಿರುವ ತಮ್ಮ ಗ್ರಾಹಕರು ಗೈಡ್ ನೀಡುವ ಸಂದೇಶಗಳನ್ನು ತಮಗರಿವಿಲ್ಲದೆಯೇ ಅರುಹುವುದನ್ನು ಬರೆಯುತ್ತಾರೆ. ಎರಡು ಜನ್ಮಗಳ ನಡುವೆ ಆತ್ಮ ಪುನಶ್ಚೇತನಗೊಳ್ಳುವ ಲೋಕದ ಬಗ್ಗೆ ಇಲ್ಲಿ ಹೆಚ್ಚು ಮಾತಿಲ್ಲ. ನಮ್ಮ ಹಿಂದಿನ ಜೀವನ ಹೇಗಿತ್ತು, ಮುಂದಿನದು ಹೇಗಿರಬಲ್ಲುದು ಎನ್ನುವುದರ ಸುತ್ತಲೇ ಅವರ ಕೆಲಸ. ಅವರ ಪ್ರಕಾರ ಎಲ್ಲ ಆತ್ಮಗಳೂ ಒಂದೇ; ಅನುಭವದ ಆಳಗಳು ಬೇರೆಬೇರೆ, ಅಷ್ಟೇ. ಬಣ್ಣಗೋಳಗಳ ಬಗ್ಗೆ ಅವರು ತಿಳಿಸುವುದಿಲ್ಲ, ಚೇತನದತ್ತ ಅವರ ಗಮನ. ಸ್ವಸಮ್ಮೋಹನದ ಬಗ್ಗೆಯೂ ಡಾ. ವೈಸ್ ತಿಳಿಸುತ್ತಾರೆ; ಮೆಡಿಟೇಷನ್, ಧ್ಯಾನ, ಏಕಾಗ್ರತೆಯನ್ನು ಅಭ್ಯಸಿಸಲು ಹೇಳುತ್ತಾರೆ. ನಿದ್ದೆ-ಎಚ್ಚರಗಳ ನಡುವಿನ ಸ್ಥಿತಿಯಲ್ಲಿನ ಕನಸುಗಳನ್ನು ನೆನಪಿರಿಸಿಕೊಂಡು ಅವನ್ನು ಗುರುತು ಹಾಕಿಕೊಂಡು ಒಂದು ಸೂತ್ರದಲ್ಲಿ ಹೆಣೆಯಲಾಗುತ್ತದೆಯೋ ನೋಡಿ, ಅನ್ನುತ್ತಾರೆ. ಅಗಲಿದ ಆತ್ಮೀಯರಿಂದ ಸಂದೇಶಗಳು ಬರಬಹುದು, ಬರುತ್ತವೆ; ಮನಸ್ಸು ಮುಕ್ತವಾಗಿರಲಿ, ಎಂದು ಸಾರುತ್ತಾರೆ.
(ಭಾಮಿನಿ, ಫ಼ೆಬ್ರವರಿ ೨೦೧೧)

Monday 14 February, 2011

ಹಿಪ್ನೋಥೆರಪಿ-ಭಾಗ-೦೨

ಏನು? ಹೇಗೆ? ಎಲ್ಲಿ? ಯಾರು? ಯಾಕೆ?

ಕಳೆದ ಸಂಚಿಕೆಯಲ್ಲಿ ಹಿಪ್ನೋಥೆರಪಿ (ಸಮ್ಮೋಹನ ಚಿಕಿತ್ಸೆ)ಯ ಹಿನ್ನೆಲೆ ಒಂದಿಷ್ಟು ನೋಡಿದೆವು. ಈಗಿದನ್ನು ಇನ್ನಷ್ಟು ವಿವರವಾಗಿ ತಿಳಿಯೋಣ.

ಮೊದಲಾಗಿ, ಹಿಪ್ನೋಥೆರಪಿ ಎಂದರೇನು?
‘ಹಿಪ್ನೋಸಿಸ್ ಫ಼ಾರ್ ಹೀಲಿಂಗ್ (ಥೆರಪ್ಯೂಟಿಕ್) ಪರ್ಪಸ್’.

ಹಾಗಾದರೆ, ಹಿಪ್ನೋಸಿಸ್ ಎಂದರೇನು?
ನಾವೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ರಯಾಣಿಸುವವರೇ. ಒಂದು ಕಡೆಯಿಂದ ಹೊರಟು ಇನ್ನೊಂದೆಡೆ ಸೇರುವ ಮೊದಲು ಬಸ್ಸಿನಲ್ಲೋ ಕಾರಿನಲ್ಲೋ ಅಥವಾ ಇನ್ಯಾವುದೇ ರೀತಿಯಲ್ಲಿ ಪಯಣಿಸುವಾಗ, ಪೂರ್ಣವಾಗಿ ಎಚ್ಚರಿದ್ದೂ ನಡುವಿನ ಕೆಲವಾರು ಸ್ಥಳಗಳು, ವಿಷಯ-ವಿಚಾರಗಳು ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಕೊನೆಗೆ ನಾವು ತಲುಪಬೇಕಾದ ಸ್ಥಳ ಬಂದಾಗಷ್ಟೇ ನಮ್ಮಗದರ ಅರಿವಾಗುತ್ತದೆ. ಆಗಷ್ಟೇ ನಮ್ಮ ಜಾಗೃತಮನಸ್ಸು ಪೂರ್ಣವಾಗಿ ಎಚ್ಚತ್ತುಕೊಳ್ಳುತ್ತದೆ. ನಿದ್ದೆ ಮಾಡಿಲ್ಲದೆಯೂ ಕಣ್ಣು ತೆರೆದೇ ಇದ್ದೂ ನಮ್ಮ ಗ್ರಹಿಕೆಗೆ ಸುತ್ತಮುತ್ತಲ ವಿವರಗಳು ಗ್ರಾಹ್ಯವಾಗದೇ ಹೋಗಿದ್ದು ಹೇಗೆ? ಬಾಹ್ಯಪ್ರಪಂಚದ ಗೊಡವೆಯಿಲ್ಲದೆ ನಮ್ಮೊಳಗಿನ ಲೋಕದೊಳಗೆ ನಾವು ಕಳೆದುಹೋಗುವ ಸೋಜಿಗ ಏನಿದು? ಇದೊಂದು ರೀತಿಯಲ್ಲಿ ಸಣ್ಣ ಮಟ್ಟದ ಸಮ್ಮೋಹಿತ ಸ್ಥಿತಿ, ಹಿಪ್ನಾಟಿಕ್ ಸ್ಟೇಟ್. ನಿರ್ದಿಷ್ಟವಾಗಿ ಇದನ್ನು ‘ರೋಡ್ ಹಿಪ್ನೋಸಿಸ್’ ಅನ್ನುತ್ತಾರೆ.

ಇದೇ ರೀತಿ ಪರಿಣತ ಚಿಕಿತ್ಸಕರ ನಿರ್ದೇಶನದಲ್ಲಿ, ಯಾವುದೋ ಒಂದು ನಿರ್ದಿಷ್ಟ ಸುರಕ್ಷಿತ ಸ್ಥಳದಲ್ಲಿ, ನಿರಾಳವಾಗಿ ಕೂತು ಅಥವಾ ಮಲಗಿ, ಸಂಪೂರ್ಣವಾಗಿ ಅಂತರ್ಮುಖಿಯಾಗಿ ಪಯಣಿಸುವ ವಿಧಾನವೇ ಹಿಪ್ನೋಸಿಸ್. ನಮ್ಮೆಲ್ಲರ ಅಂತರಂಗ ಅಥವಾ ಸುಪ್ತಮನಸ್ಸು ಸಾಮಾನ್ಯವಾಗಿ ಸುಪ್ತವಾಗಿಯೇ ಗುಪ್ತವಾಗಿಯೇ ಇರುವಂಥದ್ದು. ಸದ್ದುಗದ್ದಲವಿಲ್ಲದ ಈ ಒಳಮನಸ್ಸು ಜ್ಞಾನದ ಆಗರ. ತಿಳಿವಿನ ಕೊಳ. ಅದರ ಆಳ-ಅಗಲಗಳ ಅರಿವಿಲ್ಲದ ನಾವು ಜಾಗೃತ ಮನಸ್ಸಿನ ಆಟೋಪಗಳಲ್ಲೇ ವೇಷ ಕಟ್ಟುವವರು, ಮೆರೆಯುವವರು. ಅದರಿಂದಲೇ ತೊಂದರೆಗೂ ಒಳಗಾಗುವವರು. ಒಮ್ಮೆ ಈ ಒಳಮನಸ್ಸಿನ ದಾರಿ ಸುಲಲಿತವಾಗಿ ಅರಿತೆವೆಂದರೆ ಮುಂದಿನ ಪ್ರಯಾಣವೆಲ್ಲವೂ ಸುಖಮಯವೇ ಸರಿ. ಅಂಥ ಸುಖಪ್ರಯಾಣದ ಟಿಕೆಟ್ ಹಿಪ್ನೋಥೆರಪಿ. ಮತ್ತದರಿಂದಾಗಿ ನಮ್ಮೊಳಗಾಗುವ ಧನಾತ್ಮಕ ಬದಲಾವಣೆಗಳೇ ಹೀಲಿಂಗ್. ಇಲ್ಲಿ ಪಯಣಿಸುವವರು ನಾವುಗಳೇ; ಥೆರಪಿಸ್ಟ್ ನಮ್ಮ ಗೈಡ್ ಮಾತ್ರ.

ಹಿಪ್ನೋಥೆರಪಿ ಹೇಗೆ ಮಾಡಲಾಗುತ್ತದೆ?
ವ್ಯಕ್ತಿಯೊಬ್ಬರಿಗೆ ಚಿಕಿತ್ಸಕರು ಸೂಕ್ತ ಸಲಹೆ/ಸೂಚನೆಗಳನ್ನು ನೀಡುತ್ತಾ ಸಮ್ಮೋಹಿತ ಸ್ಥಿತಿಗೆ ಜಾರುವಂತೆ ನಿರ್ದೇಶಿಸುವರು. ಈ ಹಂತದಲ್ಲಿ ವ್ಯಕ್ತಿಯ ಜಾಗೃತ ಮನಸ್ಸು ಎಚ್ಚರವಾಗಿಯೇ ಇದ್ದೂ ಸ್ತಬ್ಧವಾಗಿರುತ್ತದೆ. ಸುಪ್ತಮನಸ್ಸಿಗೆ ಪ್ರವೇಶಾವಕಾಶ ಮಾಡಿಕೊಡುತ್ತದೆ. ಒಳಮನಸ್ಸಿನ ಪ್ರಯಾಣ ಸಾಧಿಸಿದ ವ್ಯಕ್ತಿ ಚಿಕಿತ್ಸಕರ ನಿರ್ದೇಶನದಂತೆ ಅಲ್ಲಿನ ಪದರಗಳನ್ನು ಜಾಲಾಡುತ್ತಾರೆ. ಒಳಗೆ ಹುದುಗಿರುವ ಎಲ್ಲ ನೆನಪುಗಳನ್ನು, ಪ್ರಸ್ತುತ ಅಥವಾ ಪೂರ್ವ ಜನ್ಮಗಳ ವಿವರಗಳನ್ನು ಶೋಧಿಸಿ ತಮ್ಮ ತೊಂದರೆಗಳಿಗೆ ಕಾರಣಗಳನ್ನು ಹುಡುಕಿಕೊಳ್ಳುತ್ತಾರೆ. ಅವನ್ನೆಲ್ಲ ಜಾಗೃತಮನದ ಪದರಕ್ಕೆ ತಂದುಕೊಳ್ಳುತ್ತಾರೆ. ಇಲ್ಲೆಲ್ಲ ಥೆರಪಿಸ್ಟ್ ನಿಖರ ಸೂಚನೆಗಳನ್ನು ನೀಡುತ್ತಾರೆ. ವ್ಯಕ್ತಿ/ಗ್ರಾಹಕ ತನ್ನೊಳಗನ್ನು ತಾನೇ ಸೋಸಿಕೊಳ್ಳುತ್ತಾರೆ. ಕಾರಣಗಳು ಅರಿವಿನ ಪದರಕ್ಕೆ ಬರುತ್ತಿದ್ದಂತೆಯೇ ಚಿಕಿತ್ಸಕ ಮತ್ತೆ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ತೊಂದರೆ ಮರೆಯಾಗುತ್ತದೆ.

ಇದಕ್ಕೊಂದು ನಿದರ್ಶನ: ಒಬ್ಬರಿಗೆ ಗುಹೆ/ಗವಿಗಳ ಬಗ್ಗೆ ಅವ್ಯಕ್ತ ಭೀತಿ. ಹಲವಾರು ಬಾರಿ ತಾನು ಗುಹೆಯಲ್ಲಿ ಸಿಲುಕಿಕೊಂಡು ಉಸಿರುಗಟ್ಟಿದಂತೆ ಕನಸು ಬೀಳುತ್ತಿತ್ತು. ಇದರಿಂದ ಅತೀವ ತೊಂದರೆಗೆ ಒಳಗಾಗಿಲ್ಲವಾದರೂ ಯಾವಾಗಲಾದರೊಮ್ಮೆ ಶಾಂತನಿದ್ರೆಯಿಂದ ಎಚ್ಚರಿಸುವ ಈ ಕನಸಿನ ಹಿನ್ನೆಲೆ ಅರಿಯುವ, ಅದನ್ನು ಹೋಗಲಾಡಿಸುವ ಕುತೂಹಲವಿತ್ತು. ಥೆರಪಿಸ್ಟ್ ಅವರನ್ನು ಸಮ್ಮೋಹಿತ ಸ್ಥಿತಿಗೆ ನಿರ್ದೇಶಿಸಿ ನಂತರ ‘ನಿಮ್ಮ ಈ ಕನಸಿಗೆ ಮೂಲ ಕಾರಣವನ್ನು ಹುಡುಕಿ ತೆಗೆಯಿರಿ, ಅದು ನಿಮ್ಮೊಳಗೇ ಇದೆ. ಹುಡುಕಿರಿ.’ ಎಂದರು. ಕೆಲವು ಸೆಕೆಂಡುಗಳಲ್ಲೇ ವ್ಯಕ್ತಿ ತಾನು ‘ಕಾಣುತ್ತಿರುವ’ ದೃಶ್ಯವನ್ನು ವಿವರಿಸಲು ತೊಡಗಿದರು.

ಅವರೊಬ್ಬ ಆದಿಮಾನವನಾಗಿದ್ದಾರೆ. ಬಟ್ಟೆಬರೆಯಿಲ್ಲದ ಮೈ ಉದ್ದುದ್ದ ರೋಮಮಯ. ಕಾಡಿನೊಳಗಿನ ಗುಹೆಯೊಂದರಲ್ಲಿ ವಾಸ. ಅವರು ಹೊರಗಿನಿಂದ ಗುಹೆಯೊಳಗೆ ಬರುತ್ತಿದ್ದಾರೆ. ಅಲ್ಲಿ ಆತನ ಸಂಗಾತಿ ಆದಿಮಾನವಿಯೊಬ್ಬಳಿದ್ದಾಳೆ. ಚಿಂಪಾಂಜಿ ಮರಿಯಂಥ ಎರಡು ಬೋಳುಗುಂಡುಗಳು ಗುಹೆಯ ಪಿಚಿಪಿಚಿ ನೆಲದಲ್ಲಿ ಹರಿದಾಡುತ್ತಿವೆ. ಗುಹೆಯ ನಡುವೆ ಕಲ್ಲುಗಳ ಸುತ್ತಿನೊಳಗೆ ಬೆಂಕಿ ಉರಿಯುತ್ತಿದೆ. ಸಂಗಾತಿ ಆತನಿಗೆ ಬೆಂಕಿಯಿಂದ ಕೋಣದ ಕಾಲಿನಂಥದ್ದನ್ನು ತೆಗೆದುಕೊಡುತ್ತಾಳೆ. ಇವನದನ್ನು ಎತ್ತಿಕೊಂಡು ಕಬ್ಬು ಸಿಗಿದು ತಿನ್ನುವಂತೆ ಸಿಗಿದು ಅಗಿಯತೊಡಗುತ್ತಾನೆ. ಆಕೆ ಬೆಂಕಿಯಿಂದ ಇನ್ನೊಂದು ಕಾಲನ್ನು ಎತ್ತಿಕೊಂಡು ತಾನೂ ಸಿಗಿದು ಅಗಿಯುತ್ತಾ ಮರಿಗಳನ್ನು ಪ್ಚು...ಪ್ಚು... ಕರೆದು ಅವುಗಳಿಗೂ ಕೊಡುತ್ತಾಳೆ. ಅಷ್ಟರಲ್ಲೇ ನೆಲ ಗುಡುಗಿ ಗುಹೆಯ ಮಾಡು ನಡುಗಿ ಸದ್ದು ಮಾಡುತ್ತಾ ಇವರುಗಳ ಮೇಲೆಯೇ ಕುಸಿಯುತ್ತದೆ. ಮತ್ತದೇ ಉಸಿರುಗಟ್ಟುವ ಅನುಭವ ಸಮ್ಮೋಹಿತ ವ್ಯಕ್ತಿಗೆ.

ಇಲ್ಲೀಗ ಚಿಕಿತ್ಸಕ ಹೊಸ ನಿರ್ದೇಶಗಳನ್ನು ಕೊಡುತ್ತಾರೆ. ‘ನಿಮ್ಮ ಈಗಿನ ಜೀವನಕ್ಕೂ ಆ ಜೀವನದಲ್ಲಿ ನಡೆದ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಅದರಿಂದ ನಿಮ್ಮಲ್ಲಾಗುತ್ತಿದ್ದ ತಳಮಳಕ್ಕೆ ಇನ್ನು ಕಾರಣವಿಲ್ಲ. ಅದರಿಂದಾದ ನೋವನ್ನು ಅಲ್ಲೇ ಬಿಟ್ಟು ಆ ಜೀವನದ ಧನಾತ್ಮಕ ಅಂಶಗಳನ್ನು ತೆಗೆದುಕೊಂಡು ವಾಸ್ತವಕ್ಕೆ ಎಚ್ಚತ್ತುಕೊಳ್ಳಿ...’. ಇದಾಗಿ ವರುಷಗಳು ಕಳೆದಿವೆ. ಆನಂತರ ಅವರಿಗೆ ಅಂಥ ಕನಸು ಒಮ್ಮೆಯೂ ಬಿದ್ದಿಲ್ಲ. ಗುಹೆ/ಗವಿಗಳ ಬಗ್ಗೆ ಮಾತಾಡಿದಾಗಲೂ ಕಿರಿಕಿರಿ ಅನ್ನಿಸಿಲ್ಲ. ಅಲ್ಲಿಗೆ ಆ ತೊಂದರೆ/ಸಮಸ್ಯೆ ನಿವಾರಣೆ ಆದಂತೆಯೇ. ಇನ್ನೇನು ಬೇಕು?

ಹಿಪ್ನೋಥೆರಪಿ ಎಲ್ಲಿ ಮಾಡಬೇಕು?
ಹಿಪ್ನೋಥೆರಪಿಗೆ ಸುರಕ್ಷಿತ, ಶಾಂತ, ನಿರ್ದಿಷ್ಟ ಸ್ಥಳ ಅತ್ಯಗತ್ಯ. ಗ್ರಾಹಕರಿಗೆ ಅಲ್ಲಿ ನಿರಾಳವಾಗಿರಲು ಅನುಕೂಲವಿರಬೇಕು. ಗದ್ದಲರಹಿತವಾಗಿರಬೇಕು. ಸೌಮ್ಯಸಂಗೀತವಿದ್ದರೆ ಒಳಿತು. ಗಾಳಿಬೆಳಕು ಹಿತವಾಗಿರಬೇಕು. ಆದಷ್ಟೂ ನಿರ್ದಿಷ್ಟ ಸಮಯಕ್ಕೇ ಒತ್ತುಕೊಟ್ಟರೆ ಒಳ್ಳೆಯದು. ದಿನದ ಯಾವ ವೇಳೆಯಲ್ಲಿ ಹಿಪ್ನೋಸಿಸ್ ಮಾಡಬಹುದಾದರೂ ಬಹಳವಾಗಿ ಉತ್ಸಾಹ, ಉನ್ಮಾದ ಇರುವಾಗ ಶಾಂತವಾಗಿ ಸಮ್ಮೋಹಿತ ಸ್ಥಿತಿ ತಲುಪುವುದು ಸುಲಭವಲ್ಲ. ಆದ್ದರಿಂದ ಉಚಿತವಲ್ಲ.

ಹಿಪ್ನೋಥೆರಪಿ ಯಾರು ಮಾಡಬಹುದು?
ಪರಿಣತ ಚಿಕಿತ್ಸಕರೇ ಹಿಪ್ನೋಥೆರಪಿ ಮಾಡಬೇಕು. ಯಾರು ಬೇಕಾದರೂ ಈ ಚಿಕಿತ್ಸಾಪದ್ಧತಿಯನ್ನು ಕಲಿಯಬಹುದು. ಮನಃಶಾಸ್ತ್ರ ಕಲಿಕೆಯ ಹಿನ್ನೆಲೆಯಿದ್ದರೆ ಕೆಲವೊಂದು ಮಾನಸಿಕ ಉದ್ವೇಗಗಳನ್ನು ಸ್ಥಿತಿಗಳನ್ನು ಅರಿಯಲು ಅನುಕೂಲವಾಗುತ್ತದೆಯೇ ಹೊರತು ಅದು ಪೂರ್ವಾಪೇಕ್ಷಿತವಲ್ಲ.

ಹಿಪ್ನೋಥೆರಪಿಯೇ ಯಾಕೆ?
ಕೆಲವಾರು ಮನೋದೈಹಿಕ ತೊಂದರೆಗಳಿಗೆ ವೈದ್ಯಕೀಯವಾಗಿ ಉತ್ತರಗಳಿಲ್ಲ. ಕೆಲವೊಂದು (ಮೇಲೆ ಉದಾಹರಿಸಿದ ಕನಸಿನಂಥವು) ವೈದ್ಯಕೀಯವಾಗಿ ತೊಂದರೆಗಳೇ ಅಲ್ಲ. ಅವಕ್ಕೆಲ್ಲ ಹಿಪ್ನೋಥೆರಪಿಯಲ್ಲಿ ನಿವಾರಣೆಗಳಿವೆ. ಇವಿಷ್ಟಲ್ಲದೇ ಮಾನಸಿಕ ಉದ್ವೇಗ, ಒತ್ತಡ, ಕಿರಿಕಿರಿ, ಗ್ರಹಣಶಕ್ತಿಯ ನ್ಯೂನತೆ, ಏಕಾಗ್ರತೆಯ ಕೊರತೆ, ನಿದ್ರಾಹೀನತೆ, ಮುಂತಾದ ದೋಷಗಳಿಗೆ ನಮ್ಮದೇ ಅಂತರ್ಮುಖೀ ಪದರಗಳಲ್ಲಿ ಸೂಕ್ತ ಪರಿಹಾರಗಳಿವೆ.

ಹಿಪ್ನೋಥೆರಪಿಯೇ ಯಾಕಾಗಬಾರದು? ಯಾವುದೇ ಅಡ್ಡ ಪರಿಣಾಮಗಳಿಲ್ಲದ ಈ ಚಿಕಿತ್ಸಾ ಪದ್ಧತಿಯಲ್ಲಿ ನಾವು ಯಾವುದನ್ನಾದರೂ ಗುಣಪಡಿಸಬಹುದು, ಯಾರನ್ನಾದರೂ ಹೀಲ್ ಮಾಡಬಹುದು; ವ್ಯಕ್ತಿಗೆ ಈ ಹೀಲಿಂಗ್ ಕ್ರಮದ ಮೇಲೆ, ಹೀಲರ್ ಮೇಲೆ ಸಂಪೂರ್ಣ ನಂಬಿಕೆಯಿರಬೇಕು; ಒಪ್ಪಿಗೆಯಿರಬೇಕು, ಅಷ್ಟೇ. ಒಡೆದ ಮನಸ್ಸನ್ನು ಜೋಡಿಸಬಹುದು, ಒಡೆದ ಮೆದುಳನ್ನಾಗದು- ಇದು ಹಿಪ್ನೋಥೆರಪಿಯ ಮಿತಿ.

ಮುಂದಿನ ಕಂತಿನಲ್ಲಿ ಇನ್ನೊಂದಷ್ಟು ಕುತೂಹಲಕಾರಿ ನಿದರ್ಶನಗಳನ್ನು, ಉದಾಹರಣೆಗಳನ್ನು ಅವಲೋಕಿಸೋಣ.
(ಭಾಮಿನಿ, ಜನವರಿ ೨೦೧೧)

Tuesday 1 February, 2011

ಹಿಪ್ನೋಥೆರಪಿ-ಭಾಗ-೦೧

ಸಹೃದಯರೆ,
ಕನ್ನಡ ಸಾರಸ್ವತ ಲೋಕ ಕಾಲದಿಂದ ಕಾಲಕ್ಕೆ ಹೊಸದೇನನ್ನೋ ಪಡೆಯುತ್ತಾ ಮತ್ತೆಲ್ಲೋ ಏನನ್ನೋ ಕಳೆಯುತ್ತಾ ಸಾಗುತ್ತಿದೆ. ಕಾಲಸಾಗರದಲ್ಲಿ ಕನ್ನಡ ನೌಕೆಯೊಳಗೆ ಹೊಸ ಸದಸ್ಯೆಯ ಸೇರ್ಪಡೆಯಾಗಿದೆ. ‘ಭಾಮಿನಿ’ ಸುಂದರವಾಗಿದ್ದಾಳೆ. ಮುರಳಿ ಶೇಣಿ ಸಂಪಾದಕರಾಗಿರುವ ಈ ಮಾಸಿಕಕ್ಕೀಗ ನಾಲ್ಕನೇ ತಿಂಗಳು. ೨೦೦೯ರ ಅಕ್ಟೋಬರಲ್ಲಿ (ನವೆಂಬರದ ಸಂಚಿಕೆಯೊಂದಿಗೆ) ಮೊದಲಾಗಿ ಓದುಗರನ್ನು ಎದುರ್ಗೊಂಡ ಈ ಪತ್ರಿಕೆ ತನ್ನದೇ ನೆಲೆಗಟ್ಟನ್ನು ಹಿಡಿದು ಗಟ್ಟಿಯಾಗಿ ನೆಲೆಯೂರಲಿ. ಆಳ-ಅಗಲವಾಗಿ ಹಬ್ಬಿ ತನ್ನ ಕಂಪು ಇಂಪು ಸೂಸಿ ಸಾರಲೆನ್ನುವ ಹಾರೈಕೆ ಈ ಮೂಲಕ.

ಇದೇ ಪತ್ರಿಕೆಯಲ್ಲಿ, ಸಂಪಾದಕ ಮುರಳಿ ಶೇಣಿಯವರ ಇಚ್ಛೆ, ಕೋರಿಕೆಯ ಮೇರೆಗೆ ‘ಹಿಪ್ನೋಥೆರಪಿ’ (ಸಮ್ಮೋಹನ ಚಿಕಿತ್ಸೆ)ಯ ಬಗ್ಗೆ ಲೇಖನಮಾಲೆ (ಡಿಸೆಂಬರ್ ಸಂಚಿಕೆಯಿಂದ) ಬರೆಯುತ್ತಿದ್ದೇನೆ. ಅದರ ಮೊದಲ ಕಂತು, ನಿಮ್ಮೆಲ್ಲರ ಓದಿಗಾಗಿ ಇಲ್ಲಿದೆ.

***

ಮನೋ ಪ್ರಪಂಚದ ಅನಾವರಣ

ಮಾನವ ಸಹಸ್ರಾರು ವರ್ಷಗಳಿಂದಲೂ ತನ್ನ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಲೇ ಬಂದಿದ್ದಾನೆ. ಜ್ಞಾನ, ತಿಳುವಳಿಕೆ, ಪಾಂಡಿತ್ಯಗಳ ವಿವರಣೆಗಳೂ ಹರಡಿಕೊಳ್ಳುತ್ತಲೇ ಬಂದಿವೆ. ಅಂದರೂ ಇನ್ನಷ್ಟು ಅರಿಯಬೇಕೆಂಬ ಹಂಬಲ ಇಂಗಿಲ್ಲ. ಅರಿವಿನ ಅಂಚನ್ನು ತಡಕಿದೆ ಎನ್ನುವವರು ಯಾರೂ ಇಲ್ಲ. ಸದಾ ತೃಷೆ; ಜ್ಞಾನದಾಹ. ಇದರ ಪ್ರತಿಫಲ ಹೊಸ ಹೊಸ ಆವಿಷ್ಕಾರಗಳು. ಎಲ್ಲ ರೀತಿಯ ವಿಷಯಗಳನ್ನೂ ಬೇರೊಂದು ನೋಟದಿಂದ ಹೊಸದೊಂದು ಬೆಳಕಿನೊಳಗೆ ಇನ್ನೊಂದು ಕೋನದಲ್ಲಿ ಅವಲೋಕಿಸುವ ತಹತಹ, ಸಾಹಸ. ಇವುಗಳಲ್ಲಿ ಹಲವಷ್ಟು ಪ್ರಯೋಗಗಳು ಉತ್ತಮಫಲ ನೀಡಿದರೆ ಮತ್ತೆ ಕೆಲವು ಇನ್ನೊಂದು ಕೊನೆ ಸೇರಿದವು. ಪ್ರಯತ್ನ ಮಾತ್ರ ಮಾನವ ಜನಾಂಗದ ಜೊತೆ ಜೊತೆಗೆ ಮುಂದುವರಿಯುತ್ತಲೇ ಸಾಗಿ ಬಂದಿದೆ. ಇಂತಹ ಪ್ರಯತ್ನಗಳಲ್ಲೊಂದು ಕವಲು ತನ್ನೊಳಗನ್ನರಿಯುವ ಯತ್ನ. ಯೋಚನೆಗಳ ಜಾಲವಾದ, ಮೆದುಳು- ಬುದ್ಧಿ- ಹೃದಯಗಳ ಹೊರತಾದ, ವೈದ್ಯಕೀಯ ಯಾ ವೈಜ್ಞಾನಿಕ ವಿಶ್ಲೇಷಣೆಗಳಿಗೆ ನಿಲುಕದ "ಮನಸ್ಸು" ಎನ್ನುವುದನ್ನು ಶೋಧಿಸುವ ಸಾಕಷ್ಟು ಪ್ರಯೋಗಗಳಾದವು. ಈ ಕೌತುಕಮಯ ಮನಸ್ಸನ್ನು "ಸರಿ"ಯಾಗಿ ತಿಳಿಯಲು, "ಸರಿ" ಮಾಡಲು, ಮತ್ತು "ಸರಿ"ಯಾಗಿರಿಸಲು ಬಹಳಷ್ಟು ಕಸರತ್ತುಗಳು ನಡೆದವು. ಅವುಗಳಲ್ಲೆಲ್ಲ ಮುಖ್ಯವಾದುದು ಮತ್ತು ಪಾಶ್ಚಾತ್ಯರಲ್ಲಿ ಹಿಪ್ನೋಸಿಸ್ ಅಥವಾ ಸಮ್ಮೋಹಿನಿಯ ಬಗ್ಗೆ ಅರಿವು ಮೂಡಿಸಿದ್ದು ೧೭೭೯ರಲ್ಲಿ ಫ಼್ರಾಂಜ಼್ ಆಂಟನ್ ಮೆಸ್ಮರನ ಹೇಳಿಕೆ.

ವೃತ್ತಿಯಲ್ಲಿ ವೈದ್ಯನಾಗಿದ್ದ ಮೆಸ್ಮರ್ ತನ್ನ ರೋಗಿಗಳನ್ನು ತಾನು ಅಯಸ್ಕಾಂತೀಯ ಶಕ್ತಿಯಿಂದ ನಿಗ್ರಹಿಸಬಲ್ಲೆನೆಂದು ಸಾರಿದ. ಆತನ ಹೇಳಿಕೆಗಳ ಪ್ರಕಾರ ಮನೋವಿಕಾರಗಳುಳ್ಳ ರೋಗಿಗಳ ಬಳಿಗೆ ಆತ ಎರಡು ಬಲವಾದ ಅಯಸ್ಕಾಂತಗಳನ್ನು ತಂದು ಅವರ ಜೊತೆ ಅಧಿಕಾರಯುತವಾಗಿ ಮಾತುಗಳನ್ನು ಆಡುತ್ತಾಡುತ್ತಾ ಅವರನ್ನು ನಿದ್ರಾವಶರಾಗಿಸುತ್ತಿದ್ದ ಮತ್ತು ತುಸುಹೊತ್ತಿನಲ್ಲಿ ಎಚ್ಚರಗೊಳ್ಳುವ ಅವರುಗಳು ತಮ್ಮ ಮನೋವೈಕಲ್ಯವನ್ನು ಕಳೆದವರಾಗಿ ಪುನಶ್ಚೇತನಗೊಂಡವರಾಗಿ ಏಳುತ್ತಿದ್ದರು. ಇದರ ಸಫಲತೆಯನ್ನವನು ಎಷ್ಟು ನೆಚ್ಚಿಕೊಂಡಿದ್ದನೆಂದರೆ ಸದಾ ಅಯಸ್ಕಾಂತಗಳನ್ನು ಹಿಡಿದೇ ಇರುತ್ತಿದ್ದ, ಎಲ್ಲರ ಮೇಲೂ ಪ್ರಯೋಗಿಸಲು ಸಿದ್ಧನಾಗುತ್ತಿದ್ದ. ಇದನ್ನು ಜನತೆ "ಮೆಸ್ಮರಿಸಂ" ಎಂದಿತು.

ತದನಂತರ ೧೮೪೩ರಲ್ಲಿ ಡಾ. ಜೇಮ್ಸ್ ಬ್ರೈಡ್ ಎನ್ನುವ ವೈದ್ಯ ಮೆಸ್ಮರಿಸಂನಿಂದ ವಿವಶರಾಗುವ ಸ್ಥಿತಿಯನ್ನು "ಹಿಪ್ನಾಟಿಕ್ ಸ್ಥಿತಿ" ಎಂದ. ಈ ಪ್ರಕ್ರಿಯೆಯನ್ನು "ಹಿಪ್ನೋಸಿಸ್" (ಗ್ರೀಕ್ ಪದ ಹಿಪ್ನೋಸ್= ನಿದ್ರಿಸು) ಎಂದು ನಾಮಕರಣ ಮಾಡಿದ. ಇದೇ ಸಮಯಕ್ಕೆ ಮೆಸ್ಮರನ ವಿಧಾನದಲ್ಲಿ ಆತನ ಮಾತುಗಳ ಪ್ರಭಾವಕ್ಕೆ ಜನ ಒಳಗಾಗುತ್ತಿದ್ದರೇ ವಿನಾ ಅಯಸ್ಕಾಂತದಿಂದಲ್ಲ ಎನ್ನುವ ವಿಷಯವೂ ಹೊರಬಂದು ಬರೀ ಮಾತಿನಿಂದಲೇ ಸಮ್ಮೋಹನಕ್ಕೆ ಒಳಗಾಗಿಸಬಹುದೆನ್ನುವದು ಜಾಹೀರಾಯಿತು. ಮೆಸ್ಮರಿಸಂ ಬದಲು ಹಿಪ್ನಾಟಿಸಂ ರೂಢಿಗೆ ಬಂತು. ಹಿಪ್ನಾಟಿಸಂ ಅಥವಾ ಸಮ್ಮೋಹನ ಕ್ರಿಯೆಯನ್ನು ಚಿಕಿತ್ಸಕವಾಗಿ ಮನೋರೋಗಿಗಳಲ್ಲಿ ಬಳಸಿದಾಗ ಆರಂಭಿಕ ಹಂತದ ರೋಗಿಗಳಿಗೆ ಕಂಡುಬಂದ ಉತ್ತಮ ಪರಿಣಾಮ ತೀಕ್ಷ್ಣ ಮನೋರೋಗಿಗಳಲ್ಲಿ ಕಾಣಲಿಲ್ಲವಾಗಿ ಈ ಚಿಕಿತ್ಸಾ ಪದ್ಧತಿಯೂ ಸ್ವಲ್ಪ ಕಾಲ ಹಿನ್ನೆಲೆಗೆ ಸರಿಯಿತು.

ಅಲ್ಲಿಂದ ಮುಂದೆ ಇಪ್ಪತ್ತನೇ ಶತಮಾನದಿಂದೀಚೆಗೆ ಯುರೋಪ್ ಹಾಗೂ ಅಮೆರಿಕದ ಹಲವಾರು ಮನೋರೋಗ ಚಿಕಿತ್ಸಕರ ಸಮ್ಮೋಹನಾ ಚಿಕಿತ್ಸೆಗಳಲ್ಲಿ ಬಹುತೇಕ ಆಕಸ್ಮಿಕವಾಗಿ ಲಭಿಸಿದ ಉಪಯೋಗದ ಫಲವಾಗಿ ಹಿಪ್ನೋಸಿಸ್ ಒಂದು ಚಿಕಿತ್ಸಾವಿಧಾನವಾಗಿ ಹಿಪ್ನೋಥೆರಪಿಯಾಗಿ ಹೊರಹೊಮ್ಮಿದೆ. ಈ ಥೆರಪಿ ವಿಧಾನದಿಂದ ಭಯ, ಅಂಜಿಕೆ, ಆತಂಕಗಳಂಥ ಸಾಮಾನ್ಯ ತೊಂದರೆಗಳಿಂದ ಹಿಡಿದು ವೈದ್ಯಕೀಯವಾಗಿ ವಿವರಿಸಲಾಗದ "ಮನೋದೈಹಿಕ"ವೆಂದು ಕರೆಸಿಕೊಳ್ಳುವ ತೊಂದರೆಗಳಿಗೂ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿದೆ. ಅರಿವಳಿಕೆಯ ಸ್ಥಾನದಲ್ಲಿಯೂ ಸಮ್ಮೋಹಿತ ಸ್ಥಿತಿಯನ್ನು ಬಳಸಲಾಗಿದೆ. ಸ್ವಸಮ್ಮೋಹಿನಿಯಿಂದಲೂ ನೆನಪು ಶಕ್ತಿಯ ವೃದ್ಧಿ, ಏಕಾಗ್ರತೆಯ ತೀಕ್ಷ್ಣತೆ, ಆತ್ಮಶಕ್ತಿ, ಆತ್ಮಗೌರವಗಳ ಉತ್ತಮಿಕೆ ಕಂಡುಬಂದಿವೆ.


ಇಷ್ಟೆಲ್ಲ ಗುಣಗಳಿರುವ ಈ ಚಿಕಿತ್ಸಾವಿಧಾನ ಎಲ್ಲಿ, ಯಾರು, ಹೇಗೆ, ಯಾವಾಗ, ಯಾಕೆ, ಯಾರಿಗೆ ಮಾಡುತ್ತಾರೆ/ ಮಾಡಬಹುದು? ಇವನ್ನೆಲ್ಲ ಮುಂದಿನ ಕಂತಿನಲ್ಲಿ ವಿಶದವಾಗಿ ನೋಡೋಣ. ಎಲ್ಲರಿಗೂ ಶುಭವಾಗಲಿ.
(ಭಾಮಿನಿ, ಡಿಸೆಂಬರ್ ೨೦೧೦.)

Saturday 1 January, 2011

ನವವರುಷ ನೆಪದಲ್ಲಿ ನೇಹದ ನೆನಕೆ

ಹೊಸವರುಷವು ಹೊಸದೆ ಸಂಚಿ ತಂದಿದೆ

ಹೊಸಹೊಸತು ಕನಸು ಕಣ್ಣ ಅಂಚಿನಲ್ಲಿದೆ

ಎಲ್ಲ ಕನಸುಗಳು ಹುರುಪು ತರಲಿ

ಎಲ್ಲ ದಿನಗಳಲೂ ಹರುಷವಿರಲಿ.