ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 14 February 2011

ಹಿಪ್ನೋಥೆರಪಿ-ಭಾಗ-೦೨

ಏನು? ಹೇಗೆ? ಎಲ್ಲಿ? ಯಾರು? ಯಾಕೆ?

ಕಳೆದ ಸಂಚಿಕೆಯಲ್ಲಿ ಹಿಪ್ನೋಥೆರಪಿ (ಸಮ್ಮೋಹನ ಚಿಕಿತ್ಸೆ)ಯ ಹಿನ್ನೆಲೆ ಒಂದಿಷ್ಟು ನೋಡಿದೆವು. ಈಗಿದನ್ನು ಇನ್ನಷ್ಟು ವಿವರವಾಗಿ ತಿಳಿಯೋಣ.

ಮೊದಲಾಗಿ, ಹಿಪ್ನೋಥೆರಪಿ ಎಂದರೇನು?
‘ಹಿಪ್ನೋಸಿಸ್ ಫ಼ಾರ್ ಹೀಲಿಂಗ್ (ಥೆರಪ್ಯೂಟಿಕ್) ಪರ್ಪಸ್’.

ಹಾಗಾದರೆ, ಹಿಪ್ನೋಸಿಸ್ ಎಂದರೇನು?
ನಾವೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ರಯಾಣಿಸುವವರೇ. ಒಂದು ಕಡೆಯಿಂದ ಹೊರಟು ಇನ್ನೊಂದೆಡೆ ಸೇರುವ ಮೊದಲು ಬಸ್ಸಿನಲ್ಲೋ ಕಾರಿನಲ್ಲೋ ಅಥವಾ ಇನ್ಯಾವುದೇ ರೀತಿಯಲ್ಲಿ ಪಯಣಿಸುವಾಗ, ಪೂರ್ಣವಾಗಿ ಎಚ್ಚರಿದ್ದೂ ನಡುವಿನ ಕೆಲವಾರು ಸ್ಥಳಗಳು, ವಿಷಯ-ವಿಚಾರಗಳು ನಮ್ಮ ಗಮನಕ್ಕೇ ಬಂದಿರುವುದಿಲ್ಲ. ಕೊನೆಗೆ ನಾವು ತಲುಪಬೇಕಾದ ಸ್ಥಳ ಬಂದಾಗಷ್ಟೇ ನಮ್ಮಗದರ ಅರಿವಾಗುತ್ತದೆ. ಆಗಷ್ಟೇ ನಮ್ಮ ಜಾಗೃತಮನಸ್ಸು ಪೂರ್ಣವಾಗಿ ಎಚ್ಚತ್ತುಕೊಳ್ಳುತ್ತದೆ. ನಿದ್ದೆ ಮಾಡಿಲ್ಲದೆಯೂ ಕಣ್ಣು ತೆರೆದೇ ಇದ್ದೂ ನಮ್ಮ ಗ್ರಹಿಕೆಗೆ ಸುತ್ತಮುತ್ತಲ ವಿವರಗಳು ಗ್ರಾಹ್ಯವಾಗದೇ ಹೋಗಿದ್ದು ಹೇಗೆ? ಬಾಹ್ಯಪ್ರಪಂಚದ ಗೊಡವೆಯಿಲ್ಲದೆ ನಮ್ಮೊಳಗಿನ ಲೋಕದೊಳಗೆ ನಾವು ಕಳೆದುಹೋಗುವ ಸೋಜಿಗ ಏನಿದು? ಇದೊಂದು ರೀತಿಯಲ್ಲಿ ಸಣ್ಣ ಮಟ್ಟದ ಸಮ್ಮೋಹಿತ ಸ್ಥಿತಿ, ಹಿಪ್ನಾಟಿಕ್ ಸ್ಟೇಟ್. ನಿರ್ದಿಷ್ಟವಾಗಿ ಇದನ್ನು ‘ರೋಡ್ ಹಿಪ್ನೋಸಿಸ್’ ಅನ್ನುತ್ತಾರೆ.

ಇದೇ ರೀತಿ ಪರಿಣತ ಚಿಕಿತ್ಸಕರ ನಿರ್ದೇಶನದಲ್ಲಿ, ಯಾವುದೋ ಒಂದು ನಿರ್ದಿಷ್ಟ ಸುರಕ್ಷಿತ ಸ್ಥಳದಲ್ಲಿ, ನಿರಾಳವಾಗಿ ಕೂತು ಅಥವಾ ಮಲಗಿ, ಸಂಪೂರ್ಣವಾಗಿ ಅಂತರ್ಮುಖಿಯಾಗಿ ಪಯಣಿಸುವ ವಿಧಾನವೇ ಹಿಪ್ನೋಸಿಸ್. ನಮ್ಮೆಲ್ಲರ ಅಂತರಂಗ ಅಥವಾ ಸುಪ್ತಮನಸ್ಸು ಸಾಮಾನ್ಯವಾಗಿ ಸುಪ್ತವಾಗಿಯೇ ಗುಪ್ತವಾಗಿಯೇ ಇರುವಂಥದ್ದು. ಸದ್ದುಗದ್ದಲವಿಲ್ಲದ ಈ ಒಳಮನಸ್ಸು ಜ್ಞಾನದ ಆಗರ. ತಿಳಿವಿನ ಕೊಳ. ಅದರ ಆಳ-ಅಗಲಗಳ ಅರಿವಿಲ್ಲದ ನಾವು ಜಾಗೃತ ಮನಸ್ಸಿನ ಆಟೋಪಗಳಲ್ಲೇ ವೇಷ ಕಟ್ಟುವವರು, ಮೆರೆಯುವವರು. ಅದರಿಂದಲೇ ತೊಂದರೆಗೂ ಒಳಗಾಗುವವರು. ಒಮ್ಮೆ ಈ ಒಳಮನಸ್ಸಿನ ದಾರಿ ಸುಲಲಿತವಾಗಿ ಅರಿತೆವೆಂದರೆ ಮುಂದಿನ ಪ್ರಯಾಣವೆಲ್ಲವೂ ಸುಖಮಯವೇ ಸರಿ. ಅಂಥ ಸುಖಪ್ರಯಾಣದ ಟಿಕೆಟ್ ಹಿಪ್ನೋಥೆರಪಿ. ಮತ್ತದರಿಂದಾಗಿ ನಮ್ಮೊಳಗಾಗುವ ಧನಾತ್ಮಕ ಬದಲಾವಣೆಗಳೇ ಹೀಲಿಂಗ್. ಇಲ್ಲಿ ಪಯಣಿಸುವವರು ನಾವುಗಳೇ; ಥೆರಪಿಸ್ಟ್ ನಮ್ಮ ಗೈಡ್ ಮಾತ್ರ.

ಹಿಪ್ನೋಥೆರಪಿ ಹೇಗೆ ಮಾಡಲಾಗುತ್ತದೆ?
ವ್ಯಕ್ತಿಯೊಬ್ಬರಿಗೆ ಚಿಕಿತ್ಸಕರು ಸೂಕ್ತ ಸಲಹೆ/ಸೂಚನೆಗಳನ್ನು ನೀಡುತ್ತಾ ಸಮ್ಮೋಹಿತ ಸ್ಥಿತಿಗೆ ಜಾರುವಂತೆ ನಿರ್ದೇಶಿಸುವರು. ಈ ಹಂತದಲ್ಲಿ ವ್ಯಕ್ತಿಯ ಜಾಗೃತ ಮನಸ್ಸು ಎಚ್ಚರವಾಗಿಯೇ ಇದ್ದೂ ಸ್ತಬ್ಧವಾಗಿರುತ್ತದೆ. ಸುಪ್ತಮನಸ್ಸಿಗೆ ಪ್ರವೇಶಾವಕಾಶ ಮಾಡಿಕೊಡುತ್ತದೆ. ಒಳಮನಸ್ಸಿನ ಪ್ರಯಾಣ ಸಾಧಿಸಿದ ವ್ಯಕ್ತಿ ಚಿಕಿತ್ಸಕರ ನಿರ್ದೇಶನದಂತೆ ಅಲ್ಲಿನ ಪದರಗಳನ್ನು ಜಾಲಾಡುತ್ತಾರೆ. ಒಳಗೆ ಹುದುಗಿರುವ ಎಲ್ಲ ನೆನಪುಗಳನ್ನು, ಪ್ರಸ್ತುತ ಅಥವಾ ಪೂರ್ವ ಜನ್ಮಗಳ ವಿವರಗಳನ್ನು ಶೋಧಿಸಿ ತಮ್ಮ ತೊಂದರೆಗಳಿಗೆ ಕಾರಣಗಳನ್ನು ಹುಡುಕಿಕೊಳ್ಳುತ್ತಾರೆ. ಅವನ್ನೆಲ್ಲ ಜಾಗೃತಮನದ ಪದರಕ್ಕೆ ತಂದುಕೊಳ್ಳುತ್ತಾರೆ. ಇಲ್ಲೆಲ್ಲ ಥೆರಪಿಸ್ಟ್ ನಿಖರ ಸೂಚನೆಗಳನ್ನು ನೀಡುತ್ತಾರೆ. ವ್ಯಕ್ತಿ/ಗ್ರಾಹಕ ತನ್ನೊಳಗನ್ನು ತಾನೇ ಸೋಸಿಕೊಳ್ಳುತ್ತಾರೆ. ಕಾರಣಗಳು ಅರಿವಿನ ಪದರಕ್ಕೆ ಬರುತ್ತಿದ್ದಂತೆಯೇ ಚಿಕಿತ್ಸಕ ಮತ್ತೆ ಸೂಕ್ತ ಸಲಹೆಗಳನ್ನು ನೀಡುತ್ತಾರೆ. ತೊಂದರೆ ಮರೆಯಾಗುತ್ತದೆ.

ಇದಕ್ಕೊಂದು ನಿದರ್ಶನ: ಒಬ್ಬರಿಗೆ ಗುಹೆ/ಗವಿಗಳ ಬಗ್ಗೆ ಅವ್ಯಕ್ತ ಭೀತಿ. ಹಲವಾರು ಬಾರಿ ತಾನು ಗುಹೆಯಲ್ಲಿ ಸಿಲುಕಿಕೊಂಡು ಉಸಿರುಗಟ್ಟಿದಂತೆ ಕನಸು ಬೀಳುತ್ತಿತ್ತು. ಇದರಿಂದ ಅತೀವ ತೊಂದರೆಗೆ ಒಳಗಾಗಿಲ್ಲವಾದರೂ ಯಾವಾಗಲಾದರೊಮ್ಮೆ ಶಾಂತನಿದ್ರೆಯಿಂದ ಎಚ್ಚರಿಸುವ ಈ ಕನಸಿನ ಹಿನ್ನೆಲೆ ಅರಿಯುವ, ಅದನ್ನು ಹೋಗಲಾಡಿಸುವ ಕುತೂಹಲವಿತ್ತು. ಥೆರಪಿಸ್ಟ್ ಅವರನ್ನು ಸಮ್ಮೋಹಿತ ಸ್ಥಿತಿಗೆ ನಿರ್ದೇಶಿಸಿ ನಂತರ ‘ನಿಮ್ಮ ಈ ಕನಸಿಗೆ ಮೂಲ ಕಾರಣವನ್ನು ಹುಡುಕಿ ತೆಗೆಯಿರಿ, ಅದು ನಿಮ್ಮೊಳಗೇ ಇದೆ. ಹುಡುಕಿರಿ.’ ಎಂದರು. ಕೆಲವು ಸೆಕೆಂಡುಗಳಲ್ಲೇ ವ್ಯಕ್ತಿ ತಾನು ‘ಕಾಣುತ್ತಿರುವ’ ದೃಶ್ಯವನ್ನು ವಿವರಿಸಲು ತೊಡಗಿದರು.

ಅವರೊಬ್ಬ ಆದಿಮಾನವನಾಗಿದ್ದಾರೆ. ಬಟ್ಟೆಬರೆಯಿಲ್ಲದ ಮೈ ಉದ್ದುದ್ದ ರೋಮಮಯ. ಕಾಡಿನೊಳಗಿನ ಗುಹೆಯೊಂದರಲ್ಲಿ ವಾಸ. ಅವರು ಹೊರಗಿನಿಂದ ಗುಹೆಯೊಳಗೆ ಬರುತ್ತಿದ್ದಾರೆ. ಅಲ್ಲಿ ಆತನ ಸಂಗಾತಿ ಆದಿಮಾನವಿಯೊಬ್ಬಳಿದ್ದಾಳೆ. ಚಿಂಪಾಂಜಿ ಮರಿಯಂಥ ಎರಡು ಬೋಳುಗುಂಡುಗಳು ಗುಹೆಯ ಪಿಚಿಪಿಚಿ ನೆಲದಲ್ಲಿ ಹರಿದಾಡುತ್ತಿವೆ. ಗುಹೆಯ ನಡುವೆ ಕಲ್ಲುಗಳ ಸುತ್ತಿನೊಳಗೆ ಬೆಂಕಿ ಉರಿಯುತ್ತಿದೆ. ಸಂಗಾತಿ ಆತನಿಗೆ ಬೆಂಕಿಯಿಂದ ಕೋಣದ ಕಾಲಿನಂಥದ್ದನ್ನು ತೆಗೆದುಕೊಡುತ್ತಾಳೆ. ಇವನದನ್ನು ಎತ್ತಿಕೊಂಡು ಕಬ್ಬು ಸಿಗಿದು ತಿನ್ನುವಂತೆ ಸಿಗಿದು ಅಗಿಯತೊಡಗುತ್ತಾನೆ. ಆಕೆ ಬೆಂಕಿಯಿಂದ ಇನ್ನೊಂದು ಕಾಲನ್ನು ಎತ್ತಿಕೊಂಡು ತಾನೂ ಸಿಗಿದು ಅಗಿಯುತ್ತಾ ಮರಿಗಳನ್ನು ಪ್ಚು...ಪ್ಚು... ಕರೆದು ಅವುಗಳಿಗೂ ಕೊಡುತ್ತಾಳೆ. ಅಷ್ಟರಲ್ಲೇ ನೆಲ ಗುಡುಗಿ ಗುಹೆಯ ಮಾಡು ನಡುಗಿ ಸದ್ದು ಮಾಡುತ್ತಾ ಇವರುಗಳ ಮೇಲೆಯೇ ಕುಸಿಯುತ್ತದೆ. ಮತ್ತದೇ ಉಸಿರುಗಟ್ಟುವ ಅನುಭವ ಸಮ್ಮೋಹಿತ ವ್ಯಕ್ತಿಗೆ.

ಇಲ್ಲೀಗ ಚಿಕಿತ್ಸಕ ಹೊಸ ನಿರ್ದೇಶಗಳನ್ನು ಕೊಡುತ್ತಾರೆ. ‘ನಿಮ್ಮ ಈಗಿನ ಜೀವನಕ್ಕೂ ಆ ಜೀವನದಲ್ಲಿ ನಡೆದ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಅದರಿಂದ ನಿಮ್ಮಲ್ಲಾಗುತ್ತಿದ್ದ ತಳಮಳಕ್ಕೆ ಇನ್ನು ಕಾರಣವಿಲ್ಲ. ಅದರಿಂದಾದ ನೋವನ್ನು ಅಲ್ಲೇ ಬಿಟ್ಟು ಆ ಜೀವನದ ಧನಾತ್ಮಕ ಅಂಶಗಳನ್ನು ತೆಗೆದುಕೊಂಡು ವಾಸ್ತವಕ್ಕೆ ಎಚ್ಚತ್ತುಕೊಳ್ಳಿ...’. ಇದಾಗಿ ವರುಷಗಳು ಕಳೆದಿವೆ. ಆನಂತರ ಅವರಿಗೆ ಅಂಥ ಕನಸು ಒಮ್ಮೆಯೂ ಬಿದ್ದಿಲ್ಲ. ಗುಹೆ/ಗವಿಗಳ ಬಗ್ಗೆ ಮಾತಾಡಿದಾಗಲೂ ಕಿರಿಕಿರಿ ಅನ್ನಿಸಿಲ್ಲ. ಅಲ್ಲಿಗೆ ಆ ತೊಂದರೆ/ಸಮಸ್ಯೆ ನಿವಾರಣೆ ಆದಂತೆಯೇ. ಇನ್ನೇನು ಬೇಕು?

ಹಿಪ್ನೋಥೆರಪಿ ಎಲ್ಲಿ ಮಾಡಬೇಕು?
ಹಿಪ್ನೋಥೆರಪಿಗೆ ಸುರಕ್ಷಿತ, ಶಾಂತ, ನಿರ್ದಿಷ್ಟ ಸ್ಥಳ ಅತ್ಯಗತ್ಯ. ಗ್ರಾಹಕರಿಗೆ ಅಲ್ಲಿ ನಿರಾಳವಾಗಿರಲು ಅನುಕೂಲವಿರಬೇಕು. ಗದ್ದಲರಹಿತವಾಗಿರಬೇಕು. ಸೌಮ್ಯಸಂಗೀತವಿದ್ದರೆ ಒಳಿತು. ಗಾಳಿಬೆಳಕು ಹಿತವಾಗಿರಬೇಕು. ಆದಷ್ಟೂ ನಿರ್ದಿಷ್ಟ ಸಮಯಕ್ಕೇ ಒತ್ತುಕೊಟ್ಟರೆ ಒಳ್ಳೆಯದು. ದಿನದ ಯಾವ ವೇಳೆಯಲ್ಲಿ ಹಿಪ್ನೋಸಿಸ್ ಮಾಡಬಹುದಾದರೂ ಬಹಳವಾಗಿ ಉತ್ಸಾಹ, ಉನ್ಮಾದ ಇರುವಾಗ ಶಾಂತವಾಗಿ ಸಮ್ಮೋಹಿತ ಸ್ಥಿತಿ ತಲುಪುವುದು ಸುಲಭವಲ್ಲ. ಆದ್ದರಿಂದ ಉಚಿತವಲ್ಲ.

ಹಿಪ್ನೋಥೆರಪಿ ಯಾರು ಮಾಡಬಹುದು?
ಪರಿಣತ ಚಿಕಿತ್ಸಕರೇ ಹಿಪ್ನೋಥೆರಪಿ ಮಾಡಬೇಕು. ಯಾರು ಬೇಕಾದರೂ ಈ ಚಿಕಿತ್ಸಾಪದ್ಧತಿಯನ್ನು ಕಲಿಯಬಹುದು. ಮನಃಶಾಸ್ತ್ರ ಕಲಿಕೆಯ ಹಿನ್ನೆಲೆಯಿದ್ದರೆ ಕೆಲವೊಂದು ಮಾನಸಿಕ ಉದ್ವೇಗಗಳನ್ನು ಸ್ಥಿತಿಗಳನ್ನು ಅರಿಯಲು ಅನುಕೂಲವಾಗುತ್ತದೆಯೇ ಹೊರತು ಅದು ಪೂರ್ವಾಪೇಕ್ಷಿತವಲ್ಲ.

ಹಿಪ್ನೋಥೆರಪಿಯೇ ಯಾಕೆ?
ಕೆಲವಾರು ಮನೋದೈಹಿಕ ತೊಂದರೆಗಳಿಗೆ ವೈದ್ಯಕೀಯವಾಗಿ ಉತ್ತರಗಳಿಲ್ಲ. ಕೆಲವೊಂದು (ಮೇಲೆ ಉದಾಹರಿಸಿದ ಕನಸಿನಂಥವು) ವೈದ್ಯಕೀಯವಾಗಿ ತೊಂದರೆಗಳೇ ಅಲ್ಲ. ಅವಕ್ಕೆಲ್ಲ ಹಿಪ್ನೋಥೆರಪಿಯಲ್ಲಿ ನಿವಾರಣೆಗಳಿವೆ. ಇವಿಷ್ಟಲ್ಲದೇ ಮಾನಸಿಕ ಉದ್ವೇಗ, ಒತ್ತಡ, ಕಿರಿಕಿರಿ, ಗ್ರಹಣಶಕ್ತಿಯ ನ್ಯೂನತೆ, ಏಕಾಗ್ರತೆಯ ಕೊರತೆ, ನಿದ್ರಾಹೀನತೆ, ಮುಂತಾದ ದೋಷಗಳಿಗೆ ನಮ್ಮದೇ ಅಂತರ್ಮುಖೀ ಪದರಗಳಲ್ಲಿ ಸೂಕ್ತ ಪರಿಹಾರಗಳಿವೆ.

ಹಿಪ್ನೋಥೆರಪಿಯೇ ಯಾಕಾಗಬಾರದು? ಯಾವುದೇ ಅಡ್ಡ ಪರಿಣಾಮಗಳಿಲ್ಲದ ಈ ಚಿಕಿತ್ಸಾ ಪದ್ಧತಿಯಲ್ಲಿ ನಾವು ಯಾವುದನ್ನಾದರೂ ಗುಣಪಡಿಸಬಹುದು, ಯಾರನ್ನಾದರೂ ಹೀಲ್ ಮಾಡಬಹುದು; ವ್ಯಕ್ತಿಗೆ ಈ ಹೀಲಿಂಗ್ ಕ್ರಮದ ಮೇಲೆ, ಹೀಲರ್ ಮೇಲೆ ಸಂಪೂರ್ಣ ನಂಬಿಕೆಯಿರಬೇಕು; ಒಪ್ಪಿಗೆಯಿರಬೇಕು, ಅಷ್ಟೇ. ಒಡೆದ ಮನಸ್ಸನ್ನು ಜೋಡಿಸಬಹುದು, ಒಡೆದ ಮೆದುಳನ್ನಾಗದು- ಇದು ಹಿಪ್ನೋಥೆರಪಿಯ ಮಿತಿ.

ಮುಂದಿನ ಕಂತಿನಲ್ಲಿ ಇನ್ನೊಂದಷ್ಟು ಕುತೂಹಲಕಾರಿ ನಿದರ್ಶನಗಳನ್ನು, ಉದಾಹರಣೆಗಳನ್ನು ಅವಲೋಕಿಸೋಣ.
(ಭಾಮಿನಿ, ಜನವರಿ ೨೦೧೧)

4 comments:

sunaath said...

ನೀವು ನೀಡಿದ ಉದಾಹರಣೆಯಲ್ಲಿ ಪೂರ್ವಜನ್ಮದ ಘಟನೆ ಇದೆ.
ಇದು ಸಾಧ್ಯವೆ? ನಮ್ಮ ಅನೇಕಾನೇಕ ಜನ್ಮಗಳಲ್ಲಿ ನಾವು ಅನೇಕಾನೇಕ ಸಮಸ್ಯೆಗಳಿಂದ ಬಳಲಿದ್ದು, ಇವೆಲ್ಲವುಗಳಿಂದಾಗಿ ನಮ್ಮ ಸದ್ಯದ ಜನ್ಮವು ಅನೇಕಾನೇಕ ಸಮಸ್ಯೆಗಳ bundle
ಆಗಬೇಕಲ್ಲವೆ?

ಸುಪ್ತದೀಪ್ತಿ suptadeepti said...

ಕಾಕಾ, ನೀವು ಹೇಳಿರುವಂತೆಯೇ ನಮ್ಮ ಅನೇಕಾನೇಕ ಜನ್ಮಗಳಲ್ಲಿ ನಾವು ಅನೇಕಾನೇಕ ಸಮಸ್ಯೆಗಳಿಂದ ಬಳಲಿರಬಹುದು. ಹಾಗಂತ ಅವೆಲ್ಲ ಇದೇ ಜನ್ಮದಲ್ಲಿ ನಮ್ಮನ್ನು ಕಾಡಬೇಕು ಅಂತೇನಿಲ್ಲ. ‘ಎಲ್ಲಕ್ಕೂ ಕಾಲ ಕೂಡಿ ಬರಬೇಕು’ ಅನ್ನುವ ಮಾತನ್ನು ನೀವು ಕೇಳಿರಬಹುದು. ಇದೂ ಹಾಗೆಯೇ. ಅಂಥದೊಂದು ‘ಸಮಸ್ಯೆ’ ನಮ್ಮ ‘ಕರ್ಮ ಸಂಚಿ’ಯಿಂದ ಕಳಚಿಕೊಳ್ಳಬೇಕಾದರೆ- ಉದಾಹರಣೆಯ ವ್ಯಕ್ತಿಗಾದಂತೆ- ಆ ಸಮಸ್ಯೆಯ ಇರುವಿಕೆಯು ಈ ಜನ್ಮದಲ್ಲಿ ‘ಎಚ್ಚತ್ತುಕೊಂಡು’ (ಪ್ರಜ್ಞಾಸ್ತರಕ್ಕೆ ಬಂದು), ಸೂಕ್ತ ಸಮಯ ಬಂದಾಗ, ಸೂಕ್ತ ಚಿಕಿತ್ಸಕನ ಮೂಲಕವೋ ಅಥವಾ ಸುಮ್ಮನೇ ಕನಸಿನ ಮೂಲಕವೋ (ತೀರಾ ಅಪರೂಪ ಸಂದರ್ಭಗಳಲ್ಲಿ, ವ್ಯಕ್ತಿ ಅತ್ಯಂತ ಗಟ್ಟಿಗರಾಗಿದ್ದಲ್ಲಿ) ನಿವಾರಣೆಯಾಗಿಬಿಡುತ್ತದೆ.

ಇನ್ನು ಕೆಲವೊಂದು ಸಮಸ್ಯೆಗಳು ನಮ್ಮ ಪೂರ್ವಜನ್ಮದ ವಾಸನೆಯೇ ಆಗಬೇಕಾಗಿಲ್ಲ; ನಾವು ಕಲಿಯಲೇಬೇಕಾಗಿರುವ ಯಾವುದೋ ಪಾಠದ ‘ಪಠ್ಯಕ್ರಮ’ವಾಗಿರಬಹುದು. ಎಲ್ಲವೂ ನಮ್ಮ ಕರ್ಮಫಲಕ್ಕೂ ನಮ್ಮ ಗ್ರಹಿಕೆಯ ನಿಲುಕಿಗೂ ಸಂಬಂಧಿಸಿವೆ.

ಶಾನಿ said...

ತುಂಬ ಉಪಯುಕ್ತವಾದ ಮಾಹಿತಿ ನೀಡುತ್ತಿದ್ದೀರಿ. ಧನ್ಯವಾದಗಳು!

ಸುಪ್ತದೀಪ್ತಿ suptadeepti said...

ಸ್ವಾಗತ ಶಾನಿ.
ಸಾಹಿತ್ಯದ ಬಳಿಕ ಇದು ನನ್ನ ಪ್ಯಾಷನ್. ಅದರ ಬಗ್ಗೆ ಅರಿವು ಹಬ್ಬುವ ಪ್ರಯತ್ನ ಇಲ್ಲಿದೆ, ಅಷ್ಟೇ. ಹೀಗೇ ಬರುತ್ತಿರಿ, ಓದಿ ಬರೆಯುತ್ತಿರಿ. ವಂದನೆಗಳು.