ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Tuesday, 14 January 2014

ಪತ್ನೀ-ವ್ರತಸ್ಥೆ

ಮೀನಾಕ್ಷಿ ಸಾಕ್ಷಿಯಲಿ ಹಸೆಯಲಿ
ಆನತಮುಖಿ ಅಗ್ನಿಕನ್ಯೆ ನಸು-
ವೇ ನಾಚುತ ಕುಡಿಯೆಳೆ ನೋಟದಲಿ ಕಾದಳು ನಿಜವರನ
ಅಣ್ಣ ಕರೆತರಲೈದು ವೀರರ
ಸಣ್ಣ ನಡುಕದಿ ಬೆವರಿ ಸೆಟೆದಳು
ಕಣ್ಣು ಹುಡುಕಿತು ಕೃಷ್ಣನಡಿಗಳ, ಏನು ಆಟವಿದು?
   
ಅಮ್ಮ ನುಡಿದಿರೆ ಹಂಚಿಕೊಳಿರೆಂ-
ದೆಮ್ಮ ನಡುವಲಿ ಭೇದವಿಲ್ಲೆಂ-
ದೆಮಗೆ ಒಂದೇ ಸತಿಯ ಧರ್ಮದಿ ಬಾಳು ನೀನೆಂದ
ಧರ್ಮನಿಷ್ಠನು ನಾ, ಬಹುಪರಾ-
ಕ್ರಮಿಗಳಿನ್ನಿಬ್ಬರು, ಆ ಕಿರಿಯ
ಯಮಳರತಿಶಯ ತೀಕ್ಷ್ಣಮತಿಗಳು, ನಿನಗೆ ಪತಿಗಳಿನ್ನು
   
ಒಂದು ಕೈಯಲಿ ಧರ್ಮ, ಮತ್ತಿ-
ನ್ನೊಂದು ಕೈಯಲಿ ಶೌರ್ಯ, ಮಗದಿ-
ನ್ನೊಂದರಲಿ ಬಲುರಸಿಕ ಲೀಲೆಯ ತೂಗಿಸಲು ಬೇಕು
ಒಂದರಲಿ ತುರಗಚತುರತೆ, ಇ-
ನ್ನೊಂದರೊಳು ಈ ರಾಜತಂತ್ರಿಯ-
ದೊಂದು ಜಾಣ್ಮೆಯನೆಲ್ಲ ಸರಿಸಮ ಕಾಂಬ ಸತಿಯವಳು
   
ತೂಗಿತೂಗಿತು ಬಾಳ ಜೋಲಿಯು
ತಾಗಿಚಿಮ್ಮಿತು ಉಕ್ಕುಪೌರುಷ
ಸಾಗಿನೂಕಿತು ಕಲ್ಲುಮುಳ್ಳಿನ ಹಾದಿ ನಡೆಯೆಲ್ಲ
ಬಿಗಿದ ಶ್ರೀಮುಡಿ ಬಿಚ್ಚಿ ಕೆದರಿತು
ಬಗೆದ ಸೇಡಿನ ರೋಷ ಹೊದ್ದಿತು
ಹೊಗೆಯೆ ತುಂಬಿತು ಅಗ್ನಿಕಣ್ಣಲಿ, ನಡುಗಿ ಸಭೆಯೆಲ್ಲ
   
ಆರುಕಂಗಳ ಕೊಳಲ ರಾಗದ-
ಲಾರು ನುಡಿಸುವರಾವ ಮಾಯೆಯ-
ನಾರ ಬೆಂಬಲಕಾಗಿ ಕರೆದಳು? ಉಸಿರಲೈದೆಳೆಯು
ಸಾರಿ ಬಂದವರೆಲ್ಲ ಸರಿದರು
ಹೋರಿ ಅಳಿದರು ಕುಲದ ಕುಡಿಗಳು
ದಾರಿಯುದ್ದಕು ಜೀವ ಸೆಣೆಸಿದೆ ಅಗ್ನಿದಿವ್ಯದಲಿ
   
ಪಂಚಕನ್ಯೆಯಲೊಂದು ಪಟ್ಟಕೆ
ಪಂಚತತ್ವದ ಭಿನ್ನ ಮಂಚಕೆ
ಪಂಚಭೂತದ ಸಾಕ್ಷಿಯಾಗಿ ವಿಪಂಚಿಯಾದವಳು
ಕೊಂಚ ತೆರೆದರೆ ತಿಳಿವು ಕಾಂಬುದು
ಅಂಚುಹೊಂಚುವ ಬಾಳ ನೆರಳಲಿ
ಮಂಚವೇರುವ ಐದೆಯೆಲ್ಲರೂ ಪಂಚವಲ್ಲಬೆಯು
   
ಪತಿಯ ಗುಣಗಳ ಲೆಕ್ಕಗಡಣಕೆ
ಮಿತಿಯು ಉಂಟೇ? ಧರ್ಮ, ಶೌರ್ಯವು,
ಪ್ರೀತಿ-ರಸಿಕತೆ, ಚೆಲುವು, ಜಾಣ್ಮೆಗಳೆಲ್ಲ ಮೇಳಯಿಸಿ
ಸತಿಯ ನಲ್ಮೆಯನಾಳ್ವ ಇನಿಯನ
ಮತಿಯ ಪದರದಿ ಎಲ್ಲ ಐದರ
ಅತಿಶಯದ ಮಿಳಿತವ ತೂಗುವಳು ಸಾಮರಸ್ಯದಲಿ
   
ನಿತ್ಯ ತೂಗುವ ಸಮರಸದಂಡಿ
ನಿತ್ಯ ನೂತನ ಬಾಳಿನ ಬಂಡಿ
ನಿತ್ಯನಿಯಮದ ಯಾಮದಾಚೆಗೆ ಬದುಕು ಹರಡಿಹುದು
ಸತ್ಯಧರ್ಮದ ಹಾದಿಯಲ್ಲಿಯು
ಸತ್ಯಬಾಳಿನ ಶೋಧದಲ್ಲಿಯು
ಸತ್ಯ ನಂಬಿದ ಹೆಣ್ಣುಮಿಂಚೇ ನಮ್ಮ ಕಾಯುವುದು.
     ************  
(ಮೊದಲ ಪದ- ಮೀನಾಕ್ಷಿ- ಮೀನಿನಂಥಾ ಕಣ್ಣಿನವಳು ಎಂಬರ್ಥದಲ್ಲಿಲ್ಲ- ಮೀನಿನ ಕಣ್ಣು ಎನ್ನುವರ್ಥದಲ್ಲಿದೆ.)  
   
ಸಾಮಾನ್ಯವಾಗಿ, ಮದುವೆಯಾದ ಮೊದಮೊದಲಲ್ಲಿ ಇಬ್ಬರು ವಿಭಿನ್ನ ವ್ಯಕ್ತಿತ್ವದವರು ಪರಸ್ಪರ ಅರ್ಥಮಾಡಿಕೊಂಡು ಹೊಂದಾಣಿಕೆಯ ನಡುನೆಲೆ ಕಂಡುಕೊಳ್ಳಲು ಕೆಲಕಾಲವೇ ಹಿಡಿಯಬಹುದು. ಹಾಗಾದರೆ, ಪಂಚವಲ್ಲಭೆಯೆನಿಸಿಕೊಂಡ ಪಾಂಚಾಲಿಯ ಕಷ್ಟವೇನಿದ್ದೀತು? ಅಲ್ಲಿ, ಅವಳದೇ ಒಂದು ದಿಟ್ಟ ನಿರ್ದಿಷ್ಟ ವ್ಯಕ್ತಿತ್ವವಿದೆ. ಜೊತೆಗೆ ಒಬ್ಬೊಬ್ಬರೂ ಒಂದೊಂದು ದಿಕ್ಕಿನಂತಿರುವ ಪಂಚಪತಿಯರು. ಮೊದಲ ಐದು ವರ್ಷಗಳಂತೂ ದಿನಕ್ಕೊಬ್ಬರ ಪಾಳಿ. ಆ ನಂತರದಲ್ಲಿ, ನಾರದರ ಸಲಹೆಯಂತೆ, ವರ್ಷಕ್ಕೊಬ್ಬರು. ಅವರೆಲ್ಲರೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಒಂದೊಂದೇ ವರುಷದ ಅವಧಿ. ಒಬ್ಬನನ್ನು ಅರ್ಥೈಸಿಕೊಂಡು ಅನುಸರಿಸುವ ಹೊತ್ತಿಗೆ ಇನ್ನೊಬ್ಬನರಮನೆಗೆ ಹೋಗಬೇಕಾದ ಸಮಯ ಬಂದಿರುತ್ತಿತ್ತೆ? ಅಥವಾ, ಆ ಅಗ್ನಿಕನ್ಯೆ ತನ್ನೆಲ್ಲಾ ಸ್ವಂತಿಕೆಗಳನ್ನು ಮೌನವಾಗಿ ಕಟ್ಟಿಟ್ಟು ಅತ್ಯಂತ ವಿಧೇಯ ಪತ್ನಿಮಾತ್ರಳಾಗಿ ಇರುತ್ತಿದ್ದಳೆ? ಒಬ್ಬನೊಡನೆ ಇರುವಾಗ ಇನ್ನೊಬ್ಬ ಪರಪುರುಷ ಆಕೆಗೆ, ತಲೆಯೆತ್ತಿ ನೋಟದಲ್ಲಿ ನೋಟವಿರಿಸಿ ಸಲುಗೆಯಿಂದ ಮಾತಾಡುವಂತಿಲ್ಲ. ಅದನ್ನೆಲ್ಲ ಲೀಲಾಜಾಲವಾಗಿ ನಿಭಾಯಿಸಿದ್ದಳೆ? ಈ ರೀತಿ ಸಾಮರಸ್ಯದಂಡದ ನಡಿಗೆಯಂಥ ಬಾಳು ಬಾಳಿದ ದ್ರೌಪದಿ, ಐವರಿಗೂ ಒಳ್ಳೆಯ ಪತ್ನಿಯಾಗುವ ವ್ರತದಲ್ಲಿದ್ದಳೆಂದು ಆಕೆಯನ್ನು ಪತ್ನೀ-ವ್ರತಸ್ಥೆಯೆಂದೆ. ಜೊತೆಗೆ, ಆರು ವಿಭಿನ್ನ ವ್ಯಕ್ತಿತ್ವಗಳ ಈ ಸಂಸಾರಕೊಳಲನ್ನು ಆ ಮುರಳೀಲೋಲ ನುಡಿಸಿ ಆಡಿಸಿದ್ದನೆನ್ನುವ ನೋಟವಿದೆ.    
ಹಾಗೇ ಇನ್ನೊಂದು ಕೋನದಿಂದ ನೋಡಿದರೆ, ಇಂದಿನ ಎಲ್ಲ ಮುತ್ತೈದೆಯರೂ ಪಂಚವಲ್ಲಭೆಯರೇ; ಯಾಕೆಂದರೆ, ಪಂಚಪಾಂಡವರಲ್ಲಿದ್ದ ಪ್ರಮುಖ ಗುಣಗಳು- ಧರ್ಮನಿಷ್ಠೆ, ಶೌರ್ಯ, ಅನುಕಂಪ ತುಂಬಿದ ಪ್ರೀತಿ, ರಸಿಕತೆ, ಪರಾಕ್ರಮ, ಚಾಣಾಕ್ಷತೆ, ಮತ್ತು ಸೌಂದರ್ಯ ಇವೆಲ್ಲ- ತಂತಮ್ಮ ಪತಿಯಲ್ಲಿಯೂ ಇರಬೇಕೆಂದು ಹೆಣ್ಣೊಬ್ಬಳು ಬಯಸುತ್ತಿಲ್ಲವೆ? ಈ ಎಲ್ಲಾ ಗುಣಾತ್ಮಕ ಗುಣಗಳ ಜೊತೆಗೆ ಆತನಲ್ಲಿರುವ ಲೌಕಿಕಕ್ಕೆ ಮೀಸಲಾದ ಋಣಾತ್ಮಕ ಗುಣಗಳನ್ನೂ ಆಕೆ ಹೊಂದಿಕೊಂಡು ಸಂಭಾಳಿಸಿಕೊಂಡು ಸಾಗಬೇಕು! ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪತ್ನಿಯೂ ಪತ್ನೀ-ವ್ರತಸ್ಥೆ ಎನ್ನುವ ತಿರುವು ಹಾಗೂ ಆ ಧೀಮಂತ ಸತ್ಯನಿಷ್ಠ ಹೆಣ್ಮಿಂಚು ನಮ್ಮನ್ನೆಲ್ಲ ಕಾಯುತ್ತಿರಲಿ ಎನ್ನುವ ಆಶಯವೂ ಈ ಲಹರಿಯಲ್ಲಿದೆ.  
 
(೦೮-ಜನವರಿ-೨೦೧೪ (೧))  
 
ಓದುಗರೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು- ಹೊಸ ಕವನದೊಸಗೆಯೊಂದಿಗೆ.  
 
ಇದನ್ನು ಬರೆದ ಬೆನ್ನಲ್ಲೇ ಇದೇ ವಿಷಯಾಧಾರಿತ ಇನ್ನೊಂದು ಕವನ ಬರೆದೆ. ಅದು ಈ ಕೊಂಡಿಯಲ್ಲಿದೆ. ಅದನ್ನೂ ಓದಿ, ಅಭಿಪ್ರಾಯ ತಿಳಿಸಿ.    

7 comments:

ಈಶ್ವರ said...

ಅಕ್ಕಾ, ಬಹಳ ಸೊಗಸಾಗಿದೆ. ಇವತ್ತು ಎಲ್ಲಾ ಕಡೆ ಷಟ್ಪದಿಯ ಕವನಗಳನ್ನೇ ಓದುವುದು ಭಾಗ್ಯವಾಗಿದೆ ನನಗೆ.

ಸಂಕ್ರಾಂತಿ ಶುಭಾಶಯಗಳು.

Unknown said...

ಭಾಮಿನೀ ಷಟ್ಪದಿಯ ಕಾವ್ಯ! ಅಭಿನಂದನೆಗಳು. ಕಾವ್ಯಧಾರೆ ಮುಂದುವರಿಯಲಿ.

Unknown said...

ಭಾಮಿನೀ ಷಟ್ಪದಿಯ ಕಾವ್ಯ! ಅಭಿನಂದನೆಗಳು. ಕಾವ್ಯಧಾರೆ ಮುಂದುವರಿಯಲಿ.

ಮನಸು said...

ಅದ್ಭುತ ಕವಿತೆ ಚೆನ್ನಾಗಿ ಅರ್ಥೈಸಿ ತಿಳಿಸಿದ್ದೀರಿ ಕೂಡ. ಧನ್ಯವಾದಗಳು. ಸಂಕ್ರಾಂತಿ ಹಬ್ಬದ ಶುಭಾಶಯಗಳು

ತೇಜಸ್ವಿನಿ ಹೆಗಡೆ said...

ಅಕ್ಕಾ.... ಕವಿತೆಯೇ ಸೊಗಸು ಅದಕ್ಕಿಂತ ಚೆನ್ನ ಅದಕ್ಕಿ ನೀವಿತ್ತಿರುವ ವಿವರಣೆ... ನಾವೆಲ್ಲಾ ದ್ರೌಪದಿಯರೇ! :)

sunaath said...

ಭಾಮಿನಿಯ ಬಗೆಗೆ ಬರೆಯುವಾಗ, ಭಾಮಿನೀಷಟ್ಪದಿಯೇ ಸಮುಚಿತ! ಕವನಲಹರಿ ಹಾಗು ವಿಚಾರಲಹರಿ ಎರಡೂ ಸೊಗಸಾಗಿವೆ.

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯಿಸಿದ ಎಲ್ಲರಿಗೆ ಪ್ರೀತಿಯ ವಂದನೆಗಳು.