ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Tuesday, 1 February 2011

ಹಿಪ್ನೋಥೆರಪಿ-ಭಾಗ-೦೧

ಸಹೃದಯರೆ,
ಕನ್ನಡ ಸಾರಸ್ವತ ಲೋಕ ಕಾಲದಿಂದ ಕಾಲಕ್ಕೆ ಹೊಸದೇನನ್ನೋ ಪಡೆಯುತ್ತಾ ಮತ್ತೆಲ್ಲೋ ಏನನ್ನೋ ಕಳೆಯುತ್ತಾ ಸಾಗುತ್ತಿದೆ. ಕಾಲಸಾಗರದಲ್ಲಿ ಕನ್ನಡ ನೌಕೆಯೊಳಗೆ ಹೊಸ ಸದಸ್ಯೆಯ ಸೇರ್ಪಡೆಯಾಗಿದೆ. ‘ಭಾಮಿನಿ’ ಸುಂದರವಾಗಿದ್ದಾಳೆ. ಮುರಳಿ ಶೇಣಿ ಸಂಪಾದಕರಾಗಿರುವ ಈ ಮಾಸಿಕಕ್ಕೀಗ ನಾಲ್ಕನೇ ತಿಂಗಳು. ೨೦೦೯ರ ಅಕ್ಟೋಬರಲ್ಲಿ (ನವೆಂಬರದ ಸಂಚಿಕೆಯೊಂದಿಗೆ) ಮೊದಲಾಗಿ ಓದುಗರನ್ನು ಎದುರ್ಗೊಂಡ ಈ ಪತ್ರಿಕೆ ತನ್ನದೇ ನೆಲೆಗಟ್ಟನ್ನು ಹಿಡಿದು ಗಟ್ಟಿಯಾಗಿ ನೆಲೆಯೂರಲಿ. ಆಳ-ಅಗಲವಾಗಿ ಹಬ್ಬಿ ತನ್ನ ಕಂಪು ಇಂಪು ಸೂಸಿ ಸಾರಲೆನ್ನುವ ಹಾರೈಕೆ ಈ ಮೂಲಕ.

ಇದೇ ಪತ್ರಿಕೆಯಲ್ಲಿ, ಸಂಪಾದಕ ಮುರಳಿ ಶೇಣಿಯವರ ಇಚ್ಛೆ, ಕೋರಿಕೆಯ ಮೇರೆಗೆ ‘ಹಿಪ್ನೋಥೆರಪಿ’ (ಸಮ್ಮೋಹನ ಚಿಕಿತ್ಸೆ)ಯ ಬಗ್ಗೆ ಲೇಖನಮಾಲೆ (ಡಿಸೆಂಬರ್ ಸಂಚಿಕೆಯಿಂದ) ಬರೆಯುತ್ತಿದ್ದೇನೆ. ಅದರ ಮೊದಲ ಕಂತು, ನಿಮ್ಮೆಲ್ಲರ ಓದಿಗಾಗಿ ಇಲ್ಲಿದೆ.

***

ಮನೋ ಪ್ರಪಂಚದ ಅನಾವರಣ

ಮಾನವ ಸಹಸ್ರಾರು ವರ್ಷಗಳಿಂದಲೂ ತನ್ನ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಲೇ ಬಂದಿದ್ದಾನೆ. ಜ್ಞಾನ, ತಿಳುವಳಿಕೆ, ಪಾಂಡಿತ್ಯಗಳ ವಿವರಣೆಗಳೂ ಹರಡಿಕೊಳ್ಳುತ್ತಲೇ ಬಂದಿವೆ. ಅಂದರೂ ಇನ್ನಷ್ಟು ಅರಿಯಬೇಕೆಂಬ ಹಂಬಲ ಇಂಗಿಲ್ಲ. ಅರಿವಿನ ಅಂಚನ್ನು ತಡಕಿದೆ ಎನ್ನುವವರು ಯಾರೂ ಇಲ್ಲ. ಸದಾ ತೃಷೆ; ಜ್ಞಾನದಾಹ. ಇದರ ಪ್ರತಿಫಲ ಹೊಸ ಹೊಸ ಆವಿಷ್ಕಾರಗಳು. ಎಲ್ಲ ರೀತಿಯ ವಿಷಯಗಳನ್ನೂ ಬೇರೊಂದು ನೋಟದಿಂದ ಹೊಸದೊಂದು ಬೆಳಕಿನೊಳಗೆ ಇನ್ನೊಂದು ಕೋನದಲ್ಲಿ ಅವಲೋಕಿಸುವ ತಹತಹ, ಸಾಹಸ. ಇವುಗಳಲ್ಲಿ ಹಲವಷ್ಟು ಪ್ರಯೋಗಗಳು ಉತ್ತಮಫಲ ನೀಡಿದರೆ ಮತ್ತೆ ಕೆಲವು ಇನ್ನೊಂದು ಕೊನೆ ಸೇರಿದವು. ಪ್ರಯತ್ನ ಮಾತ್ರ ಮಾನವ ಜನಾಂಗದ ಜೊತೆ ಜೊತೆಗೆ ಮುಂದುವರಿಯುತ್ತಲೇ ಸಾಗಿ ಬಂದಿದೆ. ಇಂತಹ ಪ್ರಯತ್ನಗಳಲ್ಲೊಂದು ಕವಲು ತನ್ನೊಳಗನ್ನರಿಯುವ ಯತ್ನ. ಯೋಚನೆಗಳ ಜಾಲವಾದ, ಮೆದುಳು- ಬುದ್ಧಿ- ಹೃದಯಗಳ ಹೊರತಾದ, ವೈದ್ಯಕೀಯ ಯಾ ವೈಜ್ಞಾನಿಕ ವಿಶ್ಲೇಷಣೆಗಳಿಗೆ ನಿಲುಕದ "ಮನಸ್ಸು" ಎನ್ನುವುದನ್ನು ಶೋಧಿಸುವ ಸಾಕಷ್ಟು ಪ್ರಯೋಗಗಳಾದವು. ಈ ಕೌತುಕಮಯ ಮನಸ್ಸನ್ನು "ಸರಿ"ಯಾಗಿ ತಿಳಿಯಲು, "ಸರಿ" ಮಾಡಲು, ಮತ್ತು "ಸರಿ"ಯಾಗಿರಿಸಲು ಬಹಳಷ್ಟು ಕಸರತ್ತುಗಳು ನಡೆದವು. ಅವುಗಳಲ್ಲೆಲ್ಲ ಮುಖ್ಯವಾದುದು ಮತ್ತು ಪಾಶ್ಚಾತ್ಯರಲ್ಲಿ ಹಿಪ್ನೋಸಿಸ್ ಅಥವಾ ಸಮ್ಮೋಹಿನಿಯ ಬಗ್ಗೆ ಅರಿವು ಮೂಡಿಸಿದ್ದು ೧೭೭೯ರಲ್ಲಿ ಫ಼್ರಾಂಜ಼್ ಆಂಟನ್ ಮೆಸ್ಮರನ ಹೇಳಿಕೆ.

ವೃತ್ತಿಯಲ್ಲಿ ವೈದ್ಯನಾಗಿದ್ದ ಮೆಸ್ಮರ್ ತನ್ನ ರೋಗಿಗಳನ್ನು ತಾನು ಅಯಸ್ಕಾಂತೀಯ ಶಕ್ತಿಯಿಂದ ನಿಗ್ರಹಿಸಬಲ್ಲೆನೆಂದು ಸಾರಿದ. ಆತನ ಹೇಳಿಕೆಗಳ ಪ್ರಕಾರ ಮನೋವಿಕಾರಗಳುಳ್ಳ ರೋಗಿಗಳ ಬಳಿಗೆ ಆತ ಎರಡು ಬಲವಾದ ಅಯಸ್ಕಾಂತಗಳನ್ನು ತಂದು ಅವರ ಜೊತೆ ಅಧಿಕಾರಯುತವಾಗಿ ಮಾತುಗಳನ್ನು ಆಡುತ್ತಾಡುತ್ತಾ ಅವರನ್ನು ನಿದ್ರಾವಶರಾಗಿಸುತ್ತಿದ್ದ ಮತ್ತು ತುಸುಹೊತ್ತಿನಲ್ಲಿ ಎಚ್ಚರಗೊಳ್ಳುವ ಅವರುಗಳು ತಮ್ಮ ಮನೋವೈಕಲ್ಯವನ್ನು ಕಳೆದವರಾಗಿ ಪುನಶ್ಚೇತನಗೊಂಡವರಾಗಿ ಏಳುತ್ತಿದ್ದರು. ಇದರ ಸಫಲತೆಯನ್ನವನು ಎಷ್ಟು ನೆಚ್ಚಿಕೊಂಡಿದ್ದನೆಂದರೆ ಸದಾ ಅಯಸ್ಕಾಂತಗಳನ್ನು ಹಿಡಿದೇ ಇರುತ್ತಿದ್ದ, ಎಲ್ಲರ ಮೇಲೂ ಪ್ರಯೋಗಿಸಲು ಸಿದ್ಧನಾಗುತ್ತಿದ್ದ. ಇದನ್ನು ಜನತೆ "ಮೆಸ್ಮರಿಸಂ" ಎಂದಿತು.

ತದನಂತರ ೧೮೪೩ರಲ್ಲಿ ಡಾ. ಜೇಮ್ಸ್ ಬ್ರೈಡ್ ಎನ್ನುವ ವೈದ್ಯ ಮೆಸ್ಮರಿಸಂನಿಂದ ವಿವಶರಾಗುವ ಸ್ಥಿತಿಯನ್ನು "ಹಿಪ್ನಾಟಿಕ್ ಸ್ಥಿತಿ" ಎಂದ. ಈ ಪ್ರಕ್ರಿಯೆಯನ್ನು "ಹಿಪ್ನೋಸಿಸ್" (ಗ್ರೀಕ್ ಪದ ಹಿಪ್ನೋಸ್= ನಿದ್ರಿಸು) ಎಂದು ನಾಮಕರಣ ಮಾಡಿದ. ಇದೇ ಸಮಯಕ್ಕೆ ಮೆಸ್ಮರನ ವಿಧಾನದಲ್ಲಿ ಆತನ ಮಾತುಗಳ ಪ್ರಭಾವಕ್ಕೆ ಜನ ಒಳಗಾಗುತ್ತಿದ್ದರೇ ವಿನಾ ಅಯಸ್ಕಾಂತದಿಂದಲ್ಲ ಎನ್ನುವ ವಿಷಯವೂ ಹೊರಬಂದು ಬರೀ ಮಾತಿನಿಂದಲೇ ಸಮ್ಮೋಹನಕ್ಕೆ ಒಳಗಾಗಿಸಬಹುದೆನ್ನುವದು ಜಾಹೀರಾಯಿತು. ಮೆಸ್ಮರಿಸಂ ಬದಲು ಹಿಪ್ನಾಟಿಸಂ ರೂಢಿಗೆ ಬಂತು. ಹಿಪ್ನಾಟಿಸಂ ಅಥವಾ ಸಮ್ಮೋಹನ ಕ್ರಿಯೆಯನ್ನು ಚಿಕಿತ್ಸಕವಾಗಿ ಮನೋರೋಗಿಗಳಲ್ಲಿ ಬಳಸಿದಾಗ ಆರಂಭಿಕ ಹಂತದ ರೋಗಿಗಳಿಗೆ ಕಂಡುಬಂದ ಉತ್ತಮ ಪರಿಣಾಮ ತೀಕ್ಷ್ಣ ಮನೋರೋಗಿಗಳಲ್ಲಿ ಕಾಣಲಿಲ್ಲವಾಗಿ ಈ ಚಿಕಿತ್ಸಾ ಪದ್ಧತಿಯೂ ಸ್ವಲ್ಪ ಕಾಲ ಹಿನ್ನೆಲೆಗೆ ಸರಿಯಿತು.

ಅಲ್ಲಿಂದ ಮುಂದೆ ಇಪ್ಪತ್ತನೇ ಶತಮಾನದಿಂದೀಚೆಗೆ ಯುರೋಪ್ ಹಾಗೂ ಅಮೆರಿಕದ ಹಲವಾರು ಮನೋರೋಗ ಚಿಕಿತ್ಸಕರ ಸಮ್ಮೋಹನಾ ಚಿಕಿತ್ಸೆಗಳಲ್ಲಿ ಬಹುತೇಕ ಆಕಸ್ಮಿಕವಾಗಿ ಲಭಿಸಿದ ಉಪಯೋಗದ ಫಲವಾಗಿ ಹಿಪ್ನೋಸಿಸ್ ಒಂದು ಚಿಕಿತ್ಸಾವಿಧಾನವಾಗಿ ಹಿಪ್ನೋಥೆರಪಿಯಾಗಿ ಹೊರಹೊಮ್ಮಿದೆ. ಈ ಥೆರಪಿ ವಿಧಾನದಿಂದ ಭಯ, ಅಂಜಿಕೆ, ಆತಂಕಗಳಂಥ ಸಾಮಾನ್ಯ ತೊಂದರೆಗಳಿಂದ ಹಿಡಿದು ವೈದ್ಯಕೀಯವಾಗಿ ವಿವರಿಸಲಾಗದ "ಮನೋದೈಹಿಕ"ವೆಂದು ಕರೆಸಿಕೊಳ್ಳುವ ತೊಂದರೆಗಳಿಗೂ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗಿದೆ. ಅರಿವಳಿಕೆಯ ಸ್ಥಾನದಲ್ಲಿಯೂ ಸಮ್ಮೋಹಿತ ಸ್ಥಿತಿಯನ್ನು ಬಳಸಲಾಗಿದೆ. ಸ್ವಸಮ್ಮೋಹಿನಿಯಿಂದಲೂ ನೆನಪು ಶಕ್ತಿಯ ವೃದ್ಧಿ, ಏಕಾಗ್ರತೆಯ ತೀಕ್ಷ್ಣತೆ, ಆತ್ಮಶಕ್ತಿ, ಆತ್ಮಗೌರವಗಳ ಉತ್ತಮಿಕೆ ಕಂಡುಬಂದಿವೆ.


ಇಷ್ಟೆಲ್ಲ ಗುಣಗಳಿರುವ ಈ ಚಿಕಿತ್ಸಾವಿಧಾನ ಎಲ್ಲಿ, ಯಾರು, ಹೇಗೆ, ಯಾವಾಗ, ಯಾಕೆ, ಯಾರಿಗೆ ಮಾಡುತ್ತಾರೆ/ ಮಾಡಬಹುದು? ಇವನ್ನೆಲ್ಲ ಮುಂದಿನ ಕಂತಿನಲ್ಲಿ ವಿಶದವಾಗಿ ನೋಡೋಣ. ಎಲ್ಲರಿಗೂ ಶುಭವಾಗಲಿ.
(ಭಾಮಿನಿ, ಡಿಸೆಂಬರ್ ೨೦೧೦.)

8 comments:

sunaath said...

ಹಿಪ್ನೋಥೆರಪಿಯ ಜನನಾವಸ್ಥೆಯನ್ನು ತಿಳಿದ ಬಳಿಕ ಅದರ ಬೆಳವಣಿಗೆಯನ್ನು ತಿಳಿಯಲು ಕುತೂಹಲಿಯಾಗಿದ್ದೇನೆ. ಮುಂದಿನ ಭಾಗಗಳ ನಿರೀಕ್ಷೆಯಲ್ಲಿದ್ದೇನೆ.

ಸುಪ್ತದೀಪ್ತಿ suptadeepti said...

ಕಾಕಾ, ಮುಂದಿನ ಭಾಗಗಳೂ ಸದ್ಯದಲ್ಲೇ ಬರಲಿವೆ.

ಆದರೂ ನಿಮಗೆ ತಿಳಿಯದ ವಿಷಯಗಳೇನಿವೆ ಕಾಕಾ. ಕಿರಿಯರ ಬೆನ್ನುತಟ್ಟುವ ಕೆಲಸವನ್ನು ಅದೆಷ್ಟು ಪ್ರೀತಿಯಿಂದ ಮಾಡುತ್ತೀರಿ. ನಾನು ನಿಮ್ಮ ಅಕ್ಕರೆಯ ಋಣಿ.

ಚುಕ್ಕಿಚಿತ್ತಾರ said...

good info...

keep writing..

ಸುಪ್ತದೀಪ್ತಿ suptadeepti said...

ಸ್ವಾಗತ ಚುಕ್ಕಿಚಿತ್ತಾರ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ, ಬರೆಯುತ್ತಿರಿ.

ಅನಂತ್ ರಾಜ್ said...

very interesting...swalpa mattige tilidide...keep going...nimminda saakashtu vicharagalu barlive ansatte.

ananth

ಸುಪ್ತದೀಪ್ತಿ suptadeepti said...

ಅನಂತರಾಜ್, ನಿಮ್ಮ ನಿರೀಕ್ಷೆಯ ಮಟ್ಟವನ್ನು ಮುಟ್ಟುವ ಪ್ರಯತ್ನ ಮಾಡುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಮುಕ್ತಾ said...

ತು೦ಬಾ ಒಳ್ಳೆಯ ಮಾಹಿತಿಗಳನ್ನುತಿಳಿಸಿದ್ದೀರಿ..
ಧನ್ಯವಾದಗಳು.

ಸುಪ್ತದೀಪ್ತಿ suptadeepti said...

ಮನಮುಕ್ತಾ, ಪ್ರತಿಕ್ರಿಯೆ ಮುಕ್ತವಾಗಿ ತಿಳಿಸಿದ್ದಕ್ಕೆ ವಂದನೆಗಳು. ಹೀಗೇ ಬರುತ್ತಿರಿ, ಬರೆಯುತ್ತಿರಿ.