ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೪
ಗ್ರ್ಯಾಂಡ್ ಕ್ಯಾನಿಯನ್- ದಕ್ಷಿಣ ದಂಡೆಯಲಿ ದೇಗುಲಗಳ ನೋಟ....
ಆಗಸ್ಟ್ ೩೦, ಭಾನುವಾರ; ೩೧, ಸೋಮವಾರ
ಗ್ರ್ಯಾಂಡ್ ಕ್ಯಾನಿಯನ್ ಪಡುದಂಡೆಯಿಂದ ಅಪರಾಹ್ನ ಒಂದೂವರೆಗೆ ಹೊರಟು ವಿಲಿಯಮ್ಸ್ ಮೂಲಕವಾಗಿ ಹೈವೇ-೪೦ರಲ್ಲಿ ದಕ್ಷಿಣ ದಂಡೆಯತ್ತ ಧಾವಿಸಿದೆವು. ಇಲ್ಲಿನ ಮಾಥರ್ ಪಾಯಿಂಟ್ ಬಹು ಜನಪ್ರಿಯ. ಅಲ್ಲಿಂದ ಪಶ್ಚಿಮಕ್ಕಿರುವ ಹೋಪಿ ಮತ್ತು ಪೀಮಾ ಪಾಯಿಂಟುಗಳಿಂದ ಸೂರ್ಯಾಸ್ತವಾಗುವಾಗ ಕಣಿವೆ ಸುಂದರವಾಗಿ ಕಾಣುತ್ತದೆನ್ನುವದು ಪ್ರತೀತಿ. ಹಾಗೆಯೇ, ಅಲ್ಲಿಗೆ ಸೂರ್ಯಾಸ್ತದ (ಸುಮಾರು ಆರು ಐವತ್ತೈದರ) ಮೊದಲು ಸೇರುವ ಉದ್ದೇಶದಿಂದ ೧೯೮ ಮೈಲು ಕ್ರಮಿಸಿ, ನ್ಯಾಷನಲ್ ಪಾರ್ಕಿನ ತೆಂಕಣ ಗೇಟ್ ದಾಟಿದಾಗ ಸಂಜೆ ಆರು ಗಂಟೆ.
ಇನ್ನು ಹೋಪಿ ಪಾಯಿಂಟ್ ಕಡೆ ಹೋಗಲು ಸಾಧ್ಯವಿರಲಿಲ್ಲ. ಹಾಗಾಗಿ, ಪೂರ್ವಕ್ಕಿರುವ ಯಾಕಿ ಪಾಯಿಂಟ್ ಕಡೆ ಹೋಗುವ ಯೋಚನೆ ಮಾಡಿದೆವು.
ಮಾಥರ್ ಕ್ಯಾಂಪ್ ಗ್ರೌಂಡ್ ಕಡೆ ಹೋಗಿ ನಂತರ ಮಾಥರ್ ಪಾಯಿಂಟ್ ಕಡೆ ಹೋದೆವು. ಅಷ್ಟರಲ್ಲೇ ಸೂರ್ಯನಿಗೆ ಅವಸರವಾಗಿತ್ತು. ಯಾಕಿ ಪಾಯಿಂಟ್ ಕಡೆ ಕಾರ್ ಹೋಗುವ ಹಾಗಿರಲಿಲ್ಲ, ಪಾರ್ಕಿನ ಬಸ್ಸಿನಲ್ಲೇ ಹೋಗಬೇಕಿತ್ತು. ಆ ಸಮಯಕ್ಕೆ ಸರಿಯಾಗಿ ಅದೂ ಇರಲಿಲ್ಲ. ಕೊನೆಗೂ ಮಾಥರ್ ಪಾಯಿಂಟ್ ಮತ್ತು ಯಾಕಿ ಪಾಯಿಂಟ್ ನಡುವೆ ಎಲ್ಲೋ ರಸ್ತೆ ಬದಿಯ ಪಾರ್ಕಿಂಗ್ ಲಾಟಿನಲ್ಲಿ ಕಾರ್ ನಿಲ್ಲಿಸಿ, ಅಲ್ಲಿದ್ದ ಕೆಲವರ ಜೊತೆಗೆ ಸೇರಿಕೊಂಡು ಇಳಿಸೂರ್ಯನ ಹೊಂಗಿರಣದ ಕೊನೆಯ ಎಳೆಗಳನ್ನು ಬಾಚಿಕೊಂಡೆವು.
ಒಂದಿಷ್ಟು ನಿರಾಸೆಯಿಂದಲೇ ಕ್ಯಾಂಪ್ ಸೈಟಿಗೆ ಮರಳಿದೆವು. ಅರ್ಧಂಬರ್ದ ಬೆಳದಿಂಗಳು ಮತ್ತು ಕಾರಿನ ಹೆಡ್ ಲೈಟ್- ನಮಗೆ ಟೆಂಟ್ ನಿಲ್ಲಿಸಲು ಸಹಾಯ ಮಾಡಿದವು. ಊಟ ಮಾಡಿ ಸೂರ್ಯೋದಯವನ್ನಾದರೂ ಚೆನ್ನಾಗಿ ನೋಡುವ ಹಂಬಲದಿಂದ ಬೇಗನೇ ಮಲಗಿದೆವು.
ನಾಲ್ಕೂವರೆಗೇ ಅಲಾರ್ಮ್ ನಮ್ಮನ್ನೆಬ್ಬಿಸಿತು. ಐದೂಕಾಲಕ್ಕೆಲ್ಲ ಮಾಥರ್ ಪಾಯಿಂಟಿನ ಆಯಕಟ್ಟಿನ ಮೂಲೆಯಲ್ಲಿ ನಾವೇ ಮೊದಲಿಗರಾಗಿ ನಿಂತೆವು. ‘ಮೂರ್ಕಾಲ್’ಅನ್ನು ಸರಿಯಾಗಿ ನಿಲ್ಲಿಸಿ, ಅದರ ಮೇಲೆ ಕ್ಯಾಂಕಾರ್ಡರನ್ನು ಏರಿಸಿದ್ದಾಯ್ತು. ಬದಿಯ ದಂಡೆಯ ಕಂಬದ ಮೇಲೆ ನನ್ನ ಕ್ಯಾಮರಾ ಕೂತಿತು. ಹಾರಾಡುವ ಕುಳಿರ್ಗಾಳಿಯ ವಿರುದ್ಧ ನನ್ನ ಮೂಗು ಹೋರಾಡುತ್ತಿತ್ತು. ಮೆತ್ತನೆಯ ಟಿಶ್ಶೂ ಒತ್ತಿ ಮೂಗಿಗೆ ಸಾಂತ್ವನ ಹೇಳುತ್ತಿದ್ದೆ, ವಿಫಲವಾಗಿ. ಅದೂ ಸುಮ್ಮನಾಗದೆ ಗುರುಗುಟ್ಟಲು ಸುರುಗುಟ್ಟಲು ಮೊದಲಿಟ್ಟಿತು. ಟಿಶ್ಶೂ ದಾಸ್ತಾನು ಖಾಲಿಯಾಗಿ ಜಾಕೆಟ್ಟಿನ ತೋಳಿನಲ್ಲೇ ಸಾಂತ್ವನ ಹೇಳಬೇಕಾಯಿತು, ಕೊನೆಕೊನೆಗೆ. ಅಷ್ಟರಲ್ಲೇ ಪೂರ್ವ ಕೊಂಚ ಕೊಂಚ ಕೆಂಚಗಾಯ್ತು. ಅವನ ಮುಖ ಮಾತ್ರ ಕಾಣುತ್ತಿರಲಿಲ್ಲ. ಬೂದು ಬೂದು ಪರದೆಯೊಳಗಿಂದಲೇ ನಮ್ಮನ್ನೆಲ್ಲ ನೋಡಿ ನಗುತ್ತಿದ್ದನವ ಪೋಕರಿ.
ಅಲ್ಲೊಮ್ಮೆ ಇಲ್ಲೊಮ್ಮೆ ಇಷ್ಟೇ ಇಷ್ಟು ಮುಖ ತೋರಿಸಿದಂತೆ ಮಾಡಿ ಮತ್ತೆ ಪರದೆಯ ಎಡೆಯಲ್ಲಿ ಅಡಗುತ್ತಾ ಆಟವಾಡಿಸಿದವನನ್ನು ನೋಡಲೇಬೇಕೆಂದು ಹಲವಾರು ಜನ ಸೇರಿದ್ದರು ಆರೂಕಾಲು- ಆರೂವರೆಯ ಹೊತ್ತಿಗೆ. ಮೆಲ್ಲಗೆ ಪಿಸುಗುಡುತ್ತಿದ್ದ ಈ ಜನ ಮತ್ತು ಸುತ್ತಲ ಹಕ್ಕಿಪಕ್ಕಿಗಳ ಶಾಂತ ವಾತಾವರಣ ಕಲಕುತ್ತಾ ದೊಡ್ಡದೊಂದು ಚೀನೀ ಪ್ರವಾಸಿಗರ ತಂಡವೊಂದು ಸೇರಿದ ಮೇಲಂತೂ ನನ್ನ ಮೂಗು ಕೆಂಪುಕೆಂಪಾಗಿಬಿಟ್ಟಿತು. ಅವರ ಚಿಲಿಪಿಲಿಯ ನಡುವೆ ನನ್ನ ಮೂಗನ್ನು ಕೇಳುವವರೇ ಇಲ್ಲವಾಗಿತ್ತು. ಪರದೆಯೆಡೆಯಿಂದ ಅವನ ಛಾಯೆ ಕಂಡರೂ ಚಿಲಿಪಿಲಿ ಅಡಗಿ ಕಿಚಪಿಚವಾಗಿ ತಾರಕಕ್ಕೇರುತ್ತಿತ್ತು. ಶಾಂತಿಯ ಸಮಾಧಿಯನ್ನನುಭವಿಸಿದೆ.
ಕಣಿವೆಯ ನೋಟ ಹೊಗೆ ತುಂಬಿದಂತೆ ಮಸುಕು ಮಸುಕಾಗಿತ್ತು. ಫೋಟೋಸ್ ಸರಿಯಾಗಿ ಸಿಗದೆ ಮತ್ತೆ ನಿರಾಸೆಯೇ ಆಗಿತ್ತು. ಕಣ್ಣಾಮುಚ್ಚಾಲೆಯಾಟ ಸಾಕೆನಿಸಿತು. ಕೆಂಪು ಮೂಗಿನ ತುದಿಯಿಂದಲೇ ಅವನಿಗೆ ಟಾಟಾ ಹೇಳಿ, ಭೋರಿಡುವ ಗಾಳಿಗೆ ಬೆನ್ನುಹಾಕಿ ಟೆಂಟ್ ಕಡೆ ಬಂದೆವು. ಕ್ಯಾಂಪ್ ಗ್ರೌಂಡ್ ಪರಿಧಿಯೊಳಗೆ ಬರುತ್ತಿದ್ದಂತೆಯೇ, ನಮ್ಮ ಟೆಂಟಿನಿಂದ ತುಸು ದೂರದಲ್ಲಿ ‘ಅವರಿಬ್ಬರು’ ಮಲ್ಲಯುದ್ಧದಲ್ಲಿ ತೊಡಗಿದ್ದರು. ಬೇಗ ಹೊರಡಬೇಕೆನ್ನುವ ರಾಯರ ಯೋಜನೆಯನ್ನೂ ಬದಿಗೊತ್ತಿ ಮರವೊಂದರ ಅಡಿಯಲ್ಲಿ, ಬಂಡೆಯ ಹಿಂದೆ ಕೂತು ಅವರ ಮಲ್ಲಯುದ್ಧದ ಚಿತ್ರಗಳನ್ನು ಸೆರೆಹಿಡಿದೆ. ನಿಮಗೊಂದೇ ಒಂದು ಸ್ಯಾಂಪಲ್:
ಉಪಾಹಾರ ಮುಗಿಸಿ, ತಯಾರಾಗಿ, ಎಂಟೂವರೆಯ ಹೆಲಿಕಾಪ್ಟರ್ ಟೂರಿಗೆ ಎಂಟು ಗಂಟೆಗೇ ಹಾಜರಿ ಹಾಕಿದೆವು. ಹೆಲಿಕಾಪ್ಟರ್ ಮುಂಜಾಗ್ರತಾ ವಿಡಿಯೋ ನೋಡಿ ನಮ್ಮ ಸರದಿಯ ಮೇಲೆ ಅವರು ತೋರಿದ ಹೆಲಿಕಾಪ್ಟರ್ ಒಳಗೆ ಕೂತಾಗ ಕಿವಿ ತುಂಬಿತ್ತು. ತುಂಬಿದ್ದು ಹೊರಗೆ ಬಾರದಂತೆ ದಪ್ಪನೆಯ ಹೆಡ್-ಫೋನ್ಸ್ ಹಾಕಲಾಯ್ತು. ಕೆಲವೇ ನಿಮಿಷಗಳಲ್ಲಿ, ಪೈಲಟ್ ಸೇರಿ ಎಂಟು ಜನರನ್ನು ಹೊತ್ತ ಕಾಪ್ಟರ್ ಟುಸಯಾನ್ ವಿಮಾನ ನಿಲ್ದಾಣದಿಂದ ಮೇಲೆದ್ದು ನೈಋತ್ಯಕ್ಕೆ ತಿರುಗಿ, ಪಶ್ಚಿಮಾಭಿಮುಖವಾಗಿ ಉತ್ತರಕ್ಕೆ ಹಾರಿತು. ಮುಂದಿನ ಇಪ್ಪತ್ತು ನಿಮಿಷಗಳನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ನನ್ನೊಳಗೆ ಸೆರೆಯಾದ ನೋಟಗಳಲ್ಲಿ ಕ್ಯಾಮರಾಕ್ಕೆ ದಕ್ಕಿದ್ದು ಅತ್ಯಲ್ಪ.
ಹೆಲಿಕಾಪ್ಟರಿಗೆ ಹತ್ತುವ ಮೊದಲು ಅವರೇ ತೆಗೆದ ನಮ್ಮ ಚಿತ್ರಗಳನ್ನು ಒಳಗೆ ಅಂಗಡಿಯಲ್ಲಿ ಕೊಂಡುಕೊಂಡು ಅಲ್ಲೇ ಹತ್ತಿರದಲ್ಲಿದ್ದ ಐಮ್ಯಾಕ್ಸ್ ಥಿಯೇಟರಿಗೆ ಹೋಗಿ ಒಂಬತ್ತೂವರೆಯ ಶೋ ನೋಡಿಕೊಂಡು ಮತ್ತೆ ಕ್ಯಾಂಪ್ ಗ್ರೌಂಡಿಗೆ ಬಂದೆವು. ಟೆಂಟ್ ಬಿಚ್ಚಿ ಗುಳೇ ಎತ್ತಿದೆವು. ಗ್ರ್ಯಾಂಡ್ ಕ್ಯಾನಿಯನ್ ಒಳಗೆ ತಿರುಗಾಡಲು ನಾಲ್ಕು ರೂಟಿನ ಬಸ್ಸುಗಳಿವೆ, ನಾಲ್ಕೂ ಫ್ರೀ ಷಟಲ್. ಒಂದು ಗ್ರ್ಯಾಂಡ್ ಕ್ಯಾನಿಯನ್ ವಿಲೇಜ್ ಒಳಗಡೆಯೇ ತಿರುಗುವ ವಿಲೇಜ್ ರೂಟ್- ಬ್ಲೂ ರೂಟ್. ಇನ್ನೊಂದು ವಿಲೇಜಿನಿಂದ ಪಶ್ಚಿಮಕ್ಕೆ, ಹರ್ಮಿಟ್ಸ್ ರೆಸ್ಟ್ ತನಕ ಹೋಗುವದು- ರೆಡ್ ರೂಟ್ (ಅತ್ತ ಕಡೆ ನಂನಮ್ಮ ಕಾರುಗಳನ್ನು ಒಯ್ಯುವಂತಿಲ್ಲ, ಈ ಮುಕ್ತ ಬಸ್ಸುಗಳಲ್ಲೇ ಓಡಾಡಬೇಕು). ಮತ್ತೊಂದು ವಿಲೇಜಿನಿಂದ ಪೂರ್ವಕ್ಕೆ, ಕೈಬಾಬ್ ಟ್ರೈಲ್ ರೂಟ್- ಗ್ರೀನ್ ರೂಟ್ (ವಿಲೇಜಿನಿಂದ ಪೂರ್ವಕ್ಕೆ, ಡೆಸರ್ಟ್ ವ್ಯೂ ರಸ್ತೆಯಲ್ಲಿ ಯಾಕಿ ಪಾಯಿಂಟ್ ತನಕ). ಯಾಕಿ ಪಾಯಿಂಟಿಗೆ ಈ ಬಸ್ಸಿನಲ್ಲೇ ಹೋಗಬೇಕು. ಮುಖ್ಯ ರಸ್ತೆಯಿಂದ ಅತ್ತ ಕಡೆಗೆ ನಂನಮ್ಮ ಗಾಡಿಗಳನ್ನು ಒಯ್ಯುವಂತಿಲ್ಲ. ಕೊನೆಯದು ಟುಸಯಾನ್ ರೂಟ್- ಪರ್ಪ್ಲ್ ರೂಟ್ (ದಕ್ಷಿಣ ಗೇಟ್ ದಾಟಿ ಐಮ್ಯಾಕ್ಸ್ ಥಿಯೇಟರ್, ಟುಸಯಾನ್ ವಿಮಾನ ನಿಲ್ದಾಣ ಕಡೆಗೆ).
ಹತ್ತೂವರೆಗೆ ಬಸ್ ಹಿಡಿದು ಹರ್ಮಿಟ್ಸ್ ರೆಸ್ಟ್ ಕಡೆ ಹೋಗುತ್ತಾ, ನಡುವೆ ಮೂರ್ನಾಲ್ಕು ಪಾಯಿಂಟ್ಗಳಲ್ಲಿ- ಇಳಿದು, ನೋಡಿಕೊಂಡು, ಮುಂದಿನ ಬಸ್ ಹಿಡಿದು, ಮತ್ತೊಂದೆಡೆ ಇಳಿದು...
ಶಿವ ದೇಗುಲ, ಐಸಿಸ್ ದೇಗುಲ
...ಹೀಗೆ ಹರ್ಮಿಟ್ಸ್ ರೆಸ್ಟ್ ತಲುಪಿದೆವು. ದಕ್ಷಿಣ ದಂಡೆಯ ಕೊನೆಯ ನೋಟಕ ಸ್ಥಾನವದು. ಅಲ್ಲಿ ಪುಟ್ಟ ರೆಸ್ಟಾರೆಂಟ್, ಗಿಫ್ಟ್ ಶಾಪ್ ಎಲ್ಲ ಇವೆ. ಅಲ್ಲಿಂದ ಅದರ ಹಿಂದಿನ ಪೀಮಾ ಪಾಯಿಂಟಿಗೆ ನಡೆದುಕೊಂಡು ಬರುತ್ತಾ, ನಡುವೆ ಎಲ್ಲೋ ಕಾಲುಹಾದಿಯ ಬದಿಯಲ್ಲಿ, ಬಂಡೆಯ ಮೇಲೆ ಕೂತು, ಕಣಿವೆಯನ್ನು ನೋಡುತ್ತಾ, ಊಟ ಮಾಡಿದೆವು. ಪೀಮಾ ಪಾಯಿಂಟಿನಿಂದ ಬಸ್ ಹಿಡಿದು ಹಿಂದೆ ಬಂದು, ನಮ್ಮ ಕಾರನ್ನೇರಿ ಪೂರ್ವಕ್ಕೆ, ಡೆಸರ್ಟ್ ವ್ಯೂ ಡ್ರೈವ್ ಹಿಡಿದೆವು, ಅಪರಾಹ್ನ ಎರಡೂವರೆಗೆ. ಅಲ್ಲಿ ಪೂರ್ವದ ಗೇಟಿನ ಮೊದಲು ಸಿಗುವ ತಾಣ ಡೆಸರ್ಟ್ ವ್ಯೂ. ಅಲ್ಲೊಂದು ಹಳೆಯ ವಾಚ್ ಟವರ್.
ವಾಚ್ ಟವರ್ ಒಳಗೆ, ಮೊದಲ ಅಂತಸ್ತಿನ ಗೋಡೆಯಲ್ಲಿ ನಾವಹೋ ಇಂಡಿಯನ್ಸ್ ಚಿತ್ರಕಲೆಯ ಅನುಕರಣೆ
ಟವರ್ ಹತ್ತಿ ಕಣಿವೆಯನ್ನು ಕಣ್ಣು ತುಂಬಿಕೊಂಡು ಅಲ್ಲಿಂದ ಹೊರಟದ್ದು- ಸಂಜೆ ನಾಲ್ಕೂವರೆಗೆ. ದಾರಿಯಲ್ಲೊಬ್ಬಳು ನಾವಹೋ ಇಂಡಿಯನ್ ಹುಡುಗಿಯ ಜೊತೆಗೆ ಒಂದರ್ಧ ಗಂಟೆ ಹರಟೆ ಹೊಡೆದು ಮುಂದೆ ಸಾಗಿದೆವು. ಪೂರ್ವ, ಉತ್ತರ, ಪಶ್ಚಿಮ, ದಕ್ಷಿಣ, ಪಶ್ಚಿಮ, ಉತ್ತರ... ದಾರಿ ತಿರುಗಿದಲ್ಲೆಲ್ಲ ತಿರುಗಿ ಗ್ರ್ಯಾಂಡ್ ಕ್ಯಾನಿಯನ್ನಿನ ಉತ್ತರ ದಂಡೆಯನ್ನು ತಲುಪಿದಾಗ ಆಗಸ್ಟ್ ಮೂವತ್ತೊಂದರ ರಾತ್ರಿ ಒಂಭತ್ತು ಗಂಟೆ.
ಕಾರಿನ ಹೆಡ್ ಲೈಟಿನಲ್ಲೇ ಟೆಂಟ್ ಹಾಕಿ, ಊಟ ಮಾಡಿ, ಸ್ನಾನ ಮಾಡಲು ಶವರ್ ಹೌಸ್ ಕಡೆ ಹೋದಾಗ ಗಂಟೆ ಹತ್ತು. ಮಹಿಳೆಯರ ವಿಭಾಗದಲ್ಲಿ ಬೆಳಕಿತ್ತು. ಮಹನೀಯರಿಗೆ ಕತ್ತಲಾಗಿತ್ತು. ಅತ್ತಿತ್ತ ನೋಡುತ್ತಿದ್ದಾಗ ಬಂದ ರೇಂಜರ್ ಜೊತೆ ಇವರು ಮಾತಾಡುತ್ತಿದ್ದದ್ದು ಕೇಳಿ ಹೊರ ಬಂದೆ. "ಮುಚ್ಚುವ ಟೈಮ್ ಆಗಿದೆ" ಅಂದ. "ಹೌದಾ..." ಪೆಚ್ಚು ಮೋರೆ ಹಾಕಿದೆ. "ಎಲ್ಲಿಂದ ಬಂದ್ರಿ?" ಮುಖಭಾವ ಕೆಲಸ ಮಾಡಿತ್ತು. "ಸೌಥ್ ರಿಮ್. ನಿನ್ನೆ ಅಲ್ಲಿ ಕ್ಯಾಂಪಿಂಗ್ ಮಾಡಿದ್ದೆವು. ಇವತ್ತು ಅಲ್ಲೆಲ್ಲ ಹೈಕಿಂಗ್ ಮಾಡಿದ್ದೆವು. ಸಾಕಷ್ಟು ದಣಿದಿದ್ದೇವೆ. ಅಲ್ಲಿ ಹನ್ನೊಂದರ ತನಕ ತೆರೆದಿದ್ದರು ಇಲ್ಲೂ ಹಾಗೇ ಅಂದುಕೊಂಡಿದ್ದೆವು..." ಇಬ್ಬರ ಮುಖವನ್ನೂ ಇನ್ನೊಮ್ಮೆ ನೋಡಿ, "ಹೋಗಿ ಸ್ನಾನ ಮಾಡಿ. ನಾನು ಮತ್ತೆ ಬಂದು ಬೀಗ ಹಾಕುತ್ತೇನೆ" ಅಂದವನಿಗೆ ಪದೇ ಪದೇ ಧನ್ಯವಾದ ಹೇಳಿ ಬಿಸಿಬಿಸಿ ಶವರ್ ನೀರನ್ನು ಆನಂದಿಸಿ ಟೆಂಟ್ ಸೇರಿಕೊಂಡೆವು. ಕತ್ತಲಲ್ಲಿ ಸುತ್ತಮುತ್ತ ಏನಿತ್ತೋ ಗೊತ್ತಾಗಲಿಲ್ಲ.
(ಸಾವಕಾಶವಾಗಿ ಗ್ರ್ಯಾಂಡ್ ಕ್ಯಾನಿಯನ್ ಪೂರ್ತಿ (ಮೇಲೆ, ಕೆಳಗೆ, ಒಳಗೆ, ಹೊರಗೆ) ನೋಡುವದಾದರೆ ಒಂದು ವಾರವಾದರೂ ಬೇಕು. ಸಾಕಷ್ಟು ಹೈಕಿಂಗ್ ಟ್ರೈಲ್ಸ್ ಇವೆ. ದೇವ, ವಿಷ್ಣು, ಬ್ರಹ್ಮ- ದೇಗುಲಗಳು, ಕೃಷ್ಣ ಗೋಪುರ, ರಾಮ ಗೋಪುರ, ಬುದ್ಧ, ವೀನಸ್, ಜ್ಯುಪಿಟರ್, ಝೋರೋವಾಸ್ಟರ್, ರಾ, ಕನ್ಫ್ಯೂಷಿಯಸ್, ಒಸೈರಿಸ್, ಥೋರ್, ಸೋಲೋಮನ್, ಶೀಬಾ- ದೇಗುಲಗಳೆಲ್ಲ ಇಲ್ಲಿವೆ. ಸಾವಧಾನವಾಗಿ ಎಲ್ಲ ವ್ಯೂ ಪಾಯಿಂಟ್ಸ್ ನೋಡಿಕೊಂಡು, ಅಲ್ಲಿರುವ ಮಾಹಿತಿ ಫಲಕಗಳನ್ನು ಓದಿಕೊಂಡು ಎಲ್ಲವನ್ನೂ ಗುರುತಿಸುವುದು ಸಾಧ್ಯ. ನಮಗಷ್ಟು ಸಮಯವಿರಲಿಲ್ಲ. ಎಲ್ಲ ದೇವರನ್ನು, ದೇಗುಲಗಳನ್ನು ಅಲ್ಲಲ್ಲೇ ಬಿಟ್ಟು ಹೊರಟೆವು. ಭಕ್ತ ಜನರು ಮನ್ನಿಸಬೇಕು.)
21 comments:
ಗ್ರ್ಯಾಂಡ್ ಕ್ಯಾನಿಯನ್ ಕಣಿವೆಯ ಅದ್ಭುತ ಚಿತ್ರಗಳು ಆದಕ್ಕೆ ತಕ್ಕಂತೆ ಪಕ್ಕದಲ್ಲೇ ನಿಂತೂ ವರ್ಣಿಸಿದಂತೆ ಸೊಗಸಾದ ನಿರೂಪಣೆ...ಇನ್ನಷ್ಟು ಮತ್ತಷ್ಟು ಮುಂದಿನ ಪ್ರವಾಸ ವಿವರ ಮತ್ತು ಫೋಟೋಗಳಿಗಾಗಿ ಕಾಯುತ್ತಿದ್ದೇನೆ.
ಅದ್ಭುತ ಚಿತ್ರಗಳು ಅಕ್ಕ... ವರ್ಣಿಸಲಸದಳ.... ಹೆಸರುಗಳು ಉಚ್ಚರಿಸಲು, ನೆನಪಿಟ್ಟುಕೊಳ್ಳಲು ಕಷ್ಟವೆನಿಸಿದರೂ ಚಿತ್ರಗಳು ಸದಾ ಹಸಿರಾಗುತ್ತವೆ. ಅಂತಹ ನೋಟವನ್ನು ಕಂಡ ನೀವೇ ಧನ್ಯ!
nooru maatu saaladu:)
ಶಿವು, ತೇಜು, ಗೌತಮ್- ಧನ್ಯವಾದಗಳು.
ಶಿವು, ಆ ಕಣಿವೆಯನ್ನು ಕ್ಯಾಮರಾ ಕಣ್ಣಲ್ಲಿ ಸಮರ್ಥವಾಗಿ ಸೆರೆಹಿಡಿಯಲು ಸಾಧ್ಯವಿಲ್ಲ. ಹಿಡಿದರೂ ಅವು ಬರೇ ಪೀಸ್ ಮೀಲ್ಸ್- ತುಣುಕುಗಳು, ಅಷ್ಟೇ. ನನ್ನ ಪುಟ್ಟ ಪೆಟ್ಟಿಗೆಯಲ್ಲಿ ಎಷ್ಟು ತುಂಬಿಕೊಂಡೇನು?
ತೇಜು, ಚಿತ್ರಗಳು ನೆನಪನ್ನು ಹಸುರಾಗಿರಿಸಲು ಸಹಕಾರಿಯಾಗುತ್ತವೆ, ಹೌದು. ಅದೂ ಚಿತ್ರದ ಚೌಕಟ್ಟಿಗೇ ಸೀಮಿತವಾಗಿಬಿಡುತ್ತದೆ. ಕಾಲ ಸಂದಂತೆ ಚೌಕಟ್ಟು ಮೀರಿದ ಪರಿಸರ ನಮ್ಮೊಳಗೆ ಮಸುಕಾಗಿಬಿಡುತ್ತದೆ, ಅಲ್ವಾ?
ಗೌತಮ್, ಹೌದು, ನೂರು ಮಾತುಗಳೂ ಸಾಲವು ಕಣ್ಣು ಕಂಡದ್ದನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಲು... ಅಸಮರ್ಥಳಾಗಿದ್ದೇನೆ.
ನಿಮ್ಮ ಜೊತೆ ನಾವು ಕ್ಯಾನಿಯನ್ ಕಂಟ್ರಿ ಸುತ್ತುತ್ತಿರುವ ಅನುಭವವಾಯಿತು.
ತುಂಬಾ ಚೆನ್ನಾಗಿ ವಿವರಿಸಿದ್ದಿರ, ನಮಗೆ ಹೋಗಿ ಬಂದಂತೆ ಆಯಿತು,
ನಿಜಕ್ಕೂ ಇದೊಂದು ನಿಮಗೆ ರೋಚಕ ಪ್ರವಾಸ ಇರಬಹುದು, ಫೋಟೋಗಳು ಮುದ ನೀಡಿತು
ಸುಮ, ಗುರುಮೂರ್ತಿ, ಧನ್ಯವಾದಗಳು.
ಸುಮ, ಈ ನನ್ನ ಅಕ್ಷರಲೋಕಕ್ಕೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೂ. ಹೀಗೇ ಬರುತ್ತಾ ಇರಿ; ಬರೆಯುತ್ತಿರಿ.
ಗುರುಮೂರ್ತಿ, ‘ರೋಚಕ’ ಅನ್ನುವಂಥದ್ದು ನೋಡುಗರ ಕಣ್ಣು-ಮನದಲ್ಲಿರುವಂಥಾದ್ದು. ಇದೇ ಗ್ರ್ಯಾಂಡ್ ಕ್ಯಾನಿಯನ್ ನೋಡಿ ಒಬ್ಬರು "This is just a crack and whole in the ground" ಅಂದಿದ್ದರು. ಹನ್ನೆರಡು ವರ್ಷಕ್ಕೂ ಹಿಂದೆ ಕೇಳಿದ್ದ ಆ ಮಾತನ್ನು ಅರಗಿಸಿಕೊಳ್ಳಲಾಗಿಲ್ಲ ನನಗಿನ್ನೂ.
ಜ್ಯೋತಿ ಅಕ್ಕಾ...
ಲಾಸ್ ವೆಗಾಸ್ ಬರಲ್ಲ, ಡೈರೆಕ್ಟ್ ವೆಸ್ಟ್ ರಿಮ್ ಅಲ್ಲೆ ಸಿಗ್ತೀನಿ ಅಂದಿದ್ನಲ್ವ ನಾನು? ನೀವೆಲ್ಲ ಲಾಸ್ ವೆಗಾಸ್ ಅಲ್ಲಿದ್ದಾಗ ಇಲ್ಲಿ ಕರೆಂಟ್ ಹೋಗಿ ‘ಪಿಕಾಕ್’ ಅಲ್ಲಿ ಡಿನ್ನರ್ರು. ಮುಗ್ಸಿ ವೆಸ್ಟ್ ರಿಮ್ ಗೆ ಬರೋಷ್ಟರಲ್ಲಿ ನೀವೆಲ್ಲ ‘ರೈಟ್ ಪೋಯಿ’ ಆಗಿತ್ತು.
ಕ್ಯಾನಿಯನ್ ಕಂಟ್ರಿ ಪ್ರವಾಸ ಪುರವಣಿ ತುಂಬ ಚೆನ್ನಾಗಿತ್ತು. ಹೋಗಿಬಂದಷ್ಟೇ ಖುಷಿಯಾಯ್ತು. ಇನ್ನೊಂದ್ಸಲ ಹೋದಾಗ ಪೂರ್ತಿ ಸುತ್ತಾಡಿ ಬರ್ಬೇಕು ಅನ್ನಿಸ್ತಿದೆ ನಿಮ್ಮ ಲೇಖನ ಓದಿದ್ಮೇಲೆ, ಅಷ್ಟು ಇಷ್ಟ ಆಯ್ತು.
ವೇಗಾಸಿಗೂ ನಮ್ಮ ಏರಿಯಾದ ಕರೆಂಟಿಗೂ ಏನೋ ಸಂಬಂಧ ಇದ್ಯಾ? ನಾವು ಇಲ್ಲಿಂದ ಹೊರಡೋ ಹಿಂದಿನ ದಿನ ನಮ್ಮನೆಯಲ್ಲಿ ಕರೆಂಟ್ ಹೋಗಿ ನನಗೆ ಫಜೀತಿ! ಮತ್ತೆ, ನಾವೆಲ್ಲ ವೇಗಾಸಿನಲ್ಲಿದ್ದಾಗ ನಿಮ್ಮನೇಲೆ ಕರೆಂಟ್ ಹೋಗಿ ನಿನಗೆ ಫಜೀತಿ!! ಕೇಳ್ಬೇಕು PG&E ಕಂಪೆನಿಯನ್ನು- ವೇಗಾಸ್ ಮೇಲೆ (ಅಥವಾ ವೇಗಾಸಿಗೆ ಹೊರಟೋರ ಮೇಲೆ) ಅವರಿಗೇನಾದ್ರೂ ದ್ವೇಷ ಇದ್ಯಾಂತ!!
ಗ್ರ್ಯಾಂಡ್ ಕ್ಯಾನಿಯನ್ ಒಂದೊಂದು ಸಲ ಒಂದೊಂದು ರೀತಿ ಕಾಣತ್ತೆ- ದಿನದ ಹವೆಯನ್ನು, ಧೂಳು-ಗಾಳಿಯನ್ನು, ಬೆಳಕು-ಮೋಡವನ್ನು ಹೊಂದಿಕೊಂಡು ತನ್ನ ಬೇರೆ ಬೇರೆ ಬಣ್ಣವನ್ನು ತೋರುವ ಮೋಡಿಗಾರ ಕಣಿವೆಯದು. ಅದಕ್ಕೇ ಕಡಿಮೆಯೆಂದರೆ ಎರಡು-ಮೂರು ದಿನವಾದರೂ ಅಲ್ಲೇ ಇರಬೇಕು. ಹಾಗೇ ಹೋಗಿ ಬನ್ನಿ.
hello akkayya. dayavittu ninna pravaasada photogalanna nange mail maadokaagutta? nanna e mail address harishemaani@gmail.com
ಗೌತಮ್,
ಕೆಲವು ಫೋಟೋಗಳನ್ನ ಪಿಕಾಸಾ ವೆಬ್ ಆಲ್ಬಮಿನಲ್ಲಿ ಹಾಕುವ ಯೋಚನೆಯಿದೆ. ಆಗ ನಿನಗೆ ಲಿಂಕ್ ಕೊಡುತ್ತೇನೆ, ಆಗದಾ? ನಿನಗೆ ಮೈಲ್ ಮಾಡೋದು-- ಯಾವುದನ್ನೆಲ್ಲ ಕಳ್ಸೋದು? ಎಷ್ಟು ಫೋಟೋ ಕಳ್ಸೋದು? ನನಗೇ ಗೊಂದಲ.
ಜ್ಯೋತಿ, ನೀವು ನೋಡದೆ ಬಿಟ್ಟುಬಂದ ದೇವ, ವಿಷ್ಣು, ಬ್ರಹ್ಮ- ದೇಗುಲಗಳು, ಕೃಷ್ಣ ಗೋಪುರ, ರಾಮ ಗೋಪುರ, ಬುದ್ಧ, ವೀನಸ್, ಜ್ಯುಪಿಟರ್, ಝೋರೋವಾಸ್ಟರ್, ರಾ, ಕನ್ಫ್ಯೂಷಿಯಸ್, ಒಸೈರಿಸ್, ಥೋರ್, ಸೋಲೋಮನ್, ಶೀಬಾಗಳನ್ನೆಲ್ಲಾ ನೋಡಿಕೊಂಡು ಬರೋದಕ್ಕೆ ಇಷ್ಟೊತ್ತಾಯಿತು.
ಸದ್ಯ ಬಸ್ ಹೊರಟೇಹೋಗಿದೆಯೇನೋ ಅಂತ ಭಯವಾಗಿತ್ತು. ಮುಂದಿನ ಸಲ ಇಷ್ಟು ತಡ ಮಾಡಲ್ಲ. ಅಂದಾಗೆ, ಕಂಡಕ್ಟರ್ ಎಲ್ಲಿ? ಕಾಣ್ತಾನೇ ಇಲ್ಲವಲ್ಲಾ!
ಜ್ಯೋತಿ ಅಕ್ಕಾ,
ನಾನು ನಿಮ್ಮ ಹಿಂದೇನೆ,,,,, ಇದ್ದೆ. ಯಾಕೋ ತ್ರಿವೇಣಿ ಅಕ್ಕ ಬಸ್ ಹತ್ತಿರ ಕಾಣ್ಲಿಲ್ಲ ಅಂತ ಅವ್ರನ್ನ ಹುಡುಕ್ತಾ,,,,, ನಾನು ಬರೋದು ತಡವಾಯ್ತು:-).ಕ್ಷಮಿಸಿ,ಮುಂದಿನ ಸಲ ಇಳಿದಾಗ ನಾನೇ ಮೊದಲು ಬಸ್ ಹತ್ತುತ್ತೇನೆ.
ಫೋಟೋ ಮತ್ತು ವರ್ಣನೆ ತುಂಬಾನೇ ಚೆನ್ನಾಗಿದೆ.
ಭಾರ್ಗವಿ.
ವೇಣಿ, ಭಾರ್ಗವಿ, ಧನ್ಯವಾದಗಳು.
ವೇಣಿ, ಎಲ್ಲ ದೇವರ ದೇಗುಲಗಳನ್ನು ನೋಡಿಕೊಂಡು ಎಷ್ಟು ಪುಣ್ಯ ಮೂಟೆಕಟ್ಟಿಕೊಂಡು ಬಂದಿ? ಮೂಟೆ ದೊಡ್ಡದಾಗಿದ್ರೆ ಬಸ್ಸಿನ ಟಾಪಿಗೆ ಹಾಕ್ಬೇಕಾಗತ್ತೆ; ಹೆಚ್ಚಿನ ಚಾರ್ಜ್ ಮಾಡಬೇಕಾಗುತ್ತೆ. ಎಷ್ಟು ದೊಡ್ಡದಿದೆ ಗಂಟು? ಮೊದ್ಲ್ ಹೇಳು.
ನಮ್ಮ ಕಂಡೆಕ್ಟರ್ ಇನ್ನೂ ಹುಡುಗ ಅಲ್ವಾ? ಲಾಸ್ ವೇಗಾಸಿನಲ್ಲೇ ನಿಂತುಬಿಟ್ಟ. ಸ್ವಲ್ಪ ದಿನ ಎಂಜಾಯ್ ಮಾಡಿ ನಂತ್ರ ಬಂದಾನು ನೋಡೋಣ...
ಭಾರ್ಗವಿ, ಯಾರು ಮೊದಲು ಯಾರು ಕೊನೆಗೆ ಅನ್ನುವುದು ಮುಖ್ಯವಲ್ಲ, ಎಲ್ಲರೂ ಬಂದು ಸೇರೋದು ಮುಖ್ಯ. ಆದ್ರಿಂದ ಪರವಾಗಿಲ್ಲಮ್ಮ. ನಿಧಾನಕ್ಕೇ ಎಲ್ಲ ನೋಡಿಕೊಂಡು ಬಾ, ಆಯ್ತಾ?
ಗ್ರ್ಯಾ೦ಡ್ ಕ್ಯಾನನ್ ಭೂಗರ್ಭಶಾಸ್ತ್ರಜ್ಞರ ಅಧ್ಯಯನಕ್ಕೆ ಸ್ವರ್ಗ. ಅದನ್ನು ಜೀವನದಲ್ಲೊಮ್ಮೆ ನೋಡಬೇಕೆ೦ಬುದು ಎಲ್ಲ ಈ ವಿಶಯದ ವಿಧ್ಯಾರ್ಥಿಗಳ ಅಶಯ. ಅತ್ತುತ್ತಮ ಛಾಯಾಚಿತ್ರಗಳೊ೦ದಿಗೆ ಗ್ರಾ೦ಡ್ ಕ್ಯಾನನ್ ಪರಿಚಯಿಸಿದ್ದಕ್ಕೆ ಧನ್ಯವಾದಗಳು.
aagabahudu akkayya:)
ಸೀತಾರಾಮ್, ನಿಮ್ಮ ಪ್ರೋತ್ಸಾಹಕ ಪದಗಳಿಗೆ ಧನ್ಯವಾದಗಳು. ಗ್ರ್ಯಾಂಡ್ ಕ್ಯಾನಿಯನ್ ಎಲ್ಲರಿಗೂ ಅಚ್ಚರಿಯ ಆಗರ. ನೋಡಿದಷ್ಟೂ ಸಾಲದಾಗುವಂಥ ಸ್ಥಳ ಅಂತ ನನ್ನ ಭಾವನೆ.
ಗೌತಮ್, ಸರಿ, ಹಾಗೇ ಮಾಡ್ತೇನೆ.
ತುಂಬಾ ಸುಂದರವಾಗಿದೆ ಪ್ರವಾಸ ಕಥನ ! ವಾಹ್..ವಾಹ್..ನಾವೂ ನಿಮ್ಮ ಜತೆಗೆ ಪ್ರಯಾಣ ಮಾಡ್ತಾ ಇದ್ದೆವೆಯೋ ಅನಿಸ್ತಾ ಇದೇ ಜ್ಯೋತ್ಯಕ್ಕ!
ಪ್ರೀತಿಯಿಂದ,
ಅರ್ಚು
ಹಾಯ್ ಅರ್ಚು, ಎಷ್ಟು ದಿನ ಆಗಿತ್ತು ನಿನ್ನ ನೋಡಿ. ಬಾ ಬಾ. ನಮ್ಮ ಪ್ರವಾಸದ ಬಸ್ ಹತ್ತಿಕೋ. ಎಲ್ಲರೂ ಜೊತೆಗೆ ಹೋದಾಗಲೇ ಮಜಾ...
Awesome!
ಲೇಸರ್ ಜಾಣ,
Thanksome!
Post a Comment