ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೨
`ಪಾಪ ನಗರಿ'ಯಲಿ ಒಂದು ಸಂಜೆ....
ಆಗಸ್ಟ್ ೨೮ರ ಶನಿವಾರ ಬೆಳಗ್ಗಿನ ನಾಲ್ಕೂವರೆಗೆ ಹೊರಡಬೇಕು ಅಂದುಕೊಂಡು, ನಾಲ್ಕೂಮುಕ್ಕಾಲಿಗೆ ಹೊರಟಿದ್ದೆವು. ಗಾಡಿಗೆ ಹಿಂದಿನ ಸಂಜೆಯೇ ಪೆಟ್ರೋಲ್ ತುಂಬಿಸಿಯಾಗಿತ್ತು. ಹೊರಟು ತುಸು ಹೊತ್ತಿಗೆ, "ನೀನು ಬೇಕಾದ್ರೆ ಮಲಗು. ರಾತ್ರೆಯೆಲ್ಲಾ ಮಲಗ್ಲೇ ಇಲ್ವಲ್ಲ ನೀನು" ಅಂದರು. ಕಾರಿನ ಸೀಟನ್ನು ಆದಷ್ಟು ಹಿಂದಕ್ಕೆ (ಹಿಂದಿನ ಸೀಟಿನಲ್ಲಿ ಕೂತಿದ್ದ ದೊಡ್ಡ ಐಸ್-ಚೆಸ್ಟ್ ತಡೆಯುವ ತನಕ) ವಾಲಿಸಿಕೊಂಡೆ. ಕಾರಿನೊಳಗೇ ಇಟ್ಟುಕೊಂಡಿದ್ದ ಪುಟ್ಟಪುಟ್ಟ ದಿಂಬುಗಳನ್ನು ಎರಡೂ ಸೀಟುಗಳ ನಡುವೆ ಸಿಕ್ಕಿಸಿದೆ. ಬೆಳಗಿನ ನಸುಬೆಳಕನ್ನು ಕರ್ಚೀಫಿನಿಂದ ಮರೆಮಾಡಿ ಹಾಗೇ ಒರಗಿದ್ದೊಂದೇ ಗೊತ್ತು.
"ಓಹ್! ವಾಹ್!" ಉದ್ಗಾರಗಳಿಗೆ ಧಡಕ್ಕನೆ ಎದ್ದು ಕೂತೆ. ಗಂಟೆ ಐದೂಕಾಲು. ನಾವಿನ್ನೂ ಮಾರ್ಗನ್ ಹಿಲ್ ನಗರ ದಾಟಿಲ್ಲ. "ಏನಾಯ್ತು?" ಸ್ವಲ್ಪ ತೀಕ್ಷ್ಣವಾಗಿಯೇ ಕೇಳಿದ್ದೆ. "ಒಂದು ಚಂದದ ಉಲ್ಕೆ ಮಾರಾಯ್ತಿ. ಒಳ್ಳೆ ಹಸಿರು ಬಣ್ಣ. ಊಊದ್ದದ ಹಸಿರು ಬಾಲ ಅದಕ್ಕೆ. ಭಾರೀ ಚಂದ ಇತ್ತು." ಹ್ಮ್! ಚಂದದ ಮುಂಜಾನೆಯಲ್ಲಿ ಮರಿ ಕವಿಯ ಹಾಗೆ ಚಂದದ ಉಲ್ಕೆಯ ವರ್ಣನೆ ಮಾಡೋ ಚೆನ್ನಿಗರಾಯರ ಮೇಲೆ ಕೋಪ ಮಾಡ್ಕೊಳೋದಕ್ಕೆ ಆಗ್ತದಾ? ಸುಮ್ಮನೇ ಉಸಿರು ಬಿಟ್ಟೆ. ಕಣ್ಣು ಬಿಟ್ಟು ಕೂತೆ.... ಇನ್ನೊಂದು ಬಂದ್ರೆ? ಗಿಲ್ರೋಯ್ ದಾಟಿತು. ಸೂರ್ಯ ಏರಿ ಬಂದ. ಉಲ್ಕೆ ನೋಡ್ಲಿಕ್ಕಾ ಅಂತ ಕೇಳಬೇಕೆನಿಸಿತು ಅವ್ನನ್ನ. ಕೇಳ್ಲಿಲ್ಲ. ಅಷ್ಟು ಹೊತ್ತಿಗೆ ಕಣ್ಣುಗಳು "ಉರಿ ಉರಿ" ಅಂದವು. ಮತ್ತೊಮ್ಮೆ ಕರ್ಚೀಫು ಕಟ್ಟಿಕೊಂಡು ದಿಂಬಿಗೊರಗಿದೆ.
ನಮ್ಮೂರಿಂದ ನೆವಾಡದ ಲಾಸ್ ವೇಗಾಸ್ ನಗರಕ್ಕೆ ಎಂಟೂವರೆ ಗಂಟೆಯ ಹಾದಿ. ಒಂದು ಗ್ಯಾಸ್ (ಪೆಟ್ರೋಲ್) ಸ್ಟಾಪ್ ಬೇಕೇಬೇಕು. ಹಾಗೇ ರೆಸ್ಟ್ ರೂಂ ವಿಸಿಟ್ಸ್ ಕೂಡಾ. ಸಾಮಾನ್ಯವಾಗಿ ಗ್ಯಾಸ್ ಸ್ಟೇಷನ್ (ಪೆಟ್ರೋಲ್ ಬಂಕ್)ಗಳಲ್ಲಿ ಒಳ್ಳೆಯ ಟಾಯ್ಲೆಟ್ ಕೂಡಾ ಇರ್ತವೆ. ಹಾಗೇ ನಮ್ಮದೂ ಒಂದೆರಡು ನಿಲುಗಡೆಗಳಾದವು. ಮೊದಲ ನಿಲುಗಡೆಯಲ್ಲಿ, ಒಂಭತ್ತು ಗಂಟೆಗೆ, ಕಾರಿಗೆ ರೆಸ್ಟೂ ನಮಗೆ ಟೀಯೂ ಉಪ್ಪಿಟ್ಟೂ ದಕ್ಕಿದವು. ನಂತರ ನಾನು ಡ್ರೈವಿಂಗ್ ತಗೊಂಡೆ. ಇವರು ಒಂದಿಷ್ಟು ಕಿಲೋ ಬೆಲ್ಲ ತೂಗಿದರು (ನಮ್ಮಲ್ಲಿ, ಕತ್ತು ಹಿಂದಕ್ಕೆ ಒರಗಿಸಿಕೊಳ್ಳದೆ, ತಲೆದೂಗುತ್ತಾ ನಿದ್ದೆ ಮಾಡುವುದಕ್ಕೆ "ಗೌರವಾನ್ವಿತ" ನುಡಿಗಟ್ಟು "ಬೆಲ್ಲ ತೂಗುವುದು").
ಸುಮಾರು ಮೂರು ಗಂಟೆಗಳ ಹಾದಿಯ ಬಳಿಕ ಮತ್ತೊಂದು ಬ್ರೇಕ್. ಯಥಾವತ್ ಕಾರಿಗೆ ಗ್ಯಾಸ್ ತುಂಬಿಸಿ, ರೆಸ್ಟ್ ರೂಂ ವಿಸಿಟ್ ಆಗಿ, ಉಳಿದ ಟೀ ಕುಡಿದು, ಒಂದೊಂದು ಸ್ನ್ಯಾಕ್ ಬಾರ್ ತಿಂದು ಮತ್ತೆ ಅವರ ಸಾರಥ್ಯದಲ್ಲಿ ಹೊರಟಿತು ಬಂಡಿ. ವೇಗಾಸಿನಲ್ಲಿ ಮಧ್ಯಾಹ್ನದ ಊಟವೆಂದು ನಿರ್ಧರಿಸಿಕೊಂಡಿದ್ದೆವು. ಮೊದಲ ಒಂದು ಗಂಟೆ ನಾನು ಇನ್ನೊಂದು ನಿದ್ದೆ ಮಾಡಿದೆ. ಅಲ್ಲಿಗೆ, ಸುಮಾರು ಮೂರೂವರೆ-ನಾಲ್ಕು ಗಂಟೆಗಳ ನಿದ್ದೆ ನನ್ನ ಪಾಲಿಗೆ ಸಿಕ್ಕಿತ್ತು. ವೇಗಾಸಿನ ಭಾರತೀಯ ರೆಸ್ಟಾರೆಂಟುಗಳ ಲಿಸ್ಟ್ ನಮ್ಮಲ್ಲಿತ್ತು. ಕನ್ನಡಕ ಏರಿಸಿಕೊಂಡು ಒಂದೊಂದಕ್ಕೇ ಕರೆ ಮಾಡಿದೆ...
"ಹಲ್ಲೋ, ಗುಡ್ ಆಫ್ಟರ್’ನೂನ್ ನಿಮ್ಮಲ್ಲಿ ಲಂಚ್ ಬಫೆ ಇವತ್ತು ಇದೆಯಾ? ಎಷ್ಟು ಹೊತ್ತಿನತನಕ ಇರ್ತದೆ?" ಒಂದು ಕಡೆ ಎರಡೂವರೆಯ ತನಕ. ಇನ್ನೊಂದು ಕಡೆ "ನೀವು ಒಂದೂಮುಕ್ಕಾಲಿಗೆ ಬಂದರೆ ಟೇಕ್ ಔಟ್ ಮಾತ್ರ." ಎಂದಳು, ಒರಟಾಗಿ!
ಆಗಲೇ ಸಮಯ ಒಂದೂಕಾಲು. ವೇಗಾಸಿಗೆ ಇನ್ನೂ ಸುಮಾರು ಅರ್ಧ ಗಂಟೆಯ ಹಾದಿ. ಟ್ರ್ಯಾಫಿಕ್ ತೀರಾ ನಿಧಾನವಾಗಿತ್ತು. ಎಲ್ಲೋ ಏನೋ ಆಕ್ಸಿಡೆಂಟ್ ಆಗಿತ್ತೆನಿಸಿತು. ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ರಸ್ತೆ ಪಕ್ಕದಲ್ಲಿ ಜಪ್ಪಿಸಿಕೊಂಡು ನಿಂತಿದ್ದ ಎರಡು ಕಾರುಗಳಿದ್ದವು. ಮಾಮಣ್ಣನವರು ಆ ಒಂದು ಲೇನ್ ತೆರವುಗೊಳಿಸಿ ಉಳಿದೆರಡರಲ್ಲೇ ವಾಹನಗಳನ್ನು ಸಾಗಹಾಕುತ್ತಿದ್ದರು. ಆ ಸೀನ್ ದಾಟುತ್ತಿದ್ದ ಹಾಗೇ ವೇಗ ಸುವೇಗ. ಮತ್ತೊಂದು ಹೋಟೇಲ್- ಇಂಡಿಯಾ ಅವೆನ್-ಗೆ ಫೋನ್ ಮಾಡಿದೆ. "ಎರಡೂವರೆಯ ಮೊದಲು ಬನ್ನಿ. ಬಫೆ ಇದೆ." ಎಂದರು.
ಒಂದೂಮುಕ್ಕಾಲಿಗೇ ಪ್ಯಾರಡೈಸ್ ರೋಡಿನಲ್ಲಿರುವ ಇಂಡಿಯಾ ಅವೆನ್ ಮುಂದೆ ನಿಂತು ಕಾರಿನಿಂದಿಳಿಯುವಾಗ ‘ಉಬೆ’ (ಹಣ್ಣುಗಳನ್ನು "ಹಣ್ಣಾಗಿಸಲು" ಹದವಾದ ಬೆಂಕಿ/ಹೊಗೆ ಹಾಕಿ ಬೆಚ್ಚಗಿಡುವ ಗೂಡು) ಹೊಕ್ಕಿದ ಅನುಭವ. ನೂರಾಮೂರು ಡಿಗ್ರಿಯ ಒಣ ಹವೆ. ಒಟ್ಟು ಒಂಭತ್ತು ಗಂಟೆಯ ಪಯಣ. ಐದುನೂರಾ ನಲವತ್ತೆರಡು ಮೈಲಿ ಬಂದಿದ್ದೆವು. ಟೇಬಲ್ ಹಿಡಿದು, ರೆಸ್ಟ್ ರೂಮ್ ವಿಸಿಟ್ ಮುಗಿಸಿ, ಬಫೆ ಊಟ ಆಯ್ದುಕೊಂಡೆವು. ನಮಗೆ ಬೇಕಾಗಿದ್ದನ್ನು ತಟ್ಟೆಗೆ ಹಾಕಿಕೊಂಡು ಟೇಬಲ್ಲಿಗೆ ಬಂದಾಗ ಬಿಸಿಬಿಸಿ ನಾನ್ ತಂದುಕೊಟ್ಟರು. ಈ ಮೊದಲು ಎಷ್ಟೋ ರೆಸ್ಟಾರೆಂಟ್’ಗಳಲ್ಲಿ ಊಟ ಮಾಡಿದ್ದೇವೆ, ನಾನ್ ತಿಂದಿದ್ದೇವೆ. ಆದರೆ ಇಷ್ಟು ಹದವಾಗಿರುವ ನಾನ್ ಎಂದೂ ತಿಂದಿರಲಿಲ್ಲ. ರುಚಿ, ಸುವಾಸನೆ, ಮೃದುತ್ವ- ಅತ್ಯಂತ ಸಮರ್ಪಕವಾಗಿದ್ದವು. ಮೆಚ್ಚುಗೆ ತಿಳಿಸಿಯೇ ಊಟ ಮುಗಿಸಿದೆವು.
ಎರಡೂಮುಕ್ಕಾಲಿಗೆ ಅಲ್ಲಿಂದ ಹೊರಟು ನಾವು ಇಳಿದುಕೊಳ್ಳಬೇಕಾಗಿದ್ದ ಹೋಟೇಲಿಗೆ ಬಂದೆವು. ರೂಮ್ ಸೇರಿ ಸ್ನಾನ ಮಾಡಿ ಒಂದು ನಿದ್ದೆಯೂ ಆಯ್ತು. ಆಗ ನಾನು ಗಮನಿಸಿದಂತೆ, ಮಂಚದ ಬದಿಯಲ್ಲಿದ್ದ ನಿಲುಗನ್ನಡಿಯಲ್ಲಿ ನಮ್ಮ ಉಗುರಿನ ಪ್ರತಿಬಿಂಬ ಉಗುರಿಗೇ ಅಂಟಿಕೊಂಡಂತೆ ಕಾಣುತ್ತಿತ್ತು. ಸ್ನಾನದ ಕೋಣೆಯ ಕನ್ನಡಿಯಲ್ಲಿ ಬಿಂಬ ಸರಿಯಾಗಿತ್ತು. ನನಗೇನೋ ತಲೆಯೊಳಗೆ ಹುಳ ಹೊಕ್ಕಿತು. ಈ ಕನ್ನಡಿಯಲ್ಲಿ ಮರ್ಕ್ಯುರಿ ಪದರ ಗಾಜಿನ ಮೇಲೆಯೇ ಇದೆ. ಅಂದರೆ ಇದು ಟೂ-ವೇ-ಗಾಜು. ಅತ್ತಕಡೆಯಿಂದ ಏನಾದರೂ ಕ್ಯಾಮರಾ ಇಟ್ಟಿರಬಹುದೆ? ತಿಳಿಯುವ ಸಾಧ್ಯತೆಯಿಲ್ಲ. ಆದರೂ ಅದರ ಬಗ್ಗೆ ಒಂದರ್ಧ ಗಂಟೆ ಮಾತಾಡಿ, ಆಚೆಯಿಂದ ಈಚೆಯಿಂದ ಉಗುರಿನ ಪ್ರತಿಬಿಂಬ ನೋಡಿ, ತಲೆಕೊಡಹಿಕೊಂಡೆ.
ಬಟ್ಟೆ ಬದಲಾಯ್ಸಿ, "ಪಾಪ ನಗರಿ" ಲಾಸ್ ವೇಗಾಸಿನ ಬೀದಿ ಸುತ್ತಲು ಹೊರಟೆವು. ಅದಾಗಲೇ ಗಂಟೆ ಐದೂಮುಕ್ಕಾಲಾದರೂ ಹೊರಗೆ ಧಗೆಯಿತ್ತು. "ಪಾಪದ ಬೇಗೆ" ಅನ್ನಬಹುದಾದ ಮರುಭೂಮಿಯ ಧಗೆ. ಮೊದಲು ವೇಗಾಸ್ ಬುಲೆವರ್ಡ್ ಉದ್ದಕ್ಕೆ ಒಂದು ಡ್ರೈವ್. ನಂತರ ಕಾರನ್ನು ನ್ಯೂಯಾರ್ಕ್ ನ್ಯೂಯಾರ್ಕ್ ಕ್ಯಾಸಿನೋದ ಪಾರ್ಕಿಂಗ್ ಲಾಟಿನಲ್ಲಿ ಇರಿಸಿ ನಡೆಯಲು ಹೊರಟೆವು.
ಬೆಲ್ಲಾಜಿಯೋ ಕ್ಯಾಸಿನೋ ಮುಂದಿನ ನೀರಿನ ಕಾರಂಜಿಗಾಗಿ ಕಾಲು ಗಂಟೆ ಕಾದೆವು. ಕಾದಿದ್ದಕ್ಕೂ ಸಾರ್ಥಕವಾಯ್ತು.
ಲಾಸ್ಯವಾಡುವ ಉದ್ದದ, ಎತ್ತರದ, ವೃತ್ತದ, ನೃತ್ಯದ ಕಾರಂಜಿಗಳು. ಓಡುವ, ನಲಿಯುವ, ಚಿಮ್ಮುವ, ಜಿಗಿಯುವ, ಹಾರುವ ನೀರಿನ ಬಾಣಗಳು. ಯಾವ ಕ್ಯಾಮರವೂ ಸಮರ್ಥವಾಗಿ ಅವನ್ನು ಸೆರೆಹಿಡಿಯಲಾರದು. ಎರಡು ಹಾಡು-ನೃತ್ಯಗಳನ್ನು ನೋಡಿ ಮುಂದೆ ಸಾಗಿ, ಬೀದಿ ದಾಟಿ ಅತ್ತಕಡೆಯಿಂದ ಪ್ಯಾರಿಸ್ ಕ್ಯಾಸಿನೋ ಮುಂದಿಂದ ನ್ಯೂಯಾರ್ಕ್... ಕ್ಯಾಸಿನೋವರೆಗೆ ಅಡ್ಡಾಡಿದೆವು.
ಲಾಸ್ ವೇಗಾಸ್ ಒಂಥರಾ ಓಯಸಿಸ್. ನೆವಾಡದ ಮರುಭೂಮಿ ಪ್ರದೇಶದಲ್ಲಿ ಜೀವಂತಿಕೆಯ ರಸಬುಗ್ಗೆ ಈ ನಗರ. ಜೂಜಾಟ ಇಲ್ಲಿನ ಮುಖ್ಯ ವಹಿವಾಟು. ಅದಕ್ಕಾಗಿ ಬಂದವರಿಗೆ ಊಟ-ವಸತಿಗಳ ಅನುಕೂಲದ ಜೊತೆಗೆ ಕಲ್ಪಿಸಿಕೊಳ್ಳಬಲ್ಲ ಎಲ್ಲಾ ರೀತಿಯ ಮನರಂಜನೆಯ ಆಯಾಮಗಳೂ ಇಲ್ಲಿವೆ. ಜೂಜಿನ ಇನ್ನೊಂದು ಮಗ್ಗುಲು ಅನ್ನಬಹುದಾದ ವೇಶ್ಯಾವೃತ್ತಿಗೆ ವೇಗಾಸ್ ಸ್ವರ್ಗ. ಯುವ ಪ್ರೇಮಿಗಳಿಗೆ ದಿಢೀರೆಂದು ಮದುವೆಯಾಗಲು ಇದೊಂದು ಅನುಕೂಲಕರ ತಾಣ (ಈಗ ಅಲ್ಲಿಯೂ ಮೊದಲೇ ಸ್ಥಳ, ಸಮಯ ಕಾದಿರಿಸಬೇಕಾಗಿದೆಯಂತೆ!). ಯಾವಾಗೆಂದರೆ ಆಗ ಮನಸು ಬಂದ ಕ್ಷಣದಲ್ಲೇ ಮದುವೆಯಾಗಲು ಅಲ್ಲಲ್ಲಿ ತಲೆಯೆತ್ತಿರುವ ಸಂಸ್ಥೆಗಳಿವೆ. ರಾತ್ರಿ ಎಷ್ಟು ಹೊತ್ತಿನವರೆಗಾದರೂ ಬೀದಿಯಲ್ಲಿ ಜನ ಸಂಚಾರ ನಿಲ್ಲುವುದಿಲ್ಲ, ಕ್ಷೀಣಿಸಬಹುದು. ಸಾಮಾನ್ಯ ಮರುಭೂಮಿಯ ವಾತಾವರಣ ನಿಯಮದಂತೆಯೇ, ಹಗಲಲ್ಲಿ ಹುರಿದು ಕಾಯಿಸಿ ಸುಡುವ ಬಿಸಿಲು, ರಾತ್ರೆಗೆ ಹದವಾಗಿ ನಡುಗಿಸುವ ಚಳಿ (ಪ್ರೇಮಿಗಳಿಗೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕೆ?). ಎರ್ರಾಬಿರ್ರಿ ನುಗ್ಗಿ ನುಸುಳುವ ಟ್ಯಾಕ್ಸಿಗಳು ನಮ್ಮಲ್ಲಿಯ ರಿಕ್ಷಾಗಳನ್ನು ನೆನಪಿಸುತ್ತವೆ. ಮನರಂಜನಾ ಶೋಗಳ ಫಲಕಗಳು ಎಲ್ಲಾ ಕಡೆ ಕಣ್ಣಿಗೆ ರಾಚುತ್ತವೆ. ಒಂದೊಂದು ಟ್ಯಾಕ್ಸಿಯೂ ಎರಡು ಮೂರು ಶೋಗಳ ಫಲಕಗಳನ್ನು ಹೊತ್ತಿರುತ್ತದೆ. ನಗ್ನತೆಗೆ ಇಲ್ಲಿ ನಾಚಿಕೆಯಿಲ್ಲ. ಅದಕ್ಕೆಂದೇ ಲಾಸ್ ವೇಗಾಸ್ "ಸಿನ್ ಸಿಟಿ".
ನಿರಂತರ ಚಟುವಟಿಕೆಯ ವೇಗಾಸಿನಲ್ಲಿ ಬೀದಿ ಕಾಮಣ್ಣರೂ, ಕುಡುಕರೂ, ವೇಶ್ಯೆಯರ ದಲ್ಲಾಳಿಗಳೂ (ದಾರಿಹೋಕರ ಮುಂದೆ ಬೆಲೆವೆಣ್ಣುಗಳ ಅರೆನಗ್ನ ಚಿತ್ರಗಳುಳ್ಳ ಕಾರ್ಡುಗಳನ್ನು ಹಿಡಿದು ಗಿರಾಕಿಗಳನ್ನು ಸೆಳೆಯುವುದೇ ಇವರ ಕೆಲಸ. ಎಲ್ಲ ವಯಸ್ಸಿನ, ಗಂಡು-ಹೆಣ್ಣು ದಲ್ಲಾಳಿಗಳೂ ಇದ್ದಾರೆ), ನಮ್ಮಂತೆ ಸುತ್ತಾಡುವವರೂ, ಎಲ್ಲ ನೋಡಲೆಂಬಂತೆ ಎಲ್ಲೆಂದರಲ್ಲಿ ನಿಂತು ಮುದ್ದಾಡುವವರೂ, ಎಲ್ಲ ವಯೋಮಾನದವರೂ, ಸ್ವಭಾವದವರೂ, ಎಲ್ಲ ಥರದ ಬಟ್ಟೆ ಬರೆ ತೊಟ್ಟವರೂ, ಕುಡಿದ ಅಮಲಿನಲ್ಲಿರುವ ಗೆಣತಿಯರನ್ನು ಸುಧಾರಿಸುತ್ತಾ ಸಾಗಿಸುತ್ತಿರುವ ಗೆಣೆಯರೂ, ಅಮಲಿನಿಂದಲೋ ಆಸೆಯಿಂದಲೋ ಭುಜದಿಂದ ಜಾರುತ್ತಿರುವ ಉಡುಗೆಯ ಮೋಹನಾಂಗಿಯರೂ, ಅವರೆಡೆ(ದೆ)ಗೆ ಕಳ್ಳ ನೋಟ ಹರಿಸುತ್ತಲೇ ತಂತಮ್ಮ ನಲ್ಲೆಯರ ಸೊಂಟ ಬಳಸಿ ನಡೆಯುವ ನಲ್ಲರೂ.... ಯಾರುಂಟು ಯಾರಿಲ್ಲ ಈ ವಿಲಾಸಿಗಳ ಸ್ವರ್ಗವೆಂದೇ ಕರೆಯಲ್ಪಡುವ ಪಾಪನಗರಿಯಲ್ಲಿ. ಆದರೂ ನಾವು ಸುತ್ತಿದ್ದು ವೇಗಾಸ್ "ಸ್ಟ್ರಿಪ್"ನಲ್ಲಿ, ನ್ಯೂಯಾರ್ಕ್... ಕ್ಯಾಸಿನೋದಿಂದ ಸುಮಾರು ಒಂದು ಮೈಲು ಪೂರ್ವಕ್ಕೆ ನಡೆದು ಮತ್ತೆ ಪಶ್ಚಿಮಕ್ಕೆ ಬಂದದ್ದು, ಅಷ್ಟೇ. ಅಂದು ಮೈಯನ್ನು ಹಾಸಿಗೆಗಿಟ್ಟು ತಲೆ ದಿಂಬನ್ನು ಮುಟ್ಟಿದಾಗ ಸಮಯ ಮರುದಿನಕ್ಕೆ ಹತ್ತಿರವಾಗಿತ್ತು.
21 comments:
ಜ್ಯೋತಿ ಅಕ್ಕಾ,
"ಬೆಲ್ಲ ತೂಗೋದು" ನನಗೆ ಗೊತ್ತಿರಲಿಲ್ಲ.ಚೆನ್ನಾಗಿದೆ.ಇನ್ನು ವೇಗಾಸ್ ವರ್ಣನೆ ಸೂಪರ್.
ಮೊನ್ನೆ ಗೆಳತಿಯೊಬ್ಬಳು ಬೆಲ್ಲಾಜಿಯೋ ನೋಡಿದೀಯ ಅಂದಿದ್ದಕ್ಕೆ ಇಲ್ಲ ಅಂದೆ. ಈಗ ಇಲ್ಲಿ ನೋಡಿದ ಮೇಲೆಯೇ ತಿಳಿದದ್ದು ಆಸೆಯಿಂದ ಕಾರಂಜಿ ಕಾದು,, ನೋಡಿ,,, ಅದರ ಮುಂದೆ ಫೋಟೋ ಸಹ ತೆಗೆಸಿಕೊಂಡಿದ್ದು ಬೆಲ್ಲಾಜಿಯೋ ಮುಂದೇನೆ ಅಂತ:-). ಸಮಯದ ಅರಿವೆಲ್ಲದೆ ಸುತ್ತಾಡಿದ್ದು ಬಿಟ್ಟರೆ ನನಗೆ ಅಷ್ಟೊಂದು ನೆನಪಿಲ್ಲ. ಹೇಗೂ ನಿಮ್ಮೊಂದಿಗೆ ನಮ್ಮನ್ನು ಸುತ್ತಿಸುತ್ತಾ ಇದ್ದೀರಲ್ಲ.ಧನ್ಯವಾದಗಳು.
ಭಾರ್ಗವಿ
ಭಾರ್ಗವಿ, ಭಾನುವಾರದ ಬೆಳಗ್ಗೆಯೂ ಬಿಡುವು ಮಾಡಿಕೊಂಡು ಇದನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಾವೂ ಬೆಲ್ಲಾಜಿಯೋ ಕ್ಯಾಸಿನೋ ಒಳಗಡೆ ನೋಡಿಲ್ಲ. ಸುಂದರವಾಗಿದೆಯಂತೆ. ಹೊರಗಿನ ಈ ಕಾರಂಜಿಯೇ ಇಷ್ಟು ಚಂದ ಇರಬೇಕಾದರೆ, ಇನ್ನು ಒಳಗಡೆ ಹೇಗಿರಬೇಡ!?
ವೇಗಾಸಿನ ಬೀದಿಗಳಲ್ಲಿ ಪರಿಚಿತರು ಯಾರೂ ಕಾಣದೆ, ನಾವಿಬ್ಬರೆ ಆಗಿಹೋದೆವೇನೋ ಅಂತಿದ್ದೆ, ನೀನಾದರೂ ಜೊತೆಗಿದ್ದೀಯಲ್ಲ, ಥ್ಯಾಂಕ್ಸ್ ಕಣೇ.
ಅಕ್ಕಾ,
ಕಂಡು ಕೇಳರಿಯದ ಇಂತಹ ಮಾಯಾ ನಗರಿ(ಪಾಪ ನಗರಿ)ಯ ವರ್ಣನೆ ಓದಿ ವಿಸ್ಮಿತಳಾದೆ. ಲೋಕೋ ಭಿನ್ನ ರುಚಿಃ ಅಂದಿದ್ದು ಇದಕ್ಕೇ ಇರಬಹುದು. ಅಲ್ಲಿನ ಜನರ ಆಚಾರ, ವಿಚಾರ, ಸ್ವೇಚ್ಚತೆಯನ್ನು ಓದಿ ಕ್ರಮೇಣ ನಮ್ಮ ದೇಶದ ಸಂಸ್ಕೃತಿಯೂ ಅದೇ ರೀತಿ ಆಗುವಲ್ಲಿ ದೂರವೇನಿಲ್ಲವೇನೋ ಎಂದಿನಿಸಿತು!!
ಕುತೂಹಲಕರವಾಗಿದೆ ಲೇಖನದ ಶೈಲಿ. ಮನಸೂರೆಗೊಳ್ಳುವ ಕಾರಂಜಿ ನರ್ತನಗಳ ಚಿತ್ರ. ಚಿತ್ರವೇ ಇಷ್ಟು ಸುಂದರ..ಇನ್ನು ಅಲ್ಲಿಯೇ ನೋಡುವಾಗ ಯಾವ ರೀತಿ ಅನುಭೂತಿಯಾಗುವುದೋ!!?
ಹಾಂ.. ಮುಂದಿನ ಪ್ರವಾಸ ಪುರವಣಿಗೆ ರೆಡಿ.. ಬೇಗ ಹಾಕಿ :)
ತೇಜು, ನೀನೂ ಸೇರಿಕೊಂಡದ್ದು ಸಂತೋಷ. ಜತೆಗಾರರು ಹೆಚ್ಚಾದಷ್ಟೂ ಪಯಣದಲ್ಲಿ ಮಜ ಇರ್ತದೆ.
ಎಲ್ಲ ದೊಡ್ಡ ನಗರಗಳ ಕಥೆಯೂ ಸ್ವೇಚ್ಛೆಯತ್ತಲೇ ವಾಲುತ್ತಿದೆಯಾದರೂ ವೇಗಾಸ್ ಅದೆಲ್ಲದರ ಮೇರು ಅನ್ನಬಹುದು. ಬೆಲ್ಲಾಜಿಯೋ ಮುಂದಿನ ಕಾರಂಜಿಯೆದುರಿನ ಅನುಭೂತಿಯನ್ನು ಕ್ಯಾಮರಾದಲ್ಲಾಗಲೀ ಪದಗಳಲ್ಲಾಗಲೀ ಹಿಡಿದಿಡಲು ಅಸಮರ್ಥಳಾಗಿದ್ದೇನೆ. ಆ ಕಾರಂಜಿ ಕೆರೆ ಅಷ್ಟು ದೊಡ್ಡದೂ, ಕಾರಂಜಿಗಳು ಅಷ್ಟು ದೊಡ್ಡವೂ ಆಗಿರುವುದರಿಂದ ನಮ್ಮ ಒಂದು ನೋಟದೊಳಗೇ ಅದರ ಉದ್ದ-ಅಗಲ-ಎತ್ತರಗಳನ್ನು ತುಂಬಿಕೊಳ್ಳುವುದೇ ಅಸಾಧ್ಯವಾಗಿತ್ತು. ಇನ್ನು ಕೃತಕ ಕಣ್ಣುಗಳನ್ನು ಹೊತ್ತ ಕ್ಯಾಮರಾ ಎಷ್ಟು ತುಂಬಿಕೊಂಡೀತು, ಹೇಳು! ನನಗೆ ದಕ್ಕಿದ್ದನ್ನು ಇಲ್ಲಿ ಬಿಕ್ಕಿ(ಹರಡಿ/ ಚೆಲ್ಲಿ)ದ್ದೇನೆ.
ಜ್ಯೋತಿ,
ಕ್ಯಾಸಿನೋ ಆಡಿದ್ರ?
ನಾನು ಮಕಾವ್ ಅನ್ನೋ ಚೀನಾದ ನಗರದಲ್ಲಿ ಆಡಿದ್ದೆ ಸ್ವಲ್ಪ ಹೊತ್ತು.
ತುಂಬಾ ಸುಂದರ ಫೋಟೋಗಳು
ಥ್ಯಾಂಕ್ಸ್
ಧನ್ಯವಾದಗಳು, ಗುರುಮೂರ್ತಿ.
ಕ್ಯಾಸಿನೋದಲ್ಲಿ ಆಡಲಿಲ್ಲ. ಸುಮ್ಮನೇ ನೋಡಿಕೊಂಡು ಬಂದೆವು. ತುಂಬಾ ಹಿಂದೆ ಹೋಗಿದ್ದಾಗ, ಒಬ್ಬೊಬ್ಬರೂ ಇಪ್ಪತ್ತು ಡಾಲರ್ ಇಟ್ಟುಕೊಂಡು ಅದಷ್ಟನ್ನೂ ಸ್ಲಾಟ್ ಮೆಷೀನ್ಗಳನ್ನ್ನು ಆಡಿ ಕೈಬೀಸಿಕೊಂಡು ಬಂದಿದ್ದೇವೆ. ಕ್ಯಾಸಿನೋದಲ್ಲಿ ಆಡುವ ಅನುಭವಕ್ಕಾಗಿ ಆಡಿದ್ದೇವೆ. ಸ್ಲಾಟ್ ಮೆಷೀನ್ ಅಲ್ಲದೆ ಬೇರಾವ ಆಟವೂ ನಮಗೆ ಬರದು. ಹಾಗಾಗಿ ಅವನ್ನೆಲ್ಲ ಮುಟ್ಟಲೂ ಹೋಗಿಲ್ಲ.
ಜ್ಯೋತಿ, ಪ್ರವಾಸ ಪುರವಣಿ - ೨, ಚಿತ್ರಗಳೊಡನೆ ವಿವರಭರಿತವಾಗಿ ಮೂಡಿದ್ದು ಇಷ್ಟವಾಯಿತು. ನನಗೂ ಪಾಪನಗರಿಗೆ ಹೋಗುವ ಆಸೆ! ಅದಕ್ಕಾಗಿ ಇನ್ನೂ "ಪುಣ್ಯ" ಸಂಚಯವಾಗಬೇಕಿದೆ. ಆಗ ನಿನ್ನ ಬರಹಗಳನ್ನು ಆಗ ಗೈಡ್ನಂತೆ ಉಪಯೋಗಿಸಿಕೊಳ್ಳುತ್ತೇನೆ.
ವೇಣಿ, ಈ ಪಾಪನಗರಿಗೆ ನಮ್ಮ ನಮ್ಮ ಕಿಸೆಯೊಳಗಿನ ‘ಪುಣ್ಯ’ ಎಂದಿಗೂ ಸಾಕಾಗುವುದಿಲ್ಲ. ಹಾಗೆನೇ, ‘ಆಆಆಆಆಗ’ ನನ್ನ ಈ ಬರಹದ ಗೈಡ್ ಕೂಡಾ ಸಾಲದಾಗಬಹುದು. ಇದು ಹಳೆಯದಾಗುವ ಮೊದಲು ಬನ್ನಿ.
ಸಚಿತ್ರ ಪ್ರವಾಸ ಪುರವಣಿ ಬಹಳ ಚನ್ನಾಗಿದೆರೀ. ಬೆಲಾಜಿಯೋದ ಸಂಗೀತ ಕಾರಂಜಿ ಎಷ್ಟು ಸರ್ತಿ ನೋಡಿದ್ರೂ ಮತ್ತೆ ನೋಡಬೇಕು ಅನ್ಸುತ್ತೆ. ಪ್ಯಾರಿಸ್ ಪ್ಯಾರಿಸ್ಸಿನ ಐಫೆಲ್ ಟವರ್ ಮೇಲಿಂದಲೂ ತುಂಬ ಚನ್ನಾಗಿ ಕಾಣ್ಸುತ್ತೆ. ಆದ್ರೆ ಆ ಎತ್ತರದಲ್ಲಿ ಸಂಗೀತ ಕೇಳ್ಸಲ್ಲ ಅನ್ಸುತ್ತೆ, ತೊನೆಯೋ ಕಾರಂಜಿ ಮಾತ್ರ ನೋಡಬಹುದು.
>>> ಕಾರಿನ ಸೀಟನ್ನು ಆದಷ್ಟು ಹಿಂದಕ್ಕೆ (ಹಿಂದಿನ ಸೀಟಿನಲ್ಲಿ ಕೂತಿದ್ದ ದೊಡ್ಡ ಐಸ್-ಚೆಸ್ಟ್ ತಡೆಯುವ ತನಕ) ವಾಲಿಸಿಕೊಂಡೆ.
ಕಾರಿನ ಏರ್ ಬ್ಯಾಗ್ ರಕ್ಷಿಸಲಿಕ್ಕೆ ಆಗದಷ್ಟು ಹಿಂದಕ್ಕೆ ಸೀಟ್ ವಾಲಿಸುವದು ಅಪಾಯಕಾರಿ. ೪-೫ ವರ್ಷಗಳ ಕೆಳಗೆ ಹಾಗೆ ಮಲಗಿಕೊಂಡವರೊಬ್ಬರ ಅಪಘಾತದ ಅನುಭವ ಕೇಳಿದ್ದೇನೆ. ಮುಂದಿನ ಲಾಂಗ್ ಡ್ರೈವುಗಳಲ್ಲಿ ಹಾಗೆ ಮಾಡುವದನ್ನ avoid ಮಾಡಿ ಪ್ಲೀಸ್ :).
-
ಅನಿಲ
"ಕಾರಿನ ಏರ್ ಬ್ಯಾಗ್ ರಕ್ಷಿಸಲಿಕ್ಕೆ ಆಗದಷ್ಟು ಹಿಂದಕ್ಕೆ ಸೀಟ್ ವಾಲಿಸುವದು ಅಪಾಯಕಾರಿ."
Thanks Anil. ಗೊತ್ತಿದ್ದೂ ಮಾಡ್ತಿರ್ತೀವಿ ತಪ್ಪು.
ಅನಿಲ್, ಧನ್ಯವಾದಗಳು.
ಪ್ಯಾರಿಸಿನ ಐಫೆಲ್ ಟವರ್ ಮೇಲಕ್ಕೆ ಸಂಗೀತ ಕೇಳಲಾರದು, ಬೀದಿಯ ಆ ಬದಿಗೇ ಸರಿಯಾಗಿ ಕೇಳುತ್ತಿರಲಿಲ್ಲ, ಇನ್ನು ಆ ಎತ್ತರಕ್ಕೆ ಹೇಗೆ ಕೇಳೀತು. ಅಲ್ಲಿಂದ ಸಮಗ್ರ ನೋಟ ಮಾತ್ರ ಸುಂದರವಾಗಿದ್ದೀತು; ತಿಳಿಸಿದ್ದಕ್ಕೆ ಥ್ಯಾಂಕ್ಸ್.
>>ಕಾರಿನ ಸೀಟನ್ನು ಹಿಂದಕ್ಕೆ ವಾಲಿಸಿಕೊಂಡು<< ನಿದ್ದೆ ಮಾಡೋದು ತುಂಬಾ ಅಪರೂಪ. ಅದೂ ಅಲ್ಲದೆ, ಚಾಲಕರ ಮೇಲಿನ ಅಗಾಧ ನಂಬಿಕೆಯೂ ಹಾಗೆ ಮಾಡಲು ಹಿಂದೆ ಮುಂದೆ ನೋಡದಿರಲು ಒಂದು ಕಾರಣ. ಕಾಳಜಿಯಿಂದ ಎಚ್ಚರಿಕೆ ಕೊಟ್ಟದ್ದಕ್ಕೆ ಮತ್ತೆ ಥ್ಯಾಂಕ್ಸ್ ಮಾರಾಯ. ಇನ್ನು ಹಾಗೆ ಮಾಡೋದಿಲ್ಲ.
ವೇಣಿ, ತಿಳಿದೂ ತಿಳಿದೂ ಇಂಥ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಆಗ ಇಂಥ ಸಹೃದಯರು ಯಾರಾದರೂ ನೆನಪಿಸಿ, ಮೆತ್ತಗಿನ ಬುದ್ಧಿಗುದ್ದು ಕೊಟ್ಟರೆ ಸ್ವಲ್ಪ ಎಚ್ಚರಿಕೆ ಹುಟ್ಟುತ್ತದೆ, ಅಲ್ವಾ?
hOy, naanu bellajiyo kaaranji eduru iddene. neevu kaanistaane ilvalla?
ಭಾಗವತರೆ, ಬೆಲ್ಲಾಜಿಯೋದ ಸಂಗೀತ ಮತ್ತು ಕಾರಂಜಿಯ ಶಬ್ದಗಳ ನಡುವೆ ನಿಮ್ಮ ಭಾಗವತಿಕೆ ನಮಗ್ಯಾರಿಗೂ ಕೇಳ್ತಾ ಇಲ್ಲ. ಆದ್ರೆ, ನಿಮಗೂ ನಮ್ಮ ಗಾಡಿ ಕಾಣಿಸ್ತಿಲ್ವ? ನಾವಿಲ್ಲೇ ಇದ್ದೇವೆ, ನಿಮ್ಮನ್ನು ಇಳಿಸಿದಲ್ಲೇ. ಬನ್ನಿ ಬನ್ನಿ, ಗಾಡಿ ಹತ್ತಿಕೊಳ್ಳಿ.
sakkat baraha!
ಇಲ್ಲೀತನ್ಕ ಬಂದು, ಓದಿ, ಪ್ರತಿಕ್ರಿಯೆ ದಾಖಲಿಸಿದ್ದಕ್ಕೆ ಧನ್ಯವಾದಗಳು ಚಕೋರ.
ಜ್ಯೋತಿಯವರಿಗೆ, ನಿಮ್ಮ ಪ್ರವಾಸಕಥನಕ್ಕೆ ಮೆಚ್ಚುಗೆ ಸೂಚಿಸಿದ ನಂತರ ಈಗ ತರ್ಲೆ ಸಮಯ. ತರ್ಲೆಗೆ ಎತ್ತಿಕೊಂಡ ವಾಕ್ಯ- "ಗಾಡಿಗೆ ಹಿಂದಿನ ಸಂಜೆಯೇ ಪೆಟ್ರೋಲ್ ತುಂಬಿಸಿಯಾಗಿತ್ತು."
ತರ್ಲೆ1: Las Ve"gas"ಗೆ ಹೋಗುವಾಗಲೂ ಗಾಡಿಗೆ ಪೆಟ್ರೋಲ್ ತುಂಬಿಸ್ಬೇಕಾಗ್ತದಾ?
ತರ್ಲೆ2: "ಗಾಡಿಗೆ ಹಿಂದಿನ ಸಂಜೆಯೇ ಪೆಟ್ರೋಲ್ ತುಂಬಿಸಿಯಾಗಿತ್ತು" ಮತ್ತು "ಹಿಂದಿನ ಸಂಜೆಯೇ ಗಾಡಿಗೆ ಪೆಟ್ರೋಲ್ ತುಂಬಿಸಿಯಾಗಿತ್ತು" - ಈ ಎರಡೂ ವಾಕ್ಯಗಳ ಅರ್ಥ ಒಂದೇನಾ?
ಈ ಬರಹ ಓದಿದಾಗ ನೆನಪಾಗಿದ್ದು ವೇಗಾಸ್ ನಲ್ಲಿ ನೋಡಿದ ಚೀನೀ ದಂಪತಿಗಳು. ಅವರಿಗೆ ಏನಿಲ್ಲ ಅಂದ್ರು ೬೦ ವಯಸ್ಸು ದಾಟಿತ್ತು. ಸ್ಲಾಟ್ ಮೆಶೀನ್ ಮುಂದೆ ಹ್ಯಾಪಿ ಮ್ಯಾನ್ ದು ಮೂರ್ತಿ ಇಟ್ಟು ಕಣ್ಮುಚ್ಚಿ ಪ್ರಾರ್ಥಿಸಿ (೮ ರಿಂದ ೧೦ ನಿಮಿಶವಂತು ಆಗಿತ್ತು) ಆಡಲು ಶುರು ಮಾಡಿದ್ರು. ಅಷ್ಟು ಭಕ್ತಿಯಿಂದ ಪ್ರಾರ್ಥಿಸಿದ್ದು ನಾನೆಲ್ಲೂ ನೋಡೇ ಇಲ್ಲ:-). ಎಷ್ಟು ಜನ ಅವ್ರನ್ನ ನೋಡ್ತಾ ನಿಂತಿದ್ರು, ಅವ್ರು ಅದನ್ನ ಕೇರೇ ಮಾಡ್ಲಿಲ್ಲ.
ವತ್ಸ, ನಿಮ್ಮ ತರ್ಲೆಗೆ ಯಾವಾಗಲೂ ಜಾಗ ಇದೆ ಇಲ್ಲಿ.
ತರ್ಲೆ೧: "ಲಾಸ್ ವೇ"ಗೆ ಹೋಗುವಾಗ "gas" ಇಲ್ಲದಿದ್ರೆ ಹೇಗೆ? ನೀವೇ ಹೇಳಿ.
ತರ್ಲೆ೨: ಓದುವವರು, ವಾಕ್ಯದ ನಡುವೆ ಕೊಡುವ ವಿರಾಮವನ್ನು ಹೊಂದಿಕೊಂಡು, ಅವರ ಮನಸ್ಥಿತಿಯನ್ನು ಅನುಸರಿಸಿಕೊಂಡು, ಈ ಎರಡು ವಾಕ್ಯಗಳ ಅರ್ಥಗಳಲ್ಲಿ ವ್ಯತ್ಯಾಸ ಕಂಡುಬರಬಹುದು. ಇಲ್ಲವಾದಲ್ಲಿ ವ್ಯತ್ಯಾಸ ಇಲ್ಲ.
ಏನು, ಯಾವಾಗ, ಏನನ್ನು/ಯಾವುದನ್ನು ಎನ್ನುವ ಪ್ರಶ್ನೆಗಳಿಗೆ ಉತ್ತರಗಳು ಸಮರ್ಪಕವಾಗಿಯೇ ಇವೆ. ಉಳಿದಂತೆ, ಅವರವರ ಭಾವಕ್ಕೆ...
ಚೆನ್ನಾಗಿದೆ ಭಾರ್ಗವಿ, ಜೂಜಿನಲ್ಲಿಯೂ ಭಕ್ತಿ. ಇಂಥ ತುಣುಕುಗಳು ನಮ್ಮ "ಅನುಭವ"ದ ಗಣಿಯನ್ನು ಸಮೃದ್ಧಗೊಳಿಸುತ್ತವೆ. ಹಂಚಿಕೊಂಡದ್ದಕ್ಕೆ ಥ್ಯಾಂಕ್ಸ್.
"ಅಮಲಿನಿಂದಲೋ ಆಸೆಯಿಂದಲೋ ಭುಜದಿಂದ ಜಾರುತ್ತಿರುವ ಉಡುಗೆಯ ಮೋಹನಾಂಗಿಯರೂ, ಅವರೆಡೆ(ದೆ)ಗೆ ಕಳ್ಳ ನೋಟ ಹರಿಸುತ್ತಲೇ ತಂತಮ್ಮ ನಲ್ಲೆಯರ ಸೊಂಟ ಬಳಸಿ ನಡೆಯುವ ನಲ್ಲರೂ..."- I feel, I got "caught" in the act [purely, on a lighter note]. Sagar
ಹೇಯ್ ಲೇಸರ್ ಜಾಣ! ನಿನ್ನ ಕಳ್ಳ ನೋಟ ಬೇರೆಯವರ ಕಣ್ಣಿಗೆ ಬೀಳೋದಿಲ್ಲ ಅಂದುಕೊಂಡಿದ್ದೆಯ? ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯೋವಾಗ ಲೋಕ ಕಣ್ಣುಮುಚ್ಚಿರತ್ಯೆ? You know better [surely, on an even lighter note].
Post a Comment