ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೧
ಪಯಣದ ತಯಾರಿಯಲ್ಲಿ....
ಈ ಪ್ರವಾಸ ಹೋಗಬೇಕೆಂದು ಕಳೆದ ಡಿಸೆಂಬರಿನಲ್ಲಿಯೇ ಅಂದುಕೊಂಡಿದ್ದೆವು. ಝಿಯಾನ್ ಮತ್ತು ಬ್ರೈಸ್ ಕ್ಯಾನಿಯನ್ಗಳಿಗೆ ಡಿಸೆಂಬರಲ್ಲಿ ಹೋದಾಗ ಹಿಮಪಾತವಾಗುತ್ತಿತ್ತು. ಎಲ್ಲೆಲ್ಲೂ ಬಿಳಿಬಿಳಿಯೇ ತುಂಬಿತ್ತು. ಹಲವಾರು ಕಡೆ ನೋಡಲಾಗಿರಲಿಲ್ಲ. ಕ್ಯಾನಿಯನ್ (ಕಣಿವೆ, ಕಮರಿ)ಗಳ ಸೌಂದರ್ಯ ಒಂಥರಾ ಘೋರಾದ್ಭುತದಂತೆ ಅನ್ನಿಸಿತ್ತು. ಬೂದು ಆಕಾಶದಡಿಯಲ್ಲಿ ಕಂಡೂಕಾಣದ ನೋಟಗಳು ತೃಪ್ತಿಕೊಟ್ಟಿರಲಿಲ್ಲ.
ಝಿಯಾನ್ ಕ್ಯಾನಿಯನ್- ವರ್ಜಿನ್ ನದಿಬ್ರೈಸ್ ಕ್ಯಾನಿಯನ್- ಹೂಡೂಸ್ ಮೇಲೆ ಹಿಮದ ರಾಶಿ
ಅದಕ್ಕೆಂದೇ ಮತ್ತೊಂದು ಪ್ರಯಾಣವನ್ನು ಯೋಜಿಸಿಕೊಂಡು, ಅವೆರಡರ ಜೊತೆಗೆ ಇನ್ನೂ ಮೂರು-ನಾಲ್ಕು ಸ್ಥಳಗಳನ್ನು ನೋಡಿಕೊಂಡು ಬರುವ ಆಲೋಚನೆ ಮಾಡಿದ್ದೆವು. ಆಗಸ್ಟ್ ೨೯ರ ಬೆಳಗ್ಗೆ ಹೊರಡುವಲ್ಲಿಯವರೆಗಿನ ಹಿನ್ನೋಟ ಈ ತುಣುಕು.
ಎರಡು ತಿಂಗಳಿಂದಲೇ ಪ್ಲಾನಿಂಗ್ ಶುರು: ಎಲ್ಲೆಲ್ಲಿ ಏನೇನು ನೋಡೋದು, ಎಷ್ಟು ದಿನ ಎಲ್ಲಿರೋದು, ಯಾವ್ಯಾವ ಹೋಟೆಲಲ್ಲಿ ಇಳಿದುಕೊಳ್ಳೋದು, ಊಟ-ತಿಂಡಿಗೇನು ಮಾಡೋದು... ಎಲ್ಲಕ್ಕೂ ಇಬ್ಬರೂ ತಲೆ ಹಾಕಿ ಲೆಕ್ಕ ಮಾಡಿ ಕೆಲವು ಜವಾಬ್ದಾರಿಗಳನ್ನು ನನ್ನವರೂ ಕೆಲವಷ್ಟನ್ನು ನಾನೂ ನಿಭಾಯಿಸಿಕೊಂಡೆವು. ಐದು ಕಡೆಗಳಲ್ಲಿ ಒಟ್ಟು ಆರು ದಿನಗಳ ಕ್ಯಾಂಪಿಂಗ್, ಒಂದೊಂದಾಗಿ ಮೂರು ದಿನ ಮೂರು ಕಡೆಗಳಲ್ಲಿ (ಮೂರು ದಿನಗಳ ಕ್ಯಾಂಪಿಂಗ್ ನಂತರದ ಒಂದಿನ) ಹೋಟೇಲ್ ವಾಸ- ಹೀಗೆ ಏರ್ಪಾಡು ಮಾಡಿಕೊಂಡೆವು.
ಹತ್ತು ದಿನಗಳಿಗಾಗುವಷ್ಟು ತಿಂಡಿಯ ಪೊಟ್ಟಣಗಳನ್ನು ತಂದಿಟ್ಟೆ. ಅಕ್ಕಿ ತೆಗೆದಿಟ್ಟೆ. ಕ್ಯಾಂಪಿಂಗಿಗಾಗಿ ಟೆಂಟ್, ಒಲೆ, ಹಾಸಿಗೆ, ಹೊದಿಕೆ, ದಿಂಬು, ಪಾತ್ರೆ, ನೀರಿನ ಫಿಲ್ಟರ್, ಮತ್ತಿತರ ಸಾಮಾನುಗಳನ್ನು ಜೋಡಿಸಿಕೊಂಡೆ. ಆಗಸ್ಟ್ ೨೮ರ ಶುಕ್ರವಾರ ಅಪರಾಹ್ನ, ಶುಂಠಿ, ಹಸಿಮೆಣಸು, ನೆಲಗಡ್ಲೆ ಒಗ್ಗರಣೆ ಮಾಡಿ ಉಪ್ಪಿಟ್ಟು ರವೆಯನ್ನು ಹಾಕಿ, ಗೋಡಂಬಿ, ಡ್ರೈ ತೆಂಗಿನ ತುರಿಯ ಜೊತೆ ತುಪ್ಪ ಹಾಕಿ ಘಮ್ಮೆನ್ನುವಂತೆ ಹುರಿದಿಡಬೇಕು (ಲೆಕ್ಕದಲ್ಲಿ ನೀರು ಕುದಿಸಿ, ಉಪ್ಪು ಹಾಕಿ, ಇದನ್ನು ಸೇರಿಸಿ, ಬೇಯಿಸಿದ್ರೆ ಉಪ್ಪಿಟ್ಟು ತಯಾರ್). ನಿಂಬೆ ಚಿತ್ರಾನ್ನಕ್ಕೆ ಮತ್ತು ಪುಳಿಯೋಗರೆಗೆ ಗೊಜ್ಜುಗಳನ್ನೇ ಮಾಡಿಡಬೇಕು (ಬಿಸಿ ಬಿಸಿ ಅನ್ನಕ್ಕೆ ಬೆರೆಸಿದ್ರೆ ಮುಗೀತ್). ನಿಂಬೆ ಹಿಂಡಿ ರಸ ಪುಟ್ಟ ಡಬ್ಬಿಯಲ್ಲಿ ಹಾಕಿಡಬೇಕು (ಉಪ್ಪಿಟ್ಟಿಗೆ ಬೇಕಲ್ಲ!). ಮನೆಯಲ್ಲಿ ಉಳಿಯಲಿದ್ದ ಟೊಮೇಟೋಗಳನ್ನು ತೊಳೆದು ಹೆಚ್ಚಿ ಫ್ರೀಝರಿಗೆ ಹಾಕಿಡಬೇಕು... ಈಯೆಲ್ಲ ಬೇಕುಗಳನ್ನು ಲೆಕ್ಕಹಾಕುತ್ತಾ, ಹಾಗಲಕಾಯಿ ಪಲ್ಯ ಮತ್ತು ಬೆಂಡೆಕಾಯಿ ಪಲ್ಯಗಳನ್ನೂ ಮೆಂತ್ಯ ಸೊಪ್ಪಿನ ಪರಾಠವನ್ನೂ ಮಾಡೋದಿಕ್ಕೆ ತರಕಾರಿ ಹೆಚ್ಚುತ್ತಿದ್ದೆ. ಎಂದೂ ಇಲ್ಲದ ಶನಿ ಅಂದೇ ವಕ್ಕರಿಸಿದಂತೆ, ಕರೆಂಟ್ ಹೋಯ್ತು, ಮೂರೂವರೆಗೆ! ಈ ಅಪಾರ್ಟ್ಮೆಂಟ್ಗಳಲ್ಲಿ ಕರೆಂಟ್ ಇಲ್ಲದಿದ್ರೆ ಮನೆಯೊಳಗೆ ಏನೂ ಸಾಗದು. ಎಲ್ಲವೂ ಕರೆಂಟ್ ಮಯ! ಹೆಚ್ಚುವ ಕೆಲಸಗಳನ್ನು ಮುಗಿಸಿ ನನ್ನವರ ದಾರಿ ಕಾದೆ.
ಐದೂಕಾಲರ ಸುಮಾರಿಗೆ ಬಂದರು. ಕಾಫಿಯೂ ಮಾಡೋಹಾಗಿಲ್ಲ. ಟ್ರಿಪ್ಪಿಗೆ ಹಾಲು, ಮೊಸರು, ಮಜ್ಜಿಗೆ, ಜ್ಯೂಸ್, ಐಸ್ ಬ್ಯಾಗ್ ಕೊಳ್ಳೋದಿತ್ತು; ಹೊರಟೆವು. ಹಾಗೇ ದಾರಿಯಲ್ಲಿ ಸ್ಟಾರ್ಬಕ್ಸ್ ಕಾಫಿ ತಗೊಂಡು ಅಂಗಡಿಗಳಿಗೆ ಭೇಟಿಯಿತ್ತು, ಆಯೆಲ್ಲ ಕೆಲಸಗಳನ್ನು ಮುಗಿಸಿಕೊಂಡು ಮನೆಗೆ ಬಂದಾಗ ಏಳರ ಸುಮಾರು. ಕರೆಂಟ್ ಬಂದಿತ್ತು. ಪರಾಠ ಮಾಡಿಮುಗಿಸಿ, ಊಟ ಮಾಡಿ ನಂತರ ಎರಡು ಪಲ್ಯಗಳನ್ನೂ ಎರಡು ಗೊಜ್ಜುಗಳನ್ನೂ ಮಾಡಿ, ರವೆ ಹುರಿದು ಮರುದಿನ ಬೆಳಗಿನ ಉಪಾಹಾರಕ್ಕೂ ಅದರಲ್ಲೇ ಒಂದಿಷ್ಟು ರವೆ ಎತ್ತಿಟ್ಟು ಉಳಿದದ್ದನ್ನು ಕಟ್ಟಿಟ್ಟೆ. ಎಲ್ಲವನ್ನೂ ಮುಗಿಸಿದಾಗ ಗಂಟೆ ಒಂದೂಮುಕ್ಕಾಲು. ಮೂರೂವರೆಗೆ ಎದ್ದು ನಾಲ್ಕೂವರೆಗೆ ಹೊರಡೋಣ ಎಂದಿದ್ದವರು ಹನ್ನೆರಡೂವರೆಗೆ ನಿದ್ರಿಸಿದ್ದರು. ಈಗ ಮಲಗಿದ್ರೆ ನನಗಂತೂ ಮೂರೂವರೆಗೆ ಏಳೋದು ಅಸಾಧ್ಯ, ನನ್ನ ಗುಣ ನನಗ್ಗೊತ್ತು. ಒಂದಷ್ಟು ಬ್ಯಾಗುಗಳನ್ನು ಅತ್ತಿತ್ತ ಸರಿಸ್ಯಾಡಿ ರಿ-ಪ್ಯಾಕ್ ಮಾಡಿದೆ. ನಿದ್ದೆ ಮಾಡದೇ ಇರುವದಕ್ಕಾಗಿ ಹುಡುಕಿ ಹುಡುಕಿ ಏನೇನೋ ಸಣ್ಣಪುಟ್ಟ ಕೆಲಸಗಳನ್ನು ಮಾಡಿದೆ. ಸುಮ್ಮನೆ ಶವರ್ ಕೆಳಗೆ ಅರ್ಧ ಗಂಟೆ ನಿಂತೆ. ಫ್ರೆಶ್ ಅನ್ನಿಸಿತು. ಅಷ್ಟರಲ್ಲಿ ಇವರೂ ಎದ್ದರು. ಮುಖ ತೊಳೆದು, ಕಾಫಿ ಕುಡಿದು, ಉಪ್ಪಿಟ್ಟು ಮಾಡಿ ಡಬ್ಬಿಗೆ ತುಂಬಿಕೊಂಡು, ಕಾಫಿ ಮಾಡಿ ಫ್ಲಾಸ್ಕಿಗೆ ಹಾಕಿಕೊಂಡು ಎಲ್ಲವನ್ನೂ ಕಾರಿಗೆ ಲೋಡ್ ಮಾಡಿ ಗಾಡಿ ಬಿಟ್ಟೆವು- ಆಗಸ್ಟ್ ೨೯, ಶನಿವಾರ ಬೆಳಗಿನ ನಾಲ್ಕೂಮುಕ್ಕಾಲಿಗೆ.
ಟ್ರಿಪ್ ಮೀಟರ್ ಸೆಟ್ ಟು ೦೦೦.೦
17 comments:
ಜ್ಯೋತಿ ಅಕ್ಕ,
ನಿಮ್ಮ ಪ್ರವಾಸ ಬರಹದ ಜತೆ ನಾನೂ ಪ್ರಯಾಣಕ್ಕೆ ರೆಡಿ !
i guess you will be taking us through an exciting trip !
waiting for the Journey to begin :)
ಜ್ಯೋತಿ ಅಕ್ಕಾ,
ತಯಾರಿ ಜೋರಾಗಿ ನಡೆದಿದೆ.ಊಟದ ತಯಾರಿ ನೋಡಿ ಒಂದು ಮನಸ್ಸು ಇಬ್ಬರು ಆರಾಮವಾಗಿ ಹೋಗಿಬರಲಿ ಅಂತಿದೆ. ಇನ್ನೊಂದು ಮನಸ್ಸು ಇಂಥ ಅವಕಾಶ ಜೀವನದಲ್ಲಿ ಪದೇಪದೇ ಸಿಕ್ಕಲ್ಲ,ಈಗಲೇ ಹೊರಡು ಅಂತಿದೆ. ಮೊದಲೇ ಗೊತ್ತಿದ್ದರೆ ಏನಾದರು ಮಾಡಿಕೊಂಡೆ ಬರ್ತಿದ್ದೆ. ಈಗ ಖುಷಿಲಿ ಹಾಗೇ ಬರ್ತಿದ್ದೀನಿ. ಇಳಿಸದೆ ಕರ್ಕೊಂಡು ಹೋಗ್ತೀರಿ ತಾನೇ?
ಸರಿ ಮತ್ಯಾಕೆ ತಡ ಹೊರಡೋಣಾ ಅಕ್ಕಾ:).
ಭಾರ್ಗವಿ
ಹೇಮಾ, ಭಾರ್ಗವಿ, ಇಬ್ಬರಿಗೂ ಸ್ವಾಗತ. ನೀವಿಬ್ಬರೇ ಅಲ್ಲ, ನಿಮ್ಮ ನಿಮ್ಮ ಚೇಲಾ-ಚೀಲಗಳ ಜೊತೆಗೇ ಬನ್ನಿ (ಓದು ಸಾಗುವಾಗ "ಮಂಚಿಸಲು" ತಿಂಡಿ ಚೀಲ ನಿಮ್ಮಲ್ಲಿರಲಿ). ಭಾರ್ಗವಿ, ಒಮ್ಮೆ ಹತ್ತಿಕೊಂಡ ಮೇಲೆ ಈ ಮನಸಿನ ಬಂಡಿಯಿಂದ ಯಾರಿಗೂ ಇಳಿದುಹೋಗಲು ಸಾಧ್ಯವಿಲ್ಲ. ಹಾಗಿದ್ದಾಗ, ನಾನೇ ಇಳಿಸಲಿ ಹೇಗೆ? ಮನದ ಈ ಬಂಡಿ ವನ್-ವೇ-ವಾಲ್ವ್ ಹೊಂದಿದೆಯಂತೆ!!
ಜ್ಯೋತಿ ಮೇಡಮ್,
ಅಲ್ಲೂ ನಿಮಗೆ ಕರೆಂಟು ತೊಂದರೇನಾ?
ನಿಮ್ಮ ತಯಾರಿಯೆಲ್ಲಾ ಚೆನ್ನಾಗಿದೆ...ನಾನು ಈಗ ನಿಮ್ಮ ಜೊತೆ ಹೊರಡುತ್ತಿದ್ದೇನೆ. ಎಲ್ಲಿ ಸಿಕ್ಕುತ್ತೀರಿ...
ಶಿವು, ಇಲ್ಲೂ ಕರೆಂಟ್ ತೊಂದರೆ- ಇಲ್ಲದಿಲ್ಲ. ಆದರೆ ತುಂಬಾ ತುಂಬಾ ಅಪರೂಪ. ನನ್ನ ಗಡಿಬಿಡಿಯ ಕೆಲಸಗಳ ಮಧ್ಯೆ ಕರೆಂಟ್ ಕಂಪೆನಿಯ ಯಾವುದೋ ಸಾಧನಕ್ಕೆ ಅಂದೇ ನಮ್ಮ ಪ್ರದೇಶದಲ್ಲೇ ತೊಂದರೆಯಾಗಿದ್ದು ಕಾಕತಾಳೀಯ.
ಬನ್ನಿ, ಬನ್ನಿ, ನೀವೂ ಬನ್ನಿ. ಎಲ್ಲರಿಗೂ ಜಾಗವಿದೆ ಈ ಬ್ಲಾಗ್-ಬಂಡಿಯಲ್ಲಿ. ಇಲ್ಲೇ ಇದೇ ಸ್ಥಳದಲ್ಲಿ ಬಂದಿರಿ. ಜೊತೆಗೆ ಹೋಗೋಣಂತೆ.
ಅಕ್ಕಾ,
ತಯಾರಿಯೇ ಇಷ್ಟು ಜೋರಾಗಿದೆ ಇನ್ನು ಪ್ರಯಾಣ ಹೇಗಿರಬೇಡ. ನೀವು ಕಟ್ಟಿಕೊಂಡ ತಿಂಡಿಯ ಆಸೆಯ ಜೊತೆಗೆ ಹೊಸ ಪ್ರದೇಶಗಳ ನೋಟ, ವಿವರಗಳನ್ನು ಮೆಲ್ಲಲು ನನ್ನ ಮಾನಸವೂ ಜೊತೆಗೂಡಿದೆ. ಬೇಗ ಬೇಗ ಪುರವಣಿಗಳನ್ನು ಹಾಕಿ ಪ್ಲೀಸ್!:)
ಮಾನಸಕ್ಕೂ ಸ್ವಾಗತ ಈ ಪಯಣಕ್ಕೆ. ಮನಸ್ಸಿಲ್ಲದ ಮಾರ್ಗ ಸುಗಮವಾಗಲಾರದು.
ಜ್ಯೋತಿಯವರೇ,
ಒಂದು ನಿಮಿಷ..ತಾಳ್ರೀ..ನಾವು ಬರ್ತಿವಿ ..
ಎನು ತಯಾರಿ..ಎನು ವಾಸನೆ..
ಮೇರಿಯಿಂದ ಎಲ್ ಕಮಿನೋವರೆಗೆ ಘಮಘಮ ವಾಸನೆ :)
-ಪಾತರಗಿತ್ತಿ
naanu barteeni. right poya
ಪಾತರಗಿತ್ತಿಯ ಮೂಗು ಸೂಕ್ಷ್ಮ ಅನ್ನುವ ವಿಚಾರ ತಿಳಿದಿತ್ತು. ಇವತ್ತು ಪ್ರೂಫ್ ಕೂಡಾ ಸಿಕ್ಕಿತು.
ಬನ್ನಿ ಶಿವ್; ನೀವಿಬ್ಬರೂ ಬನ್ನಿ ನಮ್ಮ ಜೊತೆಗೆ ಈ ಪಯಣದಲ್ಲಿ.
ಹ್ಮ್, ಈ ಟೂರಿನ ಟೀಮಿಗೆ ಕಂಡೆಕ್ಟರ್ ಬಾಕಿ ಇದ್ದ. ಭಾಗವತರಿಗಿಂತ ಒಳ್ಳೆಯ ನಿರ್ವಾಹಕ ಇನ್ನೆಲ್ಲಿ ಸಿಕ್ಕಾನು? ರೈಟ್ ಪೋಯಿ.
[ಪೋಯ= ಹೋಗೋಣವೆ? ಪೋಯಿ= ಹೋಗೋಣ.]
ಜ್ಯೋತಿ ಅಕ್ಕಾ...
ಎಲ್ಲರೂ ಬಂದಾಯ್ತಾ? ಬಂಡಿನೂ ರೆಡಿ. ರೈ.....ಟ್
ಬಂಡಿ ಬಿಟ್ಟು ಹೊರಡೋದುಂಟಾ? ಬಾ ಬಾ, ಹೋಗೋಣ.
ಜ್ಯೋತಿಯವರೆ, ಜೋರಾಗಿದೆ ತಯಾರಿ..ಧಾರಾವಾಹಿ ಮುಂದುವರಿಸಿ...ಸಸ್ಪೆನ್ಸ್ನಲ್ಲಿ ನಿಲ್ಲಿಸಿದ್ದೀರಿ :)
ನಮಸ್ಕಾರ ಸುಪ್ತದೀಪ್ತಿ.
ನಾನು ನಿಮ್ಮ ಬ್ಲಾಗ್ ಖಾಯಂ ಓದುಗಳು- ಆದ್ರೂ ಕಮೆಂಟಿಗಳಾಗಿದ್ದು ಇದೇ ಮೊದಲು ಅಂದುಕೊಳ್ತೇನೆ.
ಎಷ್ಟು ಚಂದ ಬರೀತೀರ್ರಿ..! ಈ ಪ್ರವಾಸ ಪುರವಣಿ ಓದಲಂತೂ ತುದಿಗಾಲ ಮೇಲೆ ನಿಂತಾಯ್ತು.
ನೀವು ಮಾಡುತ್ತಿರೋ ಅಡುಗೆ ತಯಾರಿ ಓದುವಾಗ ಇದೆಲ್ಲ ನಮ್ಮನೆ ಕಿಚನ್ನಲ್ಲೇ ನಡೀತಾ ಇದೆಯೇನೋ ಅನ್ನೋಥರ ಇತ್ತು!
ನಾನು ಮನೆ ಕೆಲ್ಸ ಮುಗಿಸಿಕೊಂಡು, ಗಂಡ,ಮಕ್ಳುಮರಿಗಳನ್ನು ಕಟ್ಟಿಕೊಂಡು ಬರೋದು ಲೇಟಾಗಿ ಹೋಯ್ತು. ಹೊಯ್ ಕಂಡಕ್ಟರ್ ಭಾಗವತ, ನಾನು ಉಸಿರುಗಟ್ಟಿಕೊಂಡು ಓಡಿ ಬರ್ತಾ ಇರೋದು ಕಾಣಿಸಿದ್ರೂ ರೈಟ್ ಪೋಯಾ ಅಂತೀಯಲ್ಲಾ? ನಿಂಗೇನು ಕಣ್ಣು ಕಾಣ್ಸಾಕಿಲ್ವಾ?
ವೇಣು, ಪೂರ್ಣಿಮಾ, ವೇಣಿ, ಬನ್ನಿ ಬನ್ನಿ; ಎಲ್ಲರಿಗೂ ಜಾಗ ಇದೆ.
ವೇಣು, ಸಸ್ಪೆನ್ಸ್ ಎಲ್ಲಿ ಬಂತು? ಗಾಡಿ ತಯಾರಾಗಿ ಹೊರಟಿದೆ ಅಂದಿದ್ದೇನಲ್ಲ! ಮುಂದಿನ ಕಂತು ಬರೆಸಿಕೊಳ್ತಿದೆ. ಅದು ಪೂರಾ ಸಜ್ಜಾಗಿ ವೇದಿಕೆಗೆ ಬಂದಾಗ, ಖೋ... ಆಯ್ತಾ?
ಪೂರ್ಣಿಮಾ, ಖಾಯಂ ಓದಗಳಾದರೂ ಮೊದಲನೇ ಕಮೆಂಟಿಸದ್ದರಿಂದ ಈ ಅಕ್ಷರಲೋಕಕ್ಕೆ ಸ್ವಾಗತ ಈಗಲೇ ಹೇಳಬೇಕಾಗಿದೆ. "...ತಯಾರಿ...ನಮ್ಮನೆ ಕಿಚನ್ನಲ್ಲೇ..." ಅಂತ ನಿಮಗನಿಸಿದ್ದು ಕರೆಂಟ್ ಕೈಕೊಟ್ಟದ್ದಕ್ಕಾ ಅಥವಾ ನನ್ನ ನಿಧಾನತ್ವಕ್ಕಾ? ಅದೇನೇ ಇರಲಿ, ನೀವು ಸೇರಿಕೊಂಡದ್ದು ಸಂತೋಷ.
ವೇಣಿಯಮ್ಮ, ಗಡಿಬಿಡಿ ಮಾಡ್ಬೇಡಿ. ನಿಮ್ಮ ಎಲ್ಲ ಕೆಲಸಗಳ ಮಧ್ಯೆ ಟೇಮ್ ಮಾಡ್ಕೊಂಡು ಬಂದ್ರಲ್ಲ. ನೋಡಿ, ನಿಮಗೆ ನಿರ್ದೇಶಕಿಯ ಸೀಟ್ ಖಾಲಿಯಿಟ್ಟಿದ್ದೇನೆ. ಇಲ್ಲೇ ಬನ್ನಿ. ಆರಾಮಾಯ್ತಾ?
Post a Comment