ನಮ್ಮ-ನಿಮ್ಮೊಳಗೆ-೦೬
ಸುಮಾರು ಇಪ್ಪತ್ತೈದರಿಂದ ಮೂವತ್ತೈದು ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಹರಡಿಕೊಂಡಿದ್ದ ಹಲವಾರು ನಂಬಿಕೆಗಳಲ್ಲಿ (ನೆನಪಿರುವ) ಕೆಲವನ್ನು ಇಲ್ಲಿ ಪೋಣಿಸಿದ್ದೇನೆ. ಇಂಥವು, ಇನ್ನೂ ಕೆಲವು ನಿಮ್ಮ ನಡುವೆಯೂ ಇರಬಹುದು. ಹಂಚಿಕೊಳ್ಳುವಿರಾ?
ಬಾಲ್ಯದ ಕೆಲವು ನಂಬಿಕೆಗಳು:
೦೧. ಹುಣಿಸೇ ಮರದಲ್ಲಿ/ ಆಲದ ಮರದಲ್ಲಿ ಭೂತ-ಪ್ರೇತ-ದೆವ್ವಗಳಿರುತ್ತವೆ.
೦೨. ದೆವ್ವ-ಪ್ರೇತಗಳಿಗೆ ಕಾಲು ಹಿಮ್ಮುಖವಾಗಿರುತ್ತದೆ, ಅಂಗೈ ತೂತಾಗಿರುತ್ತದೆ.
೦೩. ಅಮ್ಮನ ಹೊಕ್ಕುಳಿಂದ ಮಗು ಹೊರಗೆ ಬರುತ್ತದೆ.
೦೪. ಹುಡುಗಿಯರು ಮರ ಹತ್ತಿದರೆ, ಸೈಕಲ್ ಹೊಡೆದರೆ ಮುಂದೆ ಮಕ್ಕಳಾಗೋದಿಲ್ಲ.
೦೫. ಬೆಳ್ಳಕ್ಕಿ ನೋಡಿದ್ರೆ ಅದೃಷ್ಟ (ಗುಡ್ ಲಕ್).
೦೬. ಕೇರೆ ಹಾವಿನ ಬಾಲ ತಲೆಗೂದಲಿಗೆ ಮುಟ್ಟಿಸ್ಕೊಂಡ್ರೆ ಕೂದಲು ಊಊಊಊದ್ದ ಬೆಳೆಯುತ್ತದೆ.
೦೭. ಉದ್ದ ಬಾಲವಿರುವ ಹಸುವಿನ ಬಾಲದ ಕೂದಲನ್ನು ತಲೆಗೆ ಮುಟ್ಟಿಸಿಕೊಂಡ್ರೆ ನಮ್ಮ ಕೂದಲೂ ಉದ್ದ ಬೆಳೆಯುತ್ತದೆ.
೦೮. ಸಿಡುಬಿನ ಕಲೆ ಇರುವ ಮುಖದವರೆಲ್ಲ ಸಿಡುಕರು; ಅದಕ್ಕೇ ಅವರ ಮುಖದಲ್ಲಿ ಕಲೆ.
೦೯. ಗಾಡ್ ಪ್ರಾಮಿಸ್ ಹಾಕಿ ಪ್ರಾಮಿಸ್ಸಿಗೆ ತಪ್ಪಿದರೆ ಅಮ್ಮ-ಅಪ್ಪ-ನಾನು- ಮೂವರೂ ಸತ್ತು ಹೋಗುತ್ತೇವೆ.
೧೦. ಬಡವರು ಸಾಧು ವ್ಯಕ್ತಿಗಳು, ಸ್ನೇಹಜೀವಿಗಳು; ಶ್ರೀಮಂತರು ಜೋರು, ಸಿಡುಕರು (ಪಿಕ್ಚರ್ ಪ್ರಭಾವ).
೧೧. ಕಾಗೆ ಸ್ನಾನ ಮಾಡುವುದನ್ನು ನೋಡಿದರೆ ಅಪಶಕುನ.
೧೨. ಗುಬ್ಬಚ್ಚಿ ಸ್ನಾನ ಮಾಡುವುದನ್ನು ನೋಡಿದರೆ ಅಪಶಕುನ, ಸಾವಿನ ಸುದ್ದಿ ಕೇಳಬೇಕು.
೧೩. ಬಿಳಿಕಾಗೆ ಅಥವಾ ಕೊಳಕು ನಾಯಿ ಮುಟ್ಟಿದರೆ ಹೆಂಗಸರು ಮುಟ್ಟಾಗುತ್ತಾರೆ.
೧೪. ನಾಲಗೆಯಲ್ಲಿ ಕಪ್ಪು ಮಚ್ಚೆ ಇದ್ದವರು ಹೇಳಿದ್ದೆಲ್ಲ ಹೇಳಿದಂತೆಯೇ ಆಗುತ್ತದೆ.
೧೫. ಕಣ್ಣಿನ ಬಿಳಿ ಭಾಗದಲ್ಲಿ ಕಪ್ಪು ಮಚ್ಚೆಯಿದ್ದರೆ ಅಂಥವರ ದೃಷ್ಟಿ ಕೆಟ್ಟದ್ದು.
೧೬. ಅಂಗೈ ಅಥವಾ ಅಂಗಾಲಿನಲ್ಲಿ ಮಚ್ಚೆ ಇದ್ದವರು ಅದೃಷ್ಟವಂತರು.
೧೭. ತುಟಿಯ ಮೇಲೆ, ಕತ್ತಿನ ಮೇಲೆ ಮಚ್ಚೆಯಿದ್ದವರು ಅದೃಷ್ಟವಂತರು, ಒಳ್ಳೆಯ ಪ್ರೇಮಿಯನ್ನು ಪಡೆಯುತ್ತಾರೆ.
೧೮. ತಾಂಬೂಲ ತಿಂದಾಗ ತುಟಿ, ನಾಲಗೆ ತುಂಬಾ ಕೆಂಪಾದರೆ ಅವರ ಮೇಲೆ ಅವರ ಪ್ರಿಯತಮ/ ಪ್ರಿಯತಮೆಗೆ ಬಹಳ ಬಹಳ ಪ್ರೀತಿ.
೧೯. ಹಣೆಗೆ ಕುಂಕುಮ ಇಟ್ಟುಕೊಳ್ಳುವಾಗ ಅಕಸ್ಮಾತ್ ಮೂಗಿನ ತುದಿಯ ಮೇಲೆ ಕುಂಕುಮ ಬಿದ್ದರೆ, ಪತಿಯ ಪೂರ್ಣ ಪ್ರೀತಿ ಇವಳಿಗೇನೇ.
೨೦. ತಲೆ ಬಾಚಿಕೊಳ್ಳುವಾಗ ಬಾಚಣಿಗೆ ಕೈತಪ್ಪಿ ಕೆಳಗೆ ಬಿದ್ದರೆ ಅಂದು ಮಲ್ಲಿಗೆ ಮುಡಿಯಲು ಸಿಗುತ್ತದೆ.
23 comments:
ಇದೊಂದು ನಾನು ನಂಬಿದ್ದೆ.
ಆರು ಬೆರಳುಗಳಿದ್ದವರು ಅದೃಷ್ಟವಂತರು.
ನಿಜ, ಚಿಕ್ಕವರಿದ್ದಾಗ ಇಂಥಾ ಅನೇಕ ನಂಬಿಕೆಗಳಿದ್ದವು. ಈಗ ನೆನೆಸಿಕೊಂಡರೆ ನಗು ಬರುತ್ತದೆ
ಜ್ಯೋತಿ,
ಎಷ್ಟು ಸುಂದರವಾದ ನಂಬಿಕೆಗಳು! ಇವನ್ನು ಹಾಗೇ ಇಟ್ಟುಕೊಳ್ಳುವದೇ ಖುಶಿ ಕೊಡುತ್ತದೆ.
-ಕಾಕಾ
ಅಂತರ್ವಾಣಿ,
ಹೌದು, ಇದು ನಮ್ಮಲ್ಲೂ ಇತ್ತು; ಮರೆತಿದ್ದೆ. ನೆನಪಿಸಿದ್ದಕ್ಕೆ ಧನ್ಯವಾದಗಳು.
ದೀಪಸ್ಮಿತ,
ನಗು ಬರುತ್ತದೆ, ಅಚ್ಚರಿಯೂ ಆಗುತ್ತದೆ. ಇಂಥದ್ದೆಲ್ಲ ಇಟ್ಟುಕೊಂಡು ಎಷ್ಟು ಸುಂದರವಾಗಿ, ಮುಗ್ಧವಾಗಿ ಬದುಕುತ್ತಿದ್ದೆವಲ್ಲ! ಧನ್ಯವಾದಗಳು. ನಿಮ್ಮಲ್ಲಿದ್ದ ಇಂಥ ನಂಬಿಕೆಗಳನ್ನು ಹಂಚಿಕೊಳ್ಳುವಿರಾ?
ಕಾಕಾ,
ನಿಜ. ಇವನ್ನೆಲ್ಲ ನೆನಪಿಸಿಕೊಂಡಾಗ ಏನೋ ಕಳೆದುಹೋದದ್ದು ಮತ್ತೆ ಸಿಕ್ಕಿದ ಖುಷಿಯಾಗಿತ್ತು. ನಿಮ್ಮ ಬಾಲ್ಯದ ಇಂಥ ನೆನಪಿನ ತುಣುಕುಗಳನ್ನು ಹಂಚಿಕೊಳ್ಳುತ್ತೀರಾ?
ನಾವು (ನಾನು ಮತ್ತು ಸಮಕಾಲೀನರ ಚಿಕ್ಕ ಗುಂಪು) ಚಿಕ್ಕವರಾಗಿದ್ದಾಗ ಆನೆ ಲದ್ದಿ ತುಳಿದರೆ ಶಕ್ತಿವಂತರಾಗುತ್ತೇವೆ ಎಂದು ನಂಬಿಕೊಂಡಿದ್ದೆವು. ಒಮ್ಮೆ ನಮ್ಮೂರಿಗೆ ಸರ್ಕಸ್ ಕಂಪೆನಿ ಬಂದಿದ್ದಾಗ, ಆನೆ ಕಟ್ಟಿದ್ದ ಜಾಗವನ್ನೂ ಹುಡುಕಿಕೊಂಡು ಹೋಗಿದ್ದೆವು. ಜೊತೆಯವರೆಲ್ಲಾ ಸಮರೋತ್ಸಾಹದಿಂದ ಆನೆ ಲದ್ದಿ ತುಳಿಯುತ್ತಿದ್ದ ದೃಶ್ಯ ನನಗೇಕೋ ಅಸಹ್ಯ ಮೂಡಿಸಿ, ಶಕ್ತಿ ಬರದಿದ್ದರೂ ಬೇಡವೆಂದು ದೂರವೇ ನಿಂತುಬಿಟ್ಟೆ. ಆನೆ ಲದ್ದಿ ತುಳಿಯದಿದ್ದರೂ, ಅದರ ದರ್ಶನ ಮಾತ್ರದಿಂದಲೇ ಇರಬೇಕು, ತುಂಬಾ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಶಕ್ತಿವಂತಳಾಗಿಯೇ ಇದ್ದೇನೆ. :)
"ತಲೆ ಬಾಚಿಕೊಳ್ಳುವಾಗ ಬಾಚಣಿಗೆ ಕೈತಪ್ಪಿ ಕೆಳಗೆ ಬಿದ್ದರೆ ಅಂದು ಮಲ್ಲಿಗೆ ಮುಡಿಯಲು ಸಿಗುತ್ತದೆ." - ನಮ್ಮ ಕಡೆ ಹಣೆಗೆ ಕೆಳಗೆ ಬಿದ್ದರೆ, ನೆಂಟರು ಮನೆಗೆ ಬರುತ್ತಾರೆಂಬ ನಂಬಿಕೆ ಇದೆ.(ಇತ್ತು) ಈಗ ಫೋನ್ ಮಾಡಿ, ಮುಂಚೆ ತಿಳಿಸಿಯೇ ಬರುತ್ತಾದ್ದರಿಂದ ಈ ನಂಬಿಕೆ ಮಾಯವಾಗುತ್ತಿರಬೇಕು.
ಅಕ್ಕಾ,
ನೀವು ಹೇಳಿದ ಹೆಚ್ಚಿನ ನಂಬಿಕೆಗಳನ್ನೆಲ್ಲಾ ಬಾಲ್ಯದಿಂದಲೂ ಕೇಳುತ್ತಿದ್ದೇನೆ. ಜೊತೆಗೆ ಇಲ್ಲಿ ಕೆಲವು ನಂಬಿಕೆಗಳಿವೆ ನೋಡಿ..
*ಚೇರಂಟೆ(Milliped) ಹಿಡಿದು ಅದರ ಕಾಲನ್ನೆಣಿಸಿದರೆ ಹಣ ಸಿಗುವುದಂತೆ.
*ನಾಗರಹಾವು ಕಚ್ಚಿದರೆ, ತಕ್ಷಣ ಅದರ ಮೂತಿಯನ್ನು ಹಿಡಿದು ಕೊಂಡೇ ಚಿಕಿತ್ಸೆಗೆ ಹೊರಟೆರೆ ಎಷ್ಟೇ ಹೊತ್ತಾದರೂ ವಿಷ ಏರದಂತೆ..:)
* ಕಾಗೆಯೇನಾದರೂ ಮನೆಯ ಹೊಸ್ತಿಲು ದಾಟಿದರೆ ಮನೆಯಲ್ಲಿ ಯಾರಾದರೂ ಅಪಮೃತ್ಯುವಿಗೆ ಒಳಗಾಗುತ್ತಾರಂತೆ.... ಇತ್ಯಾದಿ ಇತ್ಯಾದಿ. (ಇನ್ನೂ ಹಲವಷ್ಟಿವೆ.)
ವೇಣಿ,
ಆನೆ ಲದ್ದಿಯ 'ಕಂತೆ' ಗೊತ್ತಿರಲಿಲ್ಲ. ತಮಾಷೆಯಾಗಿದೆ.
ಗುಟ್ಟುಮಾಡುತ್ತಿರಬೇಕು ನೀನು, ಸ್ನೇಹಿತರ ಜೊತೆಗೆ ನೀನೂ ಲದ್ದಿಯಲ್ಲಿ ಹೆಜ್ಜೆಯಿಟ್ಟಿರಬೇಕೆಂದೇ ನನ್ನ ಗುಮಾನಿ. ಇಲ್ಲವಾದರೆ ಇಷ್ಟಾದರೂ ಶಕ್ತಿವಂತಳಾಗಿರಲು ಸಾಧ್ಯವೇ ಇಲ್ಲ ನೀನು!
ಬಾಚಣಿಗೆ-ನೆಂಟರು: ಹ್ಮ್! ನಮ್ಮಲ್ಲಿನ ನಂಬಿಕೆಯ ಹಿನ್ನೆಲೆಯೂ ಅದೇ ಇದ್ದಿರಬಹುದೇನೋ ಅನ್ನಿಸುತ್ತಿದೆ. ಆಗೆಲ್ಲ ನಮ್ಮಲ್ಲಿ ಮಲ್ಲಿಗೆ ಬೆಳೆಯದಿದ್ದರೆ, ಮನೆಗೆ ಯಾರಾದರೂ ಬಂದವರು ಕೊಟ್ಟರಷ್ಟೇ ಸಿಗುತ್ತಿತ್ತು. ಹಾಗೇ, ಯಾರಾದರೂ ಬರುವವರು ಹೂವು-ಹಣ್ಣು ತರುತ್ತಿದ್ದುದು ಸಾಮಾನ್ಯ. ಅದೇ ಕಾರಣ ಇದ್ದಿರಬಹುದು ಅಂತ ಈಗ ಅನಿಸುತ್ತಿದೆ. ಇವೆರಡನ್ನೂ ಇಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಇನ್ನೇನಾದರೂ ಇವೆಯೆ?
ತೇಜೂ,
ಚೇರಂಟೆಯ ಕಾಲುಗಳ ಲೆಕ್ಕ ಕೇಳಿದ್ದೆ. ಹಾಗೇನೇ, ಚೇರಂಟೆ ಕಚ್ಚಿದರೆ ಅದರ ಕಾಲುಗಳನ್ನ ಲೆಕ್ಕ ಮಾಡಿದರೆ ವಿಷ ಇಳಿಯುತ್ತದೆ ಅಂತಲೂ ನಂಬಿದ್ದೆವು (ಅದರ ನೆನಪಿರಲಿಲ್ಲ, ಈಗ ನೆನಪಾಯ್ತು). ಮತ್ತೆರಡನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಇನ್ನುಳಿದವನ್ನೂ ಲಿಸ್ಟ್ ಮಾಡಿಟ್ಟಿರು. ಇನ್ನೊಮ್ಮೆ ನಿನ್ನ ಬ್ಲಾಗಲ್ಲೇ ಹಾಕಬಹುದು.
[ನಗಬಲ್ಲವರು ಮಾತ್ರ ಈ ಕಾಮೆಂಟ್ ಓದಿದರೆ ಸಾಕು]
ಒಂದು ತಾರ್ಕಿಕ ಕುಹಕ- ತ್ರಿವೇಣಿಯವರು ಆನೆಯ ಲದ್ದಿ ತುಳಿದ ದೃಶ್ಯದ್ದೇ ಚಲನಚಿತ್ರ ಮಾಡುತ್ತಿದ್ದರೆ ಅದಕ್ಕೆ ಆಸ್ಕರ್ ಅವಾರ್ಡ್ ಸಿಗುತ್ತಿತ್ತು (ಸ್ಲಂಡಾಗ್ ಮಿಲಿಯನೇರ್ಗೆ ಸಿಕ್ಕಿದಂತೆ).
ಇದರಲ್ಲಿ ತರ್ಕ (analogy) ಏನೆಂದು ಅರ್ಥವಾಗಿರಬಹುದೆಂದುಕೊಂಡಿದ್ದೇನೆ.
:-)
ವತ್ಸ,
ನಿಮ್ಮ ಅನಾಲಜಿ ಪಾದಗಳಲ್ಲಿ ಮಾತ್ರ ಉಳಿದದ್ದಕ್ಕೆ ಧನ್ಯವಾದಗಳು.
ಸುಪ್ತದೀಪ್ತಿ,
ಬಾಲ್ಯದ ಆ ನಂಬಿಕೆಗಳನ್ನು ಮತ್ತೆ ನೆನಪಿಸಿದ್ದಕ್ಕೆ ವಂದನೆಗಳು !
ಅದೊಂದು ಮುಗ್ಧ ನಂಬಿಕೆಗಳ ಲೋಕ..ಎಷ್ಟೊಂದು ಸುಂದರ..
ನಾನು ಕೇಳಿದ್ದು ಕೆಲವು..
ಹಲ್ಲಿ ತುಳಿದರೆ ಕೂಡಲೇ ಹಸಿರು ಎಲೆ ನೋಡಬೇಕು !
ಹಣ್ಣಿನ ಬೀಜ ನುಂಗಿದರೆ ಹೊಟ್ಟೆಯಲ್ಲಿ ಗಿಡ ಬೆಳೆಯುತ್ತೆ :)
ಶಿವ್,
ನಿಜ, ಆ ಮುಗ್ಧಲೋಕದಿಂದ ಎಷ್ಟು ದೂರ ಬಂದಿದ್ದೇವೆ ಅನಿಸುತ್ತೆ, ಒಮ್ಮೊಮ್ಮೆ.
ಹಲ್ಲಿ-ಹಸಿರೆಲೆಗಳ ಸಂಬಂಧ ಗೊತ್ತಿರಲಿಲ್ಲ.
ಹೊಟ್ಟೆಯೊಳಗೆ ಬೀಜ ಮರವಾಗಿ ಕಿವಿ-ಮೂಗುಗಳಿಂದ ಗೆಲ್ಲುಗಳು ಬಂದು ಅಲ್ಲಿಂದಲೇ ಮತ್ತೆ ಹಣ್ಣು ಕಿತ್ತು ತಿನ್ನಬಹುದೆಂದೂ ನಾವು ನಂಬಿದ್ದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
tumba chennagide. ee pattiyalli kelavu nanage hosatu !
ಸ್ವಾಗತ ಮತ್ತು ಧನ್ಯವಾದ ಭಟ್ರೆ. ಈ ಪಟ್ಟಿ ಪೂರ್ಣವಂತೂ ಅಲ್ಲ... ನಿಮಗೆ ಗೊತ್ತಿರುವುದನ್ನೂ (ಇಲ್ಲಿಲ್ಲದಿರುವುದನ್ನು) ತಿಳಿಸುವಿರಾ?
ತುಂಬಾ ಚೆಂದಗೆ ಬರೀತೀರಿ. ಅಮ್ಮನ ಹಬ್ಬಕ್ಕೆ ಮರೆಯದೆ ಬನ್ನಿ.
&&&&&&&&&&&&
ನಮಸ್ತೆ.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ವಂದೇ,
- ಶಮ, ನಂದಿಬೆಟ್ಟ
ಧನ್ಯವಾದಗಳು ಶಮ.
ನೀವು ನಡೆಸುವ ಅಮ್ಮನ ಹಬ್ಬ ಸಡಗರದಿಂದ ಸಾಗಲಿ ಎಂದು ಹಾರೈಸುತ್ತೇನೆ, ಗೋಳದ ಈ ಬದಿಯಿಂದ!
ಜ್ಯೋತಿ ಅಕ್ಕ ಇದರಲ್ಲಿ ಕೆಲವು ನನಗು ಗೊತ್ತಿರಲಿಲ್ಲ.ನಾನು ನಂಬಿದ್ದರಲ್ಲಿ ಒಂದು,ಬೆಳ್ಳಕ್ಕಿಗಳು ಒಟ್ಟಾಗಿ ಹಾರುತ್ತಿದ್ದುದನ್ನು ನೋಡಿದಾಗ ಕೈ ಮೇಲೆತ್ತಿ "ಬೆಳ್ಳಕ್ಕಿ ಬೆಳ್ಳಕ್ಕಿ ನನ್ನ ಉಂಗುರ ಕೊಡ್ತೇನೆ ನಿನ್ನ ಉಂಗುರ ನಂಗೆ ಕೊಡು" ಅಂದ್ರೆ ಆ ದಿನ ಉಗುರು ಮೇಲೆ ಬಿಳಿ ಚುಕ್ಕೆ(ಅದು ಬೆಳ್ಳಕ್ಕಿ ಕೊಟ್ಟ ಉಂಗುರ ಹ್ಹಹ್ಹಹ್ಹ) ಮೂಡುತ್ತೆ. ಆಗ ಖಂಡಿತ ಹೊಸಬಟ್ಟೆ ಸಿಗುತ್ತೆ. ಅಯ್ಯೋ ಇದೆಲ್ಲ ನಂಬಲ್ಲ ಅಂತ ಬಾಯಲ್ಲಿ ಹೇಳುತ್ತಿದ್ದರು ಮನಸಲ್ಲಿ ಆಗ ನಂಬಿದ್ದಂತು ನಿಜ.
PSP.
ಪಿ.ಎಸ್.ಪಿ., ಎಷ್ಟು ಸುಂದರವಾಗಿದೆ ಬೆಳ್ಳಕ್ಕಿಗಳ ಉಂಗುರ. ಮುಂದಿನಸಾರಿ ನಾನೂ ಕೇಳುತ್ತೇನೆ; ಹೇಗೂ ನಮ್ಮ ಊರಿನಲ್ಲಿ ಮನೆ ಮುಂದಿನ ಗದ್ದೆಗೆ ಎಂಟ್ಹತ್ತಾದರೂ ಬರುತ್ತವೆ (ಅದೇ ನನ್ನ ಪ್ರೊಫೈಲ್ ಚಿತ್ರ). ಇಲ್ಲಿ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
ಶಾಲೆಗೆ ತಡವಾಗಿ ಹೋಗುತ್ತಿರುವಾಗ ಕೆಂಬೂತವನ್ನು ನೋಡಿದರೆ ಮೇಷ್ಟ್ರ ಬೈಗುಳ ತಪ್ಪುತ್ತೆ ಅನ್ನೋ ನಂಬಿಕೆ ನನ್ನ ಬಾಲ್ಯದಲ್ಲಿತ್ತು :-)
ಅನ್ನಪೂರ್ಣ, ಸ್ವಾಗತ ಮತ್ತು ಧನ್ಯವಾದಗಳು.
ಹ್ಮ್, ಚೆನ್ನಾಗಿದೆ ಇದು; ಮೊದಲು ಕೇಳಿರಲಿಲ್ಲ. ಜೊತೆಗೆ, ಕೆಂಬೂತವನ್ನು ಹುಡುಕುತ್ತಾ ಮಕ್ಕಳು ಇನ್ನೂ ತಡವಾಗಿ ಶಾಲೆಗೆ ಹೋದರೆ?
ಹೂಂ.. ಕೆಂಬೂತವನ್ನು ಹುಡುಕಿ, ಕಾಣಿಸದೇ ಹೋದರೆ, ಇಂದು ನನ್ನ ತಿಥಿ ನಡೆಯುವುದು ಖಂಡಿತಾ ಎನ್ನುವ ದುಃಖ ಹೊತ್ತು, ಗೊತ್ತಿರುವ, ಗೊತ್ತಿಲ್ಲದ, ಎಲ್ಲಾ ದೇವರುಗಳ ಮೇಲೂ ಭಾರ ಹಾಕಿ ಶಾಲೆಗೆ ಹೋಗಿದ್ದೂ ಉಂಟು :D
ಓಹೋ, ಅದೂ ಹೌದಲ್ಲ! ಇದ್ದ ಬದ್ದ ದೇವರಿಗೆಲ್ಲ ಅಂದು ಬಿಡುವಿಲ್ಲ ಹಾಗಾದ್ರೆ.
ಹಲೋ ಜ್ಯೋತಿ ಮೇಡಮ್.. ನೀವು ಹೇಳಿದ್ರಲ್ಲಿ %18 ರಷ್ಟು ನಾನು ನಂಬಿದ್ದೆ .. ಇಸ್ಟೇ ಅಲ್ಲದೆ
"ಕೋರೆ ಹಲ್ಲು ಇದ್ದವರು ಅತೀ ಬುದ್ದಿವಂತರು ..ಅತೀ ಅದ್ರುಷ್ಟ ಶಾಲಿಗಳು ಅನ್ನೋದೂ
ಆ ತರಹದ ನಂಬಿಕೆಗಳಲ್ಲಿ ಒಂದಾಗಿತ್ತು .... "
ಅವೆಲ್ಲ ಸುಳ್ಳು ಅಂತ ತಿಳಿದದ್ದು ನನಗೆ ಕೋರೆ ಹಲ್ಲು ಬಂದ ಮೇಲೆ ...
ಹೀಗೆ ಈ ನಂಬಿಕೆಗಳು ಹುಟ್ಟಿದ್ದು ಹೇಗೆ ಅನ್ನೋದನ್ನ ತಿಳಿದವರನ್ನು ಕೇಳಿದಾಗ ಸಿಕ್ಕ ಸಮಾಧಾನಕರ ಉತ್ತರ ಅಂದ್ರೆ
" ಕೋರೆ ಹಲ್ಲು ಇರುವವರು ನೋಡಲು ಸುಂದರವಾಗಿ ಆಕರ್ಷಕವಾಗಿ ಇರೋದಿಲ್ಲ "ಹಾಗಾಗಿ ಅಂತವರ ಸಮಾಧಾನಕ್ಕೆ ಇವೆಲ್ಲ ಅನ್ನೋದೂ ಅಂತಾ ತಿಳೀತು ನೋಡಿ " :D
ಸ್ವಾಗತ ಮತ್ತು ಧನ್ಯವಾದಗಳು ರಂಜಿತಾ. ನೀವು ಹೇಳಿದ ನಂಬಿಕೆಯನ್ನು ನಾನು ಕಳಿದ್ದಿಲ್ಲ. ಆದರೆ ಕೆಲವಾರು ನಂಬಿಕೆಗಳ ಹಿಂದಿನ ಉದ್ದೇಶ ಮಾತ್ರ ನೀವು ಹೇಳಿದಂಥದ್ದೇ ಹೌದು. ಅಂಥದ್ದೇ ಇನ್ನೊಂದು- ಸೀಳು ಬಾಯಿ (cleft palate) ಇದ್ದವರು ಲಕ್ಕಿ ಅಂತ ಕೇಳಿದ್ದೆ, ಮರೆತುಹೋಗಿತ್ತು, ಅಷ್ಟೇ.
Post a Comment