ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Thursday, 1 May 2008

ನಮ್ಮ-ನಿಮ್ಮೊಳಗೆ-೦೩

ಸಂದೇಹ-೦೧: ಶುಭದಾಳಿಂದ:
"ನನಗೆ ಹಿಪ್ನೋಸಿಸ್ ಥೆರಪಿಯ ಬಗೆಗೇ ಹೆಚ್ಚಿನ ಮಾಹಿತಿ ಕೊಡುತ್ತೀರಾ? ಸಮ್ಮೋಹನದಲ್ಲಿದ್ದಾಗ ವ್ಯಕ್ತಿ ಪೂರ್ವಸ್ಮೃತಿಯನ್ನು ತಂದುಕೊಳ್ಳುವುದು ಹೇಗೆ ಸಾಧ್ಯವಾಗುತ್ತದೆ?"

ಸಂದೇಹ-೦೨: ಯು.ಆರ್.ಭಟ್ (ರಾಜೆಂದ್ರ)ರಿಂದ:
"ಹಿಪ್ನೊಸಿಸ್ ಥೆರಪಿ, ಅಥವಾ ಪಾಸ್ಟ್ ಲೈಫ್ ರಿಗ್ರೆಷನ್‍ಗಳಿಂದ ತಂದುಕೊಳ್ಳುವ ಹಳೆಯ ಘಟನೆಗಳ ನೆನಪುಗಳು... ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳನ್ನು ನಿವಾರಿಸಲು ಯಾವ ರೀತಿಯಲ್ಲಿ ಕಾರಣವಾಗುತ್ತವೆ..?"

ಪ್ರತಿಕ್ರಿಯೆ: ಇವೆರಡೂ ಪ್ರಶ್ನೆಗಳು ಒಂದಕ್ಕೊಂದು ಪೂರಕವಾದ್ದರಿಂದ ಒಟ್ಟಿಗೇ ಉತ್ತರಿಸುವ ಪ್ರಯತ್ನ ಮಾಡುತ್ತೇನೆ.
ಮೊದಲ ಪ್ರಶ್ನೆಗೆ ಪೂರ್ವಭಾವಿ ಉತ್ತರವಾಗಿ ಸ್ಮೃತಿ/ನೆನಪು ಅಂದರೆ ಏನು, ಎಲ್ಲಿರುತ್ತದೆ, ಹೇಗೆ "ನೆನಪು" ಆಗುತ್ತದೆ, ಎಂಬ ವಿಷಯಗಳನ್ನು ಸಂಕ್ಷಿಪ್ತವಾಗಿ "ನಮ್ಮ-ನಿಮ್ಮೊಳಗೆ -೦೧"ರಲ್ಲಿ ತಿಳಿಸಿದ್ದೇನೆ.

ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದಾಗ, ಯಾವ ಕಾರಣಕ್ಕಾಗಿ ರೆಗ್ರೆಷನ್ ಬಯಸಿದ್ದಾರೆ ಅನ್ನುವುದರ ಮೇಲೆ ವ್ಯಕ್ತಿಯ ಸಬ್-ಕಾನ್ಷಿಯಸ್ ಮೈಂಡ್ (ಸುಪ್ತ ಪ್ರಜ್ಞೆ) ನೆನಪಿನ ಆಳದ ಪದರಗಳಿಂದ ಬೇಕಾದ ನೆನಪುಗಳನ್ನು ಹೆಕ್ಕಿ ತರುತ್ತದೆ. ಸಮ್ಮೋಹನದಲ್ಲಿದ್ದಾಗ ಕೆಲಸ ಮಾಡುವಂಥದ್ದು ನಮ್ಮ ಸುಪ್ತ ಪ್ರಜ್ಞೆ. ಅಲ್ಲಿಂದ ನೆನಪಿಸಿಕೊಂಡ ವಿಷಯಗಳು, ಚಿಕಿತ್ಸಕನ ಸಂದೇಶಗಳ ಮೇಲೆ ಜಾಗೃತ ಪ್ರಜ್ಞಾವಲಯಕ್ಕೂ ಹಾದು ಬರುತ್ತವೆ (ಚಿಕಿತ್ಸಕನ ಸಂದೇಶವಿಲ್ಲದಿದ್ದಲ್ಲಿ, ಸುಪ್ತಪ್ರಜ್ಞೆಯು ಈ ನೆನಪನ್ನು ಜಾಗೃತವಲಯಕ್ಕೆ ತಂದುಕೊಳ್ಳದಿರುವ ಸಾಧ್ಯತೆಯಿದೆ. ಹಾಗಾದಾಗ ವ್ಯಕ್ತಿಗೆ ಸಮ್ಮೋಹನದಿಂದ ವಾಸ್ತವಕ್ಕೆ ಬಂದಾಗ ಆ "ನೆನಪುಗಳು" ನೆನಪಿರುವುದಿಲ್ಲ). ಆದ್ದರಿಂದ ನೆನಪು ಅನ್ನುವಂಥಾದ್ದು ಜಾಗೃತ ಪ್ರಜ್ಞೆಯ ವಲಯಕ್ಕೆ ಬಂದದ್ದು ಮಾತ್ರವೇ ಆಗಬೇಕಿಲ್ಲ. ನಮ್ಮ ನೆನಪುಗಳೆಲ್ಲ ನಮ್ಮವೇ ಮತ್ತು ಸದಾ ನಮ್ಮ ಪ್ರಜ್ಞೆಯ ಪದರಗಳ ಒಳಗೆ ಹುದುಗಿರುವಂಥವು.

ಈಗಲೂ ನಮ್ಮ ಜೀವನದ ಯಾವುದೋ ಒಂದು ಘಟನೆ, ಒಂದು ಹಾಡಿನ ಗುನುಗು, ಒಂದು ಮಾತಿನ ಎಳೆ, ನಮ್ಮನ್ನು ನಮ್ಮ ಬಾಲ್ಯದ ಮರೆತೇ ಹೋದಂತಿದ್ದ ಕ್ಷಣಗಳನ್ನು ನೆನಪಿಗೆ ತರುತ್ತವಲ್ಲವೆ? ಸಮ್ಮೋಹನದಲ್ಲೂ ಹಾಗೆಯೇ. ಸಮ್ಮೋಹನಕ್ಕೆ ಒಳಗಾದ ಕಾರಣದ ಎಳೆ ಹಿಡಿದು ಅದಕ್ಕೆ ಪೂರಕವಾದ ನೆನಪಿನ ಎಳೆಗಳನ್ನು ಸುಪ್ತಪ್ರಜ್ಞೆ ತನ್ನದೇ ಆಳದ ಪದರಗಳಿಂದ ಮೇಲ್ಪದರಕ್ಕೆ ತಂದುಕೊಂಡು (ನೆನಪಿಸಿಕೊಂಡು), ಅದರಿಂದ ಈಗಿನ ಜೀವನಕ್ಕೆ ಅಗತ್ಯವಾದ ಸಂದೇಶವನ್ನು ಪಡೆದುಕೊಳ್ಳುತ್ತದೆ. ಅಥವಾ ಆಗಿನ ಗೊಂದಲದ ಮೇಲೆಯೇ ಈಗಲೂ ಗೊಂದಲಮಯ ಮನಸ್ಸೇ ಇರುವುದಾದರೆ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ (ಇದೀಗ ಎರಡನೇ ಪ್ರಶ್ನೆಯ ವ್ಯಾಪ್ತಿಗೆ ಬಂದೆವು).

ಮೊದಲನೆಯದಾಗಿ, ಸಮ್ಮೋಹನದಲ್ಲಿ ನೆನಪಿಸಿಕೊಳ್ಳುವ ಹಳೆಯ ನೆನಪುಗಳಿಂದ ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳೆಲ್ಲವೂ ನಿವಾರಣೆಯಾಗುವುದಿಲ್ಲ. ಹಾಗೆಯೇ, ಪ್ರಸ್ತುತ ಮನೋವ್ಯಥೆಗಳೆಲ್ಲವೂ ಪೂರ್ವಸ್ಮೃತಿಗಳ ಮೇಲೆಯೇ ನಿಂತಿರುವುದಿಲ್ಲ. ಕೆಲವೊಂದು ತೊಂದರೆಗಳು, ವ್ಯಥೆಗಳು, ಗೊಂದಲಗಳು, ಪದೇ ಪದೇ ಕಾಡುವ ಕನಸುಗಳು ಪೂರ್ವಸ್ಮೃತಿಯಲ್ಲಿ ಬೇರುಗಳಿರಿಸಿಕೊಂಡಿರುತ್ತವೆ. ಒಂದೆರಡು ನಿದರ್ಶನಗಳ ಮೂಲಕ ಇದನ್ನು ಸುಲಭದಲ್ಲಿ ವಿವರಿಸಬಹುದು.

ನನ್ನದೇ ಸರಳ ಉದಾಹರಣೆ ಕೊಡುತ್ತೇನೆ (ಯಾವುದೇ ಮನೋವ್ಯಥೆಗಳಲ್ಲ, ಅಂಥ ತೊಂದರೆ ಸದ್ಯಕ್ಕಿಲ್ಲ):
(೧) ನನಗೆ ಯಾವಾಗಲೂ ನದಿ, ನೀರು, ಜಲಪಾತಗಳ ಬಗ್ಗೆ ಹಂಬಲ, ಒಲವು, ಒಂಥರಾ ಕುತೂಹಲ, ನೋಡಿದಷ್ಟೂ ತಣಿಯದ ಆಸಕ್ತಿ. ಇದ್ಯಾಕೆ ಹೀಗೆ ಅನ್ನುವ ಪ್ರಶ್ನೆ ನನ್ನನ್ನು ಹಲವಾರು ಬಾರಿ ಕಾಡಿದ್ದಿದೆ. ಉತ್ತರ ಸಿಕ್ಕಿರಲಿಲ್ಲ. ಆಸ್ಟಿನ್'ನಲ್ಲಿ ಡಾ. ವೈಸ್ ನಡೆಸಿದ ರೆಗ್ರೆಷನ್ ಥೆರಪಿ ಕಾರ್ಯಾಗಾರದಲ್ಲಾದ ಅನುಭವದಲ್ಲಿ, ಮತ್ತು ಅದರ ನಂತರದ ಒಂದೆರಡು ದಿನಗಳಲ್ಲಿ ಅರೆ-ಮಂಪರು (ರಾತ್ರೆ ಪೂರ್ತಿನಿದ್ದೆಗೆ ಜಾರುವ ಮೊದಲು ಮತ್ತು ಬೆಳಗ್ಗೆ ಪೂರ್ತಿ ಎಚ್ಚರಾಗುವ ಮೊದಲು) ಸ್ಥಿತಿಯಲ್ಲಿದ್ದಾಗ ಕನಸಿನಂತೆ ತೋರಿಬಂದ ಕೆಲವು ವಿವರಗಳಲ್ಲಿ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದೆ ಅಂದುಕೊಳ್ಳುತ್ತೇನೆ. ಎರಡು ಸಾವಿರ ವರ್ಷಗಳ ಹಿಂದಿನ ಆ ನನ್ನ ಜೀವನದಲ್ಲಿ ನದಿ/ತೊರೆ ಮತ್ತು ಜಲಪಾತ ಅಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ನನ್ನ ನೋವು ನಲಿವುಗಳ ಜೊತೆ ಬೆಸೆದುಕೊಂಡ ಬಂಧವಾಗಿತ್ತು. ಹಾಗೂ ಅಂದಿನ ನನ್ನ ಹೆಸರೂ ನೀರಿಗೆ ಸಂಬಂಧಿಸಿದ್ದಾಗಿತ್ತು. ಇವೆಲ್ಲ ಬರೀ ಕಾಕತಾಳೀಯವೇ? ಹಾಗೆಂದೇ ಅಂದುಕೊಂಡರೂ ಆ ನಂತರ ನನ್ನನ್ನು "ನನಗ್ಯಾಕೆ ನೀರಿನ ಮೇಲೆ ಮೋಹ?" ಅನ್ನುವ ಪ್ರಶ್ನೆ ಕಾಡಿಲ್ಲ.

(೨) ಹಲವಾರು ಬಾರಿ, ನಾನು ಗುಹೆಯೊಂದರಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿ ಒದ್ದಾಡಿದಂತೆ ಕನಸುಬಿದ್ದು ಕಸಿವಿಸಿಗೊಂಡು, ಗಾಬರಿಗೊಂಡು, ಗಾಳಿಗಾಗಿ ಹಂಬಲಿಸುತ್ತಾ ನಡುರಾತ್ರೆ ಎದ್ದದ್ದಿದೆ. ಹಾಗೆಂದು ಅದು ನನ್ನ ದಿನಗಳ ಸಮತೋಲ ತಪ್ಪಿಸುವಷ್ಟು ತೀವ್ರವಾಗಿರಲಿಲ್ಲ, ಅಥವಾ ನಾನು ಅದನ್ನು ಅಷ್ಟು ತೀವ್ರವಾಗಿ ಪರಿಗಣಿಸಿರಲಿಲ್ಲ (ಪದೇ ಪದೇ ಬೀಳುವ, "ನೈಟ್-ಮೇರ್" ಎಂದು ಕರೆಯಲ್ಪಡುವ, ಭಯಾನಕ ಕನಸುಗಳಿಂದ ವ್ಯಕ್ತಿಯ ದೈನಂದಿನ ಬದುಕು ಅಲ್ಲೋಲ ಕಲ್ಲೋಲ ಆಗುವುದೂ ಇದೆ; ಕನಸಿನ ವಿವರಗಳು ನಿಜವಾಗಿಯೂ ಎದುರಿಗೇ ಬಂದಂತೆ ಭ್ರಮಿತರಾಗುವವರೂ ಇದ್ದಾರೆ. ಇದೂ ಒಂದು ಮನೋವ್ಯಥೆಯೇ). ಇತ್ತೀಚೆಗೆ ಮುಗಿದ ಹಿಪ್ನೋಸಿಸ್ ತರಗತಿಗಳಲ್ಲಿ ರೆಗ್ರೆಷನ್ ಕೂಡಾ ಒಂದು ಪಾಠವಾಗಿತ್ತು. ಅಂಥ ಒಂದು ದಿನ, ನನ್ನ ಸಹಪಾಠಿ ನನ್ನನ್ನು ನಿಧಾನವಾಗಿ ಸಮ್ಮೋಹನ ಸ್ಥಿತಿಗೆ ಒಯ್ದು, "ನಿನ್ನ ಈಗಿನ ಜೀವನಕ್ಕೆ ಪ್ರಸ್ತುತವೆನಿಸುವ ನೆನಪುಗಳನ್ನು ತಂದುಕೋ. ನೆನಪುಗಳ ಸಾಮ್ರಾಜ್ಯದಲ್ಲಿ ನಿನಗೆ ಬೇಕಾದಲ್ಲಿಗೆ ಹೋಗು. ಸಮಯದ ಅವಕಾಶ ಮೀರುತ್ತಿದ್ದಂತೆ ನಾನು ಮತ್ತೆ ನಿನ್ನನ್ನು ವಾಸ್ತವಕ್ಕೆ ಕರೆತರಲು ನಿರ್ದೇಶಿಸುತ್ತೇನೆ. ಅಲ್ಲಿಯವರೆಗೆ ನಿನಗೆ ಬೇಕೆಂದಲ್ಲಿಗೆ ಹೋಗಿ ಬಾ" ಅಂದಳು.

ಮೊದಲು ಒಂದೆರಡು ಬೇರೆ ಬೇರೆ ತುಣುಕುಗಳನ್ನು ಸಿನಿಮಾ ಚಿತ್ರಗಳಂತೆ ಅಲ್ಲವಾದರೂ, ಗಾಢವಾದ ಭಾವನೆಗಳಿಂದ ಅನುಭವಿಸುತ್ತಾ ಯಾವುದೋ ಒಂದು ಕ್ಷಣದಲ್ಲಿ ಅದೇ ಉಸಿರುಗಟ್ಟಿಸುವ ಭಾವನೆಯುಂಟಾಯಿತು. ನನ್ನ ಕ್ರಿಟಿಕಲ್ ಮೈಂಡ್ ತಲೆಯೆತ್ತಿ, `ಇದ್ಯಾಕೆ ಹೀಗೆ?' ಅಂದಿತು, ಅಷ್ಟೇ. ಮರುಕ್ಷಣದಲ್ಲೇ ಯಾವುದೋ ಆದಿಮಾನವ ನಾನಾಗಿದ್ದೆ. ವಿಶಾಲ ಕೊಠಡಿಯಂಥ ಗುಹೆ. ಅದರ ಒಂದು ಬದಿಯಲ್ಲಿ ದೊಡ್ಡ ಬೆಂಕಿ. ನನ್ನ ಮೈಯೋ... ಬರೀ ರೋಮ-ಮಯ! ಯಾವುದೇ ಬಟ್ಟೆಗಳಿಲ್ಲ. ಬೆಂಕಿಕುಂಡದ ಒಂದು ಬದಿಗೆ ನನ್ನವಳು- ಇನ್ನೊಂದು ಆದಿಮಾನವಿ. ಅವಳಿಗೂ ಯಾವುದೇ ಬಟ್ಟೆಗಳಿಲ್ಲ. ಅಲ್ಲೇ ಎರಡು ಗುಂಡು-ಗಂಡುಗಳು ಅಂಬೆಗಾಲಿಡುತ್ತಾ ಓಡಾಡುತ್ತಿವೆ. ನೆಲವೆಲ್ಲ ಹೇಗ್ಹೇಗೋ ಕಿಚಪಿಚ ಇದೆ.

ಬೆಂಕಿಯಿಂದ ದೊಡ್ಡ ಎತ್ತಿನ ಕಾಲಿನಂಥದ್ದನ್ನು ನನ್ನವಳು ನನ್ನ ಕೈಗಿಡುತ್ತಾಳೆ. ಅಲ್ಲೇ ನಡುವಿನಲ್ಲಿದ್ದ ಬಂಡೆಯ ಮೇಲೆ ಕೂತು ಹಲ್ಲಿನಿಂದ ಕಬ್ಬನ್ನು ಸಿಗಿದು ತಿನ್ನುವಂತೆ ಅದನ್ನು ಸಿಗಿಯತೊಡಗುತ್ತೇನೆ ("ಹಾಗೆ ಸಿಗಿಯಬೇಕೆಂದು ನನಗೆ ಹೇಳಿಕೊಟ್ಟವರಾರು? ಅಯ್ಯೋ ನಾನು ಶಾಕಾಹಾರಿ, ಇದನ್ನು ಯಾಕೆ ಹೀಗೆ ತಿನ್ನುತ್ತಿದ್ದೇನೆ?" ನನ್ನ ಕ್ರಿಟಿಕಲ್ ಮೈಂಡ್ ಟೀಕಿಸುತ್ತಿದೆ). ಅವಳೂ ಇನ್ನೊಂದು ಕಾಲು-ಮಾಂಸವನ್ನು ತೆಗೆದುಕೊಂಡು ಮಕ್ಕಳನ್ನು ಕರೆಯುತ್ತಿದ್ದಾಳೆ (ನಾವೀಗ ಬೆಕ್ಕನ್ನೋ ನಾಯಿಯನ್ನೋ ಕರೆಯುವಂತೆ). ಅಷ್ಟರಲ್ಲಿ ಭೂಮಿ ನಡುಗಿ, ಗುಹೆಯ ಮೇಲ್ಛಾವಣಿ ನಮ್ಮೆಲ್ಲರ ಮೇಲೆ ಕುಸಿಯುತ್ತದೆ. ಮತ್ತೆ ಯಾವತ್ತಿನ ಕನಸಿನಂತೆ ಉಸಿರಿಗಾಗಿ ಪರದಾಡುತ್ತೇನೆ, ಗಾಳಿಗಾಗಿ ಹುಡುಕಾಡುತ್ತೇನೆ. ನನ್ನ ಈ ಗೊಂದಲ ಕಂಡು ನನ್ನ ಸಹಪಾಠಿ ನಿಧಾನವಾಗಿ ನನ್ನನ್ನು ವಾಸ್ತವಕ್ಕೆ ಕರೆತರುತ್ತಾಳೆ. ನಾವಿದ್ದ ಕೋಣೆಯ ಗಾಳಿ ಹೊಸತೆಂಬಂತೆ ಭಾಸವಾಗುತ್ತದೆ ನನಗೆ. ಇವಿಷ್ಟೂ ನಡೆದದ್ದು ಒಟ್ಟು ಏಳು ನಿಮಿಷಗಳ ಅವಧಿಯಲ್ಲಿ. ಕಾಕತಾಳೀಯವೋ ಎಂಬಂತೆ, ಆಮೇಲೆ ನನಗೆ ಅಂಥ ಕನಸು ಇಂದಿನವರೆಗೆ ಬಿದ್ದಿಲ್ಲ!!

ಈಗ ಮನೋವ್ಯಥೆಯ ವಿಚಾರಕ್ಕೆ ಬಂದರೆ, ಇಲ್ಲಿ ಹೇಳಿದ ಎರಡರಲ್ಲಿ ಯಾವುದೇ ಒಂದು ಕಾರಣಕ್ಕೆ ವ್ಯಕ್ತಿಗೆ ಮನೋವ್ಯಥೆ ಉಂಟಾಗಬಹುದು. ಪದೇ ಪದೇ ಬೀಳುವ ಕನಸೂ ಮನೋವ್ಯಥೆಗೆ ಕಾರಣವಾಗಬಹುದು. ನೀರಿನ ಬಗ್ಗೆ ತೀರದ ಕುತೂಹಲ, ಆಸಕ್ತಿ ಹೆಚ್ಚಾಗಿ, ಜೀವನ ಸುಗಮವಾಗದಷ್ಟೂ ತೀವ್ರವಾಗಿ, ತೊಂದರೆಯಾಗಬಹುದು. ಅಥವಾ ಬೇರಿನ್ಯಾವುದೇ ಕಾರಣಕ್ಕೂ ಮನೋವ್ಯಥೆ- ಅಥವಾ ಸುಗಮ ಜೀವನಕ್ಕೆ ತೊಂದರೆ- ಉಂಟಾಗಬಹುದು. ವ್ಯಕ್ತಿ ಸಮ್ಮೋಹನ ಚಿಕಿತ್ಸೆ ಬಯಸಿ ಬಂದಾಗ ಮೊದಲು ಸರಳ ಮಾತುಕತೆಯಾಡಿ ಬಂದ ಉದ್ದೇಶ, ಕಾಡುವ ವಿಷಯಗಳನ್ನು ತಿಳಿದುಕೊಂಡೇ ಸಮ್ಮೋಹಿತ ಸ್ಥಿತಿಗೆ ಚಿಕಿತ್ಸಕ ಕರೆದೊಯ್ಯುತ್ತಾರೆ. ಅಲ್ಲಿ ಸರಿಯಾದ ನಿರ್ದೇಶನಗಳನ್ನು ಕೊಡುತ್ತಾ ನೆನಪಿನ ತುಣುಕನ್ನು ಆಳದಿಂದ ಆರಿಸಿ ತರಲು ಆದೇಶಿಸುತ್ತಾರೆ. ಅದರ ಜೊತೆಗೆ ಸಂದರ್ಭಕ್ಕೆ ಸರಿಯಾಗಿ ಇತರ ಹಿನ್ನೆಲೆ, ಮುನ್ನೆಲೆಗಳನ್ನು ಪರೀಕ್ಷಿಸಲಾಗುತ್ತದೆ. ಬಳಿಕ ವ್ಯಕ್ತಿಯನ್ನು ಸಮ್ಮೋಹನದಿಂದ ಎಚ್ಚರಿಸಿ ವಾಸ್ತವಕ್ಕೆ ಕರೆತಂದು, ಆ ಎಲ್ಲ ನೆನಪಿನ ತುಣುಕುಗಳು ಈಗಿನ ಜೀವನಕ್ಕೆ ಹೇಗೆ ಪ್ರಸ್ತುತವೆಂಬುದನ್ನು ವಿಶ್ಲೇಷಿಸಲಾಗುತ್ತದೆ. ಚಿಕಿತ್ಸಕನ ನಿರ್ದೇಶನದಲ್ಲಿ, ಕಣ್ಗಾವಲಿನಲ್ಲಿ, ವ್ಯಕ್ತಿ ತನ್ನ ಹಳೆಯ ನೆನಪುಗಳನ್ನು ಕೆದಕಿ ಅಲ್ಲಿಂದ ಒಂದಿಷ್ಟು ರಾಡಿಯನ್ನು ಜಾಗೃತ ಪ್ರಜ್ಞೆಯ ಮೂಲಕ ಹೊರಹಾಕಿ ಒಳಗಿನ ನೀರನ್ನು ಸ್ವಲ್ಪ ತಿಳಿಗೊಳಿಸಿಕೊಳ್ಳಬಹುದು. ಈ ಮೂಲಕ ಕಾಡುವ ವ್ಯಥೆ ದೂರಾಗುತ್ತದೆ.

ಶುಭದಾ, ರಾಜೇಂದ್ರ ಮತ್ತು ಓದುಗರೇ, ನಿಮ್ಮ ಸಂಶಯ, ಸಂದೇಹ ಇನ್ನೂ ಬಗೆಹರಿಯಲಿಲ್ಲವಾದರೆ, ಇನ್ನಷ್ಟು ವಿವರಣೆ, ಉದಾಹರಣೆಗಳನ್ನು ಕೊಡೋಣ. ನೀವು ಕೇಳಬೇಕು, ಅಷ್ಟೇ.

15 comments:

sunaath said...

ಜ್ಯೋತಿ,
ಈ ಜನ್ಮದಲ್ಲಿಯ traumatic situationsಗಳಿಂದ ಹಾಗು ಆ ಸಮಯದ unresolved emotionsಗಳಿಂದ ಮಾನಸಿಕ ಸಮಸ್ಯೆಗಳು ಉದ್ಭವಿಸುವವು ಎಂದುಕೊಂಡಿದ್ದ ನನಗೆ,
ನಿನ್ನ ಅನುಭವಗಳನ್ನು ಓದಿದ ಬಳಿಕ, memories carried through previous lives also can upset you ಅಂತ ಗೊತ್ತಾಗಿ ವಿಸ್ಮಯವಾಯಿತು.

Shree said...

ಹಾಗಾದ್ರೆ ನಿಜ್ವಾಗ್ಲೂ ಹಿಂದಿನ ಜನ್ಮ ಅನ್ನೋದು ಇದೆ ಅಂತಾಯ್ತು... ಈ ವಾದ ಸರಿ ಅನ್ನೋದಾದ್ರೆ ನಂಗೆ ನನ್ ಹಿಂದಿನ ಜನ್ಮ ತಿಳ್ಕೋಬೇಕು ! :) ಜ್ಯೋತಿ ಅಕ್ಕ ಸಹಾಯ ಮಾಡಿ ಪ್ಲೀಸ್...

ಸುಪ್ತದೀಪ್ತಿ suptadeepti said...

ಕಾಕಾ, ನಿಜ, ನಿಮ್ಮ ಹಾಗೇ ನಾನು ಬಹಳ ಕಾಲ ನಂಬಿದ್ದೆ. ಜೊತೆಗೆ, "ಎಲ್ಲವೂ ಇದೇ ಒಂದು ಜನ್ಮದಲ್ಲಿಯೇ ಆಗುವಂಥದ್ದು; ಹಿಂದೆ-ಮುಂದೆ ಎಲ್ಲ ಏನಿಲ್ಲ. ಅವೆಲ್ಲ ಪಲಾಯನವಾದ" ಅಂತೆಲ್ಲ ಮೊಂಡು ವಾದ ಮಾಡ್ತಿದ್ದೆ. ಈಗ ಇವನ್ನೆಲ್ಲ ಕಲಿಯುತ್ತಿರುವಾಗ ನಾನೆಷ್ಟು ಅವಜ್ಞೆಯಿಂದಿದ್ದೆ ಅನ್ನುವ ಅರಿವಾಗಿದೆ. ತಿದ್ದಿಕೊಳ್ಳಲು ಅವಕಾಶವಿದೆ, ಸಮಯವಿದೆ. ಸರಿ ದಾರಿಗೆ ಬಂದಿದ್ದೇನೆ ಅನ್ನುವ ಹುರುಪು ಇದೆ.

ಶ್ರೀ, ಪೂರ್ವಜನ್ಮ-ಪುನರ್ಜನ್ಮ ಇವೆ ಅಂತ ನಾನೂ ಈಗ ಗಟ್ಟಿಯಾಗಿ ನಂಬಿದ್ದೇನೆ. ಸಹಾಯ ಮಾಡೋಣವಂತೆ, ಪರವಾಗಿಲ್ಲ. ಎಲ್ಲಿ, ಯಾವಾಗ, ಹೇಗೆ, ಎಲ್ಲ ಹೊಂದಿಸಿಕೊಳ್ಳಬೇಕು.

Chevar said...

your blog has been featurised in Kannada Prabha.

http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20080504151325&nDate=

ಸುಪ್ತದೀಪ್ತಿ suptadeepti said...

Thank you Chevar. I also thank whoever published it in Kannada Prabha.

Anonymous said...

chennaagide akka, nanna prashne amele keluttene.

urbhat [Raj] said...

ನಿಮ್ಮ ವಿವರಣೆ ಚೆನ್ನಾಗಿದೆ. ಧನ್ಯವಾದಗಳು. ಇನ್ನಷ್ಟು ಉದಾಹರಣೆಗಳಿದ್ದಲ್ಲಿ ದಯವಿಟ್ಟು ಬರೆಯಿರಿ.

ಹಾಗೆನೇ ಇನ್ನೊಂದು ಸಣ್ಣ ಪ್ರಶ್ನೆ... " ನೀವು ಸಸ್ಯಾಹಾರಿಗಳೊ, ಮಾಂಸಾಹಾರಿಗಳೋ..?"

ಸುಪ್ತದೀಪ್ತಿ suptadeepti said...

@ಗೆಳತಿ: ನಿಮ್ಮ ಪ್ರಶ್ನೆ ಕೇಳಿ, ಉತ್ತರ ಗೊತ್ತಿದ್ದರೆ ಖಂಡಿತಾ ಹೇಳುತ್ತೇನೆ.

@ಯು.ಆರ್.ಭಟ್: ಈಗ ಯಾಕಪ್ಪಾ ಆ ಪ್ರಶ್ನೆ?

ಈ ಜನ್ಮದಲ್ಲಿ ಸಂಪ್ರದಾಯಕ್ಕೆ, ಅನುಕೂಲಕ್ಕೆ, ಮತ್ತು ಪೋಷಕಾಂಶಗಳಿಗೆ ತೊಂದರೆಯಾಗದಂತೆ-
ಹೈನು-ಶಾಕಾಹಾರಕ್ಕೆ ಬದ್ಧಳಾಗಿಯೇ ಇದ್ದೇನೆ. ಆಯ್ತಾ?

ಮನಸ್ವಿನಿ said...

ಅಕ್ಕ,

ಪುನರ್ಜನ್ಮಗಳು ಇವೆ ಅಂದಾಗ, ಒಬ್ಬ ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದಾಗ,ಅವನ ಯಾವ ಜನ್ಮವನ್ನು ಅವನು ಕಂಡು ಕೊಳ್ಳುತ್ತಾನೆ? ಇಂತಹ ಒಂದು ರೆಗ್ರೆಷನ್ ಇಂದ ಒಂದಕ್ಕಿಂತ ಹೆಚ್ಚು ಜನ್ಮಗಳು ಕಾಣಲಾಗುತ್ತವೆಯೇ? ಈ ತರಹದ ಅನುಭವ ಯಾರಿಗಾದರು ಆದದ್ದರ ಮಾಹಿತಿ ಇದೆಯೇ?

೨ ನೇ ಸಂದೇಹಕ್ಕೆ ನೀಡಿದ ಪ್ರತಿಕ್ರಿಯೆಯ ಈ ವಾಕ್ಯದಲ್ಲಿ

’ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದಾಗ, ಯಾವ ಕಾರಣಕ್ಕಾಗಿ ರೆಗ್ರೆಷನ್ ಬಯಸಿದ್ದಾರೆ ಅನ್ನುವುದರ ಮೇಲೆ ವ್ಯಕ್ತಿಯ ಸಬ್-ಕಾನ್ಷಿಯಸ್ ಮೈಂಡ್ (ಸುಪ್ತ ಪ್ರಜ್ಞೆ) ನೆನಪಿನ ಆಳದ ಪದರಗಳಿಂದ ಬೇಕಾದ ನೆನಪುಗಳನ್ನು ಹೆಕ್ಕಿ ತರುತ್ತದೆ. ’

ಯಾವ ಕಾರಣ ಎಂದರೆ ಏನು? ಕಾರಣವಿಲ್ಲದೇ ನಮ್ಮ ಹಿಂದಿನ ಜನ್ಮಗಳ ಬಗ್ಗೆ ಕಂಡುಕೊಳ್ಳಲಾಗುವುದಿಲ್ಲವೇ? ಒಂದು ಬ್ಲ್ಯಾಂಕ್ ಮೈಂಡ್ ಇಟ್ಟುಕೊಂಡು?

ಸುಪ್ತದೀಪ್ತಿ suptadeepti said...

ಮನಸ್ವಿನಿ: "ಒಂದು ರೆಗ್ರೆಷನ್ ಇಂದ ಒಂದಕ್ಕಿಂತ ಹೆಚ್ಚು ಜನ್ಮಗಳು ಕಾಣಲಾಗುತ್ತವೆಯೇ?"-- ಹೌದು, ಸಾಧ್ಯವಿದೆ.

ಇಲ್ಲಿ ಹೇಳಿದ ನನ್ನ ಅನುಭವಗಳ ಪೈಕಿ ಎರಡನೆಯದರಲ್ಲಿ, ಶುರುವಿಗೆ ಬೇರೆಯೇ ಎರಡು ನೆನಪ ತುಣುಕುಗಳನ್ನು ಕಂಡು ಮತ್ತೆ ಮೂರನೆಯದಾಗಿ "ಆದಿ ಮಾನವ"ನ ನೆನಪಿಗೆ ಹಾರಿದ್ದೆ. ಸಮಯಾನುಕ್ರಮದಿಂದ ಮೊದಲೆರಡು ನೆನಪುಗಳು ಅನುಕ್ರಮವಾಗಿಲ್ಲದಿರಬಹುದು, ಆದರೆ ಮೂರನೆಯದ್ದು ಇವೆರಡಕ್ಕಿಂತಲೂ ಹಿಂದಿನದ್ದೆಂದು ಹೇಳಬಹುದು. ಹೀಗೆ, ಯಾವುದೇ ಒಂದು ಅನುಕ್ರಮಣಿಕೆಯಿಲ್ಲದೆ ನೆನಪುಗಳು ಎದ್ದು ಬರುತ್ತವೆ. ಅದರ ನಿರ್ಧಾರ ಸುಪ್ತಪ್ರಜ್ಞೆಯದ್ದು. ಯಾವುದು ಈಗ ಪ್ರಸ್ತುತ, ಅಗತ್ಯ ಅನ್ನುವುದನ್ನು ಅದೇ ನಿರ್ಧರಿಸಿ ನೆನಪುಗಳನ್ನು ಹೆಕ್ಕಿ ತರುತ್ತದೆ.

ರೆಗ್ರೆಷನ್ನಿಗೆ ಕಾರಣ ಮತ್ತು ನೆನಪು:

ವ್ಯಕ್ತಿಯೊಬ್ಬ ರೆಗ್ರೆಷನ್ ಬಯಸಿ ಬಂದಾಗ, ಯಾವುದೋ ತೊಂದರೆಯ ಪರಿಹಾರಕ್ಕೆಂದು ಚಿಕಿತ್ಸಕನ ನೆರವು ಬಯಸಿದಾಗ, ಚಿಕಿತ್ಸಕನ ನಿರ್ದೇಶನಗಳ ಮೇರೆಗೆ ನಮ್ಮ ಸುಪ್ತನಮಸ್ಸು ಹಳೆಯ ನೆನಪುಗಳನ್ನು ಹುಡುಕುತ್ತದೆ. ನೆರವು ಕೋರಿ ಬಂದಾಗ ಸುಪ್ತಮನಸ್ಸು ಕೂಡಾ ತುಸು ಗೊಂದಲಮಯವಾಗಿಯೇ ಇರುತ್ತದೆ ಅನ್ನಬಹುದು. ಆದ್ದರಿಂದ ಚಿಕಿತ್ಸಕನ ಮಾತುಗಳ ದಿಕ್ಸೂಚಿಯ ಅಗತ್ಯವಿರುತ್ತದೆ. ಸುಮ್ಮನೇ ರೆಗ್ರೆಷನ್ ಬಯಸಿದ್ದಾದರೆ, ಸಮ್ಮೋಹಕ (ಹಿಪ್ನಾಟಿಸ್ಟ್)ನ ನಿರ್ದೇಶನದ ಮಾತುಗಳಿಲ್ಲದಿದ್ದರೆ, ನಮಗೆ ನಾವೇ ಸ್ವ-ಸಮ್ಮೋಹನ ಮಾಡಿದ್ದಾದರೆ, ಆಗ ನಮ್ಮ ಪ್ರಜ್ಞೆಯೇ ನೆನಪ ನೌಕೆಯ ನಾವಿಕ. ತನಗೆ ಬೇಕಾದಲ್ಲಿಗೆ ಪಯಣಿಸಬಲ್ಲದು. ನೆನಪುಗಳ ಅಗಾಧ ಸಾಗರದಲ್ಲಿ ತನಗಿಚ್ಛೆ ಬಂದಲ್ಲಿಗೆ ನಾವೆ ನಡೆಸಬಲ್ಲದು. ಅಥವಾ ಯಾವುದೇ ನೆನಪುಗಳ ಅಲೆ ಹೊಡೆಯದಂತೆ, ಶಾಂತ ಸರೋವರದಲ್ಲಿ ಸುಮ್ಮನೇ ತೇಲುತ್ತಾ ಪ್ರಶಾಂತ ಸ್ಥಿತಿ ಅನುಭವಿಸಬಹುದು. ಈ ಪ್ರಶಾಂತ ನಿರಾಳ ಸ್ಥಿತಿಯೂ ನಮ್ಮ ಸ್ವಾಸ್ಥ್ಯಕ್ಕೆ ಬಹಳಷ್ಟು ಉಪಕಾರಿ. ಗೊಂದಲಗಳನ್ನು ದೂಡಿ ಮನಸ್ಸನ್ನು ಶಾಂತಗೊಳಿಸಲು ಸುಲಭ ದಾರಿ. ಅದನ್ನು ಯಥೇಚ್ಚ ಅನುಭವಿಸಬಹುದು. ಇದಕ್ಕೆ ಸ್ವ-ಸಮ್ಮೋಹನ ಒಳ್ಳೆಯ ಮಾರ್ಗ. ಪ್ರಯತ್ನಿಸಬಹುದು.

Shubhada said...

ಅಕ್ಕ, ಊರಿಗೆ ಹೋಗಿದ್ದೆ. ಹಾಗಾಗಿ ಉತ್ತರಿಸೋಕೆ ತಡವಾಯ್ತು. ನಾನೂ ಅಷ್ಟೆ, ಪುನರ್ಜನ್ಮ ಎಲ್ಲ ಸುಳ್ಳು ಅಂತ ಬಲವಾಗಿ ನಂಬಿದ್ದೆ. ಈಗ ನಿಮ್ಮ ಉತ್ತರ ಓದಿ ತುಂಬ ವಿಸ್ಮಯವಾಗುತ್ತಿದೆ. ಸುಲಭವಾಗಿ ಅರ್ಥ ಆಗೋ ಹಾಗೆ ತುಂಬ ಸರಳವಾಗಿ ವಿವರಣೆ ಕೊಟ್ಟಿದ್ದೀರಿ. ನಿಮಗೆ ತುಂಬ ಧನ್ಯವಾದಗಳು. ಅಂದ ಹಾಗೆ, ನನಗೂ ನನ್ನ ಹಿಂದಿನ ಜನ್ಮದ ಬಗ್ಗೆ ಸ್ವಲ್ಪ ಕುತೂಹಲ ಆಗ್ತಿದೆ ಈಗ ;-) ಊರಿಗೆ ಬಂದಾಗ ಹೇಳ್ತೀರಲ್ಲ :-)

ಸುಪ್ತದೀಪ್ತಿ suptadeepti said...

ಊರಿಗೆ ಬಂದಾಗ ಖಂಡಿತಾ ತಿಳಿಸುತ್ತೇನೆ. ಈಗಾಗ್ಲೇ ಕೆಲವಾರು ಅಪಾಯಿಂಟ್ಮೆಂಟ್ ತಯಾರಾಗುತ್ತಿವೆ.

urbhat [Raj] said...

ಈ ಪಾಸ್ಟ್ ಲೈಫ್ ರಿಗ್ರೆಷನಿನ ವಿಷಯ ನನ್ನ ಆಲೋಚನಾ ದಿಕ್ಕನ್ನೇ ಬದಲಾಯಿಸುತ್ತಿದೆ. ನಾನು "ಹಿಂದು" ನಾನು "ಬ್ರಾಹ್ಮಣ" ನಾನು "ಸಸ್ಯಹಾರಿ" ಅನ್ನೋದು ಎಷ್ಟು ಸಮಂಜಸ...? "ನಾನು" ಅನ್ನುವುದು ದೇಹವನ್ನು ಸಂಭೋದಿಸುವುದೊ ಅಥವಾ ಆತ್ಮವನ್ನೋ...? ದೇಹವನ್ನಾಗಿದ್ದಲ್ಲಿ ನೀವು ಸಸ್ಯಾಹಾರಿ ಎಂದು ಒಪ್ಪಿಕೊಳ್ಳುತ್ತೇನೆ. ಆತ್ಮವನ್ನಾಗಿದ್ದರೆ, ನೀವು............. ಅರ್ಥ ಆಯಿತ್ತಲ್ಲ.. :-)

ಸುಪ್ತದೀಪ್ತಿ suptadeepti said...

ರಾಜೇಂದ್ರ, ಈ ದೇಹದಲ್ಲಿದ್ದಾಗ "ನಾನು" ಅನ್ನುವುದು ಈ ದೇಹಕ್ಕೇ ಸಂಬಂಧಿಸಿದ್ದು. ಆತ್ಮಕ್ಕೆ ಸಂಬಂಧಿಸಿದ "ನಾನು" ಯಾರು, ಏನು ಅನ್ನುವುದನ್ನು ಇನ್ನೂ ಸರಿಯಾಗಿ ತಿಳಿದಿಲ್ಲ.

ಇದುವರೆಗೆ ತಿಳಿದ ಅಲ್ಪ-ಸ್ವಲ್ಪ ತಿಳುವಳಿಕೆಯ ಪ್ರಕಾರ ಈ ಆತ್ಮ "ಸರ್ವ ಭಕ್ಷಕ". ಯಾಕೆಂದರೆ, ಆತ್ಮವೆಂಬುದು- ಈ ಭೌತಿಕ ನಾನು ತಿಳಿದುಕೊಂಡಂತೆ- ಶಾಕಾಹಾರ, ಮಾಂಸಾಹಾರವನ್ನೂ ಮೀರಿದ ಆಹಾರವನ್ನು ಸೇವಿಸಿ, ಜೀರ್ಣಿಸಿ ಬೆಳೆಯುವಂಥದ್ದು. ಭೌತಿಕ ದೇಹದ ಎಲ್ಲ ಇಂದ್ರಿಯ ವಾಸನೆಗಳನ್ನು, ವಿಷಯಸುಖಗಳನ್ನು, ಜ್ಞಾನ-ಅನುಭವಗಳನ್ನು, ತತ್ವ-ಅನುಭಾವಗಳನ್ನು ಸೇವಿಸಿ, ಅರಗಿಸಿಕೊಂಡು ಎಲ್ಲವನ್ನೂ ಮೀರಿ ನಿಲ್ಲುವಂಥದ್ದು. ಆದ್ದರಿಂದ ಆತ್ಮಕ್ಕೆ ಯಾವುದೇ ಹಣೆಪಟ್ಟಿ ಇಲ್ಲ, ಸಲ್ಲ. ಒಪ್ಪುತ್ತೀಯಾ?

urbhat [Raj] said...

ಓಕೆ. ಅಂತು ನೀವು ಸಸ್ಯಾಹಾರಿ ಅಂತ ಒಪ್ಪಿಕೊಂಡೆ. ನನ್ನ ಮೊದಲ ಪ್ರಶ್ನೆಗೆ ಇನ್ನೂ ಹೆಚ್ಚಿನ ಉದಾಹರಣೆಗಾಗಿ ಕಾಯುತ್ತಿದ್ದೇನೆ.