ಆತ್ಮ ಚಿಂತನ-೧೧
ಕಳೆದ ಕಂತಿನಲ್ಲಿ ಒಂದು ಪ್ರಶ್ನೆ ಕೇಳಿದ್ದೆ. ಪ್ರಶ್ನೆ ಕೇಳಿ, ನಿಮ್ಮ ಉತ್ತರ ಕೇಳಿಸಿಕೊಂಡು ಸುಮ್ಮನಿರುವ ಉದ್ದೇಶ ನನ್ನದಲ್ಲ. ಪ್ರಶ್ನೆ ಕೇಳಿದ ದಿನವೇ, ನಿಮ್ಮೆಲ್ಲರ ಉತ್ತರ ಬರುವ ಮೊದಲೇ, ನನ್ನ ಕಲ್ಪನೆಯ ದೇವರನ್ನು "ಅಕ್ಷರ ರೂಪ"ಕ್ಕೆ "ಇಳಿಸಿ", ಇಲ್ಲಿ "ಸಾಕಾರ"ಗೊಳಿಸುವ ಪ್ರಯತ್ನ ಮಾಡಿದ್ದೇನೆ. ಅದರ ಪ್ರಕಟಣೆ ಮಾತ್ರ ಈಗ, ಒಂದು ವಾರದ ಮೇಲೆ....
"ದೇವರು"- ನನ್ನ ಕಲ್ಪನೆಯಲ್ಲಿ (ಸಂಕ್ಷಿಪ್ತವಾಗಿ ಹೇಳುವುದಾದರೆ)- ಒಂದು ತತ್ವ, ಒಂದು ಶಕ್ತಿ, ಮತ್ತು ಅದನ್ನೂ ಮೀರಿದ್ದು; ಎಲ್ಲವನ್ನೂ ಒಳಗೊಂಡೂ ಎಲ್ಲಕ್ಕಿಂತ ಹೊರತಾದದ್ದು. ಆ ಶಕ್ತಿಯ ಮೂಲ ಎಲ್ಲಿದೆಯೋ ಗೊತ್ತಿಲ್ಲ. ನಮ್ಮೆಲ್ಲರ ಅತ್ಯಮೋಘ ಕಲ್ಪನೆಯನ್ನೂ ಮೀರಿದ ಒಂದು ಅಗಾಧತೆಯಿದ್ದರೆ, ಅದಕ್ಕೆ ನಾವು ಸುಲಭದಲ್ಲಿ ಕೊಡುವ ಹೆಸರು: "ದೇವರು".
ಪ್ರಪಂಚದ ಎಲ್ಲ ವ್ಯವಹಾರಗಳ ಹಿಂದೆ ಈ ಶಕ್ತಿಯಿದೆ. ಒಂದು ಅಣುವಿನ ಚಲನೆಗೂ ಈ ಶಕ್ತಿ ಬೇಕು, ಅಂತರಿಕ್ಷದ ನೀಹಾರಿಕೆಗಳ ಚಲನೆಗೂ ಇದೇ ಶಕ್ತಿ ಬೇಕು. ಅಣು ಬಾಂಬು ಮಾಡುವ ವಿಜ್ಞಾನಿಯ ಮೆದುಳಿನಲ್ಲೂ ಅದೇ ಶಕ್ತಿ, ಅಳುವ ಕಂದನಿಗೆ ಹಾಲುಣಿಸುವ ಅಮ್ಮನ ಮನದಲ್ಲೂ ಅದೇ ಶಕ್ತಿ. ಆಗಸದ ಹಕ್ಕಿ ರೆಕ್ಕೆಯೊಳಗೆ, ಸಾಗರದ ಚಿಕ್ಕ ಜೀವಿಯೊಳಗೆ, ಸೂರ್ಯ-ಚಂದ್ರ-ಚುಕ್ಕೆಗಳ ಬೆಳಕಿನೊಳಗೆ ಹರಿದಾಡುವುದು ಯಾವುದೇ ವೈಜ್ಞಾನಿಕ ಕಾರಣಗಳನ್ನೂ ಮೀರಿದ ಇದೇ ಶಕ್ತಿ. ಎಲ್ಲವನ್ನೂ ಒಳಗೊಂಡಿರುವ ಆ ಶಕ್ತಿಯ ವೈಶಾಲ್ಯ ನಮ್ಮ ಅರಿವಿನ ಪರಿಧಿಯಾಚೆಗಿನದ್ದು.
ಮಾನವ ಜೀವಿಯ ಒಳಗಿನ "ನಾನು" ಭಾವ ಆ ಶಕ್ತಿಯ, "ದೇವರ" ಒಂದು ಅಂಶ.... ಆ ವ್ಯಕ್ತಿ ಒಳ್ಳೆಯವನಾಗಿರಲಿ, ಕೆಟ್ಟವನಾಗಿರಲಿ, ಧೂರ್ತಳಾಗಿರಲಿ, ಧಾರಾಳಿಯಿರಲಿ, ಸ್ನೇಹ-ಪ್ರೀತಿಯ ಭಂಡಾರವೇ ಇರಲಿ, ಕೆಟ್ಟ ಸೇಡಿನ ಮೊಟ್ಟೆಯೇ ಇರಲಿ.... ಪಟ್ಟಿ ಎಷ್ಟು ದೊಡ್ಡದೂ ಮಾಡಬಹುದು! ಒಟ್ಟಿನಲ್ಲಿ "ನಾನು" ಭಾವ ಆ ಅದಮ್ಯ ಚೈತನ್ಯದ ಒಂದು ಭಾಗ, ಪುಟ್ಟ ತುಣುಕು. ಈ "ನಾನು" ಅನ್ನುವುದು "ಅಹಮಿಕೆ" ಅಲ್ಲ. ಅದನ್ನು ಹೊರತಾದದ್ದು. "ನಾನು" ಅಂದಾಗ ಅದು ನನ್ನ ಕೈ-ಕಾಲಲ್ಲ, ದೇಹವಲ್ಲ, ಮನಸ್ಸಲ್ಲ, ಬುದ್ಧಿಯಲ್ಲ, ಹೃದಯ-ಮೆದುಳು ಮುಂತಾದ ಅಂಗಾಂಗಗಳಲ್ಲ.... ಅವೆಲ್ಲವನ್ನೂ ಹೊರತಾಗಿಯೂ "ನಾನು" ಎನ್ನುವ ಗುರುತು ಹೊರುವಂಥಾದ್ದು ಯಾವುದಿದೆಯೋ ಆ "ನಾನು" ಆ "ದೇವರ" ತುಣುಕು.
ಇಂಥ ಶಕ್ತಿ-ಸ್ವರೂಪವನ್ನು ನಮ್ಮ-ನಮ್ಮ ನಂಬಿಕೆಗಳಿಗೆ, ಆಸರೆ-ಆಧಾರಗಳಿಗೆ, ಒಪ್ಪುವ ಕಲ್ಪನೆಗಳಿಗೆ ಅನುಗುಣವಾಗಿ ನಮ್ಮ ಮನಸ್ಸಿಗೊಪ್ಪುವ ರೂಪ ಕೊಟ್ಟು ನಮಗೆ ಹತ್ತಿರವಾಗಿಸಿಕೊಂಡಿದ್ದೇವೆ. ಇಷ್ಟರ ಮಟ್ಟಿಗೆ ದೇವರನ್ನು ನಮ್ಮೊಳಗೆ ಇರಿಸಿಕೊಂಡಿದ್ದೇವೆ. ಆದರೆ.... ಆ ದೇವರು, ಆ ಶಕ್ತಿ ಅಂದರೆ ಅಷ್ಟೇ ಏನು? ಅದರ ಅಗಾಧತೆಯನ್ನು ಅರಿತ ದಿನ.... ಅದರ ಪರಿಚಯ ನಮಗಾದ ದಿನ.... "ನಾವೇ ದೇವರಾಗುತ್ತೇವೆ" ಅನ್ನುವುದು ದೂರದ, ಕಷ್ಟದ, ಅರಗಲಾರದ ನಿತ್ಯಸತ್ಯ.
2 comments:
ಧನ್ಯವಾದಗಳು,
ಪ್ರಶ್ನೆಪತ್ರಿಕೆಯ ಹಿಂದಿನಿಂದ ಉತ್ತರಪತ್ರಿಕೆಯನ್ನೂ ಒದಗಿಸಿದ್ದಕ್ಕೆ. :)
ಕ್ಲಿಷ್ಟಪ್ರಶ್ನೆಗೆ ಸರಳ ಉತ್ತರ ಒದಗಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
ಪ್ರಶ್ನೆ ಪತ್ರಿಕೆ ತಯಾರಿಸಿದವರಿಗೆ ಅವರ ತಿಳುವಳಿಕೆಯ ಪ್ರಜ್ಞೆಯೂ ಇರಲೇಬೇಕು; ಇಲ್ಲವಾದಲ್ಲಿ ಅದು ನಮ್ಮ ದೇಶದ ವಿದ್ಯಾವ್ಯವಸ್ಥೆಯ ಪ್ರಶ್ನೆ ಪತ್ರಿಕೆಯಾದೀತು. ಅಂಥ ಸ್ಥಾನ-ಮಾನ ಈ ಪ್ರಶ್ನೆಗೆ ಬೇಡ, ಬಿಡಿ.
Post a Comment