ಆತ್ಮ ಚಿಂತನ-೦೯
ಆಸ್ಟಿನ್ ನಗರದಲ್ಲಿ ನನ್ನ ಆತ್ಮ....
ಹೌದು; ನನ್ನ ಆತ್ಮ, ನನ್ನೊಡನೆ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ಒಂದಿಷ್ಟು ತಿರುಗಾಡಿತು. ಮೆಚ್ಚಿತು. ಬೆರಗುಗೊಂಡಿತು. ಗಾಬರಿಯಾಯ್ತು. ತನ್ಮಯವಾಯ್ತು. ತಲ್ಲೀನವಾಯ್ತು. ಇಷ್ಟೆಲ್ಲ ನಡೆದದ್ದು ೨೦೦೭ರ ಅಕ್ಟೋಬರ್ ೧೪ರಿಂದ ೨೧ರ ನಡುವೆ. ಮತ್ತೆ ನನ್ನಾತ್ಮ ನನ್ನೊಡನೆ ಕ್ಯಾಲಿಫೋರ್ನಿಯಾದ ಮನೆಗೆ ಮರಳಿತು.
ಡಾ. ಬ್ರಯಾನ್ ವೈಸ್ ಮತ್ತವರ ಪತ್ನಿ ಕೆರೋಲ್ ನಡೆಸಿಕೊಟ್ಟ "ರಿಗ್ರೆಷನ್ ಥೆರಪಿ ಟ್ರೈನಿಂಗ್- ವರ್ಕ್ ಶಾಪ್" ನನ್ನನ್ನು ಸೆಳೆದ ಅಯಸ್ಕಾಂತ. ನನ್ನ ಕಾಂತನೊಡನೆ ಅಲ್ಲಿಗೆ ಸಾಗಿದ್ದೆ, `ವಿತ್ ಓಪನ್ ಮೈಂಡ್'. ಸೋಮವಾರದಿಂದ ಶುಕ್ರವಾರದ ತನಕ ನಡೆದ ಕಾರ್ಯಾಗಾರದಲ್ಲಿ ಬುಧವಾರ ಸಂಜೆ ನಡೆದ ಘಟನೆಯ ನಿರೂಪಣೆ ಈಗಾಗಲೇ ನೀಡಿದ್ದಾಗಿದೆ. ಅದನ್ನು ಹೊರತಾಗಿ ಉಳಿದ ದಿನಗಳ ನಿರೂಪಣೆ ಈಗ:
ಭಾನುವಾರ ಮಧ್ಯಾಹ್ನವೇ ಕಾರ್ಯಾಗಾರ ನಡೆಯಬೇಕಾದ "ದ ಕ್ರಾಸಿಂಗ್ಸ್" ಅನ್ನುವ ಆಶ್ರಮದಂಥ ರಿಸಾರ್ಟಿಗೆ ಹೋಗಿ ನಮ್ಮ ನೋಂದಣಿ ಮಾಡಿಸಿಕೊಂಡು ಬಂದೆವು. ಸ್ವಲ್ಪ ಸೆಖೆ ಇದ್ದರೂ ವಾತಾವರಣ ಹಿತವಾಗಿತ್ತು. ಸಂಜೆ ದಕ್ಷಿಣ ಆಸ್ಟಿನ್ ಭಾಗದಲ್ಲಿರುವ "ಝಿಲ್ಕರ್ ಬೊಟಾನಿಕಲ್ ಗಾರ್ಡನ್" ನೋಡಿಕೊಂಡು ಬಂದು, ರಾತ್ರೆ ಗೆಳೆಯರೊಬ್ಬರ ಮನೆಯಲ್ಲಿ ಊಟ ಮುಗಿಸಿ, ನಮ್ಮ ಹೋಟೆಲ್ ರೂಮಿಗೆ ಮರಳಿದ್ದಾಯಿತು. ಮರುದಿನದ ನಿರೀಕ್ಷೆ ನನ್ನಲ್ಲಿ ತುಂಬಿತ್ತು, ಕುತೂಹಲ ಅದಕ್ಕಿಂತ ಹೆಚ್ಚಿತ್ತು.
ಸೋಮವಾರ ಬೆಳಗ್ಗೆ "ದ ಕ್ರಾಸಿಂಗ್ಸ್" ತಲುಪಿದಾಗ ಕಾರ್ಯಾಗಾರ ನಡೆಯಬೇಕಿದ್ದ ಕೋಣೆ ತುಂಬಿತ್ತು. ಸುಮಾರು ನೂರಿಪ್ಪತ್ತಕ್ಕೂ ಮಿಕ್ಕಿದ ದೊಡ್ಡ ಗುಂಪು. `ತೀವ್ರ ಆಸಕ್ತಿ' ಒಂದು ಕಾರಣವಾದರೆ, `ಸುಮ್ಮನೇ ಕುತೂಹಲ'ವೂ ಸೇರಿದಂತೆ ಹಲವಾರು ಕಾರಣಗಳು. ಎಲ್ಲರ ಔಪಚಾರಿಕ ಪರಿಚಯದ ಬಳಿಕ ಡಾ. ವೈಸ್ ಸಣ್ಣ ಪ್ರಸ್ತಾವನೆಯ ಮಾತುಗಳನ್ನಾಡಿ "ಗ್ರೂಪ್ ರೆಗ್ರೆಷನ್" ನಡೆಸಿದರು. ಅತಿ ಮಂದ ಬೆಳಕಿನಲ್ಲಿ, ಹಿತವಾದ ಸಂಗೀತದ ಹಿನ್ನೆಲೆಯಲ್ಲಿ, ನಿಧಾನವಾಗಿ ನಮ್ಮನ್ನೆಲ್ಲ "ರಿಲ್ಯಾಕ್ಸ್ಡ್ ಸ್ಟೇಟ್"ಗೆ ಒಯ್ಯುವ ನಿರ್ದೇಶಕರಾದರು. ಅವರ ಸ್ವರದಲ್ಲಿ, ಮಾತಿನಲ್ಲಿ ಇರುವ ಗಾಂಭೀರ್ಯ, ಆಳ, ಮತ್ತು ಸ್ಥಿರತೆಗಳಿಗೆ ನಮ್ಮನ್ನು ನಿರಾಳ ಸ್ಥಿತಿಗೆ ಒಯ್ಯುವ ಶಕ್ತಿಯಿತ್ತು.
ಹಂತ-ಹಂತವಾಗಿ ನಿರಾಳ ಸ್ಥಿತಿ ತಲುಪಿದ ಗುಂಪನ್ನು ಕುರಿತು ಡಾ. ವೈಸ್- ಬಾಲ್ಯದ ನೆನಪಿನ ತುಣುಕುಗಳನ್ನು ನೆನಪಿಸಿಕೊಳ್ಳುವಂತೆಯೂ, ಅದಕ್ಕೂ ಹಿಂದೆ ತಾಯಿಯ ಗರ್ಭದಲ್ಲಿದ್ದಾಗಿನ ನೆನಪುಗಳನ್ನು ತಂದುಕೊಳ್ಳುವಂತೆಯೂ, ನಂತರ ಹಿಂದಿನ ಯಾವುದೋ ಜನ್ಮದ ನೆನಪಿನ ಪುಟಗಳನ್ನು ತೆರೆದುಕೊಳ್ಳುವಂತೆಯೂ ನಿರ್ದೇಶಿಸಿದರು. ಅಂತೆಯೇ ನಿಧಾನವಾಗಿ ಪ್ರಸ್ತುತಕ್ಕೆ ಮರಳುವಂತೆ ಸೂಚಿಸುತ್ತಾ, ಎಲ್ಲರನ್ನೂ ವಾಸ್ತವಕ್ಕೆ ಕರೆತಂದರು. ನಿಧಾನವಾಗಿ ಕಣ್ಣು ತೆರೆದ ಎಲ್ಲರ ಮುಖದಲ್ಲಿ ಏನೇನೋ ಮಿಶ್ರ ಭಾವನೆಗಳು. ಸುಮಾರು ಅರ್ಧಕ್ಕರ್ಧ ಜನರಿಗೆ ಯಾವುದೇ ಅನುಭವ ಆಗಿರಲಿಲ್ಲ (ನಾವಿಬ್ಬರೂ ಈ ಗುಂಪಿನವರು). ಮತ್ತೆ ಕೆಲವರಿಗೆ ಬಾಲ್ಯದ ನೆನಪುಗಳ ಸಣ್ಣ ತುಣುಕುಗಳು ಹಿಂದೆಂದೂ ನೆನಪಿಸಿಕೊಂಡಿರದ ವಿವರಗಳಲ್ಲಿ ಕಂಡಿದ್ದವು. ಇನ್ನೂ ಕೆಲವರಿಗೆ ತಾಯಿಯ ಗರ್ಭದಲ್ಲಿದ್ದಾಗಿನ ನೆನಪೂ ಬಂದಿತ್ತು. ಮತ್ತೆ ಕೆಲವೇ ಕೆಲವರಿಗೆ ಹಿಂದಿನ ಜನ್ಮದ ನೆನಪಿನ ತುಣುಕು (ಇರಬೇಕೆಂದು ಅವರ ನಂಬಿಕೆ) ಮೂಡಿತ್ತು. ಕೆಲವಾರು ಜನರ ಅನುಭವಗಳನ್ನು ಕೇಳಿದ ಡಾ. ವೈಸ್ ಮೊದಲ ಚಹಾ ವಿರಾಮಕ್ಕೆ ಕರೆ ನೀಡಿದರು.
ಅಲ್ಲೇ ಲಾಬಿಯಲ್ಲಿ ಚಹಾ ಹೀರುತ್ತಿದ್ದೆವು, ನಾವಿಬ್ಬರೂ. ಸುಂದರ ಅಮೆರಿಕನ್ ಮಹಿಳೆ ಒಬ್ಬಳು ನಮ್ಮ ಬಳಿ ಸಾರಿ, "ಆರ್ ಯೂ ಇಂಡಿಯನ್ಸ್?" ಅಂದಳು. ಹೌದೆಂದೆವು. ತನ್ನ ಹೆಸರು ಜೆನ್, ನ್ಯೂ ಮೆಕ್ಸಿಕೋ ರಾಜ್ಯದ ಸಾಂಟ-ಫೇ ಊರಿನವಳೆಂದು ಪರಿಚಯಿಸಿಕೊಂಡಳು. ತನಗೊಂದು ಪ್ರಶ್ನೆಯಿದೆ ಅಂದವಳು, "ವಾಟ್ ಡಸ್ ಇಟ್ ಮೀನ್ ಬೈ ಸ-ರಾಸ್-ವಟಿ? ಈಸ್ ದಟ್ ಎ ನೇಮ್? ಈಸ್ ದಟ್ ಎನಿ ಗಾಡ್ಸ್ ನೇಮ್?" ಮೊದಲಿಗೆ "ಸ-ರಾಸ್-ವಟಿ" ಅರ್ಥವಾಗದಿದ್ದರೂ ಕ್ಷಣಗಳಲ್ಲಿ "ಸರಸ್ವತಿ"ಯನ್ನು ಕಂಡುಕೊಂಡೆವು. ಸೂಕ್ಷ್ಮವಾಗಿ ಅರ್ಥ ಅವಳಿಗೆ ತಿಳಿಸಿದಾಗ ಅವಳಿಗೆ ಆಶ್ಚರ್ಯ, ಆನಂದ. ಅವಳೆಂದೂ ಆ ಹೆಸರನ್ನು ಕೇಳಿರಲಿಲ್ಲ, ಅವಳಿಗೆ ಎಂದೂ ಭಾರತೀಯ ಸ್ನೇಹಿತರಿರಲಿಲ್ಲ. ಆದರೂ ಇಂದಿನ ರಿಗ್ರೆಷನ್ ಸಮಯದಲ್ಲಿ ಯಾವುದೇ ನೆನಪು ಮೂಡಿಲ್ಲದಿದ್ದರೂ, ಈ ಹೆಸರು ಪದೇ ಪದೇ ಅವಳ ಮನದಲ್ಲಿ ಮೂಡಿತಂತೆ, ಅವಳ ಕಿವಿಗಳಲ್ಲಿ ರಿಂಗಣಿಸಿತಂತೆ. ನನಗೋ ಅಚ್ಚರಿ, ಸಂಶಯ ಎರಡೂ.
ವಿರಾಮದ ಬಳಿಕ ಮತ್ತೆ ಸೇರಿದಾಗ ಡಾ. ವೈಸ್ ಹಲವಾರು ವಿವರಣೆಗಳನ್ನು ನೀಡಿದರು. ಹಿಪ್ನಾಸಿಸ್ ಮತ್ತು ರಿಗ್ರೆಷನ್ ಇವೆರಡೂ ಒಂದೇ ಚಿಕಿತ್ಸಾ ವಿಧಾನದ ಮಜಲುಗಳೆಂದರು. ಮಧ್ಯಾಹ್ನ ಊಟದ ವಿರಾಮ ಘೋಷಿಸಿದಾಗ ಗುಂಪಿನಲ್ಲಿ ಹೊಸದೊಂದು ಚೇತನ ಚಿಮ್ಮುತ್ತಿತ್ತು.
ಅಪರಾಹ್ನದ ಮೊದಲ ಭಾಗದಲ್ಲಿ, "ಪ್ರೊಗ್ರೆಸ್ಸಿವ್ ರೆಲ್ಯಾಕ್ಸೇಷನ್ ಟೆಕ್ನಿಕ್" ತೋರಿಸುತ್ತಾ ಶಿಬಿರಾರ್ಥಿಯೊಬ್ಬಳನ್ನು ರೆಗ್ರೆಸ್ ಮಾಡಿದರು ಡಾ. ವೈಸ್. ಆಕೆ ಕ್ಷಣಗಳಲ್ಲಿ ಸುಲಭವಾಗಿ ನಿರಾಳ ಸ್ಥಿತಿಗೆ ತಲುಪಿ, ಆತನ ನಿರ್ದೇಶಕ ಮಾತುಗಳನ್ನು ಕೇಳುತ್ತಾ, ತನ್ನ ಮೂರನೇ ವಯಸ್ಸಿನ ನೆನಪೊಂದಕ್ಕೆ ಜಾರಿದಳು. ತನ್ನ ಸ್ನೇಹಿತೆಯೊಡನೆ ಆಟವಾಡಿದ್ದು, ಆ ಗೊಂಬೆಯ ವಿವರಗಳು, ತಾವಿದ್ದ ಮನೆಯ ವಿವರಗಳನ್ನು ನೀಡಿದಳು. ಆಟದ ಭರದಲ್ಲಿ ನಕ್ಕ ನಗು ಮೂರು ವರ್ಷದ ಚಿನ್ನಾರಿಯದ್ದೇ... ಬಳಿಕ ಅವಳ ಹೈ-ಸ್ಕೂಲಿನ ದಿನಗಳಿಗೆ ಸಾಗಿ, ಅಲ್ಲಿಂದ ನಿಧಾನವಾಗಿ ಅವಳನ್ನು ಪ್ರಸ್ತುತಕ್ಕೆ ಕರೆತಂದರು ಡಾ. ವೈಸ್. ಸಭೆಯಲ್ಲೇ ಆಕೆಯ ತಾಯಿಯೂ ಇದ್ದು, ಮಗಳ ಗೆಳತಿಯ, ಗೊಂಬೆಯ, ಮನೆಯ ವಿವರಗಳನ್ನು ನಿಖರವೆಂದು ಸ್ಪಷ್ಟಪಡಿಸಿದರು. ಮಗಳು ನಾಲ್ಕು ವರ್ಷದವಳಿದ್ದಾಗ ಅವರು ಆ ಮನೆ ಬಿಟ್ಟು ಹೋಗಿದ್ದಾಗಿಯೂ ತಿಳಿಸಿದರು. ಪುಟ್ಟ ವಿರಾಮದ ಬಳಿಕ ಮತ್ತೊಂದಿಷ್ಟು ಪ್ರಶ್ನೋತ್ತರಗಳೂ, ಇನ್ನೊಂದಿಷ್ಟು ವಿವರಣೆಗಳೂ, ಶ್ರೀಮತಿ ವೈಸ್ ಅವರಿಂದ ಕೆಲವು ಸೂಕ್ಷ್ಮಗಳೂ ಶಿಬಿರಾರ್ಥಿಗಳ ಮೊದಲ ದಿನದ ಅನುಭವ ಖಜಾನೆಯಲ್ಲಿ ದಾಖಲಾದವು.
ಇನ್ನುಳಿದ ದಿನಗಳ ವಿವರಗಳು ಮುಂದಿನ ಕಂತಿನಲ್ಲಿ....
2 comments:
supthadeepthiyavare,
neevu kavanagaLallade kanasannoo eshTu chennagi vaRNisutteeri,nanna kasannu hELalEbEku anisuthide, nimmanu mattu durgadaoDathi maala ibbaranno noDabEku antha anisithu, aadina thats kannda alli maala avara photo nodibitte(kanasalli ,hEgidare antha kELbEDi:) )innu nimmanu yaavaaga noDtheeno antha yochisi edhu nimma blog lli Odalu shurumaDidavaLu E nimma photo noDi thumbaa khushi paTTe. nanagE nambalu aagthilla .
PSP
ಪಿ.ಎಸ್.ಪಿ.ಯವರೇ,
ನಿಮ್ಮ ಅಭಿಮಾನಕ್ಕೆ ಪ್ರೀತಿಗೆ ಧನ್ಯವಾದಗಳು.
ಮಾಲಾ ಅವರನ್ನೂ ನೋಡಿರುತ್ತೀರಿ/ ನೋಡುತ್ತೀರಿ, ದಟ್ಸ್'ಕನ್ನಡದಲ್ಲಿ.
Post a Comment