ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 12 November 2007

ಆತ್ಮ ಚಿಂತನ-೦೮

ಓದುಗರೇ, "ಆತ್ಮಚಿಂತನ-೦೪"ರಲ್ಲಿ ಚೀನಾದಲ್ಲಿ ಚಾಲ್ತಿಯಲ್ಲಿರುವ ಪ್ರೇತಾತ್ಮಗಳ ಮದುವೆಯ ಬಗ್ಗೆ ಬರೆದಿದ್ದೆ. ಅದರಲ್ಲಿ ಹೆಚ್ಚಾಗಿ, ಮದುವೆಯಾಗದೇ ತೀರಿಕೊಂಡ ಮಗಳ ಪ್ರೇತಕ್ಕೆ ತಂದೆ-ತಾಯಿ ಗಂಡು ಹುಡುಕಿ ಮದುವೆಯ ಸಂಪ್ರದಾಯ ಪೂರೈಸುವ ವಿಷಯವಿತ್ತು. ಇದೀಗ ಈ "ಮಿಂಘಮ್" ಬಗ್ಗೆ ಇನ್ನೂ ಒಂದಿಷ್ಟು ವಿವರಗಳು, ನವೆಂಬರ್, ೧೬, ೨೦೦೬ರ ತರಂಗದಲ್ಲಿ ನಿಶಾಂತ್ ಬರೆದ ಲೇಖನದಲ್ಲಿ ಸಿಕ್ಕಿವೆ. ನಿಮ್ಮ ಓದಿಗಾಗಿ.... (ಇಲ್ಲಿ ಸ್ವಲ್ಪ ಹೃಸ್ವೀಕರಿಸಿದ್ದೇನೆ)

ಚೀನಾದ ಜನಸಂಖ್ಯೆಯ ಹತೋಟಿಗೆ ಅಲ್ಲಿನ ಸರಕಾರ ಹೊರಡಿಸಿದ ಕಾಯಿದೆ: ಒಂದು ಕುಟುಂಬ- ಒಂದು ಮಗು. ಅವರಿಗೂ ಭಾರತೀಯರಂತೆಯೇ ಗಂಡು ಮಗುವಿನ ಮೇಲೆ ವ್ಯಾಮೋಹ. ಪರಿಣಾಮ- ನಿರೀಕ್ಷಿತ; ಹೆಣ್ಣುಗಳಿಲ್ಲ. ಹುಟ್ಟಿದ ಗಂಡಿನ ಮದುವೆಗೆ ಪರದಾಡಬೇಕಾದ ಪರಿಸ್ಥಿತಿ. ಅದರ ಫಲರೂಪ- ವಧೂದಕ್ಷಿಣೆಯ ಆಮಿಷ. ಇದಕ್ಕೆ ಹಲವಾರು ಆಯಾಮಗಳಿವೆಯಾದರೂ ಇಲ್ಲಿ, ಈ ಲೇಖನದ ವ್ಯಾಪ್ತಿಗಾಗಿ, ಪ್ರೇತಮದುವೆಯ ಸಂಪ್ರದಾಯವನ್ನಷ್ಟೇ ತೆಗೆದುಕೊಳ್ಳುತ್ತೇನೆ.

"ಮಕ್ಕಳಿಗೆ ಮದುವೆ ಮಾಡಿಸುವುದು ತಂದೆಯ ಹೊಣೆಗಾರಿಕೆ. ಪ್ರಾಯಕ್ಕೆ ಬಂದ ಮಗ ಮದುವೆಯಾಗದೆ ಸತ್ತರೆ, ತಂದೆ-ತಾಯಿಯ ವ್ಯಥೆ ಅಷ್ಟಿಷ್ಟಲ್ಲ.ಈ ಪರಿಸ್ಥಿತಿಯಲ್ಲಿ ಹೆತ್ತವರ ಹೊಣೆಗಾರಿಕೆ ಹೆಚ್ಚುತ್ತದೆ; ಸತ್ತವರು ಸ್ವತಃ ಹೆಣ್ಣು ಹುಡುಕುವಂತಿಲ್ಲವಲ್ಲ! ಆಗ, ಹೆತ್ತವರು ಹೊಟ್ಟೆ-ಬಟ್ಟೆ ಕಟ್ಟಿ ಹಣ ಕೂಡಿಡುತ್ತಾರೆ. ಸತ್ತ, ಸಾಯುತ್ತಿರುವ ಹೆಣ್ಣು ಹುಡುಕುತ್ತ ಊರೂರು ಅಲೆಯುತ್ತಾರೆ. ಅಂಥ ಸಂದರ್ಭಗಳಲ್ಲಿ, ಹೆಣ್ಣು ಹೆತ್ತವರಿಗೆ ಆಕೆ ಇಲ್ಲದಿದ್ದರೂ ಲಾಭವೇ. (ಈ ಹಿನ್ನೆಲೆಯಲ್ಲಿ, ಚೀನಾದಲ್ಲಿ ತಂದೆ-ತಾಯಿ ತಮ್ಮ ಹೆಣ್ಣು ಮಗಳು ಅಪ್ರಾಪ್ತ ವಯಸ್ಸಿನಲ್ಲಿ ತೀರಿಕೊಂಡರೆ ದುಃಖಿಸುತ್ತಾರೆಯೇ? ಕೇಳಬಾರದ ಪ್ರಶ್ನೆ ಇದು) ತೀರಿಕೊಂಡ ಹೆಣ್ಣಿನ ದೇಹವನ್ನು ವಧುದಕ್ಷಿಣೆ ಕೊಟ್ಟು ಪಡೆದ ಹುಡುಗನ ಕಡೆಯವರು, ಆಕೆಯನ್ನು ಸಂಭ್ರಮದಿಂದ ತಮ್ಮ ಸ್ಮಶಾನಕ್ಕೆ ಒಯ್ದು, ತಮ್ಮ ಹುಡುಗನ ಶರೀರದ ಪಕ್ಕದಲ್ಲಿ ಆಕೆಯನ್ನೂ ಇರಿಸಿ, ಮದುವೆಯ ಶಾಸ್ತ್ರಗಳನ್ನು ನೆರವೇರಿಸುತ್ತಾರೆ. ಬಳಿಕ ಇಬ್ಬರನ್ನೂ ಅಕ್ಕಪಕ್ಕದಲ್ಲಿ ಸಮಾಧಿ ಮಾಡಲಾಗುತ್ತದೆ. ಜೊತೆಗೆ, ಸಂಸಾರ ಹೂಡಲು ಬೇಕಾಗುವ ಎಲ್ಲ ಸಾಮಾಗ್ರಿಗಳನ್ನೂ ಇರಿಸಲಾಗುತ್ತದೆ. ಶ್ರೀಮಂತರಾದರೆ ಕುರಿ, ಹಂದಿ ಕಡಿದು, ಬಂಧು-ಬಾಂಧವರಿಗೆ ಮದುವೆ ಊಟ ಬಡಿಸುತ್ತಾರೆ." ಎಂದು ಬರೆಯುತ್ತಾರೆ ನಿಶಾಂತ್.

ನಮ್ಮೂರ ತುಳುವರಲ್ಲಿ ಆತ್ಮ "ಕೇಳಿಕೊಂಡು" ಬಂದರೆ ಮಾತ್ರ ಆ ಆತ್ಮಕ್ಕೆ ಮದುವೆ ಮಾಡಿಸುವ ಸಂಪ್ರದಾಯವಿದೆ. ಬಹುಶಃ ಚೀನಾದಲ್ಲಿ ಎಲ್ಲ ಪ್ರೇತಾತ್ಮಗಳಿಗೂ ಮದುವೆ ಕಡ್ಡಾಯವಿರಬೇಕು; ಮುಂದಿನ ಪ್ರಸಂಗ ನೋಡಿ: "ಯೂಜಿಂಗ್'ನ ಮಗಳು ಯೆಲ್ಲೋ ರಿವರ್'ನಲ್ಲಿ ಬಂದ ಧಿಡೀರ್ ನೆರೆಯಲ್ಲಿ ಕೊಚ್ಚಿಹೋಗಿ, ಮರುದಿನ ಹೆಣ ಸಿಗುತ್ತದೆ. ಗೆಳೆಯರು, ಬಂಧುಗಳು ಆತನನ್ನು "ನೀನು ಅದೃಷ್ಟವಂತ" ಅನ್ನುತ್ತಾರೆ. ಹಳ್ಳಿಯಲ್ಲಿ ಸುದ್ದಿ ಹರಡುತ್ತದೆ. ಅರ್ಧ ಘಂಟೆಯಲ್ಲಿ ಚೆನ್ ಬರುತ್ತಾನೆ, ತನ್ನ ಮಗನಿಗೆ ಹೆಣ್ಣು ಕೇಳಲು. ಮನೆಯವರೆಲ್ಲರ ಎದುರೇ ಮಾತುಕತೆ ನಡೆಯುತ್ತದೆ, ಚರ್ಚೆ ಸಂಧಾನಗಳ ಬಳಿಕ ಚೆನ್ ಹಣ ತೆತ್ತು ತನ್ನ ಭಾವೀ ಸೊಸೆಯ ಹೆಣದೊಂದಿಗೆ ಮರಳುತ್ತಾನೆ. ಸ್ಮಶಾನದಲ್ಲಿ ಕೆಲ ವರ್ಷಗಳ ಹಿಂದೆ ಮದುವೆಯಾಗದೇ ತೀರಿಕೊಂಡ ಹುಡುಗನ ಸಮಾಧಿಯ ಬಳಿಯಲ್ಲಿಯೇ ಈ ಹುಡುಗಿಯ ಶವಪೆಟ್ಟಿಗೆಯನ್ನೂ ಇಳಿಸಿ, ಸಂಸಾರ ಹೂಡಲು ಬೇಕಾದ ಪಾತ್ರೆ-ಪರಡಿ, ಬಟ್ಟೆ-ಬರೆಗಳ ಜೊತೆಗೆ ಹೆಣ-ವಧುವನ್ನೂ ಮಣ್ಣುಮಾಡಲಾಗುತ್ತದೆ."

ಇದಿಷ್ಟೇ ಅಲ್ಲದೆ, ನಮ್ಮೂರಿನಂತೆ ಕೆಲವು ಆತ್ಮಗಳು ಚೀನಾದಲ್ಲೂ ಮದುವೆ ಮಾಡಿಸುವಂತೆ ಪೀಡಿಸಿ, ಕಾಡಿಸಿ, ತೊಂದರೆ ಕೊಡುವುದೂ ಇದೆ. ಅಂಥ ಸಂದರ್ಭಗಳಲ್ಲಿ ಮನೆಯವರು, ಸಂಬಂಧಪಟ್ಟವರು, ಎಲ್ಲ ಕಡೆ ಜಾಲಾಡಿ ಎಂದೋ ಎಲ್ಲೋ ಸತ್ತ ಹೆಣ್ಣು ಹುಡುಕಿ ಮದುವೆ ಮಾಡುತ್ತಾರೆ. ಹೆಣ್ಣು-ಹೆಣ ಎಲ್ಲೂ ಸಿಗದೇ ಹೋದಲ್ಲಿ, ಅಥವಾ ವಧುದಕ್ಷಿಣೆ ಕೊಡಲಾಗದೇ ಇದ್ದಲ್ಲಿ, ಅಂಥವರು ಹಿಡಿವ ಹಾದಿಗಳೆರಡು-
ಒಂದು: ಯಾವುದೋ ಒಂದು ಹೆಣ್ಣಿನ ಹೆಣವನು ಗೋರಿಯಿಂದಲೇ ಅಪಹರಿಸುವುದು;
ಎರಡು: ಒಣಹುಲ್ಲಿನಲ್ಲಿ ಹೆಣ್ಣಿನ ಗೊಂಬೆ ತಯಾರಿಸಿ ಮಗನ ಹೆಣದ ಬಳಿ ಹೂತು ಜವಾಬ್ದಾರಿ ತೀರಿಸಿಕೊಳ್ಳುವುದು.

ನಂಬಿಕೆಗಳು ಮನುಷ್ಯನನ್ನು ಏನೆಲ್ಲ ಮಾಡಿಸುತ್ತವೆ!!

Monday, 5 November 2007

ಆತ್ಮ ಚಿಂತನ-೦೭

ಓದುಗರೇ, ಈ ಹಿಂದೆ ನಿಮಗೆ ಮಾತು ಕೊಟ್ಟಂತೆ ಇದೀಗ "ಆತ್ಮ ಚಿಂತನ"ದಲ್ಲಿ `ಪ್ರೇತಗಳ ಮದುವೆ'ಯ ವಿಷಯವನ್ನು ಮುಂದುವರೆಸುತ್ತಿದ್ದೇನೆ.

"ಪ್ರೇತಾತ್ಮಗಳ ಮದುವೆಗೂ ವಿಧಿ ವಿಧಾನಗಳಿವೆ" ಅನ್ನುತ್ತಾರೆ ಅನಂತ ಹುದೆಂಗಜೆ; ೨೦೦೬, ನವೆಂಬರ್, ಹದಿನಾರರಂದು ತರಂಗದಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ. "ಪ್ರೇತಗಳಿಗೆ ಮದುವೆ ಮಾಡಿಸುವ ಜಾನಪದ ನಂಬಿಕೆಯ ಆಧಾರದ ಸಂಪ್ರದಾಯ ತುಳುನಾಡಿನ ಹಲವಾರು ಜನಾಂಗಗಳಲ್ಲಿ ಪ್ರಚಲಿತವಿದ್ದು, ಬಹುತೇಕ ಕ್ರಮಗಳು ಸಾಂಪ್ರದಾಯಿಕ ಮದುವೆಯಂತೆಯೇ ನಡೆಯುತ್ತವೆ" ಅನ್ನುತ್ತಾರೆ ಅವರು. "ಹೆಣ್ಣು-ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ವರದಕ್ಷಿಣೆಯ ಮಾತುಕತೆ, ದಿಬ್ಬಣ, ವಾಲಗ, ಸಿಡಿಮದ್ದು, ಪರಸ್ಪರ ಮರ್ಯಾದೆ, ಮಾಂಗಲ್ಯಗಳವರೆಗೆ ಎಲ್ಲವೂ ಸಂಪ್ರದಾಯ ಬದ್ಧವಾಗಿಯೇ ನಡೆಯುತ್ತದೆ. ಗೌಡ ಸಂಪ್ರದಾಯದಲ್ಲಿ ಅಡಕೆ ಮರದ ಹೂವು (ಹಿಂಗಾರ)ಗಳನ್ನು ಗಂಡು ಹೆಣ್ಣಿನ ಪ್ರತೀಕವಾಗಿ ಬಳಸುತ್ತಾರೆ. ಕೆಲವರು ಬೆಳ್ಳಿಯಲ್ಲಿ ಗಂಡು-ಹೆಣ್ಣಿನ ಗೊಂಬೆಗಳನ್ನು ಮಾಡಿಸಿದರೆ, `ನಲ್ಕೆ' ಜನಾಂಗದಲ್ಲಿ ಬಾಳೆದಿಂಡಿನಿಂದ ಗಂಡು-ಹೆಣ್ಣಿನ ಗೊಂಬೆಗಳನ್ನು ಮಾಡಿ, ಅವಕ್ಕೆ ಬಟ್ಟೆ ತೊಡಿಸುತ್ತಾರೆ. ಎರಡೂ ಪ್ರತಿನಿಧಿಗಳನ್ನು ಹಸೆಮಣೆಯ ಮೇಲೆ, ಅಕ್ಕ-ಪಕ್ಕ ಇಟ್ಟು, ಗಂಡಿನ `ಕೈಯಿಂದ' ಹೆಣ್ಣಿಗೆ ತಾಳಿ `ಕಟ್ಟಿಸುವ' ಶಾಸ್ತ್ರವನ್ನು ಮಾಡುತ್ತಾರೆ."

"ಬಿಲ್ಲವರಲ್ಲಿ ಗಂಡು ತೆಂಗಿನಕಾಯಿಯಲ್ಲೂ ಹೆಣ್ಣು ಹಿಂಗಾರದಲ್ಲೂ ಪ್ರತಿನಿಧಿಸಲ್ಪಟ್ಟಿರುತ್ತವೆ. ಮದುವೆ ಮಂಟಪದಲ್ಲಿ ಜೇಡಿಮಣ್ಣಿನಿಂದ ಕೈ-ಕೈ ಬೆಸೆದಂತೆ ಬರೆದ ಗಂಡು-ಹೆಣ್ಣಿನ ರೂಪದ ಮಂಡಲಗಳ ಮೇಲೆ ಮಣೆಗಳನ್ನಿಟ್ಟು, ಅವುಗಳ ಮೇಲೆ ಬಾಳೆಯೆಲೆ ಇರಿಸಿ, ಹೆಣ್ಣಿಗೆ ಹೊಸಸೀರೆ, ರವಿಕೆಕಣವನ್ನಿಟ್ಟು ಅವುಗಳ ಮೇಲೆ ಹಿಂಗಾರವನ್ನೂ, ಗಂಡಿಗೆ ಧೋತರ, ಶಲ್ಯವನ್ನಿಟ್ಟು ಮೇಲೆ ತೆಂಗಿನಕಾಯಿಯನ್ನೂ ಇರಿಸುತ್ತಾರೆ. ಮಂಡಲದಲ್ಲಿ ಬೆಸೆದಿರುವ ಕೈಗಳ ಮೇಲೆ ಧಾರೆಯೆರೆಯುತ್ತಾರೆ."

"ಮದುವೆಯಾದ ಸಂಕೇತವಾಗಿ ಹಿಂಗಾರದ ಹೊರಹಾಳೆಯೂ, ತೆಂಗಿನಕಾಯಿಯೂ ಒಡೆಯುತ್ತವೆ. ಶಾಸ್ತ್ರಕ್ಕೆ ಸರಿಯಾಗಿ, ಶೋಭಾನೆ ಹಾಡಿ, ಅತಿಥಿಗಳಿಗೆ ಊಟ ಬಡಿಸುತ್ತಾರೆ. ಮದುಮಕ್ಕಳಿಗೂ `ಎಡೆ'ಯಿರಿಸುತ್ತಾರೆ. ನಂತರ, ಕುಟುಂಬಗಳ ಹಿರಿಯರು "ನಿಮ್ಮ ಅಪೇಕ್ಷೆಯಂತೆ ನಿಮಗಿಬ್ಬರಿಗೂ ಮದುವೆ ಮಾಡಿಸಿದ್ದೇವೆ. ನೀವಿನ್ನು ಗಂಡ-ಹೆಂಡತಿ. ಯಾರಿಗೂ ತೊಂದರೆ ಕೊಡದೆ ಸುಖವಾಗಿ ಸಂಸಾರ ಮಾಡಿ" ಎಂದು ವಿನಂತಿಸಿಕೊಳ್ಳುತ್ತಾರೆ, ಹಾರೈಸುತ್ತಾರೆ. ಮದುಮಕ್ಕಳ ಪ್ರತೀಕಗಳನ್ನು ಅಂದು ರಾತ್ರೆ ಒಂದು ಕೋಣೆಯಲ್ಲಿರಿಸಿ, ಪ್ರಸ್ತದ ಶಾಸ್ತ್ರವನ್ನೂ ಮಾಡುತ್ತಾರೆ. ಮದುಮಕ್ಕಳಿಗೆ ಎರಡೂ ಮನೆಗಳಲ್ಲಿ ಔತಣದ ಕ್ರಮ ನಡೆಯುತ್ತದೆ. ಬಳಿಕ, ತಾಳಿ, ಬಳೆ, ಬಟ್ಟೆಗಳನ್ನು ತೆಗೆದಿರಿಸಿ, ಹಿಂಗಾರ-ಕಾಯಿಗಳನ್ನು ಯಾ ಗೊಂಬೆಗಳನ್ನು ವಿಸರ್ಜಿಸುತ್ತಾರೆ. ಮದುವೆಯ ನಂತರ ಎರಡೂ ಮನೆಗಳ ಸಂಬಂಧ ಬೆಸೆಯುತ್ತದೆ, ಬಾಂಧವ್ಯ ಮುಂದುವರೆಯುತ್ತದೆ. ಹಬ್ಬ-ಹರಿದಿನಗಳಲ್ಲಿ ಪರಸ್ಪರ ಹಬ್ಬದೂಟಗಳ ಆಮಂತ್ರಣವಿರುತ್ತದೆ. ದೀಪಾವಳಿ, ಯುಗಾದಿಗಳಲ್ಲಿ ಈ ಹೊಸ ದಂಪತಿಗೆ ಹೊಸ ಬಟ್ಟೆ ಕೊಡಿಸಿ, ಎಡೆಯಿರಿಸುವುದೂ ಇದೆ." (ಅನಂತ ಹುದೆಂಗಜೆಯವರ ಲೇಖನದ ತುಣುಕು ಇದು, ಅಲ್ಪ ಮಾರ್ಪಾಡುಗಳೊಂದಿಗೆ.)

`ಪ್ರೇತ ಮದುವೆ'ಯ ಸಂಪ್ರದಾಯ ಚೀನಾದಲ್ಲೂ ಇದೆ ಎಂದು "ಆತ್ಮ ಚಿಂತನ-೦೪"ರಲ್ಲಿ ಬರೆದಿದ್ದೆ. ಇದೇ ತರಂಗದಲ್ಲಿ ಆ "ಮಿಂಘಮ್" ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ, ನಿಶಾಂತ್. ಅದರ ಸಾರಾಂಶ ಮುಂದಿನ ಕಂತಿನಲ್ಲಿ.