ಹಿಪ್ನೋಥೆರಪಿ-ಭಾಗ-೦೭
ಹಿಪ್ನೋಥೆರಪಿಯಲ್ಲಿ ರಿಗ್ರೆಷನ್
ಸಂದೇಹ ಮತ್ತು ಸಾಧ್ಯತೆಗಳು-೦೩
ಸಂದೇಹ ಮತ್ತು ಸಾಧ್ಯತೆಗಳು-೦೩
ಕಳೆದೆರಡು ಸಂಚಿಕೆಗಳಿಂದಲೂ ಸಂದೇಹ, ಪ್ರಶ್ನೆಗಳನ್ನು ಪರಿಶೀಲಿಸುತ್ತಿದ್ದೇವೆ. ಈ ಸಂಚಿಕೆಯಲ್ಲ್ಲಿ ಮತ್ತೆರಡು ವಿಚಾರಗಳನ್ನು ಎತ್ತಿಕೊಳ್ಳಲಾಗಿದೆ.
ಸಂದೇಹ-೦೧: ಬಹಳಷ್ಟು ಸಾರಿ ನನ್ನ ಅನುಭವಕ್ಕೆ ಬಂದಂತೆ, ಕೆಲವೊಂದು ಸಂದರ್ಭಗಳಲ್ಲಿ, ಕೆಲವು ಘಟನೆಗಳು ನಡೆದಾಗ, ‘ಇದು ಹಿಂದೊಮ್ಮೆ ಎಲ್ಲಿಯೋ ಹೀಗೆಯೇ ನಡೆದಿತ್ತು’ ಅನ್ನುವ ಗಾಢ ಭಾವನೆ ಬರುತ್ತದೆ. ಅದರ ಬಗ್ಗೆ ನಾನು ಕನಸು ಕಂಡಿರಬಹುದು, ಗೊತ್ತಿಲ್ಲ. ಆದರೆ, ಎಲ್ಲಿ, ಯಾವಾಗ ಆ ಘಟನೆ ನಡೆದಿತ್ತು ಅನ್ನುವುದನ್ನು ನೆನಪಿಸಿಕೊಳ್ಳಲಾರೆ. ಇದಕ್ಕೆ ಏನನ್ನುತ್ತಾರೆ? ನನಗೆ ಮಾತ್ರ ಹೀಗೆ ಆಗುತ್ತಿದೆಯೆ?
ಪ್ರತಿಕ್ರಿಯೆ: ಇಂಥ ಪ್ರಶ್ನೆಗಳನ್ನು ಹಲವು ಸಲ ಕೇಳಿದ್ದೇನೆ, ನಾನೂ ಅನುಭವಿಸಿದ್ದೇನೆ. ಎಲ್ಲಿಯೋ ಪಯಣಿಸಿದಾಗ, "ಇಲ್ಲಿ ಬಂದಿದ್ದೆ" ಅನ್ನುವ ಭಾವನೆ; ಯಾರೊಡನೆಯೋ ಮಾತಾಡುವಾಗ (ಅವರೊಂದಿಗೆ ಮೊದಲ ಭೇಟಿಯೇ ಆಗಿರಲಿ), "ಇವೇ ಮಾತುಗಳನ್ನು, ಹೀಗೇ, ಹಿಂದೊಮ್ಮೆ ಮಾತಾಡಿದ್ದೆವು, ಇದೇ ವ್ಯಕ್ತಿಯೊಡನೆ. ಈಗ ಅವರ ಉತ್ತರ ಇಂಥದ್ದೇ ಆಗಿರುತ್ತದೆ" ಅನ್ನುವ ಯೋಚನೆ (ಹಾಗೆಯೇ ಆಗಿರುತ್ತದೆ ಕೂಡಾ); ಯಾವ-ಯಾವುದೋ ವ್ಯಕ್ತಿಗಳು- ಮೊದಲು ಕಂಡಿರದಿದ್ದರೂ- ಭೇಟಿಯಾದಾಗ ತೀರಾ ಪರಿಚಿತರು ಅನ್ನಿಸುವ ಭಾವನೆ-- ಇವೆಲ್ಲವನ್ನೂ ಇಂಗ್ಲಿಷಿನಲ್ಲಿ "ದೇ-ಜ-ವೂ" ಅನ್ನುತ್ತಾರೆ. ಇದು ಮಾಮೂಲು ಅನ್ನಬಹುದಾದಷ್ಟು ಮಾಮೂಲು "ಫಿನಾಮೆನಾ". ನಮಗಿದು ಪೂರ್ವಜನ್ಮದ ಸ್ಮೃತಿಯಿರಬಹುದು (ಸ್ಥಳದ, ವ್ಯಕ್ತಿಯ ಪರಿಚಿತ ಭಾವನೆ), ಅಥವಾ ಕನಸಲ್ಲೂ ಇರಬಹುದು (ಮಾತುಕತೆಗಳ ಸಂದರ್ಭಗಳು), ಅಥವಾ ಎರಡೂ. ಕುತೂಹಲ ಜಾಸ್ತಿಯಿದ್ದರೆ, ಕಂಡುಹಿಡಿಯ"ಬಹುದು"... ಎಲ್ಲ ಕನಸುಗಳ, ನೆನಪುಗಳ ಟಿಪ್ಪಣಿ ಬರೆಬರೆದು ಇಡುತ್ತಾ ಹೋದರೆ ಅಲ್ಲೊಂದು ಇಲ್ಲೊಂದು ಕೊಂಡಿಗಳು ಸಿಗುತ್ತವೆ. ಸಣ್ಣ-ಸಣ್ಣ ಕೊಂಡಿಗಳನ್ನು ಕೂಡಿಸಿ ಒಂದು ಅಂದಾಜು ಚಿತ್ರಣ ಪಡೆಯಬಹುದು.
ಸಂದೇಹ-೦೨: ಡಿಪ್ರೆಶನ್ ಅನ್ನುವುದು ಮನಸ್ಸಿನ ಯಾವ ಸ್ಥಿತಿ?
ಪ್ರತಿಕ್ರಿಯೆ: ಡಿಪ್ರೆಶನ್ ಅನ್ನುವುದನ್ನು ಮಾನಸಿಕ ತಜ್ಞರು (ಸೈಕಾಲಜಿಸ್ಟ್, ಸೈಕಿಯಾಟ್ರಿಸ್ಟ್, ಸೈಕೋಥೆರಪಿಸ್ಟ್), ಅಲೋಪಥಿ ವೈದ್ಯರು, ಮತ್ತು ಸಮ್ಮೋಹನ-ಚಿಕಿತ್ಸಕರು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಾರೆ. ಮಾನಸಿಕ ತಜ್ಞರ ಪ್ರಕಾರ ಅದು ಸೈಕೋ-ನ್ಯೂರಾಟಿಕ್ ಅಥವಾ ಸೈಕೋ-ಸೊಮ್ಯಾಟಿಕ್ (ಮನೋ-ದೈಹಿಕ) ಖಾಯಿಲೆ. ವೈದ್ಯರ ಪ್ರಕಾರ ಅದು ಮಾನಸಿಕ (ಸೈಕಲಾಜಿಕಲ್) ಖಾಯಿಲೆ. ಇವರಿಬ್ಬರೂ ಈ ಖಾಯಿಲೆಗಾಗಿ ದೀರ್ಘಕಾಲಿಕ ನಿವಾರಣಾತಂತ್ರಗಳನ್ನು, ಮದ್ದನ್ನು ಸೂಚಿಸುತ್ತಾರೆ. ಅವರ ಪ್ರಕಾರ ಇದು ಸಂಪೂರ್ಣ ಗುಣವಾಗದ, ಪದೇ ಪದೇ ಬರಬಹುದಾದ, ಗುಳಿಗೆರೂಪದಲ್ಲಿ ಮದ್ದು ಬೇಕೇಬೇಕಾದ "ಖಾಯಿಲೆ". ಹಿಪ್ನಾಟಿಕ್ ಥೆರಪಿಸ್ಟ್ ಪ್ರಕಾರ ಅದೊಂದು ಸ್ಥಿತಿ; ಹಲವಾರು ತೊಂದರೆಗಳ ಮೊತ್ತದಿಂದ ಉಂಟಾಗುವ ಸ್ಥಿತಿ; ಪರಿಹರಿಸಲ್ಪಡುವ, ಬದಲಾವಣೆಗೆ ಒಗ್ಗುವ ಸ್ಥಿತಿ. ಸಾಮಾನ್ಯವಾಗಿ ನಮ್ಮ ಮನಸ್ಸು ಒತ್ತಡಕ್ಕೆ ಸಿಲುಕಿದಾಗ ಅದರಿಂದ ಹೊರಬರುವ ದಾರಿಗಳನ್ನು ತಾನೇ ಹುಡುಕಿಕೊಳ್ಳುತ್ತದೆ. ಕೆಲವೊಮ್ಮೆ, ಒತ್ತಡ ಅತಿಯಾದಾಗ ಅಥವಾ ಒತ್ತಡದ ಪರಿಸ್ಥಿತಿಯಿಂದ ಹೊರಬರುವ ದಾರಿ ಕಾಣದಾದಾಗ ಅಥವಾ ಒತ್ತಡ ತನಗೆ ತಾನೇ ತಂದುಕೊಂಡದ್ದಾದಾಗ (ಸೆಲ್ಫ್ ಇಂಪೋಸ್ಡ್ ಸ್ಟ್ರೆಸ್- "ಇತರರ ಬಗ್ಗೆ ತಾವೇ ಜವಾಬ್ದಾರರು, ಮನೆಯವರೆಲ್ಲರ ಯಾ ಸಹವರ್ತಿಗಳ ನಡವಳಿಕೆಗಳಿಗೆ, ಹಿತಾಸಕ್ತಿಗೆ ತಾವೊಬ್ಬರೇ ಹೆಗಲಾಸರೆ, ಮಾನದಂಡ, ಯಾ ಧರ್ಮದರ್ಶಿ" ಅನ್ನುವಂಥ ಮನೋಧರ್ಮ ಇದ್ದಾಗ) ಮನಸ್ಸು ಮುದುಡುತ್ತದೆ (ಇವು ಕೆಲವು ಉದಾಹರಣೆ ಮಾತ್ರ). ಅಂಥ ಮನಸ್ಸು ಕಾಲಕ್ರಮೇಣ ಎಲ್ಲದರಲ್ಲೂ ಕೆಡುಕನ್ನು, ಹುಳುಕನ್ನು, ಕತ್ತಲನ್ನು ಕಾಣಲು ತೊಡಗುತ್ತದೆ. ಎಲ್ಲವೂ ಅರ್ಥಹೀನವೆನಿಸಬಹುದು. ಜೀವನ ನೀರಸವೆನಿಸಬಹುದು. ಅಂಥ ಮನಸ್ಥಿತಿಯನ್ನು ಸಾಮಾನ್ಯವಾಗಿ ಡಿಪ್ರೆಶನ್ ಅನ್ನುತ್ತಾರೆ. ಈ ನೀರಸ ಮನಸ್ಥಿತಿ ಹೆಚ್ಚಿದಂತೆ, ಆಶಾಭಾವನೆ ತಗ್ಗಿದಂತೆ, ಜೀವನದ ಅರ್ಥವ್ಯಾಪ್ತಿ ಕುಗ್ಗಿದಂತೆ ಆತ್ಮಹತ್ಯೆಯಂಥ ನೇತ್ಯಾತ್ಮಕ ತುಡಿತ (ನೆಗೆಟಿವ್ ಇಂಪಲ್ಸ್) ಹುಟ್ಟಬಹುದು, ಹೆಚ್ಚಬಹುದು. ಹೀಗೆ ವ್ಯಕ್ತಿ ಡಿಪ್ರೆಶನ್ನಿಗೆ ಒಳಗಾದಾಗ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಗಳೂ ಸ್ವಲ್ಪ ಏರುಪೇರಾಗಿ ಗೊಂದಲ ಏರ್ಪಡುತ್ತದೆ. ಅದಕ್ಕಾಗಿಯೇ ವಿಧವಿಧವಾದ ಗುಳಿಗೆ-ಮಾತ್ರೆಗಳು ಲಭ್ಯವಿವೆ. ಆದರೆ ಅವೆಲ್ಲವೂ ವ್ಯಕ್ತಿಯನ್ನು ತನ್ನ "ಹಿಡಿತ"ದೊಳಗೆ ಇರಿಸಿಕೊಳ್ಳುತ್ತವೆ- ಅರ್ಥಾತ್ "ಅಡಿಕ್ಟಿವ್" ಆಗಿವೆ. ಮಾತ್ರೆ-ಗುಳಿಗೆಗಳ ಬದಲಾಗಿ, ಅಂಥ ಸಂದರ್ಭಗಳಲ್ಲಿ ಸಹವರ್ತಿಗಳ ಪ್ರೀತಿ, ವಿಶ್ವಾಸಪೂರ್ಣ ನಡವಳಿಕೆ, ಉತ್ಸಾಹಭರಿತ ಸಾಹಚರ್ಯ, ಒಡನಾಟ, ಅತೀ ಅವಶ್ಯಕ. ಬಹಳಷ್ಟು ಆತ್ಮಹತ್ಯೆಗಳಿಗೆ ಇಂಥ ನೇತ್ಯಾತ್ಮಕ ಮನೋಸ್ಥಿತಿಯೇ ಕಾರಣವಾಗಿರುತ್ತದೆ. ನಿಮಗೆ ಈ ರೀತಿಯ ಮನಸ್ಥಿತಿಯಲ್ಲಿರುವ ಯಾರದ್ದಾದರೂ ಪರಿಚಯವಿದ್ದರೆ ಅವರೊಂದಿಗೆ ಸ್ನೇಹ-ಪ್ರೀತಿಯಿಂದ ನಡೆದುಕೊಳ್ಳಿ. ಜೀವನ ದುರಂತಮಯವಲ್ಲ ಎಂದು ತಿಳುವಳಿಕೆ ಮೂಡಿಸಲು ಪ್ರಯತ್ನಪಡಿ. ಅವರ ತೊಂದರೆ-ಒತ್ತಡದ ಮೂಲ ತಿಳಿಯಲು ಪ್ರಯತ್ನಿಸಿ, ಅದಕ್ಕೆ ಪರಿಹಾರ ಹುಡುಕಲು ಸಹಕರಿಸಿ. ಒಂದು ಘಟನೆಗೆ, ಪರಿಸ್ಥಿತಿಗೆ, ವಾತಾವರಣಕ್ಕೆ ಅನೇಕ ಮುಖಗಳಿವೆ ಅನ್ನುವುದನ್ನು ಮನವರಿಕೆ ಮಾಡಿಸಿ. ನೇತ್ಯಾತ್ಮಕವನ್ನು ಇತ್ಯಾತ್ಮಕ (ಪೊಸಿಟಿವ್ ಥಿಂಕಿಂಗ್) ಆಗಿಸಲು ಪ್ರಯತ್ನಿಸಿ. ಅವರನ್ನು ಸದಾ ಹಿತವಾದ ಚಟುವಟಿಕೆಯಲ್ಲಿರಿಸಿ, ಒಂಟಿಯಾಗಿರಲು ಬಿಡಬೇಡಿ. ಓದುಗರೇ, ನಿಮಗೂ ಇಂಥ ಪ್ರಶ್ನೆ/ಸಂದೇಹಗಳಿದ್ದರೆ ಬರೆದು ತಿಳಿಸಿ. ಪರಸ್ಪರ ಬೆಳೆಯೋಣ.
(ಭಾಮಿನಿ, ಆಗಸ್ಟ್ ೨೦೧೧)
7 comments:
ಅನೇಕ ಸಲ ಈ ದೇಜವೂ ಅನ್ನುವದು
self suggestion ಅಥವಾ co-suggestion ಮಾತ್ರ ಆಗಿರಬಹುದಲ್ಲವೆ?
ಕಾಕಾ, ದೇಜವೂ ಅನ್ನುವುದಕ್ಕೆ ಹಲವಾರು ವಿವರಣೆಗಳನ್ನು ನೀಡುತ್ತಾರೆ. ನೀವಂದಂತೆ ಇದು self suggestion ಆಗಿರಬಹುದು, intuition ಆಗಿರಬಹುದು, ಎಂದೋ ಹಿಂದೆ ಕಂಡ ಕನಸಾಗಿರಬಹುದು, ಪೂರ್ವಜನ್ಮದ ನೆನಪಾಗಿರಬಹುದು... ಹೀಗೇ ‘ಬಹುದು’ಗಳ ಪಟ್ಟಿ ಸಾಗ‘ಬಹುದು’. ಇದಮಿತ್ಥಂ ಎಂದು ಒಂದನ್ನೇ ಹೇಳುವುದು ಅಸಾಧ್ಯ. ಈ ಬಗ್ಗೆ ನನಗಿನ್ನೂ ಆಳವಾದ ಜ್ಞಾನವಿಲ್ಲ, ಕ್ಷಮಿಸಿ.
ಮಾಹಿತಿಯಲ್ಲಿ ತುಂಬಾ ತಪ್ಪುಗಳೇ ಎದ್ದು ಕಾಣುತ್ತಿದೆ, ಕನೀಷ್ಟ ವಿಕಿಪೀಡಿಯ ಓದಿ ಕನ್ನದಲ್ಲಿ ಬರೆದರು ಇಂತಹ ಅಭಾಸ ಆಗುತ್ತಿರಲಿಲ್ಲ.. Déjàvu ಗೆ ಸ್ಪಷ್ಟ ಮೆಡಿಕಲ್ ಉತ್ತರ ಹಲವು ಇದೆ.. ಅದು ಬಿಟ್ಟು ಯಾವುದೋ ಸ್ವಾಮೀಜಿ ಯಂತೆ ಪುನರ್ಜನ್ಮ ಅಂತ ಏನೇನೊ ತೋಚಿದ್ದು ಬರೆದಿದ್ದಿರ.... just i read this bcos of topic headline :) but inside full of nonsense.. oops... dont worry i will be visiing agian to comment next time..but readers should read all these carefully..
ಅನಾಮಿಕ, ನಿಮ್ಮ concernಗೆ ಧನ್ಯವಾದಗಳು.
ವಿಕಿ, ವೆಬ್-ಮೆಡ್, ಸಮ್ಮೋಹನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದಿಯೇ ಬರೆದಿದ್ದೇನೆ. ನನ್ನ ಓದಿನ ಮಟ್ಟಿಗೆ ನನ್ನ ಬರವಣಿಗೆ ಸತ್ಯ ಹಾಗೂ ತಥ್ಯ.
ನಿಮ್ಮ ಭಿನ್ನಾಭಿಪ್ರಾಯವಿದ್ದರೆ ಸ್ಪಷ್ಟವಾಗಿಯೇ ಬರೆಯಿರಿ; ಸುತ್ತು ಬಳಸಿ ಮಾತು ಬೇಡ. ಅದರಲ್ಲೂ ನಿಮ್ಮ ಪ್ರತಿಕ್ರಿಯೆ ದಾಖಲಿಸುವ ನಾಲ್ಕು ಸಾಲುಗಳನ್ನಾದರೂ ತಪ್ಪಿಲ್ಲದೆ ಬರೆಯುವ ರೂಢಿ ಮಾಡಿಕೊಳ್ಳಿ.
ನಿಮಗೆ oops ಅಂತನ್ನಿಸಿದ್ದರೆ ಮತ್ತೊಮ್ಮೆ ಬರುವ-ಓದುವ-ಬಸವಳಿಯುವ ಶ್ರಮ ಬದಿಗಿರಿಸಿ.
ವಂದನೆಗಳು.
Please provide some references, so that will enhance the credibility. Thanks-P
hello,
I'm Ratna, a student teacher.
As a student of psychology I have interest in hypnotherapy. Thank you for giving wonderful information.
I want to know more about these things. Will you please help me?
ನಮಸ್ತೆ ರತ್ನ. ನಿಮ್ಮ ಪ್ರತಿಕ್ರಿಯೆ ಗಮನಿಸಿರಲಿಲ್ಲ. ಕ್ಷಮಿಸಿ.
ಹಿಪ್ನೋಥೆರಪಿ ಬಗ್ಗೆ ನಿಮ್ಮ ಆಸಕ್ತಿ ಇದೆಯೆಂದಿರಿ. ನೀವು ಎಲ್ಲಿದ್ದೀರಿ? ನಾನೀಗ ಮಣಿಪಾಲದಲ್ಲಿ ನೆಲೆಸಿದ್ಡೇನೆ. ಈ ಬಗ್ಗೆ ನಿಮಗೆ ಇನ್ನೂ ಆಸಕ್ತಿಯಿದ್ದಲ್ಲಿ ನಿಮ್ಮ ಫೋನ್ ನಂಬರ್ ಯಾ ಮೈಲ್ ಐಡಿ ಕೊಡಿ. ಅಥವಾ, innerlightmanipal@gmail.com ವಿಳಾಸಕ್ಕೆ ಮೈಲ್ ಮಾಡಿ. ವಿಚಾರ ವಿನಿಮಯ ಮಾಡೋಣ.
Post a Comment