ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday, 22 November 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೧

ಯಾವ ವೀರನ ಕಲ್ಲ-ಬಿಲ್ಲುಗಳು ಈ ರಾಜ್ಯದಲ್ಲಿ....
ಸೆಪ್ಟೆಂಬರ್ ೫, ಶನಿವಾರ

ಮತ್ತೊಂದು ಸೋಮಾರಿ ಶನಿವಾರ. ನಿಧಾನವೇ ಪ್ರಧಾನವಾಗಿದ್ದ ಬೆಳಗು. ಉಳಿದಿದ್ದ ರವೆಯನ್ನೆಲ್ಲ ಹಾಕಿ ಉಪ್ಪಿಟ್ಟು ಮಾಡಿ, ಎರಡನೇ ಸುತ್ತಿನ ಕಾಫ಼ಿ ಹೀರಿ, ಗ್ರೀನ್ ರಿವರ್ ಪಾರ್ಕ್ ಕ್ಯಾಂಪಿಂಗ್ ಜಾಗದ ಶಾಂತಿಯನ್ನು ನನ್ನೊಳಗೆ ಆವಾಹಿಸಿಕೊಂಡು ಅಲ್ಲಿಂದ ಹೊರಟಾಗಲೇ ಹತ್ತೂವರೆ.




ಆರ್ಚಸ್ ನ್ಯಾಷನಲ್ ಪಾರ್ಕಿಗೆ ಅಲ್ಲಿಂದ ಒಂದು ಗಂಟೆಯ ಹಾದಿ. ಬಿಸಿಬಿಸಿ ಬಿಸಿಲಿನ ದಿನಗಳು. ಟೊಪ್ಪಿ, ಧಾರಾಳ ನೀರು, ಒಂದಿಷ್ಟು ಸ್ನ್ಯಾಕ್ಸ್- ಎಲ್ಲವನ್ನೂ ಕೈಗೆಟಕುವಂತೆ ಜೋಡಿಸಿಕೊಂಡಿದ್ದೆ. ಪಾರ್ಕ್ ಗೇಟ್ ಬಳಿ ಬಂದಾಗ ಹನ್ನೊಂದು ಇಪ್ಪತ್ತು. ಮುಖ್ಯ ದ್ವಾರ ಫಲಕದ ಚಿತ್ರ ತೆಗೆಯಲು ಹೋದರೆ ಅಲ್ಲೊಂದು ಪುಟಾಣಿ ಫಲಕಕ್ಕೆ ಅಂಟಿದಂತೆ ಆಡುತ್ತಿತ್ತು. ಅವಳಪ್ಪ ಅಂದು ಕ್ಯಾಮರಾ ತಂದಿರಲಿಲ್ಲ; ತನ್ನದೂ ಫೋಟೋ ಬೇಕೆಂದು ಅವಳ ತಕರಾರು. "ತೆಗೆಯಲೇ, ಮತ್ತೆ ಕಳಿಸಿಕೊಡುತ್ತೇನೆ, ಮೈಲ್ ಐಡಿ ಕೊಡಿ" ಅಂದರೆ, ಪೆಚ್ಚಾಗಿ ನೋಡಿದಾತ, "ನಮ್ಮ ಮನೆ ಇಲ್ಲೇ, ಕಾಲು ಗಂಟೆ ಹಾದಿ. ಸದಾ ಇಲ್ಲಿಗೆ ಬರುತ್ತಿರುತ್ತೇವೆ. ನಾಳೆಯೇ ಮತ್ತೆ ಕ್ಯಾಮರಾ ತಗೊಂಬಂದು ಚಿತ್ರ ತೆಗೀತೇನೆ" ಅಂದ. ಅಂತೂ ಇಂತೂ ಮುಗ್ಧ ಮೊಂಡಾಟದ ಮುದ್ದು ಮಗು ಅತ್ತ ಸರಿದಾಗ ತುಸು ಹೊತ್ತೇ ಆಗಿತ್ತು. ಫಲಕದ ಚಿತ್ರ ತೆಗೆದು ವಿಸಿಟರ್ ಸೆಂಟರಿಗೆ ಬಂದೆವು.





ಆರ್ಚಸ್ ಬಗ್ಗೆ ಇಪ್ಪತ್ತು ನಿಮಿಷಗಳ ಸಾಕ್ಷ್ಯ ಚಿತ್ರ ನೋಡಿ ಬೆಟ್ಟದ ಮೇಲೆ ಗಾಡಿ ಏರಿತು. ಒಂದೊಂದಾಗಿ ಅಲ್ಲಿನ ಶಿಲಾರಚನೆಗಳನ್ನು ನೋಡುನೋಡುತ್ತಾ ಅಪರಾಹ್ನ, ಸಂಜೆ, ರಾತ್ರೆಯಾಗಿದ್ದೂ ತಿಳಿಯಲೇ ಇಲ್ಲ. ನೋಡದೇ ಬಿಟ್ಟ ರಚನೆಗಳು ಹಲವಿದ್ದರೂ, ನಮ್ಮ ಅರ್ಧ ದಿನದ ಬಿಡುವಿಗೆ ದಕ್ಕಿದ್ದರಲ್ಲಿ ಕೆಲವೇ ಕೆಲವು ಇಲ್ಲಿ....

"ಪೆಂಗ್ವಿನ್ಸ್"
(ಇದೇ ರೀತಿಯಲ್ಲಿ- ತ್ರೀ ಗಾಸಿಪ್ಸ್, ಟವರ್ ಆಫ಼್ ಬೇಬ್ಲ್, ದ ಆರ್ಗನ್- ಇತ್ಯಾದಿ ರಚನೆಗಳಿವೆ)


"ಪಾರ್ಕ್ ಅವೆನ್ಯೂ"


"ಕುರಿ ಕಲ್ಲು" (ಶೀಪ್ ರಾಕ್)
(ಕಾರ್ಕಳದಿಂದ ಕಾಣುವ ಪಡುಘಟ್ಟದ ಸಾಲಿನಲ್ಲಿ ಕುರಿಂಗಲ್ಲು ಇರುವ ನೆನಪಾಯ್ತು)


"ಬ್ಯಾಲೆನ್ಸಿಂಗ್ ರಾಕ್"




"ಉತ್ತರ ಮತ್ತು ದಕ್ಷಿಣ ಕಿಟಕಿಗಳು"- ‘ದ ವಿಂಡೋಸ್’ ಟ್ರೈಲ್


ಟರೆಟ್ ಆರ್ಚ್


ಡಬಲ್ ಆರ್ಚ್


ಜೋಡು ಬಿಲ್ಲುಗಳ ಜಾಯಿಂಟ್!


ಯೂಟಾ ರಾಜ್ಯದ ಲಾಂಛನ- ಡೆಲಿಕೇಟ್ ಆರ್ಚ್
(ಇದರ ಬದಿಗೆ ಹೋಗಿ ನೋಡಿಲ್ಲ, ಮೂರೂವರೆ ಮೈಲಿನ ಟ್ರೈಲ್- ಸಮಯಾವಕಾಶವಿರಲಿಲ್ಲ. ಪಕ್ಕದ ಬೆಟ್ಟದಿಂದ ತೆಗೆದ ಚಿತ್ರ.)




ಡಬಲ್ ‘O’ ಆರ್ಚ್




ಅತಿ ದೊಡ್ಡ ಆರ್ಚ್- ಲ್ಯಾಂಡ್ ಸ್ಕೇಪ್ ಆರ್ಚ್
ಇದರ ಅಗಲ ಫ಼ುಟ್ ಬಾಲ್ ಕ್ರೀಡಾಂಗಣಕ್ಕಿಂತಲೂ ಜಾಸ್ತಿ. ೧೯೯೬ರಲ್ಲಿ (ಬಹುಶಃ) ಇದರ ಒಳಭಾಗದಿಂದ ದೊಡ್ಡದೊಂದು ಬಂಡೆಚೂರು ಬಿದ್ದು ಹೋಗಿ ಇದೀಗ ತೆಳುವಾಗಿದೆ. ಆದ್ದರಿಂದ ಇದರ ಬಳಿಗೆ ಹೋಗಲನುಮತಿಯಿಲ್ಲ.




ಸ್ಕೈ ಲೈನ್ ಆರ್ಚ್
೧೯೪೦ರಲ್ಲಿ ಇದರ ಎಡ-ಒಳಭಾಗದಿಂದ ಬಂಡೆಯೊಂದು ಕಳಚಿ ಬಿದ್ದು ಇದರ ಒಳಾವರಣ ದ್ವಿಗುಣವಾಯ್ತು.


ಅಲ್ಲೆಲ್ಲೋ ಸುತ್ತಾಡುವಾಗ, ಯಾರದೋ ಮಾತಿನಲ್ಲಿ, ಇಲ್ಲಿಂದ ಒಂದರ್ಧ ಗಂಟೆ ಹಾದಿಯ ಕ್ಯಾನಿಯನ್ ಲ್ಯಾಂಡ್ಸ್ ಕೂಡಾ ಸುಂದರ ತಾಣವೆಂದೂ ತಿಳಿದುಬಂತು. ನಮ್ಮ ಟೂರ್ ಪ್ಲಾನ್ ಅದನ್ನು ಒಳಗೊಂಡಿರಲಿಲ್ಲ. ಭಾನುವಾರದಂದು ಬೆಳಗ್ಗೆ ಗ್ರೀನ್ ರಿವರ್ ಪಾರ್ಕಿನಿಂದ ಹೊರಟು, ಮಧ್ಯಾಹ್ನದ ಹೊತ್ತಿಗೆ ಸಾಲ್ಟ್ ಲೇಕ್ ಸಿಟಿ ಸೇರಿ, ಸಂಜೆಯೆಲ್ಲ ಅಲ್ಲಿಯೇ ಒಂದಿಷ್ಟು ಸುತ್ತಾಡುವ ಯೋಜನೆಯಲ್ಲಿದ್ದೆವು. ಈ ಮಾತು ಕೇಳಿದ ಮೇಲೆ, ಅದನ್ನೂ ನೋಡಿಕೊಂಡು ಹೋಗುವ ಯೋಚನೆ ಬಂತು. ಸಿಟಿಯನ್ನು ಬೇರೆ ಯಾವಾಗಲಾದರೂ ನೋಡಬಹುದು, ನ್ಯಾಷನಲ್ ಪಾರ್ಕ್ ಪಾಸ್ ಇರುವಾಗ ಅದನ್ನು ನೋಡಿಬಿಡೋಣವೆಂದು ಲೆಕ್ಕ ಹಾಕಿಕೊಂಡು ಗ್ರೀನ್ ರಿವರ್ ಪಾರ್ಕಿಗೆ, ನಮ್ಮ ಟೆಂಟಿಗೆ ಮರಳಿದಾಗ ಒಂಭತ್ತು ಗಂಟೆ. ಹಣ್ಣು, ಮೊಸರವಲಕ್ಕಿ, ಉಪ್ಪಿನಕಾಯಿಯ ಡಿನ್ನರ್ ಮುಗಿಸಿ, ಪಾರ್ಕಿನೊಳಗೆ ಒಂದು ವಾಕ್ ಮಾಡಿ ಬಂದು ಬೇಗನೇ ಮಲಗಿದೆವು, ಕ್ಯಾನಿಯನ್ ಲ್ಯಾಂಡ್ಸ್ ಬಗ್ಗೆ ಕಲ್ಪನೆ ಕಟ್ಟುತ್ತಾ.

5 comments:

ಸೀತಾರಾಮ. ಕೆ. / SITARAM.K said...

ಮೇಡ೦,
ಅದ್ಭುತ ಚಿತ್ರಗಳು. ಜೊತೆಗೆ ಪುಟ್ಟ ಒಪ್ಪ ತಲೆಬರಹ. ತಮ್ಮ ಚಾಯಚಿತ್ರಗಳನ್ನು ಪಿಕಾಸದಲ್ಲಿ ಎರಿಸಿದ ನ೦ತರ ಇಳಿಕೆ ಕೊ೦ಡಿ (download link)ಕಳುಹಿಸಲು ಮರೆಯಬೇಡಿ.

ಅಲೆಮಾರಿ said...

ಅಕ್ಕಯ್ಯ ನಾ ಬ್ಲಾಗ್ ನ ನಿಲ್ಲಿಸ್ತ ಇದ್ದೀನಿ . ನಿಮ್ಮೆಲ್ಲರ ಬ್ಲಾಗ್ ನ ಆಗಾಗ ನೋಡ್ತಾ ಇರ್ತೀನಿ. ಪಿಕಾಸ ಕೆ ಹಾಕಿದಾಗ ಫೋಟೋಸ್ ನ ಲಿಂಕ್ ಕಳಿಸೋಕೆ ಮರಿಬೇಡ. ಟಾಟಾ

ಸುಪ್ತದೀಪ್ತಿ suptadeepti said...

ಸೀತಾರಾಮ್ ಸರ್, ವಂದನೆಗಳು. ಲಿಂಕ್ ಕೊಡುತ್ತೇನೆ.

ಗೌತಮ್, ಯಾಕೋ? ಬ್ಲಾಗಿಂಗ್ ಬೇಜಾರಾಯ್ತಾ? ಲಿಂಕ್ ಕೊಡ್ತೇನೆ, ಓಕೆ?

ಅಲೆಮಾರಿ said...

ಅಕ್ಕಯ್ಯ ಇತ್ತೀಚಿಗೆ ಹೊಸ ಹವ್ಯಾಸ ನನ್ನ ಕೈ ಹಿಡಿದಿದೆ . ಬ್ಲಾಗ್ ಲೋಕದ ಹಳಬರ ಮೊದಮೊದಲ ಬ್ಲಾಗ್ ಪೋಸ್ಟ್ ಗಳನ್ನ ಓದುವುದು. ಹಾಗೆ ಸದ್ಯ ನಿನ್ನ ಬ್ಲಾಗ್ ನ ಪ್ರಾರಂಭದ ಪೋಸ್ಟ್ ಗಳನ್ನೆಲ್ಲ ಸಾಲಾಗಿ ಓದುತ್ತ ಬಂದೆ. ನನ್ನ ಅಕ್ಕಯ್ಯ ನ ಬರಹದ ವಿರಾಟ್ ರೂಪದ ದರ್ಶನವಾಯ್ತು ( ಬರಹ ಮಾತ್ರವಲ್ಲ ನಿನ್ನ ವ್ಯಕ್ತಿತ್ವದ ದರ್ಶನ ಕೂಡ ) . ನಿನ್ನ' ಆತ್ಮ ಚಿಂತನ' ನನ್ನನ್ನ ಹೊಸ ಆಲೋಚನೆಗಳಿಗೆ , ಹೊಸ ದಿಕ್ಕಿಗೆ ಮುಖ ಮಾಡಿ ನಿಲ್ಲಿಸಿದೆ. ಕೆಲವು ನನ್ನ ಪ್ರಶ್ನೆಗಳು ಉತ್ತರ ಕಂಡು ಕೊಂಡಿವೆ . ' ನಮ್ಮ ನಿಮ್ಮೊಳಗೆ -೦೪ ' ರ ಕೋತಿಯ ಕಥೆ ಇಲ್ಲಿ ಪ್ರಮುಖವಾಗಿ ಉಲ್ಲೇಖಿಸಬೇಕಾದುದು . ಜಗತ್ತಿನಲ್ಲಿ ಬದುಕು ಮುಖ್ಯ . ಬದುಕಿನ ಮುಂದೆ ಆದರ್ಶಗಳು , ತತ್ವಗಳು ಗೌಣ ಎಂದು ಕೊಳ್ಳುತ್ತಿದ್ದೆ ಈ ಸುತ್ತಲ ಜಗತ್ತನ್ನ ಕಂಡಾಗ . ಪ್ರಕೃತಿ ಕೂಡ ಬದುಕನ್ನ ಬೆಂಬಲಿಸುತ್ತೆ . ಬದುಕೋ ರೀತಿ ಅಲ್ಲಿ ಮುಖ್ಯವಲ್ಲ ಎಂದು ಯೋಚಿಸಿ ತುಂಬಾ practical ಆಗಿ ಯೋಚಿಸಲು ಪ್ರಯತ್ನಿಸಿದ್ದೇನೆ ಕೂಡ. ಆದರೆ ನಡುವೆ ಗೊಂದಲ ಎದುರಾಗುತ್ತಿತ್ತು ಈ practical ಬದುಕು ನಿಜಕ್ಕೂ ಸರಿನ ಅಂತ . ಈಗ ನಾನು ನಿರಾಳವಾಗಿದ್ದೇನೆ. ದ್ವಂದ್ವ ಇಲ್ಲ ಈಗ . ನಾನು ಬದುಕುತ್ತಿರುವ ರೀತಿ , ಯೋಚಿಸುವ ಧಾಟಿ ಪ್ರಕೃತಿಗೆ ಪೂರಕವಾಗಿದೆ ಎಂಬ ನೆಮ್ಮದಿ ಈಗ ನನ್ನದಾಗಿದೆ .:):) ಮತ್ತೆ ನನ್ನ ಬ್ಲಾಗ್ ಶುರುವಾಗ್ತಿದೆ . ಅದೂ ಕೂಡ ನಿನ್ನ ಬರಹದ ಸ್ಫೂರ್ತಿ ಸೆಲೆಯಿಂದಲೇ .;

ಸುಪ್ತದೀಪ್ತಿ suptadeepti said...

ಗೌತಮ್ಮಯ್ಯ,
ಹಳೇ ಬ್ಲಾಗುಗಳ ಹಳೇ ಪೋಸ್ಟ್ ಓದೋದು ಖುಷಿ ಕೊಡತ್ತೆ ಅಂತ ಗೊತ್ತಿತ್ತು. ಆದ್ರೆ ಈ ಬ್ಲಾಗಿನ ಹಳೇ ಬರಹಗಳು ಹೊಸದೊಂದು ಚಿಗುರಿಗೆ ನೀರೆರೆಯಬಲ್ಲವು ಅನ್ನುವ ಕಲ್ಪನೆಯಿರಲಿಲ್ಲ ನೋಡು.
‘ಆತ್ಮ ಚಿಂತನ’, ‘ನಮ್ಮ-ನಿಮ್ಮೊಳಗೆ’ - ಇವೆಲ್ಲ ಸೀರೀಸ್ ಸದ್ಯಕ್ಕೆ ಸ್ಥಗಿತವಾಗಿವೆ. ಇನ್ನೆರಡು ವಾರದ ಮಟ್ಟಿಗೆ ಪ್ರವಾಸ ಪುರವಣಿಯೂ ಬ್ರೇಕ್ ಹಾಕಿರತ್ತೆ. ಹಾಗಂತ ಬ್ಲಾಗ್ ಖಾಲಿಯಿರೋದಿಲ್ಲ. ಬೇರೆ ರೀತಿಯ ಬರಹಗಳು ಕ್ಯೂನಲ್ಲಿವೆ. ಓದ್ತೀಯಲ್ಲ.
ನಿನ್ನ ಫೋನ್ ನಂಬರ್ ಇಲ್ಲಿಂದ ತೆಗೆದಿದ್ದೇನೆ. ಈಗಾಗಲೇ ತಡವಾಗಿದ್ದಕ್ಕೆ ಕ್ಷಮಿಸು. ಡಿಸೆಂಬರ್ ಹತ್ತರ ನಂತರ ಸ್ವಲ್ಪ ಬಿಡುವಾಗುತ್ತೇನೆ, ಆಗ ಫೋನ್ ಮಾಡ್ತೇನೆ, ಆಯ್ತಾ? ನಿನ್ನ ಬ್ಲಾಗ್ ಓದಕ್ಕೂ ಆಮೇಲೇನೇ ಟೈಮ್ ಸಿಗೋದು. ಅಲ್ಲೀತನ್ಕ ಬೈ ಬೈ.