ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೫
ಗ್ರ್ಯಾಂಡ್ ಕ್ಯಾನಿಯನ್- ಉತ್ತರ ದಡದಲ್ಲಿ ನಮ್ಮ ದೇವರು....
ಸೆಪ್ಟೆಂಬರ್ ೧ ಮಂಗಳವಾರ:
ಮೂರು ದಿನಗಳು ಬೇಗನೇ ಎದ್ದಿದ್ದ ನಾವು ಇಂದು ಸ್ವಲ್ಪ ನಿಧಾನಕ್ಕೇ ಎದ್ದೆವು. ಟೆಂಟಿನಿಂದ ಹೊರಗೆ ಬಂದಾಗ ಗೊತ್ತಾಯ್ತು, ಇಳಿಜಾರಿನಲ್ಲಿದ್ದ ನಮ್ಮ ಕ್ಯಾಂಪ್ ಸೈಟಿನ ಆಚೆಗೊಂದು ಕಣಿವೆ. ಅದರ ಹತ್ತಿರ ಹೋಗಿ ಅದೆಷ್ಟು ಆಳವಿದೆಯೆಂದು ನೋಡುವ ಇಚ್ಛೆ ಬರಲಿಲ್ಲ. ಹಾಗೇ ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿ, ಟೆಂಟ್ ಬಿಚ್ಚಿ ಹೊರಟಾಗ ಗಂಟೆ ಒಂಭತ್ತು. ನಿನ್ನೆ ರಾತ್ರೆ ಇಲ್ಲಿಗೆ ಬರುತ್ತಿರುವಾಗ ಹಾದಿ ಬದಿಯಲ್ಲಿ ಮೇಯುತ್ತಿದ್ದ ಜಿಂಕೆ ಹಿಂಡುಗಳಲ್ಲಿ ಒಂದಾದರೂ ಈ ಬೆಳಗಿನ ಬೆಳಕಲ್ಲಿ ಕ್ಯಾಮರಾ ಕಣ್ಣಿಗೆ ಬೀಳಬಹುದೆಂದು ಸ್ವಲ್ಪ ನಿಧಾನವಾಗಿಯೇ ಸಾಗಿದರೂ ಒಂದೇ ಒಂದು ಜಿಂಕೆಯೂ ನಮ್ಮ ಕಣ್ಣಿಗೂ ಬೀಳಲಿಲ್ಲ. ನಿನ್ನೆ ರಾತ್ರೆ ಬರುವ ಹಾದಿಯುದ್ದಕ್ಕೂ, ಫ್ರೀವೇ ಬದಿಯಲ್ಲೇ ಮೇಯುತ್ತಿದ್ದ ಅವುಗಳನ್ನು ಅಲ್ಲಲ್ಲಿ ಕಂಡದ್ದೆಲ್ಲ ಕನಸೇ ಎಂದು ಪ್ರಶ್ನಿಸಿಕೊಳ್ಳುವಂತಾಯ್ತು. ಹಾಗೇನೇ ಕಾರಿನ ಹೆಡ್ ಲೈಟಿನಲ್ಲಿ ಹೊಳೆಯುತ್ತಿದ್ದ ಅವುಗಳ ಹೊಂಗಣ್ಣ ಹೊಳಪು, ಮೇಯುತ್ತಿದ್ದ ಜಿಂಕೆ ಥಟ್ಟನೆ ತಲೆಯೆತ್ತಿ ನೋಡುವಾಗಿನ ಸೋಜಿಗ, ಗಾಂಭೀರ್ಯ ನೆನಪಿನಲ್ಲಿ ಅಚ್ಚಾಗಿ ಕೂತು, ಕನಸಲ್ಲವೆಂದು ಸಾಂತ್ವನ ಕೊಟ್ಟಿವೆ.
ಮೊದಲಿಗೆ ವಿಸಿಟರ್ ಸೆಂಟರ್ ಬಳಿ ಹೋಗಿ ಅಲ್ಲಿಂದ ಬ್ರೈಟ್ ಏಂಜೆಲ್ ಪಾಯಿಂಟ್ ಕಡೆಗೆ ಸಣ್ಣ ಹೈಕಿಂಗ್. ಹದವಾದ ಏರಿಳಿತಗಳ ಈ ಹೈಕ್ ಒಂದೆರಡು ಕಡೆ ಬರಿಯ ಕಾಲುಹಾದಿ ಮಾತ್ರವೇ ಗುಡ್ಡದ ನೆತ್ತಿಯಲ್ಲಿ ಹಾಯುವಾಗ (ಎಡಬಲಗಳಲ್ಲಿ ಪ್ರಪಾತ!) ಅಮೋಘ ಅನುಭವ ಕೊಡುತ್ತದೆ. ಕೊನೆಯಲ್ಲಿ ಬ್ರೈಟ್ ಏಂಜೆಲ್ ಪಾಯಿಂಟ್ ಇದೆ. ಅಲ್ಲಿಂದ ಬಲಕ್ಕೆ ಬ್ರೈಟ್ ಏಂಜೆಲ್ ಕಣಿವೆ, ಎಡಕ್ಕೆ ಏಂಜೆಲ್ಸ್ ಗೇಟ್, ದೇವ ಟೆಂಪಲ್, ಬ್ರಹ್ಮ ಟೆಂಪಲ್, ಝೋರೋವಾಸ್ಟರ್ ಟೆಂಪಲ್ ಸಾಲಿನಲ್ಲಿ ಕಾಣುತ್ತವೆ. ಇಲ್ಲಿಂದ ದೇಗುಲಗಳ ಚಿತ್ರ ತುಸುವಾದರೂ ದಕ್ಕಿತು, ಸಮಾಧಾನವಾಯ್ತು.
ವಿಸಿಟರ್ ಸೆಂಟರಿನ ಬದಿಯಿಂದ ಇನ್ನೂ ಎರಡು ಮೂರು ಟ್ರೈಲ್ಸ್ ಹೊರಡುತ್ತವೆ, ನಾವು ಅವು ಯಾವುದರಲ್ಲೂ ನಮ್ಮ ಶೂ ಧೂಳು ಇರಿಸಲಿಲ್ಲ. ಕಾರನ್ನೇರಿ ಉತ್ತರ ದಡದ ಇನ್ನೆರಡು ಮುಖ್ಯ ತಾಣಗಳಾದ ಪಾಯಿಂಟ್ ಇಂಪೀರಿಯಲ್ ಮತ್ತು ಕೇಪ್ ರಾಯಲ್ ಕಡೆಗೆ ಹೊರಟೆವು. ಇವೆರಡೂ ತಾಣಗಳಲ್ಲೂ ಅವಸರವಸರದಲ್ಲೇ ಕೆಲವು ಫೋಟೋ ಹೆಕ್ಕಿಕೊಂಡದ್ದಾಯ್ತು.
ಅಪರಾಹ್ನ ಮೂರು ಗಂಟೆಗೆ ಇಲ್ಲಿಂದ ನೂರಮೂವತ್ತು ಮೈಲು ದೂರದಲ್ಲಿ ಆಂಟಲೋಪ್ ಸ್ಲಾಟ್ ಕ್ಯಾನಿಯನ್ ಟೂರ್ ನಿಗದಿಯಾಗಿತ್ತು. ಬೆಟ್ಟಗುಡ್ಡದ ರಸ್ತೆಯಲ್ಲಿ ಅಲ್ಲಿಗೆ ಎರಡೂವರೆಗೆ ತಲುಪಬೇಕಾಗಿತ್ತು. ಸಾವಕಾಶ ಮಾಡುವ ಅವಕಾಶವೇ ಇರಲಿಲ್ಲ. ಕೇಪ್ ರಾಯಲ್ ಪಾರ್ಕಿಂಗ್ ಲಾಟಿನಲ್ಲಿ ಕಾರೊಳಗೇ ಕೂತು ಡಬ್ಬಿಯೂಟ ಮುಗಿಸಿ, ಪರ್ಯಾಯ ಹೈವೇ ೮೯ ಸೇರಿದಾಗ ಮಧ್ಯಾಹ್ನ ಹನ್ನೆರಡೂಮುಕ್ಕಾಲು.
ಕ್ಲಿಫ್ ಡ್ವೆಲ್ಲರ್ಸ್, ಕ್ಲಿಫ್ ವ್ಯೂ, ಮಾರ್ಬಲ್ ಕ್ಯಾನಿಯನ್, ವರ್ಮಿಲಿಯನ್ ಕ್ಲಿಫ್, ಮುಂತಾದ ಮೂಲ ಇಂಡಿಯನ್ಸ್ ಪ್ರದೇಶಗಳನ್ನು ಹಾದು, ಮರುಭೂಮಿಯಂಥ ವಿಸ್ತಾರದಲ್ಲಿ ಕೆಳಗೆಲ್ಲೋ ಕೊರಕಲಿನಲ್ಲಿ ಸಾಗುವ ಕೊಲರಾಡೊ ನದಿಯನ್ನೂ ದಾಟಿ, ಬೆಟ್ಟದ ಏರಿಳಿತಗಳಲ್ಲಿ ಸಾಗಿ ಪೇಜ್ ಎನ್ನುವ ಊರಿಗೆ ಬಂದು ಸೇರಿದಾಗ ಎರಡೂನಲ್ವತ್ತು. ಅಲ್ಲಿಂದಲೇ ಮುಂದಿನ ಟೂರ್. ಅದರ ವಿವರ ಮುಂದಿನ ಕಂತಿಗೆ.
7 comments:
ಸುಂದರ ಪ್ರವಾಸ ಕಥನ,,, ತುಂಬ ಚೆನ್ನಾಗಿ ಇದೆ ಎಲ್ಲ ಬರಹಗಳು....ಮುಂದುವರಿಸಿ....ನಮಗೂ ಒಳ್ಳೆ ಮಾಹಿತಿ....
nice photos & explanation
ತುಂಬಾ ಒಳ್ಳೆಯ ಮಾಹಿತಿ ನೀಡುತ್ತಿದ್ದಿರಿ,
ಇದೊಂದು ಪ್ರಕ್ರತಿಯ ಸ್ವರ್ಗವೇ ಎನಿಸುತ್ತಿದೆ
ಎಷ್ಟೆಲ್ಲಾ ಸುತ್ತಿದ್ದೀರಿ ಅನಿಸಿತು. ಚಿತ್ರಗಳು ಮೊದಲೇಕೋ ತೆರೆದುಕೊಳ್ಳಲಿಲ್ಲ. ಈಗ ಕಾಣಿಸುತ್ತಿದೆ, ಪಯಣ ಮುಂದುವರೆಯಲಿ. ನಾ ರೆಡಿ...
ಎಲ್ಲರಿಗೂ ಧನ್ಯವಾದಗಳು.
ಗುರು, ಈ ಕಥನ ಪುರವಣಿ ಶುರುಮಾಡಿದ ಉದ್ದೇಶಗಳಲ್ಲಿ ಮಾಹಿತಿ ಸಂವಹನವೂ ಒಂದು. ಅದು ಕೂಡ ಓವರ್ಲೋಡ್ ಆಗ್ತಿದೆಯೇನೋಈ ಅಂತ ಯೋಚನೆಯಿತ್ತು, ನಿಮ್ಮ ಹೇಳಿಕೆಯಿಂದ ನಿವಾರಣೆಯಾಯ್ತು; ಥ್ಯಾಂಕ್ಸ್.
ಸೀತಾರಾಮ್, ನಾನು ಕಂಡದ್ದರಲ್ಲಿ ಸಣ್ಣ ಒಂದು ಭಾಗವಷ್ಟೇ ಫೋಟೋ ರೂಪದಲ್ಲಿ ಇಲ್ಲಿದೆ. ಎಲ್ಲವನ್ನೂ ಅಲ್ಲೇ ನೋಡುವ ಅನುಭವವನ್ನೂ ಪೂರ್ತಿಯಾಗಿ ಅಕ್ಷರಕ್ಕಿಳಿಲು ಅಸಮರ್ಥಳಾಗಿದ್ದೇನೆ. ಪ್ರಕೃತಿಯ ಅಗಾಧತೆ ನಮ್ಮ ಹಿಡಿತಕ್ಕೆ ಸಿಕ್ಕೀತೆ?
ಗುರುಮೂರ್ತಿ, ಪ್ರಕೃತಿಯೇ ಸ್ವರ್ಗ. ಅದರ ಬೇರೆಬೇರೆ ತಾಣಗಳನ್ನು ತುಣುಕು ತುಣುಕುಗಳಾಗಿ ಮಾತ್ರವೇ ನಾವು ಕಾಣುತ್ತೇವೆ. ನಮ್ಮ ಸೀಮಿತ ದೃಷ್ಟಿಯ ಸೀಮಿತ ನೋಟವೇ ನಮ್ಮನ್ನು ಅವಾಕ್ಕುಗೊಳಿಸುತ್ತೆಯಾದರೆ ಅದರ ಪೂರ್ಣ ವ್ಯಾಪ್ತಿಯಲ್ಲಿ ಹೇಗಿದ್ದೀತು? ಊಹಿಸಲೂ ಸಾಧ್ಯವಾಗುತ್ತಿಲ್ಲ.
ವೇಣಿ, ಎಷ್ಟೆಲ್ಲಾ ನೋಡಲು ಬಿಟ್ಟಿದ್ದೇವೆ ಅಂದುಕೊಂಡೇ ಪ್ರತಿಯೊಂದು ಸ್ಥಳದಿಂದ ಹೊರಟಿದ್ದೆ. "ದೌಡಾ ಭಾಗಾ" ರೇಸ್ ಆಗಿತ್ತು ನಮ್ಮ ಟ್ರಿಪ್. ಎಲ್ಲವನ್ನೂ (ಬೇರೆ ಎಲ್ಲ ತಾಣಗಳನ್ನೂ ಸೇರಿಸಿ) ಪೂರ್ಣವಾಗಿ ನೋಡಲು ಈ ಒಂದು ಜನ್ಮದಲ್ಲೂ ಸಾಧ್ಯವಿಲ್ಲೇನೊ ಅನಿಸಿದೆ ನನಗೆ.
ಅಂಕೆಗೆ ಅನ್ಕುಶಕ್ಕೆ ಸಿಕ್ಕದ ನನ್ನ ಅನುಭವ-ಮಿತಿಯಲ್ಲಿ ಬಂದ ಎರಡು ವಿಷಯಗಳು - ಪ್ರಕೃತಿ ಹಾಗು ಹೆಣ್ಣು -D.M.Sagar
ಸಾಗರ್, ನಿನ್ನ ಪ್ರತಿಕ್ರಿಯೆಗೆ ಎಲ್ಲೆಲ್ಲಿ ಹೇಗ್ಹೇಗೆ ವಿರಾಮ ಚಿಹ್ನೆಗಳನ್ನು ಹಾಕಿಕೊಂಡು ಓದಬೇಕೋ ತಿಳಿಸಿಬಿಡು ಮಾರಾಯ!
Post a Comment