ನಮ್ಮ-ನಿಮ್ಮೊಳಗೆ-೦೯
ಹೀಗೇ ಏನೋ ಒಂದು.
ಕಳೆದ ಶುಕ್ರವಾರ ಆಗಸ್ಟ್ ಹದಿನಾಲ್ಕರ ರಾತ್ರೆ ನೆಂಟರಿಷ್ಟರ ಜೊತೆ ಹೋಟೆಲಲ್ಲಿ ಊಟ ಮಾಡಿ ನಂತರ ನಾವಿಬ್ಬರೂ "ಅಲ್ಲಿಗೆ" ಗಾಡಿ ತಿರುಗಿಸಿದೆವು. ತಲುಪಿದಾಗ ರಾತ್ರೆ ಹತ್ತೂಮುಕ್ಕಾಲು.
ಸುತ್ತೆಲ್ಲ ಕತ್ತಲಿದ್ದರೂ ನಾವಲ್ಲಿ ಸೇರಿದಾಗ ಒಂದೆರಡು ಗಾಡಿಗಳಿದ್ದವು. ಅಲ್ಲಿಂದ ಪೂರ್ವಕ್ಕೆ ಚಿಣುಕು ಮಿಣುಕು ದೀಪಗಳ ‘ಬೇ ಏರಿಯಾ’. ಸ್ಯಾನ್ ಮೆಟಿಯೋ ಸೇತುವೆ, ಡಂಬಾರ್ಟನ್ ಸೇತುವೆ, ಮಿಲ್ಪಿಟಾಸ್, ಫ್ರೀಮಾಂಟ್, ಪೂರ್ವೋತ್ತರದ ಓಕ್ಲಾಂಡ್, ಇತ್ತ ಕಡೆಯ ಮೌಂಟೆನ್ ವ್ಯೂ, ಪಾಲೋ ಆಲ್ಟೋ, ಸ್ಯಾನ್ ಮೆಟಿಯೋ... ಹೀಗೆ ‘ಬೇ’ ಸುತ್ತೆಲ್ಲ ಮಿನುಗುವ ಜಗಮಗ. ಗಾಳಿ-ಚಳಿಗೆ ತಕ್ಕ ರಕ್ಷಣೆಯಿತ್ತಾದಲ್ಲಿ ಅಲ್ಲಿ ನಿಂತಿರುವುದೇ ಮೋಜು. ಜುಲೈ ನಾಲ್ಕರ ಪಟಪಟ ಪಟಾಕಿಗಳನ್ನು ದೂ...ರದಿಂದ ಸವಿಯಲು ಇದಕ್ಕಿಂತ ಪ್ರಶಸ್ತ ಜಾಗ ಸಿಗಲಾರದೇನೋ!
ಗಂಟೆ ಹನ್ನೊಂದಾಗುತ್ತಿದ್ದಂತೆ ಇದ್ದ ಕಾರುಗಳು ಹೋಗಿ ಮತ್ತೆ ಕೆಲವು ಬಂದವು. ಒಂದೆರಡು ಕೆಲವೇ ಕೆಲವು ಕ್ಷಣಗಳ ಕಾಲ ನಿಂತು ಸುತ್ತಲ ಕತ್ತಲನ್ನು ಹೀರುವಂತೆ ಮಾಡಿ ರಸ್ತೆಯಲ್ಲಿ ಜಾರಿದವು. ಮತ್ತೊಂದೆರಡು ಕ್ರೀಡಾ ಕಾರುಗಳು. ಎಲ್ಲರ ಗಮನ ಸೆಳೆದು, ರ್ರುಮ್-ರ್ರುಮ್-ರ್ರುಮ್ಮೆನ್ನಿಸಿ, ನೀರವತೆಯ ಶಾಂತಿಗೆಡಿಸಿ ಹೈವೇಯಲ್ಲಿ ಹಾರಿಹೋದವು. ಎರಡು ಗಂಟೆಗೆ ಅಲಾರಂ ಇಟ್ಟು ಮೂರು ತಾಸು ನಿದ್ದೆ ಹೆಕ್ಕುವ ನನ್ನ ಹುನ್ನಾರ ಫಲಕೊಡಲಿಲ್ಲ, ಬೇಸರವೇನಿಲ್ಲ; ಅಕ್ಕ ಪಕ್ಕದ ಚಟುವಟಿಕೆ ರಸವತ್ತಾಗಿತ್ತು. ಹಾಗೂ ಹೀಗೂ ಬಲವಂತವಾಗಿ ಕಣ್ಣುಮುಚ್ಚಿ ಸೀಟಿಗೊರಗಿದರೆ ಕಿಟಕಿಯ ಗಾಜಿನ ಮೇಲೆ ಟಕಟಕಿಸಿ, "ಹೇಯ್, ವಾಟ್ ಆರ್ ಯೂ ಡೂಯಿಂಗ್ ಹಿಯರ್?" ಅಂತೊಬ್ಬ ಪೋಲೀಸಪ್ಪ ಕೂಗಿದಂತೆನಿಸಿ, ಎಚ್ಚರ ತಪ್ಪದಂತೆ ನೇರ ಕೂತಿದ್ದೆ. ಕೊನೆಯಲ್ಲಿ ಅದೂ ಹುಸಿಯಾಗಲಿಲ್ಲ. ಸುಮಾರು ಒಂದೂವರೆ-ಎರಡು ಗಂಟೆಯ ಹೊತ್ತಿಗೆ ಅವನೂ ಅವತರಿಸಿದ. ಬೆರಳ ತುದಿಗಳಲ್ಲಿ ಮಿನುಗು ಕಿಡಿಗಳನ್ನು ಆಡಿಸುತ್ತ ಹೊರಗೆ ಬಾನಿನಡಿಗೆ ನಿಂತಿದ್ದ ಎಲ್ಲರ ಬಳಿಗೂ ಹೋಗಿ ಕುಶಲ ವಿಚಾರಿಸಿ, ಮತ್ತೇನೋ ಹೇಳಿ ಸಾಗುತ್ತಿದ್ದ. ಬೆಳ್ಳಗೆ ಎತ್ತರ ಸ್ಮಾರ್ಟಾಗಿದ್ದ ಅವನ ಕಣ್ಣಿಗೆ ಗಾಡಿಯೊಳಗೇ ಕೂತಿದ್ದ ನಮ್ಮ ತಲೆ ಕಾಣಲೇ ಇಲ್ಲ (ಬೆರಳುಗಳಲ್ಲಿ ಕಿಡಿಗಳಿರಲಿಲ್ಲವೆಂದೋ ಏನೋ!).
ಇಷ್ಟೆಲ್ಲ ನಿದ್ದೆಗೆಟ್ಟು ಅಪರಾತ್ರೆಯಲ್ಲಿ ಅಲ್ಲಿಗೆ ಹೋದದ್ದು ಯಾಕೆ?
ಉಲ್ಕೆಗಳನ್ನು ಹೆಕ್ಕಲು ಸಾಧ್ಯವಿಲ್ಲವಾದರೂ ನೋಡಿ ದಕ್ಕಿಸಿಕೊಳ್ಳಲಿಕ್ಕೆ. ಆಗಸ್ಟ್ ತಿಂಗಳ ವಾರ್ಷಿಕ ಉಲ್ಕಾಪಾತದಲ್ಲಿ ಕೆಲವನ್ನಾದರೂ ಕಾಣುವ ಯೋಚನೆಯಲ್ಲಿದ್ದೆವು. ಮೊತ್ತ ಮೊದಲನೇದ್ದು ಹನ್ನೆರಡೂವರೆಗೇ ಕಂಡರೆ ಮತ್ತೆಲ್ಲ ನೀರವ ಶಾಂತ ಆಕಾಶ.
ನಮ್ಮ ಎಡಗಡೆಗೆ ಎರಡೆರಡು ಕಾರುಗಳು. ಪ್ರತಿಯೊಂದರಲ್ಲೂ ಐದೈದು ಮಂದಿಯ ಗುಂಪು. ಒಂದರಲ್ಲಿ ಎಲ್ಲರೂ ಹುಡೆಡ್ ಜಾಕೆಟ್ ತೊಟ್ಟ ಯುವಕರು. ಎಲ್ಲರ ಬೆರಳ ತುದಿಗಳಲ್ಲೂ ಸುಡುವ ಕಿಡಿಗಳು. ಅವರೆಲ್ಲ ಅತ್ತಿತ್ತ ಗಸ್ತು ತಿರುಗುತ್ತಿದ್ದರೆ ನಮ್ಮ ಕಾರಿನ ಎಲ್ಲ ಬಾಗಿಲುಗಳು ಲಾಕ್ ಆಗಿವೆಯಾ ಅಂತ ಚೆಕ್ ಮಾಡಿಕೊಂಡೆ. ಎಚ್ಚರವಿದ್ದೂ ಎಚ್ಚರ ತಪ್ಪಬಾರದಲ್ಲ! ಮತ್ತೊಂದರಲ್ಲಿ ಎರಡು ಹೆಣ್ಣು ಮೂರು ಗಂಡುಗಳು. ಅವರ ನಗು ಹರಟೆ ಪಾಲೋ ಆಲ್ಟೋ ತನಕವೂ ಕೇಳಿತ್ತೇನೋ! ಸ್ವಲ್ಪ ಹೊತ್ತಿನ ಬಳಿಕ ಬೀಮರಿನಲ್ಲಿ ಬಳುಕುತ್ತಾ ಬಂದಳೊಬ್ಬಳೇ ಚಿಕ್ಕ ಬಟ್ಟೆಯ ಬಾಲೆ. ಸುಮಾರು ಒಂದು ಗಂಟೆ ಒಬ್ಬಳೇ ಕಾರಿನೊಳಗೆ ಹೊರಗೆ ಹೋಗಿಬರುತ್ತಾ ಕಿಡಿ ಹಾರಿಸುತ್ತಿದ್ದಳು. ಬೀಮರಿನ ಬಾಗಿಲು ತೆರೆದಾಗೆಲ್ಲ ಅದರೊಳಗಿನ ಲೈಟ್ ಬೀಮ್ ನನ್ನ ಕಣ್ಣನ್ನು ಹುಡುಕುತ್ತಿತ್ತು. "ಅಮ್ಮಾ, ತಾಯಿ! ಗಾಡಿಯ ಬಾಗಿಲು ಮುಚ್ಚೇ ಮಾರಾಯ್ತೀ" ಅನ್ನುವಂತಾಗುತ್ತಿತ್ತು. ಮತ್ತೆ ಇನ್ನೊಂದು ಗಾಡಿಯಲ್ಲಿ ಬಂದವನೊಬ್ಬ ಕಿಡಿಗಳಿಲ್ಲದೆ ಅವಳೊಡನೆ ನುಡಿಗಿಳಿದ. ನಾವು ಹೊರಡುವ ಮೂರು ಗಂಟೆಯವರೆಗೂ ಅವರಿಬ್ಬರೂ ಹರಟುತ್ತಲೇ ಇದ್ದರು. ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್ ಮತ್ತು ಪರಸ್ಪರ ನಿಯತ್ತಿನ ಮೇಲೆಯೇ ಅವರ ಮಾತುಗಳಿದ್ದು, ಈಕೆ ಸದ್ಯ ತನ್ನ ಬಾಯ್ ಫ್ರೆಂಡ್ ಜೊತೆ ಇರುವುದಾಗಿ, ಮತ್ತವನ ದೂರುಗಳನ್ನು ಈತನಿಗೆ ಹೇಳುತ್ತಿದ್ದಳು. ಇವನೇನೋ ಅವಳಿಗೆ ಗಾಳ ಹಾಕುತ್ತಿರುವಂತೆಯೇ ನಮಗನಿಸಿದ್ದು ಅವರಿಬ್ಬರ ಮಾತಿಗೂ ಮೀರಿದ್ದ ನಡವಳಿಕೆಗಳಿಂದ.
ನಮ್ಮ ಬಲಬದಿಗೆ ಚೀನೀ ಜೋಡಿಗಳೆರಡು. ಎರಡು ಕಾರುಗಳಲ್ಲಿ ಬಂದು ಅಕ್ಕ-ಪಕ್ಕ ನಿಲ್ಲಿಸಿಕೊಂಡರು. ಒಬ್ಬ ಅತೀ ಮಾತುಗಾರ, ಮತ್ತೊಬ್ಬ ಮೌನಿ. ಇನ್ನೆರಡು ಬರೀ ಕಿಲಕಿಲಗಳು. ಕಾಯುವಿಕೆಗೆ ತಕ್ಕ ರಂಗಸ್ಥಳ. ಮಾತುಗಾರನ ‘ಎಫ್ಫಿಂಗ್’ ತುಂಬಿದ ವಾಗ್ಝರಿಯತ್ತ ಗಮನ ಹರಿಸದೇ ಇರಲಾಗಲಿಲ್ಲ. ಆತನ ಪ್ರತಿಯೊಂದು ಎಫ್ಫಿಂಗಿಗೂ ಒಂದೊಂದು ಪೆನ್ನಿ ಫೈನ್ ಹಾಕಿದ್ದರೂ ಅಂದು ನಮ್ಮ ಪೆಟ್ರೋಲ್ ಖರ್ಚು ಖಂಡಿತಾ ಬರುತ್ತಿತ್ತು. ಅವನನ್ನು ಅವನ "ಎಫ್ಫಿಂಗ್ ಗಾಡ್" ಮಾತ್ರ ಬಚಾವ್ ಮಾಡಬಲ್ಲ ಅಂತನಿಸಿದ್ದು ನನ್ನ ತಪ್ಪೇ? ತನಗೆ ಈತನಕ ಐದಾರು ಗರ್ಲ್ ಫ್ರೆಂಡ್ಸ್ ಇದ್ದರೆಂದು ಕೊಚ್ಚಿಕೊಂಡು ಇನ್ನೊಬ್ಬನ ಲೆಕ್ಕ ಕೇಳಿದ ರೀತಿ ನಗು ಬರಿಸಿತ್ತು. ದೊಡ್ಡ, ಪ್ರಕಾಶಮಾನವಾದ ಐದಾರು ಉಲ್ಕೆಗಳು ಕಂಡಾಗ ಪಕ್ಕದ ಚೀನೀ ಕಿಲಕಿಲಗಳು ಜೋರಾಗಿ ಕೇಕೆ ಹಾಕಿ ಕುಣಿಯುತ್ತಿದ್ದವು. ಅವರದೇ ನುಡಿಯಲ್ಲಿ ಕಿಚಪಿಚವೆನ್ನುತ್ತಿದ್ದವು.
ಎರಡು-ಎರಡೂವರೆಯಿಂದ ಮೂರು ಗಂಟೆಯ ನಡುವೆ ಸುಮಾರು ಹತ್ತು-ಹನ್ನೆರಡು ಉಲ್ಕೆಗಳನ್ನು ಖಜಾನೆಗೆ ಸೇರಿಸಿಕೊಂಡೆವು. ನಮಗಿಬ್ಬರಿಗೂ ಮೀಟಿಯೋರ್ ಶವರ್ ಜೊತೆಗೆ ಮುಫ್ತ್ ಮನರಂಜನೆಯೂ ದಕ್ಕಿತ್ತು. ನಿದ್ದೆಗೆಟ್ಟದ್ದೂ ಸಾರ್ಥಕವಾಗಿತ್ತು. ಮನೆ ತಲುಪಿದಾಗ ಚುಮುಚುಮು ನಸುಕಿನ ನಾಲ್ಕು ಗಂಟೆ.
ಈ ಮೀಟಿಯೋರ್ ಶವರ್ ಬಗ್ಗೆ ಗೆಳತಿ ಹೇಮಾಶ್ರೀ ಸವಿವರ ಬ್ಲಾಗ್ ಪೋಸ್ಟ್ ಹಾಕಿದ್ದಾಳೆ. ಓದಿ ಬನ್ನಿ.
8 comments:
ಮೇಡಮ್,
ಉಲ್ಕೆಗಳನ್ನು ನೋಡಲು ಹೋಗಿದ್ದರೂ ಅಲ್ಲಿ ಆಗಾಗ ನಡೆಯುತ್ತಿದ್ದ ಚಟುವಟಿಕೆಗಳು ಊಟದ ಜೊತೆಗೆ ಉಪ್ಪಿನ ಕಾಯಿಯಂತೆ ಸೊಗಸಾಗಿವೆ...
ಸಿನಿಮಾ ನೋಡಲು ಹೋದರೆ ನಡು ನಡುವೆ ಪಾಪ್ಕಾರ್ನ್, ಸಮೋಸ, ಕೋಕ್, ಕಟ್ಲೆಟ್ ಸವಿಯುತ್ತೇವಲ್ಲಾ ಹಾಗಿದೆ...
ಉಲ್ಕೆಗಳನ್ನು ನೋಡಿದ ನೀವೆ ಆದೃಷ್ಟವಂತರು.
ಶಿವು, ಧನ್ಯವಾದಗಳು.
ಉಲ್ಕೆಗಳ ಲೆಕ್ಕಕ್ಕೂ ನಾವು ಅಲ್ಲಿದ್ದ ಹೊತ್ತಿಗೂ ತಾಳೆ ಹಾಕಿದರೆ, ಊಟಕ್ಕಿಂತ ಉಪ್ಪಿನಕಾಯಿಯೇ ಹೆಚ್ಚಾಗಿತ್ತು!. ಆದರೂ, ರಾತ್ರಿಯ ಆ ನೀರವತೆಯಲ್ಲಿ ಸುಮ್ಮನೆ ಕಾಯುತ್ತಾ ಕೂರುವುದಕ್ಕಿಂತ ಈಯೆಲ್ಲ ಮುಫ್ತ್ ಶೋ ಮಜವಾಗಿತ್ತು, ನಿಜ.
great ಜ್ಯೋತಿ ಅಕ್ಕ !
you got to see 10 - 12 shooting stars !
ಮುಂದಿನ ಸಲ view point - ನಿಂದ ಮೀಟಿಯೊರ್ ಶವರ್ ನೋಡಬೇಕು.
thanks for the link !
ಹೌದು ಹೇಮಾ, ಅಲ್ಲಿನ ಗಾಢಗತ್ತಲೆಯೊಳಗೂ ಇರುವ ಮಬ್ಬು ಬೆಳಕಿನಲ್ಲಿ, ಮತ್ತೆ ಮೂಡಿ ಬಂದ ಅರ್ಧಕ್ಕಿಂತ ಪುಟ್ಟದಾಗಿದ್ದ ಚಂದ್ರನ ಬೆಳಕಿನಲ್ಲಿ ಅಲ್ಲಿ ಕೂತಿರೋದೇ ಒಂಥರಾ ಅಲೌಕಿಕವಾಗಿತ್ತು (‘ಎಫ್ಫಿಂಗ್’ ಭಾಷೆಯವ ಬರುವತನಕ). ಮತ್ತೆ ಮತ್ತೆ ಅಲ್ಲಿ ಹೋಗೋಣ ಅನ್ನಿಸುವಂಥ ಜಾಗ ಅದು ಅಂತ ನನ್ನೆಣಿಕೆ. ಮುಂದಿನ ಮೀಟಿಯೋರ್ ಶವರ್ ಮಾತ್ರವಲ್ಲ, ಜುಲೈ ನಾಲ್ಕರ ಪಟಾಕಿಸುರಿಮಳೆ ಕೂಡಾ ಅಲ್ಲಿಂದ ಮತ್ತೊಂದೇ ಮಜಾ ಕೊಡಬಹುದು.
ನಿನ್ನ ಪ್ರತಿಕ್ರಿಯೆಗೂ ಮೀಟಿಯೋರ್ ಬಗೆಗಿನ ಪೋಸ್ಟಿಗೂ ಧನ್ಯವಾದಗಳು.
ಎಲ್ಲಾ ಥರದ ಉಲ್ಕಾಪಾತಗಳನ್ನು ಕಂಡಂತಾಯ್ತಲ್ಲ!
ಹೌದು ಕಾಕಾ, ಎಲ್ಲಾ ಥರದ "ಉಲ್ಕೆ"ಗಳನ್ನೂ ಕಂಡ ಹಾಗಾಯ್ತು. ಒಳ್ಳೆಯ ಅನುಭವವಂತೂ ಸಿಕ್ಕಿತು.
ಹೀಹೀ..
ಚೆನ್ನಾಗಿತ್ತು ನಿಮ್ಮ ಉಲ್ಕೆ ವೀಕ್ಷಕ ವಿವರಣೆ..
ಉಲ್ಕೆ ಜೊತೆ ನಡುವೆ ನಡುವೆ ಬರುವೆ ಸೈಡ್ ನಟ-ನಟಿಯರು ಒಳ್ಳೆ ಟೈಂಪಾಸ್ ಮಾಡಿದ್ರೂ ಅನ್ನಿ..
ಹೌದು ಶಿವ್, ಅಂದಿನ ಸಪೋರ್ಟಿಂಗ್ ಸ್ಟಾರ್ಸ್ ಚೆನ್ನಾಗಿಯೇ ಮಿನುಗುತ್ತಿದ್ದರು! ಮಜಾ ಬಂತು.
Post a Comment