ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Thursday, 30 July 2009

ಕೊಡುವುದರ ಅರ್ಥವೇನು?

ನಾಲ್ಕೂವರೆ ತಿಂಗಳ ರಜೆ ಮುಗಿಸಿ ಕಳೆದ ನವೆಂಬರಿನಲ್ಲಿ ಮತ್ತೆ ಈ ಊರಿಗೆ ಬಂದಾಗ ನನಗೆದುರಾದವರಲ್ಲಿ ಹದಿಮೂರರ ಪೋರಿಯೂ ಒಬ್ಬಳು. ಆಕೆ ನನ್ನಲ್ಲಿ ಅಚ್ಚರಿ ಹುಟ್ಟಿಸಿದ್ದಳು. ನಮ್ಮ ಸಂಬಂಧಿಯೊಬ್ಬರ ಮಗಳು. ಸುಂದರಿ. ನಯ ಮಾತಿನ ನಾಜೂಕಿನ ಜಾಣೆ. ನನಗೂ ಅವಳನ್ನ ಕಂಡರೆ ಮುದ್ದು. ಅವಳಿಗೂ ನಾನೆಂದರೆ ಮೆಚ್ಚು. ಅಂದು ಭೇಟಿಯಾದಾಗ ಒಂದು ಕ್ಷಣ ಅಚ್ಚರಿಪಟ್ಟಿದ್ದೆ. ಮಾರುದ್ದ ಸೊಂಪಾಗಿ ಜೋತಾಡುತ್ತಿದ್ದ ಅವಳ ಜಡೆ ನಡುಬೆನ್ನಿಗೆ ನಿಂತಿತ್ತು. "ಏನಾಯ್ತೇ?" ಅಂದರೆ "ಡೊನೇಟ್ ಮಾಡಿದೆ ಜ್ಯೋತಿ ಆಂಟಿ" ಅಂದಳು. ಕೂದಲನ್ನೂ (ದೇವಸ್ಥಾನಕ್ಕೆ ಮುಡಿ ಕೊಡೋದರ ಹೊರತಾಗಿ) ಡೊನೇಟ್ ಮಾಡಬಹುದು ಅನ್ನುವುದರ ಕಲ್ಪನೆಯೂ ಇರದ ನನಗೆ ಇವಳಿಂದ ಹೊಸ ವಿಷಯ ತಿಳಿಯಿತು.

Locks of Love ಸಂಸ್ಥೆಯ ಬಗ್ಗ ಅರಿತುಕೊಂಡೆ. ಅದಕ್ಕೆ ಎರಡು ವಾರಗಳ ಹಿಂದೆಯಷ್ಟೇ, ಕುರುಚಲು ಕುರುಚಲಾಗಿದ್ದ ನನ್ನ ತಲೆಗೂದಲ ತುದಿಗಳನ್ನು ಟ್ರಿಮ್ ಮಾಡಿಸಿಕೊಂಡು ಬಂದಿದ್ದೆನಾದ್ದರಿಂದ ಆ ಸಂಸ್ಥೆಗೆ ಕೊಡಲು ಬೇಕಾದ ಹತ್ತು ಯಾ ಹನ್ನೆರಡು ಇಂಚುಗಳಷ್ಟು ಉದ್ದವಿರಲಿಲ್ಲ. ಕಾದು, ಕಾದು, ಕಾದು,... ಈಗ ಎರಡು ವಾರಗಳ ಹಿಂದೆ ಹತ್ತು ಇಂಚುಗಳ ನನ್ನ ಜುಟ್ಟನ್ನು ಗ್ರೇಟ್ ಕ್ಲಿಪ್ಸ್ ಸಲೂನಿನಲ್ಲಿ ಹೇರ್ ಡ್ರೆಸರ್ ಕೈಗೆ ಕೊಟ್ಟು, ಕತ್ತರಿಸಿಕೊಂಡು, "Donate to Locks of Love" ಅಂದು ಬಂದುಬಿಟ್ಟೆ.

ಹಲವಾರು ವೈದ್ಯಕೀಯ ಕಾರಣಗಳಿಂದಾಗಿ ಶಾಶ್ವತವಾಗಿ ಕೂದಲು ಕಳೆದುಕೊಂಡ ಎಳೆಯರಿಗಾಗಿರುವ ಈ ಸಂಸ್ಥೆ ನಮ್ಮ ಕೂದಲನ್ನು ಬಳಸಿಕೊಂಡು ಅವರಿಗೆ ವಿಗ್ ತಯಾರಿಸಿ ಕೊಡುತ್ತದೆ. ಆ ಮಕ್ಕಳಿಗೆ ಸಿಗಬಹುದಾದ ನಗುವಿನಲ್ಲಿ ನಮ್ಮ ಒಂದೇ ಒಂದು ಎಳೆ ಸೇರಿದ್ದರೂ ಸಾಕಲ್ಲ! ಬೋಳು ಮುಖದ ನೋವನ್ನೂ ತುಂಬುತಲೆಯ ನಗುವನ್ನೂ ಹತ್ತಿರದಿಂದ ಕಂಡಿದ್ದೇನೆ. ನಮ್ಮ ಕೂದಲೇನು- ಬುಡದಿಂದ ಕಿತ್ತುಬಂದು, ನಡುವಿಂದ ತುಂಡಾಗಿ- ಉದುರಿ ಚರಂಡಿ ಸೇರುವಂಥದ್ದು. ಅದು ಕೆಲಕಾಲ ಒಂದಿಷ್ಟು ಗಿಡ್ಡವಾಗಿದ್ದರೇನು? ನನಗೆ ಸ್ಪೂರ್ತಿ ನೀಡಿದ ಮಗು ಈಗ ಮತ್ತೊಮ್ಮೆ ಹನ್ನೆರಡು ಇಂಚು ಕೊಡಲು ತಯಾರಾಗಿ ನಿಂತಿದ್ದಾಳೆ.

ನೀವೂ ಸೇರಿಸುತ್ತೀರ ಅವಳ ಜಡೆಯ ಜೊತೆ ನಿಮ್ಮದನ್ನೂ? ನೀವೂ ಸೇರಿಸುತ್ತೀರ ಮತ್ಯಾರೋ ಮಗುವಿನ ನಗುವಿಗೆ ಎಳೆಗಳನ್ನು?

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.

9 comments:

sunaath said...

Great! ಈ ಕಾಣಿಕೆ ಅದ್ಭುತವಾದದ್ದು. ತಿರುಪತಿಗೆ ಮುಡಿ ಕೊಡುವದಕ್ಕಿಂತ ಹೆಚ್ಚಿನದು. In fact ತಿರುಪತಿಯವರೆ ತಮ್ಮಲ್ಲಿ ಕೂಡಿ ಬಿದ್ದ ಕೇಶರಾಶಿಯ ಸ್ವಲ್ಪ ಭಾಗವನ್ನು ಈ ಸಂಸ್ಥೆಗೆ ಕಳುಹಿಸಬಹುದು.
ಅಭಿನಂದನೆಗಳು.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಕಾಕಾ.
ಈ ಸಂಸ್ಥೆ ಕೂದಲನ್ನು ಪಡೆಯಲು ಕೆಲವಾರು ನಿಬಂಧನೆಗಳಿವೆ. ಅದರ ಪ್ರಕಾರವೇ ಅವರು ಕೂದಲನ್ನು ಪಡೆಯುತ್ತಾರೆ, ಬಳಸುತ್ತಾರೆ. ಅದರಂತೆ ತಿರುಪತಿಯ ಕೂದಲು ಅನರ್ಹ. ಜುಟ್ಟು ಅಥವಾ ಜಡೆಯ ರೂಪದಲ್ಲಿ ಕಟ್ಟಿರುವ ಕೂದಲನ್ನು, ತೊಳೆದು ಶುದ್ಧವಾಗಿರುವ ಕೂದಲನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ ಅವರು. ಎಣ್ಣೆ, ಜಿಡ್ಡು, ಕೊಳೆ ಇರುವ ಕೂದಲು ಅಥವಾ ಬಿಡುಗೂದಲು ಅವರ ಉಪಯೋಗಕ್ಕೆ ಬರುವುದಿಲ್ಲ (ಅದನ್ನು ಶುಧ್ದಗೊಳಿಸಿ ಬಳಸುವ ರೂಪಕ್ಕೆ ತರಲು ಅವರಿಗೆ ಖರ್ಚು ಹೆಚ್ಚಾಗುತ್ತದೆ, ಹಾಗಾಗಿ).

ಬೇರೆ ವಿಗ್ ಸಂಸ್ಥೆಗಳವರು ತಿರುಪತಿ, ಗೋಕರ್ಣ, ವಾರಣಾಸಿಗಳ ಕೂದಲ ರಾಶಿಯನ್ನು ಇಲ್ಲಿಗೆ ತರಿಸಿಕೊಳ್ಳುತ್ತಾರೆಂದು ಯಾವುದೋ ಟಿವಿ ಕಾರ್ಯಕ್ರಮದಲ್ಲಿ ಹಿಂದೊಮ್ಮೆ ನೋಡಿದ್ದೆ. ಅಲ್ಲಿಯೇ ಶುದ್ಧಗೊಳಿಸಿ, ಉದ್ದಕ್ಕೆ ಸರಿಯಾಗಿ ಒಂದೊಂದು ಕಟ್ಟಾಗಿಸಿ ಇಲ್ಲಿಗೆ ಕಳಿಸಲು ಜನರಿದ್ದಾರಂತೆ, ಅದೇ ಒಂದು ದಂಧೆಯಂತೆ. ಎಲ್ಲದಕ್ಕೂ ದಾರಿಯಿದೆ, ಅಲ್ಲವೆ?

shivu.k said...

ಮೇಡಮ್,

ಇದು ನನಗೆ ಗೊತ್ತೇ ಇರಲಿಲ್ಲ. ನಿಜಕ್ಕೂ ಇದು ಮೆಚ್ಚಬೇಕಾದ ವಿಚಾರ. ಒಂದು ಒಳ್ಳೇ ಕೆಲಸ ಮಾಡಿದ್ದಕ್ಕೆ ನಿಮಗೆ ಅಭಿನಂದನೆಗಳು.

ಸುಪ್ತದೀಪ್ತಿ suptadeepti said...

ಶಿವು, ನನಗೂ ಗೊತ್ತಿರಲಿಲ್ಲ, ಕಳೆದ ನವೆಂಬರ್ ತನಕ.
ಆ ಪುಟಾಣಿಯ ಸ್ಫೂರ್ತಿಯಿಂದ ನಾನೂ ಈ ಹೆಜ್ಜೆಯಿಟ್ಟೆ, ಅಷ್ಟೇ; ನನ್ನ ಹೆಗ್ಗಳಿಕೆಯೇನಿಲ್ಲ. ನಿಮ್ಮ ಅಭಿನಂದನೆಗಳನ್ನೂ ಅವಳ ಪರವಾಗಿಯೇ ಸ್ವೀಕರಿಸುತ್ತೇನೆ.

ವಿ.ರಾ.ಹೆ. said...

Good work and good info chikki

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಿಯ ಜ್ಯೋತಿಅಕ್ಕಾ...
ಒಳ್ಳೆಯ ಕೆಲಸದ ಬಗ್ಗೆ ಉತ್ತಮ ಮಾಹಿತಿ. ಧನ್ಯವಾದ.

ಸುಪ್ತದೀಪ್ತಿ suptadeepti said...

ವಿಕ್ಕಿ,
ಧನ್ಯವಾದಗಳು. ನೀನೂ ಒಂದು ಜುಟ್ಟು ಬಿಡುವ ಯೋಚನೆಯಿದೆಯೇ ಹೇಗೆ? ಸುಮಾರು ಎರಡು ವರ್ಷದಲ್ಲಿ ಹತ್ತು/ಹನ್ನೆರಡು ಇಂಚು ಉದ್ದ ಬರಬಹುದೇನೋ!

ಶಾಂತಲಾ,
ಮಾಹಿತಿಗೇನು, ಅಂತರಜಾಲದಲ್ಲಿ ಬೇಕಾದಷ್ಟು ಇದೆ. ಅದನ್ನು ಪ್ರಾಯೋಗಿಕವಾಗಿ ಮಾಡೋದಕ್ಕೆ ಬೇಕಿತ್ತು ನಿನ್ನಂಥ ಸ್ನೇಹಿತೆಯ ಸಹಕಾರವೂ, ಒತ್ತಾಸೆಯೂ. ಅದಕ್ಕಾಗಿ ನಿನಗೂ ಧನ್ಯವಾದ.

ಗೌತಮ್ ಹೆಗಡೆ said...

tale kharchu maadodu andre idena? :)haha

ಸುಪ್ತದೀಪ್ತಿ suptadeepti said...

tale Karchu mADOdu aMdre iShTEnaa Goutham? hosa reetiyaa hEge?