ಶುಭ ಆಶಯಗಳು, ಶುಭ ಹಾರೈಕೆಗಳು, ಶುಭ ವಂದನೆಗಳು.
ಮೇ ತಿಂಗಳ ಎರಡನೇ ಭಾನುವಾರ ಅಮ್ಮಂದಿರ ದಿನ
ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನ
ಎಲ್ಲ ಅಪ್ಪಂದಿರಿಗೂ ಈ ನೆವನದಲ್ಲಿ ಒಂದೊಂದು ಕಾರಣಗಳಿಗಾಗಿ ಒಂದೊಂದು ನಮನಗಳು.
ನಿಮ್ಮ ಕಿರುಬೆರಳನ್ನು ಪುಟ್ಟ ಹಿಡಿಯೊಳಗೆ ಇರಿಸುವುಕ್ಕಾಗಿ;
ಹೆಗಲ ಮೇಲೇರಿಸಿಕೊಂಡು ಜಾತ್ರೆಯಲ್ಲಿ ಪಲ್ಲಕ್ಕಿಯ ದೇವರನ್ನು ಕಾಣಿಸುವುದಕ್ಕಾಗಿ;
ತೋಟದ ಕೆರೆಯಲ್ಲಿ ಈಜು ಹೊಡೆವಾಗ ಎಳೆ ಹೊಟ್ಟೆಯ ಕೆಳಗೆ ಕೈಯಿಟ್ಟು ಧೈರ್ಯ ಕೊಡುವುದಕ್ಕಾಗಿ;
ತೊರೆಯ ದಾಟುವಾಗ ಮರದ ಸೇತುವೆಯಲ್ಲಿ ಬೆನ್ನ ಹಿಂದೆಯೇ ಮೆಲ್ಲನೆ ಬರುವುದಕ್ಕಾಗಿ;
ಯಕ್ಷಗಾನದ ರಕ್ಕಸವೇಷ ನೋಡಿ ಬೆದರಿದಾಗ ಸಾಂತ್ವನ ಹೇಳುವುದಕ್ಕಾಗಿ;
ಗೇರು, ಮಾವು, ಹಲಸುಗಳನ್ನು ನಾಜೂಕಾಗಿ ಬಿಡಿಸಿ ತಿನಿಸುವುದಕ್ಕಾಗಿ;
............ .......... .......... ............
ಮಾತು ಮೌನಗಳಲ್ಲಿ ಹುದುಗಿರುವ ನೂರಾರು ಭಾವಗಳಿಗಾಗಿ....
ನಮನಗಳು ವಂದನೆಗಳು ಪ್ರಣಾಮಗಳು.
9 comments:
ಜ್ಯೋತಿ ಅಕ್ಕಾ...
ಅಪ್ಪಂದಿರ ದಿನಕ್ಕೆ ಎಷ್ಟೊಂದು ಪ್ರೀತಿಭರಿತ ಸಾಲುಗಳು. ಮಕ್ಕಳೆಲ್ಲ ತಮ್ಮ ತಮ್ಮ ಅಪ್ಪಂದಿರಿಗೆ ಉಡುಗೊರೆಯಾಗಿ ಈ ಸಾಲುಗಳನ್ನೇ ಕೊಟ್ಟರೂ ಸಾಕು. ಅಪ್ಪಂದಿರು ಖುಷಿಪಡದೇ ಇರಲಾರರು, ಮತ್ತೊಮ್ಮೆ ನಮ್ಮ ತಲೆನೇವರಿಸಿ ಎದೆಗಾನಿಸಿಕೊಳದೇ ಇರಲಾರ್ರು.
ಇಂಥಹ ದಿನದಂದು ಅಮ್ಮನ ದಿನವನ್ನೂ ನೆನೆದುಕೊಂಡಿದ್ದಕ್ಕೆ, ಚೆಂದದ ಸಾಲುಗಳಿಗೆ ಧನ್ಯವಾದ.
ಜ್ಯೋತಿಯವರೆ.....
ಅಪ್ಪನ ಬಗೆಗೆ ನಿಮ್ಮ ಪ್ರೀತಿಯ ..
ಆತ್ಮೀಯ ಸಾಲುಗಳನ್ನು ಓದಿ ಬಹಳ ಖುಷಿಯಾಯಿತು...
ಅಪ್ಪ ಆತ್ಮವಿಶ್ವಾಸದ ಪ್ರತೀಕ...
ಅಮ್ಮ ಪ್ರೀತಿ, ಮಮತೆಯ ವಾತ್ಸಲ್ಯದ ರೂಪ...
ಚಂದದ ಸಾಲುಗಳಿಗೆ ನನ್ನ ನಮನಗಳು...
ಶಾಂತಲಾ, ನಿನಗೂ ಧನ್ಯವಾದಗಳು. ಏನೋ ಬರೆಯಬೇಕು, ಏನೆಂದು ತೋಚಲಿಲ್ಲ. ಚಿತ್ರ ತೆಗೆದು ಇಲ್ಲಿ ಹಾಕಿ ಮತ್ತೆ ಟೈಪ್ ಮಾಡುತ್ತಿದ್ದ ಹಾಗೆಯೇ ಹೆಗಲಲ್ಲಿ ಕೂರಿಸಿಕೊಂಡು ದೇವರನ್ನು ತೋರಿಸಿದ ಅಪ್ಪ, ತೋಟದ ಕೆರೆಯಲ್ಲಿ ಈಜು ಕಲಿಸುತ್ತಾ ಹೊಟ್ಟೆ ಕೆಳಗಿಂದ ಕೈ ತಪ್ಪಿಸಿ "ನೋಡು, ಈಗ ಈಜುತ್ತಿದ್ದೀ ನೀನು" ಅಂದ ಅಪ್ಪ ನೆನಪಾದರು. ವಂದನದ ಸಾಲುಗಳಿಗೆ ಕಾರಣ ಸಾಕಲ್ಲ.
ಪ್ರಕಾಶ್, ನಿಮಗೂ ಧನ್ಯವಾದಗಳು. ನಿಜ, ಅಪ್ಪ ದೃಢತೆಯ ಸಂಕೇತ, ಅಮ್ಮ ಮಮತೆಯ ಸಂಕೇತ. ಎರಡು ತುದಿಗಳ ನಡುವಿನ ಸೇತುವೆ ಭದ್ರವಾಗಿದ್ದಲ್ಲಿ ಮಕ್ಕಳ ಜೀವನವೂ ಸುಂದರ ಸುಭದ್ರ. ಅಂಥ ಮನೆಗಳೇ ಎಲ್ಲ ಮಕ್ಕಳಿಗೂ ಸಿಗಲಿ ಎನ್ನುವ ಹಾರೈಕೆ ನನ್ನದು.
Thanks.
ವಂದನೆಗಳನ್ನು ಸ್ವೀಕರಿಸಿದ ವನಮಾಲಾ ಪ್ರಿಯನಿಗೆ ಅನಂತ ಧನ್ಯವಾದಗಳು.
ನಿಮ್ಮ ಪ್ರೀತಿಯ ಹರಕೆ ನಮಗೆ ಶ್ರೀರಕ್ಷೆಯಾಗಿದೆ ಕಾಕಾ.
ಆರೆರೆ... ಜ್ಯೋತಿ ಮೇಡಮ್,
ನೀವು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಾಗಲೇ ಗೊತ್ತಾಗಿದ್ದು. ನೀವು ಬರೆದ ಸಾಲುಗಳನ್ನು ಜ್ಞಾನಮೂರ್ತಿಯವರು ಪ್ರತಿಕ್ರಿಯೆಗೆ ಬಳಸಿದ್ದಾರೆ ಅಂತ...
ಸೂಪರ್...ವಾಹ್! ಎನ್ನಬೇಕೆನಿಸುತ್ತಿದೆ
ನನ್ನ ಬರಹಕ್ಕಿಂತ ನಿಮ್ಮ ಈ ಪುಟ್ಟ ಸಾಲುಗಳು ತುಂಬಾ ಚೆನ್ನಾಗಿದೆ...ನೀವು ಹೇಳಿದ್ದನ್ನೆಲ್ಲಾ ನೆನಸಿಕೊಂಡು ಜೊತೆಯಲ್ಲಿ ಅಪ್ಪನನ್ನು ನೆನೆಸಿಕೊಳ್ಳುವುದಿದೆಯಲ್ಲ....
ಒಂದು ದೊಡ್ಡ ಲೇಖನಕ್ಕಿಂತ ನಿಮ್ಮ ನಾಲ್ಕೈದು ಸಾಲುಗಳು ಸಾಕೆನೆಸುತ್ತದೆ....
ಧನ್ಯವಾದಗಳು...
ಶಿವು, ನೀವಿಲ್ಲಿತನಕ ಬಂದು ನನ್ನ ಬ್ಲಾಗ್ ಓದಿದ್ದಕ್ಕೆ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಬ್ಲಾಗಿನಿಂದ ಕದಿಯುವುದು ಸುಲಭ ಅಂತ ಎಲ್ಲರಿಗೆ ಗೊತ್ತು; ಹಾಗಂತ, ಕದ್ದವರಿಗೆ ಯಾವುದೇ ಸಂಕೋಚ, ಮರ್ಯಾದೆ ಇರುವ ಹಾಗೆಯೂ ಕಾಣುವುದಿಲ್ಲ.
ಪ್ಲೇಜರಿಸಂ ಅನ್ನುವುದನ್ನು ನಾವೆಲ್ಲ ಸೇರಿಯೇ ವಿರೋಧಿಸಬೇಕು. ಏನು ಮಾಡುತ್ತೀರಿ ಅದಕ್ಕಾಗಿ?
ಬೇರೇನೂ ಹೇಳುವ ಅವಶ್ಯಕತೆ ನನಗೆ ತೋರುತ್ತಿಲ್ಲ.
ಬರೆದಿರುವುದು ನಾಲ್ಕೇ ಸಾಲಾದರೂ ಎಷ್ಟು ಅರ್ಥ ದಿಂದ ಕೂಡಿದೆ...
ತುಂಬ ಚೆನ್ನಾಗಿ ಇದೆ.....ವೆರಿ ನೈಸ್
ಗುರು
ಧನ್ಯವಾದಗಳು ಗುರು. ವಂದನೆಗಳಿಗೆ ಪದಗಳ ಹಂಗು ಬೇಕಿಲ್ಲ. ಆದರೂ ಸಂವಹನಕ್ಕೆ ಬೇಕಲ್ಲ! ಹಾಗಾಗಿಯೇ ಕೆಲವಾದರೂ ಅಕ್ಷರಗಳ ಆಧಾರ ಪಡೆದಿದ್ದೇನೆ. ಮೆಚ್ಚುಗೆಯಾಗಿದ್ದು ಸಂತೋಷ.
Post a Comment