ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 27 April, 2009

ನಮ್ಮ-ನಿಮ್ಮೊಳಗೆ-೦೮

ಬಾಣಂತಿ ಕೋಣೆಯ ಸುತ್ತ ಮುತ್ತ... ಗೂಢ-ಗಾಢ-ಮೂಢ ನಂಬಿಕೆಗಳು


ಹೊಸ ಮಗು ಮತ್ತು ಬಾಣಂತನ ನಮ್ಮಲ್ಲಿನ್ನೂ ಆತಂಕ ಕಾತರ ಹುಟ್ಟಿಸುವ ಸಂದರ್ಭಗಳೇ ಹೆಚ್ಚು. ಇಂತಹ ಬಾಣಂತನದ ಸುತ್ತಮುತ್ತ ಇರುವ ಕೆಲವಾರು ನಂಬಿಕೆಗಳನ್ನು ದಾಖಲಿಸುವ ಪ್ರಯತ್ನ ಇದು. ನಿಮಗೆ ತಿಳಿದಿರುವ ಇನ್ನಷ್ಟು ಆಚರಣೆಗಳನ್ನು ಇಲ್ಲಿ ಸೇರಿಸಿದರೆ ಸಂತೋಷ.

(೦೧) ಮಗುವನ್ನು ಬೆಳಗಿನ ಎಳೆ ಬಿಸಿಲಿಗೆ ಹಿಡಿದರೆ ಮಗುವಿಗೆ ಒಳ್ಳೇ ಬಣ್ಣ ಬರುತ್ತದೆ (ಪಿ.ಎಸ್.ಪಿ.ಯ ಖಜಾನೆಯಿಂದ).
(೦೨) ಬಾಣಂತಿ ನೀರನ್ನೇ ಕುಡಿಯಬಾರದು (ಥಂಡಿಯಾಗುತ್ತದೆ ಅನ್ನುವುದು ಕಾರಣ).
(೦೩) ಬಾಣಂತಿಯ ಹಾಸಿಗೆಯ ಬದಿಯಲ್ಲಿ/ ದಿಂಬಿನ ಅಡಿಯಲ್ಲಿ ಪೊರಕೆ ಕಡ್ಡಿ ಇಟ್ಟರೆ ದುಷ್ಟಶಕ್ತಿಗಳಿಂದ ರಕ್ಷೆ.
(೦೪) ಮಗುವಿಗೆ ವಿಕಾರವಾಗಿ (ಚಂದವಾಗಿ ಉರುಟಾಗಿ ಅಲ್ಲ) ಕಾಡಿಗೆ ಬೊಟ್ಟು ಇಟ್ಟರೆ ಮಗುವಿಗೆ ದೃಷ್ಟಿ ಆಗುವುದಿಲ್ಲ.
(೦೫) ಮಗುವನ್ನು ತಾಯಿಯೇ ಒಂದೇ ಸಮನೆ ದಿಟ್ಟಿಸಿ ನೋಡಿದರೂ ಮಗುವಿಗೆ ದೃಷ್ಟಿಯಾಗುತ್ತದೆ (ಕಾಡಿಗೆ ಬೊಟ್ಟಿನ ವಿಕಾರ ಇಲ್ಲಿ ಕೆಲಸ ಮಾಡದು).
(೦೬) ಹಸಿ ಬಾಣಂತಿ (ತಿಂಗಳಾಗುವವರೆಗೆ) ನೆಲದಲ್ಲಿ ಕೂತುಕೊಳ್ಳುವಾಗ ಸುಖಾಸನದಲ್ಲಿ (ಚಕ್ಕಂಬಟ್ಲು ಹಾಕಿ) ಕೂರಬಾರದು.
(೦೭) ಬಾಣಂತಿ ಓದಬಾರದು, ಬರೆಯಬಾರದು, ಹೊಲಿಯಬಾರದು, ಯಾವುದೇ ಕಸೂತಿ ಕೆಲಸ ಮಾಡಬಾರದು (ಕಣ್ಣಿಗೆ ತೊಂದರೆಯಾಗುತ್ತದೆ ಅನ್ನುವುದು ಕೊಡುವ ಕಾರಣ).
(೦೮) ಹೆರಿಗೆಯಾಗಿ ಎರಡು ಮೂರು ವಾರಗಳ ವರೆಗೆ ಬಾಣಂತಿ ನಡೆದಾಡಲೇಬಾರದು (ಅವಶ್ಯಕ ಕೆಲಸಗಳಿಗೆ ಹೊರತಾಗಿ).
(೦೯) ಇದೇ ಸಮಯದಲ್ಲಿ ಮಗುವಿಗೆ ಹಾಲೂಡಿಸುವ ಸಮಯವಲ್ಲದೆ ಆಕೆ ಕೂತಿರಬಾರದು, ಮಲಗಿರಲೇಬೇಕು (ಬೆನ್ನು ನೋವು ಬರುತ್ತದೆ ಅನ್ನುವುದು ಕಾರಣ).
(೧೦) ಬಾಣಂತಿ ಕೋಣೆಯಲ್ಲಿ ಹೆಚ್ಚು ಬೆಳಕಿರಬಾರದು, ಅರೆಗತ್ತಲೆಯೇ ಇರಬೇಕು (ವಿಶ್ರಾಂತಿಗೆ ಅನುಕೂಲ ಅನ್ನುವುದು ಕಾರಣ).

10 comments:

PARAANJAPE K.N. said...

ಮೂಢ ನ೦ಬಿಕೆಗಳೆ೦ದು ನಾವು, ಅ೦ದರೆ ನಾಗರಿಕ ಸಮಾಜ ತಿಳಿದಿರುವ ಅದೆಷ್ಟೋ ವಿಷಯಗಳಲ್ಲಿ ವೈಜ್ಞಾನಿಕ ಹಿನ್ನೆಲೆ ಇರುತ್ತದೆ. ಬಾಣ೦ತಿ ಆರೈಕೆ ವಿಚಾರದಲ್ಲಿ ಅ೦ತಹ ಹಳೆಯ ನ೦ಬಿಕೆಗಳ ಗ೦ಟನ್ನು ಬಿಚ್ಚಿಟ್ಟಿದ್ದೀರಿ. ಚೆನ್ನಾಗಿದೆ.

ಮನಸು said...

bananti yara eduru oota maaduva hagilla antare!!

estondu kattunittagi paalisuttare ella iduvaregu yake astu nambikegalu ulidive annodu tiliyadu....

shivu.k said...

ಮೇಡಮ್,

ತುಂಬಾ ವಿಚಾರಗಳನ್ನು ನಾವು ಮೂಡನಂಬಿಕೆಗಳೆಂದುಕೊಂಡರೂ ಅವುಗಳಲ್ಲಿ ವೈಜ್ಞಾನಿಕ ನೆಲೆಗಟ್ಟಿರುತ್ತದೆ....
ತುಂಬಾ ವಿಚಾರಗಳನ್ನು ತಿಳಿದುಕೊಂಡಂತೆ ಆಯಿತು...

ಧನ್ಯವಾದಗಳು...

ಸಾಗರದಾಚೆಯ ಇಂಚರ said...

ನಂಬಿಕೆಗಳು ಬೇಕು ಆದರೆ ಅದು ಮೂಡನಂಬಿಕೆಯಾಗಬಾರದು. ನಮ್ಮ ಸಮಾಜದಲ್ಲಿ ಹೀಗೆ ಅದೆಷ್ಟೋ ಪದ್ಧತಿಗಳು ಚಾಲ್ತಿಯಲ್ಲಿವೆ,,

ಸುಪ್ತದೀಪ್ತಿ suptadeepti said...

ಪರಾಂಜಪೆ, ನಗಿಸು, ಶಿವು, ಸಾಗರದಾಚೆಯ ಇಂಚರ,
ಧನ್ಯವಾದಗಳು.

ಪರಾಂಜಪೆಯವರೆ,
ಇಂಥ ಇನ್ನೂ ಹತ್ತು ಹಲವು ನಂಬಿಕೆಗಳು ನನ್ನ ಅರಿವಿಗೆ ಬಾರದವು, ಕರ್ನಾಟಕದ ಇತರ ಭಾಗಗಳಲ್ಲಿ ಚಾಲ್ತಿಯಲ್ಲಿರಬಹುದು. ನನಗೆ ನೆನಪಿಗೆ ಬಂದಷ್ಟನ್ನು ಇಲ್ಲಿ ದಾಖಲಿಸಿದ್ದೇನೆ.

ನಗಿಸು,
ಬಾಣಂತಿಯ ಎದುರು ಉಳಿದವರು ಊಟ ಮಾಡಬಾರದು ಅನ್ನೋದನ್ನು ಓದಿದ ಮೇಲೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಇನ್ನೊಂದು ನಂಬಿಕೆ-ಕ್ರಮ ನೆನಪಾಯ್ತು: "ಬಾಣಂತಿಯು ಬೇರೆ ಯಾರ ಎದುರಿಗೂ, ಯಾರ ಜೊತೆಗೂ ಊಟ ಮಾಡಬಾರದು; ಒಬ್ಬಳೇ ಕೂತು ಊಟ ಮಾಡಬೇಕು."
ಇವಕ್ಕೆಲ್ಲ ಏನೇನೋ ಕಾರಣಗಳನ್ನು ನಮ್ಮ ಹಿರಿಯರು ಕೊಟ್ಟುಕೊಂಡಿದ್ದರು. ಆ ಕಾಲಕ್ಕೆ ಅವೆಲ್ಲ ಅರ್ಥಪೂರ್ಣವಾಗಿದ್ದವು ಕೆಲವೊಂದು ಇನ್ನೂ ಪ್ರಸ್ತುತವೇ ಆಗಿದ್ದರೂ, ಇನ್ನು ಕೆಲವು ಅಪ್ರಸ್ತುತ. ಆದರೆ, ನಂಬಿಕೆಗಳು ಉಳಿದುಕೊಂಡಿವೆ.

ಶಿವು,
ಹೌದು, ನಮ್ಮ ಹಿರಿಯರು ಮಾಡಿದ ಎಷ್ಟೊಂದು ನಂಬಿಕೆಗಳಿಗೆ ವೈಜ್ಞಾನಿಕ ನೆಲೆಗಟ್ಟು ಇವೆ. ನಮಗೆ ಗೊತ್ತಿರೋದಿಲ್ಲ, ಅಷ್ಟೇ.

ಸಾಗರದಾಚೆಯ ಇಂಚರ,
ನಮ್ಮ ಸಮಾಜದಲ್ಲಿ ನಂಬಿಕೆಗಳು ಜೀವನದ ಭಾಗವಾಗಿಯೇ ಬೆಳೆದುಬಂದಿವೆ, ಅವನ್ನೆಲ್ಲ ಅವೈಜ್ಞಾನಿಕವೆಂದಾಗಲೀ ಬರೇ ಮೂಢತನವೆಂದಾಗಲೀ ಕೆಟಗರೈಸ್ ಮಾಡಲಾಗುವುದಿಲ್ಲ. ಕೆಲವಾರು ನಂಬಿಕೆಗಳು ಬದುಕಲು ಬೇಕೇ ಬೇಕು.

Guruprasad said...

ಇಂಥಹ ಕೆಲವು ಆಚರ ಪದ್ದತಿಗಳನ್ನ ಮೂಡನ೦ಬಿಕೆಗಳು ಅಂತ ಹೇಳುವುದಕ್ಕೆ ಆಗೋದಿಲ್ಲ.. ಇದೆಲ್ಲ ಅನುಭವದ ಜೊತೆ..ಸೇರಿಸಿ,, ಪದ್ಧತಿ ಥರ ಮಾಡಿರುತ್ತಾರೆ,,, ಕೆಲವೊಂದನ್ನು scientific reason ನಿಂದ ಕೂಡ ನಂಬಬೇಕಾಗುತ್ತೆ ..
ಚೆನ್ನಾಗಿದೆ.. ( ಮೂಡ ) ನಂಬಿಕೆಗಳ ಸುತ್ತ ಮುತ್ತ... ಅದಕ್ಕೆ ಪೂರಕವಾದ ವೈಜ್ಞ್ಯನಿಕ ಅರ್ಥ ವನ್ನು ಕೊಟ್ಟಿದ್ದಿರಾ..
ಗುರು

ಭಾರ್ಗವಿ said...

ಜ್ಯೋತಿ ಅಕ್ಕ,
ಕೆಲವನ್ನು ಅರ್ಥ ಇದ್ದಿದ್ದಕ್ಕೆ ಹಿರಿಯರು ಮಾಡ್ತಾ ಇದ್ರೂ ಅನಿಸುತ್ತೆ, ನಮಗೆ ಗೊತ್ತಿಲ್ಲದ ಮತ್ತು ಮಾಡಲು ಆಗದೆ ಇದ್ದುದಕ್ಕೆ ಮಾಡ್ತಾ ಇಲ್ಲ ಅನಿಸುತ್ತೆ. ಯಾಕೆ ಬೇಡ ಅಂದ್ರೆ ಇಲ್ಲದ್ದಕ್ಕೆ ಬೇಡ ಅಂತಾರಲ್ಲ ಹಾಗೆ,, ಇದು ನನಗನ್ನಿಸೋದು:-).
1.ಮಗುಗೆ ಶೀತ ಆದ್ರೆ ಸ್ನಾನದ ನಂತರ ನೆತ್ತಿಗೂ ಮತ್ತು ಬಾಯಿಗೂ ಕೆಲವು ಹನಿ ಗೋಮೂತ್ರ ಹಾಕ್ತಾರಂತೆ. ಮೊದಲೆಲ್ಲಾ ಹಾಗೆ ಹಾಕ್ತಾ ಇದ್ದ್ರಂತೆ.ಇತ್ತೀಚೆಗೆ ೭ ಪದರದ ಬಿಳಿ ಬಟ್ಟೆಯಲ್ಲಿ ಸೋಸಿ ಹಾಕಬೇಕು ಅಂತಾರಂತೆ.
2.ಬಾಣಂತಿ ಹಸಿಮೆಣಸಿನಕಾಯಿ ಹಾಕಿ ಮಾಡಿದ ಯಾವುದೇ ಆಹಾರ ತಿನ್ನುವಂತಿಲ್ಲ.

ಸುಪ್ತದೀಪ್ತಿ suptadeepti said...

ಗುರು, ಭಾರ್ಗವಿ, ಇಬ್ಬರಿಗೂ ಧನ್ಯವಾದಗಳು.

ಗುರು:
ನನಗೆ ನೆನಪಿರುವ ಕೆಲವೇ ಕೆಲವು ನಂಬಿಕೆಗಳನ್ನು ಇಲ್ಲಿ ದಾಖಲಿಸಿ, ಅವಕ್ಕೆ ನನಗೆ ತಿಳಿದ ಕಾರಣಗಳನ್ನು ಕೊಟ್ಟಿದ್ದೇನೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಬೇರೆಲ್ಲ ಕಡೆ ಇನ್ನೆಷ್ಟು ಇಂಥ ನಂಬಿಕೆಗಳು ಚಾಲ್ತಿಯಲ್ಲಿವೆಯೋ ತಿಳಿಯದು.

ಭಾರ್ಗವಿ:
ಹೌದು, ಕೆಲವಕ್ಕೆ ಅರ್ಥವಿದ್ದು ಮಾಡ್ತಿದ್ದರು. ಇನ್ನು ಕೆಲವನ್ನು ಅವರ ಹಿರಿಯರು ಮಾಡ್ತಿದ್ದರು ಅಂತಷ್ಟೇ ಕಾರಣಕ್ಕೆ ನಡೆಸಿಕೊಂಡು ಬರ್ತಿದ್ದರು.
ಮಗುವಿಗೆ ಶೀತವಾದರೆ ಗೋಮೂತ್ರದ ಮದ್ದು ಗೊತ್ತಿರಲಿಲ್ಲ. ತಿಳಿಸಿದ್ದಕ್ಕೆ ಧನ್ಯವಾದ. ಅದೇ ರೀತಿ, ನಮ್ಮಲ್ಲಿ ಮಗುವಿಗೆ ಶೀತವಾಗುವ ಲಕ್ಷಣ ಕಂಡಾಗ, ಅಥವಾ ವಾತಾವರಣ ಥಂಡಿ ಇದ್ದರೆ, ಮಗುವನ್ನು ಸ್ನಾನ ಮಾಡಿಸಿ ತಂದ ಕೂಡಲೇ, ತುಸು ಬಿಸಿ ಮಾಡಿದ ಕುಂಕುಮವನ್ನು ಮಗುವಿನ ನೆತ್ತಿಗೆ ಹಚ್ಚುತ್ತಿದ್ದರು. ಥಂಡಿಯಾಗದಿರಲಿ, ನೆಗಡಿಯಾಗದಿರಲಿ ಎಂದು. ಈಗ ಹಾಗೆ ಹಚ್ಚುವುದು ಕಷ್ಟ- ಆ ಕುಂಕುಮಕ್ಕೆ ಏನೆಲ್ಲ ಬಣ್ಣದ ಪುಡಿಗಳ, ರಾಸಾಯನಿಕಗಳ ಕಲಬೆರಕೆಯಾಗಿರುತ್ತದೋ ಯಾರಿಗೆ ಗೊತ್ತು?

ಬಾಣಂತಿ ಹಸಿಮೆಣಸು ಹಾಕಿದ ಅಡುಗೆ ಊಟ ಮಾಡಬಾರದು- ಇದಕ್ಕೆ ಕಾರಣ ಹಸಿ ಮೆಣಸು ನಮ್ಮ ದೇಶದ್ದಲ್ಲ- ಎಂದಿರಬಹುದು. ಅದು ದಕ್ಷಿಣ ಅಮೆರಿಕದಿಂದ ನಮ್ಮೂರಿಗೆ (ಕಾಫಿಯ ಜೊತೆಗೆ ಎಂದು ನನ್ನ ನೆನಪು; ಸರಿಯಾಗಿ ತಿಳಿಯದು) ರವಾನೆಯಾದ ವಸ್ತು. ಮೊದಲೆಲ್ಲ ನಮ್ಮಲ್ಲಿ ಕಾಳುಮೆಣಸು ಮಾತ್ರವೇ ಉಪಯೋಗದಲ್ಲಿದ್ದದ್ದು. ಅದು ಅಸಿಡಿಟಿ ಕೊಡಲ್ಲ, ಥಂಡಿಯಾಗಲ್ಲ. ಆ ಕಾರಣಗಳಿಗಾಗಿ, ಈಗಲೂ ಬಾಣಂತಿ ಅಡುಗೆಯಲ್ಲಿ ಕಾಳುಮೆಣಸನ್ನೇ ಬಳಸುತ್ತಾರೆ.

Roopa said...

ಬಾಣಂತಿಯರು
ಉಪ್ಪು ಖಾರಗಳನ್ನು ಸೇವಿಸಬಾರದು ಸುಮಾರು ಒಂದುವರೆ ತಿಂಗಳ ತನಕ
ತೆಂಗಿನಕಾಯಿ ತಿನ್ನಬಾರದು
ಬಾಣಂತಿಯರು ಹೊಟ್ಟೆ ಕಟ್ಟಿಕೊಳ್ಳಬೇಕು (ಇಲ್ಲದಿದ್ದರೆ ಹೊಟ್ಟೆ ಉಬ್ಬಿಯೇ ಇರುತ್ತದೆ ಎಂಬುದು)
ಹೆಚ್ಚು ಕರಿಬೇವಿನ ಚಟ್ನಿ ತಿನ್ನಬೇಕು
ತುಂಬಾ ಮುಖ್ಯ ಬೆಂಡೇಕಾಯಿ ತಿನ್ನಬಾರದು (ಏಕೆಂದರೆ ಮಗುವಿಗೆ ಶೀತ ಆಗಬಹುದು)

ಸುಪ್ತದೀಪ್ತಿ suptadeepti said...

ನಮಸ್ಕಾರ ರೂಪಾ, ನಿಮಗೆ ತಿಳಿದಿರುವುದನ್ನು ಇಲ್ಲಿ ಹಂಚಿಕೊಂಡದ್ದಕ್ಕೆ.