ನಮ್ಮ-ನಿಮ್ಮೊಳಗೆ-೦೭
ಗರ್ಭಿಣಿಯ ಸುತ್ತಮುತ್ತಲ (ಮೂಢ-ಗೂಢ-ಗಾಢ) ನಂಬಿಕೆಗಳು:
೦೧. ಗ್ರಹಣ ಇದ್ದಾಗ ಮನೆಯಿಂದ ಹೊರಗೆ ಹೋಗಬಾರದು, ಗ್ರಹಣ ಕಾಲದ ಬಿಸಿಲು ಗರ್ಭಿಣಿಗೆ ಬೀಳಬಾರದು.
೦೨. ಬೇರೆ ಮಗುವನ್ನು ಮುಟ್ಟಬಾರದು, ಎತ್ತಬಾರದು.
೦೩. ನೆಲ್ಲಿಕಾಯಿ ಯಾ ನೇರಳೆ ಹಣ್ಣು ತಿಂದರೆ ಮಗುವಿನ ಅಂಡಿನ ಮೇಲೆ ನೀಲಿ-ಕಪ್ಪು ಕಲೆ ಬೀಳುತ್ತದೆ.
೦೪. ಟೊಮಟೋ ತಿಂದರೆ ಮಗು ಕೆಂಪು ಆಗುತ್ತದೆ.
೦೫. ಆರೇಳು ತಿಂಗಳಾದಾಗ ತಲೆಗೆ ಸ್ನಾನ ಮಾಡಿ ಒದ್ದೆ ತಲೆಯಲ್ಲೆ (ತಲೆಯನ್ನು ಏನೇನೂ ಒರಸಿಕೊಳ್ಳದೆಯೇ) ತುಂಬಾ ಕೇಸರಿ ತುಂಬಿದ ಹಾಲು ಕುಡಿದರೆ ಮಗುವಿಗೆ ಒಳ್ಳೇ ಬಣ್ಣ ಬರುತ್ತದೆ. ಹೀಗೆ ಮೂರು ದಿನ ಕುಡಿಯಬೇಕು.
(ಇವೆಲ್ಲವೂ ತ್ರಿವೇಣಿಯ ಖಜಾನೆಯಿಂದ. ನನಗೂ ಹೊಸದು)
೦೧. ಕತ್ರಿ ಕಾಲು (ಕ್ರಾಸ್ ಲೆಗ್ಡ್- ಕಾಲ ಮೇಲೆ ಕಾಲು) ಹಾಕಿ ಕೂರಬಾರದು.
೦೨. ಗರ್ಭಿಣಿಯು ಕಾಲು ನೀಡಿ ಕೂತಿದ್ದರೆ ಬೇರೆಯವರು ಅದನ್ನು ದಾಟಿಕೊಂಡು ಹೋಗಬಾರದು.
೦೩. ದಿನವೂ ರಾತ್ರೆ ಮಲಗುವ ಮೊದಲು, ಕೆಲವು ಎಳೆ ಕೇಸರಿ ಹಾಕಿದ ನಸುಬಿಸಿ ಹಾಲು ಕುಡಿದರೆ ಮಗು ಬಿಳಿ ಆಗುತ್ತದೆ.
೦೪. ಗರ್ಭಿಣಿಯರಿರುವ ಮನೆಯಲ್ಲಿ ಬೇಳೆ ಹೋಳಿಗೆ, ಕಾಯಿ ಹೋಳಿಗೆ (ಒಬ್ಬಟ್ಟು), ಮೋದಕ, ಕರಿಗಡುಬು ಮಾಡುವಾಗ ಹೂರಣ ಮಿಕ್ಕಿದರೆ ಹೆಣ್ಣು ಮಗು ಹುಟ್ಟುವುದು; ಕಣಕ (ಹಿಟ್ಟು) ಮಿಕ್ಕಿದರೆ ಗಂಡು ಮಗು ಹುಟ್ಟುವುದು.
೦೫. ಗರ್ಭಿಣಿಯರ ಬಯಕೆ ಈಡೇರಿಸದಿದ್ದರೆ ಮಗುವಿನ ಕಿವಿ ಕಿವುಡಾಗುತ್ತದೆ (ಸೊಟ್ಟಗಾಗುತ್ತದೆ).
(ಇವು ನಾವಿಬ್ಬರೂ ಕೇಳಿದ್ದವುಗಳು)
೦೧. ಬರೀ ಅಕ್ಕಿ ತಿಂದರೆ ಮಗುವಿನ ಮೈಮೇಲೆ ಹಿಟ್ಟು ಕಟ್ಟಿಕೊಳ್ಳುತ್ತದೆ.
೦೨. ಲಂಗ/ಸೀರೆ ತುಂಬಾ ಗಟ್ಟಿಯಾಗಿ ಕಟ್ಟಿದರೆ ಮಗುವಿನ ಮೂಗು ಚಪ್ಪಟೆಯಾಗುತ್ತದೆ.
೦೩. ನಿನ್ನೆಯ ಕುಚ್ಚಲನ್ನಕ್ಕೆ (ಕುಸುಬುಲಕ್ಕಿಯ ಅನ್ನ) ಮಜ್ಜಿಗೆ/ಮೊಸರು ಹಾಕಿ ಬೆಳಗಿನ ಉಪಾಹಾರಕ್ಕೆ ತಿಂದರೆ ಮಗುವಿನ ಕೂದಲು ಕಪ್ಪಗೆ ಚೆನ್ನಾಗಿರುತ್ತದೆ.
೦೪. ಗರ್ಭಿಣಿಯು ಸಂಭೋಗ ಮಾಡಿದರೆ ಮಗು ಕುರುಡಾಗುತ್ತದೆ.
೦೫. ಅಮಾವಾಸ್ಯೆಯ ರಾತ್ರೆ ಗರ್ಭಿಣಿಯು ಮನೆಯ ಹೊರಗೆ ಉಚ್ಚೆ ಮಾಡಲು ಹೋದರೆ ದೆವ್ವ/ ಭೂತ "ಅಲ್ಲಿಂದ" ಗರ್ಭದ ಒಳಗೆ ಸೇರಿಕೊಳ್ಳುತ್ತದೆ.
೦೬. ಮುಂಜಾವಿನ ಸಂಕಟ (ಮಾರ್ನಿಂಗ್ ಸಿಕ್ನೆಸ್) ತೀರಾ ಹೆಚ್ಚಾಗಿದ್ದಲ್ಲಿ ಗಂಡು ಮಗು ಹುಟ್ಟುವುದು, ಜಾಸ್ತಿ ಇಲ್ಲದಿದ್ದಲ್ಲಿ ಹೆಣ್ಣು ಮಗು ಹುಟ್ಟುವುದು.
೦೭. ಎಂಟು-ಒಂಭತ್ತನೇ ತಿಂಗಳುಗಳಲ್ಲಿ ಗರ್ಭಿಣಿಯು ಗುಂಡುಗುಂಡಾಗಿ ಸುಂದರವಾಗಿ ಇದ್ದರೆ ಮಗು ಹೆಣ್ಣು; ಒಣಗಿಕೊಂಡು, ಬಾಡಿಕೊಂಡು, ಹೊಟ್ಟೆ ಮಾತ್ರ ಕಾಣುವಂತೆ ಪೀಚಲಾಗಿದ್ದರೆ ಮಗು ಗಂಡು.
೦೮. ಹೆರಿಗೆಯ ನೋವು ತೀರಾ ಉದ್ದವಾಗಿದ್ದಲ್ಲಿ ಗಂಡು ಮಗು; ಆರೆಂಟು ಗಂಟೆಗಿಂತ ಕಡಿಮೆಯಾಗಿದ್ದಲ್ಲಿ ಹೆಣ್ಣು ಮಗು (ಅವಳಿಗೆ ತಾಯಿಯ ನೋವು ತಿಳಿಯುತ್ತದೆ, ಅದಕ್ಕೆ ಬೇಗ ಹೊರಗೆ ಬರುತ್ತಾಳೆ ಅನ್ನುವ ಹಿನ್ನೆಲೆಗಾಯನ ಇದಕ್ಕೆ)
[ಗಂಡಸರೆಲ್ಲ ಕ್ಷಮಿಸಬೇಕು. ಇದು ನಾನು ಕೇಳಿರುವ, ಹಳ್ಳಿಗಳಲ್ಲಿ ಚಾಲ್ತಿಯಲ್ಲಿರುವ ನಂಬಿಕೆ ಮಾತ್ರ. ಇದರಲ್ಲಿ ಯಾವುದೇ ನಿಂದನೆ, ಘೋಷಣೆ, ಭರ್ತ್ಸನೆ ಇಲ್ಲ. ಇದು ಸತ್ಯವೂ ಅಲ್ಲ.]
21 comments:
ಜ್ಯೋತಿ ಅಕ್ಕ...
ಇವನ್ನೆಲ್ಲ ಹಂಚಿಕೊಂಡಿದ್ದಕ್ಕಾಗಿ ನಿಮಗೂ ಹಾಗೂ ತ್ರಿವೇಣಿ ಅಕ್ಕನವರಿಗೂ ಧನ್ಯವಾದಗಳು.
ನಾನು ಕೇಳಿರುವ ಕೆಲ ನಂಬಿಕೆಗಳು :-
* ಹೊಟ್ಟೆ(ಗರ್ಭಿಣಿಯದು) ಗುಂಡಗೆ ಕಲ್ಲಂಗಡಿಹಣ್ಣಿನಂತೆ ಉಬ್ಬಿದ್ದರೆ ಮಗು ಹೆಣ್ಣು. ಗರ್ಭಿಣಿಯ ಹೊಟ್ಟೆ ಉದ್ದಕ್ಕೆ ಮಂಗಳೂರು ಸೌತೆಯಾಕಾರದಲ್ಲಿ ಉಬ್ಬಿಕೊಂಡಿದ್ದರೆ ಮಗು ಗಂಡು.
* ಗರ್ಭಿಣಿಯರು ಹಸಿದ್ರಾಕ್ಷಿ ತಿಂದರೆ ಮಗು ಕಪ್ಪಗಾಗುತ್ತದೆ.
* ನೆಲ್ಲಿದಂಟುಗಳಲ್ಲಿನ ಗೂಡುಗಳಲ್ಲಿ ಕಪ್ಪನೆಯ ಹುಳು ಕಾಣಿಸಿದರೆ ಹೆಣ್ಣುಮಗು. ಬೆಳ್ಳನೆಯ ಹುಳು ಕಾಣಿಸಿದರೆ ಗಂಡುಮಗು ಹುಟ್ಟುತ್ತದೆ.
ಶಾಂತಲಾ,
ಧನ್ಯವಾದಗಳು ತಂಗ್ಯಮ್ಮ. ಇವನ್ನೆಲ್ಲ ನಾನು ಕೇಳಿರಲಿಲ್ಲ. ಇಲ್ಲಿ ದಾಖಲಿಸಿದ್ದಕ್ಕೆ ಸಂತೋಷ.
ಜ್ಯೋತಿ ಮೇಡಮ್,
ನಾನು ಇದಕ್ಕೆ ಕಾಮೆಂಟು ಕೊಡಬಾರದು...ಏಕೆಂದರೆ ನೀವು ಹೆಂಗಸರ ಸಮಾಚಾರ ಬರೆದಿದ್ದೀರಿ....ಅದರೂ ಇದೆಲ್ಲಾ ನಮ್ಮ ಅಜ್ಜಿ, ಅಮ್ಮ ಎಲ್ಲರೂ ಈಗಲೂ ಹೇಳುವುದು ನನ್ನ ಕಿವಿಗೆ ಬಿದ್ದಿದೆ....ಮತ್ತೆ ಗರ್ಭಿಣಿ ಹೆಂಗಸಿದ್ದರೆ ಮನೆ ಖಾಲಿ ಮಾಡಬಾರದು...ಮನೆಯನ್ನು renovate ಮಾಡಬಾರದು....ಇನ್ನೂ ಏನೇನೋ..
ಚಿಟ್ಟೆಯನ್ನು ಪ್ಯೂಪದಿಂದ ಡೆಲಿವರಿ ನಾನು ಮಾಡಿಸಿದ ಬಗ್ಗೆ ನನ್ನ ಬ್ಲಾಗಿನಲ್ಲಿ ಚಿತ್ರ ಸಹಿತ ಲೇಖನವನ್ನು ಹಾಕುತ್ತಿದ್ದೇನೆ...ನೀವು ಅದಕ್ಕೆ ಯಾವ ರೀತಿಯ ಗರ್ಭಿಣಿಯ ನಂಬಿಕೆಗಳನ್ನು ಹೇಳುತ್ತಿರೆನ್ನುವ ಕುತೂಹಲವಿದೆ...ಬರುತ್ತಿರಲ್ಲ !!
ಶಿವು,
ನಿಮಗೆ ಗೊತ್ಿರುವ ಇನ್ನೆರಡು ನಂಬಿಕೆಗಳನ್ನು ಇಲ್ಲಿ ಸೇರಿಸಿದ್ದಕ್ಕೆ ಧನ್ಯವಾದಗಳು. ಹೆಂಗಸರು-ಗಂಡಸರೆಂಬ ಭೇದ ಬೇಡ ಅನ್ನುವುದನ್ನು ನೀವು ಸಾಬೀತು ಮಾಡಿದಿರಿ (ನೀವು ಕೇಳಿ ತಿಳಿದಿದ್ದ ವಿಷಯ ಹಂಚಿಕೊಳ್ಳುವುದೇ ಮುಖ್ಯ ಇಲ್ಲಿ).
ನಿಮ್ಮ ಬ್ಲಾಗಿಗೆ ಬರುತ್ತೇನೆ. ನಾನೂ ಹಲವಾರು ಕ್ಯಾಟರ್'ಪಿಲ್ಲರ್'ಗಳನ್ನು 'ಸಾಕಿ', ಅವುಗಳು ಕೋಶ ಕಟ್ಟುವುದನ್ನು ಕಾಯುತ್ತಾ ಕೂತು ನೋಡಿ ಮತ್ತೆ ಸುಮಾರು ಇಪ್ಪತ್ತು ದಿನಗಳ ಮೇಲೆ ಚಿಟ್ಟೆ ಹುಟ್ಟಿ ಹಾರಲು ಕಲಿಯುವುದನ್ನು ಕಂಡು ಬೆರಗಿನಿಂದ ಕಣ್ಣರಳಿಸಿದ್ದೆ. ಆಗ ನನ್ನ ಕೈಯಲ್ಲಿ (ಮನೆಯಲ್ಲಿ) ಕ್ಯಾಮೆರಾ ಇರಲಿಲ್ಲ. ಪ್ರತೀ ಹಂತವೂ ಒಂದೊಂದು ಹೊಸಹುಟ್ಟು ಆ ಹುಳಗಳಿಗೆ. ಗುಂಡು ಸೂಜಿಮೊನೆಯ ಗಾತ್ರದ ಮೊಟ್ಟೆಯಿಂದ ಸುಮಾರು ಒಂದೂಕಾಲು ತಿಂಗಳಲ್ಲಿ ಸುಂದರ ಚಿಟ್ಟೆ ಬರುವ ಪ್ರಕ್ರಿಯೆಗೆ ಬೆರಗಷ್ಟೇ ಉತ್ತರ.
ಜ್ಯೋತಿ,
ನನಗೆ ಈ ಯಾವ ನಂಬಿಕೆಗಳೂ ಗೊತ್ತಿರಲಿಲ್ಲ. ನನ್ನ ತಾಯಿ ಅಥವಾ ಹೆಂಡತಿ ಯಾವ ನಂಬಿಕೆಗಳನ್ನು follow ಮಾಡುತ್ತಿದ್ದರೋ ಗೊತ್ತಿಲ್ಲ.ಮಾಹಿತಿ ಸ್ವಾರಸ್ಯಕರವಾಗಿದೆ.
ಕಾಕಾ, ನಿಮ್ಮೂರ ಕಡೆ ಅದೇನೇನು ನಂಬಿಕೆಗಳಿದ್ದವೋ ಕೇಳಿ ತಿಳಿದು ನಮಗೂ ಹೇಳುತ್ತೀರಾ, ಪ್ಲೀಸ್. ತಿಳಿಯುವ ಕುತೂಹಲವಿದೆ.
ಹಿಂದಿನ ಕಾಲದಲ್ಲಿ ವೈದ್ಯ ವಿಜ್ಞಾನ ಈಗಿನಷ್ಟು ಮುಂದುವರೆಯದೆ ಹುಟ್ಟಿದ ಮಕ್ಕಳು ಕಣ್ಮುಚ್ಚುವುದು ಸಾಮಾನ್ಯ ಸಂಗತಿಯಾಗಿದ್ದರಿಂದ ಈ ರೀತಿಯ ಹತ್ತು-ಹಲವು ನಂಬಿಕೆಗಳು ಹುಟ್ಟಿಕೊಂಡಿದ್ದಿರಬಹುದು. ಕೆಲವಕ್ಕೆ ಅರ್ಥವಿದ್ದರೆ,ಇನ್ನು ಕೆಲವು ಮೂಢನಂಬಿಕೆ ಎಂದೇ ಅನ್ನಿಸುತ್ತದೆ.
ಮಗು ಯಾವ ದೇವರ ದಯೆಯೆಂದಲೋ, ಯಾವ ನಂಬಿಕೆಯ ಬಲದಿಂದಲೋ ಬದುಕುಳಿದರೆ ಸಾಕೆಂಬ ಹಂಬಲ. ಹುಟ್ಟಿದ ಮಗು ಕಲ್ಲುಗುಂಡಿನಂತೆ ಆರೋಗ್ಯವಾಗಿರಲಿ ಎಂದು ಈಗಲೂ ನಮ್ಮಲ್ಲಿ, ಮಗುವಿಗೆ ನಾಮಕರಣದ ಸಮಯದಲ್ಲಿ ಇಡುವ ಐದು ಹೆಸರುಗಳಲ್ಲಿ ಒಂದು ಕಲ್ಲಪ್ಪ, ಗುಂಡಪ್ಪ, ಗುಂಡಮ್ಮ ... ಎಂದೇ ಇರುತ್ತದೆ.
ಈ ರೀತಿಯ ನಂಬಿಕೆಗಳು ಪೂರ್ತಿ ಮರೆತುಹೋಗುವ ಮೊದಲು ಒಂದೆಡೆಗೆ ಕಲೆಹಾಕಿ ಒಳ್ಳೆಯ ಕೆಲಸ ಮಾಡಿದ್ದೀಯ.
ವೇಣಿ,
ಹಿಂದೆ ವೈದ್ಯ ವಿಜ್ಞಾನ ಈಗಿನಷ್ಟು ಮುಂದುವರಿದಿರಲಿಲ್ಲ, ನಿಜ. ಆದರೆ, ಜನಪದ ಈಗಿನಕಿಂತಲೂ ಹೆಚ್ಚಿನ ಮುಂದಾಲೋಚನೆ ಹೊಂದಿತ್ತು ಎಂದರೆ ತಪ್ಪಲ್ಲ. ಇಲ್ಲಿನ ಅನೇಕ ನಂಬಿಕೆಗಳನ್ನು ಮೌಡ್ಯ ಎಂದು ತಳ್ಳಿ ಹಾಕುವುದು ಸುಲಭ. ಬದಲು ಅದರ ಹಿಂದಿನ ತಾರ್ಕಿಕ ಕಾರಣ ನೋಡಿದರೆ ಅವರ ಉದ್ದೇಶ ಎಷ್ಟು ಸರಳ, ಸುಂದರವಾಗಿತ್ತು ಅಂತಲೂ ತಿಳಿಯುತ್ತದೆ.
ನನ್ನ ಈ 'ಪಾಪ'ದಲ್ಲಿ ಪಾಲುದಾರಳಾಗಿದ್ದಕ್ಕೆ ನಿನಗೆ ಮೊದಲ ಧನ್ಯವಾದಗಳು ಕಣೇ.
ಅಕ್ಕಾ,
ಇದರಲ್ಲಿ ಕೆಲವಷ್ಟನ್ನು ನಾನು ಪುಟ್ಟಿಯನು ಹೊತ್ತಿದ್ದಗ ಕೇಳಿದ್ದೆ :)
ಇನ್ನು ಕೆಲವು ನಂಬಿಕೆಗಳು ಇಲ್ಲಿವೆ :
೧) ಮನೆಯಲ್ಲಿ ಯಾರಾದರೂ ಗರ್ಭಿಣಿಯರಿದ್ದರೆ ಅವರ ಮೆನೆಯ ಮಾಡಿನಲ್ಲೋ ಇಲ್ಲ ಮರದೊಳಗೋ ಗುಬ್ಬಿ ಗೂಡುಕಟ್ಟುತ್ತದೆ.
೨) ಗರ್ಭಿಣಿ ಸ್ತ್ರೀಯರ ಎದುರು ನಾಗರ ಹಾವು ಹೆಡೆ ಎತ್ತಿ ಆಡದು. ಕಾರಣ ಹೊಟ್ಟೆಯೊಳಗೆ ದೇವರಿಗೆ ಸಮಾನವಾದ ಮಗುವಿರುವುದರಿಂದ ಎಂದು.
ಆಶ್ಚರ್ಯ ಅಂದರೆ ಈ ನಂಬಿಕೆ ನನ್ನ ಕಣ್ಮುಂದೇ ನಿಜವಾಗಿದೆ. ಕಾಕತಾಳೀಯವೂ ಆಗಿರಬಹುದು. ನನ್ನ ಅಮ್ಮ ನನ್ನ ತಂಗಿಯನ್ನು ಹೊತ್ತಿದ್ದಾಗ ಹಾವಾಡಿಗ ಬಂದಿದ್ದ. ನಮ್ಮ ಪಕ್ಕದ ಮನೆಯಲ್ಲಿ ಹೆಡೆ ಎತ್ತಿ ಆಡಿದ್ದ ಹಾವು ನಮ್ಮ ಮನೆಯಲ್ಲಿ ಅಮ್ಮನೆದುರು ಆಡಲೇ ಇಲ್ಲ! ಆದರೆ ಮತ್ತೆ ನಂತರದ ಮನೆಗಳ ಮುಂದೆಯಲ್ಲಾ ಹೆಡೆಯೆತ್ತಿ ಆಡಿತ್ತು! ಇದಕ್ಕೆ ಏನೆನ್ನುವುದೋ ಕಾಣೆ. ಇನ್ನೂ ಈ ಘಟನೆ ಮಾತ್ರ ನನ್ನೊಳಗೆ ಹಸಿರಾಗಿದೆ.
೩) ಹೆರಿಗೆಯ ದಿನ ಹತ್ತಿರಬಂದಂತೇ ಮಗುವಿಗೆ ಇಡಲು ಕಾಡಿಗೆಯನ್ನು ತುಪ್ಪದಲ್ಲಿ ತಯಾರಿಸುತ್ತಾರೆ. ಹಾಗೆ ತಯಾರಿಸುವಾಗ ಕಾಡಿಗೆ ಯಾವ ಆಕಾರದಲ್ಲಿ ಮೂಡುವುದೋ ಆ ಆಕಾರದ ಪ್ರಕಾರ ಗಂಡು/ಹೆಣ್ಣು ಎಂದು ಹೇಳಬಹುದಂತೆ. ಇದೂ ಸತ್ಯವಾಗಿದೆ ೧-೨ ಘಟನೆಗಳನ್ನು ನಾನೇ ಖುದ್ದಾಗಿ ನೋಡಿರುವೆ.
ಇದಕ್ಕೆಲ್ಲಾ ಏನೆನ್ನಬೇಕೋ ತಿಳಿಯದು. ಕಾಕತಾಳೀಯವೋ ಇಲ್ಲಾ ಮೂಢನಂಬಿಕೆಯೋ ಗೊತ್ತಿಲ್ಲ. ನಾನೂ ಇದನ್ನು ಸತ್ಯವೆಂದು ನಂಬುತ್ತಿಲ್ಲ.
ಜ್ಯೋತಿ ಮೇಡಮ್,
ಇವತ್ತು ಚಿಟ್ಟೆಯನ್ನು ಡೆಲಿವರಿ ಮಾಡಿಸಿದ್ದೇನೆ....ನೋಡಲು ಬನ್ನಿ...
ತೇಜೂ,
ನೀನು ಹೇಳಿರುವ ಮೂರು ನಂಬಿಕೆಗಳನ್ನೂ ನಾನು ಕೇಳಿರಲಿಲ್ಲ. ಇಲ್ಲಿ ಸೇರಿಸಿದ್ದಕ್ಕೆ ಧನ್ಯವಾದಗಳು.
ಹಾವು-ಹೆಡೆಯ ಪ್ರಸಂಗ ಮತ್ತು ಕಾಡಿಗೆಯ ಪ್ರಸಂಗ ನಿನ್ನ ಅನುಭವಕ್ಕೆ ಬಂದಿವೆಯಾದ್ದರಿಂದ ಅವನ್ನು ಮೂಢನಂಬಿಕೆಯ ಗುಂಪಿಗೆ ಸೇರಿಸಬೇಕಾಗಿಲ್ಲ. ಗೂಢವೆನ್ನಬಹುದು.
ಶಿವು, ನಿಮ್ಮ ಚಿಟ್ಟೆಮರಿಯನ್ನು ನೋಡಲು ಖಂಡಿತಾ ಬರುತ್ತೇನೆ. ತಿಳಿಸಿದ್ದಕ್ಕೆ ವಂದನೆಗಳು.
ಜ್ಯೋತಿ ಅಕ್ಕ,
ನನಗೆ ಗೊತ್ತಿರುವ ಕೆಲವು,,,,,
೧.ಬೆಳಗಿನ ಬಿಸಿಲು(ಎಳೆಬಿಸಿಲು) ಮಗುವಿಗೆ ಬೀಳುವಂತೆ ಹಿಡಿದರೆ ಮಗುವಿಗೆ ಒಳ್ಳೆ ಬಣ್ಣ ಬರುತ್ತೆ ಅಂತೆ.
೨.ಗರ್ಭಿಣಿ ಹೆಣ್ಣಿನ ನೆರಳು ನಾಗರ ಹಾವಿನ ಮೇಲೆ ಬಿದ್ದರೆ ಅದು ಅಲ್ಲೇ ಸುಳಿದಾಡುತ್ತಿರುತ್ತೆ(ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತೆ).
೩.ಗ್ರಹಣ ಇದ್ದಾಗ ಗರ್ಭಿಣಿ ತರಕಾರಿ,ಹಣ್ಣು ಇತ್ಯಾದಿ ಹೆಚ್ಚುವುದು ಮಾಡಬಾರದು.ಹಾಗೆ ಮಾಡಿದರೆ ಚರ್ಮ ಹರಿದಂತೆಯೋ ,ಬೆರಳುಗಳು ಹೆಚ್ಚು ಕಡಿಮೆ ಹೀಗೆ ,,, ಏನಾದ್ರೂ ಆಗಿರುತ್ತೆ.(ನಾನು ಈ ಕೆಲಸ ಮಾಡಿ ಹೆರಿಗೆ ಆಗೋವರೆಗೆ ಭಯದಿಂದ ತರಗುಟ್ಟಿ ಹೋಗಿದ್ದೆ:(. ಮಗು ನೋಡಿದೊಡನೆ ಬೆರಳುಗಳನ್ನು ತಿರುಗಿಸಿ ನೋಡಿದ್ದೇ ನೋಡಿದ್ದು ಎಣಿಸಿದ್ದೇ ಎನಿಸಿದ್ದು :).ಎಲ್ಲಾ ಸರಿಯಾಗಿ ಇತ್ತು.
ಮುಂದಿನದನ್ನು ನೀವು ತಿಳಿಸಿದ್ದು ಮುಂದುವರಿಸಿದ್ದೇನೆ,
೪.ಗರ್ಭಿಣಿಯು ಕಾಲು ನೀಡಿ ಕೂತಿದ್ದರೆ ಬೇರೆಯವರು ದಾಟಬಾರದು,ದಾಟಿದರೆ ಹಾಲು ಕಡಿಮೆಯಾಗುತ್ತೆ,ಅಥವಾ ಬರುವುದಿಲ್ಲ.
೫.ಗರ್ಭಿಣಿಯರ ಬಯಕೆ ಈಡೇರಿಸದಿದ್ದರೆ ಹುಟ್ಟುವ ಮಗುವಿನ ಕಿವಿ ಸೋರುತ್ತೆ.
೬.ಗೌರಿ ಪೂಜೆ ಮತ್ತು ಇತರ ಪೂಜೆಗಳಲ್ಲಿ ಉಡಿ ಕೊಡುವಾಗ ಗರ್ಭಿಣಿಯರಿಗೆ ೨ ಉಡಿ ಕೊಡಬೇಕು.(ಇದನ್ನು ಮಾತ್ರ ,,,,,ನಮ್ಮಮ್ಮ ಪೂಜೆ ಮಾಡುತ್ತಿದ್ದಾಗ ಉಡಿ ಕೊಡೋದು ನನ್ನಿಷ್ಟದ ಕೆಲಸವಾದ್ದರಿಂದ ೩ನೇ ತರಗತಿ ಇದ್ದಾಗಿಂದಲೇ ಚಾಚು ತಪ್ಪದೇ ಪಾಲಿಸಿದ್ದು ನೆನಪಿದೆ: -)).
ಸಧ್ಯಕ್ಕೆ ನೆನಪಿಗೆ ಬಂದಿರೋದು ಇಷ್ಟು. ನಮ್ಮೊಂದಿಗೆ ಹಂಚಿಕೊಂಡ ನಿಮಗೂ ಹಾಗು ತ್ರಿವೇಣಿಯವರಿಗೂ ಧನ್ಯವಾದಗಳು.
ಅಕ್ಕ ಮರೆತಿದ್ದೆ, ಎರಡು ಬ್ಲಾಗ್ ಗಳಿಗೆ ಹಾಕಿರುವ ಫೋಟೋ ತುಂಬಾ ಚೆನ್ನಾಗಿದೆ ಮತ್ತು ಹೊಂದಿಕೆಯಾಗಿದೆ ಹೆಸರಿನೊಂದಿಗೆ. ಇಲ್ಲಿರೋದು ಯಾವ ದೇವಸ್ಥಾನದ್ದು ಕೇಳಬಹುದಾ? ತುಂಬಾ ಇಷ್ಟವಾಯ್ತು.
ಪಿ ಎಸ್ ಪಿ.
ಪಿ.ಎಸ್.ಪಿ. (ಎರಡೂ ಅನಾಮಿಕ ಕಮೆಂಟ್ಸ್ ನಿನ್ನದೇ ಅಂದುಕೊಂಡು ಉತ್ತರ ಕೊಡುತ್ತಿದ್ದೇನೆ),
ನೀನು ಬರೆದಿರುವ ನಂಬಿಕೆಗಳಲ್ಲಿ ಮೊದಲನೇದ್ದನ್ನು ನನ್ನ ಮುಂದಿನ ಕಂತಿಗೆ ಕಡವಾಗಿ ಸೇರಿಸಿಕೊಳ್ಳುತ್ತೇನೆ. ನಂತರದವೆಲ್ಲ ಹೊಸದು (ಮಗುವಿನ ಕಿವಿ ಸೋರುವ ಬಗ್ಗೆ ಕೇಳಿದ್ದೆ, ಮರೆತಿದ್ದೆ!).
ಚಿತ್ರಗಳು, ಕಳೆದ ನವೆಂಬರಿನಲ್ಲಿ ಊರಿನಲ್ಲಿ ತೆಗೆದವು. ಈ ಬ್ಲಾಗಿನಲ್ಲಿ ಹಾಕಿದ್ದು ಹಳೇಬೀಡು ದೇವಸ್ಥಾನದೊಳಗೆ ಬೆಳಗ್ಗೆ ತೆಗೆದದ್ದು. ಹರಿವ ಲಹರಿಯದು ಯಾವುದೋ ಹೆಸರರಿಯದ ಕಾಡಿನ ತೊರೆ.
ಜ್ಯೋತಿಯವರೆ..
ಖಗ್ರಾಸ ಸೂರ್ಯ ಗ್ರಹಣವಾದಾಗ..
ಗರ್ಭಿಣಿಯಿಯರ ಹೊಟ್ಟೆಯ ಮೇಲೆ..
ಆಕಳ ಸಗಣಿಯನ್ನು ಹಚ್ಚುತ್ತಾರಂತೆ..
(ಗ್ರಹಣ ಮುಗಿಯುವ ತನಕ)
ಇದನ್ನು ಊರಿಗೆ ಫೋನ್ ಮಾಡಿ ತಿಳಿದು ಕೊಂಡಿದ್ದೇನೆ..
ಗರ್ಭಿಣಿ ಇರುವಾಗ "ಸುವರ್ಣ ಭಸ್ಮ"ವನ್ನು..
ಸೇವಿಸಿದರೆ ಒಳ್ಳೆಯ ಬಿಳಿ ಬಣ್ಣದ
ಮಗು ಜನಿಸುತ್ತದಂತೆ..
ನಿಮ್ಮ ಲೇಖನ,
ಮಾಹಿತಿ ಸಂಗ್ರಹ ಚೆನ್ನಾಗಿದೆ..
ಅಭಿನಂದನೆಗಳು..
ಪ್ರಕಾಶ್,
ನಿಮ್ಮೂರಿನ ನಂಬಿಕೆ ಮತ್ತು ಪದ್ಧತಿ ಎರಡೂ ಹೊಸದು ನನಗೆ, ಕೇಳಿರಲಿಲ್ಲ. ಇಲ್ಲಿ ಬರೆದಿದ್ದಕ್ಕೆ ಧನ್ಯವಾದಗಳು. ಗರ್ಭಿಣಿಯ ನಂತರದ ಹಂತ ಮುಂದಿನ ಕಂತು. ಅದಕ್ಕೆ ಈಗಲೇ ತಯಾರಿ ಮಾಡಿಕೊಳ್ಳಿ (ಊರಿಗೆ ಫೋನ್ ಮಾಡಿ ಕೇಳಿಟ್ಟುಕೊಳ್ಳಿ).
opps ಬರಿ ಹೆಂಗಸರ ವಿಚಾರ ವಿನಿಮಯ ಅಂತ ಅಂದುಕೊಂಡ ಇದ್ದೆ.. ಆದರೆ ಶಿವೂ ಮತ್ತೆ ಪ್ರಕಾಶ್ ಅವರು ಕಾಮೆಂಟ್ಸ್ ಮಾಡಿದ್ದರೆ.. ಅದಕ್ಕೆ ಧೈರ್ಯದಿಂದ ನಾನು ಕಾಮೆಂಟ್ಸ್ ಮಾಡುತಿದ್ದೇನೆ ...
ಇದು ಮೂದನಂಬಿಕೆನೋ , ನಂಬಿಕೆ ನೋ, ತಿಳಿಯದು,,,, ಇದೆಲ್ಲ ಇನ್ನು ಇದ್ದೀಯ? ಹೆದರಿದವರಿಗೆ ಇನ್ನಸ್ಟು ಹೆದರಿಸುವ ನಂಬಿಕೆ ಗಳು ಇವು ಅಂತ ನನ್ನ ಅನಿಸಿಕೆ
ಗುರು
ಗುರು,
ಹೆಂಗಸರ ವಿಷಯ ಅಂತೇನೂ ಲೇಬಲ್ ಬೇಕಾಗಿಲ್ಲ, ಇವೆಲ್ಲ ನಂಬಿಕೆಗಳು ಮಾನವರ ಸುತ್ತಮುತ್ತ ತಿರುಗುವವು. ಕಾಲದ ಹಂಗಿಲ್ಲದೆಯೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೂ ಇರುವ ವಿಷಯಗಳಲ್ಲಿ ಇವೂ ಸೇರಿವೆ.
ನಿಮ್ಮ ಅಮ್ಮ-ಚಿಕ್ಕಮ್ಮ-ದೊಡ್ಡಮ್ಮ, ಅಕ್ಕ-ತಂಗಿಯರ ಹತ್ತಿರ ಕೇಳಿನೋಡಿ, ಈಗಲೂ ಇವುಗಳಲ್ಲಿ ಕೆಲವಾದರೂ, ಬೇರೆ ರೂಪದಲ್ಲಾದರೂ ಇದ್ದಾವು ಅಂತ ನನ್ನ ಊಹೆ.
from which date we have to calculate for pregnancy is that the date of last period(Cycle)happened date or from the date of intercourse please tell me
Thanks for all the comments i got very good knowledge
Rathu
ನಮಸ್ತೆ ಅನಾಮಿಕರಿಗೆ. ನಿಮ್ಮ ಪ್ರತಿಕ್ರಿಯೆಗೆ ಇಷ್ಟು ದಿನ ಉತ್ತರಿಸಲಾಗಿರಲಿಲ್ಲ, (ಹಿಂದೆ ಬಿದ್ದಿತ್ತು, ಮಾಡರೇಶನ್ ಎದುರು ನೋಡುತ್ತಾ ಮುದುಡಿತ್ತು) ಕ್ಷಮಿಸಿ.
ಹೆರಿಗೆಯ ದಿನಾಂಕ ಸುಮಾರಾಗಿ ನಿಗದಿ ಮಾಡಲು ಸುಲಭದ ಲೆಕ್ಕ: ಕೊನೆಯ ‘ಕುದಿ’ಯ ಮೊದಲ ದಿನದಿಂದ (from the first day of last period) ಇನ್ನೂರೆಂಭತ್ತು ದಿನಗಳು ಅಥವಾ, ನಲವತ್ತು ವಾರಗಳು; ಅಂದರೆ, ಕ್ಯಾಲೆಂಡರ್ ತಿಂಗಳ ಪ್ರಕಾರ ಸುಮಾರು ಒಂಭತ್ತು ತಿಂಗಳು ಹತ್ತು ದಿನ. ಮತ್ತದರ ಜೊತೆಗೆ +/- ಹತ್ತು ದಿನಗಳು ಸಾಮಾನ್ಯ ಲೆಕ್ಕಾಚಾರ.
ಉದಾಹರಣೆಗೆ ಹೇಳುವುದಾದರೆ, ಒಬ್ಬರಿಗೆ ತಾನು ಗರ್ಭಿಣಿ ಎಂದು ಅರಿವಾದಾಗ, ಆಕೆಯ ಹೆರಿಗೆಯ ದಿನ ಅಂದಾಜಿಸಲು, ಆಕೆಯ ಕೊನೆಯ ತಿಂಗಳ ಮೊದಲ ಸ್ರಾವದಿನ ಮೇ ಒಂದನೇ ತಾರೀಕು ಎಂದಾದರೆ, ಅಲ್ಲಿಂದ ಮೂರು ತಿಂಗಳು ಹಿಂದೆ ಲೆಕ್ಕವಿಡಬೇಕು- ಅಂದರೆ, ಫೆಬ್ರವರಿ ಒಂದನೇ ತಾರೀಕು, ಅಲ್ಲಿಂದ ಏಳುದಿನ ಮುಂದಕ್ಕೆ- ಎಂದರೆ, ಫೆಬ್ರವರಿ ಎಂಟನೇ ತಾರೀಕು ಸುಮಾರಾಗಿ ಹೆರಿಗೆಯ ದಿನ ಬರುವ ಸಾಧ್ಯತೆ ಎಂದು ಅಂದಾಜಿಸಬಹುದು.
(ನಿಮಗೀ ಉತ್ತರ ತಲುಪುತ್ತೋ ಇಲ್ಲವೋ ತಿಇಯದು. ಆದರೂ, ಬೇರೆ ಯಾರಿಗಾದರೂ ಅನುಕೂಲವಾದೀತು ಎಂದು ಈಗಲಾದರೂ ಬರೆದೆ.)
Post a Comment