ತೂಕ ಮತ್ತು ನಾವು
ಇತ್ತೀಚೆಗೆ ಗೆಳತಿಯೊಬ್ಬಳ ಜೊತೆ ಮಾತಾಡುತ್ತಿದ್ದಾಗ, "ಎಷ್ಟು ಕಷ್ಟ ಆಗಿದೆ ಗೊತ್ತಾ ಈ ತೂಕ ಇಳಿಸಿಕೊಳ್ಳೋದು? ದಿನಾ ಟ್ರೆಡ್-ಮಿಲ್ ಮೇಲೆ ಮೂವತ್ತು ನಿಮಿಷ ಶೂ ಸವೆಸುತ್ತೇನೆ. ಆದ್ರೆ ಬೊಜ್ಜು ಸವೆಯೋದಿಲ್ಲ ಅಂತ ಜಪ್ಪಂತ ಕೂತಿದೆ. ಏನ್ ಮಾಡೋದೋ ಗೊತ್ತಾಗ್ತಿಲ್ಲ. ಏನಾದ್ರೂ ಹೇಳು" ಅಂದಳು.
ನನಗೂ ತಮಾಷೆ ಅನ್ನಿಸ್ತು, "ಹ್ಮ್! ಹೇಳಬಹುದೇ! ಆಗ ನಾನು ಫಿಟ್ನೆಸ್ ಟ್ರೈನರ್ ಆಗಿದ್ದಕ್ಕೂ ಸಾರ್ಥಕ ಆಗತ್ತೆ. ಆದ್ರೆ ನಿನಗೆ ಟಿಪ್ಸ್ ಕೊಟ್ರೆ ನನಗೇನೂ ಸಿಗೋದಿಲ್ವಲ್ಲ!? ನಿನಗೇ ಗೊತ್ತು- ಈ ದೇಶದಲ್ಲಿ ಯಾವುದೂ ಪುಕ್ಕಟೆ ಇಲ್ಲ. ಏನು ಮಾಡೋಣ ಹೇಳು" ಅಂದೆ.
"ನೀನು ಒಳ್ಳೇ ಫ್ರೆಂಡ್ ಅಂತ ಟಿಪ್ಸ್ ಕೇಳಿದ್ರೆ ಕಮರ್ಷ್ರಿಯಲ್ ಆಗ್ಬಿಟ್ಯಾ?"
"ಏನ್ ಮಾಡೋದು? ಈ ದೇಶವೇ ಅದನ್ನೂ ಕಲ್ಸಿದೆ"
ಹೀಗೇ ಒಂದೆರಡು ಚಟಾಕಿಗಳ ನಂತರ, ಅವಳಿಂದ ಒಂದು ಸಂಜೆಯ ಚಹಾಕ್ಕೆ ಆಹ್ವಾನ ಸ್ವೀಕರಿಸಿ ನನ್ನ ಸಲಹಾ ಝರಿ ಹರಿಸಿದೆ:-
ದಿನಾ ಮೂವತ್ತು ನಿಮಿಷ ಟ್ರೆಡ್-ಮಿಲ್ ಮೇಲೆ ನಡೆದಾಗ ಅದ್ರಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷಗಳ ಸಮಯವೂ (ನಡೆಯುವ ವೇಗವನ್ನು ಹೊಂದಿಕೊಂಡು) ನಮ್ಮ ರಕ್ತದಲ್ಲಿ ಮತ್ತು ಮಾಂಸಖಂಡಗಳಲ್ಲಿರುವ ಗ್ಲೂಕೋಸ್ ಅಂಶ ಮಾತ್ರ ಕರಗಿ ಉಪಯೋಗಿಸಲ್ಪಡುತ್ತದೆ. ಬೊಜ್ಜಿನಲ್ಲಿರುವ ಕೊಬ್ಬಿನಂಶ ಕರಗಿ ಗ್ಲೂಕೋಸ್ ಆಗಿ ಪರಿವರ್ತಿತವಾಗಿ ಉಪಯೋಗವಾಗಬೇಕಾದರೆ ಅದಕ್ಕಿಂತ ಹೆಚ್ಚಿನ ಸಮಯ ನಡಿಗೆಯಾಗಲೇಬೇಕು. ಅಂದರೆ, ಮೂವತ್ತು ನಿಮಿಷ ನಡೆದಾಗ ಗ್ಲೂಕೋಸ್ ಉಪಯೋಗಿಸಲ್ಪಟ್ಟು ನಂತರವೂ ನಡೆಯುತ್ತಿದ್ದರೆ ಕೊಬ್ಬು (Fat) ಕಣಗಳು ಗ್ಲೂಕೋಸ್ ಆಗಿ ಪರಿವರ್ತಿತವಾಗಿ ನಡಿಗೆಗೆ ಬೇಕಾದ ಶಕ್ತಿಯನ್ನು ಒದಗಿಸುತ್ತವೆ. ಆದ್ದರಿಂದ ಮೂವತ್ತು ನಿಮಿಷದ ಬದಲು ಮುಕ್ಕಾಲು ಘಂಟೆ ನಡೆಯೋದು ಉತ್ತಮ.
ಅಥವಾ, ಬಿರುಸಾಗಿ ಹದಿನೈದು ನಿಮಿಷ ನಡೆದು, ನಂತರದ ಅರ್ಧ ಘಂಟೆ ಮುಖ್ಯ ಮಾಂಸಖಂಡಗಳು (Muscles) ಉತ್ತೇಜಿತಗೊಳ್ಳುವಂತಹ ತೂಕಧಾರಣ (Weight lifting/ Strength training) ವ್ಯಾಯಾಮ ಮಾಡಿದರೂ ಒಳ್ಳೆಯದೇ. ಜೊತೆಗೆ, ಅದರ ನಂತರದ ಹದಿನೈದು ನಿಮಿಷ ದೇಹದ ಎಲ್ಲ ಭಾಗಗಳೂ ಸಡಿಲಾಗುವಂತೆ 'ಹಿಗ್ಗಿಸುವ' (Stretching) ವ್ಯಾಯಾಮಗಳನ್ನು ಮಾಡಲೇಬೇಕು.
ನಿಗದಿತ ವ್ಯಾಯಾಮವನ್ನು ವಾರದಲ್ಲಿ ನಾಲ್ಕರಿಂದ ಐದು ದಿನ ಮಾಡಿದರೆ ಅತ್ಯುತ್ತಮ. ಮೂರು ದಿನವಾದರೂ ಮಾಡಿದರೆ ಉತ್ತಮ.
ಇದರ ಜೊತೆಗೇ ಊಟ-ತಿಂಡಿಗಳ ಕಡೆಗೂ ಗಮನ ಇರಬೇಕಾದ್ದು ಮುಖ್ಯ.
ವ್ಯಾಯಾಮ ಮಾಡುತ್ತಿದ್ದೇನೆ ಅಂದುಕೊಂಡು-
-ನಿತ್ಯಕ್ಕಿಂತ ಹೆಚ್ಚು ಊಟ ಮಾಡಿದರೆ,
-ಎಣ್ಣೆಯಲ್ಲಿ ಕರಿದ ತಿಂಡಿ ಕಬಳಿಸಿದರೆ,
-ಹೆಚ್ಚು ಅನ್ನ-ಚಪಾತಿ-ರೊಟ್ಟಿಗಳನ್ನು ತಿಂದರೆ,
-ಕೊಬ್ಬಿನಂಶ ಇರುವ ಆಹಾರಪದಾರ್ಥಗಳನ್ನು ಲೆಕ್ಕಕ್ಕಿಂತ ಹೆಚ್ಚು ಸೇವಿಸಿದರೆ,
-ಸಕ್ಕರೆ ಮಿಶ್ರಿತ ಪಾನೀಯಗಳನ್ನು (ಯಾವುದೇ ಸೋಡಾಗಳು, ಬಾಟಲಿಯಲ್ಲಿ ಸಿಗುವ ಅಥವಾ ಪ್ಯಾಕ್ ಆದ ಹಣ್ಣಿನ ರಸಗಳು, ಎಸೆನ್ಸ್ ಬಳಸಿ ಮನೆಯಲ್ಲೇ ತಯಾರಿಸುವ ಜ್ಯೂಸುಗಳು) ದಿನಕ್ಕೆ ಒಂದು ಲೋಟೆಗಿಂತ ಹೆಚ್ಚು ಹೀರಿದರೆ,
-ಮಧುಪಾನ ಮಾಡಿದರೆ,
ತೂಕ ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಕಾಲಕಾಲಕ್ಕೆ ಸರಿಯಾಗಿ ಆಹಾರ ಸೇವನೆಯೂ ಮುಖ್ಯ. ಒಂದು ದಿನ ಬೆಳಗಿನ ಉಪಾಹಾರ ಸರಿಯಾಗಿ ಸೇವಿಸಿ, ಮಧ್ಯಾಹ್ನದ ಊಟ ತಪ್ಪಿಸಿ, ಸಂಜೆಗೆ ಒಂದು ಕಾಫಿ ಹೀರಿ, ರಾತ್ರೆ ವೈನ್/ವಿಸ್ಕಿ/ಬಿಯರ್ ಜೊತೆ ಬಿರಿಯಾಣಿ ಸವಿದು, ಮರುದಿನ ಬೆಳಗಿನ ಉಪಾಹಾರ ಬಿಟ್ಟು, ಮಧ್ಯಾಹ್ನ ಊಟಕ್ಕೆ ೬ ಪರೋಟಾ ಹೊಡೆದು, ಸಂಜೆ ಟೀ-ಟಿಫಿನ್ ತಿಂದು, ರಾತ್ರೆಗೆ ಉಪವಾಸ ಅಂತ ಒಂದು ಲೋಟ ಹಾಲು ಮತ್ತು ಒಂದು ಬಾಳೆಹಣ್ಣು ತಗೊಂಡರೆ ದೇಹಕ್ಕೆ ಸಮತೋಲನ ಕಂಡುಕೊಳ್ಳಲಾಗುವುದಿಲ್ಲ. ದೇಹದ ಲೆಕ್ಕಾಚಾರ ಏರುಪೇರಾದಾಗ ಅದು ಶೇಖರಣೆಗೆ ತೊಡಗುತ್ತದೆ. ತಿಂದ ಆಹಾರ ಕೊಬ್ಬಿನಂಶವಾಗಿ ಚರ್ಮದ ಪದರಗಳ ನಡುವೆ, ಮಾಂಸಖಂಡಗಳ ನಡುವೆ ಬೊಜ್ಜಾಗಿ ಸೇರಿಕೊಳ್ಳುತ್ತದೆ. 'ಅತೀ ಕ್ಷಾಮ' ಬಂದಾಗ ಮಾತ್ರ ಈ ಉಗ್ರಾಣ ತೆರೆಯಲಾಗುತ್ತದೆ; ಇಲ್ಲವಾದಲ್ಲಿ ಶೇಖರಣೆಯೇ ಸಾಗುತ್ತದೆ, ತೂಕ ಏರುತ್ತದೆ. ಆದ್ದರಿಂದ ನಿಯಮಿತವಾಗಿ ಹಿತಮಿತವಾಗಿ ಆಹಾರ ಸೇವನೆ ತೂಕ ಕಳೆಯುವಲ್ಲಿ ಅಥವಾ ಸಮತೂಕ ಇರಿಸಿಕೊಳ್ಳುವಲ್ಲಿ ತುಂಬಾ ಮುಖ್ಯ.
ಆಹಾರ ಮತ್ತು ವ್ಯಾಯಾಮದ ಸಮತೋಲನವೂ ಮುಖ್ಯ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಸರಿಸುಮಾರು ೧೫೦೦-ರಿಂದ ೨೦೦೦ ಕ್ಯಾಲೋರಿ ಬೇಕೆಂಬುದು ಅಂದಾಜು. ನಿತ್ಯವೂ ಕಂಪ್ಯೂಟರ್ ಮುಂದೆಯೇ ಕೂತು ಕೆಲಸ ನಿರ್ವಹಿಸುವವರಿಗೆ ಅಷ್ಟೂ ಬೇಕಾಗುವುದಿಲ್ಲ. ಅಂಥಾದ್ದರಲ್ಲಿ ನಮ್ಮ ಊಟ-ತಿಂಡಿಯ ಒಟ್ಟು ಕ್ಯಾಲೊರಿ ೧೫೦೦ ಮೀರಿದ್ದರೆ ಆಗ ತೂಕ ಹೆಚ್ಚಾಗುವುದೇ ಸರಿ.
ಕೆನೆ ತೆಗೆದ ಒಂದು ಲೋಟ ಹಾಲು- ಸುಮಾರು ೧೦೦-೧೫೦ ಕ್ಯಾಲೊರಿ (ಲೋಟದ ಅಳತೆಯ ಮೇರೆಗೆ)
೧ ಟೀ ಚಮಚ ಸಕ್ಕರೆ- ೫ ಗ್ರಾಂ- ೨೦ ಕ್ಯಾಲೊರಿ
೧ ಟೇಬಲ್ ಚಮಚ ಅನ್ನ (=೩ ಟೀ ಚಮಚ)- ಸುಮಾರು ೭೫ ಕ್ಯಾಲೊರಿ
ಅಂಗೈಯಗಲದ ಒಂದು ಚಪಾತಿ- ಎಣ್ಣೆ/ತುಪ್ಪವಿಲ್ಲದೆ ಮಾಡಿದ್ದು- ಸುಮಾರು ೭೫ ಕ್ಯಾಲೊರಿ
ಸಣ್ಣ ಬಾಳೆಹಣ್ಣು, ಸೇಬು ಮತ್ತು ಇತರ ಅಂತಹ ಹಣ್ಣುಗಳು- ಸುಮಾರು ೫೦ ಕ್ಯಾಲೊರಿ
ಇದೇ ರೀತಿ ನಾವು ಆಹಾರದಲ್ಲಿ ಕ್ಯಾಲೊರಿಯ ಲೆಕ್ಕವಿಡಬಹುದು. ನಿರಂತರ ಚಟುವಟಿಕೆಯ ಜೀವನಶೈಲಿಯಾದರೆ ಸುಮಾರು ೧೫೦೦-ರಿಂದ ೨೦೦೦ ಕ್ಯಾಲೊರಿಯೊಳಗೆ ಸಾಕಾಗುತ್ತದೆ. ಚಟುವಟಿಕೆ ಕಡಿಮೆಯಾದಷ್ಟೂ ಕ್ಯಾಲೊರಿ ಕಡಿಮೆಯಾಗಬೇಕು.
ಹಾಗೇನೇ, ಮೂರನೇ ಅಂಶವೆಂದರೆ ಮನಸ್ಸಿನ ಶಾಂತಿ. ಗೊಂದಲಮಯ ಜೀವನ ಸಾಗಿಸುತ್ತಿರುವ ನಮ್ಮಲ್ಲನೇಕರಿಗೆ ಈ ಒತ್ತಡಭರಿತ ಜೀವನ ಶೈಲಿಯೇ ತೂಕ ಏರಿಕೆಗೂ ಕಾರಣ. ಬಹಳ ಹಿಂದೆ, ಆದಿಮಾನವನ ಕಾಲದಲ್ಲಿ ಮಾನವನಿಗೆ ಒತ್ತಡ (Stress) ಇರುತ್ತಿದ್ದುದು ಆಹಾರ ಸಿಗದೆ ಇದ್ದಾಗ. ಆಗೆಲ್ಲ ದೇಹ ಸಿಕ್ಕಿದ ಆಹಾರವನ್ನು ಮಿತಬಳಕೆ ಮಾಡಿ ಉಳಿದದ್ದನ್ನು ಕೊಬ್ಬಾಗಿ ಶೇಖರಿಸಿಡುತ್ತಿತ್ತು. ಒತ್ತಡಕ್ಕೂ ಈ ಶೇಖರಣೆಗೂ ಸಂಬಂಧವಿದೆ ಅನ್ನುತ್ತಾರೆ ಕೆಲವು ವೈದ್ಯರು. ಇದೇ ವಾದ ಸರಿಯಾದರೆ, ನಮ್ಮಲ್ಲಿ ಬಹುತೇಕರು ತೂಕ ಇಳಿಸಿಕೊಳ್ಳಲಾಗದೇ ಒದ್ದಾಡುವುದಕ್ಕೂ ಒತ್ತಡಭರಿತ ಜೀವನಕ್ಕೂ ನಂಟಿದೆ ಎಂದೇ ನಂಬುವಂತಾಗುತ್ತದೆ. ಆದ್ದರಿಂದ ಒತ್ತಡರಹಿತ ಜೀವನ ನಮ್ಮದಾಗಿಸಿಕೊಳ್ಳಬೇಕು. ನಿಯಮಿತ ವ್ಯಾಯಾಮ ಎರಡು ರೀತಿಯಲ್ಲಿ ಸಹಕಾರಿ. ವ್ಯಾಯಾಮದಿಂದ ದೇಹದಲ್ಲಿ ಒತ್ತಡದಿಂದ ಉಂಟಾಗುವ ಅನಾಹುತಕಾರಿ ರಸಾಯನಿಕಗಳು ಬೆವರಿನ ಮೂಲಕ ಕಳೆದುಹೋಗುತ್ತವೆ ಮತ್ತು ಉತ್ಸಾಹ ತರಿಸುವ ರಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿಯೇ ವ್ಯಾಯಾಮ ಮಾಡಿ ಮುಗಿಸಿದಾಗ ದೇಹ ಬಳಲಿದ್ದರೂ ಮನಸ್ಸಿಗೆ ಹುಮ್ಮಸ್ಸಿನ ಅನುಭವವಾಗುತ್ತದೆ....
ಇಷ್ಟೆಲ್ಲ ಕೇಳಿದ ಗೆಳತಿ... "ನೀನು ಚಹಾಕ್ಕೆ ಬರಬೇಡ ಮಾರಾಯ್ತಿ. ನಿನ್ನ ನೆಪದಲ್ಲಿ ನಾನೂ ಆ ದಿನ ಒಂದು ಟೀ-ತಿಂಡಿ ಜಾಸ್ತಿ ಮಾಡಿಬಿಡುತ್ತೇನೆ. ಸೋ, ಬರಬೇಡ ನೀನು" ಅಂತಂದು ಫೋನ್ ಇಟ್ಟೇಬಿಡೋದಾ?
"ಸತ್ಯವಂತರಿಗಿದು ಕಾಲವಲ್ಲಾ..." ದಾಸರ ಹಾಡು ಯಾಕೋ ಗುನುಗಿಕೊಂಡೆ.
19 comments:
ಸುಪ್ತದೀಪ್ತಿ ಅವರೆ...
ಉಪಯುಕ್ತ ಲೇಖನ, ನವಿರು ಹಾಸ್ಯವನ್ನೂ ಜೊತೆಯಾಗಿಸಿದ್ದೀರಿ.
ಅದಕ್ಕೇ ಇಂಥ ಸಲಹೆಗಳನ್ನ ನಮ್ಮ ಹತ್ತಿರವೇ ಇರೋಂಥವರಿಗೆ ಕೊಡೋಕೆ ಹೋಗಬಾರದು :-)
ನಾನೊಬ್ಬರಿಗೆ ಇದನ್ನೇ ಹೇಳಿದ್ದೆ. ಬೆಳಿಗ್ಗೆ ಅರ್ಧ ದೋಸೆ, ೧ ಕಪ್ ಶುಗರ್ ಲೆಸ್ ಟೀ, ಮಧ್ಯಾಹ್ನ ಒಂದು ಚಪಾತಿ, ಎಣ್ಣೆಯಿಲ್ಲದ ತರಕಾರಿಪಲ್ಯ ಒಂದು ಬೌಲ್, ಸಂಜೆ ಒಂದು ಕಪ್ ಟೀ/ಕಾಫಿ ಶುಗರ್ ಲೆಸ್ ಮತ್ತು ರಾತ್ರಿ ಎರಡು ಸ್ಪೂನ್ ಅನ್ನ/ಚಪಾತಿ, ತರಕಾರಿಪಲ್ಯ ಇಷ್ಟೇ ಬಳಸಿ ಅಂತೆಲ್ಲ ಕೊರೆದೆ.
ಎಲ್ಲ ಕೇಳಿ ಕೊನೇಲಿ ಅವರು ಏನಂದ್ರು ಗೊತ್ತ?
ಯಾರಮೇಲೆ ತುಂಬ ಕೋಪ ಇದೆಯೋ ಅಂಥವರನ್ನ ಕೊಲೆ ಮಾಡಿ ಜೈಲಿಗೆ ಹೋದ್ರೆ ಹ್ಯಾಗೆ? ಅಲ್ಲಿಯೂ ಇಷ್ಟೇ ತಿನ್ನೋಕೆ ಕೊಡ್ತಾರೆ ಅಂದ್ರು :-)
ಅಂದ ಹಾಗೆ ನಿಮ್ಮ ಗೆಳತಿಯವರು ಹಾಗಂದ್ರು ಅಂತಾದ್ರೆ ಬೇಸರ ಬೇಡ, ನಮ್ಮನೆಗೆ ಬನ್ನಿ, ನಾವಿಬ್ಬರು ಕುಳಿತು ಸಕ್ಕರೆಯಿಲ್ಲದೆ ಟೀ ಕುಡಿಯೋಣ :-)
ಶಾಂತಲಾ, ಪ್ರತಿಕ್ರಿಯೆಗೆ ಧನ್ಯವಾದ, ಹಾಗೇ ಚಹಾ ಆಹ್ವಾನಕ್ಕೂ. ನಿನ್ನ 'ಹತ್ತಿರದೋರು' ಕೊಟ್ಟ ಉತ್ತರ ನಗು ತರಿಸಿತು. ಅವರ ಸೆನ್ಸ್ ಆಫ್ ಹ್ಯೂಮರ್ ಚೆನ್ನಾಗಿದೆಯೇ?
ನನ್ನ ಗೆಳತಿಯ ಉತ್ತರ ನನಗೆ ಕೋಪ/ಬೇಸರ ತರಿಸಿಲ್ಲ. 'ಹೌದಲ್ಲ!' ಅಂತನ್ನಿಸಿದೆ. ಈಗ ನೀನು ಚಹಾಕ್ಕೆ ಕರೆದೆಯಲ್ಲ. ನನಗಂತೂ ನಷ್ಟವಿಲ್ಲ.
ಸುಪ್ತದೀಪ್ತಿಯವರೆ...
ಹತ್ತಿರ ಇರೋರಿಗೆ ಇಂಥ ಸಲಹೆ ಕೊಡಬಾರದು ಅಂತ ಹೇಳಿ ನಾನು ಹತ್ತಿರವಿರೋರಿಗೆ ಸಲಹೆ ಕೊಡೋಕೆ ಹೋಗ್ತೀನಾ ಅಕ್ಕಾ?
ಸಹಸ್ರಾರು ಮೈಲುಗಳಾಚೆ, ಸಮುದ್ರದಾಚೆ ಇರೋಂಥವರಿಗೆ ಈ ಸಲಹೆ ಕೊಟ್ಟಿದ್ದೆ. (ಹತ್ತಿರ ಇರೋಂಥವರಿಗೆ ಇಂಥ ಸಲಹೆ ಕೊಟ್ಟು ಒಂದು ಟೀ ನಷ್ಟ ಆಗಬಾರ್ದು, ಅಲ್ವ?)
"ನಿಮ್ಮ ಗೆಳತಿಯವರು ಹಾಗಂದ್ರು ಅಂತಾದ್ರೆ ಬೇಸರ ಬೇಡ, ನಮ್ಮನೆಗೆ ಬನ್ನಿ, ನಾವಿಬ್ಬರು ಕುಳಿತು ಸಕ್ಕರೆಯಿಲ್ಲದೆ ಟೀ ಕುಡಿಯೋಣ :-)"
ನಿಮಗೆ ನಿಮ್ಮ ಗೆಳತಿಯ ಮಾತು ಬೇಸರವಾಗಿರೋಲ್ಲ ಅಂತ ಗೊತ್ತು, ಯಾಕೇಂದ್ರೆ ಲೇಖನದಲ್ಲಿರುವ ವಿಷಯದ ಮಹತ್ವ ಅರಿತವರಿಗೆ ನಿಮ್ಮ ಗೆಳತಿ ಹೇಳಿದ ಮಾತು ಸರಿಯಾಗಿಯೇ ಇದೆ ಅನ್ನಿಸಿರತ್ತೆ.
ಚೆಂದದ ಲೇಖನಕ್ಕೆ ಮತ್ತೊಮ್ಮೆ ಧನ್ಯವಾದ.
ಪುಕ್ಕಟೆ ಸಲಹೆಗಾಗಿ ಧನ್ಯವಾದಗಳನ್ನು ಕೊಡುತ್ತಾ ಇದ್ದೀನಿ.
ಸಲಹೆ ತುಂಬಾ ಉಪಯುಕ್ತವಾಗಿದೆ.
ಸುಪ್ತದೀಪ್ತಿ ಮೇಡಮ್,
ಲೆಕ್ಕಾಚಾರದಲ್ಲಿ ಪಕ್ಕ. ಕೊನೆಯಲ್ಲಿ ನಿಮ್ಮ ಗೆಳತಿ ಮಾಡಿದ್ದು ಸರಿಯಲ್ಲವೆನಿಸಿತು.......
ಲೇಖನ ಸರಳವಾಗಿ ನವಿರು ಹಾಸ್ಯದಿಂದ ಕೂಡಿದ್ದು ಉಪಯುಕ್ತವಾಗಿದೆ.....
ಲೇಖನ ಚೆನ್ನಾಗಿದೆ. ಓದೋದಿಕ್ಕೆ.
‘ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು...’ :)
ಶಾಂತಲಾ, ನಿನ್ನ ಕ್ರಮ ಗೊತ್ತು ನನಗೆ. ಅದಕ್ಕೆಂದೇ 'ಹತ್ತಿರದವರ'ನ್ನು ಉದ್ಧರಣ ಚಿಹ್ನೆಯೊಳಗೆ ಹಾಕಿದ್ದು!! ನಿನ್ನ ಮರುಧನ್ಯವಾದಕ್ಕೆ ಮರುವಂದನೆಗಳು.
ಕಾಕಾ, ಯಾರಿಗಾದರೂ ಉಪಯೋಗವಾದರೆ ಸಂತೋಷವೇ. ನಿಮಗೂ ವಂದನೆಗಳು.
ಕೆ. ಶಿವು, ನಿಮ್ಮ ಚಿತ್ರ ನೋಡಿದರೆ ಈಗ ನಿಮಗದರ ಉಪಯೋಗ ಬೇಕಾಗಿಲ್ಲ ಅಂತನ್ನಿಸುತ್ತೆ. ಆದ್ರೆ ನಿಮಗೆ ಇರೋ ಆರೋಗ್ಯಕರ ತೂಕವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಹಕಾರಿ ಆಗಬಹುದು! ನಿಮಗೂ ವಂದನೆಗಳು.
ಅಯ್ಯೋ!! ಇದೇನು ವೇಣಿ ಹೀಗೆ ಹೇಳಿದ್ದಿ? ಹಾಗಾದ್ರೆ ನಾವೆಲ್ಲ ಆ ಭಗವಂತನಿಗೆ ಹೂ ಏರಿಸಿ ಪೂಜೆ ಮಾಡೋಕೆ ಅರ್ಹರಲ್ಲ ಅಂತ ಒಂದೇ ವರ್ಡಿಕ್ಟ್ ಕೊಟ್ಟಿದ್ದೀಯಲ್ಲ!! ಅದೂ ಅಲ್ದೆ, "ಲೇಖನ ಚೆನ್ನಾಗಿದೆ. ಓದೋದಿಕ್ಕೆ." ಅನ್ನುವ ಕಟುಸತ್ಯ ಬೇರೆ. ಹೇಳಿದ್ರೂ ನಯವಾಗಿ ಹೇಳಮ್ಮ ತಾಯಿ! ಏನೋ ತೂಕ ಇಳಿಸಿಕೊಳ್ಳುವ ಪ್ರಯತ್ನವಾದ್ರೂ ಮಾಡ್ತಾ ಸಣ್ಣಗಾಗೋ ಕನಸಾದ್ರೂ ಕಾಣ್ತೀವಿ.
:-)
ನಂಗಂತೂ ಈ ’ತೂಕ’ದ ಸಮಸ್ಯೆ ಇಲ್ವಪ್ಪ. :-)
ಅಯ್ಯೋ, ನನ್ನ ಮಾತನ್ನು ಅಪಾರ್ಥ ಮಾಡಿಕೊಳ್ಳಲಾಗಿದೆಯಲ್ಲಾ! :(
"ನಂಗಂತೂ ಈ ’ತೂಕ’ದ ಸಮಸ್ಯೆ ಇಲ್ವಪ್ಪ."
- ಸುಳ್ಳು, ನಿನಗೆ ತೂಕ ಹೆಚ್ಚಿಸಿಕೊಳ್ಳುವ ಸಮಸ್ಯೆ ಇದೆ.
ಹಹ್ಹಹ್ಹಾ... ನಮಗೂ ಸಿಗ್ತು ಪುಕ್ಕಟೆ ಸಲಹೆ! ಟೀ ಖರ್ಚಿಲ್ದೆ :-)
ಧನ್ಯವಾದಗಳು :-)
I am sure most of the Indians don't like these suggestions, however, I like this particular article.
This article is, according to me, better than any other love story/poems.
Indians go to temples/God/jyothishis, whereas, I read what Jyothi-ji wrote! and practice them.
Please write such realistic things more. Thanks and regards-D.M.Sagar(Original)
ವಿಕಾಸ್, ಸುಶ್, ವೇಣಿ, ಹರೀಶ್... ವಂದನೆಗಳು.
ವಿಕಾಸ್, :-) ?? ಹಾಗಂದ್ರೇನು?
ಸುಶ್, ನಿನಗೆ ತ್ರಿವೇಣಿ ಉತ್ತರ ಕೊಟ್ಟಿದ್ದಾಳೆ. ನಾನು ಮತ್ತೆ ಅದನ್ನೇ ಹೇಳೋದಿಲ್ಲ.
ವೇಣಿ, ನಿನ್ನ ಮಾತನ್ನು ಅಪಾರ್ಥ ಮಾಡಿಕೊಂಡಿಲ್ಲ. ನೀನು ಬರ್ದಿದ್ದನ್ನು ಓದಿದರೆ ಹಾಗೇ ಅರ್ಥ ಆಗೋದು.
ಹರೀಶ್, ಟೀ ಖರ್ಚಿಲ್ದೆ...!? ಊರಿಗೆ ಬಂದಾಗ ವಸೂಲು ಮಾಡ್ತೀನಿ ಅಂದುಕೊಂಡಿದ್ದೆ; ಆಗ್ಲೂ ಕೊಡೋಲ್ಲ ನೀವು ಅಂತಾಯ್ತು! ಇರ್ಲಿ, ಮಜಾ ಮಾಡಿ. ಸಲಹೆ ಪಾಲಿಸಿ ನೀವು ಸಣ್ಣ ಆಗಿದ್ದನ್ನಂತೂ ನೋಡೋಕೆ ಇಷ್ಟಪಡ್ತೀನಿ.
ಅಲ್ಟ್ರಾಫಾಸ್ಟ್ ಲೇಸರ್- ಡಿ.ಎಮ್.ಸಾಗರ್ (ಒರಿಜಿನಲ್), ನಾನು ಹೇಳಿದ್ದನ್ನು ಪಾಲಿಸುವವ ಒಬ್ಬನಾದರೂ ಇದ್ದೀಯಲ್ಲ; ಥ್ಯಾಂಕ್ಸ್. ಇಂಥದ್ದನ್ನೇ ಇನ್ನೂ ಬರೀಬೇಕಾ? ಪ್ರಯತ್ನ ಮಾಡ್ತೀನಿ ಕಣೋ. ಆದ್ರೆ, ಕವನಗಳನ್ನು ಬರೀದೇ ಇರಲಾರೆ!!
ಜ್ಯೋತಿ ಅಕ್ಕ, ಈ ಲೇಖನ ತುಂಬಾ ಉಪಕಾರಿಯಾಗುವಂತಿದೆ.ನನಗೋಸ್ಕರ ಬರೆದ ಹಾಗಿದೆ.ಖಂಡಿತ ಟ್ರೈ ಮಾಡ್ತೀನಿ. ಮತ್ತೆ ನಮ್ಮನೆಗೆ ನೀವು ಟೀ ಗೇನು ಊಟಕ್ಕೆ ಬರುವುದಾದರೆ ನಾನು ಇನ್ನೂ ಸ್ವಲ್ಪ ಗುಂಡಗಾದ್ರೂ ಚಿಂತಿಲ್ಲ.ಖುಷಿಗೆ ೨ ಊಟಮಾಡಿಬಿಡ್ತೇನೆ:-).
PSP.
ಪಿ.ಎಸ್.ಪಿ., ಇಷ್ಟು ದಿನ ಎಲ್ಲಿ ಕಳೆದುಹೋಗಿದ್ದೆ? ಯಾಕೆ ಬರಲಿಲ್ಲ ಅಂತ ಯೋಚಿಸ್ತಿದ್ದೆ (ಯೋಚನೆ ಮಾಡಿ ಸಣ್ಣಗಾಗೋ ಜಾತಿ ನಾನಲ್ಲಾಂತ ಗೊತ್ತಾಯ್ತು).
ನಿಮ್ಮೂರಿಗೆ ಬರಬೇಕಾದ್ರೆ ಖಂಡಿತಾ ನಿನಗೇ ತಿಳಿಸ್ತೇನೆ. ಊಟ, ಟೀ, ಹರಟೆ... ಎಲ್ಲದಕ್ಕೂ ರೆಡೀ. ಇಬ್ರೂ ಜೊತೆಗೇ ದಪ್ಪಗಾಗೋಣ.
Akka, tumba tadavagi odide nimma lekhana. Very very interesting. Nanagoo bekagabahudu munde :-) Tumba thanks. Ega gottaytu neevu sikkapatte slim aagirodara guttu ;-) Matte Ganarajyotsavada hardika Shubhashayagalu..
ಎಲ್ಲಿ ಹೋಗಿದ್ದೆಯೇ ಇಷ್ಟು ದಿನ? ಪ್ರತಿಕ್ರಿಯೆಗೆ ಧನ್ಯವಾದ.
ಆದರೆ, -- Ega gottaytu neevu sikkapatte slim aagirodara guttu-- ಈ ಮಾತಿನಲ್ಲಿ sikkapatte slim ಅನ್ನೋದಕ್ಕೆ ಡಬಲ್ ಕೊಟೇಷನ್ ಮಾರ್ಕ್ ಮತ್ತು ಒಂದು ಎಕ್ಸ್'ಕ್ಲಮೇಶನ್ ಮಾರ್ಕ್ ಬೇಕಿತ್ತಲ್ಲ! ಬರವಣಿಗೆಯಲ್ಲಿ ಈ ಎಲ್ಲ ಚಿಹ್ನೆಗಳು "ಅರ್ಥವಂತಿಕೆಗೆ" ಮುಖ್ಯ; ಅಲ್ವೇನೆ?
ಚೆನ್ನಾಗಿ ನಕ್ಕು ಬಿಡು, ನೀನೂ "ನನ್ನ ಹಾಗೇ" ಆಗಬಹುದು.
Post a Comment