ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday, 30 November 2008

ಆತ್ಮ ಚಿಂತನ-೧೨

ಓದುಗರೇ, ನಮಸ್ಕಾರ.
ಹಲವಾರು ವಾರಗಳ ಬಳಿಕ ನಿಮ್ಮನ್ನು ಎದುರುಗೊಳ್ಳುತ್ತಿದ್ದೇನೆ. ಮೌನಕ್ಕೆ ಕಾರಣಗಳು ಬೇಕಿಲ್ಲ, ಬಿಡಿ.

ಒಂದು ಸ್ವಾರಸ್ಯಕರ ಚರ್ಚೆ ಇತ್ತೀಚೆಗೆ ಬಹಳ ತಿಳಿದವರ ಜೊತೆ ನಡೆಯಿತು. ಅಂದು ಅವರೊಡನೆ ಎತ್ತಿದ ಪ್ರಶ್ನೆಯನ್ನು ಇಲ್ಲಿ ನಿಮ್ಮೆದುರಿಗೂ ಇಡುತ್ತಿದ್ದೇನೆ- ನಿಮ್ಮ ಅಭಿಪ್ರಾಯ ತಿಳಿಯುವ, ನಿಮ್ಮನ್ನು ಯೋಚನೆಗೆ ಹಚ್ಚುವ ಹುಚ್ಚು ಕುತೂಹಲದಿಂದ; ಅಷ್ಟೇ.

ಪ್ರಶ್ನೆ ಹೀಗಿದೆ:
"ಮಧ್ವಾಚಾರ್ಯರ ದ್ವೈತ ಸಿದ್ಧಾಂತ (ಪರಮಾತ್ಮ ಮತ್ತು ಜೀವಾತ್ಮರು ಬೇರೆ ಬೇರೆ... ಇವೆರಡೂ ಒಂದೇ ಅಲ್ಲ)
ಶಂಕರಾಚಾರ್ಯರ ಅದ್ವೈತ ಸಿದ್ಧಾಂತ (ಪರಮಾತ್ಮ ಮತ್ತು ಜೀವಾತ್ಮರು ಒಂದೇ... ಮೂಲ ಒಂದೇ ರೂಪ)
- ಇವೆರಡರಲ್ಲಿ ನಿಮಗೆ ಯಾವುದು ಇಷ್ಟ? ಯಾಕೆ?"

ನನ್ನ ಚರ್ಚೆ ನಡೆದದ್ದು ಕಟ್ಟಾ ದ್ವೈತಿಯೊಡನೆ. ಅದರ ಸಾರಾಂಶ ಮತ್ತು ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಇಲ್ಲಿ ಮುಂದಿನ ಕಂತಿನಲ್ಲಿ ಖಂಡಿತವಾಗಿಯೂ ಕೊಡುತ್ತೇನೆ. ಈಗ ನಿಮ್ಮ ಸರದಿ. ಪತ್ರಗಳಿಗಾಗಿ ಕಾಯುತ್ತಿದ್ದೇನೆ....

16 comments:

Harisha - ಹರೀಶ said...

ಸ್ವಾರಸ್ಯಕರವಾದ ಚರ್ಚೆ. ಎಲ್ಲರ ಅಭಿಪ್ರಾಯಕ್ಕಾಗಿ, ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಚರ್ಚೆಯ ಅನಾವರಣಕ್ಕಾಗಿ ಕಾದಿರುವೆ.. :-)

ಸುಪ್ತದೀಪ್ತಿ suptadeepti said...

ಈಗಿನ್ನೂ ಚರ್ಚೆ ಆರಂಭವೇ ಆಗಿಲ್ಲ, ಪ್ರಶ್ನೆ ಮಾತ್ರ ವೇದಿಕೆಯಲ್ಲಿದೆ. ನೀವೇ ಶುರು ಮಾಡಬಹುದಿತ್ತಲ್ಲ! ಯಾವ ಪಂಥ ನಿಮಗಿಷ್ಟ? ಹೇಳಿಬಿಡಿ. ನಾಚಿಕೆ, ದಾಕ್ಷಿಣ್ಯ ಇಲ್ಲಿ ಬೇಡ

Harisha - ಹರೀಶ said...

ಅಯ್ಯೋ! ನನ್ನನ್ನೇ ಇಲ್ಲಿ ಓಪನರ್ ಮಾಡಿಬಿಟ್ರಲ್ಲ!

ನನಗೆ ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಇಷ್ಟ. ಯಾಕೆ ಅನ್ನೋದು ಆದಿ ಶಂಕರಾಚಾರ್ಯರು ಮತ್ತು ಮಂಡನ ಮಿಶ್ರರ ವಾದದಷ್ಟೇ ದೀರ್ಘವಾಗುತ್ತದೆ.

sunaath said...

ಯಾವುದು ಇಷ್ಟ ಹಾಗೂ ಯಾವುದು ಸತ್ಯ ಅನ್ನುವ ಪ್ರಶ್ನೆ ಬರುತ್ತದೆ.
ಉಪನಿಷತ್ ಗಳಲ್ಲಿ ಹೇಳುವಂತೆ, ಒಂದೇ ಒಂದಾಗಿದ್ದ ಚೈತನ್ಯವು ನಾನು 'ಬಹಳ' ಆಗುತ್ತೇನೆ ಎಂದು ಬಯಸಿದ್ದರಿಂದ ಈ ಸೃಷ್ಟಿ 'ಆಯಿತು'.
ಬೀಜವು ಸಸಿಯಾಗಿ, ಮರವಾಗಿ, ಟೊಂಗೆ, ಎಲೆ ಹಾಗೂ ಹಣ್ಣುಗಳನ್ನು ಬಿಟ್ಟಾಗ, ಈ ಎಲ್ಲ ಅಂಗೋಪಾಂಗಗಳಿಗೆ ದ್ವೈತವೆನ್ನಬೇಕೊ ಅಥವಾ ಅದ್ವೈತ ಎನ್ನಬೇಕೊ?
ಅಥವಾ ರಾಮಕೃಷ್ಣ ಪರಮಹಂಸರು ಹೇಳುವಂತೆ, ಪರಮಾತ್ಮ ಎಂದರೆ ಅನಂತ ಸಮುದ್ರ;ಈ ಸೃಷ್ಟಿ ಎಂದರೆ ಸಮುದ್ರದ ತೆರೆಗಳು.
ಅದ್ವೈತದಲ್ಲಿ ಬ್ರಹ್ಮಚೈತನ್ಯ ಮಾತ್ರ ಸತ್ಯ; ದ್ವೈತದಲ್ಲಿ ಪರಮಾತ್ಮ ಹಾಗೂ ಜೀವಾತ್ಮ ಎರಡೂ ಸತ್ಯ; ವಿಶಿಷ್ಟಾದ್ವೈತದಲ್ಲಿ ಪರಮಾತ್ಮ ಸತ್ಯ ಹಾಗೂ ಜೀವಾತ್ಮ conditional ಸತ್ಯ.
ವೀರಶೈವ ಮತದಲ್ಲಿ, ಬಸವಣ್ಣನವರು absolute ದ್ವೈತಿಗಳು. ಅವರ ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ:
"ಕಾಳಿಯು ಕಣ್ ಬಿಡುವ ಮುನ್ನ.....ಹಳೆಯ ನಾನು ಕೆಳೆಯ ನೀನು."
ಆದರೆ, ಅಲ್ಲಮಪ್ರಭುಗಳು absolute ಅದ್ವೈತಿಗಳು. ಅವರು ತಮ್ಮ ವಚನವೊಂದರಲ್ಲಿ, "ಗುಹೇಶ್ವರಾ ನೀನು ಸತ್ತು ನಾನೊಬ್ಬನೆ ಉಳಿದೆ ನೋಡಾ" ಎಂದಿದ್ದಾರೆ.
ಆದುದರಿಂದ ದ್ವೈತ ಹಾಗೂ ಅದ್ವೈತಗಳ ನಡುವಿನ choice ಎಂದರೆ, ರಾಗಿ ದೋಸೆ ಇಷ್ಟಾನೊ, ಮಸಾಲೆ ದೋಸೆ ಇಷ್ಟಾನೊ ಎಂದು ಕೇಳಿದಂತೆ!

ಸುಪ್ತದೀಪ್ತಿ suptadeepti said...

ಹರೀಶ್, ಓಪನರ್ ಆಗುವ ಆಸಕ್ತಿ ಮತ್ತು ಆ ಶಕ್ತಿ ಎರಡೂ ನಿಮ್ಮಲ್ಲಿವೆ ಅಂತ ಸಾಬೀತಾಯ್ತು. ಇನ್ನು ಮುಂದೆಯೂ ದಾಕ್ಷಿಣ್ಯ ಇಲ್ಲದೆ ಪ್ರತಿಕ್ರಿಯೆ ಬರೀತೀರಲ್ಲ. ಧನ್ಯವಾದ, ಈಗಲೇ.

ಹಾಗೇನೇ, 'ಯಾಕೆ' ಅನ್ನುವ ನಿಮ್ಮ ವಿವರಣೆಯನ್ನೂ (ಸ್ವಲ್ಪ ದೀರ್ಘವಾದರೂ ಪರವಾಗಿಲ್ಲವೇನೋ! ವಿಷಯವೇ ಹಾಗಿದೆಯಲ್ಲ) ಬರೆದರೆ ನಮಗೆಲ್ಲ ಒಂದಿಷ್ಟು ಜ್ಞಾನಾರ್ಜನೆಯೂ ಆದೀತು. ಬರೀರಿ, ಪ್ಲೀಸ್.

ಕಾಕಾ, ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ, ರಾಗಿ ದೋಸೆ-ಮಸಾಲೆ ದೋಸೆ ಎಷ್ಟು ಸತ್ಯವೋ, ಬೇಂದ್ರೆ-ಕುವೆಂಪು ಎಷ್ಟು ಸತ್ಯವೋ, ದ್ವೈತ-ಅದ್ವೈತ ತತ್ವಗಳೂ ಅಷ್ಟೇ ಸತ್ಯ. ಇವೆಲ್ಲ "ಅವರವರ ಭಾವಕ್ಕೆ, ಅವರವರ ಭಕುತಿಗೆ" ತಕ್ಕನಾಗಿ ಮೆಚ್ಚುಗೆಯಾಗುವಂಥ ಪಂಥಗಳು (ಅದಕ್ಕೇ ಹಿಂದೂ ಧರ್ಮ ದೊಡ್ಡದು; ಅಲ್ಲಿರುವ ಸಿದ್ಧಾಂತಗಳೂ ದೊಡ್ಡವು, ಸ್ವಾತಂತ್ರ್ಯವೂ ದೊಡ್ಡದು) ಎನ್ನುವುದು ನನ್ನ ವಿಚಾರ.

ಒಳ್ಳೆಯ ವಿವರಗಳನ್ನು ತಿಳಿಸಿದ್ದೀರಿ, ಧನ್ಯವಾದ ಕಾಕಾ. ನಿಮ್ಮ ಮಾತುಗಳನ್ನು ಓದೋದು ನನಗೆ ತುಂಬಾ ಖುಷಿಯ ವಿಷಯ. ಜೊತೆಗೇ ಒಂದು ಕಂಪ್ಲೇಂಟ್... ನಿಮಗೆ ಯಾವುದು ಇಷ್ಟ ಅಂತ ನೀವು ಹೇಳಲೇ ಇಲ್ಲ!? ಈ ಎರಡು ಯೋಚನಾ ಹಾದಿಗಳಲ್ಲಿ ನಿಮ್ಮ ಮನಸ್ಸಿಗೆ, ಹೃದಯಕ್ಕೆ ಯಾವುದು ಹತ್ತಿರ? ಯಾಕೆ? ತಿಳಿಸುವಿರಾ?

ವಿ.ರಾ.ಹೆ. said...

ನನಗೆ ದ್ವೈತ ಇಷ್ಟ. ಹಾಗಂತ ಅದ್ವೈತ ಇಷ್ಟ ಇಲ್ಲ ಅಂತ ಏನಿಲ್ಲ. ಇದರ ಬಗ್ಗೆ ಅಭಿಪ್ರಾಯ ಮಂಡಿಸುವಷ್ಟು ನಾನು ಓದಿಕೊಂಡಿಲ್ಲ, ತಿಳಿದುಕೊಂಡಿಲ್ಲ ಅಂತ ಒಪ್ಪಿಕೊಂಡು ತಿಳಿದವರು ಹೇಳುವುದನ್ನು ಓದೋಕೆ ಕಾತುರನಾಗಿದ್ದೇನೆ. ಇನ್ಯಾವಾಗಲೋ ಪೂರ್ತಿ ತಿಳಕೊಂಡಮೇಲೆ ನನ್ನ ಇಷ್ಟ ಬದಲಾದರೂ ಆಶ್ಚರ್ಯವಿಲ್ಲ !

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗೆ ಧನ್ಯವಾದಗಳು, ವಿಕಾಸ್.

ಸಂಪೂರ್ಣ ತಿಳಿದುಕೊಂಡವರು ಇಲ್ಲಿ ಯಾರೂ ಇಲ್ಲ ಅಂತ ನನ್ನ ಭಾವನೆ (ಸುನಾಥ್ ಕಾಕಾ, ನಿಮ್ಮನ್ನು 'ಅಂಡರ್ ಎಸ್ಟಿಮೇಟ್ ಮಾಡುತ್ತಿಲ್ಲ, ನಿಮ್ಮ ಜ್ಞಾನದ ಆಳ, ಅಗಲ ದೊಡ್ಡದು). ಇಲ್ಲಿ ನಾನು ಬಯಸಿದ್ದು, ಸಾಮಾನ್ಯರಾಗಿಯೇ ನಮಗೆ ಯಾವುದು ಇಷ್ಟ/ ಯಾಕೆ- ಅನ್ನುವ ಉತ್ತರವನ್ನು; ಪಂಡಿತರ ಪಾಂಡಿತ್ಯ ಅಲ್ಲ.

hamsanandi said...

ದ್ವೈತ ಅದ್ವೈತಗಳನ್ನೆಲ್ಲ ಚರ್ಚಿಸೋ ಅಷ್ಟು ನನಗೆ ತಿಳಿದಿಲ್ಲ.

ಆದರೆ ಮಧ್ವಾಚಾರ್ಯ ಸಿನೆಮಾ ನೋಡಿದಾಗ, ದ್ವೈತದ ಕೆಲವು ಅಂಶಗಳು ಅದ್ವೈತದ concept ಗಳಿಗಿಂತ (ಉದಾ: ಅಹಂ ಬ್ರಹ್ಮಾಸ್ಮಿ) ಸ್ವಲ್ಪ ಸರಳವಾಗಿ ಅರ್ಥವಾಗುತ್ತವೆ ಅನ್ನಿಸಿತು.

ಸುಪ್ತದೀಪ್ತಿ suptadeepti said...

ಧನ್ಯವಾದಗಳು ಹಂಸಾನಂದಿ.

Anonymous said...

ದ್ವೈತ ಹಾಗು ಅದ್ವೈತ ಇವೆರಡರಲ್ಲಿ ಸರಿ ಯಾವುದು? - ಈ ಪ್ರಶ್ನೆಗೆ ಉತ್ತರ (ನನ್ನ ಮತಿಯ ಮಿತಿಯಲ್ಲಿ! ) ದೇಶಕಾಲವನ್ನು ಅವಲಂಬಿಸಿರುತ್ತದೆ. ವಿವರಿಸುವ ಮೊದಲು ಒಂದು ಪ್ರಮೇಯವನ್ನು ಪ್ರತಿಪಾದಿಸುತ್ತೇನೆ, "ಪರಮ ಸತ್ಯ ಎನ್ನುವುದು ಎಲ್ಲಿಯೂ ಇಲ್ಲ-ಎನ್ನುವುದೇ ಒಂದು ಪರಮ ಸತ್ಯದ ವಿಷಯ.
ಸತ್ಯ ಎನ್ನುವುದು ದೇಶ ಕಾಲವನ್ನು ಅವಲಂಬಿಸಿಕೊಂಡು ಇರುತ್ತದೆ. ಸೃಷ್ಟಿಯ ಸಮಸ್ಟಿ ಅಥವಾ ಸಮಗ್ರತೆಯ ಪ್ರಶ್ನೆ ಎದುರಾದಾಗ, ಅದ್ವೈತ ದ approach ಸರಿ ಎನ್ನಿಸುತ್ತದೆ. ಸಮಗ್ರವಾಗಿ ಗಮನಿಸಿದಾಗ, ಜೀವ ಹಾಗು ಪರಮಾತ್ಮ ಎರಡು ಒಂದೇ. ಇದೊಂದು ಕಾಲಾತೀತವಾದ ಚಿಂತನೆ. ಅವ್ಯಕ್ತ ಪರಮಾತ್ಮನ ವ್ಯಕ್ತತೆಯೇ ಜೀವರು ಎಂದುಕೊಂಡರೆ, ಆ ಜೀವರು ಉದಯಿಸಿ (ಅಸ್ತಿ, ಜಾಯತೆ, ಪರಿಣಮತೆ.., ಹಾಗು ಕೊನೆಗೆ ಕ್ಷೀಯತೆ) ಕೊನೆಗೆ ಅಸ್ತಮಿಸುವುದು ಆ ಸಮಗ್ರ ಪರಮಾತ್ಮ ಪ್ರಜ್ಞೆಯಲ್ಲಿ. ಕಾಲಾತೀತದಲ್ಲಿ ಗಮನಿಸಿದಾಗ ಸಾಗರದಲ್ಲಿ ತಾತ್ಕಾಲಿಕವಾಗಿ ಎದ್ದ ಅಲೆಗಳು ಮರಳಿ ಸಾಗರವನ್ನು ಸೇರಿ ಲೀನವಾದ ಹಾಗೆ ಜೀವರು ಪರಮಾತ್ಮನಲ್ಲಿ ಲೀನವಾಗುತ್ತಾರೆ. ಹಾಗೆ ಲೀನವಾದ ನಂತರ, ಜೀವ ಹಾಗು ಪರಮಾತ್ಮರಲ್ಲಿ ಅಬೇಧ (indistinguishable).

ದ್ವೈತ ಪ್ರಜ್ಞೆ ವ್ಯಕ್ತಿ ವಿಕಸನಕ್ಕೆ ಪೂರಕ. ಪರಮಾತ್ಮನ ಒಂದು ಅಂಗವೇ ಆದರು, ಜೀವರ ಕರ್ತವ್ಯ ಪ್ರತ್ಯೀಕವಾಗಿರುತ್ತದೆ. ಪ್ರಕೃತಿ ಹಾಗು ಪುರುಷ ಸಂಗಮದಿಂದ ವ್ಯಕ್ತಗೊಳ್ಳುವ ಜೀವ ತಾತ್ಕಾಲಿಕವೇ ಆದರು ಅದು ಆ ಕ್ಷಣದ ಸತ್ಯ. ಹಾಗು ಆ ಕ್ಷಣಕ್ಕೆ ಬದ್ದನಾಗಿರಬೇಕದ್ದು ಕೂಡ ಒಂದು ಕರ್ತವ್ಯ ಪ್ರಜ್ಞೆ. ಆ ನಿಟ್ಟಿನಲ್ಲಿ ದ್ವೈತದ approach ಸಾಧುವಾಗಿದ್ದು.
ಮೊದಲೇ ತಿಳಿಸಿದಂತೆ, ಇದು ನನ್ನ ಐದು ನಿಮಿಷ ಯೋಚನೆಯ ಹಾಗು ಅನನುಭಾವದಿಂದ ಉದ್ವ್ಹವಿಸಿದ್ದು. ಎಂದಿನಂತೆ, ಉಳಿದ ಸಹೃದಯರ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತ. D.M.Sagar

ಸುಪ್ತದೀಪ್ತಿ suptadeepti said...

ಪ್ರತಿಕ್ರಿಯೆಗೆ ಧನ್ಯವಾದಗಳು, ಸಾಗರ್.

sunaath said...

ಭಕ್ತನಿಗೆ ಅದ್ವೈತ ಇಷ್ಟ;ಭಗವಂತನಿಗೆ ದ್ವೈತ ಇಷ್ಟ.
ಭಕ್ತನು ದೇವರಲ್ಲಿ integrate ಆಗಬಯಸುತ್ತಾನೆ.
ಭಗವಂತನು ಅನೇಕ ಜೀವಿಗಳಾಗಿ differentiate ಆಗಬಯಸುತ್ತಾನೆ.
ಬಹುಶ: ಇದೇ ಸೃಷ್ಟಿಯ mysteryಯೇ?
ನಾನು ಭಗವಂತನಲ್ಲ, ಭಕ್ತ.
ಕೊನೆಗೊಮ್ಮೆ ದೇವರಲ್ಲಿ ಲೀನನಾಗಲು ಬಯಸುವವನು.
ಆದುದರಿಂದ ನಾನು ದ್ವೈತದಿಂದ ಅದ್ವೈತಕ್ಕೆ ಚಲಿಸುತ್ತಿರುವ ಪಯಣಿಗ!

ARUN MANIPAL said...

ಇವೆರಡೂ ಕೂಡ ಸಿದ್ದಾಂತಗಳಷ್ಟೇ...ಒಪ್ಪಿಕೊಳ್ಳಬೇಕಾದರೆ ನಾವು ಪರಶೀಲಿಸಬೇಕಾಗುತ್ತದೆ.ಆಥವಾ ಇದರ ಪ್ರತಿಪಾದಕರು ವಿವರಿಸಬೇಕಾಗುತ್ತದೆ.ಸರಿ ವಿವರಿಸಿದರೆನ್ನಿ ಹಾಗಾದಾಗ ಅದು ಬೌದ್ದಿಕ ಅರಿವಿಗೆ ನಿಲುಕುವ ಒಂದು ಜ್ನಾನವಾದೀತು.ಹಾಗಾದಾಗ ಅದನ್ನು ಇಷ್ಟಪಡುವ ಪ್ರಶ್ನೆಯೆ ಬರುವುದಿಲ್ಲ ಒಂದು ವೇಳೆ ಇಷ್ಟಪಟ್ಟರು ಯಾವ ಪ್ರಯೋಜನವು ಇಲ್ಲ. ಅಂತಹ ಜ್ನಾನವನ್ನು ಅನುಭೂತಿಯ ಸ್ತರದಲ್ಲಿ ಅರಿತುಕೊಳ್ಳುವುದು ಮುಖ್ಯವಾಗುತ್ತದೆ.ಹಾಗೆ ಉಂಟಾದ ಅರಿವು ಮಾತ್ರವೆ ಅದನ್ನು judge ಮಾಡಬಹುದೆ ಹೊರತು ಉಳಿದದ್ದೆಲ್ಲಾ ವಾದ ವಿವಾದಗಳೆ ಹೊರತು ಬೇರೇನು ಅಗಿರಲಿಕ್ಕಿಲ್ಲ.

ಸುಪ್ತದೀಪ್ತಿ suptadeepti said...

ಚೆನ್ನಾಗಿದೆ ಕಾಕಾ ನಿಮ್ಮ ವಿವರಣೆ. ಭಕ್ತ-ಭಗವಂತನ ಅದ್ವೈತ-ದ್ವೈತ ಕುತೂಹಲಕರವಾಗಿದೆ. ಹೌದಲ್ಲ! ಅನಿಸಿತು.


ಅರುಣ್, ನಿಮ್ಮ ವಾದವೂ ವಿಶೇಷವಾಗಿದೆ. ಧನ್ಯವಾದ.

ಬೌದ್ಧಿಕ ಜ್ಞಾನ= knowledge;
ಅನುಭೂತಿಯ ಜ್ಞಾನ= wisdom.
ಅನುಭೂತಿಯ ನೆಲೆಗೆ ತಲುಪಿದ ಮೇಲೆ ಅಲ್ಲಿ judgement ಇರುವುದಿಲ್ಲ ಅಂತ ನನ್ನ ನಂಬಿಕೆ.

ನಿಜ, ವಾದ ವಿವಾದಗಳು ಮತ್ತು ಇಷ್ಟಾನಿಷ್ಟಗಳು ಬೌದ್ಧಿಕ ನೆಲೆಯಲ್ಲಿ ಮಾತ್ರ ಇರಬಲ್ಲವು ಒಮ್ಮೆ ಜೀವಾತ್ಮ ತನ್ನ ಅನುಭೂತಿಯ ಸ್ಥರಕ್ಕೆ ಏರಿತೆಂದರೆ, ಅಲ್ಲಿ ದ್ವಂದ್ವವೇ ಇಲ್ಲ. ಎಲ್ಲವೂ ಸಮಾನ. ಎನಿವೇ, ಇದು ನನ್ನ ನೋಟ, ಅಷ್ಟೇ.

prasca said...

ಆತ್ಮವೆಂಬುದೇ ಇಲ್ಲ ಅದೊಂದು ಚೇತನವಷ್ಟೆ ಅಲ್ಲವೆ. ಚೇತನ ಎನ್ನುವುದು ಒಂದು ದೀಪದಂತೆ ಎಣ್ಣೆ ಮುಗಿದ ಮೇಲೆ ಆರಿಹೋಗುತ್ತದೆ ಅಷ್ಟೆ. ಅದಕ್ಕೆ ಪುನರ್ಜನ್ಮವೂ ಇಲ್ಲ.
ಇದು ನನ್ನ ನಂಬಿಕೆ.

ಸುಪ್ತದೀಪ್ತಿ suptadeepti said...

prasca, ನನ್ನ ಅಕ್ಷರಲೋಕಕ್ಕೆ ಸ್ವಾಗತ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳೂ ಕೂಡಾ.

ಆತ್ಮವೆಂಬುದು ಚೇತನ, ಒಪ್ಪಿದೆ. ಇದರ ನಂತರದ್ದು ನಿಮ್ಮ ವೈಯಕ್ತಿಕ ನಂಬಿಕೆ. ಅದನ್ನು ಪ್ರಶ್ನಿಸಲು, ಅಲುಗಾಡಿಸಲು, ಬದಲಾಯಿಸಲು ನಾನು ಪ್ರಯತ್ನಿಸುವುದಿಲ್ಲ. ನನ್ನ ಅಭಿಪ್ರಾಯ, ನಂಬಿಕೆ, ಆಲೋಚನೆಗಳನ್ನು ಇಲ್ಲಿ ಬರೆಯುತ್ತೇನೆ. ಯಾರನ್ನೂ ಒಪ್ಪಿಸುವುದು, ಮೆಚ್ಚಿಸುವುದು ನನ್ನ ಉದ್ದೇಶ ಅಲ್ಲ.