ಆರೋಗ್ಯ ಪೂಜೆ
(ಶ್ರೀ ಪುರಂದರ ದಾಸರ ಪದ- "ಊಟಕ್ಕೆ ಬಂದೇವು ನಾವು, ನಿಮ್ಮ- ಆಟ-ಪಾಠವ ಬಿಟ್ಟು ಅಡುಗೆ ಮಾಡಮ್ಮ" ಹಾಡಿನ ಧಾಟಿಯಲ್ಲಿದೆ. ಶ್ರೀ ದಾಸರ ಕ್ಷಮೆ ಕೋರಿ, `ಅತ್ಯಾಧುನಿಕ'ರ ಗಮನಕ್ಕೆ....)
ಊಟಕ್ಕೆ ಬನ್ನಿರಿ ನೀವು; -ನಿಮ್ಮ
ಲ್ಯಾಪ್-ಟಾಪು, ಸೆಲ್-ಫೋನುಗಳನಾಚೆಗಿಟ್ಟು --ಊಟಕ್ಕೆ
ಪಿ.ಡಿ.ಎ., ಬ್ಲ್ಯಾಕ್-ಬೆರ್ರಿ ಜೊತೆಗೆ, -ತಮ್ಮ
ಬೀಪರ್ರು, ಬ್ಲೂಟೂಥುಗಳ ಮೇಜಲಿಟ್ಟು --ಊಟಕ್ಕೆ
ಒಂದೇ ಮನೆಯೊಳಗಿದ್ದೂ, -ಮಂದಿ
ಒಬ್ಬೊಬ್ಬರೊಂದೊಂದು ದಿಕ್ಕನ್ನು ಹೊದ್ದು
ಅರೆನಿದ್ರೆ ಹೊತ್ತಲ್ಲಿ ಎದ್ದು, -ಬಂದು
ಮಬ್ಬಲ್ಲಿ ತಿಂದರೆ ಆರೋಗ್ಯಕೆ ಗುದ್ದು --ಊಟಕ್ಕೆ
ಟೀವಿಯ ಮುಂದಿರಬೇಡಿ, -ಒಮ್ಮೆ
ಅಡುಗೆ ಮನೆಯಲ್ಲೊಂದು ಮಣೆ ಹಾಕಿ ಕೂಡಿ
ನಗು ನಗುತಾ ಊಟವ ಮಾಡಿ, -ನಿಮ್ಮ
ಒಡನಾಡಿಗಳ ಜೊತೆಗೆ ಹರಟೆ ಮಾತಾಡಿ --ಊಟಕ್ಕೆ
ಸಿಹಿ-ಖಾರ, ಹುಳಿ-ಉಪ್ಪು ಇರಲಿ, -ಹಾಗೇ
ಶುಚಿಯ ಕಡೆಗೂ ನಿಮ್ಮ ಒಮ್ಮನವು ಹೊರಳಿ
ಮಾಡಿರುವ ಅಡುಗೆಯನು ಹೊಗಳಿ, -ತೇಗಿ
ರುಚಿ ಹಣ್ಣ ಸವಿಯುತ್ತ ಅಂಗಳಕೆ ತೆರಳಿ --ಊಟಕ್ಕೆ
ಆಧುನಿಕ ಸೌಕರ್ಯ ಬೇಕು, -ನಮಗೆ
ಬಾಳುವೆಯ ನಡೆಸಲು ಕೆಲಸವಿರಬೇಕು
ಆಧಾರವೀ ದೇಹ ಎದಕು, -ಅದನೆ
ಕಡೆಗಣಿಸಿ ಬದುಕಿದರೆ ನೋವುಣ್ಣಬೇಕು --ಊಟಕ್ಕೆ
ಹೊತ್ತು ಹೊತ್ತಿಗೆ ಊಟ-ತಿಂಡಿ, -ಹೆಚ್ಚು
ಹಣ್ಣು ತರಕಾರಿಗಳ ಮಿಶ್ರಣದ ಮೋಡಿ
ಬಲುಕಾಲ ಆರೋಗ್ಯ ನೋಡಿ, -ಮೆಚ್ಚು
ತನು-ದೇವರ ಸೇವೆ ಈ ರೀತಿ ಮಾಡಿ --ಊಟಕ್ಕೆ
(೦೨-ಜೂನ್-೨೦೦೮ ರಾತ್ರೆ ೧೦:೩೦)
25 comments:
ಹಹಹ! ಚೆನ್ನಾಗಿದೆ. ನಮ್ಮನೆಯಲ್ಲಿ ನಿತ್ಯ ಹಾಡಲೆಂದೇ ಬರೆದಂತಿದೆ. ತಿಳಿ ನಗುವಿನ ಹಿಂದೆ ಕಟು ವಾಸ್ತವವಿದೆ!
ಆದರೆ ನನ್ನ ಹಾಡು ಯಾರಿಗೆ ಕೇಳೀತು? ಅವರೆಲ್ಲರ ಕಿವಿಗಳಲ್ಲಿ ಹೆಡ್ಫೋನ್ ಇರುತ್ತದಲ್ಲ? :(
ಜ್ಯೋತಿ ಅಕ್ಕಾ...
ಆಹಾ...ಸೊಗಸಾಗಿದೆ. :)
ಒಪ್ಪಬೇಕಾದ ಮಾತುಗಳು.
ವೇಣಿ, ಶಾಂತಲಾ, ಇಬ್ಬರಿಗೂ ಧನ್ಯವಾದಗಳು.
ಇತ್ತೀಚೆಗೆ ಎಲ್ಲ ಮನೆಗಳ ಕಥೆಯೂ ಇದೇ ಅಲ್ಲವೆ?
ಚೆನ್ನಾಗಿದೆ.
ನಿಮ್ಮ ಕವಿತೆ ನೋಡಿದ ಮೇಲೆ, ಮೂಲವನ್ನೂ ನೋಡೋಣ ಅನ್ನಿಸಿತು. ಅದನ್ನು ಇಲ್ಲಿ ಬರೆದಿದ್ದೇನೆ.
http://purandara.wordpress.com/2008/06/04/
ಧನ್ಯವಾದಗಳು ಹಂಸಾನಂದಿ. ಮೂಲವನ್ನೂ ಇನ್ನೊಮ್ಮೆ ನೋಡುವೆ. ಅದಕ್ಕೂ ಧನ್ಯವಾದಗಳು.
ಮಸ್ತ್ ಲಾಯ್ಕಿತ್ತ್ ಮರ್ರೆ. ನೀವ್ ಬರ್ದದ್ದ್ ನೂರಕ್ಕ್ ನೂರ್ ಸತ್ಯ ಕಾಣಿ :-)
ಧನ್ಯವಾದ ಭಾಗವತ್ರೇ.
"ಹೊಸ ಝಮಾನಾ ಮತ್ತು ಅದರ ಪರಿಣಾಮ" ಅಂತ ಪ್ರಬಂಧ ಬರೆಯೋ ಬದ್ಲು... ಅಷ್ಟೇ.
ವಾಹ್! ಸುಹಾನ ಅಲ್ಲಾ!
ಊಟಕೆ ಈ ಪರಿ ಕರೆದರೆ ನೀನು,
ಬಾರದೆ ಹೋಗುವೆನಮ್ಮಾ ನಾನು?
ಮೊಬೈಲ್ ಫೋನನು ಬಿಸಾಕಿ ಅತ್ತ
ಪಂಜೆಯ ಸುತ್ತಿ,ಬಂದೇ ಬಿಡುವೆನು.
ಪಿಜ್ಜಾ,ಹಾಟ್ ಡಾಗ್ ಬೇಡವೆ ಬೇಡ
ಸಜ್ಜಿಗೆ,ಬೋಂಡಾ ಸಾಕದು ನೋಡಾ
ಮಜ್ಜಿಗೆ ಅನ್ನಕೆ ಮುಗಿಸಿಯೆ ಬಿಡುವೆನು
ಹರಸುತ ನಿನ್ನ ಮುಂದಕೆ ನಡೆವೆನು
-ಸುನಾಥ ಕಾಕಾ
ಸುನಾಥರೇ,
ಮಸಾಲೆ ದೋಸೆ ಬಿಟ್ಬಿಟ್ರಲ್ಲಾ? :-)
Supthadeepthi-yavare,
thumbaa chennagide, vaara hindashTe naanu yochisiddu adugemane,maNe,ooTa.nammanEli ivatthigoo nanna Thandhe style, adhunikathe hechchidanthe eshTondu kaLedhu koLthane gaLisutheve kooDaa(bekagiddu ,,,bEDavagddu:),,)allavaa.
PSP
ಸೂಪರ್. :)
ಅನಾಮಧೇಯ PSPಯವರೇ...
ನಿಜ, ಆಧಿನಿಕತೆಯ ಹೆಸರಲ್ಲಿ ನಾವು ಪಡೆದದ್ದಕ್ಕಿಂತ ಕಳೆದುಕೊಂಡದ್ದು ಹೆಚ್ಚು ಅನ್ನುವುದಿಲ್ಲವಾದರೂ ಅಮೂಲ್ಯವಾದದ್ದು ಅಂತ ನನ್ನ ನಂಬಿಕೆ. ಅಡುಗೆಮನೆಯಲ್ಲಿ ಊಟದಂತಹ ಆತ್ಮೀಯ ಕ್ಷಣಗಳು, ಆರೋಗ್ಯ ಅವುಗಳಲ್ಲಿ ಮುಖ್ಯವಾದವುಗಳು.
ಅಭಿಪ್ರಾಯಕ್ಕೆ ಧನ್ಯವಾದ.
ಕಾಕಾ, ನೀವು ಅಷ್ಟು ಪ್ರೀತಿಯಿಂದ ಬಂದು, ಉಂಡು, ಹರಸುವುದಾದರೆ ಸಜ್ಜಿಗೆ-ಬೋಂಡಾ-ಮಜ್ಜಿಗೆ ಮಾತ್ರವೇಕೆ, ಸಾರು, ಹುಳಿ, ಪಲ್ಯ, ಕೋಸಂಬರಿಗಳನ್ನೂ ಮಾಡೋಣವಂತೆ. ಬನ್ನಿ, ಬನ್ನಿ.
ಭಾಗವತರೆ, ನಿಮಗೆ ಮಸಾಲೆ ದೋಸೆ ಗ್ಯಾರಂಟಿ. (ನಾನು ಮಾಡುವ 'ಮಸಾಲೆ'ಯಲ್ಲಿ ಇತರ ತರಕಾರಿಗಳ 'ಹಾವಳಿ' ಹೆಚ್ಚು ಅಂತೊಂದು ಅಭಿಪ್ರಾಯವಿದೆ, ಪರವಾಗಿಲ್ಲವ?)
ಮನಸ್ವಿನಿ, ಧನ್ಯವಾದ ಕಣೇ.
ಬಹಳ ಚೆನ್ನಾಗಿದೆ.
ಕೆಲವು ಮನೆಗಳಲ್ಲಿ ಊಟಕ್ಕೆ ನಿಗದಿತ ಸಮಯವಿರುವುದಿಲ್ಲ, ಅವರವರಿಗೆ ಸಮಯವಾದಾಗ ಬಂದು ಉಣ್ಣುತ್ತಾರೆ. ಕೈಲಿ ಒ ಂದು ತಟ್ಟೇ ಹಿಡಿದು ಅವರಿಷ್ಟ ಬಂದಲ್ಲಿ ಊಟ. ಬೇಜಾರಾಗುತ್ತದೆ ಇದನ್ನು ನೋಡಿದಾಗ.
ಆದರೆ ನಮ್ಮನೆಯಲ್ಲಿ ಇವತ್ತಿಗೂ ಎಲ್ಲರೂ ಒಟ್ಟಾಗಿ ಕೂತು ಮಾತು, ನಗೆ, ಹರಟೆಗಳ ನಡುವೆ ಊಟ, ಎಷ್ಟು ಚಂದ. ನೀವು ಬರೆದ ಸಾಲುಗಳನ್ನು ಓದುತ್ತ ಮನೆಯಲ್ಲಿ ಎಲ್ಲ ಒಟ್ಟಾಗಿ ಕೂತು ಊಟ ಮಾಡಿದಷ್ಟೇ ಖುಷಿಯಾಯ್ತು :)
ಹೌದು ಶ್ಯಾಮಾ, ಬಹುತೇಕ ಮನೆಗಳಲ್ಲಿನ ಈ ಆಧುನಿಕ ಪರಿಸ್ಥಿತಿ ನೋಡಿಯೇ ಇದನ್ನು ಬರೆದದ್ದು.
ನಿಮ್ಮ ಮನೆಯ ಪರಿಸರ ಚಂದವಾಗಿದೆ, ಆರೋಗ್ಯಪೂರ್ಣವಾಗಿದೆ. ಹಾಗೆಯೇ ಇರಿ, ಎಂದಿಗೂ.
ಮಸಾಲೆ ದೋಸೆ ನೆನಪಿಸಿದ್ದಕ್ಕಾಗಿ ಕನ್ನಡ ಕುಲಪುಂಗವರಿಗೆ ಧನ್ಯವಾದಗಳು.
ಸುಪ್ತದೀಪ್ತಿಯವರೇ,
ಸೂಪರ್...ನಮ್ಮ ಮನೆಯಲ್ಲಿ ಓದಿ ಹೇಳಿ ಖುಶಿ ಪಟ್ಟೆವು. ಸ್ವಲ್ಪವಾದ್ರೂ ಜಾರಿ ತರ್ಲಿಕ್ಕೆ ಪ್ರಯತ್ನಿಸುತ್ತೇವೆ. ಹೀಗೆ "ಗುಳಿಗೆ" ಕೊಡ್ತಿರಿ.
ನಾವಡ
ಬಂದು, ಓದಿ, ಹೇಳಿ, ಆನಂದಿಸಿದ್ದಕ್ಕೆ ಧನ್ಯವಾದಗಳು ನಾವಡರೇ. ಜಾರಿಗೆ ತರ್ಲಿಕ್ಕೆ ಪ್ರಯತ್ನಿಸುವುದಕ್ಕೆ ಇನ್ನೂ ಒಂದು.
ಮಸಾಲೆ ದೋಸೆ ಪ್ರಿಯರೇ,
ಹುಷಾರ್...
ಜ್ಯೋತಿಯವರ ಮ.ದೋಸೆಯಲ್ಲಿ ಮಸಾಲೆ ಬದಲು ಬರೀ ತರಕಾರಿ ಇರುತ್ತೆ...
ತರಕಾರಿ ಅಲರ್ಜಿ ಇರುವವರಿಗೆ ಉಪಯೋಗವಾಗಲೀ ಅಂತ
ಈ ಮುನ್ನೆಚ್ಚರಿಕೆ...
ಪದ್ಯ ಚೆನ್ನಾಗಿದೆ ನಮ್ಮನೆಯವರಿಗೆ ಅರ್ಥವಾಗುತ್ತಾ ನೋಡಬೇಕು!
ಮಾಲ
ಅಕ್ಷಯರಾಮರಿಗೆ ಸ್ವಾಗತ, ಧನ್ಯವಾದ. ಹೀಗೇ ಬರುತ್ತಿರಿ.
ಮಾಲಾ, ಇತ್ತೀಚೆಗಷ್ಟೇ ಜೊತೆಯಾಗಿ ಕ್ಯಾಂಪಿಂಗ್ ಹೋದಾಗ ಅಲ್ಲಿ ಮಸಾಲೆದೋಸೆ ಮಾಡಿದೆವಲ್ಲ, ಆ ಪಲ್ಯದಲ್ಲಿದ್ದ ತರಕಾರಿಯಿಂದೇನಾದ್ರೂ ನಿಮಗೆಲ್ಲ ತೊಂದ್ರೆ ಆಗಿದ್ಯಾ ಅಂತ ನನಗೀಗ ಡೌಟಾಗಿದೆ.
ಬೇರೆಯವರಿಗೆ ಮುನ್ನೆಚ್ಚರಿಕೆ ಕೊಡುವಷ್ಟು ಕೆಟ್ಟದಾಗಿತ್ತೆ? ಚಪ್ಪರಿಸಿ ತಿಂದದ್ದು? ಅದನ್ನು ಹೇಗೆ ಅರ್ಥೈಸಲಿ?
ಉತ್ತರದ ನಿರೀಕ್ಷೆಯಲ್ಲಿ...!
ಸುಪ್ತದೀಪ್ತಿ,
ಆರೋಗ್ಯ ಪೂಜೆ ತುಂಬಾ ಖುಷಿ ಕೊಟ್ಟಿತು. ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ಎಲ್ಲರೂ ಮಣೆಯ ಮೇಲೆ ಕುಳಿತು ಮಾತನಾಡುತ್ತ ಊಟ ಮಾಡುತ್ತಿದ್ದದ್ದು ನೆನಪಾಯಿತು.
ಆ ದಿನಗಳು ಮತ್ತೆ ಬರಲಾರವು ಎನಿಸಿದೆ.
ನಿಮ್ಮ ಇನ್ನೆರ್ ಲೈಟ್ ಬ್ಲಾಗಿನ ಹೊಸ ನಾಮಕರಣದ ಊಟಕ್ಕೆ ಕರೆಯಲು ಬರೆದಿರುವ ಅಮಂತ್ರಣವೋ ಇದು..?
ದಯವಿಟ್ಟು ಊಟದ ಸಮಯ ಮತ್ತು ದಿನಾಂಕ ತಿಳಿಸಿದರೆ ನಾನು ಹಾಜರ್ ಇರುತ್ತೇನೆ.
ನಮಸ್ಕಾರ ವನಮಾಲ. ನಾವುಗಳೆಲ್ಲ ಚಿಕ್ಕವರಿದ್ದಾಗ ಹಾಗೆ ಊಟ ಮಾಡಿದ್ದರ ನೆನಪಿನ ರುಚಿ ಇನ್ನೂ ಎಷ್ಟು ಸವಿ, ಅಲ್ಲವೆ? ಆ ಸವಿಯನ್ನಾದರೂ ಬಡಿಸುವ ಪ್ರಯತ್ನ ನನ್ನದು. ಪ್ರತಿಕ್ರಿಯೆಗೆ ಧನ್ಯವಾದಗಳು.
ರಾಜೇಂದ್ರ, ನಾಮಕರಣದ ಊಟ ಬಡಿಸಿಯಾಗಿದೆಯಲ್ಲ. ನಿದ್ದೆಯಲ್ಲೇ ತಿಂದುಬಂದಿಯೋ ಹೇಗೆ?
ಕವನ ತುಂಬಾ ಚೆನ್ನಾಗಿದೆ. ಬರೆದಿದ್ದು ಸರಿಯಾಗಿದೆ. ನಾನೊಬ್ಬ ಹೊಸ ಬ್ಲಾಗಿಗ, ನನ್ನದು http://www.ini-dani.blogspot.com/. ದಯವಿಟ್ಟು ಓದಿ ವಿಮರ್ಶಿಸಿ.
ಹೊಸಬರಿಗೆ ಸ್ವಾಗತ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ಬರುತ್ತಿರಿ...
Post a Comment