ನಮ್ಮ-ನಿಮ್ಮೊಳಗೆ-೦೨
ಸಂದೇಹ-೦೧: ಫೋನಿನಲ್ಲಿ, ಗೆಳತಿಯೊಬ್ಬಳಿಂದ:
"ರೆಗ್ರೆಷನ್ನಿಗೆ ಒಳಗಾದ ವ್ಯಕ್ತಿಗೆ ಹಿಂದಿನ ಯಾವುದೋ ಜನ್ಮದ ತನ್ನ ಬಂಧುವಿನ (ಮಗುವಿನ, ಪತಿ/ಪತ್ನಿಯ) ಸ್ಮೃತಿಯಿಂದ ಈ ಜನ್ಮದಲ್ಲೂ ಆ ವ್ಯಕ್ತಿಯ ಮೇಲೆ (ಆ ವ್ಯಕ್ತಿ ಬೇರೆ ಯಾರದೋ ಮನೆಯಲ್ಲಿ, ಬೇರೊಂದು ಬಂಧನದಲ್ಲಿ ಈಗ ಹುಟ್ಟಿದ್ದರೂ) ಮಮಕಾರ, ಪ್ರೀತಿ ಬರಲಾರದೆ? ಬಂದರೆ ಅದು ಸರಿಯೆ?"
ಪ್ರತಿಕ್ರಿಯೆ: ಯಾವುದೋ ಜನ್ಮದ ಬಂಧನ ಈ ಜನ್ಮದಲ್ಲಿ ನೆನಪಾಗಿ ಅದನ್ನರಸಿ ಹೋಗಿ ಈ ಜನ್ಮದಲ್ಲೂ ಒಂದಾಗುವ ಕಥೆಗಳು ನಮ್ಮಲ್ಲಿ ಬಳಕೆಯಲ್ಲಿವೆ. ಹಾಗಂತ ಅದು ಎಲ್ಲ ಸಂದರ್ಭಗಳಲ್ಲೂ ಸರಿ ಅಂತಲ್ಲ. ವ್ಯಕ್ತಿಗಳಿಬ್ಬರೂ ಈ ಜನ್ಮದಲ್ಲಿ ಬೇರೆ ಬಾಂಧವ್ಯದಲ್ಲಿ ಇಲ್ಲದಿದ್ದಾಗ ಅದು ಸುಸೂತ್ರವಾಗಿ ನಡೆಯಬಹುದು, ಸರಿಯೂ ಆಗಬಹುದು. ಆದರೆ ಇಬ್ಬರಿಗೂ ಪ್ರಸ್ತುತ ಜನ್ಮದ ಬೇರೆ ಬಾಂಧವ್ಯಗಳಿದ್ದರೆ ಆಗ ಅದು ಸರಿಯಾಗಲಾರದು. ಇನ್ನು ಕಾಲ್ಪನಿಕ ಕಥೆಗಳಲ್ಲಿ ಇದಕ್ಕೆ ಬೇರೆ ಬೇರೆ ಆಯಾಮಗಳು ದೊರಕಿವೆ, ಅದನ್ನು ಇಲ್ಲಿ ಚರ್ಚಿಸುವುದಿಲ್ಲ. ಅದು ಕಲ್ಪನೆ-ಸತ್ಯಗಳ ಮಿಶ್ರಣ; ಅದೇ ಪೂರ್ಣ ಸತ್ಯ ಅಲ್ಲವಲ್ಲ!
ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದ ಸಂದರ್ಭವೂ ಪ್ರಸ್ತುತವೆನಿಸುತ್ತದೆ. ಯಾವುದೋ ತೊಂದರೆಗೆ ಉತ್ತರ ಹುಡುಕುತ್ತಾ ಸಮ್ಮೋಹನದಲ್ಲಿ ಪೂರ್ವಸ್ಮೃತಿಯನ್ನು ಅರಸಿದರೆ, ಆಗ ಅಂಥ ಸ್ಮೃತಿಯಲ್ಲಿ ಯಾವುದೋ ಒಂದು ಚಿಕಿತ್ಸಕ ಗುಣವಿದ್ದೇ ಇರುತ್ತದೆ. ಅಂಥ ಸ್ಮೃತಿಯನ್ನು ಚಿಕಿತ್ಸಕವಾಗಿ "ಕಾಣಿಸುವುದು" ಚಿಕಿತ್ಸಕನ ಕೆಲಸ; ಧರ್ಮ. ಇದರ ಹೊರತಾಗಿಯೂ ಸಮ್ಮೋಹಿತ ವ್ಯಕ್ತಿಗೆ ಹಿಪ್ನಾಟಿಕ್ ಟ್ರಾನ್ಸ್ ಬಿಟ್ಟು ಮಾಮೂಲು ಸ್ಥಿತಿಗೆ ಬಂದಾಗಲೂ ಸ್ಮೃತಿಯ ಬಂಧನವೇ ಕಾಡುತ್ತಿದ್ದರೆ ಮತ್ತು ಆ ವ್ಯಕ್ತಿ ಸಾಮಾಜಿಕವಾಗಿ ಈ ಹೊಸ ಬಂಧನಕ್ಕೆ ಒಳಗಾಗುವ ಸ್ಥಿತಿಯಲ್ಲಿರದಿದ್ದರೆ, ಅದಕ್ಕೆ ಸೂಕ್ತ ಸಲಹೆಗಳನ್ನು ಕೊಟ್ಟು ಸರಿಯಾದ ದೃಷ್ಟಿಕೋನದೆಡೆ ನಡೆಸುವುದು ಚಿಕಿತ್ಸಕನ ಜವಾಬ್ದಾರಿ. ಆದರೆ, ಇಂಥ ಪೀಕಲಾಟದ ಸಂದರ್ಭಗಳು ಎದುರಾದದ್ದನ್ನು ನಾನು ಇದುವರೆಗೆ ಓದಿಲ್ಲ, ನನ್ನ ತಿಳುವಳಿಕೆಗೆ ಬಂದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಆ ಇಬ್ಬರೂ ವ್ಯಕ್ತಿಗಳು ಈ ಜನ್ಮದಲ್ಲೂ ಬಂಧುಗಳಾಗಿಯೇ ಇದ್ದಿರುವ ಅಥವಾ ಮುಂದೆ ಬಂಧುಗಳಾಗುವ ಸಾಧ್ಯತೆ ಇದ್ದುದೇ ಹೆಚ್ಚು.
ಇನ್ನು, ಯಾರಿಗಾದರೂ ಆಕಸ್ಮಿಕವಾಗಿ ಕನಸಿನಲ್ಲಿ ಅಂಥ ಪೂರ್ವಸ್ಮೃತಿ ನೆನಪಿಗೆ ಬಂದು ಹಿಂದಿನ ಜನ್ಮದ ವ್ಯಕ್ತಿಯೆಡೆ ಬಾಂಧವ್ಯ ಉಂಟಾದರೆ ಅದಕ್ಕೆ ಅತೀಂದ್ರಿಯ ನೆಲೆಯಲ್ಲಿ ಪ್ರಸ್ತುತ ಬದುಕಿಗೆ ಹೊಂದುವಂತೆ ಯಾವುದೋ ಅಗತ್ಯತೆಯ ಯಾ ಕಲಿಕೆಯ ಕಾರಣವಿದ್ದೀತು. ಕಾರ್ಯ-ಕಾರಣ ಸಂಬಂಧವಿಲ್ಲದೆ ಅತೀಂದ್ರಿಯ ನೆಲೆಯಲ್ಲಿ ಯಾವುದೂ ನಡೆಯಲಾರದು ಅನ್ನುವುದು ನನ್ನ ನಂಬಿಕೆ. ಇವಲ್ಲದೆ, ಸುಮ್ಮ-ಸುಮ್ಮನೇ ಯಾರಿಗೋ ಯಾರ ಮೇಲೋ ಮಮಕಾರ ಉಂಟಾಗದು. ಅವೆಲ್ಲಕ್ಕೂ ಯಾವುದೋ ಒಂದು ತಿಳಿಯದ ಕಾರಣವಿದ್ದೇ ಇರುತ್ತದೆ. ಆ ಕಾರಣದ ಹುಡುಕಾಟವೇ ಕಲಿಕೆಯ, ತಿಳಿವಿನ ಆಕಾಂಕ್ಷೆಯ ಮೂಲ ಅನ್ನುವುದೂ ನನ್ನ ನಂಬಿಕೆ.
ರಿಗ್ರೆಷನ್ ಸಂದರ್ಭದಲ್ಲಿ ಚಿಕಿತ್ಸಕನ ಜವಾಬ್ದಾರಿ ಹೆಚ್ಚು. ರಿಗ್ರೆಷನ್ನಿಗೆ ಒಳಗಾದ ವ್ಯಕ್ತಿ ಆ ಸಂದರ್ಭದಲ್ಲಿ ಮಾನಸಿಕ ತುಮುಲಗಳಿಗೆ ಒಡ್ಡಿಕೊಂಡಿರುತ್ತಾರೆ. ಆಯಾಯ ನೆನಪಿನ (ಬಾಲ್ಯದ ಅಥವಾ ಪೂರ್ವ ಜನ್ಮದ) ಅನುಭವಗಳನ್ನು ಈಗಲೇ ಎಂಬಂತೆ `ಅನುಭವಿಸು'ತ್ತಿರುತ್ತಾರೆ. ಅದನ್ನು ಸರಿಯಾಗಿ ತಿಳಿದು ನಾಜೂಕುತನದಿಂದ ನಿಭಾಯಿಸುವ ಚಾಕಚಕ್ಯತೆ ಚಿಕಿತ್ಸಕರಿಗಿರಬೇಕು. ಹಾಗಿಲ್ಲದಿದ್ದಲ್ಲಿ, ರೆಗ್ರೆಷನ್ ಥೆರಪಿಯಿಂದ ಉಪಯೋಗಕ್ಕಿಂತಲೂ ತೊಂದರೆಗಳೇ ಆದಾವು.
ಸಂದೇಹ-೦೨: ವೀಣಾ ಶಿವಣ್ಣ ಅವರಿಂದ:
"ಬಹಳಷ್ಟು ಸಾರಿ ನನ್ನ ಅನುಭವಕ್ಕೆ ಬಂದಂತೆ, ಕೆಲವೊಂದು ಸಂದರ್ಭಗಳಲ್ಲಿ, ಕೆಲವು ಘಟನೆಗಳು ನಡೆದಾಗ, `ಇದು ಹಿಂದೊಮ್ಮೆ ಎಲ್ಲಿಯೋ ಹೀಗೆಯೇ ನಡೆದಿತ್ತು' ಅನ್ನುವ ಗಾಢ ಭಾವನೆ ಬರುತ್ತದೆ. ಅದರ ಬಗ್ಗೆ ನಾನು ಕನಸು ಕಂಡಿರಬಹುದು, ಗೊತ್ತಿಲ್ಲ. ಆದರೆ, ಎಲ್ಲಿ, ಯಾವಾಗ ಆ ಘಟನೆ ನಡೆದಿತ್ತು ಅನ್ನುವುದನ್ನು ನೆನಪಿಸಿಕೊಳ್ಳಲಾರೆ. ಇದಕ್ಕೆ ಏನನ್ನುತ್ತಾರೆ? ನನಗೊಬ್ಬಳಿಗೇ ಹೀಗೆ ಆಗುತ್ತಿದೆಯೆ?"
ಪ್ರತಿಕ್ರಿಯೆ: ಇಂಥ ಪ್ರಶ್ನೆಗಳನ್ನು ಬಹಳಷ್ಟು ಸಾರಿ ಕೇಳಿದ್ದೇನೆ, ನಾನೂ ಅನುಭವಿಸಿದ್ದೇನೆ. ಎಲ್ಲಿಯೋ ಪಯಣಿಸಿದಾಗ, "ಇಲ್ಲಿ ಬಂದಿದ್ದೆ" ಅನ್ನುವ ಭಾವನೆ; ಯಾರೊಡನೆಯೋ ಮಾತಾಡುವಾಗ (ಅವರೊಂದಿಗೆ ಮೊದಲ ಭೇಟಿಯೇ ಆಗಿರಲಿ), "ಇವೇ ಮಾತುಗಳನ್ನು, ಹೀಗೇ, ಹಿಂದೊಮ್ಮೆ ಮಾತಾಡಿದ್ದೆವು, ಇದೇ ವ್ಯಕ್ತಿಯೊಡನೆ. ಈಗ ಅವರ ಉತ್ತರ ಇಂಥದ್ದೇ ಆಗಿರುತ್ತದೆ" ಅನ್ನುವ ಯೋಚನೆ; ಯಾವ-ಯಾವುದೋ ವ್ಯಕ್ತಿಗಳು- ಮೊದಲು ಕಂಡಿರದಿದ್ದರೂ- ಭೇಟಿಯಾದಾಗ ತೀರಾ ಚಿರಪರಿಚಿತರು ಅನ್ನಿಸುವ ಭಾವನೆ-- ಇವೆಲ್ಲವನ್ನೂ ಇಂಗ್ಲಿಷಿನಲ್ಲಿ "ದೇ-ಜ-ವೂ" ಅನ್ನುತ್ತಾರೆ. ಇದು ಮಾಮೂಲು ಅನ್ನಬಹುದಾದಷ್ಟು ಮಾಮೂಲು "ಫಿನಾಮೆನಾ". ನಮಗಿದು ಪೂರ್ವಜನ್ಮದ ಸ್ಮೃತಿಯಿರಬಹುದು (ಸ್ಥಳದ, ವ್ಯಕ್ತಿಯ ಪರಿಚಿತ ಭಾವನೆ), ಅಥವಾ ಕನಸಲ್ಲೂ ಇರಬಹುದು (ಮಾತುಕತೆಗಳ ಸಂದರ್ಭಗಳು), ಅಥವಾ ಎರಡೂ.
ಕುತೂಹಲ ಜಾಸ್ತಿಯಿದ್ದರೆ, ಕಂಡುಹಿಡಿಯ"ಬಹುದು"... ಎಲ್ಲ ಕನಸುಗಳ, ನೆನಪುಗಳ ಟಿಪ್ಪಣಿ ಬರೆಬರೆದು ಇಡುತ್ತಾ ಹೋದರೆ ಅಲ್ಲೊಂದು ಇಲ್ಲೊಂದು ಕೊಂಡಿಗಳು ಸಿಗುತ್ತವೆ. ಸಣ್ಣ-ಸಣ್ಣ ಕೊಂಡಿಗಳನ್ನು ಕೂಡಿಸಿ ಒಂದು ಅಂದಾಜು ಚಿತ್ರಣ ಪಡೆಯಬಹುದು. ಅಷ್ಟೊಂದು ಕುತೂಹಲ ನನಗಿನ್ನೂ ಹುಟ್ಟಿಲ್ಲ, ನಾನು ಮಾಡುತ್ತಿಲ್ಲ; ಅಷ್ಟೇ.
ಸಂದೇಹ-೦೩: ನಾವಡರಿಂದ:
"ಡಿಪ್ರೆಶನ್ ಅನ್ನೋದು ಮನಸ್ಸಿನ ಯಾವ ಸ್ಥಿತಿ?"
ಪ್ರತಿಕ್ರಿಯೆ: ಡಿಪ್ರೆಶನ್ ಅನ್ನುವುದನ್ನು ಮಾನಸಿಕ ತಜ್ಞರು (ಸೈಕಾಲಜಿಸ್ಟ್, ಸೈಕಿಯಾಟ್ರಿಸ್ಟ್, ಸೈಕೋಥೆರಪಿಸ್ಟ್), ಅಲೋಪಥಿ ವೈದ್ಯರು, ಮತ್ತು ಸಮ್ಮೋಹನ-ಚಿಕಿತ್ಸಕರು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಾರೆ. ಮಾನಸಿಕ ತಜ್ಞರ ಪ್ರಕಾರ ಅದು ಸೈಕೋ-ನ್ಯೂರಾಟಿಕ್ ಅಥವಾ ಸೈಕೋ-ಸೊಮ್ಯಾಟಿಕ್ (ಮನೋ-ದೈಹಿಕ) ಖಾಯಿಲೆ. ವೈದ್ಯರ ಪ್ರಕಾರ ಅದು ಮಾನಸಿಕ (ಸೈಕಲಾಜಿಕಲ್) ಖಾಯಿಲೆ. ಇವರಿಬ್ಬರೂ ಈ ಖಾಯಿಲೆಗಾಗಿ ದೀರ್ಘಕಾಲಿಕ ನಿವಾರಣಾತಂತ್ರಗಳನ್ನು, ಮದ್ದನ್ನು ಸೂಚಿಸುತ್ತಾರೆ. ಅವರ ಪ್ರಕಾರ ಇದು ಸಂಪೂರ್ಣ ಗುಣವಾಗದ, ಪದೇ ಪದೇ ಬರಬಹುದಾದ, ಗುಳಿಗೆರೂಪದಲ್ಲಿ ಮದ್ದು ಬೇಕೇಬೇಕಾದ "ಖಾಯಿಲೆ". ಹಿಪ್ನಾಟಿಕ್ ಥೆರಪಿಸ್ಟ್ ಪ್ರಕಾರ ಅದೊಂದು ಸ್ಥಿತಿ; ಹಲವಾರು ತೊಂದರೆಗಳ ಮೊತ್ತದಿಂದ ಉಂಟಾಗುವ ಸ್ಥಿತಿ; ಪರಿಹರಿಸಲ್ಪಡುವ, ಬದಲಾವಣೆಗೆ ಒಗ್ಗುವ ಸ್ಥಿತಿ.
ಸಾಮಾನ್ಯವಾಗಿ ನಮ್ಮ ಮನಸ್ಸು ಒತ್ತಡಕ್ಕೆ ಸಿಲುಕಿದಾಗ ಅದರಿಂದ ಹೊರಬರುವ ದಾರಿಗಳನ್ನು ತಾನೇ ಹುಡುಕಿಕೊಳ್ಳುತ್ತದೆ. ಕೆಲವೊಮ್ಮೆ, ಒತ್ತಡ ಅತಿಯಾದಾಗ ಅಥವಾ ಒತ್ತಡದ ಪರಿಸ್ಥಿತಿಯಿಂದ ಹೊರಬರುವ ದಾರಿ ಕಾಣದಾದಾಗ ಅಥವಾ ಒತ್ತಡ ತನಗೆ ತಾನೇ ತಂದುಕೊಂಡದ್ದಾದಾಗ (ಸೆಲ್ಫ್ ಇಂಪೋಸ್ಡ್ ಸ್ಟ್ರೆಸ್- "ಇತರರ ಬಗ್ಗೆ ತಾವೇ ಜವಾಬ್ದಾರರು, ಮನೆಯವರೆಲ್ಲರ ಯಾ ಸಹವರ್ತಿಗಳ ನಡವಳಿಕೆಗಳಿಗೆ, ಹಿತಾಸಕ್ತಿಗೆ ತಾವೊಬ್ಬರೇ ಹೆಗಲಾಸರೆ, ಮಾನದಂಡ, ಯಾ ಧರ್ಮದರ್ಶಿ" ಅನ್ನುವಂಥ ಮನೋಧರ್ಮ ಇದ್ದಾಗ) ಮನಸ್ಸು ಮುದುಡುತ್ತದೆ (ಇವು ಕೆಲವು ಉದಾಹರಣೆ ಮಾತ್ರ). ಅಂಥ ಮನಸ್ಸು ಕಾಲಕ್ರಮೇಣ ಎಲ್ಲದರಲ್ಲೂ ಕೆಡುಕನ್ನು, ಹುಳುಕನ್ನು, ಕತ್ತಲನ್ನು ಕಾಣಲು ತೊಡಗುತ್ತದೆ. ಎಲ್ಲವೂ ಅರ್ಥಹೀನವೆನಿಸಬಹುದು. ಜೀವನ ನೀರಸವೆನಿಸಬಹುದು. ಅಂಥ ಮನಸ್ಥಿತಿಯನ್ನು ಸಾಮಾನ್ಯವಾಗಿ ಡಿಪ್ರೆಶನ್ ಅನ್ನುತ್ತಾರೆ. ಈ ನೀರಸ ಮನಸ್ಥಿತಿ ಹೆಚ್ಚಿದಂತೆ, ಆಶಾಭಾವನೆ ತಗ್ಗಿದಂತೆ, ಜೀವನದ ಅರ್ಥವ್ಯಾಪ್ತಿ ಕುಗ್ಗಿದಂತೆ ಆತ್ಮಹತ್ಯೆಯಂಥ ನೇತ್ಯಾತ್ಮಕ ತುಡಿತ (ನೆಗೆಟಿವ್ ಇಂಪಲ್ಸ್) ಹುಟ್ಟಬಹುದು, ಹೆಚ್ಚಬಹುದು. ಹೀಗೆ ವ್ಯಕ್ತಿ ಡಿಪ್ರೆಶನ್ನಿಗೆ ಒಳಗಾದಾಗ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಗಳೂ ಸ್ವಲ್ಪ ಏರುಪೇರಾಗಿ ಗೊಂದಲ ಏರ್ಪಡುತ್ತದೆ. ಅದಕ್ಕಾಗಿಯೇ ವಿಧವಿಧವಾದ ಗುಳಿಗೆ-ಮಾತ್ರೆಗಳು ಲಭ್ಯವಿವೆ. ಆದರೆ ಅವೆಲ್ಲವೂ ವ್ಯಕ್ತಿಯನ್ನು ತನ್ನ "ಹಿಡಿತ"ದೊಳಗೆ ಇರಿಸಿಕೊಳ್ಳುತ್ತವೆ- ಅರ್ಥಾತ್ "ಅಡಿಕ್ಟಿವ್" ಆಗಿವೆ.
ಮಾತ್ರೆ-ಗುಳಿಗೆಗಳ ಬದಲಾಗಿ, ಅಂಥ ಸಂದರ್ಭಗಳಲ್ಲಿ ಸಹವರ್ತಿಗಳ ಪ್ರೀತಿ, ವಿಶ್ವಾಸಪೂರ್ಣ ನಡವಳಿಕೆ, ಉತ್ಸಾಹಭರಿತ ಸಾಹಚರ್ಯ, ಒಡನಾಟ, ಅತೀ ಅವಶ್ಯಕ. ಬಹಳಷ್ಟು ಆತ್ಮಹತ್ಯೆಗಳಿಗೆ ಇಂಥ ನೇತ್ಯಾತ್ಮಕ ಮನೋಸ್ಥಿತಿಯೇ ಕಾರಣವಾಗಿರುತ್ತದೆ. ನಿಮಗೆ ಈ ರೀತಿಯ ಮನಸ್ಥಿತಿಯಲ್ಲಿರುವ ಯಾರದ್ದಾದರೂ ಪರಿಚಯವಿದ್ದರೆ ಅವರೊಂದಿಗೆ ಸ್ನೇಹ-ಪ್ರೀತಿಯಿಂದ ನಡೆದುಕೊಳ್ಳಿ. ಜೀವನ ದುರಂತಮಯವಲ್ಲ ಎಂದು ತಿಳುವಳಿಕೆ ಮೂಡಿಸಲು ಪ್ರಯತ್ನಪಡಿ. ಅವರ ತೊಂದರೆ-ಒತ್ತಡದ ಮೂಲ ತಿಳಿಯಲು ಪ್ರಯತ್ನಿಸಿ, ಅದಕ್ಕೆ ಪರಿಹಾರ ಹುಡುಕಲು ಸಹಕರಿಸಿ. ಒಂದು ಘಟನೆಗೆ, ಪರಿಸ್ಥಿತಿಗೆ, ವಾತಾವರಣಕ್ಕೆ ಅನೇಕ ಮುಖಗಳಿವೆ ಅನ್ನುವುದನ್ನು ಮನವರಿಕೆ ಮಾಡಿಸಿ. ನೇತ್ಯಾತ್ಮಕವನ್ನು ಇತ್ಯಾತ್ಮಕ (ಪೊಸಿಟಿವ್ ಥಿಂಕಿಂಗ್) ಆಗಿಸಲು ಪ್ರಯತ್ನಿಸಿ. ಅವರನ್ನು ಸದಾ ಹಿತವಾದ ಚಟುವಟಿಕೆಯಲ್ಲಿರಿಸಿ, ಒಂಟಿಯಾಗಿರಲು ಬಿಡಬೇಡಿ.
9 comments:
"ನಮ್ಮ-ನಿಮ್ಮೊಳಗೆ" ಒಂದು ಉತ್ತಮ ಪ್ರಯತ್ನ.
ಈ ಅಂಕಣದ ಮೂಲಕ ನಿಮ್ಮ ತಲೆ ತಿನ್ನಲು ಅವಕಾಶ ಮಾಡಿ ಕೊಟ್ಟದಕ್ಕೆ ಧನ್ಯವಾದಗಳು.
ಸದ್ಯಕ್ಕೆ ಒಂದು ಸಣ್ಣ ಪ್ರಶ್ನೆ...
ಹಿಪ್ನೊಸಿಸ್ ತೆರೆಪಿ, ಅಥವಾ ಪಾಸ್ಟ್ ಲೈಫ್ ರಿಗ್ರೇಷನ್ಗಳಿಂದ ತಂದುಕೊಳ್ಳುವ ಹಳೆಯ ಘಟನೆಗಳ ನೆನಪುಗಳು.. ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳನ್ನು ನಿವಾರಿಸಲು ಯಾವ ರೀತಿಯಲ್ಲಿ ಕಾರಣವಾಗುತ್ತವೆ..?
ಸರಿ. ಪ್ರಶ್ನೆ ರೆಕಾರ್ಡ್ ಆಗಿದೆ. ಮುಂದಿನ ಕಂತಿನಲ್ಲಿ ನನಗೆ ತಿಳಿದಂತೆ ಉತ್ತರ ಕೊಡುವ ಪ್ರಯತ್ನ ಮಾಡುತ್ತೇನೆ (ನನಗೆ ತಿಳಿದಿರುವುದಕ್ಕಿಂತಲೂ ತಿಳಿಯದಿರುವುದೇ ತುಂಬಾ ಇದೆ).
ಅಕ್ಕ, ನನಗೆ ಹಿಪ್ನೋಸಿಸ್ ಥೆರಪಿಯ ಬಗೆಗೇ ಹೆಚ್ಚಿನ ಮಾಹಿತಿ ಕೊಡುತ್ತೀರಾ? ಸಮ್ಮೋಹನದಲ್ಲಿದ್ದಾಗ ವ್ಯಕ್ತಿ ಪೂರ್ವಸ್ಮೃತಿಯನ್ನು ತಂದುಕೊಳ್ಳುವುದು ಹೇಗೆ ಸಾಧ್ಯವಾಗುತ್ತದೆ?
ಶುಭದಾ, ನಿನ್ನ ಪ್ರಶ್ನೆ ರಾಜೇಂದ್ರನ ಪ್ರಶ್ನೆಗೆ ಪೂರಕವಾಗಿವೆ. ಮುಂದಿನ ಕಂತಿನಲ್ಲಿ ಇವೆರಡಕ್ಕೂ ಉತ್ತರಿಸುತ್ತೇನೆ.
ನನ್ನ ಸಂದೇಹ ನಿವಾರಿಸಿದ್ದಕ್ಕೆ ಧನ್ಯವಾದ. ಆದರೆ ಡಿಪ್ರೆಶನ್ ನಿವಾರಣೆಗೆ ಮಾತ್ರೆ ಅನಿವಾರ್ಯವೇ?
ನಾವಡ
ಧನ್ಯವಾದಗಳು ಜೋತಿಯವರೆ.. ಬಹಳ ಸಂತೋಷವಾಯ್ತು.
Just a Note Jyothi, DejaVo is a french word, which means 'Already Seen'
Just got it from Google :-)
ಧನ್ಯವಾದಗಳು ವೀಣಾ. ಗೂಗಲೋಪನಿಷತ್ತಿನಿಂದ "ದೇ-ಜ-ವೂ"ನ ವ್ಯಾಖ್ಯೆಯನ್ನು ಲೇಖನದಲ್ಲಿ ಬಿಟ್ಟಿದ್ದೆ. ಅದನ್ನೂ ಇಲ್ಲಿ ಸೂಚಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
ನಾವಡರೇ, ಡಿಪ್ರೆಶನ್ ನಿವಾರಣೆಗೆ (ಶುಶ್ರೂಷೆಗೆ) ಮಾತ್ರೆಗಳ ಅಗತ್ಯ ಅದರ ತೀವ್ರತೆಯ ಮೇಲೆ ಅವಲಂಬಿಸಿದೆ. ಅಲ್ಪ ಮಟ್ಟದ ಖಿನ್ನತೆಗೆ ಮಾತ್ರೆಗಳಿಲ್ಲದೆ ಚಿಕಿತ್ಸೆ ಸಾಧ್ಯ- ಬರೀ ಆತ್ಮೀಯ ಸಾಹಚರ್ಯದಿಂದ, ಒಡನಾಟದಿಂದಲೇ ಖಿನ್ನತೆಯನ್ನು ತಡೆಯಬಹುದು.
ತೀವ್ರಮಟ್ಟದ ಖಿನ್ನತೆಯನ್ನು ತಹಬಂದಿಗೆ ತರಲು (ಮೆದುಳಿನಲ್ಲಿ ತೀರಾ ಏರು-ಪೇರಾದ ರಸಾಯನಿಕ ಕ್ರಿಯೆಗಳನ್ನು ಆದಷ್ಟು ಸುಸ್ಥಿತಿಗೆ ತರಲು) ಮಾತ್ರೆಗಳ ಉಪಯೋಗ ಅಗತ್ಯ. ಒಮ್ಮೆ ಹದ್ದುಬಸ್ತಿಗೆ ಬಂದ ಮೇಲೆ, ನಂತರ- ಒಡನಾಟ, ಮಾತುಕತೆ, ಸಮ್ಮೋಹನಗಳಿಂದ ಮಾತ್ರೆಗಳ ಹಂಗಿಗೆ ಬೀಳದಂತೆ ಖಿನ್ನತೆಯಿಂದ ಸಂಪೂರ್ಣವಾಗಿ ಹೊರಬರಬಹುದು. ಇವು ನನಗೆ ತಿಳಿದ ವಿವರಗಳು, ಅಷ್ಟೇ.
Post a Comment