ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday, 14 December 2008

ಆತ್ಮ ಚಿಂತನ -೧೨ -- ದ್ವೈತ - ಅದ್ವೈತ

ಓದುಗರೇ,
ಹಿಂದಿನ ಸಂಚಿಕೆಯಲ್ಲಿ, 'ದ್ವೈತ-ಅದ್ವೈತಗಳಲ್ಲಿ ನಿಮಗೆ ಯಾವ ಸಿದ್ಧಾಂತ ಇಷ್ಟ' ಎಂಬ ಪ್ರಶ್ನೆ ಕೇಳಿದ್ದೆ. ಕೆಲವು ಉತ್ತರಗಳೂ ಬಂದಿವೆ. ಅವನ್ನು ಇಲ್ಲಿ ಮತ್ತೆ ಪೋಣಿಸುವುದಿಲ್ಲ. ಆ ಪ್ರಶ್ನೆ ಕೇಳಲು ಕಾರಣವಾದ ಆ ಒಂದು ಚರ್ಚೆಯ ಮುಖ್ಯ ಭಾಗವನ್ನು ಕೊಡುತ್ತೇನೆ...

ಹಿಂದಿನ ಒಕ್ಕಣೆಯಲ್ಲೇ ಹೇಳಿದಂತೆ, ಊರಲ್ಲಿದ್ದಾಗ ಈ ಚರ್ಚೆ ನಡೆದದ್ದು ಕಟ್ಟಾ ದ್ವೈತಿಯಾಗಿರುವ ನಮ್ಮ ಸಂಬಂಧಿಯೊಬ್ಬರೊಡನೆ (ನಾನವರನ್ನು ಅಣ್ಣ ಎಂದೇ ಕರೆಯುವುದು). ಅವರು ಬಹಳಷ್ಟು ತಿಳಿದವರು. ವೈದಿಕ ಧರ್ಮದ ಒಳಹೊರಗನ್ನೇ ಅಧ್ಯಯನ ಮಾಡಿ ಅದರ ಅಧ್ಯಾಪನವನ್ನೇ ಬದುಕಾಗಿ ಮಾಡಿಕೊಂಡವರು. ವೇದಾಂತದ ಪಾಠ ಹೇಳುವವರು.

ಯಾವುದೋ ಮಾತುಮಾತಿನ ನಡುವೆ, "ನನಗೆ ಅದ್ವೈತ ಸಿದ್ಧಾಂತ ಇಷ್ಟ" ಎಂದೆ ನಾನು.
ಅದಕ್ಕೆ ಅವರು, "ಯಾಕೆ? ಅದ್ಯಾಕೆ? ಅದ್ರಲ್ಲೇನು ವಿಶೇಷ? ಅದು ಹೇಗಾಗ್ತದೆ? ದೇವರು ಮತ್ತು ಮನುಷ್ಯ ಒಂದೇ ಹೇಗೆ?" ಅಂದರು (ಸ್ವಲ್ಪ ಮಟ್ಟಿಗೆ ಕಸಿವಿಸಿಗೊಂಡರು ಅನ್ನಬಹುದು). ನಮ್ಮ ಸಂವಾದದ ಹೃಸ್ವ ಪಠ್ಯರೂಪ ನಿಮಗಾಗಿ...

***************************************************************************

ನಾನು: ದೇವರು ಮತ್ತು ಮನುಷ್ಯ ಅಲ್ಲ, ಜೀವಾತ್ಮ ಮತ್ತು ಪರಮಾತ್ಮ ಒಂದೇ ಅಂತ. ಯಾಕೆ ಅಂದ್ರೆ... ಪರಮಾತ್ಮನನ್ನು, ದೇವರನ್ನು ನಾವು ನಿರ್ಗುಣ, ನಿರಾಕಾರ, ವಿಶ್ವರೂಪ, ವಿಶ್ವಂಭರ... ಅಂತೆಲ್ಲ ವಿವರಿಸ್ತೇವೆ. ಸರ್ವವ್ಯಾಪಿ ಅಂತ ಕರೀತೇವೆ. ಶಕ್ತಿರೂಪ ಅಂತ ಹೇಳ್ತೇವೆ. ಹಾಗಿರುವಾಗ ಅವನ ಒಳಗೇ ಇರುವ ನಾವು ಅವನಿಂದ/ ಅದರಿಂದ ಬೇರೆ ಆಗಿರುವುದು ಹೇಗೆ ಸಾಧ್ಯ? ಆ ಶಕ್ತಿ ನಮ್ಮೆಲ್ಲರನ್ನೂ ಒಳಗೊಂಡಿರುವಾಗ ನಾವು ಬೇರೆಯಾಗಿರುವ ಪ್ರಶ್ನೆಯೇ ಇಲ್ಲವಲ್ಲ.

ಅಣ್ಣ: ಹಾಗಾದ್ರೆ ದೇವರು ಬೇರೆ ಇಲ್ಲ ಅಂತಲಾ? ನಾವೇ ಎಲ್ಲರೂ ದೇವರಾ?

ನಾನು: ಹಾಗಲ್ಲಣ್ಣ, ನಾವೇ ಎಲ್ಲರೂ ದೇವರು ಅಂತಲ್ಲ. ದೇವರ ತುಣುಕುಗಳು ಅಂತ. ಮರದ ಕೊಂಬೆ, ರೆಂಬೆ, ಹೂ, ಹಣ್ಣು, ಎಲ್ಲವೂ ಮರದ ಭಾಗಗಳು; ಎಲ್ಲ ಸೇರಿ ಒಂದು ಮರ ಅಲ್ವಾ? ಹಾಗೇನೇ.

ಅಣ್ಣ: ಹಾಗಾದ್ರೆ, ನಮಗೂ ಆ ದೇವರಿಗಿರುವಷ್ಟೇ ಜ್ಞಾನ ಇರಬೇಕಿತ್ತಲ್ಲ, ಯಾಕಿಲ್ಲ? ದೇವರ ತುಣುಕು ಅಂತಾದ್ರೆ ನಮಗೂ ಅದೇ ಶಕ್ತಿ ಇರಬೇಕಲ್ಲ.

ನಾನು: ಹೌದು, ಆ ಶಕ್ತಿಯ ಒಂದು ತುಣುಕು ನಮ್ಮಲ್ಲೂ ಉಂಟು, ಆದ್ರೆ ನಮ್ಮ ದೇಹ ಅನ್ನುವ ಮಾಯೆ ಆವರಿಸಿದೆ. ಆದ್ದರಿಂದ ನಮಗೆ ಗೊತ್ತಿಲ್ಲ, ಅಷ್ಟೇ.

ಅಣ್ಣ: ಗೊತ್ತಿಲ್ಲ ಅಂತಾದ್ರೆ ನಾವು ಆ ದೇವರ ತುಣುಕು ಹೇಗಾಗ್ತದೆ?

ನಾನು: ಈಗ- ಹತ್ತು ಬತ್ತಿ ಹಾಕಿ, ಒಂದು ಲೋಟ ಎಣ್ಣೆ ಹಾಕಿದ ದೊಡ್ಡ ಕಾಲುದೀಪದಲ್ಲಿರುವ ದೀಪಕ್ಕೂ ಎರಡೇ ಬತ್ತಿ ಹಾಕಿ, ಎರಡು ಚಮಚ ಎಣ್ಣೆ ಹಾಕಿದ ಹಣತೆಯ ದೀಪಕ್ಕೂ ವ್ಯತ್ಯಾಸ ಇಲ್ವಾ? ಹಾಗೇನೇ ನಮಗೂ ಆ ಸರ್ವಶಕ್ತ ದೇವರಿಗೂ ವ್ಯತ್ಯಾಸ....

ಅಣ್ಣ: ಹ್ಙಾ! ಹಾಗಾದ್ರೆ, ದೊಡ್ಡ ದೀಪವೂ ಸಣ್ಣ ದೀಪವೂ ಒಂದೇ ಅಲ್ಲ ಅಂತಾಯ್ತು. ಅದ್ವೈತ ಎಲ್ಲಿ ಬಂತು?

ನಾನು: ದೊಡ್ಡದೂ ದೀಪವೇ, ಪರಮಾತ್ಮ; ಸಣ್ಣದೂ ದೀಪವೇ, ಜೀವಾತ್ಮ... ದ್ವೈತ ಎಲ್ಲುಂಟು? ಅವುಗಳ ಶಕ್ತಿ ಬೇರೆ ಬೇರೆ, ಅಷ್ಟೇ. ಮೂಲದಷ್ಟು, ದೊಡ್ಡ ದೀಪದಷ್ಟು ಬೆಳಕು, ಶಾಖ ಸಣ್ಣ ದೀಪಕ್ಕಿಲ್ಲ. ಆ ನೆಲೆಯಲ್ಲಿ ಮಾತ್ರ ಅವೆರಡೂ ಬೇರೆ ಬೇರೆ. ಇದೇ ಸಣ್ಣ ದೀಪದ ಮೇಲೆ ಒಂದು ಮಣ್ಣಿನ ಬುರುಡೆ ಇಟ್ರೆ ಆಗ ಅದರ ಬೆಳಕು, ಶಾಖ ಇನ್ನೂ ಸೀಮಿತ. ಅದು ನಮ್ಮ ಈ ದೇಹ. ನಮ್ಮ ಸೀಮಿತ ವಲಯ. ಅದರಿಂದಾಚೆ ನಮಗೆ ಜ್ಞಾನ ಇಲ್ಲ, ಶಕ್ತಿ ಇಲ್ಲ. ಆ ಬುರುಡೆಯನ್ನು ತೆಗೆದಾಗ, ದೀಪದ ವಿಸ್ತಾರವಾದ ಬೆಳಕು, ಪ್ರಖರ ಶಾಖ ಗೊತ್ತಾಗುತ್ತದೆ, ಅಲ್ವಾ? ಹಾಗೇ ಈ ಆತ್ಮವೂ ಕೂಡಾ. ದೊಡ್ಡ ದೀಪದಿಂದ ತಂದ ಸಣ್ಣ ದೀಪ. ಬುರುಡೆಯೊಳಗಿದ್ದಾಗ ಅಜ್ಞಾನ, ಲೌಕಿಕ ಪೊರೆ. ಬುರುಡೆ ತೆಗೆದಾಗ ಅದೇ ದೀಪದ ಕುಡಿ, ಪರಮಾತ್ಮನ ತುಣುಕು, ಜೀವಾತ್ಮ.

ಅಣ್ಣ: ಛೇ; ಒಪ್ಪೋದಿಲ್ಲ. ಜೀವಾತ್ಮ ಪರಮಾತ್ಮ ಒಂದೇ ಅಂತಾದ್ರೆ ಪರಮಾತ್ಮನಿಗಿರುವ ಶಕ್ತಿ, ಜ್ಞಾನ ನಮಗೆ ಯಾಕಿಲ್ಲ? ದೊಡ್ಡ ದೀಪವೂ ಶಾಖ ಕೊಡ್ತದೆ, ಸಣ್ಣ ದೀಪವೂ ಶಾಖ ಕೊಡ್ತದೆ. ಆದ್ರೆ ನಮಗೆ ಪರಮಾತ್ಮನ ಜ್ಞಾನ ಯಾಕಿಲ್ಲ?

ನಾನು: ಈಗ, ನಮ್ಮ ಮನೆಯ ವಯರುಗಳಲ್ಲಿ ಬರುವ ಕರೆಂಟ್ ಮತ್ತು ಜೋಗದಲ್ಲಿ ಉತ್ಪಾದನೆಯಾಗುವ ಕರೆಂಟ್ ಒಂದೇನಾ ಬೇರೆ ಬೇರೆನಾ?

ಅಣ್ಣ: ಅದೂ.... ಕರೆಂಟ್ ಒಂದೇ. ಅದೇ ಕರೆಂಟ್ ಇಲ್ಲಿ ಬರುದಲ್ವಾ?

ನಾನು: ಹಾಗಾದ್ರೆ, ಅಲ್ಲಿ ಉತ್ಪಾದನೆಯಾದ ಅಷ್ಟೂ ಕರೆಂಟ್ ಇಲ್ಲಿಗೇ ಬರ್ತದಾ?

ಅಣ್ಣ: ಇಲ್ಲ, ಇಲ್ಲ. ಪೂರ್ತಿ ಇಲ್ಲಿಗೇ ಬರುದಿಲ್ಲ.

ನಾನು: ಹೌದಲ್ವ! ಅಲ್ಲಿ ಉತ್ಪಾದನೆಯಾದ ಕರೆಂಟ್ ಪೂರಾ ಇಲ್ಲಿಗೇ ಬಂದ್ರೆ ನಮ್ಮ ವಯರಿಂಗ್ ಸುಟ್ಟು ಹೋಗ್ತದೆ. ನಮ್ಮ ಟಿವಿ, ಫ್ರಿಜ್, ವಾಷಿಂಗ್ ಮೆಶೀನ್ ಎಲ್ಲವೂ ಸುಟ್ಟು ಹೋಗ್ತದೆ, ಅಲ್ವ. ಹಾಗೇನೇ, ಪರಮಾತ್ಮನ ಪೂರ್ಣ ಶಕ್ತಿ ನಮಗೆ ಬಂದ್ರೆ ನಾವು ತಡೆಯೋದಕ್ಕೆ ಸಾಧ್ಯ ಇಲ್ಲ. ನಮ್ಮ ಮಿತಿಯಲ್ಲಿ ಸಾಧ್ಯ ಇರುವಷ್ಟು ಶಕ್ತಿಯನ್ನು ಮಾತ್ರ ನಮಗೆ ವಿತರಿಸಿದ್ದಾನೆ. ಆದ್ರೆ, ಅದ್ರಲ್ಲೂ ನಾವು ಪೂರ್ಣ ಪ್ರಮಾಣವನ್ನು ಉಪಯೋಗಿಸಿಕೊಳ್ತಾ ಇಲ್ಲ. ನಮ್ಮ ಸುತ್ತ ಪೊರೆ ಕಟ್ಟಿಕೊಂಡಿದ್ದೇವೆ. ಕಂಬದಿಂದ ನಮ್ಮ ಮನೆಗೆ ಬರುವ ವಯರಿಗೆ ಕೇಸಿಂಗ್ ಇರ್ತದೆ. ಅದನ್ನು ಮುಟ್ಟಿದ್ರೆ ನಮಗೆ ಶಾಕ್ ಬರುದಿಲ್ಲ. ಆದ್ರೆ, ಆ ಕೇಸಿಂಗ್ ತೆಗೆದ್ರೆ ನಮಗೆ ಶಾಕ್ ಹೊಡೀತದೆ, ಅಲ್ವ? ಅದೇ ಥರ, ನಮ್ಮ ಈ ದೇಹದ ಪೊರೆ ತೆಗೆದ್ರೆ, ನಮಗೆ ನಮ್ಮ ಸತ್ಯ ರೂಪ ಗೊತ್ತಾಗ್ತದೆ, ನಮ್ಮ ಪೂರ್ಣ ಶಕ್ತಿ ಗೊತ್ತಾಗ್ತದೆ. ಅದೇ ಮಾಯೆಯ ಪೊರೆ. ನಮ್ಮ ದೇಹವೇ ನಮ್ಮನ್ನು ಮುಸುಕಿದ ಮಾಯೆ. ಅದನ್ನು ಮೀರಿದ್ರೆ, ಆ ಮಾಯೆಯನ್ನು ಕಳೆದುಕೊಂಡ್ರೆ, ನಮಗೂ ದೇವರಿಗೂ ವ್ಯತ್ಯಾಸ ಇಲ್ಲ. ಆ ಮೂಲ ಶಕ್ತಿಯ ಒಂದು ಸೆಳಕು ನಾವಾಗಿರುವುದು ಗೊತ್ತಾಗ್ತದೆ. ಜೋಗದಲ್ಲಿ ಉತ್ಪಾದನೆಯಾಗುವ ಒಟ್ಟೂ ಕರೆಂಟ್ ಮೂಲ ಶಕ್ತಿ, ದೇವರ ಹಾಗೆ. ನಮ್ಮ ಮನೆಯ ಒಂದೊಂದು ಬಲ್ಬ್, ನಾವು, ಒಂದೊಂದು ವ್ಯಕ್ತಿಯ ಹಾಗೆ. ಎಲ್ಲರ ಒಳಗಿರುವುದು ಅದೇ ಕರೆಂಟ್. ಜೋಗದ ಕರೆಂಟ್ ಬೇರೆ, ಇಲ್ಲಿ ಬಲ್ಬಿನ ಕರೆಂಟ್ ಬೇರೆ ಅಂತ ಹೇಳ್ತೀರ?

ಅಣ್ಣ: ಇಲ್ಲ, ಕರೆಂಟ್ ಎಲ್ಲ ಒಂದೇ...

ನಾನು: ಹಾಗೇನೇ ಜೀವಾತ್ಮ ಮತ್ತು ಪರಮಾತ್ಮನ ಸಂಬಂಧ ಕೂಡಾ. ಆ ಅಗಾಧ ಶಕ್ತಿಯ ಪುಟ್ಟ ಪುಟ್ಟ ತುಣುಕುಗಳು ನಾವು. ಒಂದೊಂದು ಬಣ್ಣದ, ಒಂದೊಂದು ಆಕಾರದ, ಒಂದೊಂದು ಸಾಮರ್ಥ್ಯದ, ಒಂದೊಂದು ರೂಪದ ಬಲ್ಬುಗಳು. ನಾವೆಲ್ಲರೂ ಬೇರೆ ಬೇರೆ, ಆದ್ರೆ ನಮ್ಮೊಳಗಿನ ಶಕ್ತಿಯ ಮೂಲ, ಒಂದೇ. ಅದೇ ದೇವರು. ಸರ್ವಶಕ್ತ. ಪರಮಾತ್ಮ. ನಮ್ಮನ್ನೆಲ್ಲರನ್ನೂ ನಡೆಸುತ್ತಿರುವುದು ಅದೇ ಶಕ್ತಿ. ಆದ್ರೆ, ನಂನಮ್ಮ ಬಲ್ಬ್ ನಂನಮ್ಮ ಮಿತಿ; ಅಷ್ಟೇ. ಈ ಬಲ್ಬ್ ಇದ್ದಾಗ ಪೊರೆ. ಅದು ಕಳಚಿದಾಗ, ಎಲ್ಲವೂ ಒಂದೇ ಕರೆಂಟ್.
I rest my case...

ಅಣ್ಣ: ಹ್ಮ್!....

***************************************************************************

ಓದುಗರೇ, ನನ್ನ ವಾದವೇ ಸರಿ ಅಂತ ವಾಗ್ಯುದ್ಧಕ್ಕೆ ನಿಮ್ಮನ್ನು ಕರೆಯುತ್ತಿಲ್ಲ. ಸುಮ್ನೇ ನಾನು ಒಳಗೊಂಡ ಒಂದು ಚರ್ಚೆಯನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ್ದೇಶ ಮಾತ್ರ ನನ್ನದು.

"ದೇಹವೆಂಬುದು ನಮ್ಮನ್ನು ಆವರಿಸಿದ ಮಾಯೆ, ಆ ಮಾಯೆ ಕಳೆದರೆ ನಮಗೆ ನಮ್ಮ ಶಕ್ತಿ ಗೊತ್ತಾಗುತ್ತದೆ" ಅಂದಾಗ, ಯಾರಿಗೂ ಈ ದೇಹವನ್ನು ತ್ಯಜಿಸಲು ಕರೆ ಕೊಟ್ಟದ್ದಲ್ಲ. ದೇಹವೆಂಬ ಮಾಯೆಯೊಳಗಿದ್ದೂ ಅದನ್ನು ಮೀರಿ ಸಾಧನೆ ಮಾಡಿದ ಶರೀಫ ಸಾಹೇಬರಂತೆ, ಪುರಂದರ, ಕನಕ ಮುಂತಾದ ದಾಸ ವರೇಣ್ಯರಂತೆ, ಈ ದೇಹದೊಳಗಿದ್ದೂ ಅರಿವಿನ ಪರಿಧಿಯನ್ನು ಮಾಯೆಯ ಪೊರೆ ಮೀರಿ ವಿಸ್ತರಿಸಬಹುದು ಎನ್ನುವುದಕ್ಕೆ ಸೂಚನೆ ಮಾತ್ರ. ನಮ್ಮ ನಮ್ಮ ಅರಿವಿನ ನೆಲೆಯನ್ನು ಅರಿತು ಅದನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾತ್ರ ನಮ್ಮದು.

ಇಂಥ ಸಿದ್ಧಾಂತಗಳ ಸುತ್ತಮುತ್ತಲ ವಾದಸರಣಿಗಳು, ವಿವರಣೆಗಳು, ಖಂಡನೆ-ಮಂಡನೆಗಳು, ಪಾಂಡಿತ್ಯ ಪ್ರದರ್ಶನಗಳು, ವಿಶ್ಲೇಷಣೆಗಳು ಎಲ್ಲವೂ ಕೊನೆಗೆ ನೆಲೆಗೊಳ್ಳುವುದು ಒಂದು ಬಿಂದುವಿನಲ್ಲಿ; ಅದು ಪರಮಾತ್ಮ. ಎಲ್ಲರ ಗಮ್ಯವೂ ಅದೇ.
ಇದೇ ದಾರಿಯಲ್ಲಿ ನನ್ನ ಪಯಣ, ಈ ಅಲ್ಪ ಅರಿವಿನೊಡನೆ. ಅಷ್ಟೇ.

"ಇಷ್ಟೆಲ್ಲ ಪಾರಮಾರ್ಥಿಕವಾಗಿ ಮಾತಾಡುವ ನನಗೆ 'ಹರಿವ ಲಹರಿ'ಯಲ್ಲಿ ಕೇಳಿದಂಥ ತುಂಟತನದ ಸಹವಾಸ ಯಾಕೆ?"
ಪ್ರಶ್ನೆ ಸಹಜವೇ!

ಲೌಕಿಕ ಲೌಕಿಕವೇ, ಅಧ್ಯಾತ್ಮ ಅಧ್ಯಾತ್ಮವೇ.
ದೇಹಕ್ಕೆ, ಬುದ್ಧಿಗೆ, ಮನಸ್ಸಿಗೆ ತಟ್ಟುವಂಥ ವಿಷಯ ದೈನಂದಿನ ಬದುಕಿನ ಪಯಣಕ್ಕೆ ಬೇಕಾದ್ದು; ನಿಮ್ಮೆಲ್ಲರ ಪ್ರೀತಿಯ ಹಾಗೆ.
ಮನಸ್ಸಿಗೆ, ಪ್ರಜ್ಞೆಗೆ ನಿಲುಕುವಂಥ ವಿಷಯ ದೇಹ ಮೀರಿದ ಪಯಣಕ್ಕೆ ಬೇಕಾದ್ದು; ದೇವರ ಪ್ರೀತಿಯ ಹಾಗೆ.
ಎರಡೂ ಒಟ್ಟಾದಾಗ.... ನಾನು ನಾನಾಗುತ್ತೇನೆ, ಸಂಪೂರ್ಣವಾಗಿ; ಹೌದಲ್ವ!?

Sunday, 30 November 2008

ಆತ್ಮ ಚಿಂತನ-೧೨

ಓದುಗರೇ, ನಮಸ್ಕಾರ.
ಹಲವಾರು ವಾರಗಳ ಬಳಿಕ ನಿಮ್ಮನ್ನು ಎದುರುಗೊಳ್ಳುತ್ತಿದ್ದೇನೆ. ಮೌನಕ್ಕೆ ಕಾರಣಗಳು ಬೇಕಿಲ್ಲ, ಬಿಡಿ.

ಒಂದು ಸ್ವಾರಸ್ಯಕರ ಚರ್ಚೆ ಇತ್ತೀಚೆಗೆ ಬಹಳ ತಿಳಿದವರ ಜೊತೆ ನಡೆಯಿತು. ಅಂದು ಅವರೊಡನೆ ಎತ್ತಿದ ಪ್ರಶ್ನೆಯನ್ನು ಇಲ್ಲಿ ನಿಮ್ಮೆದುರಿಗೂ ಇಡುತ್ತಿದ್ದೇನೆ- ನಿಮ್ಮ ಅಭಿಪ್ರಾಯ ತಿಳಿಯುವ, ನಿಮ್ಮನ್ನು ಯೋಚನೆಗೆ ಹಚ್ಚುವ ಹುಚ್ಚು ಕುತೂಹಲದಿಂದ; ಅಷ್ಟೇ.

ಪ್ರಶ್ನೆ ಹೀಗಿದೆ:
"ಮಧ್ವಾಚಾರ್ಯರ ದ್ವೈತ ಸಿದ್ಧಾಂತ (ಪರಮಾತ್ಮ ಮತ್ತು ಜೀವಾತ್ಮರು ಬೇರೆ ಬೇರೆ... ಇವೆರಡೂ ಒಂದೇ ಅಲ್ಲ)
ಶಂಕರಾಚಾರ್ಯರ ಅದ್ವೈತ ಸಿದ್ಧಾಂತ (ಪರಮಾತ್ಮ ಮತ್ತು ಜೀವಾತ್ಮರು ಒಂದೇ... ಮೂಲ ಒಂದೇ ರೂಪ)
- ಇವೆರಡರಲ್ಲಿ ನಿಮಗೆ ಯಾವುದು ಇಷ್ಟ? ಯಾಕೆ?"

ನನ್ನ ಚರ್ಚೆ ನಡೆದದ್ದು ಕಟ್ಟಾ ದ್ವೈತಿಯೊಡನೆ. ಅದರ ಸಾರಾಂಶ ಮತ್ತು ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಇಲ್ಲಿ ಮುಂದಿನ ಕಂತಿನಲ್ಲಿ ಖಂಡಿತವಾಗಿಯೂ ಕೊಡುತ್ತೇನೆ. ಈಗ ನಿಮ್ಮ ಸರದಿ. ಪತ್ರಗಳಿಗಾಗಿ ಕಾಯುತ್ತಿದ್ದೇನೆ....

Thursday, 30 October 2008

ಶುಭ ಹಾರೈಕೆಗಳು, ನಿಮಗೆಲ್ಲ...







ಓದುಗರೆಲ್ಲರಿಗೂ ದೀಪಾವಳಿಯ ಶುಭಾಶಯಗಳು.

ಬೆಳಕಿನಾವಳಿಯು ಎಲ್ಲರ ಬಾಳಲ್ಲಿ ಒಳಿತಿನ ಹಾದಿಯನ್ನೇ ಬೆಳಗುತಿರಲಿ.

Monday, 6 October 2008

ಮತ್ತೆ ನಮಸ್ಕಾರಗಳು

ಎಲ್ಲ ಓದುಗರಿಗೂ ನವರಾತ್ರಿ-ದಸರಾ ಹಬ್ಬದ ಶುಭಾಶಯಗಳು

ನಿಮ್ಮನ್ನೆಲ್ಲ ಎದುರುಗೊಳ್ಳದೆ ಬಹಳ ದಿನಗಳೇ ಕಳೆದವು. ನನ್ನ ನಿಯಮಿತ ದಿನಚರಿಯಿಂದ ಹೊರಗೆ, ಬಂಧು-ಬಾಂಧವರ ನಡುವಿಗೆ ಬಂದಿಳಿದ ಕಾರಣ ನನ್ನ ಸಮಯ ನನ್ನದಾಗಿ ಉಳಿಯದೆ, ಸರಿದುಹೋಗುತ್ತಿದೆ. ಅದಕ್ಕಾಗಿ ವಿಷಾದವಾಗಲಿ, ಕ್ಷಮಾಯಾಚನೆಯಾಗಲಿ ಇಲ್ಲ. ಎಲ್ಲರೊಡನೆ ಕಳೆದ ದಿನಗಳು, ಕಂಡುಕೊಂಡ ಖುಷಿಯ ಕ್ಷಣಗಳು ನನ್ನವು. ನೆನಪಿನ ಖಜಾನೆಯಲ್ಲಿ ಹೊಳೆವ ಗಟ್ಟಿಗಳು.

ಇನ್ನೂ ಕೆಲವು ವಾರಗಳ ಬಳಿಕ ದಿನಚರಿ ಮತ್ತೊಮ್ಮೆ ನಿಯಮಿತ ಪರಿಧಿಯೊಳಗೆ ಸೇರಲಿದೆ. ಆಗ ಪುನಃ ಸಂವಾದ, ಸಂವಹನ, ಚರ್ಚೆ, ತರಲೆ, ಹರಟೆ ಶುರುಮಾಡೋಣ.
ಅಲ್ಲಿಯವರೆಗೆ... ವಂದನೆಗಳು, ಮಣಿಪಾಲದಿಂದ.
೦೫-ಅಕ್ಟೋಬರ್-೨೦೦೮

Friday, 11 July 2008

ಸ್ನೇಹಿತರಿಗೆಲ್ಲ ಆಮಂತ್ರಣ

ಆತ್ಮೀಯ ಸ್ನೇಹಿತರೇ,
ಜುಲೈ ತಿಂಗಳ ಕೊನೆಯ ಭಾನುವಾರ, 27ನೇ ತಾರೀಕು, ತ್ರಿವೇಣಿ (ತುಳಸಿಯಮ್ಮ) ಮತ್ತು ನನ್ನ ಪುಸ್ತಕಗಳು ಬೆಂಗಳೂರಲ್ಲಿ ಬೆಳಕು ಕಾಣಲಿವೆ. ತ್ರಿವೇಣಿಯ ಅಂಕಣ ಬರಹ "ತುಳಸಿವನ" ಅದೇ ಹೆಸರಲ್ಲಿ ಮರುಮುದ್ರಣವನ್ನೂ ನನ್ನ ಹೊಸ ಕವನ ಸಂಕಲನ "ಭಾವಬಿಂಬ"ವನ್ನೂ ಪ್ರಕಟಿಸಲಿದ್ದೇವೆ.

ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ, ಭಾನುವಾರ ಬೆಳಗ್ಗೆ, 10 ಗಂಟೆಗೆ, ಇವೆರಡೂ ಓದುಗರನ್ನು ಎದುರುಗೊಳ್ಳುವಾಗ ವೇದಿಕೆಯಲ್ಲಿ ಡಾ. ಎಚ್ಚೆಸ್ವಿ, ದೊಡ್ಡರಂಗೇಗೌಡ, ಜೋಗಿ ಉಪಸ್ಥಿತರಿರುತ್ತಾರೆ.

ನೀವುಗಳೆಲ್ಲರೂ ಈ ಆಹ್ವಾನವನ್ನು ಮಾನಿಸಿ, ನಮ್ಮ ಜೊತೆಗಿರಲು ಅಲ್ಲಿಗೆ ಬರಬೇಕೆಂದು ಕೋರುತ್ತೇನೆ.

ಇಂತಿ,
ಜ್ಯೋತಿ (ಸುಪ್ತದೀಪ್ತಿ)

Friday, 20 June 2008

ನಮ್ಮ-ನಿಮ್ಮೊಳಗೆ-೦೫

(ಓದುಗರೇ, ಇದು ಈ ಮೊದಲಿನ ಲೇಖನಕ್ಕೆ ಪ್ರತಿಕ್ರಿಯೆಗಳ ರೂಪದಲ್ಲಿ ನಡೆದ ಸಂವಾದ. ಒಟ್ಟಣಿಸಿ ಕೊಟ್ಟಿದ್ದೇನೆ, ಓದಿ ತಿಳಿಸಿ...)

ಅಕ್ಕಾ,
ನಿಮ್ಮ ಸಂವಾದ ತುಂಬಾ ಚೆನ್ನಾಗಿದೆ... ಆದರೆ ಒಂದು ಸಂಶಯ. ಭಗವದ್ಗೀತೆಯಲ್ಲಿ ಕೃಷ್ಣನೇ ಹೇಳಿದ್ದಾನೆ.. ಆತ್ಮವೆಂಬುದು ನಿರಾಕಾರ, ನಿರ್ವಿಕಾರ, ನಿರ್ಗುಣತ್ವದಿಂದ ಕೂಡಿದ್ದು ಎಂದು. ಹೀಗಿರುವಾಗ ಪೂರ್ವಜನ್ಮದ ಸ್ಮೃತಿಯನ್ನು ಆತ್ಮದ ಮೂಲಕ ಕಾಣುವುದು ಯಾಕೋ ಸ್ಪಷ್ಟವೆನಿಸುತ್ತಿಲ್ಲ...!!!
-ತೇಜಸ್ವಿನಿ ಹೆಗಡೆ.

ಹೌದು, ಆತ್ಮ ನಿರ್ಗುಣ, ನಿರಾಕಾರ, ನಿರ್ವಿಕಾರವಾದದ್ದು. ಅಂಥ ಆತ್ಮ ನನ್ನ-ನಿನ್ನಂತೆ ಈ ಲೋಕದ ಮಾಯೆಯೊಳಗೆ ಸಿಲುಕಲಾರದ ಎತ್ತರದಲ್ಲೂ ಇರುತ್ತದೆ. ಅಂಥ ಆತ್ಮಕ್ಕೆ ಯಾವುದೇ ಬಂಧನಗಳಿರುವುದಿಲ್ಲ. ಲೋಕ ಕಲ್ಯಾಣವೊಂದೇ ಅದರ ಗುರಿ, ಬದುಕು.
ತಾವರೆಯೆಲೆಯ ಮೇಲಿನ ನೀರಿನಂಥ ಜೀವನ ನಡೆಸಬಲ್ಲ ಅಂಥ ಆತ್ಮ ಮಾತ್ರವೇ ಕೃಷ್ಣ ಹೇಳಿದ "ದೇವತ್ವ" ಸ್ವರೂಪವನ್ನು ಹೊಂದಬಲ್ಲದು. ಅಂತೆಯೇ, ಸತತ "ಕಲಿಕೆ"ಯಿಂದ ಸದ್ಗುಣಗಳನ್ನು ರೂಢಿಸಿಕೊಂಡ ಆತ್ಮ, ಎಲ್ಲ ಬಂಧನಗಳನ್ನು, ಗುಣದೋಷ ಮಾಯೆಗಳನ್ನು ಮೀರಿದಾಗ ಸ್ವತಃ ಕೃಷ್ಣನನ್ನೇ ಸೇರಲರ್ಹವಾಗುತ್ತದೆ (ಮುಕ್ತಿಪಡೆಯುತ್ತದೆ). ಕೃಷ್ಣ ವಿವರಿಸಿದ್ದು ಅಂಥ "ಪ್ಯೂರ್" ಆತ್ಮವನ್ನು. ನಮ್ಮೊಳಗಿರುವಂಥ "ಭವಬಂಧನ ವಾಸನಾಯುಕ್ತ" ಆತ್ಮವನ್ನಲ್ಲ ಅಂತ ನನ್ನ ನಂಬಿಕೆ. ಅಂಥ ಆತ್ಮ ಅವನದ್ದೇ ಒಂದು ತುಣುಕು ಅಂತಲೂ ನನ್ನ ವಿಚಾರ.
-ಸುಪ್ತದೀಪ್ತಿ.


ಸುಪ್ತದೀಪ್ತಿಯವರೆ,
ಹಾಗಾದರೆ, ನನ್ನ ಆತ್ಮದ ಏಳ್ಗೆಗಾಗಿ ನಾನು (ಅಂದ್ರೆ ನನ್ನ ದೇಹ) ಲೋಕದಲ್ಲಿ ಒಳ್ಳೆಯ ಕೆಲಸ ಮಾಡಬೇಕೆ? ಇದು ಒಂದು ರೀತಿಯ ಅಹಂ ಅಲ್ಲವೇ? ಈ ಅಹಂ ನಶಿಸುವ ತನಕ ಮುಕ್ತಿಯಿಲ್ಲ ಅಲ್ಲವೇ? paradox ಆಯಿತಲ್ಲ? :-)
ನಾನೂ ಉತ್ತರ ಹುಡುಕುತ್ತಿದ್ದೇನೆ....
-ಸೀಕರ್

ಅನಾಮಿಕರೆ,
"ನಾನು ಒಳ್ಳೆಯ ಕೆಲಸ ಮಾಡಿದೆ" ಅನ್ನುವ "ಮಮ"ಕಾರ ಇಲ್ಲದಿದ್ದರೆ "ಅಹಂ" ಹೇಗಾಗುತ್ತದೆ?
ನಾವು ಮಾಡಬೇಕಾದ ಕರ್ತವ್ಯಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುತ್ತಿದ್ದರೆ- ಗುರುಹಿರಿಯರಿಗೆ, ಸಹಚರರಿಗೆ, ಸಂಗಾತಿಗಳಿಗೆ, ಸಮಾಜಕ್ಕೆ ಬದ್ಧರಾಗಿದ್ದರೆ- ಅದು "ಅಹಂ" ಹೇಗಾಗುತ್ತದೆ? ಇವೆಲ್ಲವೂ ಒಳ್ಳೆಯತನಗಳೇ ತಾನೇ!
-ಸುಪ್ತದೀಪ್ತಿ.


ಸುಪ್ತದೀಪ್ತಿಯವರೆ,
ಇಲ್ಲಿ ವಿಷಯ, ದೇಹ ತಾನು "ಸನ್ಮಾರ್ಗ"ದಲ್ಲಿ ನಡೆದು ಒಳಗಿನ ಆತ್ಮವನ್ನು ಕೊನೆಯಲ್ಲಿ ನಿರಾಕಾರನಾದ ಪರಮಾತ್ಮನಲ್ಲಿ ಲೀನವಾಗುವಂತೆ ಮಾಡುವುದು, ಅಲ್ಲವೆ? ಈ ಒಂದು ಗುರಿ ಮನಸ್ಸಿನಲ್ಲಿರದೆ, ಮನುಷ್ಯ ಬರೀ ಕರ್ತವ್ಯ ಮಾಡುತ್ತ ಹೋದರೆ ಅದು ಒಳ್ಳೆಯ ಕಾರ್ಯವಾಗಬಹುದು ಅಥವ ಕೆಟ್ಟದ್ದೂ ಆಗಬಹುದು. ಉದಾ: ಕಳ್ಳನ ಮಗ, ಫಲಾಪೇಕ್ಷೆಯಿಲ್ಲದೆ, ಕದಿ ಎನ್ನುವ ಅಪ್ಪನ ಮಾತು ಕೇಳುವ ತನ್ನ ಕರ್ತವ್ಯ ಮಾಡಿದರೆ, ಅದು ಒಳ್ಳೆಯ ಕಾರ್ಯವೆ? ಫಲಾಪೇಕ್ಷೆಯಿಲ್ಲದೆ ನಾನು ಕರ್ತವ್ಯ ಮಾಡಿದರೂ ಅದರ ಪಾಪ/ಪುಣ್ಯ ನನಗಂಟುವುದು ನಿಜ. ಇದು cause and effect ನಿಯಮ. ಇದನ್ನು ಮೀರಲು ನಾನು ಸರಿ-ತಪ್ಪುಗಳ ವಿವೇಚನೆಯನ್ನು ಬಳಸಿದೊಡನೆ, ಅಲ್ಲಿ ನನ್ನ ಅಹಂ ಬಂದು ನಿಲ್ಲುತ್ತದೆ.
-ಸೀಕರ್.


ಅನಾಮಿಕ ಸೀಕರ್,
ಉತ್ತರ ನಿಮ್ಮ ಮಾತಿನಲ್ಲೇ ಅಡಗಿದೆ...
ಗುರಿ ಕಣ್ಣ ಮುಂದೆ ನಿಚ್ಚಳವಾಗಿದ್ದು, ಒಳ್ಳೆಯ ಮಾನವೀಯ ನೆಲೆಯಿಂದ ತನ್ನ ನಿಸ್ವಾರ್ಥ ಕರ್ತವ್ಯವನ್ನು ಮಾಡುತ್ತಿದ್ದರೆ ಅಲ್ಲಿ "ಅಹಂ" ಪ್ರವೇಶವಾಗಲಾರದು, ಆಗಬಾರದು; ಹೌದೆ?
ನಿಸ್ವಾರ್ಥ ಮುಕ್ತಿಯ ಗುರಿಯಿಲ್ಲದ ಸಾಧನಾಪಥ ಅಹಂ-ಲೇಪಿತವಾಗಿಲ್ಲದಿದ್ದರೂ ಪಾಪರಹಿತವಾದದ್ದಲ್ಲ, ಅದು ನಿಮ್ಮ ಮಾತಿನಲ್ಲೇ ಇದೆ.
ಮುಕ್ತಿಯ ಗುರಿಯಿರಿಸಿಕೊಳ್ಳುವುದೇ ಅಹಂ-ಪೂರಿತ ಅನ್ನುವ ವಾದವೂ ಇದೆ. ಇದನ್ನು ಒಪ್ಪಲಾರೆ. ಈ `ನಾನು ಎಂಬ ದೇಹ'ದೊಳಗಿನ ಆತ್ಮ ಆ ನಿರ್ಗುಣ ಪರಮಾತ್ಮನ ತುಣುಕಾಗಿರುವಾಗ, ಮನೆಯಿಂದ ಹೊರಗೆ ಅಲೆಯುತ್ತಿರುವ ಮಗುವನ್ನು ಮತ್ತೆ ಮನೆಗೆ ಕರೆತರುವ ಬಂಧುವಿನಂತೆ ಈ ದೇಹದ ಕೆಲಸ, ಆತ್ಮವನ್ನು ಪರಮಾತ್ಮನೆಡೆ ಒಯ್ಯುವ ಕೆಲಸ. ಇದರಲ್ಲಿ ಅಹಂ ನುಸುಳಬಾರದು. ಸುಳಿದರೆ, ನಿಸ್ವಾರ್ಥ ಅನ್ನುವ ಪದಕ್ಕೆ ಅರ್ಥವಿರುವುದಿಲ್ಲ.
-ಸುಪ್ತದೀಪ್ತಿ.



**"ಗುರಿ ಕಣ್ಣ ಮುಂದೆ ನಿಚ್ಚಳವಾಗಿದ್ದು, ಒಳ್ಳೆಯ ಮಾನವೀಯ ನೆಲೆಯಿಂದ ತನ್ನ ನಿಸ್ವಾರ್ಥ ಕರ್ತವ್ಯವನ್ನು ಮಾಡುತ್ತಿದ್ದರೆ ಅಲ್ಲಿ "ಅಹಂ" ಪ್ರವೇಶವಾಗಲಾರದು, ಆಗಬಾರದು; ಹೌದೆ?"**
--ಆಗಬಾರದು? ಹೌದು. ಆಗಲಾರದು? ಅಲ್ಲ. ನಿಜಜೀವನದಲ್ಲಿ ನಾನು "ಒಂದು" ರೀತಿ ಬದುಕುತ್ತೇನೆ ಎನ್ನುವುದರಲ್ಲಿ ಅಹಂ ಇದೆಯೆಂದು ನನ್ನ ಅಭಿಪ್ರಾಯ. ಇದನ್ನು ನಾವು ಆರಿಸುವ ಪ್ರತಿ ಹೆಜ್ಜೆಯಲ್ಲೂ ಕಾಣುತ್ತೇವೆ. ಉದಾ: ಕುಡಿತದ ಪಾರ್ಟಿಗೆ ಹೋಗುವುದೋ, ಭಜನೆಗೋ?

ಕಿಂಚಿತ್ತೂ ಅಹಂ ಇಲ್ಲದೆ ಈ ಜಗತ್ತಿನಲ್ಲಿ ಬದುಕಲಾರೆವು. ಬಹುಶಃ, ನಾವು ಇಲ್ಲಿರುವುದೇ ನಮಗೆ ಅಹಂ ಇದೆಯೆನ್ನುವುದಕ್ಕೆ ಸಾಕ್ಷಿ. (Just to be sure we are on the same page, ನಾನು ಅಹಂ ಅನ್ನು ಇದುವರೆಗೂ ego ಎಂದು ಬಳಸುತ್ತಿದ್ದೇನೆ.)

**"ಈ `ನಾನು ಎಂಬ ದೇಹ'ದೊಳಗಿನ ಆತ್ಮ ಆ ನಿರ್ಗುಣ ಪರಮಾತ್ಮನ ತುಣುಕಾಗಿರುವಾಗ, ಮನೆಯಿಂದ ಹೊರಗೆ ಅಲೆಯುತ್ತಿರುವ ಮಗುವನ್ನು ಮತ್ತೆ ಮನೆಗೆ ಕರೆತರುವ ಬಂಧುವಿನಂತೆ ಈ ದೇಹದ ಕೆಲಸ, ಆತ್ಮವನ್ನು ಪರಮಾತ್ಮನೆಡೆ ಒಯ್ಯುವ ಕೆಲಸ. ಇದರಲ್ಲಿ ಅಹಂ ನುಸುಳಬಾರದು."**
--ಅಹಂ ನುಸುಳಬಾರದು, ನಿಜ, ಆದರೆ ನಮಗೆ ಅರಿವಿಲ್ಲದೆಯೇ ನುಸುಳತ್ತೆ :-) ಉದಾ: ನಾನು ದೇವರ ಧ್ಯಾನದಲ್ಲಿ ತೊಡಗಿರುವುದರಿಂದ ಬೇರೆಯವರಿಗಿಂತ ಒಳ್ಳೆಯ ವ್ಯಕ್ತಿ ಅಥವ ಸರಿ ವ್ಯಕ್ತಿ ಎಂದೆನಿಸುವುದೂ ಅಹಂ!

ಕೊನೆಗೆ ನಾನು ಅಲ್ಲಿಗೇ ಬಂದು ನಿಂತೆ :-) ಅಹಂ ಹೋಗಬೇಕೆಂದು ಶ್ರಮಿಸುವುದೂ ಅಹಂ! ಒಂದಾನೊಂದು ದಿನ ಆತ್ಮ ದೇಹದಿಂದ ಬೇರ್ಪಟ್ಟು ತನಗೂ, ಗಾಳಿಗೂ, ಹುಲ್ಲಿಗೂ, ವಿಶ್ವದ ಪ್ರತಿ creationಗೂ ವ್ಯತ್ಯಾಸವೇ ಇಲ್ಲ ಎಂದು ಮನಗಾಣುತ್ತೆ. ಅದು ಅಹಂ ಇಲ್ಲದ egoless state ಆಗುತ್ತೆ. ಅಹಂ ಹೋಗಬೇಕೆಂದು ಶ್ರಮಿಸುವುದರಿಂದ ಈ ಅಹಂ ಇಲ್ಲದ ಸ್ಥಿತಿ ಒಂದು ದಿನ ಸಿಗುವುದೇ?
-ಸೀಕರ್


ಅನಾಮಿಕ ಸೀಕರ್,
ಇದೀಗ ಒಂದು ವಿಷಯ ವಿಷದವಾಯ್ತು... ನೀವು ಹೇಳುತ್ತಿದ್ದ "ಅಹಂ" ಮತ್ತು ನಾನು ಹೇಳುತ್ತಿದ್ದ "ಅಹಂ" ಒಂದಿಷ್ಟು ಬೇರೆ ಬೇರೆಯೆಂದು...
ನಾನು ಇದುವರೆಗೆ "ಅಹಂ" ಪದವನ್ನು- egoistic pride, ಅಹಂಕಾರ- ಅನ್ನುವ ಅರ್ಥಗಳಲ್ಲಿ ಬಳಸುತ್ತಿದ್ದೆ, ಹೊರತಾಗಿ ಭೌತಿಕವಾಗಿ ನಮಗೆಲ್ಲ ಇರುವ ಬೇರೆ ಬೇರೆ ಗುರುತುಗಳಾದ "ನಾನು" identity ಅಲ್ಲ. ಈ identity ಅಹಂ ನಮ್ಮ ನೆಲೆಯನ್ನು ಗುರುತಿಸಿಕೊಳ್ಳಲು ಅಗತ್ಯವಾದುದು.

ಈ ಹಿನ್ನೆಲೆಯಲ್ಲಿ, ನಮ್ಮ ಕೆಲಸಗಳಲ್ಲಿ ಅಹಂಕಾರ ನುಸುಳದೆ ಬರಿಯ ನಾನು-ಭಾವ ಇರಬಹುದಷ್ಟೆ! ವ್ಯಕ್ತಿ-ವ್ಯಕ್ತಿಯಿಂದ ಬೇರ್ಪಡಿಸಿಕೊಳ್ಳಲು ಈ ಸಣ್ಣ ಅಹಂ-ಭಾವ ಬೇಕಷ್ಟೆ. ಇದು ಸಾಧನೆಗೆ ಪೋಷಕವಾಗುತ್ತದೆಯೇ ಹೊರತು ಮಾರಕವಾಗದು. ಇನ್ನೊಬ್ಬರ ತಪ್ಪಿನಿಂದ, ಗುರುಗಳ ಪಾಠದಿಂದ ತಿಳುವಳಿಕೆ ಹೊಂದಲು ಈ ಸಣ್ಣ ಅಹಂ ಬೇಕೇ ಬೇಕು. ಅದು ಅರಿವಿನ ಅಹಂ. ಈ ಅಹಂ ಇಲ್ಲದೆ, ನಿಜ, ಬದುಕಲಾರೆವು, ಬಾಳಲಾರೆವು. ಈ ಸಣ್ಣ ನಾನು ಭಾವವನ್ನೂ ಮೀರಿದರೆ ಮುಕ್ತಿಯೇ ಸರಿ. ಅಲ್ಲಿಯವರೆಗೆ ನಾವ್ಯಾರೂ ಇನ್ನೂ ಬೆಳೆದಿಲ್ಲ ಅನ್ನುವುದಕ್ಕೆ ಈ ಚರ್ಚೆಯೇ ಸಾಕ್ಷಿ. ಗುರಿಯ ಅರಿವಿದೆ, ಹಾದಿಯ ಗುರುತಿದೆ, ಸಾಗಬೇಕಾಗಿದೆ.

"ದೇವಸೇವೆಯಲ್ಲಿ (ಅಥವಾ ಯಾವುದೇ ಸೇವೆಯಲ್ಲಿ) ತೊಡಗಿಕೊಂಡದ್ದರಿಂದ ಇತರರಿಂದ ಉತ್ತಮ"ನೆಂಬ ಭಾವನೆ ಅಹಂಕಾರವಾಗುತ್ತದೆ, ಅಲ್ಲವೆ? ಅದು ಸರಿಯಲ್ಲ, ನುಸುಳಬಾರದು; ಸರಿಯಾದ ಅರಿವು-ತಿಳಿವು ಇದ್ದಲ್ಲಿ ಅದು ನುಸುಳಲಾರದು ಅನ್ನುವುದು ನನ್ನ ಯೋಚನೆ. ಈ ನೆಲೆಯಲ್ಲಿ, ಮುಕ್ತಿಯ ಮಾರ್ಗ ಅಹಂಕಾರವಿಲ್ಲದ ಹಾದಿ ಅಂತ ನನ್ನ ನಂಬಿಕೆ.
-ಸುಪ್ತದೀಪ್ತಿ.


ಸುಪ್ತದೀಪ್ತಿಯವರೆ,
"ಗುರಿಯ ಅರಿವಿದೆ, ಹಾದಿಯ ಗುರುತಿದೆ, ಸಾಗಬೇಕಾಗಿದೆ." ಬಹಳ ಚೆನ್ನಾಗಿ ಹೇಳಿದಿರಿ. ಇದು ಬಹುಶಃ ನಮ್ಮ ಸಂವಾದದ ಸಂಕ್ಷಿಪ್ತ ಸಾರ:-
-ಸೀಕರ್.

Monday, 9 June 2008

ನಮ್ಮ-ನಿಮ್ಮೊಳಗೆ -೦೪

ಸುನಾಥ ಕಾಕಾರ ಸಂದೇಹ:
"ಸದ್ಗುಣಗಳ ಬಗೆಗೆ ನನಗೆ ಯಾವಾಗಿನಿಂದಲೂ ಒಂದು ಅನುಮಾನವಿದೆ. ಕೂಸು ಹುಟ್ಟಿದಾಗ ಅದು amoral ಇರುತ್ತದೆ. ಅದು ವ್ಯಕ್ತಿಯಾಗಿ ರೂಪುಗೊಳ್ಳುತ್ತಿರುವಾಗ ಅದರ ಮೇಲೆ ಪ್ರಭಾವ ಬೀರುವ ಭಾವನೆ ಎಂದರೆ ತಾನು ಯಾವ ರೀತಿಯಲ್ಲಿ behave ಮಾಡಿದರೆ, ತನಗೆ reward ಸಿಗುವದು, ಯಾವ ರೀತಿಯಲ್ಲಿ behave ಮಾಡಿದರೆ ತನಗೆ punishment ಸಿಗುವದು ಎನ್ನುವದು. ಅಂದರೆ, ಕೂಸು ವ್ಯಕ್ತಿಯಾಗುತ್ತ ಕಲಿಯುವದು survival mechanism. ಅರ್ಥಾತ್ all virtues are survival mechanisms ಮತ್ತು all bad qualities are also survival mechanisms.

ಮತ್ತೂ ಒಂದು ಆಸಕ್ತಿಕಾರಕ ವಿಷಯವಿದೆ. Wolfgang Kohler ಎನ್ನುವ ಜರ್ಮನ್ ವಿಜ್ಞಾನಿಯು, ಚಿಂಪಾಂಜಿಗಳ ಅಧ್ಯಯನ ಮಾಡುತ್ತಿದ್ದಾಗ ಹೇಳಿದ ಒಂದು ಮಾತು. "ಈ ಚಿಂಪಾಂಜಿಗಳ ಗುಂಪಿನಲ್ಲಿ ಒಂದು ಅತ್ಯಂತ ಒಳ್ಳೆಯ ಚಿಂಪಾಂಜಿ ಇದೆ; ಇದು ಅತ್ಯಂತ ದಡ್ಡ ಚಿಂಪಾಂಜಿಯೂ ಹೌದು." ಅಂದರೆ, ದಡ್ಡರಷ್ಟೇ ಒಳ್ಳೆಯವರಾಗುವರು ಎಂದೆ? ಇದಕ್ಕೆ support ಆಗಿ ಮತ್ತೊಂದು ಉದಾಹರಣೆ ಕೊಡುವೆ.

ಅನೇಕ ವರ್ಷಗಳ ಹಿಂದೆ ಜಪಾನದ ನದಿ ತೀರದಲ್ಲಿ (--ಅಥವಾ ಸಮುದ್ರ ತೀರದಲ್ಲಿ?--) ವಿಜ್ಞಾನಿಗಳು ಮಂಗಗಳ ಅಧ್ಯಯನ ನಡೆಸುತ್ತಿದ್ದರು. ನದಿ ದಂಡೆಯ ಮೇಲೆ ಸೇಂಗಾ ಕಾಳುಗಳನ್ನು ಒಗೆದಾಗ, ಉಸುಕಿನಿಂದ ಸೇಂಗಾ ಕಾಳುಗಳನ್ನು ಬೇರ್ಪಡಿಸುವ ಜಾಣ ವಿಧಾನವನ್ನು ಒಂದು ಮಂಗ ಕಂಡು ಹಿಡಿಯಿತು. ಸೇಂಗಾ ಹಾಗು ಉಸುಕಿನ mixtureಅನ್ನು ತೆರೆಗಳ ಮೇಲೆ ತೂರಿ, ಕೆಳಗೆ ಬೀಳುತ್ತಿರುವ washed ಕಾಳುಗಳನ್ನು ಹಿಡಿಯುವದೇ ಈ ವಿಧಾನ. ಎಲ್ಲ ಮಂಗಗಳೂ ಈ ವಿಧಾನ ಅನುಸರಿಸಿದವು, except ಒಂದು ಮಂಗ. ಇತರ ಮಂಗಗಳು ತೂರಿದ ಕಾಳುಗಳನ್ನು ಈ ಮಂಗ ಹಿಡಿಯಲು ಪ್ರಾರಂಭಿಸಿತು. So smart!

ಹಾಗಿದ್ದರೆ, ಯಾವುದು ಸದ್ಗುಣ? ಯಶಸ್ವಿಯಾಗುವದೇ ಸದ್ಗುಣವೆ? ಸದ್ಯದ ಜಾಗತಿಕ ನಾಗರಿಕತೆಯು ಅದನ್ನೇ ಕಲಿಸುತ್ತಿದೆಯೆಲ್ಲವೆ? ಇದು ಅತ್ಯಂತ ನೈಸರ್ಗಿಕ ಗುಣ. ಆದರೆ, ನಿಸರ್ಗವು ಎಲ್ಲಾ speciesಗಳಲ್ಲೂ ಮತ್ತೂ ಒಂದು ನೈಸರ್ಗಿಕ ಗುಣವನ್ನು ಇಟ್ಟಿದೆ. ಅದೇನೆಂದರೆ survival of the group or society is more important than the survival of the individual. ನಾವು ಯಾರನ್ನು ಕೆಟ್ಟವರೆಂದು ತಿಳಿದುಕೊಂಡಿರುತ್ತೇವೆಯೋ, ಅವರೂ ಸಹ ಆಪತ್ತಿನ ಸಮಯದಲ್ಲಿ ಸಮಾಜಕ್ಕಾಗಿ ತಮ್ಮ ಬಲಿದಾನ ಮಾಡಿದ್ದನ್ನು, ಇತಿಹಾಸದಲ್ಲಿ ನೋಡಿದ್ದೇವೆ, ಅಲ್ಲವೆ? ನಿನ್ನ ಅಭಿಪ್ರಾಯವೇನು?"

ಪ್ರತಿಕ್ರಿಯೆ:
ಸುನಾಥ ಕಾಕಾ,
ನಿಮ್ಮ ಸಂದೇಹ ನನ್ನನ್ನೂ ಅನೇಕ ಬಾರಿ ಕಾಡಿದ್ದಿದೆ. ಸೈಕಾಲಜಿ ಓದುತ್ತಿದ್ದಾಗ, "ಮಾನವ ತನ್ನ ಪರಿಸರದ ಕೂಸು" ಅನ್ನುವ ಖಡಾಖಂಡಿತ ಅಭಿಪ್ರಾಯದಲ್ಲಿದ್ದೆ. ಇದೀಗ ಆತ್ಮಜ್ಞಾನದ ಬಗ್ಗೆ ತಿಳಿದುಕೊಂಡಷ್ಟೂ ಆ ಅಭಿಪ್ರಾಯ ಸ್ವಲ್ಪಸ್ವಲ್ಪವೇ ಬದಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಒಂದೆರಡು ವಾರಗಳ ಹಿಂದೆ ಬರೆದಿಟ್ಟ ಮೊದಲ ಒಂದು ಪ್ಯಾರಾ, ಈಗ ನಿಮ್ಮ ಪ್ರಶ್ನೆಯ ಮುನ್ನೆಲೆಯಲ್ಲಿ ಪ್ರಸ್ತುತ ಎನಿಸಿದೆ. ನನ್ನ ಅಭಿಪ್ರಾಯವನ್ನು ಅದರ ನಂತರ ಮುಂದುವರಿಸಿದ್ದೇನೆ:

"ಪ್ರಜ್ಞೆ-ಸಂಸ್ಕಾರ: ನಮ್ಮ ಪ್ರಜ್ಞೆಯ ಪದರಗಳಲ್ಲಿ ಆಳವಾದ ಪದರಗಳನ್ನು ಸೂಪರ್ ಕಾನ್ಷಿಯಸ್ ಅಥವಾ ಅತೀಂದ್ರಿಯ ಪ್ರಜ್ಞೆ ಎಂದು ನಾನು ವಿಂಗಡಿಸಿಕೊಳ್ಳುತ್ತೇನೆ- ಕಲಿಕೆಯ, ಅರ್ಥೈಸುವಿಕೆಯ ಅನುಕೂಲಕ್ಕಾಗಿ. ನಮ್ಮ ತುಂಬಾ ಹಿಂದಿನ ನೆನಪುಗಳು, ಪೂರ್ವಸ್ಮೃತಿಗಳು ಈ ಅತೀಂದ್ರಿಯ ಪ್ರಜ್ಞೆಯ ಭಾಗ. ಈ ಅತೀಂದ್ರಿಯ ಪ್ರಜ್ಞೆಯೇ ನಮ್ಮ ಆತ್ಮ ಅನ್ನುವುದು ನನ್ನ ನಂಬಿಕೆ. ಸಾಮಾನ್ಯವಾಗಿ ನೆನಪಿರದ ಬಾಲ್ಯದ ದಿನಗಳ ವಿವರಗಳು, ಪೂರ್ವಜನ್ಮದ ನೆನಪುಗಳು ಈ ಆತ್ಮಸ್ಮೃತಿಯ ಭಾಗ. ಅದನ್ನೇ ನಾವು ಸಂಸ್ಕಾರ ಎಂದೂ ಕರೆಯುತ್ತೇವೆ. ಒಬ್ಬ ವ್ಯಕ್ತಿ ಯಾವುದೇ ಸಾಂಪ್ರದಾಯಿಕ ವಿದ್ಯೆಯಿಲ್ಲದಿದ್ದರೂ ತುಂಬಾ ಸಾಮಾನ್ಯ ಜ್ಞಾನವುಳ್ಳವರಾಗಿದ್ದು, ಒಳ್ಳೆಯ ನಯವಿನಯ ನಡವಳಿಕೆಯಿಂದ ಕೂಡಿದ ಅತ್ಯಂತ ಸುಸಂಸ್ಕೃತರಾಗಿದ್ದರೆ ಅಂಥವರನ್ನು "ಸಂಸ್ಕಾರವಂತರು" ಅನ್ನುತ್ತೇವೆ, ಆ ಸಂಸ್ಕಾರ ಎಲ್ಲಿಂದ ಬಂತು? ನನ್ನ ಪ್ರಕಾರ (ಬಹುತೇಕ ನಮ್ಮ ಹಿಂದೂ ಧರ್ಮದ ನಂಬಿಕೆಯೂ ಕೂಡಾ) ಅದು ಆ ವ್ಯಕ್ತಿಯ ಹಿಂದಿನ ಜನ್ಮದ ಜ್ಞಾನ, ಪೂರ್ವ ಸಂಸ್ಕಾರ. ಇವೆಲ್ಲ ಯಾಕೆ ಹೇಳಿದೆ ಅಂದ್ರೆ, ಇದೇ ಸಂಸ್ಕಾರ ಕೆಟ್ಟದ್ದೂ ಆಗಿರಬಹುದಲ್ವ! ತುಂಬಾ ಒಳ್ಳೆಯವರ ಮನೆಯಲ್ಲಿ ಹುಟ್ಟಿದ ಮಕ್ಕಳೂ ಕೆಟ್ಟವರಾದರೆ? ಆಗಿರುವ ಉದಾಹರಣೆಗಳೂ ಇವೆ. ಇವು ಕೆಟ್ಟ ಸಂಸ್ಕಾರದ ನಿದರ್ಶನಗಳು."

ನಮ್ಮೆಲ್ಲರ ನಡವಳಿಕೆಗಳು, ಬುದ್ಧಿವಂತಿಕೆಯ, ವೈಚಾರಿಕತೆಯ ಯೋಚನಾ ಧಾಟಿಗಳು ಈ ಜನ್ಮದ ಕಲಿಕೆಯಿಂದ ಎಷ್ಟು ಪ್ರಾಪ್ತವಾದದ್ದೋ ಅಷ್ಟೇ ಹಿಂದಿನ ಜನ್ಮದ/ ಜನ್ಮಗಳ ಸ್ಮೃತಿಯಿಂದ ಪ್ರೇರಿತವೂ ಆಗಿರುತ್ತವೆ. ಮೂಲತಃ ನಾವು ನಮ್ಮ ಸ್ವಭಾವಕ್ಕೆ ತಕ್ಕದಾದ ಮನೆಯನ್ನೇ ಆರಿಸಿಕೊಂಡು ಜನಿಸುವುದೇ ಇದಕ್ಕೆ ಮೊದಲ ಕಾರಣ. ಅಲ್ಲಿಂದಲೇ ನಮ್ಮ-ನಮ್ಮ ಗುಣ ನಡತೆಗಳು ಬೆಳೆಯಲಿರುವ ವಾತಾವರಣ ಅನುಕೂಲಕರವಾಗಿಯೋ ಪ್ರತಿಕೂಲಕರವಾಗಿಯೋ ಇರುವಂಥದ್ದನ್ನು ನೋಡಿಕೊಂಡೇ ಹುಟ್ಟಿರುತ್ತೇವೆ. ಈ ಜ್ಞಾನ ನಮಗೆಲ್ಲ ಮೊದಲೇ ಇರುತ್ತದೆ. ಈ ಜನ್ಮದಲ್ಲಿ ಏನೇನು ಆಗಲಿರುವುದೋ ಅದರ ಮುಖ್ಯ ಘಟನೆಗಳ ಅರಿವನ್ನು ಇರಿಸಿಕೊಂಡೇ ನಾವು ಜನಿಸಿರುತ್ತೇವೆ. ಆದರೆ, ಜನಿಸಿದ ಮೇಲೆ, ಬೆಳೆಯುತ್ತಿದ್ದಂತೆ, ಮಾನವ ದೇಹದ ಪ್ರಭಾವದಿಂದಾಗಿ, ಆ ಆತ್ಮಜ್ಞಾನ ಮಸುಕಾಗುತ್ತದೆ. ಅಮ್ನೀಶಿಯಾ ಆವರಿಸಿಕೊಳ್ಳುತ್ತದೆ. ಎಲ್ಲವನ್ನೂ ಭೌತಿಕವಾಗಿಯೇ ನೋಡಿಕೊಂಡು ಅಳಲು, ನಗಲು, ಕೊರಗಲು, ಮರುಗಲು, ನೋಯಲು, ನಲಿಯಲು ಕಲಿಯುತ್ತೇವೆ. ಭೌತಿಕತೆ ಮೀರಿ ಶಕ್ತಿ-ಸ್ವರೂಪವಾದ "ನಮ್ಮತನ"ದ ಪರಿಚಯವನ್ನೇ ಕಳೆದುಕೊಂಡುಬಿಡುತ್ತೇವೆ. ಇದು ಮಾನವ ಜೀವನದ ಪರಿಮಿತಿ; ಭೌತಿಕತೆಯ ಪೊರೆ. ಆದ್ದರಿಂದ ಪನಿಷ್ಮೆಂಟ್-ರಿವಾರ್ಡ್ ಅನ್ನುವ ಪರಿಭ್ರಮಣೆಯಲ್ಲಿ ಸಾಮಾಜಿಕವಾಗಿ ಲಾಭವಾಗುವ ನಿಟ್ಟಿನಲ್ಲಿ ಬದುಕಲು ಒಲಿಯುತ್ತೇವೆ. ಅಲ್ಲೂ ನಮ್ಮೊಳಗಿನ ಅತೀಂದ್ರಿಯ ಪ್ರಜ್ಞೆ ಕೆಲಸ ಮಾಡುತ್ತಿರುತ್ತದೆ, ಇಂಟ್ಯೂಷನ್ ಅಥವಾ ಒಳದನಿಯ ರೂಪದಲ್ಲಿ. ನಮ್ಮೊಳಗಿನ ಆ ಸಣ್ಣದೊಂದು ದನಿಯಾಗಿ ನಮ್ಮನ್ನು ಎಚ್ಚರಿಸುತ್ತಲೇ ಇರುವ ಅದನ್ನು ಕಿವಿಗೊಟ್ಟು ಕೇಳಿ ಅದರಂತೆ ನಡೆಯುವವರು ಎಷ್ಟು ಮಂದಿ?

ಈ ಎಲ್ಲ ಹಿನ್ನೆಲೆಯಲ್ಲಿ, ನಮ್ಮ ನಡತೆಗಳು, ಒಳ್ಳೆಯತನ-ಕೆಟ್ಟತನಗಳು ನಮಗೆ ನಾವೇ ಹಾಕಿಕೊಂಡ ಮಿತಿಗಳು. ಅವನ್ನು ಮೀರಿ ಬೆಳೆಯಲು ಅವಕಾಶವಿರುವ ಈ ಭೂಮಿಯಲ್ಲಿ (ಆತ್ಮದ ಕಲಿಕೆಗೆ ಭೂಮಿಗಿಂತ ಒಳ್ಳೆಯ ಪಾಠಶಾಲೆಯಿಲ್ಲ ಎನ್ನುವುದು ಸಮ್ಮೋಹನದಲ್ಲಿ "ಆತ್ಮಲೋಕ" ವೀಕ್ಷಿಸಿದ ಅನೇಕರ ಅಭಿಪ್ರಾಯ) ನಮ್ಮ ನಮ್ಮ ಫ್ರೀ-ವಿಲ್ (ಎಚ್ಚರಿಸುವ ಒಳದನಿಯೂ ಕೂಡ) ಉಪಯೋಗಿಸಿಕೊಂಡು ಸನ್ನಡತೆಯಲ್ಲೇ ಸಮಾಜಕ್ಕೆ, ಬಂಧು ಬಾಂಧವರಿಗೆ ಒಳ್ಳೆಯವರಾಗಿಯೇ ಇರುವವರು ಅಪರೂಪ. ಅಂಥವರು ಆತ್ಮ-ಶಾಲೆಯ ಕಲಿಕೆಯಲ್ಲಿ ಮುಂದಿನ ಹಂತಕ್ಕೇರುತ್ತಾರೆ. ಪಾಠ ಕಲಿಯದವರು, ವಿಲ್-ಪವರ್ ಬಳಸಿಕೊಳ್ಳದೆ, ಒಳದನಿಯ ಎಚ್ಚರಿಕೆಗೆ ಗಮನ ಕೊಡದೆ, ಪ್ರಾಪಂಚಿಕ ಪ್ರಲೋಭನೆಗಳು ಎಳೆದತ್ತ ಸೆಳೆದಾಡಿಕೊಂಡು ಅಟ್ಟಾಡಿಸಿಕೊಂಡು ಬದುಕಿದವರು ಇನ್ನೂ ಕೆಲವಾರು ಜನ್ಮಗಳಲ್ಲಾದರೂ ಈ ಪಾಠ ಕಲಿತೇ ಕಲಿಯುತ್ತಾರೆ.

ಇನ್ನು, ಒಳ್ಳೆಯತನ ದಡ್ಡತನವೇ ಯಾಕಾಗಿರಬಾರದು!? ರಾಜ್ಯಾಭಿಷೇಕದ ದಿನವೇ ಮಂಥರೆಯ ಪ್ರಚೋದನೆಯಿಂದ ಕೈಕೇಯಿಯ ಮಾತುಗಳಿಂದ ತಾನು ಕಾಡಿಗೆ ತೆರಳಬೇಕಾದಾಗ ಸಮಾಧಾನದಿಂದ ವರ್ತಿಸಿದ ಶ್ರೀರಾಮ; ಪದೇ ಪದೇ ಕಳ್ಳನೆಂದು ಕರೆದು ದೂರಿಡುವ ಗೋಪ-ಗೋಪಿಕೆಯರನ್ನೂ ತನ್ನವರೆಂದು ಪ್ರೀತಿಸಿದ ಶ್ರೀಕೃಷ್ಣ; ತನ್ನ ಒಂದು ಕೆನ್ನೆಗೆ ಏಟು ಹಾಕಿದವರಿಗೆ ಇನ್ನೊಂದು ಕೆನ್ನೆಯನ್ನೂ ತೋರಿಸಿದ ಮತ್ತು ತನ್ನನು ಶಿಲುಬೆಗೇರಿಸಿದವರನ್ನೂ ಕ್ಷಮಿಸೆಂದು ಪ್ರಾರ್ಥಿಸಿದ ಏಸುಕ್ರಿಸ್ತ; ತನ್ನನ್ನು ಅವಮಾನಿಸಿ ಬೈದು ಮಲ್ಲಯುದ್ಧಗೈದ ಸಹೋದರನನ್ನೂ ಕ್ಷಮಿಸಿ ಎಲ್ಲವನ್ನೂ ತೊರೆದು ಎದ್ದು ನಿಂತ ಬಾಹುಬಲಿ; ತಮ್ಮ ಮನೆಯವರು ತನ್ನ ಮೆತ್ತನೆಯ ನಡವಳಿಕೆಯ ದುರುಪಯೋಗ ಪಡೆಯುತ್ತಿದ್ದಾರೆ ಎನ್ನುವ ಅರಿವಿದ್ದೂ, ಅವರೆಲ್ಲರ ಕುಹಕಗಳನ್ನು ಸುಮ್ಮನೇ ಸಹಿಸಿಕೊಳ್ಳುತ್ತಿರುವ ನಮ್ಮ ನಡುವಿನ ಅನೇಕಾನೇಕ ಹಿರಿಯರು- ಇವರೆಲ್ಲರೂ ಇಂಥ ಸನ್ನಿವೇಶಗಳಲ್ಲಿ ಸಿಡಿದೆದ್ದು ಎದುರಿಸಿ ಕೋಪದಿಂದ ಎಗರಾಡುವ ಮಂದಿಯ ದೃಷ್ಟಿಯಲ್ಲಿ ದಡ್ಡರೇ ಸೈ. ಒಳ್ಳೆಯತನವೆನ್ನುವುದು ವೈಯಕ್ತಿಕ ಆಯ್ಕೆ. ಸಾಮಾಜಿಕವಾಗಿ ಅದು ವ್ಯಕ್ತಿಯ ಲೌಕಿಕ ಏಳ್ಗೆಗೆ ಅನುಕೂಲಕರ ಅಲ್ಲದಿರಬಹುದು. ಆದರೆ, ಆ ವ್ಯಕ್ತಿಯ ಆತ್ಮದ ಏಳ್ಗೆಗೆ ಖಂಡಿತಾ ಅದು ಸಹಕಾರಿ. ಆ ಆತ್ಮ ಕಲಿಯಬೇಕಾಗಿರುವ ಶಾಂತಿಯ, ಸಹನೆಯ, ಸಹಬಾಳ್ವೆಯ, ಹೊಂದಾಣಿಕೆಯ ಪಾಠವನ್ನು ವ್ಯಕ್ತಿ ಕಲಿಯುತ್ತಿರಬಹುದು. ಶ್ರೀರಾಮ, ಶ್ರೀಕೃಷ್ಣ, ಏಸು, ಬಾಹುಬಲಿ, ಮತ್ತಿತರ ಹಿರಿಯರು ನಮಗೆಲ್ಲ ಮಾದರಿಗಳಾಗಿ ನಡೆದುಹೋದರು. ಇವು ನನ್ನ ನಂಬಿಕೆಗಳು, ಅಭಿಪ್ರಾಯಗಳು.

ಕೊನೆಯದಾಗಿ, ದಡ್ಡ ಚಿಂಪಾಂಜಿ ಮತ್ತು ಜಪಾನಿನ ಜಾಣ ಮಂಗನ ಬಗ್ಗೆ: ಜಪಾನ್ ಮಂಗ ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ರಾಜಕಾರಣಿಯಾಗಿದ್ದಿರಬಹುದು. ಚಿಂಪಾಂಜಿ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದಿರಬಹುದು. ಪೂರ್ವಜನ್ಮದ ಸ್ಮೃತಿ ಬಿಟ್ಟೀತೆ?

Wednesday, 4 June 2008

ಆರೋಗ್ಯ ಪೂಜೆ

(ಶ್ರೀ ಪುರಂದರ ದಾಸರ ಪದ- "ಊಟಕ್ಕೆ ಬಂದೇವು ನಾವು, ನಿಮ್ಮ- ಆಟ-ಪಾಠವ ಬಿಟ್ಟು ಅಡುಗೆ ಮಾಡಮ್ಮ" ಹಾಡಿನ ಧಾಟಿಯಲ್ಲಿದೆ. ಶ್ರೀ ದಾಸರ ಕ್ಷಮೆ ಕೋರಿ, `ಅತ್ಯಾಧುನಿಕ'ರ ಗಮನಕ್ಕೆ....)

ಊಟಕ್ಕೆ ಬನ್ನಿರಿ ನೀವು; -ನಿಮ್ಮ
ಲ್ಯಾಪ್-ಟಾಪು, ಸೆಲ್-ಫೋನುಗಳನಾಚೆಗಿಟ್ಟು --ಊಟಕ್ಕೆ
ಪಿ.ಡಿ.ಎ., ಬ್ಲ್ಯಾಕ್-ಬೆರ್ರಿ ಜೊತೆಗೆ, -ತಮ್ಮ
ಬೀಪರ್ರು, ಬ್ಲೂಟೂಥುಗಳ ಮೇಜಲಿಟ್ಟು --ಊಟಕ್ಕೆ

ಒಂದೇ ಮನೆಯೊಳಗಿದ್ದೂ, -ಮಂದಿ
ಒಬ್ಬೊಬ್ಬರೊಂದೊಂದು ದಿಕ್ಕನ್ನು ಹೊದ್ದು
ಅರೆನಿದ್ರೆ ಹೊತ್ತಲ್ಲಿ ಎದ್ದು, -ಬಂದು
ಮಬ್ಬಲ್ಲಿ ತಿಂದರೆ ಆರೋಗ್ಯಕೆ ಗುದ್ದು --ಊಟಕ್ಕೆ

ಟೀವಿಯ ಮುಂದಿರಬೇಡಿ, -ಒಮ್ಮೆ
ಅಡುಗೆ ಮನೆಯಲ್ಲೊಂದು ಮಣೆ ಹಾಕಿ ಕೂಡಿ
ನಗು ನಗುತಾ ಊಟವ ಮಾಡಿ, -ನಿಮ್ಮ
ಒಡನಾಡಿಗಳ ಜೊತೆಗೆ ಹರಟೆ ಮಾತಾಡಿ --ಊಟಕ್ಕೆ

ಸಿಹಿ-ಖಾರ, ಹುಳಿ-ಉಪ್ಪು ಇರಲಿ, -ಹಾಗೇ
ಶುಚಿಯ ಕಡೆಗೂ ನಿಮ್ಮ ಒಮ್ಮನವು ಹೊರಳಿ
ಮಾಡಿರುವ ಅಡುಗೆಯನು ಹೊಗಳಿ, -ತೇಗಿ
ರುಚಿ ಹಣ್ಣ ಸವಿಯುತ್ತ ಅಂಗಳಕೆ ತೆರಳಿ --ಊಟಕ್ಕೆ

ಆಧುನಿಕ ಸೌಕರ್ಯ ಬೇಕು, -ನಮಗೆ
ಬಾಳುವೆಯ ನಡೆಸಲು ಕೆಲಸವಿರಬೇಕು
ಆಧಾರವೀ ದೇಹ ಎದಕು, -ಅದನೆ
ಕಡೆಗಣಿಸಿ ಬದುಕಿದರೆ ನೋವುಣ್ಣಬೇಕು --ಊಟಕ್ಕೆ

ಹೊತ್ತು ಹೊತ್ತಿಗೆ ಊಟ-ತಿಂಡಿ, -ಹೆಚ್ಚು
ಹಣ್ಣು ತರಕಾರಿಗಳ ಮಿಶ್ರಣದ ಮೋಡಿ
ಬಲುಕಾಲ ಆರೋಗ್ಯ ನೋಡಿ, -ಮೆಚ್ಚು
ತನು-ದೇವರ ಸೇವೆ ಈ ರೀತಿ ಮಾಡಿ --ಊಟಕ್ಕೆ
(೦೨-ಜೂನ್-೨೦೦೮ ರಾತ್ರೆ ೧೦:೩೦)

Thursday, 22 May 2008

ಒಂದು ಬಿನ್ನಹ:

ಪ್ರಿಯ ಓದುಗರೇ,
"ಹರಿವ ಲಹರಿ"ಯೆಂಬ ಹೆಸರಿದ್ದ ಈ ಬ್ಲಾಗ್ ಈಗ ಹೊಸ ನಾಮಕರಣ ಹೊಂದಿದೆ. ಇದೀಗ "ಸುಪ್ತದೀಪ್ತಿ Inner Light" ಎನ್ನುವ ಹೊಸ ರೂಪದಿಂದ ಮುಂದುವರಿಯಲಿದೆ. ಈ ಅಂಗಳ ಇನ್ನು ಮುಂದೆ "ನಮ್ಮ-ನಿಮ್ಮೊಳಗೆ" ಮತ್ತು "ಆತ್ಮಚಿಂತನ"ದಂಥ ಮಾಹಿತಿ ಸಂವಹನಕ್ಕೆ ಮತ್ತು ಚರ್ಚೆಗೆ ಸೀಮಿತ.

ಇಲ್ಲಿ ಹರಿದಾಡುತ್ತಿದ್ದ ಲಹರಿಯ ಹರಿವನ್ನು ಹೊಸದೊಂದು ಅಂಗಳಕ್ಕೆ ತಿರುಗಿಸಲಾಗಿದೆ. ಕವನ, ಕಥೆ, ಹರಟೆ, ಲೇಖನ, ಪ್ರಬಂಧ- ಇವೆಲ್ಲ ಸಾಹಿತ್ಯಿಕ ಬರಹಗಳು ಅಲ್ಲಿ ಉಸಿರಾಡುತ್ತಿವೆ, ಬೆಳಕು ಕಾಣಲಿವೆ. ನಿಮ್ಮ "ಹರಿವ ಲಹರಿ" ಅಲ್ಲಿಯೂ ಸಶಕ್ತವಾಗಿ ಹರಿಯುವಂತೆ ಪ್ರೋತ್ಸಾಹಿಸುವಿರಾಗಿ ನಂಬಿಕೆ.

ಈ ಅಂಗಳಕ್ಕೆ ಅಲ್ಲಿಂದಲೂ, ಅಲ್ಲಿಗೆ ಇಲ್ಲಿಂದಲೂ ಸುಲಭದಲ್ಲೇ ಕಾಣುವಂತೆ ಮುಖ್ಯಪುಟದಲ್ಲಿಯೇ ಕೊಂಡಿಗಳೂ ಇವೆ.

ಬನ್ನಿ, ಓದಿ, ಪ್ರತಿಕ್ರಿಯಿಸಿ; ಎರಡೂ ಅಂಗಳಗಳಲ್ಲಿ ನಿಮ್ಮ ಹೆಜ್ಜೆ ಗುರುತುಗಳಿರಲಿ.

Thursday, 1 May 2008

ನಮ್ಮ-ನಿಮ್ಮೊಳಗೆ-೦೩

ಸಂದೇಹ-೦೧: ಶುಭದಾಳಿಂದ:
"ನನಗೆ ಹಿಪ್ನೋಸಿಸ್ ಥೆರಪಿಯ ಬಗೆಗೇ ಹೆಚ್ಚಿನ ಮಾಹಿತಿ ಕೊಡುತ್ತೀರಾ? ಸಮ್ಮೋಹನದಲ್ಲಿದ್ದಾಗ ವ್ಯಕ್ತಿ ಪೂರ್ವಸ್ಮೃತಿಯನ್ನು ತಂದುಕೊಳ್ಳುವುದು ಹೇಗೆ ಸಾಧ್ಯವಾಗುತ್ತದೆ?"

ಸಂದೇಹ-೦೨: ಯು.ಆರ್.ಭಟ್ (ರಾಜೆಂದ್ರ)ರಿಂದ:
"ಹಿಪ್ನೊಸಿಸ್ ಥೆರಪಿ, ಅಥವಾ ಪಾಸ್ಟ್ ಲೈಫ್ ರಿಗ್ರೆಷನ್‍ಗಳಿಂದ ತಂದುಕೊಳ್ಳುವ ಹಳೆಯ ಘಟನೆಗಳ ನೆನಪುಗಳು... ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳನ್ನು ನಿವಾರಿಸಲು ಯಾವ ರೀತಿಯಲ್ಲಿ ಕಾರಣವಾಗುತ್ತವೆ..?"

ಪ್ರತಿಕ್ರಿಯೆ: ಇವೆರಡೂ ಪ್ರಶ್ನೆಗಳು ಒಂದಕ್ಕೊಂದು ಪೂರಕವಾದ್ದರಿಂದ ಒಟ್ಟಿಗೇ ಉತ್ತರಿಸುವ ಪ್ರಯತ್ನ ಮಾಡುತ್ತೇನೆ.
ಮೊದಲ ಪ್ರಶ್ನೆಗೆ ಪೂರ್ವಭಾವಿ ಉತ್ತರವಾಗಿ ಸ್ಮೃತಿ/ನೆನಪು ಅಂದರೆ ಏನು, ಎಲ್ಲಿರುತ್ತದೆ, ಹೇಗೆ "ನೆನಪು" ಆಗುತ್ತದೆ, ಎಂಬ ವಿಷಯಗಳನ್ನು ಸಂಕ್ಷಿಪ್ತವಾಗಿ "ನಮ್ಮ-ನಿಮ್ಮೊಳಗೆ -೦೧"ರಲ್ಲಿ ತಿಳಿಸಿದ್ದೇನೆ.

ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದಾಗ, ಯಾವ ಕಾರಣಕ್ಕಾಗಿ ರೆಗ್ರೆಷನ್ ಬಯಸಿದ್ದಾರೆ ಅನ್ನುವುದರ ಮೇಲೆ ವ್ಯಕ್ತಿಯ ಸಬ್-ಕಾನ್ಷಿಯಸ್ ಮೈಂಡ್ (ಸುಪ್ತ ಪ್ರಜ್ಞೆ) ನೆನಪಿನ ಆಳದ ಪದರಗಳಿಂದ ಬೇಕಾದ ನೆನಪುಗಳನ್ನು ಹೆಕ್ಕಿ ತರುತ್ತದೆ. ಸಮ್ಮೋಹನದಲ್ಲಿದ್ದಾಗ ಕೆಲಸ ಮಾಡುವಂಥದ್ದು ನಮ್ಮ ಸುಪ್ತ ಪ್ರಜ್ಞೆ. ಅಲ್ಲಿಂದ ನೆನಪಿಸಿಕೊಂಡ ವಿಷಯಗಳು, ಚಿಕಿತ್ಸಕನ ಸಂದೇಶಗಳ ಮೇಲೆ ಜಾಗೃತ ಪ್ರಜ್ಞಾವಲಯಕ್ಕೂ ಹಾದು ಬರುತ್ತವೆ (ಚಿಕಿತ್ಸಕನ ಸಂದೇಶವಿಲ್ಲದಿದ್ದಲ್ಲಿ, ಸುಪ್ತಪ್ರಜ್ಞೆಯು ಈ ನೆನಪನ್ನು ಜಾಗೃತವಲಯಕ್ಕೆ ತಂದುಕೊಳ್ಳದಿರುವ ಸಾಧ್ಯತೆಯಿದೆ. ಹಾಗಾದಾಗ ವ್ಯಕ್ತಿಗೆ ಸಮ್ಮೋಹನದಿಂದ ವಾಸ್ತವಕ್ಕೆ ಬಂದಾಗ ಆ "ನೆನಪುಗಳು" ನೆನಪಿರುವುದಿಲ್ಲ). ಆದ್ದರಿಂದ ನೆನಪು ಅನ್ನುವಂಥಾದ್ದು ಜಾಗೃತ ಪ್ರಜ್ಞೆಯ ವಲಯಕ್ಕೆ ಬಂದದ್ದು ಮಾತ್ರವೇ ಆಗಬೇಕಿಲ್ಲ. ನಮ್ಮ ನೆನಪುಗಳೆಲ್ಲ ನಮ್ಮವೇ ಮತ್ತು ಸದಾ ನಮ್ಮ ಪ್ರಜ್ಞೆಯ ಪದರಗಳ ಒಳಗೆ ಹುದುಗಿರುವಂಥವು.

ಈಗಲೂ ನಮ್ಮ ಜೀವನದ ಯಾವುದೋ ಒಂದು ಘಟನೆ, ಒಂದು ಹಾಡಿನ ಗುನುಗು, ಒಂದು ಮಾತಿನ ಎಳೆ, ನಮ್ಮನ್ನು ನಮ್ಮ ಬಾಲ್ಯದ ಮರೆತೇ ಹೋದಂತಿದ್ದ ಕ್ಷಣಗಳನ್ನು ನೆನಪಿಗೆ ತರುತ್ತವಲ್ಲವೆ? ಸಮ್ಮೋಹನದಲ್ಲೂ ಹಾಗೆಯೇ. ಸಮ್ಮೋಹನಕ್ಕೆ ಒಳಗಾದ ಕಾರಣದ ಎಳೆ ಹಿಡಿದು ಅದಕ್ಕೆ ಪೂರಕವಾದ ನೆನಪಿನ ಎಳೆಗಳನ್ನು ಸುಪ್ತಪ್ರಜ್ಞೆ ತನ್ನದೇ ಆಳದ ಪದರಗಳಿಂದ ಮೇಲ್ಪದರಕ್ಕೆ ತಂದುಕೊಂಡು (ನೆನಪಿಸಿಕೊಂಡು), ಅದರಿಂದ ಈಗಿನ ಜೀವನಕ್ಕೆ ಅಗತ್ಯವಾದ ಸಂದೇಶವನ್ನು ಪಡೆದುಕೊಳ್ಳುತ್ತದೆ. ಅಥವಾ ಆಗಿನ ಗೊಂದಲದ ಮೇಲೆಯೇ ಈಗಲೂ ಗೊಂದಲಮಯ ಮನಸ್ಸೇ ಇರುವುದಾದರೆ ಅದನ್ನು ಪರಿಹರಿಸಿಕೊಳ್ಳಬಹುದಾಗಿದೆ (ಇದೀಗ ಎರಡನೇ ಪ್ರಶ್ನೆಯ ವ್ಯಾಪ್ತಿಗೆ ಬಂದೆವು).

ಮೊದಲನೆಯದಾಗಿ, ಸಮ್ಮೋಹನದಲ್ಲಿ ನೆನಪಿಸಿಕೊಳ್ಳುವ ಹಳೆಯ ನೆನಪುಗಳಿಂದ ಪ್ರಸ್ತುತ ಜೀವನದಲ್ಲಿನ ಮನೋವ್ಯಥೆಗಳೆಲ್ಲವೂ ನಿವಾರಣೆಯಾಗುವುದಿಲ್ಲ. ಹಾಗೆಯೇ, ಪ್ರಸ್ತುತ ಮನೋವ್ಯಥೆಗಳೆಲ್ಲವೂ ಪೂರ್ವಸ್ಮೃತಿಗಳ ಮೇಲೆಯೇ ನಿಂತಿರುವುದಿಲ್ಲ. ಕೆಲವೊಂದು ತೊಂದರೆಗಳು, ವ್ಯಥೆಗಳು, ಗೊಂದಲಗಳು, ಪದೇ ಪದೇ ಕಾಡುವ ಕನಸುಗಳು ಪೂರ್ವಸ್ಮೃತಿಯಲ್ಲಿ ಬೇರುಗಳಿರಿಸಿಕೊಂಡಿರುತ್ತವೆ. ಒಂದೆರಡು ನಿದರ್ಶನಗಳ ಮೂಲಕ ಇದನ್ನು ಸುಲಭದಲ್ಲಿ ವಿವರಿಸಬಹುದು.

ನನ್ನದೇ ಸರಳ ಉದಾಹರಣೆ ಕೊಡುತ್ತೇನೆ (ಯಾವುದೇ ಮನೋವ್ಯಥೆಗಳಲ್ಲ, ಅಂಥ ತೊಂದರೆ ಸದ್ಯಕ್ಕಿಲ್ಲ):
(೧) ನನಗೆ ಯಾವಾಗಲೂ ನದಿ, ನೀರು, ಜಲಪಾತಗಳ ಬಗ್ಗೆ ಹಂಬಲ, ಒಲವು, ಒಂಥರಾ ಕುತೂಹಲ, ನೋಡಿದಷ್ಟೂ ತಣಿಯದ ಆಸಕ್ತಿ. ಇದ್ಯಾಕೆ ಹೀಗೆ ಅನ್ನುವ ಪ್ರಶ್ನೆ ನನ್ನನ್ನು ಹಲವಾರು ಬಾರಿ ಕಾಡಿದ್ದಿದೆ. ಉತ್ತರ ಸಿಕ್ಕಿರಲಿಲ್ಲ. ಆಸ್ಟಿನ್'ನಲ್ಲಿ ಡಾ. ವೈಸ್ ನಡೆಸಿದ ರೆಗ್ರೆಷನ್ ಥೆರಪಿ ಕಾರ್ಯಾಗಾರದಲ್ಲಾದ ಅನುಭವದಲ್ಲಿ, ಮತ್ತು ಅದರ ನಂತರದ ಒಂದೆರಡು ದಿನಗಳಲ್ಲಿ ಅರೆ-ಮಂಪರು (ರಾತ್ರೆ ಪೂರ್ತಿನಿದ್ದೆಗೆ ಜಾರುವ ಮೊದಲು ಮತ್ತು ಬೆಳಗ್ಗೆ ಪೂರ್ತಿ ಎಚ್ಚರಾಗುವ ಮೊದಲು) ಸ್ಥಿತಿಯಲ್ಲಿದ್ದಾಗ ಕನಸಿನಂತೆ ತೋರಿಬಂದ ಕೆಲವು ವಿವರಗಳಲ್ಲಿ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿದೆ ಅಂದುಕೊಳ್ಳುತ್ತೇನೆ. ಎರಡು ಸಾವಿರ ವರ್ಷಗಳ ಹಿಂದಿನ ಆ ನನ್ನ ಜೀವನದಲ್ಲಿ ನದಿ/ತೊರೆ ಮತ್ತು ಜಲಪಾತ ಅಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ನನ್ನ ನೋವು ನಲಿವುಗಳ ಜೊತೆ ಬೆಸೆದುಕೊಂಡ ಬಂಧವಾಗಿತ್ತು. ಹಾಗೂ ಅಂದಿನ ನನ್ನ ಹೆಸರೂ ನೀರಿಗೆ ಸಂಬಂಧಿಸಿದ್ದಾಗಿತ್ತು. ಇವೆಲ್ಲ ಬರೀ ಕಾಕತಾಳೀಯವೇ? ಹಾಗೆಂದೇ ಅಂದುಕೊಂಡರೂ ಆ ನಂತರ ನನ್ನನ್ನು "ನನಗ್ಯಾಕೆ ನೀರಿನ ಮೇಲೆ ಮೋಹ?" ಅನ್ನುವ ಪ್ರಶ್ನೆ ಕಾಡಿಲ್ಲ.

(೨) ಹಲವಾರು ಬಾರಿ, ನಾನು ಗುಹೆಯೊಂದರಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿ ಒದ್ದಾಡಿದಂತೆ ಕನಸುಬಿದ್ದು ಕಸಿವಿಸಿಗೊಂಡು, ಗಾಬರಿಗೊಂಡು, ಗಾಳಿಗಾಗಿ ಹಂಬಲಿಸುತ್ತಾ ನಡುರಾತ್ರೆ ಎದ್ದದ್ದಿದೆ. ಹಾಗೆಂದು ಅದು ನನ್ನ ದಿನಗಳ ಸಮತೋಲ ತಪ್ಪಿಸುವಷ್ಟು ತೀವ್ರವಾಗಿರಲಿಲ್ಲ, ಅಥವಾ ನಾನು ಅದನ್ನು ಅಷ್ಟು ತೀವ್ರವಾಗಿ ಪರಿಗಣಿಸಿರಲಿಲ್ಲ (ಪದೇ ಪದೇ ಬೀಳುವ, "ನೈಟ್-ಮೇರ್" ಎಂದು ಕರೆಯಲ್ಪಡುವ, ಭಯಾನಕ ಕನಸುಗಳಿಂದ ವ್ಯಕ್ತಿಯ ದೈನಂದಿನ ಬದುಕು ಅಲ್ಲೋಲ ಕಲ್ಲೋಲ ಆಗುವುದೂ ಇದೆ; ಕನಸಿನ ವಿವರಗಳು ನಿಜವಾಗಿಯೂ ಎದುರಿಗೇ ಬಂದಂತೆ ಭ್ರಮಿತರಾಗುವವರೂ ಇದ್ದಾರೆ. ಇದೂ ಒಂದು ಮನೋವ್ಯಥೆಯೇ). ಇತ್ತೀಚೆಗೆ ಮುಗಿದ ಹಿಪ್ನೋಸಿಸ್ ತರಗತಿಗಳಲ್ಲಿ ರೆಗ್ರೆಷನ್ ಕೂಡಾ ಒಂದು ಪಾಠವಾಗಿತ್ತು. ಅಂಥ ಒಂದು ದಿನ, ನನ್ನ ಸಹಪಾಠಿ ನನ್ನನ್ನು ನಿಧಾನವಾಗಿ ಸಮ್ಮೋಹನ ಸ್ಥಿತಿಗೆ ಒಯ್ದು, "ನಿನ್ನ ಈಗಿನ ಜೀವನಕ್ಕೆ ಪ್ರಸ್ತುತವೆನಿಸುವ ನೆನಪುಗಳನ್ನು ತಂದುಕೋ. ನೆನಪುಗಳ ಸಾಮ್ರಾಜ್ಯದಲ್ಲಿ ನಿನಗೆ ಬೇಕಾದಲ್ಲಿಗೆ ಹೋಗು. ಸಮಯದ ಅವಕಾಶ ಮೀರುತ್ತಿದ್ದಂತೆ ನಾನು ಮತ್ತೆ ನಿನ್ನನ್ನು ವಾಸ್ತವಕ್ಕೆ ಕರೆತರಲು ನಿರ್ದೇಶಿಸುತ್ತೇನೆ. ಅಲ್ಲಿಯವರೆಗೆ ನಿನಗೆ ಬೇಕೆಂದಲ್ಲಿಗೆ ಹೋಗಿ ಬಾ" ಅಂದಳು.

ಮೊದಲು ಒಂದೆರಡು ಬೇರೆ ಬೇರೆ ತುಣುಕುಗಳನ್ನು ಸಿನಿಮಾ ಚಿತ್ರಗಳಂತೆ ಅಲ್ಲವಾದರೂ, ಗಾಢವಾದ ಭಾವನೆಗಳಿಂದ ಅನುಭವಿಸುತ್ತಾ ಯಾವುದೋ ಒಂದು ಕ್ಷಣದಲ್ಲಿ ಅದೇ ಉಸಿರುಗಟ್ಟಿಸುವ ಭಾವನೆಯುಂಟಾಯಿತು. ನನ್ನ ಕ್ರಿಟಿಕಲ್ ಮೈಂಡ್ ತಲೆಯೆತ್ತಿ, `ಇದ್ಯಾಕೆ ಹೀಗೆ?' ಅಂದಿತು, ಅಷ್ಟೇ. ಮರುಕ್ಷಣದಲ್ಲೇ ಯಾವುದೋ ಆದಿಮಾನವ ನಾನಾಗಿದ್ದೆ. ವಿಶಾಲ ಕೊಠಡಿಯಂಥ ಗುಹೆ. ಅದರ ಒಂದು ಬದಿಯಲ್ಲಿ ದೊಡ್ಡ ಬೆಂಕಿ. ನನ್ನ ಮೈಯೋ... ಬರೀ ರೋಮ-ಮಯ! ಯಾವುದೇ ಬಟ್ಟೆಗಳಿಲ್ಲ. ಬೆಂಕಿಕುಂಡದ ಒಂದು ಬದಿಗೆ ನನ್ನವಳು- ಇನ್ನೊಂದು ಆದಿಮಾನವಿ. ಅವಳಿಗೂ ಯಾವುದೇ ಬಟ್ಟೆಗಳಿಲ್ಲ. ಅಲ್ಲೇ ಎರಡು ಗುಂಡು-ಗಂಡುಗಳು ಅಂಬೆಗಾಲಿಡುತ್ತಾ ಓಡಾಡುತ್ತಿವೆ. ನೆಲವೆಲ್ಲ ಹೇಗ್ಹೇಗೋ ಕಿಚಪಿಚ ಇದೆ.

ಬೆಂಕಿಯಿಂದ ದೊಡ್ಡ ಎತ್ತಿನ ಕಾಲಿನಂಥದ್ದನ್ನು ನನ್ನವಳು ನನ್ನ ಕೈಗಿಡುತ್ತಾಳೆ. ಅಲ್ಲೇ ನಡುವಿನಲ್ಲಿದ್ದ ಬಂಡೆಯ ಮೇಲೆ ಕೂತು ಹಲ್ಲಿನಿಂದ ಕಬ್ಬನ್ನು ಸಿಗಿದು ತಿನ್ನುವಂತೆ ಅದನ್ನು ಸಿಗಿಯತೊಡಗುತ್ತೇನೆ ("ಹಾಗೆ ಸಿಗಿಯಬೇಕೆಂದು ನನಗೆ ಹೇಳಿಕೊಟ್ಟವರಾರು? ಅಯ್ಯೋ ನಾನು ಶಾಕಾಹಾರಿ, ಇದನ್ನು ಯಾಕೆ ಹೀಗೆ ತಿನ್ನುತ್ತಿದ್ದೇನೆ?" ನನ್ನ ಕ್ರಿಟಿಕಲ್ ಮೈಂಡ್ ಟೀಕಿಸುತ್ತಿದೆ). ಅವಳೂ ಇನ್ನೊಂದು ಕಾಲು-ಮಾಂಸವನ್ನು ತೆಗೆದುಕೊಂಡು ಮಕ್ಕಳನ್ನು ಕರೆಯುತ್ತಿದ್ದಾಳೆ (ನಾವೀಗ ಬೆಕ್ಕನ್ನೋ ನಾಯಿಯನ್ನೋ ಕರೆಯುವಂತೆ). ಅಷ್ಟರಲ್ಲಿ ಭೂಮಿ ನಡುಗಿ, ಗುಹೆಯ ಮೇಲ್ಛಾವಣಿ ನಮ್ಮೆಲ್ಲರ ಮೇಲೆ ಕುಸಿಯುತ್ತದೆ. ಮತ್ತೆ ಯಾವತ್ತಿನ ಕನಸಿನಂತೆ ಉಸಿರಿಗಾಗಿ ಪರದಾಡುತ್ತೇನೆ, ಗಾಳಿಗಾಗಿ ಹುಡುಕಾಡುತ್ತೇನೆ. ನನ್ನ ಈ ಗೊಂದಲ ಕಂಡು ನನ್ನ ಸಹಪಾಠಿ ನಿಧಾನವಾಗಿ ನನ್ನನ್ನು ವಾಸ್ತವಕ್ಕೆ ಕರೆತರುತ್ತಾಳೆ. ನಾವಿದ್ದ ಕೋಣೆಯ ಗಾಳಿ ಹೊಸತೆಂಬಂತೆ ಭಾಸವಾಗುತ್ತದೆ ನನಗೆ. ಇವಿಷ್ಟೂ ನಡೆದದ್ದು ಒಟ್ಟು ಏಳು ನಿಮಿಷಗಳ ಅವಧಿಯಲ್ಲಿ. ಕಾಕತಾಳೀಯವೋ ಎಂಬಂತೆ, ಆಮೇಲೆ ನನಗೆ ಅಂಥ ಕನಸು ಇಂದಿನವರೆಗೆ ಬಿದ್ದಿಲ್ಲ!!

ಈಗ ಮನೋವ್ಯಥೆಯ ವಿಚಾರಕ್ಕೆ ಬಂದರೆ, ಇಲ್ಲಿ ಹೇಳಿದ ಎರಡರಲ್ಲಿ ಯಾವುದೇ ಒಂದು ಕಾರಣಕ್ಕೆ ವ್ಯಕ್ತಿಗೆ ಮನೋವ್ಯಥೆ ಉಂಟಾಗಬಹುದು. ಪದೇ ಪದೇ ಬೀಳುವ ಕನಸೂ ಮನೋವ್ಯಥೆಗೆ ಕಾರಣವಾಗಬಹುದು. ನೀರಿನ ಬಗ್ಗೆ ತೀರದ ಕುತೂಹಲ, ಆಸಕ್ತಿ ಹೆಚ್ಚಾಗಿ, ಜೀವನ ಸುಗಮವಾಗದಷ್ಟೂ ತೀವ್ರವಾಗಿ, ತೊಂದರೆಯಾಗಬಹುದು. ಅಥವಾ ಬೇರಿನ್ಯಾವುದೇ ಕಾರಣಕ್ಕೂ ಮನೋವ್ಯಥೆ- ಅಥವಾ ಸುಗಮ ಜೀವನಕ್ಕೆ ತೊಂದರೆ- ಉಂಟಾಗಬಹುದು. ವ್ಯಕ್ತಿ ಸಮ್ಮೋಹನ ಚಿಕಿತ್ಸೆ ಬಯಸಿ ಬಂದಾಗ ಮೊದಲು ಸರಳ ಮಾತುಕತೆಯಾಡಿ ಬಂದ ಉದ್ದೇಶ, ಕಾಡುವ ವಿಷಯಗಳನ್ನು ತಿಳಿದುಕೊಂಡೇ ಸಮ್ಮೋಹಿತ ಸ್ಥಿತಿಗೆ ಚಿಕಿತ್ಸಕ ಕರೆದೊಯ್ಯುತ್ತಾರೆ. ಅಲ್ಲಿ ಸರಿಯಾದ ನಿರ್ದೇಶನಗಳನ್ನು ಕೊಡುತ್ತಾ ನೆನಪಿನ ತುಣುಕನ್ನು ಆಳದಿಂದ ಆರಿಸಿ ತರಲು ಆದೇಶಿಸುತ್ತಾರೆ. ಅದರ ಜೊತೆಗೆ ಸಂದರ್ಭಕ್ಕೆ ಸರಿಯಾಗಿ ಇತರ ಹಿನ್ನೆಲೆ, ಮುನ್ನೆಲೆಗಳನ್ನು ಪರೀಕ್ಷಿಸಲಾಗುತ್ತದೆ. ಬಳಿಕ ವ್ಯಕ್ತಿಯನ್ನು ಸಮ್ಮೋಹನದಿಂದ ಎಚ್ಚರಿಸಿ ವಾಸ್ತವಕ್ಕೆ ಕರೆತಂದು, ಆ ಎಲ್ಲ ನೆನಪಿನ ತುಣುಕುಗಳು ಈಗಿನ ಜೀವನಕ್ಕೆ ಹೇಗೆ ಪ್ರಸ್ತುತವೆಂಬುದನ್ನು ವಿಶ್ಲೇಷಿಸಲಾಗುತ್ತದೆ. ಚಿಕಿತ್ಸಕನ ನಿರ್ದೇಶನದಲ್ಲಿ, ಕಣ್ಗಾವಲಿನಲ್ಲಿ, ವ್ಯಕ್ತಿ ತನ್ನ ಹಳೆಯ ನೆನಪುಗಳನ್ನು ಕೆದಕಿ ಅಲ್ಲಿಂದ ಒಂದಿಷ್ಟು ರಾಡಿಯನ್ನು ಜಾಗೃತ ಪ್ರಜ್ಞೆಯ ಮೂಲಕ ಹೊರಹಾಕಿ ಒಳಗಿನ ನೀರನ್ನು ಸ್ವಲ್ಪ ತಿಳಿಗೊಳಿಸಿಕೊಳ್ಳಬಹುದು. ಈ ಮೂಲಕ ಕಾಡುವ ವ್ಯಥೆ ದೂರಾಗುತ್ತದೆ.

ಶುಭದಾ, ರಾಜೇಂದ್ರ ಮತ್ತು ಓದುಗರೇ, ನಿಮ್ಮ ಸಂಶಯ, ಸಂದೇಹ ಇನ್ನೂ ಬಗೆಹರಿಯಲಿಲ್ಲವಾದರೆ, ಇನ್ನಷ್ಟು ವಿವರಣೆ, ಉದಾಹರಣೆಗಳನ್ನು ಕೊಡೋಣ. ನೀವು ಕೇಳಬೇಕು, ಅಷ್ಟೇ.

Monday, 28 April 2008

ನಮ್ಮ-ನಿಮ್ಮೊಳಗೆ-೦೨

ಸಂದೇಹ-೦೧: ಫೋನಿನಲ್ಲಿ, ಗೆಳತಿಯೊಬ್ಬಳಿಂದ:
"ರೆಗ್ರೆಷನ್ನಿಗೆ ಒಳಗಾದ ವ್ಯಕ್ತಿಗೆ ಹಿಂದಿನ ಯಾವುದೋ ಜನ್ಮದ ತನ್ನ ಬಂಧುವಿನ (ಮಗುವಿನ, ಪತಿ/ಪತ್ನಿಯ) ಸ್ಮೃತಿಯಿಂದ ಈ ಜನ್ಮದಲ್ಲೂ ಆ ವ್ಯಕ್ತಿಯ ಮೇಲೆ (ಆ ವ್ಯಕ್ತಿ ಬೇರೆ ಯಾರದೋ ಮನೆಯಲ್ಲಿ, ಬೇರೊಂದು ಬಂಧನದಲ್ಲಿ ಈಗ ಹುಟ್ಟಿದ್ದರೂ) ಮಮಕಾರ, ಪ್ರೀತಿ ಬರಲಾರದೆ? ಬಂದರೆ ಅದು ಸರಿಯೆ?"

ಪ್ರತಿಕ್ರಿಯೆ: ಯಾವುದೋ ಜನ್ಮದ ಬಂಧನ ಈ ಜನ್ಮದಲ್ಲಿ ನೆನಪಾಗಿ ಅದನ್ನರಸಿ ಹೋಗಿ ಈ ಜನ್ಮದಲ್ಲೂ ಒಂದಾಗುವ ಕಥೆಗಳು ನಮ್ಮಲ್ಲಿ ಬಳಕೆಯಲ್ಲಿವೆ. ಹಾಗಂತ ಅದು ಎಲ್ಲ ಸಂದರ್ಭಗಳಲ್ಲೂ ಸರಿ ಅಂತಲ್ಲ. ವ್ಯಕ್ತಿಗಳಿಬ್ಬರೂ ಈ ಜನ್ಮದಲ್ಲಿ ಬೇರೆ ಬಾಂಧವ್ಯದಲ್ಲಿ ಇಲ್ಲದಿದ್ದಾಗ ಅದು ಸುಸೂತ್ರವಾಗಿ ನಡೆಯಬಹುದು, ಸರಿಯೂ ಆಗಬಹುದು. ಆದರೆ ಇಬ್ಬರಿಗೂ ಪ್ರಸ್ತುತ ಜನ್ಮದ ಬೇರೆ ಬಾಂಧವ್ಯಗಳಿದ್ದರೆ ಆಗ ಅದು ಸರಿಯಾಗಲಾರದು. ಇನ್ನು ಕಾಲ್ಪನಿಕ ಕಥೆಗಳಲ್ಲಿ ಇದಕ್ಕೆ ಬೇರೆ ಬೇರೆ ಆಯಾಮಗಳು ದೊರಕಿವೆ, ಅದನ್ನು ಇಲ್ಲಿ ಚರ್ಚಿಸುವುದಿಲ್ಲ. ಅದು ಕಲ್ಪನೆ-ಸತ್ಯಗಳ ಮಿಶ್ರಣ; ಅದೇ ಪೂರ್ಣ ಸತ್ಯ ಅಲ್ಲವಲ್ಲ!

ವ್ಯಕ್ತಿ ರೆಗ್ರೆಷನ್ನಿಗೆ ಒಳಗಾದ ಸಂದರ್ಭವೂ ಪ್ರಸ್ತುತವೆನಿಸುತ್ತದೆ. ಯಾವುದೋ ತೊಂದರೆಗೆ ಉತ್ತರ ಹುಡುಕುತ್ತಾ ಸಮ್ಮೋಹನದಲ್ಲಿ ಪೂರ್ವಸ್ಮೃತಿಯನ್ನು ಅರಸಿದರೆ, ಆಗ ಅಂಥ ಸ್ಮೃತಿಯಲ್ಲಿ ಯಾವುದೋ ಒಂದು ಚಿಕಿತ್ಸಕ ಗುಣವಿದ್ದೇ ಇರುತ್ತದೆ. ಅಂಥ ಸ್ಮೃತಿಯನ್ನು ಚಿಕಿತ್ಸಕವಾಗಿ "ಕಾಣಿಸುವುದು" ಚಿಕಿತ್ಸಕನ ಕೆಲಸ; ಧರ್ಮ. ಇದರ ಹೊರತಾಗಿಯೂ ಸಮ್ಮೋಹಿತ ವ್ಯಕ್ತಿಗೆ ಹಿಪ್ನಾಟಿಕ್ ಟ್ರಾನ್ಸ್ ಬಿಟ್ಟು ಮಾಮೂಲು ಸ್ಥಿತಿಗೆ ಬಂದಾಗಲೂ ಸ್ಮೃತಿಯ ಬಂಧನವೇ ಕಾಡುತ್ತಿದ್ದರೆ ಮತ್ತು ಆ ವ್ಯಕ್ತಿ ಸಾಮಾಜಿಕವಾಗಿ ಈ ಹೊಸ ಬಂಧನಕ್ಕೆ ಒಳಗಾಗುವ ಸ್ಥಿತಿಯಲ್ಲಿರದಿದ್ದರೆ, ಅದಕ್ಕೆ ಸೂಕ್ತ ಸಲಹೆಗಳನ್ನು ಕೊಟ್ಟು ಸರಿಯಾದ ದೃಷ್ಟಿಕೋನದೆಡೆ ನಡೆಸುವುದು ಚಿಕಿತ್ಸಕನ ಜವಾಬ್ದಾರಿ. ಆದರೆ, ಇಂಥ ಪೀಕಲಾಟದ ಸಂದರ್ಭಗಳು ಎದುರಾದದ್ದನ್ನು ನಾನು ಇದುವರೆಗೆ ಓದಿಲ್ಲ, ನನ್ನ ತಿಳುವಳಿಕೆಗೆ ಬಂದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಆ ಇಬ್ಬರೂ ವ್ಯಕ್ತಿಗಳು ಈ ಜನ್ಮದಲ್ಲೂ ಬಂಧುಗಳಾಗಿಯೇ ಇದ್ದಿರುವ ಅಥವಾ ಮುಂದೆ ಬಂಧುಗಳಾಗುವ ಸಾಧ್ಯತೆ ಇದ್ದುದೇ ಹೆಚ್ಚು.

ಇನ್ನು, ಯಾರಿಗಾದರೂ ಆಕಸ್ಮಿಕವಾಗಿ ಕನಸಿನಲ್ಲಿ ಅಂಥ ಪೂರ್ವಸ್ಮೃತಿ ನೆನಪಿಗೆ ಬಂದು ಹಿಂದಿನ ಜನ್ಮದ ವ್ಯಕ್ತಿಯೆಡೆ ಬಾಂಧವ್ಯ ಉಂಟಾದರೆ ಅದಕ್ಕೆ ಅತೀಂದ್ರಿಯ ನೆಲೆಯಲ್ಲಿ ಪ್ರಸ್ತುತ ಬದುಕಿಗೆ ಹೊಂದುವಂತೆ ಯಾವುದೋ ಅಗತ್ಯತೆಯ ಯಾ ಕಲಿಕೆಯ ಕಾರಣವಿದ್ದೀತು. ಕಾರ್ಯ-ಕಾರಣ ಸಂಬಂಧವಿಲ್ಲದೆ ಅತೀಂದ್ರಿಯ ನೆಲೆಯಲ್ಲಿ ಯಾವುದೂ ನಡೆಯಲಾರದು ಅನ್ನುವುದು ನನ್ನ ನಂಬಿಕೆ. ಇವಲ್ಲದೆ, ಸುಮ್ಮ-ಸುಮ್ಮನೇ ಯಾರಿಗೋ ಯಾರ ಮೇಲೋ ಮಮಕಾರ ಉಂಟಾಗದು. ಅವೆಲ್ಲಕ್ಕೂ ಯಾವುದೋ ಒಂದು ತಿಳಿಯದ ಕಾರಣವಿದ್ದೇ ಇರುತ್ತದೆ. ಆ ಕಾರಣದ ಹುಡುಕಾಟವೇ ಕಲಿಕೆಯ, ತಿಳಿವಿನ ಆಕಾಂಕ್ಷೆಯ ಮೂಲ ಅನ್ನುವುದೂ ನನ್ನ ನಂಬಿಕೆ.

ರಿಗ್ರೆಷನ್ ಸಂದರ್ಭದಲ್ಲಿ ಚಿಕಿತ್ಸಕನ ಜವಾಬ್ದಾರಿ ಹೆಚ್ಚು. ರಿಗ್ರೆಷನ್ನಿಗೆ ಒಳಗಾದ ವ್ಯಕ್ತಿ ಆ ಸಂದರ್ಭದಲ್ಲಿ ಮಾನಸಿಕ ತುಮುಲಗಳಿಗೆ ಒಡ್ಡಿಕೊಂಡಿರುತ್ತಾರೆ. ಆಯಾಯ ನೆನಪಿನ (ಬಾಲ್ಯದ ಅಥವಾ ಪೂರ್ವ ಜನ್ಮದ) ಅನುಭವಗಳನ್ನು ಈಗಲೇ ಎಂಬಂತೆ `ಅನುಭವಿಸು'ತ್ತಿರುತ್ತಾರೆ. ಅದನ್ನು ಸರಿಯಾಗಿ ತಿಳಿದು ನಾಜೂಕುತನದಿಂದ ನಿಭಾಯಿಸುವ ಚಾಕಚಕ್ಯತೆ ಚಿಕಿತ್ಸಕರಿಗಿರಬೇಕು. ಹಾಗಿಲ್ಲದಿದ್ದಲ್ಲಿ, ರೆಗ್ರೆಷನ್ ಥೆರಪಿಯಿಂದ ಉಪಯೋಗಕ್ಕಿಂತಲೂ ತೊಂದರೆಗಳೇ ಆದಾವು.


ಸಂದೇಹ-೦೨: ವೀಣಾ ಶಿವಣ್ಣ ಅವರಿಂದ:
"ಬಹಳಷ್ಟು ಸಾರಿ ನನ್ನ ಅನುಭವಕ್ಕೆ ಬಂದಂತೆ, ಕೆಲವೊಂದು ಸಂದರ್ಭಗಳಲ್ಲಿ, ಕೆಲವು ಘಟನೆಗಳು ನಡೆದಾಗ, `ಇದು ಹಿಂದೊಮ್ಮೆ ಎಲ್ಲಿಯೋ ಹೀಗೆಯೇ ನಡೆದಿತ್ತು' ಅನ್ನುವ ಗಾಢ ಭಾವನೆ ಬರುತ್ತದೆ. ಅದರ ಬಗ್ಗೆ ನಾನು ಕನಸು ಕಂಡಿರಬಹುದು, ಗೊತ್ತಿಲ್ಲ. ಆದರೆ, ಎಲ್ಲಿ, ಯಾವಾಗ ಆ ಘಟನೆ ನಡೆದಿತ್ತು ಅನ್ನುವುದನ್ನು ನೆನಪಿಸಿಕೊಳ್ಳಲಾರೆ. ಇದಕ್ಕೆ ಏನನ್ನುತ್ತಾರೆ? ನನಗೊಬ್ಬಳಿಗೇ ಹೀಗೆ ಆಗುತ್ತಿದೆಯೆ?"

ಪ್ರತಿಕ್ರಿಯೆ: ಇಂಥ ಪ್ರಶ್ನೆಗಳನ್ನು ಬಹಳಷ್ಟು ಸಾರಿ ಕೇಳಿದ್ದೇನೆ, ನಾನೂ ಅನುಭವಿಸಿದ್ದೇನೆ. ಎಲ್ಲಿಯೋ ಪಯಣಿಸಿದಾಗ, "ಇಲ್ಲಿ ಬಂದಿದ್ದೆ" ಅನ್ನುವ ಭಾವನೆ; ಯಾರೊಡನೆಯೋ ಮಾತಾಡುವಾಗ (ಅವರೊಂದಿಗೆ ಮೊದಲ ಭೇಟಿಯೇ ಆಗಿರಲಿ), "ಇವೇ ಮಾತುಗಳನ್ನು, ಹೀಗೇ, ಹಿಂದೊಮ್ಮೆ ಮಾತಾಡಿದ್ದೆವು, ಇದೇ ವ್ಯಕ್ತಿಯೊಡನೆ. ಈಗ ಅವರ ಉತ್ತರ ಇಂಥದ್ದೇ ಆಗಿರುತ್ತದೆ" ಅನ್ನುವ ಯೋಚನೆ; ಯಾವ-ಯಾವುದೋ ವ್ಯಕ್ತಿಗಳು- ಮೊದಲು ಕಂಡಿರದಿದ್ದರೂ- ಭೇಟಿಯಾದಾಗ ತೀರಾ ಚಿರಪರಿಚಿತರು ಅನ್ನಿಸುವ ಭಾವನೆ-- ಇವೆಲ್ಲವನ್ನೂ ಇಂಗ್ಲಿಷಿನಲ್ಲಿ "ದೇ-ಜ-ವೂ" ಅನ್ನುತ್ತಾರೆ. ಇದು ಮಾಮೂಲು ಅನ್ನಬಹುದಾದಷ್ಟು ಮಾಮೂಲು "ಫಿನಾಮೆನಾ". ನಮಗಿದು ಪೂರ್ವಜನ್ಮದ ಸ್ಮೃತಿಯಿರಬಹುದು (ಸ್ಥಳದ, ವ್ಯಕ್ತಿಯ ಪರಿಚಿತ ಭಾವನೆ), ಅಥವಾ ಕನಸಲ್ಲೂ ಇರಬಹುದು (ಮಾತುಕತೆಗಳ ಸಂದರ್ಭಗಳು), ಅಥವಾ ಎರಡೂ.

ಕುತೂಹಲ ಜಾಸ್ತಿಯಿದ್ದರೆ, ಕಂಡುಹಿಡಿಯ"ಬಹುದು"... ಎಲ್ಲ ಕನಸುಗಳ, ನೆನಪುಗಳ ಟಿಪ್ಪಣಿ ಬರೆಬರೆದು ಇಡುತ್ತಾ ಹೋದರೆ ಅಲ್ಲೊಂದು ಇಲ್ಲೊಂದು ಕೊಂಡಿಗಳು ಸಿಗುತ್ತವೆ. ಸಣ್ಣ-ಸಣ್ಣ ಕೊಂಡಿಗಳನ್ನು ಕೂಡಿಸಿ ಒಂದು ಅಂದಾಜು ಚಿತ್ರಣ ಪಡೆಯಬಹುದು. ಅಷ್ಟೊಂದು ಕುತೂಹಲ ನನಗಿನ್ನೂ ಹುಟ್ಟಿಲ್ಲ, ನಾನು ಮಾಡುತ್ತಿಲ್ಲ; ಅಷ್ಟೇ.


ಸಂದೇಹ-೦೩: ನಾವಡರಿಂದ:
"ಡಿಪ್ರೆಶನ್ ಅನ್ನೋದು ಮನಸ್ಸಿನ ಯಾವ ಸ್ಥಿತಿ?"

ಪ್ರತಿಕ್ರಿಯೆ: ಡಿಪ್ರೆಶನ್ ಅನ್ನುವುದನ್ನು ಮಾನಸಿಕ ತಜ್ಞರು (ಸೈಕಾಲಜಿಸ್ಟ್, ಸೈಕಿಯಾಟ್ರಿಸ್ಟ್, ಸೈಕೋಥೆರಪಿಸ್ಟ್), ಅಲೋಪಥಿ ವೈದ್ಯರು, ಮತ್ತು ಸಮ್ಮೋಹನ-ಚಿಕಿತ್ಸಕರು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಾರೆ. ಮಾನಸಿಕ ತಜ್ಞರ ಪ್ರಕಾರ ಅದು ಸೈಕೋ-ನ್ಯೂರಾಟಿಕ್ ಅಥವಾ ಸೈಕೋ-ಸೊಮ್ಯಾಟಿಕ್ (ಮನೋ-ದೈಹಿಕ) ಖಾಯಿಲೆ. ವೈದ್ಯರ ಪ್ರಕಾರ ಅದು ಮಾನಸಿಕ (ಸೈಕಲಾಜಿಕಲ್) ಖಾಯಿಲೆ. ಇವರಿಬ್ಬರೂ ಈ ಖಾಯಿಲೆಗಾಗಿ ದೀರ್ಘಕಾಲಿಕ ನಿವಾರಣಾತಂತ್ರಗಳನ್ನು, ಮದ್ದನ್ನು ಸೂಚಿಸುತ್ತಾರೆ. ಅವರ ಪ್ರಕಾರ ಇದು ಸಂಪೂರ್ಣ ಗುಣವಾಗದ, ಪದೇ ಪದೇ ಬರಬಹುದಾದ, ಗುಳಿಗೆರೂಪದಲ್ಲಿ ಮದ್ದು ಬೇಕೇಬೇಕಾದ "ಖಾಯಿಲೆ". ಹಿಪ್ನಾಟಿಕ್ ಥೆರಪಿಸ್ಟ್ ಪ್ರಕಾರ ಅದೊಂದು ಸ್ಥಿತಿ; ಹಲವಾರು ತೊಂದರೆಗಳ ಮೊತ್ತದಿಂದ ಉಂಟಾಗುವ ಸ್ಥಿತಿ; ಪರಿಹರಿಸಲ್ಪಡುವ, ಬದಲಾವಣೆಗೆ ಒಗ್ಗುವ ಸ್ಥಿತಿ.

ಸಾಮಾನ್ಯವಾಗಿ ನಮ್ಮ ಮನಸ್ಸು ಒತ್ತಡಕ್ಕೆ ಸಿಲುಕಿದಾಗ ಅದರಿಂದ ಹೊರಬರುವ ದಾರಿಗಳನ್ನು ತಾನೇ ಹುಡುಕಿಕೊಳ್ಳುತ್ತದೆ. ಕೆಲವೊಮ್ಮೆ, ಒತ್ತಡ ಅತಿಯಾದಾಗ ಅಥವಾ ಒತ್ತಡದ ಪರಿಸ್ಥಿತಿಯಿಂದ ಹೊರಬರುವ ದಾರಿ ಕಾಣದಾದಾಗ ಅಥವಾ ಒತ್ತಡ ತನಗೆ ತಾನೇ ತಂದುಕೊಂಡದ್ದಾದಾಗ (ಸೆಲ್ಫ್ ಇಂಪೋಸ್ಡ್ ಸ್ಟ್ರೆಸ್- "ಇತರರ ಬಗ್ಗೆ ತಾವೇ ಜವಾಬ್ದಾರರು, ಮನೆಯವರೆಲ್ಲರ ಯಾ ಸಹವರ್ತಿಗಳ ನಡವಳಿಕೆಗಳಿಗೆ, ಹಿತಾಸಕ್ತಿಗೆ ತಾವೊಬ್ಬರೇ ಹೆಗಲಾಸರೆ, ಮಾನದಂಡ, ಯಾ ಧರ್ಮದರ್ಶಿ" ಅನ್ನುವಂಥ ಮನೋಧರ್ಮ ಇದ್ದಾಗ) ಮನಸ್ಸು ಮುದುಡುತ್ತದೆ (ಇವು ಕೆಲವು ಉದಾಹರಣೆ ಮಾತ್ರ). ಅಂಥ ಮನಸ್ಸು ಕಾಲಕ್ರಮೇಣ ಎಲ್ಲದರಲ್ಲೂ ಕೆಡುಕನ್ನು, ಹುಳುಕನ್ನು, ಕತ್ತಲನ್ನು ಕಾಣಲು ತೊಡಗುತ್ತದೆ. ಎಲ್ಲವೂ ಅರ್ಥಹೀನವೆನಿಸಬಹುದು. ಜೀವನ ನೀರಸವೆನಿಸಬಹುದು. ಅಂಥ ಮನಸ್ಥಿತಿಯನ್ನು ಸಾಮಾನ್ಯವಾಗಿ ಡಿಪ್ರೆಶನ್ ಅನ್ನುತ್ತಾರೆ. ಈ ನೀರಸ ಮನಸ್ಥಿತಿ ಹೆಚ್ಚಿದಂತೆ, ಆಶಾಭಾವನೆ ತಗ್ಗಿದಂತೆ, ಜೀವನದ ಅರ್ಥವ್ಯಾಪ್ತಿ ಕುಗ್ಗಿದಂತೆ ಆತ್ಮಹತ್ಯೆಯಂಥ ನೇತ್ಯಾತ್ಮಕ ತುಡಿತ (ನೆಗೆಟಿವ್ ಇಂಪಲ್ಸ್) ಹುಟ್ಟಬಹುದು, ಹೆಚ್ಚಬಹುದು. ಹೀಗೆ ವ್ಯಕ್ತಿ ಡಿಪ್ರೆಶನ್ನಿಗೆ ಒಳಗಾದಾಗ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಗಳೂ ಸ್ವಲ್ಪ ಏರುಪೇರಾಗಿ ಗೊಂದಲ ಏರ್ಪಡುತ್ತದೆ. ಅದಕ್ಕಾಗಿಯೇ ವಿಧವಿಧವಾದ ಗುಳಿಗೆ-ಮಾತ್ರೆಗಳು ಲಭ್ಯವಿವೆ. ಆದರೆ ಅವೆಲ್ಲವೂ ವ್ಯಕ್ತಿಯನ್ನು ತನ್ನ "ಹಿಡಿತ"ದೊಳಗೆ ಇರಿಸಿಕೊಳ್ಳುತ್ತವೆ- ಅರ್ಥಾತ್ "ಅಡಿಕ್ಟಿವ್" ಆಗಿವೆ.

ಮಾತ್ರೆ-ಗುಳಿಗೆಗಳ ಬದಲಾಗಿ, ಅಂಥ ಸಂದರ್ಭಗಳಲ್ಲಿ ಸಹವರ್ತಿಗಳ ಪ್ರೀತಿ, ವಿಶ್ವಾಸಪೂರ್ಣ ನಡವಳಿಕೆ, ಉತ್ಸಾಹಭರಿತ ಸಾಹಚರ್ಯ, ಒಡನಾಟ, ಅತೀ ಅವಶ್ಯಕ. ಬಹಳಷ್ಟು ಆತ್ಮಹತ್ಯೆಗಳಿಗೆ ಇಂಥ ನೇತ್ಯಾತ್ಮಕ ಮನೋಸ್ಥಿತಿಯೇ ಕಾರಣವಾಗಿರುತ್ತದೆ. ನಿಮಗೆ ಈ ರೀತಿಯ ಮನಸ್ಥಿತಿಯಲ್ಲಿರುವ ಯಾರದ್ದಾದರೂ ಪರಿಚಯವಿದ್ದರೆ ಅವರೊಂದಿಗೆ ಸ್ನೇಹ-ಪ್ರೀತಿಯಿಂದ ನಡೆದುಕೊಳ್ಳಿ. ಜೀವನ ದುರಂತಮಯವಲ್ಲ ಎಂದು ತಿಳುವಳಿಕೆ ಮೂಡಿಸಲು ಪ್ರಯತ್ನಪಡಿ. ಅವರ ತೊಂದರೆ-ಒತ್ತಡದ ಮೂಲ ತಿಳಿಯಲು ಪ್ರಯತ್ನಿಸಿ, ಅದಕ್ಕೆ ಪರಿಹಾರ ಹುಡುಕಲು ಸಹಕರಿಸಿ. ಒಂದು ಘಟನೆಗೆ, ಪರಿಸ್ಥಿತಿಗೆ, ವಾತಾವರಣಕ್ಕೆ ಅನೇಕ ಮುಖಗಳಿವೆ ಅನ್ನುವುದನ್ನು ಮನವರಿಕೆ ಮಾಡಿಸಿ. ನೇತ್ಯಾತ್ಮಕವನ್ನು ಇತ್ಯಾತ್ಮಕ (ಪೊಸಿಟಿವ್ ಥಿಂಕಿಂಗ್) ಆಗಿಸಲು ಪ್ರಯತ್ನಿಸಿ. ಅವರನ್ನು ಸದಾ ಹಿತವಾದ ಚಟುವಟಿಕೆಯಲ್ಲಿರಿಸಿ, ಒಂಟಿಯಾಗಿರಲು ಬಿಡಬೇಡಿ.

Wednesday, 23 April 2008

ನಮ್ಮ-ನಿಮ್ಮೊಳಗೆ... ೦೧

ಓದುಗರೇ,
ಈ ಅಂಗಳ ನನ್ನ ಅಕ್ಷರಗಳ ಬಿತ್ತರಕ್ಕೆ ಸೀಮಿತವಾಗಿ ನಿಂತಿತ್ತು ಇಷ್ಟು ದಿನ. ಈಗ ಇದನ್ನು ಇನ್ನೊಂದು ಹೆಜ್ಜೆ ಮುಂದಕ್ಕೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇನೆ, ಅದಕ್ಕೆ ನಿಮ್ಮೆಲ್ಲರ ಸಹಕಾರ, ಉತ್ಸಾಹ ಮುಖ್ಯ.

ಇದುವರೆಗೆ ಹಲವಾರು ಕ್ಷೇತ್ರಗಳಲ್ಲಿ ಕಲಿಕೆಯ ಉದ್ದೇಶದಿಂದ ತೊಡಗಿಸಿಕೊಂಡಿದ್ದೆ. ಅಲ್ಲೆಲ್ಲ ಸಿಕ್ಕ ಅಲ್ಪ-ಸ್ವಲ್ಪ ತಿಳುವಳಿಕೆಗಳನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುವ ಯೋಚನೆ-ಯೋಜನೆ ಇದು.

Psychology, Hypnosis/ Hypnotherapy, Regression/ Regression to past life as therapy, General Physical Fitness, Nutrition- ಈ ವಿಷಯಗಳ ಬಗ್ಗೆ ಪ್ರಶ್ನೋತ್ತರದ ರೀತಿಯಲ್ಲಿ ಮಾಹಿತಿ-ಸಂವಹನ ಇಲ್ಲಿ ನಡೆಯಲಿ. ನಿಮ್ಮ ಪ್ರಶ್ನೆಗಳಿಗೆ, ಸಂಬಂಧಪಟ್ಟ ಮಾಹಿತಿಗಳಿಗೆ ಈ ಅಂಗಳ ತೆರೆದುಕೊಳ್ಳುತ್ತಿದೆ.

ಬನ್ನಿ, ಓಡಾಡಿ, ಓದ್ಯಾಡಿ...

ಪ್ರತಿಕ್ರಿಯೆ-೦೧:

ಸುನಾಥರ ಸಂದೇಹ:
Regression ಬಗೆಗೆ ನನಗೊಂದು ಮೂಲಭೂತ ಸಂದೇಹವಿದೆ. Regression ಆದಾಗ ಎರಡು ಸಾಧ್ಯತೆಗಳು ನನಗೆ ಕಾಣುತ್ತವೆ:
೧ನೆಯ ಸಾಧ್ಯತೆ: Regressionಗೆ ಒಳಗಾದ ವ್ಯಕ್ತಿ ತನ್ನ ಪೂರ್ವಜನ್ಮದ ಘಟನೆಗಳನ್ನು ನೆನಪಿಸಿಕೊಳ್ಳುವನು.
೨ನೆಯ ಸಾಧ್ಯತೆ: ಗತಕಾಲದ ಎಲ್ಲ ಘಟನೆಗಳು ಅಭೌತಿಕ spaceನಲ್ಲಿ ತೇಲುತ್ತಿದ್ದು, regression ಆದ ವ್ಯಕ್ತಿ,ಈ ಘಟನೆಗಳಿಗೆ tune ಆದರೆ, ಅವು ತನ್ನವೇ ಅನುಭವ ಎಂದು ಭಾವಿಸಬಹುದು.

ಆದುದರಿಂದ, ಯಾವುದು ನಿಜವಿರಬಹುದೆನ್ನುವದರ ಬಗೆಗೆ verification ಅಥವಾ validation ಮಾಡಲು ಸಾಧ್ಯವೆ? ಆ ತರಹ ಮಾಡಲಾಗಿದೆಯೆ?

ಪ್ರತಿಕ್ರಿಯೆ:
ರೆಗ್ರೆಷನ್ ಅನ್ನುವ ಪದದ ಸಾಮಾನ್ಯ ಅರ್ಥ, ಸಮ್ಮೋಹನಕ್ಕೆ ಸಂಬಂಧಪಟ್ಟಂತೆ, "ಪೂರ್ವ ಸ್ಮೃತಿ" ಎಂದಷ್ಟೇ. ಅದು ಪೂರ್ವ ಜನ್ಮದ್ದಾಗಿರಲಿ, ಬಾಲ್ಯದ್ದಾಗಿರಲಿ, ಅಥವಾ ನಿನ್ನೆಯ ಸಂಜೆಯಷ್ಟೇ ತಿಂದ ವಿಶಿಷ್ಠ ತಿಂಡಿಯದ್ದಾಗಿರಲಿ- ಇವೆಲ್ಲವೂ ಪೂರ್ವ ಸ್ಮೃತಿಗಳೇ. ಇವನ್ನೆಲ್ಲ ನೆನಪಿಸಿಕೊಳ್ಳುವುದೂ ರೆಗ್ರೆಷನ್ ಎಂದೇ ಪರಿಗಣಿತ.

ನಮ್ಮ ಆಗಿಂದಾಗಿನ ನೆನಪುಗಳು ಸುಮಾರು ಇಪ್ಪತ್ನಾಲ್ಕು ಘಂಟೆಗಳವರೆಗೆ, ಅಥವಾ ನಾವು ಒಮ್ಮೆ ನಿದ್ರಿಸುವವರೆಗೆ ನಮ್ಮ ಜಾಗೃತಪ್ರಜ್ಞಾವಲಯದಲ್ಲಿ (`ಕಾನ್ಷಿಯಸ್ ಮೈಂಡ್'ನಲ್ಲಿ) ಇರುತ್ತವೆ. ನಿದ್ರಿಸಿದ ಹೊತ್ತಿಗೆ (ಅಥವಾ ಇಪ್ಪತ್ನಾಲ್ಕು ಘಂಟೆಗಳ ಬಳಿಕ) ಅವು ನಮ್ಮ ಕ್ರಿಟಿಕಲ್ ಮೈಂಡ್ ದಾಟಿಕೊಂಡು ಸುಪ್ತಮನಸ್ಸಿನ (ಸುಪ್ತಪ್ರಜ್ಞೆಯ, ಸಬ್-ಕಾನ್ಷಿಯಸ್ ಮೈಂಡಿನ) ಪದರಕ್ಕೆ ಸೇರುತ್ತವೆ. ನಮ್ಮೆಲ್ಲಾ ನೆನಪುಗಳು, ಪೂರ್ವ ಸ್ಮೃತಿಗಳು ಈ ಸುಪ್ತಪ್ರಜ್ಞೆಯ ಪದರಗಳಲ್ಲೇ ಹುದುಗಿರುತ್ತವೆ. ಇದರ ಆಳದ ಪದರಗಳನ್ನೇ ಅತೀಂದ್ರಿಯ ಪ್ರಜ್ಞೆ (ಸೂಪರ್ ಕಾನ್ಷಿಯಸ್) ಅನ್ನಬಹುದು. ಅತ್ಯಂತ ಹಿಂದಿನ ನೆನಪುಗಳು, ಪೂರ್ವಜನ್ಮದವೂ ಸಹ, ಇಲ್ಲೇ ಹುದುಗಿರುತ್ತವೆ ಅನ್ನುತ್ತಾರೆ ಡಾ. ವೈಸ್, ಡಾ. ನ್ಯೂಟನ್, ಓರ್ಮಂಡ್, ಗಿಲ್ ಬೋಯ್ನ್, ಮತ್ತಿತರರು. ಈ ತರ್ಕಗಳೇ, ಸುನಾಥ ಕಾಕಾ, ನಿಮ್ಮ ಮೊದಲ ಸಂದೇಹಕ್ಕೆ ಉತ್ತರ.

ಇನ್ನು ಎರಡನೇ ಸಂದೇಹದ ಬಗ್ಗೆ- ಖಚಿತವಾಗಿ ಯಾವುದೇ ಸಂಭವನೀಯ ಸಾಧ್ಯತೆಗಳು ನನಗೆ ಕಂಡಿಲ್ಲ. ನಾನು ಇದುವರೆಗೆ ಓದಿ ತಿಳಿದಂತೆ, ನಮ್ಮ ನಮ್ಮ ನೆನಪುಗಳು ನಮ್ಮವೇ.
ಆದರೆ.... ಒಬ್ಬ ವ್ಯಕ್ತಿ, ತನ್ನ ಪ್ರಜ್ಞಾವಲಯವನ್ನು ತುಂಬಾ ಸಶಕ್ತವಾಗಿಸಿಕೊಂಡು, ನಿರ್ಮಲವಾಗಿಸಿಕೊಂಡು, ಸಮ್ಮೋಹನ ಸ್ಥಿತಿಗೆ ಹೋದರೆ (ಋಷಿ-ಮುನಿಗಳ ಸಮಾಧಿ ಸ್ಥಿತಿ ಇದೇ), ಆಗ ಆ ವ್ಯಕ್ತಿಗೆ ವರ್ತಮಾನದೊಂದಿಗೆ ಭೂತ-ಭವಿಷ್ಯಗಳೂ ಅರಿವಿಗೆ ಬರುವ ಬಗ್ಗೆ ದಾಖಲೆಗಳಿವೆ. ನಮ್ಮ ವೇದಗಳು ಅಂಥ ಮಹಾತ್ಮರ ಕೊಡುಗೆ. ಪುರಾಣಗಳ ತುಂಬಾ ಅಂಥವರೇ ಇದ್ದಾರೆ. ಅಂದರೆ, ಸಮ್ಮೋಹಿತ ಸ್ಥಿತಿಯಲ್ಲಿ ಎಲ್ಲ ಭೌತಿಕ ನೆಲೆಗಳನ್ನೂ ಮೀರಿ, ಅಭೌತಿಕ ಮಟ್ಟದಲ್ಲಿ, "ಜಾಗತಿಕ ಪ್ರಜ್ಞಾವಲಯದಲ್ಲಿ" ಸಂಚರಿಸುವ ಆಂತರಿಕ ಶಕ್ತಿ ಪ್ರತಿಯೊಬ್ಬರಿಗೂ ಇದೆ. ಆಗ ಅವರು ಅಂಥ "ಕಾಣ್ಕೆ"ಗಳನ್ನು ತನ್ನ ಅನುಭವ ಅಂದುಕೊಳ್ಳಲಾರರು, ಅದು ನಿಜವಾಗಿಯೂ ಏನು ಅನ್ನುವ "ಅರಿವು" ಅವರಿಗಿರುತ್ತದೆ. ಅಂಥ ಶಕ್ತಿಯನ್ನು ಸ್ವಪ್ರಯತ್ನದಿಂದ, ಗುರು-ನಿರ್ದೇಶನದಿಂದ, ಅಧ್ಯಯನದಿಂದ, ಅರಿವಿನಿಂದ ಜಾಗೃತಗೊಳಿಸಿಕೊಳ್ಳಬಹುದು.

Tuesday, 15 April 2008

ಹಿಂದಿನ ಕಂತೆಗಳು- ಇಂದು ತೆರೆದಾಗ...೦೧

ಕೈಗೆತ್ತಿಕೊಂಡಿದ್ದ ಕಲಿಕೆಯನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿಕೊಂಡ ಈ ಘಳಿಗೆಯಲ್ಲಿ, ಹಳೆಯ ತರಗತಿಗಳ, ಪಾಠಗಳ ಸಂದರ್ಭದಲ್ಲಿ ಬರೆದಿದ್ದ ಲೇಖನಗಳನ್ನು ನೋಡುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಇದು.
೨೦೦೨-ರ ಸೆಪ್ಟೆಂಬರಿಂದ ಡಿಸೆಂಬರ್ ತನಕ ಡಿ'ಆನ್'ಝಾ ಕಾಲೇಜಿನಲ್ಲಿ ಕಲಿತ "ಇಂಗ್ಲಿಷ್-೧-ಎ" ತರಗತಿಯ ಒಂದು ಅಸೈನ್'ಮೆಂಟ್- "Quotations on Education". ಒಟ್ಟು ಹತ್ತು ಪುಟಗಳ ನನ್ನ ಸಂಗ್ರಹದಿಂದ ಎರಡು ತುಣುಕುಗಳು ನಿಮ್ಮೆಲ್ಲರ ಅವಗಾಹನೆಗೆ....

M. K. Gandhi – On Education

"The ordinary meaning of education is a knowledge of letters. To teach boys reading, writing and arithmetic is called primary education. A peasant earns his bread honestly. He has ordinary knowledge of the world. He knows fairly well how he should behave towards his parents, his wife, his children and his fellow-villagers. He understands and observes the rules of morality. But he cannot write his own name. What do you propose to do by giving him a knowledge of letters? Will you add an inch to his happiness? Do you wish to make him discontented with his cottage or his lot? And even if you want to do that, he will not need such an education. Carried away by the flood of Western thought, we came to the conclusion, without weighing pros and cons, that we should give this kind of education to the people. This education has produced vacant minds and manufactured servants for the Government. The products of our universities have become nincompoops."


Jiddu Krishnamurthy – On Education

"Now modern education is developing the intellect, offering more and more explanations of life, more and more theories, without the harmonious quality of affection. Therefore we have developed cunning minds to escape from conflict; hence we are satisfied with explanations that scientists and philosophers give us. The mind- the intellect- is satisfied with these innumerable explanations, but intelligence is not, for to understand there must be complete unity of mind and heart in action. Until you really approach all of life with your intelligence, instead of merely with your intellect, no system in the world will save man from the ceaseless toil for bread."

Thursday, 3 April 2008

ಕೃತ್ತಿಕಾಳ ಕಥೆ

ಕೃತ್ತಿಕಾ, ಹತ್ತು ವರ್ಷದ ಹುಡುಗಿ. ಆಡುವ ವಯಸ್ಸಿಗೆ ಕೀಮೋಥೆರಪಿ. ಅವಳ ನೋವಿಗೆ ಹೆಗಲಾಗಿರುವುದು "ಆಸ್ಥೆ"ಯೆಂಬ ಹೆಸರಲ್ಲಿ ಹೆಜ್ಜೆಯಿಡುತ್ತಿರುವ ಸಹೃದಯ ಗೆಳೆಯರ ಗುಂಪು.

ಇಲ್ಲಿ ನೋಡಿ, ಸಹಾಯ ಹಸ್ತ ನೀಡಿ:



ಹೆಚ್ಚಿನ ವಿವರ, ಇತರ ಮಾಹಿತಿಗಳಿಗಾಗಿ:

http://jointhehands.blogspot.com/

ಕೈಗೆ ಕೈ ಜೋಡಿಸಿ, ಹೆಗಲಿಗೆ ಹೆಗಲಿತ್ತು
ನೆರವಿನ ಅರ್ಥ ಹೆಚ್ಚಿಸೋಣ.