ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 12 November 2007

ಆತ್ಮ ಚಿಂತನ-೦೮

ಓದುಗರೇ, "ಆತ್ಮಚಿಂತನ-೦೪"ರಲ್ಲಿ ಚೀನಾದಲ್ಲಿ ಚಾಲ್ತಿಯಲ್ಲಿರುವ ಪ್ರೇತಾತ್ಮಗಳ ಮದುವೆಯ ಬಗ್ಗೆ ಬರೆದಿದ್ದೆ. ಅದರಲ್ಲಿ ಹೆಚ್ಚಾಗಿ, ಮದುವೆಯಾಗದೇ ತೀರಿಕೊಂಡ ಮಗಳ ಪ್ರೇತಕ್ಕೆ ತಂದೆ-ತಾಯಿ ಗಂಡು ಹುಡುಕಿ ಮದುವೆಯ ಸಂಪ್ರದಾಯ ಪೂರೈಸುವ ವಿಷಯವಿತ್ತು. ಇದೀಗ ಈ "ಮಿಂಘಮ್" ಬಗ್ಗೆ ಇನ್ನೂ ಒಂದಿಷ್ಟು ವಿವರಗಳು, ನವೆಂಬರ್, ೧೬, ೨೦೦೬ರ ತರಂಗದಲ್ಲಿ ನಿಶಾಂತ್ ಬರೆದ ಲೇಖನದಲ್ಲಿ ಸಿಕ್ಕಿವೆ. ನಿಮ್ಮ ಓದಿಗಾಗಿ.... (ಇಲ್ಲಿ ಸ್ವಲ್ಪ ಹೃಸ್ವೀಕರಿಸಿದ್ದೇನೆ)

ಚೀನಾದ ಜನಸಂಖ್ಯೆಯ ಹತೋಟಿಗೆ ಅಲ್ಲಿನ ಸರಕಾರ ಹೊರಡಿಸಿದ ಕಾಯಿದೆ: ಒಂದು ಕುಟುಂಬ- ಒಂದು ಮಗು. ಅವರಿಗೂ ಭಾರತೀಯರಂತೆಯೇ ಗಂಡು ಮಗುವಿನ ಮೇಲೆ ವ್ಯಾಮೋಹ. ಪರಿಣಾಮ- ನಿರೀಕ್ಷಿತ; ಹೆಣ್ಣುಗಳಿಲ್ಲ. ಹುಟ್ಟಿದ ಗಂಡಿನ ಮದುವೆಗೆ ಪರದಾಡಬೇಕಾದ ಪರಿಸ್ಥಿತಿ. ಅದರ ಫಲರೂಪ- ವಧೂದಕ್ಷಿಣೆಯ ಆಮಿಷ. ಇದಕ್ಕೆ ಹಲವಾರು ಆಯಾಮಗಳಿವೆಯಾದರೂ ಇಲ್ಲಿ, ಈ ಲೇಖನದ ವ್ಯಾಪ್ತಿಗಾಗಿ, ಪ್ರೇತಮದುವೆಯ ಸಂಪ್ರದಾಯವನ್ನಷ್ಟೇ ತೆಗೆದುಕೊಳ್ಳುತ್ತೇನೆ.

"ಮಕ್ಕಳಿಗೆ ಮದುವೆ ಮಾಡಿಸುವುದು ತಂದೆಯ ಹೊಣೆಗಾರಿಕೆ. ಪ್ರಾಯಕ್ಕೆ ಬಂದ ಮಗ ಮದುವೆಯಾಗದೆ ಸತ್ತರೆ, ತಂದೆ-ತಾಯಿಯ ವ್ಯಥೆ ಅಷ್ಟಿಷ್ಟಲ್ಲ.ಈ ಪರಿಸ್ಥಿತಿಯಲ್ಲಿ ಹೆತ್ತವರ ಹೊಣೆಗಾರಿಕೆ ಹೆಚ್ಚುತ್ತದೆ; ಸತ್ತವರು ಸ್ವತಃ ಹೆಣ್ಣು ಹುಡುಕುವಂತಿಲ್ಲವಲ್ಲ! ಆಗ, ಹೆತ್ತವರು ಹೊಟ್ಟೆ-ಬಟ್ಟೆ ಕಟ್ಟಿ ಹಣ ಕೂಡಿಡುತ್ತಾರೆ. ಸತ್ತ, ಸಾಯುತ್ತಿರುವ ಹೆಣ್ಣು ಹುಡುಕುತ್ತ ಊರೂರು ಅಲೆಯುತ್ತಾರೆ. ಅಂಥ ಸಂದರ್ಭಗಳಲ್ಲಿ, ಹೆಣ್ಣು ಹೆತ್ತವರಿಗೆ ಆಕೆ ಇಲ್ಲದಿದ್ದರೂ ಲಾಭವೇ. (ಈ ಹಿನ್ನೆಲೆಯಲ್ಲಿ, ಚೀನಾದಲ್ಲಿ ತಂದೆ-ತಾಯಿ ತಮ್ಮ ಹೆಣ್ಣು ಮಗಳು ಅಪ್ರಾಪ್ತ ವಯಸ್ಸಿನಲ್ಲಿ ತೀರಿಕೊಂಡರೆ ದುಃಖಿಸುತ್ತಾರೆಯೇ? ಕೇಳಬಾರದ ಪ್ರಶ್ನೆ ಇದು) ತೀರಿಕೊಂಡ ಹೆಣ್ಣಿನ ದೇಹವನ್ನು ವಧುದಕ್ಷಿಣೆ ಕೊಟ್ಟು ಪಡೆದ ಹುಡುಗನ ಕಡೆಯವರು, ಆಕೆಯನ್ನು ಸಂಭ್ರಮದಿಂದ ತಮ್ಮ ಸ್ಮಶಾನಕ್ಕೆ ಒಯ್ದು, ತಮ್ಮ ಹುಡುಗನ ಶರೀರದ ಪಕ್ಕದಲ್ಲಿ ಆಕೆಯನ್ನೂ ಇರಿಸಿ, ಮದುವೆಯ ಶಾಸ್ತ್ರಗಳನ್ನು ನೆರವೇರಿಸುತ್ತಾರೆ. ಬಳಿಕ ಇಬ್ಬರನ್ನೂ ಅಕ್ಕಪಕ್ಕದಲ್ಲಿ ಸಮಾಧಿ ಮಾಡಲಾಗುತ್ತದೆ. ಜೊತೆಗೆ, ಸಂಸಾರ ಹೂಡಲು ಬೇಕಾಗುವ ಎಲ್ಲ ಸಾಮಾಗ್ರಿಗಳನ್ನೂ ಇರಿಸಲಾಗುತ್ತದೆ. ಶ್ರೀಮಂತರಾದರೆ ಕುರಿ, ಹಂದಿ ಕಡಿದು, ಬಂಧು-ಬಾಂಧವರಿಗೆ ಮದುವೆ ಊಟ ಬಡಿಸುತ್ತಾರೆ." ಎಂದು ಬರೆಯುತ್ತಾರೆ ನಿಶಾಂತ್.

ನಮ್ಮೂರ ತುಳುವರಲ್ಲಿ ಆತ್ಮ "ಕೇಳಿಕೊಂಡು" ಬಂದರೆ ಮಾತ್ರ ಆ ಆತ್ಮಕ್ಕೆ ಮದುವೆ ಮಾಡಿಸುವ ಸಂಪ್ರದಾಯವಿದೆ. ಬಹುಶಃ ಚೀನಾದಲ್ಲಿ ಎಲ್ಲ ಪ್ರೇತಾತ್ಮಗಳಿಗೂ ಮದುವೆ ಕಡ್ಡಾಯವಿರಬೇಕು; ಮುಂದಿನ ಪ್ರಸಂಗ ನೋಡಿ: "ಯೂಜಿಂಗ್'ನ ಮಗಳು ಯೆಲ್ಲೋ ರಿವರ್'ನಲ್ಲಿ ಬಂದ ಧಿಡೀರ್ ನೆರೆಯಲ್ಲಿ ಕೊಚ್ಚಿಹೋಗಿ, ಮರುದಿನ ಹೆಣ ಸಿಗುತ್ತದೆ. ಗೆಳೆಯರು, ಬಂಧುಗಳು ಆತನನ್ನು "ನೀನು ಅದೃಷ್ಟವಂತ" ಅನ್ನುತ್ತಾರೆ. ಹಳ್ಳಿಯಲ್ಲಿ ಸುದ್ದಿ ಹರಡುತ್ತದೆ. ಅರ್ಧ ಘಂಟೆಯಲ್ಲಿ ಚೆನ್ ಬರುತ್ತಾನೆ, ತನ್ನ ಮಗನಿಗೆ ಹೆಣ್ಣು ಕೇಳಲು. ಮನೆಯವರೆಲ್ಲರ ಎದುರೇ ಮಾತುಕತೆ ನಡೆಯುತ್ತದೆ, ಚರ್ಚೆ ಸಂಧಾನಗಳ ಬಳಿಕ ಚೆನ್ ಹಣ ತೆತ್ತು ತನ್ನ ಭಾವೀ ಸೊಸೆಯ ಹೆಣದೊಂದಿಗೆ ಮರಳುತ್ತಾನೆ. ಸ್ಮಶಾನದಲ್ಲಿ ಕೆಲ ವರ್ಷಗಳ ಹಿಂದೆ ಮದುವೆಯಾಗದೇ ತೀರಿಕೊಂಡ ಹುಡುಗನ ಸಮಾಧಿಯ ಬಳಿಯಲ್ಲಿಯೇ ಈ ಹುಡುಗಿಯ ಶವಪೆಟ್ಟಿಗೆಯನ್ನೂ ಇಳಿಸಿ, ಸಂಸಾರ ಹೂಡಲು ಬೇಕಾದ ಪಾತ್ರೆ-ಪರಡಿ, ಬಟ್ಟೆ-ಬರೆಗಳ ಜೊತೆಗೆ ಹೆಣ-ವಧುವನ್ನೂ ಮಣ್ಣುಮಾಡಲಾಗುತ್ತದೆ."

ಇದಿಷ್ಟೇ ಅಲ್ಲದೆ, ನಮ್ಮೂರಿನಂತೆ ಕೆಲವು ಆತ್ಮಗಳು ಚೀನಾದಲ್ಲೂ ಮದುವೆ ಮಾಡಿಸುವಂತೆ ಪೀಡಿಸಿ, ಕಾಡಿಸಿ, ತೊಂದರೆ ಕೊಡುವುದೂ ಇದೆ. ಅಂಥ ಸಂದರ್ಭಗಳಲ್ಲಿ ಮನೆಯವರು, ಸಂಬಂಧಪಟ್ಟವರು, ಎಲ್ಲ ಕಡೆ ಜಾಲಾಡಿ ಎಂದೋ ಎಲ್ಲೋ ಸತ್ತ ಹೆಣ್ಣು ಹುಡುಕಿ ಮದುವೆ ಮಾಡುತ್ತಾರೆ. ಹೆಣ್ಣು-ಹೆಣ ಎಲ್ಲೂ ಸಿಗದೇ ಹೋದಲ್ಲಿ, ಅಥವಾ ವಧುದಕ್ಷಿಣೆ ಕೊಡಲಾಗದೇ ಇದ್ದಲ್ಲಿ, ಅಂಥವರು ಹಿಡಿವ ಹಾದಿಗಳೆರಡು-
ಒಂದು: ಯಾವುದೋ ಒಂದು ಹೆಣ್ಣಿನ ಹೆಣವನು ಗೋರಿಯಿಂದಲೇ ಅಪಹರಿಸುವುದು;
ಎರಡು: ಒಣಹುಲ್ಲಿನಲ್ಲಿ ಹೆಣ್ಣಿನ ಗೊಂಬೆ ತಯಾರಿಸಿ ಮಗನ ಹೆಣದ ಬಳಿ ಹೂತು ಜವಾಬ್ದಾರಿ ತೀರಿಸಿಕೊಳ್ಳುವುದು.

ನಂಬಿಕೆಗಳು ಮನುಷ್ಯನನ್ನು ಏನೆಲ್ಲ ಮಾಡಿಸುತ್ತವೆ!!

8 comments:

mala rao said...

ನಂಬಿಕೆಗಳು ಮನುಷ್ಯನನ್ನು ಏನೆಲ್ಲ ಮಾಡಿಸುತ್ತವೆ
haudu amazing...!

ಸುಪ್ತದೀಪ್ತಿ suptadeepti said...

ನಿಜ. ಮಾನವನ ಹೆಚ್ಚಿನ ಎಲ್ಲ ಕೆಲಸಗಳು ನಂಬಿಕೆಗಳ ಮೇಲೆಯೇ ನಡೆಯುತ್ತವೆ. ಸ್ವಲ್ಪ ಮಟ್ಟಿಗೆ ನಂಬಿಕೆಗಳು ಬೇಕು. ಅದು ಅತಿರೇಕವಾದಾಗ....

ಶಾಂತಲಾ ಭಂಡಿ (ಸನ್ನಿಧಿ) said...

"ಹೆಣ್ಣು ಹೆತ್ತವರಿಗೆ ಆಕೆ ಇಲ್ಲದಿದ್ದರೂ ಲಾಭವೆ!"
ಹೌದಲ್ವಾ ಮೇಡಂ?
ಸಂಪ್ರದಾಯಗಳಿಂದ ಸಾವಿನಲ್ಲೂ ಸಂತಸಪಡುವ ಸಂದರ್ಭ ಸಂಭವಿಸಬಹುದಲ್ಲಾ! ಎನಿಸಿಬಿಟ್ಟಿತು ಓದಿದಾಗ.

ಸುಪ್ತದೀಪ್ತಿ suptadeepti said...

ಸಾವಿನಲ್ಲಿ ಸಂಭ್ರಮಿಸುವ ಸಂದರ್ಭಗಳು ಇವೆ; ಸಂಪ್ರದಾಯವೂ ಅವುಗಳಲ್ಲಿ ಒಂದಾಗುವುದು ವಿಪರ್ಯಾಸ.

Anonymous said...

"ಒಂದು: ಯಾವುದೋ ಒಂದು ಹೆಣ್ಣಿನ ಹೆಣವನು ಗೋರಿಯಿಂದಲೇ ಅಪಹರಿಸುವುದು;"

- ಲೇಖನ ಓದಿ ’ಹೀಗೂ ಉಂಟೇ’ ಎನಿಸಿತು. ಹೆಣ್ಣು,ಹೊನ್ನು,ಮಣ್ಣುಗಳ ಜೊತೆಗೆ ಈಗ ಮಣ್ಣಿನಲ್ಲಿರುವ ಹೆಣ್ಣನ್ನು ಸೇರಿಸಬಹುದೇನೋ!

ಸುಪ್ತದೀಪ್ತಿ suptadeepti said...

ಇಲ್ಲೊಂದು ತುಂಟ ಪ್ರಶ್ನೆ: "ಇಂಥ ವಿಪರ್ಯಾಸ ಬೇಡವೆಂದೇ ನಮ್ಮಲ್ಲಿ ನಿರ್ಜೀವ ಶರೀರವನ್ನು ಅಗ್ನಿಗಾಹುತಿ ಮಾಡುವ ರೂಢಿ ಬೆಳೆಯಿತೆ?"

ಈ ಲೋಕದಲ್ಲಿ ವಿಪರ್ಯಾಸಗಳು ಹಲವಾರು, ಅವುಗಳಲ್ಲಿ ಇದೂ ಒಂದು... ನಮಗೆ ಹೊಸತು; ಅಷ್ಟೇ.

Jagali bhaagavata said...

ಪ್ರೇತಗಳಿಗೆ ಒಂದು ಬ್ರೇಕ್ ಕೊಡಿ ಮಾರಾಯ್ರೇ. ಅವುಗಳಿಗೆ ತುಂಬ ಸುಸ್ತಾಗಿರ್ಬೇಕ್ ಈಗ. ಒಂದು ಒಳ್ಳೆ ಚೇತೋಹಾರಿ ಕವನ ಓದದೆ ತುಂಬ ದಿನ ಆಯ್ತು

ಸುಪ್ತದೀಪ್ತಿ suptadeepti said...

ಇನ್ನೆರಡು ದಿನ ತಡೀರಿ, ಆಮೇಲೆ ಪ್ರೇತೋಚ್ಛಾಟನೆ ಆಗ್ತದೆ. ಅದಕ್ಕೆ ವ್ಯವಸ್ಥೆ ಆಗಿದೆ...!!