ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 5 November 2007

ಆತ್ಮ ಚಿಂತನ-೦೭

ಓದುಗರೇ, ಈ ಹಿಂದೆ ನಿಮಗೆ ಮಾತು ಕೊಟ್ಟಂತೆ ಇದೀಗ "ಆತ್ಮ ಚಿಂತನ"ದಲ್ಲಿ `ಪ್ರೇತಗಳ ಮದುವೆ'ಯ ವಿಷಯವನ್ನು ಮುಂದುವರೆಸುತ್ತಿದ್ದೇನೆ.

"ಪ್ರೇತಾತ್ಮಗಳ ಮದುವೆಗೂ ವಿಧಿ ವಿಧಾನಗಳಿವೆ" ಅನ್ನುತ್ತಾರೆ ಅನಂತ ಹುದೆಂಗಜೆ; ೨೦೦೬, ನವೆಂಬರ್, ಹದಿನಾರರಂದು ತರಂಗದಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ. "ಪ್ರೇತಗಳಿಗೆ ಮದುವೆ ಮಾಡಿಸುವ ಜಾನಪದ ನಂಬಿಕೆಯ ಆಧಾರದ ಸಂಪ್ರದಾಯ ತುಳುನಾಡಿನ ಹಲವಾರು ಜನಾಂಗಗಳಲ್ಲಿ ಪ್ರಚಲಿತವಿದ್ದು, ಬಹುತೇಕ ಕ್ರಮಗಳು ಸಾಂಪ್ರದಾಯಿಕ ಮದುವೆಯಂತೆಯೇ ನಡೆಯುತ್ತವೆ" ಅನ್ನುತ್ತಾರೆ ಅವರು. "ಹೆಣ್ಣು-ಗಂಡು ನೋಡುವ ಶಾಸ್ತ್ರದಿಂದ ಹಿಡಿದು, ವರದಕ್ಷಿಣೆಯ ಮಾತುಕತೆ, ದಿಬ್ಬಣ, ವಾಲಗ, ಸಿಡಿಮದ್ದು, ಪರಸ್ಪರ ಮರ್ಯಾದೆ, ಮಾಂಗಲ್ಯಗಳವರೆಗೆ ಎಲ್ಲವೂ ಸಂಪ್ರದಾಯ ಬದ್ಧವಾಗಿಯೇ ನಡೆಯುತ್ತದೆ. ಗೌಡ ಸಂಪ್ರದಾಯದಲ್ಲಿ ಅಡಕೆ ಮರದ ಹೂವು (ಹಿಂಗಾರ)ಗಳನ್ನು ಗಂಡು ಹೆಣ್ಣಿನ ಪ್ರತೀಕವಾಗಿ ಬಳಸುತ್ತಾರೆ. ಕೆಲವರು ಬೆಳ್ಳಿಯಲ್ಲಿ ಗಂಡು-ಹೆಣ್ಣಿನ ಗೊಂಬೆಗಳನ್ನು ಮಾಡಿಸಿದರೆ, `ನಲ್ಕೆ' ಜನಾಂಗದಲ್ಲಿ ಬಾಳೆದಿಂಡಿನಿಂದ ಗಂಡು-ಹೆಣ್ಣಿನ ಗೊಂಬೆಗಳನ್ನು ಮಾಡಿ, ಅವಕ್ಕೆ ಬಟ್ಟೆ ತೊಡಿಸುತ್ತಾರೆ. ಎರಡೂ ಪ್ರತಿನಿಧಿಗಳನ್ನು ಹಸೆಮಣೆಯ ಮೇಲೆ, ಅಕ್ಕ-ಪಕ್ಕ ಇಟ್ಟು, ಗಂಡಿನ `ಕೈಯಿಂದ' ಹೆಣ್ಣಿಗೆ ತಾಳಿ `ಕಟ್ಟಿಸುವ' ಶಾಸ್ತ್ರವನ್ನು ಮಾಡುತ್ತಾರೆ."

"ಬಿಲ್ಲವರಲ್ಲಿ ಗಂಡು ತೆಂಗಿನಕಾಯಿಯಲ್ಲೂ ಹೆಣ್ಣು ಹಿಂಗಾರದಲ್ಲೂ ಪ್ರತಿನಿಧಿಸಲ್ಪಟ್ಟಿರುತ್ತವೆ. ಮದುವೆ ಮಂಟಪದಲ್ಲಿ ಜೇಡಿಮಣ್ಣಿನಿಂದ ಕೈ-ಕೈ ಬೆಸೆದಂತೆ ಬರೆದ ಗಂಡು-ಹೆಣ್ಣಿನ ರೂಪದ ಮಂಡಲಗಳ ಮೇಲೆ ಮಣೆಗಳನ್ನಿಟ್ಟು, ಅವುಗಳ ಮೇಲೆ ಬಾಳೆಯೆಲೆ ಇರಿಸಿ, ಹೆಣ್ಣಿಗೆ ಹೊಸಸೀರೆ, ರವಿಕೆಕಣವನ್ನಿಟ್ಟು ಅವುಗಳ ಮೇಲೆ ಹಿಂಗಾರವನ್ನೂ, ಗಂಡಿಗೆ ಧೋತರ, ಶಲ್ಯವನ್ನಿಟ್ಟು ಮೇಲೆ ತೆಂಗಿನಕಾಯಿಯನ್ನೂ ಇರಿಸುತ್ತಾರೆ. ಮಂಡಲದಲ್ಲಿ ಬೆಸೆದಿರುವ ಕೈಗಳ ಮೇಲೆ ಧಾರೆಯೆರೆಯುತ್ತಾರೆ."

"ಮದುವೆಯಾದ ಸಂಕೇತವಾಗಿ ಹಿಂಗಾರದ ಹೊರಹಾಳೆಯೂ, ತೆಂಗಿನಕಾಯಿಯೂ ಒಡೆಯುತ್ತವೆ. ಶಾಸ್ತ್ರಕ್ಕೆ ಸರಿಯಾಗಿ, ಶೋಭಾನೆ ಹಾಡಿ, ಅತಿಥಿಗಳಿಗೆ ಊಟ ಬಡಿಸುತ್ತಾರೆ. ಮದುಮಕ್ಕಳಿಗೂ `ಎಡೆ'ಯಿರಿಸುತ್ತಾರೆ. ನಂತರ, ಕುಟುಂಬಗಳ ಹಿರಿಯರು "ನಿಮ್ಮ ಅಪೇಕ್ಷೆಯಂತೆ ನಿಮಗಿಬ್ಬರಿಗೂ ಮದುವೆ ಮಾಡಿಸಿದ್ದೇವೆ. ನೀವಿನ್ನು ಗಂಡ-ಹೆಂಡತಿ. ಯಾರಿಗೂ ತೊಂದರೆ ಕೊಡದೆ ಸುಖವಾಗಿ ಸಂಸಾರ ಮಾಡಿ" ಎಂದು ವಿನಂತಿಸಿಕೊಳ್ಳುತ್ತಾರೆ, ಹಾರೈಸುತ್ತಾರೆ. ಮದುಮಕ್ಕಳ ಪ್ರತೀಕಗಳನ್ನು ಅಂದು ರಾತ್ರೆ ಒಂದು ಕೋಣೆಯಲ್ಲಿರಿಸಿ, ಪ್ರಸ್ತದ ಶಾಸ್ತ್ರವನ್ನೂ ಮಾಡುತ್ತಾರೆ. ಮದುಮಕ್ಕಳಿಗೆ ಎರಡೂ ಮನೆಗಳಲ್ಲಿ ಔತಣದ ಕ್ರಮ ನಡೆಯುತ್ತದೆ. ಬಳಿಕ, ತಾಳಿ, ಬಳೆ, ಬಟ್ಟೆಗಳನ್ನು ತೆಗೆದಿರಿಸಿ, ಹಿಂಗಾರ-ಕಾಯಿಗಳನ್ನು ಯಾ ಗೊಂಬೆಗಳನ್ನು ವಿಸರ್ಜಿಸುತ್ತಾರೆ. ಮದುವೆಯ ನಂತರ ಎರಡೂ ಮನೆಗಳ ಸಂಬಂಧ ಬೆಸೆಯುತ್ತದೆ, ಬಾಂಧವ್ಯ ಮುಂದುವರೆಯುತ್ತದೆ. ಹಬ್ಬ-ಹರಿದಿನಗಳಲ್ಲಿ ಪರಸ್ಪರ ಹಬ್ಬದೂಟಗಳ ಆಮಂತ್ರಣವಿರುತ್ತದೆ. ದೀಪಾವಳಿ, ಯುಗಾದಿಗಳಲ್ಲಿ ಈ ಹೊಸ ದಂಪತಿಗೆ ಹೊಸ ಬಟ್ಟೆ ಕೊಡಿಸಿ, ಎಡೆಯಿರಿಸುವುದೂ ಇದೆ." (ಅನಂತ ಹುದೆಂಗಜೆಯವರ ಲೇಖನದ ತುಣುಕು ಇದು, ಅಲ್ಪ ಮಾರ್ಪಾಡುಗಳೊಂದಿಗೆ.)

`ಪ್ರೇತ ಮದುವೆ'ಯ ಸಂಪ್ರದಾಯ ಚೀನಾದಲ್ಲೂ ಇದೆ ಎಂದು "ಆತ್ಮ ಚಿಂತನ-೦೪"ರಲ್ಲಿ ಬರೆದಿದ್ದೆ. ಇದೇ ತರಂಗದಲ್ಲಿ ಆ "ಮಿಂಘಮ್" ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ, ನಿಶಾಂತ್. ಅದರ ಸಾರಾಂಶ ಮುಂದಿನ ಕಂತಿನಲ್ಲಿ.

3 comments:

Anveshi said...

ಸುಪ್ತದೀಪ್ತಿಯವರೆ,

ಯಾವುದೇ ಪ್ರೇತಾತ್ಮವು ಕೂಡ ನಮ್ಮನ್ನು ಇದುವರೆಗೆ ಸಂಪರ್ಕಿಸಿ ಮದುವೆ ಮಾಡಿಸಲು ಹೇಳಿಯೇ ಇಲ್ಲ...

(ಚರ್ಚೆಯ ದಾರಿ ತಪ್ಪಿಸುವುದು ನಮ್ಮ ಉದ್ದೇಶ ಅಲ್ಲ. ನಿಮ್ಮ ತನಿಖಾ ಮಾಹಿತಿ ಮುಂದುವರಿಸಿ)

veena said...

ನಿವ್ಯಾಕ್ರಿ ಪ್ರೇತಾತ್ಮಗಳ ಹಿಂದೆ ಸುತ್ತುತ್ತಿದ್ದೀರಿ???????????

ಸುಪ್ತದೀಪ್ತಿ suptadeepti said...

@ಅಸತ್ಯ ಅನ್ವೇಷಿ: ನಿಮ್ಮನ್ನು ಯಾವುದೇ ಪ್ರೇತಾತ್ಮವು ಸಂಪರ್ಕಿಸಲಾರದು; ಎಲ್ಲಿ ಸಹಾಯ ಸಿಗಬಹುದೆಂದು ಅವಕ್ಕೂ ಗೊತ್ತು!! `ಲಹರಿ'ಯಲ್ಲಿ ಅವುಗಳ ಬಗ್ಗೆ ಪ್ರಚಾರವಂತೂ ಸಿಕ್ಕುತ್ತಿದೆಯಾದ್ದರಿಂದ ನಮ್ಮೆಲ್ಲರ ತಂಟೆಗೆ ಅವು ಬರುವುದಿಲ್ಲವಂತೆ.

@vee ಮನಸ್ಸಿನ ಮಾತು: ನಾನು ಎಲ್ಲೂ ಸುತ್ತುತ್ತಿಲ್ಲ, ಇಲ್ಲೇ, ನನ್ನ ಪರಿಧಿಯಲ್ಲೇ ಇದ್ದೇನೆ.

ಗಾಬರಿಯಾಗಬೇಡಿ, ನಾನೇನೂ ಪ್ರೇತಾತ್ಮವಲ್ಲ, ಅಥವಾ ಪ್ರೇತಾತ್ಮದ ವಕಾಲತ್ತು ವಹಿಸಿಲ್ಲ. ಅವುಗಳ ಬಗೆಗಿನ ಮಾಹಿತಿಗಳನ್ನು ಕಲೆಹಾಕಿ, ಇಲ್ಲಿ ನಿಮ್ಮೆಲ್ಲರ ಓದಿಗಾಗಿ ಕೊಡುತ್ತಿದ್ದೇನೆ, ಅಷ್ಟೇ.