ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday, 3 October 2007

ಆತ್ಮ ಚಿಂತನ-೦೫

ಹಿಂದಿನ ಕಂತಿನಲ್ಲಿ ಚೀನಾದಲ್ಲಿ ತೀರಿಕೊಂಡ ಮಗಳಿಗೂ ಮದುವೆ ಮಾಡಿಸುವ ಪದ್ಧತಿಯ ಬಗ್ಗೆ ಬರೆದಿದ್ದೆ. ಇಂದೀಗ ನಮ್ಮೂರಲ್ಲೂ ನಡೆಯುವ ಅಂಥದ್ದೊಂದು ಪರಿಪಾಠದ ಬಗ್ಗೆ ಕೊರೆಯುತ್ತೇನೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ಈಗಿನ ಉಡುಪಿ ಜಿಲ್ಲೆ ಮತ್ತು ದ.ಕ. (ಮಂಗಳೂರು) ಜಿಲ್ಲೆ ಜೊತೆಯಾಗಿ) ಸಾಂಸ್ಕೃತಿಕವಾಗಿ ತನ್ನದೇ ಒಂದು ವಿಶೇಷ ಆಯಾಮ ಹೊಂದಿದೆ. ಇಲ್ಲಿನ ಸಾಂಸ್ಕೃತಿಕ ಆಚರಣೆಗಳಲ್ಲಿ ಹಲವಾರು ಸಣ್ಣ ಪುಟ್ಟವು ಸುದ್ದಿಯಾಗದೇ ಗಾಳಿಯಲ್ಲಿ ಕರಗಿ ಹೋಗುತ್ತವೆ. "ಪ್ರೇತಗಳ ಮದುವೆ" ಅನ್ನುವ ಒಂದು ಸಂಪ್ರದಾಯವೂ ಅಂಥವುಗಳಲ್ಲೊಂದು.

ಹೆಚ್ಚಾಗಿ ತುಳುವರಲ್ಲಿ ಈ ಸಂಪ್ರದಾಯ ಜಾರಿಯಲ್ಲಿದೆ. ಮನೆಯಲ್ಲಿ ಮದುವೆಯಾಗದೆ ತೀರಿಕೊಂಡ ಗಂಡು/ಹೆಣ್ಣು ಮಕ್ಕಳಿದ್ದರೆ, ಅದರಲ್ಲೂ ಪ್ರಾಪ್ತವಯಸ್ಕರೇ ಆಗಿದ್ದು, ಅಪಘಾತ, ಆತ್ಮಹತ್ಯೆಗಳಲ್ಲಿ ತೀರಿಕೊಂಡವರಾದರೆ ಇಂಥ ಆಚರಣೆ ಹೆಚ್ಚು. ಅದೂ ಮನೆಯಲ್ಲಿನ ಇನ್ನೊಬ್ಬ ವ್ಯಕ್ತಿಯ ಮದುವೆಗೆ ಕಾರಣಾಂತರಗಳಿಂದ ಅಡಚಣೆಗಳು ಉಂಟಾದಾಗ ಯಾರೋ ಒಬ್ಬರು ಹಿರಿಯರು ಇಂಥ ಒಂದು ಅತೃಪ್ತ ಪ್ರೇತ ಇರಬಹುದಾದ ಬಗ್ಗೆ ನೆನಪಿಸುತ್ತಾರೆ. ಜ್ಯೋತಿಷಿಗಳಲ್ಲಿ, ಕವಡೆ ಶಾಸ್ತ್ರಿಗಳಲ್ಲಿ "ಪ್ರಶ್ನೆ ಕೇಳ"ಲಾಗಿ ತಥಾಕಥಿತ ವಾಸ್ತವವಾಗುತ್ತದೆ. ಮುಂದೇನು ಪರಿಹಾರ? "ಪ್ರೇತದ ಮದುವೆ". ಬಂಧುಗಳು? ಗಂಡು/ಹೆಣ್ಣು?

ಅದಕ್ಕೂ ಸಿದ್ಧ ಉತ್ತರವಿದೆ ಹಿರಿಯರಲ್ಲಿ. ನೆಂಟರೊಳಗೆ, ಇನ್ನೊಂದು ಕುಟುಂಬದಲ್ಲಿಯೂ ಇರಬಹುದಾದ ಇಂತಹ ಅತೃಪ್ತ ಗಂಡು/ಹೆಣ್ಣು ಆತ್ಮ. ಆ ಮನೆಯವರೊಂದಿಗೆ ಮಾತುಕತೆಗೆ ತೊಡಗಲು ಒಬ್ಬ ಮಧ್ಯವರ್ತಿ ನಿಯೋಜಿತನಾಗುತ್ತಾನೆ. ಸರಿಸುಮಾರಾಗಿ ಎಲ್ಲವೂ ನಿಜವಾದ ಮದುವೆ ಸಂಬಂಧದ ಮಾತುಕಥೆಯಂತೆಯೇ ನಡೆಯುತ್ತದೆ (ವಧುದಕ್ಷಿಣೆ, ವರದಕ್ಷಿಣೆಗಳ ಹೊರತಾಗಿ). ಎರಡೂ ಮನೆತನಗಳ ಕುಲಗೋತ್ರಗಳನ್ನು ಜಾಲಾಡಿ, ಗಂಡು-ಹೆಣ್ಣಿನ ನಕ್ಷತ್ರ-ತಾರಾಬಲ ಹೊಂದಿಸಿ ಪ್ರೇತಮದುವೆಗೆ ಪ್ರಶಸ್ತ ಸಮಯವನ್ನೂ ನಿಗದಿಪಡಿಸಲಾಗುತ್ತದೆ. ಎರಡೂ ಕುಟುಂಬಗಳು ಒಪ್ಪಿಗೆಯಾದಲ್ಲಿ ಮದುವೆ ನಡೆದೇ ಬಿಡುತ್ತದೆ- ತೀರಾ ಹತ್ತಿರದ ಸಂಬಂಧಿಗಳನ್ನು ಕರೆದು.

ವಿಚಿತ್ರ? ಆದರೂ ನಿಜ! ಈ ವಿಷಯದ ಬಗ್ಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತರಂಗ ವಾರಪತ್ರಿಕೆಯಲ್ಲಿ ಬಂದ ಲೇಖನದ ಸಾರಾಂಶವನ್ನು ಮುಂದಿನ ಕಂತಿನಲ್ಲಿ ಕೊಡುತ್ತೇನೆ, ಸರಿಯಾ?

8 comments:

dinesh said...

ಲಾಯಿಕ್ ಇತ್... ಪೂರಾ ಬರೀರಿ...

ಸುಪ್ತದೀಪ್ತಿ suptadeepti said...

ಸ್ವಾಗತ ದಿನೇಶ್. ನಾನು ಬರೆಯುತ್ತೇನೆ, ನೀವು ಬರುತ್ತಿರಿ. ಧನ್ಯವಾದಗಳು.

veena said...

ವಿಚಿತ್ರ ಅನ್ನಿಸುತ್ತಿದೆ. ಮೂಡನಂಬಿಕೆ ಜನರಿಂದ ದೂರ ಹೋಗಲು ಇನ್ನೆಷ್ಟು ವರ್ಷ ಬೇಕಾದಿತೂ?

VENU VINOD said...

ಕೆಲನಂಬಿಕೆಗಳು, ವಿಶ್ವಾಸ, ತಮ್ಮವರ ಮೇಲೆ ಇರುವ ಪ್ರೀತಿ ಇವೆಲ್ಲ ಇಂತಹ ಆಚರಣೆಗಳಿಗೆ ಕಾರಣ ಎಂದು ಅನ್ನಿಸುತ್ತದೆ, ಎಲ್ಲಿಯವರೆಗೆ ಇವೆಲ್ಲ ಯಾರಿಗೂ ಸಮಸ್ಯೆ ಸೃಷ್ಟಿಸುವುದಿಲ್ಲವೋ ಅಲ್ಲಿಯವರೆಗೆ ನಡೆಯುತ್ತಿರಲಿ ಬಿಡಿ

Anonymous said...

ಪ್ರೇತಗಳಿಗೆ ಇಂತಹ ಮದುವೆಗಳಿಂದ ಸಂತೋಷ ದೊರಕುತ್ತದೋ ಇಲ್ಲವೋ, ಸಂಬಂಧಪಟ್ಟವರ ಮನಸ್ಸಿಗಂತೂ ಇದರಿಂದ ಶಾಂತಿ ದೊರಕುತ್ತದೆ. ಮನಸ್ಸಿನ ನೆಮ್ಮದಿ ಅರಸಿ ಜನ ಏನೆಲ್ಲಾ ಮಾಡುವುದಿಲ್ಲ ಈಗ?

ಸುಪ್ತದೀಪ್ತಿ suptadeepti said...

@ ವೀ ಮನಸ್ಸಿನ ಮಾತು: ಜನರ ನಂಬಿಕೆಗಳಿಗೆ ಕಾರಣಗಳು ಹಲವಾರು. ನಾವೆಲ್ಲರೂ ಒಂದಲ್ಲೊಂದು ನಂಬಿಕೆಗಳ ಸರದಾರರು. ಕೆಲವರ ನಂಬಿಕೆಗಳಿಗೆ ಇರುವ ಕಾರಣಗಳು ಇನ್ನುಳಿದವರಿಗೆ ಸಕಾಲಿಕ ಮತ್ತು ಸರಿ ಅಲ್ಲದಿರಬಹುದು... ಆದರೆ, ಅದು ನಮ್ಮ ಧರ್ಮ ನಮಗೆ ಕೊಟ್ಟಿರುವ ಸ್ವಾತಂತ್ರ್ಯ.

@ ವೇಣು ವಿನೋದ್: ನಿಜ, ತಮ್ಮವರ ಮೇಲಿನ ಪ್ರೀತಿ, ದೈವದ ಮೇಲಿನ ಭೀತಿ, ಎರಡೂ ಇಂತಹ ಸಂದರ್ಭಗಳಲ್ಲಿ ಕೆಲಸ ಮಾಡುತ್ತವೆ. ಇರುವ ಕೆಲವು ಸಮಸ್ಯೆಗಳಿಗೆ ಅವರವರ ಮಟ್ಟಿನ ಉತ್ತರಗಳೆಂದೇ ಇಂತಹ ಆಚರಣೆ ಇರುವುದು ಗಮನಿಸಬೇಕಾದ ಅಂಶ.

@ ಶ್ರೀತ್ರಿ: ಹೌದು, ಇರುವವರ ಮನಸ್ಸಿನ ನೆಮ್ಮದಿಗಾಗಿಯೇ ಇಂತಹ ಆಚರಣೆಗಳು ಇರುವುದು ನಿಜವಾದರೂ ಆತ್ಮಗಳ "ಕೋರಿಕೆ"ಯ ಮೇರೆಗೆ ಇಂತಹ ಮದುವೆಗಳು ನಡೆದ ದಾಖಲೆಗಳಿವೆ. ಮುಂದಿನ ಕಂತಿನಲ್ಲಿ ಆ ವಿವರಗಳು ಬರಲಿವೆ.... "ತರಂಗ"ದ ಕೃಪೆಯಿಂದ.

parijata said...

'ತರಂಗ'ದ ಆ ಲೇಖನವನ್ನು ಓದಿದ್ದೆ. ಅದೆಷ್ಟು ವಿಷಯಗಳು ನಮ್ಮ ಮನಸ್ಸಿಗೆ ಅಗೋಚರವಾಗಿರುತ್ತವೆ ಅಲ್ಲವೇ? ಇದನ್ನು ಮೂಢನಂಬಿಕೆ ಎಂದು ಕರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ. ನಮಗೆ ಅರ್ಥವಾಗದಿದ್ದುದೆಲ್ಲ ಮೂಢವೇ ಆಗಬೇಕೇ?

ಸುಪ್ತದೀಪ್ತಿ suptadeepti said...

@ಪಾರಿಜಾತ: ಸತ್ಯ, ನಮ್ಮ ನಂಬಿಕೆಗಳಿಗೆ, ಅರಿವಿಗೆ ನಿಲುಕದ್ದನ್ನು ಅಲ್ಲಗಳೆಯುವುದು ಸರಿಯಾದ ನಿಲುವೆಂದು ನಾನೂ ಒಪ್ಪುವುದಿಲ್ಲ. ಮೌಢ್ಯಕ್ಕೂ ಅದರದ್ದೇ ಆದ ಕಾರಣಗಳಿವೆ, ಅಲ್ಲವೆ?