ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday 11 June, 2007

ಆತ್ಮ ಚಿಂತನ-೦೩

ಆತ್ಮಕ್ಕಿರುವ ಜ್ಞಾನ/ಅನುಭವದ ಆಧಾರದ ಮೇಲೆ, ಡಾ ನ್ಯೂಟನ್ ಅವರ ತಿಳುವಳಿಕೆಗೆ ಬಂದಿರುವಂತೆ ಆರು ಸ್ತರಗಳಲ್ಲಿ ವಿಭಾಗಿಸುತ್ತಾರೆ; ನಮ್ಮ ಅರ್ಥೈಸುವಿಕೆಯ ಅನುಕೂಲಕ್ಕಾಗಿ ಈ ವಿಂಗಡಣೆ ಎನ್ನುತ್ತಾರೆ.

(೧) ಮೊದಲ ಹಂತ (ಆರಂಭಿಕ/ ಬಿಗಿನರ್): ಈ ಸ್ತರದ ಆತ್ಮಗಳು ಬಹಳಷ್ಟು ಜನ್ಮ ಎತ್ತಿಲ್ಲದಿರಬಹುದು, ಅಥವಾ ಹಲವಾರು ಜನ್ಮಗಳನ್ನು ಎತ್ತಿದ್ದರೂ ಕಲಿಯಬೇಕಾದ ಪಾಠ ಕಲಿಯದೇ ಇರಬಹುದು (ಫ್ರೀ-ವಿಲ್ ಅನ್ನುವುದೊಂದಿದೆಯಲ್ಲ! ಅದು ಅತೀಂದ್ರಿಯ ಪ್ರಜ್ಞೆಗೂ ಸಂಬಂಧಿಸಿದ್ದು). ಪ್ರಪಂಚದ ಬಹುತೇಕ ಜನ ಇದೇ ಹಂತದಲ್ಲಿರುವ ಆತ್ಮರೂಪರು ಎನ್ನುವುದು ಅವರ ಅಂದಾಜು. ಈ ಆತ್ಮಗಳ ಬಣ್ಣ ಶುದ್ಧ ಬಿಳಿ. ಜ್ಞಾನ ಹೆಚ್ಚಿದಂತೆಲ್ಲ ಬಣ್ಣ ಗಾಢವಾಗುತ್ತದೆ.

(೨) ಎರಡನೇ ಹಂತ (ಕೆಳ-ಅಂತರ್ವರ್ತಿ/ ಲೋವರ್ ಇಂಟರ್ಮೀಡಿಯೇಟ್): ಹಲವಾರು ಜನ್ಮಗಳನ್ನೆತ್ತಿ, ಕೆಲವಾದರೂ ಪಾಠಗಳನ್ನು ಕಲಿತು, ಮಾಗಿರುವ ಆತ್ಮಗಳಿವು. ನಯ-ವಿನಯ ಇವರುಗಳಲ್ಲಿ ತುಸುವಾದರೂ ಇರುತ್ತದೆ. ಸಾಮಾಜಿಕ ಕಾಳಜಿ ಒಂದಿನಿತು ಮೈಗೂಡಿರುತ್ತದೆ. ಇಲ್ಲಿ ಬಿಳಿಗೆ ಒಂದಿಷ್ಟೇ ಇಷ್ಟು ಹಳದಿ ಯಾ ಕೆಂಪು ಬಣ್ಣದ ಛಾಯೆಯಿರುತ್ತದೆ.

(೩) ಮೂರನೇ ಹಂತ (ಅಂತರ್ವರ್ತಿ/ ಇಂಟರ್ಮೀಡಿಯೇಟ್): ಸಮಾಜಕ್ಕಾಗಿ, ಇತರರಿಗಾಗಿ ತಮ್ಮ ಜನ್ಮ ಸವೆಸುವವರು. ಇವರುಗಳ ಆತ್ಮ ಹಳದಿ, ಬಿಳಿಯ ಛಾಯೆಯೇ ಇರುವುದಿಲ್ಲ.

(೪) ನಾಲ್ಕನೇ ಹಂತ (ಮೇಲಂತರ್ವರ್ತಿ/ ಹೈಯರ್ ಇಂಟರ್ಮೀಡಿಯೇಟ್): ಕಡು ಹಳದಿಯಿಂದ ಕೊನೆಗೆ ತುಸು ನೀಲಿಗೆ ತಿರುಗುವ ಈ ಆತ್ಮಗಳ ಗುಣ ಬಹಳಷ್ಟು ನಿಸ್ವಾರ್ಥ ಮತ್ತು ಸಮಾಜಮುಖಿ. ಈ ನೆಲೆಯ ಆತ್ಮಗಳು ಗುರುಗಳಾಗುವ ತರಬೇತಿಯಲ್ಲಿ ಇರುತ್ತಾರೆ (ಜೂನಿಯರ್ ಗೈಡ್).

(೫) ಐದನೇ ಹಂತ (ಪ್ರೌಢ/ ಅಡ್ವಾನ್ಸ್ಡ್): ತೆಳು ನೀಲಿ ಬಣ್ಣದಿಂದ ಗುರುತಿಸಲ್ಪಡುವ ಈ ಆತ್ಮಗಳು ಗುರುಗಳಾಗಿರುತ್ತಾರೆ (ಸೀನಿಯರ್ ಗೈಡ್). ಈ ಸ್ತರದ ಆತ್ಮಗಳಿಗೆ ಉದಾಹರಣೆ ಹೇಳುವುದಾದರೆ- ಮಹಾತ್ಮ ಗಾಂಧಿ ಮತ್ತು ಮದರ್ ತೆರೇಸಾ. ಬೇರೆ ವಿವರಣೆ ಬೇಕಾ?

(೬) ಆರನೇ ಹಂತ (ಅತಿ-ಪ್ರೌಢ/ ಹೈಲೀ ಅಡ್ವಾನ್ಸ್ಡ್): ಕಡು ನೇರಳೆ ಬಣ್ಣದ ಜೊತೆಗೆ ಬೆಳಕಿನ ಪರಿವೃತ್ತ ಈ ಹಂತದ ಗುರುತು. ಈ ನೆಲೆಯ ಆತ್ಮಗಳು ಪರಿಣತ ಗುರುಗಳಾಗಿರುತ್ತಾರೆ (ಮಾಸ್ಟರ್ ಗೈಡ್). ಬಹುಶಃ ಬುದ್ಧ ಮತ್ತು ಏಸುವನ್ನು ಇಲ್ಲಿರಿಸಬಹುದೇನೋ.

ಡಾ ನ್ಯೂಟನ್ನರ ತಿಳುವಳಿಕೆಗೆ ಬಂದಿರುವ ಆತ್ಮಗಳ ಪರಿಚಯಾತ್ಮಕ ವಿವರಣೆಯಷ್ಟೇ ಇದಾಗಿದೆ. ಇದೇ ಇದಮಿತ್ಥಂ ಅಂತೇನೂ ಅಲ್ಲ. ಆರನೇ ಹಂತವನ್ನೂ ಮೀರಿದ, ಇನ್ನೂ ಹೆಚ್ಚಿನ ಜ್ಞಾನ ಪಡೆದ ಆತ್ಮಗಳಿರಲೇಬೇಕು; ಆದರೆ ಅವೆಲ್ಲ ಪುನರ್ಜನ್ಮ ಪಡೆಯದಿರಬಹುದು, ಅಥವಾ ಮನೋವೈದ್ಯಕೀಯ ನೆರವು ಪಡೆಯಲು ಡಾ ನ್ಯೂಟನ್ನರಲ್ಲಿಗೆ ಬಂದಿರುವವರಿಗೆ ಆ ಉನ್ನತ ಮಟ್ಟದ ಆತ್ಮಗಳ ಪರಿಚಯ ಇಲ್ಲದೇ ಇರಬಹುದು. ಅಂತೂ "ನನ್ನ ಅರಿವಿಗೆ ಬಂದಿದ್ದು ಇಷ್ಟೇ, ಇದಕ್ಕೂ ಮೇಲಿನ ಸ್ತರಗಳಿವೆ ಅನ್ನುವುದರಲ್ಲಿ ಸಂಶಯವಿಲ್ಲ" ಅನ್ನುವುದು ಅವರ ಅರಿಕೆ.

ಎಲ್ಲ ಆತ್ಮಗಳ ಗುರಿ ಪರಿಪೂರ್ಣತೆಯನ್ನು ಸಾಧಿಸುವುದು. ಜ್ಞಾನದ ಆಗರವಾಗಿರುವ, ತೇಜಸ್ಸಿನ ಸ್ರೋತವಾಗಿರುವ, ಎಲ್ಲ ಇರುವಿಕೆಗಳ ಕಾರಣವಾಗಿರುವ, ಪೂರ್ಣತೆಯ ಕೇಂದ್ರ ಶಕ್ತಿಯನ್ನು ಕೂಡಿಕೊಳ್ಳುವುದು ಆತ್ಮದ ಕಲಿಕೆಯ ಉದ್ದೇಶ. ಜ್ಞಾನಾರ್ಜನೆಯಿಂದಲೇ ಅದು ಸಾಧ್ಯ. ಮಾನವ ಜನ್ಮ ಅದಕ್ಕಿರುವ ಉತ್ತಮ (ಸುಲಭದ್ದಲ್ಲ!) ಮಾರ್ಗ. ಈ ಎಲ್ಲ ಮಾತುಗಳು ಭಾರತೀಯರಾದ ನಮಗೆ ಹೊಸದಲ್ಲ. ಇವನ್ನೇ ಡಾ ನ್ಯೂಟನ್ನರ ಪುಸ್ತಕದಲ್ಲಿ ಆತ್ಮಗಳೊಂದಿಗಿನ ಸಂಭಾಷಣೆಯಲ್ಲಿ ಓದಿದಾಗ ಆದ ಅನುಭೂತಿ ಮಾತ್ರ ಹೊಸದು.

12 comments:

Sandeepa said...

"ಜ್ಞಾನ ಪಡೆದ ಆತ್ಮ" concept is new for me.

ಆತ್ಮದ ಬಗೆಗಿನ ಜ್ಞಾನದ ಬಗ್ಗೆ ಕೇಳಿದ್ದೆ.

"ಜ್ಞಾನಾರ್ಜನೆಯಿಂದಲೇ ಅದು ಸಾಧ್ಯ."
- ಇದು ನ್ಯೂಟನ್ನರ ಅಭಿಪ್ರಾಯವೇ?

ಸುಪ್ತದೀಪ್ತಿ suptadeepti said...

@alpazna: "ಜ್ಞಾನಾರ್ಜನೆಯಿಂದಲೇ ಅದು ಸಾಧ್ಯ."- ಇದು ಡಾ. ನ್ಯೂಟನ್ನರ ಸ್ವಂತ ಅಭಿಪ್ರಾಯವಲ್ಲ. ಅವರ ಕ್ಲಯಂಟ್ಸ್ ಜೊತೆ ನಡೆದ ಸಂಭಾಷಣೆಗಳ, ಮನೋವೈಜ್ಞಾನಿಕ ವಿಶ್ಲೇಷಣೆಗಳ ಆಧಾರದ ಮೇಲೆ ಅವರು ಹೇಳುವ ಮಾತಿದು.

ಆತ್ಮದ ಬಗೆಗಿನ ಜ್ಞಾನ ನಮಗೆ, ಭೌತಿಕ ದೇಹದಲ್ಲಿರುವ ಮನುಜ-ಬುದ್ಧಿಗೆ. ಆತ್ಮ ಪಡೆವ ಜ್ಞಾನ ಅಂದರೆ ಭೌತಿಕ ದೇಹವನ್ನು ಮೀರಿದ ಅಲೌಕಿಕ ಪ್ರಜ್ಞೆ ಪಡೆಯುವ ಅತೀಂದ್ರಿಯ ಜ್ಞಾನ. ಇದಕ್ಕಿಂತ ಹೆಚ್ಚು ವಿವರಿಸಲು ನನಗೂ ಶಕ್ತಿಯಿಲ್ಲ, ನನ್ನ ಜ್ಞಾನ ಸೀಮಿತ, ಕ್ಷಮಿಸಿ.

Anonymous said...

ಆರಂಭದಲ್ಲೇ ಒಂದು ಡೌಟು.
"ಮೊದಲ ಹಂತ (ಆರಂಭಿಕ/ ಬಿಗಿನರ್): ಈ ಸ್ತರದ ಆತ್ಮಗಳು ಹಲವಾರು ಜನ್ಮಗಳನ್ನು ಎತ್ತಿದ್ದರೂ ಕಲಿಯಬೇಕಾದ ಪಾಠ ಕಲಿಯದೇ ಇರಬಹುದು..."

ಪಾಠ ಕಲಿಯದೇ ಇದ್ದರೂ ಪದ್ಯ ಕಲಿತಿರಬಹುದಾ?

ಸುಪ್ತದೀಪ್ತಿ suptadeepti said...

@ ಶ್ರೀವತ್ಸ ಜೋಶಿ: "ಪಾಠ ಕಲಿಯದೇ ಇದ್ದರೂ ಪದ್ಯ ಕಲಿತಿರಬಹುದಾ?" -- ಆತ್ಮಗಳ ಪಾಠ ಪದ್ಯದಲ್ಲಿಯೋ ಗದ್ಯದಲ್ಲಿಯೋ ಎಂದು ನನಗಿನ್ನೂ ಗೊತ್ತಾಗಿಲ್ಲ. ನಿಮಗೆ ತಿಳಿದರೆ ನಮಗೂ ಹೇಳಿ. ಪ್ರಶ್ನೆ ಎತ್ತಿದ್ದಕ್ಕೆ ಧನ್ಯವಾದಗಳು.

Anonymous said...

"ಆತ್ಮಗಳ ಪಾಠ ಪದ್ಯದಲ್ಲಿಯೋ ಗದ್ಯದಲ್ಲಿಯೋ ಎಂದು ನನಗಿನ್ನೂ ಗೊತ್ತಾಗಿಲ್ಲ...."

- ನಿಮ್ಮ ಬ್ಲಾಗ್‍ನಲ್ಲಿ ’ಆತ್ಮಗಳ ಪಾಠ’ ಗದ್ಯದಲ್ಲಿಯೇ ಬರ್ತಿದೆಯಲ್ಲ! ಆ ವಿಷಯ ನಿಮಗೇ ಗೊತ್ತಾಗದಿರುವುದು ನನ್ನ ಈ ಜನ್ಮದ ಆತ್ಮವನ್ನು ಆಶ್ಚರ್ಯಚಕಿತವಾಗಿಸಿದೆ!
(ಇಲ್ಲಿಗೆ ತಲೆಹರಟೆ ಮುಗಿಯಿತು. ಇನ್ನು ಮುಂದೆ ಶ್ರೀಮದ್ಗಾಂಭೀರ್ಯದಿಂದ ಆತ್ಮಚಿಂತನವನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ).

Jagali bhaagavata said...

ಬಹುಶಃ ಬುದ್ಧ ಮತ್ತು ಏಸುವನ್ನು ಇಲ್ಲಿರಿಸಬಹುದೇನೋ.....

ಡಾ ನ್ಯೂಟನ್ನರ ತಿಳುವಳಿಕೆಗೆ ಬಂದಿರುವ ಆತ್ಮಗಳ ಪರಿಚಯಾತ್ಮಕ ವಿವರಣೆಯಷ್ಟೇ ಇದಾಗಿದೆ.......

ಇದು ಡಾ. ನ್ಯೂಟನ್ನರ ಸ್ವಂತ ಅಭಿಪ್ರಾಯವಲ್ಲ. ಅವರ ಕ್ಲಯಂಟ್ಸ್ ಜೊತೆ ನಡೆದ ಸಂಭಾಷಣೆಗಳ, ಮನೋವೈಜ್ಞಾನಿಕ ವಿಶ್ಲೇಷಣೆಗಳ ಆಧಾರದ ಮೇಲೆ ಅವರು ಹೇಳುವ ಮಾತಿದು....

ಪ್ರಶ್ನೆ - ಏಸು, ಬುಧ್ಧ ಎಲ್ಲ ನ್ಯೂಟನ್ನರ ಕ್ಲಯಂಟ್ಸ್ ಗಳಾಗಿದ್ರಾ?

ಸುಪ್ತದೀಪ್ತಿ suptadeepti said...

@ಶ್ರೀವತ್ಸ ಜೋಶಿ: ನನ್ನ ಬ್ಲಾಗ್'ನಲ್ಲಿ ಆತ್ಮಗಳಿಗೆ ಪಾಠ ಹೇಳುವ ಪ್ರಯತ್ನ ಮಾಡುತ್ತಿಲ್ಲ. ಆತ್ಮಗಳ ಬಗೆಗೆ ಆತ್ಮಹೊತ್ತವರಿಗೆ ಅರಿವು ನೀಡುವ ಪ್ರಯತ್ನ, ಅಷ್ಟೇ. ತಲೆಹರಟೆ ಮಾಡಿದ್ದಕ್ಕೂ, ಈಗ ಮುಗಿಸಿದ್ದಕ್ಕೂ ವಂದನೆಗಳು.

@ಭಾಗವತ: "ಪ್ರಶ್ನೆ - ಏಸು, ಬುಧ್ಧ ಎಲ್ಲ ನ್ಯೂಟನ್ನರ ಕ್ಲಯಂಟ್ಸ್ ಗಳಾಗಿದ್ರಾ?"-- ಇಲ್ಲವೇ ಇಲ್ಲ ಅಂತ ನಾನೂ ಹೇಳಬಲ್ಲೆ, ಅವರೇ ಬೇಕಾಗಿಲ್ಲ. ಇತರ ಕ್ಲಯಂಟ್'ಗಳ ಅರಿವು ಮತ್ತು ಅನುಭವಗಳ ಆಧಾರದ ಮೇಲೆ, ಅವರುಗಳು ಹೇಳುವ ಆತ್ಮ-ಲೋಕದ ವಿವರಣೆಗಳ ಆಧಾರದ ಮೇಲೆ ಡಾ. ನ್ಯೂಟನ್ ಇವೆಲ್ಲ ವಿಶ್ಲೇಷಣೆಗಳನ್ನು ಮಾಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇಲ್ಲೆಲ್ಲೂ ನನ್ನ ಸ್ವಂತದ ನಿರೂಪಣೆ ಇಲ್ಲ, ಕನ್ನಡದಲ್ಲಿ ಸಂಕ್ಷೇಪ ರೂಪಾಂತರ ಮಾತ್ರ ಇಲ್ಲಿ ನನ್ನ ಕೆಲಸ.

Jagali bhaagavata said...

ಚಿಂತನ ಮುಗೀತು. ಕಾಲು ಎಳೆದಿದ್ದೂ ಮುಗೀತು. ಇನ್ನು ತುಂಟ ಪದ್ಯ ಬರ್ಲಿ.

Anonymous said...

ಧನ್ಯವಾದಗಳು ಜ್ಯೋತಿ. ೬ ಆತ್ಮಗಳ ಕ್ಲಾಸುಗಳಲ್ಲಿ , ನಮ್ಮದು ಯಾವುದು? ಎಂಬ "ಆತ್ಮ ಚಿಂತನ" ಮಾಡುವಲ್ಲಿ ನೆರವಾಯಿತು ಈ ಬರಹ.

ನಂದಕಿಶೋರ said...

ನಮಸ್ಕಾರ ಸುಪ್ತದೀಪ್ತಿ.

ಆತ್ಮಚಿಂತನೆ ಬಗ್ಗೆ ನ್ಯೂಟನ್‍ರ ವಿಶ್ಲೇಷಣೆ ಅಷ್ಟು ಸಮಾಧಾನ ತರಿಸಿಲ್ಲ. ಆತ್ಮವಿಕಾಸದಲ್ಲಿ ಗುರುತಿಸಲಾದ ಆರು ಹಂತಗಳನ್ನು ಪುನರ್ಜನ್ಮದ ಹಿನ್ನೆಯಲ್ಲಿ ಗಮನಿಸಿದರೆ ಸಮರ್ಪಕ ವಿವರಣೆಯಾಗಲಾರವು? ಉದಾ- ಆತ್ಮಗಳು ಉನ್ನತ ಹಂತಕ್ಕೇರಿದಂತೆ ಅವು ಸಮಾಜಮುಖಿಯಾಗುತ್ತವೆ ಅಂದಿದ್ದೀರಿ (=ನ್ಯೂಟನ್ ಅಂದಿದ್ದಾರೆ). ಒಂದು ವೇಳೆ ಆ ಉನ್ನತಾತ್ಮವು ಕರ್ಮವಶಾತ್ ಕಾಡುಪ್ರಾಣಿಜನ್ಮದಲ್ಲಿ ಜನಿಸಿದರೆ ಅಲ್ಲಿ ಸಮಾಜಮುಖಿಯಾಗುವ ಪ್ರಶ್ನೆಯೇ ಇಲ್ಲ.[ಇದರ ಬಗ್ಗೆ ಅಭಿಪ್ರಾಯಭೇದವಿದ್ದಲ್ಲಿ ಬೇಕಿದ್ದರೆ ಸಂವಾದಿಸುವ]. ಹೀಗಿರುವಾಗ ಆ ಜನ್ಮದಲ್ಲಿ ಆತ್ಮವು ಗೈಡ್, ಮಾಸ್ಟರ್ ಗೈಡ್ ಇತ್ಯಾದಿ ಆಗುವುದು ಹೇಗೆ?
" ಹಲವಾರು ಜನ್ಮಗಳನ್ನು ಎತ್ತಿದ್ದರೂ ಕಲಿಯಬೇಕಾದ ಪಾಠ ಕಲಿಯದೇ ಇರಬಹುದು " - ಇಲ್ಲಿ ಯಾವ ಪಾಠದ ಬಗ್ಗೆ ನ್ಯೂಟನ್ ಹೇಳುತ್ತಿದ್ದಾರೆ? ಭಾರತೀಯ ದಾರ್ಶನಿಕರು (ಮುಖ್ಯವಾಗಿ ಶಂಕರ,ಮಧ್ವರು) ವೇದಪುರಾಣಾದಿಗಳನ್ನು ಅರಿತು ಹೇಳಿದ ಪ್ರಕಾರ ಆತ್ಮವು ತನ್ನನ್ನು ಪೂರ್ಣವಾಗಿ ಅರಿಯುವುದೇ ಅದರ ಅಂತಿಮ ಜ್ಞಾನ [ಇಲ್ಲಿ ಶಂಕರರು ಪೂರ್ಣ ಜ್ಞಾನ ಪಡೆದ ಆತ್ಮವು ತಾನೇ ಪರಮಾತ್ಮನಾಗುತ್ತದೆಂದೂ, ಮಧ್ವರು ಅದು ಪರಮಾತ್ಮನನ್ನು ಸೇರಿ ಪ್ರತ್ಯೇಕವಾಗಿರುತ್ತದೆಂದೂ ಅಭಿಪ್ರಾಯಿಸುತ್ತಾರೆ]. ಜನರೊಂದಿಗೆ ನಡೆಸಿದ ನಿದ್ರಾಸಂವಾದದಲ್ಲಿ ಅವರಿಗೆ ಇಂತಹ ಜ್ಞಾನದ ಬಗ್ಗೆ ತಿಳಿವು ಉಂಟಾಗಲು ಸಾಧ್ಯವೇ? ನೀವು ಅತೀಂದ್ರಿಯ ಮತ್ತು ಅಲೌಕಿಕ ಜ್ಞಾನ ಅಂತ ಗುರುತಿಸಿದ್ದು ಇದನ್ನೆಯಾ?
ಇನ್ನು, ಆ ಆರು ಹಂತದ ಆತ್ಮಗಳಲ್ಲಿ ಎಲ್ಲವೂ ’ಸಜ್ಜನ’ರನ್ನೇ ಸೂಚಿಸುತ್ತವೆ. ದುರಾತ್ಮಗಳು ಅಂತ ಇಲ್ಲವೇ? ನ್ಯೂಟನ್‍ರ ಪ್ರಕಾರ ಅವು ಯಾವ ಹಂತದಲ್ಲಿ ಬರುತ್ತವೆ ?
ಆತ್ಮಜಿಜ್ಞಾಸೆಯ ಬಗ್ಗೆ ನ್ಯೂಟನ್ನರ ಸವಿನಯ ಪ್ರಯತ್ನ ಸ್ತುತ್ಯರ್ಹವಾದರೂ ಪ್ರತ್ಯಕ್ಷಾನುಮಾನಪ್ರಮಾಣಗಳಿಂದ, ಧ್ಯಾನದಿಂದ, ದೀರ್ಘಸಾಧನೆಯಿಂದ ಗೋಚರಿಸಬೇಕಾದ ಆತ್ಮಜ್ಞಾನವನ್ನು , ಆತ್ಮದ ಸ್ವರೂಪವನ್ನು ಬರಿಯ ಸಂವಾದದಿಂದ ತಿಳಿಯುವುದು ಯಾಕೋ ಸಮೀಚೀನ ಅಂತ ಅನಿಸಲಿಲ್ಲ.
ಉಳಿದಂತೆ, ಅವರ ಚಿಂತನೆಗಳನ್ನು ಸರಳವಾಗಿ,ಚಂದವಾಗಿ ಕನ್ನಡಕ್ಕಿಳಿಸಿದ ನಿಮಗೆ ಅಭಿನಂದನೆಗಳು.
ಮುಂದಿನ ಬರಹವನ್ನು ಕಾಯುತ್ತಿದ್ದೇನೆ.

ಸುಪ್ತದೀಪ್ತಿ suptadeepti said...

@ಯಾತ್ರಿಕ: ನಿಮ್ಮ ಎಲ್ಲ ಸಂಶಯಗಳಿಗೂ ಉತ್ತರ ನನ್ನ ಬಳಿ ಇಲ್ಲ (ನ್ಯೂಟನ್ನರ ಪುಸ್ತಕ ಓದಿದ ತಿಳುವಳಿಕೆಯಿಂದಲೂ, ಅಥವಾ ಭಾರತೀಯಳಾಗಿ ಹಿರಿಯರಿಂದ ತಿಳಿದುಕೊಂಡ ಅರೆ-ಬರೆ ಜ್ಞಾನದಿಂದಲೂ ಎಲ್ಲಾ ಉತ್ತರ ಪಡೆದುಕೊಂಡಿಲ್ಲ). ಆದರೆ ಕೆಲವು ವಿವರಗಳನ್ನು ಕೊಡಬಲ್ಲೆ.

(೧) "ಒಂದು ವೇಳೆ ಆ ಉನ್ನತಾತ್ಮವು ಕರ್ಮವಶಾತ್ ಕಾಡುಪ್ರಾಣಿಜನ್ಮದಲ್ಲಿ ಜನಿಸಿದರೆ ಅಲ್ಲಿ ಸಮಾಜಮುಖಿಯಾಗುವ ಪ್ರಶ್ನೆಯೇ ಇಲ್ಲ"- ಡಾ| ನ್ಯೂಟನ್ ಅರಿತಿರುವ ಪ್ರಕಾರ ಮಾನವ ಜನ್ಮವೇ ಆತ್ಮಗಳಿಗೆ ಔನ್ನತ್ಯ ಮಾರ್ಗದ ಅತ್ಯುತ್ತಮ ಸಾಧನ. ಆದ್ದರಿಂದ ಕರ್ಮವಶಾತ್ ತಪ್ಪು ಮಾಡಿದ ಮೇಲಿನ ಹಂತದ ಆತ್ಮ, ತನ್ನ ಮುಂದಿನ ಜನ್ಮದಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಸರಿಯಾದ "ಪಾಠ" ಕಲಿಯಲು ಮತ್ತೊಮ್ಮೆ ಮಾನವ ಜನ್ಮವನ್ನೇ ಆರಿಸಿಕೊಳ್ಳುತ್ತದೆ. ಮಾನವನಲ್ಲದ ಜನ್ಮ ಒಂಥರಾ "rest" ಜೀವನ. ಹಾಗೆಯೇ ಇತರರ ಕಣ್ಣಿಗೆ ಕಾಣುವ "ಸುಖೀ" ಮನುಜರಿಗೂ ಇದು "rest, easy" ಜೀವನವಾಗಿರಬಹುದು ಎನ್ನುತ್ತಾರೆ.

(2) "ಯಾವ ಪಾಠದ ಬಗ್ಗೆ ನ್ಯೂಟನ್ ಹೇಳುತ್ತಿದ್ದಾರೆ?"- ಭಾರತೀಯ ದಾರ್ಶನಿಕರ ವಿವರಣೆಗಳಿಗೂ ಇಲ್ಲಿನ ವಿವರಣೆಗಳಿಗೂ ಕೆಲವಾರು ವ್ಯತ್ಯಾಸಗಳು ಇವೆ, ಇಲ್ಲವೆಂದಲ್ಲ. ಆದರೆ, ಇಲ್ಲಿಯೂ ಸ್ವಭಾವತಃ ಆತ್ಮ ತನ್ನನ್ನು ತಾನು ಅರಿತುಕೊಂಡು, ತನ್ನೆಲ್ಲಾ "ದುರ್ಗುಣ" (ಅರಿಷಡ್ವರ್ಗ)ಗಳನ್ನು ತ್ಯಜಿಸಿಕೊಂಡು ಉತ್ತಮ ಗುಣಗಳಾದ ತ್ಯಾಗ, ಪ್ರೀತಿಗಳನ್ನೇ ಮೈಗೂಡಿಸಿಕೊಂಡಾಗಲೇ ಮೇಲು-ಮೇಲಿನ ಹಂತಕ್ಕೆ ಏರಬಲ್ಲುದು, ಕೊನೆಗೆ ತನ್ನ ಕರ್ತೃವಾದ "ದೇವ"ರನ್ನು (ಎಲ್ಲ ಆತ್ಮಗಳ ಕರ್ತೃ, ಶಕ್ತಿಯ ಸ್ರೋತ) ಸೇರಿಕೊಳ್ಳಬಹುದು. ಅದೇ ಎಲ್ಲ ಆತ್ಮಗಳ ಉದ್ದೇಶ, ಗುರಿ.

(೩) "ಜನರೊಂದಿಗೆ ನಡೆಸಿದ ನಿದ್ರಾಸಂವಾದದಲ್ಲಿ ಅವರಿಗೆ ಇಂತಹ ಜ್ಞಾನದ ಬಗ್ಗೆ ತಿಳಿವು ಉಂಟಾಗಲು ಸಾಧ್ಯವೇ? ನೀವು ಅತೀಂದ್ರಿಯ ಮತ್ತು ಅಲೌಕಿಕ ಜ್ಞಾನ ಅಂತ ಗುರುತಿಸಿದ್ದು ಇದನ್ನೆಯಾ?"- ನಿದ್ರಾಸಂವಾದವೆಂದು ನೀವು ಅಂದಿರುವುದು ಸಾಮಾನ್ಯ ಸಮ್ಮೋಹನ ಸಂದರ್ಭಕ್ಕೆ ಸರಿ. ನ್ಯೂಟನ್ ನಡೆಸುವ ಸಮ್ಮೋಹನದಲ್ಲಿ ವ್ಯಕ್ತಿಯನ್ನು ಇನ್ನೂ ಗಾಢ ಸಮ್ಮೋಹನಕ್ಕೆ ಒಳಪಡಿಸಿ ವ್ಯಕ್ತಿಯ ಅತೀಂದ್ರಿಯ ಪ್ರಜ್ಞೆಯನ್ನು ಪ್ರಶ್ನಿಸುವುದಾಗಿದೆ. ಈ ಅತೀಂದ್ರಿಯ ಪ್ರಜ್ಞೆಯೇ ಆತ್ಮ ಅನ್ನುವುದು ಅವರ ನಿಲುವು. ಅಲ್ಲಿರುವ ತಿಳುವಳಿಕೆಯ ಅಂಶಗಳೇ ಅಲೌಕಿಕ ಜ್ಞಾನದ ತುಣುಕುಗಳು. ಇಂತಹ ಸಮ್ಮೋಹನಗಳ ಬಳಿಕ ವ್ಯಕ್ತಿಯ ನೆನಪಿನಂಗಳಕ್ಕೆ (ಸಾಮಾನ್ಯ ಪ್ರಜ್ಞೆ, ದೈನಂದಿನ ಪ್ರಜ್ಞೆಗೆ) ತನ್ನ ಅತೀತದ ಕೆಲವಾರು ತುಣುಕುಗಳು ನೆನಪುಗಳಾಗಿ ಬಂದು ನಿಲ್ಲುತ್ತವೆ. ಅದೂ ಕೂಡಾ, ಆ ವ್ಯಕ್ತಿಯ "destiny"ಯಲ್ಲಿ ಅಂಥ ನೆನಪು, ಕಲಿಕೆ ಅಗತ್ಯವಾಗಿದ್ದರೆ ಮಾತ್ರ ಇಂಥ ಸಂದರ್ಭ ಒದಗಿ ಬರುತ್ತದೆ; ಇಲ್ಲವಾದರೆ ಇಲ್ಲ, ಎಂದೂ ಹೇಳುತ್ತಾರೆ. (ಅದರ ಪ್ರಕಾರ, ನಾನು ಈ ತಿಳುವಳಿಕೆ ಪಡೆದದ್ದು, ನನ್ನ ಬ್ಲಾಗಿನಲ್ಲಿ ಅದನ್ನು ಕನ್ನಡೀಕರಿಸುತ್ತಿರುವುದು, ಅದನ್ನು ನೀವುಗಳೆಲ್ಲ ಓದುತ್ತಿರುವುದು, ಅರಿವು ಪಡೆಯುತ್ತಿರುವುದು,... ಎಲ್ಲವೂ ನಮ್ಮ ನಮ್ಮ ಕರ್ಮವಶದಿಂದಲೇ! ಯಾವುದೂ ಆಕಸ್ಮಿಕವಲ್ಲ!)

(೪) "ಆ ಆರು ಹಂತದ ಆತ್ಮಗಳಲ್ಲಿ ಎಲ್ಲವೂ 'ಸಜ್ಜನ’ರನ್ನೇ ಸೂಚಿಸುತ್ತವೆ. ದುರಾತ್ಮಗಳು ಅಂತ ಇಲ್ಲವೇ? ನ್ಯೂಟನ್‍ರ ಪ್ರಕಾರ ಅವು ಯಾವ ಹಂತದಲ್ಲಿ ಬರುತ್ತವೆ ?"- ಈ ಆರು ಹಂತಗಳು ನ್ಯೂಟನ್ನರ ಪ್ರತ್ಯಕ್ಷ ತಿಳುವಳಿಕೆಗೆ ನೇರವಾಗಿ ಒದಗಿಬಂದದ್ದಲ್ಲ. ಅವರು ನಡೆಸಿದ ಸಂಶೋಧನಾತ್ಮಕ ಸಮ್ಮೋಹನಗಳಲ್ಲಿ ವ್ಯಕ್ತಿಗಳ ಅತೀಂದ್ರಿಯ ಪ್ರಜ್ಞೆಗಳು ಕೊಟ್ಟ ಉತ್ತರಗಳ, ಹೇಳಿದ ವಿವರಣೆಗಳ ಆಧಾರದ ಮೇಲೆ ನ್ಯೂಟನ್ನರು ಕಂಡುಕೊಂಡ ವಿವರಗಳನ್ನು ವಿಭಾಗೀಕರಿಸಿದ ಕ್ರಮ ಅಷ್ಟೇ. ಈ ವಿಭಾಗೀಕರಣ ಆತ್ಮಲೋಕದ ಬಗ್ಗೆ ತಿಳಿದೊಕೊಳ್ಳುವಲ್ಲಿ ಜನ ಸಾಮಾನ್ಯರಿಗೆ ಸಹಾಯವಾಗಬಹುದು ಎಂದಿದ್ದಾರೆ. ಜೊತೆಗೆ, ದುರಾತ್ಮಗಳು ಇಲ್ಲವೆಂದಲ್ಲ, ಖಂಡಿತಾ ಇವೆ, ಅವೆಲ್ಲ ಮೊದಲ ಹಂತದಲ್ಲೇ ಬರುತ್ತವೆಂದಿಲ್ಲ. ಎರಡನೇ ಅಥವಾ ಮೂರನೇ ಹಂತದಲ್ಲೂ ಬರಬಹುದು. ಯಾಕೆಂದರೆ, ದುರ್ಜನ ಅನ್ನುವ ಒಬ್ಬ ವ್ಯಕ್ತಿ ತನ್ನದೇ ಆದ ನೆಲೆಯಲ್ಲಿ ಏನೋ ಒಂದು ಪಾಠದ ಕಲಿಕೆಯಲ್ಲಿರುತ್ತಾನೆ (ಸುಯೋಧನ, ಏಕಲವ್ಯ, ರಾಬಿನ್ ಹುಡ್, ಇಂದಿರಾ ಗಾಂಧಿ,... ಇವರೆಲ್ಲ ಸಜ್ಜನರೇ ದುರ್ಜನನರೇ!?). ಇದು ಒಂಥರಾ ಕ್ಲಿಷ್ಟವಾದ ವಿವರಣೆ.

(೫) "ಧ್ಯಾನದಿಂದ, ದೀರ್ಘಸಾಧನೆಯಿಂದ ಗೋಚರಿಸಬೇಕಾದ ಆತ್ಮಜ್ಞಾನವನ್ನು , ಆತ್ಮದ ಸ್ವರೂಪವನ್ನು ಬರಿಯ ಸಂವಾದದಿಂದ ತಿಳಿಯುವುದು ಯಾಕೋ ಸಮೀಚೀನ ಅಂತ ಅನಿಸಲಿಲ್ಲ."- ನಾವು ಪಡೆಯುತ್ತಿರುವುದು ಆತ್ಮದ ಬಗೆಗಿನ ತಿಳುವಳಿಕೆ. ಆತ್ಮಜ್ಞಾನ ಅಂದರೆ, ಆತ್ಮ-ಕಲಿಕೆಯ-ಗಳಿಕೆ, ಅಂದರೆ ಆತ್ಮ ತನ್ನದೇ ಮಟ್ಟದಲ್ಲಿ (ಅತೀಂದ್ರಿಯ ಪ್ರಜ್ಞೆಯ ಮಟ್ಟದಲ್ಲಿ) ಕಲಿತ ಪಾಠದಿಂದ ಅಂತರ್ಗತಗೊಳಿಸಿಕೊಂಡ ಜ್ಞಾನ. ಇದು ನನ್ನ ಅರಿವು. ಇದಕ್ಕೆ ಹೊರತಾಗಿದ್ದರೂ ಇರಬಹುದು. ನನ್ನ ಅರಿವು ಸೀಮಿತ.

ಜೊತೆಗೆ, ಜ್ಞಾನಾರ್ಜನೆಗೆ ಇಂಥದ್ದೇ ದಾರಿಯಾಗಲೇಬೇಕೆಂಬ ನಿಯಮವಿಲ್ಲ ಅನ್ನುವುದೂ ನನ್ನ ತಿಳುವಳಿಕೆ (ಕಳ್ಳತನದಿಂದ ಕಲಿಯುವ ಹೊರತಾಗಿ!). ಸಂವಾದವೆಂದರೆ ಕಲಿಕೆಯ ಒಂದು ರೂಪ. ಕಲಿಕೆಗೆ ಬೇಲಿ ಬೇಕಿಲ್ಲ ಅನ್ನುವ ನಂಬಿಕೆ ನನ್ನದು. ನನ್ನ ತಿಳುವಳಿಕೆ ಅಲ್ಪ. ತಪ್ಪಿದ್ದರೆ ಕ್ಷಮಿಸಿ. ಯಾವುದೇ ಭಾರತೀಯ ದರ್ಶನತತ್ವವನ್ನು, ಶಾಸ್ತ್ರವನ್ನು ಅಧ್ಯಯನ ಮಾಡಿಲ್ಲ ನಾನು. ಸಂದರ್ಭವಶಾತ್ ಡಾ.ನ್ಯೂಟನ್ನರ ಪುಸ್ತಕ ನನಗೆ ಸಿಕ್ಕಿತು (ನನ್ನೊಬ್ಬ ಗೆಳೆಯರು ಕೊಟ್ಟರು), ಬಳಿಕ ಡಾ.ವೈಸ್ ಅವರ ಪುಸ್ತಕಗಳನ್ನೂ ಓದಿದೆ. ಕುತೂಹಲ ಹೆಚ್ಚಿದೆ. ಇನ್ನೂ ಓದಬೇಕಿದೆ. ತಿಳಿದದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ, ಅಷ್ಟೇ.

ನಂದಕಿಶೋರ said...

ಉತ್ತರಗಳಿಗಾಗಿ ತುಂಬಾ ಧನ್ಯವಾದ. ಅವು ನನ್ನ ಸಂಶಯ/ಪ್ರಶ್ನೆಗಳಿಗೆ ಪೂರ್ತಿ ಸಮಾಧಾನ ಒಪ್ಪಿಸಿಲ್ಲವಾದರೂ ಹೊಸ ನೋಟಗಳನ್ನು ಒದಗಿಸಿದವು. ಓದಿದ್ದನ್ನು ನೀವು ಅರ್ಥೈಸಿಕೊಂಡ ಬಗೆ ಇಷ್ಟವಾಯಿತು.

"ಕಲಿಕೆಗೆ ಬೇಲಿ ಬೇಕಿಲ್ಲ ಅನ್ನುವ ನಂಬಿಕೆ ನನ್ನದು." - ’ಆ ನೋ ಭದ್ರಾ ಕ್ರತವೋ ಯಂತು ವಿಶ್ವತ:’ - ’ಒಳ್ಳೆಯ ವಿಷಯಗಳು ಎಲ್ಲೆಡೆಯಿಂದಲೂ ಬರಲಿ’ ಅನ್ನುವ ಅರ್ಥದ ನಿಮ್ಮ ಮಾತು ತುಂಬಾ ಆಪ್ಯಾಯಮಾನವಾಯಿತು. ನನ್ನದೂ ಪೂರ್ಣ ಸಹಮತವಿದೆ.

"ನನ್ನ ತಿಳುವಳಿಕೆ ಅಲ್ಪ. ತಪ್ಪಿದ್ದರೆ ಕ್ಷಮಿಸಿ. ಯಾವುದೇ ಭಾರತೀಯ ದರ್ಶನತತ್ವವನ್ನು, ಶಾಸ್ತ್ರವನ್ನು ಅಧ್ಯಯನ ಮಾಡಿಲ್ಲ ನಾನು." - ಪರ್ವಾಗಿಲ್ಲ. ನಾನೂ ಅಂಥಾ ಅಧ್ಯಯನ ಏನೂ ಮಾಡಿಲ್ಲ; ಸ್ವಲ್ಪ ಓದಿದ್ದು, ಕೇಳಿದ್ದು ಅಷ್ಟೆ. ಆಸಕ್ತಿಯೊಂದು ಬೇಕಾದಷ್ಟಿದೆ. ಆದ್ದರಿಂದ ನಮನಮಗೆ ತಿಳಿದಿದ್ದನ್ನು ಹಂಚಿಕೊಂಡು ಒಟ್ಟಾಗಿ ಅರಿಯೋಣ. ಅಲ್ವಾ? :-)