ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Monday, 7 May 2007

ಆತ್ಮ ಚಿಂತನ-೦೨

ಮನೋವೈದ್ಯರಿಬ್ಬರೂ (ಡಾ ನ್ಯೂಟನ್ ಮತ್ತು ಡಾ ವೈಸ್) ತಮ್ಮ ಗ್ರಾಹಕರನ್ನು ಸಮ್ಮೋಹನಕ್ಕೆ ಒಳಪಡಿಸುವ ಮೊದಲು ಸಂದರ್ಶನದ ಮೂಲಕ ಅವರ ಪರಿಸ್ಥಿತಿಯ ಪರಿಚಯ ಮಾಡಿಕೊಳ್ಳುತ್ತಾರೆ. ಬಹುತೇಕ ಗ್ರಾಹಕರು ಇತರ ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಶುಶ್ರೂಷೆಯನ್ನು ಪಡೆಯಲು ಪ್ರಯತ್ನಿಸಿದವರೇ. ಅದರಿಂದ ಪ್ರಯೋಜನ ದೊರಕದೆ ಇವರಲ್ಲಿ ಬಂದವರು. ಡಾ ನ್ಯೂಟನ್ ತಮ್ಮ ಪುಸ್ತಕಗಳಲ್ಲಿ ಆತ್ಮದ ಸ್ವರೂಪ, ಆತ್ಮಗಳ ಲೋಕ, ಆತ್ಮಗಳ ಕಲಿಕೆ, ಮತ್ತು ಆತ್ಮ ಜ್ಞಾನದ ಹಂತಗಳನ್ನು ವಿವರಿಸುತ್ತಾರೆ. ಡಾ ವೈಸ್, ತಮ್ಮ ಗ್ರಾಹಕರಿಗೆ ಶಾಂತಿ ನೆಮ್ಮದಿ ಒದಗಿಸುವ "ರೆಗ್ರೆಷನ್ ಥೆರಪಿ"ಯನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಶಿಬಿರಗಳನ್ನೂ ಸಾಮೂಹಿಕ ಕಾರ್ಯಾಗಾರಗಳನ್ನೂ ನಡೆಸುತ್ತಿದ್ದಾರೆ.

ಡಾ ನ್ಯೂಟನ್ ವಿವರಿಸುವಂತೆ, ನಮ್ಮ ಆತ್ಮ ಶಕ್ತಿ ಸ್ವರೂಪ. ಅದಕ್ಕೆ ಮುಖ, ಕಣ್ಣು-ಕೈ-ಕಾಲು, ದೇಹ... ಏನೂ ಇಲ್ಲ. ಬರೇ ಬೆಳಕಿನ ಪುಟ್ಟ ಗೋಳದಂಥಾದ್ದು. ನಮ್ಮ ಆತ್ಮದ ಜ್ಞಾನದ ಆಳವನ್ನವಲಂಬಿಸಿ ಆ ಬೆಳಕಿನ ಗೋಳದ ಬಣ್ಣವಿರುತ್ತದೆ. ಅನನುಭವಿ, ಮೊದಲ ಹಂತದ ಆತ್ಮ ಪೂರ್ಣ ಬಿಳಿ ಬಣ್ಣದ್ದಾದರೆ, ಹಂತ ಹಂತವಾಗಿ ಕಿತ್ತಳೆ, ಹಳದಿ, ಹಸುರು, ನೀಲಿ, ನೇರಳೆ ಬಣ್ಣಗಳವರೆಗಿನ ಆತ್ಮಗಳ ಅಸ್ತಿತ್ವ ಅವರ ಅನುಭವಕ್ಕೆ ಬಂದಿದೆಯಂತೆ. ಒಂದು ಆತ್ಮ ತನ್ನ ಭೌತಿಕ ದೇಹದಿಂದ ಹೊರಬಿದ್ದೊಡನೆ, ಆ ಆತ್ಮಗತ ಜ್ಞಾನವನ್ನು ಅವಲಂಬಿಸಿ, ಆತ್ಮಲೋಕ (ಸ್ಪಿರಿಟ್ ವರ್ಲ್ಡ್) ತಲುಪುತ್ತದೆ. ಕೆಲವು ಕಿರಿಯ/ಎಳೆಯ ಅಥವಾ ಅನನುಭವಿ ಆತ್ಮಗಳು ಗಲಿಬಿಲಿಗೊಂಡು ಭೂಮಿಯ ವಾಯುವಲಯದಲ್ಲೇ ಸುತ್ತುತ್ತಿರಬಹುದು. ಆಗ ಅಂಥಾ ಆತ್ಮದ ಗುರುಸ್ಥಾನದಲ್ಲಿರುವ ಆತ್ಮ, ಭೌತಿಕ ದೇಹದಲ್ಲಿದ್ದಾಗ ಹತ್ತಿರದ ಸಂಬಂಧಿಕರಾಗಿದ್ದವರ ಆತ್ಮ ಈ ಆತ್ಮವನ್ನು ಹದವಾದ ಸೆಳೆತಕ್ಕೊಳಪಡಿಸಿ ನಿಜನೆಲೆಯಾದ ಆತ್ಮಲೋಕದ ಕಡೆಗೆ ಕರೆಸಿಕೊಳ್ಳುತ್ತವೆ. ಸ್ವಲ್ಪ ಅನುಭವವಿರುವ ಆತ್ಮ (ಹಲವಾರು ಜನ್ಮಗಳನ್ನೆತ್ತಿದ ಆತ್ಮ, ಹಲವು ಬಾರಿ ವಿದೇಶಯಾತ್ರೆ ಮಾಡಿದವರಂತೆ) ತನ್ನ ಮನೆಯತ್ತ ತಾನೇ ಪಯಣಿಸುತ್ತದೆ. ಬಹುತೇಕ ಆತ್ಮಗಳು ಭೌತಿಕ ಸಾವಿನ ಬಳಿಕ "ಒಂದು ಬೆಳಕಿನ ಕೊಳವೆಯೊಳಗೆ ವೇಗವಾಗಿ ಪಯಣಿಸಿದ" ಅನುಭವ ಪಡೆಯುತ್ತವೆ.

ಡಾ ವೈಸ್ ತಮ್ಮ ಪುಸ್ತಕಗಳಲ್ಲಿ ಆತ್ಮಲೋಕದ ಬದಲಾಗಿ ಆತ್ಮಗಳ ಬಗೆಗೇ ತಿಳಿಸುತ್ತಾರೆ. ಗುರು/ಗೈಡ್ ಆತ್ಮಗಳ ಬಗ್ಗೆ ಬರೆಯುತ್ತಾರೆ. ಸಮ್ಮೋಹನದಲ್ಲಿರುವ ತಮ್ಮ ಗ್ರಾಹಕರು ಗೈಡ್ ನೀಡುವ ಸಂದೇಶಗಳನ್ನು ತಮಗರಿವಿಲ್ಲದೆಯೇ ಅರುಹುವುದನ್ನು ಬರೆಯುತ್ತಾರೆ. ಎರಡು ಜನ್ಮಗಳ ನಡುವೆ ಆತ್ಮ ಪುನಶ್ಚೇತನಗೊಳ್ಳುವ ಲೋಕದ ಬಗ್ಗೆ ಇಲ್ಲಿ ಹೆಚ್ಚು ಮಾತಿಲ್ಲ. ನಮ್ಮ ಹಿಂದಿನ ಜೀವನ ಹೇಗಿತ್ತು, ಮುಂದಿನದು ಹೇಗಿರಬಲ್ಲುದು ಎನ್ನುವುದರ ಸುತ್ತಲೇ ಅವರ ಕೆಲಸ. ಅವರ ಪ್ರಕಾರ ಎಲ್ಲ ಆತ್ಮಗಳೂ ಒಂದೇ; ಅನುಭವದ ಆಳಗಳು ಬೇರೆ ಬೇರೆ, ಅಷ್ಟೇ. ಬಣ್ಣದ ಗೋಳಗಳ ಬಗ್ಗೆ ಅವರು ತಿಳಿಸುವುದಿಲ್ಲ, ಚೇತನದತ್ತ ಅವರ ಗಮನ. ಸ್ವಸಮ್ಮೋಹನದ ಬಗ್ಗೆಯೂ ಡಾ ವೈಸ್ ತಿಳಿಸುತ್ತಾರೆ; ಮೆಡಿಟೇಷನ್, ಧ್ಯಾನ, ಏಕಾಗ್ರತೆಯನ್ನು ಅಭ್ಯಸಿಸಲು ಹೇಳುತ್ತಾರೆ. ನಿದ್ದೆ-ಎಚ್ಚರಗಳ ನಡುವಿನ ಸ್ಥಿತಿಯಲ್ಲಿನ ಕನಸುಗಳನ್ನು ನೆನಪಿರಿಸಿಕೊಂಡು ಅವನ್ನು ಗುರುತು ಹಾಕಿಕೊಂಡು ಒಂದು ಸೂತ್ರದಲ್ಲಿ ಹೆಣೆಯಲಾಗುತ್ತದೆಯೋ ನೋಡಿ, ಅನ್ನುತ್ತಾರೆ. ಅಗಲಿದ ಆತ್ಮೀಯರಿಂದ ಸಂದೇಶಗಳು ಬರಬಹುದು, ಬರುತ್ತವೆ; ಮನಸ್ಸು ಮುಕ್ತವಾಗಿರಲಿ, ಎಂದು ಸಾರುತ್ತಾರೆ.

ಇನ್ನು ಒಂದು ವಾರ ನೀವೇನು ಮಾಡುತ್ತೀರಿ? ಬರೆದು ತಿಳಿಸಿ. ಮುಂದಿನ ಸೋಮವಾರ ಸಿಗುತ್ತೇನೆ.

7 comments:

mouna said...

anubhavagalU namma nithya jeevanadalli bahala prabhavavannu beerutadde, yaavude tarahaddagirali. again, atmagaLLanu gurutisuvudu.. punarjanma iddralli nanage vishwasavilla...

parijata said...

ನಾನು ಈ ಫಿಲಾಸಫಿಯನ್ನು ಮೊಟ್ಟಮೊದಲಿಗೆ ಓದಿದ್ದು ಸ್ವಾಮಿ ಜಗದಾತ್ಮಾನಂದರ "ಬದುಕಲು ಕಲಿಯಿರಿ" ಎಂಬ ಎರಡು ಸಂಪುಟಗಳ ಪುಸ್ತಕದಲ್ಲಿ. ಸ್ವಾಮಿಗಳು ಉಲ್ಲೇಖಿಸಿದ್ದ ಒಂದು ಪುಸ್ತಕ ಜೀನಾ ಸೆರ್ಮಿನಾರಾ (Gina Cerminara) ಎಂಬುವರು ಬರೆದ "Many Mansions" ಎಂಬುದು. ಈ ಪುಸ್ತಕವನ್ನೂ ಕೊಂಡು ಓದಿದೆ. ನನ್ನ ಕೆಲವು ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಸಿಕ್ಕಿತು.

ಸುಪ್ತದೀಪ್ತಿಯವರೇ, ನಿಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ಸುಪ್ತದೀಪ್ತಿ suptadeepti said...

@ಪಾರಿಜಾತ: ಸ್ವಾಮಿ ಜಗದಾತ್ಮಾನಂದರ ಬಗ್ಗೆ, ಅವರ ಪುಸ್ತಕದ ಬಗ್ಗೆ ಕೇಳಿದ್ದೇನೆ, ಓದಿಲ್ಲ. ಜೀನಾ ಅವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು.

@ಮೌನ: ಆತ್ಮಗಳ ಚಿಂತನೆಯ ಬಗ್ಗೆ ನಿಮಗೆ ವಿಶ್ವಾಸವಿಲ್ಲದಲ್ಲಿ ಒತ್ತಾಯವಿಲ್ಲ. ಇದೇ ಸತ್ಯ ಅನ್ನುವುದು ನನ್ನ ವಾದವಂತೂ ಅಲ್ಲ. ಇದೂ ಒಂದು ನೋಟ, ನನಗೆ ಒಪ್ಪಿಗೆಯಾಗಿದೆ, ಅದನ್ನು ಹಂಚಿಕೊಳ್ಳುತ್ತಿದ್ದೇನೆ, ಅಷ್ಟೇ.
ಅನುಭವಗಳು ಜೀವನದ ಒಂದು ಭಾಗ, ನಿಜ. ಅವುಗಳ ಪ್ರಭಾವವೂ ಗಾಢ. ಅವುಗಳಿಂದ ನಾವು ಕಲಿಯುವಂಥದ್ದು ಇರುತ್ತದೆ, ಬೆಳೆಯುವ ದಾರಿ ಇರುತ್ತದೆ. ಬೆಳವಣಿಗೆ ನಮ್ಮೆಲ್ಲರ ಜ್ಞಾನಾರ್ಜನೆಯ ಅವಿಭಾಜ್ಯ ಅಂಗ. ಅಂಥ ಹಾದಿಯಲ್ಲಿ ನನ್ನ ಕೆಲವು ಹೆಜ್ಜೆಗಳಷ್ಟೇ ಇವು. ಇವೇ ನಿತ್ಯ ಸತ್ಯಗಳಲ್ಲ. ನಿಮಗೆ ಅಂಥ ಭಾವನೆ ನನ್ನ ಬರಹಗಳಲ್ಲಿ ಕಂಡುಬಂದರೆ ಕ್ಷಮಿಸಿ.

ಶ್ಯಾಮಾ said...

ವ್ಯಕ್ತಿಯನ್ನು ಸಮ್ಮೊಹನ ಕ್ಕೊಳಪಡಿಸಿ ಆ ವ್ಯಕ್ತಿಯ ಆತ್ಮಡೊಡನೆ ಸಂಭಾಷಿಸಬಹುದೆ? ಬಹಳ ಕುತೂಹಲಕಾರಿಯಾಗಿದೆ....
ಮತ್ತೆ ನಮಗೆ ಬೀಳುವ ಕನಸು ಗೂ ನಮ್ಮ ಆತ್ಮಕ್ಕೋ ಏನಾದರೂ ಸಂಬಂಧ ಇದೆಯೇ?
ಆತ್ಮ ಪುನರ್ಜನ್ಮ ಇದನ್ನು ನಾನು ಒಪ್ಪುತ್ತೇನೋ ಇಲ್ಲವೋ ಎಂಬ ಪ್ರಶ್ನೆಯೇ ಬರುವುದಿಲ್ಲ ಏಕೆಂದರೆ ಇಂಥ ವಿಷಯಗಳಲ್ಲಿ ನನ್ನ ಜ್ಞಾನ ಕಡಿಮೆ ಎಂದೆ ಹೇಳಬಹುದು..ಆತ್ಮ ಎನ್ನುವುದು ನನಗೆ ಇನ್ನೂ ಜಿಜ್ಞಾಸೆ... ಲೇಖನ ಚೆನ್ನಾಗಿದೆ

mouna said...

oh no! naanu spasTha viralilla anisuttade. nija, bereyavarige bere abhiprayaviruttadde. neevu intha vishayavannu namage tiLisiddu voLLede aayhu.

ಸುಪ್ತದೀಪ್ತಿ suptadeepti said...

@ಶ್ಯಾಮಾ: ಹೌದು, ನಮ್ಮ ಆತ್ಮಕ್ಕೂ ಕೆಲವೊಂದು ಕನಸುಗಳಿಗೂ (ಎಲ್ಲವೂ ಅಲ್ಲ, ಕೆಲವೇ ಕೆಲವು) ಸಂಬಂಧವಿದೆ. ಕನಸುಗಳೆಲ್ಲವೂ ನಮ್ಮ ಫ್ಯಾಂಟಸಿ ಅಲ್ಲ. ಕೆಲವಾರು ಸಮಸ್ಯೆಗಳಿಗೆ ಕನಸಿನಲ್ಲಿ ಪರಿಹಾರ ತೋರಿಬರಬಹುದು. ಅವೆಲ್ಲ ಸುಪ್ತ ಮನಸ್ಸುನ ವ್ಯಾಪಾರಗಳು. ಅಲ್ಲಿಂದ ಜಾಗೃತ ಮನಸ್ಸಿಗೆ ಆ ಪರಿಹಾರಗಳು ಹರಿದು ಬಂದರೆ ಆಗ ಸುಲಭ. ಅದು ನಮ್ಮ ನಮ್ಮ ಕೈಯಲ್ಲೇ ಇದೆ.

@ಮೌನ: ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಯಾರದೇ ಅಭಿಪ್ರಾಯವನ್ನು ಅಲುಗಿಸುವ, ಬದಲಾಯಿಸುವ ಉದ್ದೇಶ ನನ್ನದಲ್ಲ. ನನ್ನ ಓದನ್ನು ಹಂಚಿಕೊಳ್ಳುತ್ತಿದ್ದೇನೆ. ಅದಷ್ಟೇ ನನ್ನ ಉದ್ದೇಶ. ಬನ್ನಿ, ಓದಿ, ನಿಮ್ಮ ಅನಿಸಿಕೆ ತಿಳಿಸಿ, ಸಂತೋಷ. ನನ್ನ ಪ್ರಯತ್ನ ಸಾರ್ಥಕ.

Shiv said...

>>ಅಗಲಿದ ಆತ್ಮೀಯರಿಂದ ಸಂದೇಶಗಳು ಬರಬಹುದು, ಬರುತ್ತವೆ; ಮನಸ್ಸು ಮುಕ್ತವಾಗಿರಲಿ, ಎಂದು ಸಾರುತ್ತಾರೆ.

ಸುಪ್ತದೀಪ್ತಿಯವರೇ,
ಅದ್ಯಾವುದೋ 'ಗೋಸ್ಟ್' ಅನ್ನೋ ಸಿನಿಮಾ ನೋಡೀದಿರಾ ನೀವು. ಡೆಮೀ ಮೋರ್ ಇರೋದು.ಅದರ ನೆನಪು ಬಂತು.

ಆದರೆ ಇದು ನಿಜವೇ?