ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Friday, 27 April 2007

ಆತ್ಮ ಚಿಂತನ


ಧ್ಯಾನ ಅಥವಾ Meditation ಮನಸ್ಸನ್ನು ಶಾಂತವಾಗಿಸುವ ಹಲವು ಹಾದಿಗಳಲ್ಲಿ ಒಂದು. ನನ್ನ ಮಟ್ಟಿಗೆ ಧ್ಯಾನ ಯಾವುದೇ ಯೋಚನೆಯಿಲ್ಲದ, ಭಾವನೆಯಿಲ್ಲದ, ಚಿಂತೆಯಿಲ್ಲದ, ಮುಕ್ತ ಸ್ಥಿತಿ. ಈ ನಿರ್ಲಿಪ್ತ ಸ್ಥಿತಿಯಲ್ಲಿ ಮನಸ್ಸು ಬುದ್ಧಿ ಒಂದಾಗಿ ಅಂತರ್ಮುಖಿಯಾಗಿ ಆತ್ಮವಿಮರ್ಶೆಗೆ ತೊಡಗಿಕೊಳ್ಳಬೇಕು. ಅಂಥ ಮೌನ ದಿನಕ್ಕೊಮ್ಮೆ ಇರಬೇಕು. ನಮ್ಮತನದ ಗುಣಗಳನ್ನು ಒರೆಗೆ ಹಚ್ಚಬೇಕು. ಇನ್ನೂ ಬೆಳೆಯುವ ಹಾದಿಯತ್ತ ನೋಟ ಹರಿಸಬೇಕು. ಇಂಥ ಹಲವಾರು ಬೇಕುಗಳಿಗೆ ದಾರಿ ಕಾಣಿಸಿದ್ದು ನನ್ನ ಇತ್ತೀಚಿನ ಓದು. ಆತ್ಮದ ಬಗೆಗಿನ, ಪುನರ್ಜನ್ಮದ ಬಗೆಗಿನ, ಕರ್ಮ ಸಿದ್ಧಾಂತದ ಬಗೆಗಿನ ವೈಜ್ಞಾನಿಕ ಮಾಹಿತಿಯ ಓದು. ಇವನ್ನೆಲ್ಲ ಪುಟ್ಟ ಪುಟ್ಟ ತುತ್ತುಗಳಾಗಿ ನನ್ನ ಅಂಗಳದಲ್ಲಿ ಬಿಡಿಸಿಡುತ್ತೇನೆ. ಆಸಕ್ತ ಹಕ್ಕಿಗಳು ಕಾಳು ಹೆಕ್ಕಿಕೊಳ್ಳಿ.

10 comments:

Sushrutha Dodderi said...

ಕಾಯುತ್ತಿದ್ದೇನೆ.

-ಹಕ್ಕಿ

:)

Anonymous said...

ಧ್ಯಾನದ ಕುರಿತ ನಿಮ್ಮ ವ್ಯಾಖ್ಯೆ ಮತ್ತು ವಿವರಣೆಗಳಲ್ಲಿ ನನಗೆ ವಿರೋಧಾಭಾಸ ಕಾಣುತ್ತಿದೆ.

ನಿಮ್ಮ ವ್ಯಾಖ್ಯೆಯ ಪ್ರಕಾರ ಧ್ಯಾನವೆಂದರೆ "ಯಾವುದೇ ಯೋಚನೆಯಿಲ್ಲದ ಮುಕ್ತಸ್ಥಿತಿ".

ಆದರೆ ವಿವರಣೆಯ ಪ್ರಕಾರ ಧ್ಯಾನವೆಂದರೆ "ಮನಸ್ಸು ಬುದ್ಧಿ ಒಂದಾಗಿ ಅಂತರ್ಮುಖಿಯಾಗಿ ಆತ್ಮವಿಮರ್ಶೆಗೆ ತೊಡಗಿಕೊಳ್ಳಬೇಕು. ನಮ್ಮತನದ ಗುಣಗಳನ್ನು ಒರೆಗೆ ಹಚ್ಚಬೇಕು. ಇನ್ನೂ ಬೆಳೆಯುವ ಹಾದಿಯತ್ತ ನೋಟ ಹರಿಸಬೇಕು..." ಇತ್ಯಾದಿತ್ಯಾದಿ.

ನನಗನಿಸುವಂತೆ ಧ್ಯಾನವೆಂದರೆ "ಒಂದೇ ವಿಷಯದ ಮನನ". ನಿಮ್ಮ ವ್ಯಾಖ್ಯೆಯಲ್ಲಿದ್ದಂತೆ ಶೂನ್ಯವೂ ಅಲ್ಲ, ವಿವರಣೆಯಲ್ಲಿರುವಂತೆ ಬಹುವಿಧ ಯೋಚನೆ/ಉದ್ದೇಶ/ಬೇಕುಗಳೂ ಅಲ್ಲ!

"ಸದಾಶಿವನಿಗೆ ಅದೇ ಧ್ಯಾನ..." ಎಂಬ ಚಾಟೋಕ್ತಿಯನ್ನು ಕೇಳಿದ್ದೀರಲ್ಲ? ಸದಾಶಿವನ ಮನಸ್ಸಿನಲ್ಲಿ ಒಂದೇ ಒಂದು ಚಿಂತನೆ ಎಂದಲ್ಲವೇ ಅದರ ಧ್ವನ್ಯರ್ಥ?

ಸುಪ್ತದೀಪ್ತಿ suptadeepti said...

ಧ್ಯಾನ ಮಾಡಲು ವ್ಯವಧಾನ ಇಲ್ಲದವರೇ, ನನ್ನ ವಿವರಣೆಯಲ್ಲಿ ವಿರೋಧಾಭಾಸ ಇದೆಯೆಂದು ನಿಮಗೆ ಕಂಡಿದೆ; ಅಂದರೆ ಆ ಮಟ್ಟಿಗೆ ಧ್ಯಾನದ ಪರಿಚಯ ನಿಮಗಿದೆ. ಒಳ್ಳೆಯದು.

ನಮ್ಮ ಸಂಸ್ಕೃತಿಯಲ್ಲಿ ಧ್ಯಾನಕ್ಕೆ ಹಲವಾರು ಅರ್ಥಗಳಿವೆ, ವಿವರಣೆಗಳಿವೆ. ಇಲ್ಲಿನ ವ್ಯಾಖ್ಯೆ, ವಿವರಣೆ ಎರಡೂ ನನ್ನ ಗ್ರಹಿಕೆ, ಪಾಲನೆಗಳ ವ್ಯಾಪ್ತಿಯಲ್ಲಿ; ಅಷ್ಟೇ. "ಈ ನಿರ್ಲಿಪ್ತ ಸ್ಥಿತಿಯಲ್ಲಿ ಮನಸ್ಸು ಬುದ್ಧಿ ಒಂದಾಗಿ ಅಂತರ್ಮುಖಿಯಾಗಿ ಆತ್ಮವಿಮರ್ಶೆಗೆ ತೊಡಗಿಕೊಳ್ಳಬೇಕು....." ಎನ್ನುವುದು ನನ್ನ ನಂಬಿಕೆ, ಅದರತ್ತ ಪ್ರಯತ್ನ. ಇಂತಹ ನಿರ್ಲಿಪ್ತ ಸ್ಥಿತಿಗೆ ತಲುಪುವುದು ಧ್ಯಾನ / Meditation. ತದನಂತರದ ಆತ್ಮವಿಮರ್ಶೆ ಮುಂದಿನ ಹೆಜ್ಜೆ; ಧ್ಯಾನದ ಉದ್ದೇಶ, ಸಾಧನೆ.

ಸದಾಶಿವನಿಗೆ ಒಂದೇ ಧ್ಯಾನ ಅನ್ನುವುದು ಚಾಟೋಕ್ತಿ ಅಂತ ನೀವೇ ಹೇಳಿದಿರಿ, ಅಂದ ಮೇಲೆ ಚಾಟೋಕ್ತಿಗಳೆಲ್ಲ ವ್ಯಾಖ್ಯಾನಗಳಲ್ಲ, ಉದಾಹರಣೆಗಳಲ್ಲ.



ಸುಶ್ರುತ, ತುಂಬಾ ಕಾಯಬೇಕಾಗಿಲ್ಲ. ಸಧ್ಯದಲ್ಲೇ ತುತ್ತು ತಯಾರಾಗುತ್ತದೆ.

Anonymous said...

ನುಡಿ: "ಸದ್ಯದಲ್ಲೇ ತುತ್ತು ತಯಾರಾಗುತ್ತದೆ."

ಕಿಡಿ: ಇದುವರೆಗೆ 'ಧಾನ್ಯ'ದ ತುತ್ತು ಉಂಡವರಿಗೆ ಈಗಿನ್ನು 'ಧ್ಯಾನ'ದ ತುತ್ತು ಲಭ್ಯ!

ಮನಸ್ವಿನಿ said...

ನಂಗೂ ಸ್ವಲ್ಪ :)

Anonymous said...

ಪುನರ್ಜನ್ಮ ನನ್ನ favorite. ನಂಗೂ ಬೇಕು.

- ನಮ್ಮೂರ ಹಕ್ಕಿ

Srivathsa Joshi said...

ಇಲ್ಲಿ ಹಕ್ಕಿಗಳಾಗಿ ಕಮೆಂಟಿಸಿದವರು ಪುನರ್ಜನ್ಮದಲ್ಲಾದರೂ ಮಾನವರಾಗಬೇಕೆಂಬ ಬಯಕೆಯುಳ್ಳವರಾ? ಅಥವಾ ಈಗ ಮಾನವರಾಗಿದ್ದು ಮುಂದಿನ ಜನ್ಮದ ಬಗ್ಗೆ ನಂಬಿಕೆಯಿಡುವಲ್ಲಿ ತಮಗೆ ಹಕ್ಕಿದೆ ಎಂದುಕೊಂಡು ತಾವು ಹಕ್ಕಿ ಆಗಬಯಸುತ್ತೇವೆ ಎನ್ನುವವರಾ?

Shiv said...

ಸುಪ್ತದೀಪ್ತಿ,

ಆತ್ಮ ಚಿಂತನೆಗೆ ಕಾರಣವಾದ ನಿಮ್ಮ ಇತ್ತೀಚಿನ ಓದು ಯಾವುದು?

ಕಾಯ್ತಿದೀನೆ ನಿಮ್ಮ ಜ್ಞಾನದ ತುತ್ತಿಗಾಗಿ

Anonymous said...

'ಇನ್ನು ನನ್ ಬ್ಲಾಗಿನ ಹತ್ರಕ್ಕೆ ಬರಬೇಡಿ...' ಅಂತ ಎಷ್ಟು ಚೆನ್ನಾಗಿ ಬರೆದಿದ್ದೀರಲ್ಲಾ...ಎಲ್ ನೋಡಿದ್ರೂ ಪುನರ್ಜನ್ಮ, ಧ್ಯಾನದ ಬಗ್ಗೇನೆ ಕಾಣಿಸ್ತಾ ಇದೆ...ಎಲ್ರಿಗೂ ನನಗೆ ಬಂದ ಹಾಗೆ ಮುಪ್ಪು ಬರಲಿಲ್ಲಾ ತಾನೆ! :-)

ಸುಪ್ತದೀಪ್ತಿ suptadeepti said...

"ಕಮೆಂಟಿಸಿ"ದವರಿಗೆಲ್ಲ ವಂದನೆಗಳು.

@ಕಾಳಣ್ಣ: "ನನ್ನ ಬ್ಲಾಗಿನ ಹತ್ರ ಬರಬೇಡಿ" ಅನ್ನುವುದು ನೀವು ಅರ್ಥ ಮಾಡಿಕೊಂಡ ರೀತಿಯಾದರೆ ನಾನೇನು ಮಾಡಲಿ? "ಅವರವರ ಭಾವಕ್ಕೆ...!" ಅಷ್ಟೇ. ಧ್ಯಾನ, ಆತ್ಮ, ಜನ್ಮ-ಪುನರ್ಜನ್ಮಗಳ ಬಗ್ಗೆ ತಿಳಿಯಲು ಮುಪ್ಪು ಬರಬೇಕೆಂದಿಲ್ಲ, ಮುಪ್ಪಿನವರು ಮಾತ್ರ ಇವನ್ನೆಲ್ಲ ತಿಳಿದುಕೊಳ್ಳಬೇಕೆಂಬ ನಿಯಮವೇನೂ ಇಲ್ಲ.

@ಶಿವ್: ನನ್ನ ಓದಿನ ಬಗ್ಗೆ ಲೇಖನಗಳಲ್ಲೇ ಪ್ರಸ್ತಾಪಿಸುತ್ತೇನೆ.

@ಶ್ರೀಜೋಷಿ: ಹಕ್ಕಿಗಳಾಗುವ, ಮಾನವರಾಗುವ ಹಕ್ಕು ಎಲ್ಲರಿಗೂ ಇದೆ. ಸ್ವಚ್ಛಂದ ಆತ್ಮದ ಒಂದು ಗುಣ.

@ಶ್ರೀತ್ರೀ, ಮನಸ್ವಿನಿ: ಬನ್ನಿ, ಬನ್ನಿ. ಎಲ್ಲರಿಗೂ ಲಭ್ಯ.