ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Tuesday, 7 August 2012

ಈಶ್ವರ ಕಿರಣ ಭಟ್ಟರ ‘ಭಾವಕಿರಣ’ಕ್ಕೊಂದು ಕೈಗನ್ನಡಿ (ಬೆನ್ನುಡಿ)


          ಹೊಸಬರಲ್ಲಿ ಹೊಸತನ ಕಾಣುವುದು ಲೋಕರೂಢಿ. ಕಿರಿಯರಲ್ಲಿ ಹೊಸತನ ಕಾಣುವುದು, ಅದನ್ನು ಪ್ರೋತ್ಸಾಹಿಸುವುದು ನಮ್ಮ ಹಿರಿಯರಿಟ್ಟ ಸುಸಂಸ್ಕೃತ ಹಾದಿ. ಅಂತಹುದೊಂದು ಕಾಲುದಾರಿಯಲ್ಲಿ ಹೆಜ್ಜೆಯಿಡಲು, ಕಿರಿಯನೊಬ್ಬನ ಬೆನ್ನು ತಟ್ಟಿ ಹುರಿದುಂಬಿಸಲು ಖುಷಿಯಾಗುತ್ತಿದೆ.
          ಈಶ್ವರ ಕಿರಣ ಭಟ್, "ನಾನು ಸಾಹಿತ್ಯಕೃಷಿಗಿಳಿದದ್ದು, ಅದರಲ್ಲೂ ಕವನ ರಚನೆಗೆಳಸಿದ್ದು ಗುರುಗಳ ಜೊತೆ ನಡೆದ ಸಂವಾದವೊಂದರ ಪ್ರತಿಫಲ" ಎಂದರು. ಭಾವನೆಯ ಬಂಧನಗಳಿಲ್ಲದೆಯೂ ಕವನ ರಚನೆ ಸಾಧ್ಯವೆಂದು ಸಾಬೀತುಪಡಿಸಲು ಹೊರಟ ಹುಡುಗ ತನ್ನ ಬ್ಲಾಗಿಗೂ ಇದೀಗ ಕವನ ಸಂಕಲನಕ್ಕೂ ‘ಭಾವ’ ಮುಂದಾಗಿ ‘ಕಿರಣ’ ಹೊಮ್ಮಿಸಿ ‘ಭಾವ ಕಿರಣ’ವೆಂದಿದ್ದಾರೆ. ಅವರ ವೈಯಕ್ತಿಕ ತರ್ಕ ಅದೇನಿದ್ದರೂ ಓದುಗರಿಗೆ ಆಪ್ತವೆನಿಸುವ, ಎಚ್ಚರಿಸುವ, ಚಿಂತನೆಗೆ ಹಚ್ಚುವ ಕವನಗಳಿಗೆ ಈ ಸಂಕಲನದಲ್ಲಿ ಕೊರತೆಯಿಲ್ಲ. ಇಲ್ಲಿ ಎಲ್ಲವೂ ಗಟ್ಟಿ ಕಾಳುಗಳೇ ಅನ್ನುವ ವಾದ ನನ್ನದಲ್ಲ. ಜೊಳ್ಳಿನ ಜೊತೆಗಿದ್ದಾಗಲೇ ಕಾಳಿನ ತೂಕದ ಅರಿವಾಗುವುದಲ್ಲ! ಸಹೃದಯ ಓದುಗರು ಕಾಳುಗಳ ರುಚಿ ಹತ್ತಿಸಿಕೊಂಡು ಪ್ರೀತಿಯಿಂದ ಎತ್ತಿಕೊಂಡರೆ ಜೊಳ್ಳು ತಾನಾಗೇ ಹೊಸ ಬೀಸುಗಾಳಿಯಲ್ಲಿ ಲೀನವಾಗಿ ಬಿಡುತ್ತದೆ.
          ಈ ಯುವಕವಿಯಿಂದ ಇನ್ನಷ್ಟು ಮೌಲಿಕ ಸಾಹಿತ್ಯಪುಷ್ಪ ಕನ್ನಡ ಸರಸತಿಯ ಪದತಲಕ್ಕೆ ಅರ್ಪಿತವಾಗಲೆನ್ನುವ ಹಾರೈಕೆಗಳು ನನ್ನವು.
ಸುಪ್ತದೀಪ್ತಿ
(ಜ್ಯೋತಿ ಮಹಾದೇವ್)
ಮಣಿಪಾಲ