ಹಿಪ್ನೋಥೆರಪಿ-ಭಾಗ-೦೬
ಹಿಪ್ನೋಥೆರಪಿಯಲ್ಲಿ ರಿಗ್ರೆಷನ್
ಸಂದೇಹಗಳು ಮತ್ತು ಸಾಧ್ಯತೆಗಳು - ೦೨
ಸಂದೇಹಗಳು ಮತ್ತು ಸಾಧ್ಯತೆಗಳು - ೦೨
ಕಳೆದ ಸಂಚಿಕೆಯಲ್ಲಿ ಎರಡು ಪ್ರಶ್ನೆಗಳನ್ನು ಅವಲೋಕಿಸಿದ್ದೇವೆ, ಉತ್ತರ ತೃಪ್ತಿಕರವಾಗಿತ್ತೆಂದು ಭಾವಿಸುತ್ತೇನೆ. ಈ ಕಂತಿನಲ್ಲಿ ಇನ್ನೊಂದೆರಡನ್ನು ನೋಡೋಣ:
ಮೊದಲನೆಯ ಪ್ರಶ್ನೆ: “ರಿಗ್ರೆಷನ್ ಬಗೆಗೆ ಮೂಲಭೂತ ಸಂದೇಹವಿದೆ. ರಿಗ್ರೆಷನ್ ಆದಾಗ ಎರಡು ಸಾಧ್ಯತೆಗಳು ಕಾಣುತ್ತವೆ:
೧ನೆಯ ಸಾಧ್ಯತೆ: ರಿಗ್ರೆಷನ್‌ಗೆ ಒಳಗಾದ ವ್ಯಕ್ತಿ ತನ್ನ ಪೂರ್ವಜನ್ಮದ ಘಟನೆಗಳನ್ನು ನೆನಪಿಸಿಕೊಳ್ಳುವನು.
೨ನೆಯ ಸಾಧ್ಯತೆ: ಗತಕಾಲದ ಎಲ್ಲ ಘಟನೆಗಳು ಅಭೌತಿಕ ‘ಆಕಾಶ’ದಲ್ಲಿ ತೇಲುತ್ತಿದ್ದು, ರಿಗ್ರೆಸ್ ಆದ ವ್ಯಕ್ತಿ, ಈ ಘಟನೆಗಳಿಗೆ ಟ್ಯೂನ್ ಆದರೆ, ಅವು ತನ್ನವೇ ಅನುಭವ ಎಂದು ಭಾವಿಸಬಹುದು.
ಆದುದರಿಂದ, ಯಾವುದು ನಿಜವಿರಬಹುದೆನ್ನುವದರ ಬಗೆಗೆ ಋಜುವಾತು ನೀಡಲು ಅಥವಾ ಪ್ರಮಾಣೀಕರಿಸಲು ಸಾಧ್ಯವೆ? ಆ ತರಹ ಮಾಡಲಾಗಿದೆಯೆ?
ಪರಿಹಾರ:
ರಿಗ್ರೆಷನ್ ಅನ್ನುವ ಪದದ ಸಾಮಾನ್ಯ ಅರ್ಥ, ಸಮ್ಮೋಹನಕ್ಕೆ ಸಂಬಂಧಪಟ್ಟಂತೆ, ‘ಪೂರ್ವ ಸ್ಮೃತಿ’ ಎಂದಷ್ಟೇ. ಅದು ಪೂರ್ವ ಜನ್ಮದ್ದಾಗಿರಲಿ, ಬಾಲ್ಯದ್ದಾಗಿರಲಿ, ಅಥವಾ ನಿನ್ನೆಯ ಸಂಜೆಯಷ್ಟೇ ತಿಂದ ವಿಶಿಷ್ಠ ತಿಂಡಿಯದ್ದಾಗಿರಲಿ- ಇವೆಲ್ಲವೂ ಪೂರ್ವ ಸ್ಮೃತಿಗಳೇ. ಇವನ್ನೆಲ್ಲ ನೆನಪಿಸಿಕೊಳ್ಳುವುದೂ ರಿಗ್ರೆಷನ್ ಎಂದೇ ಪರಿಗಣಿತ. ಆದ್ದರಿಂದ, ರಿಗ್ರೆಷನ್‌ಗೆ ಒಳಗಾದ ವ್ಯಕ್ತಿ ತನ್ನ ಗತಜನ್ಮದ ನೆನಪುಗಳನ್ನು ನೆನಪಿಸಿಕೊಳ್ಳುವುದೂ ಅಷ್ಟೇ ನಿಜ.
ಇನ್ನು ಎರಡನೇ ಸಾಧ್ಯತೆಯ ಬಗ್ಗೆ- ಖಚಿತವಾಗಿ ಯಾವುದೇ ಸಂಭವನೀಯತೆಗಳು ನನಗೆ ಕಂಡಿಲ್ಲ. ನಾನು ಇದುವರೆಗೆ ಓದಿ ತಿಳಿದಂತೆ, ನಮ್ಮ ನಮ್ಮ ನೆನಪುಗಳು ನಮ್ಮವೇ. ಆದರೆ... ಒಬ್ಬ ವ್ಯಕ್ತಿ, ತನ್ನ ಪ್ರಜ್ಞಾವಲಯವನ್ನು ತುಂಬಾ ಸಶಕ್ತವಾಗಿಸಿಕೊಂಡು, ನಿರ್ಮಲವಾಗಿಸಿಕೊಂಡು, ಸಮ್ಮೋಹನ ಸ್ಥಿತಿಗೆ ಹೋದರೆ (ಋಷಿ-ಮುನಿಗಳ ಸಮಾಧಿ ಸ್ಥಿತಿಯಂತಹ ಮಟ್ಟ ತಲುಪಿದರೆ), ಆಗ ಆ ವ್ಯಕ್ತಿಗೆ ವರ್ತಮಾನದೊಂದಿಗೆ ಭೂತ-ಭವಿಷ್ಯಗಳೂ ಅರಿವಿಗೆ ಬರುವ ಬಗ್ಗೆ ದಾಖಲೆಗಳಿವೆ. ನಮ್ಮ ವೇದಗಳು ಅಂಥ ಮಹಾತ್ಮರ ಕೊಡುಗೆ. ಪುರಾಣಗಳ ತುಂಬಾ ಅಂಥವರೇ ಇದ್ದಾರೆ. ಅಂದರೆ, ಸಮ್ಮೋಹಿತ ಸ್ಥಿತಿಯಲ್ಲಿ ಎಲ್ಲ ಭೌತಿಕ ನೆಲೆಗಳನ್ನೂ ಮೀರಿ, ಅಭೌತಿಕ ಮಟ್ಟದಲ್ಲಿ, “ಜಾಗತಿಕ ಪ್ರಜ್ಞಾವಲಯದಲ್ಲಿ” ಸಂಚರಿಸುವ ಆಂತರಿಕ ಶಕ್ತಿ ಪ್ರತಿಯೊಬ್ಬರಿಗೂ ಇದೆ. ಆಗ ಅವರು ಅಂಥ “ಕಾಣ್ಕೆ”ಗಳನ್ನು ತನ್ನ ಅನುಭವ ಅಂದುಕೊಳ್ಳಲಾರರು, ಅದು ನಿಜವಾಗಿಯೂ ಏನು ಅನ್ನುವ “ಅರಿವು” ಅವರಿಗಿರುತ್ತದೆ. ಅಂಥ ಶಕ್ತಿಯನ್ನು ಸ್ವಪ್ರಯತ್ನದಿಂದ, ಗುರು-ನಿರ್ದೇಶನದಿಂದ, ಅಧ್ಯಯನದಿಂದ, ಅರಿವಿನಿಂದ ಜಾಗೃತಗೊಳಿಸಿಕೊಳ್ಳಬಹುದು.
ಎರಡನೆಯ ಪ್ರಶ್ನೆ: “ರಿಗ್ರೆಷನ್ನಿಗೆ ಒಳಗಾದ ವ್ಯಕ್ತಿಗೆ ಹಿಂದಿನ ಯಾವುದೋ ಜನ್ಮದ ತನ್ನ ಬಂಧುವಿನ (ಮಗುವಿನ, ಪತಿ/ಪತ್ನಿಯ) ಸ್ಮೃತಿಯಿಂದ ಈ ಜನ್ಮದಲ್ಲೂ ಆ ವ್ಯಕ್ತಿಯ ಮೇಲೆ (ಆ ವ್ಯಕ್ತಿ ಬೇರೆ ಯಾರದೋ ಮನೆಯಲ್ಲಿ, ಬೇರೊಂದು ಬಂಧನದಲ್ಲಿ ಈಗ ಹುಟ್ಟಿದ್ದರೂ) ಮಮಕಾರ, ಪ್ರೀತಿ ಬರಲಾರದೆ? ಬಂದರೆ ಅದು ಸರಿಯೆ?”
ಪರಿಹಾರ:
ಯಾವುದೋ ಜನ್ಮದ ಬಂಧನ ಈ ಜನ್ಮದಲ್ಲಿ ನೆನಪಾಗಿ ಅದನ್ನರಸಿ ಹೋಗಿ ಈ ಜನ್ಮದಲ್ಲೂ ಒಂದಾಗುವ ಕಥೆಗಳು ನಮ್ಮಲ್ಲಿ ಬಳಕೆಯಲ್ಲಿವೆ. ಹಾಗಂತ ಅದು ಎಲ್ಲ ಸಂದರ್ಭಗಳಲ್ಲೂ ಸರಿ ಎಂದಲ್ಲ. ವ್ಯಕ್ತಿಗಳಿಬ್ಬರೂ ಈ ಜನ್ಮದಲ್ಲಿ ಬೇರೆ ಬಾಂಧವ್ಯದಲ್ಲಿ ಇಲ್ಲದಿದ್ದಾಗ ಅದು ಸುಸೂತ್ರವಾಗಿ ನಡೆಯಬಹುದು, ಸರಿಯೂ ಆಗಬಹುದು. ಆದರೆ ಇಬ್ಬರಿಗೂ ಪ್ರಸ್ತುತ ಜನ್ಮದ ಬೇರೆ ಬಾಂಧವ್ಯಗಳಿದ್ದರೆ ಆಗ ಅದು ಸರಿಯಾಗಲಾರದು. ಇನ್ನು ಕಾಲ್ಪನಿಕ ಕಥೆಗಳಲ್ಲಿ ಇದಕ್ಕೆ ಬೇರೆ ಬೇರೆ ಆಯಾಮಗಳು ದೊರಕಿವೆ, ಅದನ್ನು ಇಲ್ಲಿ ಚರ್ಚಿಸುವುದಿಲ್ಲ. ಅದು ಕಲ್ಪನೆ-ಸತ್ಯಗಳ ಮಿಶ್ರಣ; ಅದೇ ಪೂರ್ಣ ಸತ್ಯ ಅಲ್ಲವಲ್ಲ!
ಪ್ರತಿಯೊಬ್ಬ ವ್ಯಕ್ತಿ ರಿಗ್ರೆಷನ್ನಿಗೆ ಒಳಗಾದಾಗ, ಆ ಸಂದರ್ಭವೂ ಪ್ರಸ್ತುತವೆನಿಸುತ್ತದೆ. ಯಾವುದೋ ತೊಂದರೆಗೆ ಉತ್ತರ ಹುಡುಕುತ್ತಾ ಸಮ್ಮೋಹನದಲ್ಲಿ ಪೂರ್ವಸ್ಮೃತಿಯನ್ನು ಅರಸಿದರೆ, ಆಗ ಅಂಥ ಸ್ಮೃತಿಯಲ್ಲಿ ಯಾವುದೋ ಒಂದು ಚಿಕಿತ್ಸಕ ಗುಣವಿದ್ದೇ ಇರುತ್ತದೆ. ಅಂಥ ಸ್ಮೃತಿಯನ್ನು ಚಿಕಿತ್ಸಕವಾಗಿ “ಕಾಣಿಸುವುದು” ಚಿಕಿತ್ಸಕನ ಕೆಲಸ; ಧರ್ಮ. ಇದರ ಹೊರತಾಗಿಯೂ ಸಮ್ಮೋಹಿತ ವ್ಯಕ್ತಿಗೆ ಹಿಪ್ನಾಟಿಕ್ ಟ್ರಾನ್ಸ್ ಬಿಟ್ಟು ಮಾಮೂಲು ಸ್ಥಿತಿಗೆ ಬಂದಾಗಲೂ ಸ್ಮೃತಿಯ ಬಂಧನವೇ ಕಾಡುತ್ತಿದ್ದರೆ ಮತ್ತು ಆ ವ್ಯಕ್ತಿ ಸಾಮಾಜಿಕವಾಗಿ ಈ ಹೊಸ ಬಂಧನಕ್ಕೆ ಒಳಗಾಗುವ ಸ್ಥಿತಿಯಲ್ಲಿರದಿದ್ದರೆ, ಅದಕ್ಕೆ ಸೂಕ್ತ ಸಲಹೆಗಳನ್ನು ಕೊಟ್ಟು ಸರಿಯಾದ ದೃಷ್ಟಿಕೋನದೆಡೆ ನಡೆಸುವುದು ಚಿಕಿತ್ಸಕನ ಜವಾಬ್ದಾರಿ. ಆದರೆ, ಇಂಥ ಪೀಕಲಾಟದ ಸಂದರ್ಭಗಳು ಎದುರಾದದ್ದನ್ನು ನಾನು ಇದುವರೆಗೆ ಓದಿಲ್ಲ, ನನ್ನ ತಿಳುವಳಿಕೆಗೆ ಬಂದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಆ ಇಬ್ಬರೂ ವ್ಯಕ್ತಿಗಳು ಈ ಜನ್ಮದಲ್ಲೂ ಬಂಧುಗಳಾಗಿಯೇ ಇದ್ದಿರುವ ಅಥವಾ ಮುಂದೆ ಬಂಧುಗಳಾಗುವ ಸಾಧ್ಯತೆ ಇದ್ದುದೇ ಹೆಚ್ಚು.
ಇನ್ನು, ಯಾರಿಗಾದರೂ ಆಕಸ್ಮಿಕವಾಗಿ ಕನಸಿನಲ್ಲಿ ಅಂಥ ಪೂರ್ವಸ್ಮೃತಿ ನೆನಪಿಗೆ ಬಂದು ಹಿಂದಿನ ಜನ್ಮದ ವ್ಯಕ್ತಿಯೆಡೆ ಬಾಂಧವ್ಯ ಉಂಟಾದರೆ ಅದಕ್ಕೆ ಅತೀಂದ್ರಿಯ ನೆಲೆಯಲ್ಲಿ ಪ್ರಸ್ತುತ ಬದುಕಿಗೆ ಹೊಂದುವಂತೆ ಯಾವುದೋ ಅಗತ್ಯತೆಯ ಯಾ ಕಲಿಕೆಯ ಕಾರಣವಿದ್ದೀತು. ಕಾರ್ಯ-ಕಾರಣ ಸಂಬಂಧವಿಲ್ಲದೆ ಅತೀಂದ್ರಿಯ ನೆಲೆಯಲ್ಲಿ ಯಾವುದೂ ನಡೆಯಲಾರದು ಅನ್ನುವುದು ನನ್ನ ನಂಬಿಕೆ. ಇವಲ್ಲದೆ, ಸುಮ್ಮ-ಸುಮ್ಮನೇ ಯಾರಿಗೋ ಯಾರ ಮೇಲೋ ಮಮಕಾರ ಉಂಟಾಗದು. ಅವೆಲ್ಲಕ್ಕೂ ಯಾವುದೋ ಒಂದು ತಿಳಿಯದ ಕಾರಣವಿದ್ದೇ ಇರುತ್ತದೆ. ಆ ಕಾರಣದ ಹುಡುಕಾಟವೇ ಕಲಿಕೆಯ, ತಿಳಿವಿನ ಆಕಾಂಕ್ಷೆಯ ಮೂಲ ಅನ್ನುವುದೂ ನನ್ನ ನಂಬಿಕೆ.
ರಿಗ್ರೆಷನ್ ಸಂದರ್ಭದಲ್ಲಿ ಚಿಕಿತ್ಸಕನ ಜವಾಬ್ದಾರಿ ಹೆಚ್ಚು. ರಿಗ್ರೆಷನ್ನಿಗೆ ಒಳಗಾದ ವ್ಯಕ್ತಿ ಆ ಸಂದರ್ಭದಲ್ಲಿ ಮಾನಸಿಕ ತುಮುಲಗಳಿಗೆ ಒಡ್ಡಿಕೊಂಡಿರುತ್ತಾರೆ. ಆಯಾಯ ನೆನಪಿನ (ಬಾಲ್ಯದ ಅಥವಾ ಪೂರ್ವ ಜನ್ಮದ) ಅನುಭವಗಳನ್ನು ಈಗಲೇ ಎಂಬಂತೆ ‘ಅನುಭವಿಸು’ತ್ತಿರುತ್ತಾರೆ. ಅದನ್ನು ಸರಿಯಾಗಿ ತಿಳಿದು ನಾಜೂಕುತನದಿಂದ ನಿಭಾಯಿಸುವ ಚಾಕಚಕ್ಯತೆ ಚಿಕಿತ್ಸಕರಿಗಿರಬೇಕು. ಹಾಗಿಲ್ಲದಿದ್ದಲ್ಲಿ, ರಿಗ್ರೆಷನ್ ಥೆರಪಿಯಿಂದ ಉಪಯೋಗಕ್ಕಿಂತಲೂ ತೊಂದರೆಗಳೇ ಆದಾವು.
(ಭಾಮಿನಿ, ಜುಲೈ ೨೦೧೧.)