ಏನೆಂದು ಕರೆಯಲಿ ಇದನು?
ಹಿಪ್ನೋಥೆರಪಿ ಅಭ್ಯಾಸ ಮಾಡಿದಾಗಿನಿಂದ ಒಂದೊಂದು ಸಣ್ಣ ಪುಟ್ಟ ಘಟನೆಗಳು ಅಚ್ಚರಿಮೂಟೆ ತೆರೆದದ್ದಿವೆ. ಅವುಗಳಲ್ಲಿ ಕೆಲವನ್ನು ಈಗಾಗಲೇ ಇಲ್ಲಿ ಹಂಚಿಕೊಂಡಿದ್ದೇನೆ. ಇದೀಗ ಹೊಸತೊಂದು:
ನನ್ನೊಂದು ಕ್ಲಯಂಟ್ ತಮ್ಮ ಆತ್ಮವಿಶ್ವಾಸದ ಉದ್ದೀಪನಕ್ಕಾಗಿ ಬರುತ್ತಿದ್ದರು. ಕಾಲೇಜೊಂದರಲ್ಲಿ ಅಧ್ಯಾಪನ ಕೈಗೊಂಡಿರುವ ಅವರಿಗೆ ವೇದಿಕೆಯಿಂದ ವಿದ್ಯಾರ್ಥಿಗಳನ್ನು ಎದುರಿಸುವ ಬಗ್ಗೆ ಆತಂಕ, ಉದ್ವೇಗ. ಅಪರೂಪಕ್ಕೊಮ್ಮೆ ಮಾತು ತೊದಲಿ ಗೊಂದಲಗೊಂಡು ಮತ್ತಷ್ಟು ಕಂಪನಕ್ಕೊಳಗಾಗಿ ತರಗತಿಯಿಂದ ಹೊರಬಂದದ್ದೂ ಇದೆಯೆಂದರು. ಅವರಿಗೆ ಬೇಕಷ್ಟು ಸಲ ಭೇಟಿಯಾಗೋಣವೆಂದು ನಿಗದಿಪಡಿಸಿಕೊಂಡೆವು.
ಮೊದಲೆರಡು ಸೆಷನ್‍ಗಳಲ್ಲಿ ಧನಾತ್ಮಕ ಸೂಚನೆಗಳನ್ನು ನೀಡುತ್ತಾ ಧನಾತ್ಮಕ ಚಿತ್ರಣಗಳತ್ತ ಗಮನ ಸೆಳೆಯುತ್ತಾ ಅವರ ಸುಪ್ತಮನಸ್ಸಿಗೆ ಧೈರ್ಯ ತುಂಬಿದೆ. ಮೂರು ಮತ್ತು ನಾಲ್ಕನೇ ಸೆಷನ್‍ಗಳಲ್ಲಿ ಅವರೇ ಧನಾತ್ಮಕ ಚಿತ್ರಣಗಳಲ್ಲಿ ತನ್ನನ್ನು ತಾನು ಕಾಣುವಂಥ ಸೂಚನೆ ನೀಡಿದೆ. ಐದನೆಯ ಬಾರಿಗೆ ಬಂದವರು ತರಗತಿಗಳಲ್ಲಿ ಆತಂಕವಾಗುವ ಘಳಿಗೆಗಳು ಬಹಳವೇ ಕಡಿಮೆಯಾಗಿವೆ ಎಂದು ಖುಷಿಯಿಂದಲೇ ಹೇಳಿದರು. ದಿನಕ್ಕೊಮ್ಮೆಯೋ ಏನೋ ಗಾಬರಿಯ ಕ್ಷಣವಿರುತ್ತದಷ್ಟೇ ಎಂದರು.
ಐದನೆಯ ಸೆಷನ್ ಮತ್ತೆ ಮಾಮೂಲಾಗಿ ಮುಗಿಸಿ ಪೋಸ್ಟ್ ಸೆಷನ್ ಮಾತಿನಲ್ಲಿ ಅವರೆಂದರು: "ಮೇಡಮ್, ಇವತ್ತು ನೀವು ನನ್ನನ್ನು ಗಿರೀಶ್ ಹೆಸರಿನಿಂದ ಕರೆಯುತ್ತಿದ್ದಿರಿ. ನಿಮಗೆ ಕನ್ಫ್ಯೂಸ್ ಆಗಿರಬೇಕು ಅಂತ ನಾನಂದುಕೊಂಡೆ. ನೀವು ಆ ಹೆಸರು ಹೇಳಿದಾಗೆಲ್ಲ ನಾನು ನನ್ನ ಹೆಸರನ್ನೇ ಹೇಳಿಕೊಳ್ಳುತ್ತಿದ್ದೆ..."
ನನಗೆ ಆಘಾತವಾಯ್ತು. ಮೊದಲು ನಾಲ್ಕು ಸಲ ಭೇಟಿಯಾಗಿದ್ದ ಇವರನ್ನೇ ನಾನು ಬೇರೆ ಹೆಸರಲ್ಲಿ ಸಂಬೋಧಿಸಿದೆ ಅಂದರೆ ನನ್ನ ಗಮನ ಎಲ್ಲಿತ್ತು? ಯಾಕೆ ಹೀಗಾಯ್ತು? ಏನಾಗಿದೆ ನನಗೆ? ಗೊಂದಲ ಆತಂಕ ನನಗೆ. ಅವರ ಕ್ಷಮೆ ಕೇಳಿದೆ. ನಂತರದ ಎರಡು ಮೂರು ದಿನ ಇದೇ ಚಿಂತೆಯಲ್ಲೇ ಕಳೆದೆ. ಮುಂದಿನ ವಾರ ಅವರು ಬಂದಾಗ ದುಪ್ಪಟ್ಟು ಎಚ್ಚರಿಕೆಯಿಂದ ಸೆಷನ್ ಮುಗಿಸಿದೆ. ಮತ್ತೂ ಒಮ್ಮೆ ಬಂದವರು ಸದ್ಯಕ್ಕೆ ಸಾಕು, ಬೇಕಾದಾಗ ಮತ್ತೊಮ್ಮೆ ಬರುತ್ತೇನೆ ಅಂತಂದರು. ತದನಂತರ ಮೂರು ಜನರನ್ನು ನನ್ನ ಬಳಿ ಥೆರಪಿಗಾಗಿ ಕಳುಹಿಸುವ ಸಹೃದಯತೆಯನ್ನೂ ತೋರಿದ್ದಾರೆ. ಅವರ ಕೊನೆಯ ಸೆಷನ್ ಮುಗಿದು ಏಳು ವಾರಗಳಾಗಿವೆ ಈಗ.
ಕಳೆದ ವಾರ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಗೆಲಸವೆಲ್ಲ ಮುಗಿಸಿ ಮಲಗಲು ಇನ್ನೂ ಸಮಯವಿದೆಯೆಂದು ಸ್ವ-ಸಮ್ಮೋಹನಕ್ಕೆ ತೊಡಗಿಕೊಂಡೆ. ಒಂದೆರಡು ಹಳೆ ನೆನಪುಗಳ ವಿವರಗಳ ನಂತರ ಕ್ಷಣ ಕಾಲ ಕತ್ತಲು.
ಬೆಳಕು ಆವರಿಸತೊಡಗಿದಾಗ ವೈಭವ ತೋರುವ ವೇದಿಕೆ. ಅಬ್ಬರದ ಸೆಟ್. ಸಿಂಹಾಸನದಂಥ ಪೀಠದಲ್ಲಿ ರುಕ್ಮಿಣಿಯಾಗಿ ನಟಿ ‘ಅಲಕಾದೇವಿ’. ಕೃಷ್ಣ ಪಾತ್ರಧಾರಿಯ ಮುಖ ಮಸುಕು. ಸುಧಾಮನಾಗಿ ನಮ್ಮೆದುರು ‘ಗಿರೀಶ’. ಅತ್ಯಂತ ಮನೋಜ್ಞ ಅಭಿನಯಕ್ಕಾಗಿ ಆತನ ಹೆಸರನ್ನು ಸಭೆ ಮತ್ತೆ ಮತ್ತೆ ಉದ್ಗರಿಸುತ್ತಿದೆ. ಆತ ಕೊನೆಯದಾಗಿ ಸಭೆಗೆ ನಮಸ್ಕರಿಸುವಾಗ ಆತನ ಮೇಲೆ ಬೆಳ್ಳಿ ನಾಣ್ಯಗಳನ್ನು ಎಸೆಯುತ್ತಿರುವ ಸಭಿಕರು. ನಾಟಕದ ನಂತರ ನಾವೆಲ್ಲರೂ ಸೇರಿ ಆತನನ್ನು ಅಭಿನಂದಿಸುತ್ತಿರುವ ದೃಶ್ಯ ಅಲಕಾದೇವಿಯಾಗಿದ್ದ ನನ್ನ ಕಣ್ಣ ಮುಂದೆ ಇನ್ನೂ ನಿಂತಿದೆ. ಅಮೋಘ ನಟನಾಚಾತುರ್ಯದ ಗಿರೀಶ್ ಮತ್ಯಾರೂ ಅಲ್ಲ, ನನ್ನ ಬಳಿ ತಮ್ಮ ಆತಂಕ-ಉದ್ವೇಗ ನಿವಾರಣೆಗಾಗಿ ಬಂದಿದ್ದ ಕಾಲೇಜ್ ಅಧ್ಯಾಪಕರು. ಅಲಕಾದೇವಿಯಾಗಿದ್ದ ನನ್ನ ಸುಪ್ತಮನಸ್ಸು ಗಿರೀಶನನ್ನು ಗುರುತಿಸಿತ್ತು. ಮರಾಠಿ ನಾಟಕ ಕಂಪೆನಿಯೊಂದರಲ್ಲಿ ಹದಿನೆಂಟನೇ ಶತಮಾನದ ಆದಿಯಲ್ಲಿ ಸಹನಟರಾಗಿ ಜೊತೆಗಿದ್ದ ನಮ್ಮ ಒಡನಾಟ ಅದೊಂದು ಸೆಷನ್‍ನಲ್ಲಿ ಮೆಲ್ಲನೆ ತೆರೆದುಕೊಂಡು ಅವರ ಹೆಸರನ್ನಷ್ಟೇ ತೂರಿಸಿ ಹೋಗಿತ್ತು, ನನ್ನಲ್ಲಿ ಕೆಲಕಾಲದ ಗೊಂದಲ ಹುಟ್ಟಿಸಿತ್ತು.
ಅವರನ್ನೇಕೆ ಆ ಹೆಸರಿನಿಂದ ಕರೆದೆ ಅನ್ನುವುದಕ್ಕೆ ನನಗೇನೋ ಉತ್ತರ ಸಿಕ್ಕಿದೆ. ಅತ್ಯಂತ ಸಮರ್ಥ ನಟರಾಗಿದ್ದ ಗಿರೀಶ್ ಈ ಜನ್ಮದಲ್ಲಿ ತರಗತಿಯಲ್ಲಿ ಪಾಠ ಮಾಡುವುದಕ್ಕೂ ಆತಂಕಗೊಳ್ಳುತ್ತಿದ್ದುದೇಕೆ ಅನ್ನುವುದಕ್ಕೆ ಉತ್ತರ ಮತ್ತು ಇದೇ ನೆನಪಿನ ತುಣುಕು ಅವರ ರಿಗ್ರೆಷನ್ನಿನಲ್ಲೂ ಕಾಣಬಹುದೇ ಅನ್ನುವ ಕುತೂಹಲಕ್ಕೆ ಉತ್ತರ ಸಿಗಬೇಕಾಗಿದೆ. ಮುಂದಿನ ಭೇಟಿಗಳನ್ನು ಎದುರು ನೋಡುತ್ತಿರುವೆ. ಅವರಾಗಿಯೇ ಬಂದರೆ, ಬಂದಾಗ ನಮ್ಮ ಭೇಟಿ. ಕಾದು ನೋಡಬೇಕು.