ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday, 29 November 2009

ಆಹಿತಾನಲ (ನಾಗಾ ಐತಾಳ)ರ ಎರಡು ಹೊತ್ತಗೆಗಳು

"ಕಾದೇ ಇರುವಳು ರಾಧೆ"- ಕಾದಂಬರಿ
"ಒಂದಾನೊಂದು ಕಾಲದಲ್ಲಿ"- ಕಟ್ಟು ಕಥೆಗಳ ಸಂಗ್ರಹ


ಆಹಿತಾನಲ ಎನ್ನುವ ಕಾವ್ಯನಾಮದ ನಾಗಾ ಐತಾಳರದು ಬಹಳಷ್ಟು ಜೀವನಾನುಭವವುಳ್ಳ ಸಮೃದ್ಧ ಬರವಣಿಗೆ. ಉಡುಪಿ ಸಮೀಪದ ಕೋಟದಿಂದ ಆರಂಭವಾದ ಇವರ ಜೀವನ ಪಯಣ, ಬೆಂಗಳೂರು, ಲಾಸ್ ಏಂಜಲಿಸ್, ಶಿಕಾಗೋ, ನ್ಯೂ ಜೆರ್ಸಿ ಮುಂತಾದ ಕಡೆಗಳಲ್ಲೆಲ್ಲ ಸುತ್ತಾಡಿ ಸಾಗುತ್ತಿದೆ. ಜೀವರಸಾಯನ ಶಾಸ್ತ್ರದಲ್ಲಿ ಅಧ್ಯಯನ, ಸಂಶೋಧನ ವೃತ್ತಿಯಾಗಿದ್ದು, ಈಗ ನಿವೃತ್ತರಾದ ಮೇಲೆ ಪ್ರವೃತ್ತಿಯಾಗಿದ್ದ ಬರವಣಿಗೆಯನ್ನೇ ಪೂರ್ಣಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದಾರೆ. ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ, ಕಾದೇ ಇರುವಳು ರಾಧೆ, ಒಂದಾನೊಂದು ಕಾಲದಲ್ಲಿ- ಕಟ್ಟುಕಥೆಗಳ ಸಂಗ್ರಹ; ಪ್ರಬಂಧ ಸಂಕಲನ- ಕಲಬೆರಕೆ - ಇವರ ಸ್ವಂತ ಪ್ರಕಟಿತ ಕೃತಿಗಳು. ಕಾರಂತ ಚಿಂತನ- ಕಡಲಾಚೆಯ ಕನ್ನಡಿಗರಿಂದ, ಕುವೆಂಪು ಸಾಹಿತ್ಯ ಸಮೀಕ್ಷೆ, ಯದುಗಿರಿಯ ಬೆಳಕು (ಪು.ತಿ.ನ. ಅವರ ಜೀವನ, ಸಾಹಿತ್ಯದ ಬಗ್ಗೆ), ಕನ್ನಡದಮರ ಚೇತನ (ಮಾಸ್ತಿಯವರ ಜೀವನ, ಸಾಹಿತ್ಯದ ಬಗ್ಗೆ), ಗೆಲುವಿನ ಚಿಲುಮೆ ರಾಜರತ್ನಂ- ಇವರ ಸಂಪಾದಿತ ಕೃತಿಗಳು. ಕನ್ನಡ ಸಾಹಿತ್ಯ ರಂಗದ ಪ್ರಕಟಣೆಗಳಾದ ಆಚೀಚೆಯ ಕತೆಗಳು ಮತ್ತು ನಗೆಗನ್ನಡಂ ಗೆಲ್ಗೆ- ಇವುಗಳಿಗೂ ಸಹಸಂಪಾದಕರಾಗಿದ್ದರು.

ಈಗ ಇಲ್ಲಿ ನಾನು ಒಳನೋಟ ಹರಿಸುತ್ತಿರುವ ಎರಡು ಕೃತಿಗಳು ವಿಶಿಷ್ಟವಾದವು. ಮೊದಲನೆಯದು ಐತಾಳರ ಚೊಚ್ಚಲ ಕಾದಂಬರಿ- ಕಾದೇ ಇರುವಳು ರಾಧೆ.

ಕೃಷ್ಣ-ರಾಧೆಯರ ಪ್ರೇಮಗಾಥೆ ನಮಗ್ಯಾರಿಗೂ ಹೊಸದಲ್ಲ. ಅದು ಪ್ರೇಮಿಗಳಿಗೆ ಸ್ಫೂರ್ತಿ ನೀಡುವ ಸ್ಥೈರ್ಯ ಕೊಡುವ ಶಕ್ತಿಯುಳ್ಳದ್ದು. ಭೌತಿಕ ಪ್ರೇಮಕಥೆಗಳಾದ ರೋಮಿಯೋ ಜೂಲಿಯೆಟ್, ಲೈಲಾ ಮಜನೂ, ಸಲೀಂ ಅನಾರ್ಕಲಿ, ಅಥವಾ ಪುರಾತನ ಗ್ರೀಕ್ ಕಥಾನಕದ ಪೈರಮಿಸ್ ಮತ್ತು ಥೆಸ್ಬಿ, ಮುಂತಾದವರುಗಳಂತೆ ಅಲ್ಲದೆ, ಈ ಜೋಡಿ ಸದಾ ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಿರುವಂಥದ್ದು. ರಾಧೆಯ ಪ್ರೀತಿಯಿಂದಲೇ ಪವಾಡಪುರುಷ ಕೃಷ್ಣನೂ ರಾಧಾಕೃಷ್ಣನಾಗಿಬಿಟ್ಟ. ಇಂಥ ಗಾಥೆಯನ್ನು ಐತಾಳರು ರಾಧೆಯೆಡೆಗೆ ಮೃದುನೋಟವಿಟ್ಟುಕೊಂಡು ಹೊಸದೊಂದು ಕೋನದಿಂದ ಬರೆದಿದ್ದಾರೆ. ತಮ್ಮ ಅರಿಕೆಯಲ್ಲಿ, ಸಾಮಾನ್ಯವಾಗಿ ಪ್ರಚಲಿತವಿರುವ ಕಥೆಗಳಿಗಿಂತ ಈ ಕಥನ ಹೇಗೆ ಭಿನ್ನವೆಂಬುದನ್ನು ಹೇಳಿಕೊಂಡಿದ್ದಾರೆ. ಕೃಷ್ಣಕಥೆಯಾದ ಭಾಗವತದಲ್ಲಿಯೇ ಇಲ್ಲದ ರಾಧೆ ಬಹುಶಃ ಜಯದೇವ ಕವಿಯ ಕಲ್ಪನೆಯಿರಬೇಕು ಎನ್ನುವುದು ಅಭಿಮತ. ಅಂಥ ಬಹುಪ್ರತೀತ ಕಲ್ಪನೆಯನ್ನು ಇನ್ನಷ್ಟು ಕಲ್ಪನೆಯ ಚಿತ್ತಾರಗಳಿಂದ ಐತಾಳರು ಅಂದಗೊಳಿಸಿದ್ದಾರೆ. ಗೋವಳ ಜನಾಂಗದ ಜನಜೀವನದ ಚಿತ್ರಣ ಕಟ್ಟಿಕೊಡುತ್ತಾ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನಿಲ್ಲಿಸುತ್ತಾರೆ.

ಗೋಕುಲದ ತುಂಟ ಕೃಷ್ಣ ಇವರ ಕಥೆಯಲ್ಲಿ ರಾಸಲೀಲೆಯಾಡುವ ಎಳೆಯ ಹದಿ ವಯಸ್ಸಿನ ಪೋರನೇ. ಹಾಲು ಬೆಣ್ಣೆ ಕದಿಯುವ, ಚಿಣ್ಣಿ-ದಾಂಡು ಆಡುವ ಕೊಳಲೂದಿ ದನಗಳನ್ನು ಕರೆಯುವ ಈ ಬಾಲಕೃಷ್ಣ ಹದಿಮೂರು ಹದಿನಾಲ್ಕು ವಯಸ್ಸಿನ ತರುಣ. ಅಂತೆಯೇ ಇಲ್ಲಿಯ ರಾಧೆಯೂ. ಅಂದಿನ ಕಾಲಕ್ಕೆ ತಕ್ಕಂತೆ, ಹೆತ್ತವರ ಕಣ್ಣಲ್ಲಿ ಮದುವೆಯ ವಯಸ್ಸಿಗೆ ಬಂದಿದ್ದ, ಮನೆಗೆಲಸ ಎಲ್ಲವನ್ನೂ ಚುರುಕಾಗಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದ ಹನ್ನೊಂದು-ಹನ್ನೆರಡರ ತರುಣಿ. ಇವರಲ್ಲಿ ಸಹಜವಾಗಿಯೇ ಅನುರಾಗ ಮೂಡುವಂತೆ ಸನ್ನಿವೇಶಗಳು ಹೆಣೆದುಕೊಳ್ಳುತ್ತವೆ. "ನಾನೇನೂ ನನ್ನಮ್ಮನಿಗೆ ಬಾಯಲ್ಲಿ ಬ್ರಹ್ಮಾಂಡವನ್ನು ತೋರಲಿಲ್ಲ; ನಾ ತಿಂದಿದ್ದ ಮಣ್ಣಿನ ಮುದ್ದೆ ದೊಡ್ಡದಾಗಿಯೇ ಇತ್ತು, ಅದು ಅವಳಿಗೆ ವಿಶ್ವದಂತೆ ತೋರಿತ್ತು. ಮಣ್ಣಿನಿಂದಲೇ ಬ್ರಹ್ಮಾಂಡವಲ್ಲವೆ?" ಅನ್ನುವ ತರುಣನ ಸಹಜ ಮಾತುಗಾರಿಕೆಗೆ ರಾಧೆಯಂತೆಯೇ ನಾವೂ ಬೆರಗಾಗಬಹುದು. "ಮೃಣ್ಮಯವೀ ಜಗತ್- ಅನ್ನುವ ಸತ್ಯವನ್ನು ಎಷ್ಟು ಸರಳವಾಗಿಯೇ ತೋರಿಸಿದ್ದಾರೆ" ಎಂದು ತಲೆದೂಗಬಹುದು. ಭೈರಪ್ಪನವರ ಪರ್ವದ ಕೃಷ್ಣನಂತೆಯೇ ಈತನ ಮಾನವೀಯ ಗುಣಗಳನ್ನು ಸುಲಭವಾಗಿ ಗುರುತಿಸಿ ಕಂಡುಕೊಳ್ಳಬಹುದು.

ಕೊನೆಯಲ್ಲಿ ಗೋಕುಲ ತೊರೆಯುವ ಕೃಷ್ಣನ ತುಮುಲ, ತದನಂತರ ರಾಧೆಯ ಅಳಲು ಓದುಗರ ಮನ ಕರಗಿಸುತ್ತವೆ. ಇದೇ ಹಿನ್ನೆಲೆಯಾಗಿರಿಸಿಕೊಂಡು ಹಲವಾರು ಕವಿತೆಗಳು ಬೇರೆ ಬೇರೆ ಕವಿಗಳಿಂದ ಬಂದಿದ್ದರೂ, ಗದ್ಯರೂಪದಲ್ಲಿ ರಾಧೆಯ ಕಡೆಗೊಂದು ನೋಟವಿಟ್ಟ ಈ ಕಾದಂಬರಿ, ಪುಟ್ಟ ಊರೊಂದರ ಯಾವುದೇ ರಾಧೆಯ, ಯಾವುದೇ ಕೃಷ್ಣನ ಕಥೆಯೂ ಆಗಬಹುದು ಎನ್ನುವಷ್ಟು ಆಪ್ತವಾಗುತ್ತದೆ.

ಕಾದಂಬರಿಯಲ್ಲಿ ದೋಷಗಳೇ ಇಲ್ಲವೆಂದಲ್ಲ. ಒಂದೆರಡು ಕಡೆ ಕಥನ ಬರಹಗಾರನ ಲೇಖನಿಯಿಂದ ಹಾರಿ ಆತನ ವೈಚಾರಿಕತೆಯ ಹಳಿಗೆ ಸಿಕ್ಕುತ್ತದೆ. ಸರಳವಾದ ನಿರೂಪಣೆಯಲ್ಲಿ ಲೇಖಕನ ಒಗ್ಗರಣೆಯೂ ಒಮ್ಮೊಮ್ಮೆ ಬೆರೆತಿದೆ. ಅಂತಹ ಒಂದು ಪ್ರಸಂಗ ಎರಡನೆಯ ಅಧ್ಯಾಯದ ಕೊನೆಯ ವಾಕ್ಯಗಳಲ್ಲಿ ಬರುತ್ತದೆ. ಸರಾಗವಾಗಿ ಸಾಗುತ್ತಿದ್ದ ನಿರೂಪಣೆಯಲ್ಲಿ ಲೇಖಕನ ವೈಚಾರಿಕತೆಯ ವಿವರಣೆ ನುಸುಳಿದೆ. ಅದು ಓದುಗನನ್ನು ಕಥನದಿಂದ ವಿಶ್ಲೇಷಣೆಯ ನೆಲೆಗೆ ಒಯ್ಯುತ್ತದೆ. ಸಹಜ-ಸರಳ ಕಥಾನಕದಲ್ಲಿ ಲೇಖಕನ ಮುಖ ಕಾಣುವುದು ನನಗೆ ಸರಿಕಾಣಲಿಲ್ಲ. ಹಾಗೇನೇ ಹನ್ನೊಂದರ ಬಾಲೆಯನ್ನು ಮೈ ತುಂಬಿಕೊಂಡ ಪ್ರೌಢ ತರುಣಿಯಂತೆ ಚಿತ್ರಿಸಿದ್ದೂ ಸಮಂಜಸವೆಂದು ನನಗನಿಸಲಿಲ್ಲ.

ಐತಾಳರ ಇನ್ನೊಂದು ಪುಸ್ತಕ- ಒಂದಾನೊಂದು ಕಾಲದಲ್ಲಿ- ಕಟ್ಟು ಕಥೆಗಳ ಸಂಗ್ರಹ. ಇದರ ಬಗ್ಗೆ ಹೆಚ್ಚು ಹೇಳುವುದೇ ಬೇಕಾಗಿಲ್ಲ. ಶ್ರೀಯುತ ರಾಜಗೋಪಾಲರ ತಾಯಿಯವರಿಗೆ ಡಿ.ವಿ.ಜಿ.ಯವರು ಹೇಳಿದ್ದಂತೆ, ಮಕ್ಕಳಿಗೆ ಕಥೆ ಹೇಳುವಂಥ ದೇವರು ಮೆಚ್ಚುವ ದೊಡ್ಡ ಕೆಲಸವನ್ನು ಐತಾಳರು ಮಾಡಿದ್ದಾರೆ. ಈ ಕಥೆಗಳನ್ನು ಓದುತ್ತಿದ್ದಂತೆ ನಮ್ಮನ್ನು ನಮ್ಮ ಅಜ್ಜಿ-ಅಜ್ಜನ ಮನೆಯ ಪಡಸಾಲೆಗೋ ಜಗಲಿಗೋ ಕೊಂಡೊಯ್ಯುವ ಕಾಲಮಾಂತ್ರಿಕ ಶಕ್ತಿ ಇಲ್ಲಿನ ಕಥೆಗಳಿಗಿವೆ. ಇಂದಿಲ್ಲಿ ಸೇರಿರುವ ನಾವೆಲ್ಲರೂ ಮನೆಯಲ್ಲಿ ಚಿಕ್ಕ ಮಕ್ಕಳು ಅಥವಾ ಮೊಮ್ಮಕ್ಕಳನ್ನು ಹೊಂದಿರುವವರೇ. ನಾವೆಲ್ಲರೂ ನಮ್ಮ ಮನೆಯ ಪುಟಾಣಿಗಳಿಗೆ ಹೇಳಬೇಕಾದ ಕಥೆಗಳ ಅಮೂಲ್ಯ ಸಂಗ್ರಹ ಇದೆಂದು ನನ್ನ ಅಭಿಮತ. ಮಕ್ಕಳ ಕೋಣೆಯ ಪುಸ್ತಕ ಕವಾಟಿನಲ್ಲಿ ಇದರದೊಂದು ಪ್ರತಿಯಿರಲಿ. ಮಲಗುವ ಮುನ್ನ ಮಕ್ಕಳಿಗೆ ಒಂದಾದರೂ ಕಥೆಯನ್ನು ಈ ಪುಸ್ತಕದಿಂದ ಓದಿ ಹೇಳಿ. ಆಗಲೇ ಇದಕ್ಕೆ ಸಂಪೂರ್ಣ ಅರ್ಥ ದೊರಕುತ್ತದೆ.

ಹಿರಿಯರಾದ ಐತಾಳರ ಎರಡು ಕೃತಿಗಳನ್ನು ಓದಿ ನನ್ನ ಅಭಿಪ್ರಾಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಕನ್ನಡ ಸಾಹಿತ್ಯ ರಂಗದ ಪದಾಧಿಕಾರಿಗಳಿಗೆ ನಮನಗಳು. "ನನ್ನ ಕಾರ್ಯಕ್ರಮದಲ್ಲಿ ನೀನು ಇರಲೇಬೇಕು" ಎಂದು ಪಟ್ಟು ಹಿಡಿದು ನನ್ನನ್ನು ಒಪ್ಪಿಸಿ ಈ ಕೆಲಸ ನನಗೆ ಅಂಟಿಸಿದ ಗೆಳತಿ ತ್ರಿವೇಣಿಗೂ ಅನಂತ ವಂದನೆಗಳು. ಕೇಳಿದ ನಿಮಗೆಲ್ಲ ಧನ್ಯವಾದಗಳು.

(ಅಮೆರಿಕದ ‘ಕನ್ನಡ ಸಾಹಿತ್ಯ ರಂಗ’ವು ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ದಲ್ಲಿ "ನಮ್ಮ ಹೆಮ್ಮೆಯ ಬರಹಗಾರರು" ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಲೇಖನ)

Sunday, 22 November 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೧

ಯಾವ ವೀರನ ಕಲ್ಲ-ಬಿಲ್ಲುಗಳು ಈ ರಾಜ್ಯದಲ್ಲಿ....
ಸೆಪ್ಟೆಂಬರ್ ೫, ಶನಿವಾರ

ಮತ್ತೊಂದು ಸೋಮಾರಿ ಶನಿವಾರ. ನಿಧಾನವೇ ಪ್ರಧಾನವಾಗಿದ್ದ ಬೆಳಗು. ಉಳಿದಿದ್ದ ರವೆಯನ್ನೆಲ್ಲ ಹಾಕಿ ಉಪ್ಪಿಟ್ಟು ಮಾಡಿ, ಎರಡನೇ ಸುತ್ತಿನ ಕಾಫ಼ಿ ಹೀರಿ, ಗ್ರೀನ್ ರಿವರ್ ಪಾರ್ಕ್ ಕ್ಯಾಂಪಿಂಗ್ ಜಾಗದ ಶಾಂತಿಯನ್ನು ನನ್ನೊಳಗೆ ಆವಾಹಿಸಿಕೊಂಡು ಅಲ್ಲಿಂದ ಹೊರಟಾಗಲೇ ಹತ್ತೂವರೆ.




ಆರ್ಚಸ್ ನ್ಯಾಷನಲ್ ಪಾರ್ಕಿಗೆ ಅಲ್ಲಿಂದ ಒಂದು ಗಂಟೆಯ ಹಾದಿ. ಬಿಸಿಬಿಸಿ ಬಿಸಿಲಿನ ದಿನಗಳು. ಟೊಪ್ಪಿ, ಧಾರಾಳ ನೀರು, ಒಂದಿಷ್ಟು ಸ್ನ್ಯಾಕ್ಸ್- ಎಲ್ಲವನ್ನೂ ಕೈಗೆಟಕುವಂತೆ ಜೋಡಿಸಿಕೊಂಡಿದ್ದೆ. ಪಾರ್ಕ್ ಗೇಟ್ ಬಳಿ ಬಂದಾಗ ಹನ್ನೊಂದು ಇಪ್ಪತ್ತು. ಮುಖ್ಯ ದ್ವಾರ ಫಲಕದ ಚಿತ್ರ ತೆಗೆಯಲು ಹೋದರೆ ಅಲ್ಲೊಂದು ಪುಟಾಣಿ ಫಲಕಕ್ಕೆ ಅಂಟಿದಂತೆ ಆಡುತ್ತಿತ್ತು. ಅವಳಪ್ಪ ಅಂದು ಕ್ಯಾಮರಾ ತಂದಿರಲಿಲ್ಲ; ತನ್ನದೂ ಫೋಟೋ ಬೇಕೆಂದು ಅವಳ ತಕರಾರು. "ತೆಗೆಯಲೇ, ಮತ್ತೆ ಕಳಿಸಿಕೊಡುತ್ತೇನೆ, ಮೈಲ್ ಐಡಿ ಕೊಡಿ" ಅಂದರೆ, ಪೆಚ್ಚಾಗಿ ನೋಡಿದಾತ, "ನಮ್ಮ ಮನೆ ಇಲ್ಲೇ, ಕಾಲು ಗಂಟೆ ಹಾದಿ. ಸದಾ ಇಲ್ಲಿಗೆ ಬರುತ್ತಿರುತ್ತೇವೆ. ನಾಳೆಯೇ ಮತ್ತೆ ಕ್ಯಾಮರಾ ತಗೊಂಬಂದು ಚಿತ್ರ ತೆಗೀತೇನೆ" ಅಂದ. ಅಂತೂ ಇಂತೂ ಮುಗ್ಧ ಮೊಂಡಾಟದ ಮುದ್ದು ಮಗು ಅತ್ತ ಸರಿದಾಗ ತುಸು ಹೊತ್ತೇ ಆಗಿತ್ತು. ಫಲಕದ ಚಿತ್ರ ತೆಗೆದು ವಿಸಿಟರ್ ಸೆಂಟರಿಗೆ ಬಂದೆವು.





ಆರ್ಚಸ್ ಬಗ್ಗೆ ಇಪ್ಪತ್ತು ನಿಮಿಷಗಳ ಸಾಕ್ಷ್ಯ ಚಿತ್ರ ನೋಡಿ ಬೆಟ್ಟದ ಮೇಲೆ ಗಾಡಿ ಏರಿತು. ಒಂದೊಂದಾಗಿ ಅಲ್ಲಿನ ಶಿಲಾರಚನೆಗಳನ್ನು ನೋಡುನೋಡುತ್ತಾ ಅಪರಾಹ್ನ, ಸಂಜೆ, ರಾತ್ರೆಯಾಗಿದ್ದೂ ತಿಳಿಯಲೇ ಇಲ್ಲ. ನೋಡದೇ ಬಿಟ್ಟ ರಚನೆಗಳು ಹಲವಿದ್ದರೂ, ನಮ್ಮ ಅರ್ಧ ದಿನದ ಬಿಡುವಿಗೆ ದಕ್ಕಿದ್ದರಲ್ಲಿ ಕೆಲವೇ ಕೆಲವು ಇಲ್ಲಿ....

"ಪೆಂಗ್ವಿನ್ಸ್"
(ಇದೇ ರೀತಿಯಲ್ಲಿ- ತ್ರೀ ಗಾಸಿಪ್ಸ್, ಟವರ್ ಆಫ಼್ ಬೇಬ್ಲ್, ದ ಆರ್ಗನ್- ಇತ್ಯಾದಿ ರಚನೆಗಳಿವೆ)


"ಪಾರ್ಕ್ ಅವೆನ್ಯೂ"


"ಕುರಿ ಕಲ್ಲು" (ಶೀಪ್ ರಾಕ್)
(ಕಾರ್ಕಳದಿಂದ ಕಾಣುವ ಪಡುಘಟ್ಟದ ಸಾಲಿನಲ್ಲಿ ಕುರಿಂಗಲ್ಲು ಇರುವ ನೆನಪಾಯ್ತು)


"ಬ್ಯಾಲೆನ್ಸಿಂಗ್ ರಾಕ್"




"ಉತ್ತರ ಮತ್ತು ದಕ್ಷಿಣ ಕಿಟಕಿಗಳು"- ‘ದ ವಿಂಡೋಸ್’ ಟ್ರೈಲ್


ಟರೆಟ್ ಆರ್ಚ್


ಡಬಲ್ ಆರ್ಚ್


ಜೋಡು ಬಿಲ್ಲುಗಳ ಜಾಯಿಂಟ್!


ಯೂಟಾ ರಾಜ್ಯದ ಲಾಂಛನ- ಡೆಲಿಕೇಟ್ ಆರ್ಚ್
(ಇದರ ಬದಿಗೆ ಹೋಗಿ ನೋಡಿಲ್ಲ, ಮೂರೂವರೆ ಮೈಲಿನ ಟ್ರೈಲ್- ಸಮಯಾವಕಾಶವಿರಲಿಲ್ಲ. ಪಕ್ಕದ ಬೆಟ್ಟದಿಂದ ತೆಗೆದ ಚಿತ್ರ.)




ಡಬಲ್ ‘O’ ಆರ್ಚ್




ಅತಿ ದೊಡ್ಡ ಆರ್ಚ್- ಲ್ಯಾಂಡ್ ಸ್ಕೇಪ್ ಆರ್ಚ್
ಇದರ ಅಗಲ ಫ಼ುಟ್ ಬಾಲ್ ಕ್ರೀಡಾಂಗಣಕ್ಕಿಂತಲೂ ಜಾಸ್ತಿ. ೧೯೯೬ರಲ್ಲಿ (ಬಹುಶಃ) ಇದರ ಒಳಭಾಗದಿಂದ ದೊಡ್ಡದೊಂದು ಬಂಡೆಚೂರು ಬಿದ್ದು ಹೋಗಿ ಇದೀಗ ತೆಳುವಾಗಿದೆ. ಆದ್ದರಿಂದ ಇದರ ಬಳಿಗೆ ಹೋಗಲನುಮತಿಯಿಲ್ಲ.




ಸ್ಕೈ ಲೈನ್ ಆರ್ಚ್
೧೯೪೦ರಲ್ಲಿ ಇದರ ಎಡ-ಒಳಭಾಗದಿಂದ ಬಂಡೆಯೊಂದು ಕಳಚಿ ಬಿದ್ದು ಇದರ ಒಳಾವರಣ ದ್ವಿಗುಣವಾಯ್ತು.


ಅಲ್ಲೆಲ್ಲೋ ಸುತ್ತಾಡುವಾಗ, ಯಾರದೋ ಮಾತಿನಲ್ಲಿ, ಇಲ್ಲಿಂದ ಒಂದರ್ಧ ಗಂಟೆ ಹಾದಿಯ ಕ್ಯಾನಿಯನ್ ಲ್ಯಾಂಡ್ಸ್ ಕೂಡಾ ಸುಂದರ ತಾಣವೆಂದೂ ತಿಳಿದುಬಂತು. ನಮ್ಮ ಟೂರ್ ಪ್ಲಾನ್ ಅದನ್ನು ಒಳಗೊಂಡಿರಲಿಲ್ಲ. ಭಾನುವಾರದಂದು ಬೆಳಗ್ಗೆ ಗ್ರೀನ್ ರಿವರ್ ಪಾರ್ಕಿನಿಂದ ಹೊರಟು, ಮಧ್ಯಾಹ್ನದ ಹೊತ್ತಿಗೆ ಸಾಲ್ಟ್ ಲೇಕ್ ಸಿಟಿ ಸೇರಿ, ಸಂಜೆಯೆಲ್ಲ ಅಲ್ಲಿಯೇ ಒಂದಿಷ್ಟು ಸುತ್ತಾಡುವ ಯೋಜನೆಯಲ್ಲಿದ್ದೆವು. ಈ ಮಾತು ಕೇಳಿದ ಮೇಲೆ, ಅದನ್ನೂ ನೋಡಿಕೊಂಡು ಹೋಗುವ ಯೋಚನೆ ಬಂತು. ಸಿಟಿಯನ್ನು ಬೇರೆ ಯಾವಾಗಲಾದರೂ ನೋಡಬಹುದು, ನ್ಯಾಷನಲ್ ಪಾರ್ಕ್ ಪಾಸ್ ಇರುವಾಗ ಅದನ್ನು ನೋಡಿಬಿಡೋಣವೆಂದು ಲೆಕ್ಕ ಹಾಕಿಕೊಂಡು ಗ್ರೀನ್ ರಿವರ್ ಪಾರ್ಕಿಗೆ, ನಮ್ಮ ಟೆಂಟಿಗೆ ಮರಳಿದಾಗ ಒಂಭತ್ತು ಗಂಟೆ. ಹಣ್ಣು, ಮೊಸರವಲಕ್ಕಿ, ಉಪ್ಪಿನಕಾಯಿಯ ಡಿನ್ನರ್ ಮುಗಿಸಿ, ಪಾರ್ಕಿನೊಳಗೆ ಒಂದು ವಾಕ್ ಮಾಡಿ ಬಂದು ಬೇಗನೇ ಮಲಗಿದೆವು, ಕ್ಯಾನಿಯನ್ ಲ್ಯಾಂಡ್ಸ್ ಬಗ್ಗೆ ಕಲ್ಪನೆ ಕಟ್ಟುತ್ತಾ.

Sunday, 15 November 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೦

ಯಾವುದೊ ದೈತ್ಯನ ಮಾಳಿಗೆಮೆಟ್ಟಲು- ಗ್ರ್ಯಾಂಡ್ ಸ್ಟೇರ್ ಕೇಸ್, ಎಸ್ಕಲಾಂಟೇ
ಮತ್ತು ಹವಳವಲ್ಲದ ಹವಳವರ್ಣದ ಕ್ಯಾಪಿಟಲ್ ರೀಫ಼್....


ಸೆಪ್ಟೆಂಬರ್ ೪, ಶುಕ್ರವಾರ

ಬ್ರೈಸಿನ ಹೂಡೂಸ್ ಮಾಯಾಜಾಲವನ್ನು ಹೊರದಾಟಿ ಹೈವೇ ಸೇರಿದಾಗ ಹನ್ನೊಂದು ನಲವತ್ತು. ಅಲ್ಲಿಂದ ಕ್ಯಾಪಿಟಲ್ ರೀಫ಼್ ಕಡೆ ಸಾಗಲು ಗ್ರ್ಯಾಂಡ್ ಸ್ಟೇರ್ ಕೇಸ್ ಎಂದು ಕರೆಯಲ್ಪಡುವ, ದೂ....ರದಿಂದ ಮೆಟ್ಟಿಲು ಮೆಟ್ಟಿಲಾಗಿ ಕಾಣುವ, ಸುಮಾರು ಬರಡು ಬರಡಾಗಿರುವ ಬೆಟ್ಟಸಾಲುಗಳನ್ನು ದಾಟಬೇಕು.

ಕಣಿವೆಯಲ್ಲಿ ಎಸ್ಕಲಾಂಟೇ ನದಿಯು ಹರಿಯುತ್ತಿದ್ದು ಅದರ ಅಕ್ಕ-ಪಕ್ಕ ಮರಗಳನ್ನು ನೆಟ್ಟು ಬೆಳೆಸಿದ್ದರು, ಹಲವಾರು ವರ್ಷಗಳ ಹಿಂದೆ.



ಉಳಿದಂತೆ ಸುತ್ತ ಮುತ್ತ ಎಲ್ಲ ಒಣಒಣಕಲಾಗಿ ಕಾಣುವ ಪ್ರದೇಶ. ಅಲ್ಲಿ ಕೆಲವೊಂದು ಕಡೆಗಳಲ್ಲಂತೂ ಹೈವೇ ಮಾತ್ರ ಬೆಟ್ಟದ ನೆತ್ತಿಯಲ್ಲಿ, ಎರಡೂ ಬದಿಗಳಲ್ಲಿ ಪ್ರಪಾತವಿರುವ ಸ್ಥಳಗಳಿವೆ. ಅತ್ತ-ಇತ್ತ ಸಾಗುವ ವಾಹನಗಳ ಭರಾಟೆಯಲ್ಲಿ ಇಮ್ಮುಖ ರಸ್ತೆಯ ಇಬ್ಬದಿಯ ಕಣಿವೆಗಳತ್ತ ಕಣ್ಣು ಹಾಯಿಸಲೂ ಭಯವಾಗುವ ಪರಿಸ್ಥಿತಿ. ರೋಮಾಂಚಕಾರಿ ಪರಿಸರ. ರಸ್ತೆಯ ಮೇಲೇ ನೋಟ ನೆಟ್ಟಿದ್ದ ಕಾರಣ ಮತ್ತು ಮೋಡ ಕವಿದಿದ್ದ ಕಾರಣ ಚಿತ್ರಗಳನ್ನು ತೆಗೆಯಲೇ ಇಲ್ಲ. ಅಲ್ಲೊಂದು ಇಲ್ಲೊಂದು ಹನಿಗಳು ಗಾಜಿನ ಮೇಲೆ ಚಿತ್ತಾರಬಿಡಿಸಿದವು.

ಕೆಲವೊಂದು ಕಡೆ ಆಸ್ಪೆನ್ ಮರಗಳನ್ನು ನೆಟ್ಟು ಬೆಳೆಸಿದ್ದಂತೆ, ಮತ್ತೆ ಅವುಗಳನ್ನು ಕತ್ತರಿಸಿದ್ದಂತೆ ಕಾಣುತ್ತಿತ್ತು. ಎಲ್ಲೂ ಯಾವುದೇ ರೀತಿಯ ವಿವರಗಳು ಇರಲಿಲ್ಲ. ಒಂದು ಆಸ್ಪೆನ್ ಕಾಡಿಗೆ ಆಗಲೇ ಹೇಮಂತಚುಂಬನವಾಗಿತ್ತು.



ಹೀಗೇ ಸಾಗಿ ಸುಮಾರು ಒಂದೂವರೆಯ ಹೊತ್ತಿಗೆ ಎಸ್ಕಲಾಂಟೇಯೊಳಗಿನ ಯಾವುದೋ ಒಂದು ಪಾರ್ಕಿನ ಬದಿಯಲ್ಲಿ ಮಧ್ಯಾಹ್ನದ ಊಟ ಮುಗಿಸಿ ಕ್ಯಾಪಿಟಲ್ ರೀಫ಼್ ತಲುಪಿದಾಗ ಸಂಜೆಯ ನಾಲ್ಕು ಗಂಟೆ.


ಇದೊಂದು ಬರಡು ಭೂಮಿಯಂಥ ಕಣಿವೆ. ಸುತ್ತೆಲ್ಲ ಕೆಂಪು ಬಿಳಿ ಬಂಡೆಬೆಟ್ಟಗಳು. ಒಂದೊಂದು ರೀತಿಯ ಆಕಾರ ತಳೆದ ಕಲ್ಲು-ಬಂಡೆ-ಮಣ್ಣಿನ ಗೋಪುರಗಳು. ವಿಸ್ಮಯ ಹುಟ್ಟಿಸುವ ಪರಿಸರಕ್ಕೆ ಒಂದೊಂದು ಹೆಸರುಗಳು. ಮುಖ್ಯದ್ವಾರದಿಂದ ಈ ಮುಖ್ಯ ಡ್ರೈವ್ ಮುಗಿಸಿದೆವು.

ವಿಸಿಟರ್ ಸೆಂಟರಿನ ನೆತ್ತಿಯ ಮೇಲೆ


ಅವಳಿ ಬಂಡೆಗಳು (ಟ್ವಿನ್ ರಾಕ್ಸ್)


ಹೊಗೆಗೊಳವೆ (ಚಿಮ್ನಿ ರಾಕ್)


ಇವನು ಯಾರು ಬಲ್ಲಿರೇನು? ನನಗೆ ಮಾತ್ರ ಕಂಡನೇನು? ಇವನ ಹೆಸರು ಹೇಳಲೇನು?


ಈ ಸಾಲುಮನೆಗಳಲ್ಲಿ ನನಗಾವುದು? ನಿಮಗಾವುದು?


ಚಾಕೊಲೇಟ್ -ಆಂಡ್-ಕ್ರೀಮ್ ಬಿಸ್ಕೆಟ್ ಫ಼್ಯಾಕ್ಟರಿ...


ಈಜಿಪ್ಷಿಯನ್ ಟೆಂಪಲ್


ಹೆಡೆಯಡಿಯ ಜಗದೊಡೆಯ




ಪಾರ್ಕಿನ ಭಾಗವೇ ಆದರೂ ಹೈವೇ ಬದಿಯಲ್ಲಿದ್ದ ಒಂದು ದೊಡ್ಡ ಬಂಡೆಯ ಬದಿಯಲ್ಲಿ (ಬಂಡೆಬೆಟ್ಟವೆಂದರೇ ಸರಿ) ಮೂಲ ನಿವಾಸಿ ಇಂಡಿಯನ್ಸ್ ಬರೆದಿದ್ದ ರೇಖಾಚಿತ್ರಗಳನ್ನು ನೋಡಿ ಅಚ್ಚರಿಪಟ್ಟೆ- ಅಷ್ಟು ಎತ್ತರಕ್ಕೆ (ನಾವು ನಿಂತು ನೋಡುವ ಸ್ಥಳದಿಂದ ಚಿತ್ರವಿದ್ದ ಸ್ಥಳ ಸುಮಾರು ಇಪ್ಪತ್ತು ಅಡಿ ಎತ್ತರದಲ್ಲಿತ್ತು ಅಂತನಿಸಿತ್ತು ನನಗೆ) ಹೋಗಿ ಅದು ಹೇಗೆ ಚಿತ್ರಗಳನ್ನು ಬರೆದರು? ಅಲ್ಲಿದ್ದ ವಿವರಗಳ ಫಲಕದ ತುಂಬ ಯಾರೋ ತಮ್ಮದೇ ಚಿತ್ತಾರ ಬರೆದಿದ್ದರಾಗಿ ಏನೂ ಓದಲಾಗಲಿಲ್ಲ.



ನಂತರ ಹೈವೇಯಿಂದಲೇ ಇದ್ದ ಒಂದು ಮೈಲುದ್ದದ ಹೈಕಿಂಗ್ ಟ್ರೈಲ್ ಹಿಡಿದೆವು. ಹತ್ತುತ್ತಾ ಹೋದಾಗ ಅಲ್ಲೆಲ್ಲೋ ಬಂಡೆಯೊಂದರ ಬದಿಯಲ್ಲಿ ಕಾಲು ಜಾರಿ ಪಾದ ಒಂದಿಷ್ಟು ಉಳುಕಿ ಮನವೆಲ್ಲ ಕುಸುಕುಸು. ಜೊತೆಗೆ, ದಾರಿ ಅಷ್ಟು ಏರಿಕೆಯಿರಬಹುದೆನ್ನುವ ಅರಿವಿಲ್ಲದೆ ನೀರು ಒಯ್ದಿರಲಿಲ್ಲ. ಬಾಯಾರಿಕೆ, ಕಾಲು ನೋವು, ಕತ್ತಲಾಗುತ್ತಿರುವ ಬೇಸರದ ಜೊತೆಗೆ ನನ್ನ ಕ್ಯಾಮರಾ ಬ್ಯಾಟರಿಯೂ ಕೈಕೊಟ್ಟು ನನ್ನನ್ನು ಇನ್ನೂ ರೇಗಿಸಿದವು. ಒಣಭೂಮಿಗೆ ನೀರು ಹನಿಸದಂತೆ ನನ್ನ ತಾಳ್ಮೆಯನ್ನು ಕಷ್ಟದಿಂದಲೇ ಕಾಯ್ದುಕೊಂಡಿದ್ದೆ.

ಪಿರಮಿಡ್


ಡೋಮ್

ಹೇಗೋ ನಿಧಾನಕ್ಕೆ ನಡೆದು, ಈ ನ್ಯಾಚುರಲ್ ಬ್ರಿಜ್ ಅಡಿಯಲ್ಲಿ ನಿಂತಾಗಲೇ ಏಳೂವರೆ ಗಂಟೆ, ಸೂರ್ಯಾಸ್ತವಾಗಿಹೋಗಿತ್ತು.





ಅರೆಗತ್ತಲಲ್ಲೇ ಹಿಂದಿರುಗಿ ಬಂದು ಕಾರ್ ಸೇರಿಕೊಂಡೆವು.

ಒಂದಿಷ್ಟು ಹಣ್ಣುಗಳನ್ನು ತಿಂದು ಸುಮಾರು ಎಂಟೂವರೆಗೆ ಅಲ್ಲಿಂದ ಹೊರಟು ಗ್ರೀನ್ ರಿವರ್ ಪಾರ್ಕ್ ಸೇರಿದಾಗ ಹತ್ತರ ಹತ್ತಿರ. ಮತ್ತೊಮ್ಮೆ ಕಾರಿನ ಬೆಳಕಲ್ಲಿ ಟೆಂಟ್ ಹಾಕಿ ಮೊಸರವಲಕ್ಕಿ-ಉಪ್ಪಿನಕಾಯ್ ತಿಂದು ಮಲಗಿದ್ದೊಂದೇ ಗೊತ್ತು.

Tuesday, 10 November 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೯

ಬ್ರೈನಿಗೆ ಸರ್ಪ್ರೈಸ್- ಬ್ರೈಸ್ ಕ್ಯಾನಿಯನ್

ಸೆಪ್ಟೆಂಬರ್ ೩ ಗುರುವಾರ.

ಸೆಡಾರ್ ಸಿಟಿಯಿಂದ ಹೊರಟು ಸೆಡಾರ್ ಬ್ರೇಕ್ಸ್ ನೋಡಿಕೊಂಡು, ರೆಡ್ ಕ್ಯಾನಿಯನ್ ಮುಖಾಂತರ ಬ್ರೈಸ್ ಕ್ಯಾನಿಯನ್ ತಲುಪಿದಾಗ ಅಪರಾಹ್ನ ಮೂರೂವರೆ.


ನಮ್ಮ ಕ್ಯಾಂಪ್ ಸೈಟ್ ಕಡೆ ಹೋಗಿ, ನಮ್ಮ ಹೆಸರು ಅಲ್ಲಿ ನಮೂದಾಗಿರುವುದನ್ನು ನೋಡಿ, ವಿಸಿಟರ್ ಸೆಂಟರಿಗೆ ಬಂದೆವು, ಸುಮಾರು ನಾಲ್ಕೂಕಾಲಕ್ಕೆ. ಕಾರಿನ ಸಿಗರೇಟ್ ಲೈಟರ್ ಡಮಾರ್ ಆಗಿದ್ದರಿಂದ ಕ್ಯಾಮರಾ ಬ್ಯಾಟರಿಗಳನ್ನ ಚಾರ್ಜ್ ಮಾಡಲಾಗುತ್ತಿರಲಿಲ್ಲವಲ್ಲ! ನಮ್ಮಿಬ್ಬರ ಕ್ಯಾಮರಾಗಳಿಗೂ ಒಂದೇ ತರದ ಬ್ಯಾಟರಿಗಳು ಮತ್ತು ನಮ್ಮಲ್ಲಿ ಒಂದು ಹೆಚ್ಚುವರಿ ಬ್ಯಾಟರಿಯಿತ್ತು. ನನ್ನ ಕ್ಯಾಮರಾ ಬ್ಯಾಟರಿ ಖಾಲಿಯಾಗುತ್ತಿದ್ದು, ಅದನ್ನು ವಿಸಿಟರ್ ಸೆಂಟರಿನಲ್ಲಿ ಚಾರ್ಜಿಗಿಡಲು ಕೊಟ್ಟೆವು- ಏಳು ಗಂಟೆಯ ಮೊದಲು ಪಡೆಯುತ್ತೇವೆಂಬ ಕರಾರಿನೊಡನೆ.

ಬ್ರೈಸ್ ಪಾಯಿಂಟ್ ಕಡೆ ಹೋದಾಗ ಸಣ್ಣಗೆ ಮಳೆ ಹನಿಯಲಾರಂಭಿಸಿತು. ಕಳೆದ ಬಾರಿ ಸುರಿಯುವ ಹಿಮದಡಿ ನೋಡಿದ ಕೆಂಪು-ಕಿತ್ತಳೆ-ಬೂದು ‘ಹೂಡೂ’ಗಳು ಈ ಸಲ ಎರಡೆರಡು ಬಣ್ಣಬಿಲ್ಲುಗಳ ನೆರಳಲ್ಲಿ ತಲೆಯೆತ್ತಿ ನಿಂತಿದ್ದವು.




‘ದ ಗ್ರೆಟ್ಟೋ’

ಅಲ್ಲಿಂದ ಮುಂದೆ- ಪರಿಯಾ ಪಾಯಿಂಟ್, ಯೊವಿಂಪಾ ಪಾಯಿಂಟ್, ರೈನ್ ಬೋ ಪಾಯಿಂಟ್ ತನಕ ಡ್ರೈವ್ ಹೋಗಿ, ಹಿಂದೆ ಬರುವಾಗ ನಡುನಡುವಿನ ತಾಣಗಳಲ್ಲೆಲ್ಲ ನಿಂತು ನೋಡಿಕೊಂಡು ಬಂದೆವು.








ಕ್ಯಾಮರಾ ಬ್ಯಾಟರಿಯನ್ನು ಹಿಂದಕ್ಕೆ ಪಡೆದು ಸನ್ ಸೆಟ್ ಪಾಯಿಂಟ್ ಕಡೆ ಸವಾರಿ ಸಾಗಿತು. ಸೂರ್ಯಾಸ್ತ ನೋಡಿ, ಅಲ್ಲಿಂದಲೇ ಶುರುವಾಗುವ ಒಂದು ಟ್ರೈಲಿನಲ್ಲಿ, ಅರೆಗತ್ತಲಿನಲ್ಲಿ ಒಂದಷ್ಟು ದೂರ ಕ್ಯಾನಿಯನ್ ಒಳಗೆ ಕೆಳಗೆ ಇಳಿದೆವು.

ಮೂಡಲಲ್ಲಿ ಮೂಡಿ ಬಂದ ತಿಂಗಳಮಾಮ

ಕಣಿವೆಯೊಳಗಿಂದ...


ಸಾಕಷ್ಟು ಮಬ್ಬು ಹರಡಿ ಹೆಜ್ಜೆ ತಪ್ಪಬಹುದೇನೋ ಅನ್ನಿಸುವ ಹಾಗಾದಾಗ ತಿರುಗಿ ಮೇಲೆ ಬಂದು ಕ್ಯಾಂಪ್ ಸೈಟ್ ಸೇರಿ ಕಾರ್ ಹೆಡ್ ಲೈಟ್ ಬೆಳಕಿನಲ್ಲೇ ಟೆಂಟ್ ಪಿಚ್ ಮಾಡಿ, ಊಟ ಮುಗಿಸಿದೆವು. ಮರುದಿನ ಸೂರ್ಯೋದಯ ನೋಡಲು ಹೋಗಬೇಕೆಂದು ನಾಲ್ಕೂವರೆಗೇ ಅಲಾರಂ ಇಟ್ಟುಕೊಂಡು ಮಲಗಿದಾಗ ರಾತ್ರೆ ಹನ್ನೊಂದೇ ದಾಟಿಹೋಯ್ತು.

ಮರುದಿನ- ಶುಕ್ರವಾರ, ಸೆಪ್ಟೆಂಬರ್ ೪.

ಅಲಾರಂ ದನಿಗೆ ಕಷ್ಟದಿಂದಲೇ ಕಣ್ಣುಬಿಟ್ಟು, ಮುಖ ತೊಳೆದುಕೊಂಡು, ಸೂರ್ಯೋದಯ ತಾಣಕ್ಕೆ ಹೋಗಿ ಸೇರಿದಾಗ ಬೇರಾವ ಕಾರ್ ಕೂಡಾ ಅಲ್ಲಿರಲಿಲ್ಲ. ಚಳಿಗಾಳಿ ಗಾಜನ್ನೇ ಕೊರೆಯುವಂತೆ ಸುಳಿಯುತ್ತಿತ್ತು. ಆಗ ನಮ್ಮ ಮೆದುಳಿಗೆ ಸೂರ್ಯನಿಲ್ಲದೆಯೇ ಬೆಳಕಾಯಿತು, ನಾವು ಒಂದು ಗಂಟೆ ಬೇಗನೇ ಬಂದಿದ್ದೆವು. ಅರುಣೋದಯ ಆರು ಗಂಟೆಗೆ. ಕಾರಲ್ಲೇ ಮುಕ್ಕಾಲು ಗಂಟೆ ಕಾದಿದ್ದು ಐದೂಮುಕ್ಕಾಲಿಗೆ ಐವತ್ತು ಹೆಜ್ಜೆ ನಡೆದು ರಿಮ್ ಬದಿಗೆ ಹೋದೆವು. ಅಲ್ಲಾಗಲೇ ಹಲವರು ಜಮಾಯಿಸಿದ್ದರು. ಗಾಳಿ ನಡುನಡುವೆ ಗಸ್ತು ತಿರುಗುತ್ತಿತ್ತು, ಎಲ್ಲರನ್ನೂ ‘ವಿಚಾರಿಸಿಕೊಳ್ಳುತ್ತಾ’. ಫ್ಲಾನೆಲ್ ಅಂಗಿಯ ಮೇಲೆ ಜಾಕೆಟ್, ಅದರ ಮೇಲೆ ಶಾಲು ಸುತ್ತಿಕೊಂಡರೂ ನನ್ನ ಮೂಗಿಗೆ ಗಾಳಿಯ ಸುತ್ತಾಟ ಮೆಚ್ಚುಗೆಯಾಗಲಿಲ್ಲ, ಗುರುಗುಟ್ಟಲು ಶುರುವಿಟ್ಟಿತು.

ಪಡುವಣದಲಿ ಹೊರಳಿನಿಂತ ತಿಂಗಳಮಾಮ



ಆರೂಕಾಲರ ಸಮಯ, ಪೂರ್ವ ರಂಗೇರಿದಾಗಲೂ ನನ್ನ ಮೂಗಿನ ರಂಗಿಳಿಯಲಿಲ್ಲ. ಒಸರು ಕರಗಲಿಲ್ಲ.
ಅಂತೂ ಇಂತೂ ಮರುತನನ್ನೂ ಮೂಗನ್ನೂ ಸಂಭಾಳಿಸಿಕೊಂಡು ಹೊನ್ನಹೊಳೆಯ ಎಳೆಗಳಲ್ಲಿ ಹೂಡೂಸ್ ಮೀಯುವುದನ್ನು ಸೆರೆಹಿಡಿದೆ.




ಅಲ್ಲಿಂದಲೂ ಹೊರಡುವ ಟ್ರೈಲ್ ಹಿಡಿದು ಒಂದಿಷ್ಟು ಕೆಳಗಿಳಿದೆವು.


ಕಣಿವೆಯೊಳಗೆ ಕಿರಣಕೋನ

ಸ್ವಲ್ಪ ಹೊತ್ತು ಸುತ್ತಾಡಿ, ಇನ್ನೊಂದಿಷ್ಟು ಚಿತ್ರ ತೆಗೆದು, ಮೇಲಕ್ಕೆ ಹತ್ತಿ ಬಂದು, ಟೆಂಟ್ ಕಡೆ ಸಾಗಿದೆವು.

ತಿಂಡಿ ಮುಗಿಸಿ, ಟೆಂಟ್ ಬಿಚ್ಚಿ ಹೊರಟು, ಸ್ಪೂರ್ತಿ ಕೊಡುವ ಇನ್‍ಸ್ಪಿರೇಶನ್ ಪಾಯಿಂಟ್ ಮತ್ತು ಮತ್ತೊಮ್ಮೆ ಬ್ರೈಸ್ ಪಾಯಿಂಟ್‍ಗಳಲ್ಲಿ ಸುತ್ತಾಡಿದೆವು.





ಹತ್ತು ನಲ್ವತ್ತಕ್ಕೆ ಹೊರಟು ಕ್ಯಾನಿಯನ್ನಿನ ಗೇಟಿನಿಂದ ನಾಲ್ಕು ಮೈಲು ಹೊರಗಿದ್ದ ‘ಮೊಸ್ಸಿ ಕೇವ್’ ಮತ್ತು ಅದರ ಬಳಿಯೇ ಸಾಗುತ್ತಿದ್ದ ಉಲ್ಲಸಿತ ನೀರ ಝರಿ ನೋಡಿಕೊಂಡು...

ತೆಳ್ಳಗಾಗುವ ತಯಾರಿಯಲ್ಲಿ ‘ಹೂಡೂಸ್’

ಭಾರತದ ನೀಲಿನಕ್ಷೆಗೆ ಎರಡು ಕೋಡು





...ಹೈವೇ ಹಿಡಿದಾಗ ಹನ್ನೊಂದು ನಲವತ್ತು.

ಮುಂದಿನ ಕಂತಿನಲ್ಲಿ- ಗ್ರ್ಯಾಂಡ್ ಸ್ಟೇರ್ ಕೇಸ್ ಎಸ್ಕಲಾಂಟೇ ಮತ್ತು ಕ್ಯಾಪಿಟಲ್ ರೀಫ಼್ ಅನಾವರಣಗೊಳ್ಳಲಿವೆ.