ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೦೭
ಝಿಯಾನ್ ಕಣಿವೆಯಲಿ ಕುಣಿಯುವ ವರ್ಜಿನ್....
ಯೂಟಾ ರಾಜ್ಯ
ಸೆಪ್ಟೆಂಬರ್ ೨, ಬುಧವಾರ
ಬೆಳಗ್ಗೆ ಆರಾಮಾಗಿಯೇ ಎದ್ದೆವು. ಕಾರನ್ನು ಸ್ವಲ್ಪ ಹಿಂದಕ್ಕೆ- ಪುಟ್ಟ ಕರೆಂಟ್ ಕಂಬದ ಹತ್ತಿರಕ್ಕೆ ತಂದು ನಿಲ್ಲಿಸಿಕೊಂಡು, ಇನ್ನೊಂದೆರಡು ಬ್ಯಾಟರಿಗಳನ್ನು ಚಾರ್ಜಿಗಿಟ್ಟರು. ಬೆಳಗಿನ ಕೆಲಸಗಳನ್ನೆಲ್ಲ ಮುಗಿಸಿ, ಸುತ್ತಮುತ್ತಲ ಒಂದಿಷ್ಟು ಚಿತ್ರಗಳನ್ನು ಪೆಟ್ಟಿಗೆಯೊಳಗೆ ತುಂಬಿಸಿಕೊಂಡು...
ಟೆಂಟ್ ಬಿಚ್ಚಿ, ಹೊರಟಾಗ ಒಂಭತ್ತೂಮುಕ್ಕಾಲು. ಮೊದಲು ವಿಸಿಟರ್ ಸೆಂಟರಿಗೆ ಹೋಗಿ ಕ್ಯಾನಿಯನ್ ಒಳಗೆ ಹೋಗುವ ಬಸ್ ಹಿಡಿದಾಗ ಹತ್ತೂ ಇಪ್ಪತ್ತು. ಬೇಸಿಗೆಯಲ್ಲಿ ಎಲ್ಲರೂ ಈ ಬಸ್ಸುಗಳಲ್ಲೇ ಕಣಿವೆಯೊಳಗೆ ಹೋಗಬೇಕು. ಚಳಿಗಾಲದಲ್ಲಿ ತಂತಮ್ಮ ಕಾರುಗಳಲ್ಲಿ ಹೋಗಬಹುದು. ವಿಸಿಟರ್ ಸೆಂಟರಿಂದ ಎಂಟೂವರೆ ಮೈಲು, ಹೈವೇಯಿಂದ ಒಳಗೆ ಆರೂಕಾಲು ಮೈಲು ಈ ಕಣಿವೆಯ ಕೊನೆಯ ನಿಲ್ದಾಣಕ್ಕೆ. ಅಲ್ಲಿಂದ ಕಣಿವೆಯ ಒಂದು ತುದಿಯವರೆಗೆ ಮೈಲುದ್ದದ ಕಾಲುಹಾದಿಯಿದೆ. ಅಲ್ಲಿಂದ ಮುಂದೆ ಬರೀ ನದಿಯಷ್ಟೇ... ಸಾವಿರಾರು ಅಡಿಗಳೆತ್ತರದ ಬೆಟ್ಟಗಳ ನಡುವಿನ ಹತ್ತಿಪ್ಪತ್ತು ಅಡಿ ಅಗಲದ ಕಣಿವೆಯೊಳಗೆ. ಬೇಸಗೆಯಾದ್ದರಿಂದ ಹಲವೆಡೆ ಪಾದ ಮುಳುಗುವಷ್ಟೇ ನೀರಿದ್ದ ಕಾರಣ ಹಲವರು ನೀರಿನಲ್ಲೇ ನಡೆಯುತ್ತಾ ಕಣಿವೆಯೊಳಗೆ ಸಾಗುತ್ತಿದ್ದರು.
ಪಾರ್ಕಿನ ರೇಂಜರುಗಳು ಇದನ್ನು ಪ್ರೋತ್ಸಾಹಿಸುವುದಿಲ್ಲ, ಕಾರಣ- ಇದ್ದಕ್ಕಿದ್ದಂತೆ ಬಂದುಬಿಡಬಹುದಾದ ಅನಿರೀಕ್ಷಿತ ನೆರೆ (ಫ್ಲಾಶ್ ಫ್ಲಡ್). ಈ ಕಣಿವೆಯಲ್ಲಿ ಅಳಿಲುಗಳಿಗೆ ಭಯವೇ ಇಲ್ಲ. ನಮ್ಮ ಕೈಯಲ್ಲಿ ತಿಂಡಿಯೇನಾದರೂ ಇದ್ದರೆ ಮೈಮೇಲೆಯೇ ಬರುವಂತೆ ಬರುತ್ತವೆ. ಖಾಲಿ ಕೈ ತೋರಿದರೂ ಏನಾದರೂ ಸಿಗಬಹುದೆಂದು ಹಿಂಗಾಲುಗಳಲ್ಲಿ ನಿಂತು ಬೆರಳಿನ ತುದಿಯನ್ನೇ ನಿರುಕಿಸುತ್ತಾ ತಿರುಗುತ್ತವೆ. ಹೀಗೊಂದು ಅಳಿಲನ್ನು ಖಾಲಿ ಕೈಯಲ್ಲಿ ಹತ್ತು-ಹನ್ನೆರಡು ನಿಮಿಷ ಆಡಿಸಿದಾಗ ನಮ್ಮ ಸುತ್ತಲ ಜನರಿಗೆ ಪುಕ್ಕಟೆ ಮನರಂಜನೆ. ನನಗೋ ಮೋಜು, ಆ ಅಳಿಲಿನ ನಿರ್ಭಯ ಮತ್ತು ತಿಂಡಿಯಾಸೆ ಕಂಡು. ಕೊನೆಗೂ ಅದಕ್ಕೇನೂ ಕೊಡದೆ ಬೆನ್ನು ಹಾಕಿ ಬಂದಿದ್ದಕ್ಕೆ ಮುಯ್ಯಿಯೆಂಬಂತೆ, ನಾನು ನೀರ ಬದಿಯಲ್ಲಿ ಫೋಟೋ ತೆಗೆಯುತ್ತಿದ್ದಾಗ ಒಂದಳಿಲು ನನ್ನ ಬ್ಯಾಕ್ ಪ್ಯಾಕ್ ಒಳಗೇ ಇಳಿಯುವ ಪ್ರಯತ್ನ ಮಾಡಿದ್ದು ಅವುಗಳು "ಮಾನವ ತಿಂಡಿಗೆ" ಹಂಬಲಿಸುವುದನ್ನೂ ತಮಗಾಗಿ ತಿನಿಸು ಹುಡುಕಿಕೊಳ್ಳುವುದನ್ನು ಬಿಟ್ಟು ಕದಿಯಲು ಕಲಿತಿರುವುದನ್ನೂ ತೋರಿಸಿಕೊಟ್ಟಿತು.
ಅಚ್ಚರಿ, ಮೋಜು, ಬೇಸರ... ಎಲ್ಲವೂ ಒಟ್ಟಿಗೇ.
ಅಲ್ಲೇ ಆಚೆಗೊಂದು ಪುಟ್ಟಳಿಲು, ಯಾರೋ ತಿಂದೆಸೆದಿದ್ದ ಬಾಳೆಹಣ್ಣಿನ ಸಿಪ್ಪೆಯನ್ನು ಎಲ್ಲಿಂದಲೋ ಎಳೆದುಕೊಂಡು ಬಂದಿತ್ತು. ನಾನು ಓಡಿಸಿದ ಈ ಪುಂಡ ಇಲ್ಲಿಂದ ಓಡಿ, ಆ ಪುಟಾಣಿಯನ್ನು ಬೆದರಿಸಿ ಬಾಳೆಹಣ್ಣಿನ ಸಿಪ್ಪೆಯನ್ನು ತಾನು ಮೆಲ್ಲತೊಡಗಿತು. ಪುಟಾಣಿ ಎಲ್ಲೇ ಬದಿಯಲ್ಲಿ ಕಾದಿದ್ದು, ಪುಂಡ ಅತ್ತ ಹೋದ ಮೇಲೆ ಮತ್ತೆ ಬಂದು ಸಿಪ್ಪೆಯನ್ನು ಹುಡುಕಾಡಿ ಚೂರುಗಳನ್ನು ಸವಿಯಿತು. ಇವು ಹೀಗೇ ಇದನ್ನೇ ಕಲಿಯುತ್ತವೆಯೇ ಹೊರತು ತಮಗಾಗಿ ಮರ-ಗಿಡ-ಬಳ್ಳಿಗಳಿಂದ ಹಣ್ಣು-ಕಾಯಿಗಳನ್ನು ತಿನ್ನಲು ಕಲಿಯುತ್ತಿಲ್ಲ. "ವನ್ಯಪ್ರಾಣಿಗಳಿಗೆ ಏನೂ ತಿನ್ನಿಸಬೇಡಿ. ಅವುಗಳನ್ನು ವನ್ಯವಾಗಿಯೇ ಇರಲು ಬಿಡಿ" ಎನ್ನುವ ರೇಂಜರುಗಳ ಮೊರೆ ಎಷ್ಟು ಸತ್ಯ ಅನ್ನಿಸಿತು.
ಟೆಂಪಲ್ ಆಫ್ ಸಿನವಾವ ಎನ್ನುವ ಈ ಕೊನೆಯ ತಾಣದಿಂದ ಬಸ್ ಹಿಡಿದು ಹಿಂದಿರುಗುತ್ತಾ ಝಿಯಾನ್ ಲಾಡ್ಜ್ ನಿಲ್ದಾಣದಲ್ಲಿಳಿದು ಅಲ್ಲಿಂದ ಎಮರಾಲ್ಡ್ ಪೂಲ್ ಟ್ರೈಲ್ ಹಿಡಿದೆವು. ಲೋವರ್ ಮತ್ತು ಮಿಡಲ್ ಪೂಲ್ ನೋಡುವಷ್ಟರಲ್ಲಿ ನಮ್ಮೊಳಗಿನ ಪೆಟ್ರೋಲ್ ಖಾಲಿ.
ಇದೇ ನೋಟ ಹಿಮ ತುಂಬಿದ ಚಳಿಗಾಲದಲ್ಲಿ, ಹೇಗಿತ್ತು ನೆನಪಿದೆಯಾ?
ಪುರವಣಿಯ ಮೊದಲ ಪೋಸ್ಟಿನಲ್ಲಿ ಮೊದಲ ಚಿತ್ರ ನೋಡಿ...
ಅಲ್ಲಲ್ಲಿ ನಿಂತು ಸುಧಾರಿಸಿಕೊಳ್ಳುತ್ತಾ ಲಾಡ್ಜ್ ಹತ್ರ ಬಂದು ಬಸ್ ಹಿಡಿದೆವು. ಕೋರ್ಟ್ ಆಫ್ ಪಾಟ್ರಿಯಾರ್ಕ್ಸ್ ಅನ್ನುವೊಂದು ತಾಣಕ್ಕೊಂದು ಭೇಟಿಕೊಟ್ಟು...
ಮತ್ತೆ ಬಸ್ಸಿನಲ್ಲಿ ವಿಸಿಟರ್ ಸೆಂಟರಿನ ಹತ್ತಿರವಿದ್ದ ನಮ್ಮ ಕಾರಿಗೆ ಬಂದಾಗ ಗಂಟೆ ಮೂರೂ ಇಪ್ಪತ್ತು. ಡಬ್ಬದಲ್ಲಿನ ಅನ್ನಕ್ಕೆ (ರಟ್ಟನ್ನು ತೆಗೆದು ಪೊಟ್ಟಣವನ್ನು ಕಾರಿನ ಡ್ಯಾಶ್ ಮೇಲೆ ಇಟ್ಟು ಹೋಗಿದ್ದರಿಂದ ಈಗ ಚೆನ್ನಾಗಿಯೇ ಬಿಸಿಬಿಸಿಯಾಗಿದ್ದ) ಎಮ್.ಟಿ.ಆರ್. ಅವಿಯಲ್ ಸೇರಿಸಿ ಊಟ ಮಾಡುವಾಗ ಉರೀತಿದ್ದ ಬಿಸಿಲಲ್ಲೂ ಹೊಟ್ಟೆ ಒಮ್ಮೆ ತಂಪಾಯ್ತು.
ನಂತರ ನಾಲ್ಕಕ್ಕೆ ಹೊರಟು, ಈಸ್ಟ್ ಗೇಟ್ ತನಕ...
...ಹೈವೇ ೯-ರಲ್ಲಿ ಮೇಲೆ ಹೋಗಿ ಬಂದೆವು...
ಝಿಯಾನ್ ಕ್ಯಾನಿಯನ್ನಿನ ವೈಶಿಷ್ಟ್ಯಗಳಲ್ಲೊಂದು ಇಲ್ಲಿನ ಕೆಂಪು ರಸ್ತೆ. ಉದ್ದಕ್ಕೂ ಈ ನ್ಯಾಷನಲ್ ಪಾರ್ಕ್ ಒಳಗೆ ರಸ್ತೆಗಳೆಲ್ಲವೂ ಕೆಂಪು. ಇಲ್ಲಿಯ ಬಂಡೆಗಳನ್ನೇ ಪುಡಿಮಾಡಿ, ಸುತ್ತಲ ಪರಿಸರಕ್ಕೆ ಹೊಂದುವಂತೆಯೇ ವಿಶೇಷವಾಗಿ ರಸ್ತೆ ಮಾಡಿದ್ದಾರೆ.
ಇನ್ನೊಂದು ವೈಶಿಷ್ಟ್ಯ- ಮೂರ್ನಾಲ್ಕು ತಿರುವುಗಳ ಒಂದು ಮೈಲಿಗೂ ಮೀರಿ ಉದ್ದದ ಸುರಂಗ. ಇದನ್ನು ಐದಾರು ಕಡೆಗಳಲ್ಲಿ, ಬೆಟ್ಟದ ಹೊರಮೈಯಿಂದ ಸುರಂಗ ಕೊರೆದು, ರಸ್ತೆಯಿರಬೇಕಾದ ಸುರಂಗವನ್ನು ಅತ್ತ-ಇತ್ತ ಕೊರೆದು ಮಾಡಲಾಗಿದೆ. ಇದರ ಅಗಲ ಮಿತವಾದದ್ದು. ಆದ್ದರಿಂದ, ದೊಡ್ಡ ಆರ್.ವಿ.ಗಳು ಬಂದಲ್ಲಿ ಅಥವಾ ಬಹಳಷ್ಟು ವಾಹನಗಳು ಬರುವ ಸಮಯದಲ್ಲಿ, ಹಗಲಿನಲ್ಲಿ ಇಲ್ಲಿ ಎರಡೂ ಕೊನೆಗಳಲ್ಲಿ ವಾಹನಗಳನ್ನು ನಿಲಿಸಿ, ಒಂದೇ ದಿಕ್ಕಿನಲ್ಲಿ ಒಮ್ಮೆಗೆ ಸಾಗುವಂತೆ ನಿಯಂತ್ರಿಸುತ್ತಾರೆ. ಇದರಿಂದ ಸುರಂಗದೊಳಗೆ ಅಪಘಾತವಾಗುವುದನ್ನು ತಪ್ಪಿಸಲಾಗುತ್ತದೆ. ಸುರಂಗದೊಳಗೆ ಎಲ್ಲೂ ನಿಲ್ಲುವಂತಿಲ್ಲ. ಅಲ್ಲಲ್ಲಿ ಮಾಡಿದ್ದ ಹೊರ-ಸುರಂಗಗಳು ಈಗ ಈ ಸುರಂಗಕ್ಕೆ ಕೊರೆದ ಕಿಟಕಿಗಳಂತೆ, ಬೆಟ್ಟದಾಚೆಗಿನ ನೋಟದ ಹೊಳಹನ್ನು ನೀಡುತ್ತವೆ. ಆದರೂ, ಗಂಟೆಗೆ ಮೂವತ್ತು-ಮೂವತ್ತೈದು ಮೈಲು ವೇಗದಲ್ಲಿ ಸಾಗುವಾಗ, ಒಳಗಿನ ಕತ್ತಲ ಪರಿಸರದಿಂದ ಹೊರಗಿನ ಬೆಳಕ ಪ್ರಪಂಚ, ಇಷ್ಟಗಲದ ಕಿಟಕಿಯಿಂದ ಎಷ್ಟು ಕಂಡೀತು? ಅದೂ ಚಾಲಕರ ಕಣ್ಣು ರಸ್ತೆಯ ಮೇಲೇ ಇರಬೇಕಾದ್ದು ಅನಿವಾರ್ಯ. ಅದರೂ ಅದೊಂದು ವರ್ಣಿಸಲಾಗದ ಕ್ಷಣ. ಎಲ್ಲವನ್ನೂ ಅನುಭವ ಮೂಸೆಯೊಳಗೆ ಆಹ್ವಾನಿಸಿಕೊಂಡು ಪಶ್ಚಿಮದ ಗೇಟ್ ಮೂಲಕ ಹೊರ ಬಂದು, ಝಿಯಾನ್ ನ್ಯಾಷನಲ್ ಪಾರ್ಕಿನ ಉತ್ತರ ಭಾಗವಾದ ಕೊಲೊಬ್ ಕ್ಯಾನಿಯನ್ ಕಡೆ ಹೊರಟಾಗ ಗಂಟೆ ಐದೂವರೆ.
ಕೊಲೊಬ್ ಕ್ಯಾನಿಯನ್ ಒಳಗೆ ಹೊಕ್ಕಾಗ ಆರೂಹತ್ತು...
ಅಲ್ಲೆಲ್ಲ ಒಂದೆರಡು ತಾಣಗಳಲ್ಲಿ ನಿಂತು ಸೂರ್ಯಾಸ್ತಕ್ಕೆ ಬೆಟ್ಟದ ಮೇಲೆ ಬೆಳಕಿನಾಟ ನೋಡಿ...
...ಮತ್ತೆ ಸೆಡಾರ್ ಸಿಟಿ ಕಡೆಗೆ ಹೊರಟಾಗ ಏಳೂಕಾಲು.
ರಾತ್ರೆ ಸೆಡಾರ್ ಸಿಟಿ ಹೋಟೆಲ್ ತಲುಪಿದಾಗ ಎಂಟೂಕಾಲು (ಜಿಪಿಎಸ್ ಈ ಊರಲ್ಲಿ ಕೈಕೊಡುತ್ತದೆ. ಡಿಸೆಂಬರಲ್ಲಿ ಬಂದಾಗಲೂ ಹಾಗೇ ಆಗಿತ್ತು. ಇಲ್ಲಿನ ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಮತ್ತು ಸಂಖ್ಯೆಗಳು ಮಿಶ್ರಿತ ವಿಳಾಸಗಳು ಸರಿಯಾಗಿ ಮ್ಯಾಪಿಂಗ್ ಆಗೋಲ್ಲವಂತೆ. ಹಾಗಾಗಿ ಅರ್ಧಗಂಟೆ ಲೇಟ್ ನಾವು). ಬೇಕಾದ್ದನ್ನೆಲ್ಲ ಮೇಲು ಮಹಡಿಗೆ ಹೊತ್ತುಕೊಂಡು ಹೋಗಿ, ಊಟ ಮಾಡಿ ಎಲ್ಲ ಪ್ಲಗ್ಗುಗಳಲ್ಲೂ ಕ್ಯಾಮರಾ-ಕ್ಯಾಂಕಾರ್ಡರ್ ಬ್ಯಾಟರಿಗಳನ್ನು, ಸೆಲ್ ಫೋನುಗಳನ್ನು, ಜಿ.ಪಿ.ಎಸ್., ಲ್ಯಾಪ್ ಟಾಪುಗಳನ್ನು ಚಾರ್ಜಿಗಿಟ್ಟು ಎರಡಾಟ ರಮ್ಮಿ ಆಡಿ ಮಲಗಿದೆವು.
(ಇಲ್ಲಿಗೆ ನಮ್ಮ ಟೂರಿನ ಐದು ದಿನಗಳು ಕಳೆದವಷ್ಟೇ. ಇನ್ನೂ ಐದು ದಿನಗಳ ತಿರುಗಾಟ, ಆರು ಸ್ಥಳಗಳ ವಿವರಣೆ ಬರಲಿವೆ. ಜೊತೆಗಿರುತ್ತೀರಿ ತಾನೆ?)