ನಮ್ಮ-ನಿಮ್ಮೊಳಗೆ-೦೭
ಗರ್ಭಿಣಿಯ ಸುತ್ತಮುತ್ತಲ (ಮೂಢ-ಗೂಢ-ಗಾಢ) ನಂಬಿಕೆಗಳು:
೦೧. ಗ್ರಹಣ ಇದ್ದಾಗ ಮನೆಯಿಂದ ಹೊರಗೆ ಹೋಗಬಾರದು, ಗ್ರಹಣ ಕಾಲದ ಬಿಸಿಲು ಗರ್ಭಿಣಿಗೆ ಬೀಳಬಾರದು.
೦೨. ಬೇರೆ ಮಗುವನ್ನು ಮುಟ್ಟಬಾರದು, ಎತ್ತಬಾರದು.
೦೩. ನೆಲ್ಲಿಕಾಯಿ ಯಾ ನೇರಳೆ ಹಣ್ಣು ತಿಂದರೆ ಮಗುವಿನ ಅಂಡಿನ ಮೇಲೆ ನೀಲಿ-ಕಪ್ಪು ಕಲೆ ಬೀಳುತ್ತದೆ.
೦೪. ಟೊಮಟೋ ತಿಂದರೆ ಮಗು ಕೆಂಪು ಆಗುತ್ತದೆ.
೦೫. ಆರೇಳು ತಿಂಗಳಾದಾಗ ತಲೆಗೆ ಸ್ನಾನ ಮಾಡಿ ಒದ್ದೆ ತಲೆಯಲ್ಲೆ (ತಲೆಯನ್ನು ಏನೇನೂ ಒರಸಿಕೊಳ್ಳದೆಯೇ) ತುಂಬಾ ಕೇಸರಿ ತುಂಬಿದ ಹಾಲು ಕುಡಿದರೆ ಮಗುವಿಗೆ ಒಳ್ಳೇ ಬಣ್ಣ ಬರುತ್ತದೆ. ಹೀಗೆ ಮೂರು ದಿನ ಕುಡಿಯಬೇಕು.
(ಇವೆಲ್ಲವೂ ತ್ರಿವೇಣಿಯ ಖಜಾನೆಯಿಂದ. ನನಗೂ ಹೊಸದು)
೦೧. ಕತ್ರಿ ಕಾಲು (ಕ್ರಾಸ್ ಲೆಗ್ಡ್- ಕಾಲ ಮೇಲೆ ಕಾಲು) ಹಾಕಿ ಕೂರಬಾರದು.
೦೨. ಗರ್ಭಿಣಿಯು ಕಾಲು ನೀಡಿ ಕೂತಿದ್ದರೆ ಬೇರೆಯವರು ಅದನ್ನು ದಾಟಿಕೊಂಡು ಹೋಗಬಾರದು.
೦೩. ದಿನವೂ ರಾತ್ರೆ ಮಲಗುವ ಮೊದಲು, ಕೆಲವು ಎಳೆ ಕೇಸರಿ ಹಾಕಿದ ನಸುಬಿಸಿ ಹಾಲು ಕುಡಿದರೆ ಮಗು ಬಿಳಿ ಆಗುತ್ತದೆ.
೦೪. ಗರ್ಭಿಣಿಯರಿರುವ ಮನೆಯಲ್ಲಿ ಬೇಳೆ ಹೋಳಿಗೆ, ಕಾಯಿ ಹೋಳಿಗೆ (ಒಬ್ಬಟ್ಟು), ಮೋದಕ, ಕರಿಗಡುಬು ಮಾಡುವಾಗ ಹೂರಣ ಮಿಕ್ಕಿದರೆ ಹೆಣ್ಣು ಮಗು ಹುಟ್ಟುವುದು; ಕಣಕ (ಹಿಟ್ಟು) ಮಿಕ್ಕಿದರೆ ಗಂಡು ಮಗು ಹುಟ್ಟುವುದು.
೦೫. ಗರ್ಭಿಣಿಯರ ಬಯಕೆ ಈಡೇರಿಸದಿದ್ದರೆ ಮಗುವಿನ ಕಿವಿ ಕಿವುಡಾಗುತ್ತದೆ (ಸೊಟ್ಟಗಾಗುತ್ತದೆ).
(ಇವು ನಾವಿಬ್ಬರೂ ಕೇಳಿದ್ದವುಗಳು)
೦೧. ಬರೀ ಅಕ್ಕಿ ತಿಂದರೆ ಮಗುವಿನ ಮೈಮೇಲೆ ಹಿಟ್ಟು ಕಟ್ಟಿಕೊಳ್ಳುತ್ತದೆ.
೦೨. ಲಂಗ/ಸೀರೆ ತುಂಬಾ ಗಟ್ಟಿಯಾಗಿ ಕಟ್ಟಿದರೆ ಮಗುವಿನ ಮೂಗು ಚಪ್ಪಟೆಯಾಗುತ್ತದೆ.
೦೩. ನಿನ್ನೆಯ ಕುಚ್ಚಲನ್ನಕ್ಕೆ (ಕುಸುಬುಲಕ್ಕಿಯ ಅನ್ನ) ಮಜ್ಜಿಗೆ/ಮೊಸರು ಹಾಕಿ ಬೆಳಗಿನ ಉಪಾಹಾರಕ್ಕೆ ತಿಂದರೆ ಮಗುವಿನ ಕೂದಲು ಕಪ್ಪಗೆ ಚೆನ್ನಾಗಿರುತ್ತದೆ.
೦೪. ಗರ್ಭಿಣಿಯು ಸಂಭೋಗ ಮಾಡಿದರೆ ಮಗು ಕುರುಡಾಗುತ್ತದೆ.
೦೫. ಅಮಾವಾಸ್ಯೆಯ ರಾತ್ರೆ ಗರ್ಭಿಣಿಯು ಮನೆಯ ಹೊರಗೆ ಉಚ್ಚೆ ಮಾಡಲು ಹೋದರೆ ದೆವ್ವ/ ಭೂತ "ಅಲ್ಲಿಂದ" ಗರ್ಭದ ಒಳಗೆ ಸೇರಿಕೊಳ್ಳುತ್ತದೆ.
೦೬. ಮುಂಜಾವಿನ ಸಂಕಟ (ಮಾರ್ನಿಂಗ್ ಸಿಕ್‌ನೆಸ್) ತೀರಾ ಹೆಚ್ಚಾಗಿದ್ದಲ್ಲಿ ಗಂಡು ಮಗು ಹುಟ್ಟುವುದು, ಜಾಸ್ತಿ ಇಲ್ಲದಿದ್ದಲ್ಲಿ ಹೆಣ್ಣು ಮಗು ಹುಟ್ಟುವುದು.
೦೭. ಎಂಟು-ಒಂಭತ್ತನೇ ತಿಂಗಳುಗಳಲ್ಲಿ ಗರ್ಭಿಣಿಯು ಗುಂಡುಗುಂಡಾಗಿ ಸುಂದರವಾಗಿ ಇದ್ದರೆ ಮಗು ಹೆಣ್ಣು; ಒಣಗಿಕೊಂಡು, ಬಾಡಿಕೊಂಡು, ಹೊಟ್ಟೆ ಮಾತ್ರ ಕಾಣುವಂತೆ ಪೀಚಲಾಗಿದ್ದರೆ ಮಗು ಗಂಡು.
೦೮. ಹೆರಿಗೆಯ ನೋವು ತೀರಾ ಉದ್ದವಾಗಿದ್ದಲ್ಲಿ ಗಂಡು ಮಗು; ಆರೆಂಟು ಗಂಟೆಗಿಂತ ಕಡಿಮೆಯಾಗಿದ್ದಲ್ಲಿ ಹೆಣ್ಣು ಮಗು (ಅವಳಿಗೆ ತಾಯಿಯ ನೋವು ತಿಳಿಯುತ್ತದೆ, ಅದಕ್ಕೆ ಬೇಗ ಹೊರಗೆ ಬರುತ್ತಾಳೆ ಅನ್ನುವ ಹಿನ್ನೆಲೆಗಾಯನ ಇದಕ್ಕೆ)
[ಗಂಡಸರೆಲ್ಲ ಕ್ಷಮಿಸಬೇಕು. ಇದು ನಾನು ಕೇಳಿರುವ, ಹಳ್ಳಿಗಳಲ್ಲಿ ಚಾಲ್ತಿಯಲ್ಲಿರುವ ನಂಬಿಕೆ ಮಾತ್ರ. ಇದರಲ್ಲಿ ಯಾವುದೇ ನಿಂದನೆ, ಘೋಷಣೆ, ಭರ್ತ್ಸನೆ ಇಲ್ಲ. ಇದು ಸತ್ಯವೂ ಅಲ್ಲ.]