ಇತ್ತೀಚೆಗೆ ಗೆಳತಿಯೊಬ್ಬಳ ಜೊತೆ ಮಾತಾಡುತ್ತಿದ್ದಾಗ, "ಎಷ್ಟು ಕಷ್ಟ ಆಗಿದೆ ಗೊತ್ತಾ ಈ ತೂಕ ಇಳಿಸಿಕೊಳ್ಳೋದು? ದಿನಾ ಟ್ರೆಡ್-ಮಿಲ್ ಮೇಲೆ ಮೂವತ್ತು ನಿಮಿಷ ಶೂ ಸವೆಸುತ್ತೇನೆ. ಆದ್ರೆ ಬೊಜ್ಜು ಸವೆಯೋದಿಲ್ಲ ಅಂತ ಜಪ್ಪಂತ ಕೂತಿದೆ. ಏನ್ ಮಾಡೋದೋ ಗೊತ್ತಾಗ್ತಿಲ್ಲ. ಏನಾದ್ರೂ ಹೇಳು" ಅಂದಳು.
ನನಗೂ ತಮಾಷೆ ಅನ್ನಿಸ್ತು, "ಹ್ಮ್! ಹೇಳಬಹುದೇ! ಆಗ ನಾನು ಫಿಟ್ನೆಸ್ ಟ್ರೈನರ್ ಆಗಿದ್ದಕ್ಕೂ ಸಾರ್ಥಕ ಆಗತ್ತೆ. ಆದ್ರೆ ನಿನಗೆ ಟಿಪ್ಸ್ ಕೊಟ್ರೆ ನನಗೇನೂ ಸಿಗೋದಿಲ್ವಲ್ಲ!? ನಿನಗೇ ಗೊತ್ತು- ಈ ದೇಶದಲ್ಲಿ ಯಾವುದೂ ಪುಕ್ಕಟೆ ಇಲ್ಲ. ಏನು ಮಾಡೋಣ ಹೇಳು" ಅಂದೆ.
"ನೀನು ಒಳ್ಳೇ ಫ್ರೆಂಡ್ ಅಂತ ಟಿಪ್ಸ್ ಕೇಳಿದ್ರೆ ಕಮರ್ಷ್ರಿಯಲ್ ಆಗ್ಬಿಟ್ಯಾ?"
"ಏನ್ ಮಾಡೋದು? ಈ ದೇಶವೇ ಅದನ್ನೂ ಕಲ್ಸಿದೆ"
ಹೀಗೇ ಒಂದೆರಡು ಚಟಾಕಿಗಳ ನಂತರ, ಅವಳಿಂದ ಒಂದು ಸಂಜೆಯ ಚಹಾಕ್ಕೆ ಆಹ್ವಾನ ಸ್ವೀಕರಿಸಿ ನನ್ನ ಸಲಹಾ ಝರಿ ಹರಿಸಿದೆ:-
ದಿನಾ ಮೂವತ್ತು ನಿಮಿಷ ಟ್ರೆಡ್-ಮಿಲ್ ಮೇಲೆ ನಡೆದಾಗ ಅದ್ರಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷಗಳ ಸಮಯವೂ (ನಡೆಯುವ ವೇಗವನ್ನು ಹೊಂದಿಕೊಂಡು) ನಮ್ಮ ರಕ್ತದಲ್ಲಿ ಮತ್ತು ಮಾಂಸಖಂಡಗಳಲ್ಲಿರುವ ಗ್ಲೂಕೋಸ್ ಅಂಶ ಮಾತ್ರ ಕರಗಿ ಉಪಯೋಗಿಸಲ್ಪಡುತ್ತದೆ. ಬೊಜ್ಜಿನಲ್ಲಿರುವ ಕೊಬ್ಬಿನಂಶ ಕರಗಿ ಗ್ಲೂಕೋಸ್ ಆಗಿ ಪರಿವರ್ತಿತವಾಗಿ ಉಪಯೋಗವಾಗಬೇಕಾದರೆ ಅದಕ್ಕಿಂತ ಹೆಚ್ಚಿನ ಸಮಯ ನಡಿಗೆಯಾಗಲೇಬೇಕು. ಅಂದರೆ, ಮೂವತ್ತು ನಿಮಿಷ ನಡೆದಾಗ ಗ್ಲೂಕೋಸ್ ಉಪಯೋಗಿಸಲ್ಪಟ್ಟು ನಂತರವೂ ನಡೆಯುತ್ತಿದ್ದರೆ ಕೊಬ್ಬು (Fat) ಕಣಗಳು ಗ್ಲೂಕೋಸ್ ಆಗಿ ಪರಿವರ್ತಿತವಾಗಿ ನಡಿಗೆಗೆ ಬೇಕಾದ ಶಕ್ತಿಯನ್ನು ಒದಗಿಸುತ್ತವೆ. ಆದ್ದರಿಂದ ಮೂವತ್ತು ನಿಮಿಷದ ಬದಲು ಮುಕ್ಕಾಲು ಘಂಟೆ ನಡೆಯೋದು ಉತ್ತಮ.
ಅಥವಾ, ಬಿರುಸಾಗಿ ಹದಿನೈದು ನಿಮಿಷ ನಡೆದು, ನಂತರದ ಅರ್ಧ ಘಂಟೆ ಮುಖ್ಯ ಮಾಂಸಖಂಡಗಳು (Muscles) ಉತ್ತೇಜಿತಗೊಳ್ಳುವಂತಹ ತೂಕಧಾರಣ (Weight lifting/ Strength training) ವ್ಯಾಯಾಮ ಮಾಡಿದರೂ ಒಳ್ಳೆಯದೇ. ಜೊತೆಗೆ, ಅದರ ನಂತರದ ಹದಿನೈದು ನಿಮಿಷ ದೇಹದ ಎಲ್ಲ ಭಾಗಗಳೂ ಸಡಿಲಾಗುವಂತೆ 'ಹಿಗ್ಗಿಸುವ' (Stretching) ವ್ಯಾಯಾಮಗಳನ್ನು ಮಾಡಲೇಬೇಕು.
ನಿಗದಿತ ವ್ಯಾಯಾಮವನ್ನು ವಾರದಲ್ಲಿ ನಾಲ್ಕರಿಂದ ಐದು ದಿನ ಮಾಡಿದರೆ ಅತ್ಯುತ್ತಮ. ಮೂರು ದಿನವಾದರೂ ಮಾಡಿದರೆ ಉತ್ತಮ.
ಇದರ ಜೊತೆಗೇ ಊಟ-ತಿಂಡಿಗಳ ಕಡೆಗೂ ಗಮನ ಇರಬೇಕಾದ್ದು ಮುಖ್ಯ.
ವ್ಯಾಯಾಮ ಮಾಡುತ್ತಿದ್ದೇನೆ ಅಂದುಕೊಂಡು-
-ನಿತ್ಯಕ್ಕಿಂತ ಹೆಚ್ಚು ಊಟ ಮಾಡಿದರೆ,
-ಎಣ್ಣೆಯಲ್ಲಿ ಕರಿದ ತಿಂಡಿ ಕಬಳಿಸಿದರೆ,
-ಹೆಚ್ಚು ಅನ್ನ-ಚಪಾತಿ-ರೊಟ್ಟಿಗಳನ್ನು ತಿಂದರೆ,
-ಕೊಬ್ಬಿನಂಶ ಇರುವ ಆಹಾರಪದಾರ್ಥಗಳನ್ನು ಲೆಕ್ಕಕ್ಕಿಂತ ಹೆಚ್ಚು ಸೇವಿಸಿದರೆ,
-ಸಕ್ಕರೆ ಮಿಶ್ರಿತ ಪಾನೀಯಗಳನ್ನು (ಯಾವುದೇ ಸೋಡಾಗಳು, ಬಾಟಲಿಯಲ್ಲಿ ಸಿಗುವ ಅಥವಾ ಪ್ಯಾಕ್ ಆದ ಹಣ್ಣಿನ ರಸಗಳು, ಎಸೆನ್ಸ್ ಬಳಸಿ ಮನೆಯಲ್ಲೇ ತಯಾರಿಸುವ ಜ್ಯೂಸುಗಳು) ದಿನಕ್ಕೆ ಒಂದು ಲೋಟೆಗಿಂತ ಹೆಚ್ಚು ಹೀರಿದರೆ,
-ಮಧುಪಾನ ಮಾಡಿದರೆ,
ತೂಕ ಕಳೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಕಾಲಕಾಲಕ್ಕೆ ಸರಿಯಾಗಿ ಆಹಾರ ಸೇವನೆಯೂ ಮುಖ್ಯ. ಒಂದು ದಿನ ಬೆಳಗಿನ ಉಪಾಹಾರ ಸರಿಯಾಗಿ ಸೇವಿಸಿ, ಮಧ್ಯಾಹ್ನದ ಊಟ ತಪ್ಪಿಸಿ, ಸಂಜೆಗೆ ಒಂದು ಕಾಫಿ ಹೀರಿ, ರಾತ್ರೆ ವೈನ್/ವಿಸ್ಕಿ/ಬಿಯರ್ ಜೊತೆ ಬಿರಿಯಾಣಿ ಸವಿದು, ಮರುದಿನ ಬೆಳಗಿನ ಉಪಾಹಾರ ಬಿಟ್ಟು, ಮಧ್ಯಾಹ್ನ ಊಟಕ್ಕೆ ೬ ಪರೋಟಾ ಹೊಡೆದು, ಸಂಜೆ ಟೀ-ಟಿಫಿನ್ ತಿಂದು, ರಾತ್ರೆಗೆ ಉಪವಾಸ ಅಂತ ಒಂದು ಲೋಟ ಹಾಲು ಮತ್ತು ಒಂದು ಬಾಳೆಹಣ್ಣು ತಗೊಂಡರೆ ದೇಹಕ್ಕೆ ಸಮತೋಲನ ಕಂಡುಕೊಳ್ಳಲಾಗುವುದಿಲ್ಲ. ದೇಹದ ಲೆಕ್ಕಾಚಾರ ಏರುಪೇರಾದಾಗ ಅದು ಶೇಖರಣೆಗೆ ತೊಡಗುತ್ತದೆ. ತಿಂದ ಆಹಾರ ಕೊಬ್ಬಿನಂಶವಾಗಿ ಚರ್ಮದ ಪದರಗಳ ನಡುವೆ, ಮಾಂಸಖಂಡಗಳ ನಡುವೆ ಬೊಜ್ಜಾಗಿ ಸೇರಿಕೊಳ್ಳುತ್ತದೆ. 'ಅತೀ ಕ್ಷಾಮ' ಬಂದಾಗ ಮಾತ್ರ ಈ ಉಗ್ರಾಣ ತೆರೆಯಲಾಗುತ್ತದೆ; ಇಲ್ಲವಾದಲ್ಲಿ ಶೇಖರಣೆಯೇ ಸಾಗುತ್ತದೆ, ತೂಕ ಏರುತ್ತದೆ. ಆದ್ದರಿಂದ ನಿಯಮಿತವಾಗಿ ಹಿತಮಿತವಾಗಿ ಆಹಾರ ಸೇವನೆ ತೂಕ ಕಳೆಯುವಲ್ಲಿ ಅಥವಾ ಸಮತೂಕ ಇರಿಸಿಕೊಳ್ಳುವಲ್ಲಿ ತುಂಬಾ ಮುಖ್ಯ.
ಆಹಾರ ಮತ್ತು ವ್ಯಾಯಾಮದ ಸಮತೋಲನವೂ ಮುಖ್ಯ. ನಮ್ಮ ದೈನಂದಿನ ಚಟುವಟಿಕೆಗಳಿಗೆ ಸರಿಸುಮಾರು ೧೫೦೦-ರಿಂದ ೨೦೦೦ ಕ್ಯಾಲೋರಿ ಬೇಕೆಂಬುದು ಅಂದಾಜು. ನಿತ್ಯವೂ ಕಂಪ್ಯೂಟರ್ ಮುಂದೆಯೇ ಕೂತು ಕೆಲಸ ನಿರ್ವಹಿಸುವವರಿಗೆ ಅಷ್ಟೂ ಬೇಕಾಗುವುದಿಲ್ಲ. ಅಂಥಾದ್ದರಲ್ಲಿ ನಮ್ಮ ಊಟ-ತಿಂಡಿಯ ಒಟ್ಟು ಕ್ಯಾಲೊರಿ ೧೫೦೦ ಮೀರಿದ್ದರೆ ಆಗ ತೂಕ ಹೆಚ್ಚಾಗುವುದೇ ಸರಿ.
ಕೆನೆ ತೆಗೆದ ಒಂದು ಲೋಟ ಹಾಲು- ಸುಮಾರು ೧೦೦-೧೫೦ ಕ್ಯಾಲೊರಿ (ಲೋಟದ ಅಳತೆಯ ಮೇರೆಗೆ)
೧ ಟೀ ಚಮಚ ಸಕ್ಕರೆ- ೫ ಗ್ರಾಂ- ೨೦ ಕ್ಯಾಲೊರಿ
೧ ಟೇಬಲ್ ಚಮಚ ಅನ್ನ (=೩ ಟೀ ಚಮಚ)- ಸುಮಾರು ೭೫ ಕ್ಯಾಲೊರಿ
ಅಂಗೈಯಗಲದ ಒಂದು ಚಪಾತಿ- ಎಣ್ಣೆ/ತುಪ್ಪವಿಲ್ಲದೆ ಮಾಡಿದ್ದು- ಸುಮಾರು ೭೫ ಕ್ಯಾಲೊರಿ
ಸಣ್ಣ ಬಾಳೆಹಣ್ಣು, ಸೇಬು ಮತ್ತು ಇತರ ಅಂತಹ ಹಣ್ಣುಗಳು- ಸುಮಾರು ೫೦ ಕ್ಯಾಲೊರಿ
ಇದೇ ರೀತಿ ನಾವು ಆಹಾರದಲ್ಲಿ ಕ್ಯಾಲೊರಿಯ ಲೆಕ್ಕವಿಡಬಹುದು. ನಿರಂತರ ಚಟುವಟಿಕೆಯ ಜೀವನಶೈಲಿಯಾದರೆ ಸುಮಾರು ೧೫೦೦-ರಿಂದ ೨೦೦೦ ಕ್ಯಾಲೊರಿಯೊಳಗೆ ಸಾಕಾಗುತ್ತದೆ. ಚಟುವಟಿಕೆ ಕಡಿಮೆಯಾದಷ್ಟೂ ಕ್ಯಾಲೊರಿ ಕಡಿಮೆಯಾಗಬೇಕು.
ಹಾಗೇನೇ, ಮೂರನೇ ಅಂಶವೆಂದರೆ ಮನಸ್ಸಿನ ಶಾಂತಿ. ಗೊಂದಲಮಯ ಜೀವನ ಸಾಗಿಸುತ್ತಿರುವ ನಮ್ಮಲ್ಲನೇಕರಿಗೆ ಈ ಒತ್ತಡಭರಿತ ಜೀವನ ಶೈಲಿಯೇ ತೂಕ ಏರಿಕೆಗೂ ಕಾರಣ. ಬಹಳ ಹಿಂದೆ, ಆದಿಮಾನವನ ಕಾಲದಲ್ಲಿ ಮಾನವನಿಗೆ ಒತ್ತಡ (Stress) ಇರುತ್ತಿದ್ದುದು ಆಹಾರ ಸಿಗದೆ ಇದ್ದಾಗ. ಆಗೆಲ್ಲ ದೇಹ ಸಿಕ್ಕಿದ ಆಹಾರವನ್ನು ಮಿತಬಳಕೆ ಮಾಡಿ ಉಳಿದದ್ದನ್ನು ಕೊಬ್ಬಾಗಿ ಶೇಖರಿಸಿಡುತ್ತಿತ್ತು. ಒತ್ತಡಕ್ಕೂ ಈ ಶೇಖರಣೆಗೂ ಸಂಬಂಧವಿದೆ ಅನ್ನುತ್ತಾರೆ ಕೆಲವು ವೈದ್ಯರು. ಇದೇ ವಾದ ಸರಿಯಾದರೆ, ನಮ್ಮಲ್ಲಿ ಬಹುತೇಕರು ತೂಕ ಇಳಿಸಿಕೊಳ್ಳಲಾಗದೇ ಒದ್ದಾಡುವುದಕ್ಕೂ ಒತ್ತಡಭರಿತ ಜೀವನಕ್ಕೂ ನಂಟಿದೆ ಎಂದೇ ನಂಬುವಂತಾಗುತ್ತದೆ. ಆದ್ದರಿಂದ ಒತ್ತಡರಹಿತ ಜೀವನ ನಮ್ಮದಾಗಿಸಿಕೊಳ್ಳಬೇಕು. ನಿಯಮಿತ ವ್ಯಾಯಾಮ ಎರಡು ರೀತಿಯಲ್ಲಿ ಸಹಕಾರಿ. ವ್ಯಾಯಾಮದಿಂದ ದೇಹದಲ್ಲಿ ಒತ್ತಡದಿಂದ ಉಂಟಾಗುವ ಅನಾಹುತಕಾರಿ ರಸಾಯನಿಕಗಳು ಬೆವರಿನ ಮೂಲಕ ಕಳೆದುಹೋಗುತ್ತವೆ ಮತ್ತು ಉತ್ಸಾಹ ತರಿಸುವ ರಸಾಯನಿಕಗಳು ಉತ್ಪತ್ತಿಯಾಗುತ್ತವೆ. ಇದರಿಂದಾಗಿಯೇ ವ್ಯಾಯಾಮ ಮಾಡಿ ಮುಗಿಸಿದಾಗ ದೇಹ ಬಳಲಿದ್ದರೂ ಮನಸ್ಸಿಗೆ ಹುಮ್ಮಸ್ಸಿನ ಅನುಭವವಾಗುತ್ತದೆ....
ಇಷ್ಟೆಲ್ಲ ಕೇಳಿದ ಗೆಳತಿ... "ನೀನು ಚಹಾಕ್ಕೆ ಬರಬೇಡ ಮಾರಾಯ್ತಿ. ನಿನ್ನ ನೆಪದಲ್ಲಿ ನಾನೂ ಆ ದಿನ ಒಂದು ಟೀ-ತಿಂಡಿ ಜಾಸ್ತಿ ಮಾಡಿಬಿಡುತ್ತೇನೆ. ಸೋ, ಬರಬೇಡ ನೀನು" ಅಂತಂದು ಫೋನ್ ಇಟ್ಟೇಬಿಡೋದಾ?
"ಸತ್ಯವಂತರಿಗಿದು ಕಾಲವಲ್ಲಾ..." ದಾಸರ ಹಾಡು ಯಾಕೋ ಗುನುಗಿಕೊಂಡೆ.