ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday 1 August, 2010

ಕನ್ನಡ ತಪಸ್ವಿಗೆ ಅಭಿವಾದನ

ಸುಮಾರು ಎಂಟು ವರ್ಷಗಳ ಹಿಂದೆ, ಅಮೆರಿಕದ ದೈಹಿಕ ನಂಟನ್ನು ಸರಿಸಿಕೊಂಡು ಮೈಸೂರಿನಲ್ಲಿ ಬೇರೂರಲು ಹೊರಟಿದ್ದ ಹಿರಿಯರಿಗೆ ಪ್ರೀತಿ ಅಭಿಮಾನದಿಂದ ವಂದಿಸಲು ನಾನು "ಗುರುವಂದನ" ಕವನ ಬರೆದಾಗ ಹರಿಹರೇಶ್ವರ ಮತ್ತು ನಾಗಲಕ್ಷ್ಮಿಯವರ ಮೇಲೆ ನನಗಿದ್ದ ಗೌರವ ಮತ್ತು ಪೂಜ್ಯ ಭಾವನೆ ಆಮೇಲಿನ ವರ್ಷಗಳಲ್ಲಿ ಇನ್ನಷ್ಟು ಗಾಢವಾಗಿ ಬೆಳೆದಿದೆ.

ಈ ಅಪರೂಪದ ಅನುರೂಪ ದಂಪತಿಯ ಪರಿಚಯ ನನಗಾಗಿದ್ದು ಬಹುಶಃ ೧೯೯೪ ಅಥವಾ ೧೯೯೫ರಲ್ಲಿ. ನಮ್ಮ ಕನ್ನಡ ಕೂಟದ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಪುಟ್ಟ ಕಥೆಯೊಂದನ್ನು ಓದಿ ಕರೆ ಮಾಡಿ ಅಭಿನಂದಿಸಿದ ಸಹೃದಯರು ಹರಿ ಹಾಗೂ ನಾಗೂ ಅಕ್ಕ. ಅವರ ಪ್ರೀತಿ, ಔದಾರ್ಯ, ಪಾಂಡಿತ್ಯದ ಬಗ್ಗೆ ಎಲ್ಲರೂ ಹೇಳುತ್ತಾರೆ, ಹೇಳಿದ್ದಾರೆ. ಹಾಗೆಯೇ, ಹರಿಯವರು ತೋರಿಸುತ್ತಿದ್ದ ತಂದೆಯಂತಹ ಹಠ, ಕೋಪ, ಶಿಸ್ತು, ಕಾಠಿಣ್ಯ- ಇವನ್ನೆಲ್ಲ ಹತ್ತಿರದಿಂದ ಕಂಡಿದ್ದೇನೆ, ಕೆಲವೊಮ್ಮೆ ಅನುಭವಿಸಿದ್ದೇನೆ. ಅವರ ಪ್ರೀತಿಭರಿತ ಒತ್ತಾಸೆ, ಛಲ ತುಂಬಿದ ಪ್ರೋತ್ಸಾಹ, ಸ್ನೇಹಪೂರ್ಣ ಆಗ್ರಹ, ಅಕ್ಕರೆಯ ಬೆಂಬಲ- ಇವೆಲ್ಲವೂ ನಾವಿಂದು ಸಾಮಾನ್ಯವಾಗಿ ಕಾಣದ ಗುಣಗಳು. ಇವನ್ನೆಲ್ಲ ಹರಿಯವರಿಂದ ನಾವೆಲ್ಲರೂ ಪಡೆದಿದ್ದೇವೆ. ಅವರಿಂದ ಲೇಖನವೊಂದರ ಬರವಣಿಗೆಗೆ ಆಹ್ವಾನಿತರಾಗಿಯೂ ಉದಾಸೀನ ಮಾಡಿದಾಗ ಅವರು ಯಾವುದೇ ಮುಲಾಜಿಲ್ಲದೆ ಪದೇ ಪದೇ ಕರೆ ಮಾಡಿ ಬರಹದಲ್ಲಿ ತೊಡಗಿಕೊಳ್ಳಲು ಆದೇಶಿಸುತ್ತಿದ್ದರು. "ಅಬ್ಬಾ, ಪುಣ್ಯಾತ್ಮ. ಬಿಡೋದೇ ಇಲ್ವಲ್ಲ. ಒಮ್ಮೆ ಬರೆದು ಕೊಟ್ಟು ಬಿಡೋಣ" ಅಂತಂದುಕೊಂಡು ಹರಿಯವರು ಕೇಳಿದ ಲೇಖನ ಮುಗಿಸಿ ಕಳಿಸಿದ್ದುಂಟು. "ತುಂಬಾ ಚೆನ್ನಾಗಿ ಬರೆದಿದ್ದೀರಿ. ಈ ಲೇಖನದ ಇಂಥ ಸಂದರ್ಭದಲ್ಲಿ ಆ ಮಾತನ್ನು ಈ ರೀತಿ ಹೇಳಿದರೆ ಹೇಗೆ? ಇನ್ನೊಂದು ಹೇಳಿಕೆಯನ್ನು ಬೇರೆ ಥರ, ಪ್ರಶ್ನಾರ್ಥಕವಾಗಿ ಮಾಡಿದರೆ ಚೆನ್ನಾಗಿರಬಹುದಲ್ಲ! ಬದಲಾಯಿಸಿ ನೋಡಿ" ಎಂದೆಲ್ಲ ಅವರು ಸೂಚಿಸುತ್ತಿದ್ದ ತಿದ್ದುಪಡಿ ಮಾಡಿ ಕೊನೆಗೆ ಅವರಿಂದಲೇ ಮೊದಲ ಶಹಾಬ್ಬಾಸ್‍ಗಿರಿ ಪಡೆದದ್ದೂ ಇದೆ. ಇನ್ಯಾರಾದರೂ ಹೀಗೆ, ಅಷ್ಟೊಂದು ಸದಾಶಯದಿಂದ, ನಮ್ಮ ಬೆನ್ನ ಹಿಂದೆ ಬೆತ್ತ ಹಿಡಿದಂತೆ ನಿಂತು, ಬರೆಸುವುದು ಸಾಧ್ಯವಿದೆಯಾ? ಹರಿಗೆ ಹರಿಯೇ ಸರಿ.

ಅವರು ಒಬ್ಬ ವ್ಯಕ್ತಿಯಲ್ಲ; ಹಲವು ವ್ಯಕ್ತಿತ್ವಗಳ ಉತ್ಕೃಷ್ಟ ಸಂಗಮ. ವಿಜ್ಞಾನಿ, ಪಂಡಿತ, ಮೇಧಾವಿ, ಜಿಜ್ಞಾಸು, ಸುಸಂಸ್ಕೃತ, ಜ್ಞಾನದ ಭಂಡಾರವೇ ತಾನಾದರೂ ವಿನಯಶೀಲ ಸಜ್ಜನ. ಅವರ ಪರಿಚಯದ ಪರಿಧಿಯೊಳಗೆ ಬಂದವರು ಯಾರೂ ಸಾಹಿತ್ಯದ ಗಂಧಸೇಚನವಾಗದೆ ಉಳಿಯುವಂತಿಲ್ಲ. ಎಲ್ಲರಿಗೂ ಯಾವುದಾದರೊಂದು ಪುಸ್ತಕವನ್ನು ನೀಡಿ, "ತಗೊಳ್ಳಿ, ಇದು ನಿಮಗೆ. ಓದಿ, ಆನಂದಿಸಿ. ಇದರ ಬಗ್ಗೆ ಇನ್ನಷ್ಟು ಜನರಿಗೆ ತಿಳಿಸಿ" ಎಂದೇ ಕನ್ನಡ ಸರಸತಿಯ ಸೇವೆ ಮಾಡುತ್ತಾ ಬಂದ ಉಪಾಸಕ.

ಹರಿ ಸರ್.
-ಹಾಗೆಂದೇ ನಾನವರನ್ನು ಕರೆಯುತ್ತಿದ್ದೆ. ಸಂಪೂರ್ಣವಾಗಿ ಅವರೊಬ್ಬ ಗುರು. ಅಮೆರಿಕನ್ನಡ ಸಾಹಿತ್ಯದ ಅಧ್ಯಯನ ನಡೆಸುವ ಉದ್ದೇಶವನ್ನು ನಾನು ವ್ಯಕ್ತಪಡಿಸಿದ್ದಾಗ ಅತ್ಯಂತ ಹರ್ಷಿಸಿ ಬೆನ್ನು ತಟ್ಟಿದವರಲ್ಲಿ ಹರಿ ಸರ್ ಮೊದಲಿಗರು. ಒಂದು ಸಂಜೆ ಅದಕ್ಕಾಗಿ ಮೀಸಲಿರಿಸಿ, ನೆನಪಿನ ಖಜಾನೆ ಶೋಧಿಸಿ, ಜಾಲಾಡಿಸಿ ನೂರಾರು ಅಮೆರಿಕನ್ನಡಿಗರನ್ನು ನನ್ನ ಅಧ್ಯಯನದ ವ್ಯಾಪ್ತಿಯೊಳಗೆ ಸೇರಿಸಿದವರು. ತಾವು ನಡೆಸುತ್ತಿದ್ದ ಅಮೆರಿಕನ್ನಡ ದ್ವೈಮಾಸಿಕ ಪತ್ರಿಕೆಗೆ ಬರೆಯುತ್ತಿದ್ದ ಅನೇಕರ ಫೋನ್ ನಂಬರ್, ವಾಸವಿರುವ/ ಇದ್ದ ಪ್ರದೇಶ- ಇವನ್ನೆಲ್ಲ ಮೆದುಳಿನ ಗಣಿಯಿಂದ ಅಗೆದು ತೆಗೆದು ಪೇಪರಿಗಿಳಿಸಿದರು. ಅವರ ಅಗಾಧ ಜ್ಞಾಪಕಶಕ್ತಿಗೆ ಬೆರಗಾಗುತ್ತಾ ಪುಟ ಸೇರಿಸುತ್ತಾ ಅಪರಾಹ್ನವನ್ನು ಇಳಿಸಂಜೆಯಾಗಿಸಿದ್ದೆ ಅಂದು- ತುಂಬಾ ಹಿಂದೆ. ಕಾರಣಾಂತರಗಳಿಂದ ಆ ಯೋಜನೆ ಅರ್ಧದಲ್ಲಿ ನಿಂತು ಹೋಯಿತು. ಪದವಿಯ ಪೀಠ ಈಗ ಬೇಡೆನಿಸಿದರೂ ವಿಷಯದ ನಂಟು ಬಿಟ್ಟಿಲ್ಲ. ಅಮೆರಿಕನ್ನಡಿಗರ ಸೃಜನಾತ್ಮಕ ಸಾಹಿತ್ಯದ ಕುರಿತಾಗಿ ಒಂದು ಹೊತ್ತಗೆಯನ್ನು ಹೊರತರುವ ತಯಾರಿಯಲ್ಲಿರುವಾಗಲೇ ಅದರ ಮೂಲ ಆಕರ ಆಗಸಕ್ಕೇರಿದೆ. ಕನ್ನಡಮ್ಮನ ಹೃದಯ ಸೇರಿದ ಈ ಕನ್ನಡ ಚೇತನಕ್ಕೆ ಆ ಕೃತಿ ಮೀಸಲು. ಸ್ನೇಹ-ಸೇತುವಾಗಿ ಅಮೆರಿಕದ ಕನ್ನಡಿಗರ ನಡುವೆ ಭಾಷೆ, ಸಾಹಿತ್ಯದ ಬಾಂಧವ್ಯ ಬಿಗಿದ ಹರಿ ಸರ್‌ಗೆ ಈ ಮೂಲಕ ನನ್ನ ಅಭಿವಾದನ. "ಅಮೆರಿಕನ್ನಡ ಸಾಹಿತ್ಯ"ದ ಕುರಿತಾದ ಆ ಪುಸ್ತಕ ಪ್ರಕಟವಾಗುವಾಗ ಹರಸಲು ಬಂದೇ ಬರುತ್ತಾರೆನ್ನುವ ನಂಬಿಕೆಯೊಂದಿಗೆ ಇದೀಗ ಅವರನ್ನು ಬೀಳ್ಕೊಡುತ್ತೇನೆ.

3 comments:

ಸಾಗರಿ.. said...

ಹರಿಹರೇಶ್ವರರೂ ನಿಜಕ್ಕೂ ಒಬ್ಬ ಗರ್ವವಿಲ್ಲದ, ಆಡಂಬರವಿಲ್ಲದ ಬುದ್ಧಿಜೀವಿ. ಅವರೀಗ ನಮ್ಮ ಮಧ್ಯೆ ಇಲ್ಲದಿರುವುದು ನಮ್ಮ ದೌರ್ಭಾಗ್ಯವೇ ಸರಿ

ಸೀತಾರಾಮ. ಕೆ. / SITARAM.K said...

harihareswarara bagge tamminda tilidu avara bagge kutuhalavu moodide. tamma nenapina ganiyinda avara maargadarshanagalu namagu haridu barali.

ಸುಪ್ತದೀಪ್ತಿ suptadeepti said...

ಸೀತಾರಾಮ್ ಸರ್ ಮತ್ತು ಸಾಗರಿ, ಪ್ರತಿಕ್ರಿಯೆಗೆ ಧನ್ಯವಾದಗಳು. ಹರಿ ಸರ್ ಬಗ್ಗೆ ನಾವು ಯಾರು ಎಷ್ಟು ಹೇಳಿದರೂ ಬರೆದರೂ ಸಾಲದು... ಅವರೊಬ್ಬ ಆದರ್ಶ ವ್ಯಕ್ತಿ.