ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Friday, 23 July, 2010

ಗುರುವಂದನ

ಈಗ ಸುಮಾರು ಎರಡು ಗಂಟೆಯ ಹಿಂದಷ್ಟೇ ನಮ್ಮನ್ನಗಲಿದ ಹಿರಿಯ ಚೇತನ ಶ್ರೀ ಹರಿಹರೇಶ್ವರ ಅವರ ಕನ್ನಡಾತ್ಮಕ್ಕೆ ಶಾಂತಿ ಕೋರುತ್ತಾ... ಎಂಟು ವರ್ಷಗಳ ಹಿಂದೆ ಶ್ರೀ ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿ ಅಮೆರಿಕೆಯನ್ನು ತೊರೆದು ಮೈಸೂರಿಗೆ ಹೊರಟು ನಿಂತಾಗ ಬರೆದಿದ್ದ ವಂದನಗೀತ...

ವಯೋವೃದ್ಧ ಜ್ಞಾನವೃದ್ಧ ಪ್ರೀತಿಬದ್ಧರು
ಕಣ್ಣ ಬೆಳಕ ಹೃದಯದೊಳಗೆ ಇಳಿಸಿಬಿಡುವರು

ಮಾತೆ-ಮಮತೆ, ಅನ್ನಪೂರ್ಣೆ, ಒಲವ ಕೊಡುವರು
ತಂದೆ-ಶಿಸ್ತು, ಮಾರ್ಗದರ್ಶಿ, ಬಲವ ಬೆಳೆವರು

ಕೈಯ ಹಿಡಿದು ಹೆಜ್ಜೆಯಿರಿಸಿ ಗುರಿಯ ತೋರ್ವರು
ಸಾಧನೆಯಲಿ ಸಂಗ ನೀಡಿ ಗರಿಯನೀವರು

ಅಂತರಂಗ ಸಖ್ಯಕೊಂದು ಅರ್ಥವಿತ್ತರು
ಆತ್ಮದೌನ್ನತ್ಯದಾ ದಾರಿ ತೆರೆದರು

ಕನ್ನಡತನ ಕನ್ನಡಮನ ಕನ್ನಡವುಸಿರು
ಕಂಡವರಿಗೆ ಸುಜ್ಞಾನವ ಉಣಿಸುವ ಬೇರು

ಬಿಟ್ಟರಿಲ್ಲ ಇವರಿಗೆ ಸಮ, ಯಾವ ದೇಶ ಊರು
ನಂದಿನಿ ಮಿಗೆ ಸುಮನೆಯರಿಗೆ ಹನಾಸುನಂ ತೌರು

ಹರಿಗೆ ಲಕ್ಷ್ಮಿ, ಹರಗೆ ನಾಗ, ಈಶ ಪಂಡಿತ
ನಮನಯೋಗ್ಯರಿವರು- ಜೋಡು ಶಾರದಾಂಕಿತ
(೧೦-೧೦-೨೦೦೨)

8 comments:

shivu.k said...

ಕವನ ತುಂಬಾ ಚೆನ್ನಾಗಿದೆ. ಎಂಟು ವರ್ಷಗಳ ಹಿಂದೆ ಬರೆದಿದ್ದರೂ ಈಗಲೂ ಪ್ರಸ್ತುತವೆನಿಸುತ್ತೆ..

ಸುಪ್ತದೀಪ್ತಿ suptadeepti said...

ಶಿವು, ಮತ್ತೆ ಭೇಟಿ ನೀಡಿದ್ದಕ್ಕೆ ವಂದನೆಗಳು, ಪ್ರತಿಕ್ರಿಯೆಗೆ ಧನ್ಯವಾದಗಳು.

ನಮ್ಮ ಸಂಸ್ಕೃತಿಯಲ್ಲಿ ಗುರುವಂದನ ಸದಾ ಪ್ರಸ್ತುತವೇ. ಅದರಲ್ಲೂ ಕನ್ನಡವನ್ನೇ ಉಸಿರಾಗಿಸಿಕೊಂಡು ಅಮೆರಿಕದ ಅನೇಕ ಕನ್ನಡಿಗರಿಗೆ ಲೇಖನಿಯೆತ್ತಿಕೊಳ್ಳಲು ಉತ್ತೇಜನವನ್ನೂ ಬರವಣಿಗೆಯ ಆರಂಭಿಕ ಹಂತದಲ್ಲಿದ್ದವರಿಗೆ ಪ್ರೋತ್ಸಾಹವನ್ನೂ ನೀಡಿದ ಇಂತಹ ಗುರು-ದಂಪತಿ ಪ್ರಾತಃ ವಂದ್ಯರು.

shridhar said...

ಶಿಕಾರಿಪುರ ಹರಿಹರೇಶ್ವರ್ ಅವರ ನಿಧನದ ಸುದ್ದಿ ಕೇಳಿ ದುಃಖವಾಯ್ತು.
ದಟ್ಸ್ ಕನ್ನಡದಲ್ಲಿ ಬರುತ್ತಿದ್ದ ಅವರ ಅಂಕಣದ [ ಹೊಂಬೆಳಕ ಹೊನಲು] ಓದುಗರಲ್ಲಿ ನಾನು ಒಬ್ಬನಾಗಿದ್ದೆ ..
ದೆವರು ಅವರ ಪರಿವಾರದವರಿಗೆ ಸಾಂತ್ವನ ನೀಡಲಿ ಎಂದು ಬೇಡಿಕೊಳ್ಳುತ್ತೇನೆ.

ಅಂದಹಾಗೆ ನಿಮ್ಮ ಗುರುವಂದನೆ ತುಂಬಾ ಚೆನ್ನಾಗಿದೆ.
ಶಬ್ದ ಜೋಡನೆ ..ಸುಂದರವಾಗಿದೆ.

ಸುಪ್ತದೀಪ್ತಿ suptadeepti said...

ಶ್ರೀಧರ್, ಸ್ವಾಗತ ಮತ್ತು ಧನ್ಯವಾದ.

ಹರಿಯವರು ಹೊಂಬೆಳಕ ಹೊನಲು ಹರಿಸುತ್ತಿದ್ದಾಗ ಅದರಲ್ಲಿ ಮುಳುಗಿ ತೋಯ್ದು ಇಷ್ಟಿಷ್ಟು ಬುದ್ಧಿಪುಷ್ಟಿ ಪಡೆದವರಲ್ಲಿ ನಾನೂ ಒಬ್ಬಳು. ಅಂತಹ ಪಾಂಡಿತ್ಯದ ಖನಿ ಇನ್ನಿಲ್ಲ! ಖೇದವೆಂದರೆ, ಏನನ್ನು ಎಷ್ಟನ್ನು ಕಳೆದುಕೊಂಡೆವೆಂಬುದರ ಅರಿವಿಲ್ಲದಷ್ಟು ಅಲ್ಪಜ್ಞರು ನಾವು.

ಸಾಗರಿ.. said...

ತಮ್ಮ ವಂದನಗೀತೆ ಮನಮುಟ್ಟುವಂತಿದೆ. ಹರಿಹರೇಶ್ವರ್ ಅವರ ನಿಧನ ನಿಜಕ್ಕೂ ದುಖದ ಸಂಗತಿಯಾಗಿದೆ.

ಸೀತಾರಾಮ. ಕೆ. / SITARAM.K said...

ತಮ್ಮ ವಂದನಗೀತ ಆ ಮೇರುದಂಪತಿಗಳ ವ್ಯಕ್ತಿತ್ವವನ್ನು ಪರಿಚಯ ಮಾಡಿಸಿಕೊಟ್ಟಿತು.
ತುಂಬಾ ಚೆಂದದ ಲೇಖನ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಮನೆಯವರಿಗೆ ದುಖ ಭರಿಸುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

V.R.BHAT said...

ಬಹಳ ಬೇಸರವಾಯಿತು, ದೊಡ್ಡವರು ಎಂದಿದ್ದರೂ ದೊಡ್ದವರೇ, ಅಂಥವರನ್ನು ಮತ್ತೆ ಪಡೆದೇವೆಯೇ? ನಿಮ್ಮ ಕವನ ಸಮರ್ಪಕ, ಅಗಲಿದ ಹರಿಹರೇಶ್ವರರಿಗೆ ನಮನ ಮತ್ತು ತಮಗೆ ಧನ್ಯವಾದ

ಸುಪ್ತದೀಪ್ತಿ suptadeepti said...

ಸಾಗರಿ, ಸೀತಾರಾಮ್ ಸರ್, ವಿ.ಆರ್.ಭಟ್ರೆ, ಧನ್ಯವಾದಗಳು.

"ಮತ್ತೊಮ್ಮೆ ಮಿಲನಕ್ಕಾಗಿ ಅಗಲುವಿಕೆ ಅನಿವಾರ್ಯ" ಅನ್ನುವ ಹೇಳಿಕೆ ಇಂಥ ಸಂದರ್ಭಗಳಲ್ಲಿ ಅರ್ಥಹೀನವಾಗುತ್ತದಲ್ಲ! ಸರ್ವಶಕ್ತನಿಗಷ್ಟೇ ಗೊತ್ತು ಇದರ ಮರ್ಮ.