ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Wednesday 24 October, 2007

ಆತ್ಮ ಚಿಂತನ-೦೬

ವಿಶೇಷ ಸೂಚನೆ: ಹಿಂದಿನ ಸಂಚಿಕೆಯಲ್ಲಿ ತಿಳಿಸಿದ, ಕಳೆದ ನವೆಂಬರಿನಲ್ಲಿ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ "ಪ್ರೇತಗಳ ಮದುವೆ" ಲೇಖನದ ಸಾರಾಂಶವನ್ನು ಈ ಕಂತಿನಲ್ಲಿ ಕೊಡಮಾಡುತ್ತಿಲ್ಲ, ಮುಂದಿನ ಕಂತಿಗೆ ಮುಂದೂಡಲಾಗಿದೆ. ಈ ಕಂತಿನಲ್ಲಿ ಅದಕ್ಕಿಂತ ವಿಶೇಷವಾದ ಒಂದು ನಿರೂಪಣೆಯನ್ನು ಬರೆಯಬೇಕಾಗಿದೆ....

ಪಟ್ಟಣದ ಗೌಜಿ-ಗಲಾಟೆಯಿಂದ ದೂರವಾಗಿ ಒಂದು ಆಶ್ರಮದಂಥ ವಾತಾವರಣ. ಅಲ್ಲಿನ ದೊಡ್ಡ ಕಟ್ಟಡದ ಒಂದು ವಿಶಾಲ ಕೋಣೆಯಲ್ಲಿ ಹಲವಾರು ಪುಟ್ಟ ಪುಟ್ಟ ಗುಂಪುಗಳಲ್ಲಿ ಗುಜು-ಗುಜು ನಡೆಯುತ್ತಿದೆ. ಅಂಥದ್ದೊಂದು ಪುಟ್ಟ ಗುಂಪಿನ ಕಡೆ ನಮ್ಮ ಗಮನ. ನೂರಕ್ಕೂ ಹೆಚ್ಚು ಆಸಕ್ತರು ಸೇರಿದ್ದ ಒಂದು ಕಾರ್ಯಾಗಾರದಲ್ಲಿ ಅವರೂ ಭಾಗಿಗಳು. ಸೋಮವಾರ, ಮಂಗಳವಾರಗಳ ಪೂರ್ವಾಹ್ನ, ಅಪರಾಹ್ನಗಳಲ್ಲಿ ವಿವರಣೆಗಳು, ಪ್ರಾತ್ಯಕ್ಷಿಕೆಗಳು ನಡೆದಿವೆ. ಇದೀಗ, ಬುಧವಾರದ ಅಪರಾಹ್ನ, ಪ್ರಯೋಗದ ಸಮಯ. ಇವರ ಗುಂಪಿನಲ್ಲಿ ಒಬ್ಬ ಮಹಿಳೆ `ಅವಳು'. ಇನ್ನೊಬ್ಬ ಮಹಿಳೆ `ಇವಳು'. ಸದ್ಯಕ್ಕೆ `ಆತ' ಇಲ್ಲೊಬ್ಬ ನೋಡುಗ, ಅಷ್ಟೇ. `ಇವಳ' ಎಡಗಡೆಗೆ `ಅವಳು' ಮತ್ತು ಬಲಗಡೆಗೆ `ಆತ' ತ್ರಿಕೋನಾಕೃತಿಯಲ್ಲಿ ಕುರ್ಚಿಗಳಲ್ಲಿ ಆಸೀನರಾಗಿ, ತಮ್ಮೊಳಗೆ ಪಿಸು-ಪಿಸು ಮಾತಾಡುತ್ತಿದ್ದಾರೆ. ಪರಸ್ಪರ ನಮಸ್ಕಾರ ವಿನಿಮಯಗಳ ಬಳಿಕ `ಅವಳು' ಮತ್ತು `ಇವಳ' ನಡುವೆ ಸಂಭಾಷಣೆ ಸಾಗುತ್ತದೆ, ಅದರ ಸಂಕ್ಷಿಪ್ತ ರೂಪಾಂತರ ಹೀಗಿದೆ:

`ಅವಳು': ನೀನೀಗ ಸಂಪೂರ್ಣವಾಗಿ ನಿರಾಳವಾಗಿದ್ದೀ... ನಿನ್ನ ದೇಹದ ಯಾವ ಭಾಗಗಳೂ ಸೆಟೆದುಕೊಂಡಿಲ್ಲ... ಕಣ್ಣು ಮುಚ್ಚಿ ನಿಧಾನವಾಗಿ, ದೀರ್ಘ ಉಸಿರಾಟ ನಡೆಸು... ಉಸಿರಿನೊಡನೆ ಹೊಸ ಚೇತನವೂ ನಿನ್ನನ್ನು ಸೇರುತ್ತಿದೆ. ನಿಃಶ್ವಾಸದೊಡನೆ ನಿನ್ನ ನಿಶ್ಶಕ್ತಿಯನ್ನೂ, ನಿರುತ್ಸಾಹವನ್ನೂ ಹೊರಗೆ ಹಾಕು... ನಿಧಾನವಾಗಿ ಉಸಿರಾಡು... ದೀರ್ಘವಾಗಿ ಉಸಿರಾಡು... ನಿನ್ನ ಮನಸ್ಸಿನ ಯೋಚನೆಗಳನ್ನೆಲ್ಲ ಚಿತ್ರ ರೂಪದಲ್ಲಿ ನೋಡು... ನಿಧಾನವಾಗಿ ಹಳೆಯ ನೆನಪುಗಳನ್ನು ತೆರೆಗೆ ತಂದುಕೋ... ನಿನ್ನ ಬಾಲ್ಯದ ನೆನಪು... ಅಥವಾ ನಿನಗೆ ಬೇಕೆನಿಸಿದ ನೆನಪಿನ ತುಣುಕು ನಿನ್ನ ಮನದ ಭಿತ್ತಿಯ ಮೇಲೆ ಕಾಣುತ್ತದೆ... ಅದನ್ನು ವಿವರವಾಗಿ ನೋಡು... ಅದರ ವಿವರಗಳನ್ನು ನನಗೆ ಹೇಳಬಲ್ಲೆ, ಆದರೆ ನಿನ್ನ ನಿರಾಳವಾದ ಪ್ರಜ್ಞಾವಸ್ಥೆ ಕಲಕುವುದಿಲ್ಲ. ಈಗ ನಿನ್ನ ನೆನಪಿನ ತುಣುಕನ್ನು ನನಗೆ ವಿವರಿಸು...

`ಇವಳು': ಸಣ್ಣ ಜಲಪಾತ... ತುಂತುರು ನೀರಿನ ಕೆಳಗೆ ನಿಂತಿದ್ದೇನೆ. ನೀರು ತಣ್ಣಗಿದೆ... ಖುಷಿಯಾಗುತ್ತಿದೆ... ಈ ಸ್ಥಳ... ಈ ಸ್ಥಳ ನನಗೆ ಗೊತ್ತು, ನಾನೆಂದೂ ಇಲ್ಲಿಗೆ ಬಂದಿಲ್ಲ... ಆದರೂ ನನಗೆ ಈ ಜಾಗ ಪರಿಚಿತ...

`ಅವಳು': ನೀನು ಹೇಗಿದ್ದೀ... ಅದನ್ನು ವಿವರಿಸುತ್ತೀಯಾ? ನಿನ್ನ ಕಾಲುಗಳು ಹೇಗಿವೆ? ಪಾದರಕ್ಷೆಗಳು ಇವೆಯೇ? ಹೇಗಿವೆ? ಯಾವ ರೀತಿಯ ಬಟ್ಟೆ ಧರಿಸಿದ್ದೀ? ಈಗ ಹೇಳು...

`ಇವಳು': ನಾನು... ಸುಮಾರು ಇಪ್ಪತ್ತರ ತರುಣಿ... ಬರಿಗಾಲು... ಬಟ್ಟೆ... ಚರ್ಮದ ಥರ... ಕಂದು ಬಣ್ಣದ ಒರಟು ಬಟ್ಟೆ... ಹೇಗೋ ಸುತ್ತಿಕೊಂಡಿದ್ದೇನೆ... ಕಟ್ಟಿಕೊಂಡಿದ್ದೇನೆ... ನೀರಿನಡಿಯಲ್ಲಿ ನಿಂತಿದ್ದೇನೆ. ಇಲ್ಲಿಗೇ ಯಾವಾಗಲೂ ಸ್ನಾನಕ್ಕೆ ಬರುತ್ತೇನೆ... ಖುಷಿಯಾಗುತ್ತಿದೆ... ಸುತ್ತಲಿನ ಗಿಡಗಳೆಲ್ಲ ನನಗೆ ಪರಿಚಿತ... ಇದು ಭಾರತದ ಒಂದು ಹಳ್ಳಿ, ನನಗೆ ಗೊತ್ತು...

`ಅವಳು': ಸಂತೋಷ... ಯಾವ ಹಳ್ಳಿ ಗೊತ್ತಾ? ಅಲ್ಲಿ ಯಾರೆಲ್ಲ ಇದ್ದಾರೆ? ನೋಡು...

`ಇವಳು': ಗೊತ್ತಿಲ್ಲ... ಹತ್ತು ಹನ್ನೊಂದು ಗುಡಿಸಲುಗಳ ಹಳ್ಳಿ... ಇದು ನನ್ನ ಗಂಡನ ಊರು... ವರ್ತುಲಾಕಾರದ ಮನೆಗಳು, ಮೇಲೆ ಹುಲ್ಲಿನ ಮಾಡು... ನನಗೆ ಖುಷಿಯಾಗುತ್ತಿದೆ...

`ಅವಳು': ಓಹ್, ನಿನಗೆ ಮದುವೆಯಾಗಿದೆ. ಗಂಡ ಅಲ್ಲಿ ಇದ್ದಾನೆಯೇ? ನಿನಗೆ ಯಾಕೆ ಖುಷಿಯಾಗಿದೆ?

`ಇವಳು': ಗಂಡ ಇಲ್ಲಿಲ್ಲ... ನಾನು ಗರ್ಭಿಣಿ, ಅದಕ್ಕೇ ನನಗೆ ಖುಷಿಯಾಗಿದೆ...

`ಅವಳು': ಸಂತೋಷ... ಈ ವಿಷಯ ಬೇರೆ ಯಾರಿಗಾದರೂ ಗೊತ್ತಿದೆಯೇ?

`ಇವಳು': ಇಲ್ಲ, ಹಳ್ಳಿಯಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ... ನನ್ನ ಗಂಡ ಈ ವಿಷಯವನ್ನು ನನ್ನ ಅಮ್ಮ-ಅಪ್ಪನಿಗೆ ತಿಳಿಸಲು ಹೋಗಿದ್ದಾನೆ... ನನಗೆ ಖುಷಿಯಾಗಿದೆ...

`ಅವಳು': ಈಗ ಆ ನೆನಪಿನ ದಾರಿಯಲ್ಲಿ ಮುಂದಕ್ಕೆ ಹೋಗು... ಮುಂದೇನಾಗುತ್ತದೆ ನೋಡು...

`ಇವಳು': (ಬಿಕ್ಕಳಿಸಲು ಪ್ರಾರಂಭಿಸುತ್ತಾಳೆ... ಕಣ್ಣೀರು ಜಿನುಗುತ್ತದೆ...) ನನಗೆ ನೋವಾಗುತ್ತಿದೆ, ಬೇಸರವಾಗುತ್ತಿದೆ... ತೊರೆಗೆ ಹೋಗುವಾಗ ಜಾರಿ ಬಿದ್ದೆ... ಐದು ತಿಂಗಳ ಗರ್ಭಿಣಿ... ಬಿದ್ದೆ.... ಮಗುವನ್ನು ಕಳೆದುಕೊಂಡೆ... ನನ್ನ ಮಗುವನ್ನು ಕಳೆದುಕೊಂಡೆ... (ಬಿಕ್ಕಳಿಕೆ...)

`ಅವಳು': ನಿನಗೆ ನೋವಾಗಿದೆ, ನಿಜ... ನಿನ್ನ ಗಂಡ ಅಲ್ಲಿದ್ದಾನೆಯೇ? ಅವನಿಗೆ ಗೊತ್ತಿದೆಯೇ?

`ಇವಳು': ಹೌದು, ಅವನೂ ಇಲ್ಲೇ ಇದ್ದಾನೆ... ಅವನು... ಇವನೇ... ನನ್ನ ಈಗಿನ ಗಂಡನೇ ಅವನು. ಅವನಿಗೂ ಬೇಸರವಾಗಿದೆ, ಆದರೂ ನನ್ನನ್ನು ಸಂತೈಸುತ್ತಿದ್ದಾನೆ... ನನಗೆ ಆಸರೆಯಾಗಿದ್ದಾನೆ... ನನ್ನ ಜೊತೆಗಿದ್ದಾನೆ... (ಬಿಕ್ಕಳಿಕೆ...)

`ಅವಳು': ಅದೇ ನೆನಪಿನ ದಾರಿಯಲ್ಲಿ ಇನ್ನೂ ಮುಂದುವರಿದು ನೋಡು... ನಿನಗೆ ಬೇರೆ ಮಕ್ಕಳಾಗಿವೆಯೇ? ಮುಂದೆ ನಿನಗೆ ಏನಾಗುತ್ತದೆ? ನೋಡಿ ಹೇಳು...

`ಇವಳು': ಈ ಹಳ್ಳಿ ಬೇಡ... ಬೇರೆ ಕಡೆ ಹೋಗುವಾ ಅಂದ್ರೆ ನನ್ನ ಗಂಡ ಕೇಳುತ್ತಿಲ್ಲ... ಇದು ಅವನ ಹಳ್ಳಿ, ಅವನ ಸಂಬಂಧಿಕರೆಲ್ಲ ಇಲ್ಲೇ ಇದ್ದಾರೆ. ಅದಕ್ಕೇ ಬೇರೆ ಕಡೆ ಹೋಗಲು ಅವನಿಗೆ ಇಷ್ಟ ಇಲ್ಲ... ನನಗೆ ಇಲ್ಲಿ ಇರಲಾಗುತ್ತಿಲ್ಲ. ಬೇರೆಯವರ ಕೆಡುನುಡಿ ಕೇಳಲಾಗುತ್ತಿಲ್ಲ... ಕೊನೆಗೂ ಒಪ್ಪಿಕೊಂಡ... ಬೇರೆ ಕಡೆ... ಯಾರೂ ಇಲ್ಲದಲ್ಲಿ... ಕಾಡಿನ ನಡುವೆ, ಒಂದು ಪುಟ್ಟ ತೊರೆಯ ಬದಿ ನಮ್ಮ ಗುಡಿಸಲು ಮಾಡಿದ್ದೇವೆ...

`ಅವಳು': ಒಳ್ಳೆಯದು... ಇನ್ನೂ ಮುಂದೆ ಹೋಗಿ ಅವಳ ಜೀವನದಲ್ಲಿ ಇನ್ನೂ ಏನಾಗುತ್ತದೋ ನೋಡು...

`ಇವಳು': ಓಹ್, ನಮಗಿಬ್ಬರಿಗೂ ಬಹಳ ವಯಸ್ಸಾಗಿದೆ... ತೊರೆಯ ಬದಿಯಲ್ಲಿ, ಕಾಡಿನೊಳಗೆ ಶಾಂತವಾಗಿ, ನೆಮ್ಮದಿಯಾಗಿ ಇದ್ದೇವೆ... ಮಕ್ಕಳಿಲ್ಲ... ನಾವಿಬ್ಬರೇ... ಅದೇ ಕೊರಗು... ಓಹ್... (ನಿಟ್ಟುಸಿರು)

`ಅವಳು': ನಿನ್ನ ಆ ಜೀವನದ ತುಣುಕು ನಿನ್ನ ಈಗಿನ ಜೀವನಕ್ಕೆ ಹೇಗೆ ಹೊಂದಿಕೆಯಾಗುತ್ತದೆ ನೋಡು... ಈ ನೆನಪು ನಿನಗೆ ಹೇಗೆ ಮುಖ್ಯವಾಗುತ್ತದೆ?

`ಇವಳು': ಓಹ್... ಬೆಂಕಿ... ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ... ಕಾಡ್ಗಿಚ್ಚು... ಸುತ್ತಲೂ ಬೆಂಕಿ... ಗಂಡ ಮತ್ತು ನಾನು... ಇಬ್ಬರೂ... ಬೆಂಕಿಯಲ್ಲಿ... ಉರಿ... ನೋವು... (ಕಣ್ಣ ಕೊನೆಗಳಲ್ಲಿ ನೀರು ಜಿನುಗುತ್ತದೆ)

`ಅವಳು': ಅಲ್ಲಿಂದ ನೀನು ತೇಲಬಲ್ಲೆ... ತೇಲಿ ಮೇಲೆ ಹೋಗಿ ನೋಡು... ನಿನಗೆ ಯಾವುದೇ ನೋವು ತಗಲದು... ಮೇಲಿಂದ ನೋಡು...

`ಇವಳು': ಇಬ್ಬರೂ ವೃದ್ಧರು... ನಿಶ್ಶಕ್ತರು... ಬೆಂಕಿಗೆ ಆಹುತಿಯಾದರು... ನನ್ನ ಪಕ್ಕದಲ್ಲೇ ಅವನೂ ಇದ್ದಾನೆ... ಜೊತೆಜೊತೆಗೆ ಎರಡು ಬೆಳಕಿನ ಗೋಳಗಳ ಹಾಗೆ... ಒಟ್ಟಿಗೆ ಕೆಳಗೆ ನೋಡುತ್ತಿದ್ದೇವೆ...

`ಅವಳು': ಮತ್ತೇನು ನಡೆಯುತ್ತಿದೆ? ಈ ಜೀವನ ನಿನಗೆ ಹೇಗೆ ಪ್ರಸ್ತುತ?

`ಇವಳು': ಬಹುಶಃ... ಅವನ ಪ್ರೀತಿ... ಮತ್ತು ಆಸರೆ.... ಅವನಿಲ್ಲ... ಎಲ್ಲಿ ಹೋದ? ಜೊತೆಗೇ ಇದ್ದ... ಈಗಿಲ್ಲ... ಎಲ್ಲಿ ಹೋದ... ನಾನು ಒಂಟಿ... ನನಗೆ ಶಕ್ತಿಗುಂದುತ್ತಿದೆ... ಸಾಕಾಗಿದೆ... ನಾನು ಹಿಂದಕ್ಕೆ ಬರಬೇಕು... ಪ್ರಸ್ತುತಕ್ಕೆ ಬರಬೇಕು...

`ಅವಳು': ಬರಬಹುದು... ನೀನು ನಿಧಾನವಾಗಿ ಉಸಿರಾಡು... ಉಸಿರಿನ ಮೇಲೆ ಗಮನ ಇಡು... ನಿಧಾನವಾಗಿ ನಿನ್ನ ನೆನಪನ್ನು ಪ್ರಸ್ತುತಕ್ಕೆ ತಂದುಕೋ... ಪ್ರಜ್ಞೆಯನ್ನು ಜಾಗೃತಿಗೆ ತಂದುಕೋ... ಹಗುರಾಗಿ ಕಣ್ಣು ತೆರೆ...

`ಇವಳು': ಉಸ್.... ಸುಸ್ತಾಗುತ್ತಿದೆ... ನೀರು ಬೇಕು...

`ಅವಳು': ಆಗಬಹುದು... ಬಹಳ ತೀಕ್ಷ್ಣವಾದ ಕ್ಷಣಗಳನ್ನು "ಅನುಭವಿಸಿ" ಹಿಂತಿರುಗಿದ್ದೀ... ಶಕ್ತಿಗುಂದುತ್ತದೆ... ಸುಧಾರಿಸಿಕೋ...

`ಇವಳು': ಧನ್ಯವಾದಗಳು... ನಾನು ಈ ಅನುಭವ ಪಡೆಯಲು ಸಹಕಾರಿಯಾಗಿದ್ದಕ್ಕೆ ಧನ್ಯವಾದಗಳು...

`ಅವಳು': ಪ್ರತಿವಂದನೆಗಳು. ಈಗ ಹೇಗನಿಸುತ್ತಿದೆ? ಆ ಜೀವನದ ತುಣುಕುಗಳು ನಿನಗೆ ಹೇಗೆ ಪ್ರಸ್ತುತ ಅಂತ ನಿನ್ನ ಭಾವನೆ?

`ಇವಳು': ಪ್ರಸ್ತುತ ಇರಬೇಕು. ನಾನು ಯಾವಾಗಲೂ ನನ್ನ ಗಂಡನನ್ನು ಛೇಡಿಸುತ್ತಿದ್ದೆ, ಪ್ರಶ್ನಿಸುತ್ತಿದ್ದೆ, ನನ್ನೊಳಗೆ ಅಚ್ಚರಿಪಟ್ಟುಕೊಳ್ಳುತ್ತಿದ್ದೆ... ನಾವಿಬ್ಬರು ಇದೊಂದು ಜನ್ಮದಲ್ಲಿ ಮಾತ್ರ ಜೊತೆಯಾಗಿದ್ದೇವಾ... ಅಥವಾ ಹಿಂದೆ ಬೇರೆ ಯಾವುದೋ ಜನ್ಮದಲ್ಲೂ ಜೊತೆಯಾಗಿದ್ದೆವಾ... ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ...

`ಅವಳು': ನಿನ್ನ ಅನುಭವ ನಿನಗೆ ಬೇಕಾದ ಒಂದು ಉತ್ತರ ಕೊಟ್ಟಿದೆ. ಸಂತೋಷ.

`ಇವಳು': ಆದರೆ... ಈ ಎಲ್ಲವನ್ನೂ ನಾನು "ಭಾವಿಸಿದೆ". ಯಾವುದನ್ನೂ ನನ್ನ ಮನದ ಭಿತ್ತಿಯಲ್ಲಿ "ಕಂಡಿಲ್ಲ". ಅದು ಸಹಜವಾ? ಅಥವಾ ಇವೆಲ್ಲ ನನ್ನ ಕಲ್ಪನೆಯಾ? ನೆನಪು ಒಂದು ಭಾವನೆಯ ರೂಪದಲ್ಲಿ ಮಾತ್ರ ಗೋಚರವಾಗಿದ್ದು ಯಾಕೋ ಸರಿ ಅನಿಸುತ್ತಿಲ್ಲ...

`ಅವಳು': ಸರಿ, ನಮ್ಮ ಗುರುಗಳನ್ನೇ ಕೇಳೋಣ... (ಅವಳು ಹೋಗಿ ಈ ಕಾರ್ಯಾಗಾರದ ಮುಖ್ಯ ಸೂತ್ರಧಾರ, ಗುರು, ಡಾ. ಬ್ರಯಾನ್ ವೈಸ್'ರನ್ನು ಕರೆತರುತ್ತಾಳೆ.)

ಡಾ. ವೈಸ್: ಏನಾಯ್ತು? ಏನು ವಿಶೇಷ ನಡೀತು ಇಲ್ಲಿ?

`ಇವಳು': ನನಗೆ ಯಾವುದೋ ನೆನಪು ಇದ್ದಕ್ಕಿದ್ದ ಹಾಗೆ ಬಂತು. ಆದರೆ ಅದು ನಿಜವಾದ ಒಂದು ಜನ್ಮದ ನೆನಪಾ ಅಥವಾ ನನ್ನ ಕಲ್ಪನೆಯಾ ಅನ್ನುವ ಅನುಮಾನ... ಯಾಕಂದ್ರೆ, ನಾನು ಯಾವುದನ್ನೂ "ಕಾಣಲಿಲ್ಲ", ಎಲ್ಲವನ್ನೂ "ಭಾವಿಸಿದೆ". ತೀವ್ರವಾದ ಅನುಭೂತಿ ಇತ್ತು, ಚಿತ್ರಣ ಇರಲಿಲ್ಲ. ಆ ಜೀವನದಲ್ಲಿ ನನ್ನ ಗಂಡನಾಗಿದ್ದವನ ಮುಖ ಕಾಣಲಿಲ್ಲ; ಆದರೆ ಅವನು ಇವನೇ, ಈಗಿನ ಗಂಡನೇ ಅಂತ ಖಚಿತವಾಗಿ ಗೊತ್ತಿತ್ತು. ಇದೆಲ್ಲ ಕಲ್ಪನೆಯೇ? (ಪೂರ್ಣ ಸಂವಾದದ ವಿವರಣೆಯನ್ನು ಡಾ. ವೈಸ್ ಕೇಳಿ ತಿಳಿಯುತ್ತಾರೆ.)

ಡಾ. ವೈಸ್: ಇಲ್ಲ, ಕಲ್ಪನೆ ಅಲ್ಲ. ಕೆಲವರಿಗೆ ಚಿತ್ರಕ-ರೂಪದಲ್ಲಿ ನೆನಪುಗಳ ಅನುಭವ ಆಗೋದಿಲ್ಲ, ಗಾಢವಾದ ಅನುಭೂತಿಯ ರೂಪದಲ್ಲಿ ಇರುತ್ತದೆ ಮತ್ತು ಅದು ಸಾಧ್ಯ ಕೂಡಾ. ಇದು ಅಸಹಜ ಅಲ್ಲ. ನೀನೊಬ್ಬಳೇ ಅಲ್ಲ, ಇಂಥ ಅನುಭವ ಪಡೆದವರು ಹಲವರಿದ್ದಾರೆ. ನನ್ನ ಬಳಿ ಬಂದ ಸುಮಾರು ನಾಲ್ಕು ಸಾವಿರಕ್ಕೂ ಮೀರಿದ ವ್ಯಕ್ತಿಗಳ ಪೈಕಿ ಇಂಥವರು ಬಹಳ ಜನ ಇದ್ದಾರೆ... ಅಲ್ಲದೆ ನೀನು ಕಲ್ಪಿಸಿಕೊಂಡು ಹೇಳಿದಲ್ಲಿ ಆ ಕ್ಷಣಗಳಲ್ಲಿ ಸೂಕ್ತ ಭಾವನೆಗಳು ನಿನ್ನ ಮುಖದಲ್ಲಿ ಸ್ಪಷ್ಟವಾಗಿ ಬರುವ ಸಾಧ್ಯತೆ ಇಲ್ಲ. ಪ್ರಜ್ಞೆಯೊಳಗೆ ಎಲ್ಲವನ್ನೂ ಅನುಭವಿಸಿಕೊಂಡಿದ್ದಲ್ಲಿ ಮಾತ್ರ ಮುಖದಲ್ಲಿ ಅದರ ಭಾವನೆ ಹೊಮ್ಮುವುದಕ್ಕೆ ಸಾಧ್ಯ. ಆದ್ದರಿಂದ ಇದು ಕಲ್ಪನೆ ಅಲ್ಲ. ನೀನು ವಿವರಿಸಿದ ಆಧಾರದ ಮೇಲೆ, ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆ ನೀನು ಅಲ್ಲಿ, ಭಾರತದಲ್ಲಿ ಇದ್ದಿರಬೇಕು ಅಂತ ನನ್ನ ಒಂದು ಅಂದಾಜು...

`ಅವಳು': ಇದೊಂಥರಾ ವಿಶೇಷ ಅನುಭವ... ಇವಳ ಮುಖದಲ್ಲಿ ಸಂತೋಷ, ಬೇಸರ, ದುಃಖ, ನೋವು, ನಿರಾಸೆ, ಬೆಂಕಿ ಹೊತ್ತಿಕೊಂಡಾಗಿನ ಭಯ... ಎಲ್ಲವೂ ಸ್ಪಷ್ಟವಾಗಿದ್ದವು... ಕಣ್ಣಲ್ಲಿ ನೀರು ಜಿನುಗುತ್ತಿತ್ತು. ನನಗಂತೂ ಇದು ಮೊದಲ ಅನುಭವ, ಗಾಬರಿಯಾಗುತ್ತಿತ್ತು....

`ಆತ': ನೀವು ಅದನ್ನು ಬಹಳ ಸೂಕ್ಷ್ಮವಾಗಿ, ನಾಜೂಕಾಗಿ ನಿಭಾಯಿಸಿದಿರಿ, ಅಭಿನಂದನೆಗಳು; ಡಾ. ವೈಸ್, ನಿಮಗೆ ಧನ್ಯವಾದಗಳು.

`ಇವಳು': ಡಾ. ವೈಸ್, ನಿಮಗೆ ಹಾಗೂ, `ಅವಳಿಗೆ' ನನ್ನ ಧನ್ಯವಾದಗಳು...

`ಅವಳು': ನಿಮಗಿಬ್ಬರಿಗೂ ಪ್ರತಿವಂದನೆಗಳು. ಡಾ. ವೈಸ್ ನಿಮಗೆ ನನ್ನದೂ ಧನ್ಯವಾದಗಳು.

ಇಲ್ಲಿ ನಿರೂಪಿತವಾದದ್ದು ಯಾವುದೇ ಕಲ್ಪಿತ ಕಥೆಯಲ್ಲ. ಟೆಕ್ಸಾಸ್'ನ ಆಸ್ಟಿನ್ ನಗರದ "ದ ಕ್ರಾಸಿಂಗ್ಸ್" ಎಂಬಲ್ಲಿ ಡಾ. ಬ್ರಯಾನ್ ವೈಸ್ ಮತ್ತವರ ಮಡದಿ ಕಾರೋಲ್ ವೈಸ್ ನಡೆಸಿಕೊಟ್ಟ "ಪಾಸ್ಟ್ ಲೈಫ್ ಥೆರಪಿ ವರ್ಕ್'ಶಾಪ್" ಎನ್ನುವ ಐದು ದಿನಗಳ ಕಾರ್ಯಾಗಾರದಲ್ಲಿ ನಡೆದ ಒಂದು ಘಟನೆ. ಇಲ್ಲಿ `ಅವಳು' ಮಿಸ್ ಮೇರಿ. `ಆತ' ನನ್ನ ಪತಿ, ಮಹಾದೇವ್. ಮತ್ತು `ಇವಳು' ಇವಳೇ, ನಾನೇ... ಇನ್ನೂ ಯಾವುದೋ ಲೋಕದಲ್ಲಿದ್ದೇನೆ... ಮದುವೆಯಾಗಿ ಇಪ್ಪತ್ತು ವರ್ಷಗಳು ಮುಗಿಯುತ್ತಿರುವಾಗ, ಎರಡು ಸಾವಿರ ವರ್ಷಗಳ ಹಿಂದಿನ ಪ್ರೇಮಿಯನ್ನು ಮತ್ತೆ ಪಡೆದು ಬಂದಿದ್ದೇನೆ!! ಈ ಜೀವನಕ್ಕೆ ಇನ್ನೇನು ಬೇಕು?

Wednesday 3 October, 2007

ಆತ್ಮ ಚಿಂತನ-೦೫

ಹಿಂದಿನ ಕಂತಿನಲ್ಲಿ ಚೀನಾದಲ್ಲಿ ತೀರಿಕೊಂಡ ಮಗಳಿಗೂ ಮದುವೆ ಮಾಡಿಸುವ ಪದ್ಧತಿಯ ಬಗ್ಗೆ ಬರೆದಿದ್ದೆ. ಇಂದೀಗ ನಮ್ಮೂರಲ್ಲೂ ನಡೆಯುವ ಅಂಥದ್ದೊಂದು ಪರಿಪಾಠದ ಬಗ್ಗೆ ಕೊರೆಯುತ್ತೇನೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ಈಗಿನ ಉಡುಪಿ ಜಿಲ್ಲೆ ಮತ್ತು ದ.ಕ. (ಮಂಗಳೂರು) ಜಿಲ್ಲೆ ಜೊತೆಯಾಗಿ) ಸಾಂಸ್ಕೃತಿಕವಾಗಿ ತನ್ನದೇ ಒಂದು ವಿಶೇಷ ಆಯಾಮ ಹೊಂದಿದೆ. ಇಲ್ಲಿನ ಸಾಂಸ್ಕೃತಿಕ ಆಚರಣೆಗಳಲ್ಲಿ ಹಲವಾರು ಸಣ್ಣ ಪುಟ್ಟವು ಸುದ್ದಿಯಾಗದೇ ಗಾಳಿಯಲ್ಲಿ ಕರಗಿ ಹೋಗುತ್ತವೆ. "ಪ್ರೇತಗಳ ಮದುವೆ" ಅನ್ನುವ ಒಂದು ಸಂಪ್ರದಾಯವೂ ಅಂಥವುಗಳಲ್ಲೊಂದು.

ಹೆಚ್ಚಾಗಿ ತುಳುವರಲ್ಲಿ ಈ ಸಂಪ್ರದಾಯ ಜಾರಿಯಲ್ಲಿದೆ. ಮನೆಯಲ್ಲಿ ಮದುವೆಯಾಗದೆ ತೀರಿಕೊಂಡ ಗಂಡು/ಹೆಣ್ಣು ಮಕ್ಕಳಿದ್ದರೆ, ಅದರಲ್ಲೂ ಪ್ರಾಪ್ತವಯಸ್ಕರೇ ಆಗಿದ್ದು, ಅಪಘಾತ, ಆತ್ಮಹತ್ಯೆಗಳಲ್ಲಿ ತೀರಿಕೊಂಡವರಾದರೆ ಇಂಥ ಆಚರಣೆ ಹೆಚ್ಚು. ಅದೂ ಮನೆಯಲ್ಲಿನ ಇನ್ನೊಬ್ಬ ವ್ಯಕ್ತಿಯ ಮದುವೆಗೆ ಕಾರಣಾಂತರಗಳಿಂದ ಅಡಚಣೆಗಳು ಉಂಟಾದಾಗ ಯಾರೋ ಒಬ್ಬರು ಹಿರಿಯರು ಇಂಥ ಒಂದು ಅತೃಪ್ತ ಪ್ರೇತ ಇರಬಹುದಾದ ಬಗ್ಗೆ ನೆನಪಿಸುತ್ತಾರೆ. ಜ್ಯೋತಿಷಿಗಳಲ್ಲಿ, ಕವಡೆ ಶಾಸ್ತ್ರಿಗಳಲ್ಲಿ "ಪ್ರಶ್ನೆ ಕೇಳ"ಲಾಗಿ ತಥಾಕಥಿತ ವಾಸ್ತವವಾಗುತ್ತದೆ. ಮುಂದೇನು ಪರಿಹಾರ? "ಪ್ರೇತದ ಮದುವೆ". ಬಂಧುಗಳು? ಗಂಡು/ಹೆಣ್ಣು?

ಅದಕ್ಕೂ ಸಿದ್ಧ ಉತ್ತರವಿದೆ ಹಿರಿಯರಲ್ಲಿ. ನೆಂಟರೊಳಗೆ, ಇನ್ನೊಂದು ಕುಟುಂಬದಲ್ಲಿಯೂ ಇರಬಹುದಾದ ಇಂತಹ ಅತೃಪ್ತ ಗಂಡು/ಹೆಣ್ಣು ಆತ್ಮ. ಆ ಮನೆಯವರೊಂದಿಗೆ ಮಾತುಕತೆಗೆ ತೊಡಗಲು ಒಬ್ಬ ಮಧ್ಯವರ್ತಿ ನಿಯೋಜಿತನಾಗುತ್ತಾನೆ. ಸರಿಸುಮಾರಾಗಿ ಎಲ್ಲವೂ ನಿಜವಾದ ಮದುವೆ ಸಂಬಂಧದ ಮಾತುಕಥೆಯಂತೆಯೇ ನಡೆಯುತ್ತದೆ (ವಧುದಕ್ಷಿಣೆ, ವರದಕ್ಷಿಣೆಗಳ ಹೊರತಾಗಿ). ಎರಡೂ ಮನೆತನಗಳ ಕುಲಗೋತ್ರಗಳನ್ನು ಜಾಲಾಡಿ, ಗಂಡು-ಹೆಣ್ಣಿನ ನಕ್ಷತ್ರ-ತಾರಾಬಲ ಹೊಂದಿಸಿ ಪ್ರೇತಮದುವೆಗೆ ಪ್ರಶಸ್ತ ಸಮಯವನ್ನೂ ನಿಗದಿಪಡಿಸಲಾಗುತ್ತದೆ. ಎರಡೂ ಕುಟುಂಬಗಳು ಒಪ್ಪಿಗೆಯಾದಲ್ಲಿ ಮದುವೆ ನಡೆದೇ ಬಿಡುತ್ತದೆ- ತೀರಾ ಹತ್ತಿರದ ಸಂಬಂಧಿಗಳನ್ನು ಕರೆದು.

ವಿಚಿತ್ರ? ಆದರೂ ನಿಜ! ಈ ವಿಷಯದ ಬಗ್ಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ತರಂಗ ವಾರಪತ್ರಿಕೆಯಲ್ಲಿ ಬಂದ ಲೇಖನದ ಸಾರಾಂಶವನ್ನು ಮುಂದಿನ ಕಂತಿನಲ್ಲಿ ಕೊಡುತ್ತೇನೆ, ಸರಿಯಾ?