ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday 13 December, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೨

ಕ್ಯಾನಿಯನ್ ಲ್ಯಾಂಡ್ಸ್- ಕಣಿವೆಗಳ ಸಾಮ್ರಾಜ್ಯ....
ಸೆಪ್ಟೆಂಬರ್ ೬, ಭಾನುವಾರ

ಶನಿವಾರದಂದು ಆರ್ಚಸ್ ನ್ಯಾಷನಲ್ ಪಾರ್ಕಿನಲ್ಲಿ ಕಿವಿಗೆ ಬಿದ್ದ ಸುದ್ದಿಯ ದಾರಿಯನ್ನು ಹಿಡಿದು ಇಂದು ಕ್ಯಾನಿಯನ್ ಲ್ಯಾಂಡ್ಸ್ ನೋಡಿಕೊಂಡೇ ಸಾಲ್ಟ್ ಲೇಕ್ ಸಿಟಿ ಕಡೆಗೆ ಸಾಗುವ ನಿರ್ಧಾರ ಮಾಡಿದ್ದಾಗಿತ್ತು. ಹಾಗೆಂದೇ ಭಾನುವಾರದ ಆಲಸ್ಯಕ್ಕೆ ಬೆಳಗ್ಗೆಯೇ ಬೈ ಬೈ ಹೇಳಿದ್ದೆ. ಆದ ಕಾರಣ ಬೇಗನೇ ಕ್ಯಾಂಪ್ ಸೈಟ್ ಖಾಲಿ ಮಾಡಿ ಹೊರಡಲು ಸಾಧ್ಯವಾಯ್ತು. ಒಂಭತ್ತೂವರೆಯ ಹೊತ್ತಿಗೆ ಹೈವೇಯಿಂದ ಕ್ಯಾನಿಯನ್ ಲ್ಯಾಂಡ್ಸ್ ಮುಖ್ಯದ್ವಾರದತ್ತ ಸಾಗುವ ಬೈವೇ ಹಿಡಿದೆವು. ಅಲ್ಲೇ ಒಂದು ನೋಟಕತಾಣದಿಂದ ಕಾಣುವ ಈ ಎರಡು ಬಂಡೆಗಳಿಗೆ ಯುದ್ಧನೌಕೆಗಳ ಹೆಸರುಗಳು:

‘ಮಾನಿಟರ್’ ಮತ್ತು ‘ಮೆರಿಮ್ಯಾಕ್’ (Monitor and Merimac)


ಅಲ್ಲಿಂದ ಹೊರಟು ಉತ್ತರದ ಮುಖ್ಯದ್ವಾರದ ಹತ್ತಿರ ಬಂದಾಗ ಗಂಟೆ ಹತ್ತು.


ಕ್ಯಾನಿಯನ್ ಲ್ಯಾಂಡ್ಸ್ ಮುಖ್ಯವಾಗಿ ಮೂರು ವಿಭಾಗಗಳಲ್ಲಿದೆ. ಆಗ್ನೇಯದಲ್ಲಿ ‘ದ ನೀಡಲ್ಸ್’, ನೈಋತ್ಯದಲ್ಲಿ ‘ದ ಮೇಜ಼್’ ಹಾಗೂ ಉತ್ತರದಲ್ಲಿ ‘ಐಲ್ಯಾಂಡ್ ಇನ್ ದ ಸ್ಕೈ’. ನಾವು ಉತ್ತರದಿಂದ ಪಾರ್ಕಿನೊಳಗೆ ಬಂದು, ಅರ್ಧ ದಿನದ ಸಮಯ ಇಟ್ಟುಕೊಂಡಿದ್ದರಿಂದ ‘ಆಕಾಶದಲ್ಲಿನ ದ್ವೀಪ’ವೊಂದನ್ನೇ ಅರೆಬರೆಯಾಗಿ ನೋಡಿಕೊಂಡು ಓಡಿ ಬಂದೆವು.

ಅಲ್ಲಿನ ಮುಖ್ಯ ತಾಣಗಳಲ್ಲಿ ಕೆಲವೇ ಕೆಲವು ನಿಮಿಷ ಸುತ್ತಾಡಿ, ಸಿಕ್ಕಿದಷ್ಟನ್ನು ಕ್ಯಾಮರಾದೊಳಗೆ ಸೇರಿಸಿಕೊಂಡೆವು.

ಕಲ್ಲು ಚಪ್ಪಡಿಗಳನ್ನೇ ಪೇರಿಸಿ ಮಾಡಿದ ದಾರಿಗಂಬಗಳು ("Rock Cairns" )- ಕಾಲುದಾರಿಯನ್ನು ಗುರುತಿಸಲು ಪ್ರಾಕೃತಿಕ ಉಪಾಯ.
‘ಒಳಹೊರಗು ಗೋಪುರ’ ("Upheavel Dome")- ಈ ಹೊಂಡದ ಬಗೆಗೆ ಕೆಲವಾರು ವಿವರಣೆಗಳಿವೆ.


ಅಲ್ಲೇ ಬದಿಯ ಬಂಡೆಯಲ್ಲಿ ನಿಂತ ಮಳೆನೀರಿಗೆ ಎಂಥ ರುಚಿಯಿತ್ತು...?


ಹೋಲ್ ಮ್ಯಾನ್ ಸ್ಪ್ರಿಂಗ್ ಓವರ್ ಲುಕ್


ಗ್ರೀನ್ ರಿವರ್ ಓವರ್ ಲುಕ್


ಯೋಸೆಮಿಟಿಯ ಹಾಫ್ ಡೋಮ್ ಗೊತ್ತಲ್ಲ! ಅದರ ತಮ್ಮ ಇಲ್ಲೂ ಒಂದು: ಪುಟಾಣಿ ಹಾಫ್ ಡೋಮ್


ಕಾಲುಹಾದಿಯ ಬದಿಗೆ ಪ್ರಾಕೃತಿಕ ಬೇಲಿ


ಗ್ರ್ಯಾಂಡ್ ವ್ಯೂ ಪಾಯಿಂಟ್ ಓವರ್ ಲುಕ್:






‘ವ್ಹಿರ್ಲ್ ವಿಂಡ್ ವಿಸಿಟ್’ ಅನ್ನುವುದನ್ನ ಅಕ್ಷರಶಃ ಪಾಲಿಸಿ ಕ್ಯಾನಿಯನ್ ಲ್ಯಾಂಡ್ಸ್‍ನ ‘ಆಕಾಶ ದ್ವೀಪ’ದಿಂದ ಹೊರಟಾಗ ಒಂದೂವರೆಯ ಸುಮಾರು. ಇಲ್ಲಿಂದ ಸಾಲ್ಟ್ ಲೇಕ್ ಸಿಟಿಗೆ ಸುಮಾರು ನಾಲ್ಕು ಗಂಟೆಯ ಹಾದಿ. ಅದನ್ನು ಪಯಣಿಸಿ, ಹೋಟೆಲ್ ರೂಂ ಹಿಡಿದು ಒಮ್ಮೆಗೆ ‘ಉಸ್ಸಪ್ಪಾ’ ಎಂದೆ (ಸುತ್ತಾಟವು ಸುಸ್ತು ಮಾಡುತ್ತೆ, ಅದೂ ಕೊನೆಕೊನೆಯಲ್ಲಿ). ಮತ್ತೆ ಬಟ್ಟೆ ಬದಲಿಸಿಕೊಂಡು ಉಪ್ಪಿನ ನಗರಿಯಲ್ಲಿ ಸಣ್ಣದೊಂದು ಪ್ರದಕ್ಷಿಣೆ ಬರಲು ಹೊರಟೆವು. ಅದರ ವಿವರಣೆ ಮುಂದಿನ ಕಂತಿಗೆ.

Sunday 6 December, 2009

ರಾಘವೇಂದ್ರ ಪಾಟೀಲರ ‘ತೇರು’- ನನ್ನ ನೋಟದಲ್ಲಿ

‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ’ ಅನ್ನುವ ಗರಿಯನ್ನು ಮುಕುಟದೊಳಗೆ ಧರಿಸಿಕೊಂಡಿರುವ ‘ತೇರು’, ಕಾದಂಬರಿ ಅನ್ನುವುದಕ್ಕಿಂತಲೂ ನೀಳ್ಗತೆ ಅನ್ನಬಹುದಾದ್ದು. ಡಾ. ಸಿ. ಎನ್. ರಾಮಚಂದ್ರನ್ನರ ಮುನ್ನುಡಿ, ಡಾ. ಪುರುಷೋತ್ತಮ ಬಿಳಿಮಲೆಯವರ ಮೆಚ್ಚುನುಡಿ, ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರ ಬೆನ್ನುಡಿಯನ್ನು ಹೊಂದಿ, ಮೂರು ಮುದ್ರಣಗಳನ್ನು ಕಂಡ ಕೃತಿಯಿದು. ಇತಿಹಾಸ ಮತ್ತು ಪುರಾಣದ ನಡುವಿನ ತೆಳುಗೆರೆಯ ಮೇಲೆ ಮೂಡುವ ಜಾನಪದ ಕತೆಯಂತೆ ಭಾಷೆ, ಭಾವ, ಶೈಲಿ, ಸೊಗಡುಗಳಲ್ಲಿ ಆವರಿಸಿಕೊಂಡು ಓದಿಸಿಕೊಳ್ಳುವ ‘ತೇರು’, ಒಂದು ಉತ್ತಮ ಕಥಾನಕ. ಮಲ್ಲಾಡಿಹಳ್ಳಿಯ ಆನಂದಕಂದ ಗ್ರಂಥಮಾಲೆಯು ಹೊರತಂದಿರುವ ಈ ಕೃತಿಯನ್ನು ಬೆಂಗಳೂರಿನ ಚಾಮರಾಜಪೇಟೆಯ ವಿಶ್ವಾಸ್ ಪ್ರಿಂಟರ್ಸ್ ಅಂದವಾಗಿ ಮುದ್ರಿಸಿದ್ದಾರೆ.

ಪರಿಚಯ: ಕೃತಿ ಮತ್ತು ಕರ್ತೃ:

ಕರ್ತೃ ರಾಘವೇಂದ್ರ ಪಾಟೀಲರು ಕಥೆಗಾರ, ಕಾದಂಬರಿಕಾರ, ವಿಮರ್ಶಕ, ಮತ್ತು ಸಂಪಾದಕ. ಒಟ್ಟು ಹದಿನಾರು ಕೃತಿಗಳನ್ನು ಹೊರತಂದಿರುವ ಪಾಟೀಲರು ಹಲವು ವರ್ಷಗಳಿಂದ ‘ಸಾಹಿತ್ಯ ಸಂವಾದ’ ಎಂಬ ನಿಯತಕಾಲಿಕದ ಸಂಪಾದಕರೂ ಹೌದು. ‘ತೇರು’ ಕೃತಿಯ ಮುನ್ನುಡಿಯಲ್ಲಿ ಡಾ. ಸಿ.ಎನ್. ರಾಮಚಂದ್ರನ್ ಅವರು ‘...ಪಾಟೀಲರು ನವ್ಯೋತ್ತರ ಕನ್ನಡ ಕಥೆಗಾರರಲ್ಲಿ ಪ್ರಮುಖರು’ ಎನ್ನುತ್ತಾರೆ. ಇದನ್ನು ಕೇವಲ ಕಾಲಸೂಚಕವಾಗಿ ಉಪಯೋಗಿಸಿಲ್ಲವೆಂದು ವಿವರಿಸುತ್ತಾ- ‘...ಕನ್ನಡದ ‘ಸಣ್ಣಕಥೆ’ ಎಂಬ ಪ್ರಭೇದ ನವ್ಯಯುಗದಲ್ಲಿ ಒಂದು ದಿಕ್ಕಿನಲ್ಲಿ ಅದ್ಭುತವಾಗಿ ಬೆಳೆಯಿತು- ನವ್ಯ ಕಾವ್ಯಕ್ಕೆ ಸರಿಸಾಟಿಯಾಗಿ. (ನವ್ಯ ಸಾಹಿತ್ಯದಲ್ಲಿ ಪ್ರತಿಯೊಂದು ಪ್ರಭೇದವೂ ‘ಕಾವ್ಯ’ದ ಮತ್ತೊಂದು ರೂಪವೇ ಆಗಿತ್ತು; ಅಥವಾ ಆಗಿರಬೇಕು ಎಂಬುದು ನವ್ಯ ಲೇಖಕರ ನಿಲುವಾಗಿತ್ತು ಎಂಬುದು ಇಂದು ಎಲ್ಲರಿಗೂ ಗೊತ್ತಿರುವ ವಿಷಯ.) ಈ ನಿಲುವಿಗೆ ವಿರುದ್ಧವಾಗಿ, ನವ್ಯೋತ್ತರ ಕಥನ ಸಾಹಿತ್ಯ ಮತ್ತೊಂದು ದಿಕ್ಕಿನಲ್ಲಿ- ಸಮಷ್ಟಿ ಚಿಂತನೆ, ಅಂತಃಶಿಸ್ತೀಯ ಸಾಮಾಜಿಕ ಗ್ರಹಿಕೆ, ಭ್ರಮೆ-ವಾಸ್ತವಗಳ ಮಿಶ್ರಣ, ಇತ್ಯಾದಿಗಳ ದಿಕ್ಕಿನಲ್ಲಿ- ಕಥನ ಸಾಹಿತ್ಯದ ಸಾಧ್ಯತೆಗಳನ್ನು ಆಳವಾಗಿ ಶೋಧಿಸಲು ತೊಡಗಿತು. ಈ ಹಿನ್ನೆಲೆಯಲ್ಲಿ ರಾಘವೇಂದ್ರ ಪಾಟೀಲರ ‘ದೇಸಗತಿ’, ‘ಮಾಯಿಯ ಮುಖಗಳು’ (ಕಥಾಸಂಕಲನಗಳು) ಮತ್ತು ‘ತೇರು’ ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತವೆ...’ ಎಂದಿದ್ದಾರೆ.

ತಮ್ಮ ಮೆಚ್ಚುನುಡಿಯಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರು, ‘ತೇರು ಕಾದಂಬರಿಯು ಪಾಟೀಲರು ಸಾಹಿತ್ಯ ಕ್ಷೇತ್ರದಲ್ಲಿ ನಡೆಸುತ್ತಿರುವ ಸೃಜನಶೀಲ ಪ್ರಯೋಗಕ್ಕೆ ಇನ್ನೊಂದು ಉದಾಹರಣೆ. ತುಂಬ ಮನೋಹರವಾಗಿ ಆರಂಭಗೊಂಡು, ಲಲಿತವಾಗಿ ಬೆಳೆಯುತ್ತಾ ಹೋಗುವ ಈ ಕಾದಂಬರಿಯು ಮುಕ್ತಾಯವಾಗುವ ಹೊತ್ತಿಗೆ ಆರಂಭದ ತನ್ನ ರಮ್ಯ ಗುಣಗಳನ್ನು ಕಳಕೊಂಡು ಸಂಕೀರ್ಣವಾಗುತ್ತಾ ವಿಷಾದದ ಎಳೆಗಳನ್ನು ನೇಯುತ್ತಾ ಮನರಂಜನೆಯಾಚೆ ದಾಟುತ್ತದೆ. ಈ ಅರ್ಥದಲ್ಲಿ ಇದು ಜಾನಪದದ ಅಂಶಗಳನ್ನು ಒಡಲಲ್ಲಿ ಇರಿಸಿಕೊಂಡೂ, ಕೇವಲ ಜಾನಪದವಾಗಿ ಉಳಿಯುವುದಿಲ್ಲ. ನಮ್ಮ ಕಾಲದ ಪತನಮುಖೀ ಮೌಲ್ಯಗಳಿಗೆ ಸಂಕೇತವಾಗಿ ಉಳಿಯುತ್ತದೆ... ...ಈ ಕಾದಂಬರಿಯನ್ನು ಓದುತ್ತಿದ್ದಂತೆ ನಮಗೆ ಮಾಸ್ತಿಯವರ ಕತೆ ಹೇಳುವ ತಂತ್ರ ಕಣ್ಣ ಮುಂದೆ ಬರುತ್ತದೆ. ಪುರಾಣ ಕಾಲದ ಹರಿಶ್ಚಂದ್ರನೂ ಹಾದು ಹೋಗುತ್ತಾನೆ. ರಮ್ಯತೆಯೊಳಗಡೆ ವಿಷಾದವನ್ನು ದಾಖಲಿಸುವ ಬೇಂದ್ರೆ ಕಾವ್ಯ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಮೂರು ತಲೆಮಾರಿನ ಕತೆ ಹೇಳಿದ ‘ಮರಳಿ ಮಣ್ಣಿಗೆ’ ಕಾದಂಬರಿಯ ಶಿವರಾಮ ಕಾರಂತರೂ ಪ್ರತ್ಯಕ್ಷರಾಗುತ್ತಾರೆ. ತೇರನೆಳೆಯಲಾರದ ಜನರನ್ನು ಕಂಡರಿಸಿದ ಖಾಸನೀಸರೂ ನೆನಪಾಗದಿರುವುದಿಲ್ಲ... ಇಷ್ಟೆಲ್ಲಾ ನೆನಪುಗಳ ನಡುವೆಯೇ ಪಾಟೀಲರು ‘ಧರಮನಟ್ಟಿ’ಯ ಅನನ್ಯತೆಯನ್ನು ತೇರಿನ ಮೂಲಕ ಕಾಪಾಡಿಕೊಂಡು ಬಂದಿದ್ದಾರೆ. ಮೇಲಿನ ನೆನಪುಗಳ ಮೂಲಕ ಹೊಸ ನೆನಪೊಂದನ್ನು ಸೃಜಿಸಿದ್ದಾರೆ...’ ಎಂದು ಬರೆದಿದ್ದಾರೆ.

ಬೆನ್ನುಡಿಯಲ್ಲಿ, ಕವಿ-ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು, ‘ಕನ್ನಡದ ಜುವಾರಿ ಕತೆಗಾರ ರಾಘವೇಂದ್ರ ಪಾಟೀಲರ ತೇರು ಮುಖ್ಯವಾಗಿ ಸ್ಥಿತ್ಯಂತರವನ್ನು ಕುರಿತ ಕಾದಂಬರಿ. ಕಾಲ ಕಾಲಕ್ಕೆ ಸಂಭವಿಸುವ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಪಲ್ಲಟಗಳು ಮನುಷ್ಯ ಜೀವಿತದ ಗುಣಾತ್ಮಕತೆಯ ಮೇಲೆ ಬೀರುವ ಅಪರಿಹಾರ್ಯವೆನಿಸುವ ಪ್ರಭಾವಗಳನ್ನು ರೂಪಕಾತ್ಮಕ ನೆಲೆಯಲ್ಲಿ ಕಟ್ಟಿಕೊಡುವುದು ತೇರು ಕಾದಂಬರಿಯ ವೈಶಿಷ್ಟ್ಯ’ ಎಂದಿದ್ದಾರೆ. ‘...ಕಾದಂಬರಿಯು ಪುರಾಣದ ಕೀರ್ತನೆಗೋ ವರ್ತಮಾನದ ಭರ್ತ್ಸನೆಗೋ ತೊಡಗದೆ ಬದುಕಿನ ಸೂಕ್ಷ್ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತದೆ... (ಪಾತ್ರಗಳು) ಆಯಾ ಕಾಲದ ಒತ್ತಡವು ನಿರ್ಮಿಸಿದ ಕ್ರಿಯಾಶಕ್ತಿಗಳಾಗಿ ರೂಪದಾಳುವುದಕ್ಕೆ ಲೇಖಕರ ಪಾಕ್ಷಿಕವಲ್ಲದ ಜೀವನಗ್ರಾಹಕ ಶಕ್ತಿಯೇ ಕಾರಣ. ಕೇವಲ ಬದುಕಿನ ಗುಣಾತ್ಮಕತೆಗೆ ಬದ್ಧನಾದ ಲೇಖಕನಿಗೆ ಮಾತ್ರ ತೇರುವಿನಂಥ ಕಾದಂಬರಿಯನ್ನು ಸೃಷ್ಟಿಸುವುದು ಸಾಧ್ಯವಾಗುತ್ತದೆ.’ ಎಂದೂ ಬೆನ್ನು ತಟ್ಟಿದ್ದಾರೆ.

ಸಂಕ್ಷಿಪ್ತ ಕಥಾನಕ:

‘ತೇರು’ ಎನ್ನುವ ಶೀರ್ಷಿಕೆಯ ಜೊತೆಗೇ ‘ಆಧುನಿಕ ಪುರಾಣ’ ಎಂಬ ಉಪಶೀರ್ಷಿಕೆಯನ್ನೂ ಯಶವಂತ ಚಿತ್ತಾಲರಿಂದ ಗಿಟ್ಟಿಸಿಕೊಂಡ ಈ ಕಥೆಗೆ ಪುರಾಣದಂಥ ಕಥಾವಲಯವಿದೆ. ಧರಮನಟ್ಟಿ ಎನ್ನುವ ಪುಟ್ಟ ಊರಿನ ಸುತ್ತ ಹಬ್ಬಿಕೊಳ್ಳುವ ಈ ಕಥೆಗೆ ನೂರೈವತ್ತು ವರುಷಗಳ ಕಾಲದ ಹರಹೂ ಇದೆ. ಒಂದು ದೇಸಗತಿಯ- ಸಣ್ಣ ಸಾಮ್ರಾಜ್ಯವೊಂದರ- ವೈಭವೋಪೇತ ಆರಂಭದ ಸಂದರ್ಭ ಹಾಗೂ ಪ್ರಸ್ತುತದ ಗದ್ದಲದ ರಾಜಕಾರಣದ ವಾತಾವರಣ ಈ ಕಿರುಕಾದಂಬರಿಯಲ್ಲಿ ಮುಖಾಮುಖಿಯಾಗುತ್ತವೆ.

ಧರಮನಟ್ಟಿಯೆಂಬ ದೇಸಗತಿಯನ್ನು ಹುಟ್ಟುಹಾಕಿದ ರಂಗೋ ಪಟವರ್ಧನ ದೇಸಾಯಿಯು ತನ್ನ ಮನೆದೇವರಾದ ವಿಠ್ಠಲನ ಭವ್ಯ ದೇವಾಲಯ ಮತ್ತು ಅದ್ಭುತವೆನಿಸುವಂಥ ಕಲ್ಲಿನ ರಥವನ್ನೂ ಕಟ್ಟಿಸುತ್ತಾನೆ. ದೇವಾಲಯದ ಮೊದಲ ಉತ್ಸವಕ್ಕೂ ಮೊದಲೇ ಅಶುಭ ಸೂಚನೆಗಳಾದರೂ ಕಾರಭಾರಿಯು ಅದನ್ನು ಕಡೆಗಣಿಸುತ್ತಾನೆ. ಉತ್ಸವಕ್ಕೆ ಎಲ್ಲ ತಯಾರಿಗಳು ನಡೆದು ತೇರನ್ನೆಳೆಯುವ ಸಂದರ್ಭದಲ್ಲಿ ಅಶುಭ ಸೂಚನೆಗಳ ಫಲ ಕಂಡುಬರುತ್ತದೆ. ಜನರಿಂದಾಗಲೀ ಕುದುರೆ, ಎತ್ತುಗಳಿಂದಾಗಲೀ ರಥವನ್ನು ಎಳೆಯುವುದಾಗಲೇ ಇಲ್ಲವೆಂಬಂಥ ಸನ್ನಿವೇಶ ಎದುರಾಗುತ್ತದೆ. ಶಾಸ್ತ್ರದ ಅಯ್ಯನವರನ್ನು ಕರೆಸಿ, ಶಾಸ್ತ್ರ ಕೇಳಿ, ಪರಿಹಾರವನ್ನು ತಿಳಿದಾಗ ಮತ್ತೊಮ್ಮೆ ದಿಗ್ಭ್ರಾಂತರಾಗುತ್ತಾರೆ, ದೇಸಾಯರು ಮತ್ತು ಕಾರಭಾರಿಗಳಾದ ತ್ರಿಯಂಬಕ ಭಟ್ಟರು. ಪರಿಹಾರವೆಂದು ಹೇಳಲ್ಪಟ್ಟ ‘ನರಬಲಿ’ಗೆ ತಮ್ಮ ತಮ್ಮ ಮನೆಗಳವರು ಸಾಧ್ಯವಿಲ್ಲವೆಂದು ಅವರವರೇ ನಿರ್ಧರಿಸಿ ‘ಡಂಣಾಯಕ’ನಿಗೆ ಯಾರನ್ನಾದರೂ ಹಿಡಿದು ತಾರೆಂದು ಅಪ್ಪಣೆ ಕೊಡುವಾಗ, ‘ಕಾಟುಕ ಕುಲದವರು ಬೇಕು. ಫಕ್ತ ಉತ್ತಮರ ಕುಲದವರು ಬೇಡ. ಹೆಣ್ಣು ಗಂಡೆಂಬುವ ಭೇದವಿಲ್ಲ; ದೊಡ್ಡವರು ಸಣ್ಣವರೆಂಬ ವಯಸ್ಸಿನ ನಿರ್ಬಂಧ ಇಲ್ಲ. ಯಾರಾದರೂ ಇಸಮನ್ನ ಹಿಡಿದು ತರಬೇಕು’ ಎಂದಾಗುತ್ತದೆ.

ಡಣಾಯಕ ಊರೆಲ್ಲ ಅಲೆದಾಡಿ, ಯಾರಲ್ಲೂ ಈ ಮಾತನ್ನು ಆಡಲಾಗದೆ, ನರಬಲಿಗೆ ಬನ್ನಿರೆಂದು ಕೇಳಲಾಗದೆ, ಸಂಕಟಪಟ್ಟುಕೊಂಡು ಹಿಂದಿರುಗಿ ಬಂದು, ಮನೆಯಲ್ಲಿ ತಲೆಗೆ ಕೈಕೊಟ್ಟು ಕುಳಿತಿರುವಾಗ ಆತನ ಮಡದಿ ಪಾರೋತಿ ಅವನನ್ನು ಸಮಾಧಾನಿಸುತ್ತಾಳೆ. ತಾನು ಕಂಡ ಬಡ ಕುಟುಂಬವೊಂದನ್ನು ಭೇಟಿಯಾಗಿ, ‘ವ್ಯಾಪಾರೀ ಬುದ್ಧಿ’ ಉಪಯೋಗಿಸಿ, ಒಂಭತ್ತು ಮಕ್ಕಳ ಬಡ ತಂದೆ ಗೊಂಬೀರಾಮರ ದ್ಯಾವಪ್ಪನನ್ನು ‘ಜ್ವಾಳ-ಗೋದೀ-ಬ್ಯಾಳೀ-ಬೆಲ್ಲ’ಗಳ ಉಡುಗೊರೆಯಿಂದ ಒಪ್ಪಿಸಿ, ಎಂಟೆಕರೆ ಜಮೀನಿನ ಆಮಿಷ ಒಡ್ಡಿ, ಆತನ ‘ನಡುಕಲ ಹುಡುಗ ಚಂದ್ರಾಮ’ನನ್ನು ನರಬಲಿಗಾಗಿ ‘ಕೊಂಡು’ ಮನೆಗೆ ಬರುತ್ತಾಳೆ. ವಿರೋಧ ವ್ಯಕ್ತಪಡಿಸಿದ್ದ ದ್ಯಾವಪ್ಪನ ಬಸುರಿ ಹೆಂಡತಿಯನ್ನು ಗಮನದಲ್ಲಿರಿಸಿ ಅವರೆಲ್ಲ ರಾತ್ರೆಯೇ ತಪ್ಪಿಸಿಕೊಂಡು ಹೋಗದಂತೆ ಕಾವಲು ಹಾಕಲು ಗಂಡನಿಗೆ ಹೇಳಿ ಎಲ್ಲ ವ್ಯವಸ್ಥೆಯನ್ನು ಮಾಡಿಸುತ್ತಾಳೆ. ಮರುದಿನ, ಚೈತ್ರ ಶುಕ್ಲ ನವಮಿಯಂದೇ ಪುಟ್ಟ ಬಾಲಕ ಚಂದ್ರಮನ ಬಲಿಯೊಂದಿಗೆ ವಿಠ್ಠಲದೇವರ ರಥೋತ್ಸವವೂ ಸಾಂಗವಾಗುತ್ತದೆ.

[ಇಲ್ಲಿಯವರೆಗಿನ ಕಥಾನಕವನ್ನು, ಕಾದಂಬರಿಯ ಒಂದು ನಿರೂಪಕ ಪಾತ್ರವಾಗಿರುವ ಪತ್ರಕರ್ತ ಪಾಟೀಲ, ಗೋಕಾವಿಯ ಬಸ್‍ಸ್ಟ್ಯಾಂಡಿನಲ್ಲಿ ಇನ್ನೊಂದು ನಿರೂಪಕ ಪಾತ್ರವಾಗಿರುವ ಸ್ವಾಂವಜ್ಜನನ್ನು ಭೇಟಿಯಾಗಿ, ಆತನಿಂದ ಧರಮನಟ್ಟಿಯ ತೇರಿನ ಮತ್ತು ಉತ್ಸವದ ಸುದ್ದಿ ತಿಳಿದು ಅದನ್ನು ನೋಡಲು ಹೋಗುವಂತೆ, ಅಲ್ಲಿ ತೇರಿನ ಹಿಂದಿನ ರಾತ್ರಿ ವೃತ್ತಿಗಾಯಕರಾದ ಗೊಂದಲಿಗರು ತಲಾಂತರದ ಕಥೆಯನ್ನು ಹಾಡುವಂತೆ- ದೇಸಾಯರು ಕಟ್ಟಿಸಿದ ರಥದ ವರ್ಣನೆ, ನರಬಲಿಯ ಕಥನ, ರಕ್ತ ತಿಲಕದ ಪದ್ಧತಿಯ ವಿವರಗಳು- ‘ಗೊಂದಲಿಗರ ಗಾಯನ’ ರೂಪದಲ್ಲೇ ಈ ಕಾದಂಬರಿಯೊಳಗೆ ಹೆಣೆದುಕೊಳ್ಳಲಾಗಿದೆ. ಇಲ್ಲಿಂದ ಮುಂದಿನ ಕಥೆಗೆ ಕೃತಿಕಾರ, ಪತ್ರಕರ್ತ ಪಾಟೀಲ, ಸ್ವಾಂವಜ್ಜ ನಿರೂಪಕರಾಗುತ್ತಾರೆ.]

ದ್ಯಾವಪ್ಪನಿಗೆ ಸಮೀಪದ ಗ್ರಾಮ ಕಳ್ಳೀಗುದ್ದಿಯಲ್ಲಿ ಎಂಟೆಕರೆ ಭೂಮಿಯನ್ನು ಕೊಡಲಾಗುತ್ತದೆ. ದ್ಯಾವಪ್ಪ ತನ್ನ ಉಳಿದ ಎಂಟು ಮಕ್ಕಳನ್ನೂ, ಬಸುರಿ ಮಡದಿಯನ್ನೂ ಅಲ್ಲಿಗೆ ಕರೆದೊಯ್ದು, ಮೊದಲು ಗುಡಿಸಲು, ನಂತರ ಮನೆಯನ್ನೇ ಕಟ್ಟಿಕೊಂಡು ಕಳ್ಳೀಗುದ್ದಿಯಲ್ಲಿ ನೆಲೆಸುತ್ತಾನೆ. ದೇಸಾಯರ ಕಾರಬಾರಿ ತ್ರಿಯಂಬಕ ಭಟ್ಟರು ಈ ಘಟನೆಯನ್ನು ಅಲ್ಲಿಗೇ ಬಿಡದೆ, ಅದನ್ನೊಂದು ಪದ್ಧತಿಯನ್ನಾಗಿಸುತ್ತಾರೆ. ಇದನ್ನೇ ದೇಸಾಯರ ಆಜ್ಞೆಯಂತೆ ಸನದಾಗಿಸಿ ದ್ಯಾವಪ್ಪನಿಗೆ ಕೊಡಲಾಗುತ್ತದೆ. ‘ವಿಠ್ಠಲದೇವರ ಉತ್ಸವಕ್ಕೆ ಮುನ್ನ ಪ್ರತೀ ವರ್ಷವೂ ದ್ಯಾವಪ್ಪ, ನಂತರ ಅವನ ವಂಶದವರು, ರಥದ ಕಲ್ಲಿನ ಗಾಲಿಗೆ ಹಣೆಹೊಡೆದುಕೊಂಡು, ರಕ್ತವನ್ನು ರಥದ ಮೂಡಲ ದಿಕ್ಕಿನ ಮುಖಕ್ಕೆ ತಿಲಕವಾಗಿಸುವುದು’ ಉತ್ಸವದ ಅವಿಭಾಜ್ಯ ಅಂಗವಾಗಿ ಆಚರಣೆಗೆ ಬರುತ್ತದೆ. ಗೊಂಬೀರಾಮರ (ತೊಗಲು/ ಸೂತ್ರದ ಗೊಂಬೆಯಾಟದ) ಕಸುಬಿನ ದ್ಯಾವಪ್ಪ ಮತ್ತವನ ಮನೆತನವೇ ಈ ವಿಠ್ಠಲ ದೇವಸ್ಥಾನಕ್ಕೆ ಬದ್ಧವಾಗಿರಬೇಕಾದ ಎಳೆ ಬೆಸೆದುಕೊಳ್ಳುತ್ತದೆ.

ಧರಮನಟ್ಟಿಯ ವಿಠ್ಠಲದೇವರಿಗೆ ಮಗನನ್ನು ಬಲಿಕೊಟ್ಟ ದ್ಯಾವಪ್ಪನಿಗೆ ತಾನೇನೋ ವಿಶೇಷವಾದದ್ದನ್ನು ಮಾಡಿದೆನೆಂಬ ನಂಬಿಕೆ ಗಾಢವಾಗುತ್ತಾ ಹೋಗುತ್ತದೆ. ಆತ, ವಿಠ್ಠಲ ದೇವರಲ್ಲಿ ಅಚಲ ಭಕ್ತಿ, ಶ್ರದ್ಧೆ, ವಿಶ್ವಾಸಗಳನ್ನು ಬೆಳೆಸಿ, ಇರಿಸಿಕೊಂಡು ತನ್ನ ರಕ್ತತಿಲಕದ ಸೇವೆಯನ್ನು ತನ್ನ ವಂಶಜರು ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು ಬರಬೇಕೆಂಬುದಾಗಿ ಬಯಸುತ್ತಾನೆ. ಅದಕ್ಕಾಗಿ ತಾನೇ ಒಂದು ನಿಯಮಾವಳಿಯನ್ನು ರೂಪಿಸಿಕೊಂಡು ಅದನ್ನು ಅನೂಚಾನವಾಗಿ ನಡೆಸಿಕೊಂಡೂ ಬರುತ್ತಾನೆ. ತೇರಿನ ಉತ್ಸವಕ್ಕೆ ಇನ್ನೂ ಒಂದೂವರೆ ತಿಂಗಳಿದೆ ಅನ್ನುವಾಗಲೇ ‘ರಕ್ತ ಶುದ್ಧೀಕರಣ’ಕ್ಕಾಗಿ ಇಪ್ಪತ್ತು ದಿನಗಳ ಔಷಧ-ಪಥ್ಯ ಶುರುಮಾಡಿಕೊಂಡು, ಅದು ಮುಗಿದ ನಂತರ ಇಪ್ಪತ್ತು ದಿನಗಳ ಕಾಲ ಸುತ್ತಮುತ್ತಲ ದೇವಸ್ಥಾನಗಳಿಗೆ ತೀರ್ಥಯಾತ್ರೆ ಮಾಡಿಕೊಂಡು ತೇರಿನ ಮೂರು ದಿನ ಮೊದಲೇ- ಚೈತ್ರ ಶುಕ್ಲ ಷಷ್ಟಿಯ ಸಂಜೆಯೇ- ಧರಮನಟ್ಟಿಯನ್ನು ತಲುಪುತ್ತಾನೆ. ಅಲ್ಲಿ ಆತನಿಗೆ ಬಹುದೊಡ್ಡ ಮರ್ಯಾದೆಯೇ ದೊರೆಯುತ್ತದೆ. ಜನರು ಗೌರವ ತೋರುತ್ತಾರೆ; ಭಕ್ತಿಯಿಂದ ಅವನಿಗೆ, ತದನಂತರ ಅವನ ವಂಶಜರಿಗೆ ಕಾಯಿ, ಧೋತರ, ಅಕ್ಕಿ, ಬೇಳೆ, ಬೆಲ್ಲ, ಮೊದಲಾಗಿ ಕಾಣಿಕೆ ಒಪ್ಪಿಸುತ್ತಾರೆ. ಅವನ್ನೆಲ್ಲ ಚಕ್ಕಡಿಯಲ್ಲಿ ಹಾಕಿಸಿಕೊಂಡು ಕಳ್ಳೀಗುದ್ದಿ ಸೇರುವಂತಾಗುವಷ್ಟು ಈ ಕಾಣಿಕೆಗಳ ಮೊತ್ತ ಬೆಳೆಯುತ್ತದೆ. ಮೊದಮೊದಲು ದ್ಯಾವಪ್ಪನನ್ನು ವಿರೋಧಿಸುತ್ತಿದ್ದ, ಬೈಯುತ್ತಿದ್ದ ಲಗಮವ್ವನಿಗೆ, ಅಲ್ಪಕಾಲದಲ್ಲೇ ತನ್ನ ಗಂಡನ ‘ಮಹಾತ್ಮೆ’ಯ ಅರಿವಾಗುತ್ತದೆ. ಸಂಪೂರ್ಣ ಸಹಕಾರ ನೀಡುತ್ತಾಳೆ. ವರ್ಷಗಳು ಕಳೆದಂತೆ ದ್ಯಾವಪ್ಪ ಸಂತನಂತಾಗುತ್ತಾನೆ. ಕ್ರಮೇಣ ನರಬಲಿಯ ಪ್ರಸಂಗ ಪುರಾಣದಂಥ ಮುಖ ಪಡೆಯುತ್ತದೆ. ಅದೇ ಸಮಯದಲ್ಲೇ, ತೇರಿನ ಹಿಂದಿನ ರಾತ್ರಿ- ಅಷ್ಟಮಿಯ ರಾತ್ರಿ- ಗೊಂದಲಿಗರು ಗಾಯನದ ಮೂಲಕ ಧರಮನಟ್ಟಿಯ ತೇರನ್ನು ಅಂದವಾಗಿ ವಿವರಿಸಿ, ನರಬಲಿಯ ಕಥೆಯನ್ನು ಹಾಡುವ ಪರಂಪರೆಯೂ ಬೆಳೆದುಬಂದು ‘ಧರಮನಟ್ಟಿಯ ತೇರು’ ಚರಿತ್ರೆಯನ್ನು ಮೀರಿದ ಐತಿಹ್ಯವಾಗುತ್ತದೆ.

ಇಲ್ಲಿಂದ ಮುಂದೆ ಓದುಗರನ್ನು ಎದುರಾಗುವುದು ಮೂಲ ದ್ಯಾವಪ್ಪನ ಆರನೇ ತಲೆಮಾರಿನವನಾದ ಆಧುನಿಕ ದ್ಯಾವಪ್ಪ. ಆತನ ಹೊಸ ವಿಚಾರಗಳು, ಗೊಂದಲಭರಿತ ಯೋಚನೆ-ಯೋಜನೆಗಳು ಊರಿನವರಲ್ಲಿ ಅಸಹನೆ ಹುಟ್ಟಿಸುತ್ತವೆ. ‘ನವ ನಿರ್ಮಾಣ ಚಳುವಳಿ’ಯಲ್ಲಿ ಭಾಗವಹಿಸಿ, ಮೂರು ತಿಂಗಳ ಜೈಲುವಾಸ ಅನುಭವಿಸಿ, ಊರಿಗೆ ಬರುವ ಮುನ್ನ ಬೆಂಗಳೂರಿನಲ್ಲಿ ಪತ್ರಕರ್ತ ಪಾಟೀಲರನ್ನು ಭೇಟಿಯಾಗುತ್ತಾನೆ. ಧರಮನಟ್ಟಿಯಲ್ಲಿ ಅವನ ಬಗ್ಗೆ ಊಹಾಪೋಹಗಳು ಎದ್ದಿರುತ್ತವೆ. ಅವನಿಗೆ ದೇವರಲ್ಲಿ, ಪದ್ಧತಿ-ಆಚರಣೆಗಳಲ್ಲಿ ನಂಬಿಕೆ ಕಳೆದಿರುತ್ತದೆ. ಅಂತೆಯೇ ಸರಕಾರದ ವ್ಯವಸ್ಥೆಗಳು, ಕಾನೂನು-ಕಟ್ಟಳೆಗಳು, ಸಾಮಾಜಿಕ ರೀತಿ-ನೀತಿಗಳು ಅವನ ರೋಷಕ್ಕೆ ಕಾರಣವಾಗಿರುತ್ತವೆ. ಎಲ್ಲದರ ವಿರುದ್ಧವೂ ಆತನಿಗೆ ಅಸಮಾಧಾನ. ಅದೇ ಸಮಯದಲ್ಲಿ, ರಂಗೋ ಪಟವರ್ಧನ ದೇಸಾಯರು ಕೊಡಮಾಡಿದ್ದ ಎಂಟೆಕರೆ ಜಮೀನನ್ನು ಕಳ್ಳೀಗುದ್ದಿಯ ಗೌಡ ‘ಗೇಣಿದಾರನಿಗೆ ಮಾಲಕತ್ವದ ಹಕ್ಕು ಕಾಯಿದೆ’ಯನ್ನು ದುರುಪಯೋಗಪಡಿಸಿಕೊಂಡು ಎಲ್ಲವನ್ನೂ ತಾನು ಕಬಳಿಸಿದ್ದೂ ಕೂಡಾ ದ್ಯಾವಪ್ಪನ ನೋವಿಗೆ ಕಾರಣವಾಗಿರುತ್ತದೆ. ಆದರೂ ಕೆಲವಾರು ವರ್ಷಗಳ ಕಾಲ ಆತ ‘ರಕ್ತ ತಿಲಕದ ಸೇವೆ’ ನಡೆಸಿಕೊಂಡು ಬರುತ್ತಾನೆ. ಅದಾಗಲೇ ಅವನತಿಯನ್ನು ಕಾಣುತ್ತಿದ್ದ ಮೂಲ ಮುತ್ಯಾನ ಕಟ್ಟುನಿಟ್ಟಿನ ಆಚರಣೆಗಳು, ಪದ್ಧತಿಗಳು ಮತ್ತೂ ಕರಗುತ್ತವೆ. ಧರಮನಟ್ಟಿಯಲ್ಲಿ ದ್ಯಾವಪ್ಪ ನಗೆಚಟಾಕಿಯ ವಸ್ತುವಾಗಿಬಿಡುತ್ತಾನೆ.

ಧರಮನಟ್ಟಿಯ ತೇರಿಗೆ ನೂರೈವತ್ತು ವರ್ಷವಾದ ಸಂದರ್ಭದಲ್ಲಿ ಸ್ವಾಂವಜ್ಜನ ಪತ್ರವನ್ನು ಮನ್ನಿಸಿ, ಪತ್ರಕರ್ತ ಪಾಟೀಲ ತನ್ನ ಸಂಸಾರ ಸಮೇತ ಅಲ್ಲಿಗೆ ತಲುಪುತ್ತಾನೆ. ಮರುದಿನವೇ ಷಷ್ಟಿ. ದ್ಯಾವಪ್ಪ ಅದೇ ಸಂಜೆ ಊರಿನ ತೆಂಕಣ ದಿಕ್ಕಿನ ಅಗಸಿಗೆ ಬರುವವನು. ಪಾಟೀಲನೊಡನೆ ಮಾತಾಡುತ್ತಾ ಸ್ವಾಂವಜ್ಜ ತನಗೆ ದ್ಯಾವಪ್ಪನ ಬಗೆಗಿರುವ ಅಸಂತೋಷವನ್ನು ತೋಡಿಕೊಳ್ಳುತ್ತಾನೆ. ದೇವಸ್ಥಾನದ ಸಮಿತಿಯಿಂದ ತನ್ನ ಸೇವೆಗಾಗಿ ಮತ್ತು ಖರ್ಚಿಗಾಗಿ ‘ಧಾರಣೆ’ಯ ಮಾತಾಡಿ ಹಣ ವಸೂಲಿ ಮಾಡುತ್ತಿದ್ದಾನೆ. ಮೂಲ ದ್ಯಾವಪ್ಪನಿಗೆ ದೇಸಾಯರು ಕೊಡಮಾಡಿದ್ದ ಜಮೀನನ್ನು ಅವನೂರಿನ ಗೌಡ ಹೊಡೆದುಕೊಂಡದ್ದರ ಬಗೆಗೆ ಅಜ್ಜನಿಗೆ ಅನುಕಂಪವಿದ್ದರೂ ‘ಸೇವೆ’ಯನ್ನು ‘ವ್ಯಾಪಾರೀಕರಣ’ಗೊಳಿಸಿದ್ದು ಆತನಿಗೆ ಸಹ್ಯವಿಲ್ಲ. ಆದರೂ ಷಷ್ಟಿಯಂದು ನಡುರಾತ್ರೆಯಾದರೂ ಬಾರದ ದ್ಯಾವಪ್ಪನನ್ನು ಹುಡುಕಿಸಲು ಮರುದಿನ ವ್ಯವಸ್ಥೆ ಮಾಡುತ್ತಾನೆ ಸ್ವಾಂವಜ್ಜ. ಸಪ್ತಮಿಯ ದಿನದ ಈ ಹುಡುಕಾಟದಲ್ಲಿ ದ್ಯಾವಪ್ಪನ ಸುಳಿವು ಸಿಗದೆ, ಅದರ ಮಾರನೇ ದಿನ- ತೇರಿನ ಮುನ್ನಾದಿನ- ಅಷ್ಟಮಿಯಂದು, ಗೋಕಾವಿಗೆ ಹುಡುಗರನ್ನು ಕಳುಹಿಸುವ ಸಿದ್ಧತೆಯಲ್ಲಿರುವಾಗ ವಿಠ್ಠಲ ದೇವರ ಪೂಜಾರಿ ಸ್ವಾಂವಜ್ಜನನ್ನು ಅರಸಿಕೊಂಡು ಬಂದು, ಗರ್ಭಗುಡಿಯ ಬೀಗ ಮುರಿದು ಗುಡಿ ಲೂಟಿಯಾಗಿದೆ, ದೇವರ ಆಭರಣಗಳೆಲ್ಲವೂ ಕಳವಾಗಿವೆ ಎನ್ನುವುದನ್ನು ತೊದಲುತ್ತಾ ನುಡಿಯುತ್ತಾನೆ. ಅಜ್ಜ ಆಘಾತದಿಂದ ಸಾವರಿಸಿಕೊಂಡು ಗುಡಿಯತ್ತ ಧಾವಿಸುತ್ತಾನೆ. ಎಲ್ಲರೂ ಅಲ್ಲೇ ಸೇರುತ್ತಾರೆ. ಊರಿನ ತರುಣರ ಮುಖಗಳು ಈಗ ಇಲ್ಲಿ ಕಾಣಬರುತ್ತವೆ. ಇಲ್ಲಿಯತನಕ, ಎಲ್ಲ ವ್ಯವಸ್ಥೆಗಳಿಗೆ ತಲೆಕೊಟ್ಟು, ಹಿರಿಯನಾಗಿ ನಿಂತಿದ್ದ ಸ್ವಾಂವಜ್ಜನನ್ನು ಕುರಿತು, ‘ನೀನು ಜೈನರವ, ನಮ್ಮ ಗುಡಿ ಲೂಟಿಯಾದರೆ ನಿನಗೇನು’ ಎಂಬ ಮಾತು ಹೊರಟು, ಎಲ್ಲೆಲ್ಲೋ ತಿರುಗಿ, ಜಾತಿ, ರಾಜಕೀಯ, ಪ್ರಜಾಪ್ರಭುತ್ವ, ಡೆಮಾಕ್ರಸಿ, ಎಳೆಯರಿಗೆ ನಾಯಕತ್ವ, ‘ಸಾಲಿ ಕಲಿತವರಿಗೆ ಗೌರವ’, ಊರಿನ ಅಧಿಕಾರ/ಹಕ್ಕು, ಮುಂತಾದ ಮಾತುಗಳೆಲ್ಲವೂ ನುಸುಳಿ, ತರುಣರ ಎಳೆ-ಬಿಸಿ ರಕ್ತದ ರೋಷ ಮೇಲೆದ್ದು ದೇವಸ್ಥಾನದ ಎದುರು ಮಾರಾಮಾರಿಯಾಗುತ್ತದೆ. ಸ್ವಾಂವಜ್ಜ ತೀರಾ ನೊಂದುಕೊಂಡು ಅಲ್ಲಿಂದ ಹೊರಡುವಾಗಲೇ ಪೋಲೀಸ್ ಜೀಪು ಗುಡಿಯ ಮುಂದೆ ಬಂದು ನಿಲ್ಲುತ್ತದೆ.

ಅದಾಗಿ ಮತ್ತೆ ಆರು ವರ್ಷಗಳ ಬಳಿಕ ಧರಮನಟ್ಟಿಗೆ ಬಂದ ಪತ್ರಕರ್ತ ಪಾಟೀಲನಿಗೆ ಸ್ವಾಂವಜ್ಜನ ಸಾವಿನ ಸುದ್ದಿ ದೊರೆಯುತ್ತದೆ. ಅಲ್ಲಿಂದ ಆತ ಕಳ್ಳೀಗುದ್ದಿಗೆ ಹೋಗಿ ಗೌಡನನ್ನು ಭೇಟಿಯಾದಾಗ ಅವನಿಂದ ದ್ಯಾವಪ್ಪನ ಇನ್ನೊಂದೇ ಚಿತ್ರ ತೆರೆದುಕೊಳ್ಳುತ್ತದೆ. ಆತನೇ ಧರಮನಟ್ಟಿಯ ಗುಡಿಯನ್ನು ಲೂಟಿಮಾಡಿದ್ದೆಂದೂ, ನಂತರ ನಕ್ಸಲನಾದನೆಂದೂ, ಈಗ ಒಂದು ಕಾಲು ಕಳೆದುಕೊಂಡು ಅದೆಲ್ಲಿಯೋ ಆರೇನಾಡಿನಲ್ಲಿ ತಿರುಗಿಕೊಂಡು ಇದ್ದಾನೆಂದೂ ಗೌಡ ಅಧಿಕಾರಪೂರ್ವಕ ಹೇಳುತ್ತಾನೆ. ಹೀಗೆ, ದ್ಯಾವಪ್ಪನನ್ನು ಹುಡುಕಿಕೊಂಡು ಹೋಗುವ ಪತ್ರಕರ್ತ ಪಾಟೀಲನಿಗೆ ಎದುರಾಗುವುದು ಆತನ ಬಗೆಗೆ ಹಬ್ಬಿಕೊಂಡ ಊಹಾಪೋಹಗಳು, ಗುಲ್ಲುಗದ್ದಲಗಳು. ಕೊನೆಯಲ್ಲಿ, ಉದಗಟ್ಟಿಯಲ್ಲಿ, ಆತ ಮದುವೆಯಾಗಲು ಬಯಸಿದ್ದ ಬಾಲವಿಧವೆ ಬಾಳವ್ವನಿಂದ ಆಧುನಿಕ ದ್ಯಾವಪ್ಪನ ವೈಚಾರಿಕತೆಯ, ಆದರ್ಶದ ಮುಖದ ಪರಿಚಯವಾಗುತ್ತದೆ. ಅಲ್ಲಿಗೆ ಕಥಾನಕವನ್ನೂ ಕೊನೆಯಾಗಿಸುತ್ತಾರೆ ಲೇಖಕ.

ಕೆಲವು ಪ್ರಮುಖ ಪಾತ್ರಗಳು:

ಸ್ವಾಂವಜ್ಜ:
ಸ್ವಾಂವಜ್ಜ- ಧರಮನಟ್ಟಿಯ ನೈತಿಕ, ಸಾಮಾಜಿಕ ಪ್ರಜ್ಞೆಯಂತೆ ಭಾಸವಾಗುವ ವ್ಯಕ್ತಿ. ಅಂಥವರು ಪ್ರತೀ ಊರಿಗೆ ಒಬ್ಬಿಬ್ಬರಾದರೂ ಇರುತ್ತಾರೆ, ಇರಲೇಬೇಕು ಅನಿಸುವಂತಿದೆ ಆತನ ವ್ಯಕ್ತಿತ್ವ. ಧರಮನಟ್ಟಿಯ ಹಿರಿಯ ತಲೆಗಳಲ್ಲಿ ಒಬ್ಬನಾದ ಸ್ವಾಂವಜ್ಜ, ಊರಿನ ಒಳಹೊರಗನ್ನು ಅರಿತವ, ರೀತಿ ರಿವಾಜುಗಳನ್ನು ತಿಳಿದವ. ಪತ್ರಕರ್ತ ಪಾಟೀಲನನ್ನು ಗೋಕಾವಿಯ ಬಸ್‍ಸ್ಟ್ಯಾಂಡಿನಲ್ಲಿ ಭೇಟಿಯಾಗಿ ಧರಮನಟ್ಟಿಯ ದೇವಾಲಯದ ಮತ್ತು ತೇರಿನ ಕಥನಕ್ಕೆ ನಾಂದಿ ಹಾಡುವ ಈ ಮುದುಕ, ತಾನು ‘ಜಯ್ಯಾರವ’ (ಜೈನ ಕುಲದವ) ಅನ್ನುತ್ತಲೇ ವಿಠ್ಠಲ ದೇವರಿಗೆ ಬದ್ಧನಾಗಿದ್ದವ. ಧರಮನಟ್ಟಿ ದೇಸಗತಿಯ ಕಥೆಯನ್ನು ಪಾಟೀಲನಿಗೆ ಹೇಳುತ್ತಲೇ ಅದರಲ್ಲಿ ಮಗ್ನನಾಗಿಬಿಡುವವ. ಪತ್ರಕರ್ತನನ್ನು ತನ್ನೂರಿಗೆ ಕರೆದೊಯ್ದು ಬೆಂಗಳೂರಿಗೆ ಧರಮನಟ್ಟಿಯ ಬಾಂಧವ್ಯ ಬೆಸೆದವ.

ಸಾಮಾನ್ಯವಾಗಿ ಎಲ್ಲ ಊರಿನ ಹಿರಿಯರೂ ನಡೆದುಕೊಳ್ಳುವಂತೆಯೇ, ಮಾತಾಡುವಂತೆಯೇ, ಈತನೂ ಎಲ್ಲ ಜವಾಬ್ದಾರಿಯನ್ನೂ ತನ್ನ ಮೇಲೆ ಹೊತ್ತುಕೊಂಡು, ಅದನ್ನು ನಿಃಸ್ವಾರ್ಥದಿಂದ ನಡೆಸಿಕೊಂಡು ಬರುತ್ತಾನೆ. ಈತ ನಮಗೆ ಎದುರಾಗುವುದು ಪಾಟೀಲ ಧರಮನಟ್ಟಿಗೆ ಭೇಟಿಯಿತ್ತಾಗ ಮಾತ್ರ, ಅಂದರೆ ತೇರಿನ ಸಂದರ್ಭಗಳಲ್ಲಿ ಮಾತ್ರ. ಆವಾಗೆಲ್ಲ ಉತ್ಸವದ ಸುತ್ತಮುತ್ತಲ ಆಗುಹೋಗುಗಳಲ್ಲಿ ಈತನ ಉತ್ಸಾಹ ಮತ್ತು ತೊಡಗಿಸಿಕೊಳ್ಳುವಿಕೆ, ಊರಿನ ಹಿರಿಯರಲ್ಲಿ ಒಬ್ಬನಾದ್ದರಿಂದ ವಿಶೇಷ ಅನಿಸಿಕೊಳ್ಳದಿದ್ದರೂ, ‘ನಾನು ಜಯ್ಯಾರವ’ ಎನ್ನುವ ಅವನ ಮಾತಿನ ಹಿನ್ನೆಲೆಯಲ್ಲಿ ಅವೆಲ್ಲ ಎದ್ದು ಕಾಣುತ್ತವೆ. ಕಥಾನಕದ ಕೊನೆಯ ತನಕವೂ ಸ್ವಾಂವಜ್ಜನ ಈ ಉತ್ಸಾಹದ ಬಗ್ಗೆ ಊರಿನವರಿಗೆ ಯಾವುದೇ ತಕರಾರಿಲ್ಲವೇನೋ ಅನಿಸುವಂತೆಯೇ ನಡೆದುಕೊಂಡು ಹೋಗುತ್ತದೆ. ನೂರೈವತ್ತನೆಯ ತೇರಿನ ಮೊದಲು, ಷಷ್ಟಿಯ ಸಂಜೆಯೇ ಬರಬೇಕಾಗಿದ್ದ ರಕ್ತ ತಿಲಕದ ಸೇವೆಯ ದ್ಯಾವಪ್ಪ ಬರದೇ ಇದ್ದಾಗ ಊರವರನ್ನು ಸಮಾಧಾನವಾಗಿರಿಸಿ, ಮರುದಿನ ಅವನನ್ನು ಹುಡುಕಿ ಕರೆತರಲು ಅವನು ಇದ್ದಿರಬಹುದಾದ ಉದಗಟ್ಟಿಗೆ ಹುಡುಗರನ್ನು ಕಳುಹಿಸುತ್ತಾನೆ. ಅಲ್ಲಿಂದ ಹುಡುಗರು ಬರಿಗೈಯಲ್ಲಿ ಬಂದಾಗ ಅದರ ಮಾರನೇ ದಿನ, (ತೇರಿನ ಮುನ್ನಾದಿನವೇ) ದ್ಯಾವಪ್ಪನನ್ನು ಹುಡುಕಿಸಲು ಗೋಕಾವಿಗೆ ಹುಡುಗರು ಹೋಗಿ ಬರಲೆಂದು ತಿಳಿಹೇಳುತ್ತಾನೆ. ಅಂದಿನ ದಿನ ತಾನೇ ಅವರ ಮನೆಗಳಿಗೆ ಹೋಗಿ ಅವರನ್ನು ಹೊರಡಿಸುತ್ತಾನೆ. ತೇರಿನ ಬಗ್ಗೆ, ದ್ಯಾವಪ್ಪ ಬಾರದ್ದರ ಬಗ್ಗೆ, ಊರಿನ ಯುವಕರಿಗಿಲ್ಲದ ಕಾಳಜಿ ಈ ಮುದುಕಪ್ಪನಿಗೆ. ಅದೆಲ್ಲ ಮಾಡುವಾಗ ಯಾರೂ ಆತನನ್ನು ತಡೆಯುವುದಿಲ್ಲ; ಬದಲಾಗಿ, ಊರಿನ ಹಿರಿಯನೆಂದು ಆತನ ಮಾತಿನಂತೆಯೇ ನಡೆಯುತ್ತಾರೆ.

ಧರಮನಟ್ಟಿಯ ನೂರೈವತ್ತನೇ ತೇರಿನ ಮುನ್ನಾ ದಿನವಾದ ಅಂದೇ ನಡೆದ ಕಳವಿನ ಘಟನೆಯಿಂದಾಗಿ ಊರೊಳಗೆ ಒಬ್ಬರಿಗೊಬ್ಬರ ಮೇಲಿದ್ದ ಅಸಮಾಧಾನ ಭುಗಿಲೆದ್ದು, ಅದು ಹೇಗ್ಹೇಗೋ ತಿರುಗಿ, ಪರಸ್ಪರರ ಮೇಲೆಲ್ಲ ಹಾರಾಡಿ, ಕೊನೆಗೆ ದೇವಸ್ಥಾನದ ಮುಂದೆಯೇ, ಕಿರಿಯರು/ ತರುಣರು ಸ್ವಾಂವಜ್ಜನನ್ನು ಒಂದಿಷ್ಟು ಹೀಯಾಳಿಸಿ, ಅವಹೇಳನದ ಮಾತುಗಳನ್ನಾಡುತ್ತಾರೆ. ಜಾತಿ ಮತ್ತು ರಾಜಕೀಯ- ಎರಡು ನೆಲೆಗಳಲ್ಲೂ ಸ್ವಾಂವಜ್ಜ ಅಲ್ಲಿ ಸಲ್ಲದವನಂತೆ ಕಾಣಲಾಗುತ್ತದೆ. ಇದರಿಂದ ನೊಂದು ಆತ ಅಲ್ಲಿಂದೆದ್ದು ಹೊರಟಾಗಲೂ ಅವನನ್ನು ಛೇಡಿಸುತ್ತಾರೆ: ಜೈನರವ ನೀನು. ನಿನ್ನ ಜಾತಿಯ ವ್ಯಾಪಾರೀ ಬುದ್ಧಿ ತೋರಿಸಿಬಿಟ್ಟಿ... ನಮ್ಮ ದೇವರ ಆಭರಣಗಳು ಕಳವಾದಾಗ ನಿನಗೆ ಆ ದೇವರು ಬೇಡಾದನೆ?... (ಪುಟ-೧೧೮) ಅನ್ನುವಂಥಾ ಮಾತುಗಳ ಕಿಡಿಗಳು ಹಾರುತ್ತವೆ. ‘ಊರಿನ ಅಧಿಕಾರನ್ನೂದನ್ನ ಈ ಸ್ವಾಂವಜ್ಜಗ ಬರದ ಕೊಟ್ಟಽತೇನು?’ (ಪುಟ-೧೧೯) ಅಂತಲೂ ಎಗರಾಡುತ್ತದೆ ಹರೆಯದ ರಕ್ತ. ದೇವಸ್ಥಾನದ ಕಳವಿನ ಜೊತೆಗೆ ಸ್ವಾಂವಜ್ಜನ ಸಾಮಾಜಿಕ ಬದ್ಧತೆಯೂ ಲೂಟಿಯಾಗುತ್ತದೆ. ಗುಡಿಯ ಒಳಗೆ ವಿಠ್ಠಲ ರುಕುಮಾಯಿ ದೇವರು ಎಲ್ಲವನ್ನೂ ಕಳೆದುಕೊಂಡು ಬೆತ್ತಲಾಗಿದ್ದರೆ ಹೊರಗೆ ಸ್ವಾಂವಜ್ಜನನ್ನು ಬೆತ್ತಲಾಗಿಸುತ್ತದೆ ಆಧುನಿಕ ಯುವಜನತೆ.

ಕಥೆಯ ಉದ್ದಕ್ಕೂ ಸ್ವಾಂವಜ್ಜನ ಪಾತ್ರವು ಊರಿನ ಒಂದು ನೈತಿಕತೆಯಂತೆಯೂ ಆಧಾರಸ್ತಂಭದಂತೆಯೂ ಇರುತ್ತದೆ. ದೇವಸ್ಥಾನದ ಕಳವಿನ ನಂತರ, ತಾನು ಬೆಂಗಳೂರಿಗೆ ಹೊರಡಲು ತಯಾರಾಗಿ, ಪತ್ರಕರ್ತ ಪಾಟೀಲ ಸ್ವಾಂವಜ್ಜನನ್ನು ಬೀಳ್ಕೊಡಲು ಅವನ ಮನೆಗೆ ಹೋದಾಗ ಅಲ್ಲಿ ಕಂಡುಬರುವುದು ಎಲ್ಲವನ್ನೂ ಕಳೆದುಕೊಂಡ ದುಃಖತಪ್ತ ಸ್ವಾಂವಜ್ಜ; ಇಡೀ ಊರಿಗೆ ಊರೇ ಆತನನ್ನು ಒಂದು ಉದ್ವೇಗದ ಕ್ಷಣದಲ್ಲಿ ಪರಕೀಯವಾಗಿಸಿದ ಆಘಾತದ ಪರಿಣಾಮ. ಆಗ ಅವನಲ್ಲಿದ್ದ ನಿರುತ್ಸಾಹ, ಬೇಸರ, ದುಃಖ, ಅಸಹಾಯಕತೆ- ಎಲ್ಲವೂ ಆತನ ಕೊನೆ ಸಮೀಪಿಸಿದ ಗಾಢ ಲಕ್ಷಣಗಳೇ ಆಗಿ ಕಾಣುತ್ತವೆ. ಪಾಟೀಲನ ಮುಂದಿನ ಧರಮನಟ್ಟಿಯ ಭೇಟಿಯಲ್ಲಿ, ಸುಮಾರು ಆರು ವರ್ಷಗಳ ಬಳಿಕ, ಆತ ಸ್ವಾಂವಜ್ಜನ ಮನೆಗೆ ಹೋದಾಗ ಅಜ್ಜ ತೀರಿಕೊಂಡಿದ್ದ ಸಮಾಚಾರ ತಿಳಿಯುತ್ತದೆ. ಅಲ್ಲೂ ಸ್ವಾಂವಜ್ಜ ಇತರರಿಗಿಂತ ಭಿನ್ನವಾಗಿದ್ದು, ತನ್ನತನ ಕಾಪಾಡಿಕೊಂಡದ್ದು ಅವನ ಬಗೆಗೆ ವಿಶೇಷ ಪ್ರೀತಿ, ಆಸಕ್ತಿ ಹುಟ್ಟಿಸುತ್ತದೆ. ಸ್ವಾಂವಜ್ಜನ ಪಾತ್ರವನ್ನು ಪೂರ್ಣವಾಗಿ ಕಟ್ಟಿಕೊಡುವುದು ಕೊನೆಯಲ್ಲಿ ಆತನ ಪತ್ನಿ ಪದ್ದವ್ವ ಸಾವಕಾರ್ತಿ ಪಾಟೀಲನೊಡನೆ ಆಡುವ ಕೆಲವು ಮಾತುಗಳು ಮತ್ತು ಪಾಟೀಲ ಸ್ವಾಂವಜ್ಜನನ್ನು ನೆನೆಸಿಕೊಳ್ಳುವ ಸ್ವಗತದ ಕೆಲವು ಮಾತುಗಳು.

ಸ್ವಾಂವಜ್ಜನನ್ನೇ ಕಾಣಲು ಬಂದ ಪಾಟೀಲ ಕಂಡದ್ದು ಪದ್ದವ್ವನನ್ನು. ಆಕೆ ಹೇಳುತ್ತಾಳೆ, ‘...ವಿಠ್ಠಲ ದೇವರೂ ವಿಠ್ಠಲ ದೇವರೂ ಅಂತ ಬಾಳ ಮೋಹಾ ಇಟಗೊಂಡಿದ್ದ ನಮ್ಮ ಸಾವಕಾರಾಽ... ನಾನು ಹಗಲೆಲ್ಲಾ- ಇದೆಲ್ಲೀ ವಿಠ್ಠಲ ವಿಠ್ಠಲ ಅಂತ ಮಿಥ್ಯಾ ದೇವರನ ಕಟಿಗೊಂಡೀ... ಅಂತ ನಗಿಚಾಟಿಕೀ ಮಾಡಿದರ ನನ್ನ ಮ್ಯಾಗಽ ಸಿಟ್ಟಿಗೇಳಾಂವ... ಕಡೀಕ ಅದಽ ವಿಠ್ಠಲ ದೇವರ ದಸಿಂದನಽ ಎದೀ ಒಡಕೊಂಡು ಜೀವಾ ಕಳಕೊಂಡಾ!....’ ದೇವಸ್ಥಾನದ ಕಳವಿನ ಹಿನ್ನೆಲೆಯಲ್ಲಿ ಸ್ವಾಂವಜ್ಜನನ್ನೂ ಎಳೆದೊಯ್ದ ಪೋಲೀಸರು ಮೂರು ದಿನಗಳ ಮೇಲೆ ಅವನನ್ನು ಬಿಡುತ್ತಾರೆ. ಅದರ ಮರುದಿನವೇ ಅರ್ಧಾಂಗ ವಾಯು ಹೊಡೆದು ಬಲಭಾಗದ ಶಕ್ತಿ ಪೂರಾ ಕುಂದಿದ ಮೇಲೆ, ಕೊನೆಯ ಬಾರಿ ವಿಠ್ಠಲನ ದರ್ಶನ ಮಾಡಿ ಬಂದ ಸ್ವಾಂವಜ್ಜ ಸಲ್ಲೇಖನ ಕೈಗೊಳ್ಳುವ ನಿರ್ಧಾರ ಮಾಡಿದ್ದನ್ನು ಪಾಟೀಲನಿಗೆ ತಿಳಿಸುತ್ತಾಳೆ, ಪದ್ದವ್ವ: ‘...ವಿಠ್ಠಲ ಸ್ವಾಮೀ, ವಿಠ್ಠಲ ದೇವರೂ ಅಂತ ಆ ದೇವರ ಮ್ಯಾಗ ಭಕತೀ ಮಾಡಿ ಈಗ ಈ ಸಲ್ಲೇಖನಾ ಅಂದರ ಹೆಂಗಽ?... ಮಿಥ್ಯಾತ್ವಕ್ಕಽ ಮತ್ತ ಸಲ್ಲೇಖನಕ್ಕಽ ಅಧೆಂಗ ಹೊಂದಾಣಿಕಿ ಆಗತೈತೀ?... ನಿಂದು ಎಡಬಿಡಂಗೀ ರೀತಿ ಇದಾ... ಇದನ್ನ ಬಿಡ ನೀನಾ... ಅಂತ ಬೈದು ಜಗಳಾಟಕ್ಕ ಎಳಿಯೂಣೂ ಅಂತಂದರ ಅಂವ ನನ್ನ ಮಾತಿಗೆ ಬರೇ ಒಂದ ಮುಗಳ ನಗೀ ನಕ್ಕು ಸುಮ್ಮಗಾದ!.... ....ನೀರ ಬಿಟ್ಟ ಎರಡನೇ ದಿನಕ್ಕಽ ಪ್ರಾಣಾ ಬಿಟ್ಟ...’ (ಪುಟ-೧೨೭, ೧೨೮).

ಅಲ್ಲಿಂದ ಹಿಂತಿರುಗಿ ಬೆಟಗೇರಿಗೆ ತನ್ನ ಮನೆಗೆ ಬಂದ ಪತ್ರಕರ್ತ ಪಾಟೀಲ ಸ್ವಾಂವಜ್ಜನನ್ನು ನೆನೆಸಿಕೊಂಡು, ‘...ಅಂವ ಧರಮನಟ್ಟಿಯ ಜನರ ವಿವೇಕ ಪ್ರಜ್ಞೆಯಂತಿದ್ದ... ಆದರೆ ಧರಮನಟ್ಟಿಯ ಜನ ಯಾವತ್ತಿಗೂ ಅವನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲೇ ಇಲ್ಲ... ನಿತ್ಯ ಸಂಶಯಕ್ಕೆ ಈಡಾದರೂ ಅಂವ ಮಾತ್ರ ಕಡಿತನಕ ಊರಿನ ಸಮುದಾಯದ ನಡೆಗೆ ತನ್ನ ವಿವೇಕದ ನೋಟವನ್ನು ನೀಡುತ್ತಲೇ ಬಂದಿದ್ದ... ಈ ಸ್ವಾಂವಜ್ಜ ಜೈನನೋ... ವೈದಿಕನೋ... ಅವೈದಿಕನೋ... ಇಂಥದ್ದು ಒಂದು ಎಂದು ಪ್ರತ್ಯೇಕಿಸಿ ಹೇಳಲಿಕ್ಕೆ ಸಾಧ್ಯವಾಗುವುದೇ ಇಲ್ಲ...’ (ಪುಟ-೧೨೯). ಇಂಥ ಸ್ವಾಂವಜ್ಜ ಓದುಗರ ದೃಷ್ಟಿಯಲ್ಲಿ ಎತ್ತರದ ಸ್ಥಾನ ಪಡೆಯುತ್ತಾನೆ. ಶುದ್ಧವಾದ ಜಾತ್ಯಾತೀತ ನಿಲುವುಳ್ಳ ಈ ಹಿರಿಯ ನಮ್ಮೆಲ್ಲರ ಒಳಗೆ ಸದಾ ಇರಲೇಬೇಕಾದ ನಿಷ್ಪೃಹ ನಾಗರಿಕ ಪ್ರಜ್ಞೆಯಂತೆ ಕಂಡುಬರುತ್ತಾನೆ. ಈ ಕಾದಂಬರಿಯಲ್ಲಿ ನನಗೆ ಅತ್ಯಂತ ಪ್ರಿಯವಾದ ಪಾತ್ರ ಸ್ವಾಂವಜ್ಜನದು.

ಮೂಲ ದ್ಯಾವಪ್ಪ:
ಬಡತನದ ಜಂಜಾಟದ ಜೀವನದಿಂದ ನೊಂದಿದ್ದ ಗೊಂಬೀರಾಮರ ದ್ಯಾವಪ್ಪ, ಒಂಭತ್ತು ಮಕ್ಕಳು ಮತ್ತು ಬಸುರಿ ಹೆಂಡತಿಯ ತನ್ನ ಸಂಸಾರಕ್ಕೆ ಒಂದು ಹೊತ್ತಿನ ಒಳ್ಳೆಯ ಊಟ ಮತ್ತು ಎಂಟೆಕರೆ ಭೂಮಿಯ ಆಮಿಷಕ್ಕೆ ಒಂದು ಕ್ಷಣ ಒಡ್ಡಿಕೊಂಡು, ಧರಮನಟ್ಟಿಯ ತೇರಿಗೆ ತನ್ನ ನಡುವಿನ ಮಗ ಚಂದ್ರಮನನ್ನು ನರಬಲಿಯಾಗಿಸಲು ಒಪ್ಪಿಕೊಳ್ಳುವ ದುರದೃಷ್ಟವಂತನಾಗಿ ಕಾದಂಬರಿಯಲ್ಲಿ ಮೊದಲಿಗೆ ಕಾಣಿಸುತ್ತಾನೆ. ಹೆಂಡತಿಯ ಗೋಳನ್ನು ನೋಡಲಾಗದೆ, ಅದೇ ರಾತ್ರೆ ಧರಮನಟ್ಟಿಯನ್ನು ತೊರೆದು ಓಡಿಹೋಗುವ ಅವನ ಹುನ್ನಾರ ವಿಫಲವಾಗುತ್ತದೆ. ಮರುದಿನ, ತೇರಿಗೆ ಮಗನ ಬಲಿಯಾದ ನಂತರ ಆತನಲ್ಲಿ ಬದಲಾವಣೆಯಾಗುತ್ತದೆ. ತನ್ನನ್ನು, ತನ್ನ ಮನೆತನದವರನ್ನು ವಿಶೇಷವಾದೊಂದು ಸೇವೆಗಾಗಿ ದೇವರೇ ಆರಿಸಿಕೊಂಡಿದ್ದಾನೆ, ತಾನು ಅದೃಷ್ಟವಂತ ಅನ್ನುವ ನಂಬಿಕೆ ಆತನಲ್ಲಿ ಮೊಳೆಯುತ್ತದೆ. ಕಳ್ಳೀಗುದ್ದಿಗೆ ಬಂದಾಗ, ಆ ಗೌಡನಲ್ಲಿ ಈತ ಹೇಳಿಕೊಳ್ಳುವ ಬಲಿಯ ಪ್ರಸಂಗ, ಈತನದಲ್ಲವೇನೋ ಎಂಬಂಥ ನಿರ್ಲಿಪ್ತ ರೀತಿಯಲ್ಲಿ, ಆದರೆ ಅತ್ಯಂತ ಸ್ವಾರಸ್ಯಕರವಾದೊಂದು ಕಥೆಯನ್ನು ಹೇಳುವಂತೆ, ‘ಕಣ್ಣು-ಮನಸು ತುಂಬುವ ಹಂಗ ವರ್ಣಿಸತಾನೆ’: ‘...ತನ್ನ ಮಗನ ಎದಿಯ ಮ್ಯಾಲೆ ಸ್ವಾಮಿಯ ತೇರು ಹಾಯುತ್ತಿದ್ದಂಗೇ ತೇರಿನ್ಯಾಗಿನ ಇಠ್ಠಲ ಸ್ವಾಮಿಯ ಮೀಸಿಗಳು ಕುಣದವೂ... ಸ್ವಾಮಿಯ ಕಣ್ಣಿನ್ಯಾಗಿಂದ ಬೆಂಕಿಯ ಕೆಂಡದಂಥಾ ಬೆಳಕು ಚಿಮ್ಮಿ... ಆ ಬೆಳಕಿಗೆ ತನ್ನ ಹೇಂತಿಯ ಕಣ್ಣುಕುಕ್ಕಿ ಆಕಿ ಕಕ್ಕಾವಿಕ್ಕಿಯಾಗಿ ಬೇಹೋಶ ಆಗಿ ಹೆಂಗ ಬಿದ್ದಳೆಂಬುವದನ್ನ...’ ಎಲ್ಲಾ ಕಥೆ ಮಾಡಿ ಹೇಳುತ್ತಾನೆ (ಪುಟ-೩೯). ಅಲ್ಲಿ, ಗೌಡನ ಚಾವಡಿಯಲ್ಲಿ ‘ದುಸ್ಯಪ್ಪಗೋಳ ಸಂತ ರಾಮಜೀ’ ತನ್ನ ಕಾಲಿಗೆರಗಿದಾಗ ಆತನಿಗೆ ತನ್ನಲ್ಲಿರುವ ವಿಶೇಷತೆಯ ಅರಿವಾಗುತ್ತದೆ. ತನಗೊದಗಿದ ಸೇವೆಯ ಸೌಭಾಗ್ಯ ತನ್ನ ಮನೆತನದ ಪುಣ್ಯ ಎಂದುಕೊಳ್ಳುತ್ತಾನೆ. ಅಂಥ ಭಾಗ್ಯದ ದಾಖಲೆಯಾಗಿರುವ ದೇಸಾಯರ ಸನದನ್ನು ಗಾಜಿನ ಕಟ್ಟು ಹಾಕಿಸಿ, ದೇವರ ಗೂಡಿನ ಮೇಲೆ ಗೋಡೆಯಲ್ಲೇ ಕಿಂಡಿ ಮಾಡಿ ಕೂರಿಸಿ, ಅದಕ್ಕೊಂದು ಬೀಗವನ್ನೂ ಹಾಕುತ್ತಾನೆ.

ದೇವರಗೂಡಿನ ಮೇಲೆ ಬೀಗಹಾಕಿದ ಗೂಡಿನಲ್ಲಿಟ್ಟ ಗಾಜಿನ ಕಟ್ಟು ಹಾಕಿಸಿದ ಸನದನ್ನು ಕಂಡರೆ ದ್ಯಾವಪ್ಪನ ಬಸುರಿ ಮಡದಿ ಲಗಮವ್ವ ಉರಿದು ಬೀಳುತ್ತಿದ್ದಳು. ‘ನನ ಮಗನ ರಗತಾ ಕುಡದ ಕಾಗಜ ಅದು... ಅದ ರಾಗಸಸ ಐತಿ’ (ಪುಟ-೪೨) ಅನ್ನುತ್ತಿದ್ದಳು. ಅಷ್ಟರಲ್ಲೇ ಆಕೆಗೆ ಈ ಬಸುರೂ ಹೆರಿಗೆಯಾಗಿ ಹುಟ್ಟಿದ ಗಂಡು ಮಗು ಎರಡೇ ದಿನದಲ್ಲಿ ತೀರಿಕೊಂಡಾಗ, ಸಿಟ್ಟು ವಿಪರೀತವಾಗಿ, ಒಂದು ದಿನ ಅವಕಾಶ ಸಿಕ್ಕಾಗ ಆ ಸನದನ್ನು ತೆಗೆದು ಒಡೆದೇ ಬಿಡುವವಳಿದ್ದಳು. ದ್ಯಾವಪ್ಪ ಆಕೆಯಿಂದ ಅದನ್ನು ಕಿತ್ತುಕೊಂಡು ಆಕೆಯನ್ನು ತಳ್ಳಿದ ರಭಸಕ್ಕೆ ಗೋಡೆಗೆ ತಾಗಿ ತಲೆಯೊಡೆದುಕೊಂಡಳು. ಇದರ ಬಳಿಕ ಆಕೆ ಹುಚ್ಚಿಯಂತಾದಾಗ, ಆಕೆಯ ಮೇಲೆ ಸ್ವಾಮಿ ಸಿಟ್ಟುಗೊಂಡಿದ್ದಾನೆ ಎಂದೇ ತಿಳಿದ ದ್ಯಾವಪ್ಪ, ‘ಯಪ್ಪಾ ಸ್ವಾಮೀ... ನಿನ್ನಽ ನಂಬೀದನು! ನನ್ನ ಸಂಸಾರದ ದೀಪಾ ಕಳೀಬ್ಯಾಡ. ಬುದ್ಧಿಯಿಲ್ಲದ ಹೆಂಗಸು... ತೆಪ್ಪ ಮಾಡೇತಿ. ಹೊಟ್ಯಾಗ ಹಕ್ಕೋ ತಂದೇ!... ನಿನ್ನ ಮಡಲಿಗೆ ಬಿದ್ದದೀವು. ಕೊಲ್ಲೂದು ಕಾಯೂದೂ ಎಲ್ಲಾ ನಿನ್ನಽ ಕೂಡೇತಿ... ಒಟ್ಟಽ ತೆಪ್ಪಸಧಂಗ ವರ್ಷಾ ವರ್ಷಾ ನಿಷ್ಠಾದಿಂದ ನಿನ ತೇರಿನ ರಗತ ತಿಲಕದ ಸೇವಾ ಮಾಡತೀವು...’ ಅಂತ ಹರಕೆ ಹೊರುತ್ತಾನೆ. ಅದಾಗಿ ಎರಡು ತಿಂಗಳ ಬಳಿಕ ಸಾವಕಾಶವಾಗಿ ಲಗಮವ್ವ ಸುಧಾರಿಸಿಕೊಳ್ಳುತ್ತಾಳೆ. ನೋವು ಮರೆಯುತ್ತಾಳೆ. ‘ತಾ ಹರಕೀ ಹೊತ್ತದ್ದಕ್ಕಽ ಹೇಂತಿಗೆ ಆರಾಮ ಆತು...’ ಅಂತ ದ್ಯಾವಪ್ಪನಿಗೆ ಘಟ್ಟಿಯಾಗಿ ಸ್ವಾಮಿಯ ಮೇಲಿನ ಅವನ ನಂಬಿಕೆ ಇನ್ನಷ್ಟು ಹೆಚ್ಚೇ ಆಗುತ್ತದೆ (ಪುಟ-೪೨, ೪೩). ಇಂಥ ಸಣ್ಣ ಪುಟ್ಟ ಸಂಗತಿಗಳ ಮೂಲಕ ದ್ಯಾವಪ್ಪನಲ್ಲಿ ವಿಠ್ಠಲ ದೇವರ ಭಕ್ತಿ ತುಂಬಿಕೊಂಡು ಬೆಳೆಯುತ್ತಾ ಹೋಗುವುದು ನಿಚ್ಚಳವಾಗಿ ಕಾಣುತ್ತದೆ.

ಇಂಥ ದ್ಯಾವಪ್ಪ, ತನ್ನ ರಕ್ತಶುದ್ಧೀಕರಣಕ್ಕೂ ಇಳಿಯುತ್ತಾನೆ. ಹಾಗೆಂದು ಗೂಗಿಕೊಳ್ಳದಲ್ಲಿ ಅವನಿಗೆ ದರ್ಶನ ಕೊಟ್ಟ ‘ಲಂಗಟದ ಸ್ವಾಮಿ’ಗಳು, ‘ಮದಲ ರಗತದಾಗಿನ ಕಸರು ಬರೀಹರಿಸಿಕೋರಿ...’ ಅಂತ ಅಪ್ಪಣೆ ಕೊಡಿಸಿರುತ್ತಾರೆ (ಪುಟ-೪೪). ಹೇಗೆ ರಕ್ತವನ್ನು ಶುದ್ಧೀಕರಿಸುವುದೆಂದು ತಿಳಿಯದ ದ್ಯಾವಪ್ಪ ಊರ ಗೌಡನನ್ನು ಕೇಳುತ್ತಾನೆ. ಗೌಡನಾದರೋ, ತಮಾಷೆಯಾಗಿ- ‘ನಿನ್ನ ರಕ್ತ ಎಲ್ಲ ಬಸಿದು ಸೋಸುವ ಅರಿವೆಯಿಂದ ರಕ್ತವನ್ನೂ ಸೋಸಿಕೊಂಡು ಮತ್ತೆ ಅದನ್ನೇ ಕುಡಿ’ ಅಂತಂದರೆ, ಅದನ್ನೇ ನಂಬಿಕೊಂಡು, ‘ಹಾಗಾದರೆ ಕೈಯೋ ಕಾಲೋ ಕತ್ತರಿಸಿದರೆ ರಕ್ತ ಬಸಿದು ತೆಗೆಯಬಹುದಲ್ಲ?’ (ಪುಟ-೪೫) ಅಂತ ಕೇಳುವಷ್ಟು ಮುಗ್ಧವ್ಯಕ್ತಿಯೂ ಆಗಿರುತ್ತಾನೆ ಆತ. ನಂತರ, ಹಳಿಮನಿ ಶಂಕರಜ್ಜನ ಸಲಹೆಯಂತೆ, ಇಪ್ಪತ್ತು ದಿನಗಳ ಔಷಧ-ಪಥ್ಯದ ಆರೈಕೆ ಮಾಡಿಕೊಳ್ಳುತ್ತಾನೆ. ಇದರಿಂದ ದೇವರ ಸೇವೆಗೆ ತನ್ನ ರಕ್ತ ಶುದ್ಧವಾಗಿರುತ್ತದೆಂಬ ನಂಬಿಕೆ ಆತನದು. ಈ ರಕ್ತಶುದ್ಧಿಯ ನಂತರ ಇಪ್ಪತ್ತು ದಿನಗಳ ತೀರ್ಥಯಾತ್ರೆಯನ್ನೂ ಮಾಡಿ, ಮನಸ್ಸನ್ನೂ ನಿರ್ಮಲವಾಗಿಸಿಕೊಂಡು ಆತ ಧರಮನಟ್ಟಿಯ ತೇರಿನ ರಕ್ತ ತಿಲಕದ ಸೇವೆಗೆ ಷಷ್ಟಿಯ ಸಂಜೆಗೆ ಹಾಜರಾಗುವುದನ್ನು ರೂಢಿಸಿಕೊಳ್ಳುತ್ತಾನೆ. ತನ್ನ ನಂತರ ಮಗ ಕುಬೇರಪ್ಪ, ಮತ್ತವನ ಮಗ, ಮರಿಮಗನಾದಿಯಾಗಿ ತನ್ನ ವಂಶದವರೆಲ್ಲರೂ ಇದೇ ಹಾದಿಯಲ್ಲಿ ನಡೆಯಬೇಕೆಂದು ನಿಯಮಿಸುತ್ತಾನೆ. ಮಗ ಕುಬೇರಪ್ಪನನ್ನು ತನ್ನ ಕೊನೆಯ ನಾಲ್ಕು ವರ್ಷಗಳಲ್ಲಿ ಜೊತೆಯಲ್ಲೇ ಕರೆದುಕೊಂಡು ಹೋಗಿ, ಎಲ್ಲಾ ಪದ್ಧತಿಯನ್ನೂ, ಯಾತ್ರೆಯ ದಾರಿಯನ್ನೂ ಸಾರಾಸಾರವಾಗಿ ತೋರಿಸಿಕೊಡುತ್ತಾನೆ. ದೇವರಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಸಂತನಂತೆಯೇ ದ್ಯಾವಪ್ಪ ಜೀವನ ಸವೆಸುತ್ತಾನೆ. ಆತನ ನಂಬಿಕೆ, ಬದ್ಧತೆ, ಮತ್ತು ನಿಯತ್ತು ಆತನಿಗೆ ಊರಿನಲ್ಲಿ ಗೌರವವನ್ನೂ ತನ್ನೊಳಗೆ ಮನಸಿನ ನೆಮ್ಮದಿಯನ್ನೂ ತಂದುಕೊಡುತ್ತವೆ. ಈ ಮಟ್ಟದಲ್ಲಿ ದೈವಶಕ್ತಿಗೆ ಸಂಪೂರ್ಣ ಶರಣಾದವರನ್ನು ಕಾಣುವುದು ಅಪರೂಪ. ಧರಮನಟ್ಟಿಯ ಅಪರೂಪದ ತೇರಿನ ಸೇವೆಗೆ ಅಪರೂಪದ ರೀತಿಯಲ್ಲಿ ಸಮರ್ಪಿಸಿಕೊಂಡ ವ್ಯಕ್ತಿತ್ವ ಮೂಲ ದ್ಯಾವಪ್ಪನದು.

ತನ್ನ ಹೆಂಡತಿ ಮಕ್ಕಳಿಗೆ ಒಂದು ಒಳ್ಳೆಯ ಊಟದ ಮತ್ತು ಎಂಟೆಕರೆ ಭೂಮಿಯ ಆಸೆಯಿಂದ, ಒಂದು ಸಣ್ಣ ಲೌಕಿಕ ಕ್ಷಣದಲ್ಲಿ ಮಗನನ್ನು ತೇರಿನ ಗಾಲಿಯ ಕೆಳಗೆ ಮಲಗಿಸಲೊಪ್ಪಿದ ದ್ಯಾವಪ್ಪ, ಅದೇ ಘಟನೆಯನ್ನು ದಿವ್ಯವನ್ನಾಗಿ ಪರಿಗಣಿಸಿ, ಅಲೌಕಿಕ ನೋಟದಿಂದ ಅಳೆದು, ತನ್ನ ದೃಷ್ಟಿಯಲ್ಲಿ ಮಗನನ್ನು ತ್ಯಾಗಿಯನ್ನಾಗಿಸುವುದು ಪರಿವರ್ತನೆಯ ಕಾರಣ. ಅವನಲ್ಲಿನ ಈ ಅಲೌಕಿಕ ಭಕ್ತಿ, ತನ್ಮಯತೆ, ಯಾತ್ರೆಗೆ ಹೋದಲ್ಲೆಲ್ಲ ಅವನು ನಿಸರ್ಗದಲ್ಲಿ ದೇವಸ್ಥಾನಗಳಲ್ಲಿ ತಲ್ಲೀನನಾಗಿ ತನ್ನನ್ನೇ ಕಳೆದುಕೊಂಡು ಮಗ್ನನಾಗುವ ಪರಿಯನ್ನು ಕಂಡ ಸುತ್ತಲಿನ ಊರುಗಳ ಜನತೆ ಆತನನ್ನೇ ಸಂತನನ್ನಾಗಿಸುತ್ತದೆ. ಆತನನ್ನೇ ದೈವಸಮಾನ ಅನ್ನತೊಡಗುತ್ತದೆ. ನೂರೈವತ್ತನೇ ತೇರಿನ ಮೊದಲು, ಷಷ್ಟಿಯ ಸಂಜೆ ಹೊಸ ತಲೆಮಾರಿನ ದ್ಯಾವಪ್ಪನನ್ನು ಕಾಯುತ್ತಾ ಕೂತಿರುವ ಧರಮನಟ್ಟಿಯ ಮಂದಿಯ ಮಾತಿನಲ್ಲಿ ಆರು ತಲೆಮಾರಿನ ಮೊದಲ ಮೂಲ ದ್ಯಾವಪ್ಪ ಕಾಣುವ ರೀತಿ ಹೀಗಿದೆ: ‘...ಮಗನ್ನ ಸ್ವಾಮಿಯ ರಥಕ್ಕ ಬಲೀ ಕೊಟ್ಟ ಆ ದ್ಯಾವಪ್ಪ ಅಗದೀ ಥೇಟ್ ವಿಠ್ಠಲಸ್ವಾಮಿ ಇದ್ದಂಗ ಇದ್ದನಂತ!... ನಮ್ಮ ಹಿರ‍್ಯಾರು ಹೇಳತಿದ್ದರು... ತೇರಿಗೆ ಬಲೀ ಕೊಡಾಕಂತ ಅಂವ ತನ್ನ ಮಗನ್ನ ತೆಕ್ಯಾಗ ಅವಚಿ ಹಿಡಕೊಂಡು- ತೇರಿನ ಗಾಲಿಯ ತೆಳಗ ಇಡಾಕ ಹೀಂಗ ತೆಳಗ ಬಗ್ಗತಿದ್ದಂಗಽ ತೇರಿನ್ಯಾಗಿನ ವಿಠ್ಠಲಸ್ವಾಮಿ ತೆಳಗ ಇಳದ ಬಂದು... ದ್ಯಾವಪ್ಪನ ತೆಕ್ಯಾಗಿನ ಚಂದ್ರಾಮ ಅನ್ನುವ ಆ ಹುಡುಗನ್ನ ತನ್ನ ತೆಕ್ಕಿಗೆ ತಗೊಂಡನಂತ... ತನ್ನ ರಥಕ್ಕ ಬಲೀ ಆಗಲಿಕ್ಕೆ ಬಂದ ಆ ಕಂದನ್ನ ತನ್ನ ತೆಕ್ಯಾಗ ಇಟಗೊಂಡು ವಿಠ್ಠಲ ಸ್ವಾಮಿ ಗರುಡ ಪಕ್ಷೀ ಮ್ಯಾಲ ಕುಂತಗೊಂಡು ಅಂತರಿಕ್ಷಾಕ್ಕ ಹಾರಿದನಂತ... ...ಆಕಾಸದಾಗೇ ಪಂಢರಾಪುರದ ಹಾದೀ ಹಿಡಿದನಂತ... ನೆರೆದ ಮಂದಿ ಎಲ್ಲಾ ಮಕಾ ಮ್ಯಾಲಕೆತ್ತಿ ಸ್ವಾಮಿಯ ದರಶನಾ ಮಾಡಿ... ಹಂಗಽ ಕೈ ಮುಕ್ಕೊಂಡು- ಕಣ್ಣ ಮುಚಿಗೊಂಡು ನಿಂತಿರಬೇಕಾದರಽ... ಆ ಸ್ವಾಮಿಯ ತೇರನ್ನೂದು ಯಾರು ಅಂದರ ಯಾರೂ- ಒಬ್ಬರೂ ಕೈಮುಟ್ಟಿ ಎಳೀದಽ... ತನ್ನಂಗ ತಾನಽ ಮುಂದಕ ಹೊಂಟು ಪಾದಾಗಟ್ಟೀ ಸೇರಿತಂತ!... ಸತ್ಯೇದ ಕಾಲ ಅದಾ...’ (ಪುಟ-೯೫). ಒಂದು ಕತೆ, ಒಬ್ಬ ವ್ಯಕ್ತಿ ಪುರಾಣವಾಗಲು ಇನ್ನೆಷ್ಟು ಬೇಕು!

ಕೊನೆಯ/ ಆಧುನಿಕ ದ್ಯಾವಪ್ಪ:
ಕಳ್ಳೀಗುದ್ದಿಯ ಗೊಂಬೀರಾಮರ ವಂಶಜ, ಧರಮನಟ್ಟಿಯ ‘ರಕ್ತ ತಿಲಕ’ದ ಮೂಲ ಮುತ್ಯಾನ ಆರನೇ ತಲೆಮಾರಿನವನಾದ ಈತ ಹೊಸಚಿಂತನೆಯ ದ್ಯಾವಪ್ಪ. ಆತ ಬೆಂಗಳೂರಿನಲ್ಲಿ ಪತ್ರಕರ್ತ ಪಾಟೀಲರನ್ನು ಭೇಟಿಯಾಗಿ ಧರಮನಟ್ಟಿಯ ತೇರಿನ ಕಥೆಗೆ ಹೊಸ ರೂಪ, ಹೊಸ ರೇಖೆ, ಹೊಸ ನೋಟವನ್ನು ಕೊಡುತ್ತಾನೆ. ಅವನಲ್ಲಿರುವ ಆಧುನಿಕ ಚಿಂತನೆ, ಯುವಚೇತನಕ್ಕಾದ ನಿರಾಸೆ, ‘ನವ ನಿರ್ಮಾಣ ಚಳುವಳಿಯ’ ಪ್ರಭಾವ, ಅದರಿಂದಾದ ಪರಿಣಾಮ, ತದನಂತರದ ಪರಿವರ್ತನೆಗಳು, ಧರಮನಟ್ಟಿಯ ತೇರಿನ ಗೋಪುರದ ಎತ್ತರವನ್ನು ನಿಗೂಢ ರೀತಿಯಲ್ಲಿ ಕುಂಠಿತಗೊಳಿಸುತ್ತಾ ಸಾಗುತ್ತವೆ. ಸಾಮಾಜಿಕ ಬದಲಾವಣೆಯ ಕಾಲದಲ್ಲಿ ಯುವಕರಲ್ಲಿ ಉಂಟಾಗುವ ಗೊಂದಲಕ್ಕೆ ಸಾಕ್ಷಿಯಾಗಿಯೂ ಹೊಸ ದ್ಯಾವಪ್ಪ ಮೂಡುತ್ತಾನೆ. ಈ ಗೊಂದಲದಲ್ಲಿ ಆತ ತನ್ನನ್ನು ಕಂಡುಕೊಳ್ಳುತ್ತಾ, ತನ್ನ ಹಿರಿಯರ ಮೌಢ್ಯವನ್ನು ಕಳೆದುಕೊಳ್ಳುತ್ತಾ, ಕೊನೆಗೆ ಊರಿನ ಹಿರಿಯರ ದೃಷ್ಟಿಯಲ್ಲಿ ಕೀಳಾಗಿಯೂ ಕಂಡುಬರುತ್ತಾನೆ. ಅವನ ಬೀಳು-ಏಳುಗಳನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಕಟ್ಟಿಕೊಡುವ ರೀತಿ ಮೆಚ್ಚುಗೆಯಾಗುತ್ತದೆ.

ಮೂಲ ದ್ಯಾವಪ್ಪನಿಗೆ ‘ತನ್ನನ್ನು ಉದ್ಧರಿಸಿದ ಸ್ವಾಮಿ’ ವಿಠ್ಠಲ ದೇವರ ಮೇಲೆ ಇದ್ದಂತಹ ನಂಬಿಕೆ/ ವಿಶ್ವಾಸ ಈತನಿಗೆ ತನ್ನ ಕಾಲದ ಕೆಲವು ಧುರೀಣರ ಮೇಲೆ. ಈತನ ಮೇಲೆ ಬಹಳ ಪರಿಣಾಮ ಬೀರಿದ ಜಾರ್ಜ್ ಫೆರ್ನಾಂಡಿಸ್ ಮತ್ತು ಜೇಪೀ ಅವರುಗಳು ತನ್ನಂಥಾ ಬಡವರಿಗಾದ ಅನ್ಯಾಯವನ್ನು ಸರಿಪಡಿಸುತ್ತಾರೆ ಅನ್ನುವುದು ಅವನ ನಿಷ್ಠೆಯ ತಳಹದಿ. ಅದಕ್ಕೂ ಕಾರಣವಾಗಿದ್ದು ಆತನ ಊರು ಮತ್ತದರ ಗೌಡ. ಈ ದ್ಯಾವಪ್ಪ, ತಾನು ಸೇವೆಯ ಪಟ್ಟಕ್ಕೆ ಬಂದ ಮೊದಲೆರಡು ವರ್ಷವೂ ತನ್ನ ಮೂಲಮುತ್ಯಾನಂತೆಯೇ, ಅದೇ ನಿಷ್ಠೆಯಿಂದ ರಕ್ತಶುದ್ಧಿ ಮತ್ತು ತೀರ್ಥಯಾತ್ರೆಯನ್ನು ಮಾಡಿ, ಧರಮನಟ್ಟಿಯ ರಕ್ತತಿಲಕದ ಸೇವೆಯನ್ನೂ ಮಾಡಿದ. ‘ಭೂಸುಧಾರಣೆ ಕಾಯಿದೆ’ಯ ದುರುಪಯೋಗ ಪಡೆದು ತನ್ನೂರಿನ ಗೌಡ ತಮ್ಮ ಜಮೀನನ್ನೆಲ್ಲ ಕಬಳಿಸಿದಾಗ ಯುವ ದ್ಯಾವನಿಗೆ ಅತೀವ ಭ್ರಮನಿರಸನವಾಗುತ್ತದೆ. ತನ್ನಂಥವರ ಸಹಾಯಕ್ಕಾಗಿ ಯಾವುದೇ ಕಾನೂನುಗಳು ಸಿಗದಿರುವಾಗ ರೋಷ ಏರುತ್ತದೆ. ತನ್ನಂಥ ಬಡವರಿಗೆ ಅನುಕೂಲಕ್ಕಿಲ್ಲದ ವ್ಯವಸ್ಥೆಯ ಮೇಲೆ, ಕಾನೂನಿನ ಮೇಲೆ ಆತನಿಗೆ ಅಸಹನೆ. ಅದಕ್ಕಾಗಿಯೇ ಜೇಪೀಯವರ ‘ನವ ನಿರ್ಮಾಣ ಚಳವಳಿ’ಯಲ್ಲಿ ಭಾಗವಹಿಸಿ, ಸಿಕ್ಕಿಬಿದ್ದು, ಮೂರು ತಿಂಗಳು ಜೈಲನ್ನೂ ಅನುಭವಿಸುತ್ತಾನೆ. ಇದಕ್ಕಾಗಿ ಆತನಿಗೆ ನಾಚಿಕೆಯಾಗಲೀ ಕೀಳರಿಮೆಯಾಗಲೀ ಇರುವುದಿಲ್ಲ.

ಜೈಲಿನ ಅವಧಿ ಮುಗಿದು, ಊರಿಗೆ ಹಿಂತಿರುಗುವ ಮೊದಲು, ಬೆಂಗಳೂರಲ್ಲಿ ಪತ್ರಕರ್ತ ಪಾಟೀಲನನ್ನು ಭೇಟಿಯಾಗಿ, ಆತನ ಜೊತೆಗೆ ವಿಧಾನಸೌಧ ಮತ್ತು ಹೈಕೋರ್ಟುಗಳನ್ನು ನೋಡುತ್ತಾ ವಿಧಾನಸೌಧದ ಮೆಟ್ಟಲಲ್ಲಿ ಕೂತು, ‘...ಇದು ಹೆಂತಾ ವ್ಯವಸ್ಥಾರೀ? ಇಲ್ಲಿ ನೋಡರೀ... ಈ ಬೆಂಗಳೂರಿನ್ಯಾಗ ಎಲ್ಲಾ ಕಡೆ ಝಗ-ಮಗ ಅಂತ ಬೆಳಕು ಚಲ್ಯಾಡಿ ಹಾದೀಗುಂಟ ಹರೀತೈತಿ... ಇಡೀ ಊರಿಗೆ ಊರಽ ಚಲಸಾಕತ್ತೈತಿ ಅನ್ನೂ ಹಂಗ ರಸ್ತಾದ ತುಂಬ ಬಸ್ಸೂ ಕಾರಗಾಡೀ ಮತ್ತ ಮೋಟರ ಸೈಕಲ್ಲಗೋಳು ಭರಂಡೀ ಹೋಗತಾವು... ಅಲ್ಲಿ ನಮ್ಮ ಊರಗೋಳೊಳಗ... ...ಕತ್ತಲಿ ತುಂಬೈತಿ... ಚಿಮಿಣೀ ಬುಡ್ಡಿಗೆ ತಟಕ ಎಣ್ಣಿ ಸಿಗೂದಿಲ್ಲ... ...ಟೆನೆನ್ಸೀ ಬಂತು ಖರೇ, ಬಡವರಿಗೇನು ದಕ್ಕಲಿಲ್ಲ. ನಮ್ಮ ಜಮೀನು ನಮ್ಮ ಊರ ಗೌಡಗಽ ಹೋತು. ಅವಂಗ ಐವತ್ತ-ಅರವತ್ತ ಎಕರ‍ೇ ಭೂಮಿ ಐತರೀ. ಆದರ ಕಾಯ್ದೇಕ್ಕ ಹೆಂಗ ಟಾಂಗ ಕೊಡಬೇಕಂತ ಯಾವ ವಕೀಲನಕಿಂತಾ ಹೆಚ್ಚ ಜ್ಞಾನ ಐತಿ ಅವಂಗ...’ (ಪುಟ-೭೩). ತೇರಿನ ಸೇವೆಗೆ ಹೋದಾಗ ಭಕ್ತರು ಕೊಡುತ್ತಿದ್ದ ಕಾಣಿಕೆಗಳ ಬಗ್ಗೆ ಮಾತಾಡುತ್ತ ದ್ಯಾವಪ್ಪ: ‘ಆಗ (ಹಿರಿಯರ ಕಾಲದಲ್ಲಿ) ಕೊಡವರು ಅದನ್ನ ಭಕ್ತೀ ಅಂತ ಕೊಡತಿದ್ದರು ಮತ್ತು ಇಸಗೋಳಾವರು ಅದನ್ನ ಭಿಕ್ಷಾ ಅಂತ ಅನಕೋತಿದ್ದಿಲ್ಲ. ಮುಂದ ಕೊಡವರಿಗೆ ಅದು ಭಿಕ್ಷಾ ಅಂತ ತಿಳೀತು... ಕೊಡೂದನ್ನ ಬಂದ ಮಾಡಿದರು... ...ಈಗ ಮಂದಿಗೆ ದೇವರ ಖರೇ ಹಕೀಕತ್ತು ತಿಳದೈತಿ. ಹಿಂಗಾಗಿ ಕೊಡೂದು ಗಿಡೂದು ಬಂದ ಮಾಡ್ಯಾರು... ...ದೇವರೂ ದಿಂಡರೂ ಎಲ್ಲ ಔಟ್ ಆಫ್ ಡೇಟ್ ಆಗ್ಯಾವರೀ... ಔಷಧದ ಬಾಟಲೀ ಮ್ಯಾಗಿನ... ಎಕ್ಸ್‍ಪೈರೀ ಡೇಟು... ಹಂಗ!...’ (ಪುಟ-೭೪) ಅನ್ನುತ್ತಲೇ ತಾನು ಸೇವೆಗೆ ಹೋಗುವುದನ್ನು ಇನ್ನೂ ನಿಲ್ಲಿಸಿಲ್ಲ ಎಂದೂ ಒಪ್ಪಿಕೊಳ್ಳುತ್ತಾನೆ.

ಬೇರು ಕಡಿಯಲು ಸಾಧ್ಯವಿಲ್ಲದ ಅತಂತ್ರ ಸ್ಥಿತಿ ಆತನದು. ಜೊತೆಗೆ, ‘ಇನ್ನೂ ನಿಂದರಿಸಿಲ್ಲರೀ... ಆದರ ನಾವು ನಡಕೋದರೊಳಗ ನಮಗ ನಂಬಿಕೀ ನಿಷ್ಠಾ ಇರಬೇಕಲ್ಲರಿ... ಖರೇದಿಂದ ನಡಕೋಬೇಕು... ...ಸ್ವತಾ ನಾನಽ ಈಗ ಎರಡ ವರ್ಷ ನಮ್ಮ ಮೂಲ ಮುತ್ಯಾ ಏನು ಹಾದೀ ಹಾಕಿಕೊಟ್ಟಿದ್ದ ನೋಡರಿ, ಅದಽ ಪ್ರಕಾರನಽ ಅಗದೀ ನಿಷ್ಠಾದಿಂದ ಸೇವಾ ನಡಿಸಿದಿನರೀ... ಒಳಗಿಂದು ಶುದ್ಧಮಾಡಿಕೊಳ್ಳುವ ಆಚಾರಾ, ಯಾತ್ರಾಽ... ಎಲ್ಲಾನೂ... ಆದರ ಮನಸಿಗೇ ಎಲ್ಲಾ ವ್ಯರ್ಥ ಅನಿಸಿತರಿ. ಗೂಗೀಕೊಳ್ಳದಾಗ ಈಗ ಯಾವ ಸಿದ್ಧರೂ ಕಾಣೂದಿಲ್ಲ. ಅಲ್ಲಿ ಈಗ ಕಳ್ಳರು ಅಡಗಿಕೊಂಡಿರತಾರರಿ...’ ಹೀಗೆ ಹೇಳುತ್ತಾ ಹೇಳುತ್ತಾ ಆತ, ಮುನ್ನೋಳಿಯಲ್ಲಿ ನದಿಯಲ್ಲಿ ದರಿಗಟ್ಟಿ, ನೀರು ಹರಿಯದೆ ಕೊಳೆತು ನಾರುತ್ತಿರುವುದನ್ನೂ, ಪಂಚಲಿಂಗೇಶ್ವರನ ಗುಡಿಯ ಹಾದಿಯುದ್ದಕ್ಕೂ ಬಾರುಗಳು ಮತ್ತು ತಂಬಾಕಿನ ಪ್ಯಾಕೆಟ್‍ಗಳ ತೋರಣಗಳನ್ನೂ ಕಂಡು ರೋಸಿಹೋಗಿದ್ದನ್ನು ವಿವರಿಸುವಾಗ ‘ನಾವು ಎತ್ತ ಸಾಗಿದ್ದೇವೆ’ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವಂತಾಗುತ್ತದೆ. ನಮ್ಮದೇ ಒಳಗಿನ ಒಂದು ಸಾಮಾಜಿಕ ನಿಷ್ಠೆಯ ಧ್ವನಿಯಾಗಿ ಈ ದ್ಯಾವ ಮಾತಾಡುತ್ತಾನೆ. ತಡೆಯಲಾರದ ಬಿಸಿಲಿನಿಂದ ನೆರಳಿಗೆಂದು ಯಾರದ್ದಾದರೂ ಮನೆಯ ಕಟ್ಟೆಗೆ ಹೋದರೆ ಅವರು ತಟಕ್ಕಂತ ಬಾಗಿಲು ಹಾಕಿಕೊಳ್ಳುವುದನ್ನೂ, ಬಾಯಾರಿದಾಗ ಒಂದು ಚರಿಗೆ ನೀರು ಕೇಳಿದರೆ ಚಹಾದ ಅಂಗಡಿಗೆ ಹೋಗೆನ್ನುತ್ತಾರೆ ಅನ್ನುವುದನ್ನೂ ವಿಷಾದದಿಂದ ಹೇಳುತ್ತಲೂ, ‘ಒಮ್ಮೆ ನಳ್ಳಿಯಲ್ಲಿ ನೀರು ಬಂದರೆ ಮತ್ತೆ ಯಾವಾಗ ಬರುತ್ತೆ ಅನ್ನುವುದು ಅವರಿಗೇ ತಿಳಿಯದಿರುವಾಗ ಅವರಾದರೂ ಏನು ಮಾಡಿಯಾರು’ ಎಂದು ಅವರೆಡೆಗೆ ಅನುಕಂಪವನ್ನೂ ತೋರಿಸುವ ದ್ಯಾವಪ್ಪ ನಮ್ಮವನೇ ಆಗಿಬಿಡುತ್ತಾನೆ. ‘ಯಾವ ಒಂದ ದೇವಸ್ಥಾನದೊಳಗನೂ, ಒಂದ ಕ್ಷೇತ್ರದಾಗಾದರೂ ದೇವರಿದ್ದಾನಂತ ಅನ್ನೂ ಭಾವನಾ ನನಗ ಬರಲಿಲ್ಲ ನೋಡ್ರಿ’ (ಪುಟ-೭೫) ಅನ್ನುವ ಆಧುನಿಕ ದ್ಯಾವಪ್ಪನ ಪ್ರಾಮಾಣಿಕತೆ ಮತ್ತು ನಿರ್ಭಿಡೆ ನಮಗಿದೆಯೆ?

ಕೊನೆಯಲ್ಲಿ, ದ್ಯಾವಪ್ಪನನ್ನು ಹುಡುಕುತ್ತಾ ಹೊರಟ ಪತ್ರಕರ್ತ ಪಾಟೀಲನಿಗೆ ಉದಗಟ್ಟಿಯ ಬಾಲವಿಧವೆ, ಎರಡು ಮಕ್ಕಳ ತಾಯಿ, ಡೊಂಬರ ಬಾಳವ್ವನಿಂದ ದೊರಕುವ ಮಾಹಿತಿಗಳು ಅವನತಿಯತ್ತ ಸಾಗಿದ್ದ ಆಧುನಿಕ ದ್ಯಾವಪ್ಪನಿಗೆ ಓದುಗರ ದೃಷ್ಟಿಯಲ್ಲಿ ಮತ್ತೆ ಎತ್ತರ ಗಳಿಸಿಕೊಡುತ್ತವೆ. ಇವರಿಬ್ಬರ ಸಂಬಂಧದ ಬಗೆಗೆ, ಆರುವರ್ಷಗಳ ಹಿಂದೆ, ಧರಮನಟ್ಟಿಯಿಂದ ದ್ಯಾವಪ್ಪನನ್ನು ಹುಡುಕಿಕೊಂಡು ಬಂದಿದ್ದ ಹುಡುಗರಿಗೆ ಬಾಳವ್ವನ ಅತ್ತೆ ಹೇಳಿದ ಮಾತುಗಳಿಂದಲೇ ಒಂದು ನಿಶ್ಚಿತ ರೂಪ ದೊರೆತಿದ್ದು, ಅದೀಗ ಬಾಳವ್ವನ ಮಾತುಗಳಿಂದ ಖಚಿತತೆ ಪಡೆಯುತ್ತದೆ. ಅಂದು ಆ ಮುದುಕಿ ಆ ಹುಡುಗರನ್ನು ಕೂರಿಸಿಕೊಂಡು, ‘ದ್ಯಾವಪ್ಪ ದೇವರಂಥ ಮನುಷ್ಯ. ತನ್ನ ಸೊಸೆ ಬಾಳವ್ವ ವಿಧವೆಯಾದರೂ, ಈಕೆಗೆ ಎರಡು ಮಕ್ಕಳಿದ್ದಾರಾದರೂ, ತಾವು ಹೀನ ಕುಲದಲ್ಲಿ ಬಂದವರಾದರೂ, ಇವ್ಯಾವುದನ್ನೂ ಲೆಕ್ಕಿಸದೆ ಬಾಳವ್ವನನ್ನು ಮದುವೆಯಾಗಲು ಇಚ್ಛಿಸಿದ್ದ. ಆದರೆ, ತಾನೇ ಈ ಮದುವೆಗೆ ಉದ್ದವ್ವನ ಅಪ್ಪಣೆಯಾಗಬೇಕೆಂದು ಬಯಸಿದೆ. ದೇವಿಯನ್ನು ಕೇಳಿದರೆ ಆಕೆ, ‘ಮುಂದೆ ನೋಡೋಣ...’ ಅನ್ನುತ್ತಲೇ ವರ್ಷಾ ವರ್ಷಾ ಮುಂದೂಡುತ್ತಲೇ ಬಂದಳು. ಅದರಿಂದಾಗಿ, ದ್ಯಾವಪ್ಪ ಬಂದಾಗೆಲ್ಲ ಹೊರಗೆ ಜಗಲಿಯಲ್ಲಿ ಅವನ ಹಾಸಿಗೆ ಹಾಸಿಕೊಳ್ಳುತ್ತಿದ್ದ. ತಾನೇ ಹೇಳಿದರೂ, ಬಾಳವ್ವ ಕರೆದರೂ ಒಳಗೆ ಬಂದು ಮಲಗುತ್ತಿರಲಿಲ್ಲ. ದೇವರ ಅಪ್ಪಣೆಗೆ ಕಾದ ಮೇಲೆ, ಅಪ್ಪಣೆ ಆಗಿಯೇ ಮದುವೆಯಾಗೋಣ, ಆಮೇಲೆಯೇ ಜೊತೆಗಿರೋಣ ಅನ್ನುತ್ತಿದ್ದನಂತೆ. ಅಷ್ಟಾದರೂ ಬಾಳವ್ವನಿಗೆ, ತನಗೆ ಮತ್ತು ಮಕ್ಕಳಿಗೆ ಊಟ-ಬಟ್ಟೆಗಾಗಿ, ಮಕ್ಕಳ ಶಾಲೆಗಾಗಿ ಹಣ ಕಳಿಸುತ್ತಲೇ ಇರುತ್ತಾನೆ. ತನ್ನನ್ನು ದೊಡ್ಡವ್ವ ಅಂತಲೇ ಆದರಿಸುತ್ತಾನೆ. ಅಂಥಾ ಒಳ್ಳೆಯವನನ್ನೂ ದೇವಿ ಉದ್ದವ್ವ ಅದೇಕೆ ಪರೀಕ್ಷಿಸುತ್ತಿದ್ದಾಳೋ ತಿಳಿಯದು...’ (ಪುಟ-೧೦೦-೧೦೩) ಎಂದೆಲ್ಲ ಗೋಗರೆದಿದ್ದಳು.

ಅದರ ಮುಂದುವರಿಕೆಯಾಗಿಯೇ ಈಗ ಬಾಳವ್ವ ಪತ್ರಕರ್ತ ಪಾಟೀಲನಿಗೆ, ಆತ ಇನ್ನೂ ಅದ್ಯಾವುದೋ ಅರಿಯದ ಊರಿನಿಂದ, ಒಮ್ಮೊಮ್ಮೆ ಒಂದೊಂದು ಪೋಸ್ಟ್ ಆಫೀಸಿನಿಂದ, ಮನಿಯಾರ್ಡರು ಕಳಿಸುತ್ತಿದ್ದಾನೆಂದೂ, ತನ್ನ ಬಗ್ಗೆ ಏನೂ ಬರೆಯುತ್ತಿರಲಿಲ್ಲವೆಂದೂ ತಿಳಿಸುತ್ತಾಳೆ. ಬಳಿಕ, ತನ್ನದೇ ಪ್ರಯತ್ನದಲ್ಲಿ, ಪೋಸ್ಟ್ ಮಾಸ್ಟರರ ಸಹಾಯದಿಂದ ‘ಅದೆಲ್ಯೋ ಮರಾಸ್ಟ್... ಅಂತ ಆರೇನಾಡ ಐತೆಂತ... ಅಲ್ಲಿ ವರದಾ ಅಂತ ಊರೈತೆಂತ... ಆ ಊರಾಗ ಒಂದ ಆಶ್ರೇಮ ಐತೆಂತ... ಆ ಆಶ್ರಮದಾಗ ಇದ್ದರೂ ಇದ್ದಿದ್ದಾನು...’ (ಪುಟ-೧೩೬) ಅಂತೆಲ್ಲ ಊಹೆ ಮಾಡಿ ಅಲ್ಲಿಗೆ ಒಂದು ಪತ್ರ ಬರೆಸಿದ್ದಕ್ಕೆ, ಅಂದಿಗೆ ಆರು ತಿಂಗಳ ಹಿಂದೆಯಷ್ಟೇ ಬಂದ ಉತ್ತರವನ್ನು ತೋರಿಸುತ್ತಾಳೆ.

ಆ ಪತ್ರದಲ್ಲಿ ದ್ಯಾವಪ್ಪನು ಬಾಳವ್ವನಿಗೆ ಉನ್ನತವಾದ ಸಂದೇಶವನ್ನೇ ಕಳುಹಿಸಿದ್ದ. ಆಕೆಯಿಂದಲೂ ಅಂಥ ಆದರ್ಶವನ್ನು ಬಯಸಿದ್ದ. ತಾನು, ಬಾಬಾ ಆಮ್ಟೆಯವರ ಆಶ್ರಮದಲ್ಲಿ ಸೇವಾನಿರತನಾಗಿ ತನ್ನ ಬದುಕು ಸಮಾಜಕ್ಕೆ ಉಪಯೋಗವಾಗುವ ನಾಲ್ಕು ಕೆಲಸಗಳಿಗೆ ಬಳಕೆಯಾಗಲಿ ಎಂದು ಅಲ್ಲಿಗೆ ಹೋಗಿದ್ದಾಗಿ ತಿಳಿಸಿದ್ದ. ತನ್ನ ಮತ್ತು ಬಾಳವ್ವನ ಈ ಜನ್ಮದಲ್ಲಿ ತಮ್ಮ ಸಂಬಂಧ ಪ್ರೀತಿಯ ಮತ್ತು ಮನಸಿಗೆ ಸಂಬಂಧಿಸಿದ ಮುಖದಲ್ಲಿ ಮಾತ್ರ ಸಾಧ್ಯವೆಂದೂ ಪುನರ್ಜನ್ಮ ಇರುವುದಾದರೆ ಮುಂದಿನ ಜನ್ಮದಲ್ಲಿ ಗಂಡ ಹೆಂಡತಿಯ ಸಂಬಂಧದ ಇನ್ನೊಂದು ಮುಖವಾದ ದೈಹಿಕ ಸಂಬಂಧವೂ ಸಾಧ್ಯವಾಗಬಹುದು ಎಂದೂ ಬರೆದಿದ್ದ. ‘...ದೇವರು ಅನ್ನುವುದು ಇದ್ದರೆ ಅದರ ವಿರುದ್ಧ ನನ್ನ ಧಿಃಕಾರವಿದೆ- ಅದರ ವಿರುದ್ಧ ನನ್ನ ಸತ್ಯಾಗ್ರಹವಿದೆ. ...ಆ ಸತ್ಯಾಗ್ರಹದ ಸಲುವಾಗಿಯೇ ನನ್ನ-ನಿನ್ನ ಮದುವಿಯ ದೈಹಿಕ ಮುಖ ಈ ಜನ್ಮದಲ್ಲಿ ಸಾಧ್ಯ ಆಗುವುದಿಲ್ಲ. ದೇವರ ವಿರುದ್ಧದ ಬಂಡಾಯ ಇದು... ...ಈ ಬಂಡಾಯದಲ್ಲಿ ನೀನೂ ಭಾಗಿಯಾಗುತ್ತೀ ಅಂತ ನಂಬಿದ್ದೇನೆ... ನಿನಗೆ ಕಷ್ಟ ಅನಿಸುವದಾದರೆ, ನಿನ್ನ ಶರೀರ ಒಪ್ಪದಿದ್ದರೆ, ಯೋಗ್ಯರು ಯಾರಾದರೂ ಸಿಕ್ಕು ನೀನು ಮದುವೆಯಾಗುತ್ತೀ ಅನ್ನುವುದಾದರೆ ನನ್ನದೇನೂ ಅಭ್ಯಂತರ ಇಲ್ಲ... ...ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡಿಸು. ಹಣದ ಬಗ್ಗೆ ಚಿಂತೆ ಮಾಡುವದು ಬೇಡ...’ (ಪುಟ-೧೩೯) ಎನ್ನುವುದು ಪತ್ರದ ಸಾರಾಂಶವಾಗಿತ್ತು.

ಪತ್ರ ಓದಿ ನಿಟ್ಟುಸಿರು ಬಿಟ್ಟ ಪತ್ರಕರ್ತ ಪಾಟೀಲನಿಗೆ ಬಾಳವ್ವನ ಹಳಹಳಿಕೆಗೆ- ತಮ್ಮ ಮದುವೆಯಾಗಿದೆಯೆಂದು ದ್ಯಾವಪ್ಪ ಒಮ್ಮೆ ಬರೆದು ನಂತರ ಈಕೆ ಯಾರನ್ನಾದರೂ ಮದುವೆಯಾಗುವುದಿದ್ದರೆ ಆತನ ಅಡ್ಡಿಯಿಲ್ಲವೆಂದುದೇ ಕಾರಣವಾಗಿ ಉಮ್ಮಳಿಸಿದ ದುಃಖಕ್ಕೆ- ಸಾಂತ್ವನವಿಲ್ಲವಾಗುವುದು, ದ್ಯಾವಪ್ಪನ ಪಾತ್ರದ ಮೇರುತ್ವಕ್ಕೆ ಗುರುತಾಗುತ್ತದೆ; ಬಾಳವ್ವನ ಪ್ರೀತಿಯ ನಿಷ್ಠೆಗೆ ಗೌರವವಾಗುತ್ತದೆ. ಆಧುನಿಕ ದ್ಯಾವಪ್ಪನ ಆದರ್ಶದಲ್ಲಿ ಬಾಳವ್ವನ ಪ್ರಾಮುಖ್ಯದ ಮನ್ನಣೆಯಾಗುತ್ತದೆ. ತೇರೆನ್ನುವುದು ಯುವ ದ್ಯಾವಪ್ಪನ ಆದರ್ಶಕ್ಕೆ ಪ್ರತೀಕವಾಗುತ್ತದೆ.

ಪತ್ರಕರ್ತ ಪಾಟೀಲ:
ಪತ್ರಕರ್ತ ಪಾಟೀಲ ಕಾದಂಬರಿಯ ನಿರೂಪಕರಲ್ಲಿ ಒಬ್ಬ. ಈತನದು ಒಂದು ರೀತಿಯಲ್ಲಿ ನಂಟು ಕಟ್ಟುವ ಪಾತ್ರ. ಕಥಾನಕದ ಬೇರೆ ಬೇರೆ ಕಾಲಮಾನವನ್ನು ಒಂದು ಎಳೆಯಲ್ಲಿ ಹೆಣೆಯುವುದಕ್ಕೆ ಬಳಸಿಕೊಂಡ ಪಾತ್ರ. ಈತ ಧರಮನಟ್ಟಿಯ ತೇರಿನ ಕಥಾನಕವನ್ನು ಇಂದಿನ ಕಾಲಮಾನಕ್ಕೆ ಹೆಣೆಯುವ ಸೂತ್ರವಾಗುತ್ತಾನೆ. ಈತನದೇ ವ್ಯಕ್ತಿತ್ವ ಅನ್ನುವಂಥ ಗಟ್ಟಿತನ ಢಾಳಾಗಿ ಕಾಣಿಸದಿದ್ದರೂ, ಕೊನೆಯಲ್ಲಿ ಈತ ಹೊಸ ದ್ಯಾವಪ್ಪನ ಪಾತ್ರವಿಕಸನದಲ್ಲಿ ಪ್ರಮುಖವಾಗುತ್ತಾನೆ. ಈತನ ಹುಡುಕಾಟದಲ್ಲಿಯೇ ದ್ಯಾವಪ್ಪ ತೆರೆದು ಬೆಳೆದು ನಿಲ್ಲುತ್ತಾನೆ.

ಪಾಟೀಲನದೇ ಅನ್ನುವಂಥಾ ಒಂದು ತುಣುಕು ನನ್ನನ್ನು ಬಹುವಾಗಿ ಸೆಳೆಯಿತು. ಅದು ನಮ್ಮಂಥ ಅನಿವಾಸಿ ಭಾರತೀಯರಿಗೆ, ಮರಳಿ ಮಣ್ಣಿಗೆ ಮರಳುವ ಕನಸಿಗರಿಗೆ ಒಂದು ಮುನ್ನೆಚ್ಚರಿಕೆಯಂತೆಯೂ ಕಂಡಿತು. ಪತ್ರಕರ್ತ ಪಾಟೀಲ, ತಾನು ರಿಟೈರ್ ಆಗಿ, ಫ್ಲಾಟನ್ನು ಬಂದಷ್ಟಕ್ಕೆ ಮಾರಿ, ಬೆಂಗಳೂರನ್ನು ತೊರೆದು, ಊರಿಗೆ ಬಂದುಬಿಡುತ್ತಾನೆ. ಬೆಟಗೇರಿಗೆ ಬಂದಮೇಲೆ, ‘...ನಾಕೈದು ತಿಂಗಳು ಅಲ್ಲಿ ನೆಲಿ ಊರಲಿಕ್ಕೆ ಕಳೆದವು... ಬೆಂಗಳೂರಿನ್ಯಾಗ ಇದ್ದವರು ವಾಪಸ್ಸು ಹಳ್ಳಿಗೆ ಬಂದು ನಿಲ್ಲುವುದರಲ್ಲಿ ಅದರದೇ ಆದ ಸಮಸ್ಯೆಗಳಿವೆ... ಬೆಂಗಳೂರಿನಿಂದ ನಮ್ಮೊಂದಿಗೆ ಇರಲು ಬಂದವರು ಅಂತ ಊರವರಿಗೆ ಏನೋ ಒಂದು ತರದ ಅಸಹನೆ ಮತ್ತು ಕುತೂಹಲ... ಅಲ್ಲಿಂದ ಬರುವಾಗ ಬುಟ್ಟಿಗಟ್ಟಲೆ ರೊಕ್ಕಾ ಕಟಿಗೊಂಡು ಬಂದಿರುತ್ತಾರೆನ್ನುವ ಭ್ರಮೆಯೊಳಗೆ ನಮ್ಮಿಂದ ಏನೇನೋ ಅಪೇಕ್ಷೆಗಳು... ಆಸೆಗಳು... ಸಣ್ಣಪುಟ್ಟ ಕೆಲಸಕ್ಕೆ ಕೂಲಿಗೆ ಕರೆದರೂ ಒಂದಕ್ಕೆ ಎರಡು ಮೂರು ಪಟ್ಟು ಕೇಳಿ ಗೋಳಾಡಿಸುವರು... ಯಾಕಾದರೂ ಹಳ್ಳಿಗೆ ಬಂದು ನೆಲೆಸುವ ವಿಚಾರ ಮಾಡಿದೆನೋ ಅನ್ನುವಂತೆ ಮಾಡಿದರು... ನಾನು ಕ್ರಮೇಣ ಅವರಿಗೆ ಹೊಂದಿಕೊಂಡು... ಅವರನ್ನು ಸಾಧು ಮಾಡಿಕೊಳ್ಳಲಿಕ್ಕೆ ನಾಕೈದು ತಿಂಗಳು ಬೇಕಾಯಿತು...’ (ಪುಟ-೧೨೬) ಎನ್ನುವ ಸ್ವಗತ ನಮ್ಮದೇ ಕಥೆ! ಅನಿವಾಸಿಗಳಾದ ನಾವೆಲ್ಲ ಕಾಣುವ, ಅನುಭವಿಸುವ ವಿಷಯ. ಅದೇ ಕಾರಣಕ್ಕಾಗಿ ಈ ಸಂದರ್ಭ ಗಮನ ಸೆಳೆಯಿತು.

ತೇರು- ಒಂದು ಪ್ರತಿಮೆಯಾಗಿ:

‘ಬೃಹತ್ ಚಕ್ರಗಳ, ಆರು ಮಜಲಿನ, ಹೊನ್ನ ಕಲಶದ, ಅಷ್ಟಕೋನಾಕಾರದ ಕಲ್ಲಿನ ರಥ’- ಇದು ಧರಮನಟ್ಟಿಯ ತೇರಿನ ಚಿತ್ರಣ ಒಂದೇ ವಾಕ್ಯದಲ್ಲಿ. ಈ ತೇರಿನ ಹಿಂದೆ ಇರುವ ಗಾಥೆ ಮಾತ್ರ ಒಂದೂವರೆ ಶತಮಾನದ್ದು. ಧರಮನಟ್ಟಿಯ ದೇಸಗತಿಯನ್ನು ಸ್ಥಾಪಿಸಿದ ರಂಗೋ ಪಟವರ್ಧನ ದೇಸಾಯರು ತನ್ನ ಮನೆದೇವರಾದ ವಿಠ್ಠಲ ರುಕುಮಾಯಿಯ ದೇವಸ್ಥಾನ ಕಟ್ಟಿಸಿ, ದೇವಸ್ಥಾನದ ಭವ್ಯತೆಗೆ ಒಪ್ಪುವಂಥಾ ಭವ್ಯತೆಯನ್ನೇ ಹೊಂದಿದ ಈ ಕಲ್ಲಿನ ರಥವನ್ನೂ ಕಟ್ಟಿಸುತ್ತಾರೆ. ರಥಕ್ಕೆ ಎರಡು ಮಾರು ಎತ್ತರವಿದ್ದ ಕಲ್ಲಿನ ಗಾಲಿಗಳು. ಗಾಲಿಗಳಿಗಿಂತ ಒಂದು ಮೊಳದಷ್ಟು ಮೇಲೆ ಎತ್ತರಕ್ಕೆ, ಎತ್ತರವಾದ ಈ ಚೌಕಟ್ಟಿನ ಮೇಲೆ ಆರು ಮಜಲಿನ ಅಷ್ಟಕೋನಾಕಾರದ ತೇರು. ಈ ಆರು ಮಜಲುಗಳಲ್ಲಿ, ಒಂದೊಂದು ಮಜಲಿನಲ್ಲೂ ಒಂದೊಂದು ರೀತಿಯ ಕೆತ್ತನೆಗಳು. ಆರನೇ ಮಜಲಿನ ಮೇಲೆ, ಸಿಂಗಾರ ಪ್ರಭೆಯ ಬಂಗಾರ ಕಳಸವು ಸೂರ್ಯ ಚಂದ್ರ ಬಿಂಬಗಳ ಜೊತೆಗೆ ನೆತ್ತಿಯಲ್ಲಿ ಸಹಸ್ರಾರ ಚಕ್ರವನ್ನು ಧರಿಸಿ ಮೆರೆದಿದೆ. ಇಂಥ ವೈಭವದ ತೇರನ್ನು ಧರಮನಟ್ಟಿಯ ಮತ್ತು ಸುತ್ತಮುತ್ತಲ ಊರಿನ ವೈಭವದ ಪ್ರತೀಕವಾಗಿಯೂ ಕಾಣಬಹುದು.

ಮಜಲು ಮಜಲುಗಳಲ್ಲಿ ಚಿತ್ರಿತವಾಗಿರುವ ಬೇರೆ ಬೇರೆ ಕೆತ್ತನೆಗಳು ಸಮಾಜದ ಬೇರೆ ಬೇರೆ ಸ್ತರಗಳನ್ನೂ ಪ್ರತಿನಿಧಿಸುವುದು. ಯಾವುದೇ ಒಂದು ದೇಸಗತಿಯಲ್ಲಿ/ ಸಾಮ್ರಾಜ್ಯದಲ್ಲಿ ಆಡಳಿತದ ಭದ್ರತೆಗೆ, ಸ್ಥಿರತೆಗೆ, ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಎಲ್ಲ ಸ್ತರಗಳ ವ್ಯಕ್ತಿಗಳೂ ಜವಾಬ್ದಾರರು. ಮೇಲು ಕೀಳೆಂಬ ಭೇದ ನಡವಳಿಕೆಗಳಲ್ಲಿ ಇದ್ದರೂ ಸಾಮಾಜಿಕ ಜೀವನಕ್ಕೆ ಎಲ್ಲರೂ ಮುಖ್ಯರು. ತೇರಿನಲ್ಲಿನ ಆರು ಮಜಲುಗಳು ಸಮಾಜದಲ್ಲಿ ಅಂತಹ ಹೊಂದಾಣಿಕೆಯಿರಬೇಕಾದ ಅವಶ್ಯಕತೆಯನ್ನು ತೋರುತ್ತದೆ. ಯಾವುದೇ ಒಂದು ಮಜಲಿನ ಪ್ರಾಮುಖ್ಯವನ್ನು ಅಲ್ಲಗಳೆಯಲಾಗದು. ಅಂತೆಯೇ ತೇರಿನ ಹೊನ್ನ ಕಳಸ. ತೇರಿಗೆ ಮೆರುಗು ಕೊಡುವಂಥಾದ್ದು ಈ ಕಲಶವೇ ಆದರೂ, ಇತರ ಮಜಲುಗಳಿಲ್ಲದೆ ಕಲಶಕ್ಕೆ ನೆಲೆಯಿಲ್ಲ; ಕಳಸವಿಲ್ಲದೆ ಮಜಲುಗಳಿಗೆ ಬೆಲೆಯಿಲ್ಲ. ಈ ತೇರಿನ ಭವ್ಯತೆ, ದೇಸಾಯರ ಶ್ರೇಷ್ಠತೆಗೆ ಪ್ರತಿಮೆಯಾದಂತೆಯೇ ದೇಸಗತಿಯ ಜನಜೀವನದ ಉಚ್ಛ್ರಾಯದ ಸಂಕೇತವೂ ಹೌದು.

ಮೂಲ ದ್ಯಾವಪ್ಪನ ಕಾಲದಲ್ಲಿ ಮೊದಲ್ಗೊಂಡ ತೇರಿನ ಔನ್ನತ್ಯ ಆ ಕಾಲದಲ್ಲಿ ಸಾಮಾನ್ಯ ಜನರಿಗೆ ದೇವರ, ಉತ್ಸವದ ಮೇಲಿದ್ದ ಭಕ್ತಿ ಉತ್ಸಾಹಗಳಿಗೂ ರೂಪಕವಾಗಿ ಕಾಣುತ್ತದೆ. ಕಾಲ ಸಂದಂತೆ, ದ್ಯಾವಪ್ಪನ ವಂಶಜರ ಭಕ್ತಿ ಕಡಿಮೆಯಾಗುತ್ತಾ ಬಂದು, ಆಧುನಿಕ ದ್ಯಾವಪ್ಪನಲ್ಲಿ ದೇವರ ಬಗ್ಗೆ ಸಂಶಯ ನಿರಾಕರಣೆಗಳೇ ತುಂಬಿಕೊಳ್ಳುತ್ತವೆ. ಅದಕ್ಕೆ ಹೊಂದುವಂತೆ, ಅದೇ ಸಮಯದಲ್ಲಿ ತೇರಿನ ಭವ್ಯತೆಯ ಆಧಾರವಾದ ವಿಠ್ಠಲನ ದೇವಸ್ಥಾನದಲ್ಲಿ ದೇವರ ಆಭರಣಗಳ ಕಳ್ಳತನವೂ ಇದನ್ನೇ ಪ್ರತಿಬಿಂಬಿಸುವ ಪ್ರಸಂಗವಾಗುತ್ತದೆ. ತೇರಿಗೆ ನಡೆಯಬೇಕಾದ ರಕ್ತ ತಿಲಕದ ಸೇವೆ ನಿಂತೇ ಹೋಗಿ ತೇರಿನ ಶ್ರೇಷ್ಠತೆಯ ಮೇಲೆ ತೆರೆಯೆಳೆದಂತೆ, ಇದ್ದಕ್ಕಿದ್ದಂತೆ ಒಂದು ಉನ್ನತ ಪರಂಪರೆಯೇ ಕೊನೆಗೊಳ್ಳುತ್ತದೆ. ಅದೇ ನೆಪವಾಗಿದ್ದುಕೊಂಡು, ತೇರಿನ ವೈಭವದ ಆರಾಧಕನಾಗಿದ್ದ ಹಿರಿಯ ಸ್ವಾಂವಜ್ಜನೂ ಕೊನೆಯುಸಿರೆಳೆಯುತ್ತಾನೆ. ಸಮಾಜದಲ್ಲಿ ಅರ್ಥವಾಗದೆ ಕಳೆದುಹೋಗುವ ಕೆಲವು ಸಂಕೀರ್ಣ ಸಂಬಂಧಗಳ ಗುಂಪಿಗೆ ಸ್ವಾಂವಜ್ಜ-ತೇರಿನ ಸಂಬಂಧವೂ ಸೇರಿಹೋಗಿ, ಜನಮಾನಸದಿಂದ ಮರೆಯಾಗುತ್ತದೆ. ಹೊನ್ನ ಕಲಶದ ಕಲ್ಲಿನ ತೇರು ಇವೆಲ್ಲದಕ್ಕೂ ಬರೀ ಕಲ್ಲ ಸಾಕ್ಷಿಯಾಗಿ ಉಳಿದುಬಿಡುತ್ತದೆ.

ಒಟ್ಟು ನಿರೂಪಣೆ- ತಂತ್ರ, ಶೈಲಿ, ಭಾಷೆ:

ಲೇಖಕ ರಾಘವೇಂದ್ರ ಪಾಟೀಲರು ಈ ಕಾದಂಬರಿಯ ನಿರೂಪಣೆಯಲ್ಲಿ ಮೂರು ಪ್ರಮುಖ ನಿರೂಪಕರನ್ನೂ, ಗೊಂದಲಿಗರ ಗಾಯನವನ್ನೂ, ತೇರೆನ್ನುವ ಪ್ರತಿಮೆಯನ್ನೂ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಜಾನಪದ ಕಥಾನಕದಂತಹ ತೇರಿನ ಹಿನ್ನೆಲೆಯ ಕಥಾಭಾಗಕ್ಕೆ ಗೊಂದಲಿಗರ ಗಾಯನದಂತಹ ನಿರೂಪಣಾ ತಂತ್ರವನ್ನು ಹಿಡಿದಿದ್ದಾರೆ. ಅದರಲ್ಲಿನ ಜಾನಪದ ಸೊಗಡು ತೇರಿನ ಹಿನ್ನೆಲೆಗೆ ಗಟ್ಟಿತನ ಒದಗಿಸಿಕೊಡುತ್ತದೆ. ಕಥಾನಕದ ಉದ್ದಕ್ಕೂ ಬಳಸಲಾಗಿರುವ ಗ್ರಾಮ್ಯ ಭಾಷೆ, ಅಭ್ಯಾಸವಿಲ್ಲದವರಿಗೆ ಮೊದಲ ಓದಿನಲ್ಲಿ ತೊದಲುವಂತೆ ಅನಿಸಿದರೂ ಕಥೆಯ ವಾತಾವರಣದಿಂದಾಗಿ ಅದು ನಮ್ಮನ್ನು ಆವರಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ; ಕನ್ನಡದ ಒಂದು ಪ್ರಾದೇಶಿಕ ಸೊಗಡನ್ನು ಪರಿಚಯಿಸುತ್ತದೆ. ವಿವಿಧ ಕಾಲಘಟ್ಟಗಳಲ್ಲಿ ನಡೆಯುವ ಕಥೆಯನ್ನು, ವಿವಿಧ ಪ್ರದೇಶಗಳಲ್ಲಿ ನಡೆಯುವ ಘಟನೆಗಳನ್ನು ಒಂದೆಡೆಯಲ್ಲಿ ಪೋಣಿಸಿಡುವಲ್ಲಿ ಪತ್ರಕರ್ತ ಪಾಟೀಲ, ಸ್ವಾಂವಜ್ಜ, ಮತ್ತು ಅವ್ಯಕ್ತ ನಿರೂಪಕನಾಗಿ ಕಾದಂಬರಿಕಾರ ಮೂರು ಹೆಣಿಗೆಗಳಾಗಿ ಒಂದೇ ಕಥಾನಕವನ್ನು ಹೆಣೆದುಕೊಟ್ಟು, ಓದುಗರಿಗೆ ಸುಂದರ ಕಲಾಕೃತಿ ಲಭ್ಯವಾಗಿದೆ.

ಕಣ್ತೊಡಕುಗಳು:

ಕಾದಂಬರಿಯನ್ನು ಓದಿಕೊಂಡು ಹೋಗುವಾಗ ಧುತ್ತನೇ ಗೋಡೆಯಂತೆ ಎದ್ದುನಿಲ್ಲುವಂತಹ ಅಥವಾ ಎಡವಿದಂತೆ ಭಾಸವಾಗುವಂತಹ ಗಂಭೀರ ಎಡವಟ್ಟುಗಳು ಕಾಣದಿದ್ದರೂ ಈ ಕೆಲವು ಸಂದರ್ಭಗಳನ್ನು ಲೇಖಕರು ತುಸು ಜಾಗ್ರತೆಯಾಗಿ ನಿರ್ವಹಿಸಬಹುದಿತ್ತು ಅನಿಸಿತು. ಇವೆಲ್ಲವೂ ಕಥೆಯ ಓಟಕ್ಕೆ, ರಸಾಸ್ವಾದಕ್ಕೆ ಅಡ್ಡಿಯುಂಟುಮಾಡದಿದ್ದರೂ, ನನ್ನಂತೆ ಕತೆಯೊಳಗೆ ಪಾತ್ರವಾಗಿ ಹೂತುಹೋಗಿ ಓದುವವರಿಗೆ ಸ್ವಾದಿಷ್ಟ ಭೋಜನದಲ್ಲಿ ಕಲ್ಲು ಸಿಕ್ಕಂತೆ ಆಗಬಹುದು.

ಮೊದಲನೆಯದು ಗೊಂದಲಿಗರ ಗಾಯನದ ಸಂದರ್ಭ: ಗಾಯನದಲ್ಲಿ- ‘ಚೈತ್ರ ಶುಕ್ಲದ ತ್ರಯೋದಶಿಯ ದಿನವೊ| ತದಗೀ ಎಂಬೂವ ಸುಮುಹೂರ್ತದಾಗೆ| ಸ್ವಾಮೀಯ ತೇರೂ ಎಳಿಯೂವದಯ್ಯಾ...’ (ಪುಟ-೧೧). ಹೀಗೆ, ‘ಚೈತ್ರದ ಶುಕ್ಲ ತದಗಿ’ಯ ದಿನ ತೇರನೆಳೆಯುವುದೆಂದು ಹೇಳುವಾಗ ಮೊದಲು ತ್ರಯೋದಶಿಯೆಂದು ನುಡಿದು ನಂತರ ತದಿಗೆಯೆಂದು ಹಾಡಲಾಗಿದೆ. ಗಾಯನದಲ್ಲಿ/ ಕಥೆಯಲ್ಲಿ ಮುಂದೆ ತದಿಗೆಯ ದಿನವೆಂದೇ ಬರುತ್ತದಾದ್ದರಿಂದ ಇದು ಕರಡು/ ಅಚ್ಚಿನಮನೆಯ ದೋಷ ಇರಬಹುದು ಅಂದುಕೊಂಡರೂ ಓದುತ್ತಿದ್ದಂತೆ, ಒಮ್ಮೆ ತ್ರಯೋದಶಿಯಿದ್ದದ್ದು ಮುಂದಿನ ಸಾಲಿಗೇ ತದಿಗೆಯಾದದ್ದು ತಮಾಷೆಯಾಗಿ ಕಾಣುತ್ತದೆ.

ಎರಡನೆಯದು ಇದೇ ಭಾಗದ ಕೊನೆಯಲ್ಲಿ ಬರುತ್ತದೆ: ಧರಮನಟ್ಟಿಯ ರಥೋತ್ಸವ ಮುಗಿಸಿಕೊಂಡು, ತೇರಿಗೆ, ರಕ್ತ ತಿಲಕಕ್ಕೆ ಸಂಬಂಧಪಟ್ಟ ಸನದನ್ನು ನೋಡುವ ಸಲುವಾಗಿ ಪತ್ರಕರ್ತ ಪಾಟೀಲ ಕಳ್ಳೀಗುದ್ದಿಗೆ ಹೋಗುತ್ತಾನೆ. ‘...ಅಲ್ಲಿ ಗೊಂಬೀರಾಮರ- ಸೂತರದ ಗೊಂಬಿಯ ಆಡಿಸುವ- ರಗತ ತಿಲಕದವರ ಮನಿ ಹುಡಿಕಿಕೊಂಡು ಹೋಗಿ- ಅಲ್ಲಿ ದೇವರ ಜಗಲಿಯ ಮ್ಯಾಲ ಇಟ್ಟಿದ್ದ ಧರಮನಟ್ಟಿಯ ದೇಸಗತಿಯವರು ಬರದುಕೊಟ್ಟ ಸನದನ್ನು ನೋಡಿ... ನನ್ನ ಕುತೂಹಲವನ್ನು ತಣಿಸಿಕೊಂಡ ಮೇಲೆಯೇ ಬೆಂಗಳೂರಿಗೆ ಬಂದೆ...’ (ಪುಟ-೩೫), ಇದೇನೋ ಸರಿಯಿದೆ. ನನಗೆ ಗೊಂದಲವಿರುವುದು, ಅಥವಾ ಕೊಂಡಿ ಸರಿಯಿಲ್ಲವೆಂದು ಅನಿಸಿದ್ದು- ಪಾಟೀಲ ಕಳ್ಳೀಗುದ್ದಿಗೆ ಹೋಗಿ ಅಲ್ಲಿ ಮನೆ ಹುಡುಕಬೇಕಾದ ಪ್ರಸಂಗ ಯಾಕೆ ಬಂದಿರಬೇಕು? ಕಥೆಯ ಪ್ರಕಾರ ಪ್ರತೀ ವರ್ಷದ ಉತ್ಸವಕ್ಕೆ ಕಳ್ಳೀಗುದ್ದಿಯಿಂದ ಗೊಂಬೀರಾಮರ ದ್ಯಾವಪ್ಪನ ವಂಶದವನೊಬ್ಬ ರಕ್ತತಿಲಕದ ಸೇವೆಗೆ ಬಂದಿರಲೇಬೇಕಲ್ಲ! (ಆಧುನಿಕ ದ್ಯಾವಪ್ಪನ ಮೊದಲು ಆತನ ತಂದೆ ಕುಬೇರಪ್ಪ ಉತ್ಸವಕ್ಕೆ ಬರುತ್ತಿದ್ದ, ರಕ್ತತಿಲಕದ ಸೇವೆ ನಡೆಸುತ್ತಿದ್ದ ಎನ್ನುವುದು ಮುಂದೆ ಬರುತ್ತದೆ.) ಅವನ ಜೊತೆಗೇ ಕಳ್ಳೀಗುದ್ದಿಗೆ ಹೋಗಿ ತನ್ನ ಕುತೂಹಲ ನಿವಾರಿಸಿಕೊಳ್ಳಬಹುದಿತ್ತಲ್ಲ. ಯಾಕೆ ಕುಬೇರಪ್ಪನ ಪ್ರಸ್ತಾಪವೇ ಬಂದಿಲ್ಲ ಇಲ್ಲಿ? ಯಾಕೆ ಅವನೊಂದಿಗೇ ಹೋಗಲಿಲ್ಲ? ಈ ಭಾಗ ಓದಿದ ತಕ್ಷಣವೇ ನನಗನಿಸಿದ್ದು ಇದು. ಇದನ್ನೂ ಲೇಖಕರು ಒಂದಿಷ್ಟು ಸೂಕ್ಷ್ಮವಾಗಿ ಗಮನಿಸಬಹುದಿತ್ತು.

ನಾನು ಗಮನಿಸಿದ ಇನ್ನೂ ಒಂದು ವಿಷಯವೆಂದರೆ, ಪುಟ ೯೩-ರಲ್ಲಿ ಕಿರಿಯ ದ್ಯಾವಪ್ಪನ ತಾಯಿಯ ಹೆಸರು ತಾರವ್ವ ಎಂದೂ, ಮುಂದೆ ಪುಟ ೧೩೦-ರಲ್ಲಿ ಆಕೆಯು ಸುಶೀಲವ್ವ ಎಂದೂ ಇವೆ. ಮೊದಲು ಧರಮನಟ್ಟಿಯಲ್ಲಿ ಆಕೆಯನ್ನು ತಾರವ್ವ ಎನ್ನುತ್ತಾರೆ. ಸುಶೀಲವ್ವನೆಂದು ಕಳ್ಳೀಗುದ್ದಿಯಲ್ಲಿ ಪತ್ರಕರ್ತ ಪಾಟೀಲನಿಗೆ ಹೇಳಲಾಗುತ್ತದೆ. ಈಕೆಗೇನಾದರೂ ಎರಡು ಹೆಸರುಗಳಿದ್ದವೆ? ಅಥವಾ ಅವಸರದ ಬರವಣಿಗೆಯಲ್ಲಿ ಕಣ್ತಪ್ಪಿನಿಂದಾದುದೆ? ಇದೂ ನಿವಾರಿಸಿಕೊಳ್ಳಬಲ್ಲ ವಿಷಯ.

ಇನ್ನು ಪುಟ್ಟ ಪುಟ್ಟ ಒಂದೆರಡು ಪ್ರಸಂಗಗಳು, ಬರವಣಿಗೆಯಲ್ಲಿ ನಾವುಗಳೆಲ್ಲರೂ ಗಮನಿಸಲೇಬೇಕಾದ ಕಾಲಮಾನದ ಲೆಕ್ಕಾಚಾರದವು. ‘ತೇರು’ವಿನಂತಹ ದೀರ್ಘಕಾಲಾವಧಿಯಲ್ಲಿ ನಡೆಯುವ ಕಾದಂಬರಿಯನ್ನು ಬರೆಯುವಾಗ ಕಾಲಮಾನದ ಲೆಕ್ಕ ತಪ್ಪುವುದು ಸಹಜ (ಪತ್ರಕರ್ತ ಪಾಟೀಲನ ನೆಲೆಯಲ್ಲಿ, ಸುಮಾರು ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ಕಥೆ ಸಾಗುತ್ತದೆ; ಧರಮನಟ್ಟಿಯ ಕಥಾನಕವು ನೂರಾ ಇಪ್ಪತ್ತೈದು ವರುಷಗಳ ಹಿನ್ನೆಲೆಯನ್ನೇ ಪಡೆದು ಇದೇ ಇಪ್ಪತ್ತೈದು ವರ್ಷಗಳಲ್ಲಿ ಮುಂದುವರಿಯುತ್ತದೆ). ಆದರೆ, ತಮ್ಮದೇ ಕೃತಿಯನ್ನು ಮತ್ತೊಂದೆರಡು ಬಾರಿ ಕೂಲಂಕುಶವಾಗಿ ಲೇಖಕರೇ ಓದಿಕೊಂಡಾಗ ಇಂತಹ ಕಣ್ತಪ್ಪುಗಳನ್ನು ಹುಡುಕಿ ಹಿಡಿಯಬಹುದು (ಲೇಖಕರಿಗೆ ಕಥೆಯ ಕಾಲಮಾನದ ಅಂದಾಜಿರುವುದರಿಂದ ಅದು ಸುಲಭಸಾಧ್ಯ).

ಇದರಲ್ಲಿ ಮೊದಲಾಗಿ, ಮೂಲ ದ್ಯಾವಪ್ಪ ಕಳ್ಳೀಗುದ್ದಿಯಲ್ಲಿ ಹಳಿಮನಿ ಶಂಕರಜ್ಜನ ಜೊತೆ ಮಾತಾಡುತ್ತಾ, ‘...ನಾ ಕಳ್ಳೀಗುದ್ದಿಗೆ ಬಂದ ಇನೂ ಮೂರ ವರಸ ಸೈತ ಪೂರಾ ಆಗಿಲ್ಲ’ ಅನ್ನುತ್ತಾನೆ (ಪುಟ-೪೭). ಪುಟ ೪೩-ರಲ್ಲಿ ಆತ ಮೊದಲ ಬಾರಿಗೆ ಧರಮನಟ್ಟಿಯ ತೇರಿಗೆ ರಕ್ತತಿಲಕದ ಸೇವೆಗೆ ಹೋದ ಪ್ರಸಂಗ ಬರುತ್ತದೆ. ಆ ಹಿನ್ನೆಲೆಯಲ್ಲಿ ಈ ಮಾತನ್ನು ನೋಡಿದಾಗ ಇದು ‘ಎರಡು ವರ್ಷವೂ ಆಗಿಲ್ಲ’ ಎಂದಾಗಬೇಕಿತ್ತು. ಇಷ್ಟೂ ಲೆಕ್ಕ ತಪ್ಪುವ ಹಳ್ಳಿಮುಕ್ಕನೇನಲ್ಲ ಮೂಲ ದ್ಯಾವಪ್ಪ. ಇದು ಲೇಖನಿಯ ಓಟದ ತಪ್ಪು (ಎರಡು ಅಥವಾ ಮೂರು ವರ್ಷ; ಏನಂಥ ವ್ಯತ್ಯಾಸ ಅನ್ನಲಾರಿರಿ ಅಂದುಕೊಂಡಿದ್ದೇನೆ).

ಎರಡನೆಯದಾಗಿ, ಕಾದಂಬರಿಯ ‘ಭಾಗ: ಐದು’- ಮೊದಲ ವಾಕ್ಯವೇ ‘ಮರುದಿವಸನಽ ಸಪ್ತಮಿ...’ (ಪುಟ-೧೦೭). ಒಂದಿಷ್ಟು ಹಿನ್ನೋಟದಿಂದ, ಅಂದು ‘ಅಷ್ಟಮಿ’ ಆಗಬೇಕಾಗಿದ್ದುದು ತಿಳಿದುಬರುತ್ತದೆ. ಏಕೆಂದರೆ, ಸೇವೆಯ ದ್ಯಾವಪ್ಪ ಬರಬೇಕಾಗಿದ್ದುದು ಷಷ್ಟಿಯ ಸಂಜೆ. ಅಂದು ಆತ ಬರಲಿಲ್ಲ. ಮರುದಿನ- ಸಪ್ತಮಿಯ ದಿನ- ಸ್ವಾಂವಜ್ಜ ಹುಡುಗರನ್ನು ಉದಗಟ್ಟಿಗೆ ಕಳುಹಿಸಿ ಹುಡುಕಿಸುತ್ತಾನೆ. ಅಲ್ಲಿಯೂ ಆತ ಸಿಗದೆ, ಆತನ ಸುಳಿವಿಲ್ಲದೆ ಅವರೆಲ್ಲ ಸಂಜೆಗೆ ಹಿಂದಿರುಗುತ್ತಾರೆ. ಅದರ ಮಾರನೇ ದಿನ ಗೋಕಾವಿಗೆ ಹೋಗಬೇಕೆಂದು ಹುಡುಗರಿಗೆ ತಿಳಿಸುತ್ತಾನೆ. ದ್ಯಾವಪ್ಪ ಅಲ್ಲಿರುತ್ತಾನೆ ಅನ್ನುವ ನಂಬಿಕೆ ಇಲ್ಲವಾದರೂ ಅಂದು ಎಲ್ಲರೂ ಸ್ವಾಂವಜ್ಜನ ಮಾತಿಗೆ ಹೂಂ ಅಂದು ‘...ಚಿಂತಿಯನ್ನು ತಲಿಗೆ ಕಟಿಗೊಂಡು ಮನಿಗೆ ಹೋದರು’ (ಪುಟ-೧೦೪) ಅನ್ನುವಲ್ಲಿಗೆ ಸಪ್ತಮಿಯ ದಿನ (ಭಾಗ: ನಾಲ್ಕು ಕೂಡಾ) ಮುಗಿದಿರುತ್ತದೆ; ಮರುದಿವಸ ಅಷ್ಟಮಿ.

ಮೂರನೆಯದಾಗಿ, ಧರಮನಟ್ಟಿಯ ನೂರೈವತ್ತನೇ ರಥೋತ್ಸವದ ಮುನ್ನಾದಿನವೇ (ಅಷ್ಟಮಿಯ ದಿನ) ದೇವಸ್ಥಾನದ ಗರ್ಭಗುಡಿಯ ಬಾಗಿಲ ಬೀಗ ಒಡೆದು ಆಭರಣಗಳ ಕಳುವಾದ ಸಂದರ್ಭ. ಈ ಸಮಾಚಾರವನ್ನು ಸ್ವಾಂವಜ್ಜನಿಗೆ ವಿಠ್ಠಲ ದೇವರ ಪೂಜಾರಿ, ಛತ್ರೇರ ಮಾರೋತಿ ತಿಳಿಸುತ್ತಾನೆ. ಗಡಬಡಿಸುತ್ತಿದ್ದ ಅವನನ್ನು ಸ್ವಾಂವಜ್ಜ ‘ಮಾರ‍್ಯಾಽ... ನೆಪ್ಪ ಮಾಡಿಕೋ... ನಿನ್ನೆ ರಾತ್ರೀ ಕೀಲೀ ಹಾಕಿದ್ಯೋ ಇಲ್ಲೋ ನೋಡು...’ ಎಂದು ವಿಚಾರಿಸುವಾಗ ವಿವರಣೆ ಕೊಡುತ್ತಾ ಮಾರೋತಿ ಉತ್ತರಿಸುತ್ತಾನೆ: ‘ಅಗದೀ ಪಕ್ಕಾ ನೆನಪ ಐತ್ಯೋ ಯಜ್ಜಾ... ನಿನ್ನೆ ರಾತ್ರಿ ದ್ಯಾವಪ್ಪ ಬರಾಂವ ಇದ್ದನಲಾಽ... ಅದಕ್ಕಽ ಬಾಳೊತ್ತನಕಾ ಗುಡ್ಯಾಗ ಕಾಕೊಂತ ಕುಂತಿದ್ದಿನಿ... ...ಸರಹೊತ್ತು ಆದರೂ ದ್ಯಾವಪ್ಪ ಬರಲಿಲ್ಲ... ಆಗ... ...ಗರ್ಭದ ಗುಡೀ ಬಾಗಲಾ ಎಳದು ಕೀಲೀ ಹಾಕಿದಿನಿ...’ (ಪುಟ-೧೧೦) ಇಲ್ಲಿ ಗಮನಿಸಬೇಕಾದ ಅಂಶವೆಂದರೆ: ದ್ಯಾವ ಬರಬೇಕಾಗಿದ್ದದ್ದು ಷಷ್ಟಿಯ ಸಂಜೆ. ಅಂದು ಊರಿನವರೆಲ್ಲರೂ ಊರ ದಕ್ಷಿಣ ಅಗಸಿಯಲ್ಲಿ ನಡುರಾತ್ರಿಯ ತನಕ ಕಾದಿದ್ದು, ಆತ ಬಾರದೆ, ತಂತಮ್ಮ ಮನೆಗಳಿಗೆ ಹಿಂದಿರುಗಿರುತ್ತಾರೆ. ಆ ಸಮಯದಲ್ಲಿ ಮಾರೋತಿ ಗುಡಿಯಲ್ಲೇ ಕಾದಿದ್ದ ಎಂದರೆ ಸರಿಹೋಗುತ್ತದೆ. ಮಾರೋತಿಯ ಮಾತಿನಲ್ಲಿ, ‘...ನಿನ್ನೆ ರಾತ್ರಿ ದ್ಯಾವಪ್ಪ ಬರಾಂವ ಇದ್ದನಲಾಽ...’ ಅನ್ನುವುದು, ಸಪ್ತಮಿಯ ಸಂಜೆಗೆ ಆತ ಬರುವವನಿದ್ದ ಎನ್ನುವ ಅರ್ಥ ಕೊಟ್ಟು, ಹಳಿ ತಪ್ಪಿದಂತೆ ಕಾಣುತ್ತದೆ.

ಯಾವುದೇ ಕೃತಿಯಲ್ಲಿಯೇ ಆಗಲಿ, ಇಂತಹ ಕೆಲವು ಅಂಶಗಳನ್ನು ಕೇವಲವೆಂದು ಕಡೆಗಣಿಸಬಹುದು. ಅದರಿಂದ ಬರಹಗಾರರಿಗೆ ಯಾವುದೇ ತೊಂದರೆಯಿಲ್ಲ. ಓದುಗರಿಗೆ ಏನು ಅನಿಸುವುದೋ ಅದಕ್ಕೆ ಬರಹಗಾರರು ಹೊಣೆಯಲ್ಲ ಅನ್ನುವ ವಾದ ಸುಲಭ. ನಾವೇ ಬರವಣಿಗೆಯಲ್ಲಿ ತೊಡಗಿಕೊಂಡಾಗ, ಬರಹದ ಓಟದಲ್ಲಿ, ರಸಾಸ್ವಾದದಲ್ಲಿ ಉಂಟಾಗಬಹುದಾದ ಇಂತಹ- ಸಣ್ಣ ಪುಟ್ಟವೇ ಇರಲಿ- ಕಂದರಗಳು ನುಸುಳದಂತೆ ಮುಂಜಾಗ್ರತೆ ವಹಿಸಬಹುದೆಂದು ನನ್ನ ಅಭಿಪ್ರಾಯ. ಅದಕ್ಕಾಗಿಯೇ ನನಗೆ ಕಂಡುಬಂದ ಈ ಕಣ್ತೊಡಕುಗಳನ್ನು ಇಲ್ಲಿ ದಾಖಲಿಸಿದ್ದೇನೆಯೇ ಹೊರತಾಗಿ ತಪ್ಪು ಹುಡುಕಬೇಕೆನ್ನುವ ಛಲದಿಂದಲ್ಲ.

ಮುಗಿಸುವ ಮುನ್ನ:

‘ತೇರು’- ತನ್ನ ಕಥನದ ಗಾಢತೆಯಿಂದಲೂ, ಕೃತಿಕಾರರ ಸೃಜನಶೀಲತೆಯಿಂದಲೂ, ಪಾತ್ರಗಳ ವೈವಿಧ್ಯತೆಯಿಂದಲೂ, ನಿರೂಪಣೆಯ ಸಹಜತೆಯಿಂದಲೂ ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನನ್ನದೇ ‘ತೀರ್ಪು’ ಕೊಡುವ ಬದಲು, ಕೃತಿಯಲ್ಲೇ ಮುದ್ರಿತವಾಗಿರುವ ಈ ಪ್ರತಿಕ್ರಿಯೆಯನ್ನು ಬಳಸಿಕೊಳ್ಳುವುದು ಹೆಚ್ಚು ಸೂಕ್ತವಾಗಬಹುದು...

ತೇರು...

ತೇರು ಅಂದರೆ ತೇರು; ಧರಮನಟ್ಟಿಯ ತೇರು
ಒಂದನೇ ಮಜಲಲ್ಲಿ ಆದಿಶೇಷನ ಸ್ಪ್ರಿಂಗು
ಎರಡನೇ ಮಜಲಲ್ಲಿ ಆನೆಗಳ ಆನಿಕೆ.
ಮೂರನೇ ಮಜಲಲ್ಲಿ ಮತ್ಸ್ಯ ಕೂರ್ಮ ವರಾಹ
ಆಹ! ನಾಲ್ಕನೇ ಮಜಲಿನಲ್ಲಿ ಆಕಳು, ಕುದುರಿ.
ಐದನೇ ಮಜಲಲ್ಲಿ ಇರಿವ ಕತ್ತಿ ಕಠಾರಿ!
ಆರನೇ ಮಜಲ ಶಿಖರಕ್ಕೆ ಥಳ ಥಳ ಕಲಶ.
ಇಂಥ ಮಜಲಿನ ತೇರು- ಕಲ್ಲು ಫಲಿಗಳ ತೇರು
ಯಾವ ಕಾಣದ ಕೈಯೊ ಎಳೆಯುತ್ತ ಎಳೆಯುತ್ತ
ಕಲ್ಲು ಹಾದಿಯ ಮೇಲೆ ಕಲ್ಲು ಚಕ್ರವು ಉರುಳಿ
ಕೆಳಗಿಂದು ಮ್ಯಾಲಕ್ಕೆ ಮೇಲು ಮಜಲು ಕೆಳಕ್ಕೆ

ನಿಲ್ಲು ಹಾಂಗಿಲ್ಲಯ್ಯ ಧರಮನಟ್ಟಿಯ ರಥ
ನಿಲ್ಲು ಹಾಂಗೇ ಇಲ್ಲ ರಗುತ ತಿಲಕದ ವ್ರತ!

(ಮೊದಲ ಮುದ್ರಣಕ್ಕೆ ಮುನ್ನ ಓದಿ, ಮೆಚ್ಚಿ, ತಮ್ಮ ಸ್ಪಂದನವನ್ನು ಕವಿತೆಯಾಗಿ ಕಟ್ಟಿಕೊಟ್ಟವರು: ಡಾ. ಎಚ್. ಎಸ್. ವೆಂಕಟೇಶಮೂರ್ತಿ)


ಕೃತಿ: ತೇರು
ಕರ್ತೃ: ರಾಘವೇಂದ್ರ ಪಾಟೀಲ
ಪ್ರಕಾಶಕರು: ಆನಂದಕಂದ ಗ್ರಂಥಮಾಲೆ, ಮಲ್ಲಾಡಿಹಳ್ಳಿ, ೫೭೭೫೩೧
ಮುದ್ರಣಗಳು: ೨೦೦೩, ೨೦೦೬, ೨೦೦೭
ಪುಟಗಳು: ೨೪+೧೪೮
ಕ್ರಯ: ರೂ ೮೫/-
(ಎಪ್ರಿಲ್ ೨೦೦೯)

(ಅಮೆರಿಕದ ‘ಕನ್ನಡ ಸಾಹಿತ್ಯ ರಂಗ’ವು ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ದಲ್ಲಿ ಈ ಬಾರಿ ಹೊರತಂದ ಗ್ರಂಥ "ಕಾದಂಬರಿ ಲೋಕದಲ್ಲಿ... ಹೀಗೆ ಹಲವು" - ಕಾಲು ಶತಕದ ಕಾದಂಬರಿಗಳತ್ತ ಅಮೆರಿಕನ್ನಡ ಲೇಖಕರ ಒಳನೋಟವುಳ್ಳ ಹೊತ್ತಗೆಯಲ್ಲಿ ಅಚ್ಚಾದ ಬರಹ. ಕ.ಸಾ.ರಂ. ಪದಾಧಿಕಾರಿಗಳಿಗೆಲ್ಲ ಈ ಅವಕಾಶಕ್ಕಾಗಿ ವಂದನೆಗಳು.)

Sunday 29 November, 2009

ಆಹಿತಾನಲ (ನಾಗಾ ಐತಾಳ)ರ ಎರಡು ಹೊತ್ತಗೆಗಳು

"ಕಾದೇ ಇರುವಳು ರಾಧೆ"- ಕಾದಂಬರಿ
"ಒಂದಾನೊಂದು ಕಾಲದಲ್ಲಿ"- ಕಟ್ಟು ಕಥೆಗಳ ಸಂಗ್ರಹ


ಆಹಿತಾನಲ ಎನ್ನುವ ಕಾವ್ಯನಾಮದ ನಾಗಾ ಐತಾಳರದು ಬಹಳಷ್ಟು ಜೀವನಾನುಭವವುಳ್ಳ ಸಮೃದ್ಧ ಬರವಣಿಗೆ. ಉಡುಪಿ ಸಮೀಪದ ಕೋಟದಿಂದ ಆರಂಭವಾದ ಇವರ ಜೀವನ ಪಯಣ, ಬೆಂಗಳೂರು, ಲಾಸ್ ಏಂಜಲಿಸ್, ಶಿಕಾಗೋ, ನ್ಯೂ ಜೆರ್ಸಿ ಮುಂತಾದ ಕಡೆಗಳಲ್ಲೆಲ್ಲ ಸುತ್ತಾಡಿ ಸಾಗುತ್ತಿದೆ. ಜೀವರಸಾಯನ ಶಾಸ್ತ್ರದಲ್ಲಿ ಅಧ್ಯಯನ, ಸಂಶೋಧನ ವೃತ್ತಿಯಾಗಿದ್ದು, ಈಗ ನಿವೃತ್ತರಾದ ಮೇಲೆ ಪ್ರವೃತ್ತಿಯಾಗಿದ್ದ ಬರವಣಿಗೆಯನ್ನೇ ಪೂರ್ಣಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದಾರೆ. ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ, ಕಾದೇ ಇರುವಳು ರಾಧೆ, ಒಂದಾನೊಂದು ಕಾಲದಲ್ಲಿ- ಕಟ್ಟುಕಥೆಗಳ ಸಂಗ್ರಹ; ಪ್ರಬಂಧ ಸಂಕಲನ- ಕಲಬೆರಕೆ - ಇವರ ಸ್ವಂತ ಪ್ರಕಟಿತ ಕೃತಿಗಳು. ಕಾರಂತ ಚಿಂತನ- ಕಡಲಾಚೆಯ ಕನ್ನಡಿಗರಿಂದ, ಕುವೆಂಪು ಸಾಹಿತ್ಯ ಸಮೀಕ್ಷೆ, ಯದುಗಿರಿಯ ಬೆಳಕು (ಪು.ತಿ.ನ. ಅವರ ಜೀವನ, ಸಾಹಿತ್ಯದ ಬಗ್ಗೆ), ಕನ್ನಡದಮರ ಚೇತನ (ಮಾಸ್ತಿಯವರ ಜೀವನ, ಸಾಹಿತ್ಯದ ಬಗ್ಗೆ), ಗೆಲುವಿನ ಚಿಲುಮೆ ರಾಜರತ್ನಂ- ಇವರ ಸಂಪಾದಿತ ಕೃತಿಗಳು. ಕನ್ನಡ ಸಾಹಿತ್ಯ ರಂಗದ ಪ್ರಕಟಣೆಗಳಾದ ಆಚೀಚೆಯ ಕತೆಗಳು ಮತ್ತು ನಗೆಗನ್ನಡಂ ಗೆಲ್ಗೆ- ಇವುಗಳಿಗೂ ಸಹಸಂಪಾದಕರಾಗಿದ್ದರು.

ಈಗ ಇಲ್ಲಿ ನಾನು ಒಳನೋಟ ಹರಿಸುತ್ತಿರುವ ಎರಡು ಕೃತಿಗಳು ವಿಶಿಷ್ಟವಾದವು. ಮೊದಲನೆಯದು ಐತಾಳರ ಚೊಚ್ಚಲ ಕಾದಂಬರಿ- ಕಾದೇ ಇರುವಳು ರಾಧೆ.

ಕೃಷ್ಣ-ರಾಧೆಯರ ಪ್ರೇಮಗಾಥೆ ನಮಗ್ಯಾರಿಗೂ ಹೊಸದಲ್ಲ. ಅದು ಪ್ರೇಮಿಗಳಿಗೆ ಸ್ಫೂರ್ತಿ ನೀಡುವ ಸ್ಥೈರ್ಯ ಕೊಡುವ ಶಕ್ತಿಯುಳ್ಳದ್ದು. ಭೌತಿಕ ಪ್ರೇಮಕಥೆಗಳಾದ ರೋಮಿಯೋ ಜೂಲಿಯೆಟ್, ಲೈಲಾ ಮಜನೂ, ಸಲೀಂ ಅನಾರ್ಕಲಿ, ಅಥವಾ ಪುರಾತನ ಗ್ರೀಕ್ ಕಥಾನಕದ ಪೈರಮಿಸ್ ಮತ್ತು ಥೆಸ್ಬಿ, ಮುಂತಾದವರುಗಳಂತೆ ಅಲ್ಲದೆ, ಈ ಜೋಡಿ ಸದಾ ನಮ್ಮೆಲ್ಲರ ಹೃದಯಗಳಲ್ಲಿ ನೆಲೆಸಿರುವಂಥದ್ದು. ರಾಧೆಯ ಪ್ರೀತಿಯಿಂದಲೇ ಪವಾಡಪುರುಷ ಕೃಷ್ಣನೂ ರಾಧಾಕೃಷ್ಣನಾಗಿಬಿಟ್ಟ. ಇಂಥ ಗಾಥೆಯನ್ನು ಐತಾಳರು ರಾಧೆಯೆಡೆಗೆ ಮೃದುನೋಟವಿಟ್ಟುಕೊಂಡು ಹೊಸದೊಂದು ಕೋನದಿಂದ ಬರೆದಿದ್ದಾರೆ. ತಮ್ಮ ಅರಿಕೆಯಲ್ಲಿ, ಸಾಮಾನ್ಯವಾಗಿ ಪ್ರಚಲಿತವಿರುವ ಕಥೆಗಳಿಗಿಂತ ಈ ಕಥನ ಹೇಗೆ ಭಿನ್ನವೆಂಬುದನ್ನು ಹೇಳಿಕೊಂಡಿದ್ದಾರೆ. ಕೃಷ್ಣಕಥೆಯಾದ ಭಾಗವತದಲ್ಲಿಯೇ ಇಲ್ಲದ ರಾಧೆ ಬಹುಶಃ ಜಯದೇವ ಕವಿಯ ಕಲ್ಪನೆಯಿರಬೇಕು ಎನ್ನುವುದು ಅಭಿಮತ. ಅಂಥ ಬಹುಪ್ರತೀತ ಕಲ್ಪನೆಯನ್ನು ಇನ್ನಷ್ಟು ಕಲ್ಪನೆಯ ಚಿತ್ತಾರಗಳಿಂದ ಐತಾಳರು ಅಂದಗೊಳಿಸಿದ್ದಾರೆ. ಗೋವಳ ಜನಾಂಗದ ಜನಜೀವನದ ಚಿತ್ರಣ ಕಟ್ಟಿಕೊಡುತ್ತಾ ಕಥೆಯನ್ನು ವಾಸ್ತವದ ನೆಲೆಗಟ್ಟಿನಲ್ಲಿ ನಿಲ್ಲಿಸುತ್ತಾರೆ.

ಗೋಕುಲದ ತುಂಟ ಕೃಷ್ಣ ಇವರ ಕಥೆಯಲ್ಲಿ ರಾಸಲೀಲೆಯಾಡುವ ಎಳೆಯ ಹದಿ ವಯಸ್ಸಿನ ಪೋರನೇ. ಹಾಲು ಬೆಣ್ಣೆ ಕದಿಯುವ, ಚಿಣ್ಣಿ-ದಾಂಡು ಆಡುವ ಕೊಳಲೂದಿ ದನಗಳನ್ನು ಕರೆಯುವ ಈ ಬಾಲಕೃಷ್ಣ ಹದಿಮೂರು ಹದಿನಾಲ್ಕು ವಯಸ್ಸಿನ ತರುಣ. ಅಂತೆಯೇ ಇಲ್ಲಿಯ ರಾಧೆಯೂ. ಅಂದಿನ ಕಾಲಕ್ಕೆ ತಕ್ಕಂತೆ, ಹೆತ್ತವರ ಕಣ್ಣಲ್ಲಿ ಮದುವೆಯ ವಯಸ್ಸಿಗೆ ಬಂದಿದ್ದ, ಮನೆಗೆಲಸ ಎಲ್ಲವನ್ನೂ ಚುರುಕಾಗಿ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದ ಹನ್ನೊಂದು-ಹನ್ನೆರಡರ ತರುಣಿ. ಇವರಲ್ಲಿ ಸಹಜವಾಗಿಯೇ ಅನುರಾಗ ಮೂಡುವಂತೆ ಸನ್ನಿವೇಶಗಳು ಹೆಣೆದುಕೊಳ್ಳುತ್ತವೆ. "ನಾನೇನೂ ನನ್ನಮ್ಮನಿಗೆ ಬಾಯಲ್ಲಿ ಬ್ರಹ್ಮಾಂಡವನ್ನು ತೋರಲಿಲ್ಲ; ನಾ ತಿಂದಿದ್ದ ಮಣ್ಣಿನ ಮುದ್ದೆ ದೊಡ್ಡದಾಗಿಯೇ ಇತ್ತು, ಅದು ಅವಳಿಗೆ ವಿಶ್ವದಂತೆ ತೋರಿತ್ತು. ಮಣ್ಣಿನಿಂದಲೇ ಬ್ರಹ್ಮಾಂಡವಲ್ಲವೆ?" ಅನ್ನುವ ತರುಣನ ಸಹಜ ಮಾತುಗಾರಿಕೆಗೆ ರಾಧೆಯಂತೆಯೇ ನಾವೂ ಬೆರಗಾಗಬಹುದು. "ಮೃಣ್ಮಯವೀ ಜಗತ್- ಅನ್ನುವ ಸತ್ಯವನ್ನು ಎಷ್ಟು ಸರಳವಾಗಿಯೇ ತೋರಿಸಿದ್ದಾರೆ" ಎಂದು ತಲೆದೂಗಬಹುದು. ಭೈರಪ್ಪನವರ ಪರ್ವದ ಕೃಷ್ಣನಂತೆಯೇ ಈತನ ಮಾನವೀಯ ಗುಣಗಳನ್ನು ಸುಲಭವಾಗಿ ಗುರುತಿಸಿ ಕಂಡುಕೊಳ್ಳಬಹುದು.

ಕೊನೆಯಲ್ಲಿ ಗೋಕುಲ ತೊರೆಯುವ ಕೃಷ್ಣನ ತುಮುಲ, ತದನಂತರ ರಾಧೆಯ ಅಳಲು ಓದುಗರ ಮನ ಕರಗಿಸುತ್ತವೆ. ಇದೇ ಹಿನ್ನೆಲೆಯಾಗಿರಿಸಿಕೊಂಡು ಹಲವಾರು ಕವಿತೆಗಳು ಬೇರೆ ಬೇರೆ ಕವಿಗಳಿಂದ ಬಂದಿದ್ದರೂ, ಗದ್ಯರೂಪದಲ್ಲಿ ರಾಧೆಯ ಕಡೆಗೊಂದು ನೋಟವಿಟ್ಟ ಈ ಕಾದಂಬರಿ, ಪುಟ್ಟ ಊರೊಂದರ ಯಾವುದೇ ರಾಧೆಯ, ಯಾವುದೇ ಕೃಷ್ಣನ ಕಥೆಯೂ ಆಗಬಹುದು ಎನ್ನುವಷ್ಟು ಆಪ್ತವಾಗುತ್ತದೆ.

ಕಾದಂಬರಿಯಲ್ಲಿ ದೋಷಗಳೇ ಇಲ್ಲವೆಂದಲ್ಲ. ಒಂದೆರಡು ಕಡೆ ಕಥನ ಬರಹಗಾರನ ಲೇಖನಿಯಿಂದ ಹಾರಿ ಆತನ ವೈಚಾರಿಕತೆಯ ಹಳಿಗೆ ಸಿಕ್ಕುತ್ತದೆ. ಸರಳವಾದ ನಿರೂಪಣೆಯಲ್ಲಿ ಲೇಖಕನ ಒಗ್ಗರಣೆಯೂ ಒಮ್ಮೊಮ್ಮೆ ಬೆರೆತಿದೆ. ಅಂತಹ ಒಂದು ಪ್ರಸಂಗ ಎರಡನೆಯ ಅಧ್ಯಾಯದ ಕೊನೆಯ ವಾಕ್ಯಗಳಲ್ಲಿ ಬರುತ್ತದೆ. ಸರಾಗವಾಗಿ ಸಾಗುತ್ತಿದ್ದ ನಿರೂಪಣೆಯಲ್ಲಿ ಲೇಖಕನ ವೈಚಾರಿಕತೆಯ ವಿವರಣೆ ನುಸುಳಿದೆ. ಅದು ಓದುಗನನ್ನು ಕಥನದಿಂದ ವಿಶ್ಲೇಷಣೆಯ ನೆಲೆಗೆ ಒಯ್ಯುತ್ತದೆ. ಸಹಜ-ಸರಳ ಕಥಾನಕದಲ್ಲಿ ಲೇಖಕನ ಮುಖ ಕಾಣುವುದು ನನಗೆ ಸರಿಕಾಣಲಿಲ್ಲ. ಹಾಗೇನೇ ಹನ್ನೊಂದರ ಬಾಲೆಯನ್ನು ಮೈ ತುಂಬಿಕೊಂಡ ಪ್ರೌಢ ತರುಣಿಯಂತೆ ಚಿತ್ರಿಸಿದ್ದೂ ಸಮಂಜಸವೆಂದು ನನಗನಿಸಲಿಲ್ಲ.

ಐತಾಳರ ಇನ್ನೊಂದು ಪುಸ್ತಕ- ಒಂದಾನೊಂದು ಕಾಲದಲ್ಲಿ- ಕಟ್ಟು ಕಥೆಗಳ ಸಂಗ್ರಹ. ಇದರ ಬಗ್ಗೆ ಹೆಚ್ಚು ಹೇಳುವುದೇ ಬೇಕಾಗಿಲ್ಲ. ಶ್ರೀಯುತ ರಾಜಗೋಪಾಲರ ತಾಯಿಯವರಿಗೆ ಡಿ.ವಿ.ಜಿ.ಯವರು ಹೇಳಿದ್ದಂತೆ, ಮಕ್ಕಳಿಗೆ ಕಥೆ ಹೇಳುವಂಥ ದೇವರು ಮೆಚ್ಚುವ ದೊಡ್ಡ ಕೆಲಸವನ್ನು ಐತಾಳರು ಮಾಡಿದ್ದಾರೆ. ಈ ಕಥೆಗಳನ್ನು ಓದುತ್ತಿದ್ದಂತೆ ನಮ್ಮನ್ನು ನಮ್ಮ ಅಜ್ಜಿ-ಅಜ್ಜನ ಮನೆಯ ಪಡಸಾಲೆಗೋ ಜಗಲಿಗೋ ಕೊಂಡೊಯ್ಯುವ ಕಾಲಮಾಂತ್ರಿಕ ಶಕ್ತಿ ಇಲ್ಲಿನ ಕಥೆಗಳಿಗಿವೆ. ಇಂದಿಲ್ಲಿ ಸೇರಿರುವ ನಾವೆಲ್ಲರೂ ಮನೆಯಲ್ಲಿ ಚಿಕ್ಕ ಮಕ್ಕಳು ಅಥವಾ ಮೊಮ್ಮಕ್ಕಳನ್ನು ಹೊಂದಿರುವವರೇ. ನಾವೆಲ್ಲರೂ ನಮ್ಮ ಮನೆಯ ಪುಟಾಣಿಗಳಿಗೆ ಹೇಳಬೇಕಾದ ಕಥೆಗಳ ಅಮೂಲ್ಯ ಸಂಗ್ರಹ ಇದೆಂದು ನನ್ನ ಅಭಿಮತ. ಮಕ್ಕಳ ಕೋಣೆಯ ಪುಸ್ತಕ ಕವಾಟಿನಲ್ಲಿ ಇದರದೊಂದು ಪ್ರತಿಯಿರಲಿ. ಮಲಗುವ ಮುನ್ನ ಮಕ್ಕಳಿಗೆ ಒಂದಾದರೂ ಕಥೆಯನ್ನು ಈ ಪುಸ್ತಕದಿಂದ ಓದಿ ಹೇಳಿ. ಆಗಲೇ ಇದಕ್ಕೆ ಸಂಪೂರ್ಣ ಅರ್ಥ ದೊರಕುತ್ತದೆ.

ಹಿರಿಯರಾದ ಐತಾಳರ ಎರಡು ಕೃತಿಗಳನ್ನು ಓದಿ ನನ್ನ ಅಭಿಪ್ರಾಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟ ಕನ್ನಡ ಸಾಹಿತ್ಯ ರಂಗದ ಪದಾಧಿಕಾರಿಗಳಿಗೆ ನಮನಗಳು. "ನನ್ನ ಕಾರ್ಯಕ್ರಮದಲ್ಲಿ ನೀನು ಇರಲೇಬೇಕು" ಎಂದು ಪಟ್ಟು ಹಿಡಿದು ನನ್ನನ್ನು ಒಪ್ಪಿಸಿ ಈ ಕೆಲಸ ನನಗೆ ಅಂಟಿಸಿದ ಗೆಳತಿ ತ್ರಿವೇಣಿಗೂ ಅನಂತ ವಂದನೆಗಳು. ಕೇಳಿದ ನಿಮಗೆಲ್ಲ ಧನ್ಯವಾದಗಳು.

(ಅಮೆರಿಕದ ‘ಕನ್ನಡ ಸಾಹಿತ್ಯ ರಂಗ’ವು ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ದಲ್ಲಿ "ನಮ್ಮ ಹೆಮ್ಮೆಯ ಬರಹಗಾರರು" ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಲೇಖನ)

Sunday 22 November, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೧

ಯಾವ ವೀರನ ಕಲ್ಲ-ಬಿಲ್ಲುಗಳು ಈ ರಾಜ್ಯದಲ್ಲಿ....
ಸೆಪ್ಟೆಂಬರ್ ೫, ಶನಿವಾರ

ಮತ್ತೊಂದು ಸೋಮಾರಿ ಶನಿವಾರ. ನಿಧಾನವೇ ಪ್ರಧಾನವಾಗಿದ್ದ ಬೆಳಗು. ಉಳಿದಿದ್ದ ರವೆಯನ್ನೆಲ್ಲ ಹಾಕಿ ಉಪ್ಪಿಟ್ಟು ಮಾಡಿ, ಎರಡನೇ ಸುತ್ತಿನ ಕಾಫ಼ಿ ಹೀರಿ, ಗ್ರೀನ್ ರಿವರ್ ಪಾರ್ಕ್ ಕ್ಯಾಂಪಿಂಗ್ ಜಾಗದ ಶಾಂತಿಯನ್ನು ನನ್ನೊಳಗೆ ಆವಾಹಿಸಿಕೊಂಡು ಅಲ್ಲಿಂದ ಹೊರಟಾಗಲೇ ಹತ್ತೂವರೆ.




ಆರ್ಚಸ್ ನ್ಯಾಷನಲ್ ಪಾರ್ಕಿಗೆ ಅಲ್ಲಿಂದ ಒಂದು ಗಂಟೆಯ ಹಾದಿ. ಬಿಸಿಬಿಸಿ ಬಿಸಿಲಿನ ದಿನಗಳು. ಟೊಪ್ಪಿ, ಧಾರಾಳ ನೀರು, ಒಂದಿಷ್ಟು ಸ್ನ್ಯಾಕ್ಸ್- ಎಲ್ಲವನ್ನೂ ಕೈಗೆಟಕುವಂತೆ ಜೋಡಿಸಿಕೊಂಡಿದ್ದೆ. ಪಾರ್ಕ್ ಗೇಟ್ ಬಳಿ ಬಂದಾಗ ಹನ್ನೊಂದು ಇಪ್ಪತ್ತು. ಮುಖ್ಯ ದ್ವಾರ ಫಲಕದ ಚಿತ್ರ ತೆಗೆಯಲು ಹೋದರೆ ಅಲ್ಲೊಂದು ಪುಟಾಣಿ ಫಲಕಕ್ಕೆ ಅಂಟಿದಂತೆ ಆಡುತ್ತಿತ್ತು. ಅವಳಪ್ಪ ಅಂದು ಕ್ಯಾಮರಾ ತಂದಿರಲಿಲ್ಲ; ತನ್ನದೂ ಫೋಟೋ ಬೇಕೆಂದು ಅವಳ ತಕರಾರು. "ತೆಗೆಯಲೇ, ಮತ್ತೆ ಕಳಿಸಿಕೊಡುತ್ತೇನೆ, ಮೈಲ್ ಐಡಿ ಕೊಡಿ" ಅಂದರೆ, ಪೆಚ್ಚಾಗಿ ನೋಡಿದಾತ, "ನಮ್ಮ ಮನೆ ಇಲ್ಲೇ, ಕಾಲು ಗಂಟೆ ಹಾದಿ. ಸದಾ ಇಲ್ಲಿಗೆ ಬರುತ್ತಿರುತ್ತೇವೆ. ನಾಳೆಯೇ ಮತ್ತೆ ಕ್ಯಾಮರಾ ತಗೊಂಬಂದು ಚಿತ್ರ ತೆಗೀತೇನೆ" ಅಂದ. ಅಂತೂ ಇಂತೂ ಮುಗ್ಧ ಮೊಂಡಾಟದ ಮುದ್ದು ಮಗು ಅತ್ತ ಸರಿದಾಗ ತುಸು ಹೊತ್ತೇ ಆಗಿತ್ತು. ಫಲಕದ ಚಿತ್ರ ತೆಗೆದು ವಿಸಿಟರ್ ಸೆಂಟರಿಗೆ ಬಂದೆವು.





ಆರ್ಚಸ್ ಬಗ್ಗೆ ಇಪ್ಪತ್ತು ನಿಮಿಷಗಳ ಸಾಕ್ಷ್ಯ ಚಿತ್ರ ನೋಡಿ ಬೆಟ್ಟದ ಮೇಲೆ ಗಾಡಿ ಏರಿತು. ಒಂದೊಂದಾಗಿ ಅಲ್ಲಿನ ಶಿಲಾರಚನೆಗಳನ್ನು ನೋಡುನೋಡುತ್ತಾ ಅಪರಾಹ್ನ, ಸಂಜೆ, ರಾತ್ರೆಯಾಗಿದ್ದೂ ತಿಳಿಯಲೇ ಇಲ್ಲ. ನೋಡದೇ ಬಿಟ್ಟ ರಚನೆಗಳು ಹಲವಿದ್ದರೂ, ನಮ್ಮ ಅರ್ಧ ದಿನದ ಬಿಡುವಿಗೆ ದಕ್ಕಿದ್ದರಲ್ಲಿ ಕೆಲವೇ ಕೆಲವು ಇಲ್ಲಿ....

"ಪೆಂಗ್ವಿನ್ಸ್"
(ಇದೇ ರೀತಿಯಲ್ಲಿ- ತ್ರೀ ಗಾಸಿಪ್ಸ್, ಟವರ್ ಆಫ಼್ ಬೇಬ್ಲ್, ದ ಆರ್ಗನ್- ಇತ್ಯಾದಿ ರಚನೆಗಳಿವೆ)


"ಪಾರ್ಕ್ ಅವೆನ್ಯೂ"


"ಕುರಿ ಕಲ್ಲು" (ಶೀಪ್ ರಾಕ್)
(ಕಾರ್ಕಳದಿಂದ ಕಾಣುವ ಪಡುಘಟ್ಟದ ಸಾಲಿನಲ್ಲಿ ಕುರಿಂಗಲ್ಲು ಇರುವ ನೆನಪಾಯ್ತು)


"ಬ್ಯಾಲೆನ್ಸಿಂಗ್ ರಾಕ್"




"ಉತ್ತರ ಮತ್ತು ದಕ್ಷಿಣ ಕಿಟಕಿಗಳು"- ‘ದ ವಿಂಡೋಸ್’ ಟ್ರೈಲ್


ಟರೆಟ್ ಆರ್ಚ್


ಡಬಲ್ ಆರ್ಚ್


ಜೋಡು ಬಿಲ್ಲುಗಳ ಜಾಯಿಂಟ್!


ಯೂಟಾ ರಾಜ್ಯದ ಲಾಂಛನ- ಡೆಲಿಕೇಟ್ ಆರ್ಚ್
(ಇದರ ಬದಿಗೆ ಹೋಗಿ ನೋಡಿಲ್ಲ, ಮೂರೂವರೆ ಮೈಲಿನ ಟ್ರೈಲ್- ಸಮಯಾವಕಾಶವಿರಲಿಲ್ಲ. ಪಕ್ಕದ ಬೆಟ್ಟದಿಂದ ತೆಗೆದ ಚಿತ್ರ.)




ಡಬಲ್ ‘O’ ಆರ್ಚ್




ಅತಿ ದೊಡ್ಡ ಆರ್ಚ್- ಲ್ಯಾಂಡ್ ಸ್ಕೇಪ್ ಆರ್ಚ್
ಇದರ ಅಗಲ ಫ಼ುಟ್ ಬಾಲ್ ಕ್ರೀಡಾಂಗಣಕ್ಕಿಂತಲೂ ಜಾಸ್ತಿ. ೧೯೯೬ರಲ್ಲಿ (ಬಹುಶಃ) ಇದರ ಒಳಭಾಗದಿಂದ ದೊಡ್ಡದೊಂದು ಬಂಡೆಚೂರು ಬಿದ್ದು ಹೋಗಿ ಇದೀಗ ತೆಳುವಾಗಿದೆ. ಆದ್ದರಿಂದ ಇದರ ಬಳಿಗೆ ಹೋಗಲನುಮತಿಯಿಲ್ಲ.




ಸ್ಕೈ ಲೈನ್ ಆರ್ಚ್
೧೯೪೦ರಲ್ಲಿ ಇದರ ಎಡ-ಒಳಭಾಗದಿಂದ ಬಂಡೆಯೊಂದು ಕಳಚಿ ಬಿದ್ದು ಇದರ ಒಳಾವರಣ ದ್ವಿಗುಣವಾಯ್ತು.


ಅಲ್ಲೆಲ್ಲೋ ಸುತ್ತಾಡುವಾಗ, ಯಾರದೋ ಮಾತಿನಲ್ಲಿ, ಇಲ್ಲಿಂದ ಒಂದರ್ಧ ಗಂಟೆ ಹಾದಿಯ ಕ್ಯಾನಿಯನ್ ಲ್ಯಾಂಡ್ಸ್ ಕೂಡಾ ಸುಂದರ ತಾಣವೆಂದೂ ತಿಳಿದುಬಂತು. ನಮ್ಮ ಟೂರ್ ಪ್ಲಾನ್ ಅದನ್ನು ಒಳಗೊಂಡಿರಲಿಲ್ಲ. ಭಾನುವಾರದಂದು ಬೆಳಗ್ಗೆ ಗ್ರೀನ್ ರಿವರ್ ಪಾರ್ಕಿನಿಂದ ಹೊರಟು, ಮಧ್ಯಾಹ್ನದ ಹೊತ್ತಿಗೆ ಸಾಲ್ಟ್ ಲೇಕ್ ಸಿಟಿ ಸೇರಿ, ಸಂಜೆಯೆಲ್ಲ ಅಲ್ಲಿಯೇ ಒಂದಿಷ್ಟು ಸುತ್ತಾಡುವ ಯೋಜನೆಯಲ್ಲಿದ್ದೆವು. ಈ ಮಾತು ಕೇಳಿದ ಮೇಲೆ, ಅದನ್ನೂ ನೋಡಿಕೊಂಡು ಹೋಗುವ ಯೋಚನೆ ಬಂತು. ಸಿಟಿಯನ್ನು ಬೇರೆ ಯಾವಾಗಲಾದರೂ ನೋಡಬಹುದು, ನ್ಯಾಷನಲ್ ಪಾರ್ಕ್ ಪಾಸ್ ಇರುವಾಗ ಅದನ್ನು ನೋಡಿಬಿಡೋಣವೆಂದು ಲೆಕ್ಕ ಹಾಕಿಕೊಂಡು ಗ್ರೀನ್ ರಿವರ್ ಪಾರ್ಕಿಗೆ, ನಮ್ಮ ಟೆಂಟಿಗೆ ಮರಳಿದಾಗ ಒಂಭತ್ತು ಗಂಟೆ. ಹಣ್ಣು, ಮೊಸರವಲಕ್ಕಿ, ಉಪ್ಪಿನಕಾಯಿಯ ಡಿನ್ನರ್ ಮುಗಿಸಿ, ಪಾರ್ಕಿನೊಳಗೆ ಒಂದು ವಾಕ್ ಮಾಡಿ ಬಂದು ಬೇಗನೇ ಮಲಗಿದೆವು, ಕ್ಯಾನಿಯನ್ ಲ್ಯಾಂಡ್ಸ್ ಬಗ್ಗೆ ಕಲ್ಪನೆ ಕಟ್ಟುತ್ತಾ.

Sunday 15 November, 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೦

ಯಾವುದೊ ದೈತ್ಯನ ಮಾಳಿಗೆಮೆಟ್ಟಲು- ಗ್ರ್ಯಾಂಡ್ ಸ್ಟೇರ್ ಕೇಸ್, ಎಸ್ಕಲಾಂಟೇ
ಮತ್ತು ಹವಳವಲ್ಲದ ಹವಳವರ್ಣದ ಕ್ಯಾಪಿಟಲ್ ರೀಫ಼್....


ಸೆಪ್ಟೆಂಬರ್ ೪, ಶುಕ್ರವಾರ

ಬ್ರೈಸಿನ ಹೂಡೂಸ್ ಮಾಯಾಜಾಲವನ್ನು ಹೊರದಾಟಿ ಹೈವೇ ಸೇರಿದಾಗ ಹನ್ನೊಂದು ನಲವತ್ತು. ಅಲ್ಲಿಂದ ಕ್ಯಾಪಿಟಲ್ ರೀಫ಼್ ಕಡೆ ಸಾಗಲು ಗ್ರ್ಯಾಂಡ್ ಸ್ಟೇರ್ ಕೇಸ್ ಎಂದು ಕರೆಯಲ್ಪಡುವ, ದೂ....ರದಿಂದ ಮೆಟ್ಟಿಲು ಮೆಟ್ಟಿಲಾಗಿ ಕಾಣುವ, ಸುಮಾರು ಬರಡು ಬರಡಾಗಿರುವ ಬೆಟ್ಟಸಾಲುಗಳನ್ನು ದಾಟಬೇಕು.

ಕಣಿವೆಯಲ್ಲಿ ಎಸ್ಕಲಾಂಟೇ ನದಿಯು ಹರಿಯುತ್ತಿದ್ದು ಅದರ ಅಕ್ಕ-ಪಕ್ಕ ಮರಗಳನ್ನು ನೆಟ್ಟು ಬೆಳೆಸಿದ್ದರು, ಹಲವಾರು ವರ್ಷಗಳ ಹಿಂದೆ.



ಉಳಿದಂತೆ ಸುತ್ತ ಮುತ್ತ ಎಲ್ಲ ಒಣಒಣಕಲಾಗಿ ಕಾಣುವ ಪ್ರದೇಶ. ಅಲ್ಲಿ ಕೆಲವೊಂದು ಕಡೆಗಳಲ್ಲಂತೂ ಹೈವೇ ಮಾತ್ರ ಬೆಟ್ಟದ ನೆತ್ತಿಯಲ್ಲಿ, ಎರಡೂ ಬದಿಗಳಲ್ಲಿ ಪ್ರಪಾತವಿರುವ ಸ್ಥಳಗಳಿವೆ. ಅತ್ತ-ಇತ್ತ ಸಾಗುವ ವಾಹನಗಳ ಭರಾಟೆಯಲ್ಲಿ ಇಮ್ಮುಖ ರಸ್ತೆಯ ಇಬ್ಬದಿಯ ಕಣಿವೆಗಳತ್ತ ಕಣ್ಣು ಹಾಯಿಸಲೂ ಭಯವಾಗುವ ಪರಿಸ್ಥಿತಿ. ರೋಮಾಂಚಕಾರಿ ಪರಿಸರ. ರಸ್ತೆಯ ಮೇಲೇ ನೋಟ ನೆಟ್ಟಿದ್ದ ಕಾರಣ ಮತ್ತು ಮೋಡ ಕವಿದಿದ್ದ ಕಾರಣ ಚಿತ್ರಗಳನ್ನು ತೆಗೆಯಲೇ ಇಲ್ಲ. ಅಲ್ಲೊಂದು ಇಲ್ಲೊಂದು ಹನಿಗಳು ಗಾಜಿನ ಮೇಲೆ ಚಿತ್ತಾರಬಿಡಿಸಿದವು.

ಕೆಲವೊಂದು ಕಡೆ ಆಸ್ಪೆನ್ ಮರಗಳನ್ನು ನೆಟ್ಟು ಬೆಳೆಸಿದ್ದಂತೆ, ಮತ್ತೆ ಅವುಗಳನ್ನು ಕತ್ತರಿಸಿದ್ದಂತೆ ಕಾಣುತ್ತಿತ್ತು. ಎಲ್ಲೂ ಯಾವುದೇ ರೀತಿಯ ವಿವರಗಳು ಇರಲಿಲ್ಲ. ಒಂದು ಆಸ್ಪೆನ್ ಕಾಡಿಗೆ ಆಗಲೇ ಹೇಮಂತಚುಂಬನವಾಗಿತ್ತು.



ಹೀಗೇ ಸಾಗಿ ಸುಮಾರು ಒಂದೂವರೆಯ ಹೊತ್ತಿಗೆ ಎಸ್ಕಲಾಂಟೇಯೊಳಗಿನ ಯಾವುದೋ ಒಂದು ಪಾರ್ಕಿನ ಬದಿಯಲ್ಲಿ ಮಧ್ಯಾಹ್ನದ ಊಟ ಮುಗಿಸಿ ಕ್ಯಾಪಿಟಲ್ ರೀಫ಼್ ತಲುಪಿದಾಗ ಸಂಜೆಯ ನಾಲ್ಕು ಗಂಟೆ.


ಇದೊಂದು ಬರಡು ಭೂಮಿಯಂಥ ಕಣಿವೆ. ಸುತ್ತೆಲ್ಲ ಕೆಂಪು ಬಿಳಿ ಬಂಡೆಬೆಟ್ಟಗಳು. ಒಂದೊಂದು ರೀತಿಯ ಆಕಾರ ತಳೆದ ಕಲ್ಲು-ಬಂಡೆ-ಮಣ್ಣಿನ ಗೋಪುರಗಳು. ವಿಸ್ಮಯ ಹುಟ್ಟಿಸುವ ಪರಿಸರಕ್ಕೆ ಒಂದೊಂದು ಹೆಸರುಗಳು. ಮುಖ್ಯದ್ವಾರದಿಂದ ಈ ಮುಖ್ಯ ಡ್ರೈವ್ ಮುಗಿಸಿದೆವು.

ವಿಸಿಟರ್ ಸೆಂಟರಿನ ನೆತ್ತಿಯ ಮೇಲೆ


ಅವಳಿ ಬಂಡೆಗಳು (ಟ್ವಿನ್ ರಾಕ್ಸ್)


ಹೊಗೆಗೊಳವೆ (ಚಿಮ್ನಿ ರಾಕ್)


ಇವನು ಯಾರು ಬಲ್ಲಿರೇನು? ನನಗೆ ಮಾತ್ರ ಕಂಡನೇನು? ಇವನ ಹೆಸರು ಹೇಳಲೇನು?


ಈ ಸಾಲುಮನೆಗಳಲ್ಲಿ ನನಗಾವುದು? ನಿಮಗಾವುದು?


ಚಾಕೊಲೇಟ್ -ಆಂಡ್-ಕ್ರೀಮ್ ಬಿಸ್ಕೆಟ್ ಫ಼್ಯಾಕ್ಟರಿ...


ಈಜಿಪ್ಷಿಯನ್ ಟೆಂಪಲ್


ಹೆಡೆಯಡಿಯ ಜಗದೊಡೆಯ




ಪಾರ್ಕಿನ ಭಾಗವೇ ಆದರೂ ಹೈವೇ ಬದಿಯಲ್ಲಿದ್ದ ಒಂದು ದೊಡ್ಡ ಬಂಡೆಯ ಬದಿಯಲ್ಲಿ (ಬಂಡೆಬೆಟ್ಟವೆಂದರೇ ಸರಿ) ಮೂಲ ನಿವಾಸಿ ಇಂಡಿಯನ್ಸ್ ಬರೆದಿದ್ದ ರೇಖಾಚಿತ್ರಗಳನ್ನು ನೋಡಿ ಅಚ್ಚರಿಪಟ್ಟೆ- ಅಷ್ಟು ಎತ್ತರಕ್ಕೆ (ನಾವು ನಿಂತು ನೋಡುವ ಸ್ಥಳದಿಂದ ಚಿತ್ರವಿದ್ದ ಸ್ಥಳ ಸುಮಾರು ಇಪ್ಪತ್ತು ಅಡಿ ಎತ್ತರದಲ್ಲಿತ್ತು ಅಂತನಿಸಿತ್ತು ನನಗೆ) ಹೋಗಿ ಅದು ಹೇಗೆ ಚಿತ್ರಗಳನ್ನು ಬರೆದರು? ಅಲ್ಲಿದ್ದ ವಿವರಗಳ ಫಲಕದ ತುಂಬ ಯಾರೋ ತಮ್ಮದೇ ಚಿತ್ತಾರ ಬರೆದಿದ್ದರಾಗಿ ಏನೂ ಓದಲಾಗಲಿಲ್ಲ.



ನಂತರ ಹೈವೇಯಿಂದಲೇ ಇದ್ದ ಒಂದು ಮೈಲುದ್ದದ ಹೈಕಿಂಗ್ ಟ್ರೈಲ್ ಹಿಡಿದೆವು. ಹತ್ತುತ್ತಾ ಹೋದಾಗ ಅಲ್ಲೆಲ್ಲೋ ಬಂಡೆಯೊಂದರ ಬದಿಯಲ್ಲಿ ಕಾಲು ಜಾರಿ ಪಾದ ಒಂದಿಷ್ಟು ಉಳುಕಿ ಮನವೆಲ್ಲ ಕುಸುಕುಸು. ಜೊತೆಗೆ, ದಾರಿ ಅಷ್ಟು ಏರಿಕೆಯಿರಬಹುದೆನ್ನುವ ಅರಿವಿಲ್ಲದೆ ನೀರು ಒಯ್ದಿರಲಿಲ್ಲ. ಬಾಯಾರಿಕೆ, ಕಾಲು ನೋವು, ಕತ್ತಲಾಗುತ್ತಿರುವ ಬೇಸರದ ಜೊತೆಗೆ ನನ್ನ ಕ್ಯಾಮರಾ ಬ್ಯಾಟರಿಯೂ ಕೈಕೊಟ್ಟು ನನ್ನನ್ನು ಇನ್ನೂ ರೇಗಿಸಿದವು. ಒಣಭೂಮಿಗೆ ನೀರು ಹನಿಸದಂತೆ ನನ್ನ ತಾಳ್ಮೆಯನ್ನು ಕಷ್ಟದಿಂದಲೇ ಕಾಯ್ದುಕೊಂಡಿದ್ದೆ.

ಪಿರಮಿಡ್


ಡೋಮ್

ಹೇಗೋ ನಿಧಾನಕ್ಕೆ ನಡೆದು, ಈ ನ್ಯಾಚುರಲ್ ಬ್ರಿಜ್ ಅಡಿಯಲ್ಲಿ ನಿಂತಾಗಲೇ ಏಳೂವರೆ ಗಂಟೆ, ಸೂರ್ಯಾಸ್ತವಾಗಿಹೋಗಿತ್ತು.





ಅರೆಗತ್ತಲಲ್ಲೇ ಹಿಂದಿರುಗಿ ಬಂದು ಕಾರ್ ಸೇರಿಕೊಂಡೆವು.

ಒಂದಿಷ್ಟು ಹಣ್ಣುಗಳನ್ನು ತಿಂದು ಸುಮಾರು ಎಂಟೂವರೆಗೆ ಅಲ್ಲಿಂದ ಹೊರಟು ಗ್ರೀನ್ ರಿವರ್ ಪಾರ್ಕ್ ಸೇರಿದಾಗ ಹತ್ತರ ಹತ್ತಿರ. ಮತ್ತೊಮ್ಮೆ ಕಾರಿನ ಬೆಳಕಲ್ಲಿ ಟೆಂಟ್ ಹಾಕಿ ಮೊಸರವಲಕ್ಕಿ-ಉಪ್ಪಿನಕಾಯ್ ತಿಂದು ಮಲಗಿದ್ದೊಂದೇ ಗೊತ್ತು.