ಇನ್ನೊಂದು ಅಕ್ಷರಂಗಳ

"ಹರಿವ ಲಹರಿ"ಯ ಹಾದಿ->->->

ಹೀಗೊಂದು ಯೋಚನೆ:

*ಪರಿಪೂರ್ಣತೆಯೆಂದರೆ ಮುಕ್ತಾಯ; ಹಾದಿಯ ಕೊನೆ.*

Sunday 15 November 2009

ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೦

ಯಾವುದೊ ದೈತ್ಯನ ಮಾಳಿಗೆಮೆಟ್ಟಲು- ಗ್ರ್ಯಾಂಡ್ ಸ್ಟೇರ್ ಕೇಸ್, ಎಸ್ಕಲಾಂಟೇ
ಮತ್ತು ಹವಳವಲ್ಲದ ಹವಳವರ್ಣದ ಕ್ಯಾಪಿಟಲ್ ರೀಫ಼್....


ಸೆಪ್ಟೆಂಬರ್ ೪, ಶುಕ್ರವಾರ

ಬ್ರೈಸಿನ ಹೂಡೂಸ್ ಮಾಯಾಜಾಲವನ್ನು ಹೊರದಾಟಿ ಹೈವೇ ಸೇರಿದಾಗ ಹನ್ನೊಂದು ನಲವತ್ತು. ಅಲ್ಲಿಂದ ಕ್ಯಾಪಿಟಲ್ ರೀಫ಼್ ಕಡೆ ಸಾಗಲು ಗ್ರ್ಯಾಂಡ್ ಸ್ಟೇರ್ ಕೇಸ್ ಎಂದು ಕರೆಯಲ್ಪಡುವ, ದೂ....ರದಿಂದ ಮೆಟ್ಟಿಲು ಮೆಟ್ಟಿಲಾಗಿ ಕಾಣುವ, ಸುಮಾರು ಬರಡು ಬರಡಾಗಿರುವ ಬೆಟ್ಟಸಾಲುಗಳನ್ನು ದಾಟಬೇಕು.

ಕಣಿವೆಯಲ್ಲಿ ಎಸ್ಕಲಾಂಟೇ ನದಿಯು ಹರಿಯುತ್ತಿದ್ದು ಅದರ ಅಕ್ಕ-ಪಕ್ಕ ಮರಗಳನ್ನು ನೆಟ್ಟು ಬೆಳೆಸಿದ್ದರು, ಹಲವಾರು ವರ್ಷಗಳ ಹಿಂದೆ.ಉಳಿದಂತೆ ಸುತ್ತ ಮುತ್ತ ಎಲ್ಲ ಒಣಒಣಕಲಾಗಿ ಕಾಣುವ ಪ್ರದೇಶ. ಅಲ್ಲಿ ಕೆಲವೊಂದು ಕಡೆಗಳಲ್ಲಂತೂ ಹೈವೇ ಮಾತ್ರ ಬೆಟ್ಟದ ನೆತ್ತಿಯಲ್ಲಿ, ಎರಡೂ ಬದಿಗಳಲ್ಲಿ ಪ್ರಪಾತವಿರುವ ಸ್ಥಳಗಳಿವೆ. ಅತ್ತ-ಇತ್ತ ಸಾಗುವ ವಾಹನಗಳ ಭರಾಟೆಯಲ್ಲಿ ಇಮ್ಮುಖ ರಸ್ತೆಯ ಇಬ್ಬದಿಯ ಕಣಿವೆಗಳತ್ತ ಕಣ್ಣು ಹಾಯಿಸಲೂ ಭಯವಾಗುವ ಪರಿಸ್ಥಿತಿ. ರೋಮಾಂಚಕಾರಿ ಪರಿಸರ. ರಸ್ತೆಯ ಮೇಲೇ ನೋಟ ನೆಟ್ಟಿದ್ದ ಕಾರಣ ಮತ್ತು ಮೋಡ ಕವಿದಿದ್ದ ಕಾರಣ ಚಿತ್ರಗಳನ್ನು ತೆಗೆಯಲೇ ಇಲ್ಲ. ಅಲ್ಲೊಂದು ಇಲ್ಲೊಂದು ಹನಿಗಳು ಗಾಜಿನ ಮೇಲೆ ಚಿತ್ತಾರಬಿಡಿಸಿದವು.

ಕೆಲವೊಂದು ಕಡೆ ಆಸ್ಪೆನ್ ಮರಗಳನ್ನು ನೆಟ್ಟು ಬೆಳೆಸಿದ್ದಂತೆ, ಮತ್ತೆ ಅವುಗಳನ್ನು ಕತ್ತರಿಸಿದ್ದಂತೆ ಕಾಣುತ್ತಿತ್ತು. ಎಲ್ಲೂ ಯಾವುದೇ ರೀತಿಯ ವಿವರಗಳು ಇರಲಿಲ್ಲ. ಒಂದು ಆಸ್ಪೆನ್ ಕಾಡಿಗೆ ಆಗಲೇ ಹೇಮಂತಚುಂಬನವಾಗಿತ್ತು.ಹೀಗೇ ಸಾಗಿ ಸುಮಾರು ಒಂದೂವರೆಯ ಹೊತ್ತಿಗೆ ಎಸ್ಕಲಾಂಟೇಯೊಳಗಿನ ಯಾವುದೋ ಒಂದು ಪಾರ್ಕಿನ ಬದಿಯಲ್ಲಿ ಮಧ್ಯಾಹ್ನದ ಊಟ ಮುಗಿಸಿ ಕ್ಯಾಪಿಟಲ್ ರೀಫ಼್ ತಲುಪಿದಾಗ ಸಂಜೆಯ ನಾಲ್ಕು ಗಂಟೆ.


ಇದೊಂದು ಬರಡು ಭೂಮಿಯಂಥ ಕಣಿವೆ. ಸುತ್ತೆಲ್ಲ ಕೆಂಪು ಬಿಳಿ ಬಂಡೆಬೆಟ್ಟಗಳು. ಒಂದೊಂದು ರೀತಿಯ ಆಕಾರ ತಳೆದ ಕಲ್ಲು-ಬಂಡೆ-ಮಣ್ಣಿನ ಗೋಪುರಗಳು. ವಿಸ್ಮಯ ಹುಟ್ಟಿಸುವ ಪರಿಸರಕ್ಕೆ ಒಂದೊಂದು ಹೆಸರುಗಳು. ಮುಖ್ಯದ್ವಾರದಿಂದ ಈ ಮುಖ್ಯ ಡ್ರೈವ್ ಮುಗಿಸಿದೆವು.

ವಿಸಿಟರ್ ಸೆಂಟರಿನ ನೆತ್ತಿಯ ಮೇಲೆ


ಅವಳಿ ಬಂಡೆಗಳು (ಟ್ವಿನ್ ರಾಕ್ಸ್)


ಹೊಗೆಗೊಳವೆ (ಚಿಮ್ನಿ ರಾಕ್)


ಇವನು ಯಾರು ಬಲ್ಲಿರೇನು? ನನಗೆ ಮಾತ್ರ ಕಂಡನೇನು? ಇವನ ಹೆಸರು ಹೇಳಲೇನು?


ಈ ಸಾಲುಮನೆಗಳಲ್ಲಿ ನನಗಾವುದು? ನಿಮಗಾವುದು?


ಚಾಕೊಲೇಟ್ -ಆಂಡ್-ಕ್ರೀಮ್ ಬಿಸ್ಕೆಟ್ ಫ಼್ಯಾಕ್ಟರಿ...


ಈಜಿಪ್ಷಿಯನ್ ಟೆಂಪಲ್


ಹೆಡೆಯಡಿಯ ಜಗದೊಡೆಯ
ಪಾರ್ಕಿನ ಭಾಗವೇ ಆದರೂ ಹೈವೇ ಬದಿಯಲ್ಲಿದ್ದ ಒಂದು ದೊಡ್ಡ ಬಂಡೆಯ ಬದಿಯಲ್ಲಿ (ಬಂಡೆಬೆಟ್ಟವೆಂದರೇ ಸರಿ) ಮೂಲ ನಿವಾಸಿ ಇಂಡಿಯನ್ಸ್ ಬರೆದಿದ್ದ ರೇಖಾಚಿತ್ರಗಳನ್ನು ನೋಡಿ ಅಚ್ಚರಿಪಟ್ಟೆ- ಅಷ್ಟು ಎತ್ತರಕ್ಕೆ (ನಾವು ನಿಂತು ನೋಡುವ ಸ್ಥಳದಿಂದ ಚಿತ್ರವಿದ್ದ ಸ್ಥಳ ಸುಮಾರು ಇಪ್ಪತ್ತು ಅಡಿ ಎತ್ತರದಲ್ಲಿತ್ತು ಅಂತನಿಸಿತ್ತು ನನಗೆ) ಹೋಗಿ ಅದು ಹೇಗೆ ಚಿತ್ರಗಳನ್ನು ಬರೆದರು? ಅಲ್ಲಿದ್ದ ವಿವರಗಳ ಫಲಕದ ತುಂಬ ಯಾರೋ ತಮ್ಮದೇ ಚಿತ್ತಾರ ಬರೆದಿದ್ದರಾಗಿ ಏನೂ ಓದಲಾಗಲಿಲ್ಲ.ನಂತರ ಹೈವೇಯಿಂದಲೇ ಇದ್ದ ಒಂದು ಮೈಲುದ್ದದ ಹೈಕಿಂಗ್ ಟ್ರೈಲ್ ಹಿಡಿದೆವು. ಹತ್ತುತ್ತಾ ಹೋದಾಗ ಅಲ್ಲೆಲ್ಲೋ ಬಂಡೆಯೊಂದರ ಬದಿಯಲ್ಲಿ ಕಾಲು ಜಾರಿ ಪಾದ ಒಂದಿಷ್ಟು ಉಳುಕಿ ಮನವೆಲ್ಲ ಕುಸುಕುಸು. ಜೊತೆಗೆ, ದಾರಿ ಅಷ್ಟು ಏರಿಕೆಯಿರಬಹುದೆನ್ನುವ ಅರಿವಿಲ್ಲದೆ ನೀರು ಒಯ್ದಿರಲಿಲ್ಲ. ಬಾಯಾರಿಕೆ, ಕಾಲು ನೋವು, ಕತ್ತಲಾಗುತ್ತಿರುವ ಬೇಸರದ ಜೊತೆಗೆ ನನ್ನ ಕ್ಯಾಮರಾ ಬ್ಯಾಟರಿಯೂ ಕೈಕೊಟ್ಟು ನನ್ನನ್ನು ಇನ್ನೂ ರೇಗಿಸಿದವು. ಒಣಭೂಮಿಗೆ ನೀರು ಹನಿಸದಂತೆ ನನ್ನ ತಾಳ್ಮೆಯನ್ನು ಕಷ್ಟದಿಂದಲೇ ಕಾಯ್ದುಕೊಂಡಿದ್ದೆ.

ಪಿರಮಿಡ್


ಡೋಮ್

ಹೇಗೋ ನಿಧಾನಕ್ಕೆ ನಡೆದು, ಈ ನ್ಯಾಚುರಲ್ ಬ್ರಿಜ್ ಅಡಿಯಲ್ಲಿ ನಿಂತಾಗಲೇ ಏಳೂವರೆ ಗಂಟೆ, ಸೂರ್ಯಾಸ್ತವಾಗಿಹೋಗಿತ್ತು.

ಅರೆಗತ್ತಲಲ್ಲೇ ಹಿಂದಿರುಗಿ ಬಂದು ಕಾರ್ ಸೇರಿಕೊಂಡೆವು.

ಒಂದಿಷ್ಟು ಹಣ್ಣುಗಳನ್ನು ತಿಂದು ಸುಮಾರು ಎಂಟೂವರೆಗೆ ಅಲ್ಲಿಂದ ಹೊರಟು ಗ್ರೀನ್ ರಿವರ್ ಪಾರ್ಕ್ ಸೇರಿದಾಗ ಹತ್ತರ ಹತ್ತಿರ. ಮತ್ತೊಮ್ಮೆ ಕಾರಿನ ಬೆಳಕಲ್ಲಿ ಟೆಂಟ್ ಹಾಕಿ ಮೊಸರವಲಕ್ಕಿ-ಉಪ್ಪಿನಕಾಯ್ ತಿಂದು ಮಲಗಿದ್ದೊಂದೇ ಗೊತ್ತು.

2 comments:

Dr. B.R. Satynarayana said...

ಫೋಟೋ ಮಾಹಿತಿ ಎರಡೂ ಚೆನ್ನಾಗಿವೆ. ದೇಶ ಸುತ್ತಿನೋಡು ಕೋಶ ಓದಿ ನೋಡು ಎನ್ನುವ ಗಾದೆಗೆ ಹೊಸ ಸೇರ್ಪಡೆ ದೇಶಾನ ಅಂತರಜಾಲದಲ್ಲೂ ನೋಡಬಹುದು ಎನ್ನುವುದು.

ಸುಪ್ತದೀಪ್ತಿ suptadeepti said...

ಡಾ. ಬಿ.ಆರ್.ಎಸ್., ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. ಹೌದು, ಈ ವಿದ್ಯುನ್ಮಾನ ಯುಗದಲ್ಲಿ ಪ್ರಪಂಚವನ್ನೇ ಅಂಗೈಯಲ್ಲಿ ನೋಡಬಹುದು, ಯಾವುದೇ ಅಂಜನ ಬೇಕಿಲ್ಲ, ಸರ್ಚ್ ಎಂಜಿನ್ ಸಾಕು.